ಲೇಖನ ಚಿಹ್ನೆಗಳಿಲ್ಲದಿದ್ದಲ್ಲಿ ವಾಕ್ಯಗಳ ಅರ್ಥ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಬರೆಯುವಾಗ ಸರಿಯಾದ ಚಿಹ್ನೆಗಳನ್ನು ಬಳಸುವುದರಿಂದ, ಓದುಗನು ಬರವಣಿಗೆಯ ಸರಿಯಾದ ಅರ್ಥವನ್ನು ಗ್ರಹಿಸಬಹುದಲ್ಲದೆ, ಸರಿಯಾದ ರೀತಿಯಲ್ಲಿ ವಾಚನವನ್ನು ಮಾಡಬಹುದು.
ಕನ್ನಡದಲ್ಲಿ ಮೊದಲು ಲೇಖನ ಚಿಹ್ನೆಗಳು ರೂಢಿಯಲ್ಲಿರಲಿಲ್ಲ. ಐತಿಹಾಸಿಕ ಹಸ್ತಪ್ರತಿಗಳಲ್ಲಿ, ಶಾಸನಗಳಲ್ಲಿ ಯಾವುದೇ ಲೆಖನ ಚಿಹ್ನೆಗಳು ಕಂಡುಬರುವುದಿಲ್ಲ. ಆಂಗ್ಲಭಾಷಾ ಪ್ರಭಾವದಿಂದಾಗಿ, ಕೆಲವು ಲೇಖನ ಚಿಹ್ನೆಗಳನ್ನು ಕನ್ನಡ ಭಾಷೆಯಲ್ಲಿಯೂ ಬಳಸಲಾಗುತ್ತದೆ.
1. ಪೂರ್ಣವಿರಾಮ(.)
ಒಂದು ಪೂರ್ಣಕ್ರಿಯಾಪದದಿಂದ ಕೂಡಿದ ವಾಕ್ಯದ ಕೊನೆಗೆ ಬರುವ ಚಿಹ್ನೆ.
ಉದಾ:-
✦ ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ.
✦ ಊರಿನಲ್ಲಿ ಇಂದು ಜಾತ್ರಾ ಮಹೋತ್ಸವ ಇದೆ.
2. ಅರ್ಧವಿರಾಮ(;)
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಗಿದ್ದಾಗ, ಆ ಉಪವಾಕ್ಯಗಳ ಕೊನೆಗೆ ಬರುವ ಚಿಹ್ನೆ.
ಉದಾ:-
✦ ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.
✦ ಅಂದು ಮಳೆ ಬಂದಿತು; ಆದುದರಿಂದ ಆಟವಾಡಲಿಲ್ಲ.
3. ಅಲ್ಪವಿರಾಮ(,)
ಇದು ಬರುವ ಸಂದರ್ಭಗಳು ಹಲವು.
ಒಂದು ಕ್ರಿಯಾಪದಕ್ಕೆ ಹೊಂದಿಕೊಂಡು ಬರುವ ಬೇರೆಬೇರೆ ಪದಗಳನ್ನು ಪ್ರತ್ಯೇಕಿಸುವುದು.
ಸಂಬಂಧಸೂಚಕಾವ್ಯದಿಂದ ಕೂಡಿದ ಪದಯುಗ್ಮಗಳು ಹಲವು ಬಂದಾಗ, ಅವನ್ನು ಪ್ರತ್ಯೇಕಿಸುವುದು.
ನಾಮಪದಗಳು ಅಥವಾ ಅಂತಹ ವಾಕ್ಯಾಂಶವನ್ನು ಅದರ ವಿವರಣೆಯ ವಾಕ್ಯಭಾಗದಿಂದ ಪ್ರತ್ಯೇಕಿಸುವುದು.
ಆಗಿ, ಆದರೆ, ಆದ್ದರಿಂದ, ಆದಕಾರಣ, ಆಗಲು ಎಂಬ ಕೃದಂತರೂಪಗಳ ತರುವಾಯದಲ್ಲಿಯೂ ಬರುವುದು.
ಉದ್ಧೃತ ಭಾಗಗಳನ್ನು ವಾಕ್ಯದ ಇತರ ಭಾಗದಿದಂದ ಪ್ರತ್ಯೇಕಿಸುವುದು.
ಸಂಭೋಧನೆಯ ಶಬ್ದದ ತರುವಾಯದಲ್ಲಿ ಬರುವುದು.
ಉದಾ:-
✦ ರಾಮನು ಶೂರನೂ, ಧೀರನೂ, ಉದಾರಿಯೂ ಆಗಿದ್ದನು.
✦ ಬರವಣಿಗೆಯು ಅಂದವಾಗಿ, ಸ್ಪುಟವಾಗಿ ಇರಬೇಕು.
✦ ಹೊಡೆದಾಟದಲ್ಲಿ ಮಕ್ಕಳು, ಸ್ರೀಯರು, ಮುದುಕರು ಗಾಯಗೊಂಡರು.
✦ ಕಾರ್ಮೋಡಗಳು ಕವಿದಿದ್ದರಿಂದ, ಮಳೆಯಾಗುವುದು ಖಾತ್ರಿಯಯಿತು.
✦ ರಾಮ, ಹೇಗಿದ್ದೀಯ?
4. ವಿವರಣಾತ್ಮಕ ಚಿಹ್ನೆ(:)
ಒಂದು ಅಭಿಪ್ರಾಯದ ವಿವರಣೆ ಮುಂದಿ ನಂತೆ ಇದೆ ಎಂಬುದಾಗಿ ತೋರಿಸುವಾಗಲೂ, ಪದಗಳೂ ವಾಕ್ಯಗಳೂ ಬೇರೆಯಾಗಿದ್ದರೂ ಅರ್ಥದಲ್ಲಿ ಆತ್ಮೀಯ ಸಂಬಂಧವಿದೆಯೆಂದು ತೋರಿಸುವಾಗಲೂ ಬಳಸುವ ಚಿಹ್ನೆ.
5. ವಿವರಣಾತ್ಮಕ ಚಿಹ್ನೆ ಮತ್ತು ದೀರ್ಘಸಮತಲ ರೇಖೆ(:-)
ಉದ್ಗೃತ ವಾಕ್ಯಗಳನ್ನು ಮುಂದೆ ಎತ್ತಿಕೊಡುವಾಗಲೂ, ಎಣಿಕೆ ಉದಾಹರಣೆ ಮೊದಲಾದವುಗಳ ಆರಂಭದಲ್ಲಿಯೂ ಬಳಸುವ ಚಿಹ್ನೆ.
6. ಪ್ರಶ್ನಾರ್ಥಕ ಚಿಹ್ನೆ(?)
ಪ್ರಶ್ನಾರ್ಥಕ ಪದ ಅಥವಾ ವಾಕ್ಯದ ಮುಂದೆ ಹಾಕುವ ಚಿಹ್ನೆ.
ಉದಾ:-
✦ ನೀನು ಯಾರು?
✦ ಕರ್ನಾಟಕದ ರಾಜಧಾನಿ ಯಾವುದು?
7. ಭಾವಸೂಚಕ ಚಿಹ್ನೆ(!)
ಹರ್ಷ, ವಿವಾದ, ಆಶ್ಚರ್ಯ, ಕೋಪ, ಮೊದಲಾದ ಭಾವಗಳನ್ನು ಪ್ರಕಟಿಸುವ ಶಬ್ದಗಳ ಮತ್ತು ವಾಕ್ಯಗಳ ಕೊನೆಗೆ ಹಾಕುವ ಚಿಹ್ನೆ.
ಉದಾ:-
✦ ಆಹಾ! ಮೈಸೂರು ದಸರಾ ಎಷ್ಟೊಂದು ಸುಂದರವಾಗಿದೆ!
✦ ಅಯ್ಯೋ ದೇವರೇ! ಹೀಗಾಯಿತಲ್ಲ!
✦ ಛೀ! ಮೂರ್ಖ ತೊಲಗು!
8. ಆವರಣ ಚಿಹ್ನೆ ( )
ವಾಕ್ಯದ ಮುಖ್ಯಭಾಗವನ್ನು ಅದರೊಂದಿಗೆ ನೇರ ಸಂಬಂಧವಿಲ್ಲದ, ಆದರೂ ಸಹಾಯವಾದ ಮಾತಿಗಳಿಂದ ಬೇರ್ಪಡಿಸುವುದಕ್ಕೆ ಅಥವಾ ಪರ್ಯಾಯ ಪದಗಳನ್ನಾಗಲಿ ವಿವರಣಾತ್ಮಕ ಪದಗಳು ವಾಕ್ಯಗಳನ್ನಾಗಲಿ ಆಕರಗಳನ್ನಾಗಲಿ ಸೂಚಿಸುವುದಕ್ಕೆ ಬಳಸುವ ದುಂಡುಕಂಸಗಳ ಚಿಹ್ನೆ. ಈ ಚಿಹ್ನೆಯ ಪ್ರತಿಯಾಗಿ, ಅಂತಹ ಪದ ಅಥವಾ ವಾಕ್ಯಗಳ ಮೊದಲು ಕೊನೆಗಳಲ್ಲಿ ಒಂದೊಂದು ಚಿಕ್ಕ ಸಮತಲ ರೇಖೆಯನ್ನು ಬಳಸುವುದುಂಟು.
9. ಉದ್ಧರಣ ಅಥವಾ ವಾಕ್ಯವೇಷ್ಟನ ಚಿಹ್ನೆ(" ")
ಇನ್ನೊಬ್ಬರು ಹೀಗೆ ಹೇಳಿದರೆಂದು ಅವರ ಮಾತುಗಳನ್ನೇ ನೇರವಾಗಿ ಉದ್ಧರಿಸುವಾಗ, ಆ ಉದ್ಧರಣ ಭಾಗದ ಕೊನೆಗಳಲ್ಲಿ ಬಳಸುವ ಚಿಹ್ನೆ.
ಉದಾ:-
✦ "ಸ್ವಂತ ಮನೆ ಇರುವುದು ಬಸವನ ಹುಳುವಿಗೊಂದೆ." - ಬೀಚಿ.
✦ ಮಹಾಭಾರತದಲ್ಲಿ "ಧರ್ಮಕ್ಕೇ ಎಂದಿಗೂ ಜಯ" ಎಂದು ಹೇಳಲಾಗಿದೆ.
10. ಪಾರಿಭಾಷಿಕ ಚಿಹ್ನೆ (' ')
ಪಾರಿಭಾಷಿಕ ಪದಗಳನ್ನು ಬಳಸಿ ಅದರ ಸಮಾನಾರ್ಥವನ್ನು ಹೇಳುವಾಗ, ಆ ಪದವನ್ನು ಈ ಚಿಹ್ನೆಯ ಮೂಲಕ ಗುರುತಿಸಲಾಗುತ್ತದೆ. ಇನ್ನೂ ಕೆಲವೆಡೆಗಳಲ್ಲಿ ನಾಮ ಪದಗಳನ್ನು ಗುರುತಿಸುವಲ್ಲಿಯೂ ಬಳಸುತ್ತಾರೆ.
ಉದಾ:-
✦ ಆಮ್ಲಜನಕವನ್ನು ಇಂಗ್ಲೀಷ್ ಭಾಷೆಯಲ್ಲಿ 'ಆಕ್ಸಿಜನ್' ಎನ್ನುತ್ತಾರೆ.
✦ ಬಿ. ಎಂ. ಶ್ರೀಕಂಠಯ್ಯನವರ ಕಾವ್ಯನಾಮ 'ಶ್ರೀ'
11. ಹ್ರಸ್ವ ಸಮತಲರೇಖೆ(-)
ಪದಗಳ ಸೇರಿಕೆಯನ್ನು ಬೇರ್ಪಡಿಸಿ, ಪ್ರತ್ಯಯಗಳನ್ನು ಪ್ರತ್ಯೇಕಿಸುವಾಗ, ಶಬ್ದಗಳಲ್ಲಿ ಆದ ವ್ಯತ್ಯಾಸವನ್ನು ತೊರಿಸುವಾಗ ಅಥವಾ ಮುಕ್ತಾಯವಾಗದ ಪದಾಂಶ ಮುಂದಿನ ಸಾಲಿಗೆ ಸಾಗುವಂತಿದ್ದಾಗ ಬಳಸುವ ಚಿಹ್ನೆ.
ಉದಾ:-
✦ ಮಾಲಾ-ಮಾಲೆ, ಭಾಷಾ-ಭಾಷೆ
12. ಸಮಾನಾರ್ಥಕ ಚಿಹ್ನೆ (=)
ಎರಡು ಪದಗಳ ಅರ್ಥವೂ ಸಮಾನ ಎಂದು ಹೇಳುವಾಗ, ಅಥವಾ ಎರಡು ಪದಗಳು ಸೇರಿ ಒಂದು ಪದವಾಗುವುದನ್ನು ತೋರಿಸುವಾಗ, '=' ಚಿಹ್ನೆಯನ್ನು ಬಳಸುತ್ತಾರೆ.
ಉದಾ:-
✦ ಅರಸನ + ಮನೆ = ಅರಮನೆ
✦ ರಾಯ = ರಾಜ
✦ ಅಸುರ = ರಾಕ್ಷಸ
13. ಅಧಿಕ ಚಿಹ್ನೆ (+)
ಎರಡು ಪದಗಳು ಸೇರಿವೆ ಎಂದು ತೋರಿಸುವಾಗ ಮತ್ತು ಎರಡು ಸಂಖ್ಯೆಗಳು ಸೇರುವುದನ್ನು ತೊರಿಸುವಾಗ ಅಧಿಕ ಚಿಹ್ನೆಯನ್ನು ಬಳಸಲಾಗುತ್ತದೆ.
ಉದಾ:-
✦ ಕೈ + ಮುಂದೆ = ಮುಂಗೈ
✦ ಮನೆ + ಅಲ್ಲಿ = ಮನೆಯಲ್ಲಿ
✦ 10 + 20 = 30
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.