Menu

Home ನಲಿಕಲಿ About ☰ Menu


 

ಸಮಾಸಗಳು | Samasagalu in Kannada


 ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು.

ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುತ್ತಾರೆ.


ಪೂರ್ವಪದ + ಉತ್ತರಪದ = ವಿಗ್ರಹ ವಾಕ್ಯ -> ಸಮಾಸ


ಉದಾ:-

ಕಾಲಿನ + ಬಳೆ = ಕಾಲು ಬಳೆ -> ತತ್ಪುರುಷ ಸಮಾಸ

ಕಲ್ಲಿನಂತಿರುವ + ಇದ್ದಿಲು = ಕಲ್ಲಿದ್ದಿಲು -> ತತ್ಪುರುಷ ಸಮಾಸ


ಸಮಾಸದಲ್ಲಿ ಎಂಟು ವಿಧಗಳಿವೆ

  1. ತತ್ಪುರುಷ ಸಮಾಸ
  2. ಕರ್ಮಧಾರೆಯ ಸಮಾಸ
  3. ಅಂಶಿ ಸಮಾಸ
  4. ದ್ವಿಗು ಸಮಾಸ
  5. ದ್ವಂದ್ವ ಸಮಾಸ
  6. ಬಹುವ್ರೀಹಿ ಸಮಾಸ
  7. ಕ್ರಿಯಾ ಸಮಾಸ
  8. ಗಮಕ ಸಮಾಸ

೧. ತತ್ಪುರುಷ ಸಮಾಸ


ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ 'ತತ್ಪುರುಷ ಸಮಾಸ' ಎನ್ನುತ್ತಾರೆ.

ತತ್ಪುರುಷ ಸಮಾಸಗಳಲ್ಲಿ ಕನ್ನಡ + ಕನ್ನಡ ಶಬ್ದಗಳು ಸೇರಿ ಸಮಾಸವಾದಾಗ ಷಷ್ಠಿ ಅಥವಾ ಸಪ್ತಮಿ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದೇ ಹೆಚ್ಚು. 

ಉದಾ:-

ಕಾಲಿನ + ಬಳೆ = ಕಾಲುಬಳೆ -> ಷಷ್ಠಿ ತತ್ಪುರುಷ ಸಮಾಸ

ಸಂಜೆಯ + ಕೆಂಪು = ಸಂಜೆಗೆಂಪು -> ಷಷ್ಠಿ ತತ್ಪುರುಷ ಸಮಾಸ

ಬೆಟ್ಟದ + ತಾವರೆ = ಬೆಟ್ಟದಾವರೆ -> ಷಷ್ಠಿ ತತ್ಪುರುಷ ಸಮಾಸ

ಕಣ್ಣಿನಲ್ಲಿ + ಉರಿ = ಕಣ್ಣುರಿ -> ಸಪ್ತಮಿ ತತ್ಪುರುಷ ಸಮಾಸ

ಹಗಲಿನಲ್ಲಿ + ಕನಸು = ಹಗಲುಗನಸು -> ಸಪ್ತಮಿ ತತ್ಪುರುಷ ಸಮಾಸ

ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.

ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ

ದೇವರ + ಮಂದಿರ = ದೇವಮಂದಿರ

ಕವಿಗಳಿಂದ + ವಂದಿತ = ಕವಿವಂದಿತ

ಪುರುಷರಲ್ಲಿ + ಉತ್ತಮ = ಪುರುಷೋತ್ತಮ


ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.

ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ

ದೇವರ + ಮಂದಿರ = ದೇವಮಂದಿರ

ಕವಿಗಳಿಂದ + ವಂದಿತ = ಕವಿವಂದಿತ

ಪುರುಷರಲ್ಲಿ + ಉತ್ತಮ = ಪುರುಷೋತ್ತಮ

೨. ಕರ್ಮಧಾರೆಯ ಸಮಾಸ


ವಿಶೇಷಣ ಮತ್ತು ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವು 'ಕರ್ಮಧಾರೆಯ ಸಮಾಸ' ವೆನಿಸುವುದು.

ಉದಾ:-

ಹಿರಿದು + ಮರ = ಹೆಮ್ಮರ

ಬಿಳಿಯ + ಮುಗಿಲು = ಬೆಳ್ಮುಗಿಲು

ಹಿರಿದು + ಬಾಗಿಲು = ಹೆಬ್ಬಾಗಿಲು


ಮೇಲಿನ ಉದಾಹರಣೆಗಳಲ್ಲಿ 'ಹಿರಿದು' ಮತ್ತು 'ಬಿಳಿಯ' ವಿಶೇಷಣಗಳಾಗಿವೆ. 'ಮರ', 'ಮುಗಿಲು' ಮತ್ತು 'ಬಾಗಿಲು' ವಿಶೇಷ್ಯಗಳಾಗಿವೆ.

೩. ಅಂಶಿ ಸಮಾಸ


ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು. 

ಉದಾ:-

ನಾಲಿಗೆಯ + ತುದಿ = ತುದಿನಾಲಿಗೆ

ತುಟಿಯ + ಕೆಳಗೆ = ಕೆಳದುಟಿ

ಮೈಯ + ಒಳಗೆ = ಒಳಮೈ


ಮೇಲಿನ ಉದಾಹರಣೆಯಲ್ಲಿ ನಾಲಗೆಯ ಒಂದು ಭಾಗವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಇನ್ನೊಂದು ಉದಾಹರಣೆಯಲ್ಲಿ ತುಟಿಯ ಭಾಗವನ್ನು ಹೇಳಲಾಗಿದೆ. ಇಲ್ಲಿ ತುದಿ ಹಾಗೂ ಕೆಳಗೆ ಎಂಬುದು 'ಅಂಶ' ಗಳಾದರೆ, ನಾಲಗೆ ಮತ್ತು ತುಟಿ 'ಅಂಶಿ' ಗಳಾಗಿವೆ.

೪. ದ್ವಿಗು ಸಮಾಸ


ಪೂರ್ವಪದವು ಸಂಖ್ಯಾ ಸೂಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ 'ದ್ವಿಗು ಸಮಾಸ'. 

ಉದಾ:-

ಒಂದು + ಕಟ್ಟು = ಒಗ್ಗಟ್ಟು

ಎರಡು + ಮಡಿ = ಇಮ್ಮಡಿ

೫. ದ್ವಂದ್ವ ಸಮಾಸ


ಎರಡು ಅಥವಾ ಅನೇಕ ನಾಮ ಪದಗಳು ಸೇರಿ ಸಮಾಸವಾದಾಗ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗಿದ್ದರೆ ಆ ಸಮಾಸಕ್ಕೆ 'ದ್ವಂದ್ವ ಸಮಾಸ' ಎಂದು ಹೆಸರು. 

ಉದಾ:-

ಗಿಡವೂ + ಮರವೂ = ಗಿಡಮರ

ಕಸವೂ + ಕಡ್ಡಿಯೂ = ಕಸಕಡ್ಡಿ

ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ

೬. ಬಹುವ್ರೀಹಿ ಸಮಾಸ


ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ. 

ಉದಾ:-

ಕೆಂಪಾದ + ಕಣ್ಣು ಉಳ್ಳವ = ಕೆಂಗಣ್ಣ

ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ

ಕರಿಯನ್ನು + ಮುಖವಾಗಿ ಉಳ್ಳವನು = ಕರಿಮುಖ

೭. ಕ್ರಿಯಾ ಸಮಾಸ


ಸಮಾಸದಲ್ಲಿ ಉತ್ತರ ಪದವು ಕ್ರಿಯಾ ಸೂಚಕವಾಗಿದ್ದರೆ ಅದು ಕ್ರಿಯಾ ಸಮಾಸವಾಗುತ್ತದೆ. 

ಉದಾ:-

ಮುದ್ದನ್ನು + ಮಾಡು = ಮುದ್ದುಮಾಡು

ಕಣ್ಣನ್ನು + ತೆರೆ = ಕಣ್ದೆರೆ

ಮೈಯನ್ನು + ತಡವಿ = ಮೈದಡವಿ

೮. ಗಮಕ ಸಮಾಸ


ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ.

ಉದಾ:-

ಇವನು + ಮುದುಕ = ಈ ಮುದುಕ

ಅವು + ಪ್ರಾಣಿಗಳು = ಆ ಪ್ರಾಣಿಗಳು

ಮಾಡಿದುದು + ಅಡುಗೆ = ಮಾಡಿದಡುಗೆ

ಬಾಡಿದುದು + ಹೂವು = ಬಾಡಿದ ಹೂವು

ಉಡುವುದು + ದಾರ = ಉಡುದಾರ

ಅರಿ ಸಮಾಸ


ಬಹುತೇಕ ಸಮಾಸಗಳು ಕನ್ನಡ + ಕನ್ನಡ ಅಥವಾ ಸಂಸ್ಕೃತ + ಸಂಸ್ಕೃತ ಪದಗಳು ಸೇರಿ ಆಗಿರುತ್ತವೆ. ಆದರೆ ಕೆಲವು ಪದಗಳು ಕನ್ನಡ + ಸಂಸ್ಕೃತ ಪದಗಳು ಸೇರಿ ಸಮಾಸ ಪದಗಳಾಗಿರುತ್ತವೆ. ಈ ಪದಗಳನ್ನು ಶುದ್ಧ ಸಮಾಸ ಪದಗಳೆಂದು ಕರೆಯಲಾಗದು. ಹೀಗೆ ಕನ್ನಡ ಮತ್ತು ಸಂಸ್ಕೃತ ಶಬ್ಧಗಳು ಸೇರಿ ಆಗುವ ಸಮಾಸವನ್ನು 'ಅರಿ ಸಮಾಸ' ವೆನ್ನುತ್ತಾರೆ.

ಉದಾ:-

ಗಜದ + ದಳ = ಗಜದಳ

ಅಂಕದಲ್ಲಿ + ನೇತ್ರ = ಅಂಕನೇತ್ರ

ಮಂಗಳದ + ಆರತಿ = ಮಂಗಳಾರತಿ


ಸಮಾಸಗಳನ್ನು ಸುಲಭವಾಗಿ ಗುರುತಿಸಲು ಕೆಲವು ಲಕ್ಷಣಗಳು.

೧. ಉತ್ತರಪದಾರ್ಥ ಪ್ರಧಾನವಾದುದು ತತ್ಪುರುಷಸಮಾಸ.

೨. ವಿಶೇಷಣ ವಿಶೇಷಭಾವ ಸಂಬಂಧ-ಮತ್ತು ಸಮಾನಾಧಿಕರಣಗಳುಳ್ಳದ್ದು ಕರ್ಮಧಾರಯಸಮಾಸ.

೩. ಸಂಖ್ಯಾಪೂರ್ವಪದವಾಗಿ ಉಳ್ಳದ್ದು ದ್ವಿಗುಸಮಾಸ.

೪. ಅಂಶಾಂಶಿಭಾವಸಂಬಂಧವುಳ್ಳದ್ದು ಅಂಶಿಸಮಾಸ.

೫. ಸರ್ವಪದಾರ್ಥ ಪ್ರಧಾನವಾದುದು ದ್ವಂದ್ವಸಮಾಸ.

೬. ಅನ್ಯಪದಾರ್ಥ ಪ್ರಧಾನವಾದದ್ದು ಬಹುವ್ರೀಹಿಸಮಾಸ.

೭. ಪೂರ್ವಪದ-ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು ಉತ್ತರದ ನಾಮಪದದೊಡನೆ ಕೂಡಿ ಆಗುವ ಸಮಾಸ ಗಮಕಸಮಾಸ.

೮. ಪೂರ್ವಪದ ದ್ವಿತೀಯಾಂತವಾಗಿದ್ದು ಉತ್ತರದ ಕ್ರಿಯೆಯೊಡನೆ ಕೂಡಿ ಆಗುವ ಸಮಾಸ ಕ್ರಿಯಾಸಮಾಸ.

೯. ಅರಿಸಮಾಸ:- ಕನ್ನಡ ಪದಗಳೊಡನೆ ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು. ಮಾಡಿದರೆ ಅರಿಸಮಾಸವೆನಿಸುವುದು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post