ಜನರ ವಿಚಾರ ವಿನಿಮಯದೊಂದಿಗೆ ಕೆಲವು ಪರ ಭಾಷಾ ಪದಗಳು ಮೂಲ ಭಾಷೆಗೆ ಬಂದು ಸೇರುವುದು ಸಾಮಾನ್ಯವಾದುದು. ಇದರಿಂದ ಭಾಷೆ ಬೆಳೆಯುತ್ತದೆ. ಹೆಚ್ಚು ಜನರು ಭಾಷೆಯನ್ನು ಕಲಿಯುವಲ್ಲಿ ಸಹಕಾರಿಯಾಗುತ್ತದೆ ಮತ್ತು ಭಾಷಾ ಸಂಪತ್ತು ಹೆಚ್ಚಾಗುತ್ತದೆ. ಹಾಗೆಂದು, ಮೂಲ ಪದಗಳ ಬಳಕೆ ಕಡಿಮೆಯಾಗುವುದಿಲ್ಲ. ಎರಡು ಭಾಷೆಯ ಶಬ್ದಗಳು ಉಚ್ಚಾರಣೆಗಳು ಒಂದೇ ರೀತಿಯಲ್ಲಿ ಇದ್ದಾಗ, ವ್ಯಾವಹಾರಿಕವಾಗಿ ಜನರಿಗೆ ಇದರಿಂದ ಲಾಭವಾಗುತ್ತದೆ ಮತ್ತು ಭಾಷೆಯ ಪ್ಯಾಪ್ತಿ ಮತ್ತು ಸಂವಹನೆ ಹೆಚ್ಚಾಗುತ್ತದೆ.
ಕನ್ನಡದಲ್ಲಿಯೂ ಬೇರೆ ಭಾಷೆಗಳಿಂದ ಅನೇಕ ಶಬ್ದಗಳು ಬಂದು ಸೇರಿವೆ, ಸೇರುತ್ತಲಿವೆ. ಹಾಗೆಯೇ ಕನ್ನಡದ ಅನೇಕ ಶಬ್ದಗಳು ಬೇರೆ ಭಾಷೆಯಲ್ಲಿ ಸೇರಿವೆ. ಉದಾಹರಣೆಗೆ:-
>> "ಜಬರ್ದಸ್ತಿನಿಂದ ರೈಲು ಗಾಡಿಯಿಂದ ಹೊರ ಕಿದರು".
>> "ದೀನನಾದ ರೈತನು ಸರ್ಕಾರಕ್ಕೆ ಕಾಗದವನ್ನು ಬರೆದನು."
ಮೇಲಿನ ವಾಕ್ಯಗಳು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದದ ಜೊತೆಗೆ ಬೇರೆ, ಬೇರೆ ಭಾಷೆಯ ಶಬ್ದಗಳು ಬಂದು ಸೇರಿವೆ.
🔹ಸಂಸ್ಕೃತದಿಂದ: ರೈತ, ದೀನ
🔹ಹಿಂದೀಯಿಂದ: ಜಬರ್ದಸ್ತ್, ಗಾಡಿ
🔹ಇಂಗ್ಲೀಷ್ ನಿಂದ: ರೈಲು
🔹ಹಿಂದೂಸ್ಥಾನಿಯಿಂದ: ಸರ್ಕಾರ, ಕಾಗದ
ಕನ್ನಡ ಭಾಷೆಯು ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯಾಗಿದೆ. ಸಂಸ್ಕೃತ, ಪ್ರಾಕೃತಗಳು ಆರ್ಯರ ಭಾಷೆಗಳಾಗಿವೆ. ಆರ್ಯರ ಮತ್ತು ದ್ರಾವಿಡರ ನಿಕಟ ಸಂಬಂಧದಿಂದ ಕನ್ನಡದಲ್ಲಿ ಅನೇಕ ಸಂಸ್ಕೃತ-ಪ್ರಾಕೃತ ಶಬ್ದಗಳು ಪ್ರಾಚೀನ ಕಾಲದಿಂದಲೇ ಸೇರಿಕೊಳ್ಳುತ್ತಿವೆ.
ನಂತರ ವಿದೇಶಿಯರ ಸಂಪರ್ಕದಿಂದಾಗಿ ಪಾರ್ಸಿ, ಇಂಗ್ಲೀಷ್, ಪೋರ್ಚುಗೀಸ್, ಅರಾಬಿಕ್ ಭಾಷೆಯ ಶಬ್ದಗಳು ಸೇರಿಕೊಂಡವು.
ಅಚ್ಚಗನ್ನಡ ಶಬ್ದಗಳನ್ನು 'ದೇಶ್ಯ' / 'ದೇಶೀಯ' ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು 'ಅನ್ಯದೇಶ್ಯ' / 'ಅನ್ಯದೇಶೀಯ' ಶಬ್ದಗಳೆನ್ನುತ್ತೇವೆ.
ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡ ಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂದು ಕರೆಯುತ್ತಾರೆ. ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ. ಅವನ್ನು ತತ್ಸಮಗಳು ಎನ್ನುತ್ತೇವೆ.
ದೇಶ್ಯ / ದೇಶೀಯ ಅಚ್ಚಗನ್ನಡ ಶಬ್ದಗಳು
ಮಜ್ಜಿಗೆ, ಕಮ್ಮಗೆ, ಕಲ್ಲು, ತುರು, ನೆರೆ, ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ,... ಇತ್ಯಾದಿಗಳು
ಅನ್ಯದೇಶ್ಯ / ಅನ್ಯದೇಶೀಯ ಶಬ್ದಗಳು
ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು ಋಣ, ಋತು, ಗೃಹಿಣಿ, ಪ್ರಕೃತಿ, ಅಶಕ್ತ, ಏಕ, ಭೂಮಿ, ಪೃಥ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ,... ಇತ್ಯಾದಿಗಳು
ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು
ಮಹಲ್, ಸವಾರ, ದವಾಖಾನೆ, ಕಾಗದ, ಅರ್ಜಿ, ಕಛೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ, ರೈತ, ಸಲಾಮು, ಕಾನೂನು, ಜಮಿನು, ಬದಲಾವಣೆ, ಚುನಾವಣೆ,... ಇತ್ಯಾದಿಗಳು
ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು
ರಿಕಾರ್ಡ್, ಆಕ್ಸಿಜನ್, ಹೋಟೆಲ್, ಆಸಿಡ್, ಫುಟ್ ಪಾತ್, ಬೋರ್ಡ್, ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಪ್ಲೇಗ್, ಮೈಲು,... ಇತ್ಯಾದಿಗಳು
ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು
ಅಲಮಾರು, ಸಾಬೂನು, ಪಾದ್ರಿ, ಮೇಜು,... ಇತ್ಯಾದಿಗಳು
ಅನ್ಯ ದೇಶ್ಯ ಶಬ್ದಗಳನ್ನು ವಿಷಯವನ್ನು ಸುಲಭವಾಗಿ ಅರ್ಥೈಸುವಲ್ಲಿ ಬಳಸುವುದು ಮಾತ್ರವಲ್ಲದೆ, ಅವು ಭಾಷೆಯ ವಿಸ್ತಾರವನ್ನು ಸಹ ತೋರ್ಪಡಿಸುತ್ತದೆ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.