ಯುದ್ಧ ಮಾಡುವುದಿಲ್ಲ ಎಂದು ಕೈಚೆಲ್ಲಿ ರಥದಲ್ಲಿ ಕುಸಿದು ಕುಳಿತ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ ಎರಡನೇ ಅಧ್ಯಾಯದಿಂದ ಪ್ರಾರಂಭವಾಗುತ್ತದೆ. ಈ ಅಧ್ಯಾಯ ಇಡೀ ಭಗವದ್ಗೀತೆಗೆ ಪಂಚಾಂಗ ರೂಪದಲ್ಲಿದ್ದು, ಸಮಗ್ರ ಸಂದೇಶದ ಸಾರವನ್ನು ವ್ಯಾಸರು ಇಲ್ಲಿ ಸೆರೆ ಹಿಡಿದಿದ್ದಾರೆ.ಇಲ್ಲಿ ಬರುವ ಉಪದೇಶದ ವಿಸ್ತಾರ ರೂಪವೇ ಇತರ ಹದಿನಾರು ಅಧ್ಯಾಯಗಳು.
ಸಂಜಯ ಉವಾಚ ।
ತಂ ತಥಾ ಕೃಪಯಾSSವಿಷ್ಟಮಶ್ರುಪೂರ್ಣಾಕುಲೇಕ್ಷಣಮ್ ।
ವಿಷೀದಂತಮಿದಂ ವಾಕ್ಯಮುವಾಚ ಮಧುಸೂದನಃ ॥೧॥
ಸಂಜಯ ಉವಾಚ-ಸಂಜಯ ಹೇಳಿದನು:
ತಮ್ ತಥಾ ಕೃಪಯಾ ಆವಿಷ್ಟಮ್ ಅಶ್ರು ಪೂರ್ಣ ಆಕುಲ ಈಕ್ಷಣಮ್ |
ವಿಷೀದಂತಮ್ ಇದಮ್ ವಾಕ್ಯಮ್ ಉವಾಚ ಮಧುಸೂದನಃ -ಹಾಗೆ ಕಾರುಣ್ಯಕ್ಕೊಳಗಾಗಿ ಕಂಬನಿ ತುಂಬಿ ಕಣ್ಣು ಮಸುಕಾಗಿ ಉಮ್ಮಳಿಸುತ್ತಿರುವ ಅವನನ್ನು ಕಂಡು ಶ್ರೀಕೃಷ್ಣ ಈ ಮಾತು ನುಡಿದ.
ಅರ್ಜುನನಿಗೆ ಇಡೀ ಸಮಾಜದ, ಜನಾಂಗದ ಮೇಲೆ ಅನುಕಂಪ. ಯುದ್ಧ ಮಾಡುವುದರಿಂದ ಜನಾಂಗ ಹತ್ಯೆಗೆ ಕಾರಣವಾಗುತ್ತೇವೆ ಎನ್ನುವುದು ಆತನ ತಲೆಯಲ್ಲಿ ತುಂಬಿ ಹೋಗಿದೆ. ಕೃಪೆಯ ಆವೇಶದಿಂದ ಕಣ್ಣಲ್ಲಿ ನೀರಿಳಿಯುತ್ತಿದೆ. ಅಜ್ಞಾನದ ಮಂಜು ಮನಸ್ಸನ್ನು ವಿಕ್ಷಿಪ್ತಗೊಳಿಸಿದೆ. ತರ್ಕದ ಮೂಲಕ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾನೆ. ಇದು ಸಹಜ ಪ್ರವೃತ್ತಿ ಅಲ್ಲ, ಇದೊಂದು ಆವೇಶ. ಇದಕ್ಕೆ ಶ್ರೀಕೃಷ್ಣ ನಿಷ್ಠುರವಾಗಿ ಉತ್ತರಿಸುತ್ತಾನೆ.
ಭಗವಾನುವಾಚ ।
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ॥೨॥
ಭಗವಾನ್ ಉವಾಚ-ಭಗವಂತ ಹೇಳಿದನು:
ಕುತಃ ತ್ವಾ ಕಶ್ಮಲಮ್ ಇದಮ್ ವಿಷಮೇ ಸಮುಪಸ್ಥಿತಮ್ |
ಅನಾರ್ಯ ಜುಷ್ಟಮ್ ಅಸ್ವರ್ಗ್ಯಮ್ ಅಕೀರ್ತಿ ಕರಮ್ ಅರ್ಜುನ - ಅರ್ಜುನ, ಇಂತಹ ಸಂಕಟದಲ್ಲಿ ಬಲ್ಲವರು ಮೆಚ್ಚದ, ಅಲ್ಲಿ ಸ್ವರ್ಗಕ್ಕೆ ಸಲ್ಲದ, ಇಲ್ಲಿ ಹೆಸರುಗೆಡಿಸುವ ಈ ಕೊಳೆ ನಿನ್ನನ್ನೇಕೆ ಕವಿಯಿತು?
"ಎಲ್ಲಿಂದ ಬಂತು ನಿನಗೆ ಈ ಬುದ್ಧಿ? ಈ ಭೌತಿಕ ಕೊಳೆ ನಿನಗೆ ಹೇಗೆ ಅಂಟಿತು? ಇಂತಹ ತುರ್ತುಪರಿಸ್ಥಿತಿಯಲ್ಲಿ, ತಕ್ಷಣ ಕಾರ್ಯಪ್ರವೃತ್ತರಾಗಬೇಕಾದ ಈ ಕ್ಷಣದಲ್ಲಿ-ಇದೇನು ಹೊಲಸು ಯೋಚನೆ? ಆರ್ಯರಾದವರು ಯಾರೂ ಈ ರೀತಿ ಎಂದೂ ಯೋಚಿಸುವುದಿಲ್ಲ. ಇಂತಹ ವಿಚಾರಧಾರೆಯಿಂದ- ಪರದಲ್ಲಿ ಸ್ವರ್ಗವಿಲ್ಲ ಹಾಗೂ ಇಹದಲ್ಲಿ ಕೀರ್ತಿ ಇಲ್ಲ. ತಿಳಿದವರು, ಜ್ಞಾನಿಗಳು, ಹಿರಿಯರು ಎಂದೂ ಈ ರೀತಿ ಯೋಚನೆ ಮಾಡುವುದಿಲ್ಲ"-ಎಂದು ನಿಷ್ಠುರವಾಗಿ ಅರ್ಜುನನ ಸಂಪೂರ್ಣ ವಾದವನ್ನು ಒಂದೇ ಮಾತಿನಲ್ಲಿ ಶ್ರೀಕೃಷ್ಣ ಹೊಡೆದು ಹಾಕಿದ. ಇಲ್ಲಿ ಬಂದಿರುವ "ಆರ್ಯ" ಎನ್ನುವ ಪದ ಜನಾಂಗ ವಾಚಕ ಪದ ಅಲ್ಲ. ಆರ್ಯ ಎಂದರೆ ತಿಳುವಳಿಕೆ ಇರುವವರು, ವಯೋವೃದ್ಧ ಜ್ಞಾನಿಗಳು, ಗೌರವಾನ್ವಿತರು ಎಂದರ್ಥ. ಕನ್ನಡದಲ್ಲಿ 'ಅಯ್ಯಾ' ಎನ್ನುವ ಪದಕ್ಕೆ ಇದೇ ಅರ್ಥವಿದೆ.
ಕ್ಲೈಬ್ಯಂ ಮಾಸ್ಮಗಮಃ ಪಾರ್ಥ ನೈತತ್ ತ್ವಯ್ಯುಪಪದ್ಯತೇ ।
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ॥೩॥
ಕ್ಲೈಬ್ಯಮ್ ಮಾ ಸ್ಮಗಮಃ ಪಾರ್ಥ ನ ಏತತ್ ತ್ವಯಿ ಉಪಪದ್ಯತೇ |
ಕ್ಷುದ್ರಮ್ ಹೃದಯ ದೌರ್ಬಲ್ಯಮ್ ತ್ಯಕ್ತ್ವಾ ಉತ್ತಿಷ್ಠ ಪರಂತಪ –ಪಾರ್ಥ, ಹೇಡಿಯಾಗಬೇಡ, ನಿನ್ನಲ್ಲಿ ಇದು ತರವಲ್ಲ. ಅರಿಗಳ ಎದೆಗೆಡಿಸುವ ವೀರನೇ, ಕೀಳರಿಮೆಯ ಎದೆಗೇಡಿತನವನ್ನು ತೊರೆದು ಎದ್ದು ನಿಲ್ಲು.
"ನಪುಂಸಕನಂತೆ ಮಾತನಾಡಬೇಡ. ಅರ್ಜುನನಲ್ಲಿ ಇಂತಹ ಹೇಡಿತನವನ್ನು ನಾನು ನಿರೀಕ್ಷಿಸಿರಲಿಲ್ಲ. ಇಂತಹ ಕ್ಷುದ್ರ ಮಾನಸಿಕ ದೌರ್ಬಲ್ಯವನ್ನು ತೊಡೆದುಹಾಕಿ, ವೀರನಾಗಿ ಅನ್ಯಾಯದ ವಿರುದ್ಧ ಹೋರಾಡು" ಎಂದು ಹೇಳಿದ ಕೃಷ್ಣ, ಅರ್ಜುನನ್ನು ದಿಗ್ಬ್ರಾಂತಿಗೊಳಿಸಿ ಚಿಕಿತ್ಸೆ (Shock Treatment) ನೀಡಿದ್ದಾನೆ.
ಕೃಷ್ಣ ಏಕೆ ಹೀಗೆ ಹೇಳಿದ? ಆತ ಯುದ್ಧ ಹಾಗೂ ರಕ್ತಪಾತವನ್ನು ಬಯಸಿದ್ದನೇ ? ಇತ್ಯಾದಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಇಲ್ಲಿ ಸೂಕ್ಷ್ಮವಾಗಿ ನೋಡಿದರೆ: ಯುದ್ಧವಾದರೆ ಸಾಮಾಜಿಕವಾಗಿ ಏನೇನು ತೊಂದರೆ ಆಗಬಹುದೆಂದು ಅರ್ಜುನ ಹೇಳಿದ್ದನೋ, ಅದಕ್ಕಿಂತ ಹತ್ತುಪಟ್ಟು ಅನ್ಯಾಯ ಯುದ್ಧವಾಗದೇ ಇದ್ದಿದ್ದರೆ ಆಗುತ್ತಿತ್ತು. ದುರ್ಯೋಧನ ಆ ಕಾಲದ ಮಹಾ ಲೋಕಕಂಟಕ. ತುಂಬಿದ ಸಭೆಯಲ್ಲಿ ತನ್ನ ಸ್ವಂತ ಅತ್ತಿಗೆಯ ಮಾನಭಂಗಕ್ಕೆ ಕೈ ಹಾಕಿದ ಆತ, ಅಧಿಕಾರದ ಗದ್ದುಗೆ ಏರಿದ್ದರೆ ಸಮಾಜದ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ. ಇಲ್ಲಿ ಕೃಷ್ಣನ ಧೋರಣೆ ಈ ದೇಶದ ನಾಯಕತ್ವ ಮುಂದೆ ಯಾರ ಕೈ ಸೇರಬೇಕು ಎನ್ನುವುದೇ ಹೊರತು, ಬಂಧು ಪ್ರೇಮವಲ್ಲ. ಗೆಲ್ಲುವುದು-ಸೋಲುವುದಕ್ಕಿಂತ, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಮುಖ್ಯ. ಅನ್ಯಾಯದ ವಿರುದ್ಧ ಹೋರಾಡಿ ಸತ್ತರೂ ತೊಂದರೆ ಇಲ್ಲ, ಆದರೆ ಅದರ ವಿರುದ್ಧ ಸೆಟೆದು ನಿಲ್ಲಬೇಕು ಎನ್ನುವುದು ಕೃಷ್ಣನ ಸಂದೇಶ.
ಶ್ರೀ ಕೃಷ್ಣ ಮಹಾಭಾರತದ ಮುಖೇನ ನಮಗೆ ಧರ್ಮದ ಒಂದು ಹೊಸ ಸಿದ್ಧಾಂತವನ್ನು ಕೊಟ್ಟಿದ್ದಾನೆ. ಮಹಾಭಾರತಕ್ಕೆ ಮೊದಲು ಇದ್ದ ಧರ್ಮದ ಕಲ್ಪನೆಯೇ ಬೇರೆ. ಉದಾಹರಣೆಗೆ ಸತ್ಯ ಹೇಳುವುದು: ಇದ್ದದ್ದನ್ನು ಇದ್ದಂತೆ ಹೇಳುವುದು ಸತ್ಯ. ಆದರೆ ಕೃಷ್ಣನ ಪ್ರಕಾರ-ಯಾವ ಸುಳ್ಳು ಹೇಳುವುದರಿಂದ ಸಮಾಜಕ್ಕೆ ಹಿತವಾಗುತ್ತದೋ ಅದು ಸತ್ಯ; ಯಾವ ಸತ್ಯ ಹೇಳುವುದರಿಂದ ಸಮಾಜಕ್ಕೆ ಕೆಡುಕಾಗುತ್ತದೋ ಅದು ಸುಳ್ಳು. ಇನ್ನು ಹಿಂಸೆ: ಒಂದು ಹಿಂಸೆಯಿಂದ ಅನೇಕ ಅಹಿಂಸೆ ಸಾಧ್ಯವಾದರೆ ಅದು ಅಹಿಂಸೆ. ಉದಾಹರಣೆಗೆ ನರಭಕ್ಷಕ ಹುಲಿಯೊಂದು ಪ್ರತಿದಿನ ಊರಿಗೆ ದಾಳಿಯಿಟ್ಟು ಒಬ್ಬೊಬ್ಬರನ್ನೇ ತಿನ್ನುತ್ತಿದ್ದರೆ, ಅದನ್ನು ಕೊಲ್ಲುವುದು ಪ್ರಾಣಿ ಹಿಂಸೆ ಅಲ್ಲ. ಒಂದು ಯುದ್ಧದಿಂದ ತಲತಲಾಂತರದವರೆಗೆ ಅಹಿಂಸೆ ಸ್ಥಾಪನೆ ಸಾಧ್ಯವಾದರೆ ಯುದ್ಧಮಾಡುವುದರಲ್ಲಿ ತಪ್ಪಿಲ್ಲ. ಯಾವುದರಿಂದ ಸಜ್ಜನಿಕೆಯ ರಕ್ಷಣೆ ಆಗುತ್ತದೋ ಅದು ಸತ್ಯ. ಧರ್ಮಕ್ಕೆ ಭಾವ ಮುಖ್ಯ. ಯಾವ ಕಾರಣಕ್ಕಾಗಿ ಹೋರಾಡುತ್ತೇವೋ, ಅದರ ಹಿಂದೆ ಇರುವ ಉದ್ದೇಶ ಏನು ಎನ್ನುವುದು ಮುಖ್ಯ.
ಅರ್ಜುನ ಉವಾಚ ।
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧುಸೂದನ ।
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ॥೪॥
ಅರ್ಜುನಃ ಉವಾಚ-ಅರ್ಜುನ ಹೇಳಿದನು:
ಕಥಮ್ ಭೀಷ್ಮಮ್ ಅಹಮ್ ಸಂಖೇ ದ್ರೋಣಮ್ ಚ ಮಧುಸೂದನ |
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾ ಅರಿಸೂದನ- ಅರಿಗಳನ್ನು ತರಿದ ಓ ಮಧುಸೂದನ, ಭೀಷ್ಮನನ್ನು, ದ್ರೋಣನನ್ನು, ಪೂಜಿಸಬೇಕಾದ ಮಂದಿಯನ್ನು ನಾನೆಂತು ರಣದಲ್ಲಿ ಬಾಣಗಳಿಂದ ಹೊಡೆದು ಹೋರಾಡಲೀ?
ಕೃಷ್ಣನ ತೀಕ್ಷ್ಣ ಉತ್ತರ ಹಾಗೂ ಆತನ ನಗುಮೊಗವನ್ನು ಗಮನಿಸಿದ ಅರ್ಜುನನ ಮಾತಿನ ಧಾಟಿ ಈಗ ಬದಲಾಗುತ್ತದೆ. ಆತ ಭಾವಾವೇಶ ಬಿಟ್ಟು ಈಗ ಭಾವುಕತೆಯಿಂದ ಶರಣಾಗತಿಯತ್ತ ಹೊರಳುತ್ತಿದ್ದಾನೆ.
ಅರ್ಜುನ ಹೇಳುತ್ತಾನೆ: "ನನ್ನ ಕಣ್ಣಮುಂದೆ ನಿಂತ ಭೀಷ್ಮಾಚಾರ್ಯರು, ದ್ರೋಣಾಚಾರ್ಯರನ್ನು ಹೇಗೆ ಎದುರಿಸಲೀ? ಒಬ್ಬರು ನಮ್ಮ ವಂಶದ ಮೂಲಪುರುಷನಾದ ರಾಜರ್ಷಿ; ಇನ್ನೊಬ್ಬರು ಎಲ್ಲಾ ಕ್ಷತ್ರಿಯರಿಗೂ ವಿದ್ಯೆ ಕೊಟ್ಟ ಮಹರ್ಷಿ. ಇಂತಹ ಪೂಜಾರ್ಹರಾದ ಮಹನೀಯರತ್ತ ಹೇಗೆ ಬಾಣ ಹೂಡಲೀ ? ಸೃಷ್ಟಿಯ ಆದಿಯಲ್ಲಿ ಮಧು-ಕೈತಪರನ್ನು ಸಂಹಾರ ಮಾಡಿದ ಓ ಮಧುಸೂದನನೇ; ದುಷ್ಟ ಸಂಹಾರಕ್ಕೆಂದು ಅವತರಿಸಿದ ಅರಿಸೂದನನೇ, ಜ್ಞಾನಿಗಳ, ಆಚಾರ್ಯರ ಹತ್ಯೆ ನಿನ್ನ ಮೂಲ ಉದ್ದೇಶ ಅಲ್ಲ" . ಎಂದು ಭಿನ್ನ ಧಾಟಿಯಲ್ಲಿ ಅರ್ಜುನ ತನ್ನ ಮಾತನ್ನು ಮುಂದುವರಿಸುತ್ತಾನೆ.
ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ ।
ಹತ್ವಾSರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್॥೫॥
ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ ಭೋಕ್ತುಮ್ ಭೈಕ್ಷ್ಯಮ್ ಅಪಿ ಇಹ ಲೋಕೇ |
ಹತ್ವಾ ಅರ್ಥ ಕಾಮಾನ್ ತು ಗುರೂನ್ ಇಹ ಏವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್-- ಈ ಮಹಾನುಭಾವಿಗಳನ್ನು ಕೊಲ್ಲುವ ಬದಲು ಇಲ್ಲೇ, ಈ ನೆಲದಲ್ಲಿ ಭಿಕ್ಷೆ ಬೇಡುವುದು ಮೇಲು. ಸಿರಿಯ ಬೆನ್ನು ಹತ್ತಿದ ಇವರನ್ನು ಕೊಂದು ಇಲ್ಲೇ ಅವರ ನೆತ್ತರಿನಿಂದ ನೆನೆದ ಐಸಿರಿಯನ್ನುಣ್ಣಬೇಕು!
ಗುರು ಹಿರಿಯರನ್ನು ಕೊಂದು, ಸಿರಿವಂತಿಕೆಯ ಭೋಗವನ್ನು ಅನುಭವಿಸುವುದಕ್ಕಿಂತ, ಭಿಕ್ಷೆ ಬೇಡಿ ಬದುಕುವುದು ಹಿರಿತನವಲ್ಲವೇ? ಯಾವ ಸಿಂಹಾಸನ ಅಂತರಂಗದ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಭೀಷ್ಮ-ದ್ರೋಣರಂತಹ ಮಹಾನುಭಾವರನ್ನು ಕೊಡಲಾರದೋ, ಅಂತಹ ಸಿಂಹಾಸನ ನಮಗೇಕೆ ಬೇಕು? ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ನಿಂತ ಇವರನ್ನು ಕೊಂದು ಸಿಂಹಾಸನವೇರಿದರೆ, ಗುರುಗಳ ನೆತ್ತರಿನಿಂದ ತೊಯ್ದ ಭೋಗವನ್ನು ಅನುಭವಿಸಿದಂತೆ.
ನ ಚೈತದ್ ವಿದ್ಮಃ ಕತರನ್ನೋ ಗರೀಯೋ ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ ।
ಯಾನೇವ ಹತ್ವಾ ನ ಜಿಜೀವಿಷಾಮಸ್ತೇSವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ॥೬॥
ನ ಚ ಏತತ್ ವಿದ್ಮಃ ಕತರತ್ ನಃ ಗರೀಯಃ ಯತ್ ವಾ ಜಯೇಮ ಯದಿ ವಾ ನಃ ಜಯೇಯುಃ |
ಯಾನ್ ಏವ ಹತ್ವಾ ನ ಜಿಜೀವಿಷಾಮಃ ತೇ ಅವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ --ಇದೇ ತಿಳಿಯುತ್ತಿಲ್ಲ. ಯಾವುದು ನಮಗೆ ಹೆಚ್ಚು ಒಳಿತು-ನಾವು ಗೆಲ್ಲುವುದೇ? ಅಥವಾ ನಮ್ಮನ್ನು ಅವರು ಗೆಲ್ಲುವುದೇ? ಯಾರನ್ನು ಕೊಂದು ನಾವು ಬದುಕ ಬಯಸುವುದಿಲ್ಲವೋ, ಅವರು(ಕೌರವರು) ನಮ್ಮೆದುರು ನಿಂತಿದ್ದಾರೆ.
ಇಲ್ಲಿಯ ತನಕ ತನ್ನ ವಾದವನ್ನೇ ಮಂಡಿಸಿದ ಅರ್ಜುನ ಈಗ ಕೃಷ್ಣನಿಗೆ ಶರಣಾಗಿ ತನಗ್ಯಾವುದು ಒಳಿತು ಎಂದು ಪ್ರಶ್ನೆ ಮಾಡುತ್ತಾನೆ. “ನಾವು ಯುದ್ಧ ಮಾಡಿ ಗೆಲ್ಲುವುದರಲ್ಲಿ ನಮಗೆ ಶ್ರೇಯಸ್ಸೋ ಅಥವಾ ಗುರುಹಿರಿಯರು ಗೆಲ್ಲುವುದರಲ್ಲಿ ನಮಗೆ ಶ್ರೇಯಸ್ಸೋ ತಿಳಿಯುತ್ತಿಲ್ಲ. ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ಆಸೆಯೂ ಹೊರಟುಹೋಗಿದೆ” ಎಂದು ತನ್ನ ಮನಸ್ಸಿನ ಸಂಧಿಗ್ಧತೆಯನ್ನು ಅರ್ಜುನ ಕೃಷ್ಣನ ಮುಂದೆ ಬಿಚ್ಚಿಡುತ್ತಾನೆ. ತಂದೆ ಸಮನಾದ ಧೃತರಾಷ್ಟ್ರ, ಅವರ ಮಕ್ಕಳು ನಮ್ಮ ಮುಂದೆ ಯುದ್ಧಕ್ಕೆ ನಿಂತಿದ್ದಾರೆ. ಮಕ್ಕಳೆಂದರೆ ಪ್ರಾಣ ಬಿಡುವ ನಮ್ಮ ದೊಡ್ಡಪ್ಪನ ವಿರುದ್ಧ ಹೋರಾಡಲು ಇಷ್ಟವಿಲ್ಲ ಎನ್ನುತ್ತಾನೆ ಅರ್ಜುನ.
ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಮ್ಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಮ್ ಪ್ರಪನ್ನಮ್॥೭॥
ಕಾರ್ಪಣ್ಯ ದೋಷ ಉಪಹತ ಸ್ವಭಾವಃ ಪೃಚ್ಛಾಮಿ ತ್ವಾಮ್ ಧರ್ಮ ಸಮ್ಮೂಢ ಚೇತಾಃ |
ಯತ್ ಶ್ರೇಯಃ ಸ್ಯಾತ್ ನಿಶ್ಚಿತಮ್ ಬ್ರೂಹಿ ತತ್ ಮೇ ಶಿಷ್ಯಃ ತೇ ಅಹಮ್ ಶಾಧಿ ಮಾಮ್ ತ್ವಾಮ್ ಪ್ರಪನ್ನಮ್- -ದೌರ್ಬಲ್ಯದ ದೋಷದಿಂದ ನನ್ನ ಸಹಜ ಬೀರಕ್ಕೆ ಮಂಕು ಕವಿದಿದೆ. ಧರ್ಮದ ಬಗೆಗೆ ಬಗೆಗಾಣದವನಾಗಿ ನಿನ್ನನ್ನು ಕೇಳುತ್ತಿದ್ದೇನೆ; ಹೇಳು ನನಗಿದನ್ನು: ಯಾವುದು ನಿಖರವಾದ ಒಳಿತಿನ ದಾರಿ? ನಾನು ನಿನ್ನ ಶಿಷ್ಯ. ನಿನಗೆ ಶರಣು ಬಂದ ನನಗೆ ದಾರಿ ತೋರು.
ನನಗೆ ಕಾರ್ಪಣ್ಯ ದೋಷ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ. ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ನಹಿ ಪ್ರಪಶ್ಯಾಮಿ ಮಮಾಪನುದ್ಯಾದ್ ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್ ।
ಅವಾಪ್ಯ ಭೂಮಾವಸಪತ್ನಮೃದ್ಧಂ ರಾಜ್ಯಂ ಸುರಾಣಾಮಪಿ ಚಾSಧಿಪತ್ಯಮ್॥೮॥
ನ ಹಿ ಪ್ರಪಶ್ಯಾಮಿ ಮಮ ಅಪನುದ್ಯಾತ್ ಯತ್ ಶೋಕಮ್ ಉಚ್ಛೋಷಣಮ್ ಇಂದ್ರಿಯಾಣಾಮ್ |
ಅವಾಪ್ಯ ಭೂಮೌ ಅಸಪತ್ನಮ್ ಋದ್ಧಮ್ ರಾಜ್ಯಮ್ ಸುರಾಣಾಮ್ ಅಪಿ ಚ ಆಧಿಪತ್ಯಮ್ - ಸತ್ಯ ಸಾರವನ್ನೆಲ್ಲಾ ಹೀರಿ ಬತ್ತಿಸಿಬಿಡಬಲ್ಲ ನನ್ನ ಈ ದುಗುಡವನ್ನು ದೂರೀಕರಿಸಬಲ್ಲ ದಾರಿಯನ್ನೇ ಕಾಣದವನಾಗಿದ್ದೇನೆ-ಹಗೆಗಳೇ ಇಲ್ಲದ, ಹುಲುಸಾದ ಇಡಿಯ ನೆಲದ ಒಡೆತನ ಪಡೆದರೂ, ಸಗ್ಗಿಗರ ಸಾಮ್ರಾಟನಾದರೂ ಕೂಡಾ.
“ನನ್ನ ಇಂದ್ರಿಯಗಳು ಸೊರಗಿ ಹೋಗುತ್ತಿವೆ. ನನ್ನ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತ್ತಿಲ್ಲ. ಭೂಮಿಯಲ್ಲಿ, ಸ್ವರ್ಗದಲ್ಲಿ ಪ್ರಭುತ್ವವನ್ನು ಪಡೆದರೂ ಕೂಡಾ ನಾನು ಈ ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ” ಎನ್ನುತ್ತಾನೆ ಅರ್ಜುನ.
ಸಂಜಯ ಉವಾಚ ।
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ ।
ನ ಯೋತ್ಸ್ಯ ಇತಿ ಗೋವಿಂದಮುಕ್ತ್ವಾ ತೂಷ್ಣೀಂ ಬಭೂವ ಹ ॥೯॥
ಸಂಜಯ ಉವಾಚ -ಸಂಜಯ ಹೇಳಿದನು:
ಏವಮ್ ಉಕ್ತ್ವಾ ಹೃಷೀಕೇಶಮ್ ಗುಡಾಕೇಶಃ ಪರಂತಪಃ |
ನ ಯೋತ್ಸ್ಯೇ ಇತಿ ಗೋವಿಂದಮ್ ಉಕ್ತ್ವಾ ತೂಷ್ಣೀಮ್ ಬಭೂವ ಹ- ಅರಿಗಳನ್ನು ತರಿದ, ನಿದ್ದೆಯನ್ನು ಗೆದ್ದ ಅರ್ಜುನ-ಇಂದ್ರಿಯಗಳ ಒಡೆಯನಾದ ಗೋವಿಂದನ ಬಳಿ ಹೀಗೆಂದು- ಮತ್ತೆ 'ನಾನು ಕಾದಲಾರೆ' ಎಂದು ಸುಮ್ಮನಾದನು!
ಸಂಜಯ ಯುದ್ಧಭೂಮಿಯಲ್ಲಿ ಅರ್ಜುನನ ಸ್ಥಿತಿಯನ್ನು ಧೃತರಾಷ್ಟ್ರನಿಗೆ ವರ್ಣಿಸುತ್ತಾ, ಈ ರೀತಿ ಹೇಳುತ್ತಾನೆ: "ಇಡೀ ಬ್ರಹ್ಮಾಂಡದಲ್ಲಿ ತುಂಬಿರುವ ನಮ್ಮ ಇಂದ್ರಿಯಗಳ ಸ್ವಾಮಿ ಗೋವಿಂದನಲ್ಲಿ ನಿದ್ದೆಯನ್ನು ಗೆದ್ದ ಅರ್ಜುನ 'ನಾನು ಯುದ್ಧ ಮಾಡಲಾರೆ' ಎಂದು ಹೇಳಿ ಮೌನಿಯಾದ” ಎಂದು.
ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ ।
ಸೇನಯೋರುಭಯೋರ್ಮಧ್ಯೇ ವಿಷೀದಂತಮಿದಂ ವಚಃ॥೧೦॥
ತಮ್ ಉವಾಚ ಹೃಷೀಕೇಶಃ ಪ್ರಹಸನ್ ಇವ ಭಾರತ |
ಸೇನಯೋಃ ಉಭಯೋಃ ಮಧ್ಯೇ ವಿಷೀದಂತಮ್ ಇದಮ್ ವಚಃ -ಓ ಭರತ ವಂಶದ ದೊರೆಯೇ, ಎರಡು ಪಡೆಗಳನಡುವೆ ತಳಮಳಗೊಂಡಿರುವ ಅವನನ್ನು ಕುರಿತು ಕೃಷ್ಣ ಮೆಲುನಗುತ್ತಾ ಈ ಮಾತು ನುಡಿದ.
ಅರ್ಜುನ ಸಂಪೂರ್ಣ ಶರಣಾಗಿ ತನ್ನಮುಂದೆ ಅಂಗಲಾಚಿ ನಿಂತಾಗ, ಶ್ರೀಕೃಷ್ಣ ನಸುನಗುತ್ತಾ ತನ್ನ ಮಾತನ್ನು ಆರಂಭಿಸುತ್ತಾನೆ. ಇಲ್ಲಿ ಅರ್ಜುನ ಕೃಷ್ಣ ಹೇಳುವುದನ್ನು ಸ್ವೀಕರಿಸುವ ಹಂತವನ್ನು ತಲುಪಿದ್ದಾನೆ. ಆತನಲ್ಲಿ ಭಾವಾವೇಶ ಹೊರಟುಹೋಗಿ ಶರಾಣಗತಿ ಬಂದಿದೆ. ಭಗವಂತ ನಮಗೆ ಮಾರ್ಗದರ್ಶನ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತೊರೆದು, ಆತನಲ್ಲಿ ಸಂಪೂರ್ಣ ಶರಣಾಗಬೇಕು. ಆಗ ಖಂಡಿತ ನಮಗೆ ಮಾರ್ಗದರ್ಶನ ಸಿಗುತ್ತದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಮಾಡುವ ಉಪದೇಶ ನಮ್ಮೆಲ್ಲರಿಗೆ ಆತ ಮಾಡಿದ ಉಪದೇಶ. ಈ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ಕೃಷ್ಣನ ಉಪದೇಶವನ್ನು ಆಲಿಸೋಣ ಬನ್ನಿ.
ಭಗವಾನುವಾಚ ।
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ |
ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ॥೧೧॥
ಭಗವಾನ್ ಉವಾಚ-ಭಗವಂತ ಹೇಳಿದನು:
ಅಶೋಚ್ಯಾನ್ ಅನ್ವಶೋಚಃ ತ್ವಮ್ ಪ್ರಜ್ಞಾವಾದಾನ್ ಚ ಭಾಷಸೇ |
ಗತ ಅಸೂನ್ ಅಗತ ಅಸೂನ್ ಚ ನ ಅನುಶೋಚಂತಿ ಪಂಡಿತಾಃ -ಅಳಬಾರದವರಿಗಾಗಿ ನೀನು ಅಳುತ್ತಿರುವೆ. ತಿಳಿದವರು ಆಡದಂತಹ ಮಾತುಗಳನ್ನು ತೋಚಿದಂತೆ ಆಡುತ್ತಿರುವೆ. ಅಳಿದವರ ಬಗೆಗಾಗಲೀ, ಅಳಿಯದವರ ಬಗೆಗಾಗಲೀ, ತಿಳಿದವರು ಅಳುವುದಿಲ್ಲ.
ಇದು ಭಗವಂತನ ಉಪದೇಶದ ಮೊದಲ ನುಡಿ. ಇದು ಇಡೀ ಗೀತೆಗೆ ಪಂಚಾಂಗ ರೂಪದಲ್ಲಿದೆ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: "ಯಾರಿಗೋಸ್ಕರ ಅಳಬಾರದೋ ಅಂತವರಿಗೋಸ್ಕರ ಅಳುತ್ತಿರುವೆ. ತುಂಬಾ ತಿಳಿದ ಮಹಾಜ್ಞಾನಿಯಂತೆ ಮಾತನಾಡುತ್ತಿರುವೆ" ಎಂದು. ಇದು ಅರ್ಜುನನ ದೌರ್ಬಲ್ಯಕ್ಕೆ ಕೃಷ್ಣ ಹಿಡಿದ ಕನ್ನಡಿ. ಇಲ್ಲಿ 'ನಿನಗೇನೂ ತಿಳಿದಿಲ್ಲ' ಎನ್ನುವ ಭಾವ ಕೂಡಾ ಸ್ಪಷ್ಟವಾಗಿದೆ. ಅರ್ಜುನನಿಗೆ ಕಾಡಿರುವುದು ಕೆಲವರು(ಗುರು-ಹಿರಿಯರು) ಸಾಯುತ್ತಾರೆ ಇನ್ನು ಕೆಲವರು(ದುಷ್ಟರು) ಬದುಕುತ್ತಾರಲ್ಲಾ ಎನ್ನುವ ಭಯ-ಅದರಿಂದಾಗಿ ದುಃಖ. ದುಃಖಕ್ಕೆ ಮೂಲ ಭಯ-ಭಯಕ್ಕೆ ಮೂಲ ಅಜ್ಞಾನ.
ಇಲ್ಲಿ ನಿಮಗೊಂದು ಪ್ರಶ್ನೆ ಬರಬಹುದು. ಭೀಷ್ಮ ದ್ರೋಣರಂತಹ ಮಹಾತ್ಮರು ಸತ್ತರೆ ಅಳುವುದು ತಪ್ಪೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನಾವು ಹುಟ್ಟು ಸಾವಿನ ಗುಟ್ಟನ್ನು ಅರಿತಿರಬೇಕು. ಹುಟ್ಟು ಸಾವಿನ ಇನ್ನೊಂದು ಆಯಾಮ ತಿಳಿದಾಗ ನಮಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಜೀವ ಅನಾದಿನಿತ್ಯ; ಅದಕ್ಕೆಂದೂ ಸಾವಿಲ್ಲ. ಈ ಭೌತಿಕ ಶರೀರ ಜೀವಕ್ಕೆ ಒಂದು ಪಂಜರದಂತೆ. ಈ ಪಂಜರದಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಹುಟ್ಟು. ಪಂಜರದಿಂದ ಹೊರ ಹೋಗುವುದು ಸಾವು. ಈ ಆಯಾಮದಲ್ಲಿ ನೋಡಿದರೆ ಹೊಸ ಅಂಗಿ ತೊಡುವುದು ಹುಟ್ಟು-ಹಳೆ ಅಂಗಿ ತೊರೆಯುವುದು ಸಾವು. ಈ ಜ್ಞಾನ ನಮಗಿದ್ದರೆ ನಮಗೆ ಸಾವಿನ ಭಯವಿರುವುದಿಲ್ಲ.
ಇಲ್ಲಿ ಕೃಷ್ಣ ಹೇಳುತ್ತಾನೆ: "ಜ್ಞಾನಿಗಳು ಆಡುವ ಮಾತನ್ನು ನೀನು ಆಡುತ್ತಿಲ್ಲ" ಎಂದು. ಏಕೆಂದರೆ ಜ್ಞಾನಿಗಳು ಹುಟ್ಟು-ಸಾವಿನ ಮರ್ಮವನ್ನು ಚೆನ್ನಾಗಿ ಅರಿತಿರುತ್ತಾರೆ. ನೀನು ಆಡುತ್ತಿರುವುದು ತಿಳುವಳಿಕೆಯ ಮಾತಲ್ಲ. ನಿನ್ನ ತಿಳುವಳಿಕೆಯೇ ವಿಶ್ವದ ಸತ್ಯ ಎನ್ನುವ ಭ್ರಮೆಯಿಂದ ನೀನು ಮಾತನಾಡುತ್ತಿದ್ದೀಯ ಎನ್ನುತ್ತಾನೆ ಕೃಷ್ಣ.
ಇಲ್ಲಿ ಕೃಷ್ಣ ಅರ್ಜುನ ಹಾಕಿದ ಎಲ್ಲಾ ಲೌಕಿಕ ಪ್ರಶ್ನೆಗಳನ್ನು ಬಿಟ್ಟು ಅವನಿಗೆ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತಿದ್ದಾನೆ. ಅರ್ಜುನ ಕಂಡಿದ್ದು ಕೇವಲ ಐಹಿಕ ಪ್ರಪಂಚವಾದರೆ, ಕೃಷ್ಣ ಆತನಿಗೆ ಅದರಾಚೆಗಿನ ಸತ್ಯದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತಿದ್ದಾನೆ.
ಸಾವು ಭಯಾನಕವಲ್ಲ, ಹುಟ್ಟಿ ಬಂದವನಿಗೆ ಸಾವು ಅನಿವಾರ್ಯ. ಆತ್ಮಕ್ಕೆ ಎಂದೂ ಸಾವಿಲ್ಲ. ಆತ್ಮ ಅನಾದಿನಿತ್ಯ. ಆದರೆ ದೇಹ ನಾಶ ಅನಿವಾರ್ಯ. ಮನುಷ್ಯ ತನ್ನ ವಿಕೃತಿಯಿಂದ ಪ್ರಕೃತಿಯೆಡೆಗೆ ಪಯಣಿಸುವ ಕ್ರಿಯೆ ಸಾವು. ಆದ್ದರಿಂದ ಅಳಿದವರ ಬಗೆಗಾಗಲೀ, ಅಳಿಯದವರ ಬಗೆಗಾಗಲೀ, ತಿಳಿದವರು ಅಳುವುದಿಲ್ಲ ಎನ್ನುವುದನ್ನು ಇಲ್ಲಿ ಕೃಷ್ಣ ಅರ್ಜುನನಿಗೆ ಮನವರಿಕೆ ಮಾಡಿಸುತ್ತಿದ್ದಾನೆ.
ನತ್ವೇವಾಹಂ ಜಾತು ನಾSಸಂ ನ ತ್ವಂ ನೇಮೇ ಜನಾಧಿಪಾಃ ।
ನಚೈವ ನ ಭವಿಷ್ಯಾಮಃ ಸರ್ವೇ ವಯಮತಃ ಪರಮ॥೧೨॥
ನ ತು ಏವ ಅಹಮ್ ಜಾತು ನ ಅಸಮ್ ನ ತ್ವಮ್ ನ ಇಮೇ ಜನ ಅಧಿಪಾಃ |
ನ ಚ ಏವ ನ ಭವಿಷ್ಯಾಮಃ ಸರ್ವೇ ವಯಮ್ ಅತಃ ಪರಮ್-- ನಾನು ಹಿಂದೆ ಎಂದೂ ಇರದಿದ್ದವನಲ್ಲ. ಅಲ್ಲ ನೀನೂ. ಅಲ್ಲ ಈ ಅರಸರೂ. ಇನ್ನು ಮುಂದೂ ನಾವೆಂದೂ ಇಲ್ಲವಾಗುವವರಲ್ಲ.
ಕೃಷ್ಣ ಇಲ್ಲಿ ಸಾವಿನ ಬಗ್ಗೆ ನಾವು ಏಕೆ ಚಿಂತಿಸಬೇಕಿಲ್ಲ ಎನ್ನುವ ಮಾತಿಗೆ ಪೂರಕವಾಗಿ, ಅದನ್ನು ಸಮರ್ಥಿಸುವ ಮಾತನ್ನು ಹೇಳುತ್ತಾನೆ. ಆತ ಹೇಳುತ್ತಾನೆ: "ನಾನು-ನೀನು ಈ ಎಲ್ಲಾ ರಾಜರು, ಹಿಂದೆ ಇದ್ದೆವು, ಇಂದು ಇದ್ದೇವೆ ಹಾಗೂ ಮುಂದೆ ಕೂಡಾ ಇರುತ್ತೇವೆ. ದೇಹ ನಾಶವಾದಾಗ ಜೀವ ನಾಶವಾಗುವುದಿಲ್ಲ. ನಾನು ಹೇಗೆ ಅನಾದಿನಿತ್ಯವೋ ಹಾಗೇ ಪ್ರತಿಯೊಂದು ಜೀವರು ಕೂಡಾ ಅನಾದಿನಿತ್ಯ. ಆತ್ಮವನ್ನು ಕೊಲ್ಲುವುದು ಅಸಾಧ್ಯ" ಎಂದು. ಅನಂತ ಜೀವದ ಹರವು ಅನಂತ ಕಾಲದ ತನಕ ನಿರಂತರವಾಗಿರುತ್ತದೆ. ಆತ್ಮ ಎಂದೆಂದಿಗೂ ಅಜರಾಮರ. ಪ್ರತಿಯೊಂದು ಜೀವಕ್ಕೆ ಅದರದ್ದೇ ಆದ ಸ್ವಭಾವವಿದೆ. ಜೀವ ಒಂದು ಬೀಜದಂತೆ. ಭಗವಂತ ಒಬ್ಬ ತೋಟಗಾರನಂತೆ. ಆತ ಈ ಪ್ರಪಂಚವೆಂಬ ತೋಟದ ಸೃಷ್ಟಿ ಮಾಡಿ, ಈ ಜೀವವನ್ನು ಆ ತೋಟದಲ್ಲಿ ಬಿತ್ತಿ ಅದಕ್ಕೊಂದು ಅಸ್ತಿತ್ವವನ್ನು ಕೊಟ್ಟ. ಪ್ರತಿಯೊಂದು ಜೀವ ಅದರ ಸ್ವಭಾವಕ್ಕನುಗುಣವಾಗಿ ಈ ಪ್ರಪಂಚದಲ್ಲಿ ಬೆಳೆಯುತ್ತವೆ. ಒಂದು ಜೀವದ ಸ್ವಭಾವ ಇನ್ನೊಂದು ಜೀವದ ಸ್ವಭಾವಕ್ಕಿಂತ ಭಿನ್ನ. ಈ ಕಾರಣದಿಂದಾಗಿ ಈ ಪ್ರಪಂಚ ಇಷ್ಟೊಂದು ವೈವಿಧ್ಯಪೂರ್ಣ.
ದೇಹಿನೋSಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ॥೧೩॥
ದೇಹಿನಃ ಅಸ್ಮಿನ್ ಯಥಾ ದೇಹೇ ಕೌಮಾರಮ್ ಯೌವನಮ್ ಜರಾ |
ತಥಾ ದೇಹಾಂತರ ಪ್ರಾಪ್ತಿ ಧೀರಃ ತತ್ರ ನ ಮುಹ್ಯತಿ—ದೇಹದಲ್ಲಿರುವ ಜೀವಕ್ಕೆ ಈ ದೇಹದಲ್ಲೇ ಎಳೆತನ, ಹರೆಯ, ಮುಪ್ಪು ಹೇಗೋ-ಹಾಗೇ ದೇಹದ ಬದಲಾವಣೆ ಕೂಡಾ. ಇಂತಹ ಸನ್ನಿವೇಶದಲ್ಲಿ ಧೀರನಾದವನು ಕಂಗೆಡುವುದಿಲ್ಲ.
ದೇಹ ನಾಶವೆಂದರೆ ಸ್ವರೂಪ ನಾಶವಲ್ಲ. ಈ ದೇಹದಲ್ಲಿರುವ ಜೀವ ಪ್ರತೀಕ್ಷಣದಲ್ಲಿ ತನ್ನ ದೇಹ ಪರಿವರ್ತನೆಯನ್ನು ಅನುಭವಿಸುತ್ತಿರುತ್ತದೆ. ಬಾಲ್ಯದಲ್ಲಿನ ದೇಹ ಯೌವನದಲ್ಲಿಲ್ಲ, ಯೌವನದಲ್ಲಿನ ದೇಹ ಮುಪ್ಪಿನಲ್ಲಿಲ್ಲ. ಸತ್ತ ಬಳಿಕ ಮತ್ತೆ ಮರುಹುಟ್ಟಿನೊಂದಿಗೆ ಹೊಸ ದೇಹ. ಆದರೆ ನಮಗೆ ನಾವು ಎಲ್ಲಿಂದ ಬಂದೆವು ಹಾಗೂ ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಅರಿವು ಮಾತ್ರ ಇಲ್ಲ. ನಮಗೆ ತಿಳಿದಿರುವುದು ನಮ್ಮ ಈಗಿನ ಅಸ್ತಿತ್ವ ಮಾತ್ರ. ದೇಹ ನಾಶವಾಗಿ ಹೊಸ ದೇಹ ಬರಬಹುದು. ಆದರೆ ಎಂದೂ ನಾಶವಾಗದ ಚೈತನ್ಯ ಈ 'ಜೀವ'. ಒಂದು ದಿನ ನಾಶವಾಗುವ ಈ ದೇಹದ ಬಗ್ಗೆ ಧೀರನಾದವನು ಎಂದೂ ಅಳುವುದಿಲ್ಲ ಎನ್ನುತ್ತಾನೆ ಕೃಷ್ಣ. ಇಲ್ಲಿ ಧೀರ ಎಂದರೆ ಅರಿವಿನ ಆನಂದವನ್ನು ಅನುಭವಿಸುವ ಜ್ಞಾನಿ(ಧೀ+ರಃ). ಎಲ್ಲಿ ಜ್ಞಾನವಿದೆಯೋ ಅಲ್ಲಿ ದುಃಖವಿಲ್ಲ.
ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ ।
ಆಗಮಾಪಾಯಿನೋನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ॥೧೪॥
ಮಾತ್ರಾ ಸ್ಪರ್ಶಾಃ ತು ಕೌಂತೇಯ ಶೀತ ಉಷ್ಣ ಸುಖ ದುಃಖ ದಾಃ |
ಆಗಮ ಅಪಾಯಿನಃ ಅನಿತ್ಯಾಃ ತಾನ್ ತಿತಿಕ್ಷಸ್ವ ಭಾರತ -- ಕೌಂತೇಯ, ವಿಷಯ ಸಂಪರ್ಕಗಳೇ ತಂಪು-ಬಿಸಿಗಳ, ಸುಖ-ದುಃಖಗಳ ಅನುಭವ ನೀಡುವಂಥವು. ಇವು ಬಂದು ಹೋಗುವಂಥವು. ನಿರಂತರವಾಗಿ ಇರುವಂಥವಲ್ಲ. ಓ ಭಾರತಾ, ಅವುಗಳನ್ನು ಸಹಿಸಿಕೋ.
ನಾವು ಬಾಲ್ಯದ ದೇಹವನ್ನು ಕಳೆದುಕೊಂಡು ಯೌವನದ ದೇಹವನ್ನು ಪಡೆಯುತ್ತೇವೆ. ಯೌವನದ ದೇಹವನ್ನು ಕಳೆದುಕೊಂಡು ಮುಪ್ಪಿನ ದೇಹವನ್ನು ಪಡೆಯುತ್ತೇವೆ. ಈ ಕಾರಣಕ್ಕಾಗಿ ಯಾರೂ ದುಃಖಿಸುವುದಿಲ್ಲ. ಆದರೆ ಸಾವಿನಲ್ಲಿ 'ಕಾಣುವ’ ಇನ್ನೊಂದು ದೇಹ ಇಲ್ಲವಾಗುತ್ತದೆ-ಆಗ ದುಃಖ. ಯಾವ ದೇಹದ ಮೂಲಕ ಬಾಂಧವ್ಯದ ನಂಟನ್ನು ಬೆಳೆಸಿಕೊಂಡಿರುತ್ತೇವೋ , ಅದು ಇಲ್ಲವಾಗುತ್ತದಲ್ಲಾ ಎನ್ನುವ ದುಃಖ ಸಾಮಾನ್ಯವಾಗಿ ನಮ್ಮನ್ನು ಕಾಡುತ್ತದೆ.
ಜೀವನದಲ್ಲಿ ನಾವು ಅನುಭವಿಸುವ ಸುಖ ಮತ್ತು ದುಃಖದ ಮೂಲ “ಮಾತ್ರಾ ಸ್ಪರ್ಶಾ". ಇದು ಎಲ್ಲವುದರ ಮೂಲ. ನಾವು ಯಾವುದನ್ನು ನಮ್ಮ ಇಂದ್ರಿಯಗಳ ಮೂಲಕ ಗ್ರಹಿಸುತ್ತೇವೋ ಅದು ಮಾತ್ರೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವೇ ನಮ್ಮ ಸುಖ-ದುಃಖಗಳಿಗೆ ಕಾರಣವಾದ ಐದು ಮಾತ್ರೆಗಳು.
ಸುಖ-ದುಃಖಗಳಿಗೆ ಒಂದು ವ್ಯವಸ್ಥೆ ಇಲ್ಲ. ಒಬ್ಬರಿಗೆ ಸುಖವಾದದ್ದು ಇನ್ನೊಬ್ಬರಿಗೆ ದುಃಖವಾಗಬಹುದು. ವಿಷಯಗಳ ಸ್ಪರ್ಶದಿಂದ ಸುಖ-ದುಃಖ ಬರುತ್ತದೆ. ಅದು ಶೀತೋಷ್ಣದಂತೆ. ಮೊದಲು ಸುಖಕೊಟ್ಟ ವಸ್ತುವೇ ಮುಂದೆ ದುಃಖವಾಗಿ ಪರಿಣಮಿಸಬಹುದು. ಸುಖ-ದುಃಖ ಜೀವದ ಧರ್ಮವಲ್ಲ. ಅದು ಬಂದು ಹೋಗುವಂತಾದ್ದು. ಅದು ನಮ್ಮ ಮಾನಸಿಕ ಕಲ್ಪನೆಯ ಫಲ. "ನನ್ನ" ಎನ್ನುವುದು ದುಃಖಕ್ಕೆ ಮೂಲ ಕಾರಣ. ನಿದ್ದೆಯಲ್ಲಿ ನಮಗೆ "ನನ್ನ" ಎನ್ನುವುದು ಇಲ್ಲ. ಆದ್ದರಿಂದ ಎಂದೂ ನಿದ್ದೆಯಲ್ಲಿ ದುಃಖವಿಲ್ಲ. ಎಚ್ಚರ ಮತ್ತು ಕನಸಿನಲ್ಲಿ ಮಾತ್ರ ಈ ಸಮಸ್ಯೆ. ನಿದ್ದೆಯಲ್ಲಿ ಎಲ್ಲವೂ ನಿರ್ಮಲ.
ನಾವೇ ನಮ್ಮ ಮಾನಸಿಕ ಭಾವನೆಗಳಿಂದ ಮತ್ತು ಅನುಭವಗಳಿಂದ ನಿರ್ಮಿಸಿಕೊಂಡಿರುವುದು ಈ ಸುಖ-ದುಃಖ. ಇದರಿಂದ ಪಾರಾಗುವ ಉಪಾಯವನ್ನು ನಾವೇ ಕಲಿತುಕೊಳ್ಳಬೇಕು. ದುಃಖದ ಮೂಲದ ಅನ್ವೇಷಣೆ ಮಾಡಿದಾಗ ದುಃಖ ಸಹ್ಯವಾಗುತ್ತದೆ. ನಾವು ನಮ್ಮ ಭಾವನೆಗಳನ್ನು ಸಹನೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಯಾವುದು ಬಂತೋ ಅದನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಬೇಕು. ನನಗೆ 'ಅದೇ ಬೇಕು'; 'ಹೀಗೇ ಆಗಬೇಕು' ಎನ್ನುವ ಚಿಂತನೆ ದುಃಖಕ್ಕೆ ಮೂಲ ಕಾರಣ. ಬಂದಿದ್ದನ್ನು ಬಂದಂತೆ ಎದುರಿಸುತ್ತೇನೆ ಎನ್ನುವ ಆತ್ಮಸ್ಥೈರ್ಯವಿದ್ದರೆ ದುಃಖವಿಲ್ಲ.
ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ ।
ಸಮದುಃಖಸುಖಂ ಧೀರಂ ಸೋSಮೃತತ್ವಾಯ ಕಲ್ಪತೇ॥೧೫॥
ಯಂ ಹಿ ನ ವ್ಯಥಯಂತಿ ಏತೇ ಪುರುಷಂ ಪುರುಷ ಋಷಭ |
ಸಮ ದುಃಖ ಸುಖಮ್ ಧೀರಮ್ ಸಃ ಅಮೃತತ್ವಾಯ ಕಲ್ಪತೇ--ಓ ಗಂಡುಗಲಿಯೇ, ಯಾವ ಶರೀರವನ್ನು[ಜ್ಞಾನಿಯನ್ನು] ಇವು ಕಾಡಲಾರವೋ, ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ. ಅಂತಹವನು ಸಾವಿಲ್ಲದ ತಾಣವನ್ನು ಸೇರಲು ತಕ್ಕವನಾಗುತ್ತಾನೆ.
ಕೃಷ್ಣ ಮುಂದುವರಿದು ಹೇಳುತ್ತಾನೆ: “ಯಾವ ಪುರುಷನಿಗೆ ‘ಮಾತ್ರಾ ಸ್ಪರ್ಶ’ ಕಾಡುವುದಿಲ್ಲವೋ ಅವನು ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ಧೀರ” ಎಂದು. ಇಲ್ಲಿ "ಪುರುಷ" ಎನ್ನುವ ಪದ ಬಂದಿದೆ. ‘ಪುರುಷ ಎಂದರೆ ಗಂಡಸು; ಗಂಡಸರಿಗೆ ಮಾತ್ರ ಸಾಧನೆ-ಮೋಕ್ಷ’-ಎನ್ನುವ ಮೂಢನಂಬಿಕೆ ನಮ್ಮಲ್ಲಿದೆ. ಆದರೆ ಪುರುಷ ಎಂದರೆ ‘ಪುರದಲ್ಲಿ ಇರುವ ಜೀವ’. ಪುರ ಎಂದರೆ ಪೂರ್ಣವಾದ ದೇಹ. ಅಂದರೆ ಮಾನವ ದೇಹ. ಆದ್ದರಿಂದ ಪುರುಷ ಎಂದರೆ ಮಾನವರು(Human being) ಅಥವಾ ಸಾಧಕ ಜೀವ. ಸ್ಥೂಲ ಶರೀರದಲ್ಲಿದ್ದೂ ಕೂಡಾ ಯಾರಿಗೆ ಮಾತ್ರಾಸ್ಪರ್ಶದಿಂದ ಬರುವ ಸುಖ-ದುಃಖ ಬೇರೆ-ಬೇರೆಯಾಗಿ ಕಾಣುವುದಿಲ್ಲವೋ, ಆತ ಸುಖ ದುಃಖವನ್ನು ಸಮನಾಗಿ ಕಾಣಬಲ್ಲ ಧೀರನೆನಿಸುತ್ತಾನೆ.
ಪುರುಷ ಎನ್ನುವುದಕ್ಕೆ ಇನ್ನೊಂದು ಅರ್ಥ ‘ಎಲ್ಲಕ್ಕಿಂತ ದೊಡ್ಡವನಾದ ದೇವರನ್ನು ತಿಳಿದವ’. ನಮಗೆ ಸುಖ-ದುಃಖ ಏಕೆ ಬರುತ್ತದೆ ಎನ್ನುವ ಜ್ಞಾನವಿದ್ದಾಗ, ನಾವು ಸುಖ ಬಂದಾಗ ಹಿಗ್ಗುವುದಿಲ್ಲ, ದುಃಖ ಬಂದಾಗ ಕುಗ್ಗುವುದಿಲ್ಲ. ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದು ಸುಖ-ದುಃಖಕ್ಕೂ ಒಂದು ಕಾರಣವಿದೆ. ಸುಖ-ದುಃಖ ಜೀವನದಲ್ಲಿ ಬರುವ ಅಲೆಗಳು. ಇದರಲ್ಲಿ ಒಂದು ಬೇಕು, ಇನ್ನೊಂದು ಬೇಡ ಎನ್ನುವ ಆಯ್ಕೆ ಸರಿಯಲ್ಲ. ಬಂದದ್ದು ಬರಲಿ ಎಂದು ಬದುಕಬೇಕು. ನಮಗೆ ಸುಖ-ದುಃಖವನ್ನು ಇನ್ನೊಬ್ಬರು ದ್ವೇಷದಿಂದ ಕೊಡುವುದಲ್ಲ. ಅದು ನಮ್ಮ ಕರ್ಮ ಫಲ. ಸುಖ-ದುಃಖವನ್ನು ನಮಗೆ ಕೊಡುವವನು ಭಗವಂತ. ತಾಯಿ ತನ್ನ ಮಗುವಿನ ಉದ್ಧಾರಕ್ಕಾಗಿ ಹೇಗೆ ಶಿಕ್ಷೆ ಕೊಡುತ್ತಾಳೋ, ಹಾಗೇ ಭಗವಂತ ನಮ್ಮ ಉದ್ಧಾರಕ್ಕಾಗಿ ನಮಗೆ ದುಃಖವನ್ನು ಕೊಡುತ್ತಾನೆ. ಇದು ಶಿಕ್ಷೆ ಅಲ್ಲ-ಶಿಕ್ಷಣ. ಮನುಷ್ಯ ದುಃಖದಲ್ಲಿ ಬೆಳೆದಾಗ ಗಳಿಸುವ ಅನುಭವ ಸುಖದಲ್ಲಿ ಎಂದೂ ಗಳಿಸಲಾರ. ದುಃಖ ಜೀವನದ ನಿಜವಾದ ಅನುಭವ. ಇದು ನಮಗೆ ಕೊಡುವ ದುಃಖದ ಹಿಂದೆ ಭಗವಂತನಿಟ್ಟ ಮಹಾ ಕಾರುಣ್ಯ. ಈ ಜ್ಞಾನವಿದ್ದಾಗ ಮಾತ್ರ ನಮಗೆ ಸುಖ-ದುಃಖವನ್ನು ಏಕರೂಪದಲ್ಲಿ ಕಾಣುವ ಮನಃಸ್ಥಿತಿ ಬರುತ್ತದೆ. ಇಂತಹ ಜ್ಞಾನವಿರುವವನು ಧೀರನಾಗುತ್ತಾನೆ. ತಿಳುವಳಿಕೆಯಿಂದ ಧೈರ್ಯ ಬರುತ್ತದೆ. ಯಾರು ಒಂದು ಜನ್ಮದಲ್ಲಿ ಸುಖ-ದುಃಖವನ್ನು ಸಮನಾಗಿ ಕಾಣಬಲ್ಲ ತಿಳುವಳಿಕೆ ಹಾಗೂ ಧೈರ್ಯವನ್ನು ಗಳಿಸುತ್ತಾರೋ, ಅವರು ಮುಂದೆಂದೂ ಈ ಸಂಸಾರ ಬಂಧನದಲ್ಲಿ ಮರಳಿ ಹುಟ್ಟುವುದಿಲ್ಲ. ಇಂತಹ ಮಾನಸಿಕ ಸಮತೋಲನದ ಮೂಲಕ ಭಗವಂತನನ್ನು ತಿಳಿದು ಮೋಕ್ಷವನ್ನು ಪಡೆಯತ್ತಾರೆ.
ನಾಸತೋ ವಿದ್ಯತೇ [S]ಭಾವೋ ನಾಭಾವೋ ವಿದ್ಯತೇ ಸತಃ ।
ಉಭಯೋರಪಿ ದೃಷ್ಟೋSನ್ತಸ್ತ್ವನಯೋಸ್ತತ್ತ್ವದರ್ಶಿಭಿಃ ॥೧೬॥
ನ ಅಸತಃ ವಿದ್ಯತೇ (ಅ)ಭಾವಃ ನ ಅಭಾವಃ ವಿದ್ಯತೇ ಸತಃ |
ಉಭಯೋಃ ಅಪಿ ದೃಷ್ಟಃ ಅಂತಃ ತು ಅನಯೋಃ ತತ್ವ ದರ್ಶಿಭಿಃ -- ಪ್ರಕೃತಿಗೂ ಅಳಿವಿಲ್ಲ; ಭಗವಂತನಿಗೂ ಅಳಿವಿಲ್ಲ. [ಕೆಡುಕು ಮಾಡಿ ಒಳಿತಾಗದು, ಒಳಿತಿನಿಂದ ಕೆಡುಕಾಗದು]. ನಿಜವ ಕಂಡವರು ಈ ಎರಡರ ತೀರ್ಮಾನವನ್ನು ಬಲ್ಲರು.
ಸುಖ-ದುಃಖವನ್ನು ಮೀರಿ ನಿಲ್ಲಬಹುದು. ಅದೊಂದು ಮಾನಸಿಕ ಸ್ಥಿತಿ. ಆದರೆ ಅರ್ಜುನನ ಪ್ರಶ್ನೆ- ತನ್ನ ಗುರು-ಹಿರಿಯರನ್ನು ಕೊಲ್ಲುವುದು ಪಾಪವಲ್ಲವೇ? ಎನ್ನುವುದು. ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ. “ಸತ್ತಿನಿಂದ ಅಭಾವವಿಲ್ಲ, ಅಸತ್ತಿನಲ್ಲಿ ಭಾವವಿಲ್ಲ” ಅಂದರೆ ಒಳ್ಳೆಯ ಕೆಲಸ ಮಾಡುವುದರಿಂದ ಎಂದೂ ದುಃಖವಿಲ್ಲ, ಕೆಟ್ಟ ಕೆಲಸ ಮಾಡಿದರೆ ಸುಖವಿಲ್ಲ. ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಸುಖಪಡುತ್ತಿರುವಂತೆ ಭಾಸವಾದರೂ, ಅದು ತಾತ್ಕಾಲಿಕ. ಅಧರ್ಮದ ಹಾದಿಯನ್ನು ತುಳಿದವ ಎಂದೂ ಯಶಸ್ಸನ್ನು ಕಾಣಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವನ್ನು ವಿಶ್ಲೇಷಣೆ ಮಾಡಿದರೆ ಅಲ್ಲಿ ಯುದ್ಧಕ್ಕೆ ಕಾರಣರಾದವರು ಪಾಂಡವರಲ್ಲ. ಪಾಂಡವರು ಧರ್ಮ ರಕ್ಷಣೆಯ ಹೊಣೆಗಾರಿಕೆಯಿಂದ ಯುದ್ಧಕ್ಕೆ ಸಜ್ಜಾಗಿರುವುದು. ಇಲ್ಲಿ ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ: “ಒಳ್ಳೆಯ ಕೆಲಸ ಮಾಡುವಾಗ ಯಾರ ಭಯವೂ ಬೇಡ ಹಾಗೂ ಅದರಿಂದ ದುಃಖವಿಲ್ಲ” ಎಂದು. ಧರ್ಮ ರಕ್ಷಣೆಯ ಹಾದಿಯಲ್ಲಿ 'ನನ್ನವರು' ಎನ್ನುವುದು ಸಲ್ಲದು. ಜಗತ್ತಿನ ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಕಂಡುಕೊಂಡ ಅಂತಿಮ ಸತ್ಯವಿದು.
ಮಹಾಭಾರತದ ಪ್ರತಿಯೊಂದು ಶ್ಲೋಕಕ್ಕೂ ಹತ್ತು ಅರ್ಥಗಳಿವೆಯಂತೆ. ಮೇಲಿನ ಶ್ಲೋಕವನ್ನು ನಾವು ಇನ್ನೊಂದು ಆಯಾಮದಲ್ಲಿ ನೋಡಿದರೆ- "ನ ಅಸತಃ ಅಭಾವಃ ಸತಃ ಅಭಾವಃ ನ ವಿದ್ಯತಿ" ಅಂದರೆ ಸತ್ತಿಗೂ ಅಭಾವವಿಲ್ಲ ಅಸತ್ತಿಗೂ ಅಭಾವವಿಲ್ಲ ಎಂದರ್ಥ. ಅಸತ್ ಎಂದರೆ ಸ್ಥೂಲ ಪ್ರಪಂಚಕ್ಕೆ ಕಾರಣವಾಗಿರುವ, ಸೂಕ್ಷ್ಮವಾಗಿರುವ ಮೂಲಪ್ರಕೃತಿ. ಪ್ರಕೃತಿ ಅನಾದಿನಿತ್ಯ. ಈ ಪ್ರಕೃತಿಯನ್ನು ಸೃಷ್ಟಿಮಾಡಿದ ಭಗವಂತ(ಪುರುಷ) ಅನಾದಿನಿತ್ಯ. ಪ್ರಕೃತಿ ಮತ್ತು ಪುರುಷನಿಗೆ ಅಧೀನವಾಗಿರುವ ಜೀವ ಕೂಡಾ ಅನಾದಿನಿತ್ಯ. ಜೀವಕ್ಕೆಈ ಸ್ಥೂಲ ದೇಹ ಬರುವ ಮೊದಲೂ ಜೀವ ಇತ್ತು, ಹಾಗೂ ಮುಂದೆ ಕೂಡಾ ಇರುತ್ತದೆ. ಪಾಂಚಭೌತಿಕ ಶರೀರದಲ್ಲಿ ಜೀವ ಕೇವಲ ಅತಿಥಿ. ಹೀಗಿರುವಾಗ ದೇಹಾಭಿಮಾನ ಸಲ್ಲದು.
ಅವಿನಾಶಿ ತು ತದ್ ವಿದ್ಧಿಯೇನ ಸರ್ವಮಿದಂ ತತಮ್ ।
ವಿನಾಶಮವ್ಯಯಸ್ಯಾಸ್ಯ ನ ಕಶ್ಚಿತ್ ಕರ್ತುಮರ್ಹತಿ ॥೧೭॥
ಅವಿನಾಶಿ ತು ತತ್ ವಿದ್ಧಿ ಯೇನ ಸರ್ವಮ್ ಇದಮ್ ತತಮ್ |
ವಿನಾಶಮ್ ಅವ್ಯಯಸ್ಯ ಆಸ್ಯ ನ ಕಶ್ಚಿತ್ ಕರ್ತುಮ್ ಅರ್ಹತಿ--ಯಾವುದು ಈ ಎಲ್ಲವನ್ನು ವ್ಯಾಪಿಸಿದೆಯೋ ಅದನ್ನು ಅಳಿವಿಲ್ಲದ್ದು ಎಂದು ತಿಳಿ. ಬದಲಾಗದ ‘ಅವನ’ ಅಳಿವು ಯಾರ ಅಳಿವಿಗೂ ಎಟಕುವುದಿಲ್ಲ.
ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದಕ್ಕೆ ನಾಶವಿಲ್ಲ. ರೂಪಾತ್ಮಕ ಪ್ರಪಂಚದಂತೆ ನಾಮಾತ್ಮಕ ಪ್ರಪಂಚವಿದೆ. ಅದು ನಿತ್ಯ. ಇಲ್ಲಿ ನಾಮಾತ್ಮಕ ಎಂದರೆ 'ಅಕ್ಷರ' ; ಅ ದಿಂದ ಕ್ಷ ತನಕ ಇರುವ ಐವತ್ತೊಂದು ವರ್ಣಗಳು. ಈ ಐವತ್ತೊಂದು ಅಕ್ಷರಗಳೇ ಮೂಲಭೂತವಾಗಿರುವ ಇಡೀ ಶಬ್ದ ಪ್ರಪಂಚ. ಅದು ನಾಶ ಮಾಡಲಾಗದ ತತ್ವ. ಆದ್ದರಿಂದ ಭಗವಂತ, ಪ್ರಕೃತಿ, ಜೀವ ಹಾಗೂ ಈ ಎಲ್ಲಾ ತತ್ವಗಳನ್ನು ಪ್ರತಿಪಾದಿಸುವ ಶಬ್ದ[ವೇದ] ಅನಾದಿನಿತ್ಯ. ಇದನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ. ಈ ನಾಮಾತ್ಮಕ ಪ್ರಪಂಚದಲ್ಲಿನ ವೇದ ವಾಙ್ಮಯನಾದ ಭಗವಂತ ಅವಿನಾಶಿ. ಆತನಿಗೆ ಸ್ವರೂಪ ನಾಶ, ದೇಹ ನಾಶ, ದುಃಖಪ್ರಾಪ್ತಿ, ಅಪೂರ್ಣತ್ವ ಇಂತಹ ಯಾವುದೇ ರೀತಿಯ ನಾಶವಿಲ್ಲ. ಆತ ಕಾಲತಃ, ದೇಶತಃ, ಗುಣತಃ ವ್ಯಾಪ್ತನಾಗಿರುವ ಅನಂತ ಸ್ವರೂಪ. ಆತ ಅವ್ಯಯ, ಯಾವ ವಿಕಾರ ಬದಲಾವಣೆಗೆ ಒಳಗಾಗದ, ಅನಾದಿನಿತ್ಯ ಸ್ವರೂಪ.
ಅಂತವಂತ ಇಮೇ ದೇಹಾ ನಿತ್ಯಸ್ಯೋಕ್ತಾಃ ಶರೀರಿಣಃ ।
ಅನಾಶಿನೋSಪ್ರಮೇಯಸ್ಯ ತಸ್ಮಾದ್ ಯುಧ್ಯಸ್ವ ಭಾರತ॥೧೮॥
ಅಂತವಂತ ಇಮೇ ದೇಹಾಃ ನಿತ್ಯಸ್ಯ ಉಕ್ತಾಃ ಶರೀರಿಣಃ |
ಅನಾಶಿನಃ ಅಪ್ರಮೇಯಸ್ಯ ತಸ್ಮಾತ್ ಯುಧ್ಯಸ್ವ ಭಾರತ-- ಅಳಿಯದ ಜೀವಕ್ಕೆ ಅಳಿವ ಈ ದೇಹಗಳ ನಂಟು. ಏತರಿದಲೂ ಅವನಿಗೆ ಅಳಿವಿಲ್ಲ. ಅವನು ಎಲ್ಲೆಡೆ ತುಂಬಿದ ಭಗವಂತನ ಪಡಿಯಚ್ಚು. ಓ ಭಾರತಾ, ಆದ್ದರಿಂದ [ಅಳಿವಿರದ ಅಳವಿಗೆಟುಕದ ಭಗವಂತನ ಪೂಜೆಯೆಂದು] ಹೋರಾಡು.
ಭೌತಿಕ ಶರೀರ ಅಂತವಂತ(ನಾಶವಾಗುವಂತಹದ್ದು). ಕೇವಲ ಕಣ್ಣಿಗೆ ಕಾಣುವ ಸ್ಥೂಲ ಶರೀರ ಮಾತ್ರ ನಾಶವಾಗುವುದೇ ಹೊರತು ಆತ್ಮವಲ್ಲ. ಏಕೆಂದರೆ ಜೀವ ಭಗವಂತನ ಪಡಿಯಚ್ಚು. ಅದು ಸರ್ವವ್ಯಾಪಿ ಭಗವಂತನ ಪ್ರತಿಬಿಂಬ. ಆದ್ದರಿಂದ ಎಲ್ಲಾ ಕಡೆ ಇರುವ ಭಗವಂತನ ಪ್ರತಿಬಿಂಬವಾದ ಈ ಜೀವ ನಿತ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: "ಸಾಮ್ರಾಟನಾಗಬೇಕು ಎನ್ನುವ ಸ್ವಾರ್ಥದಿಂದಾಗಲೀ, ದುರ್ಯೋಧನನ ಮೇಲಿನ ದ್ವೇಷದಿಂದಾಗಲೀ ಹೋರಾಡದೇ, ‘ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ’ ಎಂಬಂತೆ ಯುದ್ಧ ಮಾಡು" ಎಂದು.
ನಾವು ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಪ್ರತಿಯೊಂದು ಕರ್ಮ ಕೂಡಾ ಹೀಗೆ. ಅದು ಭಗವಂತನ ಅರ್ಪಣಾ ರೂಪದಲ್ಲಿರಬೇಕು. ನಮಗೆ ದೇಹ ಕೊಟ್ಟಿದ್ದು ಭಗವಂತ. ಆದ್ದರಿಂದ ಆ ದೇಹ ಹೋದಾಗ ಅಳುವ ಅಗತ್ಯವಿಲ್ಲ. ನಮ್ಮ ಪ್ರತಿಯೊಂದು ಕರ್ತವ್ಯವನ್ನು ಭಗವಂತನ ಪೂಜೆ ಎಂದು ಮಾಡಿ, ಸಾವಿಗೆ ಅಂಜದೇ ಬದುಕಿದಾಗ ಈ ಜೀವನ ಸಾರ್ಥಕ.
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ ।
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ॥೧೯॥
ಯಃ ಏನಮ್ ವೇತ್ತಿ ಹಂತಾರಮ್ ಯಃ ಚ ಏನಮ್ ಮನ್ಯತೇ ಹತಮ್ |
ಉಭೌ ತೌ ನ ವಿಜಾನೀತಃ ನ ಅಯಮ್ ಹಂತಿ ನ ಹನ್ಯತೇ --ಯಾರು ಇವನನ್ನು 'ಕೊಲ್ಲುವವನು' ಎಂದು ತಿಳಿದಿದ್ದಾನೋ ಮತ್ತು ಯಾರು ಇವನನ್ನು 'ಸತ್ತವನು' ಎಂದು ತಿಳಿದಿದ್ದಾನೋ-ಆ ಇಬ್ಬರೂ ತಿಳಿದವರಲ್ಲ. ಇವನು ಕೊಲ್ಲುವುದಿಲ್ಲ ಮತ್ತು ಸಾಯುವುದಿಲ್ಲ.
ಜೀವವನ್ನು ಕೊಲ್ಲಬಹುದು/ಕೊಲ್ಲುತ್ತೇನೆ ಎಂದು ಭಾವಿಸುವವರಿಗೆ ಹಾಗೂ ಅದು ನಾಶವಾಯಿತು/ಕೊಲ್ಲಲ್ಪಟ್ಟಿತು ಎನ್ನುವವರಿಗೆ ತಿಳುವಳಿಕೆ ಇಲ್ಲ. ಏಕೆಂದರೆ ಜೀವ ಕೊಲ್ಲುವುದೂ ಇಲ್ಲ, ಕೊಲ್ಲಲ್ಪಡುವುದೂ ಇಲ್ಲ. ಆತ್ಮವನ್ನು ಕೊಲ್ಲುವುದು ಸಾಧ್ಯವೇ ಇಲ್ಲ. ನಮಗೆ ಸಾಯುವುದು ಅಥವಾ ಸತ್ತಿತು ಎಂದು ಕಾಣುವುದು ಭೌತಿಕ ಶರೀರ ಮಾತ್ರ. ಜೀವನಿಗೆ ದೇಹದ ಮೂಲಕ ಕೂಡಾ ಕೊಲ್ಲುವ ಅಥವಾ ಸಾಯುವ ಸ್ವಾತಂತ್ರ್ಯ ಇಲ್ಲ. ಇಲ್ಲಿ ಅರ್ಜುನನಿಗೆ 'ಕೌರವರು ನನ್ನ ಕೈಯಿಂದ ಸಾಯುತ್ತಾರೆ' ಎನ್ನುವುದು ಕೇವಲ ಭ್ರಮೆ. ಸೃಷ್ಟಿ-ಸಂಹಾರ ಕರ್ತನಾದ ಭಗವಂತನ ಇಚ್ಛೆ ಇಲ್ಲದೆ ಯಾವುದೂ ನಡೆಯುವುದಿಲ್ಲ. ಆತನ ಇಚ್ಛೆಗೆ ವಿರುದ್ಧವಾಗಿ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ.
ನ ಜಾಯತೇ ಮ್ರಿಯತೇ ವಾ ಕದಾಚಿತ್ ನಾ[S]ಯಂ ಭೂತ್ವಾ ಭವಿತಾ ವಾ ನ ಭೂಯಃ ।
ಅಜೋ ನಿತ್ಯಃ ಶಾಶ್ವತೋSಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ॥೨೦॥
ನ ಜಾಯತೇ ಮ್ರಿಯತೇ ವಾ ಕದಾಚಿತ್ ನ ಅಯಮ್ ಭೂತ್ವಾ ಭವಿತಾ ವಾ ನ ಭೂಯಃ |
ಅಜಃ ನಿತ್ಯಃ ಶಾಶ್ವತಃ ಅಯಮ್ ಪುರಾಣಃ ನ ಹನ್ಯತೇ ಹನ್ಯಮಾನೇ ಶರೀರೇ -- ಈ ಜೀವ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಬದಲಾಗುವುದೂ ಇಲ್ಲ. ಇವನು ಹುಟ್ಟಿರದ, ಸಾವಿರದ, ಮಾರ್ಪಡದ-ಭಗವಂತನ ಪಡಿಯಚ್ಚು.[ಈ ಪರಮ ಪುರುಷ ಎಂದೂ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ. ಸ್ವರೂಪದಿಂದಿದ್ದು ದೇಹದಿಂದ ಹುಟ್ಟುತ್ತಾನೆ ಎನ್ನುವುದೂ ಸಲ್ಲ. ಈ ಜೀವ ಕೂಡಾ ಹುಟ್ಟದ, ಸಾಯದ, ಬದಲಾಗದ ತತ್ವ.] ದೇಹದಿಂದ ದೇಹಕ್ಕೆ ಅಲೆವ ಈ ಜೀವ ದೇಹ ಅಳಿದರೂ ತಾನಳಿಯುವುದಿಲ್ಲ.
ಇಲ್ಲಿ ಶ್ರೀಕೃಷ್ಣ 'ಜೀವಸ್ವರೂಪ' ಅಂದರೆ ಏನೆಂದು ವಿವರಿಸಿದ್ದಾನೆ. ಈ ಜೀವ ಸ್ವರೂಪತಃ ಎಂದೂ ಹುಟ್ಟುವುದಿಲ್ಲ ಮತ್ತು ಎಂದೂ ನಾಶವಾಗುವುದಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಏಕೆಂದರೆ ಜೀವಸ್ವರೂಪ ಭಗವಂತನ ಪ್ರತಿಬಿಂಬ. ಭಗವಂತನಿಗೆ ಹುಟ್ಟಿಲ್ಲ. ಅವನು ನಿತ್ಯ ಹಾಗೂ ಶಾಶ್ವತ. ಜೀವ ಸದಾ ಶರೀರದಿಂದ ಶರೀರಕ್ಕೆ ಸಂಚರಿಸುತ್ತಿರುತ್ತದೆ(ಪುರ-ಅಣ). ಆದರೆ ದೇಹ ಬದಲಾದಂತೆ ಜೀವಸ್ವರೂಪ ಬದಲಾಗುವುದಿಲ್ಲ. ಭೌತಿಕ ಶರೀರಕ್ಕೆ ಮುದಿತನವಿದ್ದಂತೆ ಜೀವ ಸ್ವರೂಪಕ್ಕೆ ಮುದಿತನವಿಲ್ಲ. ಅದು ಸದಾ ಏಕರೂಪದಲ್ಲಿರುತ್ತದೆ. ಆದರೆ ಪ್ರಭಾವದಿಂದ ಬಂದ ನಂಬಿಕೆ ಬದಲಾಗಬಹುದು. ಉದಾಹರಣೆಗೆ ಒಂದು ಜನ್ಮದಲ್ಲಿ ನಾಸ್ತಿಕನಾಗಿರುವವ ಇನ್ನೊಂದು ಜನ್ಮದಲ್ಲಿ ಪೂರ್ಣ ಆಸ್ತಿಕನಾಗಬಹುದು. ಸ್ವಭಾವ ವಿಶಿಷ್ಟನಾದ ಜೀವ ಎಂದೂ ಬದಲಾಗದೇ, ನಾಶವಾಗದೇ ಉಳಿಯುತ್ತಾನೆ.
ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ ।
ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್॥೨೧॥
ವೇದ ಅವಿನಾಶಿನಮ್ ನಿತ್ಯಮ್ ಯಃ ಏನಮ್ ಅಜಮ್ ಅವ್ಯಯಮ್ |
ಕಥಮ್ ಸಃ ಪುರುಷಃ ಪಾರ್ಥ ಕಮ್ ಘಾತಯತಿ ಹಂತಿ ಕಮ್—ಓ ಪಾರ್ಥ, ಹುಟ್ಟು-ಸಾವುಗಳಿರದ, ಮಾರ್ಪಡದ, ಏತರಿಂದಲೂ ಅಳಿಯದ ಈ ಜೀವನನ್ನು[ಶರೀರದಿಂದಲೂ ಅಳಿವಿರದ ಭಗವಂತನನ್ನು] ಬಲ್ಲ ಜೀವಿ, ಯಾರನ್ನು ಹೇಗೆ ಕೊಲ್ಲಿಸುವುದು ? ಯಾರನ್ನು ಹೇಗೆ ಕೊಲ್ಲುವುದು?
ದೋಷ ಸಂಬಂಧವಿಲ್ಲದ, ನಿತ್ಯವಾದ, ಎಂದೂ ಬದಲಾಗದ ಜೀವ ಸ್ವರೂಪವನ್ನು ಯಾರು ತಿಳಿಯುತ್ತಾರೋ, ಅಂತಹ ಮಾನವ ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು ಹೇಗೆ ಸಾಧ್ಯ? ಸ್ವರೂಪತಃ ಜೀವನಿಗೆ ನಾಶವಿಲ್ಲ ಎಂದು ತಿಳಿದಾಗ, ಸ್ಥೂಲ ಪ್ರಪಂಚದಲ್ಲಿ ಹುಟ್ಟು-ಸಾವು ಭಗವಂತನ ಇಚ್ಛೆಯಂತೆ ನಡೆಯುತ್ತಿದೆ ಎಂದು ತಿಳಿದ ಮೇಲೆ, ಯಾರು ಯಾರನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು? ಹುಟ್ಟು-ಸಾವಿನ ಹಿಂದಿರುವ ಭಗವದ್ ಶಕ್ತಿಯನ್ನು ನಾವು ಅರಿತುಕೊಳ್ಳಬೇಕು ಅಷ್ಟೆ.
ಜೀವಕ್ಕೆ ಅಳಿವಿಲ್ಲ, ಅದಕ್ಕೆ ಹುಟ್ಟು-ಸಾವು ಎನ್ನುವುದಿಲ್ಲ. ಹಾಗಿದ್ದರೆ ನಾವು ಪ್ರಾಪಂಚಿಕವಾಗಿ ಕಾಣುವ ಹುಟ್ಟು-ಸಾವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ ।
ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ॥೨೨॥
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರಃ ಅಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾನಿ ಅನ್ಯಾನಿ ಸಂಯಾತಿ ನವಾನಿ ದೇಹೀ -- ಮನುಷ್ಯ ಹಳೆಯ ಬಟ್ಟೆಬರೆಗಳನ್ನು ಬಿಸುಟು ಬೇರೆ ಹೊಸತನ್ನು ಉಡುತ್ತಾನೋ ಹಾಗೇ-ಜೀವ ಒಂದು ದೇಹವನ್ನು ಬಿಟ್ಟು ಬೇರೆ ಹೊಸ ದೇಹವನ್ನು ಪಡೆಯುತ್ತಾನೆ.
ನಾವು ಉಟ್ಟ ಬಟ್ಟೆ ಹಳೆಯದಾದಾಗ ಹೇಗೆ ಅದನ್ನು ಬದಲಿಸುತ್ತೇವೋ-ಹಾಗೇ, ಜೀವ ಒಂದು ದೇಹವನ್ನು ಬಿಟ್ಟು ಇನ್ನೊಂದು ದೇಹವನ್ನು ಪಡೆಯುತ್ತಾನೆ. ಇಲ್ಲಿ ಒಂದು ವಿಶೇಷವೆಂದರೆ ಹೇಗೆ ತಾಯಿ ತನ್ನ ಮಗುವಿಗೆ ತನ್ನಿಚ್ಚೆಯಂತೆ ಬಟ್ಟೆ ಬದಲಿಸುತ್ತಾಳೋ ಹಾಗೆ ಭಗವಂತ ಜೀವದ ದೇಹ ಬದಲಿಸುತ್ತಾನೆ. ಜೀವನಿಗೆ ಸ್ವತಃ ದೇಹ ಬದಲಿಸುವ ಸ್ವಾತಂತ್ರ್ಯ ಇರುವುದಿಲ್ಲ. ಇದಕ್ಕೆ ಒಂದು ಅಪವಾದ ಎಂದರೆ ಆತ್ಮ ಸಾಕ್ಷಾತ್ಕಾರವಾದ ಯೋಗಿಗಳು. ಅವರು ಭಗವಂತನ ಅನುಗ್ರಹದಿಂದ ಸ್ವ-ಇಚ್ಛೆಯಂತೆ ದೇಹ ಬದಲಿಸುವ ಶಕ್ತಿಯನ್ನು ಪಡೆದಿರುತ್ತಾರೆ. [ಈ ಬಗ್ಗೆ ಸ್ವಾಮಿರಾಮ್ ಅವರು ಬರೆದಿರುವ "Living with Himalayan Masters" ಎನ್ನುವ ಪುಸ್ತಕದಲ್ಲಿ ಅನೇಕ ನೈಜ ದೃಷ್ಟಾಂತಗಳನ್ನು ಕಾಣಬಹುದು.] ಇಂತಹ ಮಹಾನ್ ಯೋಗಿಗಳನ್ನು ಬಿಟ್ಟರೆ ಇತರರಿಗೆ ಸ್ವ-ಇಚ್ಛೆಯಂತೆ ದೇಹ ಬದಲಿಸುವ ಸ್ವಾತಂತ್ರ್ಯ ಇಲ್ಲ. ಆದ್ದರಿಂದ ಭೌತಿಕವಾಗಿ ಹುಟ್ಟು-ಸಾವು ಎಂದರೆ ಉಟ್ಟ ಬಟ್ಟೆಯನ್ನು ಕಳಚಿ ಹೊಸ ಬಟ್ಟೆಯನ್ನು ತೊಡಿಸಿದಂತೆ. ಸ್ವರೂಪತಃ ಜೀವಕ್ಕೆ ಎಂದೂ ಹುಟ್ಟು-ಸಾವು ಅನ್ನುವುದಿಲ್ಲ ಹಾಗೂ ಹೊಸ ಶರೀರದಿಂದ ಅದರ ಮೂಲಸ್ವಭಾವ ಬದಲಾಗುವುದಿಲ್ಲ.
ಹಾಗಾದರೆ ಆತ್ಮವನ್ನು ನಾಶ ಮಾಡಲು ಸಾಧ್ಯವೇ ಇಲ್ಲವೇ? ಎಂದೆಂದಿಗೂ ಇಲ್ಲ ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ॥೨೩॥
ನ ಏನಮ್ ಛಿಂದಂತಿ ಶಸ್ತ್ರಾಣಿ ನ ಏನಮ್ ದಹತಿ ಪಾವಕಃ |
ನ ಚ ಏನಮ್ ಕ್ಲೇದಯಂತಿ ಆಪಃ ನ ಶೋಷಯತಿ ಮಾರುತಃ -- ಈ ಜೀವನನ್ನು (ಭಗವಂತನನ್ನು) ಆಯುಧಗಳು ತುಂಡರಿಸವು. ಇವನನ್ನು ಬೆಂಕಿ ಸುಡದು. ಇವನನ್ನು ನೀರು ನೆನೆಸದು, ಗಾಳಿ ಒಣಗಿಸದು.
ಯಾವುದೇ ಒಂದು ವಸ್ತುವನ್ನು ನಾಶಮಾಡಲು ಇರುವ ಮುಖ್ಯ ಅಸ್ತ್ರ ನಾಲ್ಕು. ಮಣ್ಣು(ಘನ ಆಯುಧ), ನೀರು, ಬೆಂಕಿ ಹಾಗೂ ಗಾಳಿ. ಜೀವ-ಸೂಕ್ಷ್ಮರಲ್ಲಿ ಸೂಕ್ಷ್ಮ. ಶಾಸ್ತ್ರಕಾರರು ಹೇಳುವಂತೆ ಕುದುರೆಯ ಬಾಲದ ಒಂದು ಕೂದಲಿನ ತುತ್ತ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿದರೆ ಸಿಗುವ ಒಂದು ಭಾಗ ಎಷ್ಟು ಗಾತ್ರದ್ದೋ ಅಷ್ಟು ಗಾತ್ರದಲ್ಲಿರುತ್ತದೆ ಜೀವ. ಇಂತಹ ಜೀವವನ್ನು ಯಾವುದೇ ಆಯುಧ ತುಂಡರಿಸಲು ಸಾಧ್ಯವಿಲ್ಲ. ಬೆಂಕಿ ಜೀವನನ್ನು ಸುಡಲಾರದು. ನೀರಿನಿಂದ ಜೀವ ಒದ್ದೆಯಾಗದು. ಗಾಳಿ ಜೀವನನ್ನು ಒಣಗಿಸದು. ಸೂಕ್ಷ್ಮಾತಿ ಸೂಕ್ಷ್ಮವಾದ ಜೀವನನ್ನು ಯಾವ ಆಯುಧವೂ ನಾಶ ಮಾಡಲಾರವು.
ಇಲ್ಲಿ ನಮಗೆ ಇನ್ನೊಂದು ಪ್ರಶ್ನೆ ಮೂಡುತ್ತದೆ. “ಇಂದು ನಾಶ ಮಾಡಲು ಅಸಾಧ್ಯವಾದ ಜೀವ ಎಂದೆಂದೂ ನಾಶವಾಗದೇ ಇರುತ್ತದೆಯೇ?” ಎಂದು. ಹೌದು ಎನ್ನುತ್ತಾನೆ ಕೃಷ್ಣ ಮುಂದಿನ ಶ್ಲೋಕದಲ್ಲಿ.
ಅಚ್ಛೇದ್ಯೋSಯಮದಾಹ್ಯೋSಯಮಕ್ಲೇದ್ಯೋSಶೋಷ್ಯ ಏವ ಚ ।
ನಿತ್ಯಃ ಸರ್ವಗತಸ್ಥಾಣುರಚಲೋSಯಂ ಸನಾತನಃ ॥೨೪॥
ಅಚ್ಛೇದ್ಯಃ ಅಯಮ್ ಅದಾಹ್ಯಃ ಅಯಮ್ ಅಕ್ಲೇದ್ಯಃ ಅಶೋಷ್ಯಃ ಏವ ಚ |
ನಿತ್ಯಃ ಸರ್ವಗತಃ ಸ್ಥಾಣು ಆಚಲಃ ಅಯಮ್ ಸನಾತನಃ -- ಈ ಜೀವನನ್ನು ಕಡಿಯಲಾಗದು. ಇವನನ್ನು ಸುಡಲಾಗದು. ನೆನೆಸಲಾಗದು; ಒಣಗಿಸಲೂ ಆಗದು. ಎಂದೆಂದೂ ಎಲ್ಲೆಡೆ ಹಬ್ಬಿರುವ, ಏತರಿಂದಲೂ ಮಾರ್ಪಡದ, ಅವಿಚಲನಾದ, ಪುರಾಣಪುರುಷನ ಪಡಿಯಚ್ಚು ಇವನು.[ಎಲ್ಲೆಡೆ ಹಬ್ಬಿರುವ ಭಗವಂತನನ್ನು ಎಂದೆಂದೂ ಹೊಂದಿರುವ ಅಣುರೂಪಿ. ಇವನು ಏತರಿಂದಲೂ ಮಾರ್ಪಡದ ನಿಯತಿಗೆ ಬದ್ಧ ; ವೇದದ ವಿಧಿ-ನಿಷೇಧಗಳಿಗೆ ಕೂಡಾ].
ಜೀವನನ್ನು ಇಂದಲ್ಲ, ಮುಂದೆಂದೂ ಯಾರಿಂದಲೂ ನಾಶಮಾಡಲು ಸಾಧ್ಯವಿಲ್ಲ. ಏಕೆಂದರೆ ಆತ ತನ್ನ ಗುಣಧರ್ಮದಿಂದ ಎಂದೂ ಬದಲಾಗದ, ಸರ್ವಗತನಾದ, ವಿಚಲಿತನಾಗದ-ಭಗವಂತನ ಪಡಿಯಚ್ಚು. ಯಾವ ಆಯುಧಕ್ಕೂ ನಿಲುಕದೆ ಎಲ್ಲಾ ಕಾಲದಲ್ಲೂ ಏಕರೂಪನಾಗಿರುವ, ಎಲ್ಲಾ ಕಡೆ ಸ್ಥಿರವಾದ, ಬದಲಾವಣೆ ಇಲ್ಲದೆ ಇರುವ ಗುಣಧರ್ಮ ಜೀವನಿಗಿದೆ. ಜೀವ ಸನಾತನ. ಅಂದರೆ ನಾತನದಿಂದ ಸಹಿತನಾದವ. ಇಲ್ಲಿ 'ನಾತನ' ಎಂದರೆ 'ನಾದನ'. ಅಂದರೆ ವೇದನಾದ. ಜೀವ ವೇದನಾದದಿಂದ ಸಹಿತನಾಗಿ, ಸಮಸ್ತ ವೇದ ಪ್ರತಿಪಾದ್ಯನಾದ ಭಗವಂತನ ಮಡಿಲಲ್ಲಿ ವೇದದ ವಿಧಿ-ನಿಷೇಧಗಳಿಗೆ ಬದ್ಧನಾಗಿರುತ್ತಾನೆ. ಅದು ಸರ್ವಗತನಾದ ಭಗವಂತನನ್ನು ಆಶ್ರಯಿಸಿರುವ ಮಹತ್ತಾದ ಅಣು.
ಅವ್ಯಕ್ತೋSಯಮಚಿಂತ್ಯೋSಯಮವಿಕಾರ್ಯೋSಯಮುಚ್ಯತೇ ।
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ॥೨೫॥
ಅವ್ಯಕ್ತಃ ಅಯಮ್ ಅಚಿಂತ್ಯಃ ಅಯಮ್ ಅವಿಕಾರ್ಯಃ ಅಯಮ್ ಉಚ್ಯತೇ
ತಸ್ಮಾತ್ ಏವಮ್ ವಿದಿತ್ವಾ ಏನಮ್ ನ ಅನುಶೋಚಿತುಮ್ ಅರ್ಹಸಿ -- ಭಗವಂತ ಕಣ್ಣಿಗೆ ಕಾಣದವನು; ಇವನು
ಚಿಂತನೆಗೆ ನಿಲುಕದವನು; ಇವನು ಬದಲಾಗದವನು-ಎಂದು ವೇದ ಸಾರುತ್ತದೆ. ಅದರಿಂದ ಅವನ[ಮತ್ತು ಜೀವನ] ಪರಿಯನ್ನು ಹೀಗೆ ಅರಿತ ಮೇಲೆ ಕೊರಗುವುದು ತರವಲ್ಲ.
ಭಗವಂತ ಅವ್ಯಕ್ತ. ಆತನ ಪ್ರತಿಬಿಂಬವಾದ ಜೀವ ಭೌತಿಕ ಶರೀರದಲ್ಲಿದ್ದರೂ ಕೂಡಾ ಅವ್ಯಕ್ತ. ಈ ಕಾರಣದಿಂದ ಭಗವಂತ ಹಾಗೂ ಜೀವ ನಮ್ಮ ಚಿಂತನೆಗೆ ನಿಲುಕದ್ದು. ನಾನು ಯಾರು? ಎಲ್ಲಿಂದ ಬಂದೆ ? ನಾನೇನು? ಎನ್ನುವುದೇ ನಮಗೆ ಗೊತ್ತಿಲ್ಲ. ಭಗವಂತ ಹಾಗೂ ಜೀವಸ್ವರೂಪ ಎಂದೂ ಬದಲಾಗದಿದ್ದರೂ ಕೂಡಾ, ಅದು ನಮ್ಮ ಚಿಂತನೆಗೆ ಎಟುಕುವುದಿಲ್ಲ. ಈ ಕಟು ಸತ್ಯವನ್ನು ತಿಳಿದ ಮೇಲೆ ಜೀವ ನಾಶವಾಗುತ್ತದೆ ಎಂದು ದುಃಖಿಸುವ ಅಗತ್ಯವಿಲ್ಲ.
ಅಥ ಚೈ ನಂ ನಿತ್ಯಜಾತಂ ನಿತ್ಯಂ ವಾ ಮನ್ಯಸೇ ಮೃತಮ್ ।
ತಥಾSಪಿ ತ್ವಂ ಮಹಾಬಾಹೋ ನೈನಂ ಶೋಚಿತುಮರ್ಹಸಿ ॥೨೬॥
ಅಥ ಚ ಏನಮ್ ನಿತ್ಯಜಾತಮ್ ನಿತ್ಯಮ್ ವಾ ಮನ್ಯಸೇ ಮೃತಮ್ |
ತದಾ ಅಪಿ ತ್ವಮ್ ಮಹಾಬಾಹೋ ನ ಏನಮ್ ಶೋಚಿತುಮ್ ಅರ್ಹಸಿ -- ಆದರೂ ಈ ಜೀವ ದೇಹದ ಮೂಲಕ ಸದಾ ಹುಟ್ಟುವವನು ಮತ್ತು ಸಾಯುವವನು ಎಂದು ಭಾವಿಸುವೆಯಾ? ಹಾಗಿದ್ದರೂ, ಓ ಮಹಾವೀರಾ, ನೀನು ಇವನಿಗಾಗಿ ಕೊರಗುವುದು ತರವಲ್ಲ.
ವೇದಾಂತ ಬಿಟ್ಟು ಲೋಕದ ದೃಷ್ಟಿಯಲ್ಲಿ ವಿಚಾರ ಮಾಡಿದರೆ, ಆತ್ಮ ದೇಹದ ಮೂಲಕ ವ್ಯಕ್ತವಾಗುತ್ತದೆ ಹಾಗೂ ಸಾವಿನ ಮೂಲಕ ಅವ್ಯಕ್ತವಾಗುತ್ತದೆ. ಹುಟ್ಟು-ಸಾವನ್ನು ಮೀರಿ ನಿಲ್ಲುವುದು ಎಂದೂ ಸಾಧ್ಯವಿಲ್ಲ. ಆದ್ದರಿಂದ ಸಾವಿನ ಬಗ್ಗೆ ದುಃಖ ಪಡುವ ಅಗತ್ಯವಿಲ್ಲ. “ಮಹಾ ಬಲಿಷ್ಠನಾದ ನೀನು ಈ ಹಿಂದೆ ಅದೆಷ್ಟು ಯುದ್ಧಗಳನ್ನು ಮಾಡಿದ್ದಿ? ಆಗ ಇರದ ಸಮಸ್ಯೆ ಈಗೇಕೆ? ನೀನು ಮಾಡುತ್ತಿರುವುದು ನಿನ್ನ ಕರ್ತವ್ಯವನ್ನೇ ಹೊರತು ಇನ್ನೇನನ್ನೂ ಅಲ್ಲ”-ಎಂದು ಕೃಷ್ಣ ಅರ್ಜುನನಿಗೆ ತಿಳಿಸಿ ಹೇಳುತ್ತಾನೆ.
ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯ ಚ ।
ತಸ್ಮಾದಪರಿಹಾರ್ಯೇSರ್ಥೇ ನ ತ್ವಂ ಶೋಚಿತುಮರ್ಹಸಿ॥೨೭॥
ಜಾತಸ್ಯ ಹಿ ಧ್ರುವಃ ಮೃತ್ಯುಃ ಧ್ರುವಂ ಜನ್ಮ ಮೃತಸ್ಯ ಚ |
ತಸ್ಮಾತ್ ಅಪರಿಹಾರ್ಯೇ ಅರ್ಥೇ ನ ತ್ವಂ ಶೋಚಿತುಮ್ ಅರ್ಹಸಿ-- ಹುಟ್ಟಿದವನಿಗೆ ಸಾವು ಖಚಿತ; ಸತ್ತವನಿಗೆ ಮರುಹುಟ್ಟೂ ಖಚಿತ. ಎಂದ ಮೇಲೆ, ಅನಿವಾರ್ಯವಾದ ಸಂಗತಿಗಾಗಿ ನೀನು ಅಳುವುದು ತರವಲ್ಲ.
ಹುಟ್ಟು-ಸಾವು, ಸುಖ-ದುಃಖ, ಒಂದು ನಾಣ್ಯದ ಎರಡು ಮುಖವಿದ್ದಂತೆ. ರಾತ್ರಿ ಇಲ್ಲದೆ ಹಗಲಿಲ್ಲ. ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ. ನಾವು ಜೀವನದಲ್ಲಿ ಅನಿವಾರ್ಯವಾದದ್ದನ್ನು ಹೊಂದಿಸಿಕೊಳ್ಳುವುದನ್ನು ಕಲಿಯಬೇಕು. ಅದನ್ನು ಬಿಟ್ಟು ಕಷ್ಟ ಬಂದಾಗ ಕೊರಗುವುದು ತರವಲ್ಲ. ಅನಿವಾರ್ಯವಾದ ಕರ್ತವ್ಯ ಪಾಲನೆಯಲ್ಲಿ ನಾವು ಎಂದೂ ದುಃಖಿಸಬಾರದು.
ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ ।
ಅವ್ಯಕ್ತನಿಧನಾನ್ಯೇವ ತತ್ರ ಕಾ ಪರಿದೇವನಾ॥೨೮॥
ಅವ್ಯಕ್ತ ಆದೀನಿ ಭೂತಾನಿ ವ್ಯಕ್ತ ಮಧ್ಯಾನಿ ಭಾರತ |
ಅವ್ಯಕ್ತ ನಿಧನಾನಿ ಏವ ತತ್ರ ಕಾ ಪರಿದೇವನಾ -- ಭರತವಂಶದ ಕುಡಿಯೇ, ಜೀವಿಗಳ ಬದುಕಿನ ಬುಡದ ಬೇರು ಕಾಣಿಸದು. ನಡು ಮಾತ್ರ ಕಾಣಿಸುತ್ತಿದೆ. ತುದಿಯೂ ಕಾಣಿಸದು. ಹೀಗಿರುವಾಗ ಏಕೆ ಗೋಳಾಡುವುದು?
ಇಲ್ಲಿಯವರೆಗೆ ಜೀವ, ಜೀವದ ಇರುವು, ಹುಟ್ಟು ಸಾವಿನ ಬಗ್ಗೆ ಅನೇಕ ರೀತಿಯಲ್ಲಿ ವಿಶ್ಲೇಷಣೆಯನ್ನು ಶ್ರೀಕೃಷ್ಣನ ಮಾತಿನಲ್ಲಿ ನೋಡಿದ್ದೇವೆ. ಆದರೆ ಮೂಲಭೂತವಾಗಿ ಅರ್ಜುನನಿಗೆ ಕಾಡಿದ ಸಮಸ್ಯೆ 'ನನ್ನ ಗುರು, ನನ್ನ ಅಜ್ಜ' ಎನ್ನುವ ಸಂಬಂಧದ ಸೆಳೆತ. ಅಂತಹ ಮಹಾ ಜ್ಞಾನಿಗಳ ವಿರುದ್ಧ ನಿರ್ಲಿಪ್ತನಾಗಿ ಯುದ್ಧ ಮಾಡುವುದು ಹೇಗೆ ಎನ್ನುವುದು ಆತನ ಸಮಸ್ಯೆ. ಇಲ್ಲಿ ಕೃಷ್ಣ ಆತನ ಸಮಸ್ಯೆಗೆ ಉತ್ತರಿಸುತ್ತಾನೆ.
ಒಬ್ಬ ವ್ಯಕ್ತಿ ನಮಗೆ ಸಂಬಂಧಿಯಾಗುವುದು ಆತನ ಹುಟ್ಟಿನ ನಂತರ. ಆದರೆ ಹುಟ್ಟಿನ ಮೊದಲು ಆತ ಏನಾಗಿದ್ದ? ಸತ್ತ ನಂತರ ಎಲ್ಲಿ ಹೋಗುತ್ತಾನೆ? ಈ ಹುಟ್ಟು-ಸಾವಿನ ಹಿಂದೆ ಮತ್ತು ಮುಂದೆ ನಮಗೂ ಆ ಜೀವಕ್ಕೂ ಏನೂ ಸಂಬಂಧವಿಲ್ಲ. ಈ ಸಂಬಂಧ ಜೀವದ ನಿರಂತರ ಬದುಕಿನ ಸರಳ ರೇಖೆಯಲ್ಲಿನ ಒಂದು ಬಿಂದು. ಅದು ಮಾತ್ರ ನಮಗೆ ವ್ಯಕ್ತ. ಉಳಿದದ್ದು ಅವ್ಯಕ್ತ. ಆದ್ದರಿಂದ ಸರಳ ರೇಖೆಯ ಒಂದು ಬಿಂದುವಿನಲ್ಲಿ ನಿಂತು ದುಃಖಿಸುವುದು ಸೂಕ್ತವಲ್ಲ.
ಇಲ್ಲಿ ನಾವು ಬದುಕಿದ್ದಾಗ ಒಬ್ಬರನೊಬ್ಬರು ಪ್ರೀತಿಸಬಾರದು ಎಂದಲ್ಲ. ಇದ್ದಾಗ ಪ್ರೀತಿಸು, ಆದರೆ ಇಲ್ಲವಾದಾಗ ಭಗವಂತ ಕರೆಸಿಕೊಂಡ ಎಂದು ನಿಶ್ಚಿಂತೆಯಿಂದ ಇರಲು ಮನಸ್ಸಿಗೆ ತರೆಬೇತಿ ಕೊಡು. ಈ ರೀತಿ ಬದುಕಲು ಕಲಿಯದಿದ್ದರೆ ಜೀವನ ದುಸ್ತರವಾಗುತ್ತದೆ. ಇದ್ದಾಗ ಸಂತೋಷದಿಂದಿರು, ಇಲ್ಲದಿದ್ದಾಗ ದುಃಖಿಸಬೇಡ ಎನ್ನುವುದು ಕೃಷ್ಣನ ಸಂದೇಶ.
ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ ವದತಿ ತಥೈವ ಚಾನ್ಯಃ ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್ ॥೨೯॥
ಆಶ್ಚರ್ಯವತ್ ಪಶ್ಯತಿ ಕಶ್ಚಿತ್ ಏನಮ್ ಆಶ್ಚರ್ಯವತ್ ವದತಿ ತಥಾ ಏವ ಚ ಅನ್ಯಃ |
ಆಶ್ಚರ್ಯವತ್ ಚ ಏನಮ್ ಅನ್ಯಃ ಶೃಣೋತಿ ಶ್ರುತ್ವಾ ಅಪಿ ಏನಮ್ ವೇದ ನ ಚ ಏವ ಕಶ್ಚಿತ್ -- ಯಾರಾದರೂ ಈ ಜೀವತತ್ವವನ್ನು ಅಥವಾ ಭಗವಂತನನ್ನು ಕಂಡುಕೊಂಡರೆ ಅದೊಂದು ಅಚ್ಚರಿಯಂತೆ. ಇನ್ನೊಬ್ಬ ಆ ಕುರಿತು ಉದ್ಗರಿಸಿದರೆ ಅದೊಂದು ಅಚ್ಚರಿಯಂತೆ. ಮಗದೊಬ್ಬ ಅದನ್ನು ಕೇಳಿ ತಿಳಿದರೆ ಅದೂ ಒಂದಚ್ಚರಿಯಂತೆ.[ಯಾರೋ ಒಬ್ಬ ಭಗವಂತನನ್ನು ಅಚ್ಚರಿಗೊಂಡು ನೋಡುತ್ತಾನೆ. ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ. ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ] ಎಷ್ಟು ಕೇಳಿದರೂ ಜೀವವನ್ನಾಗಲೀ, ಭಗವಂತನನ್ನಾಗಲೀ ಸರಿಯಾಗಿ ಅರಿತವನು ಯಾರೂ ಇಲ್ಲ.
ಇದು ಜೀವ ಹಾಗೂ ಭಗವಂತನ ಬಗ್ಗೆ ಇರುವ ಶ್ಲೋಕ. ಭಗವಂತನನ್ನು ಕಂಡವರು ವಿರಳ. ಒಂದು ವೇಳೆ ಬಹಳ ಸಾಧನೆಯಿಂದ ಆತನನ್ನು ಕಂಡುಕೊಂಡರೆ, ಕಂಡವರ ಉದ್ಗಾರ ಕೇವಲ ಅಚ್ಚರಿ. ಅದೊಂದು ವಿಸ್ಮಯ. ಈ ವಿಶ್ವವೇ ಒಂದು ಅದ್ಭುತ, ಹಾಗಿರುವಾಗ ವಿಶ್ವವನ್ನು ನಿರ್ಮಿಸಿದ ಆ ಭಗವಂತ ಅದೆಷ್ಟು ಅದ್ಭುತವಿರಬಹುದು? ಆದ್ದರಿಂದ ಆತನನ್ನು ಕಂಡವರು ಆತನ ಬಗ್ಗೆ ವರ್ಣಿಸಲಾರರು. ಒಂದು ವೇಳೆ ವರ್ಣಿಸಿದರೆ ಕೇಳುವವನಿಗೆ ಅದೊಂದು ಅಚ್ಚರಿ. ಯಾರು ಎಷ್ಟೇ ಕೇಳಲಿ ಕೊನೆಗೆ ಭಗವಂತ ಕೇವಲ ಅಚ್ಚರಿಯಾಗೇ ಉಳಿಯುತ್ತಾನೆ. ಏಕೆಂದರೆ ಭಗವಂತನನ್ನು ತಿಳಿಯುವುದು ಅಸಾಧ್ಯ.
ಇದೇ ರೀತಿ ಜೀವ. ಆತ್ಮ ಸಾಕ್ಷಾತ್ಕಾರ ಆದಾಗ ನಮಗಾಗುವುದು ಕೇವಲ ವಿಸ್ಮಯ. ಅದನ್ನು ವರ್ಣಿಸುವುದು ಅಸಾಧ್ಯ. ಜೀವ ಒಂದು ಬೆಳಕಿನ ಪುಂಜ. ಅದೊಂದು ಮಹಾನ್ ಅಚ್ಚರಿ. ಅದು ಸೂರ್ಯನಿಗಿಂತ ಪ್ರಖರ, ಚಂದ್ರನಿಗಿಂತ ತಂಪಾದ ಬೆಳಕು. ಜೀವತತ್ವದ ಬಗ್ಗೆ ಕೇಳಿ ಅದರ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರುವುದು ಅಸಾಧ್ಯ.
ದೇಹೀ ನಿತ್ಯಮವಧ್ಯೋSಯಂ ದೇಹೇ ಸರ್ವಸ್ಯ ಭಾರತ ।
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹಸಿ ॥೩೦॥
ದೇಹೀ ನಿತ್ಯಮ್ ಅವಧ್ಯಃ ಅಯಮ್ ದೇಹೇ ಸರ್ವಸ್ಯ ಭಾರತ |
ತಸ್ಮಾತ್ ಸರ್ವಾಣಿ ಭೂತಾನಿ ನ ತ್ವಮ್ ಶೋಚಿತುಮ್ ಅರ್ಹಸಿ -- ಓ ಭಾರತ, ಎಲ್ಲರ ದೇಹದಲ್ಲೂ ಇರುವ ಈ ಜೀವ ಎಂದೂ ಕೊಲ್ಲಲಾಗದ್ದು.[ಈ ಜೀವವನ್ನು ಕೊಲ್ಲುವುದು ಎಂದೂ ಸಾಧ್ಯವಿಲ್ಲ. ಏಕೆಂದರೆ ಎಲ್ಲರ ದೇಹದಲ್ಲೂ ಭಗವಂತ ಜೀವಕ್ಕೆ ಕಾವಲಿದ್ದಾನೆ] ಆದ್ದರಿಂದ ಎಲ್ಲಾ ಜೀವಿಗಳಿಗಾಗಿ ಅಳುವುದು ನಿನಗೆ ತರವಲ್ಲ.
ಮೂಲಭೂತವಾಗಿ ಯಾರ ದೇಹದಲ್ಲಿರುವ ಜೀವವನ್ನೂ ಸಾಯಿಸುವುದು ಸಾಧ್ಯವಿಲ್ಲ. ದೇಹ ಸಾಯಬೇಕು ಎನ್ನುವುದು ವಿಧಿ ನಿಯಮ, ಹಾಗೂ ಅದಕ್ಕಾಗಿ ದುಃಖಪಡಬೇಕಾಗಿಲ್ಲ. ತನ್ನ ಸ್ವಂತ ಇಚ್ಛೆಯಿಂದ ದೇಹ ತ್ಯಜಿಸಲು ಸಾಧ್ಯವಿಲ್ಲ, ಹಾಗೂ ತ್ಯಜಿಸದೇ ಇರಲೂ ಸಾಧ್ಯವಿಲ್ಲ. "ಅಯಮ್ ದೇಹೇ ಸರ್ವಸ್ಯ ಭಾರತ" - "ರಕ್ಷಣೆ ಮಾಡುವ ಭಗವಂತ ಒಳಗೆ ಕುಳಿತಿರುವಾಗ ಹುಟ್ಟು ಸಾವಿಗೆ ನೀನು ಹೊಣೆಗಾರನಾಗಲಾರೆ. ಭರತವಂಶದಲ್ಲಿ ಹುಟ್ಟಿ ಬಂದ ನೀನು ಈ ಸತ್ಯವನ್ನು ಅರಿತುಕೋ" ಎನ್ನುತ್ತಾನೆ ಕೃಷ್ಣ. ಜೀವವೆಂಬ ಬೆಳಕಿನ ಕಿಡಿಯನ್ನು ತಿಳಿದಾಗ, ಅದರ ಅರಿವು ಬಂದಾಗ-ಹುಟ್ಟು ಸಾವಿನ ಮರ್ಮ ತಿಳಿಯುತ್ತದೆ. ಆಗ ಸಾವು ಒಂದು ಆನಂದದ ಅನುಭವವಾಗುತ್ತದೆ.
ಕೃಷ್ಣನ ಈ ಎಲ್ಲಾ ವಿಶ್ಲೇಷಣೆಯನ್ನು ಕೇಳಿದಾಗ ನಮ್ಮಲ್ಲಿ ಒಂದು ಅಭಿಪ್ರಾಯ ಮೂಡಬಹುದು . "ಕೊಲ್ಲುವುದು ತಪ್ಪಲ್ಲ, ಏಕೆಂದರೆ ಜೀವಕ್ಕೆ ಸಾವಿಲ್ಲ. ಎಲ್ಲವೂ ದೈವೇಚ್ಛೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು" ಎಂದು. ಆದರೆ ಅದು ಸರಿಯಲ್ಲ. ಏಕೆಂದರೆ ಈವರೆಗೆ ನಾವು ನೋಡಿದ ವಿಷಯ ಕೇವಲ ಬದುಕಿನ ಒಳನೋಟ. ಸಮಾಜ ಜೀವಿಗಳಾದ ನಾವು ಒಳಗಿನ ಅರಿವನ್ನು ಸಮಾಜದ ವಿರುದ್ಧ ಬಳಸುವುದು ಅಧರ್ಮ. ಶಾಸ್ತ್ರಕ್ಕೆ ಅನುಗುಣವಾಗಿರುವ ಸಮಾಜ ಧರ್ಮವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಮುಂದಿನ ಶ್ಲೋಕದಲ್ಲಿ ಕೃಷ್ಣ ಈ ವಿಚಾರವನ್ನು ಅರ್ಜುನನ ಮುಖೇನ ನಮಗೆ ಸ್ಪಷ್ಟಪಡಿಸುತ್ತಾನೆ.
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ ।
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋSನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ॥೩೧॥
ಸ್ವಧರ್ಮಮ್ ಅಪಿ ಚ ಅವೇಕ್ಷ್ಯ ನ ವಿಕಂಪಿತುಮ್ ಅರ್ಹಸಿ |
ಧರ್ಮ್ಯಾತ್ ಹಿ ಯುದ್ಧಾತ್ ಶ್ರೇಯಃ ಅನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ -- ನಿನ್ನ ಧರ್ಮವನ್ನು ಕಂಡಾದರೂ ನೀನು ಎದೆಗೆಡಬಾರದು. ಕ್ಷತ್ರಿಯನಾದವನಿಗೆ ನ್ಯಾಯವಾಗಿ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.
ಇಲ್ಲಿ ಅರ್ಜುನನ ಸನಾತನ ಧರ್ಮ ಯಾವುದು? ಸಮಾಜ ಧರ್ಮ ಯಾವುದು? ಹಾಗೂ ಸ್ವಧರ್ಮ ಯಾವುದು? ಸನಾತನ ಧರ್ಮ ಹೇಳುತ್ತದೆ: ‘ಅನ್ಯಾಯದ ವಿರುದ್ಧ ಹೋರಾಡಲೇ ಬೇಕು’ ಎಂದು; ಸಮಾಜ ಧರ್ಮ ಹೇಳುತ್ತದೆ: ಕ್ಷತ್ರಿಯನಾದವನು ಅಧರ್ಮದ ವಿರುದ್ಧ ಹೋರಾಡಬೇಕು, ಸಮಾಜದ ರಕ್ಷಣೆ ಮಾಡಬೇಕು ಹಾಗೂ ಈ ಪುಣ್ಯ ಕಾರ್ಯದಲ್ಲಿ 'ತನ್ನವರು' ಎಂದು ನೋಡಬಾರದು ಎಂದು. ಇನ್ನು ಅರ್ಜುನ ಮೂಲತಃ ಕ್ಷತ್ರಿಯನಾದ್ದರಿಂದ ಆತನ ಸ್ವಧರ್ಮ ‘ಅನ್ಯಾಯದ ವಿರುದ್ಧ ಹೋರಾಟ’. ಇಲ್ಲಿ ವ್ಯಕ್ತಿಧರ್ಮ, ಸಮಾಜಧರ್ಮ ಹಾಗೂ ಸನಾತನಧರ್ಮ ಏಕವಾಗಿದೆ. ಆದ್ದರಿಂದ ಅನ್ಯಾಯದ ವಿರುದ್ಧ ಹೋರಾಡುವುದು ಮಹಾ ಪುಣ್ಯದ ಕೆಲಸ. ಸಮಾಜ ಸುರಕ್ಷತೆಗಾಗಿ ಹೋರಾಡುವುದು ಕ್ಷತ್ರಿಯನ ಮಹಾತಪಸ್ಸು. ಇದಕ್ಕಿಂತ ಪುಣ್ಯಕಾರ್ಯ ಇನ್ನೊಂದಿಲ್ಲ.
ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್ ।
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್ ॥೩೨॥
ಯದೃಚ್ಛಯಾ ಚ ಉಪಪನ್ನಮ್ ಸ್ವರ್ಗ ದ್ವಾರಮ್ ಅಪಾವೃತಮ್ |
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮ್ ಈದೃಶಮ್-- ಇಂತಹ ಕಾಳಗವೆಂದರೆ ದೈವೇಚ್ಛೆಯಿಂದ ಕೂಡಿಬಂದ, ತೆರೆದಿಟ್ಟ ಸ್ವರ್ಗದ ಬಾಗಿಲು. ಪಾರ್ಥ, ಭಾಗ್ಯವಂತರಾದ ಕ್ಷತ್ರಿಯರು ಮಾತ್ರವೇ ಇಂತಹ ಅವಕಾಶ ಪಡೆಯುತ್ತಾರೆ.
ಕಾಲು ಕೆದಕಿ ಯುದ್ಧ ಮಾಡುವುದು ತಪ್ಪು. ಆದರೆ ಇಲ್ಲಿ ಸಮಷ್ಟಿಯಾಗಿ ಬಂದ ಯುದ್ಧದ ಹೊಣೆಗಾರಿಕೆ ಪಾಂಡವರದ್ದಲ್ಲ. ತನ್ನಷ್ಟಕ್ಕೇ ಬಂದು ಎರಗಿದ ಈ ಯುದ್ಧ ದೈವೇಚ್ಛೆ. ಈಶ್ವರನ ಇಚ್ಛೆಯಂತೆ ಎಲ್ಲವೂ ಆಗುವಾಗ, ಏನು ಬಂತೋ ಅದನ್ನು ಹಾಗೇ ಸ್ವೀಕರಿಸಬೇಕು. ಅನ್ಯಾಯದ ವಿರುದ್ಧ ಧರ್ಮಯುದ್ಧ ಮಾಡಿದವನಿಗೆ ಸ್ವರ್ಗದ ಬಾಗಿಲು ಸದಾ ತೆರೆದಿರುತ್ತದೆ. ಇಂತಹ ಯುದ್ಧದ ಅವಕಾಶ ಒಬ್ಬ ಕ್ಷತ್ರಿಯನಿಗೆ ಬರಬೇಕಾದರೆ ಆತ ಪುಣ್ಯ ಮಾಡಿರಬೇಕು. ಇಂತಹ ಸಮಯದಲ್ಲಿ ಕ್ಷತ್ರಿಯನಾದವನು ಕಣ್ಮುಚ್ಚಿ ಕುಳಿತುಕೊಳ್ಳುವುದು ಮಹಾಪಾಪ.
ಇಲ್ಲಿ ನಮಗೆ ಶ್ರೀಕೃಷ್ಣ ಅರ್ಜುನನಿಗೆ ಯುದ್ಧಮಾಡು ಎಂದು ಏಕೆ ಹೇಳುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರತಿಯೊಬ್ಬ ಮಾನವನೂ ಸನಾತನಧರ್ಮ, ಅದಕ್ಕನುಗುಣವಾಗಿ ಸಮಾಜಧರ್ಮ ಹಾಗೂ ಸಮಾಜ ಮತ್ತು ಸನಾತನ ಧರ್ಮಕ್ಕನುಗುಣವಾಗಿ ಸ್ವಧರ್ಮ-ಈ ನೆಲೆಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕು. ಈ ನೆಲೆಯಲ್ಲಿ ಮಾಡಿದ ಯಾವ ಕಾರ್ಯವೂ ಪಾಪ ಕಾರ್ಯವಾಗದು. ಮುಂದಿನ ಶ್ಲೋಕದಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ವಿವರವನ್ನು ಶ್ರೀಕೃಷ್ಣ ಕೊಡುತ್ತಾನೆ. ಸನಾತನಧರ್ಮ, ಸಮಾಜಧರ್ಮ ಮತ್ತು ಸ್ವಧರ್ಮ ಅಂದರೆ ಏನು ಎನ್ನುವುದನ್ನು ಈಗಾಗಲೇ ಅಧ್ಯಾಯ ಒಂದರಲ್ಲಿ (ಶ್ಲೋಕ-೪೦) ವಿವರವಾಗಿ ವಿಶ್ಲೇಷಿಸಲಾಗಿದೆ.
ಅಥ ಚೇತ್ ತ್ವಂ ಧರ್ಮ್ಯಮಿಮಂ ಸಂಗ್ರಾಮಂ ನ ಕರಿಷ್ಯಸಿ ।
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ॥೩೩॥
ಅಥ ಚೇತ್ ತ್ವಮ್ ಧರ್ಮ್ಯಮ್ ಇಮಮ್ ಸಂಗ್ರಾಮಮ್ ನ ಕರಿಷ್ಯಸಿ |
ತತಃ ಸ್ವಧರ್ಮಮ್ ಕೀರ್ತಿಮ್ ಚ ಹಿತ್ವಾ ಪಾಪಮ್ ಅವಾಪ್ಸ್ಯಸಿ -- ಒಂದೊಮ್ಮೆ, ನ್ಯಾಯದಿಂದ ಒದಗಿ ಬಂದ ಈ ಕಾಳಗವನ್ನು ನೀನು ಕೈಗೊಳ್ಳದಿದ್ದರೆ, ಆಗ, ನಿನ್ನ ಧರ್ಮವನ್ನೂ ಹೆಸರನ್ನೂ ಕಳೆದುಕೊಂಡು ಪಾಪವನ್ನು ಗಳಿಸುವೆ.
ಮುಂದುವರಿದು ಶ್ರೀಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: "ನೀನು ಪಾಪದ ಭಯದಿಂದ ಯುದ್ಧ ಬೇಡ ಎಂದು ಹೇಳುತ್ತಿರುವೆ. ಆದರೆ ಯುದ್ಧ ಮಾಡಿದರೆ ಮಾತ್ರ ಧರ್ಮ ಉಳಿಯುತ್ತದೆ, ಹಾಗೂ ನಿನಗೆ ಸ್ವರ್ಗದ ಬಾಗಿಲು ತೆರೆಯುತ್ತದೆ. ಇಲ್ಲದೆ ಇದ್ದಲ್ಲಿ ನರಕದ ಬಾಗಿಲು ನಿನ್ನನ್ನು ಸ್ವಾಗತಿಸಲಿದೆ" ಎಂದು.
ಇಲ್ಲಿ ನೆಡೆಯುತ್ತಿರುವುದು ಒಂದು ಧರ್ಮ ಸಂಗ್ರಾಮ. ಅರ್ಜುನ ಧರ್ಮದ ಪರ ನಿಂತ ಮಹಾರಥಿ. ಆತ ಇಂತಹ ಧರ್ಮ ಸಂಗ್ರಾಮದಲ್ಲಿ ಧರ್ಮದ ಪರ ಹೋರಾಡದಿದ್ದರೆ ಸಹಜಧರ್ಮಕ್ಕೆ ವಿರುದ್ಧವಾಗಿ ಹಾಗೂ ಸಾಮಾಜಿಕ ಧರ್ಮವನ್ನು ಬಿಟ್ಟು ನೆಡೆದುಕೊಂಡಂತೆ. ಇದೊಂದು ಕಳಂಕ ಮತ್ತು ಮಹಾ ಪಾಪವಾಗುತ್ತದೆ. ಈ ರೀತಿ ಪಾಪದ ಭಯದಿಂದ ಬಳಲುತ್ತಿರುವ ಅರ್ಜುನನಿಗೆ ಶ್ರೀಕೃಷ್ಣ ಯಾವುದು ನಿಜವಾದ ಪಾಪ ಎನ್ನುವುದನ್ನು ಮನವರಿಕೆ ಮಾಡಿಸುತ್ತಿದ್ದಾನೆ.
ಪಾಪ ಕೃತ್ಯ ಯಾವುದು ಎನ್ನುವುದನ್ನು ಸಂದರ್ಭ ನಿರ್ಧರಿಸುತ್ತದೆ. ಉದಾಹರಣೆಗೆ 'ಸತ್ಯ ನುಡಿಯುವುದು ಪುಣ್ಯದ ಕೆಲಸ' ಎಂದು ಹೇಳಲಾಗದು. ಅದು ಪಾಪವೋ ಪುಣ್ಯವೋ ಎನ್ನುವುದನ್ನು ಸಂದರ್ಭ ನಿರ್ಣಯಿಸುತ್ತದೆ. ದರೋಡೆಕೋರರಿಂದ ತಪ್ಪಿಸಿಕೊಳ್ಳಲು-ಆಶ್ರಯ ಕೇಳಿ ಬಂದ ವ್ಯಕ್ತಿಯನ್ನು ಅಡಗಿಸಿಟ್ಟು, ದರೋಡೆಕೋರರು ಬಂದು ಪ್ರಶ್ನಿಸಿದಾಗ ಸತ್ಯ ನುಡಿಯುವುದು ಪಾಪದ ಕೆಲಸ. ಅಡಗಿಸಿಟ್ಟ ವ್ಯಕ್ತಿಯ ರಕ್ಷಣೆಗೋಸ್ಕರ ಸುಳ್ಳನ್ನು ಹೇಳುವುದು ಪುಣ್ಯದ ಕೆಲಸ. ಇದೇ ರೀತಿ ಇಲ್ಲಿ ಅರ್ಜುನನಿಗೆ ಧರ್ಮದ ರಕ್ಷಣೆಗೋಸ್ಕರ ಗುರು-ಪಿತಾಮಹರನ್ನು ಎದುರಿಸಿ ಹೋರಾಡುವುದೊಂದೇ ಮಹಾಪುಣ್ಯದ ಕೆಲಸ ಎನ್ನುವುದನ್ನು ಶ್ರೀಕೃಷ್ಣ ಮನವರಿಕೆ ಮಾಡಿಸುತ್ತಿದ್ದಾನೆ.
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇSವ್ಯಯಾಮ್ ।
ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ॥೩೪॥
ಅಕೀರ್ತಿಮ್ ಚ ಅಪಿ ಭೂತಾನಿ ಕಥಯಿಷ್ಯಂತಿ ತೇ ಅವ್ಯಯಾಮ್ |
ಸಂಭಾವಿತಸ್ಯ ಚ ಅಕೀರ್ತಿಃ ಮರಣಾತ್ ಅತಿರಿಚ್ಯತೇ--ಜನರು ನಿನ್ನ ಕೊನೆಯಿರದ ಕಳಂಕದ ಕಥೆಯನ್ನು ಆಡಿಕೊಳ್ಳುತ್ತಾರೆ. ಮರ್ಯಾದೆಯ ಮನುಷ್ಯನಿಗೆ ಕೆಟ್ಟ ಹೆಸರು ಸಾವಿಗಿಂತ ಧಾರುಣ.
ಸಾಮಾಜಿಕ ಪರಿಣಾಮದ ಬಗ್ಗೆ ವಿವರಿಸುತ್ತಾ ಕೃಷ್ಣ ಹೇಳುತ್ತಾನೆ: ಒಬ್ಬ ಕ್ಷತ್ರಿಯನಿಗೆ ಆತನ ಕೀರ್ತಿ ನಾಶವಾದರೆ ಆತ ಅವಮಾನಕ್ಕೊಳಗಾಗುತ್ತಾನೆ. ಅದರಿಂದ ಆತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ಜಗತ್ತಿನಲ್ಲಿ ಮಹಾನ್ ಬಿಲ್ಲುಗಾರ ಎನ್ನುವ ಕೀರ್ತಿ ಪಡೆದ ಅರ್ಜುನ ಈ ಧರ್ಮಯುದ್ಧದಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ, ಜನರು ಆತನನ್ನು ಹೇಡಿ ಎಂದು ಆಡಿಕೊಳ್ಳುತ್ತಾರೆ. ಇತಿಹಾಸದ ಪುಟಗಳಲ್ಲಿ ಆತನ ಹೇಡಿತನ ಮುಂದಿನ ಪೀಳಿಗೆಗೆ ಕೆಟ್ಟ ಉದಾಹರಣೆಯಾಗಿ ನಿಲ್ಲುತ್ತದೆ. 'ಬಂಧು ಸ್ನೇಹಕ್ಕಾಗಿ ಯುದ್ಧದಿಂದ ಹಿಂದೆ ಸರಿದ' ಎಂದು ಯಾರೂ ಹೇಳಲಾರರು. ಯುದ್ಧಕ್ಕೆ ಹೆದರಿ ಓಡಿಹೋದ ಹೇಡಿ ಎಂದು ನೀಚವಾಗಿ ಬಯ್ಯುತ್ತಾರೆ. ಒಬ್ಬ ಮರ್ಯಾದಸ್ತ ಮನುಷ್ಯನಿಗೆ ಅಕೀರ್ತಿ ಎನ್ನುವುದು ಸಾವಿಗಿಂತ ಕೀಳು. ಒಬ್ಬ ಕ್ಷತ್ರಿಯ ಇದನ್ನು ಸಹಿಸಲಾರ.
ಭಯಾದ್ ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ ।
ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್॥೩೫॥
ಭಯಾತ್ ರಣಾತ್ ಉಪರತಮ್ ಮಂಸ್ಯಂತೇ ತ್ವಾಮ್ ಮಹಾರಥಾಃ |
ಯೇಷಾಮ್ ಚ ತ್ವಮ್ ಬಹುಮತಃ ಭೂತ್ವಾ ಯಾಸ್ಯಸಿ ಲಾಘವಮ್--ಯಾರಿಗೆ ನೀನು ಘನತೆಯ ವ್ಯಕ್ತಿಯಾಗಿದ್ದೆಯೋ ಅಂತಹ ಹಿರಿಯ ಮಹಾರಥಿಗಳೆದುರು ಹಗುರಾಗುವೆ; ಅವರು ನಿನ್ನನ್ನು ‘ಹೆದರಿ ಹೋರಾಡಲು ಹಿಂಜರಿದ ಹೇಡಿ’ ಎಂದೇ ಭಾವಿಸುತ್ತಾರೆ.
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ ।
ನಿಂದಂತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್॥೩೬॥
ಅವಾಚ್ಯ ವಾದಾನ್ ಚ ಬಹೂನ್ ವದಿಷ್ಯಂತಿ ತವ ಅಹಿತಾಃ |
ನಿಂದಂತಃ ತವ ಸಾಮರ್ಥ್ಯಮ್ ತತಃ ದುಃಖತರಮ್ ನು ಕಿಮ್ --ನಿನಗಾಗದವರು ನಿನ್ನ ಕೆಚ್ಚನ್ನು ಹೀಗಳೆಯುತ್ತಾ, ಬಾಯಿ ತುಂಬಾ ಆಡಬಾರದ ಮಾತುಗಳನ್ನಾಡುತ್ತಾರೆ. ಅದಕ್ಕೂ ಮಿಗಿಲಾದ ಸಂಕಟ ಏನುಂಟು ?
"ಯಾರು ನಿನ್ನನ್ನು ದೊಡ್ಡ ವೀರ ಎಂದು ಕೈ ಮುಗಿದು ತಲೆಬಾಗಿ ನಿಲ್ಲುತ್ತಿದ್ದರೋ, ಅವರು ನಿನ್ನನ್ನು ಹುಲ್ಲಿಗಿಂತ ಕಡೆಯಾಗಿ ನೋಡುತ್ತಾರೆ. ಸಮಾಜದಲ್ಲಿ ಉನ್ನತ ಪುರುಷನಾಗಿರುವ ನೀನು ಅವಮಾನಿತನಾಗಿ ಬದುಕಬೇಕಾಗುತ್ತದೆ. ಆಡಬಾರದ ಅಸಭ್ಯ ಮಾತುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಈ ಹಿಂದಿನ ಸರ್ವ ಸಾಧನೆಯೂ ಸುಳ್ಳು ಎಂದು ಹೀಗಳೆದು ಆಡಿಕೊಳ್ಳುತ್ತಾರೆ".
ಒಬ್ಬ 'ಉತ್ತಮ ನ್ಯಾಯಾಧೀಶ ' ಎಂದು ಹೆಸರು ಪಡೆದ ವ್ಯಕ್ತಿ, ಯಾವುದೋ ಒಂದು ಸಂದರ್ಭದಲ್ಲಿ ತನ್ನ ಆತ್ಮೀಯ ಬಂಧುವಿಗೋಸ್ಕರ ಕೆಟ್ಟ ತೀರ್ಪನ್ನು ಕೊಟ್ಟರೆ, ಆತ ತನ್ನ ಸಂಪೂರ್ಣ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾನೆ. ಆತನ ಹಿಂದಿನ ಎಲ್ಲಾ ಸಾಧನೆಗಳು ಒಂದೇ ಕ್ಷಣದಲ್ಲಿ ಮಣ್ಣುಪಾಲಾಗುತ್ತದೆ. ಆತನಿಂದ ಶಿಕ್ಷೆಗೊಳಗಾದ ಅಪರಾಧಿಗಳು ಅಸಭ್ಯವಾಗಿ ಆತನನ್ನು ನಿಂದಿಸುತ್ತಾರೆ. ಇಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಈ ಸಾಮಾಜಿಕ ಅರಿವನ್ನು ಕೊಡುತ್ತಿದ್ದಾನೆ.
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ।
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ॥೩೭॥
ಹತಃ ವಾ ಪ್ರಾಪ್ಸ್ಯಸಿ ಸ್ವರ್ಗಮ್ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ |
ತಸ್ಮಾತ್ ಉತ್ತಿಷ್ಠ ಕೌಂತೇಯ ಯುದ್ಧಾಯ ಕೃತ ನಿಶ್ಚಯಃ-- ಸತ್ತರೆ ಸ್ವರ್ಗ ಸೇರುವೆ. ಗೆದ್ದರೆ ದೇಶವನ್ನಾಳುವೆ. ಆದ್ದರಿಂದ, ಕೌಂತೇಯ, ಹೋರಾಡುವ ತೀರ್ಮಾನ ತಳೆದು ಎದ್ದು ನಿಲ್ಲು.
"ಯುದ್ಧ ಮಾಡುವುದರಿಂದ ನಾವು ಗೆಲ್ಲುತ್ತೇವೆ ಎನ್ನುವುದು ತಿಳಿಯದು. ಧರ್ಮ ಯುದ್ಧದಲ್ಲಿ ಸತ್ತರೂ ಮೋಕ್ಷ, ಗೆದ್ದರೂ ಮೋಕ್ಷ. ಯಾವುದೋ ಸ್ವಾರ್ಥಕ್ಕಾಗಿ ಮಾಡುತ್ತಿರುವ ಯುದ್ಧವಿದಲ್ಲ. ಅನ್ಯಾಯದ ವಿರುದ್ಧ ಹೋರಾಡುವೆ ಎನ್ನುವ ಸಂಕಲ್ಪದಿಂದ ಎದ್ದು ನಿಂತು ಹೋರಾಡು" ಎನ್ನುತ್ತಾನೆ ಕೃಷ್ಣ.
ನಾವು ಮಾಡುವ ಕಾರ್ಯದಲ್ಲಿ ಧರ್ಮದ ಪರಿಜ್ಞಾನ ಮುಖ್ಯ. ಯಾವುದೇ ಸ್ವಾರ್ಥವಿಲ್ಲದೆ, ಧರ್ಮದ ಮಾರ್ಗವನ್ನು ಅನುಸರಿಸುವವನು ಎಂದೂ ಯಾವುದಕ್ಕೂ ಅಂಜುವ ಅಗತ್ಯವಿಲ್ಲ. ಧರ್ಮ ಮಾರ್ಗದಲ್ಲಿ ನಡೆದರೆ ನನಗೇನಾಗುತ್ತದೋ ಎನ್ನುವ ಭಯ ಬೇಡ. ಏಕೆಂದರೆ ಧರ್ಮದ ನಡೆಯಲ್ಲಿ ಫಲಿತಾಂಶ ಯಾವುದೇ ಇರಲಿ, ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯುವ ಸಾಧನವಾಗಿರುತ್ತದೆ.
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ।
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ॥೩೮॥
ಸುಖ ದುಃಖೇ ಸಮೇ ಕೃತ್ವಾ ಲಾಭ ಅಲಾಭೌ ಜಯ ಅಜಯೌ |
ತತಃ ಯುದ್ಧಾಯ ಯುಜ್ಯಸ್ವ ನ ಏವಮ್ ಪಾಪಮ್ ಅವಾಪ್ಸ್ಯಸಿ -- ಸುಖ-ದುಃಖಗಳನ್ನು, ಗಳಿಕೆ-ಇಳಿಕೆಗಳನ್ನು, ಸೋಲು-ಗೆಲುವನ್ನು ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು.
ಜೀವನದಲ್ಲಿ ಸುಖ-ದುಃಖ ಎನ್ನುವುದು ಅನಿವಾರ್ಯ. ಸುಖ-ದುಃಖ, ಗಳಿಕೆ-ಇಳಿಕೆ, ಸೋಲು-ಗೆಲುವು ಎಲ್ಲವನ್ನೂ ಸಮನಾಗಿ ಕಾಣುವವನಿಗೆ ಯಾವ ಪಾಪವೂ ಅಂಟದು. ಎಲ್ಲವನ್ನೂ ಸಮದೃಷ್ಟಿಯಿಂದ ಕಾಣುತ್ತಾ, ಕೇವಲ ಕರ್ತವ್ಯ ಪ್ರಜ್ಞೆಯಿಂದ ಹೋರಾಟ ಮಾಡುವುದು ಬದುಕಿನ ಯಶಸ್ಸಿನ ಸೂತ್ರ. ಜಯಿಸಬೇಕು ಎನ್ನುವ ಸ್ವಾರ್ಥವಿಲ್ಲದೇ; ನಾವೇ ಲಾಭ ಗಳಿಸಬೇಕು-ಅವರು ಮಣ್ಣು ಮುಕ್ಕಲಿ ಎನ್ನುವ ದ್ವೇಷವಿಲ್ಲದೇ, ಎಲ್ಲವೂ ಭಗವಂತನ ಪ್ರಸಾದ ಎನ್ನುವ ಮನೋಭಾವನೆಯಿಂದ ಹೋರಾಡು ಎನ್ನುತ್ತಾನೆ ಕೃಷ್ಣ.
ಭಗವಂತನ ಈ ನುಡಿಯನ್ನು ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಆತ ಎಂದಿಗೂ ದುಃಖಿ ಆಗಲಾರ. "ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ" ಎಂದು ಧರ್ಮ ಮಾರ್ಗದಲ್ಲಿ ಮುನ್ನುಗ್ಗುವವನಿಗೆ ಸದಾ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಆತನಿಗೆ ದುಃಖ-ದುಃಖವಾಗಿ ಕಾಣಲಾರದು, ಸೋಲು-ಸೋಲಾಗಿ ಕಾಣಲಾರದು. ಆತನಿಗೆ ಇಹವೂ-ಸ್ವರ್ಗ ಪರವೂ-ಸ್ವರ್ಗ.
ಇಲ್ಲಿಯವರೆಗೆ ಕೃಷ್ಣ ಆತ್ಮತತ್ವದ ಬಗೆಗೆ ಸಾಕಷ್ಟು ವಿವರಣೆಯನ್ನು ಅರ್ಜುನನಿಗೆ ಹೇಳಿದ. ಬದುಕು ಅಂದರೇನು? ಸಾವು ಅಂದರೇನು? ಆತ್ಮ-ಪರಮಾತ್ಮ, ಆ ತತ್ವಗಳ ಅಂತರಂಗದ ರಹಸ್ಯವೇನು? ಇವು ಹೇಗೆ ಯಾವ ಬದಲಾವಣೆಯೂ ಇಲ್ಲದೇ ಅನಾದಿನಿತ್ಯ ಎನ್ನುವುದನ್ನು ವಿವರಿಸಿ, ಯುದ್ಧದ ಅವಶ್ಯಕತೆಯನ್ನು ಹೇಳಿದ. ಇಲ್ಲಿಂದ ಮುಂದೆ ಕೃಷ್ಣ ಸಾಂಖ್ಯದಿಂದ ಕರ್ಮದ ಕಡೆ ತಿರುಗುತ್ತಾನೆ.
ನಾವು ಮನಸ್ಸಿನಲ್ಲಿ ವೇದಾಂತವನ್ನು ಎಷ್ಟು ರೂಢಿಸಿಕೊಂಡರೂ, ತತ್ಕಾಲದ ಮನುಷ್ಯನ ದುಃಖ ಅದಮ್ಯವಾಗಿರುತ್ತದೆ-ಎನ್ನುವುದನ್ನು ಗೀತೆ ಸ್ಪಷ್ಟವಾಗಿ ತಿಳಿಸುತ್ತದೆ. ಭಗವಂತನಿಂದ ಗೀತೆಯ ಉಪದೇಶವನ್ನು ಪಡೆದ ಅರ್ಜುನ, ತನ್ನ ಮಗ ಅಭಿಮನ್ಯು ಯುದ್ಧದಲ್ಲಿ ಸತ್ತಾಗ ಪುನಃ ವಿಚಲಿತನಾಗುವುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ. ಪೂರ್ಣವಾದ ಆತ್ಮಸಾಕ್ಷಾತ್ಕಾರ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಆತ್ಮ ಅಜರ-ಅಮರ ಎಂದು ತಿಳಿದರಷ್ಟೇ ಸಾಲದು, ಪೂರ್ಣವಾಗಿ ತಿಳಿಯಬೇಕು. ಅಂತಹ ಸ್ಥಿತಿಯಲ್ಲಿ ಎಲ್ಲಾ ದುಃಖವನ್ನು ಮರೆತು ಇರಬಹುದು. ಆದರೆ ಈ ಆತ್ಮ ತತ್ವವನ್ನು ತಿಳಿಯುವ ಬಗೆ ಹೇಗೆ? ಆತ್ಮದ ಜ್ಞಾನವನ್ನು ಪಡೆಯುವ ಸಾಧನವೇನು? ಕೇಳಿದ ತಕ್ಷಣ ಸಾಕ್ಷಾತ್ಕಾರವಾಗಿ ಮನಸ್ಸಿನಲ್ಲಿ ಗಟ್ಟಿಯಾಗಿ ನಿಲ್ಲುವ ವಿಷಯ ಇದಲ್ಲ. ಅಂದಮೇಲೆ ಮಾನಸಿಕವಾಗಿ ಈ ಉತ್ತುಂಗದ ಸ್ಥಿತಿಯನ್ನು ತಲುಪುವುದು ಹೇಗೆ ಎಂದು ಕೃಷ್ಣ ಮುಂದೆ ವಿವರಿಸುತ್ತಾನೆ.
ಏಷಾ ತೇSಭಿಹಿತಾ ಸಾಂಖ್ಯೇ ಬುದ್ಧಿರ್ಯೋಗೇ ತ್ವಿಮಾಂ ಶೃಣು ।
ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮ ಬಂಧಂ ಪ್ರಹಾಸ್ಯಸಿ ॥೩೯॥
ಏಷಾ ತೇ ಅಭಿಹಿತಾ ಸಾಂಖ್ಯೇ ಬುದ್ಧಿಃ ಯೋಗೇ ತು ಇಮಾಮ್ ಶೃಣು |
ಬುದ್ಧ್ಯಾ ಯುಕ್ತಃ ಯಯಾ ಪಾರ್ಥ ಕರ್ಮ ಬಂಧಮ್ ಪ್ರಹಾಸ್ಯಸಿ -- ಈ ಆತ್ಮ ವಿಜ್ಞಾನದ ತಿಳಿನುಡಿ ನಿನಗೆ ತಿಳಿಸಿದ್ದಾಯ್ತು, ಅದನ್ನು ಗಳಿಸುವ ಬಗೆಯನ್ನು ಇದೀಗ ಕೇಳು. ಪಾರ್ಥ, ಈ ತಿಳಿನುಡಿಯಿಂದ ನೀನು ತಿಳಿಯಾದಾಗ ಕರ್ಮ ಬಂಧನವನ್ನು ಕಳೆದುಕೊಳ್ಳುವೆ.
ಕೃಷ್ಣ ಹೇಳುತ್ತಾನೆ: " ಇಲ್ಲಿಯವರೆಗೆ ಸಾಂಖ್ಯದ ಬಗ್ಗೆ ಹೇಳಿದ್ದಾಯ್ತು. ಇನ್ನು ಯೋಗದ ಬಗ್ಗೆ ಹೇಳುತ್ತೇನೆ ಕೇಳು" ಎಂದು. ಇಲ್ಲಿ ಕೃಷ್ಣ ಹೇಳುತ್ತಿರುವ ಸಾಂಖ್ಯಾ - 'ವೈದಿಕ ಸಾಂಖ್ಯ'. ವೈದಿಕ ಸಾಂಖ್ಯವನ್ನು ಪ್ರಚಾರಕ್ಕೆ ತಂದವರು ಕಪಿಲವಾಸುದೇವ. ಸಂಖ್ಯಾ ಅಂದರೆ ಸಮ್ಯಕ್ ಖ್ಯಾತಿ ಅಥವಾ ಸರಿಯಾದ ಅರಿವು. ಇದು ಆತ್ಮದ ಅರಿವನ್ನು ಕೊಡುವ ಮೂಲತತ್ವ. ಈ ಕಾರಣದಿಂದ ಪ್ರಾಚೀನರು ಜ್ಞಾನವನ್ನು ಸಾಂಖ್ಯ ಎಂದು ಕರೆದರು. ಇಲ್ಲಿ ಸಾಂಖ್ಯ ಎಂದರೆ ಖಚಿತವಾದ ಆತ್ಮ ಜ್ಞಾನ.
ಇಲ್ಲಿ ಹೇಳುತ್ತಿರುವ ಯೋಗ ಪತಂಜಲಿಯ ಯೋಗವಲ್ಲ, ವೈದಿಕ ಯೋಗ. ಸಾಮಾನ್ಯ ಯೋಗಕ್ಕೆ ದೇವರ ಅಸ್ತಿತ್ವದ ಧೃಡ ನಂಬಿಕೆ ಬೇಕಿಲ್ಲ. ಮನಸ್ಸನ್ನು ಯಾವುದೋ ಒಂದರ ಮೇಲೆ ನಿರಂತರ ಏಕಾಗ್ರತೆ ಮಾಡುವುದರಿಂದ ಅನೇಕ ಪವಾಡಗಳನ್ನು ಮಾಡಬಹುದು. ಆದರೆ ಇದು ನಿಜವಾದ ಆತ್ಮ ಸಾಕ್ಷಾತ್ಕಾರವಲ್ಲ. ಹತ್ತು ವರ್ಷ ಯೋಗ ಸಾಧನೆ ಮಾಡಿ ನೀರಿನ ಮೇಲೆ ನಡೆಯಲು ಕಲಿತವನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಈ ರೀತಿ ಯೋಗದಿಂದ ಪವಾಡಗಳನ್ನು ಕಲಿತು ಪ್ರದರ್ಶಿಸುವುದನ್ನು ವೈದಿಕ ಯೋಗ ನಿಷೇಧಿಸುತ್ತದೆ. ಎಂತಹ ಅಂತಃಶಕ್ತಿ ಪಡೆದರೂ ಅದನ್ನು ಪ್ರದರ್ಶಿಸಕೂಡದು. ನೀರಿನ ಮೇಲೆ ನಡೆಯಲು ಕಲಿತ ತಕ್ಷಣ ನಮಗೆ ಆತ್ಮ ಸಾಕ್ಷಾತ್ಕಾರವಾಗದು. ಇಂತಹ ಇಂದ್ರಜಾಲವನ್ನು ಯಾರು ಬೇಕಾದರೂ ಗಳಿಸಬಹುದು. ಇಲ್ಲಿ ಕೃಷ್ಣ ಹೇಳುತ್ತಿರುವುದು ಆತ್ಮ ತತ್ವವನ್ನು ಪಡೆಯುವುದಕ್ಕೆ ಜೀವನದಲ್ಲಿ ಮಾಡಬೇಕಾದ ಸಾಧನೆ ಏನು ಎನ್ನುವ ವಿಷಯ.
ಸಾಂಖ್ಯವನ್ನು ತಿಳಿಯುವ ಮಾತನ್ನು ಹೇಳಿದೆ, ಇನ್ನು ಜ್ಞಾನದ ದಾರಿಯಲ್ಲಿ ಸಾಗಿ ಸಿದ್ಧಿ ಪಡೆಯಬೇಕಾದರೆ ಬೇಕಾದ ಉಪಾಯವನ್ನು(ಯೋಗವನ್ನು) ಹೇಳುತ್ತೇನೆ ಕೇಳು ಎನ್ನುತ್ತಾನೆ ಕೃಷ್ಣ. ಯಾವ ಅರಿವನ್ನು ಪಡೆದರೆ ಸಾಧನೆಯ ದಾರಿಯಲ್ಲಿ ಕರ್ಮ ಬಂಧನವನ್ನು ಧಾಟಿ ಮುನ್ನೆಡೆಯಬಹುದು ಎನ್ನುವುದನ್ನು ಕೃಷ್ಣ ಮುಂದೆ ವಿವರಿಸುತ್ತಾನೆ. ಅಧ್ಯಾತ್ಮದ ಸಾಧನೆ ಅಂದರೇನು, ನಮ್ಮ ಜೀವನದಲ್ಲಿ ಅಧ್ಯಾತ್ಮದ ಸಾಧನೆ ಹೇಗಿರಬೇಕು, ಅದನ್ನು ಸಾಧಿಸುವುದು ಹೇಗೆ ಎನ್ನುವುದು ನಾವು ತಿಳಿಯಬೇಕಾದ ಮುಖ್ಯವಾದ ವಿಷಯ.
ಅನೇಕ ಮಂದಿ ಹೊರಗಿನಿಂದ ಹೇಗಿರಬೇಕು ಎಂದು ಅನೇಕ ರೀತಿ ಹೇಳುತ್ತಾರೆ. ಆದರೆ ಒಳಗಿನಿಂದ ಹೇಗಿರಬೇಕು ಎನ್ನುವುದನ್ನು ಯಾರೂ ಹೇಳುವುದಿಲ್ಲ. ಇಷ್ಟು ಹೊತ್ತು ಜಪ ಮಾಡಬೇಕು, ಈ ರೀತಿ ಮಡಿಯಾಗಿರಬೇಕು, ಇಷ್ಟು ಮಂತ್ರ ಹೇಳಬೇಕು ಇತ್ಯಾದಿ ವಿಚಾರವನ್ನು ಎಲ್ಲರೂ ಹೇಳುತ್ತಾರೆ. ಆದರೆ ಅಂತರಂಗ ಹೇಗಿರಬೇಕು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಅಂತರಂಗದ ಸಾಧನೆ ಇಲ್ಲದೆ ಕೇವಲ ಬಾಹ್ಯ ವೇಷದಿಂದ, ಜಪ-ತಪದಿಂದ, ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯೋಗ ಸಾಧನೆ ಎಂದರೆ ನಾವು ಯಾವ ಬಟ್ಟೆ ತೊಡುತ್ತೇವೆ, ಮೈಗೆ ಏನು ಹಚ್ಚಿಕೊಳ್ಳುತ್ತೇವೆ ಎನ್ನುವುದಲ್ಲ. ಅದು ನಮ್ಮ ಅಂತರಂಗದ ನಡೆ. ಅಂತರಂಗ ಮತ್ತು ಬಹಿರಂಗ ಏಕವಾಗಿರುವ ಸ್ಥಿತಿ. ನಮ್ಮ ನಡೆ, ನಮ್ಮ ನಂಬಿಕೆ, ನಮ್ಮ ಪ್ರಾಮಾಣಿಕತೆಯೇ ನಮ್ಮ ನಿಜವಾದ ಧರ್ಮ. ಅಂತಹ ಅಂತರಂಗದ ಸಾಧನೆ ಅತಿ ಮುಖ್ಯ. ಅದನ್ನು ಮುಂದೆ ಕೃಷ್ಣ ವಿವರಿಸುತ್ತಾನೆ.
ಜ್ಞಾನ ಬೇಕು ನಿಜ, ಆದರೆ ಆತ್ಮ ಜ್ಞಾನವನ್ನು ಪಡೆಯಲು ನಮ್ಮ ಸಾಧನೆ ಏನಿರಬೇಕು, ಈ ಸಂಸಾರ ಬಂಧನವನ್ನು ಕಳಚಿಕೊಳ್ಳುವ ಸಾಧನೆ ಯಾವುದು, ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ವಿವರವಾಗಿ ಕಾಣುತ್ತೇವೆ.
ನೇಹಾಭಿಕ್ರಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ ।
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ॥೪೦॥
ನ ಇಹ ಅಭಿಕ್ರಮ ನಾಶಃ ಅಸ್ತಿ ಪ್ರತ್ಯವಾಯುಃ ನ ವಿದ್ಯತೇ |
ಸು ಅಲ್ಪಮ್ ಅಪಿ ಅಸ್ಯ ಧರ್ಮಸ್ಯ ತ್ರಾಯತೇ ಮಹತಃ ಭಯಾತ್ -- ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ; ಧರ್ಮದ ತುಣುಕೂ ಕೂಡಾ ದೊಡ್ಡ ಭಯದಿಂದ ನಮ್ಮನ್ನು ಪಾರುಮಾಡಬಲ್ಲುದು.
ಸಾಧನೆಯ ಬಗ್ಗೆ ಹೇಳುವ ಮೊದಲು ಕೃಷ್ಣ ನಮಗೆ ಬರಬಹುದಾದ ಒಂದು ಸಂಶಯವನ್ನು ಈ ಶ್ಲೋಕದಲ್ಲಿ ಪರಿಹರಿಸಿದ್ದಾನೆ. ಎಲ್ಲರನ್ನೂ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ: ಮೊದಲು ಹುಟ್ಟು, ಆನಂತರ ಅಧ್ಯಯನ, ಸಾಧನೆ, ನಂತರ ಸಾವು. ಪುನಃ ಮರು ಹುಟ್ಟು ಮತ್ತೆ ಅದೇ ಸಾಧನೆ ಮತ್ತೆ ಸಾವು! ಇದರಿಂದ ಏನು ಉಪಯೋಗ ಎಂದು. ಒಂದು ಜನ್ಮದಲ್ಲಿ ಬ್ರಹ್ಮಸಾಕ್ಷಾತ್ಕಾರವಾಗದೇ ಇದ್ದರೆ ಆ ಎಲ್ಲಾ ಸಾಧನೆ ವ್ಯರ್ಥವೇ? ಖಂಡಿತವಾಗಿ ಇಲ್ಲ ಎನ್ನುತ್ತಾನೆ ಕೃಷ್ಣ. ನಮ್ಮ ಜೀವನದಲ್ಲಿ ಗಳಿಸಿದ ಐಹಿಕ ಸಂಪತ್ತು(ಧನ, ಒಡವೆ, ಕೀರ್ತಿ, ಆಸ್ತಿ ಇತ್ಯಾದಿ) ಸತ್ತ ನಂತರ ನಮ್ಮೊಂದಿಗೆ ಬಾರದು ನಿಜ. ಆದರೆ ಅಧ್ಯಾತ್ಮ ಸಾಧನೆ ಹಾಗಲ್ಲ. ಒಂದು ಜನ್ಮದಲ್ಲಿ ಮಾಡಿದ ಅಧ್ಯಾತ್ಮ ಸಾಧನೆ ಎಂದೂ ನಾಶವಾಗದು. ಈ ಜನ್ಮದಲ್ಲಿ ಅಧ್ಯಾತ್ಮದ ಒಂದು ಮೆಟ್ಟಿಲನ್ನು ಹತ್ತಿದರೆ ಮುಂದಿನ ಜನ್ಮದಲ್ಲಿ ಹುಟ್ಟುವಾಗಲೇ ನಾವು ಎರಡನೇ ಮೆಟ್ಟಲಲ್ಲಿರುತ್ತೇವೆ. ಹಿಂದಿನ ಜನ್ಮದಲ್ಲಿ ಎಲ್ಲಿ ನಿಂತಿದ್ದೇವೋ ಅಲ್ಲಿಂದ ಮುಂದುವರಿಯುವ ಪರಿಸರದಲ್ಲಿ ನಮ್ಮ ಜನನವಾಗುತ್ತದೆ. ಸಾಮಾಜಿಕವಾಗಿ ನೀವು ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳು ಜನಿಸುವುದನ್ನು, ಹಾಗೂ ಅತ್ಯಂತ ಕಡಿಮೆ ಸಮಯದಲ್ಲಿ ಮಹಾನ್ ಸಾಧನೆ ಮಾಡುವುದನ್ನು ಕಾಣುತ್ತೀರಿ. ಇದು ಅವರು ಹಿಂದಿನ ಜನ್ಮದಿಂದ ಪಡೆದು ಬಂದ ಜ್ಞಾನ. ಹಿಂದಿನ ಜನ್ಮದ ಅಧ್ಯಾತ್ಮದ ಸಾಧನೆಯ ಮುಂದುವರಿದ ಭಾಗವೇ ಈ ಜನ್ಮ. ನಾವು ಆ ಜನ್ಮದಲ್ಲಿ ಎಲ್ಲಿ ನಿಲ್ಲಿಸಿದ್ದೇವೋ ಅಲ್ಲಿಂದಲೇ ಈ ಜನ್ಮದ ಸಾಧನೆ ಪ್ರಾರಂಭವಾಗಿ ಮುಂದುವರಿಯುತ್ತದೆ.
ಒಂದು ವೇಳೆ ನಮಗೆ ಅಧ್ಯಾತ್ಮ ಸಾಧನೆ ಮಾಡಬೇಕು ಎನ್ನುವ ಅಂತರಂಗದ ತುಡಿತವಿದ್ದು, ಅದನ್ನು ಈ ಜನ್ಮದಲ್ಲಿ ಸಾಧಿಸಲಾಗದಿದ್ದಲ್ಲಿ ಮುಂದಿನ ಜನ್ಮದಲ್ಲಿ ಸಾಧನೆಗೆ ಬೇಕಾದ ವಾತಾವರಣದಲ್ಲಿ, ವಿದ್ವಾಂಸರ ಸಂಗವಿರುವ ಕಡೆ ನಮ್ಮ ಜನ್ಮವಾಗುತ್ತದೆ. ಆದ್ದರಿಂದ ನಮ್ಮ ಅಧ್ಯಾತ್ಮ ಚಿಂತನೆಯಲ್ಲಿ ನಮ್ಮ ಒಂದೊಂದು ಜನ್ಮ ಒಂದೊಂದು ತರಗತಿ ಇದ್ದಂತೆ. ಒಂದು ಗ್ರಂಥವನ್ನು ಸಂಪೂರ್ಣ ತಿಳಿಯಲು ನಾವು ಅನೇಕ ಜನ್ಮಗಳಲ್ಲಿ ಸಾಧನೆ ಮಾಡಬೇಕು. ಈ ಕಾರಣದಿಂದ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಲ್ಲ. ಇಂದು ನೀವು ನಿಮ್ಮ ಜೀವನದ ಯಾವ ಘಟ್ಟದಲ್ಲಿದ್ದರೂ ಸರಿ, ಅಧ್ಯಾತ್ಮ ಸಾಧನೆಗೆ ಇದು ಸಕಾಲ. ಇಂದೇ ನಿಮ್ಮ ಸಾಧನೆಯನ್ನು ಆರಂಭಿಸಿ. ಅದು ನಿಮ್ಮನ್ನು ಮೋಕ್ಷ ಮಾರ್ಗದತ್ತ ಕೊಂಡೊಯ್ಯುತ್ತದೆ ಎನ್ನುವುದು ಕಟುಸತ್ಯ. ಅಧ್ಯಾತ್ಮ ಪ್ರದರ್ಶನದ ವಸ್ತುವಲ್ಲ, ಅದು ಅಂತರಂಗದ ಸಾಧನೆ. ನಮ್ಮ ಜನ್ಮದಲ್ಲಿ ನಾವು ಅಧ್ಯಾತ್ಮದ ಕಿಂಚಿತ್ ಸಾಧನೆ ಮಾಡಿದರೂ ಕೂಡಾ, ಅದು ನಮ್ಮನ್ನು ಭಯದಿಂದ ಪಾರು ಮಾಡುತ್ತದೆ. ಭಯದಿಂದ ಅಭಯದತ್ತ ನಮ್ಮನ್ನು ಸಾಗಿಸುವ ಏಕಮಾತ್ರ ಸಾಧನ ಅಧ್ಯಾತ್ಮ.
ಸಾಧಕರಲ್ಲಿ ಮೂರು ವಿಧ. ಉತ್ತಮ ಸಾಧಕ, ಮಧ್ಯಮ ಸಾಧಕ, ಅಧಮ ಸಾಧಕ. ಉತ್ತಮ ಸಾಧಕ ದೇವರು ಒಬ್ಬನೇ ಎಂದು ನಂಬಿರುತ್ತಾನೆ. ಇಂತಹ ಭಕ್ತರನ್ನು ಭಾಗವತರು ಎನ್ನುತ್ತಾರೆ. ಆತನಿಗೆ ಭಗವಂತನಲ್ಲಿ ಏಕನಿಷ್ಠೆ ಇರುತ್ತದೆ. ಭಗವಂತನನ್ನು ಯಾವ ಶಬ್ದದಿಂದ ಕರೆದರೂ ಅದು ಆ ಆದಿಶಕ್ತಿಯಾದ ಪರಶಕ್ತಿಯನ್ನು ಹೇಳುತ್ತದೆ ಎನ್ನುವ ಸತ್ಯವನ್ನು ಆತ ತಿಳಿದಿರುತ್ತಾನೆ. ಈತ ನಿಜವಾದ ಸಾಧಕ, ಹಾಗೂ ಇದು ಸಾಧನೆಯ ನಿಜವಾದ ದಾರಿ. ಇನ್ನು ಮಧ್ಯಮ ಸಾಧಕರು: ಇವರು ಪ್ರತಿಯೊಂದು ದೇವತೆಯನ್ನು ಪರಿ ಪರಿಯಾಗಿ ಪೂಜಿಸಿ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎಂದು ಭಗವಂತನಿಗೆ ಅರ್ಪಿಸುತ್ತಾರೆ. ಇವರನ್ನು ತ್ರೈವಿಧ್ಯರು ಎನ್ನುತ್ತಾರೆ. ಇನ್ನು ಅಧಮ ಸಾಧಕ; ಈತ ದೇವರು ನೂರಾರು ಎಂದು ನಂಬಿ ಪೂಜಿಸುತ್ತಿರುತ್ತಾನೆ. ಭಗವಂತ ಸರ್ವಾಂತರ್ಯಾಮಿ ಎನ್ನುವ ಭಾವನೆ ಈತನಿಗಿರುವುದಿಲ್ಲ. ಈತನಿಗೆ ಅಧ್ಯಾತ್ಮದ ನಿಜವಾದ ಕಲ್ಪನೆ ಇರುವುದಿಲ್ಲ. ಆದ್ದರಿಂದ ಇದು ನಿಜವಾದ ಅಧ್ಯಾತ್ಮ ಸಾಧನೆ ಆಗದು.
ನಾವು ಏಕನಿಷ್ಠೆಯಿಂದ ಮಾಡುವ ಸಾಧನೆ ಎಂದೂ ವ್ಯರ್ಥವಾಗದು. ಇಲ್ಲಿ ತೋರ್ಪಡಿಕೆಯ ಅಗತ್ಯವಿಲ್ಲ. ಆದರೆ ಪ್ರಾಮಾಣಿಕ ನಿಷ್ಠೆ ಅಗತ್ಯ. ಗಣಪತಿಯನ್ನು ಪೂಜಿಸು, ವಾಯುವನ್ನು ಪೂಜಿಸು, ಸೂರ್ಯನನ್ನು ಪೂಜಿಸು, ಅಲ್ಲಾ ಎಂದು, ಯೇಸು ಎಂದು, ಶಿವನೆಂದು, ವಿಷ್ಣುವೆಂದು, ಏನೇ ಅಂದು ಪೂಜಿಸಿದರೂ ಕೂಡಾ, ಎಲ್ಲಾ ಶಬ್ದಗಳೂ ಆದಿಶಕ್ತಿಯಾದ ಪರಶಕ್ತಿ ಎನ್ನುವ ಸತ್ಯ ತಿಳಿದು, ಏಕನಿಷ್ಠೆ ಇಟ್ಟು, ಪರಿಶುದ್ಧ ಪ್ರಾಮಾಣಿಕ ಚಿಂತನೆ ಮಾಡಿದಾಗ ಅದು ನಿಜವಾದ ಅಧ್ಯಾತ್ಮ ಸಾಧನೆಯಾಗುತ್ತದೆ ಹಾಗೂ ವ್ಯರ್ಥವಾಗದೇ ನಮ್ಮೊಂದಿಗೆ ಬರುತ್ತದೆ. ಇಂತಹ ಸಾಧನೆಯಲ್ಲಿ ದ್ವೇಷ, ಸ್ವಾರ್ಥ, ಅಹಂಕಾರ, ದುಃಖ ಎಂದೂ ಇರುವುದಿಲ್ಲ. ಎಲ್ಲವೂ ಭಗವಂತನ ಪ್ರಸಾದ ಎನ್ನುವ ಭಾವನೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ।
ಬಹುಶಾಖಾ ಹ್ಯನನಂತಾಶ್ಚ ಬುದ್ಧಯೋSವ್ಯವಸಾಯಿನಾಮ್ ॥೪೧॥
ವ್ಯವಸಾಯ ಆತ್ಮಿಕಾ ಬುದ್ಧಿಃ ಏಕಾ ಇಹ ಕುರುನಂದನ |
ಬಹುಶಾಖಾಃ ಹಿ ಅನಂತಾಃ ಚ ಬುದ್ಧಯಃ ಅವ್ಯವಸಾಯಿನಾಮ್--ಕುರುಕುಮಾರಾ, ಈ ದಾರಿಯಲ್ಲಿ ಮನನದಿಂದ ಹದಗೊಂಡ ಮಾತು ಒಂದೇ ತರಹ. ಹದವಿರದವರ ತುದಿಯಿರದ ಹರಟೆಗಳಿಗೆ ಹತ್ತು ಹಲವು ಟಿಸಿಲುಗಳು.
ಏಕನಿಷ್ಠೆಯಿಂದ ನಾವು ಮಾಡುವ ಸಾಧನೆ ವ್ಯರ್ಥವಲ್ಲ ಎನ್ನುವ ವಿಷಯ ನಮಗೆ ತಿಳಿಯಿತು, ಆದರೆ ಯಾವುದು ಸರಿ ಹಾಗೂ ಯಾವುದು ತಪ್ಪು ಎನ್ನುವುದನ್ನು ತಿಳಿಯುವ ಬಗೆ ಹೇಗೆ? ಕೃಷ್ಣ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾನೆ.
ಎಲ್ಲಾ ಕಾಲದಲ್ಲೂ ನಿರ್ಣಾಯಕವಾದ ಮಾತು ಏಕರೂಪವಾಗಿರುತ್ತದೆ. ನಿರ್ಣಯ ಇಲ್ಲದೆ ಆಡುವ ಮಾತು ಒಂದೊಂದು ಒಂದೊಂದು ತರಹ. ಗೊತ್ತಿಲ್ಲದೆ ಅಜ್ಞಾನದಿಂದ ಆಡುವ ಮಾತುಗಳಿಗೆ ತಲೆಬುಡವಿಲ್ಲದ ಅನಂತ ಶಾಖೆ. ಆದರೆ ನಿಜವಾಗಿ ತಿಳಿದವರ ನಿರ್ಣಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತದೆ. ಆದ್ದರಿಂದ ಸತ್ಯವನ್ನು ಅರಿತವರ ಮಾರ್ಗದರ್ಶನದಂತೆ ನಡೆ ಎನ್ನುತ್ತಾನೆ ಕೃಷ್ಣ.
ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ ।
ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ ॥೪೨॥
ಯಾಮ್ ಇಮಾಮ್ ಪುಷ್ಪಿತಾಮ್ ವಾಚಮ್ ಪ್ರವದಂತಿ ಅವಿಪಶ್ಚಿತಃ |
ವೇದವಾದರತಾಃ ಪಾರ್ಥ ನ ಅನ್ಯತ್ ಅಸ್ತಿ ಇತಿ ವಾದಿನಃ -- ಓ ಪಾರ್ಥ, ಅರೆಬರೆ ತಿಳಿದವರು ಹೇಳುತ್ತಾರೆ: ಈ ವೇದವಾಣಿ ಸ್ವರ್ಗವೆಂಬ ಹೂಬಿಡುವ ಬಳ್ಳಿ. ಹುಟ್ಟು ಕರ್ಮದ ಕಟ್ಟುಗಳ ಸಂಸಾರವೇ ಇದರ ಹಣ್ಣು.
ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಮ್ ।
ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ ॥೪೩॥
ಕಾಮ ಆತ್ಮಾನಃ ಸ್ವರ್ಗ ಪರಾಃ ಜನ್ಮ ಕರ್ಮ ಫಲ ಪ್ರದಾಮ್ |
ಕ್ರಿಯಾ ವಿಶೇಷ ಬಹುಲಾಮ್ ಭೋಗ ಐಶ್ವರ್ಯ ಗತಿಮ್ ಪ್ರತಿ -- ಐಷಾರಾಮದ ಐಸಿರಿಯ ಬದುಕಿಗಾಗಿ ಅದರ ತುಂಬಾ ಬಗೆ ಬಗೆಯ ಕರ್ಮ ಕಲಾಪಗಳು. ಅವರು ವೇದದ ಹೊರನೋಟದ ಅರ್ಥದಲ್ಲೇ ನಿಂತುಬಿಡುವರು. [ವೇದದಲ್ಲಿ ವಿವಾದ ಬೆಳೆಸುವವರು, ಅಥವಾ ಅರ್ಥವನ್ನರಿಯದೇ ಬರಿದೆ ಉರು ಹೊಡೆಯುವವರು] ಅದರಾಚೆ ಏನೂ ಇಲ್ಲ ಎನ್ನುವವರು. ಬಗೆಯಲ್ಲಿ ಆಸೆ ತುಂಬಿ ಸ್ವರ್ಗದ ಕನಸು ಕಾಣುವವರು.
ಭೋಗೈಶ್ವರ್ಯಪ್ರಸಕ್ತಾನಾಂ ತಯಾSಪಹೃತಚೇತಸಾಮ್ ।
ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ ॥೪೪॥
ಭೋಗ ಐಶ್ವರ್ಯ ಪ್ರಸಕ್ತಾನಾಮ್ ತಯಾ ಅಪಹೃತ ಚೇತಸಾಮ್ |
ವ್ಯವಸಾಯ ಆತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೇ- ಐಷಾರಾಮದ ಐಸಿರಿಯಲ್ಲಿ ಮುಳುಗಿ, ವೇದ ಓದಿಯೇ ತಲೆ ಕೆಡಿಸಿಕೊಂಡ ಇಂತಹವರಿಗೆ, ಹದಗೊಂಡ ತಿಳಿನುಡಿ ಕೂಡಾ ಮನಸ್ಸಿನ ಸಮಸ್ಥಿತಿಗೆ ನೆರವಾಗದು.
ಮೇಲಿನ ಮೂರು ಶ್ಲೋಕಗಳು ಅತ್ಯಂತ ಮುಖ್ಯವಾದುದು. ಹೆಚ್ಚಿನವರಿಗೆ ಇದು ಅರ್ಥವೇ ಆಗುವುದಿಲ್ಲ. ಅರ್ಥವಾಗದೇ ಈ ಶ್ಲೋಕವನ್ನು ಟೀಕಿಸಿದವರೂ ಇದ್ದಾರೆ! ಪ್ರಾಚೀನ ಗ್ರಂಥಗಳಲ್ಲಿ, ವೇದಗಳಲ್ಲಿ, ಶ್ರುತಿಗಳಲ್ಲಿ, ಕೇವಲ ಅಧ್ಯಾತ್ಮವಲ್ಲದೆ ಅನೇಕ ಲೌಕಿಕ ವಿಷಯಗಳು ತುಂಬಿಕೊಂಡಂತೆ ಕಾಣುತ್ತದೆ. ಬರಿಯ ವೇದ ಗ್ರಂಥಗಳನ್ನು ಓದುವುದರಿಂದ ನನ್ನನ್ನು ತಿಳಿಯಲು ಸಾಧ್ಯವಿಲ್ಲ ಎನ್ನುತ್ತಾನೆ ಕೃಷ್ಣ. ಕೃಷ್ಣ ಹೇಳುತ್ತಾನೆ ವೇದವಾದಿಗಳಾದವರು ವೇದದ ಮೇಲ್ನೋಟದ ಅರ್ಥವೆಂಬ ಹೂವನ್ನು ಕಿತ್ತು ತೆಗೆದುಕೊಂಡು ಆಳವಾದ ಜ್ಞಾನ ಸಾಗರವೆಂಬ ಹಣ್ಣಿನಿಂದ ವಂಚಿತರಾಗುತ್ತಾರೆ ಎಂದು. ವೇದವನ್ನು ಆಳವಾಗಿ ಅರ್ಥ ಮಾಡಿಕೊಳ್ಳದೇ, ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತು ವೇದವೆಂದರೆ ಇಷ್ಟೇ ಎಂದು ಹೇಳುವವರಿಗೆ ಕೃಷ್ಣ ಈ ಮಾತನ್ನು ಹೇಳಿದ್ದಾನೆ. ಇಲ್ಲಿ 'ವೇದವಾದರು' ಎಂದರೆ ವೇದದ ಅರ್ಥ ತಿಳಿಯದೇ ಅದರ ಬಗ್ಗೆ ವಿವಾದ ಮಾಡುವವರು. ವೇದವನ್ನು ಬಾಯಿಪಾಠ ಮಾಡಿ ಅದರ ಅರ್ಥ ತಿಳಿಯದೇ ಮಾತನಾಡುವವರು. ವೇದದ ಮೇಲ್ನೋಟದ ಅರ್ಥದಲ್ಲೇ ನಿಂತವರು. ಇವರು ಮೇಲಿನಿಂದ ಈಜುವವರು. ಇವರಿಗೆ ತಳದಲ್ಲಿರುವ ಮುತ್ತು ರತ್ನಗಳ ಅರಿವಿಲ್ಲ. ವೇದವನ್ನು ನಿಜವಾಗಿ ಅರಿತುಕೊಳ್ಳದೇ, ಅದರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡು, ಅದನ್ನೇ ಜನರಿಗೆ ಹೇಳುವುದು ನರಕಕ್ಕೆ ನೇರ ದಾರಿ. ಪೌರೋಹಿತ್ಯ ಕೂಡಾ ಹೀಗೆ. ನಿಜವಾದ ಜ್ಞಾನವಿಲ್ಲದೆ, ಮಂತ್ರದ ಅರ್ಥ ಗೊತ್ತಿಲ್ಲದೆ ಪೌರೋಹಿತ್ಯ ಮಾಡುವುದು ಕೂಡಾ ಅಷ್ಟೇ ಅಪಾಯಕಾರಿ. ಪೌರೋಹಿತ್ಯ ಒಂದು ಜವಾಬ್ದಾರಿಯುತ ಕೆಲಸ. ಒಬ್ಬ ಮನುಷ್ಯನ ಪಾಪವನ್ನು ಪರಿಹರಿಸಿ ಅವನನ್ನು ಎತ್ತರಕ್ಕೇರಿಸಬೇಕಾದರೆ ಪೌರೋಹಿತ್ಯ ಮಾಡುವವನೂ ಕೂಡಾ ಎತ್ತರದಲ್ಲಿರಬೇಕು. ವೇದಮಂತ್ರದ ರಹಸ್ಯ ತಿಳಿದವನಾಗಿರಬೇಕು. ಕೃಷ್ಣ ಇಲ್ಲಿ ಹೇಳುತ್ತಾನೆ: “ವೇದದ ಅಂತರಂಗದ ಅರ್ಥ ತಿಳಿಯದಿದ್ದರೆ ಎಲ್ಲವೂ ಅಪಾರ್ಥವಾಗುತ್ತದೆ. ಯಾರು ಪ್ರಾಚೀನ ಗ್ರಂಥಗಳ ಮೇಲ್ನೋಟದ ಅರ್ಥವನ್ನು ಹೇಳಿ ಸಮಾಜಕ್ಕೆ ಮೋಸ ಮಾಡುತ್ತಾರೋ ಅವರು ಅವಿಪಶ್ಚಿತರು” ಎಂದು. 'ವಿಪಶ್ಚಿತರು' ಎಂದರೆ ಜ್ಞಾನ ಸ್ವರೂಪವಾದ ಆತ್ಮವನ್ನು ಕಂಡವರು, ಆತ್ಮ ಜ್ಞಾನಿಗಳು. ಅವಿಪಶ್ಚಿತರು ಶಾಸ್ತ್ರಕ್ಕೆ ಮೇಲ್ನೋಟದ ಅರ್ಥವನ್ನು ಹೇಳುವವರು-ಅವರು ತಿಳಿಗೇಡಿಗಳು ಎನ್ನುತ್ತಾನೆ ಕೃಷ್ಣ! ಈ ಮಾತು ಪ್ರಪಂಚದ ಪ್ರತಿಯೊಂದು ಧರ್ಮ ಗ್ರಂಥಗಳಲ್ಲಿದೆ. ಬೈಬಲ್ ನಲ್ಲಿ ಇದನ್ನು ಗೂಡಾರ್ಥ ಎನ್ನುತ್ತಾರೆ. ಕುರಾನಿನಲ್ಲಿ ಕೂಡಾ ಈ ಬಗ್ಗೆ ಎಚ್ಚರದ ನುಡಿ ಇದೆ. "There are Sentences that are clear in meaning and there are Sentences that are susceptible of different interpretations" . ಇದು ಕುರಾನ್ ನಲ್ಲಿ ಬರುವ ಒಂದು ನುಡಿ. ಎಲ್ಲಾ ಪ್ರಾಚೀನ ಅನುಭಾವ ಸಾಹಿತ್ಯದಲ್ಲಿ ಈ ಎಚ್ಚರವನ್ನು ಕೊಟ್ಟಿದ್ದಾರೆ. ಪ್ರಾಚೀನ ಗ್ರಂಥಗಳು ಒಗಟಿನಂತೆ. ಅದರ ಮೇಲ್ನೋಟದ ಅರ್ಥವನ್ನು ತಿಳಿದುಕೊಂಡರೆ ಅಸಂಗತವಾಗುತ್ತದೆ. ಅಧ್ಯಾತ್ಮ ಗ್ರಂಥಗಳಲ್ಲಿ ನಮ್ಮನ್ನು ಆಭೂತಿಗೆ ಕೊಂಡೊಯ್ಯಲು ಈ ರೀತಿ ಒಗಟಿನ ಭಾಷೆಯನ್ನು (mystical language) ಉಪಯೋಗಿಸಿದ್ದಾರೆ. ವೇದವೆನ್ನುವುದು ಸಾಂಕೇತಿಕ ಭಾಷೆ ಎನ್ನುವುದನ್ನು ಅರಿಯದಿದ್ದರೆ ಅಧ್ಯಾತ್ಮ ಚಿಂತನೆ ಅನರ್ಥವಾಗುತ್ತದೆ. ಈ ರೀತಿ ತಿಳಿಯದೇ ಮಾಡುವ ಸಾಧನೆಯಿಂದ ಏನೂ ಉಪಯೋಗವಿಲ್ಲ.
ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಪ್ರಾಯಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೇ ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೇ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ ಋತಿ. ಗಣಪತಿ ಇಪ್ಪತ್ತೊಂದನೆಯವನು.
ಇನ್ನು ಶಿವ ಪಾರ್ವತಿಯರು. ಇವರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲ ಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿನ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ. ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅಧ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೇ(Awareness of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ ಶಿರಛೇದನವಾಗದೇ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ ಸಾಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ. ಇನ್ನು ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ಧ್ರುವದ ಶಕ್ತಿ ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗೂ ದಕ್ಷಿಣ ಧ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ಧ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗೂ ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗೂ ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗೂ ದಕ್ಷಿಣದ ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದನವಾಗುತ್ತದೆ. ನಾವು ಪುನಃ ಈ ಸಂಸಾರದ ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನೀ ಶಕ್ತಿಯ ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನೀ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯೆತ್ತಿ ನಿಲ್ಲುವುದು. ಕುಂಡಲಿನೀ ಜಾಗೃತವಾದಾಗ ಶಕ್ತಿ- ಮೂಲಾಧಾರ, ಮಣಿಪುರ ಹಾಗೂ ಸ್ವಾದಿಷ್ಠಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ.
ನಾವು ನಮ್ಮ ತಲೆಯಲ್ಲಿದ್ದುದನ್ನು ವೇದದಲ್ಲಿ ಕಾಣದೆ, ವೇದದಲ್ಲಿದ್ದುದನ್ನು ತಲೆಯೊಳಗೆ ತುಂಬಿಕೊಳ್ಳಬೇಕು. ವೇದವನ್ನು ಮೇಲ್ನೋಟದಲ್ಲಿ ಕಂಡಾಗ ಕೇವಲ ಜನ್ಮ-ಕರ್ಮ, ಹುಟ್ಟು-ಸಾವು, ಈ ಸುಳಿಯಲ್ಲೇ ಇರುತ್ತೇವೆ, ಎಂದೂ ಅಮರತ್ವದ ದಾರಿ ಕಾಣದು. ಮೇಲ್ನೋಟಕ್ಕೆ ವೇದವನ್ನು ಕಾಣುವವರು ಬೆಳಗಿನಿಂದ ಸಂಜೆಯ ತನಕ ಭೋಗ ಐಶ್ವರ್ಯ ಕರ್ಮ ಕಲಾಪದಲ್ಲಿ ನಿಂತು ಆತ್ಮಸಾಕ್ಷಾತ್ಕಾರವನ್ನು ಮರೆತು ನಿಲ್ಲುತ್ತಾರೆ. ಇದು ದೊಡ್ಡ ದುರಂತ.
ಈಗ ನಮಗೆ ಒಂದು ಪ್ರಶ್ನೆ ಕಾಡುತ್ತದೆ. ಅದೇನೆಂದರೆ ಪ್ರಾಚೀನ ಅಧ್ಯಾತ್ಮ ಗ್ರಂಥಗಳನ್ನು ಏಕೆ ಒಗಟಿನ ರೂಪದಲ್ಲಿ ಬರೆದಿದ್ದಾರೆ? ಎಂದು. ತರಗತಿಗೊಂದು ಪಠ್ಯಪುಸ್ತಕವಿರುವಂತೆ ಈ ಗ್ರಂಥಗಳನ್ನು ಹಂತಹಂತವಾಗಿ ಅರ್ಥವಾಗುವ ರೀತಿ ಏಕೆ ಬರೆದಿಲ್ಲ? ಇತ್ಯಾದಿ. ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನೆಂದರೆ ಈ ಗ್ರಂಥಗಳನ್ನು ತಿಳಿದುಕೊಳ್ಳಲು ಯೋಗ್ಯತೆ ಬೇಕು. ಇಲ್ಲಿ ಪುಸ್ತಕ ಒಂದೇ; ಆದರೆ ಒಂದೇ ಪುಸ್ತಕದಲ್ಲಿ ಅನೇಕ ಹಂತದ ಶಿಕ್ಷಣ ಅಡಗಿದೆ. ಈ ವೇದ ಗ್ರಂಥಗಳು ಎಂದೂ ಅಯೋಗ್ಯರಿಗೆ ದಕ್ಕದು. ಅವು ಕೇವಲ ತನ್ನನ್ನು ಅರಿಯಬಲ್ಲ, ಅರಿತು ಅದರ ಸದುಪಯೋಗ ಮಾಡಬಲ್ಲವನ ಮುಂದೆ ಮಾತ್ರ ತೆರೆದುಕೊಳ್ಳುತ್ತವೆ. ಯೋಗ್ಯನಾದವನು ಈ ಗ್ರಂಥದ ಆಳಕ್ಕಿಳಿದಷ್ಟೂ ಹೆಚ್ಚು ಹೆಚ್ಚು ವಿಷಯ ತಿಳಿಯುತ್ತಾನೆ. ಒಂದು ಗ್ರಂಥವನ್ನು ಅರಿಯಲು ಅನೇಕ ಜನ್ಮಗಳ ಸಾಧನೆ ಬೇಕು.
ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ ।
ನಿರ್ದ್ವಂದ್ವೋ ನಿತ್ಯಸತ್ತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್ ॥೪೫॥
ತ್ರೈಗುಣ್ಯ ವಿಷಯಾಃ ವೇದಾಃ ನಿಸ್ತ್ರೈಗುಣ್ಯಃ ಭವ ಅರ್ಜುನ |
ನಿರ್ದ್ವಂದ್ವಃ ನಿತ್ಯಸತ್ತ್ವಸ್ಥಃ ನಿರ್ಯೋಗಕ್ಷೇಮಃ ಆತ್ಮವಾನ್ -- ವೇದಗಳು ಹೊರನೋಟಕ್ಕೆ ತ್ರಿಗುಣಗಳ ನಂಟನ್ನೇ ನಿರೂಪಿಸುತ್ತವೆ [ಒಳಗಿನಿಂದ ತ್ರಿಗುಣಗಳ ನಂಟಿನ ನಂಜನ್ನು ನಿವಾರಿಸುತ್ತವೆ]. ಓ ಅರ್ಜುನಾ, ನೀನು ತ್ರಿಗುಣಗಳ ನಂಟನ್ನು ನೀಗಿ ನಿಲ್ಲು. ದ್ವಂದ್ವಗಳ ತಾಕಲಾಟ ತೊಡೆದು ಸದಾ ಭಗವಂತನಲ್ಲಿ ಮನಸ್ಸನ್ನಿಡು. ಯೋಗ-ಕ್ಷೇಮದ ಹೊಣೆಯನ್ನು ಅವನಿಗೊಪ್ಪಿಸಿ ಅವನೇ ಸ್ವಾಮಿ ಎಂದು ನಂಬಿ ನಡೆ.
ಈವರೆಗೆ ನಾವು ವೇದವನ್ನು ಹೇಗೆ ಅನುಸಂಧಾನ ಮಾಡಬೇಕು, ಅದರ ಮೇಲ್ನೋಟದ ಅರ್ಥದಿಂದ ಆಳಕ್ಕೆ ಹೇಗೆ ಇಳಿಯಬೇಕು ಎನ್ನುವುದನ್ನು ಕೃಷ್ಣ ಅರ್ಜುನನಿಗೆ ಹೇಳಿದ್ದನ್ನು ನೋಡಿದೆವು. ಇನ್ನಷ್ಟು ಸ್ಪಷ್ಟವಾಗಿ , ಅದು ಹೇಗೆ ಕಾಣುತ್ತದೆ ಹಾಗೂ ಅದನ್ನು ಹೇಗೆ ನೋಡಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ಕೃಷ್ಣ ಸ್ಪಷ್ಟವಾಗಿ ವಿವರಿಸುತ್ತಾನೆ. ಇದು ಒಂದು ರೀತಿಯಲ್ಲಿ ಇಡೀ ಅಧ್ಯಾತ್ಮದ ಅನುಸಂಧಾನದ ಪ್ರಮುಖ ವಿಚಾರ. ಇಲ್ಲಿ ಕೃಷ್ಣ ಅದನ್ನು ಹೇಗೆ ಅನುಸಂಧಾನ ಮಾಡಬೇಕು, ಹಾಗೂ ನಮ್ಮ ಮನಸ್ಸನ್ನು ಹೇಗೆ ಅಣಿಗೊಳಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ.
ನಮಗೆ ಮೇಲ್ನೋಟಕ್ಕೆ ವೇದ ಸತ್ವ-ರಜಸ್ಸು-ತಮೋಗುಣಗಳಿಗೆ(ತ್ರೈಗುಣ್ಯ) ಸಂಬಂಧಪಟ್ಟ ಪ್ರಾಪಂಚಿಕ ವಿಷಯ, ಹಾಗೂ ಕೇವಲ ಪ್ರಾಪಂಚಿಕ ಅರ್ಥವನ್ನೇ ಹೇಳುವಂತೆ ಕಾಣುತ್ತದೆ-ಕೆಂಪು ಕನ್ನಡಕ ಧರಿಸಿದವನಿಗೆ ಪ್ರಪಂಚವೆಲ್ಲಾ ಕೆಂಪಾಗಿ ಕಾಣುವಂತೆ. ಉದಾಹರಣೆಗೆ: ಸಂತಾನ ವೃದ್ಧಿ, ಹಟ್ಟಿ ತುಂಬಾ ಹಸುಗಳು, ಕೈತುಂಬಾ ದುಡ್ಡು, ಮನೆತುಂಬಾ ಮಕ್ಕಳು, ರಾಜಸೂಯ, ಅಶ್ವಮೇಧ, ಪುರುಷಮೇಧ ಇತ್ಯಾದಿ. ಇವು ವೇದದಲ್ಲಿ ಮೇಲ್ನೋಟಕ್ಕೆ ಕಾಣುವವು. ಇವೆಲ್ಲವೂ ತೀರಾ ಪ್ರಾಪಂಚಿಕ ವಿಷಯಗಳು. ಇದರಿಂದಾಗಿ ವೇದ ನಮ್ಮನ್ನು ಅಧ್ಯಾತ್ಮದ ಆಳಕ್ಕೆ ಕೊಂಡೊಯ್ಯುವುದಿಲ್ಲ ಎನ್ನುವಂತೆ ಭಾಸವಾಗುತ್ತದೆ. ಆದರೆ ನಾವು ವೇದವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ಪ್ರಾಪಂಚಿಕ ಪ್ರಭಾವವನ್ನು ಧಾಟಿ ನಿಲ್ಲಬೇಕು. ಪ್ರಾಪಂಚಿಕ ಪ್ರಭಾವ ಕೆಂಪು ಕನ್ನಡಕದಂತೆ. ಅದರ ಪ್ರಭಾವದಲ್ಲಿ ವೇದವನ್ನು ಕಂಡರೆ ನಮಗೆ ಕಾಣುವುದು ಕೇವಲ ಪ್ರಾಪಂಚಿಕ ವಿಷಯ ಮಾತ್ರ. ಅದಕ್ಕಾಗಿ ನಾವು ತ್ರೈಗುಣ್ಯವರ್ಜಿತರಾಗಬೇಕು. ಈ ತ್ರೈಗುಣ್ಯದ ಪ್ರಭಾವವನ್ನು ಧಾಟಿ ನಮ್ಮ ನಿಜವಾದ ಸ್ವಭಾವ ಏನು ಎನ್ನುವುದನ್ನು ಗುರುತಿಸಿಕೊಂಡಾಗ ಶುದ್ಧ ಚಿಂತನೆ ಸಾಧ್ಯ. ತ್ರಿಗುಣದ ಬೇಲಿಯನ್ನು ದಾಟದೇ ಸತ್ಯ ತಿಳಿಯುವುದಿಲ್ಲ. ತ್ರಿಗುಣದ ಪ್ರಭಾವದಿಂದ ಪೂರ್ಣ ಆಚೆಗೆ ನಿಲ್ಲುವುದು ಅಸಾಧ್ಯ. ಆದರೆ ಈ ವಿಷಯ ಗೊತ್ತಿದ್ದು ಅದರ ಎಚ್ಚರ ಇದ್ದರೆ ನಾವು ಸಾಧನೆ ಮಾಡಲು ಸಾಧ್ಯ. ನಾವು ಎಷ್ಟು ಅಪವಿತ್ರರಾಗಿರಲೀ, ಬಾಯಿಯಲ್ಲಿ ಭಗವಂತನ ನಾಮ ಸ್ಮರಣೆ, ನಮ್ಮೊಳಗೆ ಭಗವಂತನಿದ್ದಾನೆ ಎನ್ನುವ ಎಚ್ಚರ ನಮ್ಮನ್ನು ಶುದ್ಧವಾಗಿಸುತ್ತದೆ.
ಧ್ಯಾನ ಮಾಡುವಾಗ ನಮ್ಮ ಮನಸ್ಸು ಹೊರ ಪ್ರಪಂಚದತ್ತ ಸುಳಿಯದಂತೆ ನೋಡಿಕೊಳ್ಳಬೇಕು. ಆತ್ಮಜ್ಞಾನವಿಲ್ಲದೆ ಹೋಮ ಹವನ ಮಾಡಿ ಉಪಯೋಗವಿಲ್ಲ. ನಮಗೆ ಆಶ್ರಯವಾಗಿರುವ ಆತ್ಮತತ್ವ ಭಗವಂತನ ಅರಿವಿನಿಂದ-ನಿಸ್ವಾರ್ಥವಾಗಿ ಸಾಧನೆ ಮಾಡಬೇಕು. ಎಂದೂ ಕಪಟ ವಂಚನೆ ಇಲ್ಲದ ಧರ್ಮವನ್ನು ಆಚರಿಸಬೇಕು. ನಮ್ಮ ಮನಸ್ಸನ್ನು ಶುದ್ಧ ಭಾವ ಚಿಂತನೆಗೆ ಅಣಿಗೊಳಿಸಬೇಕು. ನಮ್ಮ ಸ್ವಾರ್ಥದತ್ತ ನೋಡದೇ, ತ್ರಿಗುಣಗಳನ್ನು ಧಾಟಿ ನಿಂತರೆ ಮಾತ್ರ ನಮಗೆ ವೇದದ ನಿಜ ಸಂದೇಶ ತಿಳಿಯುತ್ತದೆ. ಈ ಸ್ಥಿತಿಯಲ್ಲಿ ವೇದ ಓದಿದರೆ ಅದು ಕೇವಲ ಲೌಕಿಕ ವಿಷಯವಲ್ಲ ಎನ್ನುವುದು ಅರ್ಥವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಕರ್ಮವನ್ನು, ಪೂಜೆ ಪುನಸ್ಕಾರವನ್ನು, ನಿಸ್ವಾರ್ಥವಾಗಿ ಭಗವಂತನ ಆರಾಧನೆ ಎಂದು ಮಾಡಬೇಕು. ನಮಗೇನು ಬೇಕು ಅನ್ನುವುದು ನಮಗೆ ಗೊತ್ತಿಲ್ಲ; ನಮಗೆ ಅಗತ್ಯವಾದದ್ದನ್ನು ಭಗವಂತ ಕೊಟ್ಟೇ ಕೊಡುತ್ತಾನೆ; ಎಂದು ನಮ್ಮ ಭವಿಷ್ಯದ ಚಿಂತೆಯನ್ನು ಭಗವಂತನಿಗೊಪ್ಪಿಸಿ ಮುನ್ನೆಡೆದರೆ ಜ್ಞಾನ ಸಿದ್ಧಿಯಾಗುತ್ತದೆ.
ಇಲ್ಲದ್ದನ್ನು ಪಡೆಯುವುದು ಯೋಗ, ಪಡೆದದ್ದನ್ನು ಉಳಿಸಿಕೊಳ್ಳುವುದು ಕ್ಷೇಮ. ಲೌಕಿಕವಾದ ಯೋಗ ಕ್ಷೇಮದಲ್ಲೇ ನಮ್ಮ ಇಡೀ ಜೀವನ ಕಳೆದು ಹೋಗುತ್ತದೆ. ಇದನ್ನು ಬಿಟ್ಟು ಭಗವಂತ ನಮಗೆ ಏನು ಕೊಟ್ಟಿದ್ದಾನೋ ಅದರಲ್ಲಿ ಸಂತೋಷವಾಗಿರಲು ಕಲಿಯಬೇಕು. 'ನಿರ್ಯೋಗಕ್ಷೇಮದ' ಸ್ಥಿತಿಯಲ್ಲಿ ಮಾತ್ರ ಸತ್ಯದ ಸಾಕ್ಷಾತ್ಕಾರವಾಗುತ್ತದೆ. ನಮ್ಮ ಯೋಗಕ್ಷೇಮದ ಹೊಣೆ ಆ ಭಗವಂತನದ್ದು. ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಎಂದೆಂದೂ ನಮ್ಮನ್ನು ರಕ್ಷಿಸುತ್ತಾನೆ ಎನ್ನುವ ಭರವಸೆಯಿಂದ, ಭಗವಂತನ ಚಿಂತನೆಗೆ ತೊಡಗಬೇಕು. ಇದು ಅಧ್ಯಾತ್ಮ ಸಾಧನೆಗೆ ಬೇಕಾದ ಮಾನಸಿಕ ತಯಾರಿ. ಇಂತಹ ಮನಃಸ್ಥಿತಿಯಲ್ಲಿ ಯಾವ ಗ್ರಂಥ ಓದಿದರೂ ಅದು ಭಗವಂತನ ಸ್ತುತಿಯಾಗುತ್ತದೆ. ಈ ಮನಃಸ್ಥಿತಿ ತಲುಪದೇ ವೇದಾಂತ ನಮಗೆ ಅರ್ಥವಾಗುವುದಿಲ್ಲ.
ಅಧ್ಯಾತ್ಮ ಮಾರ್ಗದಲ್ಲಿ ಸಾಗುವ ವ್ಯಕ್ತಿಯ ಸಾಧನೆ ಏನಿರಬೇಕು, ಅಂತರಂಗದ ಅನುಷ್ಠಾನ ಹೇಗಿರಬೇಕು, ಎನ್ನುವುದನ್ನು ಸ್ಪಷ್ಟಪಡಿಸಿದ ಕೃಷ್ಣನ ಮಾತಿನಿಂದ ನಮಗೆ ಒಂದು ಪ್ರಶ್ನೆ ಮೂಡಬಹುದು. ಕೃಷ್ಣ ಕರ್ಮ ಮತ್ತು ಜ್ಞಾನಗಳಲ್ಲಿ- ಜ್ಞಾನಕ್ಕೆ ಒತ್ತುಕೊಟ್ಟು ಸಾಗಬೇಕು, ನಮ್ಮ ಯಾವುದೇ ಕ್ರಿಯೆಯ ಅನುಸಂಧಾನ ಜ್ಞಾನದ ಕಡೆಗೆ ಪೂರಕವಾಗಿರಬೇಕು ಎನ್ನುತ್ತಾನೆ. “ಏಕೆ ಜ್ಞಾನ ಸಾಧನೆಗೆ ಇಷ್ಟೊಂದು ಮಹತ್ವ? ಕರ್ಮಯೋಗದಿಂದ ಸ್ವರ್ಗವನ್ನು ಪಡೆಯಬಹುದಲ್ಲ? ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಕೃಷ್ಣ ಇಲ್ಲಿ ಉತ್ತರಿಸುತ್ತಾನೆ. ಹಿಂದೆ ವೇದವನ್ನು ಜ್ಞಾನಕಾಂಡ, ಕರ್ಮಕಾಂಡ ಮತ್ತು ಉಪಾಸನಕಾಂಡ ಎಂದು ಮೂರು ವಿಭಾಗ ಮಾಡಿದ ಪರಂಪರೆ ಇತ್ತು. ಆದರೆ ಕೃಷ್ಣ ಹೇಳುತ್ತಾನೆ, ವೇದಕ್ಕೆ ಇರುವುದು ಒಂದೇ ಮುಖ ಎಂದು. ವೇದದಲ್ಲಿ ಹೇಳುವ ಕರ್ಮ, ಉಪಾಸನೆ, ಎಲ್ಲವುದರ ಹಿಂದೆ ಜ್ಞಾನವಡಗಿದೆ. ಎಲ್ಲವೂ ಜ್ಞಾನಕ್ಕೋಸ್ಕರ. ಆದ್ದರಿಂದ ಇಡೀ ವೇದವೇ ಜ್ಞಾನಕಾಂಡ ಎಂದು ಮುಂದಿನ ಶ್ಲೋಕದಲ್ಲಿ ಕೃಷ್ಣ ಒತ್ತಿ ಹೇಳುತ್ತಾನೆ.
ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ ।
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ॥೪೬॥
ಯಾವಾನ್ ಅರ್ಥಃ ಉದಪಾನೇ ಸರ್ವತಃ ಸಂಪ್ಲುತ ಉದಕೇ |
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ -- ಬಾವಿಯಿಂದ ಏನೇನು ಉಪಯೋಗವಿದೆಯೋ ಅದೆಲ್ಲವೂ ತುಂಬಿ ಹರಿಯುವ ನೀರ ನೆಲೆಯಲ್ಲಿ ಒಳಗೊಂಡಿದೆ. ಎಲ್ಲಾ ವೇದಗಳಲ್ಲಿ ಏನು ಫಲವೋ ಅದು ಬ್ರಹ್ಮವನ್ನು ಬಲ್ಲ ವಿಜ್ಞಾನಿಯ ಫಲದಲ್ಲಿ ಒಳಗೊಂಡಿದೆ.[ಪ್ರಕೃತಿಯೇ ನೀರಂತೆ ಎಲ್ಲೆಡೆ ತುಂಬಿ ಹರಿಯುವ ಪ್ರಳಯದಲ್ಲಿ ಕೂಡಾ ತುಂಬಿದ ಕೊಡವಾಗಿ, ಇನ್ನೊಬ್ಬರ ಕಾಪಿಗೊಳಪಡದೇ, ಕಾಲಾದಿಗಳನ್ನು ನಿಯಮಿಸುವ ಭಗವಂತನಿಂದ ಎನಿತು ಲಭ್ಯವೋ -ಅದನ್ನು ಎಲ್ಲಾ ವೇದಗಳನ್ನು ಬಲ್ಲ ಹಿರಿಯ ಜ್ಞಾನಿ ಮಾತ್ರ ಸುಲಭವಾಗಿ ಅರಿಯಬಲ್ಲ]
ಈ ಶ್ಲೋಕ ಒಗಟಿನಂತಿದೆ. ನೇರವಾಗಿ ನೋಡಿದರೆ ಅರ್ಥ ತಿಳಿಯದ ಶ್ಲೋಕವಿದು.ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಶ್ಲೋಕದಲ್ಲಿ ಮುಳುಗಬೇಕು. ಆಗ ಆಳದಲ್ಲಿನ ಮುತ್ತು ರತ್ನಗಳು ನಮಗೆ ಸಿಗುತ್ತವೆ. ನಾವು ನಮ್ಮ ಅಹಂಕಾರವನ್ನು ಸಂಪೂರ್ಣ ತೊರೆದು ಶರಣಾಗತಿಯಿಂದ(Total Submission) ನೋಡಿದಾಗ ಅದು ತನ್ನನ್ನು ತೆರೆದುಕೊಳ್ಳುತ್ತದೆ. ಈ ಶ್ಲೋಕವನ್ನು ಸ್ವಲ್ಪ ಬಿಡಿಸಿ ಹೀಗೆ ಹೇಳಬಹುದು:
ಯಾವಾನ್ ಅರ್ಥ ಉದಪಾನೇ ಯಾವಾನ್ ಅರ್ಥ ಸರ್ವತಃ ಸಂಪ್ಲುತೋದಕೇ
ತಾವಾನ್ ಸರ್ವೇಷು ವೇದೇಷು ತಾವಾನ್ ಬ್ರಾಹ್ಮಣಸ್ಯ ವಿಜಾನತಃ
ಒಂದು ಭಾವಿ ತೋಡಿ ಅದರಲ್ಲಿ ಬರುವ ನೀರಿನಿಂದ ಏನು ಪ್ರಯೋಜನವೋ, ಆ ಎಲ್ಲಾ ಪ್ರಯೋಜನಗಳ ಜೊತೆಗೆ ಇನ್ನೂ ಅನೇಕಾನೇಕ ಪ್ರಯೋಜನಗಳನ್ನು ತುಂಬಿ ಹರಿಯುವ ನೀರಿನ ನೆಲೆ ಕೊಡಬಲ್ಲದು. ಜ್ಞಾನವಿಲ್ಲದೆ ಕರ್ಮ ಕಾಂಡವನ್ನು ಮಾಡುವವನ ಸ್ಥಿತಿ ಮನೆಯಲ್ಲಿ ಕಷ್ಟಪಟ್ಟು ಭಾವಿ ತೋಡಿ ಅದರಿಂದ ನೀರು ಸೇದಿದಂತೆ. ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಂಡವನ ಸ್ಥಿತಿ ತುಂಬಿ ಹರಿಯುವ ನೀರಿನ ನೆಲೆಯ ದಡದಲ್ಲಿದ್ದಂತೆ. ಅಪರೋಕ್ಷ ಜ್ಞಾನಿ ಎಲ್ಲವುದರಲ್ಲೂ ಭಗವಂತನನ್ನು ಕಾಣುತ್ತಾನೆ. ಬ್ರಹ್ಮಜ್ಞಾನಿ ಸದಾ ನಿರ್ಮಲವಾಗಿ ತುಂಬಿ ಹರಿಯುವ ನೀರಿನ ನೆಲೆಯ ಪಕ್ಕ ನಿಂತವನಂತೆ. ಇಡೀ ವೇದವನ್ನು ಓದಿ ಕರ್ಮದಲ್ಲೇ ಕುಳಿತ ಕರ್ಮಕ ಬೆವರು ಸುರಿಸಿ ಭಾವಿಯಿಂದ ನೀರು ಸೇದುವವನಂತೆ.
ಈ ಶ್ಲೋಕದಲ್ಲಿ 'ಬ್ರಾಹ್ಮಣ' ಎನ್ನುವ ಪದ ಬಂದಿದೆ. ಇದನ್ನು 'ಜಾತಿ' ಎಂದು ಪರಿಗಣಿಸಿದರೆ ಈ ಶ್ಲೋಕದ ನಿಜ ಸಂದೇಶ ತಿಳಿಯುವುದಿಲ್ಲ. ವೇದ ಗ್ರಂಥಗಳಲ್ಲಿ ಎಲ್ಲೂ ಜಾತಿಯ ಬಗ್ಗೆ ಪ್ರಸ್ತಾಪವಿಲ್ಲ. ಬ್ರಾಹ್ಮಣ ಅಂದರೆ 'ಬ್ರಹ್ಮ ಅಣತೀತಿ'; ಅಂದರೆ ಬ್ರಹ್ಮ ತತ್ವವನ್ನು ಅರ್ಥ ಮಾಡಿಕೊಂಡವ ಎಂದರ್ಥ. 'ಬ್ರಹ್ಮ' ಎಂದರೆ ಎಲ್ಲಕ್ಕಿಂತ ದೊಡ್ಡದಾದದ್ದು. ಎಲ್ಲಕ್ಕಿಂತ ದೊಡ್ಡದು ವೇದ ಮತ್ತು ವೇದವೇದ್ಯನಾದ ಭಗವಂತ. ಆದ್ದರಿಂದ ವೇದವನ್ನು ಅರಿತವನು, ವೇದವೇದ್ಯ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನು ಬ್ರಾಹ್ಮಣ.
ಬ್ರಹ್ಮನನ್ನು ಅಪರೋಕ್ಷವಾಗಿ ತಿಳಿದ ಜ್ಞಾನಿಗೆ ತುಂಬಿ ಹರಿವ ನೀರಿನ ಫಲವಾದರೆ, ಕರ್ಮಕನಿಗೆ ಭಾವಿಯ ಫಲ. ಶಾಸ್ತ್ರದಿಂದ ವಿಶಿಷ್ಟವಾದ ಅರಿವನ್ನು ಪಡೆದ ವಿಜ್ಞಾನಿ ಮಾತ್ರ ಭಗವಂತನನ್ನು ಕಾಣಬಲ್ಲ. ಇಲ್ಲಿ ವಿಜ್ಞಾನಿ ಅಂದರೆ ಯಾವುದೇ ಒಂದು ವಸ್ತುವಿನ ಬಗ್ಗೆ ತಳಸ್ಪರ್ಶಿ ಜ್ಞಾನ ಉಳ್ಳವನು ಎಂದರ್ಥ.
ಈ ಶ್ಲೋಕದಲ್ಲಿ ಇನ್ನೊಂದು ವಿಷಯವಡಗಿದೆ. "ಸರ್ವತಃ ಸಂಪ್ಲುತೋದಕ" ಎಂದರೆ ನೀರು ತುಂಬಿದ ಸ್ಥಿತಿ. ಇಲ್ಲಿ ನೀರು ಎಂದರೆ ಪ್ರಳಯಜಲ. ಪ್ರಕೃತಿ ಸೂಕ್ಷ್ಮವಾದ ಪರಮಾಣುವಿನ ಸಮುದ್ರ ರೂಪದಲ್ಲಿರುವ ಕಾಲ-ಪ್ರಳಯ ಕಾಲ. ಇಂತಹ ಪ್ರಳಯ ಸಮುದ್ರದಲ್ಲಿ ಮಲಗಿರುವವ 'ಉದಪಾನ'. ಉತ್+ಅಪ+ಪಾನ-ಅಂದರೆ ಎಲ್ಲಕ್ಕಿಂತ ಉತ್ಕೃಷ್ಟವಾದ, ಸದಾ ಎಚ್ಚರದಿಂದಿರುವ(ಉತ್); ಎಲ್ಲರನ್ನು ಪಾಲಿಸುವ, ಹಾಗೂ ತನಗೆ ಹಿರಿದಾದ ಇನ್ನೊಬ್ಬ ಪಾಲಕನಿಲ್ಲದ ಸರ್ವೋತ್ತಮ(ಅಪ); ಎಲ್ಲರನ್ನೂ ನಿಯಂತ್ರಿಸುವ ಸರ್ವಚೇಷ್ಟಕ(ಅನ). ಈ ತತ್ವದ ಮೂಲಕ ಏನೇನು ಉಪಯೋಗವನ್ನು ಪಡೆಯಬಹುದೋ ಆ ಉಪಯೋಗವನ್ನು ಸಮಸ್ತ ವೇದದಲ್ಲಿ, ವೇದದ ಒಂದೊಂದು ಮಂತ್ರದಲ್ಲಿ, ಮಂತ್ರದ ಒಂದೊಂದು ವಾಕ್ಯದಲ್ಲಿ, ವಾಕ್ಯದ ಒಂದೊಂದು ಪದದಲ್ಲಿ, ಪದದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಾಣುವ ಬ್ರಹ್ಮಜ್ಞಾನಿ ಪಡೆಯುತ್ತಾನೆ.
ವೇದವನ್ನು ಕೇವಲ ಮೇಲ್ನೋಟದಲ್ಲಿ ಓದಿದರೆ ಅದರಿಂದ ಏನೂ ಉಪಯೋಗವಿಲ್ಲ. ವೇದದ ಸಮಗ್ರ ಮಂತ್ರದಲ್ಲಿ, ಮಂತ್ರದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಂಡು ಭಗವನ್ಮಯನಾದಾಗ, ಭಗವಂತನ ಸಮಸ್ತ ಅನುಗ್ರಹಕ್ಕೆ ಪಾತ್ರನಾಗಿ, ಸಮಗ್ರ ಉಪಯೋಗವನ್ನು ಪಡೆಯಬಹುದು.
“ಫಲ ಕಾಮನೆಯಿಂದ ಕರ್ಮಕಾಂಡ ಬೇಡ, ಸಮಗ್ರವೇದವನ್ನು ಭಗವಂತನ ಚಿಂತನೆಗೆ ಮೀಸಲಿಡಿ” ಎಂದು ಹೇಳಿದ ಕೃಷ್ಣನ ಮಾತಿನಿಂದ ನಮಗೆ ಸ್ವಲ್ಪ ಗೊಂದಲವಾಗಬಹುದು. ಏಕೆಂದರೆ ವೇದದಲ್ಲಿ ಪ್ರತಿಯೊಂದು ಕಡೆ ಫಲವನ್ನು ಹೇಳಿದ್ದಾರೆ. ಏಕೆ ಹೀಗೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಹಿಂದೆ ಹೇಳಿದಂತೆ ಅಧ್ಯಾತ್ಮದ ಪಠ್ಯಪುಸ್ತಕ ಸಾಧನೆಯ ಎಲ್ಲಾ ಹಂತದಲ್ಲೂ-ಚಿಕ್ಕವರಿಂದ ದೊಡ್ಡವರಿಗೆ ಎಲ್ಲರಿಗೂ ಒಂದೆ. ಇನ್ನೂ ಆರಂಭದ ಹಂತದಲ್ಲಿರುವವರಿಗೆ ಏನನ್ನೂ ಬಯಸದೇ ನಿರ್ಲಿಪ್ತರಾಗಿ ಅನುಸರಿಸಿ ಎಂದು ಹೇಳಿದರೆ ಅವರಿಗೆ ವೇದಾಂತದ ಬಗ್ಗೆ ಆಸಕ್ತಿಯೇ ಬಾರದಿರಬಹುದು. ಅದಕ್ಕಾಗಿ, ಮಕ್ಕಳಿಗೆ ಬೆಲ್ಲ ಕೊಟ್ಟು ಔಷಧ ಕುಡಿಸಿದಂತೆ ವೇದಗಳಲ್ಲಿ ಫಲವನ್ನು ಹೇಳಿದ್ದಾರೆ. ಇದು ವೇದಾಭ್ಯಾಸದ ಆರಂಭದ ಹಂತದಲ್ಲಿ ಉಪಯುಕ್ತ.
ಕರ್ಮ ಮಾಡುವಾಗ ನಮ್ಮ ಮನಃಸ್ಥಿತಿ ಹೇಗಿರಬೇಕು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರವಾಗಿ ಹೇಳಿದ್ದಾನೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ।
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋSಸ್ತ್ವಕರ್ಮಣಿ ॥೪೭॥
ಕರ್ಮಣಿ ಏವ ಅಧಿಕಾರಃ ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲ ಹೇತುಃ ಭೂಃ ಮಾ ತೇ ಸಂಗಃ ಅಸ್ತು ಅಕರ್ಮಣಿ --ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು, ಫಲಗಳಲ್ಲಿ ಎಂದೂ ಇಲ್ಲ. ಫಲವನ್ನೇ ನಂಬಿ ಕರ್ಮ ಮಾಡಬೇಡ (ಕರ್ಮಕ್ಕೆ ಫಲ ನೀಡುವ ಶಕ್ತಿ ತಾನೆಂದು ಭ್ರಮಿಸಬೇಡ). ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.
ಈ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವವರೇ ಹೆಚ್ಚು. ಕರ್ಮ ಮಾಡಬೇಕು ಆದರೆ ಫಲವನ್ನು ಬಯಸಬಾರದು ಅಂದರೆ ಏನು? ಇದು ಮನುಷ್ಯನನ್ನು ನಿಷ್ಕ್ರಿಯಗೊಳಿಸುತ್ತದೆ, ಎಂಬಿತ್ಯಾದಿ ವಾದಗಳನ್ನು ಈ ಶ್ಲೋಕದ ಮೇಲೆ ಅನೇಕ ಮಂದಿ ಮಂಡಿಸಿದ್ದಾರೆ. ಆದರೆ ಅವರ್ಯಾರೂ ಶ್ಲೋಕದ ನಿಜವಾದ ಅರ್ಥವನ್ನು ತಿಳಿಯಲು ಪ್ರಯತ್ನಿಸಿಲ್ಲ. ಇಲ್ಲಿ ಫಲವನ್ನು ಬಯಸಬೇಡ ಎಂದು ಎಲ್ಲಿಯೂ ಹೇಳಿಲ್ಲ. ಅದಕ್ಕೆ ಬದಲಾಗಿ ಫಲದಲ್ಲಿ ಅಧಿಕಾರ ಸಾಧಿಸಬೇಡ ಎಂದಿದ್ದಾನೆ ಕೃಷ್ಣ.
ಕರ್ಮ ನಿನ್ನ ಕೈಯಲ್ಲಿದೆ- ಆದರೆ ಕರ್ಮ ಫಲ ಭಗವಂತನ ಕೈಯಲ್ಲಿದೆ. ನೀನು ನಾನೇ ಕರ್ಮ ಫಲದ ಹೇತು ಎಂದು ತಿಳಿಯಬೇಡ. ಕರ್ಮಫಲದ ಹೇತು ಭಗವಂತ ಎನ್ನುವ ಎಚ್ಚರ ನಿನಗಿರಲಿ ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಬಯಕೆಯನ್ನು ನಿರಾಕರಣೆ ಮಾಡಿಲ್ಲ, ಆದರೆ 'ಹೀಗೇ ಆಗಬೇಕು' ಇಲ್ಲದಿದ್ದರೆ ನಾನು ಈ ಕರ್ಮವನ್ನು ಮಾಡಲಾರೆ ಎನ್ನುವ ಅಭಿಪ್ರಾಯ ಸರಿಯಲ್ಲ ಎಂದಿದ್ದಾನೆ. ಬಯಸುವ ಅಧಿಕಾರ ನಮಗಿದೆ ಆದರೆ ಫಲವನ್ನು ಕೊಡುವವ ಭಗವಂತ ಎನ್ನುವ ಪರಿಜ್ಞಾನ ಬೇಕು. ಎಷ್ಟೋ ಸಲ ನಾವು ಅರಿವಿಲ್ಲದೇ ತಪ್ಪನ್ನು ಬಯಸುತ್ತೇವೆ. ಆಗ ಭಗವಂತ ಅದನ್ನು ಕೊಡಲಾರ. ಏಕೆಂದರೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನ ನಮಗಿಲ್ಲ. ಈ ಎಚ್ಚರ ಇದ್ದರೆ ನಮಗೆ ಫಲ ಸಿಗದಿದ್ದಾಗ ದುಃಖವಾಗುವುದಿಲ್ಲ. ನಾವು ಮಾಡುವ ಕರ್ಮವನ್ನು ನಿಷ್ಠೆಯಿಂದ ಭಗವದರ್ಪಣೆಯಾಗಿ ಮಾಡಿ, ಅದರಿಂದ ಏನು ಫಲ ಬಂತೋ ಅದನ್ನು ಹಾಗೇ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡರೆ ದುಃಖವಿರುವುದಿಲ್ಲ.
ಯಾವ ಕಾಲಕ್ಕೂ ನಿಷ್ಕ್ರಿಯನಾಗಿ ಕುಳಿತುಕೊಳ್ಳದೇ ಸದಾ ಕರ್ತವ್ಯಶೀಲನಾಗು ಎನ್ನುತ್ತಾನೆ ಕೃಷ್ಣ. ‘ಹೀಗೇ ಆಗಬೇಕು’, ‘ಇಂತಹ ಫಲವೇ ಬರಬೇಕು’ ಎನ್ನುವ ವಿಚಾರವನ್ನು ಬಿಟ್ಟು, ಕರ್ತವ್ಯ ನಿರ್ವಹಿಸಿದಾಗ ಯಾವ ದುಃಖವೂ ಇಲ್ಲ. ಅದನ್ನು ಬಿಟ್ಟು ಫಲದಲ್ಲಿ ಅಧಿಕಾರ ಸಾಧಿಸಿದರೆ ಆ ಫಲ ದಕ್ಕದೇ ಇದ್ದಾಗ ಆಗುವ ಆಘಾತ, ವ್ಯಾಕುಲತೆ(Mental depression) ಭಯಾನಕ. ಸೋಲನ್ನಾಗಲೀ ಗೆಲುವನ್ನಾಗಲೀ ಸಮನಾಗಿ ಕಾಣುವ ಮನಃಸ್ಥಿತಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಹಿಂದೆ ಹೇಳಿದಂತೆ ನಾವು ಸೋಲಿನಲ್ಲಿ ಕಲಿತಷ್ಟು ಗೆಲುವಿನಲ್ಲಿ ಕಲಿಯಲಾಗದು. ಭಗವಂತ ನಮಗೆ ಫಲವನ್ನು ಕೊಡುವಾಗ ನಮ್ಮ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೊಡುತ್ತಾನೆಯೇ ಹೊರತು , ನಾವು ಅಂದುಕೊಂಡಂತೆ ಅಲ್ಲ. ಬಂದದ್ದನ್ನು ಬಂದಂತೆ ಸ್ವೀಕರಿಸಿ, ಎಂದೂ ನಿಷ್ಕ್ರಿಯನಾಗದೇ, ಫಲದಲ್ಲಿ ಅಧಿಕಾರವನ್ನು ಸಾಧಿಸದೇ ಮುನ್ನಡೆಯಬೇಕು ಎನ್ನುವುದು ಕೃಷ್ಣನ ಕರ್ಮಸಿದ್ಧಾಂತ. ಇಲ್ಲಿ ಅರ್ಜುನ ತಾನು ಧರ್ಮ ರಕ್ಷಣೆ ಮಾಡಲು, ಧರ್ಮದ ವಿಜಯಕ್ಕಾಗಿ ಯುದ್ಧ ಮಾಡುತ್ತೇನೆ ಅಂದುಕೊಳ್ಳುವುದು ತಪ್ಪಲ್ಲ. ಈ ಹಂತದಲ್ಲಿ ಸೋಲು-ಗೆಲುವಿನ ಬಗ್ಗೆ ಯೋಚಿಸದೇ, ಅದನ್ನು ಪೂರ್ಣ ಭಗವಂತನಲ್ಲಿ ಅರ್ಪಿಸಿ, ತನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿಷ್ಟೆಯಿಂದ ತನ್ನ ಶಕ್ತಿ ಮೀರಿ ನಿಭಾಯಿಸುವುದು ಆತನ ಧರ್ಮ. ಹೀಗೆ ಮಾಡಿದಾಗ ಯುದ್ಧದ ಪ್ರತಿಯೊಂದು ಹಂತದಲ್ಲಿ ಬರುವ ಫಲಿತಾಂಶ ಆತನನ್ನು ಕಂಗೆಡಿಸಲಾರವು. ಏನೇ ಫಲಿತಾಂಶ ಬಂದರೂ ಅದು ಭಗವಂತನ ಪ್ರಸಾದ ಎಂದು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಅಷ್ಟೆ.
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ ।
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ ॥೪೮॥
ಯೋಗಸ್ಥಃ ಕುರು ಕರ್ಮಾಣಿ ಸಂಗಮ್ ತ್ಯಕ್ತ್ವಾ ಧನಂಜಯ |
ಸಿದ್ಧಿ ಅಸಿದ್ಧ್ಯೋಃ ಸಮಃ ಭೂತ್ವಾ ಸಮತ್ವಂ ಯೋಗಃ ಉಚ್ಯತೇ - ಧನಂಜಯ, 'ಯೋಗ' ದಲ್ಲಿ ನೆಲೆಗೊಂಡು ಕರ್ಮಗಳನ್ನು ಮಾಡು-ಫಲದ ನಂಟನ್ನು ತೊರೆದು, ಕೆಲಸ ಕೈಗೂಡಿದರೂ, ಕೆಟ್ಟರೂ-ಸಮಭಾವದಿಂದಿರು. ಇಂತಹ ಸಮಭಾವಕ್ಕೆ 'ಯೋಗ'ವೆಂದು ಹೆಸರು.
ಎಂತಹ ಕರ್ಮ ಮಾಡುವುದಾದರೂ ಸಹ ಸುಮ್ಮನೆ ಮಾಡುವುದಲ್ಲ. ಅದರ ಹಿಂದೆ ಒಂದು ಯೋಗವಿರಬೇಕು. ಭಗವಂತ ಫಲವನ್ನು ಕೊಡತಕ್ಕಂತಹವ, ನನ್ನಿಂದ ಕರ್ಮವನ್ನು ಮಾಡಿಸತಕ್ಕಂತಹವನೂ ಅವನೇ. ಏನು ಫಲ, ಎಷ್ಟು ಫಲ, ಯಾವಾಗ ಫಲ, ಎಲ್ಲವೂ ಅವನಿಗೇ ಸೇರಿದ್ದು. ಸಿಕ್ಕಿದರೂ ಸಂತೋಷ, ಸಿಗದಿದ್ದರೂ ಸಂತೋಷ. ಇದು ಭೌತಿಕ ಸಮತೋಲನ. ಇಂತಹ ಸಮತೋಲನದಲ್ಲಿ ಕರ್ತವ್ಯ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು. ನಮ್ಮ ಬದುಕಿನ ಸಮಸ್ತ ಕರ್ಮದಲ್ಲಿ ಈ ಅನುಸಂಧಾನವಿದ್ದಾಗ ಅದು ಭಗವಂತನ ಪೂಜೆಯಾಗುತ್ತದೆ. ಇದೇ ಕರ್ಮಯೋಗ.
ಸಿದ್ಧಿ-ಅಸಿದ್ಧಿಯನ್ನು ಸಮಭಾವದಿಂದ ಕಾಣುವುದು ಮನಸ್ಸಿನ ಯೋಗ. ಇದೊಂದು ಮಾನಸಿಕ ಸ್ಥಿತಿ. ಈ ರೀತಿಯ ಯೋಗ ಭಾವನೆಯಿಂದ ಕರ್ಮ ಮಾಡಿದರೆ-ಫಲ ಬಂದಾಗ ಹೆಗ್ಗಳಿಕೆ ಇರುವುದಿಲ್ಲ, ಬಾರದೇ ಇದ್ದಾಗ ದುಃಖವಿರುವುದಿಲ್ಲ. ಹೀಗೆ ಸಿದ್ಧಿ-ಅಸಿದ್ಧಿಗಳ ಸಮತ್ವದಿಂದ ಮಾಡುವ ಪ್ರತಿಯೊಂದು ಕರ್ತವ್ಯವೂ ಕೂಡಾ ಭಗವಂತನ ಪೂಜೆಯಾಗುತ್ತದೆ. ಈ ಅನುಸಂಧಾನವಿಲ್ಲದೆ ಮಾಡುವ ಮಹಾಯಜ್ಞ ಕೂಡಾ ಪೂಜೆ ಆಗಲಾರದು. ಭಗವಂತ ನನ್ನಿಂದ ಈ ಕೆಲಸವನ್ನು ಮಾಡಿಸಿದ. ಇದು ಭಗವಂತನ ಪೂಜಾರೂಪವಾಗಿ ಅರ್ಪಿತವಾಗಲಿ ಎನ್ನುವ ಅನುಸಂಧಾನವಿದ್ದಾಗ ಮಾತ್ರ ಕರ್ಮ-ಯೋಗವಾಗುತ್ತದೆ. ನಮ್ಮ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದೇ ಯೋಗ. ಈ ಅನುಸಂಧಾನಕ್ಕೆ ಪೂರಕವಾದ ಮತ್ತು ಅನುಸಂಧಾನಪೂರ್ವಕವಾದ ಎಲ್ಲಾ ಕರ್ಮವೂ ಕರ್ಮಯೋಗ.
ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ ಧನಂಜಯ ।
ಬುದ್ಧೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ॥೪೯॥
ದೂರೇಣ ಹಿ ಅವರಮ್ ಕರ್ಮ ಬುದ್ಧಿಯೋಗಾತ್ ಧನಂಜಯ |
ಬುದ್ಧೌ ಶರಣಮ್ ಅನ್ವಿಚ್ಛ ಕೃಪಣಾಃ ಫಲಹೇತವಃ -- ಧನಂಜಯಾ, ಅರಿವಿನ ದಾರಿಗಿಂತ ಕರ್ಮದ ದಾರಿ ತುಂಬಾ ಕೀಳು. ಅದರಿಂದ ಅರಿವಿನಲ್ಲಿ ನೆಲೆನಿಲ್ಲು.[ಅರಿವು ಬಂದ ಮೇಲೂ ಹರಿಗೆ ಶರಣಾಗು]. ಫಲವನ್ನೇ ನಂಬಿ ನಿಂತವರು ಮರುಕಪಡಬೇಕಾದವರು.
ಪ್ರಪಂಚದಲ್ಲಿ ಕೆಲವರು ಕರ್ಮಯೋಗಿಗಳು, ಇನ್ನು ಕೆಲವರು ಜ್ಞಾನಯೋಗಿಗಳು. ಕರ್ಮಯೋಗಿಗಳಿಗೆ ಜ್ಞಾನವಿಲ್ಲ, ಹಾಗೂ ಜ್ಞಾನ ಬಂದ ಮೇಲೆ ಕರ್ಮ ಬೇಕಿಲ್ಲ ಎನ್ನುವ ಚಿಂತನೆ ಕೆಲವರದು. ಕೆಲವರು ಕರ್ಮ ಮೇಲೆನ್ನುತ್ತಾರೆ ಮತ್ತೆ ಕೆಲವರು ಜ್ಞಾನ ಮೇಲು ಎನ್ನುತ್ತಾರೆ. ಇನ್ನು ಕೆಲವರು ಕರ್ಮ ಮತ್ತು ಜ್ಞಾನ- ‘ಎರಡು ಚಕ್ರಗಳಂತೆ’ ಸಮಾನ ಎಂದು ವಾದ ಮಾಡುತ್ತಾರೆ. ಇದರಿಂದ ಅನೇಕ ದ್ವಂದ್ವಗಳು ಹುಟ್ಟಿಕೊಳ್ಳುತ್ತವೆ. ಆದರೆ ಕೃಷ್ಣ ಇಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ: ಜ್ಞಾನದ ಮುಂದೆ ಕರ್ಮ ಬಹಳ ದೂರ ಎಂದು. ಕರ್ಮ ಮಾಡುವಾಗ ಜ್ಞಾನ ಅತಿಮುಖ್ಯ. ಜ್ಞಾನಕ್ಕೋಸ್ಕರ ಕರ್ಮವಿರುವುದೇ ಹೊರತು ಅದು ಜ್ಞಾನಕ್ಕೆ ಸಮಾನ ಅಲ್ಲ. ಅದಕ್ಕಾಗಿ ಜ್ಞಾನಕ್ಕೆ ಶರಣಾಗಿ ಜ್ಞಾನಕ್ಕೆ ಪೂರಕವಾದ ಕರ್ಮ ಮಾಡಬೇಕು. ಜ್ಞಾನವಿಲ್ಲದೆ, ಫಲಾಪೇಕ್ಷೆಯಿಂದ ಕರ್ಮ ಮಾಡುವರ ಸ್ಥಿತಿ ಶೋಚನೀಯ. ಇವರು ಕರ್ಮದ ಮರ್ಮವನ್ನು ತಿಳಿಯದೇ ಕರ್ಮ ಮಾಡಿ ಒದ್ದಾಡುತ್ತಿರುತ್ತಾರೆ.
ಜ್ಞಾನದ ಮಾರ್ಗದಲ್ಲಿ ಎತ್ತರಕ್ಕೇರಲು ನಾವು ಕರ್ಮವನ್ನು ಮಾಡಬೇಕು. ಇದರಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಪಡದೆ, ಭಗವಂತನೇ ನನ್ನ ರಕ್ಷಕ ಹಾಗೂ ಆತನೇ ನನ್ನ ನೆಲೆ ಎಂದು ತಿಳಿದು ಆತನಲ್ಲಿ ಶರಣಾಗಬೇಕು. ದೇವರಿಗೆ ನಾನು ನನ್ನನ್ನು ಅರ್ಪಿಸಿಕೊಂಡಿದ್ದೇನೆ, ಆತ ನನ್ನನ್ನು ರಕ್ಷಿಸಿಯೇ ರಕ್ಷಿಸುತ್ತಾನೆ ಎನ್ನುವ ಮನವರಿಕೆಯೇ (conviction) ಶರಣಾಗತಿ.
ನಮಗೆ ಏನಾದರೂ ಸಮಸ್ಯೆ ಬಂದಾಗ ಭಗವಂತನ ಹತ್ತಿರ ಪ್ರಾರ್ಥಿಸಿಕೊಳ್ಳಬೇಕೇ ಹೊರತು ಅನ್ಯರನ್ನಲ್ಲ. "ಓ ಭಗವಂತಾ, ನನ್ನನ್ನು ಏಕೆ ಈ ಸಮಸ್ಯೆಯಲ್ಲಿ ಸಿಲುಕಿಸಿದಿ? ಇದಕ್ಕೆ ಪರಿಹಾರವನ್ನು ತೋರಿಸು ತಂದೆ" ಎಂದು ಮನಃಪೂರ್ವಕವಾಗಿ ಕೇಳಿಕೊಂಡರೆ ಖಂಡಿತ ಆತ ನಮ್ಮನ್ನು ಸಂಕಟದಿಂದ ಪಾರು ಮಾಡುತ್ತಾನೆ. ಆದರೆ ಇಲ್ಲಿ ಕೂಡಾ ಫಲದ ಅಧಿಕಾರ ಸಾಧಿಸದೆ, ಕೇವಲ ಭಗವಂತನನ್ನು ನಂಬಿ, ನಮ್ಮ ಎಲ್ಲಾ ಸಮಸ್ಯೆಗಳ ನಡುವೆಯೂ ನಿಶ್ಚಿಂತೆಯಿಂದ ಬದುಕಲು ಕಲಿಯಬೇಕು.
ಮುಂದಿನ ಶ್ಲೋಕವನ್ನು ನೋಡುವ ಮೊದಲು ಇಲ್ಲಿ ಬಂದಿರುವ ಧನಂಜಯ ಎನ್ನುವ ನಾಮವಿಶೇಷಣದ ಅರ್ಥವನ್ನು ತಿಳಿಯೋಣ. ಈ ಸಂಬೋಧನೆಗೆ ಎರಡು ಅರ್ಥವಿದೆ. ಒಂದು ಲೌಕಿಕ ಹಾಗೂ ಇನ್ನೊಂದು ಆಧ್ಯಾತ್ಮಿಕ ಅರ್ಥ. ಲೌಕಿಕವಾಗಿ ನೋಡಿದರೆ ಅರ್ಜುನ ಅನೇಕ ಕಡೆ ಯುದ್ಧ ಮಾಡಿ, ದೇಶದ ಸೀಮೆಯನ್ನು ವಿಸ್ತರಿಸಿ, ರಾಜಕೋಶದ ಸಂಪತ್ತನ್ನು ವೃದ್ಧಿ ಮಾಡಿದವ-ಆದ್ದರಿಂದ ಆತ ಧನಂಜಯ. ಆಧ್ಯಾತ್ಮಿಕವಾಗಿ ನೋಡಿದರೆ ಈ ನಾಮಕ್ಕೆ ವಿಶೇಷ ಅರ್ಥವಿದೆ. ಭಗವಂತನ ಆರಾಧನೆ, ಅಧ್ಯಾತ್ಮದ ಅರಿವು-ನಿಜವಾದ ಧನ. ಭಗವಂತನ ಅರಿವು, ಜ್ಞಾನ ಎಲ್ಲಕ್ಕಿಂತ ದೊಡ್ಡ ಸಂಪತ್ತು. ಅರ್ಜುನ ಆ ಕಾಲದ ಅಪರೋಕ್ಷ ಜ್ಞಾನಿ. ಆತ ಸ್ವಯಂ ಇಂದ್ರ. ಆತ ಜ್ಞಾನದ ಸಂಪತ್ತಿನ ಪರಾಕಾಷ್ಠೆ. 'ಇಂತಹ ಜ್ಞಾನಿಯಾದ ನೀನು ಭಗವಂತನಿಗೆ ಶರಣಾಗಿ, ಬುದ್ಧಿಪೂರ್ವಕವಾಗಿ ಕರ್ಮಮಾಡು' ಎನ್ನುವ ಅರ್ಥದಲ್ಲಿ ಕೃಷ್ಣ ಈ ಸಂಬೋಧನೆ ಮಾಡಿದ್ದಾನೆ.
ಬುದ್ಧಿಯುಕ್ತೋ ಜಹಾತೀಹ ಉಭೇ ಸುಕೃತದುಷ್ಕೃತೇ ।
ತಸ್ಮಾದ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್॥೫೦॥
ಬುದ್ಧಿಯುಕ್ತಃ ಜಹಾತಿ ಇಹ ಉಭೇ ಸುಕೃತದುಷ್ಕೃತೇ |
ತಸ್ಮಾತ್ ಯೋಗಾಯ ಯುಜ್ಯಸ್ವ ಯೋಗಃ ಕರ್ಮಸು ಕೌಶಲಮ್- ಭಗವಂತನನ್ನರಿತವನು ಬೇಡವಾದ ಪುಣ್ಯಪಾಪಗಳೆರಡನ್ನೂ ಇಲ್ಲೇ ತೊರೆಯುತ್ತಾನೆ. ಆದ್ದರಿಂದ ಅರಿವಿನ 'ಯೋಗ'ಕ್ಕೆ ತೊಡಗು. 'ಯೋಗ'ವೆಂದರೆ ಇದೇ: ತಿಳಿದು ಮಾಡುವ ಜಾಣತನ.
ತಿಳುವಳಿಕೆಯಿಂದ ಕರ್ಮ ಮಾಡಿದರೆ ತನ್ನ ಎಲ್ಲಾ ಪಾಪಗಳನ್ನು ಹಾಗೂ ಬೇಡವಾದ ಪುಣ್ಯವನ್ನು ತೊರೆದು ಭಗವಂತನನ್ನು ಸೇರುತ್ತಾನೆ. ಇಲ್ಲಿ ಬೇಡವಾದ ಪುಣ್ಯ ಅಂದರೆ: ಉದಾಹರಣೆಗೆ ಒಬ್ಬ ಮಹಾತ್ಮ ತನ್ನ ಜ್ಞಾನ ಕರ್ಮಗಳಿಂದ ಮೋಕ್ಷವನ್ನು ಪಡೆಯುತ್ತಾನೆ. ಹೀಗೆ ಈ ಮಾರ್ಗದಲ್ಲಿರುವಾಗ ಆತ ಇತರ ಪುಣ್ಯವನ್ನೂ ಗಳಿಸುತ್ತಾನೆ. ಒಂದು ವೇಳೆ ಆತ ಚಕ್ರವರ್ತಿಯಾಗಿ ಮೆರೆಯುವ ಪುಣ್ಯವನ್ನು ಪಡೆದಿದ್ದರೆ ಅದು ಆತನಿಗೆ ಬೇಡವಾದ ಪುಣ್ಯ. ಏಕೆಂದರೆ ಮೋಕ್ಷದ ಮುಂದೆ ಈ ಪುಣ್ಯದ ಅವಶ್ಯಕತೆ ಆತನಿಗಿಲ್ಲ. ಆತ ಈ ಪುಣ್ಯವನ್ನು ಇಲ್ಲೇ ತೊರೆಯುತ್ತಾನೆ. ಇದನ್ನು ಇಲ್ಲಿ ಬೇಡವಾದ ಪುಣ್ಯ ಎಂದಿರುವುದು. ಯಾರು ಹೀಗೆ ಭಗವತ್ಪ್ರಜ್ಞೆಯಲ್ಲಿ ಬದುಕುತ್ತಾರೋ ಅವರು ಮಾಡಿದ ಕರ್ಮ ಅವರ ಪಾಪ ಪುಣ್ಯದ ಬಂಧನಕ್ಕೆ ಕಾರಣವಾಗುವುದಿಲ್ಲ. ಆದ್ದರಿಂದ ಜ್ಞಾನಯೋಗದಲ್ಲಿ ನಿಂತು ಆ ಅರಿವಿನಿಂದ ಕರ್ಮವನ್ನು ಮಾಡುವುದು ಜಾಣತನ.
ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣಃ ।
ಜನ್ಮಬಂಧವಿನಿರ್ಮುಕ್ತಾಃ ಪದಂ ಗಚ್ಛಂತ್ಯನಾಮಯಮ್ ॥೫೧॥
ಕರ್ಮಜಮ್ ಬುದ್ಧಿಯುಕ್ತಾಃ ಹಿ ಫಲಮ್ ತ್ಯಕ್ತ್ವಾ ಮನೀಷಿಣಃ |
ಜನ್ಮಬಂಧ ವಿನಿರ್ಮುಕ್ತಾಃ ಪದಮ್ ಗಚ್ಛಂತಿ ಅನಾಮಯಮ್ --ಬಲ್ಲವರು ಭಗವಂತನ ಅರಿವು ಪಡೆದು, ಕರ್ಮ ಫಲದ ಹೊಣೆಯನ್ನು ಅವನಿಗೊಪ್ಪಿಸಿ, ಹುಟ್ಟು ಸಾವಿನ ಕಟ್ಟು ಕಳಚಿಕೊಂಡು, ಕ್ಲೇಶರಹಿತವಾದ ಪದವನ್ನು ಪಡೆಯುತ್ತಾರೆ.
ನಿಜವಾದ ಮನಿಷಿಗಳು ತಮ್ಮ ಮನಸ್ಸನ್ನು ತಾವೇ ನಿಯಂತ್ರಿಸಿಕೊಳ್ಳಬಲ್ಲ ಜಿತೇಂದ್ರಿಯರು. ಆತ್ಮಸಂಯಮ ಇರುವ ಜ್ಞಾನದ ಮಾರ್ಗದಲ್ಲಿ ಸಾಗಿ ಆ ಅರಿವನ್ನು ಪಡೆದವರು. ಬುದ್ಧಿವಂತರಾದ ಜ್ಞಾನಿಗಳು ಕರ್ಮದಿಂದ ಬರತಕ್ಕಂತಹ ಫಲದ ಮೋಹವನ್ನು(attachment) ಬಿಟ್ಟು ಅದನ್ನು ಭಗವಂತನಿಗೆ ಅರ್ಪಿಸುತ್ತಾರೆ. ಹೀಗೆ ಯಾರು ಕರ್ಮಫಲವನ್ನು ಭಗವಂತನಿಗೆ ಅರ್ಪಣ ಬುದ್ಧಿಯಿಂದ ತ್ಯಾಗ ಮಾಡಿ ನಿರ್ವಂಚನೆಯಿಂದ ಕರ್ಮ ಮಾಡುತ್ತಾರೊ, ಅವರು ಕರ್ಮ ಮಾಡಿದರೂ ಕರ್ಮಬಂಧನಕ್ಕೊಳಪಡದೇ, ಎಲ್ಲಾ ಬಂಧನವನ್ನು ಕಳಚಿಕೊಂಡು, ದೋಷ ರಹಿತವಾದ ಮೋಕ್ಷವನ್ನು ಪಡೆಯುತ್ತಾರೆ. ಆದ್ದರಿಂದ ಕರ್ತವ್ಯ ಕರ್ಮವನ್ನು ಭಗವಂತನ ಆರಾಧನೆ ಎಂದು ಮಾಡಿ ಮೋಕ್ಷ ಪಡೆಯಬೇಕು. ಇದನ್ನು ಹೊರತುಪಡಿಸಿ ‘ನಾನು ಜ್ಞಾನಿ, ನಾನೇನೂ ಮಾಡಲಾರೆ’ ಎನ್ನುವ ಧೋರಣೆ ಸರಿಯಲ್ಲ.
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ ।
ತದಾ ಗಂತಾನಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ॥೫೨॥
ಯದಾ ತೇ ಮೋಹ ಕಲಿಲಮ್ ಬುದ್ಧಿಃ ವ್ಯತಿತರಿಷ್ಯತಿ |
ತದಾ ಗಂತಾ ಅನಿ ನಿರ್ವೇದಮ್ ಶ್ರೋತವ್ಯಸ್ಯ ಶ್ರುತಸ್ಯ ಚ --ಎಂದು ನಿನ್ನ ಬುದ್ಧಿ ಅಜ್ಞಾನದ ಕೊಳೆಯನ್ನು ಕಳೆದುಕೊಳ್ಳುವುದೋ, ಅಂದು ಮುಂದೆ ಕೇಳುವ, ಹಿಂದೆ ಕೇಳಿದ ಉಪದೇಶದ ಪೂರ್ತಿ ಫಲವನ್ನು ಪಡೆಯುವೆ.
ಯಾವಾಗ ನಾವು ಓದಿದ್ದು ಕೇಳಿದ್ದು ಸಾರ್ಥಕವಾಗುವುದು? ನಮ್ಮ ಬುದ್ಧಿ ಎಷ್ಟು ಕೇಳಿದರೂ ಕೂಡಾ ಪುನಃ ಗೊಂದಲದಲ್ಲೇ ಇದ್ದರೆ-ಎಷ್ಟು ಕೇಳಿಯೂ ಉಪಯೋಗವಿಲ್ಲ. ಓದುವುದರಿಂದ, ಕೇಳುವುದರಿಂದ ನಮ್ಮ ಮನಸ್ಸಿನ ಕೊಳೆ ತೊಳೆದು ಹೋಗಿ ಮನಸ್ಸು ತಿಳಿಯಾಗಬೇಕು. ಇಂತಹ ಮನಸ್ಸಿಗೆ ಎಂದೂ ದುಗುಡ, ಆತಂಕ ಇರುವುದಿಲ್ಲ. ಈ ಸ್ಥಿತಿಯಲ್ಲಿ ಕೋಪ ಬಾರದು. ಇಂತಹ ರಾಗ-ದ್ವೇಷ ರಹಿತವಾದ, ಎಂತಹ ಸಂದರ್ಭದಲ್ಲೂ ಸಮತೋಲನ ಕಳೆದುಕೊಳ್ಳದ ಮನಸ್ಸು ಬಂದಾಗ, ಓದಿದ್ದು, ಕೇಳಿದ್ದು ಸಾರ್ಥಕವಾಗುತ್ತದೆ.ಇಂತಹ ಸ್ಥಿತಿಯಲ್ಲಿ ಹಿಂದೆ ಕೇಳಿದ, ಹಾಗೂ ಇನ್ನು ಕೇಳುವ ಉಪದೇಶ ಪೂರ್ತಿ ಫಲವನ್ನು ಕೊಡುತ್ತದೆ.
ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ।
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ॥೫೩॥
ಶ್ರುತಿ ವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ |
ಸಮಾಧೌ ಅಚಲಾ ಬುದ್ಧಿಃ ತದಾ ಯೋಗಮ್ ಅವಾಪ್ಸ್ಯಸಿ- ಮೊದಲು ಶ್ರುತಿಗಳಿಗೆ ಹೊಂದಿಕೊಳ್ಳದಿದ್ದ,[ಮತ್ತೆ ಶ್ರುತಿಗಳಿಂದ ಶ್ರುತಿಗೂಡಿದ,] ನಿನ್ನ ಬುದ್ಧಿ ಎಂದು ನಿಜದ ಅರಿವಿನಿಂದ ಗಟ್ಟಿಗೊಂಡು, ಸಮಾಧಿಯಲ್ಲಿ ನಲುಗದೇ ನಿಲ್ಲುವುದೋ, ಅಂದು ಗುರಿ ತಲುಪುವೆ.
ಇಲ್ಲಿ 'ವಿಪ್ರತಿಪನ್ನಾ' ಅಂದರೆ 'ಅಭಿಪ್ರಾಯಭೇದ'. ಮೊದಲು ಶ್ರುತಿಗಳಿಂದ (ಶ್ರವಣದಿಂದ) ಗೊಂದಲವೆನಿಸುತ್ತದೆ. ನಂತರ ಅಲ್ಲಿಂದ ವೇದಕ್ಕೆ ಹೋದಾಗ-ವೇದದಲ್ಲಿ ಹೇಳಿದ ಸಂಗತಿಗೆ ಮನಸ್ಸು ವಿರುದ್ಧವಾಗಿ ಯೋಚಿಸುತ್ತದೆ. ಆದರೆ ಒಮ್ಮೆ ಮನಸ್ಸು ತಿಳಿಯಾದಾಗ, ಶ್ರುತಿಯಲ್ಲಿ ಹೇಳಿದ ತ್ರಿಗುಣಾತೀತ ತತ್ವದಲ್ಲಿ ಮನಸ್ಸು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಮೊದಲು ತ್ರೈಗುಣ್ಯ ವಿಷವಾಗಿದ್ದು ನಂತರ ತ್ರೈಗುಣ್ಯದ ವಿಷವನ್ನು ಪರಿಹರಿಸುವಂತಾಗುತ್ತದೆ (ಯಾಪಯತಿ). ಒಮ್ಮೆ ಮನಸ್ಸು ನಿರ್ಮಲವಾದಾಗ ಅದು ವೇದಕ್ಕೆ ಶ್ರುತಿಗೂಡು(Tune)ತ್ತದೆ. ಅದರಿಂದಾಗಿ ವೇದದಲ್ಲಿ ಹೇಳಿರುವ ವಿಚಾರ ಮತ್ತು ನಮ್ಮ ಯೋಚನೆಗಳಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಮನಸ್ಸು ವೈದಿಕ ವಾಙ್ಮಯದಲ್ಲಿ ನೆಲೆ ನಿಲ್ಲುತ್ತದೆ. ಈ ಸ್ಥಿತಿಯಲ್ಲಿ ಧ್ಯಾನ(Meditation) ಮಾಡಿದರೆ ಮನಸ್ಸು ಸದಾ ಭಗವಂತನಲ್ಲಿ ನೆಲೆಗೊಳ್ಳುತ್ತದೆ. ಇದಕ್ಕೂ ಮುಂದೆ ಹೋಗಿ ನಿಶ್ಚಲವಾದ ಸಮಾಧಿ ಸ್ಥಿತಿಯಲ್ಲಿ, ಸ್ವರೂಪ ಚಿಂತನದಲ್ಲಿ ನೋಡಿದಾಗ- ಭಗವಂತನ ನಿಜವಾದ ರೂಪ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದಿಲ್ಲ-ಆತ್ಮ ಕೆಲಸ ಮಾಡುತ್ತಿರುತ್ತದೆ. ಆತ್ಮದ ಕಣ್ಣಿನಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ-ಇದು ಸಾಧನೆಯ ಪೂರ್ಣ ಫಲ.
ಅರ್ಜುನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ ॥೫೪॥
ಅರ್ಜುನಃ ಉವಾಚ -ಅರ್ಜುನ ಕೇಳಿದನು:
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ |
ಸ್ಥಿತಧೀಃ ಕಿಮ್ ಪ್ರಭಾಷೇತ ಕಿಮ್ ಆಸೀತ ವ್ರಜೇತ ಕಿಮ್-- ಓ ಬ್ರಹ್ಮರುದ್ರರ ನಿಯಾಮಕನೇ, ಸಮಾಧಿಯನ್ನೇರಬಲ್ಲ [ತಿಳಿವಿನ ತಪ್ಪುಗಳನ್ನು ತಿದ್ದಿಕೊಂಡ] ಅರಿವು ಗಟ್ಟಿಗೊಂಡವರನ್ನು ಹೇಗೆ ಗುರುತಿಸುವುದು? ಅಂತಹ ಸ್ಥಿತಪ್ರಜ್ಞ ಏನೆಂದು ನುಡಿಯುತ್ತಾನೆ? ಏನೆಂದು ಕೂಡುತ್ತಾನೆ? ಏನೆಂದು ನಡೆಯುತ್ತಾನೆ?
ಈ ಹಂತದಲ್ಲಿ ಕೃಷ್ಣ ತನ್ನ ಉಪದೇಶವನ್ನು ನಿಲ್ಲಿಸಿ ಅರ್ಜುನನ ಪ್ರಶ್ನೆಯನ್ನು ಆಲಿಸುತ್ತಾನೆ. ಮನುಷ್ಯನ ಅರಿವು ಗಟ್ಟಿಗೊಳ್ಳಬೇಕು; ಸತ್ಯದ ಸಾಕ್ಷಾತ್ಕಾರದಿಂದ ಮನುಷ್ಯ ಸ್ಥಿತಪ್ರಜ್ಞನಾಗಬಲ್ಲ. ಇಂತಹ ಸ್ಥಿತಪ್ರಜ್ಞರನ್ನು ನಾವು ಗುರುತಿಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ. ಒಬ್ಬ ಸ್ಥಿತಪ್ರಜ್ಞನನ್ನು ಆತನ ವೇಷ ಭೂಷಣದಿಂದ ಗುರುತಿಸುವುದು ಅಸಾಧ್ಯ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳದೇ ಅಂತರಂಗ ಪ್ರಪಂಚದಲ್ಲಿ ಸಮಾಧಿಸ್ಥಿತಿಯನ್ನು ತಲುಪಿದ ಅವರನ್ನು ಹೇಗೆ ಗುರುತಿಸಬಹುದು? ಅವರು ಬಾಹ್ಯ ಪ್ರಪಂಚದೊಂದಿಗೆ ಹೇಗೆ ವ್ಯವಹರಿಸುತ್ತಾರೆ? ಅವರ ನಡೆ-ನುಡಿ ಹೇಗಿರುತ್ತದೆ? ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು 'ಕೇಶವ' ಎಂದು ಸಂಬೋಧಿಸಿದ್ದಾನೆ. ಈ ಸಂಬೋಧನೆಯಿಂದಲೇ ಅರ್ಥವಾಗುತ್ತದೆ, ಅರ್ಜುನ ಸ್ವಯಂ ಒಬ್ಬ ಮಹಾಜ್ಞಾನಿ ಎಂದು. ಕೇಶವ ಎಂದರೆ ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ- ಕೇಶವ . ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ. “ಜಗತ್ತಿಗೆ ಬೆಳಕು ಕೊಡುವ ನಿನ್ನಿಂದ ನಾನು ಈ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ” ಎನ್ನುವ ಅರ್ಥದಲ್ಲಿ ಈ ಸಂಬೋಧನೆಯಿದೆ.
ಭಗವಾನುವಾಚ ।
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್
ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ॥೫೫॥
ಭಗವಾನುವಾಚ - ಭಗವಂತ ಹೇಳಿದನು:
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನಃಗತಾನ್ |
ಆತ್ಮನಿ ಏವ ಆತ್ಮನಾ ತುಷ್ಟಃ ಸ್ಥಿತಪ್ರಜ್ಞಃ ತದಾ ಉಚ್ಯತೇ- -ಪಾರ್ಥ, ಮನದಲ್ಲಿ ಮನೆಮಾಡಿದ ಎಲ್ಲಾ ಬಯಕೆಗಳನ್ನೂ ತೊರೆದಾಗ, ಪರಮಾತ್ಮನಲ್ಲೇ ನೆಲೆನಿಂತು, ಪರಮಾತ್ಮನ ಅನುಗ್ರಹದಿಂದ ತಣಿದು ನಲಿದಾಗ ಸ್ಥಿತಪ್ರಜ್ಞ ಎನಿಸುತ್ತಾನೆ.
ಕೃಷ್ಣ ನೇರವಾಗಿ ಸ್ಥಿತಪ್ರಜ್ಞನ ನಡೆ-ನುಡಿಗಳ ಬಗ್ಗೆ ಹೇಳದೇ, ಆತ ಹೇಗಿರುತ್ತಾನೆ ಎನ್ನುವುದನ್ನು ಇಲ್ಲಿ ಮೊದಲು ವಿವರಿಸುತ್ತಾನೆ. ನಿಜವಾದ ಸ್ಥಿತಪ್ರಜ್ಞನಿಗೆ ಮೂಲಭೂತವಾಗಿ ಯಾವ ಬಯಕೆಯೂ ಕಾಡುವುದಿಲ್ಲ (ಇಲ್ಲಿ ಬಯಕೆ ಎಂದರೆ ಮನುಷ್ಯನನ್ನು ದಾರಿ ತಪ್ಪಿಸುವ ಕೆಟ್ಟ ಕಾಮನೆಗಳು). ಆತ ಇಂತಹ ಎಲ್ಲಾ ಕ್ಷುದ್ರ ಕಾಮನೆಗಳನ್ನು ತೊರೆದು ತನ್ನೊಳಗಿರುವ ಜ್ಞಾನಾನಂದಮಯನಾದ ಭಗವಂತನನ್ನು ಕಾಣುತ್ತಾ ಸದಾ ಸಂತೋಷವಾಗಿರುತ್ತಾನೆ.
ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೇ ಇದ್ದಾಗ ದುಃಖ- ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಆ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೇ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತಾ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಎಂದೂ ಉದ್ವೇಗಕ್ಕೆ (Tension or Stress) ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದಾಗಿ ಆತ ಯಶಸ್ಸನ್ನು ಕಾಣಬಲ್ಲ.
ಇಲ್ಲಿ ಕೃಷ್ಣ ಅರ್ಜುನನನ್ನು 'ಪಾರ್ಥ' ಎಂದು ಸಂಬೋಧಿಸಿದ್ದಾನೆ. ಪಾರ್ಥ ಎಂದರೆ ಪಾರ-ತೀರ-ಗಮನೆ, ಅಂದರೆ ಸತ್ಯದ, ಸಾಧನೆಯ ಕಡಲನ್ನು ಧಾಟಿದವ. “ಸಾಧನೆಯ ಕಡಲನ್ನು ಧಾಟಿದ ನಿನಗೆ ಇದು ಸ್ಪಷ್ಟವಾಗಿ ತಿಳಿಯಬೇಕು” ಎನ್ನುವ ಅರ್ಥದಲ್ಲಿ ಇಲ್ಲಿ ಈ ಸಂಬೋಧನೆ ಇದೆ.
ಮುಂದೆ ಬರುವ ಮೂರು ಶ್ಲೋಕಗಳಲ್ಲಿ ಕೃಷ್ಣ ಕಾಮನೆಗಳನ್ನು ಬಿಡುವುದು ಅಂದರೆ ಏನು ಹಾಗೂ ಹೇಗೆ? ಎನ್ನುವುದನ್ನು ವಿವರಿಸುತ್ತಾನೆ.
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ॥೫೬॥
ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ |
ವೀತ ರಾಗ ಭಯ ಕ್ರೋಧಃ ಸ್ಥಿತಧೀಃ ಮುನಿಃ ಉಚ್ಯತೇ --ಸಂಕಟ ಬಂದಾಗ ಬಗೆಯಲ್ಲಿ ತಳಮಳವಿಲ್ಲ. ಸುಖದ ಸಂಗತಿಗಳಲ್ಲಿ ಹಂಬಲವಿಲ್ಲ. ಯಾವುದರಲ್ಲೂ ರಾಗವಿಲ್ಲ, ಭಯವಿಲ್ಲ, ಕ್ರೋಧವಿಲ್ಲ. ಇಂತಹ ಚಿಂತನಶೀಲನೇ 'ಸ್ಥಿತಪ್ರಜ್ಞ' ಎನಿಸುತ್ತಾನೆ.
ಜೀವನದಲ್ಲಿ ಸುಖ-ದುಃಖಗಳು ಹಗಲು-ರಾತ್ರಿ ಇದ್ದಂತೆ. ಇದು ನಿರಂತರ ಮತ್ತು ಯಾರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ಸುಖ-ನಾವು ಬಯಸದೇ ಬರುತ್ತದೆ. ಅದೇ ತರಹ ಇನ್ನು ಕೆಲವೊಮ್ಮೆ ದುಃಖ ಸರಮಾಲೆಯಾಗಿ ಬೆನ್ನು ಹತ್ತುತ್ತದೆ. ದುಡ್ಡಿನಿಂದ ದುಃಖವನ್ನು ತಡೆಯಲಾಗದು-ಸುಖವನ್ನು ಖರೀದಿಸಲಾಗದು. ಸಾಮಾನ್ಯವಾಗಿ ದುಃಖ ಬಂದಾಗ ನಾವು ಉದ್ವೇಗಕ್ಕೊಳಗಾಗುತ್ತೇವೆ. ಇದರಿಂದ ಮನಸ್ಸು ಕಂಗೆಡುತ್ತದೆ, ಅದರಿಂದ ದೇಹದ ಆರೋಗ್ಯ ಕೆಡುತ್ತದೆ. ಯಾವುದು ಅನಿವಾರ್ಯವೋ ಅದರ ಬಗ್ಗೆ ಅಳುತ್ತಾ ಕುಳಿತುಕೊಂಡರೆ ಉಪಯೋಗವಿಲ್ಲ. ಅಳುತ್ತಾ ಕೂರುವುದರಿಂದ ಬಂದ ದುಃಖ ಹೋಗದು, ಬರುವ ದುಃಖವನ್ನು ತಡೆಯಲಾಗದು. ದುಃಖ 'ಸುಖದ ಸಿದ್ಧತೆ'; ಸುಖ 'ದುಃಖದ ಸಿದ್ಧತೆ'. ಇವು ಜೀವನದ ಅನಿವಾರ್ಯ ದ್ವಂದ್ವಗಳು. ಅಂದರೆ ಸುಖ ಬಂದಾಗ ಸಂತೋಷಪಡಬಾರದು ಎಂದಲ್ಲ, ಆ ಸುಖದಲ್ಲಿ ಮೈಮರೆಯಬಾರದು ಅಷ್ಟೆ. ತಟಸ್ಥತೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಬೇಕು. ಜೀವನ ಯುದ್ಧದಲ್ಲಿ ಸುಖ-ದುಃಖಗಳು ಹಾಸುಹೊಕ್ಕಾಗಿವೆ ಎನ್ನುವ ಸತ್ಯವನ್ನರಿತು ಜೀವನ ಸಾಗಿಸಬೇಕು.
ದುಃಖ ಬಂದಾಗ ಮನಸ್ಸನ್ನು ಗಟ್ಟಿಯಾಗಿಸಿಕೊಂಡು ಬದುಕಬೇಕು ಎಂದು ಹೇಳುವುದು ಸುಲಭ. ಆದರೆ ಅದನ್ನು ಜೀವನದಲ್ಲಿ ಅನುಸರಿಸುವುದು ಅಷ್ಟೇ ಕಷ್ಟ. ಇದಕ್ಕೆ ದೃಷ್ಟಾಂತ ಮಹಾಭಾರತ ಯುದ್ಧದಲ್ಲಿ ಅಭಿಮನ್ಯು ಸತ್ತಾಗ ಕಣ್ಣೀರು ಸುರಿಸಿದ ಅರ್ಜುನ. ಸ್ವಯಂ ಭಗವಂತನಿಂದ ಉಪದೇಶ ಪಡೆದು, ಭಗವಂತನ ಸಾರಥ್ಯದಲ್ಲಿ ಯುದ್ಧಕ್ಕಿಳಿದ ಸ್ಥಿತಪ್ರಜ್ಞನಾದ ಅರ್ಜುನ, ತನ್ನ ಮಗ ಅಭಿಮನ್ಯು ಸತ್ತಾಗ ದುಃಖಿಸುತ್ತಾನೆ. ನಾವು ದುಃಖವನ್ನು ಸ್ವೀಕರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ದುಸ್ತರವಾಗುತ್ತದೆ.
ಯಾವುದೇ ಒಂದು ವಸ್ತುವಿನ ಬಗ್ಗೆ ಮೂರು ವಿಷಯಗಳು ಮನಸ್ಸಿನಲ್ಲಿರಬಾರದು. ಅವುಗಳೆಂದರೆ ರಾಗ-ಭಯ-ಕ್ರೋಧ. ದುಃಖದ ಪೂರ್ವ ಸ್ಥಿತಿ ಭಯ; ಭಯದ ಉತ್ತರ ಸ್ಥಿತಿ ದುಃಖ! ಅತಿಯಾಗಿ ಆಸೆ ಪಡುವುದು-ರಾಗ, ಆಸೆಪಟ್ಟ ವಸ್ತು ಸಿಗದಿದ್ದಾಗ-ನಿರಾಶೆ. ಆ ವಸ್ತು ನಮ್ಮಿಂದ ದುರ್ಬಲರಿಗೆ ಸಿಕ್ಕಿದರೆ ಅವರ ಮೇಲೆ ಕ್ರೋಧ; ನಮ್ಮಿಂದ ಬಲಿಷ್ಠರಿಗೆ ಸಿಕ್ಕರೆ ಅವರಿಂದ ಭಯ! ಇವೆಲ್ಲವೂ ಮನಸ್ಸಿನ ಹೊಯ್ದಾಟ. ವ್ಯಾಸರು ಹೇಳಿದಂತೆ “ಈ ಜಗತ್ತಿನಲ್ಲಿ ಈವರೆಗೆ ಆಗಬಾರದ್ದು ಯಾವುದೂ ಆಗಿಲ್ಲ, ಹಾಗೂ ಇನ್ನು ಮುಂದೆ ಆಗುವುದೂ ಇಲ್ಲ”. ಆಗಬೇಕಾದದ್ದು ಆಗಿಯೇ ತೀರುತ್ತದೆ, ಅದರ ಬಗ್ಗೆ ಚಿಂತಿಸಿ ಫಲವಿಲ್ಲ. ಇಂತಹ ಚಿಂತನಶೀಲತೆಯನ್ನು ಮೈಗೂಡಿಸಿಕೊಂಡವನು ಸ್ಥಿತಪ್ರಜ್ಞ ಎನಿಸುತ್ತಾನೆ.
ಇಲ್ಲಿ ಮುನಿಃ ಎನ್ನುವ ಪದ ಬಳಕೆಯಾಗಿದೆ. ಮುನಿಃ ಎಂದರೆ ಕಾಮ-ಕ್ರೋಧವನ್ನು ಗೆದ್ದವನು. ನಾವು ಮನಸ್ಸನ್ನು ಎಲ್ಲಾ ಸಂದರ್ಭದಲ್ಲೂ ಏಕರೂಪವಾಗಿ ತಟಸ್ಥವಾಗಿಡಲು ಪ್ರಯತ್ನಿಸಬೇಕು. ಏನು ಬಂದರೂ ಬರಲಿ, ಭಗವಂತನ ದಯೆಯೊಂದಿರಲಿ ಎಂದು ಜೀವನದಲ್ಲಿ ಸುಖ-ದುಃಖವನ್ನು ಸಮದೃಷ್ಟಿಯಲ್ಲಿ ಕಾಣುವವ ಮುನಿ. “ನೀನೂ ಕೂಡಾ ಅಂತಹ ಮುನಿಯಾಗು” ಎನ್ನುವುದು ಇಲ್ಲಿರುವ ಸಂದೇಶ.
ಯಃ ಸರ್ವತ್ರಾನಭಿಸ್ನೇಹಸ್ತತ್ತತ್ ಪ್ರಾಪ್ಯ ಶುಭಾಶುಭಮ್ ।
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥೫೭॥
ಯಃ ಸರ್ವತ್ರ ಅನಭಿಸ್ನೇಹಃ ತತ್ ತತ್ ಪ್ರಾಪ್ಯ ಶುಭ ಅಶುಭಮ |
ನ ಅಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ -- ಆಯಾ ಒಳಿತು-ಕೆಡುಕುಗಳು ಬಂದೊದಗಿದಾಗ ಎಲ್ಲೂ ಅತಿಯಾಗಿ ಅಂಟಿಕೊಳ್ಳುವುದಿಲ್ಲ. ಒಳಿತಿನ ಬಗೆಗೆ ಮೆಚ್ಚೂ ಇಲ್ಲ. ಕೆಡುಕಿನ ಬಗ್ಗೆ ರೊಚ್ಚೂ ಇಲ್ಲ. ಇಂತವನ ಅರಿವು ಗಟ್ಟಿಗೊಂಡಿರುತ್ತದೆ.
ಇಲ್ಲಿ ಕೃಷ್ಣ ಹೇಳುತ್ತಾನೆ- “ದುಃಖ ಬಂದಾಗ ಕಂಗೆಡಬೇಡ, ಸುಖ ಬಂದಾಗ ಉಬ್ಬಬೇಡ, ನಿರ್ಲಿಪ್ತತೆಯನ್ನು ಅಭ್ಯಾಸ ಮಾಡು. ಯಾವುದರ ಮೇಲೂ ಅತಿಯಾದ ಆಸಕ್ತಿ( Over attachment) ಬೇಡ. ಮನಸ್ಸಿನ ಸಮತೋಲನವನ್ನು ಸಾಧಿಸು” ಎಂದು. ದುಃಖ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ದೇವಾಂಶ ಸಂಭೂತರಾದ ಪಾಂಡವರು ಪಟ್ಟ ಕಷ್ಟವನ್ನು ನೋಡಿದರೆ ಇದು ಸ್ಪಷ್ಟ. ಜ್ಞಾನಿಗಳಾಗಲೀ, ಅಜ್ಞಾನಿಗಳಾಗಲೀ, ಎಲ್ಲರಿಗೂ ಕಷ್ಟ ಬರುತ್ತದೆ. ನಾವು ಕಷ್ಟವನ್ನು ನೋಡುವ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಅಷ್ಟೆ. "ನಾನು ಬೇಕು-ಬೇಡವನ್ನು ಮೀರಿ ನಿಂತಿದ್ದೇನೆ, ಇಂಥದ್ದೇ ಬೇಕು, ಇಂಥಾದ್ದು ಬೇಡ ಎನ್ನುವ ಆಯ್ಕೆ-ಅಧಿಕಾರ ನನಗಿಲ್ಲ"- ಎನ್ನುವ ಸತ್ಯವನ್ನರಿತು ಬದುಕಿದಾಗ ಜೀವನ ಸುಗಮವಾಗುತ್ತದೆ. ಅಂತಹ ವ್ಯಕ್ತಿ ಎತ್ತರಕ್ಕೇರುತ್ತಾನೆ.
ಜ್ಞಾನಿಗಳಲ್ಲಿ ಇಂತಹ ಮನಃಸ್ಥಿತಿ ಇರುತ್ತದೆ. ಸಾಮಾನ್ಯ ಮಾನವರಾದ ನಮಗೆ ಇಂದ್ರಿಯ ನಿಗ್ರಹ ಬಹಳ ಕಷ್ಟ. ಆದರೆ ಅಸಾಧ್ಯವಲ್ಲ. ನಿರಂತರ ಸಾಧನೆಯಿಂದ ಇದನ್ನು ಸಾಧಿಸಬಹುದು. ಯಾವ ರೀತಿ ನಾವು ಇಂದ್ರಿಯ ನಿಗ್ರಹ ಮಾಡಿ ಸಾಧನೆ ಮಾಡಬೇಕು ಎನ್ನುವುದನ್ನು ದೃಷ್ಟಾಂತದೊಂದಿಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.
ಯದಾ ಸಂಹರತೇ ಚಾಯಂ ಕೂರ್ಮೋSನ್ಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥೫೮॥
ಯದಾ ಸಂಹರತೇ ಚ ಅಯಮ್ಃ ಕೂರ್ಮಃ ಅಂಗಾನಿ ಇವ ಸರ್ವಶಃ |
ಇಂದ್ರಿಯಾಣಿ ಇಂದ್ರಿಯ ಅರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ-- ಹೇಗೆ ಆಮೆಯು ತನ್ನ ಅಂಗಗಳನ್ನು ಪೂರ್ತಿಯಾಗಿ ಚಿಪ್ಪಿನೊಳಗೆ ಎಳೆದುಕೊಳ್ಳುತ್ತದೋ ಹಾಗೇ, ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆಳೆದುಕೊಳ್ಳುವವರ ಪ್ರಜ್ಞೆ ಗಟ್ಟಿಗೊಂಡಿರುತ್ತದೆ.
ನಮ್ಮನ್ನು ನಮ್ಮ ಇಂದ್ರಿಯಗಳು ದಾರಿ ತಪ್ಪಿಸುತ್ತವೆ. ಯಾವುದು ಬೇಡವೋ ಅದೇ ಬೇಕು ಎನ್ನುವ ಆಸೆ ಹುಟ್ಟಿಸುತ್ತವೆ. ಇಲ್ಲಿ ಕೃಷ್ಣ ಹೇಳುತ್ತಾನೆ: ಆಮೆ ಹೇಗೆ ತನ್ನ ನಾಲ್ಕು ಕಾಲು ಮತ್ತು ತಲೆಯನ್ನು ತನ್ನ ಚಿಪ್ಪಿನೊಳಗೆ ಸಂಪೂರ್ಣ ಎಳೆದುಕೊಂಡು ಸುರಕ್ಷಿತವಾಗಿರುತ್ತದೋ, ಹಾಗೇ ನಾವು ನಮ್ಮ ಪಂಚೇಂದ್ರಿಯಗಳನ್ನು ಗಟ್ಟಿ ಮನಸ್ಸಿನ ಕೋಟೆಯೊಳಗೆ ಎಳೆದುಕೊಂಡು ಅಂತರ್ಮುಖಗೊಳಿಸಿಕೊಳ್ಳಬೇಕು. ಇಲ್ಲಿ ಅಂತರ್ಮುಖಗೊಳಿಸುವುದು ಎಂದರೆ ನೋಡುವ ದೃಷ್ಟಿಯನ್ನು ಬದಲಿಸಿಕೊಳ್ಳುವುದು. ಎಲ್ಲವನ್ನೂ ಅಂತರಂಗ ದೃಷ್ಟಿಯಿಂದ ವಿಶ್ಲೇಷಣೆ ಮಾಡಿ, ಅದರಲ್ಲಿನ ಒಳ್ಳೆಯತನವನ್ನು ಗುರುತಿಸಿ ಗ್ರಹಣ ಮಾಡುವುದು. ಅದನ್ನು ಸೃಷ್ಟಿಸಿದ ಭಗವಂತನ ಮಹಿಮೆಯನ್ನು ಅನುಸಂಧಾನ ಮಾಡುವುದು.
ನಾವು ಭಗವಂತ ಸೃಷ್ಟಿಸಿದ ಈ ಪ್ರಪಂಚವನ್ನು ನೋಡುತ್ತೇವೆ. ನೋಡುತ್ತಾ ಅದರ ಹಿಂದೆ ಇರುವ ಆ ವಿಶ್ವಶಕ್ತಿಯ ಮಹಿಮೆಯನ್ನು ಯೋಚಿಸಿದರೆ- ಅದು ಅಂತರ್ಮುಖವಾದ ಒಳನೋಟವಾಗುತ್ತದೆ. ಎಲ್ಲವುದರ ಒಳಗೂ ಭಗವಂತನಿದ್ದಾನೆ ಎನ್ನುವ ಎಚ್ಚರ, ಒಂದೊಂದು ಅಭಿವ್ಯಕ್ತಿಯಲ್ಲಿ ಭಗವಂತನ ಒಂದೊಂದು ವಿಭೂತಿ ಇದೆ ಎನ್ನುವ ತಿಳುವಳಿಕೆ ಇದ್ದಾಗ, ಯಾವುದೂ ನಮ್ಮನ್ನು ದಾರಿ ತಪ್ಪಿಸುವುದಿಲ್ಲ. ಇದು ಜ್ಞಾನಿ ಪ್ರಪಂಚವನ್ನು ನೋಡುವ ದೃಷ್ಟಿ. ನಾವು ಪ್ರಪಂಚವನ್ನು ಬದಲಿಸಲು ಸಾಧ್ಯವಿಲ್ಲ. ಪ್ರಪಂಚವನ್ನು ನಾವು ನಮ್ಮ ಇಷ್ಟದಂತೆ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನರಿತು, ಪ್ರಪಂಚ ಇದ್ದ ಹಾಗೆ ಅದಕ್ಕನುಗುಣವಾಗಿ ಬದುಕುವ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಯಾವ ಸಮಸ್ಯೆಯೂ ಇರುವುದಿಲ್ಲ. ಈ ರೀತಿ ತಮ್ಮ ಇಂದ್ರಿಯಗಳನ್ನು ಅಂತರ್ಮುಖಗೊಳಿಸಿಕೊಂಡವನ ಪ್ರಜ್ಞೆ ಗಟ್ಟಿಗೊಂಡಿರುತ್ತದೆ.
ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋSಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥೫೯॥
ವಿಷಯಾಃ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ |
ರಸವರ್ಜಮ್ ರಸಃ ಅಪಿ ಅಸ್ಯ ಪರಮ್ ದೃಷ್ಟ್ವಾ ನಿವರ್ತತೇ- -ಆಹಾರ ತೊರೆದ ಜೀವಿಗೆ ವಿಷಯ ಭೋಗದ ಕಸುವಷ್ಟೇ ಕುಂದುತ್ತದೆ-ನಾಲಗೆಯ ಕಸುವು ಮತ್ತು ಭೋಗದ ಬಯಕೆಯನ್ನು ಬಿಟ್ಟು. ಅಂತಹ ಕಸುವು-ಬಯಕೆ ಕೂಡಾ ಭಗವಂತನನ್ನು ಕಂಡಾಗ ಇಲ್ಲವಾಗುತ್ತದೆ.
ನಾವು ಸ್ಥಿತಪ್ರಜ್ಞರಾಗಬೇಕೆಂದರೆ ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು ಎನ್ನುವ ವಿಷಯವನ್ನು ನೋಡಿದೆವು. ಆದರೆ ಅದು ಅಷ್ಟು ಸುಲಭದ ವಿಷಯವಲ್ಲ. ಸಾಧನಾ ಶರೀರದಲ್ಲಿರುವ ಸಾಧಕ, ಇಂದ್ರಿಯಗಳನ್ನು ಹೊರಗಿನ ವಿಷಯಗಳ ಜೊತೆಗೆ ಸಂಪರ್ಕ ಆಗದಂತೆ ತಡೆದರೆ(ಏಕಾಂತದ ಅಭ್ಯಾಸ), ನೋಡುವ, ಕೇಳುವ ಎಲ್ಲಾ ಆಸೆಗಳು ಹೊರಟು ಹೋಗಬಹುದು. ಆದರೆ ರುಚಿ(ನಾಲಿಗೆಯ ಚಪಲ) ಮತ್ತು ಶೃಂಗಾರ(ಲೈಂಗಿಕ ಬಯಕೆ)ವನ್ನು ನಿವಾರಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದಿದ್ದರೆ ಒಮ್ಮೆ ಶೃಂಗಾರ ಭೋಗವನ್ನು ಅನುಭವಿಸಿ, ದಾಂಪತ್ಯವೆಂದರೆ ಏನು ಎಂದು ಅರಿತು, ಆನಂತರ ಬ್ರಹ್ಮಚರ್ಯಕ್ಕೆ ಕಾಲಿಟ್ಟರೆ ಸಾಧನೆ ಸುಲಭ. ನಿಯಮಿತ ಆಹಾರ, ಉಪವಾಸ- ಅಧ್ಯಾತ್ಮಕ್ಕೆ ಪೂರಕ. ಅತಿ ಆಹಾರ, ತಾಮಸ ಹಾಗೂ ರಾಜಸ ಆಹಾರ (ಉದಾ: ತೊಗರಿಬೇಳೆ, ಈರುಳ್ಳಿ, ಬೆಳ್ಳುಳ್ಳಿ, ನುಗ್ಗೆಕಾಯಿ, ಅತಿಯಾದ ಮಸಾಲೆ ಪದಾರ್ಥ, ಮಾಂಸಾಹಾರ ಇತ್ಯಾದಿ) ಅಧ್ಯಾತ್ಮ ಸಾಧನೆಗೆ ತೀರಾ ವಿರುದ್ಧ. (ಈ ಕಾರಣಕ್ಕಾಗಿ ಯಾರೇ ಅತಿಥಿ ಬಂದಾಗ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರ ನೀಡಬಾರದು; ಮಾಡಿದ ಅಡಿಗೆ ಮಿಕ್ಕಿದಾಗ ಹಾಳಾಗುತ್ತಲ್ಲಾ ಅಂತ ತಿನ್ನುವುದರಿಂದ ಆಹಾರವೂ ಹಾಳು ದೇಹವೂ ಹಾಳು! ). ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಏಕಾಂತ ಹಾಗೂ ಆಹಾರ ನಿಯಂತ್ರಣ ಸಾಧನೆಗೆ ಪೂರಕ . ಇದರಿಂದ ನಮ್ಮ ನಾಲಿಗೆಯ ಮತ್ತು ಭೋಗದ ಚಪಲ ಸಂಪೂರ್ಣ ನಿಗ್ರಹ ಆಗದಿದ್ದರೂ ಕೂಡಾ ಅವು ಭಗವಂತನಲ್ಲಿ ಸಂಪೂರ್ಣ ಶರಣಾದಾಗ ಇಲ್ಲವಾಗುತ್ತವೆ.
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥
ಯತತಃ ಹಿ ಅಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ |
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಮ್ ಮನಃ -- ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲಕಿ ಸೆಳೆದುಬಿಡುತ್ತವೆ.
ನಾವು ಎಷ್ಟು ಓದಿ , ಕೇಳಿ ತಿಳಿದುಕೊಂಡರೂ ಕೂಡಾ, ಸಾಧನೆಯ ಈ ದಾರಿ ಅಷ್ಟು ಸುಲಭದ್ದಲ್ಲ. ಪ್ರಯತ್ನದ ಛಲವಿಲ್ಲದೇ ಇದು ಅಸಾಧ್ಯ. ಅಧ್ಯಾತ್ಮದ ದಾರಿಯಲ್ಲಿ ಸಾಗಲು ಮನಸ್ಸು ಗಟ್ಟಿಯಾಗಿರಬೇಕು. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಮನಸ್ಸು ಗಟ್ಟಿಯಾದಾಗ ಇಂದ್ರಿಯಗಳು ಸಡಿಲವಾಗುತ್ತವೆ. ರಾಗ ದ್ವೇಷ ಮಾಡಬಾರದು, ಕಾಮ ಕ್ರೋಧಗಳಿಗೆ ಒಳಗಾಗಬಾರದು, ಬಯಕೆಯ ಮೇಲೆ ಕಡಿವಾಣವಿರಬೇಕು ಎಂದು ಗಟ್ಟಿ ಮನಸ್ಸಿನಲ್ಲಿ ತೀರ್ಮಾನ ಮಾಡಿ ಕುಳಿತಾಗ, ಇಂದ್ರಿಯಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ. ಶಾಸ್ತ್ರವನ್ನು ಓದಿ ಪರೋಕ್ಷವಾಗಿ ಸತ್ಯವನ್ನು ಕಂಡವನನ್ನೂ ಸಹ ಈ ಸಮಸ್ಯೆ ಕಾಡದೇ ಬಿಡದು. ಬಲಾತ್ಕಾರವಾಗಿ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುತ್ತವೆ. ಇದರಿಂದಾಗಿ ಮೊದಲು ನಂಬಿದ್ದನ್ನು ನಂಬಬೇಕೋ ಬಿಡಬೇಕೋ ಅನ್ನುವ ಸಂಶಯ ಹುಟ್ಟಿಕೊಳ್ಳುತ್ತದೆ. ಇದು ಪ್ರತಿಯೊಬ್ಬ ಸಾಧಕ ಜೀವನಿಗೆ ಅನುಭವಕ್ಕೆ ಬರುವ ಸಂಗತಿ. ಈ ಸಮಸ್ಯೆ ಗಂಭೀರವಾಗಿ ಕಂಡರೂ ಕೂಡಾ ಕೃಷ್ಣ ಮುಂದಿನ ಶ್ಲೋಕದಲ್ಲಿ ಇದಕ್ಕೆಸರಳ ಪರಿಹಾರ ಸೂಚಿಸುತ್ತಾನೆ.
ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ ಪರಃ ।
ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೬೧॥
ತಾನಿ ಸರ್ವಾಣಿ ಸಂಯಮ್ಯ ಯುಕ್ತಃ ಆಸೀತ ಮತ್ ಪರಃ |
ವಶೇ ಹಿ ಯಸ್ಯ ಇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ--ಅವುಗಳನ್ನೆಲ್ಲಾ ತಡೆಹಿಡಿದು, ನನ್ನನ್ನೇ ಪರತತ್ವವೆಂದು ನಂಬಿ ನನ್ನಲ್ಲೇ ಮನವಿಟ್ಟು ಕೂಡಬೇಕು. ಹೀಗೆ ಇಂದ್ರಿಯಗಳನ್ನು ಗೆದ್ದವನ ಅರಿವು ಗಟ್ಟಿಗೊಂಡಿರುತ್ತದೆ.
ಇಂದ್ರಿಯಗಳಿಂದ ಮನಸ್ಸು ಕದಲುವುದು ಅಥವಾ ಮನಸ್ಸಿನಿಂದ ಇಂದ್ರಿಯ ಬೇಡದ ಕಾರ್ಯದಲ್ಲಿ ತೊಡಗುವುದು ಎಲ್ಲರನ್ನೂ ಕಾಡುವ ಸಮಸ್ಯೆ. ಈ ಸಮಸ್ಯೆಯಿಂದ ಈಚೆ ಬರಬೇಕಾದರೆ ನಾವು ಇಂದ್ರಿಯಗಳೆಂಬ ಕುದುರೆಗಳನ್ನು ಪಳಗಿಸಿ, ಮನಸ್ಸೆಂಬ ಕಡಿವಾಣದಲ್ಲಿ ಅವುಗಳನ್ನು ಬಿಗಿದು, ಅದು ಸಡಿಲವಾಗದಂತೆ ಹಿಡಿಯಬೇಕು. ಈ ಕಾರ್ಯವನ್ನು ಯಶಸ್ಸಾಗಿ ಮಾಡಬೇಕಾದರೆ ಮೊದಲು ನಾವು ಭಗವಂತನಲ್ಲಿ ಶರಣಾಗಬೇಕು. "ಈ ಜವಾಬ್ದಾರಿಯನ್ನು ನನಗೊಪ್ಪಿಸು" ಎನ್ನುತ್ತಾನೆ ಕೃಷ್ಣ. ಎಂತಹ ಭರವಸೆ? "ನನ್ನ ಇಂದ್ರಿಯಗಳು ದಾರಿತಪ್ಪದಂತೆ ನನ್ನೊಳಗಿದ್ದು ಪ್ರೇರೇಪಿಸು ಭಗವಂತ; ನಿನ್ನ ಚಿಂತನೆಯ ಶಕ್ತಿ ನಿರಂತರ ನನ್ನ ಮನಸ್ಸಿನಲ್ಲಿ ಉಳಿಯುವಂತೆ ಮಾಡು" ಎಂದು ಭಗವಂತನನ್ನು ಪ್ರಾರ್ಥಿಸಬೇಕು. ಭಗವಂತನಲ್ಲಿ ಶರಣಾಗತಿಯನ್ನು ಪಡೆಯದೇ ಎಲ್ಲವನ್ನೂ ಸ್ವಪ್ರಯತ್ನದಿಂದ ಮಾಡುತ್ತೇನೆ ಎಂದರೆ ಅದು ಅಸಾಧ್ಯ. ಪ್ರಯತ್ನ ಮಾಡಬೇಕು, ಪ್ರಯತ್ನದಲ್ಲಿ ಜಯ ದೊರೆಯುವಂತೆ ಭಗವಂತನಲ್ಲಿ ಬೇಡಿ, ಆತನಲ್ಲಿ ಶರಣಾದಾಗ, ಒಂದಲ್ಲ ಒಂದು ದಿನ ಅನುಭೂತಿಯ ಅನುಗ್ರಹವಾಗುತ್ತದೆ. ಆಗ ಸಂಪೂರ್ಣ ಇಂದ್ರಿಯ ನಿಗ್ರಹ ಸಾಧ್ಯ. ಈ ಸಾಧನೆ ಅನೇಕ ಜನ್ಮದ್ದು. ಹತ್ತು ದಿನ ಸಾಧನೆ ಮಾಡಿ ನಿರಾಶೆಯಾಗಿ ನಾಸ್ತಿಕನಾಗದೇ, ನಿರಂತರ ಸಾಧನೆ ಮಾಡಿದರೆ ಯಶಸ್ಸು ನಮ್ಮದಾಗುತ್ತದೆ. ಯಾರ ಇಂದ್ರಿಯಗಳು ಅವನ ವಶಕ್ಕೆ ಬಂದವೋ, ಅವನ ಅರಿವು ಗಟ್ಟಿಯಾಗುತ್ತದೆ. ಆತ ಜೀವನದಲ್ಲಿ, ಸಾಧನೆಯ ಹಾದಿಯಲ್ಲಿ ಗೆಲ್ಲುತ್ತಾನೆ.
ನಮ್ಮ ಅಧಃಪತನಕ್ಕೆ ನಮ್ಮ ಮನಸ್ಸು ಹೇಗೆ ಕಾರಣವಾಗುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ ಎರಡು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎನ್ನುವ ಒಂದು ಅಪೂರ್ವ ಮಾನಸಿಕ ಚಿತ್ರಣ ಇಲ್ಲಿದೆ.
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ ।
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ ॥೬೨॥
ಧ್ಯಾಯತಃ ವಿಷಯಾನ್ ಪುಂಸಃ ಸಂಗಃ ತೇಷು ಉಪಜಾಯತೇ |
ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧಃ ಅಭಿಜಾಯತೇ -- ವಿಷಯಗಳನ್ನೇ ನೆನೆಯುತ್ತಿರುವ ಮನುಷ್ಯನಿಗೆ ಅವುಗಳ ನಂಟು ಬೆಳೆಯುತ್ತದೆ. ನಂಟಿನಿಂದ ಆಸೆ ಕುದುರುತ್ತದೆ. ಆಸೆಗೆ ಅಡ್ಡಿಯಾದಾಗ ರೊಚ್ಚು ಮೂಡುತ್ತದೆ.
ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ ॥೬೩॥
ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮಃ |
ಸ್ಮೃತಿಭ್ರಂಶಾತ್ ಬುದ್ಧಿನಾಶಃ ಬುದ್ಧಿನಾಶಾತ್ ವಿನಶ್ಯತಿ --ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂತಹ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!
ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ, ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು ಹಚ್ಚಿಕೊಳ್ಳುವುದು(Attachment). ನಂತರ ಅವರು ನನ್ನವರಾಗಬೇಕು ಎನ್ನುವ ಆಸೆ. ಅದು ಈಡೇರದಿದ್ದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ! ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು ತೊರೆಯಬೇಕು. ಆಸೆ ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು ಅಥವಾ ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ ಮಾಡುವ ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತೀಕಾರ ಮಾಡಬೇಕು ಎನ್ನುವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ!
ಬುದ್ಧಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು ಅಧಃಪಾತದ ದಾರಿ. ನಾವು ಎತ್ತರಕ್ಕೇರಬೇಕೆಂದರೆ ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ ಮೊದಲು ನಾವು ಹಚ್ಚಿಕೊಳ್ಳುವುದನ್ನು(Over attachment) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ. ಪ್ರೀತಿ ಇರಲಿ, ಸ್ನೇಹವಿರಲಿ, ಆದರೆ ಮೋಹ ಬೇಡ. ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ ಹಚ್ಚಿಕೊಳ್ಳದೇ ಇರುವುದು(Detached attachment). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.
ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂತಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೇ ಹಾಯಾಗಿರುವುದು ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.
ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ ।
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ॥೬೪॥
ರಾಗ ದ್ವೇಷ ವಿಮುಕ್ತೈಃ ತು ವಿಷಯಾನ್ ಇಂದ್ರಿಯೈಃ ಚರನ್ |
ಆತ್ಮವಶ್ಯೈಃ ವಿಧೇಯ ಆತ್ಮಾ ಪ್ರಸಾದಮ್ ಅಧಿಗಚ್ಛತಿ -- ಒಲವು ಹಗೆತನಗಳಿಂದ ಪಾರಾಗಿ ತನ್ನ ಹಿಡಿತದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವಾಗಲೂ, ಅಂಕೆ ತಪ್ಪದವನ ಮನಸ್ಸು ತಿಳಿಗೊಳ್ಳುತ್ತದೆ.
ಇಂದ್ರಿಯ ನಿಗ್ರಹ ಅಥವಾ ಹಚ್ಚಿಕೊಳ್ಳದೇ ಇರುವುದು ಅಂದರೆ ಎಲ್ಲಾ ವಿಷಯ ಭೋಗಗಳನ್ನು ತೊರೆದು ಪ್ರಾಪಂಚಿಕ ವ್ಯವಹಾರದಿಂದ ದೂರಸರಿದು ಕಣ್ಮುಚ್ಚಿ ಕುಳಿತುಕೊಳ್ಳುವುದಲ್ಲ. ಇಂದ್ರಿಯದಿಂದ ವಿಷಯ ಗ್ರಹಿಸು, ಅದು ನಿರಂತರ. ಆದರೆ ಅದರಿಂದ ಪ್ರಭಾವಿತನಾಗಿ ಅದರ ದಾಸನಾಗಬೇಡ ಎನ್ನುತ್ತಾನೆ ಕೃಷ್ಣ. ವಿಷಯಗಳನ್ನು ಇಂದ್ರಿಯಗಳಿಂದ ಅನುಭವಿಸು, ಆದರೆ ವಿಷಯಗಳಿಗೆ ರಾಗ-ದ್ವೇಷಗಳ ಹವ್ಯಾಸವನ್ನು ಅಂಟಿಸಬೇಡ. ಏನು ಬಂತೋ ಹಾಗೇ ಅನುಭವಿಸು. ಇಂತಹ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಇಂದ್ರಿಯ ಯಾವ ವಿಷಯವನ್ನು ಗ್ರಹಿಸಿದರೂ ಅಪಾಯವಿಲ್ಲ. ತಟಸ್ಥ ಮನಸ್ಸಿನಿಂದ ಯಾವುದೇ ವಿಷಯ ಕೇಳುವುದರಿಂದ, ನೋಡುವುದರಿಂದ ಯಾವ ಅಪಾಯವೂ ಇಲ್ಲ. ಇಲ್ಲಿ ತಟಸ್ಥ ಮನಸ್ಸು ಅನ್ನುವುದಕ್ಕೆ ಉದಾಹರಣೆ ಎಂದರೆ, ಕೆಲವೊಮ್ಮೆ, ನಾವು ನಮ್ಮ ಸ್ನೇಹಿತರನ್ನು ದಾರಿ ಮಧ್ಯದಲ್ಲಿ ಭೇಟಿಯಾಗುತ್ತೇವೆ. ನಾವು ಅಲ್ಲಿ ಕುಳಿತು ಸಂಭಾಷಣೆ ಮಾಡುತ್ತೇವೆ. ಆದರೆ ನಂತರ ಯಾರಾದರೂ ಬಂದು ನಿನ್ನ ಸ್ನೇಹಿತ ಯಾವ ಬಣ್ಣದ ಬಟ್ಟೆ ಧರಿಸಿದ್ದ ಎಂದು ಕೇಳಿದರೆ ನಮಗೆ ಗೊತ್ತಿರುವುದಿಲ್ಲ. ನಾವು ನೋಡಿರುತ್ತೇವೆ, ಆದರೆ ಗಮನಿಸಿರುವುದಿಲ್ಲ. ಏಕೆಂದರೆ ಅದರ ಅಗತ್ಯವಿರುವುದಿಲ್ಲ. ಇದೇ ರೀತಿ ಮನಸ್ಸನ್ನು ತಟಸ್ಥವಾಗಿಟ್ಟು ಯಾವ ವಿಷಯ ಗ್ರಹಿಸಿದರೂ ಅಪಾಯವಿಲ್ಲ. ಇದರಿಂದ ಇಂದ್ರಿಯಗಳು ಅಧೀನವಾಗಿರುತ್ತವೆ. ಮನಸ್ಸು ವಿಧೇಯವಾಗಿರುತ್ತದೆ. ಒಳಗಿನಿಂದ ನಿರ್ಲಿಪ್ತತೆಯನ್ನು ಬೆಳೆಸಿಕೊಂಡಾಗ ಎಲ್ಲರ ಜೊತೆಗಿದ್ದು ಏಕಾಂತತೆಯನ್ನು ಗಳಿಸಬಹುದು. ಎಲ್ಲರ ಜೊತೆ ಬೆರೆತು ಬೇರೆಯಾಗಿರಬಹುದು. ಅಂತರಂಗದ ಪ್ರಪಂಚದಲ್ಲಿ ಬೇರೆಯಾಗಿರುವ ಸ್ಥಿತಿ ಇದು. ಈ ರೀತಿ ಬದುಕಲು ಕಲಿತಾಗ ಮನಸ್ಸು ತಿಳಿಗೊಳ್ಳುತ್ತದೆ. ಯಾವಾಗಲೂ ಸಂತೋಷ ಉಕ್ಕಿ ಹೊರಬರುತ್ತಿರುತ್ತದೆ. ಸಾಧನೆ ಸುಗಮವಾಗುತ್ತದೆ.
ಪ್ರಸಾದೇ ಸರ್ವದುಃಖಾನಾಂ ಹಾನಿರಸ್ಯೋಪಜಾಯತೇ ।
ಪ್ರಸನ್ನಚೇತಸೋ ಹ್ಯಾಶು ಬುದ್ಧಿಃ ಪರ್ಯವತಿಷ್ಠತಿ॥೬೫॥
ಪ್ರಸಾದೇ ಸರ್ವ ದುಃಖಾನಾಮ್ ಹಾನಿಃ ಅಸ್ಯ ಉಪಜಾಯತೇ |
ಪ್ರಸನ್ನಚೇತಸಃ ಹಿ ಅಶು ಬುದ್ಧಿಃ ಪರಿ ಅವತಿಷ್ಠತಿ--ಮನಸ್ಸು ತಿಳಿಗೊಂಡಾಗ ಸಾಧಕನ ಎಲ್ಲಾ ದುಗುಡಗಳು ಇಲ್ಲವಾಗುತ್ತವೆ. ಏಕೆಂದರೆ ಬಗೆ ತಿಳಿಗೊಂಡವನ(ಚಿತ್ತ ಶುದ್ಧಿಗೊಂಡಾಗ) ಬುದ್ಧಿ ಬೇಗನೆ ಭಗವಂತನಲ್ಲಿ ನೆಲೆಗೊಳ್ಳುತ್ತದೆ.
ಮನಸ್ಸು ಕೊಳೆಯಾದರೆ ಎಲ್ಲವೂ ಕೊಳೆ. ಮನಸ್ಸು ತಿಳಿಯಾದರೆ ಎಲ್ಲವೂ ತಿಳಿ. ಎಲ್ಲಾ ಸಮಸ್ಯೆ ಇರುವುದು ಮನಸ್ಸು ಕೊಳೆಯಾಗುವುದರಿಂದ. ನಮಗೆ ನಮ್ಮ ಮನಸ್ಸಿನ ಸ್ವಚ್ಛತೆ ಬಗ್ಗೆ ಗಮನ ಇಲ್ಲದಿದ್ದರೆ ಇತರ ಎಲ್ಲಾ ಕಾರ್ಯವೂ ವ್ಯರ್ಥ. ಮನಸ್ಸು ಸ್ವಚ್ಛವಾದರೆ ಮಡಿ. ಅದೇ ಪ್ರಸನ್ನವಾದ ಸ್ಥಿತಿ. ಮನಸ್ಸು ತಿಳಿಯಾದಾಗ ಸರ್ವ ದುಃಖವೂ ತನ್ನಷ್ಟಕ್ಕೆ ತಾನೇ ಕಣ್ಮರೆಯಾಗುತ್ತದೆ. ಇದು ದುಃಖಾತೀತ ಆನಂದ ಸ್ಥಿತಿ.
ಮನಸ್ಸು ತಿಳಿಯಾಯಿತು ಎಂದರೆ ಅದು ಭಗವಂತನನ್ನು ತಿಳಿಯಲು ಸಹಾಯ ಮಾಡುತ್ತದೆ. ಕೊಳೆಯಾದ ಮನಸ್ಸಿನಿಂದ ಭಗವಂತನ ಚಿಂತನೆ ಸಾಧ್ಯವಿಲ್ಲ. ಭಗವಂತನನ್ನು ತಿಳಿದ ಮೇಲೆ ದುಃಖವಿಲ್ಲ. ಬುದ್ಧಿ-ಗಟ್ಟಿಗೊಂಡು ಭಗವಂತನ ಅಪರೋಕ್ಷ ಜ್ಞಾನದಲ್ಲಿ ನಿಂತುಬಿಡುತ್ತದೆ. ಈ ಸ್ಥಿತಿಯಲ್ಲಿ, ಯಾವ ದೆಸೆಯಲ್ಲಿ ಯೋಚನೆ ಹೋದರೂ ಕೂಡಾ ಅದು ಭಗವಂತನಲ್ಲಿ ಹೋಗಿ ನಿಲ್ಲುತ್ತದೆ. ಯಾವುದನ್ನು ಕೇಳಿದರೂ, ಯಾವುದನ್ನು ನೋಡಿದರೂ, ಅದರ ಹಿಂದೆ ಇರುವ ಜಗತ್ತಿನ ಮೂಲ ಶಕ್ತಿಯ ಚಿಂತನೆ ಮನಸ್ಸಿಗೆ ಬಂದುಬಿಡುತ್ತದೆ. ಆಗ ಯಾವುದೋ ಸಣ್ಣ ಸಂಗತಿಗಾಗಿ ಕೊರಗುವ ಪ್ರಶ್ನೆಯೇ ಉಳಿಯುವುದಿಲ್ಲ. ತಿಳಿಯಾದ ಮನಸ್ಸು ಭಗವನ್ಮಯವಾಗುತ್ತದೆ. ಒಮ್ಮೆ ಭಗವಂತ ಮನಸ್ಸಿನಲ್ಲಿ ತುಂಬಿದ ಎಂದರೆ ಸರ್ವವೂ ಆನಂದಮಯ. ಆನಂತರ ದುಃಖವೆಂಬುವುದಿಲ್ಲ. ಈ ಆನಂದ ಅಪರಿಮಿತ.
ನಾಸ್ತಿ ಬುದ್ಧಿರಯುಕ್ತಸ್ಯ ನಚಾಯುಕ್ತಸ್ಯ ಭಾವನಾ ।
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್॥೬೬॥
ನ ಅಸ್ತಿ ಬುದ್ಧಿಃ ಅಯುಕ್ತಸ್ಯ ನ ಚ ಅಯುಕ್ತಸ್ಯ ಭಾವನಾ |
ನ ಚ ಅಭಾವಯತಃ ಶಾಂತಿಃ ಅಶಾಂತಸ್ಯ ಕುತಃ ಸುಖಮ್--ಮನಸ್ಸು ಮಣಿಸದವನಿಗೆ ತಿಳಿಯಾದ ತಿಳಿವಿಲ್ಲ. ಮನಸ್ಸು ಮಣಿಸದವನಿಗೆ ಧ್ಯಾನವೂ ಇಲ್ಲ. ಧ್ಯಾನ ಇರದವನಿಗೆ ಮುಕ್ತಿಯಿಲ್ಲ[ಭಗವಂತನಲ್ಲಿ ಬಗೆ ನೆಲೆಸದು]. ಮುಕ್ತನಾಗದವನಿಗೆ[ಭಗವಂತನಲ್ಲಿ ಬಗೆ ನೆಡದವನಿಗೆ] ಎಲ್ಲಿಯ ಸುಖ ?
ಸುಖ ಬೇಕಿದ್ದರೆ ಶಾಂತಿ ಬೇಕು. ಮನಸ್ಸು ಪ್ರಸನ್ನವಾಗದೆ ವಿಕ್ಷಿಪ್ತವಾಗಿದ್ದರೆ ಅದು ಭಗವಂತನನ್ನು ಹೋಗಿ ಸೇರುವುದಿಲ್ಲ. ಯಾರ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಿಲ್ಲವೋ ಅವನಿಗೆ ಅಪರೋಕ್ಷವಿಲ್ಲ. ಅಂತಹವನ ಮನಸ್ಸು ತಿಳಿಯಾಗದು. ಇಂತಹವರು ಏಕಾಗ್ರವಾಗಿ ಚಿಂತಿಸಲು ಸಾಧ್ಯವಿಲ್ಲ. ಏಕಾಗ್ರವಾಗಿ ಚಿಂತಿಸದ ಹೊರತು ಯಥಾರ್ಥ ಜ್ಞಾನವಿಲ್ಲ. ಇಂತಹವರಿಗೆ ಧ್ಯಾನ(Meditation) ಅಸಾಧ್ಯ. ಇಲ್ಲಿ ಧ್ಯಾನ ಅಂದರೆ ಏಕಾಗ್ರವಾಗಿ ಒಂದು ವಸ್ತುವಿನ ಬಗ್ಗೆ ಚಿಂತಿಸುವುದು. ಯಾವುದೇ ಒಂದು ವಸ್ತುವಿನ ಬಗ್ಗೆ ನಮಗೆ ಖಚಿತವಾದ ಅರಿವು ಬರಬೇಕಾದರೆ ನಮಗೆ ಏಕಾಗ್ರತೆ ಬೇಕು. ಅದನ್ನೇ ಇಲ್ಲಿ 'ಭಾವನಾ' ಎಂದಿದ್ದಾರೆ. ಮನಸ್ಸು ಏಕಾಗ್ರವಾದರೆ ಮಾತ್ರ ಆಳವಾದ ಚಿಂತನೆ ಸಾಧ್ಯ. ಯಾವುದನ್ನೂ ಆಳವಾಗಿ ಚಿಂತಿಸದ ಹೊರತು ಅದರ ಬಗ್ಗೆ, ಅದರ ವೈಶಾಲ್ಯತೆ ಬಗ್ಗೆ ಅರಿವು ಮೂಡದು. ಹೀಗೆ ಆಳಕ್ಕಿಳಿದು ಚಿಂತನೆ ಮಾಡದವನಿಗೆ ಶಾಂತಿ ಇಲ್ಲ. ಇಲ್ಲಿ ಶಾಂತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಮೇಲ್ನೋಟಕ್ಕೆ ಶಾಂತಿ ಅಂದರೆ ಆನಂದಮಯವಾದ ಸ್ಥಿತಿ. ಶಾಸ್ತ್ರಕಾರರ ಪ್ರಕಾರ ಜೀವನಿಗೆ ಪೂರ್ಣ ಆನಂದದ ಸ್ಥಿತಿ ಅಂದರೆ ಮೋಕ್ಷ. ಆದ್ದರಿಂದ ಯಾರು ಧ್ಯಾನದಿಂದ ಭಗವಂತನನ್ನು ಕಂಡುಕೊಳ್ಳುವುದಿಲ್ಲವೋ ಅವನಿಗೆ ಮೋಕ್ಷವಿಲ್ಲ. ಮೋಕ್ಷದ ದಾರಿಯಲ್ಲಿ ಸಾಗದವನಿಗೆ ಸುಖವಿಲ್ಲ. ಇನ್ನು ಶಾಂತಿ ಎಂದರೆ ಆನಂದದ ತುತ್ತತುದಿ ಅಥವಾ ಪರಾಕಾಷ್ಠೆ. ಮನಸ್ಸು ಭಗವಂತನಲ್ಲಿ ನೆಲೆಗೊಂಡಾಗ ನಮಗೆ ಶಾಂತಿ.
ಹೀಗೆ ಇಂದ್ರಿಯಗಳನ್ನು ಸಂಯಮ ಮಾಡಿಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಅದರಲ್ಲಿ ಆಳವಾಗಿ ಚಿಂತನೆ ಮಾಡಿ, ಸತ್ಯವನ್ನು ಕಂಡುಕೊಳ್ಳಬೇಕು. ನಾವು ಹೊರ ಪ್ರಪಂಚವನ್ನು ಬಿಟ್ಟು ಒಳ ಪ್ರಪಂಚದಲ್ಲಿ ಆಳವಾಗಿ ಮುಳುಗದ ಹೊರತು, ಸತ್ಯದ ಸಾಕ್ಷಾತ್ಕಾರವಾಗದು. ಸತ್ಯದ ಸಾಕ್ಷಾತ್ಕಾರವಾಗದ ಹೊರತು ಸುಖವಿಲ್ಲ.
ಇಂದ್ರಿಯಾಣಾಂ ಹಿ ಚರತಾಂ ಯನ್ಮನೋSನುವಿಧೀಯತೇ ।
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ ॥೬೭॥
ಇಂದ್ರಿಯಾಣಾಂ ಹಿ ಚರತಾಮ್ ಯತ್ ಮನಃ ಅನುವಿಧೀಯತೇ |
ತತ್ ಅಸ್ಯ ಹರತಿ ಪ್ರಜ್ಞಾಮ್ ವಾಯುಃ ನಾವಮ್ ಇವ ಅಂಭಸಿ--ವಿಷಯಗಳತ್ತ ಹರಿಯುವ ಇಂದ್ರಿಯಗಳ ಬೆನ್ನು ಹತ್ತುವಂತೆ ಮನಸ್ಸು ರೂಪುಗೊಂಡಿದೆಯಲ್ಲವೇ? ಆದ್ದರಿಂದ, ಅದು ಸಾಧಕನ ಅರಿವನ್ನು ದಾರಿಗೆಡಿಸಿಬಿಡುತ್ತದೆ-ಕಡಲಲ್ಲಿ ಬಿರುಗಾಳಿ ಹಡಗನ್ನು ಹೇಗೆ ದಾರಿ ತಪ್ಪಿಸುತ್ತದೋ ಹಾಗೆ.
ಇಷ್ಟೆಲ್ಲಾ ಗಹನವಾದ ವಿಚಾರ ಇದ್ದರೂ ಕೂಡ, ಮನಸ್ಸು ಏಕೆ ಅಂತರಂಗದ ಆಳಕ್ಕಿಳಿಯುವುದಿಲ್ಲ? ಅದು ಸಹಜ ಎನ್ನುತ್ತಾನೆ ಕೃಷ್ಣ. ಏಕೆಂದರೆ ಮನಸ್ಸಿಗೊಂದು ಸ್ವಭಾವವಿದೆ. ಅದು ಹೊಸದನ್ನು ಅಥವಾ ತಿಳಿಯದೇ ಇರುವುದನ್ನು ನಿರಾಕರಿಸುತ್ತದೆ ಹಾಗೂ ಪರಿಚಿತವಾದುದನ್ನು ಇಷ್ಟಪಡುತ್ತದೆ. ಮನಸ್ಸಿಗೆ ಒಳಪ್ರಪಂಚ ಅಪರಿಚಿತ. ಆದ್ದರಿಂದ ಅದು ಒಳಪ್ರಪಂಚದತ್ತ ಹರಿಯುವುದಿಲ್ಲ. ಮನಸ್ಸಿಗೆ ಗಟ್ಟಿಯಾಗಿ ಹೇಳಿದರೆ ಅದು ಅಂತರ್ಮುಖವಾಗುತ್ತದೆ; ಆದರೆ ಆ ಪ್ರಯತ್ನ ನಾವು ಮಾಡುವುದಿಲ್ಲ! ಈ ಅಪಾಯವನ್ನು ಈ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.
ಮನಸ್ಸಿಗೆ ನಾವು ಬಾಲ್ಯದಿಂದ ಏನನ್ನು ಅಭ್ಯಾಸ ಮಾಡಿಸಿದ್ದೆವೋ ಅದರ ಹಿಂದೆ ಅದು ಹೋಗುತ್ತದೆ. ಉದಾಹರಣೆಗೆ ಬಾಲ್ಯದಿಂದಲೂ ಶಾಖಾಹಾರಿಯಾಗಿದ್ದವನಿಗೆ ಮಾಂಸವನ್ನು ಕಂಡಾಗ ಅಸಹ್ಯ ಎನಿಸುತ್ತದೆ. ಆದರೆ ಅದೇ ಮಾಂಸ ಮಾರುವವ ಮಾಂಸದ ಮಧ್ಯದಲ್ಲೇ ಇದ್ದು ಅದನ್ನೇ ಬೇಯಿಸಿ ತಿಂದರೂ ಅವನಿಗೆ ಹೇಸಿಕೆ ಅನಿಸುವುದಿಲ್ಲ. ಇದೆಲ್ಲವೂ ಮನಸ್ಸಿಗೆ ನಾವು ಕೊಡುವ ತರಬೇತಿ. ಮನಸ್ಸು ನಿರಂತರ ಯಾವುದನ್ನು ನೋಡುತ್ತದೋ ಅದನ್ನೇ ರೂಢಿ ಮಾಡಿಕೊಳ್ಳುತ್ತದೆ. ಆ ರೀತಿ ಮನಸ್ಸು ಭಗವಂತನಿಂದ ನಿರ್ಮಿಸಲ್ಪಟ್ಟಿದೆ. ಇಂದ್ರಿಯಗಳು ನಿತ್ಯ ಯಾವುದನ್ನು ನೋಡುತ್ತವೋ ಅದನ್ನು ಮೆಚ್ಚುವಂತಹ ಸ್ವಭಾವವನ್ನು ಭಗವಂತ ಮನಸ್ಸಿಗೆ ಕೊಟ್ಟಿದ್ದಾನೆ. ಇಂತಹ ಮನಸ್ಸಿನ ಸ್ವಭಾವವನ್ನು ಅರಿಯದಿದ್ದರೆ ಅಪಾಯಕಾರಿ. ಅದು ನಮ್ಮ ಪ್ರಜ್ಞೆಯನ್ನು ಅಪಹಾರ ಮಾಡಿಬಿಡುತ್ತದೆ. ಇದನ್ನು ಒಂದು ಒಳ್ಳೆಯ ದೃಷ್ಟಾಂತದ ಮುಖೇನ ಕೃಷ್ಣ ವಿವರಿಸಿದ್ದಾನೆ:
ನಾವು ಹಾಯಿ ದೋಣಿಯಲ್ಲಿ ಪ್ರಯಾಣಿಸುವ ನಾವಿಕನಂತೆ. ನಮ್ಮ ಮನಸ್ಸು ಆ ದೋಣಿಗೆ ಕಟ್ಟಿದ ಬಟ್ಟೆ. ಒಂದು ವೇಳೆ ನಮಗೆ ಈ ಬಟ್ಟೆಯನ್ನು ತಿರುಗಿಸಿ ನಮಗೆ ಬೇಕಾದಂತೆ ದೋಣಿಯನ್ನು ನಿಯಂತ್ರಿಸುವ ಕಲೆ ಗೊತ್ತಿಲ್ಲದಿದ್ದರೆ, ಗಾಳಿ ಬೀಸಿದತ್ತ ನಾವು ಹೋಗುತ್ತೇವೆಯೇ ಹೊರತು ನಮಗೆ ತಲುಪಬೇಕಾದಲ್ಲಿಗಲ್ಲ. ಈ ದೃಷ್ಟಾಂತ ತುಂಬಾ ಔಚಿತ್ಯಪೂರ್ಣವಾಗಿದೆ. ಒಂದು ವೇಳೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವ ಕಲೆಯನ್ನು ಕಲಿಯದಿದ್ದರೆ ಬದುಕು ಛಿದ್ರವಿಚ್ಛಿದ್ರವಾಗುತ್ತದೆ. ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
ತಸ್ಮಾದ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥೬೮॥
ತಸ್ಮಾತ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ |
ಇಂದ್ರಿಯಾಣಿ ಇಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ-ಆದ್ದರಿಂದ ಓ ಮಹಾವೀರಾ, ಯಾರ ಇಂದ್ರಿಯಗಳು ಎಲ್ಲಾ ಬಗೆಯಿಂದಲೂ ಇಂದ್ರಿಯ ವಿಷಯಗಳಿಂದ ಪಾರಾಗಿ ಹಿಡಿತದಲ್ಲಿರುವವೋ ಅವನ ಅರಿವು ಗಟ್ಟಿಗೊಂಡಿರುತ್ತದೆ.
ಕೃಷ್ಣ ಹೇಳುತ್ತಾನೆ, ಮನಸ್ಸು ಯಾವಾಗಲೂ ಹೊರಗಿನ ಇಂದ್ರಿಯಗಳು ಏನನ್ನು ಅಭ್ಯಾಸ ಮಾಡಿದವೋ ಅದರ ಹಿಂದೆಯೇ ಹೋಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸದೆ ಮನಸ್ಸನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಮೊದಲು ನಾವು ಇಂದ್ರಿಯಗಳಿಗೆ ತರಬೇತಿ ಕೊಡಬೇಕು. ಇದಕ್ಕಾಗಿ ಚಿಕ್ಕ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅತಿ ಮುಖ್ಯ. ಚಿಕ್ಕಂದಿನಿಂದಲೂ ಪಾಲಿಸಿಕೊಂಡು ಬಂದ ಅಭ್ಯಾಸವನ್ನು ಮುರಿಯುವುದು ಅಸಾಧ್ಯ. ಈ ಕಾರಣಕ್ಕಾಗಿ ಹಿಂದೆ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಅನೇಕ ಸಂಸ್ಕಾರಗಳನ್ನು ರೂಢಿ ಮಾಡಿಕೊಂಡು ಮಕ್ಕಳಿಗೆ ತರಬೇತಿ ಕೊಡುತ್ತಿದ್ದರು. ಆದರೆ ಇಂದು ಶಾಲೆಯಲ್ಲಾಗಲೀ, ಮನೆಯಲ್ಲಾಗಲೀ ಇಂತಹ ಮಾರ್ಗದರ್ಶನ ಮಕ್ಕಳಿಗೆ ಸಿಗದೇ, ಇಂದಿನ ಯುವ ಪೀಳಿಗೆ ಬಿರುಗಾಳಿಗೆ ಸಿಕ್ಕ ದೋಣಿಯಂತಾಗಿದೆ.
ಇಂದ್ರಿಯ ನಿಗ್ರಹ ಮಾಡಲು ಪೂರಕವಾದ ಸಂಸ್ಕಾರ ಬಾಲ್ಯದಿಂದ ಬಂದರೆ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುವ ಪರಿಸ್ಥಿತಿ ಬಂದೊದಗುವುದಿಲ್ಲ. ಇದರಿಂದ ಮನಸ್ಸು ಗಟ್ಟಿಯಾಗುತ್ತದೆ. ಏಕಾಗ್ರತೆ ಸಾಧ್ಯವಾಗುತ್ತದೆ. ಏಕಾಗ್ರತೆ ಬಂದಾಗ ಅರಿವು ಗಟ್ಟಿಗೊಳ್ಳುತ್ತದೆ.
ಮನಸ್ಸನ್ನು ನಿಗ್ರಹ ಮಾಡುವುದು ಹೇಗೆ, ನಿಗ್ರಹ ಮಾಡಿದಂತಹ ಮನಸ್ಸು ಯಾವ ರೀತಿ ವರ್ತಿಸುತ್ತದೆ, ಅಂತಹ ಮನಃಸ್ಥಿತಿಯವರು ಹೇಗೆ ಜ್ಞಾನಿಗಳಾಗಲು ಸಾಧ್ಯ- ಅನ್ನುವ ಒಂದು ವಿಸ್ತಾರವಾದ ಮನೋವಿಶ್ಲೇಷಣೆಯನ್ನು ಕೃಷ್ಣ ಮಾಡಿದ. ಅರ್ಜುನ ಹಾಕಿದ ಮೂಲ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ. ಒಬ್ಬ ಸ್ಥಿತಪ್ರಜ್ಞ ಹೇಗಿರುತ್ತಾನೆ, ಆತನ ನಡೆ ನುಡಿ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಮಹತ್ತರವಾದ ಉತ್ತರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ॥೬೯॥
ಯಾ ನಿಶಾ ಸರ್ವ ಭೂತಾನಾಂ ತಸ್ಯಾಮ್ ಜಾಗರ್ತಿ ಸಂಯಮೀ |
ಯಸ್ಯಾಮ್ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ ಮುನೇಃ -- ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಎಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು.
ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ. ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗೂ ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ ಬಗ್ಗೆ ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೇ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿಧಿಧ್ಯಾಸನ ಅತಿ ಮುಖ್ಯ. ಇದನ್ನೇ "ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿಧಿಧ್ಯಾಸಿತವ್ಯಃ ಚ" ಎಂದಿದ್ದಾರೆ. ಮನನ ಶೀಲನಾದವ 'ಮುನಿ' ; ಅವನೇ 'ಪಶ್ಯ' ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ.
ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.
ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ ।
ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ ॥೭೦॥
ಆಪೂರ್ಯಮಾಣಮ್ ಅಚಲಪ್ರತಿಷ್ಠಮ್ ಸಮುದ್ರಮ್ ಅಪಃ ಪ್ರವಿಶಂತಿ ಯದ್ವತ್ |
ತದ್ವತ್ ಕಾಮಾಃ ಯಮ್ ಪ್ರವಿಶಂತಿ ಸರ್ವೇ ಸಃ ಶಾಂತಿಮ್ ಅಪ್ನೋತಿ ನ ಕಾಮಕಾಮೀ--ತುಂಬಿದರೂ ತುಳುಕದೇ ನಿಂತ ಕಡಲನ್ನು ಎಲ್ಲಾ ನೀರುಗಳು ಬಂದು ಸೇರುವಂತೆ, ಯಾರನ್ನು ಎಲ್ಲಾ ವಿಷಯಗಳು ತುಂಬಿಯೂ ತುಳುಕದಂತೆ ಬಂದು ಸೇರುವವೋ ಅವನು ಮುಕ್ತಿ ಪಡೆಯುತ್ತಾನೆ. ಹೊರತು ಕೆಟ್ಟ ಬಯಕೆಗಳ ಬೆನ್ನು ಹತ್ತಿದವನಲ್ಲ.
ಭಗವಂತನನ್ನು ಕಂಡವನು, ಸತ್ಯದ ಸಾಕ್ಷಾತ್ಕಾರವಾದವನು. ಭಗವಂತನನ್ನು ಕಾಣುವ ಸರಿ ದಾರಿಯಲ್ಲಿ ನಡೆಯುವವನು ಹೇಗಿರುತ್ತಾನೆ ಎನ್ನುವ ವಿಷಯದ ಮೇಲೆ ಕೃಷ್ಣ ಇಲ್ಲಿ ಇನ್ನಷ್ಟು ವಿವರಣೆಯನ್ನು ಕೊಟ್ಟಿದ್ದಾನೆ: ಆತನ ಮನಸ್ಸು ಸದಾ ಆನಂದವಾಗಿರುತ್ತದೆ. ಅದು ಭಗವಂತನಲ್ಲಿ ನೆಲೆಗೊಂಡಿರುತ್ತದೆ. ಆತ ಕಿರು ತೊರೆಗಳಂತೆ ಇರದೆ, ಕಡಲಿನಂತಿರುತ್ತಾನೆ. ಸಮುದ್ರಕ್ಕೆ ಎಲ್ಲಾ ನದಿಗಳು ಬಂದು ಸೇರಿದರೂ ಅದು ಉಕ್ಕೇರುವುದಿಲ್ಲ. ಕಡಲು ಮಳೆ ಬಂದಾಗ ಉಕ್ಕಿ ಹರಿದು- ಬೇಸಿಗೆ ಬಂದಾಗ ಬತ್ತಿ ಹೋಗುವುದಿಲ್ಲ. ಅದೇ ರೀತಿ ಸಾಧಕ. ಪ್ರಪಂಚದ ಎಲ್ಲಾ ಭೋಗಗಳು ಅವನನ್ನು ಪ್ರವೇಶಿಸಿದರೂ ಕೂಡಾ, ಆತ ವಿಚಲಿತನಾಗದೇ ಸುಖ-ದುಃಖವನ್ನು ಮೀರಿ ನಿಲ್ಲುತ್ತಾನೆ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಆತ ಭಗವಂತನಲ್ಲಿ ನಿಷ್ಠೆಯನ್ನಿಟ್ಟು ಮೋಕ್ಷವನ್ನು ಪಡೆಯುತ್ತಾನೆ. ಆದರೆ ಬಯಕೆಗಳ ಬೆನ್ನು ಹತ್ತಿದವನು ಅದರಿಂದ ಈಚೆ ಬಾರದೆ ಎಂದೂ ನಿಜವಾದ ಸುಖ ಕಾಣಲಾರ.
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ ।
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ ನಿಸ್ಪೃಹಃ |
ನಿರ್ಮಮಃ ನಿರಹಂಕಾರಃ ಸಃ ಶಾಂತಿಮ್ ಅಧಿಗಚ್ಛತಿ--ಯಾರು ಎಲ್ಲಾ ವಿಷಯಗಳನ್ನು, ಮನಸೋಲದೇ, ಕೆಟ್ಟ ಆಸೆಗೆ ಬಲಿ ಬೀಳದೇ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೋ-ಅವನು ಮುಕ್ತಿ ಪಡೆಯುತ್ತಾನೆ.
ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾನೋ, ಅವನು ನಿಜವಾದ ಸಾಧಕನೆನಿಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು ಮೈಥುನವನ್ನು ಅಭ್ಯಾಸ ಮಾಡಿಕೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ, ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೇ ಬದುಕುತ್ತಾನೆ. ಅವನು ನಿಜವಾದ 'ಮನುಷ್ಯ'ನೆನಿಸುತ್ತಾನೆ. ಇಂತಹನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗೂ ಆತ ಮುಕ್ತಿಯನ್ನು ಪಡೆಯುತ್ತಾನೆ.
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತಿ ।
ಸ್ಥಿತ್ವಾSಸ್ಯಾಮಂತಕಾಲೇSಪಿ ಬ್ರಹ್ಮ ನಿರ್ಬಾಣಮೃಚ್ಛತಿ॥೭೨॥
ಏಷಾ ಬ್ರಾಹ್ಮೀ ಸ್ಥಿತಿಃ ಪಾರ್ಥ ನ ಏನಾಮ್ ಪ್ರಾಪ್ಯ ವಿಮುಹ್ಯತಿ |
ಸ್ಥಿತ್ವಾ ಅಸ್ಯಾಮ್ ಅಂತಕಾಲೇ ಅಪಿ ಬ್ರಹ್ಮನಿರ್ಬಾಣಮ್ ಋಚ್ಛತಿ- - ಪಾರ್ಥ, ಇದು ಬ್ರಹ್ಮ ಜ್ಞಾನಿಯ ಗುರುತು.
ಇದನ್ನು ಪಡೆದು ಮತ್ತೆ ಮೈಮರೆಯುವುದಿಲ್ಲ. ಕೊನೆಯ ಕಾಲದಲ್ಲೂ ಈ ನೆಲೆಯಲ್ಲಿ ನಿಂತವನು ಕಾಯದಿಂದಲೂ ಸಾಯದ ಪರತತ್ವವನ್ನು ಸೇರುತ್ತಾನೆ.
ಭಗವಂತನಲ್ಲಿ ನೆಲೆಗೊಳ್ಳತಕ್ಕಂತಹವನ ಲಕ್ಷಣ ಬ್ರಾಹ್ಮೀ ಸ್ಥಿತಿ. ಈವರೆಗೆ ಹೇಳಿರುವುದು ಒಬ್ಬ ಬ್ರಹ್ಮಜ್ಞಾನಿಯ ಲಕ್ಷಣ. ಬ್ರಹ್ಮನಲ್ಲಿ ಸ್ಥಿತನಾದ ಬ್ರಹ್ಮ ಪ್ರಜ್ಞೆ ಜಾಗೃತನಾದವನ ಲಕ್ಷಣ. ಇಂತಹ ಬ್ರಹ್ಮಜ್ಞಾನಿಯನ್ನು ಆತನ ಬಾಹ್ಯ ಕ್ರಿಯೆಯಿಂದಾಗಲೀ, ವೇಷ ಭೂಷಣದಿಂದಾಗಲೀ ಗುರುತಿಸಲಾಗದು. ಆತನ ಮಾನಸಿಕ ಸ್ಥಿತಿ ಆತನ ಸ್ಥಾನವನ್ನು ತಿಳಿಸುತ್ತದೆ.
ತನ್ನ ಸಾವಿನ ಕೊನೇ ಕ್ಷಣದಲ್ಲೂ ಕೂಡಾ ಭಗವಂತನ ಪ್ರಜ್ಞೆ ಜಾಗೃತವಾಗಿದ್ದರೆ ಆತ ನೇರ ಮರು ಹುಟ್ಟಿಲ್ಲದ ಮೋಕ್ಷವನ್ನು ಸೇರುತ್ತಾನೆ.
ಇತಿ ದ್ವಿತೀಯೋಧ್ಯಾಯಃ
ಎರಡನೇ ಅಧ್ಯಾಯ ಮುಗಿಯಿತು
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.