Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ - 4

         ಹಿಂದೆ ಶ್ರೀಕೃಷ್ಣ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಎರಡನೇ ಅಧ್ಯಾಯದಲ್ಲಿ ಪ್ರಸ್ತಾಪಿಸಿ, ಆ ನಂತರ ಮೂರನೇ ಅಧ್ಯಾಯದಲ್ಲಿ ಕರ್ಮಯೋಗದ ವಿಸ್ತಾರವನ್ನು ತಿಳಿಸಿದ್ದಾನೆ. ನಾಲ್ಕನೇ ಅಧ್ಯಾಯದಲ್ಲಿ ಭಗವಂತನ ಜ್ಞಾನದ ಅರಿವಿನ ಮುಖ ಮತ್ತು ಕರ್ಮದ ಪ್ರಭೇದಗಳನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದ ಜ್ಞಾನಯೋಗ ಮತ್ತು ಕರ್ಮಯೋಗವನ್ನೇ ವಿಸ್ತರಿಸಿ ಜ್ಞಾನದ ಮಹತ್ವ ಮತ್ತು ಕರ್ಮದ ಪ್ರಭೇದಗಳ ಜೊತೆಗೆ ಈ ಎರಡು ಮಾರ್ಗದಿಂದ ನಾವು ಪಡೆಯತಕ್ಕಂತಹ ಭಗವಂತನ ಮಹಿಮೆ- ಇದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ. ಈ ಅಧ್ಯಾಯ ಕೃಷ್ಣನ ಮಾತಿನೊಂದಿಗೆ ಆರಂಭವಾಗುತ್ತದೆ.

ಭಗವಾನುವಾಚ ।
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್ ।
ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇSಬ್ರವೀತ್ ॥೧॥

ಭಗವಾನ್ ಉವಾಚ-ಭಗವಂತ ಹೇಳಿದನು:
ಇಮಮ್ ವಿವಸ್ವತೇ ಯೋಗಮ್ ಪ್ರೋಕ್ತವಾನ್ ಅಹಮ್ ಅವ್ಯಯಮ್ |  
ವಿವಸ್ವಾನ್ ಮನವೇ ಪ್ರಾಹ ಮನುಃ ಇಕ್ಷ್ವಾಕವೇ ಅಬ್ರವೀತ್ -ಅಳಿವಿರದ ಈ ಸಾಧನಾ ಮಾರ್ಗವನ್ನು ನಾನು ಸೂರ್ಯನಿಗೆ ಹೇಳಿದ್ದೆ. ಸೂರ್ಯ ಮನುವಿಗೆ ಹೇಳಿದ್ದ. ಮನು ಇಕ್ಷ್ವಾಕುವಿಗೆ ಹೇಳಿದ್ದ.

ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋವಿದುಃ ।
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ ॥೨॥

ಏವಮ್ ಪರಂಪರಾ ಪ್ರಾಪ್ತಮ್ ಇಮಮ್ ರಾಜ ಋಷಯಃ ವಿದುಃ |
ಸಃ ಕಾಲೇನ ಇಹ ಮಹತಾ ಯೋಗಃ ನಷ್ಟಃ ಪರಂತಪ-ಹೀಗೆ ಒಬ್ಬರಿಂದ ಒಬ್ಬರಿಗೆ ಹರಿದು ಬಂದಿರುವ ಇದನ್ನು ಜ್ಞಾನಿಗಳಾದ ಅರಸರು ಅರಿತಿದ್ದರು. ಓ ಅರಿಗಳನ್ನು ತರಿದವನೇ, ತುಂಬಾ ಕಾಲದ ಬಳಿಕ ಆ ಅರಿವಿನ ದಾರಿ ಈ ನೆಲದಲ್ಲಿ ಕಣ್ಮರೆಯಾಯಿತು.

ಸ ಏವಾಯಂ ಮಯಾ ತೇSದ್ಯ ಯೋಗಃ ಪ್ರೋಕ್ತಃ ಪುರಾತನಃ।
ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ ॥೩॥

ಸಃ ಏವ ಅಯಮ್ ಮಯಾ ತೇ ಅದ್ಯ ಯೋಗಃ ಪ್ರೋಕ್ತಃ ಪುರಾತನಃ |
ಭಕ್ತಃ ಅಸಿ ಮೇ ಸಖಾ ಚ ಇತಿ ರಹಸ್ಯಮ್ ಹಿ ಏತತ್ ಉತ್ತಮಮ್-- ಅದೇ ಹಳೆಯ ಅರಿವಿನ ದಾರಿಯನ್ನು ನಾನೀಗ ನಿನಗೆ ಹೇಳಿದೆ -ನೀನು ನನ್ನ ಭಕ್ತ ಮತ್ತು ಗೆಳೆಯ ಎನ್ನುವುದಕ್ಕಾಗಿ. ಇದು ತುಂಬಾ ರಹಸ್ಯವಾದ ಶ್ರೇಷ್ಠ ಸಂಗತಿ.

ಈ ಮೇಲಿನ ಮೂರು ಶ್ಲೋಕದಲ್ಲಿ ಸೃಷ್ಟಿಯ ಆದಿಯಿಂದ ಈ ಜ್ಞಾನದ ಪರಂಪರೆ ಹೇಗೆ ಬೆಳೆದುಬಂತು ಎನ್ನುವ ಚಿತ್ರಣವನ್ನು ಕೃಷ್ಣ ಕೊಟ್ಟಿದ್ದಾನೆ. ವಾಸ್ತವಿಕವಾಗಿ ಜ್ಞಾನದ ಮೂಲ ವೇದಗಳು. ವೇದದ ಸಾರವನ್ನು ಸಂಗ್ರಹ ಮಾಡಿ, ಸಮಸ್ತ ವೇದಾರ್ಥ ಸಂಗ್ರಹವಾದಂತಹ ಒಂದು ಗ್ರಂಥ ರಚನೆಯಾಯಿತು. ಅದನ್ನು ಪಂಚರಾತ್ರ ಎಂದು ಕರೆದರು. ಪಂಚರಾತ್ರ ಅನ್ನುವುದು ವೈದಿಕ ವಾಙ್ಮಯದ ಜ್ಞಾನಯೋಗ ಮತ್ತು ಕರ್ಮಯೋಗಗಳ ಸಮಷ್ಠಿರೂಪವಾಗಿರುವಂತಹ ಗ್ರಂಥ. ಆ ಪಂಚರಾತ್ರದ ಸಾರಸಂಗ್ರಹವೇ ಭಗವದ್ಗೀತೆ. ಸೃಷ್ಟಿಯ ಆದಿಯಲ್ಲಿ, ಸ್ವಾಯಂಭುವ ಮನ್ವಂತರದಲ್ಲಿ ಭಗವಂತ ಪಂಚರಾತ್ರವನ್ನು ಚತುರ್ಮುಖನಿಗೆ ಉಪದೇಶಿಸಿದ. ಹೀಗೆ ಪ್ರಪಂಚ ಸೃಷ್ಟಿಯಾದ ಮೊದಲಲ್ಲೇ ಪಂಚರಾತ್ರದ ಜ್ಞಾನ ಚತುರ್ಮುಖನಿಗೆ ಹಾಗೂ ದೇವತೆಗಳಿಗೆ ಬಂತು. ಸೂರ್ಯ ವೈವಸ್ವತ ಮನ್ವಂತರದಲ್ಲಿ ಇದನ್ನು ಮನುವಿಗೆ, ಮನು ಇಕ್ಷ್ವಾಕುವಿಗೆ ಹೇಳಿದ. ಇದನ್ನೇ ಕೃಷ್ಣ ಇಲ್ಲಿ ಅರ್ಜುನನನಿಗೆ ವಿವರಿಸುತ್ತಿದ್ದಾನೆ.
ಮೊಟ್ಟ ಮೊದಲು ದೇವತೆಗಳು ಭಗವಂತನಿಂದ ಈ ಜ್ಞಾನವನ್ನು ಪಡೆದರು. ಈ ದೇವತೆಗಳಲ್ಲಿ ಸೂರ್ಯನೂ ಒಬ್ಬ. ಸೂರ್ಯ ಭೂಮಿಗೂ ದೇವತೆಗಳಿಗೂ ಸಂಪರ್ಕ ಕೊಡುವ ದೇವತೆ. ಈತನಿಂದ ವೈವಸ್ವತ ಮನ್ವಂತರದ ಅಭಿಮಾನಿಯಾದ ಮನುವಿಗೆ ಈ ಜ್ಞಾನ ಹರಿದು ಬಂತು. ಮನು ಇದನ್ನು ತನ್ನ ಮಗ ಇಕ್ಷ್ವಾಕುವಿಗೆ ಹೇಳಿದ. ಈತ ಭೂಲೋಕದಲ್ಲಿ ಚಕ್ರವರ್ತಿಯಾಗಿ ಬಾಳಿದ ಮಹಾ ರಾಜರ್ಷಿ. ಹೀಗೆ ಈ ಜ್ಞಾನ ದೇವತೆಗಳಿಂದ ಭೂಲೋಕಕ್ಕೆ ಹರಿದು ಬಂತು.
ಜ್ಞಾನ ಎನ್ನುವುದು ಅನಾದಿನಿತ್ಯ. ಇದು ಅಳಿವಿರದ ವಿದ್ಯೆ. ಪ್ರತಿ ಸೃಷ್ಟಿಯ ಆದಿಯಲ್ಲೂ ಈ ವಿದ್ಯೆ ಭಗವಂತನಿಂದ ಹೇಳಲ್ಪಡುತ್ತದೆ. ನಂತರ ದೇವತೆಗಳು, ದೇವತೆಗಳಿಂದ ರಾಜರ್ಷಿಗಳು, ನಂತರ ಋಷಿಗಳು ಹೀಗೆ ಜ್ಞಾನ ಪರಂಪರೆ ಬೆಳೆಯುತ್ತದೆ. ಇಂದು ಈ ರೀತಿ ಹರಿದು ಬಂದ ವಿದ್ಯೆ ಕಣ್ಮರೆಯಾಗುತ್ತಿದೆ; ಜನ ಮರೆಯುತ್ತಿದ್ದಾರೆ. ಮಹಾನ್ ಜ್ಞಾನಿಯಾದ ಅರ್ಜುನ ಕೂಡಾ ಈ ಜ್ಞಾನವನ್ನು ಮರೆತಿದ್ದಾನೆ. ಹಿಂದೆ ಹೇಳಿದಂತೆ ಅರ್ಜುನ ಆ ಕಾಲದ ಮಹಾನ್ ಜ್ಞಾನಿ. ಆದರೂ ಅದು ಆತನಿಗೆ ನೆನಪಿಗೆ ಬರುತ್ತಿಲ್ಲ. ಇಲ್ಲಿ ಕೃಷ್ಣ ಅರ್ಜುನನನ್ನು "ಪರಂತಪ" ಎಂದು ಸಂಬೋಧಿಸಿದ್ದಾನೆ. ಪರಂತಪ ಎಂದರೆ ಸದಾ ಭಗವಂತನನ್ನು ಜ್ಞಾನದ ದೃಷ್ಟಿಯಿಂದ ಕಾಣಬಲ್ಲವ. "ನೀನು ಅಪರೋಕ್ಷ ಜ್ಞಾನಿ; ನಿನ್ನಲ್ಲೇ ಆ ಜ್ಞಾನ ಪರಂಪರೆ ಇದೆ; ಆದರೂ ನಿನಗೆ ಸಂಶಯ ಬಂತು; ಈ ಅನಾಧಿನಿತ್ಯವಾದ ಜ್ಞಾನ ಪರಂಪರೆ ನಿನ್ನಲ್ಲೇ ಮರೆಯಾಗುತ್ತಿದೆ. ಹೀಗಿರುವಾಗ ಉಳಿದವರ ಪಾಡೇನು" ಎನ್ನುವ ಧ್ವನಿ ಈ ಪರಂತಪ ಎನ್ನುವ ಸಂಬೋಧನೆಯಲ್ಲಿದೆ.
ಜ್ಞಾನ ನಾಶವಾಗಿಲ್ಲ, ಆದರೆ ಮೋಹದ ಪರದೆ ಅದನ್ನು ತಡೆದಿದೆ. ಆದ್ದರಿಂದ ನಿನಗೆ ನಾನು ಈಗ ಆ ಜ್ಞಾನವನ್ನು ಪುನಃ ಹೇಳುತ್ತಿದ್ದೇನೆ ಎನ್ನುತ್ತಾನೆ ಕೃಷ್ಣ. ಅರ್ಜುನ ಕೃಷ್ಣನ ಮೇಲಿಟ್ಟಿರುವ ಅಪಾರ ಗೌರವ, ಭಕ್ತಿ ಹಾಗೂ ಆತ್ಮೀಯತೆಯನ್ನು ಗುರುತಿಸಿ, ಅನಾದಿನಿತ್ಯವಾದ, ಅಪೂರ್ವವಾದ ಈ ಜ್ಞಾನವನ್ನು ಕೃಷ್ಣ ಅರ್ಜುನನಿಗೆ ನೆನಪಿಸುತ್ತಿದ್ದಾನೆ. ಅರ್ಜುನನ ಭಕ್ತಿ ನವವಿಧ ಭಕ್ತಿಗಳಲ್ಲಿ (ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ ಹಾಗೂ ಆತ್ಮನಿವೇದನ) ಒಂದಾದ ಸಖ್ಯ. ಆತ ಭಗವಂತನನ್ನು ಗೆಳೆಯನಾಗಿ ಪೂಜಿಸಿದ. ಈ ಕಾರಣಕ್ಕಾಗಿ ಇಲ್ಲಿ ಕೃಷ್ಣ ಹೇಳುತ್ತಾನೆ: "ನೀನು ನನ್ನ ಭಕ್ತ ಮತ್ತು ಸಖ. ಆ ಕಾರಣಕ್ಕಾಗಿ ಈ ಅಮೂಲ್ಯವಾದ ಜ್ಞಾನವನ್ನು ನಿನಗೆ ಹೇಳುತ್ತಿದ್ದೇನೆ" ಎಂದು.
ಇಲ್ಲಿ ‘ರಹಸ್ಯವಾದ ಜ್ಞಾನವನ್ನು ನಿನಗೆ ಹೇಳುತ್ತಿದ್ದೇನೆ’ ಎಂದು ಕೃಷ್ಣ ಹೇಳಿದ್ದಾನೆ. ಜ್ಞಾನವನ್ನು ರಹಸ್ಯವಾಗಿಡಲು ಎರಡು ಕಾರಣವಿದೆ. ಒಂದು ಅದರ ದುರುಪಯೋಗ ಹಾಗೂ ಇನ್ನೊಂದು ಅದರ ನಿರುಪಯೋಗ. ಯಾರು ಜ್ಞಾನವನ್ನು ಪಡೆದು ಅದನ್ನು ತಮ್ಮ ತಲೆಮಾರಿಗೆ ಕೊಡಲಾರರೋ ಅಂಥವರಿಗೆ ಜ್ಞಾನವನ್ನು ಕೊಡುವುದು ವ್ಯರ್ಥ. ಇದರಿಂದ ಜ್ಞಾನ ಪರಂಪರೆ ಹರಿದು ಬರಲಾರದು. ಇನ್ನು ದುರುಪಯೋಗ. ಜ್ಞಾನ ಇರುವುದು ನಮ್ಮ ಅಂತರಂಗದ ಉದ್ಧಾರಕ್ಕೆ ಹಾಗೂ ಇನ್ನೊಬ್ಬರ ಉದ್ಧಾರದ ದಾರಿ ತೋರುವುದಕ್ಕಾಗಿಯೇ ಹೊರತು ವ್ಯವಹಾರ-ವ್ಯಾಪಾರ ಮಾಡುವುದಕ್ಕಾಗಿ ಅಲ್ಲ. ಜ್ಞಾನದಿಂದ ಸಮಾಜವನ್ನು ಮೋಸಗೊಳಿಸಬಹುದು. ತಿಳುವಳಿಕೆ ಇಲ್ಲದವರನ್ನು ತನ್ನ ತಿಳುವಳಿಕೆಯಿಂದ ಮೋಸ ಮಾಡಿ ವಂಚಿಸಬಹುದು. ಈ ಎಲ್ಲಾ ಕಾರಣದಿಂದ ಜ್ಞಾನ ರಹಸ್ಯ ವಿಷಯ. ಹಿಂದೆ ಯೋಗ ಸಿದ್ಧಿಯಿಂದ ಮಾಯವಾಗುವ ವಿದ್ಯೆ ಜ್ಞಾನಿಗಳಿಗೆ ತಿಳಿದಿತ್ತು. ಇಂತಹ ಅಮೂಲ್ಯ ವಿದ್ಯೆಯ ದುರುಪಯೋಗ ಅತೀ ಸುಲಭ. ಆ ಕಾರಣಕ್ಕಾಗಿ ಅದನ್ನು ರಹಸ್ಯವಾಗಿಟ್ಟರು. ಪ್ರಾಣಿ ಭಾಷೆಯನ್ನೂ ಅರ್ಥ ಮಾಡಿಕೊಳ್ಳುವ ವಿದ್ಯೆ ನಮ್ಮಲ್ಲಿತ್ತು. ಇದನ್ನೂ ಕೂಡಾ ರಹಸ್ಯವಾಗಿಟ್ಟರು. ಹೀಗೆ ಜ್ಞಾನದಿಂದ ದುರುಪಯೋಗವಾಗುವ ಸಾಧ್ಯತೆ ಇದ್ದಾಗ ಅದನ್ನು ರಹಸ್ಯವಾಗಿಡಬೇಕು. ಇಂತಹ ರಹಸ್ಯವಾದ ವಿಷಯವನ್ನು ನಾನು 'ನಿನ್ನನ್ನು ಆಯ್ಕೆ ಮಾಡಿ ಹೇಳುತ್ತಿದ್ದೇನೆ' ಎಂದಿದ್ದಾನೆ ಕೃಷ್ಣ.

ಅರ್ಜುನ ಉವಾಚ ।
ಅಪರಂ ಭವತೋ ಜನ್ಮ ಪರಂ ಜನ್ಮ ವಿವಸ್ವತಃ ।
ಕಥಮೇತದ್ ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ॥೪॥

ಅರ್ಜುನಃ ಉವಾಚ-ಅರ್ಜುನ ಕೇಳಿದನು:
ಅಪರಮ್ ಭವತಃ ಜನ್ಮ ಪರಮ್ ಜನ್ಮ ವಿವಸ್ವತಃ |
ಕಥಮ್ ಏತತ್ ವಿಜಾನೀಯಾಮ್ ತ್ವಮ್ ಆದೌ ಪ್ರೋಕ್ತವಾನ್ ಇತಿ-ನೀನು ಹುಟ್ಟಿದ್ದು ಇತ್ತೀಚೆಗೆ. ಸೂರ್ಯ ಮೊದಲು ಹುಟ್ಟಿದವನು. ನೀನೇ ಮೊದಲು ಹೇಳಿದವನು ಎಂದರೆ ಇದನ್ನು ಹೇಗೆ ಅರ್ಥೈಸಲಿ?

ಜ್ಞಾನ ಪರಂಪರೆಯನ್ನು ವಿವರಿಸುವಾಗ ಕೃಷ್ಣ "ನಾನು ಮೊದಲು ಸೂರ್ಯನಿಗೆ(ದೇವತೆಗಳಿಗೆ) ಹೇಳಿದೆ" ಎಂದಿದ್ದಾನೆ. ಇಲ್ಲಿ ಅರ್ಜುನ ಕೃಷ್ಣನನ್ನು ಈ ಕುರಿತು ಪ್ರಶ್ನಿಸುತ್ತಾನೆ. ವಯಸ್ಸಿನಲ್ಲಿ ಕೃಷ್ಣ ಅರ್ಜುನನಿಗಿಂತ ಸುಮಾರು ಆರು ತಿಂಗಳು ದೊಡ್ಡವ. ಹಾಗಿರುವಾಗ ಕೋಟಿ-ಕೋಟಿ ವರ್ಷಗಳ ಹಿಂದೆ ಸೂರ್ಯನಿಗೆ ಹೇಳಿದೆ ಅಂದರೆ ಇದನ್ನು ಹೇಗೆ ಅರ್ಥೈಸಲಿ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನನಿಗೆ ಸ್ವಯಂ ಭಗವಂತನಿಂದ ಈ ಪ್ರಶ್ನೆಗೆ ಉತ್ತರ ಪಡೆಯುವ ಆಸೆ. ಅದಕ್ಕಾಗಿ ಈ ಪ್ರಶ್ನೆಯನ್ನು ಹಾಕಿದ್ದಾನೆ. ಇಷ್ಟೇ ಅಲ್ಲದೆ ಎಲ್ಲಾ ನರರ ಪ್ರತಿನಿಧಿಯಾಗಿ ನಿಂತ ಮಹಾಜ್ಞಾನಿ ಅರ್ಜುನ, ನಮ್ಮ ನಿಮ್ಮೆಲ್ಲರ ಪರ ಈ ಪ್ರಶ್ನೆಯನ್ನು ಹಾಕುತ್ತಾನೆ. ಈ ಬಗ್ಗೆ ಪ್ರಾರಂಭದಲ್ಲೇ ಪ್ರಸ್ತಾಪಿಸಲಾಗಿದೆ. ಕೃಷ್ಣ ಹೇಳಿದ್ದ: "ನಾವೆಲ್ಲರೂ ಹಿಂದೆಯೂ ಇದ್ದೆವು, ಈಗ ಇದ್ದೇವೆ ಮತ್ತು ಮುಂದೆಯೂ ಇರುತ್ತೇವೆ" ಎಂದು(ಅ-2 ,ಶ್ಲೋ-12). ಅದರ ಸಂಪೂರ್ಣ ವಿವರಣೆ ಇಲ್ಲಿ ಬರುತ್ತದೆ. ಯಾವ ಕರ್ಮ ಬಂಧನವೂ ಇಲ್ಲದ, ಸರ್ವ ಸಮರ್ಥನಾದ ಭಗವಂತ ಭೂಮಿಗೇಕೆ ಇಳಿದು ಬರುತ್ತಾನೆ ಎನ್ನುವ ಪ್ರಶ್ನೆಗೆ ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಉತ್ತರಿಸಿದ್ದಾನೆ.

ಭಗವಾನುವಾಚ ।
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ ।
ತಾನ್ಯಹಂ ವೇದ ಸರ್ವಾಣಿ ನ ತ್ವಂ ವೇತ್ಥ ಪರಂತಪ ॥೫॥

ಭಗವಾನ್ ಉವಾಚ-ಭಗವಂತ ಹೇಳಿದನು.
ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚ ಅರ್ಜುನ |
ತಾನಿ ಅಹಮ್ ವೇದ ಸರ್ವಾಣಿ ನ ತ್ವಮ್ ವೇತ್ಥ ಪರಂತಪ-ಓ ಅರ್ಜುನಾ, ನನಗೆ ಹಲವಾರು ಹುಟ್ಟುಗಳು ಆಗಿ ಹೋದವು. ನಿನಗೆ ಕೂಡಾ. ಓ ಅರಿಗಳನ್ನು ತರಿದವನೇ, ಅವೆಲ್ಲವನ್ನೂ ನಾನು ಬಲ್ಲೆ- ಆದರೆ ನಿನಗೆ ಗೊತ್ತಿಲ್ಲ.

ಜನ್ಮ ಅಂದರೆ ಜನನ ಅಥವಾ ಹುಟ್ಟುವುದು. ಇಲ್ಲದೇ ಇರುವುದು ಹುಟ್ಟುವುದಿಲ್ಲ. ಜಡವನ್ನು ಹುಟ್ಟಿತು ಎಂದು ನಾವು ಕರೆಯುವುದಿಲ್ಲ. ಸೂಕ್ಷ್ಮ ಶರೀರದಿಂದ ಸ್ಥೂಲ ಶರೀರದಲ್ಲಿ ಕಾಣಿಸಿಕೊಳ್ಳುವುದು ಜನನ. ಸಾಯುವುದು ಅಂದರೆ ಸೂಕ್ಷ್ಮಶರೀರ ಸ್ಥೂಲಶರೀರವನ್ನು ತೈಜಿಸುವುದು. ಇಲ್ಲಿ ಕೃಷ್ಣ ಹೇಳುತ್ತಾನೆ: "ನನಗೆ ಹಾಗೂ ನಿನಗೆ ಅನೇಕ ಹುಟ್ಟುಗಳು ಆಗಿ ಹೋದವು. ನನಗೆ ಅದು ತಿಳಿದಿದೆ ಆದರೆ ಪರಂತಪನಾದ ನಿನಗೂ ಈ ವಿಚಾರ ತಿಳಿದಿಲ್ಲ" ಎಂದು.   

ಅಜೋSಪಿ ಸನ್ನವ್ಯಯಾತ್ಮಾ ಭೂತಾನಾಮೀಶ್ವರೋSಪಿ ಸನ್ ।
ಪ್ರಕೃತಿಂ ಸ್ವಾಮಧಿಷ್ಠಾಯ ಸಂಭವಾಮ್ಯಾತ್ಮಮಾಯಯಾ ॥೬॥

ಅಜಃ ಅಪಿ ಸನ್ ಅವ್ಯಯ ಆತ್ಮಾ ಭೂತಾನಾಮ್ ಈಶ್ವರಃ ಅಪಿ ಸನ್ |
ಪ್ರಕೃತಿಮ್ ಸ್ವಾಮ್ ಅಧಿಷ್ಠಾಯ ಸಂಭವಾಮಿ ಆತ್ಮಮಾಯಯಾ-ನನಗೆ ಹುಟ್ಟೆಂಬುದಿಲ್ಲ. ನನ್ನ ದೇಹಕ್ಕೆ ಕೂಡಾ ಸಾವಿಲ್ಲ. ನಾನು ಎಲ್ಲಾ ಜೀವಿಗಳ ಒಡೆಯರಿಗೂ ಒಡೆಯ. ಆದರೂ ನನ್ನಂಕೆಯಲ್ಲಿರುವ ಪ್ರಕೃತಿಮಯವಾದ ಶರೀರವನ್ನು ಹೊಕ್ಕು ಜ್ಞಾನ ಸ್ವರೂಪದಿಂದಲೇ (ನನ್ನ ಸಹಜ ಸ್ವಭಾವವನ್ನಾಧರಿಸಿ ನನ್ನಿಚ್ಛೆಯಿಂದಲೇ ) ಮೂಡಿಬರುವೆ.

              ಸಮಸ್ತ ಜೀವಜಾತದ ಒಡೆಯನಾದ ಭಗವಂತ ಅನೇಕ ಬಾರಿ ಭೂಮಿಗೆ ಇಳಿದು ಬರುತ್ತಾನೆ. ಆತನಿಗೆ ಹುಟ್ಟು ಅನ್ನುವುದಿಲ್ಲ. ಆದರೂ ಹುಟ್ಟಿ ಬರುತ್ತಾನೆ. ಆತ ಅವ್ಯಯ; ಆತ ನಶ್ವರವಾದ ದೇಹವನ್ನು ಹೊತ್ತು ಹುಟ್ಟುವುದಿಲ್ಲ. ಆದ್ದರಿಂದ ದೇಹದ ಮೂಲಕ ಹುಟ್ಟು-ಸಾವು ಭಗವಂತನಿಗಿಲ್ಲ. ಇಲ್ಲಿ ಬಂದಿರುವ 'ಆತ್ಮ ಮಾಯಯಾ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜೀವಕ್ಕೆ ಕವಿದ ಮೋಹದ ಪರದೆ ಆತ್ಮ ಮಾಯೆ; ಭಗವಂತನ ಮಹಿಮೆ ಆತ್ಮ ಮಾಯೆ; ಭಗವಂತನ ಸ್ವಂತ ಇಚ್ಚೆ ಹಾಗೂ ಜ್ಞಾನ ಆತ್ಮ ಮಾಯೆ. ಭಗವಂತ ಭೂಮಿಗೆ ಇಳಿದು ಬರುವುದು ಆತನ ಜ್ಞಾನದ ಮಹಿಮೆಯಿಂದ ಹೊರತು ಯಾವುದೋ ಮಾಯೆಯ ಅಧೀನನಾಗಿ ಅಲ್ಲ. ಭಗವಂತ ತನ್ನ ಭಕ್ತರ ಕಳಕಳಿಯನ್ನು ಈಡೇರಿಸುವುದಕ್ಕೋಸ್ಕರ ಇಚ್ಛಾಪೂರ್ವಕವಾಗಿ ತಾನೇ ನಿರ್ಮಿಸಿರುವ ಪ್ರಕೃತಿಯನ್ನು ಮಾಧ್ಯಮವಾಗಿ ಬಳಸಿ ಇಳಿದು ಬರುತ್ತಾನೆ. ಇದು ಆತನ ಮಹಿಮೆ. ಮೋಹದ ಪರದೆಯಲ್ಲಿ ಬದುಕುವ ನಮಗೆ ಇದು ಒಂದು ಸಾಮಾನ್ಯ ಹುಟ್ಟು ಎನ್ನುವಂತೆ ಕಾಣುತ್ತದೆ. ಏಕೆಂದರೆ ನಮಗೆ ಆತನ ಜ್ಞಾನಾನಂದಮಯ ಶರೀರವನ್ನು ಕಾಣಲು ಸಾಧ್ಯವಿಲ್ಲ. ನಮಗೆ ಸ್ವಯಂ ನಮ್ಮ ಜೀವ ಸ್ವರೂಪದ ಅರಿವೇ ಇಲ್ಲ-ಹೀಗಿರುವಾಗ ಭಗವಂತನನ್ನು ಅರಿಯುವುದು ಸಾಧ್ಯವೇ? ಈ ಕಾರಣದಿಂದ ನಮಗೆ ಭಗವಂತ ಪಾಂಚಭೌತಿಕ ಶರೀರದವನಂತೆ ಕಾಣುತ್ತಾನೆ. ನಮಗೆ ತಿಳಿದಂತೆ ಕೆಲವು ಪ್ರಾಣಿಗಳಿಗೆ ಬಣ್ಣ ಕಾಣುವುದಿಲ್ಲ. ಅವುಗಳ ಕಣ್ಣಿಗೆ ಆ ಶಕ್ತಿ ಇಲ್ಲ. ಆದ್ದರಿಂದ ಎಲ್ಲವೂ ಕಪ್ಪು ಬಿಳುಪು. ಆದರೆ ನಿಜವಾಗಿ ಪ್ರಪಂಚದಲ್ಲಿ ಬಣ್ಣವಿದೆ, ಆ ಪ್ರಾಣಿಗಳಿಗೆ ಬಣ್ಣವನ್ನು ಗ್ರಹಿಸುವ ಶಕ್ತಿ ಇಲ್ಲ ಅಷ್ಟೇ. ಹಾಗೆಯೇ ಮೋಹದ ಪರದೆಯಲ್ಲಿ ಬದುಕುವ ನಮಗೆ ಭಗವಂತನ ಜ್ಞಾನಾನಂದ ಸ್ವರೂಪ ಶರೀರ ಕಾಣಿಸುವುದಿಲ್ಲ, ಬದಲಿಗೆ ಪಾಂಚಭೌತಿಕ ಶರೀರ ಹುಟ್ಟಿ ನಾಶವಾದಂತೆ ಕಾಣುತ್ತದೆ. ಆದರೆ ಮೂಲತಃ ಭಗವಂತನಿಗೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಆತ ತನ್ನ ಸಹಜ ಸ್ವಭಾವದಿಂದ ಸ್ವ-ಇಚ್ಚೆಯಿಂದ ಮೂಡಿ ಬರುತ್ತಾನೆ.

ಭಗವಂತ ಯಾವ ಕಾರಣಕ್ಕೋಸ್ಕರ ಭೂಮಿಗಿಳಿದು ಬರುತ್ತಾನೆ? ಅದರ ಹಿಂದಿರುವ ದೈವೀ ಸಂಕಲ್ಪ ಏನು? ಈ ಪ್ರಶ್ನೆಗೆ ಉತ್ತರವನ್ನು ಮುಂದಿನ ಎರಡು ಶ್ಲೋಕದಲ್ಲಿ ಕಾಣಬಹುದು.

ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
ಅಭ್ಯುತ್ಥಾನಮಧರ್ಮಸ್ಯ ತದಾSSತ್ಮಾನಂ ಸೃಜಾಮ್ಯಹಮ್ ॥೭॥

ಯದಾಯದಾ ಹಿ ಧರ್ಮಸ್ಯ ಗ್ಲಾನಿಃ ಭವತಿ ಭಾರತ |
ಅಭ್ಯುತ್ಥಾನಮ್ ಅಧರ್ಮಸ್ಯ ತದಾ ಆತ್ಮಾನಮ್ ಸೃಜಾಮಿ ಅಹಮ್--ಓ ಭಾರತ, ಧರ್ಮ ಕಳೆಗುಂದಿದಾಗೆಲ್ಲಾ, ಅಧರ್ಮ ತಲೆಯತ್ತಿದಾಗೆಲ್ಲಾ ನಾನು ನನ್ನನ್ನು ಹುಟ್ಟಿಸಿಕೊಳ್ಳುತ್ತೇನೆ.

ಇಡಿಯ ಪ್ರಪಂಚದಲ್ಲಿ ಯಾವಾಗ ಧರ್ಮ ಮಲಿನವಾಗಿ ಅಧರ್ಮದ ಮುಂದೆ ಸೋಲೊಪ್ಪಿಕೊಂಡು, ತಲೆ ಕೆಳಗಾಗಿ ನಿಲ್ಲುವ ಪ್ರಸಂಗ ಬರುತ್ತದೋ, ಆಗ ನಾನು ಧರೆಗಿಳಿದು ಬರುತ್ತೇನೆ ಎನ್ನುತ್ತಾನೆ ಕೃಷ್ಣ. ಇಲ್ಲಿ ಧರ್ಮ ಸೋಲುವುದು ಅಂದರೆ ಅದು ಒಂದು ಮನೆಗೆ- ಒಂದು ದೇಶಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಇಡೀ ವಿಶ್ವದಲ್ಲೇ ಧರ್ಮಕ್ಕೆ ನೆಲೆ ಸಿಗದ ಪರಿಸ್ಥಿತಿ ಬಂದಾಗ ಭಗವಂತನ ಅವತಾರವಾಗುತ್ತದೆ. ದುಷ್ಟ ಶಕ್ತಿಗಳು ಭೂಮಿಯ ಮೇಲೆ ಹಿಡಿತ ಸಾಧಿಸಿ ಸತ್ವಗುಣದ ತಲೆ ಎತ್ತದಂತೆ ಮಾಡಿದಾಗ, ಭಗವಂತ ತನ್ನನ್ನು ತಾನು ಭೂಮಿಯ ಮೇಲೆ ಸೃಷ್ಟಿಸಿಕೊಳ್ಳುತ್ತಾನೆ. "ತದಾSSತ್ಮಾನಂ ಸೃಜಾಮ್ಯಹಮ್" ಎನ್ನುವಲ್ಲಿ 'ನಾನು ನನ್ನ ಆತ್ಮೀಯರನ್ನು ಕಳುಹಿಸುತ್ತೇನೆ' ಎನ್ನುವ ಹಾಗೂ 'ನಾನೇ ಅವತರಿಸುತ್ತೇನೆ' ಎನ್ನುವ ಎರಡು ಧ್ವನಿ ಇದೆ. ಧರ್ಮಕ್ಕೆ ಸೋಲಾಗುವ ಲಕ್ಷಣಗಳು ಪ್ರಾಂತೀಯವಾಗಿ ಕಂಡು ಬಂದಾಗ ಭಗವಂತ ತನಗೆ ಆತ್ಮೀಯರಾದವರನ್ನು(ದೇವತೆಗಳನ್ನು) ಭೂಮಿಗೆ ಕಳುಹಿಸುತ್ತಾನೆ. ಅವರು ಆಚಾರ್ಯಪುರುಷರಾಗಿ ಬಂದು ಸಮಾಜವನ್ನು ತಿದ್ದುತ್ತಾರೆ. ಇಂತಹ ವ್ಯವಸ್ಥೆ ಕೂಡಾ ಕುಸಿದು ತಾಮಸ ಶಕ್ತಿಗಳು ವಿಜೃಂಭಿಸಿದಾಗ, ಕೊನೇಯದಾಗಿ ಭಗವಂತ ಸ್ವಯಂ ಅವತಾರವೆತ್ತುತ್ತಾನೆ. ಕೃಷ್ಣನ ಅವತಾರವಾದ ಸಮಯದ ಸ್ಥಿತಿಯನ್ನು ಗಮನಿಸಿದಾಗ ಆ ಕಾಲದ ಧರ್ಮದ ಪಾಡೇನು ಎನ್ನುವುದು ಸ್ಪಷ್ಟವಾಗುತ್ತದೆ. ಜರಾಸಂಧ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುಮಾರು 22,800 ರಾಜಕುಮಾರರನ್ನು ತನ್ನ ಸೆರೆಯಲ್ಲಿಟ್ಟಿದ್ದ. ಕಂಸನಿಗೆ ತನ್ನ ಮಗಳನ್ನು ಕೊಟ್ಟು ಆತನನ್ನು ಎತ್ತಿಕಟ್ಟಿ, ಶೂರಸೇನನನ್ನು ಸೆರೆಮನೆಗೆ ಹಾಕುವಂತೆ ಕುತಂತ್ರ ಮಾಡಿ, ಅದರಲ್ಲಿ ಯಶಸ್ವಿಯಾಗಿದ್ದ ಜರಾಸಂಧ. ಇನ್ನು ಆತನ ಮಿತ್ರ ನರಕಾಸುರ ಸುಮಾರು 16,100 ರಾಜಕುಮಾರಿಯರನ್ನು ಸೆರೆಮನೆಯಲ್ಲಿಟ್ಟಿದ್ದ. ಭೀಷ್ಮಾಚಾರ್ಯರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡು ಇಡೀ ಭೂಲೋಕದಲ್ಲಿ ತನ್ನದೇ ಆದ ಏಕಚಕ್ರಾಧಿಪತ್ಯವನ್ನು ಸ್ಥಾಪಿಸುವ, ಹಾಗೂ ಜನರನ್ನು ಸುಲಿಗೆ ಮಾಡುವ ಕುತಂತ್ರ ರೂಪಿಸಿದ್ದ ಜರಾಸಂಧ. ಅಂದಿನ ಭಾರತ ಇಂದಿನ ಭಾರತದಂತಿರಲಿಲ್ಲ. ಅದು ಅತಿದೊಡ್ಡ ಭೂ ಭಾಗವಾಗಿತ್ತು. ಒಂದು ವೇಳೆ ಕೃಷ್ಣನ ಅವತಾರ ಆಗದೇ ಇದ್ದಿದ್ದರೆ ಇಡೀ ಭೂಲೋಕ ಈ ಪಾಪಿಗಳ ಕೈವಶವಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕೃಷ್ಣ ಅವತರಿಸಿದ. ಕಂಸನನ್ನು ಕೊಂದು ಶೂರಸೇನನನ್ನು ಮರಳಿ ರಾಜನನ್ನಾಗಿ ಮಾಡಿದ ಕೃಷ್ಣ, ನರಕಾಸುರನನ್ನು ಕೊಂದು, ಆತನ ಕೈಕೆಳಗಿನ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿದ. ಹೀಗೆ ಬಿಡುಗಡೆಗೊಂಡ ರಾಜಕುಮಾರಿಯರು ಶೀಲ ಶಂಕಿಸುವ ಸಮಾಜಕ್ಕೆ ಹೆದರಿದಾಗ ಅವರಿಗೆ ಅಭಯವನ್ನು ಕೊಟ್ಟು, ಅವರನ್ನು ತಾನೇ ಮದುವೆಯಾಗಿ ಅವರ ಗೌರವವನ್ನು ಕಾಪಾಡಿದ. ಜರಾಸಂಧ ಕೃಷ್ಣನ ಮೇಲೆ ಸುಮಾರು 23 ಅಕ್ಷೋಹಿಣಿ ಸೈನ್ಯದೊಂದಿಗೆ ದಾಳಿ ಮಾಡಿದಾಗ ಓಡಿ ಹೋದಂತೆ ನಟಿಸಿ, ನಂತರ ಭೀಮಾರ್ಜುನರೊಂದಿಗೆ ಜರಾಸಂಧನನ್ನು ಸಂಧಿಸಿ- ಅಲ್ಲಿ ನಡೆದ ಮಲ್ಲ ಯುದ್ಧದಲ್ಲಿ ಭೀಮನಿಂದ ಜರಾಸಂಧನ ವಧೆಯಾಗುವಂತೆ ಮಾಡಿದ ಹಾಗೂ ಆತನ ಸೆರೆಯಲ್ಲಿದ್ದ ಎಲ್ಲಾ ರಾಜಕುಮಾರರನ್ನು ಅವರವರ ರಾಜ್ಯಕ್ಕೆ ಕಳುಹಿಸಿಕೊಟ್ಟ.
ಹೀಗೆ ಇಡೀ ಭೂಲೋಕ ಅಧರ್ಮದ ದಾಸ್ಯಕ್ಕೆ ಗುರಿಯಾಗುವ ಸಂದರ್ಭ ಬಂದಾಗ ಮಾತ್ರ ಭಗವಂತನ ಅವತಾರ ಭೂಲೋಕದಲ್ಲಿ ಆಗುತ್ತದೆ.

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ॥೮॥


ಪರಿತ್ರಾಣಾಯ ಸಾಧೂನಾಮ್ ವಿನಾಶಾಯ ಚ ದುಷ್ಕೃತಾಮ್ |
ಧರ್ಮ ಸಂಸ್ಥಾಪನ ಅರ್ಥಾಯ ಸಂಭವಾಮಿ ಯುಗೇಯುಗೇ--ಸಜ್ಜನರನ್ನು ಉಳಿಸಲೆಂದು, ಕೇಡಿಗರನ್ನು ಅಳಿಸಲೆಂದು, ಧರ್ಮವನ್ನು ನೆಲೆಗೊಳಿಸಲೆಂದು ಯುಗ ಯುಗದಲ್ಲೂ ಮೂಡಿಬರುತ್ತೇನೆ.

ಯಾರು ಸಮಾಜಕ್ಕೆ ಕೆಟ್ಟದ್ದನ್ನು, ಕೇಡನ್ನು ಮಾಡಿ ಅದರಿಂದ ಲಾಭ ಪಡೆದು ಮೆರೆಯುತ್ತಾರೋ, ಅಂಥವರ ಪೂರ್ಣನಾಶಕ್ಕಾಗಿ, ಸಜ್ಜನರ ಮತ್ತು ಪ್ರಪಂಚದ ಸಮಗ್ರ ರಕ್ಷಣೆಗಾಗಿ, ಧರ್ಮದ ಬೀಜ ಬಿತ್ತಲು ಭಗವಂತ ಭೂಲೋಕದಲ್ಲಿ ಅವತರಿಸುತ್ತಾನೆ. ಇಲ್ಲಿ ಯುಗೇ-ಯುಗೇ ಎಂದರೆ ‘ಯುಗ-ಯುಗದಲ್ಲೂ’ ಎಂದರ್ಥ. ಅಂದರೆ ಭಗವಂತ ಪ್ರತೀ ಯುಗದಲ್ಲೂ ಅವತರಿಸುತ್ತಾನೆ ಎಂದರ್ಥವಲ್ಲ. ಆತ ಅವತರಿಸುವುದು ಮೇಲೆ ಹೇಳಿದ ಸಂದರ್ಭ ಬಂದಾಗ ಮಾತ್ರ. ಒಂದೊಂದು ಯುಗದಲ್ಲಿ ಅನೇಕ ಅವತಾರವಿರಬಹುದು; ಇನ್ನು ಕೆಲವು ಯುಗದಲ್ಲಿ ಅವತಾರವೇ ಇಲ್ಲದಿರಬಹುದು. ಆದರೆ ಭಗವಂತನ ಆವಿರ್ಭಾವವಿರುವ ಅನೇಕ ಮಹಾಪುರುಷರು ಯುಗ-ಯುಗದಲ್ಲೂ ಬಂದು ಹೋಗುತ್ತಿರುತ್ತಾರೆ. ಅವರ ಮುಖೇನ ಭಗವಂತನ ಧರ್ಮ ರಕ್ಷಣೆ ಯುಗ ಯುಗದಲ್ಲೂ ನಿರಂತರ.   

ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋSರ್ಜುನ ॥೯॥

ಜನ್ಮ ಕರ್ಮ ಚ ಮೇ ದಿವ್ಯಮ್ ಏವಮ್ ಯಃ ವೇತ್ತಿ ತತ್ವತಃ |
ತ್ಯಕ್ತ್ವಾ ದೇಹಮ್ ಪುನಃ ಜನ್ಮ ನ ಏತಿ ಮಾಮ್ ಏತಿ ಸಃ ಅರ್ಜುನ-ಹೀಗೆ ನನ್ನ ಅಲೌಕಿಕವಾದ ಹುಟ್ಟಿನ, ಕಜ್ಜದ ನಿಜವನ್ನರಿತವನು ದೇಹವನ್ನು ತೊರೆದು ಮರಳಿ ಹುಟ್ಟುವುದಿಲ್ಲ. ಅರ್ಜುನ-ಅವನು ನನ್ನನ್ನು ಸೇರುತ್ತಾನೆ.

ಹೀಗೆ ಭಗವಂತನ ಜ್ಞಾನಾನಂದಮಯ, ದಿವ್ಯ(Divine), ಲೀಲಾಮಯ ಅವತಾರದ ಅರಿವು ಯಥಾವತ್ತಾಗಿ(ತತ್ವತಃ) ಅರಿತರೆ, ಅದು ನಮಗೆ ಮೋಕ್ಷ ಮಾರ್ಗವನ್ನು ತೋರಬಲ್ಲದು. ಇದು ಮರು-ಹುಟ್ಟಿಲ್ಲದ ಮೋಕ್ಷವನ್ನು ಪಡೆಯಲು ಬೇಕಾದ ಒಂದು ಅಮೂಲ್ಯ ಜ್ಞಾನ. ಈ ರೀತಿ ಅಧಿಷ್ಠಾನದಿಂದ ಸಿದ್ಧಿಯನ್ನು ಪಡೆದವರ ಬಗ್ಗೆ ಕೃಷ್ಣ ಮುಂದೆ ವಿವರಿಸುತ್ತಾನೆ.

ವೀತರಾಗಭಯಕ್ರೋಧಾ ಮನ್ಮಯಾ ಮಾಮುಪಾಶ್ರಿತಾಃ ।
ಬಹವೋ ಜ್ಞಾನತಪಸಾ ಪೂತಾ ಮದ್ಭಾವಮಾಗತಾಃ ॥೧೦॥

ವೀತ ರಾಗ ಭಯ ಕ್ರೋಧಾಃ ಮತ್ ಮಯಾ ಮಾಮ್ ಉಪಾಶ್ರಿತಾಃ |
ಬಹವಃ ಜ್ಞಾನ ತಪಸಾ ಪೂತಾಃ ಮತ್ ಭಾವಮ್ ಆಗತಾಃ -- ರಾಗ-ಭಯ-ಕ್ರೋಧವನ್ನು ತೊರೆದವರು, ಎಲ್ಲೆಲ್ಲೂ ನನ್ನನ್ನೇ ಕಾಣುವವರು(ನನ್ನ ಹಿರಿಮೆಯನ್ನು ಅರಿತವರು), ನನಗೆ ಶರಣು ಬಂದವರು ಬಹಳ ಮಂದಿ- ತಿಳಿವಿನ ತಪಸ್ಸಿನಿಂದ ತಿಳಿಗೊಂಡು ನನ್ನನ್ನು ಸೇರಿದ್ದಾರೆ.

 ಮೂರನೇ ಅಧ್ಯಾಯದ ಕೊನೆಯಲ್ಲಿ(ಶ್ಲೋಕ-39) ಕೃಷ್ಣ ಹೇಳಿದಂತೆ ರಾಗ-ದ್ವೇಷಾದಿಗಳು ನಮ್ಮ ಪರಮ ಶತ್ರುಗಳು. ನಾವು ನಮ್ಮ ಜೀವನದ ಸರ್ವ ಸಮಸ್ಯೆಗಳಿಗೆ ಕಾರಣವಾದ ಒಲವು(ಆಸೆ,ರಾಗ, Attachment), ಅಂಜಿಕೆ (ಭಯ) ಮತ್ತು ಕೋಪ(ಸಿಟ್ಟು)ವನ್ನು ತೊರೆದು, ಏನು ಇದೆಯೋ ಅದರಲ್ಲಿ ಸಂತೋಷಪಡುವುದನ್ನು ಮತ್ತು ಏನು ಬಂತೋ ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋವೃತ್ತಿಯನ್ನು ಬೆಳೆಸಿಕೊಂಡು, ಮನ್ಮಯರಾಗಬೇಕು. 'ಮನ್ಮಯ' ಅಂದರೆ ಜೀವನದ ಎಲ್ಲಾ ನಡೆಗಳಲ್ಲಿ ಭಗವಂತನನ್ನು ತುಂಬಿಸಿಕೊಳ್ಳುವುದು ಮತ್ತು ಲೌಕಿಕ ಪ್ರಜ್ಞೆಯನ್ನು ಕಡಿಮೆ ಮಾಡಿಕೊಳ್ಳುವುದು. ಒಮ್ಮೆ ನಾವು ಭಗವಂತನ ಚಿಂತನೆಯಲ್ಲಿ ತೊಡಗಿದಾಗ ಈ ರಾಗ-ದ್ವೇಷಗಳು ಕ್ಷುಲ್ಲಕವಾಗಿ ಕಾಣಲಾರಂಭಿಸುತ್ತವೆ. ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು, ನಮ್ಮ ರಕ್ಷಣೆಗೆ ಸದಾ ಆತನಿದ್ದಾನೆ ಎಂದು ತಿಳಿದು, ದುರಭಿಮಾನವನ್ನು ಕಿತ್ತೆಸೆದು, ಆ ಭಗವಂತನಲ್ಲಿ ಶರಣಾದವರು ಮೋಕ್ಷ ಮಾರ್ಗವನ್ನು ಕಾಣುತ್ತಾರೆ. ನಮ್ಮ ಜೀವನದ ಪ್ರತಿಯೊಂದು ಕರ್ಮದಲ್ಲಿ ಈ ರೀತಿಯ ಭಾವನೆಯನ್ನು ಬೆಳೆಸಿಕೊಳ್ಳುವುದು ಒಂದು ತಪಸ್ಸು. ಇದರಿಂದ ನಮ್ಮ ಬದುಕು ಪವಿತ್ರವಾಗುತ್ತದೆ. ಹೀಗೆ ರಾಗ-ದ್ವೇಷದ ಕೊಳೆಯಿಂದ ಮುಕ್ತರಾದವರು ನನ್ನನ್ನು ಸೇರುತ್ತಾರೆ ಎನ್ನುತ್ತಾನೆ ಕೃಷ್ಣ. ನಾವು ನಮ್ಮ ರಾಗ ದ್ವೇಷ-ಕ್ರೋಧದಲ್ಲಿ ಕೂಡಾ ಭಗವಂತನನ್ನು ಕುಳ್ಳಿರಿಸಿಕೊಳ್ಳಬೇಕು! ನಮ್ಮ ಆಸೆ-ಭಗವಂತನನ್ನು ಕಾಣುವ ಆಸೆಯಾಗಿರಬೇಕು; ಭಯ-'ತಪ್ಪು ಮಾಡಿದರೆ ಭಗವಂತ ನನ್ನನ್ನು ಕ್ಷಮಿಸಲಾರ' ಎನ್ನುವ ಭಯವಾಗಿರಬೇಕು; ನಮ್ಮ ಇಲ್ಲ ಸಲ್ಲದ ಇಂದ್ರಿಯಾಕಾಂಕ್ಷೆಗಳ ಮೇಲೆ ನಮ್ಮ ಕೋಪವಿರಬೇಕು. ಹೀಗೆ ಈ ಮೂರೂ ಶತ್ರುಗಳನ್ನು ನಾವು ಭಗವಂತನ ಪರಗೊಳಿಸಿದಾಗ ಭಗವಂತನನ್ನು ಕಾಣಲು ಸಾಧ್ಯ.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥೧೧॥

ಯೇ ಯಥಾ ಮಾಮ್ ಪ್ರಪದ್ಯಂತೇ ತಾನ್ ತಥಾ ಏವ ಭಜಾಮಿ ಅಹಮ್ ।
ಮಮ ವರ್ತ್ಮಾ ಅನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ -ಯಾರು ಹೇಗೆ ನನ್ನನು ಸೇವಿಸುತ್ತಾರೋ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕೊನೆಗೆ ನನ್ನೆಡೆಗೆಯೇ ಬರುತ್ತಾರೆ.

ದೇವರ ಉಪಾಸನೆಗೆ ಸರಿಯಾದ ದಾರಿ ಯಾವುದು? ಒಬ್ಬೊಬ್ಬರು ಒಂದೊಂದು ರೀತಿ ಉಪಾಸನೆ ಮಾಡುತ್ತಾರೆ. ಅದರಿಂದ ಗೊಂದಲ, ಆವೇಶ. ಯಾರು ಯಾವ ರೀತಿ ಉಪಾಸನೆ ಮಾಡುತ್ತಾರೋ ಭಗವಂತ ಹಾಗೆಯೇ ಅನುಗ್ರಹಿಸುತ್ತಾನೆ. ನಾವು ಯಾವ ರೂಪದಿಂದ ಉಪಾಸನೆ ಮಾಡಿದರೂ ಅದು ವಿಶ್ವರೂಪನಾದ ಭಗವಂತನನ್ನು ಸೇರುತ್ತದೆ. ಅದಕ್ಕಾಗಿ ನಾವು ನಮ್ಮ ಪೂಜೆಯನ್ನು ಭಗವಂತನ ವಿಶೇಷ ವಿಭೂತಿ ಇರುವ ತುಳಸಿ, ಅಶ್ವತ್ಥವೃಕ್ಷ, ಗೋವು ಇತ್ಯಾದಿ ರೂಪದಲ್ಲಿ ಪೂಜಿಸುತ್ತೇವೆ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ತುಳಸಿ ಗಿಡವನ್ನೇ ಭಗವಂತನೆಂದು ನಂಬಿ ಪೂಜಿಸದೇ, ತುಳಸಿಯಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ ಎಂದು ಪೂಜಿಸುವುದು ಮುಖ್ಯ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿ ನಮಗೆ ಭಗವಂತನ ಎಚ್ಚರ ಮತ್ತು ಜ್ಞಾನ ಅಗತ್ಯ. ಯಾವ ಹೆಸರಿನಿಂದ ಕೂಗಿದರೂ ಓಗೊಡುವ ಭಗವಂತ ಒಬ್ಬನೇ, ಆತ ಸರ್ವಶಬ್ದ ವಾಚ್ಯ ಎನ್ನುವ ಎಚ್ಚರ ನಮ್ಮಲ್ಲಿರಬೇಕು. ಎಲ್ಲಿ ಕುಳಿತು ಪೂರ್ಣ ಅರ್ಪಣಾಭಾವದಿಂದ ಭಗವಂತನನ್ನು ನೆನೆದರೂ, ಅದು ವಿಶ್ವರೂಪಿ ವಿಶ್ವಾಂಭರನನ್ನು ಸೇರುತ್ತದೆ. ಆತ ಸದಾ ನಮ್ಮ ರಕ್ಷಣೆ ಮಾಡುತ್ತಾನೆ.

ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ ॥೧೨॥

ಕಾಂಕ್ಷಂತಃ ಕರ್ಮಣಾಮ್ ಸಿದ್ಧಿಮ್ ಯಜಂತೇ ಇಹ ದೇವತಾಃ ।
ಕ್ಷಿಪ್ರಮ್ ಹಿ ಮಾನುಷೇ ಲೋಕೇ ಸಿದ್ಧಿಃ ಭವತಿ ಕರ್ಮಜಾ -ಕರ್ಮಗಳ ಮೂಲಕ ಫಲವನ್ನು ಬಯಸುವವರು ಇಲ್ಲಿ ದೇವತೆಗಳನ್ನು ಪೂಜಿಸುತ್ತಾರೆ. ಈ ಭೂಮಿಯಲ್ಲಿ ಕರ್ಮದಿಂದ ಫಲಸಿದ್ಧಿ ಒಡನೆಯೇ ಕೈಗೂಡುತ್ತದೆಯಲ್ಲವೇ ?

ನಮ್ಮಲ್ಲಿ ಕೆಲವರು ದೇವತೆಗಳಿಗೂ ಮತ್ತು ಭಗವಂತನಿಗೂ ವ್ಯತ್ಯಾಸ ತಿಳಿಯದೇ, ದೇವತಗಳನ್ನೇ ಭಗವಂತನೆಂದು ಪೂಜಿಸುತ್ತಾರೆ. ಇದು ದೇವತೆಗಳ ಬಗ್ಗೆ ನಮ್ಮಲ್ಲಿರುವ ಒಂದು ತಪ್ಪು ಕಲ್ಪನೆ. ದೇವರು ಅನೇಕ ಅಲ್ಲ ಆತ ಒಬ್ಬನೆ; ಆದರೆ ಭಗವಂತನ ಅಧೀನವಾಗಿರುವ ದೇವತೆಗಳು ಅನೇಕ. ನಾವು ತಕ್ಷಣ ಫಲ ಪಡೆಯುವ ಅಪೇಕ್ಷೆಯಿಂದ ಭಗವಂತನನ್ನು ಮರೆತು ದೇವತೆಗಳ ಸಮೂಹವನ್ನು ಪೂಜಿಸುವ ಸಂಪ್ರದಾಯವನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ. ಈ ರೀತಿ ಮಾಡುವುದರಿಂದ ಫಲ ಸಿಗಬಹುದು- ಆದರೆ ಅದು ಅಲ್ಪಕಾಲದ್ದು. ಐಹಿಕ ಸುಖವನ್ನು ಬಯಸಿ ವಿವಿಧ ದೇವತೆಗಳನ್ನು ವಿವಿಧ ಫಲಕ್ಕಾಗಿ ಪೂಜಿಸುವುದು ನಮ್ಮನ್ನು ಶಾಶ್ವತವಾದ ಮೋಕ್ಷ ಮಾರ್ಗದತ್ತ ಕೊಂಡೊಯ್ಯಲಾರದು. ಇಂದ್ರಿಯ ಭೋಗಕ್ಕಾಗಿ ಮಾಡುವ ಪೂಜೆ- ಪೂಜೆ ಎನಿಸಲಾರದು. ದೇವತೆಗಳು ಮೋಕ್ಷ ಮಾರ್ಗದಲ್ಲಿ ನಮಗೆ ಸಹಾಯ ಮಾಡಬಲ್ಲರು, ಆದರೆ ಸರ್ವಶಕ್ತ ಭಗವಂತನ ಎಚ್ಚರ ಬಹಳ ಮುಖ್ಯ. 
ಭಗವಂತನನ್ನು ಯಾವ ರೂಪದಲ್ಲೇ ಪೂಜಿಸಿದರೂ ಐಹಿಕ ಭೋಗಕ್ಕಾಗಿ ಪೂಜಿಸದೇ, ಆ ಸರ್ವಾಂತರ್ಯಾಮಿ ಭಗವಂತನನ್ನು ಸೇರುವ ಅನುಸಂಧಾನದಿಂದ ಪೂಜಿಸುವುದು ಅಧ್ಯಾತ್ಮ ಸಾಧನೆಯಲ್ಲಿ ಅತಿಮುಖ್ಯ ವಿಚಾರ. ನೀನು ನಿನ್ನ ದೇವರನ್ನು ಕೃಷ್ಣ ಎಂದರೂ ಸರಿ, ಅಲ್ಲಾಹು ಎಂದರೂ ಸರಿ. ಆದರೆ ನಮ್ಮೆಲ್ಲರನ್ನೂ ಕಾಪಾಡಿ ಪೋಷಿಸುವ ಶಕ್ತಿ ಒಂದೇ ಎನ್ನುವ ನಿಜ ತಿಳಿದಿರಲಿ. ಭಗವಂತನನ್ನು ವಿವಿಧ ರೂಪದಲ್ಲಿ ಪೂಜಿಸಬಹುದು. ಆದರೆ ವಿವಿಧ ಭೋಗಕ್ಕಾಗಿ ವಿವಿಧ ದೇವತೆಗಳನ್ನು ದೇವರೆಂದು ಪೂಜಿಸುವುದು ಅಧ್ಯಾತ್ಮ ಸಾಧನೆಯಾಗಲಾರದು. ದೇವತೆಗಳ ಮುಖೇನ ಅಥವಾ ದೇವತೆಗಳಲ್ಲಿ ಭಗವಂತನನ್ನು ಕಾಣುವುದು ತಪ್ಪಲ್ಲ. ಏಕೆಂದರೆ ಭಗವಂತ ಸರ್ವಾಂತರ್ಯಾಮಿ, ಆತನಿರದ ಸ್ಥಳವಿಲ್ಲ. ಇದನ್ನು ಬಿಟ್ಟು ದೇವತೆಗಳನ್ನೇ ಭಗವಂತ ಎಂದು ಪೂಜಿಸಿದರೆ ಅದನ್ನು ದೇವತೆಗಳೂ ಮೆಚ್ಚಲಾರರು.

ತನ್ನ ಅವತಾರದ ಉದ್ದೇಶ ಮತ್ತು ರಹಸ್ಯವನ್ನು ತಿಳಿಹೇಳಿದ ಕೃಷ್ಣ, ಅಂತಹ ಜ್ಞಾನದಿಂದ ಸಿದ್ಧಿ ಪಡೆದ ಉದಾಹರಣೆ ನೀಡಿದ. ಬಹುದೇವತಾ ವಾದವನ್ನು ತೊಡೆದು ಹಾಕಿ ದೇವರು ಒಬ್ಬನೇ, ದೇವತೆಗಳು ಹಲವು ಎನ್ನುವುದನ್ನು ಸ್ಪಷ್ಟಪಡಿಸಿದ ಹಾಗೂ ಉಪಾಸನೆ ಹೇಗಿರಬೇಕು ಎನ್ನುವುದನ್ನೂ ಸ್ಪಷ್ಟವಾಗಿ ಹೇಳಿದ. ಈ ಸಂದರ್ಭದಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಮನುಕುಲದ ಸೃಷ್ಟಿ ಈ ಭೂಮಿಯ ಮೇಲೆ ಭಗವಂತನಿಂದಾಯಿತು. ಆದರೆ ಒಬ್ಬ ಮಾನವ ಇನ್ನೊಬ್ಬನಂತಿಲ್ಲ. ಸ್ವಭಾವ ವೈವಿಧ್ಯತೆಯ ಮೂಲವೇನು? ಭಗವಂತ ಒಬ್ಬಬ್ಬರನ್ನು ಒಂದೊಂದು ರೀತಿ ಏಕೆ ಸೃಷ್ಟಿ ಮಾಡಿದ್ದಾನೆ? ಈ ಪ್ರಶ್ನೆಗೆ ಮುಂದಿನ ಶ್ಲೋಕದಲ್ಲಿ ಕೃಷ್ಣ ಉತ್ತರಿಸುತ್ತಾನೆ.

ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ ।
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ॥೧೩॥

ಚಾತುರ್ವರ್ಣ್ಯಮ್ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ ।
ತಸ್ಯ ಕರ್ತಾರಮ್ ಅಪಿ ಮಾಮ್ ವಿದ್ಧಿ ಅಕರ್ತಾರಮ್ ಅವ್ಯಯಮ್ -- ತ್ರಿಗುಣಗಳು ಮತ್ತು ಕರ್ಮಗಳ ವಿಂಗಡಣೆಯಿಂದ ನಾಲ್ಕು ವರ್ಣಗಳ ಗುಂಪನ್ನು ನಿರ್ಮಿಸಿದೆ. ಏತರಿಂದಲೂ ಬದಲಾವಣೆಗೊಳ್ಳದ ನಾನು ಅದನ್ನು ಮಾಡಿದರೂ ನಿಜವಾಗಿ ಏನನ್ನೂ ಮಾಡುವುದಿಲ್ಲವೆಂದು ತಿಳಿ. (ಬದಲಾವಣೆಗೊಳ್ಳದ ನಾನು ಅದನ್ನು ನಿರ್ಮಿಸಿದವನು ಮತ್ತು ನನ್ನನ್ನು ಯಾರೂ ನಿರ್ಮಿಸಿಲ್ಲ ಎಂದು ತಿಳಿ)

 ಕೃಷ್ಣ ಹೇಳುತ್ತಾನೆ: "ನಾನು ಗುಣಕರ್ಮವಿಭಾಗಶಃ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದೆ ಎಂದು". ನಮಗೆ ತಿಳಿದಂತೆ ನಾಲ್ಕು ವರ್ಣಗಳು- ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಭಗವಂತನ ಈ ನುಡಿಯನ್ನು ತಪ್ಪಾಗಿ ಅರ್ಥೈಸುವವರೇ ಹೆಚ್ಚು. ಭಗವಂತನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದರೆ ಈ ವರ್ಣಭೇದ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವವರಿದ್ದಾರೆ. ಮೂಲಭೂತವಾಗಿ ನೋಡಿದರೆ ಕೃಷ್ಣ ಇಲ್ಲಿ ಹೇಳಿರುವುದು ಜಾತಿಯ ಬಗ್ಗೆ ಅಲ್ಲ-ಬದಲಿಗೆ ನಾಲ್ಕು ವರ್ಣಗಳ ಬಗ್ಗೆ. ವರ್ಣ ಮತ್ತು ಜಾತಿಯನ್ನು ಸಂಕೀರ್ಣವಾಗಿ ಕೂಡಾ ಬಳಸುತ್ತಾರೆ. ಸಂಸ್ಕೃತದಲ್ಲಿ ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಒಂದು ಪದಕ್ಕೆ ಅನೇಕ ಆಯಾಮವಿರುವುದರಿಂದ ನಮಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಜಾತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಒಂದು ಹುಟ್ಟುಗುಣ ಸ್ವಭಾವ(ಜೀವ ಸ್ವಭಾವ-ಹುಟ್ಟುವಾಗಲೇ ಪಡೆದುಕೊಂಡು ಬಂದಿದ್ದು, ಮೂಲ ತ್ರೈಗುಣ್ಯಕ್ಕೆ ಸಂಬಂಧಪಟ್ಟದ್ದು) ಅದು ವರ್ಣ; ಇನ್ನೊಂದು ಯಾವ ಮನೆಯಲ್ಲಿ ಹುಟ್ಟಿದನೋ ಆ ಜಾತಿ (ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ ಹುಡುಗ ಬ್ರಾಹ್ಮಣ ಹುಡುಗ, ಕ್ಷತ್ರಿಯನ ಮನೆಯಲ್ಲಿ ಹುಟ್ಟಿದ ಹುಡುಗ ಕ್ಷತ್ರಿಯ ಹುಡುಗ). ಈ ಸೂಕ್ಷ್ಮ ಅರಿಯದಿದ್ದರೆ ಇಲ್ಲಿ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ಈ ಶ್ಲೋಕದಲ್ಲಿ ವರ್ಣ ಎಂದರೆ ಮೂಲ ಹುಟ್ಟು ಸ್ವಭಾವ.
ವರ್ಣ ಅಂದರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಅಂದರೆ ಏನು ? "ಆತನ ಬಣ್ಣ ಬಯಲಾಯಿತು" ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ ವ್ಯಕ್ತಿತ್ವ ಬಯಲಾಗುವುದು. ಇಲ್ಲಿ ಬಣ್ಣ ಎಂದು ಹೇಳಲು ಇನ್ನೊಂದು ಕಾರಣವಿದೆ. ನಮ್ಮ ಸ್ವಭಾವಕ್ಕೆ ಬಣ್ಣವಿದೆ [ಇದು ನಮ್ಮ ಕಣ್ಣಿಗೆ ಕಾಣದ ಬಣ್ಣ]. ಸಾತ್ವಿಕ-ಬಿಳಿ; ರಾಜಸ-ಕೆಂಪು; ತಾಮಸ-ಕಪ್ಪು. ಹೀಗೆ ಬಣ್ಣ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೇ ನಮ್ಮ ಸ್ವಭಾವ ನಮ್ಮೊಳಗಿನ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಗಳನ್ನು ಹೊರಹೊಮ್ಮುತ್ತದೆ[ಇದು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದು]. ತುಂಬಾ ಕೋಪ ಬಂದಾಗ ಮೈಯಿಂದ ಕೆಂಪು ಕಿರಣ; ಮನಸ್ಸು ಪ್ರಸನ್ನವಾಗಿದ್ದಾಗ ಹಸಿರು ಕಿರಣ; ಜ್ಞಾನದ ಆಳ ತಿಳಿದ ಜ್ಞಾನಿಯ ಮೈಯಿಂದ ನೀಲ ಕಿರಣ. ಹೀಗೆ ಬಣ್ಣ ನಮ್ಮ ಒಳಗಿನ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಈ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ.
ಮೇಲಿನ ವಿವರವನ್ನು ತಿಳಿದಾಗ ಸ್ಪಷ್ಟವಾಗಿ ನಮಗೆ ಅರ್ಥವಾಗುವುದು ಒಂದು ವಿಚಾರ. ಜಾತಿ ಹುಟ್ಟಿದ ಮನೆಗೆ ಮತ್ತು ತಂದೆ-ತಾಯಿಯನ್ನು ಅವಲಂಬಿಸಿ ಬರುವುದು. ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ ಸ್ವಭಾವ. ಈ ವರ್ಣವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಕಾಣಬಹುದು. ಭಾರತದಲ್ಲಿ ಶಾಸ್ತ್ರಕಾರರು ಇದನ್ನು ಗುರುತಿಸಿ ಅದಕ್ಕೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎನ್ನುವ ಹೆಸರು ಕೊಟ್ಟರು ಅಷ್ಟೇ. ಜಾತಿ ಜನ್ಮತಃ ಆದರೆ ವರ್ಣಗಳನ್ನು ಗುಣಕರ್ಮದಿಂದ ವಿಭಾಗಿಸಿರುವುದು. ಬ್ರಾಹ್ಮಣರ ಮನೆಯಲ್ಲಿ ಹುಟ್ಟುವ ಹುಡುಗ ಬ್ರಾಹ್ಮಣ ಜಾತಿಯ ಹುಡುಗ. ಆದರೆ ಆತ ಸ್ವಭಾವತಃ ಕ್ಷತ್ರಿಯನಾಗಿರಲೂಬಹುದು; ಒಂದೇ ಮನೆಯಲ್ಲಿ ನಾಲ್ಕು ವರ್ಣದ ಮಕ್ಕಳು ಹುಟ್ಟಲೂಬಹುದು. ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು ಮಹಾಬ್ರಾಹ್ಮಣ. ಇದು ವರ್ಣವನ್ನು ಅವಲಂಬಿಸಿ ಬಂದದ್ದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ-ವಿದುರ 'ಕ್ಷತ್ತಾ'(ಕೆಲಸದವಳ ಮಗ). ಇದು ಸಾಮಾಜಿಕ ರಾಜಕೀಯದಿಂದ ಬಂದಿದ್ದು! ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವನ್ನು ಜೀವಕ್ಕೆ ಹುಟ್ಟುವಾಗಲೇ ಕೊಟ್ಟಿರುತ್ತಾನೆ.
ವರ್ಣ ಇಲ್ಲದೆ ಸಮಾಜ ಸುಗಮವಾಗಿ ನಡೆಯದು. ಪುರುಷಸೂಕ್ತದಲ್ಲಿ ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ ಕರ್ಮಕ್ಕನುಗುಣವಾಗಿ ದೇಹದ ನಾಲ್ಕು ಭಾಗವಾಗಿ ಈ ರೀತಿ ವಿವರಿಸಿದ್ದಾರೆ:
ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗಮ್ ಶೂದ್ರೋ ಅಜಾಯತ ॥
ದೇಹಕ್ಕೆ ಪಂಚಾಗವಾಗಿರುವ ಹಾಗೂ ಪೂಜೆಯಲ್ಲಿ ಶ್ರೇಷ್ಠ ಎನಿಸಿದ ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ ಎಂದರ್ಥ. ಈತನಲ್ಲಿ ಅರಸೊತ್ತಿಗೆ ಇರುವುದಿಲ್ಲ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ (Service Quality). ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ ಏಕವರ್ಣದವರಲ್ಲ. ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆಯೇ ಇಲ್ಲ. ಯಾವಾಗಲೂ ನಾವು ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಉದಾಹರಣೆಗೆ: ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ. 
ವೈಶ್ಯನನ್ನು ದೇಹದ ಸೊಂಟದ ಭಾಗಕ್ಕೆ ಹೋಲಿಸಿದರು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ(Production). ಸಾಮಾನ್ಯವಾಗಿ ಹಿಂದಿನ ಕಾಲದ ಜೀವನ ಪದ್ದತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಆದ್ದರಿಂದ ಅವರನ್ನು ಸೊಂಟಕ್ಕೆ ಹೋಲಿಸಿದ್ದಾರೆ.
 ಕ್ಷತ್ರಿಯರ ಸ್ವಭಾವ ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಮತ್ತು ಆಡಳಿತ (Protection and Administration) ನೆಡೆಸುವುದಾದ್ದರಿಂದ ಅವರನ್ನು ತೋಳಿಗೆ ಹೋಲಿಸಿದ್ದಾರೆ.
ಇನ್ನು ಬ್ರಾಹ್ಮಣ ಸ್ವಭಾವ; ಇವರ ಮೂಲಕರ್ಮ ಜ್ಞಾನದ ಮಾರ್ಗದರ್ಶನ(Wisdom). ಅದಕ್ಕಾಗಿ ಇವರನ್ನು ತಲೆಗೆ ಹೋಲಿಸಿದರು. ಸ್ವಭಾವತಃ ಬ್ರಾಹ್ಮಣ ಎನಿಸಿದವನು ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸುಳ್ಳು ಹೇಳದ, ಮುಖವಾಡ ಇಲ್ಲದ ಬದುಕು, ಸದಾ ಅಂತರಂಗ ಬಹಿರಂಗ ಶುದ್ಧಿ- ಈ ಮೂಲ ಗುಣಗಳನ್ನು ಹೊಂದಿರುತ್ತಾನೆ.
ಹೀಗೆ ಈ ನಾಲ್ಕು ವರ್ಣಗಳು ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು ಎನ್ನುವ ಭಾವನೆ ಸಲ್ಲದು. ಎಲ್ಲರೂ ಮೋಕ್ಷ ಯೋಗ್ಯ ಜೀವರೇ. ಇದು ಆಧ್ಯಾತ್ಮಿಕ ವರ್ಗೀಕರಣ ಮತ್ತು ವ್ಯವಸ್ಥೆ. 'ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ' ಎಂದಿದ್ದಾನೆ ಕೃಷ್ಣ.
ಇಲ್ಲಿ ನಾವು ತಿಳಿಯಬೇಕಾದ ಒಂದು ಮೂಲಭೂತ ಅಂಶವೇನೆಂದರೆ- ಜೀವವನ್ನು ಭಗವಂತ ಸೃಷ್ಟಿಸಿಲ್ಲ. ಜೀವ ಮತ್ತು ಜೀವಸ್ವಭಾವ ಅನಾದಿನಿತ್ಯ. ಜೀವದ ಸ್ವಭಾವಕ್ಕನುಗುಣವಾಗಿ ಅದಕ್ಕೆ ಬೇಕಾದ ದೇಹ, ಶಕ್ತಿ, ಪ್ರಪಂಚದ ನಿರ್ಮಾಣ ಮಾಡಿ, ಅದಕ್ಕೊಂದು ಅಸ್ತಿತ್ವ ಕೊಟ್ಟು, ಜೀವಸ್ವಭಾವದ ವಿಕಾಸಕ್ಕೋಸ್ಕರ ಜೀವವನ್ನು ಬಿತ್ತಿ ಬೆಳೆಸುವವ ಭಗವಂತ. ಇಂತಹ ಭಗವಂತ ಎಲ್ಲರ ಕರ್ತಾರ. ಇಂತಹ ಭಗವಂತನಿಗೆ ಇನ್ನೊಬ್ಬ ಕರ್ತಾರನಿಲ್ಲ. ಆತ ಎಲ್ಲವುದರ ಕಾರಣ ಆದರೆ ಆತನಿಗೆ ಕಾರಣವಾದ ಇನ್ನೊಂದು ವಸ್ತು ಇಲ್ಲ. "ಬದಲಾವಣೆಗೊಳ್ಳದ ನಾನು ಅದನ್ನು ನಿರ್ಮಿಸಿದವನು ಮತ್ತು ನನ್ನನ್ನು ಯಾರೂ ನಿರ್ಮಿಸಿಲ್ಲ ಎಂದು ತಿಳಿ" ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.

ನ ಮಾಮ್ ಕರ್ಮಾಣಿ ಲಿಂಪಂತಿ ನ ಮೇ ಕರ್ಮ ಫಲೇ ಸ್ಪೃಹಾ ।
ಇತಿ ಮಾಂ ಯೋSಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ॥೧೪॥

ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ
ಇತಿ ಮಾಮ್ ಯಃ ಅಭಿಜಾನಾತಿ ಕರ್ಮಭಿಃ ನ ಸಃ ಬಧ್ಯತೇ-ಕರ್ಮಗಳು ನನ್ನನ್ನು ಅಂಟುವುದಿಲ್ಲ. ನನಗೆ ಕರ್ಮಫಲದ ಬಯಕೆಯಿಲ್ಲ. ಹೀಗೆಂದು ನನ್ನನ್ನು ತಿಳಿದವನು ಕರ್ಮದ ಸೆರೆಯಲ್ಲಿ ಸಿಕ್ಕಿ ಬೀಳನು.

ಭಗವಂತ ಅವರವರ ಸ್ವಭಾವಕ್ಕೆ ತಕ್ಕಂತೆ, ಅವರವರ ಕರ್ಮಕ್ಕೆ ತಕ್ಕಂತೆ (ಗುಣಕರ್ಮ ವಿಭಾಗಶಃ) ಪ್ರಪಂಚವೆಂಬ ತೋಟವನ್ನು ನಿರ್ಮಿಸಿ, ನಾಲ್ಕು ವರ್ಣದ ಮೋಕ್ಷಯೋಗ್ಯ ಮಾನವರ ಸೃಷ್ಟಿಯನ್ನು ಈ ಭೂಮಿ ಮೇಲೆ ಮಾಡಿದ. "ಇದರಿಂದ ನನಗೆ ಯಾವ ಕರ್ಮವೂ ಅಂಟುವುದಿಲ್ಲ" ಎನ್ನುತ್ತಾನೆ ಕೃಷ್ಣ. ಕರ್ಮ ಅಂಟುವುದು 'ಇದು ನನ್ನದು', 'ನಾನು ಮಾಡಿದ್ದು' ಎನ್ನುವ ಅಭಿಮಾನವಿದ್ದಾಗ ಮಾತ್ರ. ಭಗವಂತನಿಗೆ ಕರ್ಮದ ಅಂಟು ಅಥವಾ ನಂಟು ಇಲ್ಲ. ಕರ್ಮಫಲದ ಅಭಿಮಾನವಿಲ್ಲ. ಆತನಿಗೆ ಕರ್ಮದ ಪರಿಶ್ರಮ, ಆಯಾಸಪೂರ್ವಕ ಕರ್ತೃತ್ವ, ಫಲದ ಬಯಕೆ ಇಲ್ಲ. ಈ ಸತ್ಯವನ್ನು ಅರಿತವ, ಅರಿತು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡವ, ಕರ್ಮ ಬಂಧನದಲ್ಲಿ ಸಿಕ್ಕಿಬೀಳನು.   

ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ ।
ಕುರು ಕರ್ಮೈವ ತಸ್ಮಾತ್ ತ್ವಂ ಪೂರ್ವೈಃ ಪೂರ್ವತರಂ ಕೃತಮ್ ॥೧೫॥

ಏವಮ್ ಜ್ಞಾತ್ವಾ ಕೃತಮ್ ಕರ್ಮ ಪೂರ್ವೈಃ ಅಪಿ ಮುಮುಕ್ಷುಭಿಃ
ಕುರು ಕರ್ಮ ಏವ ತಸ್ಮಾತ್ ತ್ವಮ್ ಪೂರ್ವೈಃ ಪೂರ್ವ ತರಮ್ ಕೃತಮ್-ಬಿಡುಗಡೆ ಬಯಸಿದ ಹಿಂದಿನವರು ಕೂಡಾ ಹೀಗೆ ‘ತಿಳಿದು’ ಕರ್ಮ ಮಾಡಿದರು. ಆದ್ದರಿಂದ ಹಿಂದಿನಿಂದಲೂ ಇದ್ದು ಹಿರಿಯರು ಮಾಡಿಕೊಂಡು ಬಂದ ಕರ್ಮವನ್ನೇ ನೀನು ಮಾಡು .

ಕರ್ಮದ ಬಂಧನದಿಂದ ಬಿಡಿಸಿಕೊಳ್ಳಲು ‘ನಿಷ್ಕ್ರಿಯತೆ’ ಸುಲಭೋಪಾಯ ಎಂದು ಕೆಲವರು ಯೋಚಿಸಬಹುದು. ಕೃಷ್ಣ ನಿಷ್ಕ್ರಿಯತೆಯನ್ನು ಉಗ್ರವಾಗಿ ವಿರೋಧಿಸುತ್ತಾನೆ. 'ನೂರು ವರುಷ ಬದುಕು ಆದರೆ ಕರ್ತವ್ಯಕರ್ಮ ಮಾಡಿಕೊಂಡು ಬದುಕು. ನಿಷ್ಕ್ರಿಯನಾಗಿ ಬದುಕಬೇಡ'. ಇದು ಕೃಷ್ಣನ ಸಿದ್ಧಾಂತ. ಕರ್ಮ ಮಾಡುವುದು ಎಂದರೆ ಏನನ್ನಾದರೂ ಮಾಡುವುದಲ್ಲ. ನಮ್ಮ ಜೀವಸ್ವಭಾವ(ವರ್ಣ)ಕ್ಕೆ ತಕ್ಕಂತೆ ಕರ್ಮ ನಡೆಯುತ್ತಿರಬೇಕು. ಮಾಡುವ ಕರ್ಮವನ್ನು ಜ್ಞಾನಪೂರ್ವಕವಾಗಿ ತಿಳಿದು ಅಭಿಮಾನ-ಅಹಂಕಾರ-ಫಲಾಪೇಕ್ಷೆ ಇಲ್ಲದೇ ಮಾಡಬೇಕು. "ನಿನ್ನ ಹಿಂದಿನ ರಾಜರ್ಷಿಗಳು, ಋಷಿ-ಮುನಿಗಳು ಮಾಡಿದ್ದೂ ಇದನ್ನೇ . ಕರ್ಮಯೋಗ ಮತ್ತು ಜ್ಞಾನಯೋಗವೆಂಬ ಉಭಯ ಯೋಗವಿಲ್ಲದೇ ಭಗವಂತನ ಸಂಯೋಗವಿಲ್ಲ" ಎನ್ನುತ್ತಾನೆ ಕೃಷ್ಣ.  

ಕಿಂ ಕರ್ಮ ಕಿಮಕರ್ಮೇತಿ ಕವಯೋSಪ್ಯತ್ರ ಮೋಹಿತಾಃ ।
ತತ್ ತೇ ಕರ್ಮ ಪ್ರವಕ್ಷ್ಯಾಮಿ ಯಜ್ ಜ್ಞಾತ್ವಾ ಮೋಕ್ಷ್ಯಸೇSಶುಭಾತ್ ॥೧೬॥

ಕಿಮ್ ಕರ್ಮ ಕಿಮ್ ಅಕರ್ಮ ಇತಿ ಕವಯಃ ಅಪಿ ಅತ್ರ ಮೋಹಿತಾಃ
ತತ್ ತೇ ಕರ್ಮ ಪ್ರವಕ್ಷ್ಯಾಮಿ ಯತ್ ಜ್ಞಾತ್ವಾ ಮೋಕ್ಷ್ಯಸೇ ಅಶುಭಾತ್-ಯಾವುದು ಕರ್ಮ, ಯಾವುದು ಅಕರ್ಮ ಎಂಬಲ್ಲಿ ಬಲ್ಲವರೂ ಗಲಿಬಿಲಿಗೊಳ್ಳುತ್ತಾರೆ. ಅಂತಹ ಕರ್ಮವನ್ನು ನಿನಗೆ ತಿಳಿಹೇಳುತ್ತೇನೆ. ಅದನ್ನು ಅರಿತು ನೀನು ಕೇಡಿನಿಂದ ಪಾರಾಗುವೆ.

ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ ।
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ ॥೧೭॥

ಕರ್ಮಣಃ ಹಿ ಅಪಿ ಬೋದ್ಧವ್ಯಮ್ ಬೋದ್ಧವ್ಯಮ್ ಚ ವಿಕರ್ಮಣಃ |
ಅಕರ್ಮಣಃ ಚ ಬೋದ್ಧವ್ಯಮ್ ಗಹನಾ ಕರ್ಮಣಃ ಗತಿಃ -- ಕರ್ಮದ ಬಗ್ಗೆಯೂ ತಿಳಿಯಬೇಕು. ವಿರುದ್ಧ ಕರ್ಮದ ಬಗೆಗೂ ತಿಳಿಯಬೇಕು, ಕರ್ಮ ತ್ಯಾಗದ ಬಗೆಗೂ ತಿಳಿಯಬೇಕು.[ಕರ್ಮವನ್ನು ನಮ್ಮಿಂದ ತಿಳಿಯಬೇಕು. ವಿಕರ್ಮವನ್ನು ನಮ್ಮಿಂದ ತಿಳಿಯಬೇಕು; ಆಕರ್ಮವನ್ನೂ ನಮ್ಮಿಂದ ತಿಳಿಯಬೇಕು.] ಕರ್ಮದ ನಡೆ ನಿಗೂಢವಾದದ್ದು.

ಯಾವುದು ಕರ್ಮ, ಯಾವುದು ಅಕರ್ಮ ಎನ್ನುವುದು ಜ್ಞಾನಿಗಳಿಗು ಕೂಡಾ ಗೊಂದಲದ ವಿಷಯ. ನಾವು ಮಾಡುವುದನ್ನು ತಿಳಿದು ಮಾಡಬೇಕು. ನಮ್ಮ ಕರ್ಮ ಜ್ಞಾನಪೂರ್ವಕವಾಗಿರಬೇಕು. ಆದ್ದರಿಂದ ಕರ್ಮ ಎಂದರೆ ಏನು ಎನ್ನುವುದನ್ನು ಮೊದಲು ನಿನಗೆ ಹೇಳುತ್ತೇನೆ. ಇದರಿಂದ ನೀನು ಕೇಡಿನಿಂದ ಪಾರಾಗುವೆ ಎನ್ನುತ್ತಾನೆ. ಕೃಷ್ಣ.
ಕರ್ಮದ ಬಗ್ಗೆ ತಿಳಿಯುವುದು ಅಷ್ಟು ಸುಲಭವಲ್ಲ. ಆದರೆ ಇದನ್ನು ತಿಳಿಯಲೇಬೇಕು. ಕರ್ಮದ ನಡೆ ಅತ್ಯಂತ ರಹಸ್ಯವಾದದ್ದು. ಯಾವುದು ಕರ್ಮ ಯಾವುದು ಅಕರ್ಮ ಎಂದು ತಿಳಿಯುವುದು ಬಹಳ ಕಷ್ಟ. ದೊಡ್ಡದೊಡ್ಡ ಜ್ಞಾನಿಗಳಿಗೂ ಇದು ತಿಳಿಯುವುದಿಲ್ಲ. ಇತಿಹಾಸದಲ್ಲಿನ ಕೆಲವು ವಿಷಯಗಳನ್ನು ನೋಡಿದರೆ ನಮಗೆ ಗೊಂದಲವಾಗುತ್ತದೆ. ಉದಾಹರಣೆಗೆ ವೇದವ್ಯಾಸರು. ಇವರು ಮದುವೆ ಆಗದ ಒಬ್ಬ ಬೆಸ್ತರ ಹುಡುಗಿಯಿಂದ ಹುಟ್ಟಿದ ಕನ್ಯಾಪುತ್ರ(ಕಾನೀನ); ವೇದವ್ಯಾಸರ ಮಕ್ಕಳು ಪಾಂಡು ಮತ್ತು ಧೃತರಾಷ್ಟ್ರ ವಿಧವೆಯರಿಗೆ ಹುಟ್ಟಿದ ಮಕ್ಕಳು; ಪಾಂಡವರು-ಗಂಡ ಇರುವಾಗ ಪರಪುರುಷರಿಗೆ ಹುಟ್ಟಿದವರು! ಯಾವುದು ಧರ್ಮ? ಪಾಂಡವರನ್ನು ಸಮರ್ಥಿಸುವುದು ಎಷ್ಟು ಸರಿ? ವೇದವ್ಯಾಸರನ್ನು ಮಹಾಜ್ಞಾನಿ ಬ್ರಾಹ್ಮಣ ಎಂದು ಒಪ್ಪುವುದು ಸಾಧ್ಯವೇ? ಈ ಉದಾಹರಣೆಯನ್ನು ನೋಡಿದಾಗ ಯಾವುದು ಧರ್ಮ, ಯಾವುದು ಅಧರ್ಮ, ಯಾವುದು ಸರಿ, ಯಾವುದು ತಪ್ಪು, ಎನ್ನುವಲ್ಲಿ ನಮಗೆ ಗೊಂದಲವಾಗುತ್ತದೆ.
ನಮ್ಮಲ್ಲಿ ನೆಡೆಯತಕ್ಕ ಕರ್ಮ, ಅಕರ್ಮ, ವಿಕರ್ಮದ ಹಿಂದೆ ಅನಂತವಾದ ಭಗವದ್ ಶಕ್ತಿ ಕೆಲಸ ಮಾಡುತ್ತಿರುತ್ತದೆ ಎನ್ನುವ ಎಚ್ಚರ ನಮಗಿರಬೇಕು. ಈ ಜ್ಞಾನವಿಲ್ಲದೆ ಕರ್ಮದ ಮರ್ಮವನ್ನು ಅರಿಯಲು ಸಾಧ್ಯವಿಲ್ಲ. ಒಂದು ದೇಹದಲ್ಲಿ ಭಗವಂತ ಅನೇಕ ರೂಪದಲ್ಲಿದ್ದು(ವಿಕರ್ಮಣಃ) ಕರ್ಮ ಮಾಡಿಸುತ್ತಾನೆ. ಕರ್ಮ ಎನ್ನುವುದು ತುಂಬಾ ಕ್ಲಿಷ್ಟವಾದ ವಿಷಯ. ಅದನ್ನು ನಾವು ಭಗವಂತನಿಂದಲೇ ತಿಳಿಯಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಕರ್ಮದ ಮರ್ಮವನ್ನು ವಿವರಿಸುತ್ತಾನೆ.

ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ ।
ಸ ಬುದ್ಧಿಮಾನ್ ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್ ॥೧೮॥

ಕರ್ಮಣಿ ಅಕರ್ಮ ಯಃ ಪಶ್ಯೇತ್ ಅಕರ್ಮಣಿ ಚ ಕರ್ಮ ಯಃ |
ಸಃ ಬುದ್ಧಿಮಾನ್ ಮನುಷ್ಯೇಷು ಸಃ ಯುಕ್ತಃ ಕೃತ್ಸ್ನಕರ್ಮ ಕೃತ್ -- ವಿಶ್ವದ ಕ್ರಿಯೆ ನಡೆಯುತ್ತಿರುವಾಗಲೂ ತನ್ನಿಂದ ಏನೂ ನಡೆದಿಲ್ಲ ಎಂದು ತಿಳಿದವನು, ತಾನು ಏನೂ ಮಾಡದಿದ್ದಾಗಲೂ ವಿಶ್ವದ ಕ್ರಿಯೆ ನಡೆಯುತ್ತಿದೆ ಎಂದು ತಿಳಿದವನು,[ಕರ್ಮಬದ್ಧನಾದ ಜೀವನಲ್ಲಿ ಕರ್ಮ ಇಲ್ಲ ಎಂದು ತಿಳಿದವನು, ಕರ್ಮಾತೀತನಾದ ಭಗವಂತನಲ್ಲಿ ಎಲ್ಲಾ ಕರ್ಮಗಳನ್ನು ಕಾಣುವವನು] ಮನುಷ್ಯರಲ್ಲಿ ನಿಜವಾಗಿ ತಿಳಿದವನು. ಅವನೇ ಸಾಧನೆಯ ದಾರಿ ಬಲ್ಲವನು; ಎಲ್ಲಾ ಕರ್ಮಗಳ ಫಲವನ್ನು ಪಡೆದವನು.

ಕರ್ಮ ಅಂದರೆ ಏನು ಎನ್ನುವ ಬಗ್ಗೆ ಅತ್ಯಂತ ರೋಚಕವಾದ ವಿಚಾರವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ಈ ಹಿಂದೆ ಹೇಳಿದಂತೆ ಸಂಸ್ಕೃತ ರಹಸ್ಯಾರ್ಥವುಳ್ಳ ಭಾಷೆ(mystic language). ಅದಕ್ಕಾಗಿ ಭಗವದ್ಗೀತೆಯನ್ನು ಓದಿದಾಕ್ಷಣ, ಅಧ್ಯಾತ್ಮದ ಅನುಭವ ಇಲ್ಲದೆ ಏನೂ ತಿಳಿಯದು. ಅಧ್ಯಾತ್ಮದ ಅನುಭವದ ಸ್ಥರದಲ್ಲಿ ನಾವು ಎಷ್ಟು ಆಳಕ್ಕೆ ಇಳಿಯುತ್ತೇವೋ ಅಷ್ಟು ಆಳಕ್ಕೆ ಗೀತೆ ತೆರೆದುಕೊಳ್ಳುತ್ತದೆ. ಇದಕ್ಕೆ ಈ ಶ್ಲೋಕವೇ ಉದಾಹರಣೆ. ಮೇಲ್ನೋಟಕ್ಕೆ ಒಗಟಿನಂತೆ ವಿರೋಧಾಭಾಸವಾಗಿರುವ ಹುಚ್ಚು ಹೇಳಿಕೆಯಂತಿದೆ ಈ ಶ್ಲೋಕ! ಇಲ್ಲಿ ಹೀಗೆ ಹೇಳಲಾಗಿದೆ: "ಕರ್ಮ ಇದ್ದಲ್ಲಿ ಕರ್ಮ ಇಲ್ಲ, ಕರ್ಮ ಎಲ್ಲಿ ಇಲ್ಲ ಅಲ್ಲಿ ಕರ್ಮ ಇದೆ. ಇದು ಯಾರಿಗೆ ತಿಳಿದಿದೆಯೋ ಆತ ಬುದ್ಧಿವಂತ" ಅಥವಾ "ಯಾವುದು ಕರ್ಮವೋ ಅದು ಕರ್ಮವಲ್ಲ, ಯಾವುದು ಕರ್ಮವಲ್ಲವೋ ಅದು ಕರ್ಮ; ಇದನ್ನು ತಿಳಿದವ ಬುದ್ಧಿವಂತ"!! ಇಲ್ಲಿರುವ ಗೂಡಾರ್ಥವನ್ನು ತಿಳಿದುಕೊಳ್ಳಬೇಕಾದರೆ ಅಧ್ಯಯನದ ಜೊತೆಗೆ ಅಧ್ಯಾತ್ಮದ ಅನುಭಾವ ಬೇಕು.
'ಎಲ್ಲಿ ಕರ್ಮವಿದೆಯೋ ಅಲ್ಲಿ ಕರ್ಮವಿಲ್ಲ’. ನಾವು ನಮ್ಮಲ್ಲಿ ಕರ್ಮವಿದೆ ಎಂದು ತಿಳಿದುಕೊಳ್ಳುತ್ತೇವೆ. 'ನನ್ನಲ್ಲಿ ಕರ್ಮದ ಸ್ವಾತಂತ್ರ್ಯವಿದೆ-ನನಗೆ ಯಾರ ಹಂಗೂ ಇಲ್ಲ' ಎನ್ನುವ ಭಾವನೆ ನಮ್ಮದು. ಆದರೆ ನಮ್ಮಲ್ಲಿರುವ ಕರ್ಮ ಭಗವಂತನ ಅಧೀನ. ಈ ಸೃಷ್ಟಿ ಚಕ್ರದಲ್ಲಿ ನಾವು ಏನೂ ಮಾಡದಿದ್ದಾಗಲೂ ಸಹ ಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ನೀನು ಏನನ್ನಾದರೂ ಮಾಡುತ್ತಿದ್ದರೆ ನಿನ್ನಿಂದಾಗಿಯೇ ಕ್ರಿಯೆ ನಡೆದದ್ದಲ್ಲ. ನನ್ನಲ್ಲಿ ಕ್ರಿಯೆ ಇದೆ ಎನ್ನುವ ಭ್ರಮೆಯನ್ನು ಬಿಟ್ಟುಬಿಡು. ಪ್ರಕೃತಿ ನಿರಂತರವಾಗಿ ತನ್ನ ಕರ್ತವ್ಯವನ್ನು ಮಾಡುತ್ತಿರುತ್ತದೆ. ವಿಶ್ವಕ್ರಿಯೆ ನಾವು ನಿಷ್ಕ್ರಿಯರಾಗಿದ್ದರೂ ನಡೆಯುತ್ತದೆ. ನಾವು ಎಲ್ಲಾ ಮಾಡಿದರೂ ಏನೂ ನಡೆಯುವುದಿಲ್ಲ. ಈ ವಿಶ್ವಚಕ್ರ ನಿರಂತರ. 
ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಲೌಕಿಕ ದೃಷ್ಟಾಂತವನ್ನು ನೋಡೋಣ. ಒಂದು ಆನೆ(ಈ ವಿಶ್ವ ಚಕ್ರ) ಅದರ ತಲೆಯ ಮೇಲೆ ಒಂದು ಪುಟ್ಟ ಇರುವೆ(ಸಾಮಾನ್ಯ ಮಾನವ). ಆನೆ ಪೂರ್ವದಿಂದ ಪಶ್ಚಿಮಕ್ಕೆ ಹೋಗುತ್ತಿದೆ. ಇರುವೆ ನಿರಂತರ ತಲೆಯಿಂದ ಬಾಲದತ್ತ ಅಂದರೆ ಪಶ್ಚಿಮದಿಂದ ಪೂರ್ವಕ್ಕೆ ಹೋಗುತ್ತಿದೆ. ಆದರೆ ಆನೆಯ ಮೇಲೆ ಇರುವ ಈ ಇರುವೆ ಯಾವ ದಿಕ್ಕಿನಲ್ಲಿ ಚಲಿಸಿದರೂ, ಅದು ಆನೆ ಎಲ್ಲಿಗೆ ಸೇರುತ್ತದೋ ಅಲ್ಲಿಗೇ ಸೇರುವುದು. ಇಲ್ಲಿ ಇರುವೆಯ ಚಲನೆ ವ್ಯರ್ಥ-ಅದರಿಂದ ಏನೂ ಉಪಯೋಗವಿಲ್ಲ. ಒಂದು ವೇಳೆ ಈ ಇರುವೆ ನನ್ನಿಂದಾಗಿ ಆನೆ ಅಲ್ಲಿಂದ ಇಲ್ಲಿಗೆ ಬಂದು ತಲುಪಿತು ಎಂದು ತಿಳಿದರೆ ಹಾಸ್ಯಾಸ್ಪದವಲ್ಲವೇ? ಹಾಗೇ, ನಮ್ಮ ಚಲನೆಯ ಹಿಂದೆ ಒಂದು ಮಹಾನ್ ಚಾಲನಾ ಶಕ್ತಿ ಇದೆ. ಇಡೀ ಬ್ರಹ್ಮಾಂಡವನ್ನು(Cosmos) ತೆಗೆದುಕೊಂಡರೆ, ಈ ಭೂಮಿ ಇತರ ಗ್ರಹಗೋಲಗಳ ನಡುವಿನ ಒಂದು ಚಿಕ್ಕ ಬಿಂದು. ಆ ಬಿಂದುವಿನಲ್ಲಿ ನಮ್ಮ ದೇಶ ಇನ್ನೂ ಒಂದು ಚಿಕ್ಕ ಬಿಂದು. ಅದರಲ್ಲಿ 'ನಾನು' ಎನ್ನುವುದು ಊಹಿಸಲೂ ಅಸಾಧ್ಯವಾದ ಬಿಂದು(very tiny and insignificant). ಆದರೆ ನಾವು ಮಾತ್ರ ಈ ಬ್ರಹ್ಮಾಂಡವೇ ನಮ್ಮಿಂದ ನಡೆಯುತ್ತಿದೆ ಎನ್ನುವಂತೆ ಅಹಂಕಾರ ಪಡುತ್ತೇವೆ. ಇಡೀ ವಿಶ್ವದ ಚಲನೆಯೊಂದಿಗೆ ನಾವು ಒಂದು ಘಟಕವಾಗಿದ್ದೇವೆಯೇ ಹೊರತು, ನಮ್ಮ ಸ್ವಂತದಿಂದ ಏನೂ ಆಗುತ್ತಿಲ್ಲ. ಆದ್ದರಿಂದ 'ನಿನ್ನ ಕರ್ಮದಲ್ಲಿ ಅಕರ್ಮವನ್ನು ನೋಡು’ ಎನ್ನುತ್ತಾನೆ ಕೃಷ್ಣ. ಹೀಗೆ ತನ್ನ ಕರ್ಮವನ್ನು ನಿಯಂತ್ರಿಸುವ ವಿಶ್ವಶಕ್ತಿಯಾಗಿ ಭಗವಂತನಿದ್ದಾನೆ ಎಂದು ತಿಳಿದವ ವಿವೇಕಿ'.
'ಯುಕ್ತಃ' ಅಂದರೆ ಮನಸ್ಸನ್ನು ಸತ್ಯದ ಕಡೆಗೆ ತಿರುಗಿಸಿ, ಸತ್ಯವನ್ನು ತಿಳಿಯುವುದಕ್ಕೋಸ್ಕರ ಮನನ ಮಾಡಿದವ ಎಂದರ್ಥ. ಹೀಗೆ ಸರಿ ತಪ್ಪು ತಿಳಿದವ ಎಲ್ಲಾ ಕರ್ಮದ ಪೂರ್ಣ ಫಲವನ್ನು ಪಡೆಯುತ್ತಾನೆ. ಇಂತಹವನಿಗೆ ಕರ್ತೃತ್ವ ಇದ್ದರೂ ಅದರ ಅಭಿಮಾನವಿಲ್ಲ; ನಾನು ಮಾಡಿದೆ ನನ್ನಿಂದಾಯಿತು ಅನ್ನುವ ಅಹಂಕಾರವಿಲ್ಲ; ನಾನು ಸ್ವತಂತ್ರ ಅನ್ನುವ ಭ್ರಮೆ ಇಲ್ಲ. ಆದ್ದರಿಂದ ಅವನು ಮಾಡುವ ಎಲ್ಲಾ ಕರ್ಮವೂ ಫಲಪ್ರದ. ಭಗವಂತನ ಪಾರಮ್ಯದ ಎಚ್ಚರದಿಂದ ಅವನ ಜೀವನ ರೂಪುಗೊಂಡಿದೆ. ಅಂತಹವನು ಸಣ್ಣ ಕರ್ಮ ಮಾಡಿದರೂ ಮಹಾಫಲವನ್ನು ಪಡೆಯುತ್ತಾನೆ. ಅಹಂಕಾರದಿಂದ ಕಳಚಿಕೊಳ್ಳುವುದು ಅಧ್ಯಾತ್ಮದಲ್ಲಿ ಅತ್ಯಂತ ಮಹತ್ವದ ವಿಷಯ. ಕೃಷ್ಣ ಗೀತೆಯಲ್ಲಿ ಈ ಮಾತನ್ನು ಪದೇ ಪದೇ ಹೇಳುತ್ತಾನೆ. ಅಹಂಕಾರ ಎನ್ನುವುದು ಎಷ್ಟು ಅಪಾಯಕಾರಿ ಎಂದರೆ, ಗೀತೆ ಓದಿದ ಮೇಲೆ 'ನಾನು ಗೀತೆಯನ್ನು ಓದಿದ್ದೇನೆ' ಎನ್ನುವ ಅಹಂಕಾರ ಬಂದು ಬಿಡುತ್ತದೆ! ಆದ್ದರಿಂದ ಜ್ಞಾನ ಸಂಪಾದನೆ ಜೊತೆಗೆ ಒಂದು ಎಚ್ಚರ ಸದಾ ಇರಬೇಕು. ಯಾವ ಕಾಲಕ್ಕೂ ಅಹಂಕಾರಕ್ಕೆ ಒಳಗಾಗಬಾರದು. ಅಹಂಕಾರ ಎನ್ನುವುದು ಅಧ್ಯಾತ್ಮದ ದಾರಿ ಅಲ್ಲ.
ಭಗವಂತ ಕರ್ಮ ಮಾಡಿದರೂ ಅವನಿಗೆ ಕರ್ಮದ ಲೇಪವಿಲ್ಲ. ಯಾವದೇ ಕರ್ಮಲೇಪವಿಲ್ಲದ ಭಗವಂತನಲ್ಲಿ ಎಲ್ಲಾ ಕರ್ಮವಿದೆ. ಕರ್ಮ ಇದ್ದಲ್ಲಿ ಕರ್ಮದ ಲೇಪವಿಲ್ಲವೋ. ಯಾರಲ್ಲಿ ಕರ್ಮದ ಲೇಪವಿಲ್ಲ ಆತ ಮಾತ್ರ ಪೂರ್ಣ ಫಲವನ್ನು ಪಡೆಯುತ್ತಾನೆ. ಕರ್ಮದ ಲೇಪದಲ್ಲಿ ಬಿದ್ದವನು 'ನಾನು ಮಾಡಿದೆ, ನನ್ನಿಂದಾಯಿತು' ಎಂದುಕೊಂಡು ಸೆರೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ. ಇದು ಕೃಷ್ಣನ ಕರ್ಮದ ವಿವರಣೆ(definition). ಭಗವಂತನಲ್ಲಿ ಕರ್ಮದ ಲೇಪವಿಲ್ಲ, ಆದರೆ ಸರ್ವ ಕರ್ತೃತ್ವವಿದೆ. ನಾವು ಎಷ್ಟು ಕರ್ಮದ ಲೇಪವನ್ನು ಕಮ್ಮಿ ಮಾಡಿಕೊಂಡೆವೋ ಅಷ್ಟು ಕರ್ಮದ ಫಲವನ್ನು ಪಡೆಯುತ್ತೇವೆ. ಇದನ್ನು ತಿಳಿದವ ಬುದ್ಧಿವಂತ. ಆತ ಕರ್ಮದ ನಿಜವಾದ ಅನುಸಂಧಾನದಿಂದ ಅದರ ಪೂರ್ಣ ಫಲವನ್ನು ಪಡೆಯುತ್ತಾನೆ. ಇದನ್ನು ಇನ್ನೂ ಬಿಡಿಸಿ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.

ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ ।
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ ॥೧೯॥

ಯಸ್ಯ ಸರ್ವೇ ಸಮಾರಂಭಾಃ ಕಾಮ ಸಂಕಲ್ಪವರ್ಜಿತಾಃ  
ಜ್ಞಾನ ಅಗ್ನಿ ದಗ್ಧ ಕರ್ಮಾಣಮ್ ತಮ್ ಆಹುಃ ಪಂಡಿತಮ್ ಬುಧಾಃ -- ಮಾಡುವ ಬಯಕೆ, ಪಡೆಯುವ ಬಯಕೆಗಳನ್ನು ತೊರೆದು ಎಲ್ಲಾ ಕರ್ಮಗಳಲ್ಲೂ ತೊಡಗುವವನು ಅರಿವಿನ ಬೆಂಕಿಯಿಂದ ಕರ್ಮಗಳನ್ನು ಸುಟ್ಟವನು. ಬಲ್ಲವರು ಅಂಥವನನ್ನು ಪಂಡಿತ ಎನ್ನುತ್ತಾರೆ.
ನಮ್ಮ ಜೀವನದ ತೊಡಗುವಿಕೆಯ ಹಿಂದೆ ಒಂದು ಕಾಮನೆ,ಸಂಕಲ್ಪ ಇರುತ್ತದೆ. ನಾನು ಸುಖ ಪಡಬೇಕು, ನನ್ನ ಮನೆಮಂದಿಯನ್ನು ಸುಖವಾಗಿಡಬೇಕು ಎನ್ನುವ ಕಾಮನೆ. ಇದಕ್ಕಾಗಿ ಇನ್ಯಾವುದೋ ವಿಧಾನವನ್ನು ಅನುಸರಿಸುತ್ತೇವೆ. ಇದು ಪ್ರತಿಯೊಂದು ಕ್ರಿಯೆಯ ಹಿಂದೆ ಮನುಷ್ಯನನ್ನು ಕಾಡುವ ಸಮಸ್ಯೆ. ತನ್ನ ಬಯಕೆಯ ಈಡೇರಿಕೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ಯಾರಿಗೆ ತನ್ನ ತೊಡಗುವಿಕೆಯಲ್ಲಿ ಬಯಕೆಗಳ ಸ್ಪರ್ಶ ಇಲ್ಲವೋ ಅವನು ಪಂಡಿತ. ಒಬ್ಬ ಪಂಡಿತನ ಪಾಂಡಿತ್ಯವನ್ನು ಅವನ ನುಡಿಯಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು.
ನಿನ್ನ ಜೀವನದಲ್ಲಿ ಹೀಗೇ ಆಗಬೇಕು, ಹೀಗೇ ಮಾಡಬೇಕು, ಅದರಿಂದ ಇಂತಹದ್ದೇ ಸಿಗಬೇಕು ಅನ್ನುವ ಬಯಕೆ, ಆಸೆಗಳನ್ನು ಬಿಟ್ಟು ನಿರಾಳವಾಗಿ ಕರ್ತವ್ಯ ಮಾಡು. ಭಗವಂತ ಏನು ಕೊಡುತ್ತಾನೋ ಅದನ್ನು ಪ್ರಸಾದವಾಗಿ ಸ್ವೀಕರಿಸು. ಏನು ಬಂತೋ ಅದರಲ್ಲಿ ತೃಪ್ತಿಪಡುವುದನ್ನು ಕಲಿ. ಇಲ್ಲವಲ್ಲಾ ಎಂದು ಸಂಕಟ ಪಡಬೇಡ. ಇದು 'ಕಾಮಸಂಕಲ್ಪವರ್ಜ್ಯ'. [ಏನೂ ಬೇಡ ಎಂದು ಬಯಸುವುದಲ್ಲ, ಇಂಥದ್ದೇ ಬೇಕು ಎಂದು ಬಯಸದೇ ಇರುವುದು ಕಾಮಸಂಕಲ್ಪವರ್ಜ್ಯ]. ಏನು ಬಂತೋ ಬರಲಿ, ನೀನು ಪ್ರಯತ್ನಶೀಲನಾಗು. ಬಂದದ್ದರಲ್ಲಿ ಸಂತೋಷದಿಂದ ಬದುಕು. ಇಂತಹ ಅರಿವಿನಿಂದ ಮಾಡಿದ ಕರ್ಮ ಸ್ವಚ್ಛವಾಗಿರುತ್ತದೆ. ಇದು ಕರ್ಮದ ಕೊಳೆ ಅರಿವಿನ ಬೆಂಕಿಯಿಂದ ಸ್ವಚ್ಛವಾಗುವಿಕೆ. ಇಂತಹ ನಡೆ ಉಳ್ಳವನು ಪಂಡಿತ ಎನಿಸುತ್ತಾನೆ. ಇಂತಹವರನ್ನು ಜ್ಞಾನಿಗಳು ‘ಜ್ಞಾನಿಗಳೆಂದು’ ಗುರುತಿಸುತ್ತಾರೆ. ಮನುಷ್ಯ ಏನನ್ನು ಹೇಳುತ್ತಾನೋ ಅದು ಮುಖ್ಯವಲ್ಲ, ಏನನ್ನು ರೂಢಿಸಿಕೊಳ್ಳುತ್ತಾನೋ ಅದು ಮುಖ್ಯ. ಮನಸ್ಸಿನ ತುಂಬಾ ಆಸೆಗಳನ್ನು ತುಂಬಿಕೊಂಡು ಯಾವುದ್ಯಾವುದೋ ಆಸೆಯ ಬೆನ್ನುಹತ್ತಿ ಸೋಗು ಹಾಕಿಕೊಂಡು ಬದುಕುವವನು ಎಂದೂ ಎತ್ತರಕ್ಕೇರಲಾರ.     

ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ[S]ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋSಪಿ ನೈವ ಕಿಂಚಿತ್ ಕರೋತಿ ಸಃ ॥೨೦॥

ತ್ಯಕ್ತ್ವಾ ಕರ್ಮ ಫಲ ಅಸಂಗಮ್ ನಿತ್ಯ ತೃಪ್ತಃ [ಅ]ನಿರಾಶ್ರಯಃ
ಕರ್ಮಣಿ ಅಭಿಪ್ರವೃತ್ತಃ ಅಪಿ ನ ಏವ ಕಿಂಚಿತ್ ಕರೋತಿ ಸಃ -- ಕರ್ಮಫಲದಲ್ಲಿ ನೇಹವನ್ನು ತೊರೆದು, ತಾನು ಎಂದೂ ಇತರ ಬಯಕೆ ಇಲ್ಲದ, ಯಾರಿಗೂ ತಲೆಬಾಗದ ಭಗವಂತನ ಪಡಿಯಚ್ಚು ಎಂದು ತಿಳಿದವನು[ಭಗವಂತನ ಆಸರೆಯಲ್ಲಿದ್ದು ಸದಾ ನೆಮ್ಮದಿಯಿಂದಿರುವವನು] ಕರ್ಮದಲ್ಲಿ ತೊಡಗಿದರೂ ವಾಸ್ತವವಾಗಿ ಏನನ್ನೂ ಮಾಡುವುದಿಲ್ಲ.

ಕೆಲವರಿಗೆ ಅದು ಬೇಕು, ಇದು ಬೇಕು ಎನ್ನುವ ಆಸೆ ಇರುವುದಿಲ್ಲ. ಆದರೆ ಬಂದಾಗ ಖುಷಿಯಾಗುತ್ತದೆ. ಕರ್ಮ ಫಲದಲ್ಲಿ ಅತಿಯಾದ ಸ್ನೇಹ ಒಳ್ಳೆಯದಲ್ಲ. ಭಗವಂತ ಪ್ರೇರಣೆ ಮಾಡಿದ ಬಂತು. ಅದನ್ನು ಸದ್ವಿನಿಯೋಗ ಮಾಡುವುದು ಹೇಗೆ ಎನ್ನುವುದನ್ನು ಯೋಚಿಸು; ಉಬ್ಬಬೇಡ. ಬರಬೇಕು ಎಂದು ನಿರೀಕ್ಷಿಸಬೇಡ, ನಿರೀಕ್ಷಿಸದೇ ಬಂದಾಗ ಹಾರಾಡಬೇಡ. ಫಲದ ಬಗ್ಗೆ ಅತಿಯಾದ ಮಮತೆ ಒಳ್ಳೆಯದಲ್ಲ. ಇದೊಂದೇ ಮನುಷ್ಯ ಹಾಯಾಗಿ ನೆಮ್ಮದಿಯಿಂದ ಬದುಕಲು ಇರುವ ವಿಧಾನ. ಇದು ಇಲ್ಲದಿದ್ದರೆ ಹತಾಶೆ (Disappointment) ಕಟ್ಟಿಟ್ಟ ಬುತ್ತಿ!
ಮನುಷ್ಯ ಹೀಗಾಗಬೇಕು-ಹಾಗಾಗಬೇಕು ಎಂದು ಕನಸುಗಳ ಸರಮಾಲೆಯನ್ನು ಕಟ್ಟುತ್ತಾ ಹೋಗುತ್ತಾನೆ. ಬಯಸಿದ್ದರಲ್ಲಿ ಎಲ್ಲವೂ ಕೈಗೂಡುವುದಿಲ್ಲ. ಆಗ ಹತಾಶೆ, ದುಗುಡ, ಉದ್ವೇಗ(Tension). ಅದರಿಂದ ಮಾನಸಿಕ ವ್ಯಾಕುಲತೆ (Depression). ಇನ್ನು ಅಕಾಲದಲ್ಲಿ ಸಂಪತ್ತು ಬಂದಾಗ ಹಾರಾಟ-ಅದರಿಂದ ಜೀವನ ನಾಶ! ಈ ಕಾರಣದಿಂದ ಬಂತು ಎಂದಾಗಲೀ, ಬರಲಿಲ್ಲ ಎಂದಾಗಲೀ, ಬರಬೇಕು ಎಂದಾಗಲೀ ತಲೆ ಕೆಡಿಸಿಕೊಳ್ಳಬೇಡ. ಸ್ವಚ್ಛವಾದ ಯೋಚನೆಯಿಂದ ಕರ್ತವ್ಯದಲ್ಲಿ ತೊಡಗು. ಎಂತಹ ಪರಿಸ್ಥಿತಿಯಲ್ಲೂ ಸಂಯಮ ಇರಲಿ. ಈ ರೀತಿ ನಿನ್ನ ಮನಸ್ಸನ್ನು ತರಬೇತಿಗೊಳಿಸು ಎಂದಿದ್ದಾನೆ ಕೃಷ್ಣ. ಇದು ಕೃಷ್ಣನ ಮನಃಶಾಸ್ತ್ರ.
ಜೀವ ಭಗವಂತನ ಪ್ರತಿಬಿಂಬ. ಅದಕ್ಕೆ ಸ್ವಾತಂತ್ರ್ಯವಿಲ್ಲ. ಬಿಂಬ ಮಾಡಿಸಿದಂತೆ ಪ್ರತಿಬಿಂಬ. ಭಗವಂತ ನಿತ್ಯ ತೃಪ್ತ, ಆತನಿಗೆ ಅತೃಪ್ತಿ ಇಲ್ಲ. ಹಾಗೇ ನಾವೂ ಕೂಡಾ ಅತೃಪ್ತಿ ಇಲ್ಲದೆ ಬದುಕುವುದನ್ನು ಕಲಿತುಕೊಳ್ಳಬೇಕು. ಯಾವುದೋ ಒಂದು ಆಸೆ ಈಡೇರಿಸಿಕೊಳ್ಳುವುದಕ್ಕಾಗಿ ಎಷ್ಟೋ ಜನರ ಹಿಂದೆ ಬಾಲ ಅಲ್ಲಾಡಿಸಿಕೊಂಡು ಸ್ವಾರ್ಥ ಮನಸ್ಸಿನಿಂದ ಬದುಕುವುದು ಜೀವನವಲ್ಲ. ಯಾರ ಆಶ್ರಯವೂ ಇಲ್ಲದಿರುವ ಭಗವಂತನ ಪ್ರತಿಬಿಂಬವಾದ ನಿನಗೆ ಅತೃಪ್ತಿಯ ಬದುಕೇಕೆ? ಭಗವಂತನಂತೆ ನಿರಾಶ್ರಯನಾಗು. ನಿನಗೆ ಸದಾ ಭಗವಂತನ ಆಶ್ರಯವಿದೆ ಎನ್ನುವ ಸತ್ಯವನ್ನು ಅರಿತು ಬಾಳು. ಹೀಗೆ ಬದುಕುವ ಮಾನವ ಕರ್ಮದಲ್ಲಿ ತೊಡಗಿದ್ದರೂ ಕೂಡಾ ಏನನ್ನೂ ಮಾಡುವುದಿಲ್ಲ. ಏಕೆಂದರೆ ಭಗವಂತ ಎಲ್ಲವುದಕ್ಕಿಂತ ಮೇಲಿದ್ದಾನೆ ಎನ್ನುವ ಮರ್ಮವನ್ನು ಆತ ಅರಿತಿರುತ್ತಾನೆ. ಇದಕ್ಕೆ ಇನ್ನೂ ಹೆಚ್ಚಿನ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.

ನಿರಾಶೀರ್ಯತಚಿತ್ತಾತ್ಮಾತ್ಯಕ್ತಸರ್ವಪರಿಗ್ರಹಃ ।
ಶಾರೀರಂ ಕೇವಲಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್ ॥೨೧॥

ನಿರಾಶೀಃ ಯತ ಚಿತ್ತ ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ |
ಶಾರೀರಮ್ ಕೇವಲಮ್ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ -- ಮನಸ್ಸು-ಚಿತ್ತಗಳನ್ನು ಹದ್ದಿನಲ್ಲಿರಿಸಿದಾಗ ಹಂಬಲ ದೂರವಾಗುತ್ತದೆ. ನಾನು-ನನ್ನದು ಎಂಬ ಭಾವ ಮರೆಯಾಗುತ್ತದೆ. ದೇಹ ಪೋಷಣೆಗಷ್ಟೇ ಕರ್ಮ ಮಾಡಿದರೂ ದೋಷ ತಟ್ಟುವುದಿಲ್ಲ.

ನಿತ್ಯತೃಪ್ತರಾಗಿರಬೇಕು ಅನ್ನುವ ಆಸೆ ಇದೆ ಆದರೆ ಅದನ್ನು ರೂಢಿಸಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಇಲ್ಲಿ ಕೃಷ್ಣ ಉತ್ತರಿಸುತ್ತಾನೆ. ಲೌಕಿಕ ಆಸೆ ಇದ್ದಾಗ ಅತೃಪ್ತಿ ತಪ್ಪಿದ್ದಲ್ಲ. ಇಲ್ಲದ್ದನ್ನು ಬಯಸಿ ಎಂದೂ ಸುಖ ಸಿಗುವುದಿಲ್ಲ. ತೃಪ್ತಿ ಇರಬೇಕಾದರೆ ಮೊದಲು ಬೇಕು ಬೇಡಗಳ ಪಟ್ಟಿಯನ್ನು ಕಡಿಮೆ ಮಾಡಬೇಕು. ಮೊದಲು 'ಯತಚಿತ್ತನಾಗು' ಅದರಿಂದ ‘ನಿರಾಶಿಯಾಗು’ (be content with whatever you have ) ಎನ್ನುತ್ತಾನೆ ಕೃಷ್ಣ. ಮೊದಲು ನಾವು ನಮ್ಮ ಚಿತ್ತವನ್ನು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಚಿತ್ತ ಎಂದರೆ ನಮ್ಮ ಹಿಂದಿನ ನೆನಪುಗಳು(Memory). ಹಿಂದೆ ಮೂಡಿದ ಆಸೆಗಳ ನೆನಪಿನಕೋಶ-ಚಿತ್ತ. ಚಿತ್ತದಲ್ಲಿ ಆಸೆ ನಿರಾಸೆಗಳ ಕಂತೆ ತುಂಬಿರುತ್ತದೆ. ಮೊದಲು ಹಿಂದಿನ ಆಸೆಗಳು ಮರುಕಳಿಸದಂತೆ ನೋಡಿಕೋ. ಭೂತಕಾಲವನ್ನು ಮತ್ತೆ ಕೆದುಕಬೇಡ. ಅದನ್ನು ಪೂರ್ತಿ ಬಿಟ್ಟುಬಿಡು ಹಾಗೂ ಮನಸ್ಸು ವರ್ತಮಾನ ಕಾಲದಲ್ಲಿ ಬೇಕು ಬೇಡಗಳೆಡೆಗೆ ಹರಿಯದಂತೆ ನಿಯಂತ್ರಣ ಮಾಡು. ಈ ರೀತಿ ನಾವು ರೂಢಿ ಮಾಡಿಕೊಂಡರೆ ಇದರಿಂದ ತೃಪ್ತರಾಗಿರಲು ಸಾಧ್ಯ.  
ಹೀಗೆ ತೃಪ್ತಿಯನ್ನು ಸಾಧಿಸಿದ ನಂತರ ಅದರ ಜೊತೆಗೆ ‘ಆತ್ಮಾತ್ಯಕ್ತ ಸರ್ವ ಪರಿಗ್ರಹಃ’. ಇಲ್ಲಿ ಪರಿಗ್ರಹ ಎಂದರೆ ಸಂಸಾರ, ಕುಟುಂಬ, ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗುವುದಲ್ಲ. ಎಲ್ಲವುದರ ಜೊತೆಗೆ ಇದ್ದೂ ಅದರ ಮೇಲಿನ ಅತೀವ ಮೋಹ(Over attachment)ವನ್ನು ಬಿಟ್ಟುಬಿಡುವುದು. ಅಭಿಮಾನ ತ್ಯಾಗ (Detached attachment)ಮಾಡುವುದು. ಎಲ್ಲವೂ ಇರಲಿ ಆದರೆ ಅದನ್ನೇ ಹಚ್ಚಿಕೊಂಡು ಅದರಲ್ಲೇ ಮುಳುಗಬೇಡ. ಅದರೊಂದಿಗೆ ಬದುಕು- ಆದರೆ ಅಂಟಿಸಿಕೊಳ್ಳಬೇಡ. ತಾವರೆಯ ಎಲೆ ಹೇಗೆ ನೀರಿನಲ್ಲೇ ಇದ್ದು ನೀರನ್ನು ಅಂಟಿಸಿಕೊಳ್ಳುವುದಿಲ್ಲವೋ ಹಾಗೆ. ಹೀಗೆ ಇದ್ದಾಗ ನಾವು ಎಲ್ಲಾ ಮಾಡಿದರೂ ಏನೂ ಮಾಡುವುದಿಲ್ಲ. ಏಕೆಂದರೆ ಅರಿವಿನಿಂದ ಮಾಡಿದಾಗ ಕರ್ಮದ ಲೇಪವಿಲ್ಲ. ನಾವು ಅಂಟಿಸಿಕೊಳ್ಳದೇ ಬದುಕಲು ಕಲಿತರೆ ಕರ್ಮ ಕೂಡಾ ನಮಗೆ ಅಂಟುವುದಿಲ್ಲ. ಶರೀರ ನಿರ್ವಹಣೆಗೆ ಬೇಕಾದ ಕರ್ಮವನ್ನು ಮಾನಸಿಕವಾಗಿ ಅಂಟಿಸಿಕೊಳ್ಳದೇ, ಬಡಾಯಿ ಇಲ್ಲದೇ ಕರ್ಮ ನಿರ್ವಹಿಸು. ಆಗ ಕರ್ಮದ ಕೊಳೆ ನಿನಗಂಟುವುದಿಲ್ಲ ಎನ್ನುತ್ತಾನೆ ಕೃಷ್ಣ.     

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ।
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾSಪಿ ನ ನಿಬದ್ಧ್ಯತೇ ॥೨೨॥

ಯದೃಚ್ಛಾ ಲಾಭ ಸಂತುಷ್ಟಃ ದ್ವಂದ್ವ ಅತೀತಃ ವಿಮತ್ಸರಃ |
ಸಮಃ ಸಿದ್ಧೌ ಅಸಿದ್ಧೌ ಚ ಕೃತ್ವಾ ಅಪಿ ನ ನಿಬಧ್ಯತೇ -- ತಾನಾಗಿಯೇ ಸಿಕ್ಕಿದ್ದುದರಲ್ಲಿ ಸಂತಸಪಡುವವನು, ಬದುಕಿನ ಇಬ್ಬಂದಿತನವನ್ನು ಮೀರಿನಿಂತವನು, ಹೆರವರ ಏಳಿಗೆಗೆ ಕಿಚ್ಚುಪಡದವನು, ಗಳಿಕೆಯನ್ನೂ ಕಲಿಕೆಯನ್ನೂ ಒಂದೇ ಬಗೆಯಿಂದ ಕಾಣುವವನು ಕರ್ಮ ಮಾಡಿದರೂ ಅದರ ಸೆರೆಗೆ ಸಿಕ್ಕುವುದಿಲ್ಲ.

ನಮ್ಮ ಮನಸ್ಸು ನಮ್ಮ ಹಿಡಿತಕ್ಕೆ ಬಂದಾಗ ಕಾಣುವ ಮುಖ್ಯ ಲಕ್ಷಣದ ಬಗ್ಗೆ ಇಲ್ಲಿ ವಿವರಣೆ ಇದೆ. ತೃಪ್ತಿಯನ್ನು ಸಾಧಿಸಿದವನಿಗೆ ಏನಾದರೂ ಸಿಕ್ಕಿದರೆ ಅದರಲ್ಲೇ ಸಂತೋಷವಾಗಿರುತ್ತಾನೆ. ಸಿಕ್ಕಿದ್ದು ಸಾಲದೆಂದಾಗಲೀ, ಇನ್ನೇನೋ ಸಿಗಲಿ ಎಂದಾಗಲೀ ಆತನ ಮನಸ್ಸು ಬಯಸುವುದಿಲ್ಲ. ಏಕೆಂದರೆ ನಮಗೆ ಏನೇ ಸಿಕ್ಕಿದರೂ ಅದು ಭಗವಂತನ ಇಚ್ಛೆಯಿಂದ ಸಿಕ್ಕಿರುವುದು. ಉದಾಹರಣೆಗೆ ಉದ್ಯೋಗ. ಪ್ರತಿಭೆ ಇದ್ದವರಿಗೆಲ್ಲಾ ಉದ್ಯೋಗ ಸಿಗುವುದಿಲ್ಲ. ಉದ್ಯೋಗ ಸಿಗುವುದು, ಅದರಿಂದ ಸಂಬಳ ಸಿಗುವುದು- ಎಲ್ಲವೂ ಭಗವಂತನ ಇಚ್ಛೆಯಂತೆ. ಆದ್ದರಿಂದ ಎಲ್ಲವೂ ಭಗವಂತನ ಸಂಕಲ್ಪ ಎಂದು ತಿಳಿದು ನಿಸ್ವಾರ್ಥ ಕರ್ಮದಲ್ಲಿ ತೊಡಗಿದಾಗ ಮನಸ್ಸು ನಿರ್ಮಲವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಎಂದೂ ಹತ್ತಿರ ಸುಳಿಯುವುದಿಲ್ಲ. ಬಡತನವಾಗಲೀ, ಸಿರಿತನವಾಗಲೀ, ನಾವು ಹುಟ್ಟುವ ಮನೆಯಾಗಲೀ, ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಈಶ್ವರನ ಇಚ್ಛೆ. ಇದನ್ನು ತಿಳಿದು ಬದುಕುವುದು ಯತಚಿತ್ತಾತ್ಮನ ಗುರುತು.
ಇನ್ನು ಎರಡನೇ ಲಕ್ಷಣ 'ದ್ವಂದ್ವಾತೀತ ಜೀವನ'. ನಮ್ಮ ಜೀವನ ಎಂದರೆ ದ್ವಂದ್ವ. ಹಗಲು-ರಾತ್ರಿ, ಲಾಭ-ನಷ್ಟ, ಸೋಲು-ಗೆಲುವು, ಹುಟ್ಟು-ಸಾವು ಹೀಗೆ ಎಲ್ಲವೂ ದ್ವಂದ್ವ. ನಾವು ಈ ದ್ವಂದ್ವದ ನಡುವೆಯೇ ಬದುಕಬೇಕು. ಹಗಲು-ರಾತ್ರಿಗೆ ನಾವು ಹೇಗೆ ಹೊಂದಿಕೊಂಡು ಬದುಕುತ್ತೇವೆಯೋ ಹಾಗೇ 'ಇತರ ದ್ವಂದ್ವದ ಆಘಾತಕ್ಕೆ ಒಳಗಾಗದೇ ಬದುಕಲು ಕಲಿ' ಎನ್ನುತ್ತಾನೆ ಕೃಷ್ಣ. ಸಿಗದಿದ್ದಾಗ ದುಃಖವಿಲ್ಲ, ಸಿಕ್ಕಾಗ ಹಾರಾಟವಿಲ್ಲ. ಎರಡೂ ಸ್ಥಿತಿಯಲ್ಲಿ ಏಕರೂಪವಾದ ಮನಃಸ್ಥಿತಿಯನ್ನು ಗಳಿಸುವುದು ದ್ವಂದ್ವಾತೀತ ಜೀವನ.
ದ್ವಂದ್ವಾತೀತನಾಗಿ ಬದುಕುವಾಗ ಒಂದು ಸಮಸ್ಯೆ ಎದುರಾಗುತ್ತದೆ. ಇದ್ದದ್ದು ಸಾಕು ಎಂದು ಬದುಕುತ್ತಿರುವಾಗ ನಮ್ಮ ಜೊತೆಗಿನ ಇನ್ನೊಬ್ಬ ಹೆಚ್ಚು ಗಳಿಸಲಾರಂಭಿಸಿದರೆ, ಅದನ್ನು ನೋಡಿ ನಮಗೆ ಕಿಚ್ಚು ಹುಟ್ಟಿಕೊಳ್ಳುತ್ತದೆ. ನಮ್ಮ ಕೆಳಗಿನ ಮಟ್ಟದವರು, ನಮ್ಮ ಪಕ್ಕದ ಮನೆಯವರು ಯಾವುದೋ ಕಾರಣಕ್ಕೆ ಶ್ರೀಮಂತರಾದರೆ ನಮಗೆ ಸಂಕಟ! ಇಲ್ಲಿ ಕೃಷ್ಣ ಹೇಳುತ್ತಾನೆ: "ಇನ್ನೊಬ್ಬರನ್ನು ಕಂಡು ಎಂದೂ ಕಿಚ್ಚು ಪಡಬೇಡ" ಎಂದು. ಯಾರ್‍ಯಾರಿಗೆ ಎಷ್ಟೆಷ್ಟು ಸಿಗಬೇಕೋ ಅಷ್ಟಷ್ಟೇ ಸಿಗುತ್ತದೆ. ನಾವು ಎಷ್ಟು ಕೌಶಲ್ಯವಂತ(expertise)ರಾದರೂ ಕೂಡಾ ಭಗವಂತ ಅನುಗ್ರಹಿಸದೇ ಇದ್ದರೆ ನಾವು ಮೇಲಕ್ಕೇಳಲು ಸಾಧ್ಯವಿಲ್ಲ. ಈ ಎಚ್ಚರವೇ "ಯದೃಚ್ಛಾ ಲಾಭ ಸಂತುಷ್ಟಃ"
ಇನ್ನು ಸಿದ್ಧಿ ಅಸಿದ್ಧಿಗಳು. ಉದಾಹರಣೆಗೆ ಧ್ಯಾನ(Meditation): ಧ್ಯಾನದಲ್ಲಿ ಏಕಾಗ್ರತೆ ಪಡೆಯಲು ಆಗದೇ ಇನ್ನೇನೋ ಕಾಣಿಸಿದರೆ ಏನು ಕಾಣಿಸಿತೋ ಅದರಲ್ಲೇ ಭಗವಂತನನ್ನು ಕಾಣು. ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡ. ಏಕಾಗ್ರತೆ ಸಾಧ್ಯವಾದರೆ ಭ್ರಮೆಗೊಳಗಾಗಬೇಡ. ಏಕೆಂದರೆ ಸಿದ್ಧಿ-ಅಸಿದ್ಧಿಗಳು ನಮ್ಮ ಕೈಯಲ್ಲಿಲ್ಲ. ಅಸಿದ್ಧಿಯೂ ಸಿದ್ಧಿಯ ಮೆಟ್ಟಿಲು. ಇಂತಹ ಮಾನಸಿಕ ಸಮತೋಲನ ಜೀವನದಲ್ಲಿ ಅತಿಮುಖ್ಯ. ಇಂತಹ ಸ್ಥಿತಿಯಲ್ಲಿ ಕರ್ಮ ಎಂದೂ ಬಂಧನವಾಗುವುದಿಲ್ಲ.   

ಗತ ಸಂಗಸ್ಯ ಮುಕ್ತಸ್ಯ ಜ್ಞಾನಾವಸ್ಥಿತಚೇತಸಃ ।
ಯಜ್ಞಾಯಾSಚರತಃ ಕರ್ಮ ಸಮಗ್ರಂ ಪ್ರವಿಲೀಯತೇ ॥೨೩॥

ಗತ ಸಂಗಸ್ಯ ಮುಕ್ತಸ್ಯ ಜ್ಞಾನ ಅವಸ್ಥಿತ ಚೇತಸಃ |
ಯಜ್ಞಾಯ ಆಚರತಃ ಕರ್ಮ ಸಮಗ್ರಮ್ ಪ್ರವಿಲೀಯತೇ -ಫಲದ ನಂಟು ತೊರೆದು, ದೇಹಾಭಿಮಾನ ತೊರೆದು, ಭಗವಂತನ ಅರಿವಿನಲ್ಲೇ ಬಗೆನೆಟ್ಟು, ಪೂಜೆಯೆಂದು ಮಾಡುವವನ ಎಲ್ಲಾ ಕರ್ಮ ಲಯಗೊಳ್ಳುತ್ತದೆ.

ಈ ಶ್ಲೋಕದಲ್ಲಿ ಮೇಲೆ ಹೇಳಿದ ಎಲ್ಲಾ ವಿಷಯವನ್ನು ಉಪಸಂಹಾರ ರೂಪದಲ್ಲಿ ಭಗವಂತ ನಮ್ಮ ಮುಂದಿಟ್ಟಿದ್ದಾನೆ.
ಫಲದ ಬಗ್ಗೆ ಅತಿಯಾದ ಆಸೆ ಇಟ್ಟುಕೊಳ್ಳಬೇಡ; ಅತಿಯಾದ ನಿರೀಕ್ಷೆ ಬೇಡ; ಕರ್ತವ್ಯನಿಷ್ಠೆ ಇರಲಿ; ದೇಹಾಭಿಮಾನ, ಪರಿವಾರದ ಅಭಿಮಾನವನ್ನು ತೊರೆದು ನಿರ್ಲಿಪ್ತನಾಗಿ ಬದುಕಲು ಕಲಿ; ಮನಸ್ಸನ್ನು ಜ್ಞಾನಸ್ವರೂಪನಾದ ಭಗವಂತ(ಚೇತಸ್ಸು)ನಲ್ಲಿ ನೆಲೆಗೊಳಿಸು. ಹೀಗೆ ಬದುಕಿದಾಗ ನಾವು ಮಾಡುವ ಕರ್ಮವೆಲ್ಲವೂ ಯಜ್ಞವಾಗಿ ಯಜ್ಞ ನಾಮಕ ಭಗವಂತನನ್ನು ಸೇರುತ್ತದೆ ಹಾಗೂ ಜ್ಞಾನದ ಬೆಂಕಿಯಲ್ಲಿ ಕರ್ಮದ ಕೊಳೆ ಸುಟ್ಟುಹೋಗುತ್ತದೆ.

ಬ್ರಹ್ಮಾರ್ಪಣಂ ಬ್ರಹ್ಮ ಹವಿರ್ಬ್ರಹ್ಮಾಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ॥೨೪॥

ಬ್ರಹ್ಮ ಅರ್ಪಣಮ್ ಬ್ರಹ್ಮ ಹವಿಃ ಬ್ರಹ್ಮ ಅಗ್ನೌ ಬ್ರಹ್ಮಣಾ ಹುತಮ್ ।
ಬ್ರಹ್ಮ ಏವ ತೇನ ಗಂತವ್ಯಮ್ ಬ್ರಹ್ಮ ಕರ್ಮ ಸಮಾಧಿನಾ-ಅರ್ಪಣವೂ ಭಗವಂತ [ಭಗವಂತನಲ್ಲಿ ಅರ್ಪಣ]. ಅರ್ಪಿಸುವ ಹವಿಸ್ಸೂ ಭಗವಂತ[ಭಗವಂತನಾದ ಹವಿಸ್ಸು]. ಬೆಂಕಿಯ ರೂಪದಲ್ಲಿರುವ ಭಗವಂತನಲ್ಲಿ [ಭಗವದಧೀನವಾದ ಬೆಂಕಿಯಲ್ಲಿ] ಭಗವಂತನಿಂದಲೇ ಹೋಮಮಾಡಿತು. ಬಗೆಯ ಏಕಾಗ್ರತೆಯ ಜತೆಗೆ ಕರ್ಮದ ವ್ಯಗ್ರತೆಯೂ ಭಗವಂತನೇ [ಭಗವಂತನ ಅಧೀನವಾದದ್ದು]

ಅಭಿಮಾನ ತ್ಯಾಗದಿಂದ ಜ್ಞಾನದ ಸ್ಥಿತಿಯಲ್ಲಿ ಕರ್ಮ ಮಾಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಉತ್ತರ "ಬ್ರಹ್ಮಾರ್ಪಣಂ ಬ್ರಹ್ಮಹವಿಃ" . ಇಲ್ಲಿ ಅರ್ಪಣ ಅನ್ನುವುದನ್ನು ಈ ರೀತಿ ಅರ್ಥ ಮಾಡಿಕೊಳ್ಳಬಹುದು. ನಾವು ಒಂದು ಹವಿಸ್ಸನ್ನು ಅಗ್ನಿಯಲ್ಲಿ ಭಗವಂತನಿಗೆ ಅರ್ಪಣೆ ಮಾಡುತ್ತೇವೆ- ಇದು ಅರ್ಪಣೆ. ಒಬ್ಬ ಹಸಿದವನಿಗೆ ಅನ್ನ ನೀಡುತ್ತೇವೆ-ಇದು ಅರ್ಪಣೆ. ಒಬ್ಬ ಯೋಗ್ಯ ವರನಿಗೆ ಕನ್ಯಾದಾನ ಮಾಡುತ್ತೇವೆ-ಇದು ಅರ್ಪಣೆ. ಒಬ್ಬ ಹಣದ ಸಮಸ್ಯೆಯಲ್ಲಿದ್ದಾಗ ಆತನಿಗೆ ಸಹಾಯ ಮಾಡುತ್ತೇವೆ-ಇದು ಅರ್ಪಣೆ. ಇಲ್ಲಿ ಕೊಡುವವನೂ ಆ ಭಗವಂತ, ತೆಗೆದುಕೊಳ್ಳುವವನ ಒಳಗಿದ್ದು ಸ್ವೀಕರಿಸುವವನೂ ಅವನೇ. ಎಲ್ಲವೂ ಭಗವಂತನ ಇಚ್ಛೆಯಂತೆ ನಡೆಯುತ್ತದೆ. ಹವಿಸ್ಸು ಅಂದರೆ ಕೊಡುವ ವಸ್ತು. ಅರ್ಪಣ-ಕೊಡುವ ಕ್ರಿಯೆ. ಯಾವ ವಸ್ತು ಕೂಡಾ ಹವಿಸ್ಸಾಗಬಹುದು. ದಾನದ ದ್ರವ್ಯ-ಹವಿಸ್ಸು, ಯಜ್ಞದಲ್ಲಿ ಅಗ್ನಿ ಮುಖೇನ ಅರ್ಪಿಸುವ ದ್ರವ್ಯ-ಹವಿಸ್ಸು. ನಾವು ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬಂದಿಲ್ಲ, ಎಲ್ಲವನ್ನೂ ಈ ಪ್ರಕೃತಿಯಿಂದ ಪಡೆದಿರುವುದು ಅಂದಮೇಲೆ, ನಾವು ಕೊಡುವ ಹವಿಸ್ಸು ಕೂಡಾ ಆ ಭಗವಂತನ ಅಧೀನ. ಇಲ್ಲಿ 'ನನ್ನದು' ಎನ್ನುವುದು ಹಾಸ್ಯಾಸ್ಪದ.
ಅಗ್ನಿ ಮುಖೇನ ನಾವು ದ್ರವ್ಯವನ್ನು ಅರ್ಪಿಸುತ್ತೇವೆ. ಇಲ್ಲಿ ಅಗ್ನಿ ಎಂದರೆ ಬರಿಯ ಜಡವಾದ ಬೆಂಕಿ ಅಲ್ಲ. ಸಂಸ್ಕೃತದಲ್ಲಿ ಅಗ್ನಿ ಎಂದರೆ ಅಗ್ನಿಯ ಅಭಿಮಾನಿ ದೇವತೆ, ಅದು ಚೇತನ. ಈ ಕಾರಣಕ್ಕಾಗಿ ಅಗ್ನಿಯನ್ನು ಸಾಕ್ಷಿಯಾಗಿ ಬಳಸುತ್ತಾರೆ (ಉದಾ: ಅಗ್ನಿಸಾಕ್ಷಿಯಾಗಿ ಮದುವೆಯಾಗುವುದು). ಜಡವನ್ನು ಎಂದೂ ಸಾಕ್ಷಿಯಾಗಿ ಬಳಸಲು ಬರುವುದಿಲ್ಲ. ಈ ಅಗ್ನಿದೇವತೆಯ ಒಳಗೆ ತಾರಕ ಶಕ್ತಿಯಾಗಿ ಆ ಭಗವಂತನಿದ್ದಾನೆ. ಇಲ್ಲಿ ಕೊಡುವುದು, ಕೊಡತಕ್ಕದ್ದು, ಕೊಡುವ ಕ್ರಿಯೆ, ಕೊಟ್ಟ ಸ್ಥಳ-ಎಲ್ಲವೂ ಭಗವಂತನ ಅಧೀನ. ಎಲ್ಲಾ ಕ್ರಿಯೆಯಲ್ಲಿ ಭಗವಂತನ ಸನ್ನಿಧಾನವಿದೆ. ಕೊಡತಕ್ಕ ವಸ್ತುವಿನಲ್ಲಿ ಆತನ ಸನ್ನಿಧಾನವಿರುವುದರಿಂದ ಅದು ಉಪಯುಕ್ತವಾಗಿರುತ್ತದೆ. ಜ್ಞಾನರೂಪನಾದ ಭಗವಂತ ಅಗ್ನಿಯಲ್ಲಿ ಸನ್ನಿಹಿತನಾಗಿ ಭಕ್ತಿ ರೂಪದ ಆಹುತಿಯನ್ನು ಸ್ವೀಕರಿಸುತ್ತಾನೆ. ಈ ಅನುಸಂಧಾನದಿಂದ ನಮ್ಮ ಕ್ರಿಯೆ ನಡೆದರೆ, ನಾವು ಭಗವಂತನ ಆರಾಧನೆ ಮಾಡಿದಾಗ "ಬ್ರಹ್ಮೈವ ತೇನ ಗಂತವ್ಯಂ"-ಹೋಗಿ ಸೇರುವುದೂ ಭಗವಂತನನ್ನೇ. ಏಕೆಂದರೆ "ಬ್ರಹ್ಮಕರ್ಮಸಮಾಧಿನಾ" -ಎಲ್ಲವೂ ಸರ್ವಸಮರ್ಥನಾದ ಭಗವಂತನ ಅಧೀನ.
 ಇಲ್ಲಿ ಬ್ರಹ್ಮಾರ್ಪಣ ಎಂದರೆ ಎಲ್ಲಾ ಕ್ರಿಯೆಯೂ ಭಗವಂತನಿಗೆ ಎಂದರ್ಥ. ಪ್ರಪಂಚದಲ್ಲಿರುವ ಎಲ್ಲಾ ವಸ್ತುವನ್ನು ಸೃಷ್ಟಿಸಿದ್ದು ಆ ಭಗವಂತ. ಪ್ರಕೃತಿಯಲ್ಲಿ ಸೃಷ್ಟಿಯಾಗಿರುವುದನ್ನು ನಾವು ಉಪಯೋಗಿಸುತ್ತೇವೆ ಅಷ್ಟೇ. ಅಗ್ನಿ ಭಗವಂತನ ಅಧೀನವಾಗಿ ಕಾರ್ಯ ನಿರ್ವಹಿಸುತ್ತಾನೆ. 'ನಾವು ಮಾಡುವ ಕ್ರಿಯೆ ಆ ಭಗವಂತನ ಪ್ರೇರಣೆ. ನಾವು ಮಾಡುವ ಎಲ್ಲಾ ಕರ್ಮವೂ ಬ್ರಹ್ಮಕರ್ಮ. ಅದು ಭಗವಂತನ ಪೂಜಾರೂಪವಾದ ಕರ್ಮ'- ಇದು ಕರ್ಮದ ಬಗ್ಗೆ ನಮಗಿರಬೇಕಾದ ಜ್ಞಾನ. ನಾವು ಮಾಡುವ ಕರ್ಮದಲ್ಲಿ ನಮ್ಮ ಸ್ವಾರ್ಥ ಇರಕೂಡದು. ಅದು ಭಗವಂತನ ಪೂಜಾ ರೂಪವಾಗಿರಬೇಕು. ಯಜ್ಞ ಎಂದರೆ ಅಗ್ನಿ ಮುಖೇನ ಮಾಡುವ ಕ್ರಿಯೆ ಮಾತ್ರ ಅಲ್ಲ. ನಮ್ಮ ಬದುಕನ್ನು ಭಗವನ್ಮಯ ಮಾಡಿಕೊಂಡಾಗ ನಮ್ಮ ಜೀವನದ ಎಲ್ಲಾ ನಡೆಯೂ ಯಜ್ಞವಾಗಿಬಿಡುತ್ತದೆ. ನಮ್ಮ ಬದುಕು ಭಗವಂತನ ಚಿಂತನೆಗೆ ಮೀಸಲಾದಾಗ ನಮ್ಮ ಬದುಕೇ ಒಂದು ಮಹಾಯಜ್ಞ. ಭಗವಂತನ ಚಿಂತನೆ ಇಲ್ಲದೆ ಸ್ವಾರ್ಥದಿಂದ ಮಾಡುವ ಅಗ್ನಿಮುಖೇನವಾದ ಯಜ್ಞ ಕೇವಲ ವ್ಯಾಪಾರ. ಪೌರೋಹಿತ್ಯ ಕೂಡಾ ಹೀಗೆ. ತಿಳಿದು ಮಾಡಿದಾಗ ಮಾತ್ರ ಅದು ನಿಜವಾದ ಪೌರೋಹಿತ್ಯ, ಇಲ್ಲದಿದ್ದರೆ ಅದು ಕೇವಲ ದುಡ್ಡಿಗಾಗಿ ಮಾಡುವ ಧಂದೆ!

ಈ ತನಕ ಕೃಷ್ಣ ಹೇಳಿದ್ದು ಕರ್ಮದ ಪ್ರಭೇದದ ಬಗ್ಗೆ. ದೇವರ ಪೂಜಾರೂಪವಾಗಿ ಮಾಡುವ ಪ್ರತಿಯೊಂದು ಕಾರ್ಯ ಕೂಡಾ ಯಜ್ಞ ಎನ್ನುವ ವಿಚಾರ ವಿಶ್ಲೇಷಣೆ ಮಾಡಿದ. ಮುಂದೆ ಯಜ್ಞದ ಬಗ್ಗೆ ವ್ಯಾಪಕವಾದ ಅರ್ಥವನ್ನು ಕೃಷ್ಣ ವಿವರಿಸುತ್ತಾನೆ. ಹಿಂದೆ ಹೇಳಿದಂತೆ ಅಗ್ನಿಮುಖದಲ್ಲಿ ಮಾಡುವ ಪೂಜೆ ಮಾತ್ರ ಯಜ್ಞವಲ್ಲ. ಕೊಡುವಿಕೆ, ಪೂಜೆಯಂತಹ ಒಳ್ಳೆಯ ಕಾರ್ಯಕ್ಕೆ ಒಂದು ಕಡೆ ಸೇರುವಿಕೆ(ಸಂಗತೀಕರಣ), ಜ್ಞಾನದಾನ, ಅನ್ನದಾನ, ನಮ್ಮಲ್ಲಿ ಹೆಚ್ಚಿಗೆ ಇರುವುದನ್ನು ಇಲ್ಲದವರಿಗೆ ಹಂಚಿ ಬದುಕುವುದು, ಎಲ್ಲವೂ ಒಂದು ಯಜ್ಞವೇ. ಮುಂದಿನ ಶ್ಲೋಕಗಳಲ್ಲಿ ಯಜ್ಞದ ವಿಶ್ವತೋಮುಖ ಚಿತ್ರವನ್ನು ಕೃಷ್ಣ ನಮಗೆ ನೀಡುತ್ತಾನೆ.
ಸಾಮಾನ್ಯವಾಗಿ ಯಜ್ಞದಲ್ಲಿ ಎರಡು ವಿಧ. ಒಂದು ಅಂತರಂಗ ಯಜ್ಞ ಇನ್ನೊಂದು ಬಾಹ್ಯಯಜ್ಞ. ಅಂತರಂಗದಲ್ಲಿ ಭಗವಂತನ ನಿರಂತರ ಪೂಜೆ(ದೇವಪೂಜಾ); ಚಿತ್ತ-ಮನಸ್ಸು ಭಗವಂತನ ಜೊತೆಗೆ ಸೇರುವುದು(ಸಂಗತೀಕರಣ) ಮತ್ತು ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳುವುದು-ಇದು ಪರಿಪೂರ್ಣವಾದ ಮಾನಸ ಯಜ್ಞ. ಇನ್ನೊಂದು ರೀತಿಯಲ್ಲಿ ಯಜ್ಞದಲ್ಲಿ ಎರಡು ಬಗೆ: ಜ್ಞಾನಪ್ರದವಾದ ಯಜ್ಞ ಹಾಗೂ ಕರ್ಮಪ್ರದವಾದ ಯಜ್ಞ. ಈ ಎಲ್ಲಾ ವಿವರಣೆಯನ್ನೂ ಮುಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ.

ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ ॥೨೫॥

ದೈವಮ್ ಏವ ಅಪರೇ ಯಜ್ಞಮ್ ಯೋಗಿನಃ ಪರ್ಯುಪಾಸತೇ |
ಬ್ರಹ್ಮ ಅಗ್ನೌ ಅಪರೇ ಯಜ್ಞಮ್ ಯಜ್ಞೇನ ಏವ ಉಪಜುಹ್ವತಿ-ಕೆಲವು ಸಾಧಕರು ಭಗವದುಪಾಸನೆಯೆಂಬ ಮಾನಸ ಯಜ್ಞವನ್ನು ಆಚರಿಸುತ್ತಾರೆ.[ಭಗವಂತನನ್ನೇ ಯಜ್ಞ ರೂಪನೆಂದು ಪೂಜಿಸುತ್ತಾರೆ.] ಕೆಲವರು ಬೆಂಕಿಯ ರೂಪದ ಭಗವಂತನಲ್ಲಿ ಹೋಮಿಸುವ ಮೂಲಕ ಬಾಹ್ಯ ಯಜ್ಞದಿಂದ ಯಜ್ಞ ನಾಮಕ ಭಗವಂತನನ್ನು ಪೂಜಿಸುತ್ತಾರೆ.[ಯಜ್ಞನಾಮಕ ಭಗವಂತನಿಂದಲೇ ಬಾಹ್ಯ ಯಜ್ಞವನ್ನು ಆಚರಿಸುತ್ತಾರೆ].

ಭಗವಂತನ ಉಪಾಸನೆಯ ಮಾರ್ಗದಲ್ಲಿ ಸಾಗುವ ಕೆಲವು ಯೋಗಿಗಳು(ಸಾಧಕರು) ದೈವವನ್ನೇ ಯಜ್ಞವಾಗಿ ಉಪಾಸನೆ ಮಾಡುತ್ತಾರೆ. ಅಂದರೆ ನಿರಂತರ ಅಂತರಂಗದಲ್ಲಿ ಭಗವಂತನ ಉಪಾಸನೆಯೇ ಅವರ ಯಜ್ಞ. ಇದಕ್ಕೆ ಯಾವ ಬಾಹ್ಯ ಪರಿಕರ ಬೇಡ. ಇದು ಧ್ಯಾನ ರೂಪ ಯಜ್ಞ. ಈ ರೀತಿ ಬಾಹ್ಯ ಪರಿಕರಗಳಿಲ್ಲದೇ ಮಾಡುವ ಯಜ್ಞ ಅತ್ಯಂತ ಶ್ರೇಷ್ಠ ಯಜ್ಞ. ಇದು ಸಾಮಾನ್ಯವಾಗಿ ಅತ್ಯಂತ ಎತ್ತರಕ್ಕೇರಿದ ಸಾಧಕರು ಮಾಡಬಲ್ಲ ಯಜ್ಞ. ಎಲ್ಲಾ ಬಾಹ್ಯ ಪರಿಕರಗಳನ್ನು ಬಿಟ್ಟು ಮಾನಸ ಪರಿಗ್ರಹದಿಂದ ಮಾಡತಕ್ಕ ಜ್ಞಾನಪ್ರಧಾನವಾದ ಯಜ್ಞವಿದು.
ಇನ್ನೊಂದು ಪ್ರಕಾರದ ಯಜ್ಞ ಅಗ್ನಿ ಮುಖದಲ್ಲಿ ಮಾಡತಕ್ಕ ಕರ್ಮ ಪ್ರಧಾನವಾದ ಯಜ್ಞ. ಇದನ್ನು ಸಾಮಾನ್ಯ ಮಾನವರು ಅನುಸರಿಸುತ್ತಾರೆ. ಭಗವಂತನ ಸನ್ನಿಧಾನವಿರುವ ಅಗ್ನಿಯ ಮುಖದಲ್ಲಿ ಭಗವಂತನಿಗೆ ಅರ್ಪಣೆ ಮಾಡುವ ಆರಾಧನೆ. ಇದು ಬಾಹ್ಯ ಯಜ್ಞ. ಇದು ಬಹಳ ಮುಖ್ಯವಾದದ್ದು. ವೇದದಲ್ಲಿ ಭಗವಂತನ ಆರಾಧನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಎನ್ನುತ್ತಾರೆ. ಅಗ್ನಿ ಎಂದೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶದಿಂದ ಅಪವಿತ್ರ ಕೂಡಾ ಪವಿತ್ರವಾಗುತ್ತದೆ. ನಮಗೆ ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎನ್ನುವ ಅಭಿಲಾಷೆ ಇದ್ದರೆ ಅದನ್ನು ಕೇವಲ ಅಗ್ನಿ ಮುಖೇನ ಮಾಡಬಹುದು. ನಮ್ಮ ಕಣ್ಣ ಮುಂದೆ ಇರುವ ಎಲ್ಲಾ ಪ್ರತೀಕಗಳಲ್ಲಿ ಅಗ್ನಿ ಅತ್ಯಂತ ಶ್ರೇಷ್ಠ ಎನ್ನುವುದು ವೇದ ಕಾಲದ ಋಷಿಗಳ ತೀರ್ಮಾನ. ಸುಡುವ ಅಗ್ನಿಯಲ್ಲಿ ಅಗ್ನಿದೇವ, ಅವನೊಳಗೆ ಪ್ರಾಣ, ಪ್ರಾಣನೊಳಗೆ ಭಗವಂತ. ಈ ಅನುಸಂಧಾನದಲ್ಲಿ ಯಜ್ಞ ನಾಮಕ ಭಗವಂತನನ್ನು, ಯಜ್ಞದಿಂದ, ಜ್ಞಾನ ಭಕ್ತಿ ವೈರಾಗ್ಯದಿಂದ ಕೂಡಿದ ಉತ್ಕೃಷ್ಟವಾದ ಆಹ್ವಾನದಿಂದ ಆರಾಧನೆ.

ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ ।
ಶಬ್ದಾದೀನ್ ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ ॥೨೬॥

ಶ್ರೋತ್ರಾ ಆದೀನಿ ಇಂದ್ರಿಯಾಣಿ ಅನ್ಯೇ ಸಂಯಮ ಅಗ್ನಿಷು ಜುಹ್ವತಿ |
ಶಬ್ದ ಆದೀನ್ ವಿಷಯಾನ್ ಅನ್ಯ ಇಂದ್ರಿಯ ಅಗ್ನಿಷು ಜುಹ್ವತಿ-ಕೆಲವರು ಕಿವಿ ಮೊದಲಾದ ಇಂದ್ರಿಯಗಳನ್ನು ಅಂಕೆಯ ಬೆಂಕಿಯಲ್ಲಿ ಹೋಮಿಸುತ್ತಾರೆ. ಕೆಲವರು ಶಬ್ದ ಮೊದಲಾದ ವಿಷಯಗಳನ್ನು ಇಂದ್ರಿಯಗಳ ಬೆಂಕಿಯಲ್ಲಿ ಹೋಮಿಸುತ್ತಾರೆ.

ಒಬ್ಬ ಸಾಧಕನಲ್ಲಿರಬೇಕಾದ ವಿಶಿಷ್ಟ ಸಾಧನೆ ಕೂಡಾ ಒಂದು ಯಜ್ಞ. ಇಂದ್ರಿಯವೆಂಬ ಹವಿಸ್ಸನ್ನು 'ನಿಗ್ರಹ' ಎನ್ನುವ ಬೆಂಕಿಯಲ್ಲಿ ಆಹುತಿಗೊಳಿಸುವುದು ಒಂದು ಯಜ್ಞ. ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟದ್ದನ್ನು ಆಡುವುದಿಲ್ಲ, ಕೆಟ್ಟದ್ದನ್ನು ನೋಡುವುದಿಲ್ಲ, ಎನ್ನುವ ದೃಢ ನಿಶ್ಚಯದಿಂದ, ಇಂದ್ರಿಯ ಸಂಯಮದಿಂದ ಇಂದ್ರಿಯ ಚಾಪಲ್ಯವನ್ನು ಹೋಮಿಸು. ಇದು ಇಂದ್ರಿಯ ಚಾಪಲ್ಯವನ್ನು ಗೆಲ್ಲುವ ಪ್ರಕ್ರಿಯೆ. ಸಂಯಮ ಎನ್ನುವ ಅಗ್ನಿಯಲ್ಲಿ ಇಂದ್ರಿಯ ಚಾಪಲವೆಂಬ ಹವಿಸ್ಸನ್ನು ಹೋಮಿಸಿ, ಭಗವಂತನನ್ನು ಆರಾಧಿಸುವುದು. ಭಗವಂತ ಪ್ರಸನ್ನನಾಗಲಿ, ಅದರ ಮೂಲಕ ನನ್ನನ್ನು ಸಾಧನೆಯ ದಾರಿಯಲ್ಲಿ ಮುನ್ನೆಡೆಸಲಿ ಎನ್ನುವ ಅನುಸಂಧಾನದಲ್ಲಿ ಮಾಡುವ ಯಜ್ಞವಿದು.
ಇನ್ನು ಒಳ್ಳೆಯ ಸಂಗತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುವುದೂ ಒಂದು ಯಜ್ಞ. ಕಿವಿ ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಗುಣಗಾನವೆಂಬ ಹವಿಸ್ಸನ್ನು ಹಾಕುವುದು, ಕಣ್ಣು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಪ್ರತೀಕ ಎನ್ನುವ ಹವಿಸ್ಸನ್ನು ಹಾಕುವುದು, ಮೂಗು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನಿಗೆ ಅರ್ಪಿತವಾದ ತುಳಸಿ, ಗಂಧ ರೂಪದ ಹವಿಸ್ಸನ್ನು ಹಾಕುವುದು. ಹೀಗೆ ಇಂದ್ರಿಯ ವಿಷಯಗಳನ್ನು ಸ್ವೀಕರಿಸುವುದೂ ಒಂದು ಯಜ್ಞವಾಗುತ್ತದೆ. ಇಂದ್ರಿಯ ನಿಗ್ರಹದಂತೆ ಇಂದ್ರಿಯ ಗ್ರಹಣ ಕೂಡಾ ಒಂದು ಯಜ್ಞ. ಭಗವಂತನ ಚಿಂತನೆಗೆ ಪೂರಕವಾದ ವಿಷಯವನ್ನು ಗ್ರಹಣ ಮಾಡು ಮತ್ತು ಅಲ್ಲದ ವಿಷಯವನ್ನು ತ್ಯಾಗ ಮಾಡು-ಇದು ಸಾಧನೆಯ ಹಾದಿಯಲ್ಲಿ ಪ್ರಮುಖ ಹೆಜ್ಜೆ.

ಸರ್ವಾಣೀಂದ್ರಿಯಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ ।
ಆತ್ಮಸಂಯಮಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ ॥೨೭॥

ಸರ್ವಾಣಿ ಇಂದ್ರಿಯ ಕರ್ಮಾಣಿ ಪ್ರಾಣಕರ್ಮಾಣಿ ಚ ಅಪರೇ ।
ಆತ್ಮ ಸಂಯಮ ಯೋಗ ಅಗ್ನೌ ಜುಹ್ವತಿ ಜ್ಞಾನದೀಪಿತೇ-ಕೆಲವರು ಎಲ್ಲಾ ಇಂದ್ರಿಯ ಕ್ರಿಯೆಗಳನ್ನೂ, ಪ್ರಾಣವಾಯುವಿನ ಕ್ರಿಯೆಗಳನ್ನೂ ತಿಳಿವಿನಿಂದ ತಿಳಿಗೊಂಡ ಆತ್ಮನಿಗ್ರಹದ ಸಾಧನೆಯೆಂಬ ಬೆಂಕಿಯಲ್ಲಿ ಹೋಮಿಸುತ್ತಾರೆ.

ನಮ್ಮ ದೇಹದಲ್ಲಿ ಜ್ಞಾನೇಂದ್ರಿಯ ಹಾಗೂ ಕರ್ಮೇಂದ್ರಿಯದಿಂದ ನಿರಂತರ ಕ್ರಿಯೆ ನಡೆಯುತ್ತಿರುತ್ತದೆ. ಇದಲ್ಲದೆ ಪ್ರಾಣಶಕ್ತಿಯಿಂದ ಆಗುವ ಕ್ರಿಯೆಗಳು ಅನೇಕ (ಉದಾ: ಉಸಿರಾಟ, ಬಲ, ಸಂತಾನಶಕ್ತಿ, ಸಂತೋಷ ಅಥವಾ ದುಃಖವಾದಾಗ ಕಣ್ಣೀರು ಇತ್ಯಾದಿ). ಮನೋನಿಗ್ರಹ ಎನ್ನುವ ಅಗ್ನಿಯಲ್ಲಿ ಈ ಜ್ಞಾನೇಂದ್ರಿಯ, ಕರ್ಮೇಂದ್ರಿಯ ಮತ್ತು ಪ್ರಾಣಶಕ್ತಿಯಿಂದ ಆಗುವ ಕ್ರಿಯೆಯನ್ನು ಹೋಮಿಸುವುದು(ಹಿಡಿತ) ಒಂದು ಯಜ್ಞ. ಇದು ಹಠಕ್ಕೋಸ್ಕರ ಅಲ್ಲ, ಯಜ್ಞ ರೂಪವಾಗಿ ಭಗವಂತನ ಪೂಜಾರೂಪವಾಗಿ. ಇದು ಭಗವಂತನ ಅರಿವಿನಿಂದ ಬೆಳಗುವ ಆತ್ಮ ಸಂಯಮ. ಭಗವಂತನ ಅರಿವಿಗೋಸ್ಕರ ಮಾಡಿದ ಆತ್ಮಸಂಯಮ; ಭಗವಂತನ ಅರಿವಿನೆಡೆಗೆ ಕೊಂಡೊಯ್ಯುವ ಜ್ಞಾನಪೂರ್ವಕ ಸಂಯಮ, ಆವೇಶವಲ್ಲ.

ಯಜ್ಞಗಳ ವೈವಿಧ್ಯವನ್ನು ಹೇಳುತ್ತಾ ಮುಂದುವರಿದು ಶ್ರೀಕೃಷ್ಣ ಯಜ್ಞದ ಒಂದು ಪಟ್ಟಿಯನ್ನು ನಮ್ಮ ಮುಂದಿಡುತ್ತಾನೆ:

ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾSಪರೇ ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ ॥೨೮॥

ದ್ರವ್ಯ ಯಜ್ಞಾಃ ತಪಃ ಯಜ್ಞಾಃ ಯೋಗ ಯಜ್ಞಾಃ ತಥಾ ಅಪರೇ |
ಸ್ವಾಧ್ಯಾಯ ಜ್ಞಾನ ಯಜ್ಞಾಃ ಚ ಯತಯಃ ಸಂಶಿತ ವ್ರತಾಃ -ಕೆಲವರು ಸೊತ್ತುಗಳನ್ನು ಹೋಮಿಸುವವರು. ಕೆಲವರು ತಪಸ್ಸನ್ನೇ ಭಗವಂತನಲ್ಲಿ ಹೋಮಿಸುವವರು. ಕರ್ಮ ಸಾಧನೆಯೇ ಕೆಲವರ ಯಜ್ಞ. ಚುರುಕು ನಿಷ್ಠೆಯ ಪ್ರಯತ್ನಶೀಲರಾದ ಕೆಲವರಿಗೆ ವೇದಾಧ್ಯಯನ, ಭಗವಂತನ ಅರಿವೇ ಯಜ್ಞ.

ದ್ರವ್ಯಯಜ್ಞ: ಕೆಲವರು ದ್ರವ್ಯದ ಮೂಲಕ ಭಗವಂತನನ್ನು ಆರಾಧನೆ ಮಾಡುತ್ತಾರೆ. ಇದು ಅಗ್ನಿ ಮುಖೇನವಿರಬಹುದು, ಧನದಾನ, ಅನ್ನದಾನ, ಕನ್ಯಾದಾನ ಇತ್ಯಾದಿ ದಾನಗಳ ಮುಖೇನ ಇರಬಹುದು. ಯೋಗ್ಯನಾದವನಿಗೆ, ಯೋಗ್ಯ ಕಾಲದಲ್ಲಿ, ಯೋಗ್ಯವಾದುದನ್ನು, ಅವರೊಳಗಿರುವ ಭಗವಂತ ಸುಪ್ರೀತನಾಗಲಿ ಎಂದು ಕೊಡುವುದು ದ್ರವ್ಯ ಯಜ್ಞ.
ತಪೋಯಜ್ಞ: ಇದಕ್ಕೆ ಎರಡು ಮುಖ. ಒಂದು ಬಾಹ್ಯ ಇನ್ನೊಂದು ಅಂತರಂಗ. ಒಂದು ನಿರಂತರ ಧ್ಯಾನ, ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವಿಲ್ಲ. ಎರಡನೆಯದು ಭಗವಂತನ ಚಿಂತನೆಗೆ ಬೇಕಾದ ಆತ್ಮಸಂಯಮ(self-discipline)-ಇದನ್ನು ತಪಸ್ಸು ಎನ್ನುತ್ತಾರೆ. ಉದಾಹರಣೆಗೆ ಬ್ರಹ್ಮಚರ್ಯಪಾಲನೆ, ವೃತಾನುಷ್ಠಾನ, ಇತ್ಯಾದಿ. 
ಯೋಗಯಜ್ಞ: ಅಂದರೆ ವಿಧವಿಧವಾದ ಕರ್ಮಯೋಗವನ್ನು ಭಗವಂತನ ಪ್ರೀತ್ಯರ್ಥ ಅನುಷ್ಠಾನ ಮಾಡುವುದು. ಇದು ಬಾಹ್ಯ ಕರ್ಮಗಳ ಮೂಲಕ ಭಗವಂತನ ಆರಾಧನೆ. ಉದಾಹರಣೆಗೆ: ದೇವರಿಗೆ 108 ಪ್ರದಕ್ಷಿಣೆ, ಅರ್ಚನೆ , ಇತ್ಯಾದಿ. ಇದಲ್ಲದೆ ಯೋಗ ಶಾಸ್ತ್ರದಲ್ಲಿ ಹೇಳಿರುವ ಯಮನಿಯಮದ ಪಾಲನೆ.
ಸ್ವಾಧ್ಯಾಯ ಜ್ಞಾನಯಜ್ಞ: ಇದು ಭಗವಂತನಿಗೆ ಅತ್ಯಂತ ಪ್ರಿಯವಾದ ಯಜ್ಞ. ಇಲ್ಲಿ ಸ್ವಾಧ್ಯಾಯ ಎನ್ನುವುದಕ್ಕೆ ಅನೇಕ ಅರ್ಥಗಳಿವೆ. ತನಗೆ ಸಂಬಂಧಪಟ್ಟದ್ದನ್ನು, ತಾನು ಓದಬೇಕಾದುದನ್ನು ಓದುವುದು. ತನ್ನ ಶಾಖೆಯ ವೇದಾಧ್ಯಯನ; ಎಲ್ಲಾ ಕಡೆ ಸ್ವತಂತ್ರನಾಗಿರುವ ಸರ್ವೋತ್ತಮನಾದ ಭಗವಂತನ ಗುಣವನ್ನು ಅಧ್ಯಯನ ಮೂಲಕ ಎಲ್ಲಾ ಗ್ರಂಥಗಳಲ್ಲಿ ಕಂಡುಕೊಳ್ಳುವುದು ಸ್ವಾಧ್ಯಾಯ. ಈ ಕಾಲದಲ್ಲಿ ಶಾಸ್ತ್ರದ ರಹಸ್ಯವನ್ನು ತಿಳಿದವರು ಸಿಗುವುದು ತುಂಬಾ ವಿರಳ. ಅಂತಹ ಸಂದರ್ಭದಲ್ಲಿ ಕಾಲವನ್ನು ವ್ಯರ್ಥ ಮಾಡದೇ, ಭಗವಂತ ಎಷ್ಟು ಬುದ್ಧಿ ಕೊಟ್ಟಿದ್ದಾನೋ ಅಷ್ಟನ್ನು ಬಳಸಿ ಸ್ವಂತ ಎಷ್ಟು ಸಾಧ್ಯವೋ ಅಷ್ಟನ್ನು ಅಧ್ಯಯನ ಮಾಡುವುದೂ ಸ್ವಾಧ್ಯಾಯ. ಈ ಎಲ್ಲಾ ಸ್ವಾಧ್ಯಾಯ ನಮ್ಮ ಜ್ಞಾನದ ಬೆಳವಣಿಗೆಗೆ ಪೋಷಕವಾದದ್ದು. ನಾವು ತಿಳಿಯುವುದು, ತಿಳಿದದ್ದನ್ನು ಇನ್ನೊಬ್ಬರಿಗೆ ಹಂಚುವುದು ಭಗವಂತನಿಗೆ ಅತ್ಯಂತ ಪ್ರಿಯ. ಇನ್ನೊಬ್ಬರಿಗೆ ಹಂಚುವುದರಿಂದ ಹೆಚ್ಚಾಗುವ ಏಕಮೇವ ಸಂಪತ್ತು ಎಂದರೆ ಅದು ಜ್ಞಾನ. ಜ್ಞಾನಯಜ್ಞ ಮಾಡಬೇಕಾದರೆ ನಾವು ಯತಿಗಳಾಗಬೇಕು. ಇಲ್ಲಿ ಯತಿ ಎಂದರೆ ಸನ್ಯಾಸಿ ಅಲ್ಲ. ಯತಿ ಅಂದರೆ ನಿರಂತರ ಪ್ರಯತ್ನಶೀಲ. ಸಾಧನೆ ಜೊತೆಗೆ ಹರಿತವಾದ ವೃತ ಕೂಡಾ ಅಗತ್ಯ. ಅಂದರೆ ಸ್ವಚ್ಛವಾದ ಪ್ರಾಮಾಣಿಕವಾದ ಬದುಕು. ಇದಿಲ್ಲದೇ ಮಾಡುವ ಯಾವ ಕರ್ಮ ಕೂಡಾ ಯಜ್ಞವಾಗುವುದಿಲ್ಲ. ಅಧ್ಯಾತ್ಮದ ದಾರಿಯಲ್ಲಿ ಮುಂದೆ ಸಾಗಲು ಛಲ ಅಗತ್ಯ.

ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇSಪಾನಂ ತಥಾSಪರೇ ।
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ ॥೨೯॥

ಅಪಾನೇ ಜುಹ್ವತಿ ಪ್ರಾಣಮ್ ಪ್ರಾಣೇ ಅಪಾನಮ್ ತಥಾ ಅಪರೇ ।
ಪ್ರಾಣ ಅಪಾನ ಗತೀ ರುದ್ಧ್ವಾ ಪ್ರಾಣಾಯಾಮ ಪರಾಯಣಾಃ -ಮತ್ತೆ ಕೆಲವರು ಪ್ರಾಣಾಯಾಮದ ಸಾಧಕರು. ಪ್ರಾಣಾಪಾನಗಳ ನಡೆಯನ್ನು ತಡೆಹಿಡಿದು ಅಪಾನದಲ್ಲಿ ಪ್ರಾಣವನ್ನು ಹೋಮಿಸುತ್ತಾರೆ. ಪ್ರಾಣದಲ್ಲಿ ಅಪಾನವನ್ನು.

ಯೋಗದಲ್ಲಿ ವಿಶಿಷ್ಟವಾದ ಸಾಧನೆ ಪ್ರಾಣಾಯಾಮ. ಕೆಲವರಿಗೆ ಪ್ರಾಣಾಯಾಮವೇ ಬದುಕಿನಲ್ಲಿ ಒಂದು ಸಾಧನೆ. ಪ್ರಾಣಾಪಾನಗಳನ್ನು ಭಗವಂತನಲ್ಲಿ ಯಜ್ಞ ರೂಪವಾಗಿ ಅರ್ಪಿಸಿ, ಪ್ರಾಣಾಯಾಮದಿಂದ ಭಗಂತನ ಉಪಾಸನೆ-ಅಪಾನದಲ್ಲಿ ಪ್ರಾಣವನ್ನು ಹೋಮಿಸುವುದು. ಇದು ಕುಂಭಕಕ್ಕೆ ಸಂಬಂಧಪಟ್ಟದ್ದು. ದೇಹದ ಒಳಗಿನಿಂದ ಶ್ವಾಸವನ್ನು ಹೊರಬಿಡುವುದು 'ರೇಚಕ'; ಆಮ್ಲಜನಕಯುಕ್ತ ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದು 'ಪೂರಕ'. ನಮ್ಮ ಹೃದಯ ಕಲಶದಲ್ಲಿ ಪ್ರಾಣಶಕ್ತಿಯನ್ನು ಹಿಡಿದಿಡುವುದು-‘ಕುಂಭಕ’. ಇದು ಬಹಳ ಪರಿಣಾಮಕಾರಿ. ಇದರಿಂದ ಏಕಾಗ್ರತೆ, ಆರೋಗ್ಯ, ಆಯುಸ್ಸು ಹೆಚ್ಚುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಆಯುಸ್ಸು ಆತನ ಉಸಿರಾಟದ ಮೇಲೆ ನಿರ್ಧಾರವಾಗಿರುತ್ತದೆ. ಸಹಜ ಉಸಿರಾಟ ಎಂದರೆ ನಾಲ್ಕು ಸೆಕೆಂಡಿಗೆ ಒಂದು ಉಸಿರಾಟ(ರೇಚಕ ಮತ್ತು ಪೂರಕ). ಒಬ್ಬ ಮನುಷ್ಯ ನೂರು ವರ್ಷ ಬದುಕುತ್ತಾನೆ ಎಂದರೆ ಆತನ ಆಯುಸ್ಸು '೭೭ ಕೋಟಿ, ೭೬ ಲಕ್ಷ ಉಸಿರು'. ಒಂದು ವೇಳೆ ನಾಲ್ಕು ಸೆಕೆಂಡಿಗೆ ಬದಲಾಗಿ ೮ ಸೆಕೆಂಡಿಗೊಮ್ಮೆ ಉಸಿರಾಟ ಮಾಡಿದರೆ ಆತ ೨೦೦ ವರ್ಷ ಬದುಕಬಹುದು. ಇದನ್ನು ಹಿಂದೆ ಕೆಲವು ಸಾಧಕರು ಪ್ರಾಣಾಯಾಮದಿಂದ ಸಾಧಿಸುತ್ತಿದ್ದರು. ಇಂದೂ ಕೂಡಾ ಹಿಮಾಲಯದಲ್ಲಿ ನೂರಾರು ವರ್ಷ ವಯಸ್ಸಾಗಿರುವ ಆರೋಗ್ಯಪೂರ್ಣ ಸಾಧಕರಿದ್ದಾರೆ ಎಂದು ಪರಮಹಂಸ ಯೋಗಾನಂದರು(Autobiography of a Yogi) ಮತ್ತು ಸ್ವಾಮಿರಾಮ್(Living with Himalayan Masters) ತಮ್ಮ ಸ್ವಂತ ಅನುಭವದಿಂದ ಹೇಳಿದ್ದಾರೆ.
ಪ್ರಾಣಾಯಾಮದಿಂದ ಪ್ರಾಣಶಕ್ತಿ ವೃದ್ಧಿಗೊಳ್ಳುತ್ತದೆ. ಇದರಿಂದ ಇನ್ನೊಬ್ಬರ ರೋಗವನ್ನು ಕೂಡಾ ಗುಣಪಡಿಸಬಹುದು. ಇದನ್ನು ಸ್ಪರ್ಶ ಅಥವಾ Touch Heal ಎನ್ನುತ್ತಾರೆ. ಕೇವಲ ಹಸ್ತ ಸ್ಪರ್ಶದಿಂದ ಭಯ, ರೋಗ, ದುಃಖ, ಹುಚ್ಚು, ಕುರುಡುತನ ಎಲ್ಲವನ್ನೂ ಗುಣ ಪಡಿಸಬಹುದು. ಈ ಕಾರಣಕ್ಕಾಗಿ ಒಬ್ಬರು ಇನ್ನೊಬ್ಬರಿಗೆ ಆಶೀರ್ವಾದ ಮಾಡುವಾಗ ತಲೆ ಮೇಲೆ ಕೈ ಇಟ್ಟು ಮಾಡುತ್ತಾರೆ. ಇದರಿಂದ ಪ್ರಾಣ ಶಕ್ತಿ ದೊಡ್ಡವರಿಂದ ಚಿಕ್ಕವರಿಗೆ ಹರಿಯುತ್ತದೆ. ಹೀಗೆ ಪ್ರಣಾಯಾಮದಲ್ಲಿ ಅನೇಕ ಸಾಧನೆ ಸಾಧ್ಯ. ಮುಖ್ಯವಾಗಿ ಇದರಿಂದ ಮನಸ್ಸು ದೇವರಲ್ಲಿ ನೆಲೆಗೊಳ್ಳುತ್ತದೆ. ಶ್ರೀಕೃಷ್ಣ ಇದನ್ನು ಯಜ್ಞ ಎನ್ನುತ್ತಾನೆ. 
ಮೇಲಿನಿಂದ ಕೆಳಕ್ಕೆ ಹರಿಯುವ ಶಕ್ತಿ ಅಪಾನ, ಊರ್ಧ್ವ ಮುಖವಾಗಿ ಮೂಲಾಧಾರದಿಂದ ಸಹಸ್ರಾರದತ್ತ ಹರಿಯುವ ಶಕ್ತಿ ಪ್ರಾಣ. ಈ ಎರಡು ಶಕ್ತಿಗಳನ್ನು ಹೃದಯದಲ್ಲಿ ಸ್ಥಗಿತ ಮಾಡುವುದು ಕುಂಭಕ. ಪೂರ್ಣವಾಗಿ ಒಳಗಿನ ಗಾಳಿಯನ್ನು ತನ್ನ ಬಲ ಮೂಗಿನ ಹೊಳ್ಳೆಯಿಂದ ಹೊರ ಹಾಕಿ, ತನ್ನ ಎಡ ಮೂಗಿನ ಹೊಳ್ಳೆಯಿಂದ ಶುದ್ಧ ಗಾಳಿಯನ್ನು ಇನ್ನು ಒಳಗೆ ಹೋಗುವುದಿಲ್ಲ ಅನ್ನುವಷ್ಟು ಪ್ರಮಾಣದಲ್ಲಿ ತೆಗೆದುಕೊಂಡು, ಪ್ರಾಣಶಕ್ತಿ ಮೇಲಕ್ಕೆ ಹೋಗದಂತೆ, ಅಪಾನ ಕೆಳಗೆ ಹೋಗದಂತೆ ಶಕ್ತಿಯನ್ನು ಹೃದಯದಲ್ಲಿ ಸ್ಥಗಿತ ಗೊಳಿಸುವುದು- ಕುಂಭಕ. ಇದು ಪ್ರಾಣಾಯಾಮ ಪರಾಯಣರು ಮಾಡುವ ಯಜ್ಞ. ಭಗವಂತ ಪ್ರಸನ್ನನಾಗಿ ನನಗೆ ಏಕಾಗ್ರತೆಯನ್ನು ಕೊಟ್ಟು, ನನ್ನ ಸಾಧನೆಯನ್ನು ಮುಂದುವರಿಸಲು ಸಹಕರಿಸಲಿ ಎನ್ನುವ ಅನುಸಂಧಾನದಿಂದ ಮಾಡುವ ಉಸಿರಾಟದ ಯಜ್ಞ. [ಸೂಚನೆ:ಗುರುವಿನ ಮಾರ್ಗದರ್ಶನವಿಲ್ಲದೆ ಪ್ರಾಣಾಯಾಮವನ್ನು ಪ್ರಯತ್ನಿಸಬಾರದು]

ಅಪರೇ ನಿಯತ ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ ।
ಸರ್ವೇSಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ ॥೩೦॥

ಅಪರೇ ನಿಯತ ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ |
ಸರ್ವೇ ಅಪಿ ಏತೇ ಯಜ್ಞವಿದಃ ಯಜ್ಞಕ್ಷಪಿತ ಕಲ್ಮಷಾಃ -ಕೆಲವರು ಆಹಾರವನ್ನು ಮಿತಗೊಳಿಸಿ ಇಂದ್ರಿಯವೃತ್ತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುತ್ತಾರೆ.[ಕಿರಿಯರಾದ ಇಂದ್ರಿಯ ದೇವತೆಗಳು ಹಿರಿಯರಾದ ಇಂದ್ರಿಯ ದೇವತೆಗಳಿಗೆ ಅಧೀನರೆಂದು ಚಿಂತನೆ ಮಾಡುತ್ತಾರೆ] ಇವರೆಲ್ಲರೂ ಯಜ್ಞದ ಬಗೆಯನ್ನು ಬಲ್ಲವರು; ಯಜ್ಞದಿಂದ ಕೊಳೆಯನ್ನು ತೊಳೆದುಕೊಂಡವರು.

ಕೆಲವರು ಆಹಾರ ನಿಯಂತ್ರಣಗೊಳಿಸಿ, ಇಂದ್ರಿಯ ಚಾಪಲ್ಯವನ್ನು ಕಡಿಮೆ ಮಾಡಿಕೊಂಡು ಸಾಧನೆ ಮಾಡುತ್ತಾರೆ. ಆಹಾರ ನಿಯಂತ್ರಣ ಎಂದರೆ ಹೆಚ್ಚು ಆಹಾರ ಸೇವಿಸದೇ ಇರುವುದು, ಉಪ್ಪು-ಹುಳಿ-ಖಾರ ಕಡಿಮೆ ತಿನ್ನುವುದು ಇತ್ಯಾದಿ. ಇದರಿಂದ ಇಂದ್ರಿಯ ಸೆಳೆತ ಕಡಿಮೆಯಾಗುತ್ತದೆ. ಇದರ ಪರಿಣಾಮ ನೇರವಾಗಿ ಮನಸ್ಸಿನ ಮೇಲೆ. ಹೀಗೆ ಆಹಾರ ನಿಯಂತ್ರಣದ ಮೂಲಕ ಸಾಧನೆ ಒಂದು ಯಜ್ಞ. ಈ ಕಾರಣಕ್ಕಾಗಿ ನಮ್ಮಲ್ಲಿ ಅನೇಕ ಹಬ್ಬ ಹರಿದಿನಗಳಲ್ಲಿ, ಏಕಾದಶಿಯಂದು-ಉಪವಾಸ ಪದ್ಧತಿ ಸಾಮಾಜಿಕವಾಗಿ ನೆಡೆದು ಬಂತು. ಇದರಿಂದ ಕನಿಷ್ಠ ಆ ಒಂದು ದಿನವಾದರೂ ಮನಸ್ಸು ಸ್ವಚ್ಛವಾಗಿ ಭಗವಂತನ ಉಪಾಸನೆಯಲ್ಲಿ ತೊಡಗಲಿ ಎನ್ನುವುದು ಇದರ ಹಿಂದಿರುವ ಸಂಕಲ್ಪ.
ಇನ್ನೊಂದು ವಿಧವಾದ ಯಜ್ಞ "ಪ್ರಾಣಾನ್ ಪ್ರಾಣೇಷು ಜುಹ್ವತಿ" ಅಂದರೆ ಪ್ರಾಣಗಳಲ್ಲಿ ಪ್ರಾಣವನ್ನು ಹೋಮಿಸುವುದು ಅಥವಾ ಇಂದ್ರಿಯಗಳಲ್ಲಿ ಇಂದ್ರಿಯವನ್ನು ಹೋಮಿಸುವುದು. ಇಲ್ಲಿ ಇಂದ್ರಿಯಗಳು ಎಂದರೆ ಇಂದ್ರಿಯಾಭಿಮಾನಿ ದೇವತೆಗಳು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಈ ದೇವತೆಗಳು ಒಂದೊಂದು ಸ್ತರದಲ್ಲಿ ಕೆಲಸ ಮಾಡುತ್ತಾರೆ(Protocol). ಒಬ್ಬೊಬ್ಬ ದೇವತೆಯೂ ಒಂದೊಂದು ಮೆಟ್ಟಲಿನಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುತ್ತಾರೆ ಹಾಗೂ ಇವರು ಭಗವಂತನನ್ನು ಸೇರುವಲ್ಲಿ ನಮಗೆ ಸಹಾಯ ಮಾಡುತ್ತಾರೆ. ಈ ದೇವತೆಗಳನ್ನು ವಿವಿಧ ಮೆಟ್ಟಲಿನಲ್ಲಿ ತಾರತಮ್ಯ ಚಿಂತನೆ ಮಾಡುವುದು, ಅದರ ಮುಖೇನ ಭಗವಂತನ ಚಿಂತನೆ ಒಂದು ಯಜ್ಞ. ಸರ್ವೋತ್ತಮನಾದ ಭಗವಂತ ಮೊದಲಿನವನು. ಎಲ್ಲವೂ ಅವನ ಅಧೀನ. ಆತನ ನಂತರ ಪ್ರಕೃತಿ ಮಾತೆ ಲಕ್ಷ್ಮಿ, ನಂತರ ಬ್ರಹ್ಮ-ವಾಯು, ಸರಸ್ವತಿ-ಭಾರತಿ, ಗರುಡ-ಶೇಷ-ರುದ್ರ, ಸುಪರ್ಣಿ-ವಾರುಣಿ-ಪಾರ್ವತಿ, ಇಂದ್ರ-ಕಾಮರು, ದಕ್ಷಾದಿಗಳು, ಸೂರ್ಯ-ಚಂದ್ರ-ಯಮಾದಿಗಳು, ವರುಣ, ಅಗ್ನಿ, ಅಶ್ವೀದೇವತೆಗಳು, ಕುಬೇರ, ಯಜ್ಞ. ಹೀಗೆ ಒಬ್ಬರು ಇನ್ನೊಬ್ಬರಿಗೆ ಅಧೀನವಾಗಿ ವಿವಿಧ ಮೆಟ್ಟಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ರೀತಿ ದೇಹ ಎನ್ನುವ ಈ ಅದ್ಭುತ ಯಂತ್ರವನ್ನು ನಿಯಂತ್ರಿಸುವ ದೇವತೆಗಳ ಅರಿವು, ಅದರ ಮೂಲಕ ಭಗವಂತನೆಡೆಗೆ ಸಾಗುವ ಜ್ಞಾನಸಾಧನೆ-ತಾರತಮ್ಯ ಜ್ಞಾನಯಜ್ಞ.
ಯಜ್ಞದಲ್ಲಿ ಒಂದು ಒಳ್ಳೆಯದು ಒಂದು ಕೆಟ್ಟದ್ದು ಅನ್ನುವುದಿಲ್ಲ. ಯಾರಿಗೆ ಯಾವ ಯಜ್ಞ ಒಗ್ಗುತ್ತದೋ ಅದರ ಮುಖೇನ ಸಾಧನೆ ಮಾಡುತ್ತಾರೆ. ಎಲ್ಲರೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಯಾರಿಗೆ ಯಾವುದು ಹಿತವೆನಿಸುತ್ತದೋ, ಸಾಧನೆಗೆ ಅನುಕೂಲವಾಗುತ್ತದೋ, ಆ ದಾರಿಯಲ್ಲಿ ಸಾಗಬೇಕು. ಯಜ್ಞದಿಂದ ಆರಾಧ್ಯನಾದ ಯಜ್ಞಮೂರ್ತಿಯಾದ ಭಗವಂತನತ್ತ ಸಾಗುವವನು, ತನ್ನ ಜೀವನದ ಪ್ರತಿಯೊಂದು ನಡೆಯನ್ನು ಭಗವಂತನ ಆರಾಧನೆಯಾಗಿ ಮಾಡಿಕೊಳ್ಳುವ ಮೂಲಕ, ತನ್ನ ಬದುಕಿನ ಕಲ್ಮಶವನ್ನು ತೊಳೆದುಕೊಂಡು ಸ್ವಚ್ಛವಾದ ಬದುಕನ್ನು ಬಾಳುತ್ತಾನೆ.

ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್ ।
ನಾಯಂ ಲೋಕೋSಸ್ತ್ಯಯಜ್ಞಸ್ಯ ಕುತೋSನ್ಯಃ ಕುರುಸತ್ತಮ ॥೩೧॥
ಯಜ್ಞ ಶಿಷ್ಟ ಅಮೃತ ಭುಜಃ ಯಾಂತಿ ಬ್ರಹ್ಮ ಸನಾತನಮ್ |
ನ ಅಯಮ್ ಲೋಕಃ ಅಸ್ತಿ ಅಯಜ್ಞಸ್ಯ ಕುತಃ ಅನ್ಯಃ ಕುರುಸತ್ತಮ -- ಯಜ್ಞದಲ್ಲಿ ಅರ್ಪಿಸಿ ಉಳಿದ ಅಮೃತವನ್ನುಣ್ಣುವವರು(ಯಜ್ಞ ಫಲದ ಅಮೃತ) ಶಾಶ್ವತವಾಗಿ ಭಗವಂತನನ್ನು ಪಡೆಯುತ್ತಾರೆ. ಓ ಕುರುಶ್ರೇಷ್ಠಾ, ಯಜ್ಞವಿರದವನಿಗೆ ಈ ಲೋಕವೇ ಇಲ್ಲ. ಇನ್ನು ಆ ಲೋಕದ ಮಾತೇನು?

ಯಜ್ಞದಲ್ಲಿ ಭಗವಂತನಿಗೆ ಅರ್ಪಿಸಿ ಉಳಿದದ್ದನ್ನು 'ಅಮೃತ' ಎನ್ನುತ್ತಾರೆ. ಅದು ನಮ್ಮನ್ನು ಸಾವಿನಿಂದಾಚೆಗೆ ಕೊಂಡೊಯ್ಯುತ್ತದೆ. ಜೀವನದ ಪ್ರತಿಯೊಂದು ನಡೆಯಲ್ಲಿ ಈ ರೀತಿಯ ಬದುಕನ್ನು ಬದುಕುತ್ತಿದ್ದರೆ ಕ್ರಮೇಣ ಎಂದೆಂದೂ ಬದಲಾಗದ, ಶಾಶ್ವತ ಮತ್ತು ಸನಾತನನಾದ ಭಗವಂತನನ್ನು ಹೋಗಿ ಸೇರುತ್ತೇವೆ. 
ಇಲ್ಲಿ 'ಸನಾತನ' ಎನ್ನುವಲ್ಲಿ ಇನ್ನೊಂದು ಧ್ವನಿ ಇದೆ. ಕೇವಲ ಉಪವಾಸ ಪ್ರಾಣಾಯಾಮ ಮಾಡಿದಾಗ ಮೋಕ್ಷ ಸಿಗದು. ಸನಾತನ(ನಾತನ-ನಾದನ) ಅಂದರೆ ಶಬ್ದ. ಬ್ರಹ್ಮ ಸನಾತನ ಎಂದರೆ ಸರ್ವಶಬ್ದ ವಾಚ್ಯನಾದ, ವೇದವೇದ್ಯ ಭಗವಂತ. ಇಂತಹ ಭಗವಂತನನ್ನು ಶಾಸ್ತ್ರದ ಮುಖೇನ ತಿಳಿದು ಮಾಡುವ ಯಜ್ಞದಿಂದ ಮೋಕ್ಷ ಸಾಧ್ಯ. ಇಲ್ಲದಿದ್ದರೆ ಏನೂ ಉಪಯೋಗವಿಲ್ಲ. ವೇದದಲ್ಲಿ ಹೇಳಿರುವ ಗುಣವನ್ನು ಬಲ್ಲವರಿಂದ ತಿಳಿದು ಉಪಾಸನೆ ಮಾಡುವವ, ವೇದವನ್ನು ಓದಿ ಅದರಿಂದ ತಿಳಿದವ, ತಿಳಿದು ಇನ್ನೊಬ್ಬರಿಗೆ ಹೇಳುವವ, ಹೀಗೆ ಎಲ್ಲರೂ ಸಾಧಕರೆನಿಸುತ್ತಾರೆ. ಯಜ್ಞದಲ್ಲಿ ಪ್ರಮುಖವಾಗಿ ಬೇಕಾಗಿರುವುದು ಜ್ಞಾನ, ಅನನ್ಯ ಭಕ್ತಿ ಮತ್ತು ಶರಣಾಗತಿ. "ಜೀವನದಲ್ಲಿ ಈ ಅನುಸಂಧಾನವಿಲ್ಲದವ, ಯಜ್ಞವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದವ, ಇಹದಲ್ಲೂ ವ್ಯರ್ಥವಾಗಿ ಬದುಕುತ್ತಾನೆ-ಇನ್ನು ಪರದ ಮಾತೇನು" ಎನ್ನುತ್ತಾನೆ ಶ್ರೀಕೃಷ್ಣ.
ಇಲ್ಲಿ ಅರ್ಜುನನನ್ನು ಶ್ರೀಕೃಷ್ಣ 'ಕುರುಸತ್ತಮ' ಎಂದು ಸಂಬೋಧಿಸಿದ್ದಾನೆ. ಕುರುವಂಶದಲ್ಲಿ ಶ್ರೇಷ್ಠನಾದ ನೀನು ನಿಷ್ಕ್ರಿಯನಾಗದೇ ಕಾರ್ಯ ಪ್ರವೃತ್ತನಾಗು; ಯಜ್ಞದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದ ವಂಶದಲ್ಲಿ ಹುಟ್ಟಿದ ಜ್ಞಾನಿಶ್ರೇಷ್ಠ, ಸಾತ್ವಿಕನಾದ ನೀನು- 'ಯುದ್ಧವನ್ನು ಯಜ್ಞವಾಗಿ ಮಾಡು' ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ.

ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ ।
ಕರ್ಮಜಾನ್ ವಿದ್ಧಿ ತಾನ್ ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ ॥೩೨॥

ಏವಮ್ ಬಹುವಿಧಾಃ ಯಜ್ಞಾಃ ವಿತತಾಃ ಬ್ರಹ್ಮಣಃ ಮುಖೇ 
ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಮ್ ಜ್ಞಾತ್ವಾ ವಿಮೋಕ್ಷ್ಯಸೇ- ಹೀಗೆ ಹಲವು ಬಗೆಯ ಯಜ್ಞಗಳು ಭಗವಂತನ ಬಾಯಲ್ಲಿ ಹರವಿಕೊಂಡಿವೆ. ಅವೆಲ್ಲವೂ ಕರ್ಮದಿಂದಲೇ ಆಗುವಂತಹವು ಎನ್ನುವುದನ್ನು ತಿಳಿ. ಹೀಗೆ ತಿಳಿದರೆ ಬಿಡುಗಡೆ ಹೊಂದುವೆ.

ಯಜ್ಞಕ್ಕೆ ಹಲವು ಮುಖಗಳು. ಬದುಕಿನ ಯಾವುದೇ ನಡೆಯನ್ನು ಭಗವಂತನ ಪ್ರಜ್ಞೆಯಿಂದ ಮಾಡಿದಾಗ, ಬದುಕಿನ ನಡೆ ಭಗವಂತನ ಕಡೆ ಸಾಗುವ ನಡೆಯಾದಾಗ, ಅದು ಯಜ್ಞವಾಗುತ್ತದೆ. ಯಾವ ರೀತಿ ಯಜ್ಞ ಮಾಡಿದರೂ ಅದು ಭಗವಂತನ ಮುಖದಲ್ಲೇ ಬಂದು ಸೇರುತ್ತದೆ. ಸರ್ವಯಜ್ಞಗಳ ನಿಯಾಮಕ ಆ ಭಗವಂತನೊಬ್ಬನೇ. ವೈವಿಧ್ಯತೆ ಕೇವಲ ನಮ್ಮ ಅನುಸಂಧಾನ ಮತ್ತು ಕ್ರಿಯೆಯಲ್ಲಿ.
ನಾವು ನಮ್ಮ ಕರ್ಮದ ಮುಖೇನ ಯಜ್ಞ ಮಾಡಬೇಕು. ಕರ್ಮವನ್ನು ಬಿಟ್ಟು ಭಗವಂತನ ಉಪಾಸನೆ ಮಾಡುತ್ತೇನೆ ಎಂದು ಹೊರಟರೆ ಅದು ಸಾಧ್ಯವಿಲ್ಲ. ನಾವು ನಮ್ಮನಮ್ಮ ಕರ್ತವ್ಯ ಕರ್ಮದಲ್ಲಿ ಭಗವಂತನನ್ನು ಕಾಣುವುದು ಯಜ್ಞ. ಈ ಅನುಸಂಧಾನದಿಂದ ಯಾವ ಕರ್ಮ ಮಾಡಿದರೂ ಅದು ನಮ್ಮನ್ನು ಬಿಡುಗಡೆಯ ಮಾರ್ಗದತ್ತ ಕೊಂಡೊಯ್ಯುತ್ತದೆ.
ಈವರೆಗೆ ಶ್ರೀಕೃಷ್ಣ ಕರ್ಮ-ಯಜ್ಞವಾಗುವುದು ಹೇಗೆ, ಅದರಲ್ಲಿನ ವಿಧಗಳು, ಅದರ ಸ್ವಾಮಿ- ಈ ವಿಚಾರಗಳನ್ನು ವಿವರವಾಗಿ ಹೇಳಿರುವುದನ್ನು ನೋಡಿದೆವು. ಮೂಲಭೂತವಾಗಿ ಯಜ್ಞದಲ್ಲಿ ಬಾಹ್ಯ ಮತ್ತು ಅಂತರಂಗ ಯಜ್ಞ ಎನ್ನುವುದನ್ನೂ ನಾವು ನೋಡಿದೆವು. ಈ ಎರಡು ವಿಧವಾದ ಯಜ್ಞದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಮತ್ತು ಏಕೆ-ಈ ಕುರಿತು ಶ್ರೀಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.

ಶ್ರೇಯಾನ್ ದ್ರವ್ಯಮಯಾದ್ ಯಜ್ಞಾಜ್ ಜ್ಞಾನಯಜ್ಞಃ ಪರಂತಪ ।
ಸರ್ವಂ ಕರ್ಮಾ[S]ಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ ॥೩೩॥

ಶ್ರೇಯಾನ್ ದ್ರವ್ಯ ಮಯಾತ್ ಯಜ್ಞಾತ್ ಜ್ಞಾನಯಜ್ಞಃ ಪರಂತಪ | 
ಸರ್ವಮ್ ಕರ್ಮಾ ಅ[ಆ]ಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ- ಓ ಪರಂತಪ, ಸೊತ್ತುಗಳನ್ನು ಹೋಮಿಸುವ ಬಾಹ್ಯ ಯಜ್ಞಕ್ಕಿಂತ ಜ್ಞಾನ ಯಜ್ಞ ಮಿಗಿಲು. ಓ ಪಾರ್ಥ, ಸಾಂಗವಾದ [ತಿಳಿವಿನೆದುರು ತೀರಾ ಸಣ್ಣದಾದ] ಎಲ್ಲಾ ಕರ್ಮವೂ ತಿಳಿವಿನಲ್ಲಿ ಪೂರ್ತಿಗೊಳ್ಳುತ್ತದೆ.

ವಾಸ್ತವಿಕವಾಗಿ ಪೂರ್ಣವಾದ ಬರಿಯ ಬಾಹ್ಯಯಜ್ಞ ಮತ್ತು ಬರಿಯ ಅಂತರಂಗ ಯಜ್ಞ ಅನ್ನುವುದೊಂದಿಲ್ಲ. ನಾವು ಮಾಡುವ ಬಾಹ್ಯಯಜ್ಞದ ಹಿಂದೆ ಅರಿವಿದೆ. ಅಂತರಂಗ ಯಜ್ಞದ ಜೊತೆಗೆ ಆಚರಣೆ ಕೂಡಾ ಇದೆ. ಇವೆರಡರಲ್ಲಿ ಅಂತರಂಗ ಯಜ್ಞಕ್ಕೆ ಹೆಚ್ಚು ಮಹತ್ವ. ಏಕೆಂದರೆ ನಾವು ಮಾನಸಿಕವಾಗಿ ಧ್ಯಾನ ಮಾಡುವುದರಿಂದ ಬಾಹ್ಯಕ್ರಿಯೆ ಇಲ್ಲದೆ ಮನಸ್ಸಿನಲ್ಲಿ ವಿಶೇಷ ಶಕ್ತಿ ನಿರ್ಮಾಣವಾಗುತ್ತದೆ. ಆದರೆ ಅರಿವು ಇಲ್ಲದೇ ಕರ್ಮ ಮಾಡಿದರೆ ಅದು ವ್ಯರ್ಥ! ಈ ಕಾರಣಕ್ಕಾಗಿ ಕರ್ಮದ ಹಿಂದಿನ ಅರಿವು ಬಹಳ ಮುಖ್ಯ. ಹಾಗಾಗಿ ಜ್ಞಾನಪೂರ್ವಕವಾಗಿ ನಾವು ಕರ್ಮ ಮಾಡಬೇಕು. ಬರೀ ದ್ರವ್ಯಮಯವಾಗಿ, ಅದರ ಹಿಂದೆ ಜ್ಞಾನವಿಲ್ಲದೇ ಇದ್ದರೆ, ತಿಳಿದು ಮಾಡದಿದ್ದರೆ, ಅದಕ್ಕೆ ಅರ್ಥವಿಲ್ಲ. ಯಾವ ಕರ್ಮವನ್ನಾಗಲಿ ತಿಳಿದು ಮಾಡಿದಾಗ ಮಾತ್ರ ಪರಿಣಾಮಕಾರಿ. ಈ ಕಾರಣದಿಂದ ಜ್ಞಾನಪರವಾದ ಯಜ್ಞ ಮಹತ್ವದ್ದು. ಈ ಶ್ಲೋಕದಲ್ಲಿ ಶ್ರೀಕೃಷ್ಣ ಅರ್ಜುನನನ್ನು ಪರಂತಪ ಎಂದು ಸಂಬೋಧಿಸುತ್ತಾನೆ. ಇಲ್ಲಿ ಈ ಸಂಬೋಧನೆಗೆ ವಿಶೇಷ ಅರ್ಥವಿದೆ. ಈ ಪದವನ್ನು ಎರಡು ನೆಲೆಯಲ್ಲಿ ಅರ್ಥೈಸಬಹುದು. ಸ್ಥೂಲವಾಗಿ ನೋಡಿದರೆ ಪರಂತಪ ಎಂದರೆ 'ಶತ್ರುಗಳನ್ನು ಸದೆಬಡಿಯುವ ವೀರ'. ಇಲ್ಲಿ ಅರ್ಜುನ ಮಾಡುತ್ತಿರುವ ಯಜ್ಞ ಶತ್ರುನಿಗ್ರಹ. ಆ ಯಜ್ಞದ ಹಿಂದೆ ಜ್ಞಾನದ ಸಹಕಾರವಿದೆ. ಆದ್ದರಿಂದ ಅದು ಜ್ಞಾನಯಜ್ಞವಾಗುತ್ತದೆ- ದ್ರವ್ಯಯಜ್ಞವಲ್ಲ. ಏಕೆಂದರೆ ಅರ್ಜುನ ಪರಂತಪ-'ಪರಮಾತ್ಮನನ್ನು ಸದಾ ಚಿಂತಿಸುವವನು'. ಇಲ್ಲಿ 'ಅವರು ನನ್ನ ಶತ್ರುಗಳು, ಅವರನ್ನು ನಿಗ್ರಹಿಸಿ ನಾನು ಅಧಿಕಾರ ಸಾಧಿಸಬೇಕು' ಎನ್ನುವ ಅನುಸಂಧಾನವಿಲ್ಲ. ಇದೊಂದು ಭಗವಂತನ ಆರಾಧನಾ ರೂಪವಾದ ಯಜ್ಞ. ಅನ್ಯಾಯದ ವಿರುದ್ಧ ಹೋರಾಟ ಅರ್ಜುನನ ಕರ್ತವ್ಯ, ಜಯಾಪಜಯಗಳು ಆ ಭಗವಂತನಿಗೆ ಬಿಟ್ಟಿದ್ದು. ಈ ಅನುಸಂಧಾನದಿಂದ ಯುದ್ಧ ಮಾಡಿದಾಗ ಅದು ಜ್ಞಾನಯಜ್ಞವಾಗುತ್ತದೆ. ಪರಂತಪ ಎನ್ನುವ ಈ ವಿಶೇಷಣ ಇಲ್ಲಿ ಕರ್ಮವನ್ನು ಜ್ಞಾನವಾಗಿ ಹೇಗೆ ಪರಿವರ್ತಿಸಬಹುದು ಎನ್ನುವುದನ್ನು ಸೂಚಿಸುತ್ತದೆ.
ಇದು ಏಕೆ ಜ್ಞಾನಮಯ ಎನ್ನುವುದನ್ನು ಶ್ರೀಕೃಷ್ಣ ವಿವರಿಸುತ್ತಾ ಹೇಳುತ್ತಾನೆ: "ಸರ್ವಮ್ ಕರ್ಮಾ ಅ[ಆ]ಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ" ಎಂದು. ಇಲ್ಲಿ 'ಸರ್ವಂ' ಮತ್ತು 'ಅಖಿಲಂ' ಎನ್ನುವ ಪದ ಪುನರುಕ್ತಿ ಇದ್ದಂತೆ ಕಾಣುತ್ತದೆ. ಆದರೆ ಇದರ ಹಿಂದೆ ವಿಶೇಷ ಅರ್ಥವಿದೆ. ಒಂದು ಮಂತ್ರದಲ್ಲಿ ಎಷ್ಟು ಬಗೆಯ ಪದಛೇದ, ಎಷ್ಟು ಬಗೆಯ ಅರ್ಥಾನುಸಂಧಾನ ಎನ್ನುವುದು ಮುಖ್ಯ. ಇಲ್ಲಿ "ಸರ್ವಂ ಕರ್ಮಾ[S]ಖಿಲಂ" ಎನ್ನುವುದನ್ನು ಎರಡು ಬಗೆಯಿಂದ ಪದಛೇದ ಮಾಡಬಹುದು. ಒಂದು- ‘ಸರ್ವ ಕರ್ಮ ಅಖಿಲಂ’ ಹಾಗೂ ಇನ್ನೊಂದು ‘ಸರ್ವ ಕರ್ಮ ಆಖಿಲಂ’. ಎಲ್ಲಾ ಪರಿಕರಗಳಿಂದ ಪರಿಪೂರ್ಣವಾದ ಸರ್ವಕರ್ಮವನ್ನು 'ಸರ್ವ ಕರ್ಮ ಅಖಿಲಂ ಎನ್ನುತ್ತಾರೆ.' ಅಂದರೆ ಪರಿಪೂರ್ಣವಾದ ಎಲ್ಲಾ ಕರ್ಮ. "ಒಂದು ಕರ್ಮವನ್ನು ಪೂರ್ಣವಾಗಿ ಮಾಡು" ಎನ್ನುತ್ತಾನೆ ಶ್ರೀಕೃಷ್ಣ. ಯಾವುದೇ ಕರ್ಮವನ್ನು ಜ್ಞಾನಪೂರ್ವಕವಾಗಿ ಮಾಡಿದಾಗ ಮಾತ್ರ ಅದು ಪೂರ್ಣವಾಗುತ್ತದೆ. ಕರ್ಮದ ಜೊತೆಗೆ ಜ್ಞಾನ ಬೇಕೇಬೇಕು. ಅದು ಜ್ಞಾನದ ಶ್ರೇಷ್ಠತೆ. ಜ್ಞಾನದಿಂದ ಕರ್ಮ ಮಾಡು; ಕರ್ಮ ಮಾಡಿ ಜ್ಞಾನಗಳಿಸು. ಆಗ ಅದು ಪರಿಪೂರ್ಣ. ಭಾಗವತದಲ್ಲಿ ಜ್ಞಾನವಿಲ್ಲದೇ ಮಾಡುವ ಯಜ್ಞವನ್ನು ಉಗ್ರವಾಗಿ ವಿರೋಧಿಸುತ್ತಾರೆ. ಅಲ್ಲಿ ಹೋಮದಲ್ಲಿ ಕೊಡುವ ಆಹುತಿಯನ್ನು ಏಕೆ ಕೊಡುತ್ತಿದ್ದೇವೆ ಎಂದು ತಿಳಿಯದೇ ಹೋಮ ಮಾಡುವವನು ‘ಬೆಂಕಿಗೆ ಮರುಳಾದವನು ಹಾಗೂ ಹೊಗೆ ತಿಂದು ಸಾಯುವವನು' ಎನ್ನುತ್ತಾರೆ. ಕರ್ಮದ ಹಿಂದಿನ ಭಗವಂತನ ಅರಿವು ಬಹಳ ಮುಖ್ಯ. ಇಲ್ಲದಿದ್ದರೆ ಅದು ತೂತು ಬಿದ್ದ ದೋಣಿಯಂತೆ. ಮಾಡಿದ ಕರ್ಮ ಸಫಲವಾಗುವುದು ಅದರ ಹಿಂದೆ ಅರಿವು ಇದ್ದಾಗ ಮಾತ್ರ.
ಇನ್ನೊಂದು ಅರ್ಥದಲ್ಲಿ ಜ್ಞಾನರಹಿತವಾದ ಕೇವಲಕರ್ಮ 'ಆ-ಖಿಲಂ'. ಇಲ್ಲಿ 'ಖಿಲಂ' ಅಂದರೆ ಚೂರು. ಜ್ಞಾನವಿಲ್ಲದ ಎಲ್ಲಾ ಕರ್ಮವನ್ನು ಒಂದುಗೂಡಿಸಿದರೂ ಅದು ಜ್ಞಾನದ ಮುಂದೆ ಒಂದು ಚಿಕ್ಕ ಚೂರು. ಜ್ಞಾನವಿಲ್ಲದ ಎಲ್ಲಾ ಕರ್ಮಗಳು ಸೇರಿದರೂ ಅದು ಜ್ಞಾನಪೂರ್ಣ ಕರ್ಮದ ಮುಂದೆ ಅತ್ಯಲ್ಪ. ನಮ್ಮ ಕರ್ಮ ಜ್ಞಾನಕ್ಕೋಸ್ಕರವಾಗಬೇಕೇ ಹೊರತು ಕರ್ಮಕ್ಕೋಸ್ಕರ ಕರ್ಮ ಮಾಡಬಾರದು. ಆದರೆ ಇಂದಿನ ದಿನಗಳಲ್ಲಿ ಜ್ಞಾನಕ್ಕೋಸ್ಕರ ಕರ್ಮ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ದುಃಖದಾಯಕ.
ಇಲ್ಲಿ ಶ್ರೀಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಪಾರ್ಥ ಎಂದರೆ ಪಾರವನ್ನು ಕಂಡವನು, ಜ್ಞಾನದ ಕಡಲಿನ ಆಚೆಯ ದಡವನ್ನು ಕಂಡವನು; ವೇದಾರ್ಥವನ್ನು ಪಾನ ಮಾಡಿದವನು. "ಮಹಾನ್ ಜ್ಞಾನಿಯಾದ ನೀನು ಅರಿತು ಮಾಡುವ ಈ ಕರ್ಮ ಕೇವಲ ಕರ್ಮವಲ್ಲ ಇದು ಜ್ಞಾನಯಜ್ಞ" ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇಲ್ಲಿ ನಾವು ಪುನಃ ನೆನಪಿಸಿಕೊಳ್ಳಬೇಕಾದ ವಿಷಯ ಎಂದರೆ ಮೂಲತಃ ಅರ್ಜುನ ಮಹಾನ್ ಜ್ಞಾನಿ. ಆದರೆ ಮಹಾನ್ ಜ್ಞಾನಿಗಳಿಗೂ ಕೂಡಾ ಕೆಲವೊಮ್ಮೆ ಗೊಂದಲವಾಗಿ ಎಲ್ಲವೂ ಮರೆತು ಹೋಗುತ್ತದೆ. ಅರ್ಜುನ ಇಲ್ಲಿ ಆ ಸ್ಥಿತಿಯಲ್ಲಿದ್ದಾನೆ. ಇದು ಕೇವಲ ತಾತ್ಕಾಲಿಕ ಪರದೆ, ಆ ಪರದೆಯನ್ನು ಶ್ರೀಕೃಷ್ಣ ಸರಿಸುತ್ತಿದ್ದಾನೆ.
ಜ್ಞಾನವಿಲ್ಲದ ಕರ್ಮದಿಂದ ಯಾವ ಉಪಯೋಗವೂ ಇಲ್ಲ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೆ ಈ ಜ್ಞಾನವನ್ನು ಗಳಿಸುವ ಪರಿ ಎಂತು? ಈ ಪ್ರಶ್ನೆಗೆ ಶ್ರೀಕೃಷ್ಣನ ಉತ್ತರ ಮುಂದಿನ ಶ್ಲೋಕದಲ್ಲಿದೆ.

ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ॥೩೪॥

ಯಜ್ ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ ।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾSತ್ಮನ್ಯಥೋ ಮಯಿ ॥೩೫॥
 
ತತ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯಂತಿ ತೇ ಜ್ಞಾನಮ್ ಜ್ಞಾನಿನಃ ತತ್ತ್ವದರ್ಶಿನಃ ||
ಯತ್ ಜ್ಞಾತ್ವಾ ನ ಪುನಃ ಮೋಹಮ್ ಏವಮ್ ಯಾಸ್ಯಸಿ ಪಾಂಡವ |
ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಅಥ ಉ ಮಯಿ -- ಪಾಂಡವ, ಯಾವುದನ್ನು ತಿಳಿದಾಗ ನೀನು ಮತ್ತೆ ಹೀಗೆ ಮೋಹಗೊಳ್ಳುವುದಿಲ್ಲವೋ; ಯಾವ ಮೋಹವಳಿದದ್ದರಿಂದ ಎಲ್ಲಾ ಜೀವಿಗಳನ್ನು ಅಂತರ್ಯಾಮಿಯಾದ [ಎಲ್ಲೆಲ್ಲೂ ಇರುವ] ನನ್ನಲ್ಲಿ ಕಾಣಬಲ್ಲೆಯೋ, ಅಂತಹ ತಿಳಿವನ್ನು ನಿಜ ಕಂಡು ತಿಳಿದವರು ನಿನಗೆ ತಿಳಿಹೇಳುತ್ತಾರೆ. ಕಾಲಿಗೆರಗಿ, ಪರಿಪರಿಯಿಂದ ಕೇಳಿ, ಸೇವೆಗೈದು ಅದನ್ನು ತಿಳಿದುಕೋ.

ಜ್ಞಾನವನ್ನು ಗಳಿಸಬೇಕಾದರೆ "ನೀನು ಜ್ಞಾನಿಗಳ ಬೆನ್ನುಹತ್ತಬೇಕು; ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆ ಎನ್ನುತ್ತಾನೆ ಕೃಷ್ಣ. ಜ್ಞಾನ ಎನ್ನುವುದು ಕೇವಲ ಪುಸ್ತಕವನ್ನು ಓದುವುದರಿಂದ ಬರುವುದಲ್ಲ. ಅದು ನಮಗೆ ಸಾಕ್ಷಾತ್ಕಾರವಾಗಬೇಕು. "Truth is an intuitional flash, it is not Intellectual". ಸತ್ಯ ಎನ್ನುವುದು ನಮಗೆ ಸ್ಪುರಣವಾಗಬೇಕು. ಎಲ್ಲಾ ವೇದ ಮಂತ್ರಗಳೂ ಋಷಿಗಳಿಗೆ ಅಂತರಂಗದಲ್ಲಿ ಸ್ಪೂರಣವಾಗಿರುವುದು(intuitional composition). ನ್ಯೂಟನ್ ಗೆ ಗುರುತ್ವಾಕರ್ಷಣ ಶಕ್ತಿಯ ವಿಚಾರ ಹೊಳೆದಂತೆ. ಈ ಕಾರಣಕ್ಕಾಗಿ ಮೊದಲು ನಾವು ಸತ್ಯಕ್ಕೆ ಶರಣಾಗಬೇಕು; ಸತ್ಯವನ್ನು ಕಂಡ ತತ್ವಜ್ಞಾನಿಗಳ ಬೆನ್ನುಹತ್ತಬೇಕು.
ಸಾಮಾನ್ಯವಾಗಿ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಜ್ಞಾನವನ್ನು ಯೋಗ್ಯರಲ್ಲದವರಿಗೆ ಎಂದೂ ಬೋಧಿಸುವುದಿಲ್ಲ. ಈ ಕಾರಣಕ್ಕಾಗಿ ಶ್ರೀಕೃಷ್ಣ ಹೇಳುತ್ತಾನೆ: "ತತ್ವದರ್ಶಿಗಳನ್ನು ಕಂಡರೆ ಬಿಡಬೇಡ, ಅವರ ಬೆನ್ನು ಹತ್ತು, ಅವರನ್ನು ಒಲಿಸಿಕೋ, ಅವರ ಮುಂದೆ ನೀನು ಯೋಗ್ಯ ಎಂದು ರುಜುವಾತುಪಡಿಸು. ನಿನ್ನ ಅನನ್ಯ ಬಯಕೆ ಅವರಿಗೆ ಮನವರಿಕೆಯಾಗುವಂತೆ ಮಾಡು, ಅವರಿಗೆ ಶರಣಾಗು" ಎಂದು. ಇಲ್ಲಿ 'ಪ್ರಣಿಪಾತ' ಅಂದರೆ ಎಂಟು ಅಂಗಗಳ ನಮಸ್ಕಾರ. ತಲೆ, ಎದೆ, ಕೈ, ಕಾಲು ಎಲ್ಲವನ್ನು ನೆಲಕ್ಕೆ ತಾಗಿಸಿ, ಭಕ್ತಿಯ ದೃಷ್ಟಿಯಿಂದ, ಸ್ತೋತ್ರ(ವಚನ) ಮುಖೇನ, ಮನಸ್ಸಿನಲ್ಲಿ ಅಪಾರ ಗೌರವವಿಟ್ಟು ಮಾಡುವ ನಮಸ್ಕಾರ-'ಅಷ್ಟಾಂಗ ನಮನ'. ಹೀಗೆ ಶರಣಾಗಿ "ಕೆದಕಿ ಕೆದಕಿ, ಪರಿಪರಿಯಾಗಿ ಕೇಳಿ ತಿಳಿದುಕೋ" ಎನ್ನುತ್ತಾನೆ ಕೃಷ್ಣ. 'ತತ್ವದರ್ಶಿಗಳ ಸೇವೆಮಾಡಿ ಅವರಿಂದ ಜ್ಞಾನವನ್ನು ಗಳಿಸು, ಅದರಿಂದ ಕರ್ಮ ಮಾಡು' ಎನ್ನುವುದು ಶ್ರೀಕೃಷ್ಣ ಅರ್ಜುನನ ಮೂಲಕ ನಮಗೆ ಕೊಟ್ಟ ಸಂದೇಶ.
ಒಮ್ಮೆ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆದರೆ ಮುಂದೆ ಮೋಹಕ್ಕೆ ಅವಕಾಶವಿಲ್ಲ. ಇಲ್ಲಿ ಅರ್ಜುನನನ್ನು ಕಾಡುತ್ತಿರುವುದು ಜ್ಞಾನವನ್ನು ಮುಚ್ಚಿರುವ ಮೋಹದ ಪರದೆ. ಅದಕ್ಕಾಗಿ ಕೃಷ್ಣ ಅರ್ಜುನನನ್ನು 'ಪಾಂಡವ' ಎಂದು ಸಂಬೋಧಿಸುತ್ತಾನೆ. ಇಲ್ಲಿ 'ಪಂಡಾ' ಎಂದರೆ ಜ್ಞಾನ (ಉದಾ:ಪಂಡಾ ಉಳ್ಳವ ಪಂಡಿತ), ಪಾಂಡವ ಎಂದರೆ ಜ್ಞಾನರಾಶಿಯನ್ನು ಪಡೆದವ. ಇನ್ನು ಪಾಂಡು ಎಂದರೆ 'ಬಿಳಿ ಬಣ್ಣ'. ಅದು ಸಾತ್ವಿಕತೆಯ ಸಂಕೇತ. 'ನೀನು ಸ್ವಯಂ ಜ್ಞಾನಿ ಹಾಗೂ ಸಾತ್ವಿಕ' ಎಂದು ಸೂಚಿಸಿ ಇಲ್ಲಿ ಈ ಸಂಬೋಧನೆ.
ಒಮ್ಮೆ ಸತ್ಯದ ಅರಿವು ಬಂದರೆ ಅದರಿಂದ ಮೋಹದ ಪಾಶ ಕಳಚಿಹೋಗುತ್ತದೆ. ಅದು ಪುನಃ ಬರುವ ಸಂಭವವಿಲ್ಲ. ಈ ಸ್ಥಿತಿಯಲ್ಲಿ ಸಮಸ್ತ ಜೀವಜಾತವೂ ಆತ್ಮನಲ್ಲಿ (ಭಗವಂತನಲ್ಲಿ) ಆಶ್ರಿತವಾಗಿದೆ, ಎಲ್ಲವುದಕ್ಕೂ ನಿಯಾಮಕಶಕ್ತಿ ಭಗವಂತ ಎನ್ನುವ ಪ್ರಜ್ಞೆ ಜಾಗೃತವಾಗುತ್ತದೆ. ಇದರಿಂದ ಎಲ್ಲಾ ಗೊಂದಲವೂ ಮರೆಯಾಗುತ್ತದೆ. ಸ್ವಾರ್ಥ, ದುಃಖ, ಅಸೂಯೆ, ಎಲ್ಲವೂ ಹೊರಟು ಹೋಗಿ ಸ್ಥಿತಪ್ರಜ್ಞೆ ಮೂಡುತ್ತದೆ. ಭಗವಂತ ಅಣು ಒಳಗೆ ಅಣುವಾಗಿ, ಎಲ್ಲರೊಳಗೂ ಬಿಂಬರೂಪನಾಗಿ ತುಂಬಿದ್ದಾನೆ ಹಾಗೂ ಆತ ಮಹತ್ತಿನಲ್ಲಿ ಮಹತ್ತಾಗಿರುವ ಸರ್ವಗತ. ಅವನ ಇಚ್ಛೆಯಂತೇ ಎಲ್ಲವೂ ನಡೆಯುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಭಗವಂತನಲ್ಲಿ ತನ್ನನ್ನು ತಾನು ಒಪ್ಪಿಸಿಕೊಂಡವನಿಗೆ ಜೀವನದಲ್ಲಿ ಎಂದೂ ಭಯವಿಲ್ಲ.
 
ಜ್ಞಾನದಿಂದ ಕರ್ಮ ಮಾಡಬೇಕು, ತತ್ವ ಜ್ಞಾನಿಗಳಿಂದ ಜ್ಞಾನ ಪಡೆಯಬೇಕು, ಅದರಿಂದ ಮೋಕ್ಷ ಸಾಧ್ಯ ಎನ್ನುವ ವಿಚಾರ ತಿಳಿಯಿತು. ಆದರೆ ಈ ವಿಷಯ ತಿಳಿಯುವ ಮೊದಲು ಸಾಕಷ್ಟು ಪಾಪ ಕರ್ಮಗಳನ್ನು ಮಾಡಿದ ಪಾಪಿಗಳ ಗತಿ ಏನು? ಇದಕ್ಕಾಗಿ ಭಯ ಪಡಬೇಕಾಗಿಲ್ಲ. ಈ ವಿಚಾರವಾಗಿ ಶ್ರೀಕೃಷ್ಣನ ಭರವಸೆಯನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.

ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ ।
ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ ॥೩೬॥

ಅಪಿ ಚೇತ್ ಅಸಿ ಪಾಪೇಭ್ಯಃ ಸರ್ವೇಭ್ಯಃ ಪಾಪ ಕೃತ್ ತಮಃ
ಸರ್ವಮ್ ಜ್ಞಾನ ಪ್ಲವೇನ ಏವ ವೃಜಿನಮ್ ಸಂತರಿಷ್ಯಸಿ-ನೀನು ಎಲ್ಲಾ ಪಾಪಿಗಳಿಗಿಂತಲೂ ಹಿರಿಯ ಪಾಪಿಯಾಗಿದ್ದರೂ ಸರಿಯೇ, ಎಲ್ಲಾ ಪಾತಕಗಳನ್ನೂ ತಿಳಿವಿನ ದೋಣಿಯಿಂದ ದಾಟಬಲ್ಲೆ.

"ನೀನು ನಿನ್ನ ಕಾಲದಲ್ಲಿನ ಅತಿದೊಡ್ಡ ಪಾಪಿಯಾಗಿದ್ದರೂ ಕೂಡಾ, ಒಮ್ಮೆ ನಿನಗೆ ಭಗವಂತನ ಅರಿವು ಮೂಡಿತೆಂದರೆ ನೀನು ಗೆದ್ದಂತೆ" ಎನ್ನುತ್ತಾನೆ ಶ್ರೀಕೃಷ್ಣ. ಏಕೆಂದರೆ ತಿಳುವಳಿಕೆ ಬಂದ ಮೇಲೆ ಜ್ಞಾನದ ಮಾರ್ಗದಲ್ಲಿ ಸಾಗಿದರೆ ಹಿಂದಿನ ಯಾವ ಪಾಪವೂ ನಿಲ್ಲುವುದಿಲ್ಲ. ಜ್ಞಾನವೆನ್ನುವುದು ಪಾಪದ ಕಡಲಿನಲ್ಲಿ ದೋಣಿಯಂತೆ. ಅದು ನಮ್ಮನ್ನು ದಡ ಸೇರಿಸಬಲ್ಲದು. ಪಾಪದ ಕಡಲನ್ನು ದಾಟಲು ಇರುವ ಒಂದೇ ಒಂದು ಸಾಧನ ಜ್ಞಾನ. ಇಂತಹ ದೊಡ್ಡ ಭರವಸೆಯನ್ನು ಶ್ರೀಕೃಷ್ಣ ಕೊಟ್ಟಿದ್ದಾನೆ. ಆದ್ದರಿಂದ ನಾವೆಲ್ಲರೂ ಇಂದೇ ಈ ಕ್ಷಣದಿಂದ ಜ್ಞಾನ ಮಾರ್ಗದಲ್ಲಿ ಸಾಗುವ ಸಂಕಲ್ಪ ತೊಟ್ಟು ಮುಂದುವರಿಯೋಣ- ಏಕೆಂದರೆ ನಾಳೆ ಎಂದರೆ ಆ ನಾಳೆ ನಮ್ಮ ಪಾಲಿಗೆ ಬಾರದೇ ಇರಬಹುದು! Yesterday was history, tomorrow is a mystery, today is God's gift, that's why we call it 'the present' .

ಜ್ಞಾನ ಮಾರ್ಗವನ್ನು ಹಿಡಿದ ಒಬ್ಬ ಪಾಪಿಯ ಪಾಪಕರ್ಮವೇನಾಗುತ್ತದೆ ಎನ್ನುವುದಕ್ಕೆ ಮುಂದಿನ ಶ್ಲೋಕದಲ್ಲಿ ವಿವರಣೆಯಿದೆ.

ಯಥೈಧಾಂಸಿ ಸಮಿದ್ಧೋSಗ್ನಿರ್ಭಸ್ಮಸಾತ್ ಕುರುತೇ ಅರ್ಜುನ ।
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ ॥೩೭॥

ಯಥಾ ಏಧಾಂಸಿ ಸಮಿದ್ಧಃ ಅಗ್ನಿಃ ಭಸ್ಮ ಸಾತ್ ಕುರುತೇ ಅರ್ಜುನ ।
ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮ ಸಾತ್ ಕುರುತೇ ತಥಾ- ಅರ್ಜನ, ಉರಿಯುವ ಬೆಂಕಿ ಉರುವಲನ್ನುಸುಟ್ಟುಬಿಡುವ ಹಾಗೆ ಅರಿವಿನ ಬೆಂಕಿ ಎಲ್ಲಾ ಕರ್ಮಗಳನ್ನೂ ಸುಟ್ಟುಬಿಡುತ್ತದೆ.

ಜ್ಞಾನ ಎನ್ನುವುದು ಸದಾ ಪ್ರಜ್ವಲಿಸುವ ಬೆಂಕಿ. ಅದಕ್ಕಿಂತ ಹೆಚ್ಚು ಶಕ್ತಿ ಶಾಲಿಯಾದ ಬೆಂಕಿ ಇನ್ನೊಂದಿಲ್ಲ. ಹೇಗೆ ಉರಿಯುವ ಬೆಂಕಿ ಕಟ್ಟಿಗೆಯನ್ನು ಸುಟ್ಟುಬಿಡುತ್ತದೋ, ಹಾಗೇ ಜ್ಞಾನದ ಬೆಂಕಿ ಎಲ್ಲಾ ಪಾಪ ಕರ್ಮಗಳನ್ನೂ ಸುಟ್ಟುಬಿಡುತ್ತದೆ. ಭಾಗವತದಲ್ಲಿ ಹೇಳುವಂತೆ ಆಧ್ಯಾತ್ಮಿಕವಾಗಿ ಬೆಂಕಿ ಸತ್ವ ಗುಣದ ಪ್ರತೀಕ. ಏಕೆಂದರೆ ಅದು ಬೆಳಕು ಕೊಡುವ ಹಾಗೂ ಸದಾ ಊರ್ಧ್ವ ಮುಖವಾಗಿರುವ ಶಕ್ತಿ. ಅದೇ ರೀತಿ ಕಟ್ಟಿಗೆ ಸದಾ ಕೆಳಕ್ಕೆಳೆಯುವ ತಮೋಗುಣದ ಪ್ರತೀಕ. ಬೆಂಕಿ ಕಟ್ಟಿಗೆಯನ್ನು ಸುಟ್ಟಂತೆ ಒಬ್ಬ ಸಾಧಕನಲ್ಲಿರುವ ಜ್ಞಾನ ತಮಸ್ಸನ್ನು ಸುಟ್ಟುಬಿಡುತ್ತದೆ. ಇಲ್ಲಿ ಶ್ರೀಕೃಷ್ಣ ‘ಅರ್ಜುನ' ಎಂದು ಸಂಬೋಧಿಸಿದ್ದಾನೆ. ಅರ್ಜುನ ಎಂದರೆ ‘ಅರ್ಜನ’ ಮಾಡಿದವ, ಜ್ಞಾನವೆಂಬ ಬೆಂಕಿ ಉಳ್ಳವ. ಈ ಸಂಬೋಧನೆಯಿಂದ ಶ್ರೀಕೃಷ್ಣ ಅರ್ಜುನನ ಜ್ಞಾನಕ್ಕೆ ಆವರಿಸಿರುವ ಮೋಹದ ಪರದೆಯನ್ನು ಸರಿಸುತ್ತಿದ್ದಾನೆ.

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾSತ್ಮನಿ ವಿಂದತಿ ॥೩೮॥

ನ ಹಿ ಜ್ಞಾನೇನ ಸದೃಶಮ್ ಪವಿತ್ರಮ್ ಇಹ ವಿದ್ಯತೇ         
ತತ್ ಸ್ವಯಮ್ ಯೋಗ ಸಂಸಿದ್ಧಃ ಕಾಲೇನ ಆತ್ಮನಿ ವಿಂದತಿ- ತಿಳಿವಿಗೆ ಸಾಟಿಯಾದ ಪಾವನವಾದ ವಸ್ತು ಈ ಪ್ರಪಂಚದಲ್ಲಿ ಇನ್ನೊಂದಿಲ್ಲ. ಸಾಧನೆಯಿಂದ ಪಳಗಿದವನು ತಕ್ಕ ಕಾಲದಲ್ಲಿ ಅದನ್ನು ತಾನೇ ತನ್ನಲ್ಲಿ ಪಡೆಯುತ್ತಾನೆ.
 ಜ್ಞಾನ ಎನ್ನುವುದು ಮಹಾಪವಿತ್ರ. ಅದಕ್ಕೆ ಸಾಟಿಯಾದ ಇನ್ನೊಂದು ವಸ್ತು ಈ ಪ್ರಪಂಚದಲ್ಲಿಲ್ಲ. ಏಕೆಂದರೆ ಜ್ಞಾನವೆಂದರೆ ಭಗವಂತ. ಆದ್ದರಿಂದ "ಜ್ಞಾನ ಮಾರ್ಗವನ್ನು ಹಿಡಿ, ಕಾಲ ಪರಿಪಕ್ವವಾದಾಗ ನೀನು ಸಿದ್ಧಿಯನ್ನು ಪಡೆದೇ ಪಡೆಯುತ್ತೀ" ಎನ್ನುವುದು ಶ್ರೀಕೃಷ್ಣನ ಭರವಸೆ. ಕೆಲವೊಮ್ಮೆ ಸಾಧನೆಯ ಪಥದಲ್ಲಿ ಸಿದ್ಧಿಯನ್ನು ಪಡೆಯಲು ಕೆಲವು ಜನ್ಮಗಳೇ ಬೇಕಾಗಬಹುದು. ಆದರೆ ಭಗವಂತನ ಭರವಸೆಯನ್ನು ನಂಬಿ ಆತ್ಮವಿಶ್ವಾಸದಿಂದ ಮುನ್ನೆಡೆದವನು ಸಿದ್ಧಿಯನ್ನು ಪಡೆಯುತ್ತಾನೆ.

ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ ।
ಜ್ಞಾನಂ ಲಬ್ಧ್ವಾ ಪರಾಂ ಶಾಂತಿಮಚಿರೇಣಾಧಿಗಚ್ಛತಿ ॥೩೯॥

ಶ್ರದ್ಧಾವಾನ್ ಲಭತೇ ಜ್ಞಾನಮ್ ತತ್ ಪರಃ ಸಂಯತ ಇಂದ್ರಿಯಃ ।
ಜ್ಞಾನಮ್ ಲಬ್ಧ್ವಾ ಪರಾಮ್ ಶಾಂತಿಮ ಆಚಿರೇಣ ಅಧಿಗಚ್ಛತಿ-- ಇಂದ್ರಿಯಗಳನ್ನು ಹದ್ದಿನಲ್ಲಿಟ್ಟು, ಶ್ರದ್ಧೆಯಿಂದ ನನ್ನನ್ನೇ ಪರದೈವವೆಂದು ನಂಬಿದವನು ತಿಳಿವನ್ನುಗಳಿಸಿ ಶೀಘ್ರವಾಗಿ ಸಂತಸದ ಸೆಲೆಯಾದ ಮುಕ್ತಿಯನ್ನು ಪಡೆಯುತ್ತಾನೆ.

ನಮ್ಮಲ್ಲಿ ಅರಿವು ಮೂಡಬೇಕೆಂದರೆ ಬರಿಯ ಅಧ್ಯಯನ ಸಾಲದು. ಒಂದು ವಿಷಯ ನಮಗೆ ಮನವರಿಕೆಯಾಗಬೇಕಾದರೆ ಮೊದಲು ನಮಗೆ ಶ್ರದ್ಧೆ ಬೇಕು. ಇಲ್ಲಿ ಸಮರ್ಪಣಾ ಭಾವನೆ ಅತಿಮುಖ್ಯ. ನಾನು ತಿಳಿದದ್ದೇ ದೊಡ್ಡದು, ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ ಅನ್ನುವ ಅಹಂಕಾರವನ್ನು ಮೊದಲು ಬಿಡಬೇಕು. ಯಾವುದು ನನಗೆ ತಿಳಿದಿಲ್ಲವೋ ಅದೂ ಸತ್ಯವಾಗಿರಲು ಸಾಧ್ಯ ಎನ್ನುವ ಶ್ರದ್ಧೆ ಬೇಕು. ಪ್ರಪಂಚದ ಸತ್ಯ ನಮ್ಮ ನಂಬಿಕೆಯ ಮೇಲೆ ನಿಂತಿಲ್ಲ. ಈ ಪ್ರಪಂಚದಲ್ಲಿ ನಮಗೆ ತಿಳಿದಿರುವುದು ಅತೀ ಚಿಕ್ಕ ಅಂಶ. ನಮಗೆ ಗೊತ್ತಿಲ್ಲದೇ ಇರುವ ಸತ್ಯವೂ ಇದೆ ಎಂದು ತಿಳಿಯುವುದೇ ಶ್ರದ್ಧೆ. ನಮ್ಮ ಬದುಕಿನ ಗುರಿ ಜ್ಞಾನ ಮತ್ತು ಸತ್ಯದ ತಿಳುವಳಿಕೆಯಾಗಬೇಕು. ಜ್ಞಾನದ ತೃಷೆ ಜೊತೆಗೆ ಇಂದ್ರಿಯಗಳ ಚಾಪಲ್ಯಕ್ಕೆ ಹಿಡಿತವಿರಬೇಕು. ಹೀಗಿದ್ದಾಗ ಅದರಿಂದ ಮಾನಸ ಸಾಕ್ಷಾತ್ಕಾರ, ಆತ್ಮಸಾಕ್ಷಾತ್ಕಾರ-ಕೊನೆಗೆ ಪರಮಾತ್ಮನ ಸಾಕ್ಷಾತ್ಕಾರ. ಈ ನಡೆಯಿಂದ ಅಪರೋಕ್ಷ ಜ್ಞಾನ ಸಿದ್ಧಿಯಾಗುತ್ತದೆ ಮತ್ತು ಇದರಿಂದ ಸದಾ ಜ್ಞಾನಾನಂದಪೂರ್ಣನಾದ ಭಗವಂತನನ್ನು (ಮೋಕ್ಷವನ್ನು) ಪಡೆಯಲು ಸಾಧ್ಯ.

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ ।
ನಾಯಂ ಲೋಕೋSಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ॥೪೦॥

ಅಜ್ಞಃ ಚ ಅಶ್ರದ್ದಧಾನಃ ಚ ಸಂಶಯ ಆತ್ಮಾ ವಿನಶ್ಯತಿ
ನ ಅಯಮ್ ಲೋಕಃ ಅಸ್ತಿ ನ ಪರಃ ನ ಸುಖಮ್ ಸಂಶಯ ಆತ್ಮನಃ -- ಅರಿವಿರದ, ನಂಬಿಕೆ ಕಳೆದುಕೊಂಡ ಇಬ್ಬಂದಿ ವಿನಾಶದತ್ತ ಸಾಗುತ್ತಾನೆ. ಇಬ್ಬಂದಿಗೆ ಇಹವಿಲ್ಲ; ಪರವಿಲ್ಲ; ನೆಮ್ಮದಿಯೂ ಇಲ್ಲ.
ಜ್ಞಾನವಿಲ್ಲದ, ಶ್ರದ್ಧೆ ಇಲ್ಲದ ಅಜ್ಞಾನಿಗಳು ನಿರಂತರ ಸಂಶಯದಲ್ಲೇ ಬದುಕುತ್ತಾರೆ. ಜ್ಞಾನ ಮತ್ತು ಶ್ರದ್ಧೆ ಇಲ್ಲದಾದಾಗ ಅಲ್ಲಿ ಸಂಶಯ ಬೆಳೆಯಲಾರಂಭಿಸುತ್ತದೆ. ಆ ಸಂಶಯ ಮನಸ್ಸನ್ನು ಆಕ್ರಮಿಸಿ ನಂತರ ಚಿತ್ತವನ್ನು ತಲುಪುತ್ತದೆ. ಬುದ್ಧಿಗೆ ಬಂದ ಸಂಶಯಕ್ಕೆ ಪರಿಹಾರವಿಲ್ಲ. ಅದು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಇದರಿಂದ ಅಂತಹವರಿಗೆ ಇಹವಿಲ್ಲ, ಪರವಿಲ್ಲ, ಎಂದೆಂದೂ ನೆಮ್ಮದಿಯೂ ಇಲ್ಲ. 

ಯೋಗಸಂನ್ಯಸ್ತಕರ್ಮಾಣಂ ಜ್ಞಾನಸಂಛಿನ್ನಸಂಶಯಮ್ ।
ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ ॥೪೧॥

ಯೋಗ ಸಂನ್ಯಸ್ತ ಕರ್ಮಾಣಮ್ ಜ್ಞಾನ ಸಂಛಿನ್ನ ಸಂಶಯಮ್
ಆತ್ಮವಂತಮ್ ನ ಕರ್ಮಾಣಿ ನಿಬಧ್ನಂತಿ ಧನಂಜಯ- ಧನಂಜಯಾ, ಸಾಧನೆಯಿಂದ ಕರ್ಮಫಲದ ನಂಟು ತೊರೆದ, ಅರಿವಿನಿಂದ ಶಂಕೆಗಳನ್ನು ಕಳೆದುಕೊಂಡ ಭಗವದ್ ಭಕ್ತನನ್ನು ಕರ್ಮಗಳು ಕಟ್ಟಿ ಹಾಕುವುದಿಲ್ಲ.

ಜೀವನದಲ್ಲಿ ಕರ್ಮ ಮಾಡು, ಕರ್ಮ ಮಾಡುತ್ತಾ ಕರ್ಮ ಸಂನ್ಯಾಸ ಮಾಡು ಎನ್ನುತ್ತಾನೆ ಶ್ರೀಕೃಷ್ಣ. ಇಲ್ಲಿ ಕರ್ಮ ಸಂನ್ಯಾಸ ಅಂದರೆ ಕರ್ಮ ತ್ಯಾಗವಲ್ಲ. 'ಈ ಕರ್ಮ ಭಗವಂತನಿಗೆ ಸೇರಿದ್ದು ಎಂದು ಭಗವಂತನಲ್ಲಿ ಕರ್ಮವನ್ನು ಅರ್ಪಿಸುವುದು'. (ಕರ್ಮಸಂನ್ಯಾಸದ ಬಗ್ಗೆ ಮುಂದಿನ ಅಧ್ಯಾಯದಲ್ಲಿ ಹೆಚ್ಚಿನ ವಿವರಣೆಯನ್ನು ಕಾಣಬಹುದು). ಕರ್ಮಫಲದ ಬಗ್ಗೆ ಆಸೆ ಆಕಾಂಕ್ಷೆಗಳನ್ನು ಬಿಟ್ಟು, ಎಲ್ಲವನ್ನೂ ಸಮದೃಷ್ಟಿಯಿಂದ ಕಾಣುತ್ತಾ, ನಿರ್ವಿಕಾರನಾಗಿ ನಿರಂತರ ಕರ್ಮ ಮಾಡುವುದು ಕರ್ಮಸಂನ್ಯಾಸ. ಕರ್ಮವನ್ನು ಭಗವಂತನಲ್ಲಿ ಅರ್ಪಿಸಿ, ಜ್ಞಾನದಿಂದ ಸಂಶಯವನ್ನು ಪರಿಹರಿಸಿಕೊಂಡು, ವಿವೇಕಿಯಾಗಿ ಚಿತ್ತವನ್ನು ಜಾಗೃತಿಗೊಳಿಸಿ, ಆತ್ಮವಂತನಾಗಿ ಬದುಕುವುದನ್ನು ಕಲಿತಾಗ ಯಾವ ಕರ್ಮವೂ ಎಂದೂ ನಮಗೆ ಬಂಧಕವಾಗುವುದಿಲ್ಲ. "ಯುದ್ಧದಲ್ಲಿ ಶತ್ರುಗಳನ್ನು ಗೆದ್ದು ಧನವನ್ನು ಗೆದ್ದ ನೀನು, ಜ್ಞಾನಧನವನ್ನು ಗೆದ್ದ ಧನಂಜಯ, ನಿನ್ನನ್ನು ಕರ್ಮ ಬಂಧಿಸದು" ಎನ್ನುತ್ತಾನೆ ಶ್ರೀಕೃಷ್ಣ.

ತಸ್ಮಾದಜ್ಞಾನಸಂಭೂತಂ ಹೃತ್ ಸ್ಥಂ ಜ್ಞಾನಾಸಿನಾSSತ್ಮನಃ ।
ಛಿತ್ವೈನಂ ಸಂಶಯಂ ಯೋಗಮಾತಿಷ್ಠೋತ್ತಿಷ್ಠ ಭಾರತ ॥೪೨॥

ತಸ್ಮಾತ್ ಅಜ್ಞಾನ ಸಂಭೂತಮ್ ಹೃತ್ ಸ್ಥಮ್ ಜ್ಞಾನ ಅಸಿನಾ ಆತ್ಮನಃ ।
ಛಿತ್ವೈನಮ್ ಸಂಶಯಮ್ ಯೋಗಮ್ ಆತಿಷ್ಠ ಉತ್ತಿಷ್ಠ ಭಾರತ-ಆದ್ದರಿಂದ, ಓ ಭಾರತ, ಅಜ್ಞಾನದಿಂದ ಹುಟ್ಟಿ ಬಗೆಯೊಳಹೊಕ್ಕು ನಿಂತ ನಿನ್ನ ಈ ಸಂದೇಹವನ್ನು ತಿಳಿವಿನ ಕತ್ತಿಯಿಂದ ಕತ್ತರಿಸಿ ಜ್ಞಾನದ ದಾರಿಯಲ್ಲಿ ನಡೆ; ಎದ್ದು ನಿಲ್ಲು.

"ಆದ್ದರಿಂದ ಎದ್ದು ನಿಲ್ಲು, ಭರತ ಚಕ್ರವರ್ತಿಯಂತಹ ಮಹಾ ಪುರುಷರು ಹುಟ್ಟಿ ಬಂದ ವಂಶದವನಾದ ನೀನು ಜ್ಞಾನ ಸ್ವರೂಪನಾದ ಭಗವಂತನ ಭಕ್ತಿಯಲ್ಲಿ ನಿರತನಾದ ಜ್ಞಾನಿ(ಭಾರತ); ನಿನ್ನ ಮನಸ್ಸಿನಲ್ಲಿ ಕುಳಿತಿರುವ ಸಂಶಯವನ್ನು ಭಗವಂತನೆನ್ನುವ ಜ್ಞಾನ ಕತ್ತಿಯಿಂದ ಕಡಿದು ಹಾಕು. ಅನ್ಯಾಯದ ವಿರುದ್ಧ ಹೋರಾಟ ಭಗವಂತನ ಪೂಜೆ ಎನ್ನುವ ಧೀಕ್ಷೆ ತೊಟ್ಟು, ಸತ್ಯದ, ಪ್ರಾಮಾಣಿಕತೆಯ ಬದುಕನ್ನು ಬದುಕುವುದಕ್ಕೋಸ್ಕರ ಪುಣ್ಯದ ಸಾಧನೆಯಲ್ಲಿ ತೊಡಗು" ಎನ್ನುತ್ತಾನೆ ಶ್ರೀಕೃಷ್ಣ.

ಇತಿ ಚತುರ್ಥೋSಧ್ಯಾಯಃ
ನಾಲ್ಕನೆಯ ಅಧ್ಯಾಯ ಮುಗಿಯಿತು.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post