ಮಂಕುತಿಮ್ಮನ ಕಗ್ಗ | Mankuthimmana Kaggaglu 945
ಮಂಕುತಿಮ್ಮನ ಕಗ್ಗ | Mankuthimmana Kagga 651-700
651
ಮೌನದಿಂದಂಬಲಿಯನುಂಡು ತಣಿಯುವ ಮಾನಿ |
ಶ್ವಾನನುಣುವೆಂಜಲೋಗರಕೆ ಕರುಬುವನೆ? ||
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ |
ಮಾಣು ನೀಂ ತಲ್ಲಣವ - ಮಂಕುತಿಮ್ಮ ||
652
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ನುಗಂಡೊಲವು ||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದದಾತ್ಮವನೆ - ಮಂಕುತಿಮ್ಮ ||
653
ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೊ |
ಕೊನೆಗೆ ಕಾಡೊಳೊ ಮಸಾಣದೊಳೊ ಮತ್ತೆಲ್ಲೋ ||
ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು |
ನೆನೆಯದಾತ್ಮದ ಸುಖವ - ಮಂಕುತಿಮ್ಮ ||
654
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||
655
ಅಕ್ಕಿಯೊಳಗನ್ನವನು ಮೊದಲಾರು ಕಂಡವನು? |
ಅಕ್ಕರದ ಬರಹಕ್ಕೆ ಮೊದಲಿಗನದಾರು? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ |
ದಕ್ಕುವುದೆ ನಿನಗೆ ಜಸ? - ಮಂಕುತಿಮ್ಮ ||
656
ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು |
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ ||
657
ಸಿರಿಮಾತ್ರಕೇನಲ್ಲ, ಪೆಣ್ಮಾತ್ರಕೇನಲ್ಲ |
ಕರುಬಿ ಜನ ಕೆಸರುದಾರಿಯಲಿ ಸಾಗುವುದು ||
ಬಿರುದ ಗಳಿಸಲಿಕೆಸಪ, ಹೆಸರ ಪಸರಿಸಲೆಸಪ |
ದುರಿತಗಳ್ಗೆಣೆಯುಂಟೆ? - ಮಂಕುತಿಮ್ಮ ||
658
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ |
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ ||
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿ- |
ನ್ನುದ್ಧಾರವೆಷ್ಟಾಯ್ತೊ? - ಮಂಕುತಿಮ್ಮ ||
659
ಎಂದೊ ನಿನಗೊಂದುದಿನ ಮೂಗು ಮುರಿಯುವುದು ದಿಟ |
ವೃಂದಾರಕರು ಮತ್ಸರಿಸರೆ ಗರ್ವಿತರ? ||
ಸಂದರ್ಭಗಳನದಕೆ ಜೋಡಿಪನು ವಿಧಿರಾಯ |
ಅಂದಿಕೊಳ್ಳನೆ ನಿನ್ನ? - ಮಂಕುತಿಮ್ಮ ||
660
ಗರುವಭಂಗವನಾಗಿಸಿದನು ಗರುಡಂಗೆ ಹರಿ |
ಮುರಿಯಿಸಿದನಂತೆ ಫಲುಗುಣನ ಹೆಮ್ಮೆಯನು ||
ಕರುಬುವಂ ವಿಧಿ ಸೈಸನಾರೊಳಂ ದರ್ಪವನು |
ಶಿರವ ಬಾಗಿಹುದೆ ಸರಿ - ಮಂಕುತಿಮ್ಮ ||
661
ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ |
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ||
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ |
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ ||
662
ಖದ್ಯೋತನಂತೆ ಬಿಡುಗೊಳದೆ ಧರ್ಮವ ಚರಿಸು |
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು ||
ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರೆ |
ಸದ್ದುಮಾಡದೆ ಮುಡುಗು - ಮಂಕುತಿಮ್ಮ ||
663
ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ |
ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು ||
ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು |
ಮರೆಯಬೇಡೊಳಬೆಲೆಯ - ಮಂಕುತಿಮ್ಮ ||
664
ನರನೊಂದುವೆವಹಾರಕೆರಡಾಯವೆಯ ಲೆಕ್ಕ |
ಹೊರಗಣನುಭೋಗಕೊಂದೊಳನೀತಿಗೊಂದು ||
ವರಮಾನ ದೇಹಕಾದೊಡೆ ಮಾನಸಕದೇನು? |
ಪರಿಕಿಸಾ ಲೆಕ್ಕವನು - ಮಂಕುತಿಮ್ಮ ||
665
ತನುವ ತಣಿಸುವ ತುತ್ತು ಮನಕೆ ನಂಜಾದೀತು |
ಮನಮೋಹ ಜೀವಕ್ಕೆ ಗಾಳವಾದೀತು ||
ಅನುಭವದ ಪರಿಣಾಮವೊಂದರಿಂದೊಂದಕ್ಕೆ |
ಗಣಿಸಾತ್ಮಲಾಭವನು - ಮಂಕುತಿಮ್ಮ ||
666
ನೂರಾರು ಸರಕುಗಳು ಜೀವಿತದ ಸಂತೆಯಲಿ |
ಊರಿನವು, ಕೇರಿಯವು, ಮನೆಯಾತ್ಮವದವು ||
ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ, ಬೇರೆ ಬೆಲೆ |
ತಾರತಮ್ಯವೆ ತತ್ತ್ವ - ಮಂಕುತಿಮ್ಮ ||
667
ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು |
ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ||
ತನುವಿಗುಪಕೃತಿಗೆಯ್ವ ಭರದಿ ನೀನಾತುಮದ |
ಅನುನಯವ ಕೆಡಿಸದಿರು - ಮಂಕುತಿಮ್ಮ ||
668
ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ! |
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ||
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು |
ಕಡಿದಲ್ಲವರ್ಗೆ ಬಾಳ್ - ಮಂಕುತಿಮ್ಮ ||
669
ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ |
ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ||
ಈಗಲೋ ಆಗಲೋ ಎಂದೊ ಮುಗಿವುಂಟೆಂಬ |
ಭಾಗ್ಯವನು ನೆನೆದು ನಲಿ - ಮಂಕುತಿಮ್ಮ ||
670
ಬರುವೆಲ್ಲ ಬೇನೆಗಂ ಮದ್ದನಾರಿರಿಸಿಹರು? |
ನರರ ಕೀಳ್ತನಕೆಲ್ಲ ಪರಿಹಾರವೆಂತು? ||
ಕಿರಿದು ಪಲ್ಲನು ತಾಳಿಕೊಳಲೆಬೇಕಷ್ಟಿಷ್ಟು |
ಧರೆಯಂತರುಷ್ಣವನು - ಮಂಕುತಿಮ್ಮ ||
671
ತಿರಿದನ್ನವುಂಬಂಗೆ ಹುರುಡೇನು, ಹಟವೇನು |
ತಿರುಪೆಯಿಡುವರು ಕುಪಿಸಿ ಬಿರುನುಡಿಯ ನುಡಿಯೆ ||
ದುರದುರನೆ ನೋಡಿ ನೀನೆದುರುನುಡಿ ನುಡಿಯುವುದೆ? |
ಗರುವವೇತಕೆ ನಿನಗೆ? - ಮಂಕುತಿಮ್ಮ ||
672
ಯಾತ್ರಿಕರು ನಾವು, ದಿವ್ಯಕ್ಷೇತ್ರವೀ ಲೋಕ |
ಸತ್ರದಲಿ ನೇಮದಿಂದಿರಲಿಕೆಡೆಯುಂಟು ||
ರಾತ್ರಿ ಮೂರಾಯ್ತು ಹೊರಡೆನೆ ತೆರಳಿದೊಡೆ, ಪಾರು- |
ಪತ್ಯದವ ಮೆಚ್ಚುವನು - ಮಂಕುತಿಮ್ಮ ||
673
ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು |
ತಿಂದು ನಿನ್ನನ್ನಋಣ ತೀರುತಲೆ ಪಯಣ ||
ಹಿಂದಾಗದೊಂದು ಚಣ, ಮುಂದಕುಂ ಕಾದಿರದು |
ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ||
674
ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ |
ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು ||
ಹುಟ್ಟಿದವರೆಲ್ಲ ಸಾಯದೆ ನಿಲ್ಲೆ, ಹೊಸತಾಗಿ |
ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ ||
675
ಅಪರಿಮಿತವೇನಲ್ಲ ಜೀವನಕೆ ಲಭ್ಯ ಸುಖ |
ಚಪಲದಿಂ ಕಣ್ಣನತ್ತಿತ್ತಲಲಸುತಿರೆ ||
ಸ್ವಪರಿಸ್ಥಿತಿಯ ಧರ್ಮ ನಷ್ಟವಹುದೊಂದೆ ಫಲ |
ವಿಫಲ ವಿಪರೀತಾಶೆ - ಮಂಕುತಿಮ್ಮ ||
676
ಸ್ವಾರಸ್ಯವಮಿತಮಾರಿಗುಮಿರದು ಜೀವನದಿ |
ಪಾರದಿರ್ಕೆಯ ನೆನೆದು ನಡೆಯಲದು ಸಫಲ ||
ಸಾರಂಗಳ್ ಎಲ್ಲ ಪಣ್ಗಳವುಮ್ ಒಂದರೊಳಿರವು |
ಆರೋಗಿಸಿರುವುದನು - ಮಂಕುತಿಮ್ಮ ||
677
ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು |
ಹೊಟ್ಟೆ ಜೀರ್ಣಿಸುವಷ್ಟೆ; ಮಿಕ್ಕುದೆಲ್ಲ ಕಸ ||
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು? |
ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ ||
678
ಧನ್ಯತಮವಾ ಘಳಿಗೆ, ಪುಣ್ಯತಮವಾ ಘಳಿಗೆ |
ನಿನ್ನ ಮಮತೆಯ ನೂಲ ವಿಧಿಯೆ ಪರಿದಂದು ||
ಉನ್ನತಿಯಿನಾತ್ಮವನು ತಡೆದಿಡುವ ಪಾಶಗಳು |
ಛಿನ್ನವಾದಂದೆ ಸೊಗ - ಮಂಕುತಿಮ್ಮ ||
679
ಶಿಶುಗಳವಲಕ್ಕಿಬೆಲ್ಲದ ಸಂಭ್ರಮವ ನೋಡಿ |
ಹಸಿವನೊಂದುವನೆ ಹಿರಿಯನು? ನಲಿಯದಿಹನೆ? ||
ವಿಷಯಸಂಸಕ್ತಲೋಕವನ್ ಅನಾಸಕ್ತಿಯಿಂ- |
ದೊಸೆದುನೋಳ್ಪನು ಜಾಣ - ಮಂಕುತಿಮ್ಮ ||
680
ಉಂಡಾತನುಣುತಿರುವರನು ಕಾಣ್ಬ ನಲವಿಂದ |
ಪಂಡಿತನು ವಿದ್ಯಾರ್ಥಿಗಳಿಗೊರೆವ ನಯದಿಂ ||
ಕಂಡು ಲೋಕವನು ಸಂತೈಸುತಿರುವಂ ಜ್ಞಾನಿ |
ಕಂಡೆಲ್ಲರೊಳು ತನ್ನ - ಮಂಕುತಿಮ್ಮ ||
681
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? |
ಸಂದರ್ಭ ಬರಲಿ, ಬಂದಾಗಳಾ ಚಿಂತೆ ||
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು |
ಇಂದಿಗಿಂದಿನ ಬದುಕು - ಮಂಕುತಿಮ್ಮ ||
682
ದಿವಸದಿಂ ದಿವಸಕ್ಕೆ, ನಿಮಿಷದಿಂ ನಿಮಿಷಕ್ಕೆ |
ಭವಿಷಿಯವ ಚಿಂತಿಸದೆ ಬದುಕ ನೂಕುತಿರು ||
ವಿವರಗಳ ಜೋಡಿಸುವ ಯಜಮಾನ ಬೇರಿಹನು |
ಸವೆಸು ನೀಂ ಜನುಮವನು - ಮಂಕುತಿಮ್ಮ ||
683
ರವಿ ನಿಲದೆ ಸುತ್ತುತಿರೆ ಕೊರಗು ಕಳವಳವೇಕೊ? |
ಸವೆಯಿಸುತಲೆಲ್ಲವನು ಕಡೆಗೊಯ್ವನವನು ||
ಕವಳಿಸುವುದೆಲ್ಲವನು ಮರೆವು; ಬಾಳೊಳ್ ಅದೊಂದು |
ಶಿವಕೃಪೆಯ ಲಕ್ಷಣವೊ - ಮಂಕುತಿಮ್ಮ ||
684
ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ |
ಅವನ ಮಗ ಜವನ್ ಅದರ ಲೆಕ್ಕವಿರಿಸುವನು ||
ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ |
ಸವೆಸುವರು ತನುಘಟವ - ಮಂಕುತಿಮ್ಮ ||
685
ಅಂತೊ ಇಂತೋ ಎಂತೊ ಜೀವಕಥೆ ಮುಗಿಯುವುದು |
ಅಂದೊ ಇಂದೋ ಎಂದೊ ಜನುಮ ಕಳೆಯುವುದು ||
ಒಂದೆ ಮರೆವಿನ ಮುಸುಕು ಮುಸುಕಲಿಹುದೆಲ್ಲವನು |
ಸಂತಸದ ಮಾತಿಷ್ಟೆ - ಮಂಕುತಿಮ್ಮ ||
686
ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ |
ಇಲ್ಲ ನಮಗೂರೆಕೋಲ್, ತಿಳಿಬೆಳಕುಮಿಲ್ಲ ||
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು |
ಸಲ್ಲದುಬ್ಬಟೆ ನಮಗೆ - ಮಂಕುತಿಮ್ಮ ||
687
ಅತ್ಯಂತದುತ್ಕಟದ ಸನ್ನಿವೇಶಗಳ ಭರ |
ಪ್ರತ್ಯಕ್ಷದರ್ಶನದಿನಲ್ಲದೆಂತಹುದು? ||
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ |
ವಿಸ್ತಾರದದ್ಭುತವ? - ಮಂಕುತಿಮ್ಮ ||
688
ಅರ್ಣವವ ಕಣ್ಣಿಂದೆ ಕಂಡ ಬೆರಗಾದೀತೆ |
ವರ್ಣನೆಯನೋದಿದೊಡೆ, ತೆರೆಯನೆಣಿಸಿದೊಡೆ? ||
ಪೂರ್ಣವಸ್ತುಗ್ರಹಣವಪರೋಕ್ಷದಿಂದಹುದು |
ನಿರ್ಣಯ ಪ್ರತ್ಯಕ್ಷ - ಮಂಕುತಿಮ್ಮ ||
689
ಒರ್ವನೆ ನಿಲುವೆ ನೀನುತ್ಕಟಕ್ಷನಗಳಲಿ |
ಧರ್ಮಸಂಕಟಗಳಲಿ, ಜೀವಸಮರದಲಿ ||
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ |
ನಿರ್ಮಿತ್ರನಿರಲು ಕಲಿ - ಮಂಕುತಿಮ್ಮ ||
690
ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ |
ನಿನಗಂತು ಸಂಗಡಿಗನೊರ್ವನೆಡೆಬಿಡದನ್ ||
ಇಣಿಕಿ ನೋಡರದಾರುಮೆನ್ನುವೆಡೆ ಕಾದಿಹನು |
ಅಣಕಿಗ ಮನಸ್ಸಾಕ್ಷಿ - ಮಂಕುತಿಮ್ಮ ||
691
ಸುತ್ತಿ ಸುತ್ತುವ ಖಗವ ಗೂಡ ನೆನಪೆಳೆಯುವುದು |
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲಿ ||
ತತ್ತ್ವವೊಂದರ ಹಿಡಿತಕೊಗ್ಗದಿಹ ಬಾಳೇನು? |
ಕಿತ್ತ ಗಾಳಿಯ ಪಟವೊ - ಮಂಕುತಿಮ್ಮ ||
692
ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು |
ಪರತತ್ತ್ವವನು; ಬೇಕು ಬೇರೆ ಕಣ್ಣದಕೆ ||
ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು |
ಅರಳ್ವುದರಿವಿನ ಕಣ್ಣು - ಮಂಕುತಿಮ್ಮ ||
693
ಇಂದ್ರಿಯಾತೀತವನು ಪಿಡಿಯಲಿಂದ್ರಿಯಕಳವೆ? |
ಇಂದ್ರಧನು ಕೈದೋಟಿ ಕೊಂಕಿಗೆಟಕುವುದೆ? ||
ಸಂದೃಶ್ಯವಾತ್ಮವಾತ್ಮಕೆ ಬೇರೆ ಕರಣದಿಂ |
ತಂದ್ರಿ ಬಿಡೆ ದೊರೆವುದದು - ಮಂಕುತಿಮ್ಮ ||
694
ಬಂಧನಗಳೆಲ್ಲವನು ದಾಟಿ, ಹೊಳೆ ನೆರೆ ನೀರು |
ಸಂಧಿಪುದು ಕಡಲ ನೀರ್ಗಳನ್; ಅಂತು ಜೀವನ್ ||
ಇಂದ್ರಿಯದ ಕಟ್ಟುಗಳ ಮೀರ್ದೀಕ್ಷೆಯೋಟದಿಂ |
ಸಂದರುಶಿಪನು ಪರನ - ಮಂಕುತಿಮ್ಮ ||
695
ದ್ವಂದ್ವಲೋಕವನಕ್ಷಿಯುಗದೆ ಪೊರೆದು ತ್ರ್ಯಕ್ಷ- |
ನೊಂದರಿಂ ಮಾಯೆಯಾಟವ ಮೀರುವಂತೆ ||
ಇಂದ್ರಿಯಾತೀತದರ್ಶನಕೆ ಬೇರೊಂದಕ್ಷಿ |
ಸಂಧಾನವನು ಗಳಿಸೊ - ಮಂಕುತಿಮ್ಮ ||
696
ಶರನಿಧಿಯನೀಜುವನು, ಸಮರದಲಿ ಕಾದುವನು |
ಗುರಿಯೊಂದನುಳಿದು ಪೆರತೊಂದ ನೋಡುವನೆ? ||
ಮರೆಯುವನು ತಾನೆಂಬುದನೆ ಮಹಾವೇಶದಲಿ |
ನಿರಹಂತೆಯದು ಮೋಕ್ಷ - ಮಂಕುತಿಮ್ಮ ||
697
ಉತ್ತಮತೆಯಿಂತೆಂದು ಮತಿಗೆ ತೋರ್ದೊಡದೇನು? |
ವೃತ್ತಿಯೊಳ್ ಅದೂರಿ ಸ್ವಭಾವಾಂಶವಾಗಲ್ ||
ಮತ್ತು ಮತ್ತನುವರ್ತಿಸುತ, ಭಂಗವಾದಂದು |
ಯತ್ನಿಸಿನ್ನುಂ ಮರಳಿ - ಮಂಕುತಿಮ್ಮ ||
698
ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು |
ನಡೆಯ ಕಲಿತವನು? ಮತಿನೀತಿಗತಿಯಂತು ||
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- |
ದಡವಿಕೊಳುವವರೆಲ್ಲ - ಮಂಕುತಿಮ್ಮ ||
699
ಏಸು ಸಲ ತಪವಗೈದೇಸು ಬನ್ನವನಾಂತು |
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್? ||
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ |
ಲೇಸಾಗಿಸಾತ್ಮವನು - ಮಂಕುತಿಮ್ಮ ||
700
ವಾಸನೆ ವಿವೇಚನೆಗಳೆರಡಕಂ ಸಂಘರ್ಷೆ |
ಪ್ರಾಚೀನಕಂ ಪೌರುಷಕ್ಕಮಿರುವಂತೆ ||
ಆಶಾವಿನಾಶಮುಂ ಧೀಶಕ್ತಿಯುದ್ಭವಮುಮ್ |
ಈಶಪ್ರಸಾದದಿಂ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ | Mankuthimmana Kagga 701-750
701
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗಸೂತ್ರವಿದು - ಮಂಕುತಿಮ್ಮ ||
702
ಮನೆಯ ಸಂಸಾರದಲಿ ವಾಸವಿರುತಾಗಾಗ |
ನೆನೆದು ನೀಂ ದೇಗುಲಕೆ ಪೋಗಿಬರುವಂತೆ ||
ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ |
ಮನೆಗೆ ಬರುವನವೊಲಿರು - ಮಂಕುತಿಮ್ಮ ||
703
ಬೇಕು ಜೀವನಯೋಗಕೊಂದು ಬಹುಸೂಕ್ಷ್ಮ ನಯ |
ಬೇಕೊಂದು ಜಾಗರೂಕತೆ, ಬುದ್ಧಿಸಮತೆ ||
ತಾಕನೊಂದನು ಯೋಗಿ, ನೂಕನೊಂದನು ಜಗದಿ |
ಏಕಾಕಿ ಸಹವಾಸಿ - ಮಂಕುತಿಮ್ಮ ||
704
ಸಮತೆಸಂಯಮಶಮಗಳಿಂ ಭವವನೋಲಗಿಸೆ |
ಸಮನಿಪುದು ಮತಿಯ ಹದವಾತ್ಮಾನುಭವಕೆ ||
ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ |
ಶ್ರಮಿಸಿಳೆಯ ಗಾಣದಲಿ - ಮಂಕುತಿಮ್ಮ ||
705
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- |
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು - ಮಂಕುತಿಮ್ಮ ||
706
ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- |
ಳೊರೆಯದೊಡಮೆನನಂ, ತಾಂ ವರದಿಯೊರೆದು ||
ದೊರೆತನದ ಭಾರವನು ಹೊತ್ತು ದೊರೆಯಾಗದಾ |
ಭರತನವೊಲಿರು ನೀನು - ಮಂಕುತಿಮ್ಮ ||
707
ಒಡೆಯನೆಂದೋ ಬಂದು ಕೇಳ್ವನದಕುತ್ತರವ |
ಕೊಡಬೇಕು ತಾನೆನುವವೊಲು ಋಜುತೆಯಿಂದ ||
ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು |
ಮುಡುಪುಕೊಟ್ಟನು ಭರತ - ಮಂಕುತಿಮ್ಮ ||
708
ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ |
ಬಿಡನೊಂದನುಂ ರಾಜ್ಯ ತನದಲ್ಲವೆಂದು ||
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ |
ಕಡುಯೋಗಿ ಭರತನಲ? - ಮಂಕುತಿಮ್ಮ ||
709
ದೊರೆತನದ ಜಟಿಲಗಳ, ಕುಟಿಲಗಳ, ಕಠಿನಗಳ |
ಭರತನುಳಿಸಿದನೆ ರಾಮನ ತೀರ್ಪಿಗೆಂದು? ||
ಅರಿವಿಗಿಹ ಕರ್ತವ್ಯಭಾರವನು ತಾನರಿತು |
ಧುರವ ಧರಿಸಿದನವನು - ಮಂಕುತಿಮ್ಮ ||
710
ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸ್ವತ್ವದಾಶೆಯ ನೀಗಿ - ಮಂಕುತಿಮ್ಮ ||
711
ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು |
ಭರತನವೊಲನುಪಾಲನಕ್ರಿಯರು ನಾವು ||
ಅರಸನೂಳಿಗ ನಮ್ಮ ಸಂಸಾರದಾಡಳಿತ |
ಹರುಷದಿ ಸೇವಿಸೆಲೊ - ಮಂಕುತಿಮ್ಮ ||
712
ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ |
ಸೂಸುತ್ತಲಿರಲಿ ನಿನ್ನಿರವು ಮಂಗಳವ ||
ಆಶಿಸೆದೆ ಸಂಕಲ್ಪಯತ್ನಗಳನಿನಿತುಮಂ |
ಸಾಜವಾಗಲಿ ಸಯ್ಪು - ಮಂಕುತಿಮ್ಮ ||
713
ಕಾಯಕವ ಚರಿಪುದಾತ್ಮ ಜುಗುಪ್ಸೆಗೆಡೆಗುಡದೆ |
ಆಯತದ ಲೋಕಧರ್ಮಗಳ ಪಾಲಿಪುದು ||
ಆಯತಿಗೆ ಬಾಯ್ಬಿಡದೆ ಗತವ ಚಿಂತಿಸದಿಹುದು |
ಧ್ಯೇಯವೀ ಸೂತ್ರಗಳು - ಮಂಕುತಿಮ್ಮ ||
714
ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ |
ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ||
ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |
ವರಗಳೀ ನಾಲ್ಕೆ ವರ - ಮಂಕುತಿಮ್ಮ ||
715
ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ |
ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||
ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |
ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ||
716
ಮೃತನ ಸಂಸಾರಕಥೆ ಶವವಾಹಕರಿಗೇಕೆ? |
ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ||
ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |
ಧೃತಿಯ ತಳೆ ನೀನಂತು - ಮಂಕುತಿಮ್ಮ ||
717
ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ! |
ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ||
ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ |
ಮಣ್ಣೆ ತರ್ಪಣ ನಿನಗೆ - ಮಂಕುತಿಮ್ಮ ||
718
ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |
ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |
ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ||
719
ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ |
ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ||
ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ- |
ನಿಳೆಗೆ ಹರಡುವುದೇಕೊ? - ಮಂಕುತಿಮ್ಮ ||
720
ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು |
ರಸವು ನವನವತೆಯಿಂದನುದಿನವು ಹೊಮ್ಮಿ ||
ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |
ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ ||
721
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |
ಧರಣಿಯವು, ಗಗನದವು, ಮನುಜಯತ್ನದವು ||
ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |
ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ||
722
ಚೆಲುವುನಗುವುಗಳ ಕಂಡವನ ಕಣ್ಣರಳುವುದು |
ಅಳುವುನೋವುಗಳ ಕಂಡೊದ್ದೆಯಾಗುವುದು ||
ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು |
ಶಿಲೆಯಲ್ಲ ಯೋಗಿಯೆದೆ - ಮಂಕುತಿಮ್ಮ ||
723
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ |
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ||
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು |
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ||
724
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬಿಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||
725
ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ |
ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ||
ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು |
ಗಡುವಿರುವುದೆಲ್ಲಕಂ - ಮಂಕುತಿಮ್ಮ ||
726
ನಲಿಸುವೊಲಿಸುವ, ಕೆಣಕಿ ಕಾಡಿಸುವ, ಮುಳಿಯಿಸುವ |
ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ||
ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ |
ಇಳೆಯಂಚೆಯಾಳು ನೀಂ - ಮಂಕುತಿಮ್ಮ ||
727
ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? |
ಓಲೆಗಳನವರವರಿಗೈದಿಸಿರೆ ಸಾಕು ||
ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! |
ಕಾಲೋಟವವನೂಟ - ಮಂಕುತಿಮ್ಮ ||
728
ನಗು, ಮನದಿ ಲೋಗರ ವಿಕಾರಂಗಳನು ನೋಡಿ |
ಬಿಗಿ ತುಟಿಯ, ದುಡಿವಂದು ನೋವಪಡುವಂದು ||
ಪೊಗು, ವಿಶ್ವಜೀವನದ ಜೀವಾಂತರಂಗದಲಿ |
ನಗುನಗುತ ಬಾಳ್, ತೆರಳು - ಮಂಕುತಿಮ್ಮ ||
729
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |
ದುಡಿ ಕೈಯಿನಾದನಿತು; ಪಡು ಬಂದ ಪಾಡು ||
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |
ಬಿಡುಗಡೆಗೆ ದಾರಿಯದು - ಮಂಕುತಿಮ್ಮ ||
730
ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |
ಇಕ್ಕುವರದಾರದನು ಕರೆದು ತಿರುಪೆಯನು? |
ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು |
ತಕ್ಕುದಾ ವ್ರತ ನಿನಗೆ - ಮಂಕುತಿಮ್ಮ ||
731
ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು |
ಏನನೋ ನೆನೆದು ಸರ್ರೆಂದು ಹಾರುವುದು ||
ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ |
ನೀನದನು ಮೀರಿಹೆಯ? - ಮಂಕುತಿಮ್ಮ ||
732
ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |
ಆವಾಗಳಾವಕಡೆಗೆರಗುವುದೊ ಹಕ್ಕಿ! ||
ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |
ಜೀವಮಾರ್ಗವನೂಹ್ಯ - ಮಂಕುತಿಮ್ಮ ||
733
ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು |
ಭೂವಿಷಯದಿಂದ ರಸ ಮಾರ್ಪಡುವುದುಂಟು ||
ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ |
ಸೇವಕನು ನೀನಲ್ತೆ? - ಮಂಕುತಿಮ್ಮ ||
734
ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೊ! |
ಆಣತಿಯ ಕಳುಹುತಿಹನದನು ನೀನರಿತು ||
ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ |
ಕಾಣಿಸದನಾಳ್ಕೆಯದು - ಮಂಕುತಿಮ್ಮ ||
735
ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ |
ಆಯವದರಿಂ ಭಟನ ಸತ್ತ್ವಶಿಕ್ಷಣಕೆ ||
ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ |
ಶ್ರೇಯಸಿಗೆ ಸೋಪಾನ - ಮಂಕುತಿಮ್ಮ ||
736
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |
ಆಯಸಂಬಡಿಸದವೊಲಂತರಾತ್ಮನನು ||
ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ |
ಆಯುವನು ಸಾಗಿಸೆಲೊ - ಮಂಕುತಿಮ್ಮ ||
737
ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ |
ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ||
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ |
ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ||
738
ತನಗೆ ಬಾರದ ಲಾಭ ತನಯಂಗೆ ಬಂದಾಗ |
ಜನಕನ್ ಅದು ತನದೆಂದು ಸಂತಸಿಪ ತೆರದಿ ||
ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- |
ತನುಭವಿಪನೋ ಜ್ಞಾನಿ - ಮಂಕುತಿಮ್ಮ ||
739
ತನ್ನ ಮನದಾಟಗಳ ತಾನೆ ನೋಡುತ ನಗುವ |
ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||
ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |
ಧನ್ಯತೆಯ ಕಂಡವನು - ಮಂಕುತಿಮ್ಮ ||
740
ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |
ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ||
ಆವುದೋ ಕುಶಲತೆಯದೊಂದಿರದೆ ಜಯವಿರದು |
ಆ ವಿವರ ನಿನ್ನೊಳಗೆ - ಮಂಕುತಿಮ್ಮ ||
741
ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು |
ಬಳುಕು ಹಗ್ಗದ ಮೇಲೆ ತಾನಡಿಯನಿಡುತ ||
ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ |
ಕಲೆಯೆ ಜೀವನಯೋಗ - ಮಂಕುತಿಮ್ಮ ||
742
ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |
ವಹಿಸೆ ಜೀವನಭರವನದು ಹಗುರೆನಿಪವೊಲ್ ||
ಸಹನೆ ಸಮರಸಭಾವವಂತಃಪರೀಕ್ಷೆಗಳು |
ವಿಹಿತವಾತ್ಮದ ಹಿತಕೆ - ಮಂಕುತಿಮ್ಮ ||
743
ಎಲ್ಲ ನಾಶನವೆಲ್ಲಕಾಲವಶವಾದೊಡಂ |
ಕ್ಷುಲ್ಲಕನು ನರನಾದೊಡಂ ಕಾಲನಿದಿರೊಳ್ ||
ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು |
ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ||
744
ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು |
ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ||
ಉಣಿಸನೀವನು ದನಕೆ, ತಣಿವನೀವನು ಜಗಕೆ |
ಗುಣಶಾಲಿ ತೃಣಸಾಧು - ಮಂಕುತಿಮ್ಮ ||
745
ಪರಹಿತದ ಮಾತಿರಲಿ; ಪರರಿನೇ ಜೀವಿಪನು |
ನರಜಂತು, ಪಶು ಪಕ್ಷಿ ಕೀಟ ಮೀನ್ಗಳವೋಲ್ ||
ಪರರಿನೆಳಸದದೇನನುಂ ಪರರಿಗುಪಕರಿಪ |
ತರುಜನ್ಮವಲ ಪುಣ್ಯ! - ಮಂಕುತಿಮ್ಮ ||
746
ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ |
ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ||
ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |
ಪರಮಧರ್ಮವದೆಲವೊ - ಮಂಕುತಿಮ್ಮ ||
747
ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ |
ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||
ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |
ಶಿವನಿಗೆ ಕೃತಜ್ಞತೆಯೆ? - ಮಂಕುತಿಮ್ಮ ||
748
ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ||
ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |
ಜೀರ್ಣಿಸದ ಋಣಶೇಷ - ಮಂಕುತಿಮ್ಮ ||
749
ಪರಮಲಾಭವ ಗಳಿಸೆ ಜೀವಿತವ್ಯಾಪಾರ- |
ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||
ಚಿರಲಾಭ ಜಗದಾತ್ಮಲೀಲಾವಿಹಾರಸುಖ |
ಧರೆಯ ಸುಖ ಮೇಲ್ಬಡ್ಡಿ - ಮಂಕುತಿಮ್ಮ ||
750
ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |
ಒಳಿತನಾಗಿಸು, ಕೊಡುತ ಕೊಳುತ ಸಂತಸವ ||
ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |
ಮಿಳಿತನಿರು ವಿಶ್ವದಲಿ - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ | Mankuthimmana Kagga 801-850
801
ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ |
ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ||
ನೋಡು ನೀನುನ್ನತದಿ ನಿಂತು ಜನಜೀವಿತವ |
ಮಾಡುದಾರದ ಮನವ - ಮಂಕುತಿಮ್ಮ ||
802
ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ |
ನಿರ್ಮಮತೆಗೇರಿ ಕರ್ಮಾತೀತನಪ್ಪೆ ||
ಬ್ರಹ್ಮಪದದಿಂದ ಧರ್ಮಾಧರ್ಮಗಳ ನಿಯಮ |
ನಿರ್ಮಾಲ್ಯವಾಗುವುದು - ಮಂಕುತಿಮ್ಮ ||
803
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- |
ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||
ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |
ಬಲ್ಲವನೆ ಮುಕ್ತನಲ - ಮಂಕುತಿಮ್ಮ ||
804
ಶುಭವಾವುದಶುಭವಾವುದು ಲೋಕದಲಿ ನೋಡೆ? |
ವಿಭಜಿಸಲ್ಕಾಗದನ್ಯೋನ್ಯಸಂಬಂಧ ||
ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು |
ಅಭಯಪಥವದು ನಿನಗೆ - ಮಂಕುತಿಮ್ಮ ||
805
ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ |
ಸರ್ವವನು ತನ್ನಾತ್ಮವೆಂದು ಬದುಕುವನು ||
ನಿರ್ವಿಕಾರಾಂತರಂಗದಿ ಜಗವ ಧರಿಸುವನು |
ಸರ್ವಮಂಗಳನವನು - ಮಂಕುತಿಮ್ಮ ||
806
ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ |
ನಿರ್ವಿಕಾರದ ನಯನದಿಂ ನೋಳ್ಪುದಾರಿ ||
ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ |
ಉರ್ವರೆಗೆ ಗುರುವವನು - ಮಂಕುತಿಮ್ಮ ||
807
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು |
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು |
ಬಗೆಯಲರಿತವನೆ ಸುಖಿ - ಮಂಕುತಿಮ್ಮ ||
808
ಚಿರಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ |
ಸರಳ ಸಹಜವದಹುದು ಮೂಗಿನುಸಿರವೊಲು ||
ಪರನಿಯತಿಯಿರದು ಸ್ವತಸ್ಸಿದ್ಧ ನಿಯತಿಯಿರೆ |
ಹೊರಸಡಿಲಕೊಳಹಿಡಿತ - ಮಂಕುತಿಮ್ಮ ||
809
ದ್ವೈತವೇನದ್ವೈತವೇನಾತ್ಮದರ್ಶನಿಗೆ? |
ಶ್ರೌತಾದಿವಿಧಿಯೇನು? ತಪನಿಯಮವೇನು? ||
ನೀತಿ ಸರ್ವಾತ್ಮಮತಿಯದರಿನಮಿತಪ್ರೀತಿ |
ಭೀತಿಯಿಲ್ಲದನವನು - ಮಂಕುತಿಮ್ಮ ||
810
ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು |
ಪರಮಾತ್ಮದರ್ಶನವ; ಬೇಕದಕೆ ತಪಸು ||
ಪರಿಪೂರ್ಣ ಜೀವನಾನುಭವತಾಪದಿ ಮತಿಯು |
ಪರಿಪಕ್ವವಾಗಲದು - ಮಂಕುತಿಮ್ಮ ||
811
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- |
ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ||
ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ |
ಪರಮಜೀವನಯೋಗ - ಮಂಕುತಿಮ್ಮ ||
812
ಅಳಬೇಕು, ನಗಬೇಕು, ಸಮತೆ ಶಮವಿರಬೇಕು |
ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು ||
ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು |
ತಿಳಿದವರ ಚರಿತವದು - ಮಂಕುತಿಮ್ಮ ||
813
ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ |
ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ||
ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು |
ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ||
814
ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ |
ಸ್ವೀಯಲಾಭಸ್ಮರಣೆಯುಳಿದು ವಿವದಿಗಳಾ ||
ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ |
ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ||
815
ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ |
ಹಾರಾಟವದರದಾ ವೇಧೆಗಳ ನಡುವೆ ||
ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ |
ಸಾರುವುದು ನೈಜದಿಂ - ಮಂಕುತಿಮ್ಮ ||
816
ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ |
ಹಾರಯಿಸುವೊಡೆ ಹಲವು ಸರಳನೀತಿಗಳ ||
ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ |
ಪಾರಾಗು ಸುಳಿಯಿಂದ - ಮಂಕುತಿಮ್ಮ ||
817
ಮರವ ನೀನರಿಯುವೊಡೆ ಬುಡವ ಕೀಳಲುಬೇಡ |
ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ||
ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು |
ನಿರುಕಿಸುತ ತಳಿರಲರ - ಮಂಕುತಿಮ್ಮ ||
818
ವನಜಂತುಗಳ ಸಸ್ಯಮೂಲಿಕಾಹಾರದಿಂ |
ಗುಣವನರಿತವರಾದಿವೈದ್ಯರೌಷಧದೊಳ್ ||
ಒಣತರ್ಕಗಳಿನೇನು? ಜೀವನದ ವಿವಿಧರಸ- |
ದನುಭವದಿ ತತ್ತ್ವವೆಲೊ - ಮಂಕುತಿಮ್ಮ ||
819
ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು |
ಕಡಿಯದಿರೆ ಮರದಿ ಪರಿಯುವುದು ಜೀವರಸ ||
ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು |
ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ||
820
ಜೀವನವ್ಯಾಪಾರ ಮೂವರೊಟ್ಟುವಿಚಾರ |
ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ ||
ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ |
ಈ ವಿವರವರಿಯೆ ಸುಖ - ಮಂಕುತಿಮ್ಮ ||
821
ಏನೇನು ಹಾರಾಟ ಸುಖಕೆಂದು ಲೋಕದಲಿ |
ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||
ನೀನೆ ಕೈ ಬೀಸಿಕೊಳೆ ನೋವು ಬೆವರುಗಳೆ ಫಲ |
ಮಾಣು ಮನದುಬ್ಬಸವ - ಮಂಕುತಿಮ್ಮ ||
822
ಆತುರತೆಯಿರದ ಸತತೋದ್ಯೋಗ ಸರ್ವಹಿತ |
ಭೂತದಾವೇಶವಾತುರತೆಯಾತ್ಮಕ್ಕೆ ||
ಕಾತರನು ನೀನಾಗೆ ಮೂರನೆಯ ಸಹಭಾಗಿ |
ಪ್ರೀತನಾಗುವನೇನೊ? - ಮಂಕುತಿಮ್ಮ ||
823
ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ |
ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ||
ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? |
ಮನ ಸರ್ವಸಮವಿರಲಿ - ಮಂಕುತಿಮ್ಮ ||
824
ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು |
ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ ||
ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ |
ಪರವೆಯಿಡದುಜ್ಜುಗಿಸು - ಮಂಕುತಿಮ್ಮ ||
825
ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ |
ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ||
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ |
ತಿಳಿವುದೊಳಹದದಿಂದ - ಮಂಕುತಿಮ್ಮ ||
826
ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು |
ಅಂಗಾಂಗ ಭಾವ ರೂಪಣದ ಕಲೆಯೊಂದು ||
ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ |
ಮಂಗಳೋನ್ನತ ಕಲೆಯೊ - ಮಂಕುತಿಮ್ಮ ||
827
ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ |
ನೂಕುನುಗ್ಗುಗಳತ್ತ, ಸೋಂಕುರೋಗಗಳು ||
ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |
ಲೋಕ ಮೂಲವು ನೋಡೊ - ಮಂಕುತಿಮ್ಮ ||
828
ಕಳವಳವ ನೀಗಿಬಿಡು, ತಳಮಳವ ದೂರವಿಡು |
ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ||
ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು |
ತಿಳಿತಿಳಿವು ಶಾಂತಿಯಲಿ - ಮಂಕುತಿಮ್ಮ ||
829
ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ |
ತಳದ ಕಸ ತೇಲುತ್ತ ಬಗ್ಗಡವದಹುದು ||
ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ |
ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ ||
830
ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು |
ಇಳೆಯೊಳಾವುದರೊಳಮಸಹ್ಯಪಡಬೇಡ ||
ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |
ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ||
831
ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? |
ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ||
ಮಲವೇನೊ! ಹೊಲೆಯೇನೊ! ಜೀವಸಂಬಂಧವಲ |
ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ||
832
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ |
ಬಡವರಿಂಗುಪಕೃತಿಯೊ, ಆವುದೋ ಮನದ ||
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ |
ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ||
833
ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ |
ಜಗವ ಸುಡುಗಾಡೆನುವ ಕಟುತಪಸು ಬೇಡ ||
ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |
ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ||
834
ಹೀಗೊ ಹಾಗೋ ಹೇಗೊ ಜನುಮಕಥೆ ಮುಗಿಯುವುದು |
ಈಗಲೋ ಆಗಲೋ ಎಂದೊ ಮುಗಿಯುವುದು ||
ಸಾಗಿಮುಗಿವುದು; ಮುಗಿದು ಮರೆವುದದೆ ನರಸುಕೃತ |
ಭೂಗತಸ್ಥಿತಿ ಮುಕುತಿ - ಮಂಕುತಿಮ್ಮ ||
835
ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |
ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||
ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |
ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||
836
ಬಹುರಹಸ್ಯವೊ ಸೃಷ್ಟಿ, ಬಹುರಹಸ್ಯವೊ ಜೀವ |
ಅಹುದದಲ್ಲವಿದೆಂಬ ವಾದ ಬರಿ ಹರಟೆ ||
ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ |
ಬಹಿರಂತರ ರಹಸ್ಯ - ಮಂಕುತಿಮ್ಮ ||
837
ಎತ್ತೆತ್ತ ನೋಡಲುಂ ಗುಪ್ತಭೂತಗಳಯ್ಯ! |
ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ||
ಮುತ್ತಿ ಮುಸುಕಿಹುದು ಜೀವವ ರಹಸ್ಯವದೊಂದು |
ಬೆತ್ತಲೆಯದಹುದೆಂತು? - ಮಂಕುತಿಮ್ಮ ||
838
ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |
ಮಸಕಿನಲಿ ಹುದುಗಿಹವು ಮೋಹಮೂಲಗಳು ||
ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ |
ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ||
839
ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! |
ಆವ ಧೂಳಿನೊಳಾವ ಚೈತನ್ಯಕಣವೋ! ||
ಜೀವವಿಂತಜ್ಞಾನ ಸೂತ್ರದಾಟದ ಬೊಂಬೆ |
ಭಾವಿಸಾ ಸೂತ್ರಗಳ - ಮಂಕುತಿಮ್ಮ ||
840
ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! |
ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ||
ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! |
ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ||
841
ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! |
ಮಣ್ಣಾವುದದರಿಂದೆ ಗರ್ಭವತಿಯಹುದೋ! ||
ಅನ್ನವದರಿಂದಾರ್ಗೊ! ಲೋಕಕವರಿಂದೇನೊ! |
ಬಣ್ನಿಸುವರಾರದನು? - ಮಂಕುತಿಮ್ಮ ||
842
ಆವ ನೆಲದಲಿ ಮೇದೊ, ಆವ ನೀರನು ಕುಡಿದೊ |
ಆವು ಹಾಲ್ಗರೆವುದದನಾರು ಕುಡಿಯುವನೋ! ||
ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |
ಭಾವಿಸಾ ಋಣಗತಿಯ - ಮಂಕುತಿಮ್ಮ ||
843
ಸೇರಿರ್ಪುವುಸಿರುಸಿರುಗಳೂಳೆಷ್ಟೊ ಜೀವಾಣು |
ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ||
ಪ್ರಾರಬ್ಧಗತಿಯ ನಿಶ್ಚಯದಿ ತಿಳಿವವರಿಲ್ಲ |
ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ||
844
ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ |
ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ||
ಮೇಲುಬೀಳುಗಳಾರ್ಗದೆಂತೊ ನೀನೇನರಿವೆ? |
ತಾಳದಿರು ಗುರುತನವ - ಮಂಕುತಿಮ್ಮ ||
845
ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? |
ಹೊರೆ ಸಾಲದೇ ನಿನಗೆ, ಪೆರರ್ಗೆ ಹೊಣೆವೋಗೆ? ||
ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ |
ಸೆರೆಮನೆಯ ಸೇಮವೇಂ? - ಮಂಕುತಿಮ್ಮ ||
846
ಮರಣದಿಂ ಮುಂದೇನು? ಪ್ರೇತವೋ? ಭೂತವೋ? |
ಪರಲೋಕವೋ? ಪುನರ್ಜನ್ಮವೊ? ಅದೇನೋ! ||
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ |
ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ||
847
ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |
ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||
ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |
ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ||
848
ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ |
ಪರಸತ್ತ್ವಘನದ ವಿದ್ರವರೂಪ ವಿಶ್ವ ||
ಪರಮಾರ್ಥಕೊಂದಕ್ಷಿ ವೆವಹಾರಕಿನ್ನೊಂದು |
ಎರಡುಮೊಂದಾಂತರ್ಯ - ಮಂಕುತಿಮ್ಮ ||
849
ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು |
ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ||
ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು |
ನೆಮ್ಮದಿಗೆ ದಾರಿಯದು - ಮಂಕುತಿಮ್ಮ ||
850
ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |
ಪ್ರತ್ಯೇಕ ಜೀವದಶೆಯವನಂಗಭಂಗಿ ||
ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |
ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ||
ಮಂಕುತಿಮ್ಮನ ಕಗ್ಗ | Mankuthimmana Kagga 851-900
851
ಕಣ್ಣೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ |
ಕಣ್ಮುಚ್ಚಿನೋಡು, ನಿಶ್ಚಲ ಶುದ್ಧಸತ್ತ್ವ ||
ಉನ್ಮುಖನು ನೀನೆರಡು ಜಗಕಮಿರುತಿರಲಾಗ |
ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ||
852
ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು |
ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ||
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ |
ಅವಿರತದ ಚೈತನ್ಯ - ಮಂಕುತಿಮ್ಮ ||
853
ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- |
ಳೊರ್ವನುಂ ಸುಖಿಯಲ್ತು, ದಿಟದಿ, ಪೂರ್ಣದಲಿ ||
ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ |
ನುರ್ವರೆಯ ಮುಸುಕೀತು - ಮಂಕುತಿಮ್ಮ ||
854
ಸರ್ವಹಿತವೊಂದುಂಟೆ? ಅದಕೆ ಪಥ ನಮಗುಂಟೆ? |
ನಿರ್ವಾಹಸಾಧನಗಳೆತ್ತ? ಗುರುವೆತ್ತ? ||
ಪೂರ್ವವನು ನೆಟ್ಟಗಿಪ ನರಕೃತಿಯಿನಾಗದೇನ್ |
ಅರ್ವಾಚಿಯಲಿ ಸೊಟ್ಟು? - ಮಂಕುತಿಮ್ಮ ||
855
ಸುಲಭವೇನಲ್ಲ ನರಲೋಕಹಿತನಿರ್ಧಾರ |
ಬಲಕೆ ನೋಳ್ವರ್ ಕೆಲರು, ಕೆಲರೆಡಕೆ ನೋಳ್ವರ್ ||
ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |
ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||
856
ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ |
ಭೂಮಿಭಾರವನಿಳುಹೆ ಸಾಲದಾಗಿರಲು ||
ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? |
ಕ್ಷೇಮವೆಂದುಂ ಮೃಗ್ಯ - ಮಂಕುತಿಮ್ಮ ||
857
ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ |
ಗತಿ ಮನುಜಲೋಕಕ್ಕೆ; ಜಗದ ಜೀವವದು ||
ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ |
ಕಥೆ ಮುಗಿವುದಲ ಜಗಕೆ? - ಮಂಕುತಿಮ್ಮ ||
858
ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ |
ಕ್ರಿಯೆಯ ಪಾರಂಪರ್ಯ ಜನ್ಮಾಂತರೀಯ ||
ನಿಯತವಿಂತು ಜಗತ್ಪ್ರವರ್ಧನೆಗೆ ನರತೃಷ್ಣೆ |
ಜಯ ಪೂರ್ಣವೆಂದದಕೆ? - ಮಂಕುತಿಮ್ಮ ||
859
ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ |
ವಿಕೃತಿಗೊಳಿಸುವನವನುಮ್ ಆಕೆಯಂಗಗಳ ||
ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ |
ವ್ಯಾಕೃತಿಸರೇನವಳ? - ಮಂಕುತಿಮ್ಮ ||
860
ಸೃಷ್ಟಿಚೋದನೆಗಳಿಂ ನರನೊಳಿಷ್ಟಗಳುದಯ- |
ವಿಷ್ಟಸಿದ್ಧಿಗೆ ಯಂತ್ರತಂತ್ರಗಳ ಯುಕ್ತಿ ||
ತ್ವಷ್ಟೃಕುಶಲದೆ ಸೃಷ್ಟಿವಿಕೃತಿ; ಇಂತನ್ಯೋನ್ಯ- |
ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ||
861
ದಿವ್ಯಚರಿತಂಗಳ ಪ್ರತ್ಯುಕ್ತಿ ನರಚರಿತೆ |
ಕಾವ್ಯವಿಜ್ಞಾನಗಳ್ ನಿಗಮಾನುಸರಗಳ್ ||
ನವ್ಯಸಂಪದವಾರ್ಷಸಂಪದುದ್ಧೃತವಿಂತು |
ಸವ್ಯಪೇಕ್ಷಗಳುಭಯ - ಮಂಕುತಿಮ್ಮ ||
862
ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |
ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||
ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |
ಸರಿ ಲೋಕಬಾಂಧವ್ಯ - ಮಂಕುತಿಮ್ಮ ||
863
ಮುದಿಕುರುಡಿ ಹೊಂಗೆಯನು ``ಬಾದಾಮಿ, ಕೋ'ಯೆನುತ |
ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||
ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? |
ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ||
864
ಜಗದ ಸೊಗದರಸಿಕೆಯ ಫಲ, ನೋಡು, ಬರಿಕಲಹ |
ಮೃಗಗಳಾವೇಶಗೊಳಲಪ್ಪುದಿನ್ನೇನು? ||
ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು |
ಹಗೆತನವುಮಂತು ಬಿಡು - ಮಂಕುತಿಮ್ಮ ||
865
ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |
ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||
ನರಜೀವವಂತು ಶುಚಿಯಹುದು ದುಃಖಾಶ್ರುವಿಂ |
ತರುವಾಯ ಪುನರುದಯ - ಮಂಕುತಿಮ್ಮ ||
866
ಆತುಮದ ಸಂಸ್ಥಿತಿಗೆ ದೈಹಿಕಸಮಾಧಾನ; |
ಭೌತವಿಜ್ಞಾನದಾ ರಾಷ್ಟ್ರಸಂಸ್ಥೆಗಳಾ ||
ನೂತನ ವಿವೇಕಪ್ರಯೋಗಗಳಿನಾದೀತು |
ಭೂತಿಸಂಪದ ಜಗಕೆ - ಮಂಕುತಿಮ್ಮ ||
867
ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ |
ಹಿತಪರಿಜ್ಞಾನ ಯತ್ನಾನುಭವ ಫಲಿತ ||
ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |
ಯತನ ಜೀವನಶಿಕ್ಷೆ - ಮಂಕುತಿಮ್ಮ ||
868
ಅರೆದಿನದ ನಮ್ಮ ಯತ್ನದಿನದೇನೆನ್ನದಿರು |
ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ||
ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? |
ಕಿರುಜಾಜಿ ಸೊಗಕುಡದೆ? - ಮಂಕುತಿಮ್ಮ ||
869
ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ |
ಸ್ವರ್ಗವನು ಭುವಿಗಿಳಿಸಬಲ್ಲವನದಾರು? ||
ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ |
ಅರ್ಘಾರ್ಹತತ್ತ್ವವೆಲೊ - ಮಂಕುತಿಮ್ಮ ||
870
ದಿವಿಜಸುಧೆ ಬರಿಮಧುವೊ; ಹುಳಿಯುಪ್ಪುಮಿಶ್ರಿತವೊ? |
ಅವನಿಯುಣಿಸಿನಲಿ ಷಡ್ರಸ ತಪ್ಪದಿಹುದು ||
ಲವಲೇಶಮಾನುಮಿರದಿರೆ ಕಯ್ಪು ಜೀವನದಿ |
ಪವಳಿಸಿರನೇ ನರನು? - ಮಂಕುತಿಮ್ಮ ||
871
ಆರಿಗಾವುದು ತಕ್ಕುದಾರಿಗಾವುದು ದಕ್ಕ- |
ದೀ ರಹಸ್ಯದಿನಾದ ಸಾಹ್ಯವುಪಕಾರ ||
ತಾರತಮ್ಯವಿವೇಕವರಿಯದಾ ಸಂಸ್ಕಾರ |
ಪ್ರೇರಕವೊ ಚೌರ್ಯಕ್ಕೆ - ಮಂಕುತಿಮ್ಮ ||
872
ಗುಡಿಸಿಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ |
ಬಡವನಲಿ ಕೊರತೆಗಳ ನೆಡುವುದರಿದಲ್ಲ ||
ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು |
ಕೊಡಲಹುದವಂಗೆ ನೀಂ? - ಮಂಕುತಿಮ್ಮ ||
873
ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ |
ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ||
ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು |
ಸುಲಭವಲ್ಲೊಳಿತೆಸಗೆ - ಮಂಕುತಿಮ್ಮ ||
874
ಮಡಕೆಯನು ಬಡಿದು ಹೊನ್ಕೊಡವ ತೋರುವ ಸಖನೆ |
ಪಡೆದಿಹೆಯ ರಹದಾರಿಯನು ಹೊನ್ನ ಗಣಿಗೆ? ||
ಒಡಲಿಗೊಗ್ಗಿದ ನೀರ ಚೆಲ್ಲಿದೊಡದೇಂ ಪಾಲ |
ಕುಡಿವ ಸಂತಸಕೆಣೆಯೆ? - ಮಂಕುತಿಮ್ಮ ||
875
ಬಲುಹಳೆಯ ಲೋಕವಿದು, ಬಲುಪುರಾತನಲೋಕ |
ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ||
ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ |
ಸಲದಾತುರತೆಯದಕೆ - ಮಂಕುತಿಮ್ಮ ||
876
ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು |
ಚೆಂದದಲಿ ಪರಿದು ಬಾರೆಂದಾಣತಿಪೆಯಾ? ||
ಸಂದರ್ಭವಿಡಿದು ಜನಚೈತನ್ಯ ಪರಿದಿಹುದು |
ಅಂಧಗತಿಯಲ್ಲವದು - ಮಂಕುತಿಮ್ಮ ||
877
ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ |
ಹಿತಚಿಂತಕರು ಜನಕೆ, ಕೃತಪರಿಶ್ರಮರು? ||
ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ |
ಮಿತಿಯಿಂ ನವೀಕರಣ - ಮಂಕುತಿಮ್ಮ ||
878
ಒಡೆಯದಿರು ತಳಹದಿಯ ಸರಿವಡಿಪೆನದನೆಂದು |
ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ||
ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ? |
ದುಡುಕದಿರು ತಿದ್ದಿಕೆಗೆ - ಮಂಕುತಿಮ್ಮ ||
879
ಮೃಗಶೇಷವಿರುವನಕ ಜಗಳ ತಪ್ಪದು ಜಗದಿ |
ಹಗೆಗೆ ಕೊಲದವರು ಹಸಿವಿನಿಂದ ಕೊಂದಾರು ||
ಟಗರುಜೂಜೋ ಸಭೆಯ ರಗಳೆಯೋ ಕುಸ್ತಿಯೋ |
ಸೊಗ ಜನಕೆ ರಣರಂಗ - ಮಂಕುತಿಮ್ಮ ||
880
ತನ್ನಯ ಮನೋರಥಂಗಳ ಚಕ್ರವೇಗದಿನೆ |
ತನ್ನ ಮಣಿಹಾರಗಳ ಸಿಕ್ಕು ಬಿಗಿತದಿನೇ ||
ತನ್ನ ಸಂಕಲ್ಪ ವಿಪರೀತದಿನೆ ಮಾನವನ |
ಬೆನ್ನು ಮುರಿದೀತೇನೊ! - ಮಂಕುತಿಮ್ಮ ||
881
ಮಿತಿಯನರಿತಾಶೆ, ಸಮುಚಿತವ ಮರೆಯದ ಯತ್ನ |
ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ||
ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು |
ಹಿತಗಳಿವು ನರಕುಲಕೆ - ಮಂಕುತಿಮ್ಮ ||
882
ಸರ್ವಾರ್ಥ ಸಹಭಾಗಿತೆಗೆ ರಾಷ್ಟ್ರ ಕುಲ ವರ್ಗ |
ಸರ್ವದಣು ತಾನೆನುತ್ತೋರೊರ್ವ ಮನುಜನ್ ||
ಸರ್ವಜೀವ ಸಮೃದ್ಧಿಗನುಗೂಡಿ ದುಡಿಯುತಿರೆ |
ಪರ್ವವಂದಿಳೆಗೆಲವೊ - ಮಂಕುತಿಮ್ಮ ||
883
ಕಾಯಂಕಿಂತಾತ್ಮ ಪಿರಿದೆಂದು ಜನವರಿತಂದು |
ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು ||
ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು |
ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ ||
884
ವಸ್ತುವಿಜ್ಞಾನದಿಂ ಜೀವನಸಮೃದ್ಧಿ ಮಿಗೆ |
ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ||
ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ |
ಸ್ವಸ್ತಿ ಲೋಕಕೆಲ್ಲ - ಮಂಕುತಿಮ್ಮ ||
885
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು - ಮಂಕುತಿಮ್ಮ ||
886
ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; |
ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ||
ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು |
ವಿಶ್ವಪ್ರಗತಿಯಂತು - ಮಂಕುತಿಮ್ಮ ||
887
ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |
ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||
ನಿರತಿಶಯ ಸುಖವಲ್ಲಿ, ವಿಶ್ವಾತ್ಮವೀಕ್ಷೆಯಲಿ |
ಪರಸತ್ತ್ವಶಾಂತಿಯಲಿ - ಮಂಕುತಿಮ್ಮ ||
888
ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ |
ಮುಕ್ತಿ ಸುಖವಾಂತರಿಕವದು ನಿರವಧಿಸುಖ ||
ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? |
ರಿಕ್ತಸುಖ ಬಾಹ್ಯಸುಖ - ಮಂಕುತಿಮ್ಮ ||
889
ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |
ಸಾಂತ ಲೋಕದ ಸೌಖ್ಯ, ಖಂಡಖಂಡವದು ||
ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- |
ಕಾಂತ ಪೂರ್ಣಾನಂದ - ಮಂಕುತಿಮ್ಮ ||
890
ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು |
ಶಾಶ್ವತಬ್ರಹ್ಮದುಚ್ಛ್ವಾಸ ಘನ ಬಿಂದು ||
ನಿಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ |
ವಿಶ್ವಮೂಲಾಪ್ತಿಯಲ - ಮಂಕುತಿಮ್ಮ ||
891
ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು |
ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ||
ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು |
ಚೆನ್ನಹುದು ಬೊಮ್ಮನಲಿ - ಮಂಕುತಿಮ್ಮ ||
892
ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ |
ಒಳಗೆ, ಹೃತ್ಕೂಪದಾಳದಲಿ, ಮಸಕಿನಲಿ ||
ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ |
ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ ||
893
ಸ್ವಪ್ನಲೋಕವ ಜಾಗೃತಂ ಸುಳ್ಳೆನುದನಲ್ತೆ? |
ಸುಪ್ತಂಗೆ ಜಾಗೃತನ ಲೋಕಮುಂ ಸುಳ್ಳೇ ||
ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ- |
ಗುಪ್ತಾತ್ಮನಿಹುದು ದಿಟ - ಮಂಕುತಿಮ್ಮ ||
894
ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ |
ಮಾನಗಣಿತವು ನಮಗೆ? ಭಾನುವಿರದೊಡದೇಂ? ||
ಆನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು |
ಲೀನನಾಗದರೊಳಗೆ - ಮಂಕುತಿಮ್ಮ ||
895
ಸಂಕೇತಭಾವಮಯ ಲೋಕಜೀವನದ ನಯ |
ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ||
ದಂಕಿತಂಗಳು ಪದ ಪದಾರ್ಥ ಸಂಬಂಧಗಳು |
ಅಂಕೆ ಮೀರ್ದುದು ಸತ್ತ್ವ - ಮಂಕುತಿಮ್ಮ ||
896
ಭೌತವಿಜ್ಞಾನ ವಿವರಗಳಿನೇನಾತ್ಮಂಗೆ? |
ಪ್ರೇತಪ್ರಯಾಣಕಥೆಯೆಂತಿರ್ದೊಡೇನು? ||
ಜಾತಿ ನೀತಿ ಸಮಾಜ ವರ್ಗಭೇದದಿನೇನು? |
ಘಾತಿಯಿಲ್ಲಾತ್ಮಂಗೆ - ಮಂಕುತಿಮ್ಮ ||
897
ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? |
ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ? ||
ಚಿನ್ಮಯವನದನೆ ನೀಂ ಸತ್ಯವೆಂದಾಶ್ರಯಿಸು |
ಶೂನ್ಯವಾದವೆ ಶೂನ್ಯ - ಮಂಕುತಿಮ್ಮ ||
898
ನರನರೀ ಚಿತ್ರಗಳು, ನಾಟಕದ ಪಾತ್ರಗಳು |
ಪರಿಪರಿಯ ವೇಷಗಳು, ವಿವಿಧ ಭಾಷೆಗಳು ||
ಬರುತಿಹುವು, ಬೆರಗೆನಿಸಿ, ಮೆರೆಯುವುವು, ತೆರಳುವುವು |
ಮೆರೆವಣಿಗೆಯೋ ಲೋಕ - ಮಂಕುತಿಮ್ಮ ||
899
ಜಗದೀ ಜಗತ್ತ್ವವನು, ಮಾಯಾವಿಚಿತ್ರವನು |
ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||
ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು |
ಹೊಗಿಸಾ ಕಡೆಗೆ ಮತಿಯ - ಮಂಕುತಿಮ್ಮ ||
900
ಸುತ್ತಮುತ್ತಣ ಗಾಳಿಯಾವಗಂ ನಮ್ಮೊಡಲ |
ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ||
ಬಿತ್ತರದ ಲೋಕಭಾರವನಾತ್ಮನರಿಯದಿರೆ |
ಮುಕ್ತಲಕ್ಷಣವದುವೆ - ಮಂಕುತಿಮ್ಮ ||