Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 801-850

 801

ಕೋಡುಗಲ್ಲನು ಹತ್ತಿ ದೂರವನು ನೋಳ್ಪಂಗೆ |

ಗೋಡೆಗೊತ್ತುಗಳೇನು? ಮೇಡು ಕುಳಿಯೇನು? ||

ನೋಡು ನೀನುನ್ನತದಿ ನಿಂತು ಜನಜೀವಿತವ |

ಮಾಡುದಾರದ ಮನವ - ಮಂಕುತಿಮ್ಮ ||


802

ಹರ್ಮ್ಯಾಗ್ರಕೇರಿ ಸೋಪಾನದಿನತೀತನಹೆ |

ನಿರ್ಮಮತೆಗೇರಿ ಕರ್ಮಾತೀತನಪ್ಪೆ ||

ಬ್ರಹ್ಮಪದದಿಂದ ಧರ್ಮಾಧರ್ಮಗಳ ನಿಯಮ |

ನಿರ್ಮಾಲ್ಯವಾಗುವುದು - ಮಂಕುತಿಮ್ಮ ||


803

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- |

ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||

ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ |

ಬಲ್ಲವನೆ ಮುಕ್ತನಲ - ಮಂಕುತಿಮ್ಮ ||


804

ಶುಭವಾವುದಶುಭವಾವುದು ಲೋಕದಲಿ ನೋಡೆ? |

ವಿಭಜಿಸಲ್ಕಾಗದನ್ಯೋನ್ಯಸಂಬಂಧ ||

ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು |

ಅಭಯಪಥವದು ನಿನಗೆ - ಮಂಕುತಿಮ್ಮ ||


805

ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ |

ಸರ್ವವನು ತನ್ನಾತ್ಮವೆಂದು ಬದುಕುವನು ||

ನಿರ್ವಿಕಾರಾಂತರಂಗದಿ ಜಗವ ಧರಿಸುವನು |

ಸರ್ವಮಂಗಳನವನು - ಮಂಕುತಿಮ್ಮ ||


806

ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ |

ನಿರ್ವಿಕಾರದ ನಯನದಿಂ ನೋಳ್ಪುದಾರಿ ||

ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ |

ಉರ್ವರೆಗೆ ಗುರುವವನು - ಮಂಕುತಿಮ್ಮ ||


807

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು |

ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ||

ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು |

ಬಗೆಯಲರಿತವನೆ ಸುಖಿ - ಮಂಕುತಿಮ್ಮ ||


808

ಚಿರಶಿಕ್ಷೆಯಿಂ ನಿನಗೆ ಸರ್ವಾತ್ಮತಾಭ್ಯಾಸ |

ಸರಳ ಸಹಜವದಹುದು ಮೂಗಿನುಸಿರವೊಲು ||

ಪರನಿಯತಿಯಿರದು ಸ್ವತಸ್ಸಿದ್ಧ ನಿಯತಿಯಿರೆ |

ಹೊರಸಡಿಲಕೊಳಹಿಡಿತ - ಮಂಕುತಿಮ್ಮ ||


809

ದ್ವೈತವೇನದ್ವೈತವೇನಾತ್ಮದರ್ಶನಿಗೆ? |

ಶ್ರೌತಾದಿವಿಧಿಯೇನು? ತಪನಿಯಮವೇನು? ||

ನೀತಿ ಸರ್ವಾತ್ಮಮತಿಯದರಿನಮಿತಪ್ರೀತಿ |

ಭೀತಿಯಿಲ್ಲದನವನು - ಮಂಕುತಿಮ್ಮ ||


810

ಬರಿಭಕ್ತಿ ಬರಿಕರ್ಮ ಬರಿತರ್ಕ ದೊರಕಿಸದು |

ಪರಮಾತ್ಮದರ್ಶನವ; ಬೇಕದಕೆ ತಪಸು ||

ಪರಿಪೂರ್ಣ ಜೀವನಾನುಭವತಾಪದಿ ಮತಿಯು |

ಪರಿಪಕ್ವವಾಗಲದು - ಮಂಕುತಿಮ್ಮ ||


811

ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- |

ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ ||

ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ |

ಪರಮಜೀವನಯೋಗ - ಮಂಕುತಿಮ್ಮ ||


812

ಅಳಬೇಕು, ನಗಬೇಕು, ಸಮತೆ ಶಮವಿರಬೇಕು |

ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು ||

ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು |

ತಿಳಿದವರ ಚರಿತವದು - ಮಂಕುತಿಮ್ಮ ||


813

ಬಿಟ್ಟೆನೆಲ್ಲವನೆಂಬ ಹೃದಯಶೋಷಣೆ ಬೇಡ |

ಕಟ್ಟಿಕೊಳ್ಳುವ ಶಿರಃಪೀಡೆಯುಂ ಬೇಡ ||

ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು |

ಮುಟ್ಟದಿಳೆಯಸಿ ನಿನ್ನ - ಮಂಕುತಿಮ್ಮ ||


814

ನ್ಯಾಯಾಧಿಪತಿ ತನ್ನ ಮತಿ ಮನಸುಗಳನೆಲ್ಲ |

ಸ್ವೀಯಲಾಭಸ್ಮರಣೆಯುಳಿದು ವಿವದಿಗಳಾ ||

ದಾಯನಿರ್ಣಯಕೆ ಯೋಜಿಸುವಂತೆ, ನೀಂ ಜಗದ |

ಶ್ರೇಯಸ್ಸಿಗುಜ್ಜುಗಿಸು - ಮಂಕುತಿಮ್ಮ ||


815

ಪೌರುಷಾಶ್ವಕ್ಕಾಶೆ ಛಾಟಿ, ಭಯ ಕಡಿವಾಣ |

ಹಾರಾಟವದರದಾ ವೇಧೆಗಳ ನಡುವೆ ||

ಧೀರನೇರಿರೆ, ಹೊಡೆತ ಕಡಿತವಿಲ್ಲದೆ ಗುರಿಗೆ |

ಸಾರುವುದು ನೈಜದಿಂ - ಮಂಕುತಿಮ್ಮ ||


816

ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ |

ಹಾರಯಿಸುವೊಡೆ ಹಲವು ಸರಳನೀತಿಗಳ ||

ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ |

ಪಾರಾಗು ಸುಳಿಯಿಂದ - ಮಂಕುತಿಮ್ಮ ||


817

ಮರವ ನೀನರಿಯುವೊಡೆ ಬುಡವ ಕೀಳಲುಬೇಡ |

ತರಿಯಬೇಡೆಲೆಕಡ್ಡಿಗಳ ಪರೀಕ್ಷಣಕೆ ||

ಎರೆ ನೀರ, ಸುರಿ ಗೊಬ್ಬರವ, ಕೆದಕು ಪಾತಿಯನು |

ನಿರುಕಿಸುತ ತಳಿರಲರ - ಮಂಕುತಿಮ್ಮ ||


818

ವನಜಂತುಗಳ ಸಸ್ಯಮೂಲಿಕಾಹಾರದಿಂ |

ಗುಣವನರಿತವರಾದಿವೈದ್ಯರೌಷಧದೊಳ್ ||

ಒಣತರ್ಕಗಳಿನೇನು? ಜೀವನದ ವಿವಿಧರಸ- |

ದನುಭವದಿ ತತ್ತ್ವವೆಲೊ - ಮಂಕುತಿಮ್ಮ ||


819

ಕಡಿದೊಡೆ ಪರೀಕ್ಷೆಗುಳಿವುವು ಸತ್ತನಾರುಗಳು |

ಕಡಿಯದಿರೆ ಮರದಿ ಪರಿಯುವುದು ಜೀವರಸ ||

ಬಿಡುವಮ್ ಈ ಬಾಳ್ ಅದೇಕೆಂಬ ಚರ್ಚೆಯ; ನಾವು |

ದುಡಿವಮ್ ಅದು ಪೆಂಪುಗೊಳೆ - ಮಂಕುತಿಮ್ಮ ||


820

ಜೀವನವ್ಯಾಪಾರ ಮೂವರೊಟ್ಟುವಿಚಾರ |

ಭಾವಿಪೊಡೆ ನೀನು, ಜಗ, ಇನ್ನೊಂದದೃಷ್ಟ ||

ಆವಗಂ ಮೂರನೆಯ ಭಾಗಸ್ಥನಿಚ್ಛೆ ಬಲ |

ಈ ವಿವರವರಿಯೆ ಸುಖ - ಮಂಕುತಿಮ್ಮ ||


821

ಏನೇನು ಹಾರಾಟ ಸುಖಕೆಂದು ಲೋಕದಲಿ |

ತಾನಾಗಿ ಗಾಳಿವೊಲ್ ಬಂದ ಸುಖವೆ ಸುಖ ||

ನೀನೆ ಕೈ ಬೀಸಿಕೊಳೆ ನೋವು ಬೆವರುಗಳೆ ಫಲ |

ಮಾಣು ಮನದುಬ್ಬಸವ - ಮಂಕುತಿಮ್ಮ ||


822

ಆತುರತೆಯಿರದ ಸತತೋದ್ಯೋಗ ಸರ್ವಹಿತ |

ಭೂತದಾವೇಶವಾತುರತೆಯಾತ್ಮಕ್ಕೆ ||

ಕಾತರನು ನೀನಾಗೆ ಮೂರನೆಯ ಸಹಭಾಗಿ |

ಪ್ರೀತನಾಗುವನೇನೊ? - ಮಂಕುತಿಮ್ಮ ||


823

ಎಣಿಕೆಯೊಳಿತಾದೊಡೆಯುಮೊಳಿತನಾಗಿಸದು ಹಟ |

ಮಣಿಕನಕ ಸಂಕೋಲೆ ತನುವ ಬಂಧಿಸದೇಂ? ||

ತನಯನಿರಿದಸಿ ನಿನ್ನ ಮೈಯ ಹುಣ್ಣಾಗಿಸದೆ? |

ಮನ ಸರ್ವಸಮವಿರಲಿ - ಮಂಕುತಿಮ್ಮ ||


824

ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು |

ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ ||

ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ |

ಪರವೆಯಿಡದುಜ್ಜುಗಿಸು - ಮಂಕುತಿಮ್ಮ ||


825

ಕಲೆಗಳಲಿ ಪರಮಕಲೆ ಜೀವನದ ಲಲಿತಕಲೆ |

ಕಲಿಸಲದನಳವಲ್ಲ ಬಾಹ್ಯಬೋಧನೆಯಿಂ ||

ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ |

ತಿಳಿವುದೊಳಹದದಿಂದ - ಮಂಕುತಿಮ್ಮ ||


826

ಸಂಗೀತಕಲೆಯೊಂದು, ಸಾಹಿತ್ಯಕಲೆಯೊಂದು |

ಅಂಗಾಂಗ ಭಾವ ರೂಪಣದ ಕಲೆಯೊಂದು ||

ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ |

ಮಂಗಳೋನ್ನತ ಕಲೆಯೊ - ಮಂಕುತಿಮ್ಮ ||


827

ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ |

ನೂಕುನುಗ್ಗುಗಳತ್ತ, ಸೋಂಕುರೋಗಗಳು ||

ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ |

ಲೋಕ ಮೂಲವು ನೋಡೊ - ಮಂಕುತಿಮ್ಮ ||


828

ಕಳವಳವ ನೀಗಿಬಿಡು, ತಳಮಳವ ದೂರವಿಡು |

ಕಳೆ, ತಳ್ಳು ಗಲಭೆ ಗಾಬರಿಯ ಮನದಿಂದ ||

ಅಲೆದಾಡುತಿರೆ ದೀಪ ಕಣ್ಗೆ ಗುರಿ ತಪ್ಪುವುದು |

ತಿಳಿತಿಳಿವು ಶಾಂತಿಯಲಿ - ಮಂಕುತಿಮ್ಮ ||


829

ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ |

ತಳದ ಕಸ ತೇಲುತ್ತ ಬಗ್ಗಡವದಹುದು ||

ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ |

ತಿಳಿಯಹುದು ಶಾಂತಿಯಲಿ - ಮಂಕುತಿಮ್ಮ ||


830

ಕೊಳಕೆಂದು, ಹುಳುಕೆಂದು, ಹೇಸಿಗೆಯ ಹುಳುವೆಂದು |

ಇಳೆಯೊಳಾವುದರೊಳಮಸಹ್ಯಪಡಬೇಡ ||

ಬೆಲೆಯುಂಟು ಕೊಳೆಗಮೀ ಜೀವಸಾಮಗ್ರಿಯಲಿ |

ಕೊಳೆ ಶುಚಿಖ್ಯಾಪಕವೊ - ಮಂಕುತಿಮ್ಮ ||


831

ತಳೆಯಲಾರನೆ ಬೊಮ್ಮ ಬೀಭತ್ಸರೂಪಗಳ? |

ನಲಿಯಲಾರನೆ ತಿಪ್ಪೆರೊಚ್ಚು ನಾತದಲಿ? ||

ಮಲವೇನೊ! ಹೊಲೆಯೇನೊ! ಜೀವಸಂಬಂಧವಲ |

ಮಲಿನದಲಿ ನೆನೆ ಶುಚಿಯ - ಮಂಕುತಿಮ್ಮ ||


832

ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ |

ಬಡವರಿಂಗುಪಕೃತಿಯೊ, ಆವುದೋ ಮನದ ||

ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ |

ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ||


833

ನಗುನಗುವ ಕಣ್ಗಳಿಗೆ ಹೊಗೆಯನೂದಲುಬೇಡ |

ಜಗವ ಸುಡುಗಾಡೆನುವ ಕಟುತಪಸು ಬೇಡ ||

ಮಗುವು ತಾಯ್ತಂದೆಕಣ್ಮುಂದೆ ನಡೆವಂತೆ ನಡೆ |

ಮಿಗೆಚಿಂತೆ ತಲೆಹರಟೆ - ಮಂಕುತಿಮ್ಮ ||


834

ಹೀಗೊ ಹಾಗೋ ಹೇಗೊ ಜನುಮಕಥೆ ಮುಗಿಯುವುದು |

ಈಗಲೋ ಆಗಲೋ ಎಂದೊ ಮುಗಿಯುವುದು ||

ಸಾಗಿಮುಗಿವುದು; ಮುಗಿದು ಮರೆವುದದೆ ನರಸುಕೃತ |

ಭೂಗತಸ್ಥಿತಿ ಮುಕುತಿ - ಮಂಕುತಿಮ್ಮ ||


835

ಮೃತ್ಯುವಿಂ ಭಯವೇಕೆ? ದೇಶಾಂತರಕ್ಕೊಯ್ವ |

ಮಿತ್ರನಾತಂ; ಚಿತ್ರ ಹೊಸದಿರ್ಪುದಲ್ಲಿ ||

ಸಾತ್ತ್ವಿಕದಿ ಬಾಳ್ದವಂಗೆತ್ತಲೇಂ ಭಯವಿಹುದು? |

ಸತ್ರ ಹೊಸದಿಹುದು ನಡೆ - ಮಂಕುತಿಮ್ಮ ||


836

ಬಹುರಹಸ್ಯವೊ ಸೃಷ್ಟಿ, ಬಹುರಹಸ್ಯವೊ ಜೀವ |

ಅಹುದದಲ್ಲವಿದೆಂಬ ವಾದ ಬರಿ ಹರಟೆ ||

ಗುಹೆಯೊಳಿಹುದೆಲ್ಲ ತತ್ತ್ವಗಳ ತತ್ತ್ವದ ಮೂಲ |

ಬಹಿರಂತರ ರಹಸ್ಯ - ಮಂಕುತಿಮ್ಮ ||


837

ಎತ್ತೆತ್ತ ನೋಡಲುಂ ಗುಪ್ತಭೂತಗಳಯ್ಯ! |

ಕತ್ತಲೆಯೊಳಾಡುತಿಹ ದೆವ್ವಗಳ ಸುಳಿವು ||

ಮುತ್ತಿ ಮುಸುಕಿಹುದು ಜೀವವ ರಹಸ್ಯವದೊಂದು |

ಬೆತ್ತಲೆಯದಹುದೆಂತು? - ಮಂಕುತಿಮ್ಮ ||


838

ಮುಸುಕಿಹುದು ಹುಟ್ಟಳಿವುಗಳ ಕಾರಣವ ಮಬ್ಬು |

ಮಸಕಿನಲಿ ಹುದುಗಿಹವು ಮೋಹಮೂಲಗಳು ||

ನಿಶಿ ಮುಚ್ಚಿಹುದು ದಿನಪಚಂದಿರರ ಹುಟ್ಟೆಡೆಯ |

ಮಿಸುಕುವ ರಹಸ್ಯ ನೀಂ - ಮಂಕುತಿಮ್ಮ ||


839

ಆವ ಗಾಳಿಯದಾವ ಧೂಳ್ಕಣವ ಪೊತ್ತಿಹುದೊ! |

ಆವ ಧೂಳಿನೊಳಾವ ಚೈತನ್ಯಕಣವೋ! ||

ಜೀವವಿಂತಜ್ಞಾನ ಸೂತ್ರದಾಟದ ಬೊಂಬೆ |

ಭಾವಿಸಾ ಸೂತ್ರಗಳ - ಮಂಕುತಿಮ್ಮ ||


840

ಭುಕ್ತಿ ನಿನಗೆಲ್ಲಿಯದು? ಭತ್ತ ತಾನೆಲ್ಲಿಯದೊ! |

ಎತ್ತಲಿನ ಗೊಬ್ಬರವೊ! ಎತ್ತಲಿನ ನೀರೋ! ||

ಭಾಕ್ತವಾರಾರ ದುಡಿತದಿನೊ ನಿನಗಾಗಿಹುದು! |

ಗುಪ್ತಗಾಮಿನಿಯೊ ಋಣ - ಮಂಕುತಿಮ್ಮ ||


841

ನಿನ್ನೆಂಜಲಗುಳಾವ ಕಾಲುವೆಯ ಸೇರುವುದೊ! |

ಮಣ್ಣಾವುದದರಿಂದೆ ಗರ್ಭವತಿಯಹುದೋ! ||

ಅನ್ನವದರಿಂದಾರ್ಗೊ! ಲೋಕಕವರಿಂದೇನೊ! |

ಬಣ್ನಿಸುವರಾರದನು? - ಮಂಕುತಿಮ್ಮ ||


842

ಆವ ನೆಲದಲಿ ಮೇದೊ, ಆವ ನೀರನು ಕುಡಿದೊ |

ಆವು ಹಾಲ್ಗರೆವುದದನಾರು ಕುಡಿಯುವನೋ! ||

ಆವ ಬಲವದರಿನೊಗೆದೇಂಗೆಯ್ಸುವುದೊ ಜಗಕೆ! |

ಭಾವಿಸಾ ಋಣಗತಿಯ - ಮಂಕುತಿಮ್ಮ ||


843

ಸೇರಿರ್ಪುವುಸಿರುಸಿರುಗಳೂಳೆಷ್ಟೊ ಜೀವಾಣು |

ಹಾರುತಿಹುವೆಷ್ಟೊ ಚೇತನ ಧೂಳುಕಣದೊಳ್ ||

ಪ್ರಾರಬ್ಧಗತಿಯ ನಿಶ್ಚಯದಿ ತಿಳಿವವರಿಲ್ಲ |

ಆ ರಹಸ್ಯಕ್ಕೆರಗೊ! - ಮಂಕುತಿಮ್ಮ ||


844

ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ |

ಬಾಳಿಕೊಳುಗವರು ತಂತಮ್ಮ ಬೆಳಕಿನಲಿ ||

ಮೇಲುಬೀಳುಗಳಾರ್ಗದೆಂತೊ ನೀನೇನರಿವೆ? |

ತಾಳದಿರು ಗುರುತನವ - ಮಂಕುತಿಮ್ಮ ||


845

ಪೆರತೊಂದು ಬಾಳ ನೀನಾಳ್ವ ಸಾಹಸವೇಕೆ? |

ಹೊರೆ ಸಾಲದೇ ನಿನಗೆ, ಪೆರರ್ಗೆ ಹೊಣೆವೋಗೆ? ||

ಮರದಿ ನನೆ ನೈಜದಿಂದರಳೆ ಸೊಗವೆಲ್ಲರ್ಗೆ |

ಸೆರೆಮನೆಯ ಸೇಮವೇಂ? - ಮಂಕುತಿಮ್ಮ ||


846

ಮರಣದಿಂ ಮುಂದೇನು? ಪ್ರೇತವೋ? ಭೂತವೋ? |

ಪರಲೋಕವೋ? ಪುನರ್ಜನ್ಮವೊ? ಅದೇನೋ! ||

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ |

ಧರೆಯ ಬಾಳ್ಗದರಿನೇಂ? - ಮಂಕುತಿಮ್ಮ ||


847

ನೆಲದ ಬೇಸಾಯ ತಾನೊಳ್ಳಿತಾಗಿರೆ ನಿನಗೆ |

ಫಲವದೆಂತಹುದೆಂಬ ಶಂಕೆಗೆಡೆಯುಂಟೆ? ||

ಒಳಿತರೊಳೆ ನೀಂ ಬಾಳು; ಪರವದೆಂತಿರ್ಡೊಡೇಂ? |

ಇಳೆಯೆ ಬಾಗಿಲು ಪರಕೆ - ಮಂಕುತಿಮ್ಮ ||


848

ಸ್ಥಿರ ಹಿಮಾಚಲ ಬೊಮ್ಮ, ಚರ ಜಾಹ್ನವಿಯೆ ಮಾಯೆ |

ಪರಸತ್ತ್ವಘನದ ವಿದ್ರವರೂಪ ವಿಶ್ವ ||

ಪರಮಾರ್ಥಕೊಂದಕ್ಷಿ ವೆವಹಾರಕಿನ್ನೊಂದು |

ಎರಡುಮೊಂದಾಂತರ್ಯ - ಮಂಕುತಿಮ್ಮ ||


849

ಒಮ್ಮನಸಿನಿಂದ ನೀನೀ ತತ್ತ್ವವಂ ಗ್ರಹಿಸು |

ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ||

ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು |

ನೆಮ್ಮದಿಗೆ ದಾರಿಯದು - ಮಂಕುತಿಮ್ಮ ||


850

ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ |

ಪ್ರತ್ಯೇಕ ಜೀವದಶೆಯವನಂಗಭಂಗಿ ||

ಸತ್ಯ ಸತ್ತ್ವಜ್ವಾಲೆ ವಿಶ್ವಮಾಯಾಲೀಲೆ |

ಪ್ರತ್ಯಗಾತ್ಮನು ನೀನು - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post