Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 851-900

 851

ಕಣ್ಣೆರೆದು ನೋಡು, ಚಿತ್ಸತ್ತ್ವಮೂರ್ತಿಯ ನೃತ್ಯ |

ಕಣ್ಮುಚ್ಚಿನೋಡು, ನಿಶ್ಚಲ ಶುದ್ಧಸತ್ತ್ವ ||

ಉನ್ಮುಖನು ನೀನೆರಡು ಜಗಕಮಿರುತಿರಲಾಗ |

ಹೃನ್ಮಧ್ಯದಲಿ ಶಾಂತಿ - ಮಂಕುತಿಮ್ಮ ||


852

ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು |

ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ||

ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ |

ಅವಿರತದ ಚೈತನ್ಯ - ಮಂಕುತಿಮ್ಮ ||


853

ಸಾರ್ವಲೌಕಿಕಸೌಖ್ಯ ನೆಲಸುವನ್ನೆಗಮಿಳೆಯೊ- |

ಳೊರ್ವನುಂ ಸುಖಿಯಲ್ತು, ದಿಟದಿ, ಪೂರ್ಣದಲಿ ||

ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ |

ನುರ್ವರೆಯ ಮುಸುಕೀತು - ಮಂಕುತಿಮ್ಮ ||


854

ಸರ್ವಹಿತವೊಂದುಂಟೆ? ಅದಕೆ ಪಥ ನಮಗುಂಟೆ? |

ನಿರ್ವಾಹಸಾಧನಗಳೆತ್ತ? ಗುರುವೆತ್ತ? ||

ಪೂರ್ವವನು ನೆಟ್ಟಗಿಪ ನರಕೃತಿಯಿನಾಗದೇನ್ |

ಅರ್ವಾಚಿಯಲಿ ಸೊಟ್ಟು? - ಮಂಕುತಿಮ್ಮ ||


855

ಸುಲಭವೇನಲ್ಲ ನರಲೋಕಹಿತನಿರ್ಧಾರ |

ಬಲಕೆ ನೋಳ್ವರ್ ಕೆಲರು, ಕೆಲರೆಡಕೆ ನೋಳ್ವರ್ ||

ವಿಲವಿಲನೆ ಚಪಲಿಸುವ ಮನುಜಸ್ವಭಾವದಲಿ |

ನೆಲೆಗೊತ್ತು ಹಿತಕೆಲ್ಲಿ? - ಮಂಕುತಿಮ್ಮ ||


856

ರಾಮಕಾರ್ಮುಕ, ಕೃಷ್ಣಯುಕ್ತಿ, ಗೌತಮಕರುಣೆ |

ಭೂಮಿಭಾರವನಿಳುಹೆ ಸಾಲದಾಗಿರಲು ||

ಸಾಮಾನ್ಯರೆನಿತು ತಾಂ ಪೆಣಗಿದೊಡಮೇನಹುದು? |

ಕ್ಷೇಮವೆಂದುಂ ಮೃಗ್ಯ - ಮಂಕುತಿಮ್ಮ ||


857

ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ |

ಗತಿ ಮನುಜಲೋಕಕ್ಕೆ; ಜಗದ ಜೀವವದು ||

ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ |

ಕಥೆ ಮುಗಿವುದಲ ಜಗಕೆ? - ಮಂಕುತಿಮ್ಮ ||


858

ಪ್ರಿಯಹಿತಗಳನ್ವೇಷೆಯಿಂ ಕರ್ಮಪರಿಪೋಷೆ |

ಕ್ರಿಯೆಯ ಪಾರಂಪರ್ಯ ಜನ್ಮಾಂತರೀಯ ||

ನಿಯತವಿಂತು ಜಗತ್ಪ್ರವರ್ಧನೆಗೆ ನರತೃಷ್ಣೆ |

ಜಯ ಪೂರ್ಣವೆಂದದಕೆ? - ಮಂಕುತಿಮ್ಮ ||


859

ಪ್ರಕೃತಿಯನವರತ ಮನುಜನ ತಿದ್ದುತಿರುವಂತೆ |

ವಿಕೃತಿಗೊಳಿಸುವನವನುಮ್ ಆಕೆಯಂಗಗಳ ||

ಭೂಕೃಷಿಕ ರಸತಂತ್ರಿ ಶಿಲ್ಪಿ ವಾಹನಯಂತ್ರಿ |

ವ್ಯಾಕೃತಿಸರೇನವಳ? - ಮಂಕುತಿಮ್ಮ ||


860

ಸೃಷ್ಟಿಚೋದನೆಗಳಿಂ ನರನೊಳಿಷ್ಟಗಳುದಯ- |

ವಿಷ್ಟಸಿದ್ಧಿಗೆ ಯಂತ್ರತಂತ್ರಗಳ ಯುಕ್ತಿ ||

ತ್ವಷ್ಟೃಕುಶಲದೆ ಸೃಷ್ಟಿವಿಕೃತಿ; ಇಂತನ್ಯೋನ್ಯ- |

ಸ್ಪೃಷ್ಟರ್ ಪ್ರಕೃತಿ ನರರು - ಮಂಕುತಿಮ್ಮ ||


861

ದಿವ್ಯಚರಿತಂಗಳ ಪ್ರತ್ಯುಕ್ತಿ ನರಚರಿತೆ |

ಕಾವ್ಯವಿಜ್ಞಾನಗಳ್ ನಿಗಮಾನುಸರಗಳ್ ||

ನವ್ಯಸಂಪದವಾರ್ಷಸಂಪದುದ್ಧೃತವಿಂತು |

ಸವ್ಯಪೇಕ್ಷಗಳುಭಯ - ಮಂಕುತಿಮ್ಮ ||


862

ಇರುವುದರೊಳಾದನಿತು ಸೊಗವ ಪಡೆವೊಡೆ ಲೋಗರ್ |

ಅರಿಗೆ ಮೊದಲ್ ಇಹಕೆ ಪರದಾವರಣವಿಹುದನ್ ||

ಪರಮಾರ್ಥಗಣಿತದಿಂದಿಹದರ್ಥಗಳನೆಣಿಸೆ |

ಸರಿ ಲೋಕಬಾಂಧವ್ಯ - ಮಂಕುತಿಮ್ಮ ||


863

ಮುದಿಕುರುಡಿ ಹೊಂಗೆಯನು ``ಬಾದಾಮಿ, ಕೋ'ಯೆನುತ |

ಪದುಳದಿಂ ಮೊಮ್ಮಂಗೆ ಕೊಡಲು ಸಿಹಿಯಹುದೆ? ||

ಹೃದಯವೊಳಿತಾದೊಡೇಂ? ತಿಳಿವಿಹುದೆ? ಜಾಣಿಹುದೆ? |

ಸುಧೆ ಬಂತೆ ಸುಲಭದಲಿ? - ಮಂಕುತಿಮ್ಮ ||


864

ಜಗದ ಸೊಗದರಸಿಕೆಯ ಫಲ, ನೋಡು, ಬರಿಕಲಹ |

ಮೃಗಗಳಾವೇಶಗೊಳಲಪ್ಪುದಿನ್ನೇನು? ||

ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು |

ಹಗೆತನವುಮಂತು ಬಿಡು - ಮಂಕುತಿಮ್ಮ ||


865

ಉರಿಯಾರಿ ಮಳೆಗರೆಯೆ ಮರಳಿ ಸಸಿಯೇಳುವುದು |

ಮೆರುಗನೊಂದುವುದು ಪೊನ್ ಪುಟ ಕಾದ ಬಳಿಕ ||

ನರಜೀವವಂತು ಶುಚಿಯಹುದು ದುಃಖಾಶ್ರುವಿಂ |

ತರುವಾಯ ಪುನರುದಯ - ಮಂಕುತಿಮ್ಮ ||


866

ಆತುಮದ ಸಂಸ್ಥಿತಿಗೆ ದೈಹಿಕಸಮಾಧಾನ; |

ಭೌತವಿಜ್ಞಾನದಾ ರಾಷ್ಟ್ರಸಂಸ್ಥೆಗಳಾ ||

ನೂತನ ವಿವೇಕಪ್ರಯೋಗಗಳಿನಾದೀತು |

ಭೂತಿಸಂಪದ ಜಗಕೆ - ಮಂಕುತಿಮ್ಮ ||


867

ಯತನ ಕರ್ತವ್ಯವದು, ನಮಗೆ ವಿದ್ಯಾಭ್ಯಾಸ |

ಹಿತಪರಿಜ್ಞಾನ ಯತ್ನಾನುಭವ ಫಲಿತ ||

ಸತತಯತ್ನದಿನಾತ್ಮಶಕ್ತಿ ಪರಿವರ್ಧಿಪುದು |

ಯತನ ಜೀವನಶಿಕ್ಷೆ - ಮಂಕುತಿಮ್ಮ ||


868

ಅರೆದಿನದ ನಮ್ಮ ಯತ್ನದಿನದೇನೆನ್ನದಿರು |

ಕಿರಿದುಮೊಡಗೂಡಿರಲು ಸಿರಿಯಹುದು ಬಾಳ್ಗೆ ||

ಪರಿಪೋಷಿಸದೆ ನಿನ್ನೊಡಲ ದಾರಿಮರದ ಫಲ? |

ಕಿರುಜಾಜಿ ಸೊಗಕುಡದೆ? - ಮಂಕುತಿಮ್ಮ ||


869

ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ |

ಸ್ವರ್ಗವನು ಭುವಿಗಿಳಿಸಬಲ್ಲವನದಾರು? ||

ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ |

ಅರ್ಘಾರ್ಹತತ್ತ್ವವೆಲೊ - ಮಂಕುತಿಮ್ಮ ||


870

ದಿವಿಜಸುಧೆ ಬರಿಮಧುವೊ; ಹುಳಿಯುಪ್ಪುಮಿಶ್ರಿತವೊ? |

ಅವನಿಯುಣಿಸಿನಲಿ ಷಡ್ರಸ ತಪ್ಪದಿಹುದು ||

ಲವಲೇಶಮಾನುಮಿರದಿರೆ ಕಯ್ಪು ಜೀವನದಿ |

ಪವಳಿಸಿರನೇ ನರನು? - ಮಂಕುತಿಮ್ಮ ||


871

ಆರಿಗಾವುದು ತಕ್ಕುದಾರಿಗಾವುದು ದಕ್ಕ- |

ದೀ ರಹಸ್ಯದಿನಾದ ಸಾಹ್ಯವುಪಕಾರ ||

ತಾರತಮ್ಯವಿವೇಕವರಿಯದಾ ಸಂಸ್ಕಾರ |

ಪ್ರೇರಕವೊ ಚೌರ್ಯಕ್ಕೆ - ಮಂಕುತಿಮ್ಮ ||


872

ಗುಡಿಸಿಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ |

ಬಡವನಲಿ ಕೊರತೆಗಳ ನೆಡುವುದರಿದಲ್ಲ ||

ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು |

ಕೊಡಲಹುದವಂಗೆ ನೀಂ? - ಮಂಕುತಿಮ್ಮ ||


873

ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ |

ಕುಲುಕಿ ಹಾಸಿಗೆಯನರಸೆನುವುದುಪಕೃತಿಯೆ? ||

ಒಳಿತನೆಸಗುವೆನೆಂದು ನೆಮ್ಮದಿಯ ನುಂಗದಿರು |

ಸುಲಭವಲ್ಲೊಳಿತೆಸಗೆ - ಮಂಕುತಿಮ್ಮ ||


874

ಮಡಕೆಯನು ಬಡಿದು ಹೊನ್ಕೊಡವ ತೋರುವ ಸಖನೆ |

ಪಡೆದಿಹೆಯ ರಹದಾರಿಯನು ಹೊನ್ನ ಗಣಿಗೆ? ||

ಒಡಲಿಗೊಗ್ಗಿದ ನೀರ ಚೆಲ್ಲಿದೊಡದೇಂ ಪಾಲ |

ಕುಡಿವ ಸಂತಸಕೆಣೆಯೆ? - ಮಂಕುತಿಮ್ಮ ||


875

ಬಲುಹಳೆಯ ಲೋಕವಿದು, ಬಲುಪುರಾತನಲೋಕ |

ಬೆಳೆದಿರ್ಪುದಿದು ಕೋಟಿರಸಗಳನು ಪೀರ್ದು ||

ಸುಲಭವಲ್ಲಿದರ ಸ್ವಭಾವವನು ಮಾರ್ಪಡಿಸೆ |

ಸಲದಾತುರತೆಯದಕೆ - ಮಂಕುತಿಮ್ಮ ||


876

ಸಿಂಧುವನು ಹಿಮಗಿರಿಗೆ ಹಿಂದಿರುಗಿ ಬೇರೊಂದು |

ಚೆಂದದಲಿ ಪರಿದು ಬಾರೆಂದಾಣತಿಪೆಯಾ? ||

ಸಂದರ್ಭವಿಡಿದು ಜನಚೈತನ್ಯ ಪರಿದಿಹುದು |

ಅಂಧಗತಿಯಲ್ಲವದು - ಮಂಕುತಿಮ್ಮ ||


877

ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ |

ಹಿತಚಿಂತಕರು ಜನಕೆ, ಕೃತಪರಿಶ್ರಮರು? ||

ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ |

ಮಿತಿಯಿಂ ನವೀಕರಣ - ಮಂಕುತಿಮ್ಮ ||


878

ಒಡೆಯದಿರು ತಳಹದಿಯ ಸರಿವಡಿಪೆನದನೆಂದು |

ಸಡಲಿಸುವ ನೀಂ ಮರಳಿ ಕಟ್ಟಲರಿತವನೇಂ? ||

ಗಿಡವ ಸರಿ ಬೆಳೆಯಿಸಲು ಬುಡವ ಕೀಳ್ವುದು ಸರಿಯೆ? |

ದುಡುಕದಿರು ತಿದ್ದಿಕೆಗೆ - ಮಂಕುತಿಮ್ಮ ||


879

ಮೃಗಶೇಷವಿರುವನಕ ಜಗಳ ತಪ್ಪದು ಜಗದಿ |

ಹಗೆಗೆ ಕೊಲದವರು ಹಸಿವಿನಿಂದ ಕೊಂದಾರು ||

ಟಗರುಜೂಜೋ ಸಭೆಯ ರಗಳೆಯೋ ಕುಸ್ತಿಯೋ |

ಸೊಗ ಜನಕೆ ರಣರಂಗ - ಮಂಕುತಿಮ್ಮ ||


880

ತನ್ನಯ ಮನೋರಥಂಗಳ ಚಕ್ರವೇಗದಿನೆ |

ತನ್ನ ಮಣಿಹಾರಗಳ ಸಿಕ್ಕು ಬಿಗಿತದಿನೇ ||

ತನ್ನ ಸಂಕಲ್ಪ ವಿಪರೀತದಿನೆ ಮಾನವನ |

ಬೆನ್ನು ಮುರಿದೀತೇನೊ! - ಮಂಕುತಿಮ್ಮ ||


881

ಮಿತಿಯನರಿತಾಶೆ, ಸಮುಚಿತವ ಮರೆಯದ ಯತ್ನ |

ತೈತಿಕ್ಷೆ ಕಷ್ಟಾಂಶದಪರಿಹಾರ್ಯತೆಗೆ ||

ಮೃತಿಯೆ ಜೀವನಕಥೆಯ ಕೊನೆಯಲ್ಲವೆಂಬರಿವು |

ಹಿತಗಳಿವು ನರಕುಲಕೆ - ಮಂಕುತಿಮ್ಮ ||


882

ಸರ್ವಾರ್ಥ ಸಹಭಾಗಿತೆಗೆ ರಾಷ್ಟ್ರ ಕುಲ ವರ್ಗ |

ಸರ್ವದಣು ತಾನೆನುತ್ತೋರೊರ್ವ ಮನುಜನ್ ||

ಸರ್ವಜೀವ ಸಮೃದ್ಧಿಗನುಗೂಡಿ ದುಡಿಯುತಿರೆ |

ಪರ್ವವಂದಿಳೆಗೆಲವೊ - ಮಂಕುತಿಮ್ಮ ||


883

ಕಾಯಂಕಿಂತಾತ್ಮ ಪಿರಿದೆಂದು ಜನವರಿತಂದು |

ಸ್ವೀಯೇಚ್ಛೆಯಿಂ ಸಮಾಧಾನ ಕೆಡದಂದು ||

ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು |

ಶ್ರೇಯ ನೆರೆವುದು ಜಗಕೆ - ಮಂಕುತಿಮ್ಮ ||


884

ವಸ್ತುವಿಜ್ಞಾನದಿಂ ಜೀವನಸಮೃದ್ಧಿ ಮಿಗೆ |

ವಿಸ್ತರಿಸೆ ವಿಶ್ವೈಕ್ಯಭಾವ ಜನಮನದೊಳ್ ||

ದೃಷ್ಟಲೋಕದ ಬೆಡಗದೃಷ್ಟವನು ಮರಸದಿರೆ |

ಸ್ವಸ್ತಿ ಲೋಕಕೆಲ್ಲ - ಮಂಕುತಿಮ್ಮ ||


885

ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |

ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||

ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |

ಆನಂದ ಧರೆಗಂದು - ಮಂಕುತಿಮ್ಮ ||


886

ಅಶ್ವತ್ಥವಿಲ್ಲಿ ಬಾಡಿದೊಡೇನು? ಚಿಗುರಲ್ಲಿ; |

ನಶ್ವರತೆ ವಿಟಪ ಪರ್ಣಂಗಳಲಿ ಮಾತ್ರ; ||

ಶಾಶ್ವತತೆ ರುಂಡಮೂಲದಲಿ; ಪರಿಚರಿಸದನು |

ವಿಶ್ವಪ್ರಗತಿಯಂತು - ಮಂಕುತಿಮ್ಮ ||


887

ಪರಿಪೂರ್ಣಸುಖವನೆಳಸುವನು ತನ್ನೊಳಗಡೆಗೆ |

ತಿರುಗಿಸಲು ತನ್ನ ದೃಷ್ಟಿಯನು ನಿರ್ಮಲದಿಂ ||

ನಿರತಿಶಯ ಸುಖವಲ್ಲಿ, ವಿಶ್ವಾತ್ಮವೀಕ್ಷೆಯಲಿ |

ಪರಸತ್ತ್ವಶಾಂತಿಯಲಿ - ಮಂಕುತಿಮ್ಮ ||


888

ವ್ಯಕ್ತಿಮಾತ್ರದ ವಿಭವ ವಿಶ್ವಾತ್ಮತಾನುಭವ |

ಮುಕ್ತಿ ಸುಖವಾಂತರಿಕವದು ನಿರವಧಿಸುಖ ||

ಭಾಕ್ತ ಪ್ರಪಂಚಸುಖವೆಂತಪರಿಮಿತವಹುದು? |

ರಿಕ್ತಸುಖ ಬಾಹ್ಯಸುಖ - ಮಂಕುತಿಮ್ಮ ||


889

ಭ್ರಾಂತಿಯೋ ಸಂಪೂರ್ಣಸುಖದಾಶೆ ಬಾಹ್ಯದಲಿ |

ಸಾಂತ ಲೋಕದ ಸೌಖ್ಯ, ಖಂಡಖಂಡವದು ||

ಸ್ವಾಂತಕೃಷಿಯಿಂ ಬ್ರಹ್ಮವೀಕ್ಷೆ ಲಭಿಸಿರ್ದೊಡೇ- |

ಕಾಂತ ಪೂರ್ಣಾನಂದ - ಮಂಕುತಿಮ್ಮ ||


890

ನಶ್ವರಾಕೃತಿ ನಾಮಮಯ ವಿಶ್ವವಾರ್ಧಿಯಿದು |

ಶಾಶ್ವತಬ್ರಹ್ಮದುಚ್ಛ್ವಾಸ ಘನ ಬಿಂದು ||

ನಿಶ್ವಸಿತದಲೆಗಳನೆ ಪಿಡಿದು ಗುರಿಯರಿತೀಜೆ |

ವಿಶ್ವಮೂಲಾಪ್ತಿಯಲ - ಮಂಕುತಿಮ್ಮ ||


891

ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು |

ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು ||

ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು |

ಚೆನ್ನಹುದು ಬೊಮ್ಮನಲಿ - ಮಂಕುತಿಮ್ಮ ||


892

ಹೊರಗೆ, ವಿಶ್ವದಿನಾಚೆ, ದೂರದಲಿ, ನೀಲದಲಿ |

ಒಳಗೆ, ಹೃತ್ಕೂಪದಾಳದಲಿ, ಮಸಕಿನಲಿ ||

ನೆಲೆಗಳಿಂತೆರಡು ಮೂಲ ರಹಸ್ಯಕವುಗಳುಲಿ |

ಕಲೆತಂದು ನೀಂ ಜ್ಞಾನಿ - ಮಂಕುತಿಮ್ಮ ||


893

ಸ್ವಪ್ನಲೋಕವ ಜಾಗೃತಂ ಸುಳ್ಳೆನುದನಲ್ತೆ? |

ಸುಪ್ತಂಗೆ ಜಾಗೃತನ ಲೋಕಮುಂ ಸುಳ್ಳೇ ||

ಸ್ವಪ್ನ ಜಾಗ್ರತ್ಸುಪ್ತಿಗಳ ಹಿಂದೆ ನಿರ್ಲಿಪ್ತ- |

ಗುಪ್ತಾತ್ಮನಿಹುದು ದಿಟ - ಮಂಕುತಿಮ್ಮ ||


894

ಭಾನೂದಯಾಸ್ತಗಳಿನಲ್ತೆ ದಿಕ್ಕಾಲಗಳ |

ಮಾನಗಣಿತವು ನಮಗೆ? ಭಾನುವಿರದೊಡದೇಂ? ||

ಆನಂತ್ಯ, ಶುದ್ಧಸತ್ತಾಮಾತ್ರ, ಬೊಮ್ಮನದು |

ಲೀನನಾಗದರೊಳಗೆ - ಮಂಕುತಿಮ್ಮ ||


895

ಸಂಕೇತಭಾವಮಯ ಲೋಕಜೀವನದ ನಯ |

ಸಂಖ್ಯೆ ಗುಣ ಹೇತು ಕಾರ್ಯಗಳ ಲಕ್ಷಣದಿಂ- ||

ದಂಕಿತಂಗಳು ಪದ ಪದಾರ್ಥ ಸಂಬಂಧಗಳು |

ಅಂಕೆ ಮೀರ್ದುದು ಸತ್ತ್ವ - ಮಂಕುತಿಮ್ಮ ||


896

ಭೌತವಿಜ್ಞಾನ ವಿವರಗಳಿನೇನಾತ್ಮಂಗೆ? |

ಪ್ರೇತಪ್ರಯಾಣಕಥೆಯೆಂತಿರ್ದೊಡೇನು? ||

ಜಾತಿ ನೀತಿ ಸಮಾಜ ವರ್ಗಭೇದದಿನೇನು? |

ಘಾತಿಯಿಲ್ಲಾತ್ಮಂಗೆ - ಮಂಕುತಿಮ್ಮ ||


897

ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? |

ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ? ||

ಚಿನ್ಮಯವನದನೆ ನೀಂ ಸತ್ಯವೆಂದಾಶ್ರಯಿಸು |

ಶೂನ್ಯವಾದವೆ ಶೂನ್ಯ - ಮಂಕುತಿಮ್ಮ ||


898

ನರನರೀ ಚಿತ್ರಗಳು, ನಾಟಕದ ಪಾತ್ರಗಳು |

ಪರಿಪರಿಯ ವೇಷಗಳು, ವಿವಿಧ ಭಾಷೆಗಳು ||

ಬರುತಿಹುವು, ಬೆರಗೆನಿಸಿ, ಮೆರೆಯುವುವು, ತೆರಳುವುವು |

ಮೆರೆವಣಿಗೆಯೋ ಲೋಕ - ಮಂಕುತಿಮ್ಮ ||


899

ಜಗದೀ ಜಗತ್ತ್ವವನು, ಮಾಯಾವಿಚಿತ್ರವನು |

ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು ||

ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು |

ಹೊಗಿಸಾ ಕಡೆಗೆ ಮತಿಯ - ಮಂಕುತಿಮ್ಮ ||


900

ಸುತ್ತಮುತ್ತಣ ಗಾಳಿಯಾವಗಂ ನಮ್ಮೊಡಲ |

ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ||

ಬಿತ್ತರದ ಲೋಕಭಾರವನಾತ್ಮನರಿಯದಿರೆ |

ಮುಕ್ತಲಕ್ಷಣವದುವೆ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post