Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 601-650

 601

ಕೆಲಸವ ಮಾಡು ಕಿರಿದೆನದೆ ಮನವಿಟ್ಟು |

ದೊರೆತುದ ಹಸಾದವೆಂದುಣ್ಣು ಗೊಣಗಿಡದೆ ||

ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ |

ಹೊರಡು ಕರೆ ಬರಲ್ ಅಳದೆ - ಮಂಕುತಿಮ್ಮ ||


602

ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ |

ಆಯಸಂಗೊಳುತ ಸಂಸಾರಿಯಾಗಿರುವಾ ||

ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ |

ಹೇಯವದರೊಳಗೇನೊ - ಮಂಕುತಿಮ್ಮ ||


603

ಧರಣಿಗೋಳವು ಮೂಸೆ; ಜೀವಗಳನದರೊಳಗೆ |

ಪರಿಶುದ್ಧಿಗೊಳಿಸುವುದು ಸಂಸಾರತಾಪ ||

ಪರಿಪರಿಯ ಬಂಧುಧರ್ಮದಿನ್ ಅಹಂಮತಿ ಕರಗೆ |

ಹರಡಿ ಹಬ್ಬುವುದಾತ್ಮ - ಮಂಕುತಿಮ್ಮ ||


604

ಹೊಸಹೊಸಬನಾಗುವನನುಕ್ಷಣಂ ಮಾನವನು |

ವಸುಧೆಯಾ ಮೂಸೆಯಲಿ ಪುಟಪಾಕವಾಂತು ||

ರಸಮೂರ್ತಿಯಾಗುವನು ಜಗದಾತ್ಮಮತಿ ಬೆಳೆಯೆ |

ಕಸವೆಲ್ಲ ಕಳೆದವನು - ಮಂಕುತಿಮ್ಮ ||


605

ಉದರಶಿಖಿಯೊಂದುಕಡೆ, ಹೃದಯಶಿಖಿಯೊಂದುಕಡೆ |

ಕುದಿಸದಿರೆ ಜೀವಶಿಲೆ ಮೃದುವಪ್ಪುದೆಂತು? ||

ಬದುಕಿನುರಿಯಲಿ ಕರಗಿ ತಿಳಿಯಾಗದಿಹ ಜೀವ |

ಪುದಿಯದಾತ್ಮಾರ್ಣವದಿ - ಮಂಕುತಿಮ್ಮ ||


606

ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ |

ಸಂಸೃತಿ ದ್ವಂದ್ವಗಳ ಸಮತೂಗಲರಿವಂ ||

ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ |

ಸಾಸವೀ ಗೃಹಧರ್ಮ - ಮಂಕುತಿಮ್ಮ ||


607

ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |

ವ್ಯಾಮೋಹಕೆಡೆಗೊಟ್ಟೊಡದು ನಿಗಳವಹುದು ||

ಸಾಮರಸ್ಯವನೆಂತು ಕಾಣ್ಬುದೀ ವಿಷಯದಲಿ? |

ಆಮಿಷದ ತಂಟೆಯಿದು - ಮಂಕುತಿಮ್ಮ ||


608

ಕೈಕಯಿಯವೊಲು ಮಾತೆ, ಸತ್ಯಭಾಮೆವೊಲು ಸತಿ |

ಸಾಕಿ ಸಂತಸವೆರೆಯೆ ಸಂಸಾರ ಲೀಲೆ ||

ಬೇಕು ಮತ್ಸರ ಮಮತೆ ಮೋಹಂಗಳಾವೇಶ |

ಲೋಕನಾಟಕಕಾಗಿ - ಮಂಕುತಿಮ್ಮ ||


609

ಆವ ಜೀವದ ಪಾಕವಾವನುಭವದಿನಹುದೊ! |

ಆವ ಪಾಪಕ್ಷಯವದಾವ ಪುಣ್ಯದಿನೋ! ||

ಕಾವಿರದೆ ಪಕ್ವವಹ ಜೀವವಿಳೆಯೊಳಗಿರದು |

ನೋವೆಲ್ಲ ಪಾವಕವೊ - ಮಂಕುತಿಮ್ಮ ||


610

ಕ್ಷುತ್ತುಮಮತೆಗಳು ಜೀವಕೆ ಕುಲಿಮೆಸುತ್ತಿಗೆಗಳ್ |

ಉತ್ತಮವದೆನಿಪುವುವು ಕಿಟ್ಟಗಳ ಕಳೆದು ||

ಚಿತ್ತಸಂಸ್ಕಾರಸಾಧನವಯ್ಯ ಸಂಸಾರ |

ತತ್ತ್ವಪ್ರವೃತ್ತಂಗೆ - ಮಂಕುತಿಮ್ಮ ||


611

ಮನೆಯೆ ಮಠವೆಂದು ತಿಳಿ, ಬಂಧು ಬಳಗವೆ ಗುರುವು |

ಅನವರತಪರಿಚರ್ಯೆಯವರೊರೆವ ಪಾಠ ||

ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ |

ಮನಕೆ ಪುಟಸಂಸ್ಕಾರ - ಮಂಕುತಿಮ್ಮ ||


612

ಕಾಷಾಯವೇಂ ತಪಸು? ಗೃಹಲೋಕನಿರ್ವಾಹ |

ವೇಷತಾಳದ ತಪಸು, ಕಠಿನತರ ತಪಸು ||

ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ |

ಆಸಿಧಾರವ್ರತವೊ - ಮಂಕುತಿಮ್ಮ ||


613

ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ |

ಲಯವಡಿಸುವುದದೇನು ಶಿವಯೋಗಲೀಲೆ? ||

ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- |

ನ್ವಯಿಸಿಕೊಂಡಿಹುದೇನು? - ಮಂಕುತಿಮ್ಮ ||


614

ಮಾರನಂ ದಂಡಿಸಿರೆ ಗೌರಿಯಿಂ ಭಯವೇನು? |

ಚಾರುಸಹಕಾರಿಯವಳೆಂದು ಶಿವನೊಲಿದನ್ ||

ಮೀರೆ ಮೋಹವನು ಸಂಸಾರದಿಂ ಭಯವೇನು? |

ದಾರಿ ಕೆಳೆಯದು ನಿನಗೆ - ಮಂಕುತಿಮ್ಮ ||


615

ಹಾಲ ಕಾಯಿಸಿ ಹೆಪ್ಪನಿಕ್ಕಿ ಕಡೆದೊಡೆ, ಮೊದಲು |

ಮೇಲೆ ಕಾಣದ ಬೆಣ್ಣೆ ತೇಲಿ ಬರುವಂತೆ ||

ಬಾಳನೀ ಜಗದ ಮಂತುವು ಕಡೆಯಲೇಳುವುದು |

ಆಳದಿಂದಾತ್ಮಮತಿ - ಮಂಕುತಿಮ್ಮ ||


616

ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |

ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||

ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |

ಶಕ್ತಿಯಧ್ಯಾತ್ಮಕದು - ಮಂಕುತಿಮ್ಮ ||


617

ಧ್ವನಿತ ಪ್ರತಿಧ್ವನಿತ ಮನುಜಜೀವಿತವೆಲ್ಲ |

ಕುಣಿವುದವನೆದೆ ಜಗತ್ಪ್ರಕೃತಿ ಪಾಡುವವೊಲ್ ||

ಇನಿದಕೊಲವಳಲಿಗನುತಾಪ; ಸೆಣಸಿಗೆ ಬೀರ |

ಘನಗರ್ಜಿತಕೆ ದೈನ್ಯ - ಮಂಕುತಿಮ್ಮ ||


618

ಜಗದ ಸಂತಾಪ ಸಂತಸ ಸಂಭ್ರಮಂಗಳುಲಿ |

ಬಗಿದು ನರನೆದೆಯ, ಜೀವವ ಪಿಡಿದು ಕುಲುಕೆ ||

ಸೊಗಯಿಪುದು ಮನಸಿಗದು ಕವಿಕಲಾರಸಿಕರ್ಗೆ |

ಜಗ ಸೂರ್ಯಂ ನೀಂ ಕಮಲ - ಮಂಕುತಿಮ್ಮ ||


619

ಪ್ರತ್ಯೇಕ ಸುಖವ, ನೀಂ ಪ್ರತ್ಯೇಕ ಸಂಪದವ- |

ನತ್ಯಾಶೆಯಿಂದರಸಿ ಮಿಕ್ಕೆಲ್ಲ ಜಗವ- ||

ನೊತ್ತಟ್ಟಿಗಿಡುವೆನೆನೆ, ನಷ್ಟವಾರಿಗೊ ಮರುಳೆ? |

ಬತ್ತುವುದು ನಿನ್ನಾತ್ಮ - ಮಂಕುತಿಮ್ಮ ||


620

ಲೋಕಜೀವನದೆ ಮಾನಸದ ಪರಿಪಾಕವಾ |

ಪಾಕದಿಂ ಮತಿಶುದ್ಧಿಯದರಿನೊಳದೃಷ್ಟಿ ||

ಸಾಕಲ್ಯದಾತ್ಮ ಸಂದರ್ಶನಕೆ ಕರಣವದು |

ಲೋಕದಿಂ ನಿರ್ಲೋಕ - ಮಂಕುತಿಮ್ಮ ||


621

ಧರಿಸಿರ್ಪುದಲ ಧರ್ಮ? ಧರಿಸು ಜೀವನಧುರವ |

ಚರಿಸು ಲೋಕದ ಮಾರ್ಗಗಳಲಿ ಹಿತವರಿತು ||

ಸರಿಪಡಿಸಿ ದಾರಿಗಳ ಕೆರೆ ತೋಪು ಸತ್ರಗಳ |

ನೆರವಾಗು ಪಯಣಕ್ಕೆ - ಮಂಕುತಿಮ್ಮ ||


622

ಧರ್ಮನಿರ್ಣಯ ನಿನಗೆ ಜನ್ಮಜನ್ಮಾಂತರದ |

ಕರ್ಮಸಂದರ್ಭದಿಂದೊಗೆವುದದನರಿತು ||

ನಿರ್ಮಮದ ನಿರ್ಮಲೋತ್ಸಹದ ನೀನಾಚರಿಸೆ |

ಬ್ರಹ್ಮ ಸಾಮೀಪ್ಯವೆಲೊ - ಮಂಕುತಿಮ್ಮ ||


623

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ |

ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ||

ದಿಹಪರಸಮನ್ವಯದೆ ಸರ್ವಹಿತಸಂಸ್ಥಿತಿಗೆ |

ಸಹಕರಿಪುದಲೆ ಧರ್ಮ - ಮಂಕುತಿಮ್ಮ ||


624

ಹತ್ಯೆಯೋ ಹನ್ಯತೆಯೊ ವಿಜಯವೋ ಪರಿಭವವೊ |

ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ||

ಕೃತ್ಯನಿರ್ಣಯ ಬಾಹ್ಯಲಾಭನಷ್ಟದಿನಲ್ಲ |

ಆತ್ಮಋಣವದು ಜಗಕೆ - ಮಂಕುತಿಮ್ಮ ||


625

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು |

ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ||

ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು |

ಗಟ್ಟಿ ಪುರುಳೇನಲ್ಲ - ಮಂಕುತಿಮ್ಮ ||


626

ಕುಸುಮಸಖನೇಂ ನೀನು? ಹಿಸುಕದೆಯೆ ಮೂಸದನು |

ಹಿಸುಕೆ ಕಟುಕಂಪು; ನರಲೋಕವದರವೊಲೇ ||

ಗಸಿಯ ಕಲಕದೆ ಕೊಳದ ಮೇಲ್ತಿಳಿಯ ಕುಡಿದು ನಡೆ |

ಹಸನು ಹಗುರದ ಬಾಳು - ಮಂಕುತಿಮ್ಮ ||


627

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು |

ವಿಷದೂಟಕಿಂತುಪೋಷಿತವೆ ಲೇಸಲ್ತೆ? ||

ತೃಷೆ ಕನಲೆ, ಜೀವ ಬಿಸಿಬಾಣಲಿಗೆ ಬಿದ್ದ ಹುಳು |

ಶಿಶು ಪಿಶಾಚಿಯ ಕೈಗೆ - ಮಂಕುತಿಮ್ಮ ||


628

ಋಣವ ತೀರಿಸಬೇಕು, ಋಣವ ತೀರಿಸಬೇಕು |

ಋಣವ ತೀರಿಸುತ ಜಗದಾದಿಸತ್ತ್ವವನು ||

ಜನದಿ ಕಾಣುತ್ತದರೊಳ್ ಒಂದುಗೂಡಲುಬೇಕು |

ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ ||


629

ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ |

ಆವರಿಸದಳಲ್ ಎಲ್ಲರನುಮೊಂದೆ ಸಮಯ ||

ನೋವಿಲ್ಲದರು ನೊಂದವರನು ಸಂತಯಿಸುತಿರೆ |

ಜೀವನವು ಕಡಿದಹುದೆ? - ಮಂಕುತಿಮ್ಮ ||


630

ಸ್ಥೂಲ ಸೂಕ್ಷ್ಮವಿವೇಕರಹಿತೇಷ್ಟ ಬಂಧುಜನ |

ಕಾಲದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು ||

ಸಾಲವನು ನಿನ್ನಿಂದ ಸಲಿಸಿಕೊಳಬಂದವರು |

ತಾಳುಮೆಯಿನವರೊಳಿರು - ಮಂಕುತಿಮ್ಮ ||


631

ಸರಿಗೆಪಂಚೆಯೊ ಹೊದಕೆ, ಹರಕುಚಿಂದಿಯೊ ಮೈಗೆ |

ಪರಮಾನ್ನಭೋಜನವೊ, ತಿರುಪೆಯಂಬಲಿಯೋ ||

ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ |

ಕರುಬು ಕೊರಗೇತಕೆಲೊ? - ಮಂಕುತಿಮ್ಮ ||


632

ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |

ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||

ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |

ಜವರಾಯ ಸಮವರ್ತಿ - ಮಂಕುತಿಮ್ಮ ||


633

ಸಾಧ್ಯಪಡದಾರಿಗಂ ನರಭಾಲಪಟ್ಟವನು |

ಶುದ್ಧಪಡಿಸಲು ತೊಡೆದು ಪೂರ್ವದೆಲ್ಲವನು ||

ಹೊದ್ದೆ ಹರಿಯಲಿ ಬೇಕು ಕರ್ಮಶೇಷದ ಪಟವ |

ಬುದ್ಧಿನುಡಿ ಸೈರಣೆಯೆ - ಮಂಕುತಿಮ್ಮ ||


634

ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ- |

ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ||

ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ- |

ಯಿದ್ದೆಯಿರುವುದು ನಮಗೆ - ಮಂಕುತಿಮ್ಮ ||


635

ಗುದ್ದಲಿಯಿನಾದೀತೆ ಮಲೆ ಕಣಿವೆ ಸಮದ ನೆಲ? |

ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ? ||

ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ? |

ಸಿದ್ಧವಿರು ಸೈರಣೆಗೆ - ಮಂಕುತಿಮ್ಮ ||


636

ಸಾಸಿರದ ಯುಕ್ತಿ ಸಾಹಸದ ನೀನೆಸಗುತಿರು |

ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ||

ಶೇಷ ನಿನಗುಳಿವುದೆಂತಾದೊಡಂ ನೋವಿನಿತು |

ಸೈಸದನು ನೀನಳದೆ - ಮಂಕುತಿಮ್ಮ ||


637

ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು |

ಸರಿತಪ್ಪುಗಳಿಗಂತು, ಜಾಣ್ ಬೆಪ್ಪುಗಳ್ಗಂ ||

ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ |

ಪರವೆಯೆಂತಾದೊಡೇಂ? - ಮಂಕುತಿಮ್ಮ ||


638

ನಂಬು ದೇವರ, ನಂಬು, ನಂಬೆನ್ನುವುದು ಲೋಕ |

ಕಂಬನಿಯನಿಡುವ ಜನ ನಂಬಲೊಲ್ಲದರೇಂ? ||

ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? |

ತುಂಬು ವಿರತಿಯ ಮನದಿ - ಮಂಕುತಿಮ್ಮ ||


639

ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ |

ಮಾಧ್ವೀಕ ಭಯವಿರದು ಜಾಗರೂಕನಿಗೆ ||

ದೃಗ್ದೃಶ್ಯಚಿತ್ರಪ್ರಪಂಚದಲಿ ಸೇರಿ ನೀಂ |

ಮುಗ್ಧನಾಗದೆ ಸುಖಿಸು - ಮಂಕುತಿಮ್ಮ ||


640

ತಿರುಕ ನೀನೀ ಬ್ರಹ್ಮಪುರಿಯೊಳದ ಮರೆಯದಿರು |

ಸಿರಿಯಿರ್ದೊಡೇನು? ಪರಿಜನವಿರ್ದೊಡೇನು? ||

ತೊರೆದೆಲ್ಲ ಡಂಭಗಳ ನೀನೆ ನಿನ್ನಾಳಾಗು |

ಪರದೇಶಿವೊಲು ಬಾಳು - ಮಂಕುತಿಮ್ಮ ||


641

ಬಾನೊಳಿರುವುದೆ ಪಕ್ಷಿ ಪಾರ್ವ ದಾರಿಯ ನಕ್ಷೆ? |

ಮೀನು ನೀರೊಳು ನುಸುಳೆ ಪಥನಿಯಮವಿಹುದೆ? ||

ಏನೊ ಜೀವವನೆಳೆವುದೇನೊ ನೂಕುವುದದನು |

ನೀನೊಂದು ಗಾಳಿಪಟ - ಮಂಕುತಿಮ್ಮ ||


642

ದಾರಿಗುರಿಗಳ ಗೊತ್ತು ಕಗೆಗುಂಟೇನಯ್ಯಾ? |

ಆರ ಮನೆ ಸಂಡಿಗೆಯೊ, ಚುಂಡಿಲಿಯೊ, ಹುಳುವೋ ||

ಆರ ಪಿಂಡವೊ, ಏನೊ, ಎಂತೊ, ಆ ಬಾಳ ಗತಿ! |

ಮೀರಿದವನೇಂ ನೀನು? - ಮಂಕುತಿಮ್ಮ ||


643

ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು |

ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ||

ಗೋಳ್ಕರೆದರೇನು ಫಲ ಗುದ್ದಾಡಲೇನು ಫಲ |

ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ||


644

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ |

ಕೊರತೆಯೊಂದನು ನೀನು ನೆನೆನೆನೆದು ಕೆರಳಿ ||

ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ |

ನರಳುವುದು ಬದುಕೇನೊ? - ಮಂಕುತಿಮ್ಮ ||


645

ಚಿಂತೆಸಂತಾಪಗಳು ಮನಸಿಗೆ ವಿರೇಚಕವೊ |

ಸಂತಸೋತ್ಸಾಹಗಳೆ ಪಥ್ಯದುಪಚಾರ ||

ಇಂತುಮಂತುಂ ನಡೆಯುತಿರುವುದಾತ್ಮ ಚಿಕಿತ್ಸೆ |

ಎಂತಾದೊಡಂತೆ ಸರಿ - ಮಂಕುತಿಮ್ಮ ||


646

ಶೀತವಾತಗಳಾಗೆ ದೇಹಕೌಷಧ ಪಥ್ಯ |

ಚೇತ ಕೆರಳಿರೆ ಕಣ್ಣುಕಿವಿಗಳಾತುರದಿಂ ||

ಪ್ರೀತಿಯಿಂದದನೊಲಿಸಿ ನೀತಿಯಲಿ ಶಿಕ್ಷಿಸುವು- |

ದಾತುಮದ ನೆಮ್ಮದಿಗೆ - ಮಂಕುತಿಮ್ಮ ||


647

ಮುಕ್ತಿಯೆಂಬುದು ಮನದ ಸಂಸ್ಥಿತಿಯೆ, ಬೇರಲ್ಲ |

ರಕ್ತಿ ವಿಪರೀತವದಕಾಗದಿರೆ ಮುಕ್ತಿ ||

ಯುಕ್ತಿಯಿಂ ಕರಣಚೇಷ್ಟಿತವ ತಿದ್ದುತೆ ಶಮಿಪ |

ಶಕ್ತಿವಂತನೆ ಮುಕ್ತ - ಮಂಕುತಿಮ್ಮ ||


648

ತರಿದುಬಿಡು, ತೊರೆದುಬಿಡು, ತೊಡೆದುಬಿಡು ನೆನಹಿಂದ |

ಕರೆಕರೆಯ ಬೇರುಗಳ, ಮನದ ಗಂಟುಗಳ ||

ಉರಕೆ ಸೊಗಸೆನಿಸಿದಾ ಪ್ರೀತಿಹಾರಮುಮೊರ್ಮೆ |

ಉರುಳಪ್ಪುದಾತ್ಮಕ್ಕೆ - ಮಂಕುತಿಮ್ಮ ||


649

ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |

ಮಗುವು ಪೆತ್ತರ್ಗೆ ನೀಂ, ಲೋಕಕೆ ಸ್ಪರ್ಧಿ ||

ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |

ರಗಳೆಗಾರಿಗೆ ಬಿಡುವೊ? - ಮಂಕುತಿಮ್ಮ ||


650

ರಾಗಿಮುದ್ದೆಯ ನುಂಗಿ ನಲಿದು ಬಾಳ್ವಾತಂಗೆ |

ಕಾಗೆ ಕದ್ದುಣುವ ಭಕ್ಷ್ಯವ ಕಂಡು ಕರುಬೆ? ||

ನೀಗುವುದು ಹಸಿವನ್ ಉಣಿಸೆಂತಪ್ಪುದಾದೊಡಂ |

ಬಾಗಿಸದಿರಾತ್ಮವನು - ಮಂಕುತಿಮ್ಮ ||


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post