Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 551-600

 551

ನಿನ್ನ ಹೆಗಲಿನ ಹೊರೆಯ ದೈವಭುಜಕೇರಿಸುವ |

ಸನ್ನಾಹ ಸಾಗೀತೆ? ದೈವವೊಪ್ಪೀತೆ? ||

ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ, ಭಿನ್ನಿಸಲಿ, |

ನಿನ್ನ ಬಲವನು ಮೆರಸೊ - ಮಂಕುತಿಮ್ಮ ||


552

ಶ್ರುತಿಯರ್ಥ ವಿಶದವಪ್ಪುದು ಪುರುಷಭಾಷ್ಯದಿಂ |

ಶ್ರುತಿಮತಿಗಳನ್ಯೋನ್ಯಪರಿಪೂರಕಂಗಳ್ ||

ಯುತಿಯೊಳವು ಸೇರಿರಲು ಸತ್ಯದರ್ಶನ ನಿನಗೆ |

ಕೃತಸಮನ್ವಯನಾಗು - ಮಂಕುತಿಮ್ಮ ||


553

ಚೂರುಗಳು ಹದಿನಾರು ಚಂದ್ರಮಂಡಲಕಂತೆ |

ನೂರಾರು ಚೂರುಗಳು ಸತ್ಯಚಂದ್ರನವು ||

ಸೇರಿಸುತಲವುಗಳನು ಬಗೆಯರಿತು ಬೆಳಸುತಿರೆ |

ಸಾರ ಋತಪೂರ್ಣಿಮೆಯೊ - ಮಂಕುತಿಮ್ಮ ||


554

ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು? |

ಕುಳಿ ಮೇಡು ದೂರ ಮತಿಮನಸುಗಳ ನಡುವೆ ||

ಒಳಗಿನಾಯೆಣ್ಣೆಬತ್ತಿಗಳೆರಡುಮೊಡವೆರೆಯೆ |

ಬೆಳಕು ಜೀವೋನ್ನತಿಗೆ - ಮಂಕುತಿಮ್ಮ ||


555

ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು |

ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ||

ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ |

ನೆಮ್ಮಲಿನ್ನೇನಿಹುದೊ? - ಮಂಕುತಿಮ್ಮ ||


556

ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ |

ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ||

ಚಿತ್ತವನು ತಿರುಗಿಸೊಳಗಡೆ; ನೋಡು, ನೋಡಲ್ಲಿ |

ಸತ್ತ್ವದಚ್ಛಿನ್ನ ಝರಿ - ಮಂಕುತಿಮ್ಮ ||


557

ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ |

ಚಿಂತೆ ಕುಮುಲದು, ಹೊಗೆಗಳೊತ್ತವಾತ್ಮವನು ||

ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ಕಿಟಿಕಿಯುಂ |

ಸಂತತದಪೇಕ್ಷಿತವೊ - ಮಂಕುತಿಮ್ಮ ||


558

ಆಳವನು ನೋಡಿ ಬಗೆದಾಡುವಾ ಮಾತಿಂಗೆ |

ರೂಢಿಯರ್ಥವದೊಂದು ಗೂಢಾರ್ಥವೊಂದು ||

ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು |

ಕೋಲು ಹುಟ್ಟೊಂದು ಬಲ - ಮಂಕುತಿಮ್ಮ ||


559

ಪರಮಪದದಲಿ ನೋಡು : ಬೇರುಗಳ್ ವ್ಯೋಮದಲಿ |

ಧರೆಗಿಳಿದ ಕೊಂಬುರಂಬೆಗಳು, ಬಿಳಲುಗಳು ||

ಚಿರಂಜೀವಿವೃಕ್ಷವಿದು ವಿಶ್ವಜೀವಾಶ್ವತ್ಥ |

ಪರಿಕಿಸಿದರರ್ಥವನು - ಮಂಕುತಿಮ್ಮ ||


560

ಜೀವನದ ಮೂಲ ಮೇಲಿಹುದು ಪರಮೋರ್ಧ್ವದಲಿ |

ತೀವಿರ್ಪುದದು ಕೆಳಗೆ ನಮ್ಮ ಲೋಕದಲಿ ||

ನಾವದರ ಕಡ್ಡಿಯೆಲೆ, ಚಿಗುರುವೆವು, ಬಾಡುವೆವು |

ಸಾವು ಮರಕೇನಿಲ್ಲ - ಮಂಕುತಿಮ್ಮ ||


561

ಒಂದು ಕಡೆ ಚಿಗುರುತಲಿ, ಒಂದು ಕಡೆ ಬಾಡುತಲಿ |

ಕಂದುತಿರೆ ಕೊಂಬೆ, ಮುಂಡದಲಿ ಹಬ್ಬುತಲಿ ||

ಎಂದೆಂದುಮಶ್ವತ್ಥ ಹಳೆಹೊಸದು; ತಾನದಾ |

ಸ್ಪಂದನವೊ ಬ್ರಹ್ಮನದು - ಮಂಕುತಿಮ್ಮ ||


562

ಎಲೆಗಳನು ಕಡ್ಡಿ, ಕಡ್ಡಿಯ ರಂಬೆಕೊಂಬೆಗಳು |

ತಳೆದು ಪೆರ್ಚಿಸುತಿಹುವು ಮರದ ಬಾಳ್ಸಿರಿಯ ||

ಸ್ಥಲವೊಂದು ನಿನಗಿಹುದು ವಿಶ್ವವೃಕ್ಷದೊಳಂತು |

ಹಳಿಯದಿರು ನಿನ್ನಿರವ - ಮಂಕುತಿಮ್ಮ ||


563

ಬಿಳಲಲ್ಲಿ, ಬೇರಲ್ಲ, ಮುಂಡಕಾಂಡಗಳಲ್ಲ |

ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||

ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |

ತಿಳಿದದನು ನೆರವಾಗು - ಮಂಕುತಿಮ್ಮ ||


564

ಎತ್ತಲೋ ಕಾಡುಮಬ್ಬಿನ ಬಳ್ಳಿ ಮೊಗ್ಗಿನಲಿ |

ಚಿತ್ರರಚನೆಗದೇಕೆ ತೊಡಗುವಳ್ ಪ್ರಕೃತಿ? ||

ಕೃತ್ಯಕ್ಕೆ ತಾಂ ತರುವ ಶಕ್ತಿಗುಣಪೂರ್ಣತೆಯೆ |

ಸಾರ್ಥಕವೊ ಜೀವಿತಕೆ - ಮಂಕುತಿಮ್ಮ ||


565

ಕಾಡುಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ? |

ನೋಡುವರ ಕಣ್ಣೊಲವ ಬೇಡುವಳೆ ಸೃಷ್ಟಿ? ||

ಮಾಡುವಾ ಮಾಟಗಳನಾದನಿತು ಬೆಳಗಿಪುದು |

ರೂಢಿಯಾ ಪ್ರಕೃತಿಯದು - ಮಂಕುತಿಮ್ಮ ||


566

ಆರಣ್ಯಕದ ಪುಷ್ಪಗಳ ಮೂಸುವವರಾರು? |

ಆರಿಹರು ಪತಗದುಡುಪನು ಹುಡುಕಿ ಮೆಚ್ಚಲ್? ||

ಬೇರೊಬ್ಬರೆಣಿಕೆಯಿಲ್ಲದೆ ಪ್ರಕೃತಿ ತನಗೆಂದೆ |

ಸ್ವಾರಸ್ಯವೆಸಗುವಳೊ! - ಮಂಕುತಿಮ್ಮ ||


567

ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ |

ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ||

ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ |

ಧನಿಯರಿವರೆಲ್ಲಿಹರೊ? - ಮಂಕುತಿಮ್ಮ ||


568

ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ |

ಎಣಿಕೆಗಳ ಪೂರಯಿಪ ಸಾಧನಗಳಿಲ್ಲ ||

ಜನುಮಜನುಮಗಳಿಂತು ಪೇಚಾಟ, ತಿಣಕಾಟ |

ಮುನಿವುದಾರಲಿ, ಪೇಳು? - ಮಂಕುತಿಮ್ಮ ||


569

ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? |

ಮತಿಮನಂಗಳ ಕೃಷಿತಪಃಫಲವುಮಂತು ||

ಸತತಕೃಷಿ, ಬೀಜಗುಣ, ಕಾಲವರ್ಷಗಳೊದವೆ |

ಪ್ರತಿಭೆ ವಿಕಸಿತವಹುದೊ - ಮಂಕುತಿಮ್ಮ ||


570

ವಕ್ತ್ರವುಂಟೆಲ್ಲರಿಗೆ, ವರ್ಚಸೋರೊರ್ವರಿಗೆ |

ಕತ್ತಿ ಪಣ್ಯದೊಳುಂಟು, ಶಕ್ತಿ ಸಹಜದಲಿ ||

ವ್ಯಕ್ತಿಪ್ರಭಾವವೀ ಲೋಕಚರಿತೆಯ ಕೀಲು |

ಹಸ್ತವದು ದೈವಕೆಲೊ - ಮಂಕುತಿಮ್ಮ ||


571

ನಿನಗಿರದ ಕಣ್ ಬಾಯಿ ವಾಲ್ಮೀಕಿಗೆಂತಾಯ್ತು? |

ಮುನಿಕವಿತೆಗೆಂತು ನಿನ್ನೆದೆಯೊಳೆಡೆಯಾಯ್ತು? ||

ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತೆ |

ಅನಲನೆಲ್ಲರೊಳಿಹನು - ಮಂಕುತಿಮ್ಮ ||


572

ಪುರುಷಯೋಚನೆಯಿಲ್ಲ ಮುರಿದು ಮಣ್ಣಹುದೆಂದು |

ಕೊರಗದಿರು; ಕೆಟ್ಟೆನೆಂದೆಂದುಮೆನ್ನದಿರು ||

ಶರಧಿಯೊಳು ಮೀನೊಂದು ಪುಟ್ಟಲೇಂ ಸಾಯಲೇಂ? |

ಪರವೆಯೇನಿಲ್ಲವೆಲೊ - ಮಂಕುತಿಮ್ಮ ||


573

ಹೋರಾಡು ಬೀಳ್ವನ್ನಮೊಬ್ಬೊಂಟಿಯಾದೊಡಂ |

ಧೀರಪಥವನೆ ಬೆದಕು ಸಕಲಸಮಯದೊಳಂ ||

ದೂರದಲಿ ಗೊಣಗುತ್ತ ಬಾಳ್ವ ಬಾಳ್ಗೇನು ಬೆಲೆ? |

ಹೋರಿ ಸತ್ತ್ವವ ಮೆರಸು - ಮಂಕುತಿಮ್ಮ ||


574

ಹೋರು ಧೀರತೆಯಿಂದ, ಮೊಂಡುತನದಿಂ ಬೇಡ |

ವೈರ ಹಗೆತನ ಬೇಡ, ಹಿರಿ ನಿಯಮವಿರಲಿ ||

ವೈರಾಗ್ಯ ಕಾರುಣ್ಯ ಮೇಳನವೆ ಧೀರತನ |

ಹೋರುದಾತ್ತತೆಯಿಂದ - ಮಂಕುತಿಮ್ಮ ||


575

ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ |

ಸಾಕ್ಷಿಯವೊಲಿರು ಕಡೆಗೆ ತೀರ್ಪಾಗುವಂದು ||

ಭಿಕ್ಷುವೊಲು ಕಾಲ ಸವೆಯಿಸಿ ಲೋಕಯಾತ್ರೆಯಲಿ |

ಪಕ್ಷಿವೊಲು ಮನದೊಳಿರು - ಮಂಕುತಿಮ್ಮ ||


576

ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು |

ಸನ್ನಿವೇಶದ ಸೂಕ್ಷ್ಮವರಿತು, ಧೃತಿದಳೆದು ||

ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ |

ಪುಣ್ಯಶಾಲಿಯ ಪಾಡು - ಮಂಕುತಿಮ್ಮ ||


577

ಕಿಡಿ ಸಣ್ಣದನು ಮೇಲೆ ಬಿದ್ದ ಕೊರಡಾರಿಪುದು |

ಸುಡುವುದಾ ಕಿಡಿಯುರಿಯೆ ನೂರು ಕೊರಡುಗಳ ||

ಉಡುಗಿ ನಿನ್ನಾತ್ಮವಿರೆ ಬಿಡು ಹೆಗ್ಗೆಲಸಗಳನು |

ತೊಡಗಾತ್ಮ ಬಲಿತಂದು - ಮಂಕುತಿಮ್ಮ ||


578

ಬೆಟ್ಟಕ್ಕೆ ಸನ್ನೆಹಾಕಿರುವ ಮಹದಾಶಿಗನೆ |

ಗಟ್ಟಿಯೇ? ಸೊಟ್ಟಾಗದೇ ಸನ್ನೆಗೋಲು? ||

ರಟ್ಟೆಯೇ ಮುರಿದೀತು ಮೈಮರೆತ ಸಾಹಸದಿ |

ಎಷ್ಟುಚಿತವೋ ನೋಡು - ಮಂಕುತಿಮ್ಮ ||


579

ಬೆನ್ನಿನಗಲವನಳೆದು ಹೊರೆಗೆ ನೀನದನೊಡ್ಡು |

ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು ||

ಬನ್ನ ನಿನಗೊದಗಲದನಾತ್ಮಶಿಕ್ಷಣವೆನ್ನು |

ಮಾನ್ಯದೊಪ್ಪಂದವಿದು - ಮಂಕುತಿಮ್ಮ ||


580

ದೊರೆಯ ವೇಷವ ಧರಿಸಿ ಮರೆಯುವೆಯ ಮೀಸೆಯನು? |

ತಿರುಕಹಾರುವನಾಗಿ ಮೀಸೆ ತಿರಿಚುವೆಯ? ||

ಇರುವುದವನವನಿಗವನವನ ತಾಣದ ಧರ್ಮ |

ಅರಿವೆ ಋತುಗತಿಯಂತೆ - ಮಂಕುತಿಮ್ಮ ||


581

ದೇವರದಿದೆಲ್ಲ ದೇವರಿಗೆಲ್ಲವೆಂದೊರಲು- |

ತಾವುದನುಮವನ ನಿರ್ಣಯಕೆ ಬಿಡದೆಯೆ ತಾಂ ||

ದಾವನ್ತಬಡುತ ತನ್ನಿಚ್ಛೆಯನೆ ಘೋಷಿಸುವ |

ಭಾವವೆಂತಹ ಭಕುತಿ? - ಮಂಕುತಿಮ್ಮ ||


582

ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ |

ಹರಡಿಕೊಳಬೇಡ ಮುಳ್ಳನು ಹಾಸಿಗೆಯಲಿ ||

ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? |

ಒರಟು ಕೆಲಸವೊ ಬದುಕು - ಮಂಕುತಿಮ್ಮ ||


583

ಅಷ್ಟದಿಗ್ಗಜವೆ ನೀನ್? ಆದಿಶೇಷನೆ ನೀನು? |

ಕಷ್ಟಭಾರವಿದೆಂದು ನಿಟ್ಟುಸಿರ ಬಿಡುವೆ! ||

ನಿಷ್ಠುರದ ನಿನ್ನ ಕನಿಕರ ಜಗಕೆ ಬೇಕಿಲ್ಲ |

ಎಷ್ಟಾದರಷ್ಟೆ ಸರಿ - ಮಂಕುತಿಮ್ಮ ||


584

ಎಲ್ಲಕಂ ನಿನಗಿಲ್ಲ ಕರ್ತವ್ಯದಧಿಕಾರ |

ಇಲ್ಲದೆಯುಮಿಲ್ಲ ನಿನಗಾ ಹೊರೆಯ ಪಾಲು ||

ಸಲ್ಲಿಸಾದನಿತ, ಮಿಕ್ಕುದು ಪಾಲಿಗನ ಪಾಡು |

ಒಲ್ಲನವನ್ ಅರೆನಚ್ಚ - ಮಂಕುತಿಮ್ಮ ||


585

ಫಲವೇನು ಹೆಣಗಾಡಿ ಹೋರಾಡಿ ಧರೆಯೊಳಗೆ? |

ಸಲಿಸದೊಂದನುಮೊಂದನುಂ ದೈವ ಬಿಡದು ||

ಹೊಲಸೆಲ್ಲವೆಲ್ಲಪಾಳ್, ಬಾಳ್ಗೆ ತಳಹದಿಯಿಲ್ಲ |

ಗಲಿಬಿಲಿಯಿದೆನಬೇಡ - ಮಂಕುತಿಮ್ಮ ||


586

ಕೆಂಡಮುಸುಡಿಯ ದೈವವೆಲ್ಲವನು ದಹಿಸುತಿರೆ |

ದಂಡಧರನತ್ತಲೆಲ್ಲವನು ಕೆಡಹುತಿರೆ ||

ಮೊಂಡುಘಾಸಿಯ ಲಾಭ ಪಿಂಡಮಾತ್ರವು ತಾನೆ?

ಭಂಡಬಾಳಲೆ ನಮದು? - ಮಂಕುತಿಮ್ಮ ||


587

ಅಹುದು ಬಾಳ್ ಭಂಡತನವಿಹದಿ ಬಾಳ್ ಮುಗಿಯುವೊಡೆ |

ಕಹಿಯೊಗರು ಕಾಯಿ, ಮಿಡಿತನದೊಳದು ಮುಗಿಯೆ ||

ಸಿಹಿಯಹುದು ಕಾಯಿ ಹಣ್ಣಾಗೆ, ಜೀವಿತವಂತು |

ಮಹಿಮೆಗೊಳುವುದು ಮಾಗೆ - ಮಂಕುತಿಮ್ಮ ||


588

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |

ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ? ||

ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |

ಗಟ್ಟಿತನ ಗರಡಿ ಫಲ - ಮಂಕುತಿಮ್ಮ ||


589

ಪರಿಪರಿ ಪರೀಕ್ಷೆಗಳು, ಪರಿಭವದ ಶಿಕ್ಷೆಗಳು |

ಗರಡಿಯ ವ್ಯಾಯಾಮ ಮನಬುದ್ಧಿಗಳಿಗೆ ||

ಪುರುಷತೆಗೆ ಪೆಟ್ಟುಗಳಿನಾದ ಗಂತಿಯೆ ವಿಜಯ |

ಬಿರಿದ ನನೆ ಫಲಕೆ ಮನೆ - ಮಂಕುತಿಮ್ಮ ||


590

ಪುರುಷನ ಸ್ವಾತಂತ್ರ್ಯವವನ ತೋಳ್ಗಿರುವಷ್ಟು |

ಪರಿಧಿಯೊಂದರೊಳದರ ಯತ್ನಕೆಡೆಯುಂಟು ||

ತಿರುಗುವುದು ಮಡಿಸುವುದು ನಿಗುರುವುದು ನೀಳುವುದು |

ತೊರೆದು ಹಾರದು ತೋಳು - ಮಂಕುತಿಮ್ಮ ||


591

ಬದುಕು ಕದನದ ತೆರನೆ; ನೋಡೆ ಲೀಲೆಯ ಕದನ |

ಮೊದಲುಮುಗಿವುಗಳಿರದ ಚಿತ್ರಲೀಲೆಯದು ||

ಇದರೊಳೆಂದಿಗುಮಿರದು ಸೋಲ್ಗೆಲವು ಕಡೆಯೆಣಿಕೆ |

ಸದರದಾಟವೆ ಮುಖ್ಯ - ಮಂಕುತಿಮ್ಮ ||


592

ನರಜೀವನದ ರಣದಿ ವಿಧಿಯ ಬಲವೊಂದು ಕಡೆ |

ಚಿರವಿವೇಕದಿ ಬೆಳೆದ ನಲುಮೆಯೊಂದು ಕಡೆ ||

ಉರುಬುತಿರೆ ಪುರುಷಂಗೆ ನಲುಮೆಯುಳಿತವೆ ಗೆಲವು |

ಪುರುಷತನವೇ ವಿಜಯ - ಮಂಕುತಿಮ್ಮ ||


593

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |

ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||

ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |

ಮತ್ತೆ ತೋರ್ಪುದು ನಾಳೆ - ಮಂಕುತಿಮ್ಮ ||


594

ಬಿಡುವಿಲ್ಲದೀ ಜೀವಿತಾಪಣದ ಸರಕೆಣಿಸೆ |

ಕಡೆಯೆಂದು? ಮುಗಿಯದಿಹ ಲಾಭನಷ್ಟಗಳ ||

ಕಡತದೊಳ್ ಅದೆಂದಿನಾ ಲೆಕ್ಕವೇ ತೀರ್ಮಾನ? |

ಬಿಡು ಲಾಭದಾತುರವ - ಮಂಕುತಿಮ್ಮ ||


595

ಎನಿತು ನೀಂ ಗೆಲಿದೆಯೆಂದೆನರು ಬಲ್ಲವರೆಂದು- |

ಮೆನಿತು ನೀಂ ಪೋರ್ದೆಯೆನಿತನು ಪೊತ್ತೆಯೆನುವರ್ ||

ಗಣನೆ ಸಲುವುದು ತೋರ್ದ ಪೌರುಷಕೆ, ಜಯಕಲ್ಲ |

ದಿನದಿನದ ಗರಡಿಯಿದು - ಮಂಕುತಿಮ್ಮ ||


596

ಗರಡಿ ಸಾಮಿಂದೆ ನೀನೆದುರಾಳ ಗೆಲದೊಡೇಂ? |

ಬರದಿಹುದೆ ನಿನಗನಿತು ಕಾಯಾಂಗಪಟುತೆ? ||

ವರ ಸದ್ಯಕ್ಕಿಲ್ಲದೊಡೆ ಬರಿದಾಗುವುದೆ ಪೂಜೆ? |

ಪರಿಶುದ್ಧ ಮನವೆ ವರ - ಮಂಕುತಿಮ್ಮ ||


597

ಬಿತ್ತ ಮಳೆಗಲವೋಲು ಯತ್ನ ದೈವಿಕ ನಮಗೆ |

ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ||

ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ |

ಗೊತ್ತಿಲ್ಲ ಫಲದ ಬಗೆ - ಮಂಕುತಿಮ್ಮ ||


598

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು |

ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ||

ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ- |

ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ ||


599

ತಿರುಗಿಸಲಿ ವಿಧಿರಾಯನಿಚ್ಛೆಯಿಂ ಯಂತ್ರವನು |

ಚರಿಕೆ ತಾರಾಗ್ರಹಗಳಿಷ್ಟವೋದಂತೆ ||

ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ |

ಸ್ಥಿರಚಿತ್ತ ನಿನಗಿರಲಿ - ಮಂಕುತಿಮ್ಮ ||


600

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |

ಪದ ಕುಸಿಯೆ ನೆಲವಿಹುದು - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post