Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 51-100

 051

ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ |

ನ್ನೊಳಗಿನಸುವೆಲ್ಲವನು ಕಟ್ಟಿನಿಂ ಬಿಗಿದು ||

ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿವಿಧಿ |

ಯೊಳತಂತ್ರವೋ? ನೋಡು - ಮಂಕುತಿಮ್ಮ ||


052

ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ |

ಮುಗಿವ ತರಣಿಯ ರಕ್ತ ಹಿತವೆನಿಸದೇಕೊ! ||

ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ |

ಬಗೆವೆನ್ನ ಮನಸಿನೊಳೊ? - ಮಂಕುತಿಮ್ಮ ||


053

ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ? |

ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? ||

ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು |

ಗುಣಕೆ ಕಾರಣವೊಂದೆ? - ಮಂಕುತಿಮ್ಮ ||


054

ಫಲವಿಲ್ಲ ಕಾರ್ಯಕಾರಣವಾದದಿಂ ತತ್ತ್ವ |

ಸಿಲುಕದೆಮ್ಮಯ ತರ್ಕಕರ್ಕಶಾಂಕುಶಕೆ ||

ಸುಳಿವುದಾಗೀಗಳದು ಸೂಕ್ಷ್ಮಾನುಭವಗಳಲಿ |

ತಿಳಿಮನದೆ ನೋಳ್ಪರ್ಗೆ - ಮಂಕುತಿಮ್ಮ ||


055

ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ? |

ಅರಿಯುವಂ ಸೋಂಕಿಂದೆ ಬಿಸಿಲುತಣಿವುಗಳ ||

ನರನುಮಂತೆಯೆ ಮನಸಿನನುಭವದಿ ಕಾಣುವನು |

ಪರಸತ್ತ್ವಮಹಿಮೆಯನು - ಮಂಕುತಿಮ್ಮ ||


056

ಮೇಲಿಂದ ನಕ್ಷತ್ರಜಯಘೋಷ ಸುತ್ತಣಿಂ |

ಭೂಲೋಕದರಚು ಕೆಳಗಿಂ ಮೂಳೆಯಳುವು ||

ಕೇಳಬರುತೀ ಮೂರುಕೂಗೆನ್ನ ಹೃದಯಲಿ |

ಮೇಳಯಿಸುತಿದೆ ಸಂತೆ - ಮಂಕುತಿಮ್ಮ ||


057

ಆಗುಂಬೆಯಸ್ತಮಯ ದ್ರೋಣಪರ್ವತದುದಯ |

ತ್ಯಾಗರಾಜನ ಗಾನ ವಾಲ್ಮೀಕಿ ಕವನ ||

ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |

ಯೋಗಪುಲಕಾಂಕುರವ? - ಮಂಕುತಿಮ್ಮ ||


058

ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು |

ಕೆಳೆಯೊಲವು ನಲ್ಲೆಯ ವಿಯೋಗವಿಂತಹವು ||

ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ |

ನೊಳದನಿಯದೊಂದರಿಂ - ಮಂಕುತಿಮ್ಮ ||


059

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ |

ಮನಗಾಣಿಸಲು ನಿನಗೆ ದೈವದದ್ಭುತವ? ||

ಮನುಜರೊಳಗಾಗಾಗ ತೋರ್ಪ ಮಹನೀಯಗುಣ |

ವನುವಾದ ಬೊಮ್ಮನದು - ಮಂಕುತಿಮ್ಮ ||


060

ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ |

ಕಾಶಿಯಾ ಶಾಸ್ತ್ರಗಳನಾಕ್ಸ್ಫರ್ಡಿನವರು ||

ದೇಶಕಾಲವಿಭಾಗ ಮನದ ರಾಜ್ಯದೊಳಿರದು |

ಶ್ವಾಸವದು ಬೊಮ್ಮನದು - ಮಂಕುತಿಮ್ಮ ||


061

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ |

ವಕ್ಷೋಗುಹಾಂತರದಿನೊಂದು ದನಿಯಿಂತೀ ||

ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ |

ಪ್ರೇಕ್ಷ ಪರಬೊಮ್ಮನದು - ಮಂಕುತಿಮ್ಮ ||


062

ಭೌತವಿಜ್ಞಾನಿ ರವಿತಾರೆಧರೆಗಳ ಚಲನ |

ರೀತಿ ವೇಗವನಳೆದು ಶಕ್ತಿಗಳ ಗುಣಿಪನ್ ||

ಪ್ರೀತಿರೋಷಗಳನವನಳೆವನೇನ್? ಅವ್ಯಕ್ತ |

ಚೇತನವನರಿವನೇಂ? - ಮಂಕುತಿಮ್ಮ ||


063

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? |

ಅರಿಯದದು ನಮ್ಮೆದೆಯ ಭಾವಗಳನೊರೆಯೆ ||

ಪರಮಾನುಭವಗಳುಲಿಯನುಭವಿಗಳೊಳಕಿವಿಗೆ |

ಒರಟುಯಾನವೊ ಭಾಷೆ - ಮಂಕುತಿಮ್ಮ ||


064

ಚಿತ್ತದನುಭವ ಭಾವ ಸಂಭಾವನೆಗಳೆಲ್ಲ |

ಬತ್ತವದನು ವಿಚಾರಯುಕ್ತಿಗಳು ಕುಟ್ಟೆ ||

ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ |

ನಿತ್ಯ ಭೋಜನ ನಮಗೆ - ಮಂಕುತಿಮ್ಮ ||


065

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |

ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||

ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |

ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ||


066

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? |

ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ||

ಕರ್ತನಾಲೋಚಿಸದ ದುಂದಿನವನೆಂಬ ನುಡಿ |

ಯರ್ಧದೃಷ್ಟಿಯ ವಿವರ - ಮಂಕುತಿಮ್ಮ ||


067

ಸ್ರಷ್ಟುಸಂಕಲ್ಪಲಿಪಿಯೆಲ್ಲ ನಮ್ಮೆದುರಿಲ್ಲ |

ದೃಷ್ಟಿಗೋಚರವದರೊಳೊಂದು ಗೆರೆ ಮಾತ್ರ ||

ಅಷ್ಟರಿಂದಿದು ನಷ್ಟವದು ಶಿಷ್ಟವೆನ್ನುವುದೆ? |

ಕ್ಲಿಷ್ಟದ ಸಮಸ್ಯೆಯದು - ಮಂಕುತಿಮ್ಮ ||


068

ಎಲ್ಲ ಅರೆಬೆಳಕು ಅರೆಸುಳಿವು ಅರೆತಿಳಿವುಗಳಿಲ್ಲಿ |

ಎಲ್ಲಿ ಪರಿಪೂರಣವೊ ಅದನರಿಯುವನಕ ||

ಸೊಲ್ಲಿಸುವರಾರು ಸೃಷ್ಟಿಯ ಪೇಟಿಯೊಳಗುಟ್ಟ? |

ಎಲ್ಲ ಬಾಳು ರಹಸ್ಯ - ಮಂಕುತಿಮ್ಮ ||


069

ಹೆಸರನರಿಯದ ಸಸಿಯೊಳಿರವೆ ರಸಗಂಧಗಳು? |

ಬಿಸಿಲದನು ಪಕ್ವಗೊಳಿಸುತೆ ಬಿಡಿಸದಿಹುದೆ? ||

ಪಸರಿಸದೆ ಗಾಳಿಯದನೊಯ್ದು ದಿಸೆದಿಸೆಗಳೊಳು? |

ಉಸಿರುತಿಹೆವದ ನಾವು - ಮಂಕುತಿಮ್ಮ ||


070

ಭೂವಿಷಯದಲಿ ಪುದಿದ ರಸವಾಸನೆಗಳೆಲ್ಲ |

ಆವಿಯಾಗೇಳ್ದು ಮುಗಿಲಾಗಿ ಮಳೆಗರೆದು ||

ಬಾವಿಗೂಟೆಯನಿತ್ತು ನರರೊಡಲ ಸೇರುವುದು |

ದೈವ ರಸತಂತ್ರವಿದು - ಮಂಕುತಿಮ್ಮ ||


071

ತರಣಿ ಕಿರಣದ ನಂಟು ಗಗನ ಸಲಿಲದ ನಂಟು |

ಧರಣಿ ಚಲನೆಯ ನಂಟು ಮರುತನೊಳ್ನಂಟು ||

ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ |

ಕಿರಿದು ಪಿರಿದೊಂದಂಟು - ಮಂಕುತಿಮ್ಮ ||


072

ಈ ವಿಶ್ವದಲಿ ನೋಡಲೆಲ್ಲರೆಲ್ಲರ ನಂಟು |

ಆವನಾ ಬಂಧುತೆಯ ಜಡೆಯ ಬಿಡಿಸುವನು? ||

ಜೀವ ಜೀವಕೆ ನಂಟು ಜಡ ಚೇತನಕೆ ನಂಟು |

ಆವುದದಕಂಟಿರದು? - ಮಂಕುತಿಮ್ಮ ||


073

ನಂಟು ತಂಟೆಗಳ ಗಂಟೀ ಬ್ರಹ್ಮಭಂಡಾರ |

ಅಂಟಿಲ್ಲವೆನಗಿದರೊಳೆನ್ನದಿರದೆಂದುಂ ||

ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ |

ಒಂಟಿಸಿಕೊ ಜೀವನವ - ಮಂಕುತಿಮ್ಮ ||


074

ಸುಮ್ಮನೊಬ್ಬಂಟಿಯೆಂತಿಹುದು? ಬೇಸರವಹುದು |

ಹೊಮ್ಮುವೆನು ಕೋಟಿರೂಪದಲಿ ನಾನೆಂದು ||

ಬೊಮ್ಮನೆಳಸಿದನಂತೆ. ಆಯೆಳಸಿಕೆಯೆ ಮಾಯೆ |

ನಮ್ಮಿರವು ಮಾಯೆಯಲಿ - ಮಂಕುತಿಮ್ಮ ||


075

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ ವಿ- |

ಸ್ತರಿಸುವಂದದಿ, ಸೃಷ್ಟಿ ತನ್ನ ಮೂಲವನು ||

ಮರೆಮಾಚಿ ತಾನೆ ಮೆರೆಯುತ್ತಿಹುದು ಕಣ್ಗಳಿಗೆ |

ನೊರೆ ಸೃಷ್ಟಿ ಪಾಲ್ ಬ್ರಹ್ಮ - ಮಂಕುತಿಮ್ಮ ||


076

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ |

ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲಸಿ ||

ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |

ವಿಹರಿಪನು ನಿರ್ಲಿಪ್ತ! - ಮಂಕುತಿಮ್ಮ ||


077

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |

ರನ್ನವೋ ಬ್ರಹ್ಮ; ನೋಡವನು---ನಿಜಪಿಂಛ ||

ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲವೊಲು |

ತನ್ಮಯನೊ ಸೃಷ್ಟಿಯಲಿ - ಮಂಕುತಿಮ್ಮ ||


078

ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |

ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||

ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |

ಮೆರೆಯುವನು ಪರಬೊಮ್ಮ - ಮಂಕುತಿಮ್ಮ ||


079

ಬರೆವ ಹಲಗೆಯನೊಡೆದು ಬಾಲಕನು ತಾನದನು |

ಮರಳಿ ಜೋಡಿಪೆನೆನ್ನುತಾಯಾಸಗೊಳುತ ||

ಸರಿಚೌಕಗೈವಾಟದಲಿ ಜಗವ ಮರೆವಂತೆ |

ಪರಬೊಮ್ಮ ಸೃಷ್ಟಿಯಲಿ - ಮಂಕುತಿಮ್ಮ ||


080

ಚೀಟಿಯಾಟದ ಬಿನದಿ ತಾನೊರ್ವನಿರ್ವರವೊಲ್ |

ಆಟವಾಡುತಲಿ ತನ್ನೊರ್ತನವ ಮರೆವಾ ||

ಮಾಟದಲಿ ಬೊಮ್ಮನುಂ ತನ್ನೇಕತೆಯ ಜೀವ |

ಪಾಟಿಯಲಿ ಮರೆತಿಹನು - ಮಂಕುತಿಮ್ಮ ||


081

ಮರೆತಿಹನೆ ಬೊಮ್ಮ? ಮರೆತಿಲ್ಲ; ಮರೆತವೊಲಿಹನು |

ಧರಿಸಿ ಜೀವಾಕೃತಿಯ ಜಗದಿ ತನ್ನನೆ ತಾನ್ ||

ಅರಸಿಕೊಳುವವೊಲಿಹುದು; ದೊರೆತವೋಲ್ ತೋರೆ ಸುಖ |

ದೊರೆವವರೆಗಾಯಸವೊ - ಮಂಕುತಿಮ್ಮ ||


082

ಬನ್ನಿರಾಡುವ ಕಣ್ಣಮುಚ್ಚಾಲೆಯಾಟವನು |

ಎನ್ನನರಸಿರಿ ಬನ್ನಿ ಮಕ್ಕಳಿರ ಬೇಗ ||

ಬನ್ನಿರಾಟವ ಬೇಡವೆಂಬರನು ನಾಂ ಬಿಡೆನು |

ಎನ್ನುವಜ್ಜಿಯೊ ಬೊಮ್ಮ - ಮಂಕುತಿಮ್ಮ ||


083

ಮಾನಸವ ಚಿಂತೆವಿಡಿದಂದೊರ್ವನೆರಡಾಗಿ |

ತಾನದಾರೊಳೊ ವಾದಿಸುವನಂತೆ ಬಾಯಿಂ ||

ದೇನನೋ ನುಡಿಯುತ್ತ ಕೈಸನ್ನೆಗೈಯುವನು |

ಭಾನವೊಂದರೊಳೆರಡು - ಮಂಕುತಿಮ್ಮ ||


084

ಅಣು ಭೂತ ಭೂಗೋಲ ತಾರಾಂಬರಾದಿಗಳ |

ನಣಿಮಾಡಿ ಬಿಗಿದು ನಸು ಸಡಿಲವನುಮಿರಿಸಿ ||

ಕುಣಿಸುತಿರುವನು ತನ್ನ ಕೃತಿಕಂತುಕವನದರೊ |

ಳಣಗಿರ್ದು ಪರಬೊಮ್ಮ - ಮಂಕುತಿಮ್ಮ ||


085

ನಭದ ಬಲಯೊಳನಂತ, ಮನದ ಗುಹೆಯೊಳನಂತ |

ವುಭಯದಾ ನಡುವೆ ಸಾದ್ಯಂತ ಜೀವಕಥೆ ||

ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು |

ಹಬೆಗುಳ್ಳೆಯೋ ಸೃಷ್ಟಿ - ಮಂಕುತಿಮ್ಮ ||


086

ಗಗನ ತಲೆನವಿರಾಗೆ ಪೆರೆತಾರೆ ಹೂವಾಗೆ |

ಜಗವೆಲ್ಲ ವಪುವಾಗೆ ಮಾಯೆ ಸತಿಯಾಗೆ ||

ನಗುನಗುವ ಬೊಬ್ಬಿಡುವ ಜೀವತಾಂಡವರಸಿಕ |

ಭಗವಂತ ಶಿವರುದ್ರ - ಮಂಕುತಿಮ್ಮ ||


087

ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ |

ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ ||

ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ |

ವಿಲಸಿತವು ಬೊಮ್ಮನದು - ಮಂಕುತಿಮ್ಮ ||


088

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |

ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ||

ಥಳಥಳಿಕೆ ವಜ್ರದಲಿ ನೈಜವಿರುವಂತೆಯು |

ಜ್ಜ್ವಲತೆ ಬೊಮ್ಮಗೆ ನೈಜ - ಮಂಕುತಿಮ್ಮ ||


089

ಆದಿದಿವಸವದಾವುದೆಂದೆಂದುಮಿಹ ಜಗಕೆ? |

ಬೋಧನೆಯ ಸುಲಭತೆಗೆ ಸೃಷ್ಟಿಲಯಕಥನ ||

ಪಾದಶಿರಗಳ ಕೂರ್ಮ ಚಾಚಿಕೊಂಡಿರೆ ಸೃಷ್ಟಿ |

ಸೇದಿಕೊಂಡಿರೆ ಲಯವೊ - ಮಂಕುತಿಮ್ಮ ||


090

ಆವುದಿರುವಿಕೆಗಾದಿ? ಎಂದು ಸೃಷ್ಟಿಯ ಮೊದಲು? |

ಅವುದಬ್ಧಿಯ ತೆರೆಗಳಲಿ ಮೊಟ್ಟಮೊದಲು? ||

ಆವುದೆಲರಿನ ನಿಲ್ಲದಲೇತಕ್ಕೆ ಗಡುಸೀಮೆ? |

ಈ ವಿಶ್ವಕಥೆಯಂತು - ಮಂಕುತಿಮ್ಮ ||


091

ಕಮಲವುದಯದೊಳರಳಿ ಸಂಜೆಯಲಿ ಮುಗುಳಾಗಿ |

ಸುಮವಪ್ಪುದಂತೆ ಮರುವಗಲು ಮಗುಳ್ದಂತು ||

ಅಮಿತ ಪ್ರಪಂಚನಾಕುಂಚನಾವರ್ತನ |

ಕ್ರಮವೆ ವಿಶ್ವಚರಿತ್ರೆ - ಮಂಕುತಿಮ್ಮ ||


092

ಎತ್ತಣಿನೊ ದೃಕ್ಪರಿಧಿಯಾಚೆಯಿಂದಲನಂತ |

ಸತ್ತ್ವ ತೆರೆತೆರೆಯಾಗಿ ಬೀಸಿ ಗೂಢದಲಿ ||

ಬಿತ್ತರಿಸುತಿಹುದು ಹೊಸಹೊಸತನವನೆಡೆಬಿಡದೆ |

ನಿತ್ಯನಿತ್ಯವು ಜಗದಿ - ಮಂಕುತಿಮ್ಮ ||


093

ಜ್ವಾಲಮಾಲಾಕುಲ ಜಗದ್ರೂಪ ತಾಂಡವದಿ |

ಲೀಲೆಯಿಂ ಜೀವತೆಯನಾಂತು ಪರಬೊಮ್ಮಂ ||

ತಾಳಲಯಮೇಳನದಿನೊಮ್ಮೆ ರಭಸದಿನೊಮ್ಮೆ |

ಲೋಲನಾಗಿರ್ಪನೆಲೊ - ಮಂಕುತಿಮ್ಮ ||


094

ಕೇಳಿಯುಂ ಮಾಯೆಯದು; ನೃತ್ಯಗತಿ ಬರಿತೋರ್ಕೆ |

ಮೂಲಮಂ ಕಂಡಂಗೆ ಸಂಭ್ರಾಂತಿಯೇನು? ||

ಆಳದಲಿ ನಿರ್ಲಿಪ್ತ ಮೇಲೆ ನಿಯತಿಕ್ಲುಪ್ತ |

ಲೀಲಾಪ್ರಿಯಂ ಬ್ರಹ್ಮ - ಮಂಕುತಿಮ್ಮ ||


095

ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |

ಸೋಮಶಂಕರನೆ ಭೈರವ ರುದ್ರನಂತೆ ||

ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ |

ಪ್ರೇಮ ಘೋರಗಳೊಂದೆ! - ಮಂಕುತಿಮ್ಮ ||


096

ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ? |

ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ||

ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ |

ಕೃತ್ಯವಿದು ಬೊಮ್ಮನದು - ಮಂಕುತಿಮ್ಮ ||


097

ಧರ್ಮವೆಂಬುದದೇನು? ಕರ್ಮವೆಂಬುದದೇನು? ||

ಬ್ರಹ್ಮಾಂಡಕಥೆಯೇನು? ಜೀವಿತವಿದೇನು? |

ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ |

ಬ್ರಹ್ಮವೇ ಜೀವನವೊ - ಮಂಕುತಿಮ್ಮ ||


098

ವಕ್ರಋಜುಮಿಶ್ರ ಜಗವದರ ಶೋಧನೆ ಧರ್ಮ |

ಪ್ರಾಕೃತಧ್ವನಿಮಿಶ್ರವದರಡುಗೆ ರಾಗ ||

ವ್ಯಾಕೃತದಿನವ್ಯಾಕೃತಾದಿಸತ್ತ್ವಕೆ ನಿನ್ನ |

ಜಾಗೃತಿಪ ಮತಿ ಧರ್ಮ - ಮಂಕುತಿಮ್ಮ ||


099

ಜಲಧಿತೀರದಿ ನಿಂತು ವೀಕ್ಷಿಸಿಕ್ಕೆಲಗಳಲಿ |

ಚಲವೊಂದಚಲವೊಂದು ಸಮವದಸಮವಿದು ||

ಕಲೆತಿರ್ಪುವಂತು ಮೇಯಾಮೇಯಗಳು ಜಗದಿ |

ಮಿಲಿತತೆಯಿನೇ ರುಚಿಯೊ - ಮಂಕುತಿಮ್ಮ ||


100

ಅವಿದಿತಾಖಂಡಸತ್ತ್ವದಪಾರ ಜಲಧಿಯಲಿ |

ಭುವನದ ದ್ವೀಪ ಕಿಂಚಿನ್ಮಾತ್ರವಿದಿತ ||

ಪವಿತಾಂತರಕ್ಷಿಗಾಯೆರಡುಮೊಂದೇ ವಸ್ತು |

ವವಗುಂಠಿತ ಬ್ರಹ್ಮ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post