Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 751-800

 751

ಲೋಕವೆಲ್ಲವು ಚಿತ್ರವಿಂದ್ರಜಾಲದ ಕೃತ್ಯ |

ಸಾಕೆನದೆ ಬೇಕೆನದೆ ನೋಡು ನೀನದನು ||

ತಾಕಿಸದಿರಂತರಾತ್ಮಂಗಾವಿಚಿತ್ರವನು |

ಹಾಕು ವೇಷವ ನೀನು - ಮಂಕುತಿಮ್ಮ ||


752

ಭೋಜನದಿ ಪರಮಭೋಜನ ಪರಬ್ರಹ್ಮರಸ |

ಯಾಚಿಸಲ್ಕೇನಿರ್ಪುದದನುಂಡ ಬಳಿಕ? ||

ತ್ಯಾಜಕ ತ್ಯಾಗ ಸಂತ್ಯಾಜ್ಯ ಭೇದಗಳಿರದೆ |

ರಾಜ ನೀಂ ಜಗಕೆಲ್ಲ - ಮಂಕುತಿಮ್ಮ ||


753

ಬ್ರಹ್ಮಾನುಸಂಧಾನ ಲೋಕಸಂಧಾನದಲಿ |

ಬ್ರಹ್ಮದರ್ಶನವೆಲ್ಲ ಜೀವರೂಪದಲಿ ||

ಬ್ರಹ್ಮಾನುಭವ ದೇಹಕರಣಾನುಭವಗಳಲಿ! |

ಮರ್ಮವಿದು ಮುಕ್ತಿಗೆಲೊ - ಮಂಕುತಿಮ್ಮ ||


754

ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ |

ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ||

ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ |

ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ||


755

ಮತಿಗರ್ಥವಾದೊಡೇಂ? ಸ್ಮೃತಿಯೊಳದು ನೆಲಸಿರಲಿ |

ಸತತ ಸಂಧಾನದಲಿ ಪರಮಾರ್ಥವಿರಲಿ ||

ಶತಲಕ್ಷಧನದ ಲೆಕ್ಕವ ಬಾಯಿ ನುಡಿದೊಡೇಂ? |

ಭೃತಿಯೆಷ್ಟು ವೆಚ್ಚಕ್ಕೆ? - ಮಂಕುತಿಮ್ಮ ||


756

ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ |

ಧೈರ್ಯ ಮೊದಲಿನದೆರಡನೆಯದು ಮತಿಯೋಜೆ ||

ಸರ್ವದಯೆ ಮೂರನೆಯದದುವೆ ನೀತಿಯ ಮೂಲ |

ನಿರ್ಮಮತ್ವವೆ ಮುಕುಟ - ಮಂಕುತಿಮ್ಮ ||


757

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ |

ಭೀಮಸಾಹಸವಿರಲಿ ಹಗೆತನವನುಳಿದು ||

ನೇಮನಿಷ್ಠೆಗಳಿರಲಿ ಡಂಭಕಠಿಣತೆ ಬಿಟ್ಟು |

ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ ||


758

ಔದಾರ್ಯ ತಾಯಿ ನೀತಿಗೆ, ಧೈರ್ಯವೇ ತಂದೆ |

ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ||

ಹೋದುದನು ನೆನೆಯದಿರು, ಬರುವುದಕೆ ಸಿದ್ಧನಿರು |

ಆದನಿತು ಸಂತೋಷ - ಮಂಕುತಿಮ್ಮ ||


759

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು |

ಗುರುತಿಸೊಳಿತಿರುವುದನು ಕೇಡುಗಳ ನಡುವೆ ||

ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು |

ಹರುಷಕದೆ ದಾರಿಯೆಲೊ - ಮಂಕುತಿಮ್ಮ ||


760

ಮುನ್ನಾದ ಜನುಮಗಳ ನೆನಸಿನಿಂ ನಿನಗೇನು? |

ಇನ್ನುಮಿಹುದಕೆ ನೀಡು ಮನವನ್; ಎನ್ನುವವೋಲ್ ||

ಬೆನ್ನ ಪಿಂತಿನದು ಕಾಣಿಸದಂತೆ ಪರಮೇಷ್ಠಿ |

ಕಣ್ಣನಿಟ್ಟನು ಮುಖದಿ - ಮಂಕುತಿಮ್ಮ ||


761

ಲೋಚನದ ಸಂಚಾರ ಮುಖದ ಮುಂದಕಪಾರ |

ಗೋಚರಿಪುದೇನದಕೆ ತಲೆಯ ಹಿಂದಣದು? ||

ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು |

ಚಾಚು ಮುಂದಕೆ ಮನವ - ಮಂಕುತಿಮ್ಮ ||


762

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ |

ಮೇರುವನು ಮರೆತಂದೆ ನಾರಕಕೆ ದಾರಿ ||

ದೂರವಾದೊಡದೇನು? ಕಾಲು ಕುಂಟಿರಲೇನು? |

ಊರ ನೆನಪೇ ಬಲವೊ - ಮಂಕುತಿಮ್ಮ ||


763

ಮೇರುಪರ್ವತಕಿಹುವು ನೂರೆಂಟು ಶಿಖರಗಳು |

ದಾರಿ ನೂರಿರಬಹುದು, ನಿಲುವ ಕಡೆ ನೂರು ||

ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ |

ಮೇರುಸಂಸ್ಕೃತಿಯೆ ಬಲ - ಮಂಕುತಿಮ್ಮ ||


764

ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು |

ಸ್ವರ್ಣಸಭೆಯಾ ಶೈವತಾಂಡವದ ಕನಸು ||

ಅನ್ಯಚಿಂತೆಗಳನದು ಬಿಡಿಸುತವನಾತ್ಮವನು |

ಚಿನ್ಮಯಕೆ ಸೇರಿಸಿತು - ಮಂಕುತಿಮ್ಮ ||


765

ತನ್ನ ರುಚಿ ರಾಮರುಚಿ; ತನ್ನ ಸಂತುಷ್ಟಿ ಪರಿ- |

ಪೂರ್ಣವಪ್ಪುದು ರಾಮಸಂತುಷ್ಟಿಯಿಂದೆ ||

ಎನ್ನುವಾ ಸಾಜದಾ ದೈವಾತ್ಮಭಾವದಲಿ |

ಧನ್ಯಳಾದಳು ಶಬರಿ - ಮಂಕುತಿಮ್ಮ ||


766

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |

ನೆನೆಯದಿನ್ನೊಂದನೆಲ್ಲವ ನೀಡುತದರಾ ||

ಅನುಸಂಧಿಯಲಿ ಜೀವಭಾರವನು ಮರೆಯುವುದು |

ಹನುಮಂತನುಪದೇಶ - ಮಂಕುತಿಮ್ಮ ||


767

ಕ್ಷಣದಿಂದನುಕ್ಷಣಕೆ, ದಿನದಿಂದ ಮರುದಿನಕೆ |

ಅನಿತನಿತರೊಳೆ ಬದುಕುತಾಯುವನು ಕಳೆವಾ ||

ಮನದ ಲಘುಸಂಚಾರವೊಂದು ಯೋಗದುಪಾಯ |

ಶುನಕೋಪದೇಶವದು - ಮಂಕುತಿಮ್ಮ ||


768

ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |

ಹಿತವೆಂತು ಜಗಕೆಂದು ಕೇಳುವವರಾರು? ||

ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |

ಪಥ ಮುಕ್ತಿಗಾಗಳೇ - ಮಂಕುತಿಮ್ಮ ||


769

ಒಂದುದಿನವೌತಣಕೆ, ಉಪವಾಸಕಿನ್ನೊಂದು |

ಸಂದಣಿಯ ದಿನವೊಂದು, ಬಿಡುವು ದಿನವೊಂದು ||

ಹೊಂದಿರ್ದೊಡುಭಯಮುಂ ಜೀವಕದು ಸುಖ ಚಲನ |

ಒಂದುಕಾಲ್ನಡೆ ಸುಖವೆ? - ಮಂಕುತಿಮ್ಮ ||


770

ನೇತ್ರಯುಗಳಂ ಪಿಡಿಗುಮೊಂದು ಲಕ್ಷ್ಯವ ಕೂಡಿ |

ಹಸ್ತಯುಗ ಸಾಧಿಪುದು ಮನದರ್ಥವೊಂದನ್ ||

ದ್ವೈತದಿಂದದ್ವೈತವದ್ವೈತದೊಳ್ ದ್ವೈತ |

ಚೈತನ್ಯಲೀಲೆಯಿದು - ಮಂಕುತಿಮ್ಮ ||


771

ನೀರಧಿ ಬ್ರಹ್ಮ, ನೀರ್ಗಲ್ ಜೀವವೆನುತೊಂದು |

ಕ್ಷೀರವದು, ಘೃತವಿದದರೊಳಗೆನ್ನುತೊಂದು ||

ಕೀರು ಪರಮಾನ್ನವದು, ದ್ರಾಕ್ಷಿಯಿದೆನುತ್ತೊಂದು |

ಮೂರಿಂತು ಮತವಿವರ - ಮಂಕುತಿಮ್ಮ ||


772

ಮೂರಿರಲಿ ವಾದ, ಮುನ್ನೂರಿರಲಿ; ಸಕಲರುಂ |

ಸಾರವಸ್ತುವನೊಂದನೊಪ್ಪಿಕೊಳುವವರೇ ||

ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |

ಭಾರವಾಗದು ಜಗಕೆ - ಮಂಕುತಿಮ್ಮ ||


773

ಹೊರಗೆ ಲೋಕಾಸಕ್ತಿಯೊಳಗೆ ಸಕಲ ವಿರಕ್ತಿ |

ಹೊರಗೆ ಕಾರ್ಯಧ್ಯಾನವೊಳಗುದಾಸೀನ ||

ಹೊರಗೆ ಸಂಸೃತಿಭಾರವೊಳಗದರ ತಾತ್ಸಾರ |

ವರಯೋಗಮಾರ್ಗವಿದು - ಮಂಕುತಿಮ್ಮ ||


774

ತರಣಿದರ್ಶನಕಿಂತ ಕಿರಣಾನುಭವ ಸುಲಭ |

ಪರಮಶಾಸ್ತ್ರಕ್ಕಿಂತ ಸರಿಯುದಾಹರಣೆ ||

ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ? |

ದೊರೆತಂದು ನೀಂ ಧನ್ಯ - ಮಂಕುತಿಮ್ಮ ||


775

ಕಾಗೆಯುಂ ಕೋಗಿಲೆಯುಮೊಂದೆ ಮೇಲ್ನೋಟಕ್ಕೆ |

ಯೋಗಿಯುಂ ಸಂಸಾರಭೋಗಿಯೇ ಹೊರಕೆ ||

ಲೋಗರವೊಲಿರುತೆ ಸುಖದುಃಖಸಂಭ್ರಮಗಳಲಿ |

ತ್ಯಾಗಿಯವನಂತರದಿ - ಮಂಕುತಿಮ್ಮ ||


776

ಪರಿಪರಿಯ ರೂಪದಲಿ ಪರದೈವ ಕಣ್ಮುಂದೆ |

ಚರಿಸುತಿರೆ ನರನದರ ಗುರುತನರಿಯದೆಯೆ ||

ಧರೆಯದದು ತನ್ನಂದದ ಪ್ರಾಣಿಯೆಂದೆಣಿಸಿ |

ತೊರೆಯುವನು ದೊರೆತುದನು - ಮಂಕುತಿಮ್ಮ ||


777

ಸಾಮಾನ್ಯರೂಪದಲಿ, ಸಂಸಾರಿವೇಷದಲಿ |

ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡಿ ||

ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು |

ತಾಮಸಿಗೆ ವರವೆಲ್ಲಿ? - ಮಂಕುತಿಮ್ಮ ||


778

ವಿಷಯಭೋಗವಿರಕ್ತಿ, ವಿಶ್ವಲೀಲಾಸಕ್ತಿ |

ಕೃಷಿಗೆ ಸಂತತ ದೀಕ್ಷೆ, ವಿಫಲಕೆ ತಿತಿಕ್ಷೆ ||

ವಿಷಮದಲಿ ಸಮದೃಷ್ಟಿ, ವಿವಿಧಾತ್ಮ ಸಂಸೃಷ್ಟಿ |

ಕುಶಲಸಾಧನಗಳಿವು - ಮಂಕುತಿಮ್ಮ ||


779

ದೊರೆವ ಜೀತಕೆ ದುಡಿತ, ಮರುದಿನದ ಚಿಂತೆ ಮಿತ |

ಹೊರೆಯ ಹಗುರಾಗಿಸುವ ಕೆಳೆಯರೊಡನಾಟ ||

ಸರಳತೆಯ ಪರಿತುಷ್ಟಿ, ಪರಮಾರ್ಥ ದೃಷ್ಟಿಯಿವು |

ಸರಿಗೂಡೆ ಸುಕೃತವದು - ಮಂಕುತಿಮ್ಮ ||


780

ಮಳೆಗೊಂದು ಬೆಳೆಗೊಂದು ಫಲಕೊಂದು ಋತುವಂತೆ |

ಬೆಳೆಯಿಪುದು ಜೀವವೃಕ್ಷವ ಕಾಲನಿಯತಿ ||

ತಿಳಿವುಮೊಳ್ತನಮುಂ ವಿರಕ್ತಿಯುಂ ಮುಕ್ತಿಯುಂ |

ಗಳಿಗೆ ಸರಿಸೇರ್ದಂದು - ಮಂಕುತಿಮ್ಮ ||


781

ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? |

ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ ||

ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ? |

ತಾಳುಮೆಯೆ ಪರಿಪಾಕ - ಮಂಕುತಿಮ್ಮ ||


782

ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ |

ಕುಂದದುಬ್ಬದ ಮನಸು ಬಂದುದೇನಿರಲಿ ||

ಬಂಧು ಮತಿ ಲೋಕದಲಿ, ಮುನ್ದೃಷ್ಟಿ ಪರಮದಲಿ |

ಹೊಂದಿರಲಿವದು ಪುಣ್ಯ - ಮಂಕುತಿಮ್ಮ ||


783

ಬುದ್ಧಿಮಾತಿದು ನಿನಗೆ : ಸಿದ್ಧನಿರು ಸಕಲಕ್ಕಮ್ |

ಎದ್ದು ಕುಣಿಯಲಿ ಕರ್ಮ, ದೈವ ನಿದ್ರಿಸಲಿ ||

ಅದ್ಭುತಗಳರಿದಲ್ಲ; ಭವ್ಯಕ್ಕೆ ಹದ್ದಿಲ್ಲ |

ಸಿದ್ಧನಾಗೆಲ್ಲಕಂ - ಮಂಕುತಿಮ್ಮ ||


784

ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |

ಭಾನು ತಣುವಾದನು; ಸೋಮ ಸುಟ್ಟಾನು ||

ಕ್ಷೋಣಿಯೇ ಕರಗೀತು; ಜಗ ಶೂನ್ಯವಾದೀತು |

ಮೌನದಲಿ ಸಿದ್ಧನಿರು - ಮಂಕುತಿಮ್ಮ ||


785

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ |

ಯೆಂದೊ ತಾನೇ ಬಳಲಿ ತಣ್ಣಗಾಗುವುದು ||

ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು |

ಅಂದಿನಾ ಸುಖವೆ ಸುಖ - ಮಂಕುತಿಮ್ಮ ||


786

ಅಂತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ |

ಸಂತಾಪವುಂ ಮುಗಿವುದೆಂಬುದಲ ಪುಣ್ಯ? ||

ಎಂತೊ, ನಿನ್ನಾಜ್ಞೆಯಿನೂ, ತಾಂ ಸೋತೊ, ಬೇಸತ್ತೊ |

ಶಾಂತಿವಡೆಯಲಿ ಕರಣ - ಮಂಕುತಿಮ್ಮ ||


787

ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು |

ಪ್ರೀತಿ ಕಾಮನೆಗಳಷ್ಟಿಷ್ಟು ಬೆಳೆದವರ ||

ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು |

ಕಾತರತೆ ಕಳೆಯೆ ಸುಖ - ಮಂಕುತಿಮ್ಮ ||


788

ಜ್ವರ ಬಂದು ತನು ಬೆಂದ ಯಾತನೆಯ ಮಾತೇನು? |

ಉರಿಬೇಗೆಯಿಳಿಯೆ ಹೊಸ ಹೊಸಬನಾ ನರನು ||

ಕರಣತಪನೆಗಳಿಳಿಯೆ, ಕಾರಣವದೇನಿರಲಿ |

ಮರುಜನ್ಮವಾತ್ಮಂಗೆ - ಮಂಕುತಿಮ್ಮ ||


789

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು |

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ||

ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ |

ಎಲ್ಲರೊಳಗೊಂದಾಗು - ಮಂಕುತಿಮ್ಮ ||


790

ಏನಾನುಮಂ ಮಾಡು ಕೈಗೆ ದೊರತುಜ್ಜುಗವ |

ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ||

ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ |

ತಾಣ ನಿನಗಿಹುದಲ್ಲಿ - ಮಂಕುತಿಮ್ಮ ||


791

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |

ಜನರೆಲ್ಲರಾಗುಡಿಯ ಕೆಲಸದಾಳುಗಳು ||

ಮನೆಯೇನು? ನಾಡೇನು? ಕುಲವೇನು? ಮಠವೇನು? |

ಎಣಿಸೆಲ್ಲವದೆಯೆಂದು - ಮಂಕುತಿಮ್ಮ ||


792

ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು |

ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ||

ಬೇಸರದ ಪಾತಕಸ್ಮೃತಿಯ ಚುಚ್ಚದಿರ್; ಎನ್ನು- |

ತೀಶನನು ಬೇಡುತಿರೊ - ಮಂಕುತಿಮ್ಮ ||


793

ನಾನೆಂಬುದೊಂದಂಶವಿತರ ಜಗವೊಂದಂಶ |

ನಾನು ನೀನುಗಳಳಿದ ಸರ್ವೈಕ್ಯವೊಂದು ||

ಧ್ಯಾನಿಸುತ್ತೈಕ್ಯವನು ಪಾಲಿಸುವುದುಭಯವನು |

ಜಾಣಿನಾ ನಾಟಕವೊ - ಮಂಕುತಿಮ್ಮ ||


794

ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ |

ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||

ತನುಬಂಧ ಕಳಚಿ, ಜೀವವಖಂಡಚೇತನದ |

ಕುಣಿತದಲಿ ಕೂಡಿರಲಿ - ಮಂಕುತಿಮ್ಮ ||


795

ಮೊಳೆವ ಸಸಿಯೊಳು ನಾನು, ತೊಳಗುವಿನನೊಳು ನಾನು |

ಬೆಳೆವ ಶಿಶುವೊಳು ನಾನು, ಕೆಳೆನೋಟ ನಾನು ||

ಕಳಕಳಿಸುವೆಲ್ಲಮುಂ ನಾನೆಂದು ಭಾವಿಸುತೆ |

ಒಳಗೂಡು ವಿಶ್ವದಲಿ - ಮಂಕುತಿಮ್ಮ ||


796

ಸರಿ ಹದದ ಕಾಳು ತಿರೆಯಪ್ಪಿದೊಡೆ ಮೊಳೆಯುವುದು |

ಹುರಿದೊಡದು ಮೊಳೆಯದರಳಹುದು ಬಾಯ್ಸವಿಗೆ ||

ಪರಮತತ್ತ್ವಜ್ಞಾನಿಯೊಡರಿಸುವ ಕರುಮಗಳು |

ಮರುಬೆಳೆಗೆ ಬಿತ್ತಲ್ಲ - ಮಂಕುತಿಮ್ಮ ||


797

ಸುಟ್ಟಿ ಹಗ್ಗದ ಬೂದಿ ರೂಪಮಾತ್ರದಿ ಹಗ್ಗ |

ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ||

ತೊಟ್ಟಿಹುದು ಲೋಕರೂಪವ, ತಾತ್ತ್ವಿಕನ ವೃತ್ತಿ |

ಕಟ್ಟಿದವನಾತ್ಮವನು - ಮಂಕುತಿಮ್ಮ ||


798

ನೈರಾಶ್ಯನಿರತಂಗೆ ದೇವತೆಗಳಿಂದೇನು? |

ವೈರಾಗ್ಯಪಥಿಕಂಗೆ ನಷ್ಟಭಯವೇನು? ||

ಪಾರಂಗತಂಗಂತರಾಳ ದೂರಗಳೇನು? |

ಸ್ವೈರಪಥವಾತನದು - ಮಂಕುತಿಮ್ಮ ||


799

ಘೋರವನು ಮೋಹವನು ದೇವತೆಗಳಾಗಿಪರು |

ಭೀರು ಯಾಚಕರಾಸ್ಥೆ ತಪ್ಪದಿರಲೆಂದು ||

ಆರಿಂದಲೇಂ ಭೀತಿ, ಏಂ ಬಂದೊಡದ ಕೊಳುವ |

ಪಾರಮಾರ್ಥಿಕನಿಗೆಲೊ? - ಮಂಕುತಿಮ್ಮ ||


800

ಹಣ್ಣೇನು ಕಾಯೇನು ಹೊಟ್ಟೆ ತುಂಬಿರುವಂಗೆ? |

ಪುಣ್ಯವೇಂ ಪಾಪವೇಂ ಪೂರ್ಣದರ್ಶನಿಗೆ? ||

ಉನ್ನತದ ಶಿಖರದಿಂ ತಿಟ್ಟೇನು ಕುಳಿಯೇನು? |

ಪೂರ್ಣತೆಗೆ ಸೊಟ್ಟೇನು? - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post