Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kagga 701-750

 701

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |

ಹೊರಕೋಣೆಯಲಿ ಲೋಗರಾಟಗಳನಾಡು ||

ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |

ವರಯೋಗಸೂತ್ರವಿದು - ಮಂಕುತಿಮ್ಮ ||


702

ಮನೆಯ ಸಂಸಾರದಲಿ ವಾಸವಿರುತಾಗಾಗ |

ನೆನೆದು ನೀಂ ದೇಗುಲಕೆ ಪೋಗಿಬರುವಂತೆ ||

ದಿನವೆಲ್ಲ ದೇವಸನ್ನಿಧಿಯೊಳಿರುತಾಗಾಗ |

ಮನೆಗೆ ಬರುವನವೊಲಿರು - ಮಂಕುತಿಮ್ಮ ||


703

ಬೇಕು ಜೀವನಯೋಗಕೊಂದು ಬಹುಸೂಕ್ಷ್ಮ ನಯ |

ಬೇಕೊಂದು ಜಾಗರೂಕತೆ, ಬುದ್ಧಿಸಮತೆ ||

ತಾಕನೊಂದನು ಯೋಗಿ, ನೂಕನೊಂದನು ಜಗದಿ |

ಏಕಾಕಿ ಸಹವಾಸಿ - ಮಂಕುತಿಮ್ಮ ||


704

ಸಮತೆಸಂಯಮಶಮಗಳಿಂ ಭವವನೋಲಗಿಸೆ |

ಸಮನಿಪುದು ಮತಿಯ ಹದವಾತ್ಮಾನುಭವಕೆ ||

ಮಮತೆಯಳಿವಿಂ ಜ್ಞಾನ; ಪಾಂಡಿತ್ಯದಿಂದಲ್ಲ |

ಶ್ರಮಿಸಿಳೆಯ ಗಾಣದಲಿ - ಮಂಕುತಿಮ್ಮ ||


705

ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ- |

ದಂತರಂಗದ ಕಡಲು ಶಾಂತಿಗೊಳಲಹುದು ||

ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |

ಸಂತಯಿಸು ಚಿತ್ತವನು - ಮಂಕುತಿಮ್ಮ ||


706

ಅರಸಡವಿಗೈದಿದೊಡಮ್, ಅವನಿತ್ತ ಪಾದುಕೆಗ- |

ಳೊರೆಯದೊಡಮೆನನಂ, ತಾಂ ವರದಿಯೊರೆದು ||

ದೊರೆತನದ ಭಾರವನು ಹೊತ್ತು ದೊರೆಯಾಗದಾ |

ಭರತನವೊಲಿರು ನೀನು - ಮಂಕುತಿಮ್ಮ ||


707

ಒಡೆಯನೆಂದೋ ಬಂದು ಕೇಳ್ವನದಕುತ್ತರವ |

ಕೊಡಬೇಕು ತಾನೆನುವವೊಲು ಋಜುತೆಯಿಂದ ||

ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು |

ಮುಡುಪುಕೊಟ್ಟನು ಭರತ - ಮಂಕುತಿಮ್ಮ ||


708

ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ |

ಬಿಡನೊಂದನುಂ ರಾಜ್ಯ ತನದಲ್ಲವೆಂದು ||

ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ |

ಕಡುಯೋಗಿ ಭರತನಲ? - ಮಂಕುತಿಮ್ಮ ||


709

ದೊರೆತನದ ಜಟಿಲಗಳ, ಕುಟಿಲಗಳ, ಕಠಿನಗಳ |

ಭರತನುಳಿಸಿದನೆ ರಾಮನ ತೀರ್ಪಿಗೆಂದು? ||

ಅರಿವಿಗಿಹ ಕರ್ತವ್ಯಭಾರವನು ತಾನರಿತು |

ಧುರವ ಧರಿಸಿದನವನು - ಮಂಕುತಿಮ್ಮ ||


710

ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |

ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||

ನಿತ್ಯಜೀವನದಿ ನೀನಾ ನಯವನನುಸರಿಸೊ |

ಸ್ವತ್ವದಾಶೆಯ ನೀಗಿ - ಮಂಕುತಿಮ್ಮ ||


711

ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು |

ಭರತನವೊಲನುಪಾಲನಕ್ರಿಯರು ನಾವು ||

ಅರಸನೂಳಿಗ ನಮ್ಮ ಸಂಸಾರದಾಡಳಿತ |

ಹರುಷದಿ ಸೇವಿಸೆಲೊ - ಮಂಕುತಿಮ್ಮ ||


712

ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ |

ಸೂಸುತ್ತಲಿರಲಿ ನಿನ್ನಿರವು ಮಂಗಳವ ||

ಆಶಿಸೆದೆ ಸಂಕಲ್ಪಯತ್ನಗಳನಿನಿತುಮಂ |

ಸಾಜವಾಗಲಿ ಸಯ್ಪು - ಮಂಕುತಿಮ್ಮ ||


713

ಕಾಯಕವ ಚರಿಪುದಾತ್ಮ ಜುಗುಪ್ಸೆಗೆಡೆಗುಡದೆ |

ಆಯತದ ಲೋಕಧರ್ಮಗಳ ಪಾಲಿಪುದು ||

ಆಯತಿಗೆ ಬಾಯ್ಬಿಡದೆ ಗತವ ಚಿಂತಿಸದಿಹುದು |

ಧ್ಯೇಯವೀ ಸೂತ್ರಗಳು - ಮಂಕುತಿಮ್ಮ ||


714

ಪರಿಮಿತಿಯನರಿತಾಶೆ, ಪರವಶತೆಯಳಿದ ಸುಖ |

ವಿರತಿಯೊಡವೆರೆದ ಲೋಕೋದ್ಯೋಗಯುಕ್ತಿ ||

ಪರಿಕಿಸುತ ಜೀವಿತವ ಸತ್ಯವನೆ ಪಿಡಿವ ಮತಿ |

ವರಗಳೀ ನಾಲ್ಕೆ ವರ - ಮಂಕುತಿಮ್ಮ ||


715

ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ |

ಸಮತೆ ನಿರ್ಮತ್ಸರತೆ ಸೋಲ್ಗೆಲವುಗಳಲಿ ||

ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು |

ಭ್ರಮೆಯೊ ಮಿಕ್ಕೆಲ್ಲ ತಪ - ಮಂಕುತಿಮ್ಮ ||


716

ಮೃತನ ಸಂಸಾರಕಥೆ ಶವವಾಹಕರಿಗೇಕೆ? |

ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ||

ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು |

ಧೃತಿಯ ತಳೆ ನೀನಂತು - ಮಂಕುತಿಮ್ಮ ||


717

ನಿನ್ನ ಹೆಣವನು ನೀನೆ ಹೊತ್ತು ಸಾಗಿಸಬೇಕೊ! |

ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ||

ನಿನ್ನೊಡಲೆ ಚಿತೆ, ಜಗದ ತಂಟೆಗಳೆ ಸವುದೆಯುರಿ |

ಮಣ್ಣೆ ತರ್ಪಣ ನಿನಗೆ - ಮಂಕುತಿಮ್ಮ ||


718

ತನ್ನ ಶಿಲುಬೆಯ ತಾನೆ ಹೊತ್ತನಲ ಗುರು ಯೇಸು? |

ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ||

ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು |

ಬೆನ್ನಿನಲಿ ಹೊತ್ತು ನಡೆ - ಮಂಕುತಿಮ್ಮ ||


719

ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ |

ತಿಳಿಸುವೆಯ ರಜಕಗಲ್ಲದೆ ಲೋಗರಿಂಗೆ? ||

ಅಳಲುದುಗುಡಗಳ ನಿನ್ನೊಳಗೆ ಬಯ್ತಿಡದೆ ನೀ- |

ನಿಳೆಗೆ ಹರಡುವುದೇಕೊ? - ಮಂಕುತಿಮ್ಮ ||


720

ಹೊಸತನವೆ ಬಾಳು; ಹಳಸಿಕೆಯೆಲ್ಲ ಸಾವು ಬಿಡು |

ರಸವು ನವನವತೆಯಿಂದನುದಿನವು ಹೊಮ್ಮಿ ||

ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ |

ಪಸರುತಿರೆ ಬಾಳ್ ಚೆಲುವು - ಮಂಕುತಿಮ್ಮ ||


721

ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ |

ಧರಣಿಯವು, ಗಗನದವು, ಮನುಜಯತ್ನದವು ||

ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ |

ಅರಿವುಳ್ಳೊಲುಮೆ ಪಿರಿದು - ಮಂಕುತಿಮ್ಮ ||


722

ಚೆಲುವುನಗುವುಗಳ ಕಂಡವನ ಕಣ್ಣರಳುವುದು |

ಅಳುವುನೋವುಗಳ ಕಂಡೊದ್ದೆಯಾಗುವುದು ||

ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು |

ಶಿಲೆಯಲ್ಲ ಯೋಗಿಯೆದೆ - ಮಂಕುತಿಮ್ಮ ||


723

ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ |

ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ||

ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು |

ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ||


724

ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |

ಹಿತವಿರಲಿ ವಚನದಲಿ, ಋತವ ಬಿಡದಿರಲಿ ||

ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |

ಅತಿ ಬೇಡವೆಲ್ಲಿಯುಂ - ಮಂಕುತಿಮ್ಮ ||


725

ಕಡಲ್ಗಳೊಂದಾದೊಡಂ, ಪೊಡವಿ ಹಬೆಯಾದೊಡಂ |

ಬಿಡದಿರೊಳನೆಮ್ಮದಿಯ, ಬಿಡು ಗಾಬರಿಕೆಯ ||

ಕಡಲ ನೆರೆ ತಗ್ಗುವುದು, ಪೊಡವಿ ಧೂಳಿಳಿಯುವುದು |

ಗಡುವಿರುವುದೆಲ್ಲಕಂ - ಮಂಕುತಿಮ್ಮ ||


726

ನಲಿಸುವೊಲಿಸುವ, ಕೆಣಕಿ ಕಾಡಿಸುವ, ಮುಳಿಯಿಸುವ |

ಕೆಳೆ ನಂಟು ಹಗೆ ಕಲಹ ಕುಹಕದೋಲೆಗಳಂ ||

ಹಲಬರಿಗೆ ಹಂಚಿ ಬಾರೆಂದು ವಿಧಿ ನೇಮಿಸಿಹ |

ಇಳೆಯಂಚೆಯಾಳು ನೀಂ - ಮಂಕುತಿಮ್ಮ ||


727

ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? |

ಓಲೆಗಳನವರವರಿಗೈದಿಸಿರೆ ಸಾಕು ||

ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! |

ಕಾಲೋಟವವನೂಟ - ಮಂಕುತಿಮ್ಮ ||


728

ನಗು, ಮನದಿ ಲೋಗರ ವಿಕಾರಂಗಳನು ನೋಡಿ |

ಬಿಗಿ ತುಟಿಯ, ದುಡಿವಂದು ನೋವಪಡುವಂದು ||

ಪೊಗು, ವಿಶ್ವಜೀವನದ ಜೀವಾಂತರಂಗದಲಿ |

ನಗುನಗುತ ಬಾಳ್, ತೆರಳು - ಮಂಕುತಿಮ್ಮ ||


729

ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ |

ದುಡಿ ಕೈಯಿನಾದನಿತು; ಪಡು ಬಂದ ಪಾಡು ||

ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು |

ಬಿಡುಗಡೆಗೆ ದಾರಿಯದು - ಮಂಕುತಿಮ್ಮ ||


730

ಹಕ್ಕಿ ಮುನ್ನರಿಯುವುದೆ ತನ್ನ ಪಯಣದ ತೆರನ? |

ಇಕ್ಕುವರದಾರದನು ಕರೆದು ತಿರುಪೆಯನು? |

ರೆಕ್ಕೆ ಪೋದಂತಲೆದು, ಸಿಕ್ಕಿದುದನುಣ್ಣುವುದು |

ತಕ್ಕುದಾ ವ್ರತ ನಿನಗೆ - ಮಂಕುತಿಮ್ಮ ||


731

ಏನೊ ಕಣ್ಣನು ಪಿಡಿವುದೇನೊ ದಿಗಿಲಾಗಿಪುದು |

ಏನನೋ ನೆನೆದು ಸರ್ರೆಂದು ಹಾರುವುದು ||

ಬಾನೊಳಾಡುವ ಹಕ್ಕಿಗಿದುವೆ ನಿತ್ಯಾನುಭವ |

ನೀನದನು ಮೀರಿಹೆಯ? - ಮಂಕುತಿಮ್ಮ ||


732

ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! |

ಆವಾಗಳಾವಕಡೆಗೆರಗುವುದೊ ಹಕ್ಕಿ! ||

ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |

ಜೀವಮಾರ್ಗವನೂಹ್ಯ - ಮಂಕುತಿಮ್ಮ ||


733

ಮಾವುಸಸಿಯನು ನೆಟ್ಟು ಬೇವುಣಲು ಸಿದ್ಧನಿರು |

ಭೂವಿಷಯದಿಂದ ರಸ ಮಾರ್ಪಡುವುದುಂಟು ||

ಆ ವಿವರ ನಿನಗೇಕೆ? ತೋಟದೊಡೆಯನಿಗಿರಲಿ |

ಸೇವಕನು ನೀನಲ್ತೆ? - ಮಂಕುತಿಮ್ಮ ||


734

ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೊ! |

ಆಣತಿಯ ಕಳುಹುತಿಹನದನು ನೀನರಿತು ||

ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ |

ಕಾಣಿಸದನಾಳ್ಕೆಯದು - ಮಂಕುತಿಮ್ಮ ||


735

ನಾಯಕನಿಗಿರಲಿ ರಣವಿಜಯ ಪರಿಭವ ಗಣನೆ |

ಆಯವದರಿಂ ಭಟನ ಸತ್ತ್ವಶಿಕ್ಷಣಕೆ ||

ಸ್ವೀಯ ಸತ್ತ್ವವಿಕಾಸ ನಿಜಶಕ್ತಿಯಭ್ಯಾಸ |

ಶ್ರೇಯಸಿಗೆ ಸೋಪಾನ - ಮಂಕುತಿಮ್ಮ ||


736

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ |

ಆಯಸಂಬಡಿಸದವೊಲಂತರಾತ್ಮನನು ||

ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ |

ಆಯುವನು ಸಾಗಿಸೆಲೊ - ಮಂಕುತಿಮ್ಮ ||


737

ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ |

ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ||

ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ |

ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ||


738

ತನಗೆ ಬಾರದ ಲಾಭ ತನಯಂಗೆ ಬಂದಾಗ |

ಜನಕನ್ ಅದು ತನದೆಂದು ಸಂತಸಿಪ ತೆರದಿ ||

ಜನದೊಳಾರ್ಗಾವ ಸೊಗವಾದೊಡಂ ತನದೆನ್ನು- |

ತನುಭವಿಪನೋ ಜ್ಞಾನಿ - ಮಂಕುತಿಮ್ಮ ||


739

ತನ್ನ ಮನದಾಟಗಳ ತಾನೆ ನೋಡುತ ನಗುವ |

ತನ್ನೊಳಗೆ ತಾನಿರ್ವರಾದವೊಲು ಬಾಳ್ವ ||

ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ |

ಧನ್ಯತೆಯ ಕಂಡವನು - ಮಂಕುತಿಮ್ಮ ||


740

ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? |

ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ||

ಆವುದೋ ಕುಶಲತೆಯದೊಂದಿರದೆ ಜಯವಿರದು |

ಆ ವಿವರ ನಿನ್ನೊಳಗೆ - ಮಂಕುತಿಮ್ಮ ||


741

ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು |

ಬಳುಕು ಹಗ್ಗದ ಮೇಲೆ ತಾನಡಿಯನಿಡುತ ||

ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ |

ಕಲೆಯೆ ಜೀವನಯೋಗ - ಮಂಕುತಿಮ್ಮ ||


742

ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ |

ವಹಿಸೆ ಜೀವನಭರವನದು ಹಗುರೆನಿಪವೊಲ್ ||

ಸಹನೆ ಸಮರಸಭಾವವಂತಃಪರೀಕ್ಷೆಗಳು |

ವಿಹಿತವಾತ್ಮದ ಹಿತಕೆ - ಮಂಕುತಿಮ್ಮ ||


743

ಎಲ್ಲ ನಾಶನವೆಲ್ಲಕಾಲವಶವಾದೊಡಂ |

ಕ್ಷುಲ್ಲಕನು ನರನಾದೊಡಂ ಕಾಲನಿದಿರೊಳ್ ||

ಉಲ್ಲಾಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು |

ಹುಲ್ಲೊಣಗಿ ಬೆಳೆವುದಲ? - ಮಂಕುತಿಮ್ಮ ||


744

ಅಣಗಿದ್ದು ಬೇಸಗೆಯೊಳ್, ಎದ್ದು ಮಳೆ ಕರೆದಂದು |

ಗುಣಿಯೆನದೆ ತಿಟ್ಟೆನದೆ ಸಿಕ್ಕಿದೆಡೆ ಬೆಳೆದು ||

ಉಣಿಸನೀವನು ದನಕೆ, ತಣಿವನೀವನು ಜಗಕೆ |

ಗುಣಶಾಲಿ ತೃಣಸಾಧು - ಮಂಕುತಿಮ್ಮ ||


745

ಪರಹಿತದ ಮಾತಿರಲಿ; ಪರರಿನೇ ಜೀವಿಪನು |

ನರಜಂತು, ಪಶು ಪಕ್ಷಿ ಕೀಟ ಮೀನ್ಗಳವೋಲ್ ||

ಪರರಿನೆಳಸದದೇನನುಂ ಪರರಿಗುಪಕರಿಪ |

ತರುಜನ್ಮವಲ ಪುಣ್ಯ! - ಮಂಕುತಿಮ್ಮ ||


746

ನೆರಳನಿನಿತನು ಕೊಡುವ, ದಣಿವನಿನಿತನು ಕಳೆವ |

ತಿರೆಯ ಪಯಣದ ಹೊರೆಯನಿನಿತು ಸುಳುವೆನಿಪಾ ||

ತರುವಾಗಿ ಮನೆಯೊಳಗೊ ಹೊರಗೊ ನೀಂ ಬೆಳೆಯುತಿರೆ |

ಪರಮಧರ್ಮವದೆಲವೊ - ಮಂಕುತಿಮ್ಮ ||


747

ಅವರೆಷ್ಟು ಧನವಂತರ್, ಇವರೆಷ್ಟು ಬಲವಂತರ್ |

ಅವರೆಷ್ಟು ಯಶವಂತರ್ ಎನುವ ಕರುಬಿನಲಿ ||

ಭವಿಕ ನಿನಗೆಷ್ಟಿಹುದೊ ಮರೆತು ನೀಂ ಕೊರಗುವುದು |

ಶಿವನಿಗೆ ಕೃತಜ್ಞತೆಯೆ? - ಮಂಕುತಿಮ್ಮ ||


748

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ |

ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ||

ತಿನ್ನು ನೀಂ ಜಗಕೆ ತಿನಲಿತ್ತನಿತ; ಮಿಕ್ಕೂಟ |

ಜೀರ್ಣಿಸದ ಋಣಶೇಷ - ಮಂಕುತಿಮ್ಮ ||


749

ಪರಮಲಾಭವ ಗಳಿಸೆ ಜೀವಿತವ್ಯಾಪಾರ- |

ಕಿರಬೇಕು ಮೂಲಧನವದು ತತ್ತ್ವದೃಷ್ಟಿ ||

ಚಿರಲಾಭ ಜಗದಾತ್ಮಲೀಲಾವಿಹಾರಸುಖ |

ಧರೆಯ ಸುಖ ಮೇಲ್ಬಡ್ಡಿ - ಮಂಕುತಿಮ್ಮ ||


750

ಮುಳುಗದಿರು; ಜೀವನದ ತೆರೆಯ ಮೇಲೀಜುತಿರು |

ಒಳಿತನಾಗಿಸು, ಕೊಡುತ ಕೊಳುತ ಸಂತಸವ ||

ಕಳವಳಂಬಡದೆ ನಡೆ ಕಡೆಯ ಕರೆ ಬಂದಂದು |

ಮಿಳಿತನಿರು ವಿಶ್ವದಲಿ - ಮಂಕುತಿಮ್ಮ ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post