Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ - 8

 
   
ಏಳನೆಯ ಅಧ್ಯಾಯದ ಕೊನೆಯಲ್ಲಿ ಕೃಷ್ಣ ಸಂಕ್ಷಿಪ್ತವಾಗಿ ಆರು ಮಹತ್ವದ ಸಂಗತಿಯನ್ನು ಮನುಷ್ಯ ತಿಳಿದಿರಬೇಕು ಎಂದು ಹೇಳಿದ್ದ. ಅಧಿಭೂತ, ಅಧ್ಯಾತ್ಮ, ಅಧಿದೈವ, ಅಧಿಯಜ್ಞ, ಬ್ರಹ್ಮ, ಕರ್ಮ-ಈ ಆರು ಸಂಗತಿಗಳನ್ನು ತಿಳಿದರೆ ಅದರಿಂದ ಮೇಲಕ್ಕೆ ಏರುವ ಇನ್ನೊಂದು ಮೆಟ್ಟಲಿರುವುದಿಲ್ಲ ಎಂದಿದ್ದ ಕೃಷ್ಣ.

              ಅಧಿಭೂತ ಎಂದರೆ ಭೌತಿಕ ಪ್ರಪಂಚ, ಅಧ್ಯಾತ್ಮ ಎಂದರೆ ಜಡದೊಳಗಿರುವ ಚೇತನ,  ಅಧಿದೈವ ಎಂದರೆ ಚೇತನವನ್ನು ನಿಯಂತ್ರಿಸುವ ದೇವತೆಗಳು, ಅಧಿಯಜ್ಞ ಎಂದರೆ ದೇವತೆಗಳನ್ನು ನಿಯಂತ್ರಿಸುವ ಭಗವಂತ, ಈ ಅಧಿಯಜ್ಞ ಜಗತ್ತಿನಲ್ಲೆಲ್ಲಾ ತುಂಬಿದ್ದಾನೆ ಎನ್ನುವುದು ಬ್ರಹ್ಮಕಲ್ಪನೆ, ಅವನಿಂದಲೇ ಎಲ್ಲಾ ಕ್ರಿಯೆಗಳೂ ನಡೆಯುತ್ತವೆ-ಆತನೇ ಸೂತ್ರಧಾರ. ಈ ಅರಿವು ಸಾವಿನ ಸಮಯದಲ್ಲೂ ಎಚ್ಚರವಾಗಿರಬೇಕು ಆಗ ಆ ಸಾವು ಮಾಂಗಲಿಕ. ಇಷ್ಟು ವಿಚಾರವನ್ನು ನಾವು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ.

            ಸೂಕ್ಷ್ಮವಾಗಿ ಏಳನೇ ಅಧ್ಯಾಯದ ಕೊನೆಯ ಎರಡು ಶ್ಲೋಕಗಳನ್ನು ಗಮನಿಸಿದರೆ ಅಲ್ಲಿ ಕೃಷ್ಣ ‘ತತ್ ಬ್ರಹ್ಮ’(ಆ ಬ್ರಹ್ಮತತ್ವ) ಎಂದಿದ್ದಾನೆ. ಕೊನೆಯಲ್ಲಿ  ‘ನನ್ನನ್ನು(ಮಾಂ) ಸೇರುತ್ತಾರೆ’ ಎಂದಿದ್ದಾನೆ. ಇಲ್ಲಿ ನಮಗೆ ಕೃಷ್ಣ ಮತ್ತು ಬ್ರಹ್ಮತತ್ವ ಬೇರೆ ಬೇರೆಯೋ ಅನ್ನುವ ಸಂಶಯ  ಬರುತ್ತದೆ. ಇನ್ನು ಇಲ್ಲಿ ಕೃಷ್ಣ ಬಳಸಿದ ಪದಗಳನ್ನು ನೋಡಿದಾಗ ಅಲ್ಲಿ ಅನೇಕ ಅರ್ಥವನ್ನು ಕಾಣುತ್ತೇವೆ. ಉದಾಹರಣೆಗೆ ಬ್ರಹ್ಮ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಅನೇಕ ಅರ್ಥವಿದೆ. ಬ್ರಹ್ಮ ಎಂದರೆ ಜೀವ, ಚತುರ್ಮುಖ ಬ್ರಹ್ಮ, ಶ್ರೀತತ್ವ, ಭಗವಂತ, ವೇದಗಳು, ಇತ್ಯಾದಿ. ಅಧ್ಯಾತ್ಮ ಎನ್ನುವಲ್ಲಿ ‘ಆತ್ಮ’ ಪದಕ್ಕೆ ಶರೀರ, ಮನಸ್ಸು, ಜೀವ, ಪರಮಾತ್ಮ ಇತ್ಯಾದಿ ಅರ್ಥಗಳಿವೆ. ‘ಕರ್ಮ’ ಎನ್ನುವಲ್ಲಿ ಪ್ರಾರಬ್ಧಕರ್ಮ ಮತ್ತು ಕರ್ತವ್ಯಕರ್ಮ ಎನ್ನುವ ಎರಡು ಅರ್ಥ ಕಾಣುತ್ತದೆ. ಅಧಿಭೂತ ಎನ್ನುವಲ್ಲಿ ‘ಭೂತ’ ಪದಕ್ಕೆ ಜಡ ಹಾಗೂ ಚೇತನ ಎನ್ನುವ ಎರಡು ಅರ್ಥವನ್ನು ಕಾಣಬಹುದು. ಇದೇ ರೀತಿ ಅಧಿದೈವ ಎಂದರೆ ದೈವರಲ್ಲಿ(ದೇವತೆಗಳಲ್ಲಿ) ಅಧಿಕನಾದವನು ಅಧಿದೈವ, ದೇವತೆಗಳಿಗೆ ಸಂಬಂಧಪಟ್ಟಿದ್ದೂ ಕೂಡಾ ಅಧಿದೈವ. ಹೀಗೆ ಈ ಆರೂ ಶಬ್ದಗಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಆಯಾಮದಲ್ಲಿ ತೆರೆದುಕೊಳ್ಳುವಂತಾದ್ದು. ಹೀಗಿರುವಾಗ ಕೃಷ್ಣ ಹೇಳಿರುವ ಈ ಆರು ಸಂಗತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ.

              ಕೊನೆಯ ಶ್ಲೋಕದಲ್ಲಿ ಕೃಷ್ಣ ಹೇಳಿದ: “ನಮ್ಮ ಜೀವನ ಪಯಣದ ಕೊನೆಯ ಕ್ಷಣದಲ್ಲಿ ಈ ಅರಿವನ್ನು ಉಳಿಸಿಕೊಂಡಿರಬೇಕು” ಎಂದು. ಅದು ಹೇಗೆ ಸಾಧ್ಯ ? ದೇಹತ್ಯಾಗ ಮಾಡುವಾಗ ಮಾನಸಿಕ ಚಿಂತನೆ ಹೇಗಿರಬೇಕು? ದೇಹತ್ಯಾಗ ನಂತರ ಜೀವ ಯಾವ ಮಾರ್ಗದಲ್ಲಿ ಚಲಿಸುತ್ತದೆ? ಇತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಎಂಟನೇ ಅಧ್ಯಾಯ ನಮ್ಮೆಲ್ಲರ ಪ್ರತಿನಿಧಿ ಅರ್ಜುನ ಈ ನಮ್ಮ ಪ್ರಶ್ನೆಯನ್ನು ಶ್ರೀಕೃಷ್ಣನಲ್ಲಿ ಕೇಳುವುದರೊಂದಿಗೆ ಪ್ರಾರಂಭವಾಗುತ್ತದೆ.

ಅರ್ಜುನ ಉವಾಚ ।

ಕಿಂ ತದ್ ಬ್ರಹ್ಮ  ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ ।

ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ ॥೧॥

ಅರ್ಜುನಃ ಉವಾಚ

ಕಿಮ್  ತತ್  ಬ್ರಹ್ಮ  ಕಿಮ್ ಅಧ್ಯಾತ್ಮಮ್  ಕಿಮ್  ಕರ್ಮ ಪುರುಷೋತ್ತಮ ।

ಅಧಿಭೂತಮ್  ಚ ಕಿಮ್  ಪ್ರೋಕ್ತಮ್ ಅಧಿದೈವಮ್  ಕಿಮ್ ಉಚ್ಯತೇ  -ಅರ್ಜುನ ಕೇಳಿದನು: ಪುರುಷೋತ್ತಮಾ, ಯಾವುದು ಆ ‘ಬ್ರಹ್ಮ’? ‘ಅಧ್ಯಾತ್ಮ’ವೆಂದರೆ ಏನು? ಏನು ‘ಕರ್ಮ’ವೆಂದರೆ? ಯಾವುದನ್ನು ‘ಅಧಿಭೂತ’ವೆನ್ನುತ್ತಾರೆ? ಯಾವುದನ್ನು ‘ಅಧಿದೈವ’ವೆನ್ನುತ್ತಾರೆ?

ಅರ್ಜುನ ಕೃಷ್ಣನನ್ನು ಕೇಳುತ್ತಾನೆ “ ತತ್ ಬ್ರಹ್ಮ(ಆ ಬ್ರಹ್ಮತತ್ವ) ಅಂದರೆ ಯಾವುದು? ಅಧ್ಯಾತ್ಮ ಅಂದರೆ ಏನು? ಮತ್ತು ಕರ್ಮ ಅಂದರೇನು?”  ಎಂದು. ಇಲ್ಲಿ ವ್ಯಾಸರು ಅರ್ಜುನನ ಈ ಪ್ರಶ್ನೆಯ ಹಿಂದಿನ ಭಾವನೆಯನ್ನು “ಪುರುಷೋತ್ತಮ” ಎನ್ನುವ ವಿಶೇಷಣದಲ್ಲಿ ಸೆರೆಹಿಡಿದು ನಮ್ಮ ಮುಂದಿಟ್ಟಿದ್ದಾರೆ. ಪುರುಷೋತ್ತಮ ಎಂದರೆ ಕ್ಷರ(ಜೀವ)ವನ್ನು ಮೀರಿನಿಂತವನು. ಅಕ್ಷರ(ಶ್ರೀತತ್ವ)ಕ್ಕಿಂತಲೂ ಹಿರಿಯನು. “ಕ್ಷರ-ಅಕ್ಷರವನ್ನು ಮೀರಿ ನಿಂತ  ನೀನೇ ಪುರುಷೋತ್ತಮ, ನೀನಲ್ಲದೆ ನಿನ್ನಿಂದ ಹಿರಿದಾದ ತತ್ವ ಇನ್ನೊಂದಿಲ್ಲ, ಆದ್ದರಿಂದ ನನಗೆ ತಿಳಿದಂತೆ ನೀನೇ ಬ್ರಹ್ಮ. ಇದರ ವಿವರಣೆಯನ್ನು ನಿನ್ನಿಂದ ತಿಳಿಯಬೇಕು”  ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ ಎನ್ನುವುದನ್ನು ತಿಳಿಸುವ ವಿಶೇಷಣ  ‘ಪುರುಷೋತ್ತಮ’. ಅರ್ಜುನ ಕೇಳುತ್ತಾನೆ “ಯಾವುದನ್ನು ಅಧಿಭೂತವೆನ್ನುತ್ತಾರೆ?  ಯಾವುದನ್ನು ಅಧಿದೈವವೆನ್ನುತ್ತಾರೆ?” ಎಂದು.


ಅಧಿಯಜ್ಞಃ ಕಥಂ ಕೋSತ್ರ ದೇಹೇSಸ್ಮಿನ್ ಮಧುಸೂದನ ।

ಪ್ರಯಾಣಕಾಲೇ ಚ ಕಥಂ ಜ್ಞೇಯೋSಸಿ ನಿಯತಾತ್ಮಭಿಃ ॥೨॥

ಅಧಿಯಜ್ಞಃ ಕಥಮ್ ಕಃ ಅತ್ರ ದೇಹೇ ಅಸ್ಮಿನ್ ಮಧುಸೂದನ ।

ಪ್ರಯಾಣ ಕಾಲೇ ಚ ಕಥಮ್  ಜ್ಞೇಯಃ ಅಸಿ ನಿಯತ ಆತ್ಮಭಿಃ –ಮಧುಸೂದನಾ, ಇಲ್ಲಿ ಈ ದೇಹದಲ್ಲಿ ‘ಅಧಿಯಜ್ಞ’ಯಾರು? ಮತ್ತು ಹೇಗೆ? ಬಗೆ ಹಿಡಿತದಲ್ಲಿಟ್ಟವರು ಕೊನೆಯ ಕಾಲದಲ್ಲಿ ನಿನ್ನನ್ನು ಹೇಗೆ ನೆನೆಯಬೇಕು?

ಮುಂದುವರಿದು ಅರ್ಜುನ ಕೇಳುತ್ತಾನೆ: “ಅಧಿಯಜ್ಞ ಅಂದರೆ ಯಾರು?” ಎಂದು. ನಮ್ಮ ದೇಹದೊಳಗಿರುವ ಅಧಿಯಜ್ಞ ಯಾರು ಮತ್ತು ಹೇಗೆ? ಅಧಿಯಜ್ಞದ ಅರ್ಥವ್ಯಾಪ್ತಿ ಏನು? ಎನ್ನುವುದು ಅರ್ಜುನನ ಪ್ರಶ್ನೆ. ಇಲ್ಲಿ ಪುನಃ ವ್ಯಾಸರು “ಮಧುಸೂದನ” ಎನ್ನುವ ವಿಶೇಷಣವನ್ನು ಬಳಸಿ ಅರ್ಜುನನ ಪ್ರಶ್ನೆಯ ಭಾವನೆಯನ್ನು ನಮಗೆ ತಿಳಿಸುತ್ತಾರೆ.   “ಮಧುಸೂದನ” ಅನ್ನುವ ನಾಮಕ್ಕೆ ಎರಡು ಪ್ರಮುಖ ಅರ್ಥವಿದೆ. ‘ಮಧು’ ಅಂದರೆ ಆನಂದ(Inner bliss). ‘ಸೂದ’ ಎಂದರೆ ಸತ್ಕರ್ಮವನ್ನು ಮಾಡುವ ಸಾತ್ವಿಕರು. ಆದ್ದರಿಂದ ಮಧುಸೂದನ ಎಂದರೆ ಸಾತ್ವಿಕರೊಳಗಿದ್ದು ಅವರಿಗೆ ಆನಂದವನ್ನು ಕೊಡುವವನು ಎಂದರ್ಥ.  ‘ಸೂದ’ ಎಂದರೆ ನಾಶ ಎನ್ನುವ ಇನ್ನೊಂದು ಅರ್ಥವಿದೆ. ಆದ್ದರಿಂದ ದುರ್ಜನರ ಆನಂದವನ್ನು ನಾಶಮಾಡುವವನು ಮಧುಸೂದನ. “ನಮ್ಮೊಳಗೆ ಕೂತು ಆನಂದ ಕೊಡುವವನೂ ನೀನೇ, ದುಃಖ ಕೊಡುವವನೂ ನೀನೇ. ನಮ್ಮೊಳಗಿದ್ದು ಎಲ್ಲಾ ಯಜ್ಞಗಳನ್ನು ನಿಯಂತ್ರಿಸುವವನು ನೀನೆ. ಆದ್ದರಿಂದ ನೀನೇ ಅಧಿಯಜ್ಞ ಎನ್ನುವುದು ನನ್ನ ತಿಳುವಳಿಕೆ. ಇದನ್ನು ನನಗೆ ವಿವರಿಸು” ಎನ್ನುವ ಅರ್ಜುನನ ಭಾವವನ್ನು ಈ ವಿಶೇಷಣದ ಮೂಲಕ ವ್ಯಾಸರು ಇಲ್ಲಿ ವಿವರಿಸಿದ್ದಾರೆ. ಅರ್ಜುನ ಕೇಳುತ್ತಾನೆ “ನಮ್ಮ ಜೀವನದ ಕೊನೆಯ ಶ್ರೇಷ್ಠವಾದ ಯಾತ್ರೆಯಲ್ಲಿ ಜೀವದ ದೇಹ ನಿರ್ಗಮನದ ಅನುಸಂಧಾನ ಮತ್ತು ಹೋಗುವ ವಿವರವನ್ನು ತಿಳಿಸು” ಎಂದು.  

ಮೇಲಿನ ಶ್ಲೋಕದಲ್ಲಿ ಉಪಯೋಗಿಸಿದ ಪುರುಷೋತ್ತಮ ಮತ್ತು ಮಧುಸೂದನ ಎನ್ನುವ ಎರಡು ವಿಶೇಷಣದ ಹಿಂದಿನ ಅರ್ಥವನ್ನು ನೋಡಿದಾಗ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ-ಅರ್ಜುನನಿಗೆ ಈ ಆರು ಸಂಗತಿಯ  (ಪದಗಳ) ನಿಜವಾದ ಅರ್ಥ ತಿಳಿದಿತ್ತು ಎಂದು. ಆದರೂ ಅದರ ವಿವರವನ್ನು ಭಗವಂತನಿಂದ ತಿಳಿದುಕೊಳ್ಳುವ ಉದ್ದೇಶದಿಂದ ಆತ ಈ ಪ್ರಶ್ನೆಯನ್ನು ಕೃಷ್ಣನಲ್ಲಿ ಕೇಳುತ್ತಾನೆ. ಸಾಮಾನ್ಯವಾಗಿ ತಿಳಿದವರು ತಮಗೆ ತಿಳಿದಿದ್ದರೂ ಕೂಡಾ ಇನ್ನೊಬ್ಬರಿಗೆ ತಿಳಿಸುವ ಉದ್ದೇಶದಿಂದ ಈ ರೀತಿ ಪ್ರಶ್ನೆ ಮಾಡುತ್ತಾರೆ. ಇಲ್ಲಿ ಅರ್ಜುನ ತಾನು ತಿಳಿದಿರುವುದನ್ನು ದೃಡೀಕರಿಸಿಕೊಳ್ಳುವುದಕ್ಕೋಸ್ಕರ ಮತ್ತು ಇಡೀ ಮಾನವ ಜನಾಂಗಕ್ಕೆ ಭಗವಂತನ ವಿವರಣೆಯನ್ನು ತಿಳಿಸುವುದಕ್ಕೋಸ್ಕರ ಈ ಪ್ರಶ್ನೆಯನ್ನು ಕೃಷ್ಣನ ಮುಂದಿಟ್ಟಿದ್ದಾನೆ.

ನಮಗೆ ಅನಿಸಬಹುದು “ಯುದ್ಧರಂಗದಲ್ಲಿ ನಿಂತಿರುವ ಅರ್ಜುನ ಏಕೆ ಇಂತಹ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ? ಇಲ್ಲಿ ಅದರ ಅಗತ್ಯ ಏನಿದೆ?”  ಎಂದು. ಸಾಮಾನ್ಯವಾಗಿ ಯುದ್ಧರಂಗದಲ್ಲಿ ನಿಂತವರಿಗೆ ಸಾವು ಕಾಡುವಷ್ಟು ಇನ್ಯಾರನ್ನೂ ಕಾಡುವುದಿಲ್ಲ. ಅವರನ್ನು ಪ್ರತೀಕ್ಷಣ ಸಾವು ನಿರೀಕ್ಷಿಸುತ್ತಿರುತ್ತದೆ. ಅವರು ಸಾವು ಮತ್ತು ಸಾವಿನ ಆಚೆಗಿನ ಸ್ಥಿತಿಯ ಬಗ್ಗೆ ಜಾಗೃತರಾಗಿರುತ್ತಾರೆ. ಸಾವಿನಿಂದಾಚೆಗೆ ಏನು ಎನ್ನುವುದು ಸೈನಿಕರಿಗೆ ಬಹಳ ಮಹತ್ವದ್ದಾಗಿರುತ್ತದೆ.  ಈವರೆಗಿನ ಕೃಷ್ಣಾರ್ಜುನ ಸಂವಾದದಲ್ಲಿ ಎಲ್ಲಿಯೂ ಕೃಷ್ಣ ಅರ್ಜುನನಿಗೆ ಗೆಲುವಿನ ಭರವಸೆಯನ್ನು ಕೊಟ್ಟಿಲ್ಲ. ಧರ್ಮದ ಪರ ಹೋರಾಡುವುದು ನಿನ್ನ ಕರ್ತವ್ಯ ಅಂದಿದ್ದಾನೆ ಅಷ್ಟೇ. ಆದ್ದರಿಂದ ಯುದ್ಧರಂಗದಲ್ಲಿರುವ ಅರ್ಜುನನಿಗೆ ಸಾವು ಮತ್ತು ಸಾವಿನಿಂದಾಚೆಗೆ ಏನು ಎನ್ನುವುದು ಬಹಳ ಮುಖ್ಯ ವಿಚಾರ.

ಅರ್ಜುನನ ಪ್ರಶ್ನೆಗೆ ಭಗವಂತನ ಉತ್ತರವೇ ಎಂಟನೆಯ ಅಧ್ಯಾಯದ ಉಳಿದ ಭಾಗ.


ಭಗವಾನುವಾಚ ।

ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋSಧ್ಯಾತ್ಮಮುಚ್ಯತೇ ।

ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ ॥೩॥

ಭಗವಾನ್ ಉವಾಚ - ಭಗವಂತ ಹೇಳಿದನು: 

ಅಕ್ಷರಮ್  ಬ್ರಹ್ಮ ಪರಮಮ್  ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ ।

ಭೂತ ಭಾವ ಉದ್ಭವ ಕರಃ ವಿಸರ್ಗಃ ಕರ್ಮ ಸಂಜ್ಞಿತಃ –- ಪರಮಾಕ್ಷರ ಎನಿಸಿದ ಪರತತ್ವವೇ ‘ಬ್ರಹ್ಮ’. ಜೀವಸ್ವರೂಪ ಮತ್ತು ಜೀವಕ್ಕೆ ಸಂಬಂಧಿಸಿದ ಸಮಷ್ಟಿ ಪಿಂಡಾಂಡವನ್ನು [ಭಗವಂತನ ಬಗೆಯ ನಿಲುವನ್ನು] ‘ಅಧ್ಯಾತ್ಮ’ ಎನ್ನುತ್ತಾರೆ. ಜೀವ-ಜಡಗಳ ಅಭಿವ್ಯಕ್ತಿಗೆ ಕಾರಣವಾದ ಭಗವಂತನ ಬಗೆಬಗೆಯ ಸೃಷ್ಟಿಕ್ರಿಯೆಗೆ ‘ಕರ್ಮ’ ಎಂದು ಹೆಸರು.

ಕೃಷ್ಣ   ಹೇಳುತ್ತಾನೆ ‘ಬ್ರಹ್ಮ’ ಅಂದರೆ “ಪರಮಂ ಬ್ರಹ್ಮ –ಪರಮಂ ಅಕ್ಷರ’ ಎಂದು. ಭಗವಂತ ಎಲ್ಲರಿಗಿಂತ ಹಿರಿದಾದ  ಪರಮಮ್ ಬ್ರಹ್ಮ- ಆತ ಪರಮಾಕ್ಷರ. ಅಂತಹ ಭಗವಂತನ ಬಗೆಗೆ ತಿಳಿದುಕೊಳ್ಳಬೇಕು ಎನ್ನುವುದು ‘ಬ್ರಹ್ಮ’ ಪದದ ಹಿಂದಿನ ಅರ್ಥ. ವಿಷ್ಣು ಸಹಸ್ರನಾಮದಲ್ಲಿ ಭಗವಂತನನ್ನು ಈ ರೀತಿ ವರ್ಣಿಸಿದ್ದಾರೆ:

ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |

ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ ||

ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ; ಎಲ್ಲರ ಚಿಂತನೆಯ ಕೊನೆಯ ಗುರಿ; ಎಲ್ಲಾ ಜ್ಞಾನದ ಗಮ್ಯ ಆ ಭಗವಂತ.  ಇಲ್ಲಿ ಭಗವಂತನನ್ನು  'ಪರಮ ಮಹಾ ಬ್ರಹ್ಮ' ಎನ್ನುತ್ತಾರೆ.  ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ,-ನಿತ್ಯ ಮುಕ್ತಳಾದ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ತ್ವಾಭಿಮಾನಿ ದೇವತೆಗಳು.  ಭಗವಂತ ಸರ್ವ ದೇವತೆಗಳ ಒಡೆಯ.  ಇದು ನಾವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳಲ್ಲಿ  ಒಂದಾದ  ‘ಬ್ರಹ್ಮ’ ಪದದ ಅರ್ಥ.

ಮುಂದುವರಿದು ಕೃಷ್ಣ ಹೇಳುತ್ತಾನೆ: “ಸ್ವಭಾವಃ ಅಧ್ಯಾತ್ಮಮ್ ಉಚ್ಯತೇ” ಎಂದು. ಇಲ್ಲಿ ಸ್ವಭಾವ ಎಂದರೆ ತನ್ನತನ. ಜೀವದ ಇರವಿನ ಬಗೆ ಮತ್ತು ಜೀವ ಸ್ವಭಾವ. ನಾವು ಭಗವಂತನನ್ನು ಅರಿಯುವ ಮೊದಲು ನಮ್ಮ ಜೀವ ಸ್ವಭಾವವನ್ನು ಅರಿಯಬೇಕು. ನಾನು ಅಂದರೆ ಏನು? ನನ್ನಲ್ಲಿರುವ ಉತ್ತಮ ಅಂಶ(plus point) ಯಾವುದು? ಕೆಟ್ಟ ಅಂಶ(minus point) ಯಾವುದು ಎಂದು ನಿರಂತರ ನಾವು ನಮ್ಮನ್ನು ತಿಳಿಯಲು ಪ್ರಯತ್ನಿಸಬೇಕು [ಆದರೆ ನಾವು ನಮ್ಮ ಹೆಚ್ಚಿನ ಸಮಯವನ್ನು ಇನ್ನೊಬ್ಬರ ಬಗ್ಗೆ ತೀರ್ಪು ಕೊಡುವುದರಲ್ಲಿ ಕಳೆಯುತ್ತೇವೆ!!!] . ನಮಗೆ ಈ ದೇಹದಲ್ಲಿ ಕಣ್ಣು, ಕೈ, ಕಾಲು ಹಾಗೂ ಇತರ ಅಂಗಾಂಗಗಳನ್ನು ಬಿಟ್ಟು ಒಂದು ‘ನಾನು’ ಅನ್ನುವ ವಸ್ತುವಿದೆ ಎನ್ನುವ ಅರಿವೇ ಇರುವುದಿಲ್ಲ [awareness of self].  ಮೊದಲು ನಾವು  ಜೀವದ ಇರುವಿಕೆಯನ್ನು ತಿಳಿದುಕೊಳ್ಳಬೇಕು. ನಂತರ  ಅದರ ಸ್ವಭಾವವೇನು ಎಂದು ತಿಳಿಯಬೇಕು. [ಸಾಮಾನ್ಯವಾಗಿ ನಮಗೆ ನಮ್ಮ ಜೀವ ಸ್ವಭಾವ ಏನು ಎಂದು ತಿಳಿದಿರುವುದಿಲ್ಲ. ನಾವು ಪ್ರಭಾವದಲ್ಲೇ ಬದುಕುತ್ತಿರುತ್ತೇವೆ.]

ಜೀವ ಅನ್ನುವುದು ಅತೀ ಸೂಕ್ಷ್ಮವಾದ ವಸ್ತು. ಅದು ಹೃತ್ಕಮಲ ಮಧ್ಯದಲ್ಲಿ ಅನಾಹತ ಚಕ್ರ(thymus gland)ವೆಂಬ ಶಕ್ತಿ ಕೇಂದ್ರದಲ್ಲಿದೆ. ಈ ಜೀವ ಎನ್ನುವುದು ಕೋಣೆಯಲ್ಲಿ ಹಚ್ಚಿದ ಪುಟ್ಟ ದೀಪದಂತೆ. ದೀಪ ಇಡೀ ಕೋಣೆಯನ್ನು ಬೆಳಗಿಸುವಂತೆ,  ಜೀವ  ಅತಿ ಸೂಕ್ಷ್ಮವಾದರೂ ಕೂಡಾ ಅದರ ಬೆಳಕು ಇಡೀ ದೇಹವನ್ನು ವ್ಯಾಪಿಸಿರುತ್ತದೆ. ಇಂತಹ  ಜೀವ ಮತ್ತು ಜೀವ ಸ್ವಭಾವವೇ ‘ಅಧ್ಯಾತ್ಮ’.

ಕೃಷ್ಣ ಮುಂದುವರಿದು ಹೇಳುತ್ತಾನೆ: “ಈ ಪ್ರಪಂಚ ಎಂದರೆ ಭೂತ ಮತ್ತು ಭಾವ-ಅಂದರೆ ಇದು ಜೀವ ಮತ್ತು ಜಡದ ಸೃಷ್ಟಿ” ಎಂದು. ನಾವು ಈ ಜಗತ್ತಿನಲ್ಲಿದ್ದೇವೆ. ಇಂತಹ ಜಗತ್ತು ಹೇಗೆ ಸೃಷ್ಟಿಯಾಯಿತು? ಯಾವಾಗ ಸೃಷ್ಟಿಯಾಯಿತು? ಅದರ ಹಿಂದಿರುವ ಮೂಲದ್ರವ್ಯ ಯಾವುದು? ಅದರ ನಿಮಿತ್ತ ಮತ್ತು ಉಪಧಾನ ಕಾರಣ ಯಾರು? ಜೀವ ದೇಹದಮೂಲಕ ಹುಟ್ಟುವುದು ಏಕೆ? ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸುತ್ತಿರುವ ಆ ಮಹಾ ಶಕ್ತಿ ಯಾವುದು? ಹೀಗೆ ಚಿಂತನೆ ಮಾಡಿದಾಗ ನಮಗೆ ಒಂದು ವಿಷಯ ತಿಳಿಯುತ್ತದೆ-ಅದೇ ಕರ್ಮ  ಸಿದ್ಧಾಂತ. ಈ ಜೀವಜಾತವನ್ನು ಮತ್ತು ಜಡಪ್ರಪಂಚವನ್ನು ಸೃಷ್ಟಿ ಮಾಡುವ ಮೂಲ ಶಕ್ತಿ ಆ ಭಗವಂತ. ಅವನ ಕ್ರಿಯೆಯೇ ನಿಜವಾದ ಕ್ರಿಯೆ. ಈ ಪ್ರಪಂಚದ ವೈವಿಧ್ಯಮಯವಾದ ಸೃಷ್ಟಿಯ ಮೂಲವನ್ನು ತಿಳಿದಾಗ ನಿಜವಾದ ಕರ್ಮ ತಿಳಿಯುತ್ತದೆ. ನಾವೆಲ್ಲರೂ ಕೂಡಾ ಭಗವಂತ ಸೃಷ್ಟಿ ಮಾಡಿದ ಗೊಂಬೆಗಳು-ಆತ ಸೂತ್ರಧಾರ. ನಮ್ಮ ಕ್ರಿಯೆ  ಆ ಸೂತ್ರಧಾರನ ನಿಯಮಕ್ಕೆ ಬದ್ಧ. ಇಡೀ ವಿಶ್ವಚಕ್ರ ಭಗವಂತನ ಅಧೀನವಾಗಿ ತಿರುಗುತ್ತಿದೆ. ಭಗವಂತನ ಕ್ರಿಯೆ ಮಹಾಕ್ರಿಯೆ. ನಮ್ಮ ಕ್ರಿಯೆ -ಸುತ್ತುತ್ತಿರುವ ಮಹಾ ಚಕ್ರದ ಮೇಲೆ ಚಲಿಸುತ್ತಿರುವ  ಇರುವೆಯಂತೆ. ಇರುವೆ ಯಾವ ದಿಕ್ಕಿಗೆ ಚಲಿಸಿದರೂ ಕೂಡಾ ಅದು ಚಲಿಸುವುದು ಚಕ್ರ ತಿರುಗಿದಂತೇ ಹೊರತು ಇರುವೆ ಚಲಿಸಿದಂತೆ  ಚಕ್ರ ತಿರುಗುವುದಿಲ್ಲ. ಅದೇ ರೀತಿ ಪ್ರಪಂಚದ ಗತಿ ನಮ್ಮ ಕ್ರಿಯೆಯ ಮೇಲೆ ನಿರ್ಧಾರವಲ್ಲ. ಅದು ತನ್ನ ಗತಿಗನುಗುಣವಾಗಿ ನಿರಂತರ ನಡೆಯುತ್ತಿರುತ್ತದೆ. ಆದ್ದರಿಂದ ‘ನಾನು ಮಾಡಿದೆ’ ‘ನನ್ನಿಂದಾಯ್ತು’ ಎಂದು ಅಹಂಕಾರ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ. ಹೀಗೆ  ಜೀವ ಜಡ ಪ್ರಪಂಚ ಸೃಷ್ಟಿಗೆ ಕಾರಣವಾಗಿರತಕ್ಕಂತಹ ವಿಶಿಷ್ಟವಾದ ಸೃಷ್ಠಿ ಕ್ರಿಯೆಯೇ ನಿಜವಾದ ‘ಕರ್ಮ’.

ಈ ಶ್ಲೋಕವನ್ನು ಇನ್ನೊಂದು ಆಯಾಮದಲ್ಲಿ ನೋಡಿದಾಗ ಇದು ಹೊಸ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇಲ್ಲಿ ಜೀವ ಬರುವುದೇ ಇಲ್ಲ. ಎಲ್ಲಾ ಮೂರೂ ಸಂಗತಿಗಳೂ ಭಗವಂತನನ್ನು ಹೇಳುತ್ತವೆ. ಬ್ರಹ್ಮ ಎಂದರೆ ‘ಭಗವಂತ’ ; ಸ್ವಭಾವ ಅಂದರೆ ಭಗವಂತನ ಸ್ವತಂತ್ರ ಭಾವ. ಆದ್ದರಿಂದ ಭಗವಂತನ ಗುಣ-ಧರ್ಮ ಚಿಂತನೆಯೇ ಅಧ್ಯಾತ್ಮ.  ನಮ್ಮಲ್ಲಿ ಕೆಲವರು ಕೇಳುವುದಿದೆ. “ಭಗವಂತನಿಗೆ ಏಕೆ ಈ ಸ್ವಭಾವ ?   ಒಬ್ಬರಿಗೆ ಸುಖ, ಒಬ್ಬರಿಗೆ ದುಃಖ, ಒಬ್ಬರಿಗೆ ಬಡತನ, ಒಬ್ಬರಿಗೆ ಸಿರಿತನ, ಒಬ್ಬರು ನರಕಕ್ಕೆ, ಒಬ್ಬರು ಸ್ವರ್ಗಕ್ಕೆ , ಏಕೆ ಈ ತಾರತಮ್ಯ ?” ಎಂದು. ಇದು ಬಾಲಿಷ ಪ್ರಶ್ನೆ. ಇಂತಹ ವಾದದಿಂದಲೇ ನಮ್ಮಲ್ಲಿ ನಾಸ್ತಿಕತೆ ಹುಟ್ಟಿಕೊಂಡಿರುವುದು. ಜೀವ ಅನಾದಿನಿತ್ಯ, ಅದನ್ನು ಭಗವಂತ  ಸೃಷ್ಟಿ ಮಾಡುವುದಿಲ್ಲ. ಪ್ರತಿಯೊಂದು ಜೀವಸ್ವರೂಪದ ಗುಣಧರ್ಮ ಸ್ವಭಾವಕ್ಕನುಗುಣವಾಗಿ, ಅರ್ಹತೆಗನುಗುಣವಾಗಿ, ಅವರವರನ್ನು ಸೃಷ್ಟಿ ಮಾಡುವುದು ಭಗವಂತನ ಸ್ವಭಾವ. ಆದ್ದರಿಂದ ಇಲ್ಲಿ ತಾರತಮ್ಯ ಅನ್ನುವ ಪ್ರಶ್ನೆಯೇ ಇಲ್ಲ. ಭಗವಂತನ ಸೃಷ್ಟಿಯ ಹಿಂದಿರುವ  ಆತನ  ಸ್ವಾತಂತ್ರ್ಯ; ನಿಷ್ಪಕ್ಷಪಾತ; ಯಾವುದೇ ಪ್ರಭಾವಕ್ಕೊಳಗಾಗದಿರುವುದು; ತ್ರಿಗುಣಾತೀತತ್ವ-ಇವು ಭಗವಂತನ ಮೂಲಭೂತ ಸ್ವಭಾವ. ಇದರ ಅರಿವೇ ‘ಅಧ್ಯಾತ್ಮ’. ಭಗವಂತನ ಗುಣಧರ್ಮವನ್ನು ತಿಳಿದಾಗ ಅವನ ಸೃಷ್ಟಿ ಏನು ಎಂದು ಅರ್ಥವಾಗುತ್ತದೆ. ಅದೇ ಕರ್ಮ. ಭಗವಂತನ ಕ್ರಿಯೆಯಲ್ಲಿ ಜ್ಞಾನ-ಇಚ್ಚೆ-ಕೃತಿ ಎನ್ನುವ ಮೂರು ಹಂತವಿಲ್ಲ. ಆತ ಇಚ್ಚಿಸುವುದೇ ಕ್ರಿಯೆ. ಇದನ್ನು ತಿಳಿಯುವುದು ‘ಕರ್ಮದ ಅರಿವು’. ಹೀಗೆ ಭಗವಂತನ ಸ್ವರೂಪದ, ಗುಣಧರ್ಮದ ಮತ್ತು ಕ್ರಿಯೆಯ  ಅರಿವೇ –ಬ್ರಹ್ಮ ಅಧ್ಯಾತ್ಮ ಮತ್ತು ಕರ್ಮ.  


ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ ।

ಅಧಿಯಜ್ಞೋSಹಮೇವಾತ್ರ ದೇಹೇ ದೇಹಭೃತಾಂ ವರ ॥೪॥

ಅಧಿಭೂತಮ್  ಕ್ಷರಃ  ಭಾವಃ ಪುರುಷಃ ಚ ಅಧಿದೈವತಮ್ ।

ಅಧಿಯಜ್ಞಃ ಅಹಮ್ ಏವ ಅತ್ರ ದೇಹೇ ದೇಹಭೃತಾಮ್  ವರ- ಹುಟ್ಟಿ ಸಾಯುವ ಸಮಷ್ಟಿ ಬ್ರಹ್ಮಾಂಡ [ದೇಹೆಂದ್ರಿಯಗಳಿಂದ ಕೂಡಿದ ಜೀವರಾಶಿ] ‘ಅಧಿಭೂತ’, ಶರೀರದೊಳಗಿದ್ದು ನಿಯಮಿಸುವ ತತ್ತ್ವಾಭಿಮಾನಿ ದೇವತೆಗಳು[ಜಗತ್ತಿನ ಹಿರಿಯ ಚಾಲಕಶಕ್ತಿಯಾಗಿ ‘ಪುರುಷ’ ಎನಿಸಿದ ಶ್ರೀತತ್ವ ] ‘ಅಧಿದೈವ’. ಹಿರಿಯ ಜೀವವೇ, ಈ ದೇಹದಲ್ಲಿ ನಾನೇ ‘ಅಧಿಯಜ್ಞ’.

ಹಿಂದಿನ ಶ್ಲೋಕದಲ್ಲಿ ನೋಡಿದಂತೆ ಅಧ್ಯಾತ್ಮ ಎಂದರೆ ಶರೀರದಲ್ಲಿ ಬಂಧಿಯಾಗಿರುವ ಜೀವ. ಈ ಜೀವದ ಭೋಗಕ್ಕಾಗಿ ಸೃಷ್ಟಿಯಾಗಿರತಕ್ಕಂತಹ ಪಂಚಭೂತಾತ್ಮಕವಾದ ಈ ಪ್ರಪಂಚದ ಸಮಸ್ತ ವಿಚಾರಗಳೂ ಅಧಿಭೂತದಲ್ಲಿ ಸೇರಿದೆ. ಪಂಚಭೂತದ ಮೂಲದ್ರವ್ಯ ಮತ್ತು ಪಂಚಭೂತದಿಂದ ನಿರ್ಮಾಣಗೊಂಡ ಪ್ರಪಂಚ ಅಧಿಭೂತ. ಜಡ ಪ್ರಕೃತಿಯಿಂದ ಹಿಡಿದು ಸ್ಥೂಲ ವಿಶ್ವದ ತನಕ ತ್ರಿಗುಣಾತ್ಮಕವಾದ  ಎಲ್ಲವೂ ‘ಅಧಿಭೂತ’.

ಕೃಷ್ಣ ಹೇಳುತ್ತಾನೆ “ಪುರುಷಶ್ಚಾಧಿದೈವತಮ್” ಎಂದು. ಈ ಶರೀರದೊಳಗಿರುವ ಜೀವಕ್ಕೆ ನೆರವಾಗುವುದಕ್ಕೋಸ್ಕರ ದೇಹದಲ್ಲಿ ಬೇರೆ ಬೇರೆ ಇಂದ್ರಿಯಗಳನ್ನು ನಿಯಂತ್ರಿಸತಕ್ಕಂತಹ ದೇವತೆಗಳಿದ್ದಾರೆ. ಇದು ಅಧಿದೈವತಾ ವಿಜ್ಞಾನ. ಇದು ಒಂದು ಮುಖ. ಇನ್ನೊಂದು ರೀತಿಯಲ್ಲಿ ನೋಡಿದರೆ ಇಲ್ಲಿ ಕೃಷ್ಣ ‘ಪುರುಷ’ ಎಂದು ಸಂಬೋಧಿಸಿದ್ದಾನೆ.  ನಮ್ಮ ದೇಹದಲ್ಲಿ ನಾಲ್ಕು "ಪುರುಷರಿದ್ದಾರೆ'. ಶರೀರಪುರುಷ, ಛಂದಃಪುರುಷ, ವೇದಪುರುಷ ಮತ್ತು ಸಂವತ್ಸರಪುರುಷ. ಈ ದೇಹ ನಿಂತು ನಡೆದಾಡಬೇಕಾದರೆ ದೇಹದಲ್ಲಿ ಶರೀರಪುರುಷನಾದ ಶಿವಶಕ್ತಿ ಬೇಕು. ಮನಸ್ಸು ಯೋಚಿಸಿದ್ದನ್ನು ಸ್ಪಂದನ, ಪರಾಶರ, ಪಶ್ಯಂತಿ, ಮದ್ಯಮ ಮತ್ತು ವೈಖರಿ ರೂಪದಲ್ಲಿ ವಾಕ್ ಶಕ್ತಿ ಯಾಗಿ ಹೊರಹೊಮ್ಮಲು ಛಂದಃಪುರುಷನಾದ ಶೇಷ ಕಾರಣ. ಮನೋಮಯ ಕೋಶದಲ್ಲಿದ್ದು, ವೇದಾಂತದ ಚಿಂತನೆ, ಮನಸ್ಸಿನಲ್ಲಿ ಮನನ ಶಕ್ತಿ ಕೊಡತಕ್ಕವ ವೇದಪುರುಷ ಗರುಡ. ವೇದಪುರುಷ ನಮಗೆ  ಅಪೂರ್ವವಾದ ವೈದಿಕ ವಾಙ್ಮಯ ಶಕ್ತಿ ಪ್ರಾಪ್ತವಾಗುವಂತೆ ಮಾಡುತ್ತಾನೆ. ಜೀವದ ಯೋಗ್ಯತೆಯನ್ನು, ಇಡೀ ಜೀವದ ಸ್ವರೂಪವನ್ನು ನಿಯಂತ್ರಣ ಮಾಡುವವ ಜೀವಕಲಾಭಿಮಾನಿ ಚತುರ್ಮುಖಬ್ರಹ್ಮ, ಈತ ಸಂವತ್ಸರಪುರುಷ.  [ ‘ಸಂ-ವತ್ಸ-ರ’- ಅಂದರೆ ಚೆನ್ನಾಗಿ ಮಕ್ಕಳನ್ನು ಸಾಕುವ ಪಿತಾಮಹ]. ಬ್ರಹ್ಮ-ವಾಯು ಜೀವನನ್ನು ಮೇಲಕ್ಕೆತ್ತಿ ಸಾಧನೆಯ ಹಾದಿಯಲ್ಲಿ ತೊಡಗಿಸುತ್ತಾರೆ. ಹೀಗೆ ಈ ಪಂಚದೇವತೆಗಳು ಭಗವಂತನ  ನಂತರ ದೇಹದಲ್ಲಿರುವ ಪ್ರಮುಖ ಅಧಿದೇವತೆಗಳು. ಅವರಿಂದ ನಿಯಂತ್ರಿಸಲ್ಪಟ್ಟ ಸಮಸ್ತ ಬ್ರಹ್ಮಾಂಡ ಅಧಿಭೂತ.

ಕೃಷ್ಣ ಮುಂದುವರಿದು ಹೇಳುತ್ತಾನೆ: ಪ್ರತಿಯೊಂದು ದೇಹದ ಒಳಗೂ ನಾನು ಒಂದೊಂದು ರೂಪದಲ್ಲಿದ್ದೇನೆ ಎಂದು. ಭಗವಂತನ ಈ ರೂಪವೇ ‘ಅಧಿಯಜ್ಞ’ ರೂಪ. ಯಜ್ಞವನ್ನು ಅಧಿಕರಿಸಿ, ಅದನ್ನು ನಿಯಂತ್ರಿಸುವ ಯಜ್ಞ ಭೋಕ್ತಾರ, ಯಜ್ಞವನ್ನು ಮಾಡುವವ, ಮಾಡಿಸುವವ, ಮತ್ತು ಫಲಪ್ರದನಾದ ಭಗವಂತ ಅಧಿಯಜ್ಞ. ನಾವು ಭಗವಂತನ ಪೂಜಾರೂಪ ಎಂದು ತಿಳಿದು ಮಾಡುವ ಎಲ್ಲಾ ಕರ್ಮವೂ ಯಜ್ಞ. ‘ಯಜ ದೇವಾ ಪೂಜಾಯಾಂ’ – ನಮ್ಮ ಬದುಕಿನ ಪ್ರತಿಯೊಂದು ಕ್ರಿಯೆಯೂ ಭಗವಂತನ ಆರಾಧನೆ. ನಮ್ಮ ದೇಹದೊಳಗಿದ್ದು, ಸಕಲ ತತ್ತ್ವಾಭಿಮಾನಿ ದೇವತೆಗಳ ಮುಖೇನ ಕ್ರಿಯೆ ಮಾಡಿಸುವ ಭಗವಂತ ‘ಅಧಿಯಜ್ಞ’.

ಎರಡನೇ ಆಯಾಮದಲ್ಲಿ ಈ ಶ್ಲೋಕವನ್ನು ನೋಡಿದರೆ [ಹಿಂದಿನ ಶ್ಲೋಕದಲ್ಲಿ ಭಗವಂತ-ಭಗವಂತನ ಸ್ವಭಾವ ಮತ್ತು ಅವನ ಕ್ರಿಯೆ ಎನ್ನುವ ಅರ್ಥ ವಿಶ್ಲೇಷಣೆಯಂತೆ] ಅಧಿಭೂತ ಎಂದರೆ ಬ್ರಹ್ಮಾದಿಸಮಸ್ತ ದೇವತೆಗಳು. ಚೇತನಾಚೇತನಾತ್ಮಕ ಪ್ರಪಂಚ, ಜೀವರು, ಶರೀರ, ಬ್ರಹ್ಮ ಮತ್ತು ಬ್ರಹ್ಮಾಂಡ ಎಲ್ಲವೂ ಅಧಿಭೂತ. ಎಲ್ಲಾ ದೇವತೆಗಳಿಗೂ ಮಿಗಿಲಾದ ಭಗವಂತನ ಅನಂತರ ಬ್ರಹ್ಮಾದಿ ದೇವತೆಗಳಿಗೂ ತಾಯಿಯಾದ ‘ಶಕ್ತಿ’ ಶ್ರೀತತ್ವ ಅಧಿದೈವ. ಎಲ್ಲೆಡೆ ತುಂಬಿದ್ದು ಎಲ್ಲಾ ಜೀವರ ಒಳಗೆ ಅಂತರ್ಯಾಮಿಯಾಗಿ ನಿಂತು ನಿಯಮಿಸುವ ಭಗವಂತ ಅಧಿಯಜ್ಞ.


ಅಂತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಳೇಬರಮ್ ।

ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ॥೫॥

ಅಂತಕಾಲೇ ಚ ಮಾಮ್ ಏವ ಸ್ಮರನ್ ಮುಕ್ತ್ವಾ ಕಳೇಬರಮ್ ।

ಯಃ ಪ್ರಯಾತಿ ಸಃ ಮತ್ ಭಾವಮ್ ಯಾತಿ ನ ಅಸ್ತಿ ಅತ್ರ ಸಂಶಯಃ –ಕೊನೆಯ ಕಾಲದಲ್ಲೂ ನನ್ನನ್ನೇ ನೆನೆಯುತ್ತಾ ದೇಹವನ್ನು ತೊರೆದು ತೆರಳುವವನು ನನ್ನಂತಯೇ ದುಃಖವಿರದ ಸುಖದ ನಿಜಸ್ಥಿತಿಯನ್ನು [ನನ್ನಲ್ಲೇ ಇರವನ್ನು] ಪಡೆಯುತ್ತಾನೆ.

ಅರ್ಜುನನ ಕೊನೆಯ ಪ್ರಶ್ನೆಗೆ ಕೃಷ್ಣ ಉತ್ತರಿಸುತ್ತಾ ಹೇಳುತ್ತಾನೆ: “ಸಾಯುವ ಕ್ಷಣದಲ್ಲೂ ಕೂಡಾ ನನ್ನನ್ನೇ ನೆನೆಯುತ್ತಾ ದೇಹವನ್ನು ತೊರೆಯುವ ಜೀವರು ನನ್ನ ಹಾಗೇ ಜ್ಞಾನಾನಂದ ಸ್ವರೂಪರಾಗಿ ನನ್ನಲ್ಲಿ ಬಂದು ನೆಲೆಸುತ್ತಾರೆ. ಅವರು ಮುಂದೆಂದೂ ಈ ಅಜ್ಞಾನ ಮತ್ತು ದುಃಖಮಯವಾದ ಸಂಸಾರದ ತೊಳಲಾಟಕ್ಕೆ ಒಳಗಾಗುವುದಿಲ್ಲ. ಈ ಬಗ್ಗೆ ಎಂದೂ ಸಂಶಯ ಪಡಬೇಡ”  ಎಂದು. ಇಲ್ಲಿ “ಅಂತಕಾಲೇ” ಎಂದರೆ ಮುಪ್ಪಿನ ಕಾಲದಲ್ಲಿ ಎನ್ನುವ ಅರ್ಥವಲ್ಲ, ಬದಲಿಗೆ ದೇಹವನ್ನು ಜೀವ ಬಿಡುವ ಕೊನೆಯ ಕ್ಷಣ  ಎಂದರ್ಥ. ದೇಹವನ್ನು ಬಿಡುತ್ತಾ ಭಗವಂತನನ್ನು ಸ್ಮರಿಸುತ್ತಾ ಹೊರಗೆ ಹೋಗುವ ಚೇತನಕ್ಕೆ ಅಗಾಧವಾದ ಬೆಳಕು ಕಾಣಿಸುತ್ತದೆ ಮತ್ತು ಆ ಚೇತನ  ಮೋಕ್ಷವನ್ನು ಸೇರುತ್ತದೆ. [ಜೀವ ಶರೀರವನ್ನು ಬಿಡುವ ಮತ್ತು ದೇಹದಿಂದ ಹೊರ ಬಂದ ಮೇಲೆ ಜೀವದ ಪ್ರಯಾಣದ ಕುರಿತು ಸತ್ತು ಬದುಕಿದ ಅನೇಕ ಜನರ ಅನುಭವವನ್ನು ಸಂಗ್ರಹಿಸಿ Raymond Moody ಬರೆದ “Life after Life” ಎನ್ನುವ ಪುಸ್ತಕ ಬೆಳಕು ಚೆಲ್ಲುತ್ತದೆ]. 


ಯಂ ಯಂ ವಾSಪಿ ಸ್ಮರನ್ ಭಾವಂ ತ್ಯಜತ್ಯಂತೇ ಕಳೇಬರಮ್ ।

ತನ್ತಮೇವೈತಿ ಕೌಂತೇಯ ಸದಾ ತದ್ ಭಾವಭಾವಿತಃ ॥೬॥

ಯಮ್ ಯಮ್ ವಾ ಅಪಿ ಸ್ಮರನ್  ಭಾವಮ್ ತ್ಯಜತಿ ಅಂತೇ ಕಳೇಬರಮ್ ।

ತಮ್ ತಮ್ ಏವ ಏತಿ ಕೌಂತೇಯ ಸದಾ ತತ್  ಭಾವ ಭಾವಿತಃ -- ಕೌಂತೇಯಾ, ಕೊನೆಯಲ್ಲಿ ಯಾವ ಯಾವ ವಿಷಯವನ್ನು ನೆನೆಯುತ್ತಾ ದೇಹವನ್ನು ತೊರೆಯುತ್ತಾನೇ ಅದರಲ್ಲೇ ಅನುಗಾಲ ಬೇರೂರಿದ ಸಂಸ್ಕಾರದಿಂದ ಅದನ್ನೆ ಪಡೆಯುತ್ತಾನೆ.

“ಜೀವನ ಯಾತ್ರೆಯ  ಅಂತಿಮ ಕ್ಷಣದಲ್ಲಿ ಭಗವಂತನನ್ನು ನೆನೆದವರು ‘ನನ್ನನ್ನು’ ಸೇರುತ್ತಾರೆ” ಎಂದು ಕೃಷ್ಣ  ಏಕೆ ಹೇಳಿದ ಎನ್ನುವುದಕ್ಕೆ ಈ ಶ್ಲೋಕದಲ್ಲಿ ಉತ್ತರವಿದೆ. ಇಲ್ಲಿ ಕೃಷ್ಣ ಮರಣ ಕಾಲದ ಒಂದು ಅದ್ಭುತ ಮನಃಶಾಸ್ತ್ರವನ್ನು ನಮ್ಮ ಮುಂದೆ ತೆರೆದಿಡುತ್ತಾನೆ. ಸಾಯುವ ಕ್ಷಣದಲ್ಲಿ ಭಗವಂತನ ಧ್ಯಾನ ಮಾಡಲು ಒಂದು ಉದ್ದೇಶವಿದೆ ಎನ್ನುತ್ತಾನೆ ಕೃಷ್ಣ. ನಾವು ದೇಹ ತ್ಯಾಗ ಮಾಡುವಾಗ ಏನನ್ನು ಸ್ಮರಣೆ ಮಾಡುತ್ತೇವೋ ಮುಂದಿನ ಜನ್ಮದಲ್ಲಿ ಅದನ್ನೇ ಪಡೆಯುತ್ತೇವೆ. ಆದ್ದರಿಂದ ಆ ಕಾಲದಲ್ಲಿ ಭಗವಂತನನ್ನು ಸ್ಮರಿಸಿದರೆ ಭಗವಂತನನ್ನು ಸೇರುತ್ತೇವೆ. ಸಾವಿನ ಕೊನೇ ಕ್ಷಣದಲ್ಲಿ ಬರುವ ಚಿಂತನೆ ಮುಂದಿನ ಜನ್ಮದ ನಿರ್ಣಾಯಕ ಸಂಗತಿ. ಹಾಗಾಗಿ ಮುಂದಿನ ಜನ್ಮದಲ್ಲಿ ಆತ ಏನಾಗಬೇಕೋ ಅದೇ ನೆನಪಾಗುತ್ತದೆ! ಭಗವಂತನನ್ನು ಸೇರುವ ಯೋಗ ಇಲ್ಲದವರಿಗೆ ಭಗವಂತನ ನೆನಪು ಬರುವುದೇ ಇಲ್ಲ! ಇದಕ್ಕೆ ಶಾಸ್ತ್ರದಲ್ಲಿ ಅನೇಕ ದೃಷ್ಟಾಂತಗಳಿವೆ. ಈ ದೇಶಕ್ಕೆ ‘ಭಾರತ’ ಎಂದು ಹೆಸರು ಬರಲು ಕಾರಣನಾದ ವೃಷಭದೇವನ ಮಗ ಭರತನ ಕಥೆ ಈ ವಿಚಾರವನ್ನು ಸ್ಪಷ್ಟವಾಗಿ ಹೇಳುವ ಕಥೆ. (ಈ ಭರತ ದುಃಷಂತನ ಮಗ ಭರತನಲ್ಲ, ದುಃಷಂತನ ಮಗ ಭರತ  ‘ಭರತವಂಶ’ ದ ಮೂಲ ಪುರುಷ). ಪರಮ ಧಾರ್ಮಿಕನಾದ ಭರತ ತನ್ನ ಮಗ ಪ್ರಾಯ ಪ್ರಬುದ್ಧನಾದ ಮೇಲೆ ತನ್ನೆಲ್ಲಾ ಅಧಿಕಾರವನ್ನು ಅವನಿಗೊಪ್ಪಿಸಿ, ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಿ ಕಾಡಿನಲ್ಲಿ ಋಷಿಗಳ ಜೊತೆಗೆ ಸದಾ ಭಗವದ್ ನಿಷ್ಠನಾಗಿ ಬದುಕುತ್ತಿದ್ದ. ಒಂದು ದಿನ ಆತನಿಗೆ ಕಾಡಿನಲ್ಲಿ ತಾಯಿ ಸತ್ತ ಒಂದು ಜಿಂಕೆ ಮರಿ ಸಿಕ್ಕಿತು. ಭರತ ಆ ಮರಿಯನ್ನು ತಂದು ಪಾಲನೆ ಪೋಷಣೆ ಮಾಡತೊಡಗಿದ. ಇದರಿಂದ ಆತ ಸದಾ ಆ ಜಿಂಕೆಯನ್ನೇ ಪೋಷಣೆ ಮಾಡುವುದರಲ್ಲಿ ತನ್ನ ಸಮಯವನ್ನು ಕಳೆಯಲಾರಂಭಿಸಿದ. ಇದರಿಂದ ಆತನ ಸಾಧನೆಗೆ ಚ್ಯುತಿ ಬಂತು. ಆ ಜಿಂಕೆಯ ಮರಿ ಬೆಳೆದು ದೊಡ್ಡದಾಗುವ ಮೊದಲೇ ಆತ ಪ್ರಾಣತ್ಯಾಗ ಮಾಡುವ ಪ್ರಸಂಗ ಬಂತು. ಆ ಕಾಲದಲ್ಲಿ ಭರತನಿಗೆ ಭಗವಂತನ ಚಿಂತನೆಯ ಬದಲು ಕಾಡಿದ್ದು ಆ ಜಿಂಕೆ ಮರಿಯ ಚಿಂತೆ!  ಇದರಿಂದ ಆತ ತನ್ನ ಮುಂದಿನ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದ. ಆದ್ದರಿಂದ ಎಂತಹ ಅಪರೋಕ್ಷ ಜ್ಞಾನಿಯನ್ನೂ ಕೂಡಾ ಪ್ರರಾಬ್ಧ ಬಿಡದು ಎನ್ನುವುದಕ್ಕೆ  ಇದು ಶ್ರೇಷ್ಠ ಉದಾಹರಣೆ. ಈ ಕಥೆ ಕೃಷ್ಣ ಇಲ್ಲಿ ಹೇಳುವ ವಿಚಾರಕ್ಕೆ ಜ್ವಲಂತ ದೃಷ್ಟಾಂತ.

ನಾವು ಜೀವನ ಪರ್ಯಂತ ಸಾಧನೆ ಮಾಡಿದರೂ ಕೂಡಾ, ಸಾಯುವ ಕ್ಷಣದಲ್ಲಿ ಭಗವಂತನ ನೆನಪು ಬಾರದೇ ಹೋಗಬಹುದು. ಇದಕ್ಕಾಗಿ ಜೀವನ ಪರ್ಯಂತ ಅಥವಾ ಅನೇಕ ಜನ್ಮಗಳ ಸಾಧನೆ ಅಗತ್ಯ. ಕೃಷ್ಣ ಹೇಳುತ್ತಾನೆ “ಸದಾ ತದ್ ಭಾವಭಾವಿತಃ” ಎಂದು. ಇಲ್ಲಿ ಭಾವ ಎಂದರೆ ತನ್ಮಯತೆ. ಯಾವಾಗಲೂ ಭಗವಂತನಲ್ಲೇ ತನ್ಮಯವಾದ ಮನಸ್ಸಿನಿಂದ ನಿರಂತರ ಭಗವಂತನ ಚಿಂತನೆ ಮಾಡಬೇಕು. ಅಂತ್ಯ ಕಾಲದಲ್ಲಿ ಭಗವಂತನ ನೆನಪು ಬರಬೇಕಾದರೆ, ನಿರಂತರ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸುವ ಸಂಸ್ಕಾರ ಬೇಕು. ಇದನ್ನು ಬಿಟ್ಟು ಮರಣ ಕಾಲದಲ್ಲಿ ಭಗವಂತನನ್ನು ನೆನೆದರಾಯ್ತು ಎಂದು ಜೀವನವನ್ನು ವ್ಯರ್ಥವಾಗಿ ಕಳೆದರೆ ಮರಣ ಕಾಲದಲ್ಲಿ ಭಗವಂತನ ನೆನಪು ಬರುವುದೇ ಇಲ್ಲ!

ಭೀಷ್ಮಾಚಾರ್ಯರಿಗೆ ಕೊನೆಗಾಲದಲ್ಲಿ ಎಷ್ಟೇ ಭಗವಂತನ ಬಗ್ಗೆ ಯೋಚಿಸಿದರೂ ಕೂಡಾ ಕಂಡಿದ್ದು ತನ್ನದೇ ಬಾಣದಿಂದ ಗಾಯಗೊಂಡು ನೆತ್ತರು ಸುರಿಸುತ್ತಿರುವ ಕೃಷ್ಣ! ಆನಂದಸ್ವರೂಪ ಭಗವಂತನ ನಿಜ ದರ್ಶನ ಅವರಿಗಾಗಲಿಲ್ಲ. ಇಲ್ಲಿ ನಾವು ಅರಿಯಬೇಕಾದ ವಿಚಾರವೇನೆಂದರೆ-ನಾವು ಯಾವುದೇ ಕೆಟ್ಟ ಸಂಗತಿಯನ್ನು ಗಾಢವಾಗಿ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಹಚ್ಚಿಕೊಂಡರೆ ಕೊನೆಗಾಲದಲ್ಲಿ ಅದೇ ಕಾಣುತ್ತದೆ! ಇಡೀ ಜೀವನದಲ್ಲಿ ನಾವು ಯಾವತ್ತೂ ಕೆಟ್ಟದ್ದನ್ನು ಯೋಚಿಸಬಾರದು. ಯಾರನ್ನೂ ಕೆಟ್ಟವರೆಂದು ದ್ವೇಷಿಸಬಾರದು. ಒಬ್ಬರನ್ನು ದ್ವೇಷಿಸುವುದು ತುಂಬಾ ಕೆಟ್ಟದ್ದು. ಅದು ನಮ್ಮ ಇಡೀ ಬದುಕನ್ನೇ ಹಾಳುಮಾಡುತ್ತದೆ. ದುಷ್ಟರಿಂದ ದೂರವಿರು ಆದರೆ ದ್ವೇಷಿಸಬೇಡ. ಒಬ್ಬರನ್ನು ದ್ವೇಷಿಸುವುದು, ನಿಂದಿಸುವುದು, ಅದನ್ನು ಗಾಢವಾಗಿ ಹಚ್ಚಿಕೊಳ್ಳುವುದರಿಂದ ಅವರಿಗೆ ಏನೂ ಬಾಧಕವಿಲ್ಲ. ಆದರೆ ನಮ್ಮ ಬದುಕನ್ನು ನಾವು ಹಾಳು ಮಾಡಿಕೊಳ್ಳುತ್ತೇವೆ. ನಾವು ದ್ವೇಷಿಸುವ ವಸ್ತು ನಮ್ಮ ತಲೆಯಲ್ಲಿ ಗಾಢವಾಗಿ ನೆಲೆ ನಿಲ್ಲುತ್ತದೆ ಮತ್ತು ನಮ್ಮನ್ನು ಅಧಃಪಾತಕ್ಕೆ ಕೊಂಡೊಯ್ಯುತ್ತದೆ. ಅದು ಸಾವಿನ ಕಾಲದಲ್ಲಿ ಕೊನೆಗೆ ತಲೆಎತ್ತಿ ಹೆಡೆ ಅರಳಿಸುತ್ತದೆ! ಆದ್ದರಿಂದ ನಾವು ಈ ವಿಚಾರದಲ್ಲಿ ಎಚ್ಚರವಾಗಿರಬೇಕು. ಯಾರನ್ನಾದರು ಟೀಕೆ ಮಾಡಲು ನಾವು ಅರ್ಹರಲ್ಲ. ಏಕೆಂದರೆ ನಮಗೆ ಅಂತರಂಗ ದರ್ಶನವಿಲ್ಲ. ನಾವು ಮಾತನಾಡುವುದು ಕೇವಲ ಹೊರ ನೋಟದಿಂದ. ಒಳಗೆ ‘ಯಾರು ಏನು’ ಎಂದು ನೋಡುವ ಶಕ್ತಿ ನಮಗಿಲ್ಲ. ಆದ್ದರಿಂದ ಇನ್ನೊಬ್ಬರ ಚಿಂತನೆ ಬಿಟ್ಟು ಸದಾ ಭಗವಂತನ ಚಿಂತನೆ ಮಾಡು ಎನ್ನುತ್ತಾನೆ ಕೃಷ್ಣ. ನಾವು ಚಿಂತಿಸಬೇಕಾದ ಏಕಮಾತ್ರ ವಸ್ತು ಕೇವಲ ಭಗವಂತ.


ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ ।

ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಮ್ ॥೭॥

ತಸ್ಮಾತ್ ಸರ್ವೇಷು ಕಾಲೇಷು ಮಾಮ್ ಅನುಸ್ಮರ ಯುಧ್ಯ ಚ ।

ಮಯಿ ಅರ್ಪಿತ ಮನಃ ಬುದ್ಧಿಃ ಮಾಮ್ ಏವ ಏಷ್ಯಸಿ ಅಸಂಶಯಃ  –ಆದ್ದರಿಂದ ಎಲ್ಲಾ ಕಾಲದಲ್ಲೂ ನನ್ನನ್ನು ನೆನೆ. ನೆನೆಯುತ್ತಾ ಹೋರಾಡು. ನಿನ್ನೆಲ್ಲಾ  ಬಯಕೆ ನಿರ್ಧಾರಗಳು ನನ್ನ ಕುರಿತಾದಾಗ ನಿಶ್ಚಯವಾಗಿ ನನ್ನನ್ನೇ ಸೇರುವೆ.

ದೇವರನ್ನು ಸ್ಮರಣೆ ಮಾಡುವ ಕಾಲ ಅಂತ ಒಂದಿಲ್ಲ. ಕೃಷ್ಣ ಹೇಳುತ್ತಾನೆ “ಸರ್ವ ಕಾಲದಲ್ಲೂ ನನ್ನನ್ನು ಸ್ಮರಣೆ ಮಾಡು” ಎಂದು. ಪ್ರತಿಯೊಂದು ಕ್ರಿಯೆ ಮಾಡುವಾಗ ಆ ಕ್ರಿಯೆ ಮಾಡಿಸುತ್ತಿರುವವ ಭಗವಂತ ಎನ್ನುವ ಎಚ್ಚರವಿರಲಿ. ಯುದ್ಧ ಮಾಡುವಾಗಲೂ ಸಹ “ಆ ಭಗವಂತ ನನ್ನೊಳಗೆ ಕೂತು ಈ ಕಾರ್ಯವನ್ನು ಮಾಡಿಸುತ್ತಿದ್ದಾನೆ, ಇದು ಅವನ ಸಂಕಲ್ಪ” ಎನ್ನುವ ಭಾವನೆ ಯುದ್ಧವನ್ನೂ ದೇವರ ಪೂಜೆಯನ್ನಾಗಿ ಪರಿವರ್ತಿಸುತ್ತದೆ! ನಮ್ಮಿಂದ ತಿಳಿದೋ ತಿಳಿಯದೆಯೋ ಆಗುವ ತಪ್ಪಿನಲ್ಲಿಯೂ ಕೂಡಾ ಭಗವಂತನ ಅರಿವು, ಶರಣಾಗತಿ ನಮಗೆ ಪಾಪದ ಲೇಪ ಬರದಂತೆ ತಡೆಯುತ್ತದೆ. ಭಗವಂತನ ಸ್ಮರಣೆಗೆ ಯಾವುದೇ ಕಾಲದ ನಿರ್ಬಂಧವಿಲ್ಲ. ಯಾವಾಗ ಭಗವಂತನ ಸ್ಮರಣೆ ಬಂತೋ ಅದೇ ಪುಣ್ಯಕಾಲ. ಆತನ ಸ್ಮರಣೆ ಮನಸ್ಸಿನಲ್ಲಿರುವುದೇ ಮಡಿ. ಆದ್ದರಿಂದ ಭಗವಂತನ ಪೂಜಾರೂಪವಾಗಿ ಅಹಂಕಾರವಿಲ್ಲದೆ ಆತನನ್ನು ನೆನೆದು ಕರ್ತವ್ಯ ಮಾಡಬೇಕು.

ಕ್ರಿಯೆಯಲ್ಲಿ ಇರತಕ್ಕ ಭಾವ ಧರ್ಮ-ಅಧರ್ಮವನ್ನು ನಿರ್ಣಯ ಮಾಡುತ್ತದೆ. ಉದಾಹರಣೆಗೆ ಧರ್ಮವ್ಯಾದ. ಈತ ಮಾಂಸ ಮಾರಿಯೂ ಪರಮ ಧಾರ್ಮಿಕನಾಗಿ ಬದುಕಿದ. ಏಕೆಂದರೆ ಆತನ ಅನುಸಂಧಾನ ಶುದ್ಧವಾಗಿತ್ತು. “ದೇವರು ನನ್ನನ್ನು ಈ ಕೆಲಸಕ್ಕೆ ಹಚ್ಚಿದ್ದಾನೆ, ನನ್ನ ಈ ಜನ್ಮದ ಕರ್ತವ್ಯ ಮಾಂಸ ಮಾರಿ ಬದುಕುವುದು. ಅದನ್ನು ಪ್ರಾಮಾಣಿಕವಾಗಿ ಮಾಡಿ ಜೀವನ ಸಾಗಿಸಬೇಕು” ಎನ್ನುವ ಅನುಸಂಧಾನ ಆತನಲ್ಲಿತ್ತು. ಆತ ತನ್ನ ವ್ಯಾಪಾರವನ್ನು ಕೇವಲ ತನ್ನ ಹಾಗೂ ತನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಮಾಡುತ್ತಿದ್ದ. ಈ ರೀತಿ ಪ್ರಾಮಾಣಿಕನಾಗಿ ಬದುಕಿ ಆತ ಋಷಿಗಳನ್ನೂ ಮೀರಿಸುವಷ್ಟು ಎತ್ತರಕ್ಕೇರಿದ. ಆದ್ದರಿಂದ ಭಾವ ಶುದ್ಧಿ ಅತ್ಯಂತ ಶ್ರೇಷ್ಠ. ಹಾಗಾಗಿ ನಾವು ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ಭಗವಂತನಲ್ಲಿ ನೆಲೆ ನಿಲ್ಲಿಸಬೇಕು. “ಆಗ ನಿಸ್ಸಂಶಯವಾಗಿ ನನ್ನನ್ನು ಸೇರುವೆ” ಎನ್ನುತ್ತಾನೆ ಕೃಷ್ಣ.


ಅಭ್ಯಾಸಯೋಗಯುಕ್ತೇನ ಚೇತಸಾSನನ್ಯಗಾಮಿನಾ ।

ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್ ॥೮॥

ಅಭ್ಯಾಸ ಯೋಗ ಯುಕ್ತೇನ ಚೇತಸಾ ನ ಅನ್ಯ ಗಾಮಿನಾ ।

ಪರಮಮ್  ಪುರುಷಮ್  ದಿವ್ಯಮ್  ಯಾತಿ ಪಾರ್ಥ ಅನುಚಿಂತಯನ್ –ಪಾರ್ಥ, ಸೃಷ್ಟಿಯೊಂದು ಲೀಲೆಯಾದ- ಪರಮ ಪುರುಷನನ್ನು ಅಭ್ಯಾಸದ ಉಪಾಯದಿಂದ ಹದಗೊಂಡು, ಬೇರಾವುದೂ ಬೇಡದ ಒಳಬಗೆಯಿಂದ, ಭಕ್ತಿಯಿಟ್ಟು ನೆನೆದಾಗ ಅವನನ್ನೇನ್ನೆ ಸೇರುತ್ತಾನೆ.

ನಾವು ನಮ್ಮ ಮನಸ್ಸನ್ನು ನಿರಂತರ ಭಗವಂತನಲ್ಲಿ ನೆಲೆ ನಿಲ್ಲುವಂತೆ ಮಾಡಲು ‘ನಿರಂತರ ಮನನ’ ಅತ್ಯಂತ ಮುಖ್ಯ ಅಂಶ.  ಸಾಮಾನ್ಯವಾಗಿ ನಮ್ಮ ಚಿತ್ತ ಬೇಡದ ವಿಷಯಗಳತ್ತ ಹರಿಯುತ್ತದೆ. ಆದರೆ ನಾವು ಅದನ್ನು  ಕೇವಲ ಭಗವಂತನನ್ನು ಚಿಂತಿಸುವಂತೆ  ತರಬೇತಿಗೊಳಿಸಬೇಕು. ಚಿತ್ತಕ್ಕೆ ಭಗವಂತನನ್ನು ಅನನ್ಯಗಾಮಿಯಾಗಿ ಚಿಂತನೆ ಮಾಡುವಂತೆ ನಿರಂತರ ಅಭ್ಯಾಸ ಮಾಡಿಸಬೇಕು. ನಮ್ಮ ಮನಸ್ಸು, ಬುದ್ಧಿ, ಚಿತ್ತ ಎಲ್ಲವೂ ನಾವು ಅಭ್ಯಾಸ ಮಾಡಿಸಿದಂತೆ ಕೆಲಸ ಮಾಡುತ್ತವೆ. ಅವುಗಳಿಗೆ ನಾವು ಭಗವಂತನ ಚಿಂತನೆಯ ಅಭ್ಯಾಸ ಮಾಡಿಸಬೇಕು. ಮನಸ್ಸು ಚಿತ್ತವನ್ನು ಮಣಿಸುವ ಏಕಮಾತ್ರ ಸಾಧನ ಅಭ್ಯಾಸ. ಹೀಗೆ ಮಾಡಿದಾಗ ಅದು ಭಗವಂತನಲ್ಲಿ ನೆಲೆನಿಲ್ಲುತ್ತದೆ. ಭಗವಂತನಲ್ಲಿ ನೆಲೆನಿಂತ ಮನಸ್ಸು ಅಂತ್ಯಕಾಲದಲ್ಲಿ ಕೂಡಾ ಭಗವಂತನನ್ನೇ ಕಾಣುತ್ತದೆ. ಇದು ಕೇವಲ ಚಿಂತನೆ ಅಲ್ಲ ಇದು ಅನುಚಿಂತನೆ-ಅಂದರೆ ಭಗವಂತನ ಯಥಾರ್ಥ (ಯತಾವತ್ತಾದ)ಚಿಂತನೆ. ಶ್ರುತಿಯಲ್ಲಿ ಹೇಗೆ ಹೇಳಿದ್ದಾರೋ ಹಾಗೇ ಭಗವಂತನನ್ನು ಚಿಂತನೆ ಮಾಡಬೇಕು. ಅಸತ್ಯವನ್ನು ಚಿಂತನೆ ಮಾಡಿ ಭಗವಂತನನ್ನು ಸೇರಲು ಸಾಧ್ಯವಿಲ್ಲ.

ಏಕಾಗ್ರವಾದ ಮನಸ್ಸಿನಿಂದ ದಿವ್ಯನಾದ ಪರಮಪುರುಷ, ಹೃತ್ಕಮಲ ಮದ್ಯನಿವಾಸಿ ಭಗವಂತನ ಚಿಂತನೆ ಮಾಡಬೇಕು ಎನ್ನುತ್ತಾನೆ ಕೃಷ್ಣ. ಮಹತೋಮಹಿಯಾದ ಭಗವಂತ ನಿನ್ನ ಹೃದಯದಲ್ಲಿ ಅಣೋರಣೀಯವಾಗಿ ಇರುವುದನ್ನು ಧ್ಯಾನದಲ್ಲಿ ಗುರುತಿಸು ಎನ್ನುವುದು ಇಲ್ಲಿ ಕೃಷ್ಣನ ಸಂದೇಶ. ಭಗವಂತ ಸರ್ವಗತ, ಸರ್ವಸಮರ್ಥ, ಸರ್ವಗುಣಪೂರ್ಣ, ಅನಾದಿನಿತ್ಯ. ಅಂತಹ ಭಗವಂತ ನಮ್ಮ ಹೃತ್ಕಮಲದಲ್ಲಿ ವಾಸಿಸಿದ್ದಾನೆ ಮತ್ತು ದಿವ್ಯನಾಗಿದ್ದಾನೆ.

ಇಲ್ಲಿ ಬಳಸಿರುವ ದಿವ್ಯ ಪದಕ್ಕೆ ಅನೇಕ ಅರ್ಥಗಳಿವೆ. ಮೂಲವಾಗಿ ದಿವ್ಯ ಅಥವಾ ‘ದೇವರು’ ಈ ಪದಗಳು ‘ದಿವು’ ಎನ್ನುವ ಧಾತುವಿನಿಂದ ಬಂದಿರುವುದು. ಪ್ರಾಚೀನ ಧಾತು ಪಾಠದಲ್ಲಿ ಈ ಧಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು. ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ಧಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ.

೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ.

೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗೂ ಗೆಲುವಿನ ಸ್ವರೂಪ.

೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗೂ ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ.

೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ.

೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ.

೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ.

೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು ದಿವ್ಯ ಅಥವಾ  'ದೇವ'

ಹೀಗೆ ಅನೇಕ ಅರ್ಥಗಳನ್ನು 'ದಿವ್ಯ' ಎನ್ನುವ ಪದದಲ್ಲಿ  ಕಂಡುಕೊಳ್ಳಬಹುದು. "ಓ ದೇವರೇ" ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಬಲವಿದೆ. ನಾವು ಭಗವಂತನ ಜೊತೆಗೇ ಇದ್ದೂ ಕೂಡಾ ಮಾನಸಿಕವಾಗಿ ಆತನಿಂದ ದೂರವಿದ್ದೇವೆ. ಭಗವಂತನ ನಿರಂತರ ಅನುಚಿಂತನೆಯಿಂದ ನಾವು ಆತನ ಸಾಕ್ಷಾತ್ಕಾರ ಪಡೆಯಬಹುದು.

ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ಭಗವಂತನನ್ನು ಅನುಚಿಂತನೆ ಮಾಡುವುದು ಅಂದರೆ ಏನು ಎನ್ನುವುದನ್ನು ವಿವರಿಸುತ್ತಾನೆ. ಒಬ್ಬ ಧ್ಯಾನ ಮಾಡುವವ ಭಗವಂತನನ್ನು ಯಾವರೀತಿ ಧ್ಯಾನ ಮಾಡಬೇಕು ಎನ್ನುವ ಚಿತ್ರಣವನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.


ಕವಿಂ ಪುರಾಣಮನುಶಾಸಿತಾರಮಣೋರಣೀಯಾಂಸಮನುಸ್ಮರೇದ್ ಯಃ  ।

ಸರ್ವಸ್ಯ ಧಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸಃ ಪರಸ್ತಾತ್ ॥೯॥

ಕವಿಮ್  ಪುರಾಣಮ್ ಅನುಶಾಸಿತಾರಮ್ ಅಣೋಃ ಅಣೀಯಾಂಸಮ್ ಅನುಸ್ಮರೇತ್  ಯಃ  ।

ಸರ್ವಸ್ಯ ಧಾತಾರಮ್ ಅಚಿಂತ್ಯ ರೂಪಮ್ ಆದಿತ್ಯ ವರ್ಣಮ್  ತಮಸಃ ಪರಸ್ತಾತ್ –ಎಲ್ಲವನ್ನು ಬಲ್ಲವನು, ಎಲ್ಲಕ್ಕಿಂತ ಮೊದಲಿದ್ದವನು, ಎಲ್ಲರ ಒಡೆಯ, ಅಣುವಿಗಿಂತ ಅಣು, ಎಲ್ಲವನ್ನು ಹೊತ್ತು ಸಲಹುವವನು, ಬಗೆಗೆ ನಿಲುಕದ ನಿಟ್ಟಿನವನು, ಸೂರ್ಯನಂತೆ ಬೆಳಗುವವನು, ಕತ್ತಲಿನಾಚೆಗಿರುವವನು[ಸಾವಿರದವನು]-ಹೀಗೆಂದು ಅವನನ್ನು ಸ್ಮರಿಸುವವನು[ಅವನನ್ನೇ ಸೇರುತ್ತಾನೆ].

ನಮ್ಮ ಅಂತರ್ಯಾಮಿ ಭಗವಂತನನ್ನು ಧ್ಯಾನ ಮಾಡುವಾಗ ‘ಅನುಸಂಧಾನ ಮಾಡಬೇಕಾದ ವಿಷಯಗಳನ್ನು’ ಕೃಷ್ಣ ಇಲ್ಲಿ ಬಿಡಿಸಿ ಬಿಡಿಸಿ ಹೇಳುತ್ತಾನೆ. ಕೃಷ್ಣ ಹೇಳುತ್ತಾನೆ “ಭಗವಂತನನ್ನು ಕವಿ ಎಂದು ಉಪಾಸನೆ ಮಾಡು” ಎಂದು. ಇಲ್ಲಿ ಕವಿ ಎಂದರೆ ಸರ್ವಜ್ಞ ಎಂದರ್ಥ. ನಮಗೆ ಮೊದಲು ಬೇಕಾಗಿರುವುದು ಜ್ಞಾನ. ಜ್ಞಾನವಿಲ್ಲದೆ ಆನಂದವಿಲ್ಲ. ಇದಕ್ಕಾಗಿ ಭಗವಂತನಲ್ಲಿ ಮೊದಲು ಅರಿವನ್ನು ಬೇಡಬೇಕು. ಎರಡನೇಯದಾಗಿ ಭಗವಂತನನ್ನು ಪುರಾಣಮ್ ಎಂದು ಉಪಾಸನೆ ಮಾಡು ಎನ್ನುತ್ತಾನೆ ಕೃಷ್ಣ. ಪುರಾಣ ಎಂದರೆ ಎಲ್ಲಕ್ಕಿಂತ ಮೊದಲಿದ್ದವ ಮತ್ತು ಸರ್ವ ಕಾಲದಲ್ಲೂ ಏಕಪ್ರಕಾರನಾಗಿರುವವ. ನಮ್ಮ ಪುರ(ದೇಹ)ದೊಳಗೆ  ಕೂತು ಪ್ರತೀಕ್ಷಣದಲ್ಲಿಯೂ ನಮ್ಮನ್ನು ನಿಯಂತ್ರಿಸುವವ ಎನ್ನುವ ಅನುಸಂಧಾನ.

ಮೂರನೆಯದಾಗಿ ಭಗವಂತ ‘ಅನುಶಾಸಿತಾರಮ್’. ಅಂದರೆ ಪ್ರತಿಯೊಂದನ್ನೂ ಕೂಡಾ ನಿಯಮನ(ಶಾಸನ) ಮಾಡುವವನು. ನನ್ನ ಇರವು, ಜಗತ್ತಿನ ಪ್ರತಿಯೊಂದು ವಸ್ತುವಿನ ಇರವು-ಅವನ ನಿಯಂತ್ರಣಕ್ಕೊಳಪಟ್ಟಿದೆ; ಭಗವಂತ ಪ್ರತಿಯೊಂದು ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಶಾಸನ ಮಾಡುತ್ತಾನೆ-ಎಂದು ಅರಿತು  ಅವನನ್ನು ಅನುಸಂಧಾನ ಮಾಡಬೇಕು.  ಸಮಸ್ತ ಬ್ರಹ್ಮಾಂಡದಲ್ಲಿ ತುಂಬಿದ ಆ ಭಗವಂತನೇ ಅಣುವಿಗಿಂತ ಅಣುವಾಗಿ  ಜೀವ ಸ್ವರೂಪದ ಒಳಗೂ ತುಂಬಿದ್ದಾನೆ. “ಎಲ್ಲವನ್ನೂ ಧರಿಸಿದ ಭಗವಂತನೇ ನಮ್ಮೊಳಗೆ ಕೂತು ಪೋಷಣೆ ಮಾಡುತ್ತಿದ್ದಾನೆ. ಆತ ಇಡೀ ವಿಶ್ವದ ಧಾರಣೆ-ಪೋಷಣೆ ಮಾಡುವ ಶಕ್ತಿ. ಆತ ಸರ್ವರಿಗೂ ಸರ್ವಾಭೀಷ್ಟವನ್ನು ಕೊಡುವವ” ಎಂದು ಅವನನ್ನು ಧ್ಯಾನ ಮಾಡಬೇಕು.

 ಭಗವಂತ ನಮ್ಮ ಕಲ್ಪನೆಗೆ ಎಟುಕದ ವಸ್ತು ಎಂದು ನಾವು ತಿಳಿದಿರಬೇಕು. ಆತನದು ನಮ್ಮ ಮಾತು ಮನಸ್ಸಿಗೆ ಮುಟ್ಟದ ರೂಪ. ಧ್ಯಾನದಲ್ಲಿ ಜೀವಸ್ವರೂಪದ ಕಣ್ಣಿನಿಂದ ಭಗವಂತನನ್ನು ನೋಡಿದರೆ ಆತ ಉದಿಸುವ ಸೂರ್ಯನಂತೆ ಕಾಣುತ್ತಾನೆ. ಆತನ ಬಣ್ಣ  ಪ್ರಕೃತಿ ನಿರ್ಮಿತವಾದ ಬಣ್ಣವಲ್ಲ, ಅದು ತ್ರಿಗುಣಾತೀತವಾದ ಎಂದೂ ಅಳಿವಿರದ ಅಪ್ರಾಕೃತ ಬಣ್ಣ.  ಹೀಗೆ ಭಗವಂತನನ್ನು ತಿಳಿದು ನಿರಂತರ ಚಿಂತನೆ ಮಾಡುವವ ತನ್ನ ದೇಹ ತ್ಯಾಗ ಮಾಡುವಾಗ ಭಗವಂತನನ್ನೇ ನೆನೆದು ಭಗವಂತನನ್ನು ಸೇರುತ್ತಾನೆ.


ಪ್ರಯಾಣಕಾಲೇ ಮನಸಾSಚಲೇನ ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ ।

ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್  ಸ ತಂ ಪರಂ ಪುರುಷಮುಪೈತಿ ದಿವ್ಯಮ್ ॥೧೦॥

ಪ್ರಯಾಣ ಕಾಲೇ ಮನಸಾ ಅಚಲೇನ ಭಕ್ತ್ಯಾ ಯುಕ್ತಃ   ಯೋಗಬಲೇನ ಚ ಏವ ।

ಭ್ರುವೋಃ ಮಧ್ಯೇ ಪ್ರಾಣಮ್ ಆವೇಶ್ಯ ಸಮ್ಯಕ್  ಸಃ  ತಮ್  ಪರಮ್  ಪುರುಷಮ್ ಉಪೈತಿ ದಿವ್ಯಮ್ –ಕೊನೆಯ ಕಾಲದಲ್ಲಿ ಭಗವಂತನಲ್ಲಿ ಭಕ್ತಿಯಿಟ್ಟು, ಬಿಗಿಯಾದ ಬಗೆಯಿಂದ , ಹುಬ್ಬುಗಳ ನಡುವೆ ಪ್ರಾಣವಾಯುವನ್ನು ಕದಲದಂತೆ ಇರಗೊಳಿಸಿ, ಪ್ರಾಣಾಯಾಮದ ಯೋಗದ ಮೂಲಕ ಕೂಡಾ ಲೀಲಾಲೋಲನಾದ  ಆ ಪರಮಪುರುಷನನ್ನು ಪಡೆಯಬಹುದು.

ಭಗವಂತನನ್ನು ಸೇರುವ ಇನ್ನೊಂದು ಮಾರ್ಗ ಹಠಯೋಗ. ಈ ಮಾರ್ಗ ಕಠಿಣವಾದದ್ದು. ಇದು ಯಮನಿಯಮನ-ಪ್ರಾಣಾಯಾಮ-ಪ್ರತ್ಯಾಹಾರಗಳಿಂದ ಭಗವಂತನನ್ನು ಸೇರುವ ಬಗೆ. ಈ ಮಾರ್ಗದಲ್ಲಿ ಸಾಧನೆ ಮಾಡುವವರು ತಮ್ಮ ಸಾವಿನ ಕಾಲದಲ್ಲಿ ಏನು ಮಾಡಬೇಕು ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸುತ್ತಾನೆ. ಆಸನ ಪ್ರಾಣಾಯಾಮ ಮಾಡಿ ಸ್ಥಿರವಾದ ದೇಹ, ಸ್ಥಿರವಾದ ಪ್ರಾಣಮಯ ಕೋಶವನ್ನು ಸಾಧಿಸಿದ ಮೇಲೆ, ಪ್ರತ್ಯಾಹಾರದ ಮೂಲಕ ತನ್ನೊಳಗೆ ತುಂಬಿದ ಕೆಟ್ಟ ಸಂಗತಿಗಳನ್ನು  ಹೊರ ಹಾಕಿ, ಕೆಟ್ಟ ವಿಚಾರ ಒಳಬಾರದಂತೆ ತಡೆದು, ಏಕಾಗ್ರತೆ ಸಾಧಿಸುವುದು. ಇದು ತುಂಬಾ ಧೀರ್ಘವಾದ ಕಠಿಣ ಸಾಧನೆ. ಇಂತವರು ತಮ್ಮ ಹೃತ್ಕಮಲ ಮಧ್ಯ(ಅನಾಹತ ಚಕ್ರ) ದಲ್ಲಿ  ಪ್ರಾಣಶಕ್ತಿಯೊಂದಿಗಿರುವ ಜೀವವನ್ನು ಅಲ್ಲಿಂದ ಊರ್ಧ್ವ ಮುಖವಾಗಿ ವಿಶುದ್ಧಿಚಕ್ರದ ಮೂಲಕ  ಭ್ರುಮಧ್ಯ (ಎರಡು ಹುಬ್ಬುಗಳ ನಡುವೆ ಇರುವ ಆಜ್ಞಾ ಚಕ್ರ) ತಂದು ನಿಲ್ಲಿಸಬೇಕು. ಈ ಪ್ರಕ್ರಿಯೆ ಅತ್ಯಂತ ಕಠಿಣ. ಈ ಸಂಪೂರ್ಣ ಕ್ರಿಯೆಯಲ್ಲಿ ಅನನ್ಯ ಭಕ್ತಿ ಬಹಳ ಮುಖ್ಯ. ಈ ರೀತಿ ಭ್ರುಮಧ್ಯದಿಂದ ಸಹಸ್ರಾರದ ಬ್ರಹ್ಮರಂದ್ರದ ಮೂಲಕ ಜೀವ ಹೊರ ಹೋದರೆ ಅವರು ನೇರವಾಗಿ ಭಗವಂತನನ್ನು ಸೇರುತ್ತಾರೆ.

ಈ ರೀತಿಯ ಹಠಯೋಗ ಕಠಿಣ ಸಾಧನವಾಗಿರುವುದರಿಂದ ಪ್ರಾಚೀನರು ಅದಕ್ಕೆ ಪೂರಕವಾದ ಅತ್ಯಂತ ಸರಳ ವಿಧಾನವನ್ನು ತಮ್ಮ ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಇದಕ್ಕೆ ಉತ್ತಮ ಉದಾಹರಣೆ ಊರ್ಧ್ವಪುಂಡ್ರ.  ಇದು ಜೀವದ ಊರ್ಧ್ವಮುಖ ಗತಿಗೆ ಸಂಬಂಧಪಟ್ಟದ್ದು. ಇದು ಪೂರ್ಣ ಪ್ರಮಾಣದಲ್ಲಿ ದೇಹದಲ್ಲಿರುವ ಶಕ್ತಿ ಕೇಂದ್ರಗಳನ್ನು ಜಾಗೃತಿಗೊಳಿಸುವ ಒಂದು ಸರಳ ವಿಧಾನ. [ಆದರೆ ಇಂದು ನಾವು ಏಕೆ ನಾಮ ಹಾಕಿ ಕೊಳ್ಳುತ್ತೇವೆ ಎನ್ನುವುದೇ ನಮಗೆ ತಿಳಿದಿಲ್ಲ].

ಹಠಯೋಗವನ್ನು ಸರಿಯಾದ ಮಾರ್ಗದರ್ಶನ ಇಲ್ಲದೆ ಮಾಡುವುದು ಅಪಾಯಕಾರಿ. ಭಾಗವತದ ದ್ವಿತೀಯ ಸ್ಕಂದದಲ್ಲಿ ಜೀವವನ್ನು ಮೇಲಕ್ಕೆ ಕೊಂಡೊಯ್ಯುವ ಹಂತವನ್ನು ಒಂದು ಅಧ್ಯಾಯದಲ್ಲಿ ವಿವರವಾಗಿ ವಿವರಿಸಿದ್ದಾರೆ. ಹೀಗೆ ಯೋಗದ ಮೂಲಕ ಹಠಮಾಡಿ ಭಗವಂತನನ್ನು ಸೇರಬಹುದು, ಅಥವಾ ತಾಯಿಯಲ್ಲಿ ಮಗು ಹಠಮಾಡಿದಂತೆ ಭಗವಂತನಲ್ಲಿ ಭಕ್ತ ಸದಾ ಭಕ್ತಿಯೆಂಬ ಹಠಮಾಡಿ ಆತನನ್ನು ಸೇರಬಹುದು.

ಹೀಗೆ ಭ್ರುಮಧ್ಯದಲ್ಲಿ ಜೀವವನ್ನು ತಂದು ನಿಲ್ಲಿಸುವ ವಿಧಾನವನ್ನು ವಿವರಿಸಿದ ಕೃಷ್ಣ, ಅಲ್ಲಿಂದ ಮುಂದೆ ಸಹಸ್ರಾರದ ಶಕ್ತಿ ಕೇಂದ್ರದ ದ್ವಾರದ ಮೂಲಕ ಜೀವ  ಹೊರ ಹೋಗುವ  ವಿಧಾನವನ್ನು ಇನ್ನೂ ವಿವರವಾಗಿ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ.      


ಯದಕ್ಷರಂ ವೇದವಿದೋ ವದಂತಿ ವಿಶಂತಿ ಯದ್ ಯತಯೋ ವೀತರಾಗಾಃ    ।

ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ  ತತ್  ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ ॥೧೧॥

ಯತ್ ಅಕ್ಷರಂ ವೇದವಿದಃ  ವದಂತಿ ವಿಶಂತಿ ಯತ್  ಯತಯಃ  ವೀತ ರಾಗಾಃ ।

ಯತ್ ಇಚ್ಛಂತಃ  ಬ್ರಹ್ಮಚರ್ಯಮ್  ಚರಂತಿ  ತತ್  ತೇ ಪದಮ್  ಸಂಗ್ರಹೇಣ ಪ್ರವಕ್ಷ್ಯೇ –ವೇದ ಬಲ್ಲವರು ಅಳಿವಿರದ ಅದನ್ನು ‘ಅಕ್ಷರ’ ಎನ್ನುತ್ತಾರೆ. ಭೋಗದ ಒಲವು ತೊರೆದ ಸಾಧಕರು ಅದನ್ನೇ ಸೇರುತ್ತಾರೆ. ಅದನ್ನು ಸೇರಬಯಸಿಯೇ ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ.  ಅಂತಹ ಮುಕ್ತಿಪ್ರದವಾದ ಪರತತ್ವವನ್ನುನಿನಗೆ ಅಡಕವಾಗಿ ಹೇಳುತ್ತೇನೆ.

ಕೃಷ್ಣ ಹೇಳುತ್ತಾನೆ “ಯೋಗ ಸಾಧನೆಯಿಂದ ಭ್ರುಮಧ್ಯೆ ತಂದು ನಿಲ್ಲಿಸಿದ ಜೀವವನ್ನು ಅಲ್ಲಿಂದ ಧ್ಯಾನ ಮಾಡುತ್ತಾ ಮೇಲಕ್ಕೆ ಸಹಸ್ರಾರದತ್ತ ತೆಗೆದುಕೊಂಡು ಹೋಗಬೇಕು” ಎಂದು. ಈ ಕಾಲದಲ್ಲಿ ಧ್ಯಾನ ಮಾಡಬೇಕಾದ ರೂಪದ ಬಗ್ಗೆ  ಹೇಳುತ್ತಾ ಕೃಷ್ಣ ಹೇಳುತ್ತಾನೆ “ವೇದವನ್ನು ಬಲ್ಲವರು ಅದನ್ನು ಅಳಿವಿರದ ‘ಅಕ್ಷರ’(ಓಂಕಾರ ಎನ್ನುವ ಅಕ್ಷರದಿಂದ ಪ್ರತಿಪಾಧ್ಯನಾದ ಸರ್ವಶಬ್ದ ವಾಚ್ಯ) ಎನ್ನುತ್ತಾರೆ” ಎಂದು. ಮಹಾ ಪ್ರಯತ್ನದಿಂದ ಭಗವಂತನನ್ನು ಒಲಿಸಿಕೊಂಡವರು, ಪ್ರಾಪಂಚಿಕ ಸೆಳೆತದಿಂದ ಪಾರಾದವರು, ಆ ಭಗವಂತನನ್ನು ಹೋಗಿ ಸೇರುತ್ತಾರೆ. “ಅವರು ಅಂತಹ ಭಗವಂತನನ್ನು ತಿಳಿದುಕೊಳ್ಳಬಯಸಿ ಬ್ರಹ್ಮಚರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ”  ಎನ್ನುತ್ತಾನೆ ಕೃಷ್ಣ. [ಇಲ್ಲಿ ‘ಬ್ರಹ್ಮಚರ್ಯ’ ಎಂದರೆ ನಿಘಂಟಿನಲ್ಲಿ ಹೇಳುವ  ದೈಹಿಕ ಬ್ರಹ್ಮಚರ್ಯವಲ್ಲ, ಬದಲಿಗೆ ‘ಬ್ರಹ್ಮಣಿ ಚರಣಂ’-ಭಗವಂತನಲ್ಲಿ ಮನಸ್ಸು ನೆಲೆಗೊಳ್ಳುವಿಕೆ-ಬ್ರಹ್ಮಚರ್ಯ]. “ಅದನ್ನು ಸೇರಬಯಸಿಯೆ ಬಗೆಯಲ್ಲಿ ಆ ಹಿರಿಯ ತತ್ವವನ್ನು ಚಿಂತಿಸುತ್ತಾರೆ. ಈ ರೀತಿ ಮೋಕ್ಷವನ್ನು ಪಡೆಯುವ ಪ್ರಕ್ರಿಯೆಯನ್ನು ಸಂಗ್ರಹವಾಗಿ ನಿನಗೆ ಹೇಳುತ್ತೇನೆ” ಎಂದು ಹೇಳಿ ಕೃಷ್ಣ ಈ ಪ್ರಕ್ರಿಯೆಯನ್ನು ಮುಂದಿನ ಶ್ಲೋಕಗಳಲ್ಲಿ ಅರ್ಜುನನಿಗೆ ವಿವರಿಸುತ್ತಾನೆ.


ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುದ್ಧ್ಯ ಚ ।

ಮೂರ್ಧ್ನ್ಯಾSಧಾಯಾSತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಮ್॥೧೨॥


ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್  ಮಾಮನುಸ್ಮರನ್ ।

ಯಃ ಪ್ರಯಾತಿ ತ್ಯಜನ್ ದೇಹಂ  ಸ ಯಾತಿ ಪರಮಾಂ ಗತಿಮ್ ॥೧೩॥


ಸರ್ವದ್ವಾರಾಣಿ ಸಂಯಮ್ಯ ಮನಃ  ಹೃದಿ ನಿರುದ್ಧ್ಯ ಚ ।

ಮೂರ್ಧ್ನಿ ಆಧಾಯಾ ಆತ್ಮನಃ ಪ್ರಾಣಮ್ ಆಸ್ಥಿತಃ  ಯೋಗ ಧಾರಣಾಮ್ ||

ಓಂ ಇತಿ ಏಕಾಕ್ಷರಮ್  ಬ್ರಹ್ಮ ವ್ಯಾಹರನ್  ಮಾಮ್ ಅನುಸ್ಮರನ್ ।

ಯಃ ಪ್ರಯಾತಿ ತ್ಯಜನ್ ದೇಹಮ್   ಸಃ  ಯಾತಿ ಪರಮಾಮ್  ಗತಿಮ್ – ಎಲ್ಲಾ ನಾಡಿ ದ್ವಾರಗಳನ್ನು ತಡೆ ಹಿಡಿದು , ಬಗೆಯನ್ನು ಭಗವಂತನಲ್ಲೇ ಬಿಗಿ ಹಿಡಿದು, ತನ್ನ ಪ್ರಾಣವಾಯುವನ್ನು ನೆತ್ತಿಯಲ್ಲಿರಿಸಿ ಯೋಗ ಸಾಧನೆಯಲ್ಲಿ ನೆಲೆಗೊಂಡವನು, ‘ಓಂ’ ಎಂಬ ಒಂದಕ್ಷರದಿಂದ ವಾಚ್ಯನಾದ ಪರತತ್ವವನ್ನು ಕೊಂಡಾಡುತ್ತಾ, ನನ್ನನ್ನು ನೆನೆಯುತ್ತಾ, ದೇಹ ತೊರೆದು ಮೇಲೇರಿದವನು ಮರಳಿ ಬರದ ತಾಣವನ್ನು ಸೇರುತ್ತಾನೆ.

ಸಹಸ್ರಾರದತ್ತ ಜೀವವನ್ನು ಕೊಂಡೊಯ್ಯುವಾಗ ದೇಹದ ಇತರ ಎಲ್ಲಾ ದ್ವಾರಗಳನ್ನೂ ಯೋಗ ಬಲದಿಂದ ಮುಚ್ಚಬೇಕು ಮತ್ತು ಮುಚ್ಚಿರುವ ಸಹಸ್ರಾರದ ಬಾಗಿಲನ್ನು ತೆರೆದು ಹೊರಹೋಗಬೇಕು. ಈ ರೀತಿ ಮಾಡುವಾಗ ಮನಸ್ಸನ್ನು ಆ ಸರ್ವಸಂಹಾರಕ ಭಗವಂತನಲ್ಲಿ ನೆಲೆಗೊಳಿಸಬೇಕು. ಪೂರ್ಣಪ್ರಮಾಣದಲ್ಲಿ ತನ್ನ ಯೋಗಾಭ್ಯಾಸವನ್ನು ಬಳಸಿ, ಶ್ವಾಸ ನಿರೋಧ ಮಾಡಿ, ಮನಸ್ಸನ್ನು ಭಗವಂತನಲ್ಲಿಟ್ಟು ಧ್ಯಾನ ಮಾಡಬೇಕು. “ಓಂಕಾರ ಪ್ರತಿಪಾಧ್ಯನಾದ ನನ್ನನ್ನು ಓಂಕಾರದಿಂದ ನೆನೆಯುತ್ತಾ ಸಹಸ್ರರದ ಬಾಗಿಲಿನಿಂದ ಹೊರಬಂದು ದೇಹ ತ್ಯಾಗ ಮಾಡಿ ಮೇಲೇರಿದವನು ಮುಂದೆಂದೂ ಮರಳಿ ಬರದ ತಾಣವಾದ ಮೋಕ್ಷ(ಭಗವಂತ)ವನ್ನು ಸೇರುತ್ತಾನೆ".

ಈ ಸಾಧನೆ ಕೇವಲ ಹಠಯೋಗಿಗಳಿಗೆ ಸಾಧ್ಯ ಮತ್ತು ಇದು ತುಂಬಾ ಕಷ್ಟದ ಸಾಧನೆ. ಎಲ್ಲರೂ ಈ ರೀತಿ ಯೋಗಾಭ್ಯಾಸ ಮಾಡಿ ಸಿದ್ಧಿ ಪಡೆಯುವುದು ಸಾಧ್ಯವಿಲ್ಲ. ಅದಕ್ಕಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ಸುಲಭದ ಮಾರ್ಗವನ್ನು ವಿವರಿಸುತ್ತಾನೆ. 


ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ ।

ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ  ॥೧೪॥


ಅನನ್ಯ ಚೇತಾಃ ಸತತಮ್  ಯಃ  ಮಾಮ್  ಸ್ಮರತಿ ನಿತ್ಯಶಃ ।

ತಸ್ಯ ಅಹಮ್  ಸುಲಭಃ ಪಾರ್ಥ ನಿತ್ಯ ಯುಕ್ತಸ್ಯ ಯೋಗಿನಃ -ಪಾರ್ಥ, ಬೇರೇನನ್ನೂ ನೆನೆಯದೆ ಅನುದಿನವೂ ನಿರಂತರ ನನ್ನನ್ನು ನೆನೆಯುವವನಿಗೆ, ಅಂತಹ ನಿರಂತರ ಸಾಧನೆಯಿಂದ ಸಿದ್ಧಿಪಡೆದವನಿಗೆ ನಾನು ಕೈಸೆರೆ.

“ನಿರಂತರ ನಿತ್ಯ ಭಗವಂತನ ಚಿಂತನೆ ಮಾಡುತ್ತಾ ಬೇರೇನನ್ನೂ ನೆನೆಯದೇ ನನ್ನನ್ನು ಭಜಿಸುವ ಸಾಧಕನಿಗೆ ನಾನು ಅನಾಯಾಸವಾಗಿ ಸ್ವಾಧೀನನಾಗುತ್ತೇನೆ” ಎನ್ನುತ್ತಾನೆ ಕೃಷ್ಣ. ಸಾಧನೆಯಲ್ಲಿ ನಿತ್ಯ ತೊಡಗಿ, ಸಾಧನೆಯ ತುದಿ ಮುಟ್ಟಿದವ ಬೇರೆ ಯಾವ ಪ್ರಯತ್ನವೂ ಇಲ್ಲದೆ ಭಗವಂತನನ್ನು ಸೇರುತ್ತಾನೆ  


ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಮ್ ।

ನಾSಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ ॥೧೫॥


ಮಾಮ್ ಉಪೇತ್ಯ ಪುನಃ ಜನ್ಮ ದುಃಖ ಆಲಯಮ್ ಅಶಾಶ್ವತಮ್ ।

ನ ಅಪ್ನುವಂತಿ ಮಹಾ ಆತ್ಮಾನಃ ಸಂಸಿದ್ಧಿಮ್  ಪರಮಾಮ್  ಗತಾಃ –ಹಿರಿಯ ಸಿದ್ಧಿಯನ್ನು ಪಡೆದ ಇಂತಹ ಜೀವಗಳು ನನ್ನನ್ನು ಪಡೆದ ಮೇಲೆ ದುಗುಡಗಳ ನೆಲೆಯಾದ ನಾಲ್ಕು ದಿನದ ಈ ಸಂಸಾರದಲ್ಲಿ ಮರಳಿ ಹುಟ್ಟಿ ಬರುವುದಿಲ್ಲ.

ಸಾಧನೆಯ ಮೂಲಕ ಸಿದ್ಧಿಯನ್ನು ಪಡೆದು ಭಗವಂತನನ್ನು ಸೇರಿದ ಜೀವರು ಎಂದೂ ದುಃಖಮಾಯವಾದ ಮತ್ತು ಅಶಾಶ್ವತವಾದ ಈ ಸಂಸಾರದಲ್ಲಿ ಮರಳಿ ಹುಟ್ಟುವುದಿಲ್ಲ. “ನನ್ನನ್ನು ಬಂದು ಸೇರುವವರು ಪುಣ್ಯಾತ್ಮರು. ಜಗತ್ತಿನಲ್ಲಿ, ಜೀವನದ ಸಾಧನೆಯಲ್ಲಿ ಅತ್ಯಂತ ಶ್ರೇಷ್ಠವಾದ ಸಿದ್ಧಿ ಎಂದರೆ ಭಗವಂತನ ಸಾಕ್ಷಾತ್ಕಾರ. ಅದನ್ನು ಪಡೆದವರು ಮತ್ತೆ ಸಂಸಾರದ ಬಂಧದಲ್ಲಿ ಸಿಲುಕಿ ಒದ್ದಾಡುವ ಅಗತ್ಯವಿಲ್ಲ” ಎನ್ನುತ್ತಾನೆ ಕೃಷ್ಣ .   


ಆ ಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋರ್ಜುನ ।

ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ ॥೧೬॥


ಆ ಬ್ರಹ್ಮಭುವನಾತ್ ಲೋಕಾಃ  ಪುನಃ ಆವರ್ತಿನಃ ಅರ್ಜುನ   ।

ಮಾಮ್ ಉಪೇತ್ಯ ತು ಕೌಂತೇಯ ಪುನಃ ಜನ್ಮ ನ ವಿದ್ಯತೇ –ಅರ್ಜುನಾ, ಬ್ರಹ್ಮ ಲೋಕದ ತನಕದ ಎಲ್ಲಾ ಲೋಕಗಳಿಂದಲೂ  ಮರಳಿ ಬರಲೇಬೇಕು. ಕೌಂತೇಯಾ, ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ.

ಬ್ರಹ್ಮ ಲೋಕದಿಂದ ಹಿಡಿದು ಇತರ ಎಲ್ಲಾ ಲೋಕಗಳಿಗೂ ಒಂದು ದಿನ ನಾಶವಿದೆ. ಚತುರ್ಮುಖ ಬ್ರಹ್ಮನ ಆಯುಸ್ಸು 31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ. ಇದು ಭಗವಂತನಿಗೆ ಒಂದು ಹಗಲಿನಂತೆ!  ಭಗವಂತ ಕಾಲಾತೀತ. ಆದ್ದರಿಂದ ಕೃಷ್ಣ ಹೇಳುತ್ತಾನೆ “ನನ್ನನ್ನು ಪಡೆದಾಗ ಮಾತ್ರ ಮರುಹುಟ್ಟು ಇಲ್ಲ” ಎಂದು.


ಸಹಸ್ರಯುಗಪರ್ಯಂತಮಹರ್ಯದ್ ಬ್ರಹ್ಮಣೋ ವಿದುಃ ।

ರಾತ್ರಿಂ ಯುಗಸಹಸ್ರಾಂತಾಂ ತೇSಹೋರಾತ್ರವಿದೋ ಜನಾಃ ॥೧೭॥


ಸಹಸ್ರ ಯುಗ ಪರ್ಯಂತಮ್ ಅಹಃ ಯತ್  ಬ್ರಹ್ಮಣಃ  ವಿದುಃ ।

ರಾತ್ರಿಮ್  ಯುಗ ಸಹಸ್ರಾಂತಾಮ್  ತೇ ಅಹಃ ರಾತ್ರ ವಿದಃ  ಜನಾಃ – ಸಾವಿರಾರು ಯುಗಗಳ ತನಕ ಭಗವಂತನ ಹಗಲು ಮತ್ತು ಸಾವಿರಾರು ಯುಗಗಳ ತನಕ ಇರುಳು ಎಂದು ತಿಳಿಯುತ್ತಾರೆ, ಅವರು ಹಗಲು-ಇರುಳು ಬಲ್ಲ ಜನರು.

ಭಗವಂತ ಕಾಲಾತೀತ ಆದರೂ ಕೂಡಾ ಆತನ ಅನುಸಂಧಾನಕ್ಕಾಗಿ ಆತನ ಸೃಷ್ಟಿ ಕಾಲವನ್ನು ಭಗವಂತನ ಹಗಲೆಂದೂ ಮತ್ತು ಪ್ರಳಯ ಕಾಲವನ್ನು ಭಗವಂತನ ರಾತ್ರಿ ಎಂದೂ ಕರೆಯುತ್ತಾರೆ. ಒಂದು ಸಾವಿರ ಯುಗಚಕ್ರದ ಆವೃತ್ತಿಗೆ ಒಂದು ಬ್ರಹ್ಮನ ದಿನ.  ಯುಗಚಕ್ರ ಎಂದರೆ ಚತುರ್ಯುಗ- ಕಲಿಯುಗ 4,32,000 ವರ್ಷಗಳು; ದ್ವಾಪರ ಯುಗ 8,64,000 ವರ್ಷಗಳು; ತ್ರೇತಾಯುಗ 12,96,000 ವರ್ಷಗಳು; ಕೃತಯುಗ 17,28,000 ವರ್ಷಗಳು; ಒಟ್ಟಿಗೆ ಒಂದು ಯುಗಚಕ್ರ ಎಂದರೆ 43,20,000 ವರ್ಷಗಳು. ಇಂತಹ ಒಂದು ಸಾವಿರ ಯುಗ ಚಕ್ರಗಳು ಬ್ರಹ್ಮನ ಒಂದು ಹಗಲು. ಅಂದರೆ 432 ಕೋಟಿ ವರ್ಷ. ಆದ್ದರಿಂದ ಬ್ರಹ್ಮನ ಒಂದು ದಿನ ಅಂದರೆ 864 ಕೋಟಿ ವರ್ಷ. ಚತುರ್ಮುಖ ಬ್ರಹ್ಮನ ಆಯುಸ್ಸು ಅಥವಾ ಸತ್ಯಲೋಕದ ಆಯುಸ್ಸು 100 ವರ್ಷ. ಅಂದರೆ 864 ಕೋಟಿ X 360 X 100=31,104,000,0000000(ಮೂವತ್ತೊಂದು ಸಾವಿರದ ನೂರಾ ನಾಲ್ಕು ಸಾವಿರ ಕೋಟಿ) ವರ್ಷ.  ಇದು ಭಗವಂತನ ಸೃಷ್ಟಿ ಕಾಲ(ಹಗಲು). ನಂತರ ಮಹಾಪ್ರಳಯ. ಈ ಮಹಾಪ್ರಳಯದ ಕಾಲ 31,104 ಸಾವಿರ ಕೋಟಿ ವರ್ಷ(ರಾತ್ರಿ). ಇದು ಭಗವಂತನ ಸೃಷ್ಟಿ ಮತ್ತು ಸಂಹಾರದ ಲೆಕ್ಕಾಚಾರ.

ಪ್ರಳಯಗಳಲ್ಲಿ ಮೂರು ವಿಧ. ೧. ಮನ್ವಂತರ ಪ್ರಳಯ; ೨. ದಿನಪ್ರಳಯ; ೩. ಮಹಾಪ್ರಳಯ. [ಈ ಮೂರು ಪ್ರಳಯಗಳಲ್ಲದೆ ಇನ್ನೂ ಅನೇಕ ಚಿಕ್ಕ ಪ್ರಳಯಗಳಾಗುತ್ತವೆ.  ಆ ಪ್ರಳಯಗಳಲ್ಲಿ ಭೂಮಿಯ ಯಾವುದೋ ಒಂದು ಭಾಗ ನಾಶವಾಗಬಹುದು]. ಮನ್ವಂತರ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುವುದಿಲ್ಲ-ಆದರೆ ನಾಗರೀಕತೆ ನಾಶವಾಗುತ್ತದೆ.  ದಿನಪ್ರಳಯ ಚತುರ್ಮುಖ ಬ್ರಹ್ಮನ ರಾತ್ರಿ. ಅಂದರೆ ಪ್ರತೀ 432 ಕೋಟಿ ವರ್ಷಕ್ಕೊಮ್ಮೆ ದಿನಪ್ರಳಯ. ಈ ಪ್ರಳಯದಲ್ಲಿ ಭೂಮಿ ಪೂರ್ಣವಾಗಿ ನಾಶವಾಗುತ್ತದೆ. ಮಹಾಪ್ರಳಯ ಪ್ರತೀ 31,104 ಸಾವಿರ ಕೋಟಿ ವರ್ಷಕ್ಕೊಮ್ಮೆ ಹಾಗೂ ಈ ಪ್ರಳಯದಲ್ಲಿ ಸತ್ಯ ಲೋಕದಿಂದ ಹಿಡಿದು ಸರ್ವ ಲೋಕಗಳೂ  ಸೂಕ್ಷ್ಮಾತಿ ಸೂಕ್ಷ್ಮ ಪರಮಾಣುವಿನ ರೂಪದಲ್ಲಿ ಭಗವಂತನಲ್ಲಿ ಲೀನವಾಗುತ್ತವೆ. 


ಅವ್ಯಕ್ತಾದ್  ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ ।

ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ ॥೧೮॥


ಅವ್ಯಕ್ತಾತ್   ವ್ಯಕ್ತಯಃ ಸರ್ವಾಃ ಪ್ರಭವಂತಿ ಅಹಃ ಆಗಮೇ  ।

ರಾತ್ರಿ ಆಗಮೇ  ಪ್ರಲೀಯಂತೇ ತತ್ರ ಏವ ಅವ್ಯಕ್ತ ಸಂಜ್ಞಕೇ –ಕಾಣದ ಭಗವಂತನಿಂದ ಕಾಣುವ ಎಲ್ಲವೂ ಹಗಲಾದಾಗ ರೂಪುಗೊಳ್ಳುತ್ತವೆ, ಇರುಳಾದಾಗ ಅದೇ ಕಾಣದ ಭಗವಂತನಲ್ಲಿ ಕಣ್ಮರೆಯಾಗುತ್ತವೆ.

ಮಹಾಪ್ರಳಯ ಕಾಲದಲ್ಲಿ ಅವ್ಯಕ್ತನಾದ  ಭಗವಂತನಲ್ಲಿ ವ್ಯಕ್ತವಾಗಿರುವ ಈ ಪ್ರಪಂಚ ಪರಮಾಣುವಿನ ರೂಪದಲ್ಲಿ ಸೇರಿಕೊಳ್ಳುತ್ತದೆ. ಪುನಃ ಸೃಷ್ಟಿ ಕಾಲದಲ್ಲಿ ಮರಳಿ ಸೂಕ್ಷ್ಮ ರೂಪದಿಂದ ಸ್ಥೂಲ ರೂಪವನ್ನು ಪಡೆದು ವ್ಯಕ್ತವಾಗುತ್ತವೆ.


ಭೂತಗ್ರಾಮಃ ಸ ಏವಾಯಂ ಭೂತ್ವಾಭೂತ್ವಾ ಪ್ರಲೀಯತೇ ।

ರಾತ್ರ್ಯಾಗಮೇSವಶಃ ಪಾರ್ಥ ಪ್ರಭವತ್ಯಹರಾಗಮೇ ॥೧೯॥


ಭೂತ ಗ್ರಾಮಃ ಸಃ ಏವ ಅಯಮ್  ಭೂತ್ವಾಭೂತ್ವಾ ಪ್ರಲೀಯತೇ ।

ರಾತ್ರಿ ಆಗಮೇ ಅವಶಃ ಪಾರ್ಥ ಪ್ರಭವತಿ ಅಹಃ ಆಗಮೇ  -ಪಾರ್ಥ, ಅದೇ ಪಂಚಭೂತಗಳ ಗುಂಪು ಮರಳಿಮರಳಿ ಹುಟ್ಟಿ ಇರುಳಾದಾಗ ಭಗವಂತನ ವಶದಲ್ಲಿ ಲಯಗೊಳ್ಳುತ್ತದೆ; ಹಗಲಾದಾಗ ಹುಟ್ಟುತ್ತದೆ.

ಸೃಷ್ಟಿಯ ಮೂಲದ್ರವ್ಯ ಎಂದೂ ಬದಲಾಗುವುದಿಲ್ಲ. ಅದೇ ಪಂಚಭೂತಗಳು ಮರಳಿಮರಳಿ ಸೃಷ್ಟಿ-ಸಂಹಾರ ಚಕ್ರದಲ್ಲಿ ಸುತ್ತುತ್ತಿರುತ್ತವೆ. ಈ ಚಕ್ರದಲ್ಲಿ ಮೋಕ್ಷ ಯೋಗ್ಯವಲ್ಲದ ಅನಂತ ಜೀವಗಳೂ ಸುತ್ತುತ್ತಿರುತ್ತವೆ. ಆದರೆ ಭಗವಂತನನ್ನು ಸೇರಿದ ಜೀವ ಈ ಚಕ್ರದಿಂದಾಚೆಗಿರುತ್ತದೆ.


ಪರಸ್ತಸ್ಮಾತ್ತು ಭಾವೋSನ್ಯೋSವ್ಯಕ್ತೋ ವ್ಯಕ್ತಾತ್ ಸನಾತನಃ ।

ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ॥೨೦॥


ಪರಃ ತಸ್ಮಾತ್ ತು  ಭಾವಃ ಅನ್ಯಃ ಅವ್ಯಕ್ತಃ  ಅವ್ಯಕ್ತಾತ್ ಸನಾತನಃ ।

ಯಃ ಸಃ  ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ –ಈ ಕಾಣುವ ವಿಶ್ವಕ್ಕಿಂತ ಬೇರೆಯಾಗಿ, ಮಿಗಿಲಾಗಿ ಎಂದೆಂದೂ ಇರುವ ತತ್ವವೇ ಅವ್ಯಕ್ತ. ಎಲ್ಲಾ ಭೂತಗಳು ಇಲ್ಲವಾದಾಗಲೂ ಅದು ಇರುತ್ತದೆ.

ಎಲ್ಲವನ್ನೂ ಮೀರಿ ನಿಂತ ಭಗವಂತ ಎಲ್ಲಕ್ಕಿಂತ ವಿಲಕ್ಷಣ ಮತ್ತು ಶ್ರೇಷ್ಠ. ಆತ ಸನಾತನ. ಎಲ್ಲಾ ಕಾಲದಲ್ಲೂ ನಿರ್ವಿಕಾರನಾಗಿರುವ, ಸರ್ವವೇದ ಪ್ರತಿಪಾಧ್ಯ, ಸಮಸ್ತ ಚರಾಚರಾತ್ಮಕ ಪ್ರಪಂಚ ನಾಶವಾದಾಗಲೂ ನಾಶವಾಗದೇ ಎಲ್ಲವನ್ನೂ ತನ್ನಲ್ಲಿ ಲೀನವಾಗಿಸಿಕೊಂಡು ಇರುವ ಏಕಮಾತ್ರ ತತ್ವ ಭಗವಂತ.


ಅವ್ಯಕ್ತೋSಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್ ।

ಯಂ ಪ್ರಾಪ್ಯ ನ ನಿವರ್ತಂತೇ ತದ್ ಧಾಮ  ಪರಮಂ ಮಮ ॥೨೧॥


ಅವ್ಯಕ್ತಃ ಅಕ್ಷರಃ  ಇತಿ ಉಕ್ತಃ ತಮ್ ಆಹುಃ ಪರಮಾಮ್  ಗತಿಮ್ ।

ಯಮ್  ಪ್ರಾಪ್ಯ ನ ನಿವರ್ತಂತೇ ತತ್  ಧಾಮ  ಪರಮಮ್  ಮಮ –ಈ ಅವ್ಯಕ್ತ ತತ್ವವನ್ನೇ ‘ಅಕ್ಷರ’ ನಾದ ಭಗವಂತನೆನ್ನುತ್ತಾರೆ. ಅವನೇ ಕೊನೆಯಾಸರೆ ಎನ್ನುತ್ತಾರೆ. ಅವನನ್ನು ಪಡೆದವರು ಮತ್ತೆ ಮರಳಿ ಬರುವುದಿಲ್ಲ. ಅದು ನನ್ನ ಹಿರಿದಾದ ಸ್ವರೂಪ.

ಎಲ್ಲರೂ ಹೋಗಿ ಸೇರಬೇಕಾದ ಸರ್ವಶ್ರೇಷ್ಠ ಸ್ಥಾನ  ಈ ಅವ್ಯಕ್ತ ತತ್ವ. ಆತನೇ 'ಅಕ್ಷರ' ಶಬ್ದದ ಮುಖ್ಯಾರ್ಥ. ಎಂದೂ ನಾಶವಿಲ್ಲದ, ಎಲ್ಲಾ ಕಡೆ ವ್ಯಾಪಿಸಿರುವ, ಯಾರು ಏನು ಬಯಸಿದರೂ ಅದನ್ನು ಕೊಡತಕ್ಕ, ಸರ್ವಸಮರ್ಥ, ಇಂದ್ರಿಯಗಳ ಅನುಭವ ಕೊಡುವವ, ಸಮಸ್ತ ಶಬ್ದವಾಚ್ಯ-ಭಗವಂತ. ಅವನನ್ನು ಸೇರಿದರೆ ಮತ್ತೆ ಮರಳಿ ಸಂಸಾರದಲ್ಲಿ ಹುಟ್ಟಬೇಕಾಗಿಲ್ಲ. “ಅದು ನನ್ನ ಹಿರಿದಾದ ಸ್ವರೂಪ” ಎನ್ನುತ್ತಾನೆ ಕೃಷ್ಣ. 


ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ  ।

ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಮ್  ॥೨೨॥


ಪುರುಷಃ ಸಃ  ಪರಃ ಪಾರ್ಥ ಭಕ್ತ್ಯಾ ಲಭ್ಯಃ ತು ಅನನ್ಯ ಯಾ ।

ಯಸ್ಯ ಅಂತಸ್ಥಾನಿ ಭೂತಾನಿ ಯೇನ ಸರ್ವಮ್ ಇದಮ್  ತತಮ್ –ಪಾರ್ಥ, ಆ ಪರಮ ಪುರುಷ ಅವನಿಗೇ ಮೀಸಲಾದ ಭಕ್ತಿಗೆ ಮಾತ್ರವೇ ಎಟುಕುವವನು. ಅವನ ಒಳಗೆ ಇಡಿಯ ವಿಶ್ವವಿದೆ. ಅವನು ಈ ಎಲ್ಲವನ್ನು ತಬ್ಬಿ ನಿಂತಿದ್ದಾನೆ.

ಈ ಬ್ರಹ್ಮಾಂಡ ಮತ್ತು ಪಿಂಡಾಂಡವೆಂಬ ಪುರದಲ್ಲಿದ್ದು ಎಲ್ಲವನ್ನೂ ನಿಯಂತ್ರಿಸುವ ಭಗವಂತ ಸರ್ವ ಶಬ್ದವಾಚ್ಯ. ಇಂತಹ ಭಗವಂತನನ್ನು ಒಲಿಸಿಕೊಳ್ಳಲು ಇರುವ ಏಕಮಾತ್ರ ಉಪಾಯ ಭಕ್ತಿ. ಭಕ್ತಿ ಇಲ್ಲದ ಯಾವ ಕರ್ಮದಿಂದಲೂ ಆತನನ್ನು ಸೇರಲು ಸಾಧ್ಯವಿಲ್ಲ. ಭಗವಂತನ ಸಾಕ್ಷಾತ್ಕಾರ ಮತ್ತು ಮೋಕ್ಷಕ್ಕೆ ಏಕಮಾತ್ರ ಸಾಧನ ಅನನ್ಯವಾದ ಏಕಭಕ್ತಿ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನ ಒಡಲಲ್ಲಿಟ್ಟು ರಕ್ಷಿಸಿ, ಸೃಷ್ಟಿ ಕಾಲದಲ್ಲಿ ಅಂತರ್ಯಾಮಿಯಾಗಿದ್ದು  ಮಾಡಬೇಕಾದ ಕಾರ್ಯವನ್ನು ಮಾಡಿಸಿ, ಅನುದಿನ ಅನಂತ ಕಾಲದಲ್ಲಿ ಒಳಗೂ ಹೊರಗೂ ತುಂಬಿ ರಕ್ಷಣೆ ಮಾಡುವ ಆ ಭಗವಂತನನ್ನು ನಿರಂತರ ಪ್ರೀತಿಸು.

 ಹೀಗೆ ಕೊನೆಗಾಲದಲ್ಲಿ ದೇಹ ತ್ಯಾಗ ಮಾಡುವಾಗ ಭಗವಂತನ ಧ್ಯಾನ ಹೇಗೆ ಮಾಡಬೇಕು ಎನ್ನುವ ಚಿತ್ರಣವನ್ನು ನಮ್ಮ ಮುಂದಿರಿಸಿದ ಕೃಷ್ಣ, ದೇಹದಿಂದ ಹೊರ ಬಂದ ಮೇಲೆ ಭಗವಂತನತ್ತ ಪ್ರಯಾಣಿಸುವ ದಾರಿಯ ಬಗ್ಗೆ  ಈ ಅಧ್ಯಾಯದ ಮುಂದಿನ ಭಾಗದಲ್ಲಿ ವಿವರಿಸುತ್ತಾನೆ.


ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ ।

ಪ್ರಯಾತಾ ಯಾಂತಿ  ತಂ ಕಾಲಂ ವಕ್ಷ್ಯಾಮಿ ಭರತರ್ಷಭ ॥೨೩॥


ಯತ್ರ ಕಾಲೇ ತು ಅನಾವೃತ್ತಿಮ್ ಆವೃತ್ತಿಮ್  ಚ ಏವ  ಯೋಗಿನಃ ।

ಪ್ರಯಾತಾಃ  ಯಾಂತಿ  ತಮ್  ಕಾಲಮ್  ವಕ್ಷ್ಯಾಮಿ ಭರತ ಋಷಭ –ಭರತ ಶ್ರೇಷ್ಠಾ, ಯಾವ ಕಾಲದೇವತೆಗಳ ದಾರಿಯಲ್ಲಿ ಹೋದ ಸಾಧಕರು ಮರಳಿ ಬರುವುದಿಲ್ಲ ಮತ್ತು ಯಾವ ದಾರಿಯಲ್ಲಿ ಮರಳಿಬರುತ್ತಾರೆ ಅಂತಹ ಕಾಲದೇವತೆಗಳನ್ನು ಹೇಳುತ್ತೇನೆ.

“ಶರೀರವನ್ನು ತ್ಯಾಗ ಮಾಡಿದ(ಕಾಲ ವಶನಾದ) ಜೀವನನ್ನು ಯಾವಯಾವ ದೇವತೆಗಳು  ನಿಯಮನ ಮಾಡಿ ಮುಂದೆ ಕರೆದುಕೊಂಡು ಹೋಗುತ್ತಾರೆ; ಯಾವ ದಾರಿಯಲ್ಲಿ ಹೋದವರು ಮರಳಿ ಭೂಮಿಯಲ್ಲಿ ಹುಟ್ಟುತ್ತಾರೆ ಮತ್ತು ಯಾರು ನೇರವಾಗಿ ಮೋಕ್ಷವನ್ನು ತಲುಪುತ್ತಾರೆ, ಆ ವಿಷಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೆಲವರು ಕಾಲ ಎನ್ನುವ ಪದವನ್ನೂ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಈ ಶ್ಲೋಕದಲ್ಲಿ  ಕೃಷ್ಣ ಹೇಳುವ  ಕಾಲ ಅಂದರೆ ಸಮಯವಲ್ಲ. ಶರೀರ ತ್ಯಾಗ ಮಾಡಿದ  ಜೀವದ ನಿಯಮನ ಮಾಡುವ ದೇವತೆಗಳ ಗಣ ‘ಕಾಲ’.


ಅಗ್ನಿರ್ಜೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಮ್ ।

ತತ್ರ ಪ್ರಯಾತಾ ಗಚ್ಛಂತಿ  ಬ್ರಹ್ಮ ಬ್ರಹ್ಮವಿದೋ ಜನಾಃ ॥೨೪॥


ಅಗ್ನಿಃ ಜ್ಯೋತಿಃ ಅಹಃ ಶುಕ್ಲಃ ಷಟ್ ಮಾಸಾಃ ಉತ್ತರ ಅಯನಮ್।

ತತ್ರ ಪ್ರಯಾತಾಃ ಗಚ್ಛಂತಿ ಬ್ರಹ್ಮ ಬ್ರಹ್ಮವಿದಃ  ಜನಾಃ –ಅಗ್ನಿ ಮತ್ತು ಜ್ಯೋತಿ [ಎಂಬಿಬ್ಬರು ವಹ್ನಿಯ ಮಕ್ಕಳು].[ಮಧ್ಯಾಹ್ನದ ದೇವತೆಯ ಜತೆ] ಹಗಲಿನ ದೇವತೆ, [ಹುಣ್ಣಿಮೆಯ ದೇವತೆ ಜತೆ] ಶುಕ್ಲಪಕ್ಷದ ದೇವತೆ , ಉತ್ತರಾಯಣದ ಆರು ತಿಂಗಳ ದೇವತೆಗಳು, [ಸಂಕ್ರಾಂತಿಯ ದೇವತೆಯ ಜತೆ] ಉತ್ತರಾಯಣದ ದೇವತೆ- ಈ ದಾರಿಯಲ್ಲಿ ಹೋದವರು ಭಗವಂತನನ್ನು ಬಲ್ಲವರು ಭಗವಂತನನ್ನು ಸೇರುತ್ತಾರೆ; ಮತ್ತೆ ಮರಳುವುದಿಲ್ಲ.

ದೇಹದಿಂದ ಹೊರಬಂದ ಮೋಕ್ಷ ಯೋಗ್ಯ ಜೀವವನ್ನು ಮೊದಲು ಸ್ವಾಗತಿಸುವವರು ವೈಶ್ವಾನರ(ಪ್ರಧಾನ ಅಗ್ನಿ)ನ ಮಕ್ಕಳಾದ ಅಗ್ನಿ ಮತ್ತು ಜ್ಯೋತಿ. ಈ ದೇವತೆಗಳು ಜೀವನನ್ನು ಸತ್ಕರಿಸಿ ಮುಂದಕ್ಕೆ ಕಳುಹಿಸುತ್ತಾರೆ. ಮುಂದೆ ಜೀವನನ್ನು ಬೆಳಕಿನ ಮತ್ತು ಮಧ್ಯಾಹ್ನದ ದೇವತೆಗಳು ಸ್ವಾಗತಿಸುತ್ತಾರೆ. ಈ ನಿಜವಾದ ಬೆಳಕಿನ ಅನುಭವದೊಂದಿಗೆ ಜೀವ ಮುಂದೆ ಸಾಗಿ ಶುಕ್ಲಪಕ್ಷದ ಮತ್ತು ಹುಣ್ಣಿಮೆಯ ದೇವತೆಯನ್ನು ತಲುಪುತ್ತಾನೆ. ಆ ನಂತರ ಸಂಕ್ರಮಣದ, ಉತ್ತರಾಯಣದ ದೇವತೆ ಜೊತೆಗೆ ಉತ್ತರಾಯಣದ ಆರು ತಿಂಗಳ ದೇವತೆಗಳು ಜೀವನನ್ನು ಭಗವಂತನೆಡೆಗೆ ಕಳುಹಿಸುತ್ತಾರೆ. ಹೀಗೆ ಯಾರು ಈ ದಾರಿಯಲ್ಲಿ ಸಾಗುತ್ತಾರೋ ಅವರು ಎಂದೂ ಮರಳಿ ಬರುವುದಿಲ್ಲ-ನಿತ್ಯ ಸತ್ಯವಾದ ಭಗವಂತನನ್ನು ಸೇರುತ್ತಾರೆ.


ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಮ್  ।

ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ  ॥೨೫॥


ಧೂಮಃ  ರಾತ್ರಿಃ ತದಾ  ಕೃಷ್ಣಃ ಷಟ್ ಮಾಸಾ ದಕ್ಷಿಣಾಯನಮ್  ।

ತತ್ರ ಚಾಂದ್ರಮಸಮ್  ಜ್ಯೋತಿಃ ಯೋಗೀ ಪ್ರಾಪ್ಯ ನಿವರ್ತತೇ –ಹೊಗೆಯ ದೇವತೆ, ಇರುಳ ದೇವತೆ, ಕೃಷ್ಣಪಕ್ಷದ ದೇವತೆ, ದಕ್ಷಿಣಾಯನದ ಆರು ತಿಂಗಳ ದೇವತೆಗಳು, ಮತ್ತು ದಕ್ಷಿಣಾಯನದ ದೇವತೆ-ಈ ದಾರಿಯಲ್ಲಿ ಸಾಗಿದ ಸಾಧಕ ಚಂದ್ರನ ಬೆಳಕಿನ ಲೋಕವನ್ನು ಸೇರಿ ಮರಳಿ ಬರುತ್ತಾನೆ.

ಮೋಕ್ಷ ಯೋಗ್ಯವಲ್ಲದ ಜೀವ ದೇಹದಿಂದ ಹೊರ ಬಂದಾಗ ಆತನನ್ನು ಸ್ವಾಗತಿಸುವ ದೇವತೆ ಹೊಗೆಯ ಮತ್ತು ಕತ್ತಲಿನ ದೇವತೆ. ಆ ನಂತರ ಕೃಷ್ಣಪಕ್ಷದ ದೇವತೆ; ನಂತರ  ದಕ್ಷಿಣಾಯನದ ಮತ್ತು ‘ದಕ್ಷಿಣಾಯನದ ಆರು ತಿಂಗಳ’ ದೇವತೆಗಳು ಜೀವನನ್ನು ಸೋಮಲೋಕಕ್ಕೆ ತಲುಪಿಸುತ್ತಾರೆ. ಜೀವ ಇಲ್ಲಿ ತನ್ನ  ಪುಣ್ಯ ಕ್ಷಯವಾಗುವ ತನಕ ಸುಖವನ್ನು ಅನುಭವಿಸಿ, ಮರಳಿ ಮೋಡದಲ್ಲಿ ಸೇರಿ, ಮಳೆಯ ಮೂಲಕ ಭೂಮಿಯನ್ನು ತಲುಪಿ, ಒಂದು ಗಂಡಿನ ದೇಹದ ಮೂಲಕ ಹೆಣ್ಣಿನ ಗರ್ಭವನ್ನು ಪ್ರವೇಶಿಸಿ, ಮರಳಿ  ಭೂಮಿಯಲ್ಲಿ ಹುಟ್ಟುತ್ತದೆ.  


ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ ।

ಏಕಯಾ ಯಾತ್ಯನಾವೃತ್ತಿಮನ್ಯಯಾSSವರ್ತತೇ ಪುನಃ ॥೨೬॥


ಶುಕ್ಲ ಕೃಷ್ಣೇ ಗತೀ ಹಿ ಏತೇ ಜಗತಃ ಶಾಶ್ವತೇ ಮತೇ   ।

ಏಕಯಾ ಯಾತಿ ಅನಾವೃತ್ತಿಮ್ ಅನ್ಯಯಾ ಆವರ್ತತೇ ಪುನಃ –ಇವು ಜಗದ ಬಿಳಿ ಮತ್ತು ಕಪ್ಪು ದಾರಿಗಳು. ಅನುಗಾಲ ಇರುವಂತವು ಎಂದು ಶಾಸ್ತ್ರದ ತೀರ್ಮಾನ. ಒಂದರಿಂದ ಮರಳಿ ಬರುವುದಿಲ್ಲ. ಇನ್ನೊಂದರಿಂದ ಮತ್ತೆ ಮರಳುತ್ತಾನೆ.

ಹೀಗೆ ಒಂದು ಮೋಕ್ಷಕ್ಕೆ ಹೋಗುವ ಬೆಳಕಿನ ಬಿಳಿಯ ದಾರಿ ಮತ್ತು ಇನ್ನೊಂದು ಮರಳಿ ಸಂಸಾರಕ್ಕೆ ಬರುವ ಕತ್ತಲಿನ ಕಪ್ಪು ದಾರಿ. ಈ ಎರಡೂ ದಾರಿಗಳು ಅನಾದಿ ಅನಂತ ಕಾಲದಲ್ಲಿ ಎಲ್ಲಾ ಜೀವಗಳಿಗೆ ಸಮನಾಗಿ ಇರತಕ್ಕಂತಹ ವ್ಯವಸ್ಥೆ. ಬೆಳಕಿನ ದಾರಿಯಲ್ಲಿ ಹೋದವ ಮರಳಿ ಬರುವುದಿಲ್ಲ, ಕತ್ತಲೆಯ ದಾರಿಯಲ್ಲಿ ಹೋದವ ಮರಳಿ ಬರುತ್ತಾನೆ.


ನೈತೇ ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ ।

ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ ॥೨೭॥


ನ ಏತೇ  ಸೃತೀ ಪಾರ್ಥ ಜಾನನ್ ಯೋಗೀ ಮುಹ್ಯತಿ ಕಶ್ಚನ  ।

ತಸ್ಮಾತ್ ಸರ್ವೇಷು ಕಾಲೇಷು ಯೋಗಯುಕ್ತಃ  ಭವ ಅರ್ಜುನ- ಪಾರ್ಥ, ಈ ದಾರಿಗಳನ್ನರಿತ ಯಾವ ಸಾಧಕನೂ ದಾರಿ ತಪ್ಪುವುದಿಲ್ಲ. ಆದ್ದರಿಂದ, ಓ ಅರ್ಜುನಾ, ಎಲ್ಲಾ ಕಾಲಗಳಲ್ಲೂ ಉಪಾಯವನ್ನರಿತು ನಡೆ.

ಈ ಎರಡೂ ದಾರಿಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದು, ನೀನು ಹೋಗಬೇಕಾದ ದಾರಿ ಯಾವುದು ಎಂದು ತಿಳಿದು, ಆಯಾ ಅಭಿಮಾನಿ ದೇವತೆಗಳ ಜೊತೆಗೆ ಮುಂದಕ್ಕೆ ಸಾಗಬೇಕು. ಆಯಾ ಅಭಿಮಾನಿ ದೇವತೆಗಳು ಬೇರೆಬೇರೆ ಮೆಟ್ಟಲಿನಲ್ಲಿ ಬಂದು ಜೀವನನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ಕಾರಣದಿಂದ ಅಂತ್ಯ ಕಾಲದ ಸ್ಮರಣೆಯಲ್ಲಿ ಮಾರ್ಗ ಮತ್ತು ಅಭಿಮಾನಿ ದೇವತೆಗಳ ಚಿಂತನೆ ಅತ್ಯಗತ್ಯ. ಇದನ್ನು ತಿಳಿದು ಅನುಸಂಧಾನ ಮಾಡಿಕೊಂಡು ಅನುಷ್ಠಾನ ಮಾಡಿದರೆ ಯಾವ ಸಾಧಕನಿಗೂ ಗೊಂದಲವಿಲ್ಲ. ಆದ್ದರಿಂದ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ – “ಎಲ್ಲಾ ಕಾಲದಲ್ಲೂ ಈ ಉಪಾಯವನ್ನರಿತು ನಡೆ” ಎಂದು. 


ವೇದೇಷು ಯಜ್ಞೇಷು ತಪಸ್ಸು  ಚೈವ ದಾನೇಷು ಯತ್ ಪುಣ್ಯಫಲಂ ಪ್ರದಿಷ್ಟಮ್ ।

ಅತ್ಯೇತಿ ತತ್ ಸರ್ವಮಿದಂ ವಿದಿತ್ವಾಯೋಗೀ ಪರಂ ಸ್ಥಾನಮುಪೈತಿ ಚಾSದ್ಯಮ್ ॥೨೮॥


ವೇದೇಷು ಯಜ್ಞೇಷು ತಪಸ್ಸು  ಚ ಏವ ದಾನೇಷು ಯತ್ ಪುಣ್ಯಫಲಮ್  ಪ್ರದಿಷ್ಟಮ್ ।

ಅತ್ಯೇತಿ ತತ್ ಸರ್ವಮ್ ಇದಮ್  ವಿದಿತ್ವಾ ಯೋಗೀ ಪರಮ್  ಸ್ಥಾನಮ್ ಉಪೈತಿ ಚ ಆದ್ಯಮ್ –ವೇದವನ್ನು ಓದಿದರೆ, ಯಜ್ಞಗಳನ್ನು ಮಾಡಿದರೆ, ತಪಗಳನ್ನು ಆಚರಿಸಿದರೆ, ದಾನಗಳನ್ನು ನೀಡಿದರೆ ಏನು ಪುಣ್ಯಫಲ ಹೇಳಲಾಗಿದೆಯೋ ಅದನ್ನೆಲ್ಲಾ ಮೀರಿ ನಿಲ್ಲುತ್ತಾನೆ ಇದನ್ನು ಬಲ್ಲ ಸಾಧಕ; ಎಲ್ಲಕ್ಕೂ ಮೊದಲ ಹಿರಿಯ ತಾಣವನ್ನು ಸೇರುತ್ತಾನೆ.

 ಉಪಸಂಹಾರ ಮಾಡುತ್ತಾ ಕೃಷ್ಣ ಹೇಳುತ್ತಾನೆ-ಎಲ್ಲಕ್ಕಿಂತ ಮಿಗಿಲಾದ ತಿಳಿವು ಅಂದರೆ ಈ ಅಂತ್ಯ ಕಾಲದ ಅರಿವು ಎಂದು . ಸಮಸ್ತ ಶಾಸ್ತ್ರದಲ್ಲಿ ಯಜ್ಞ-ದಾನ-ತಪಸ್ಸುಗಳ ಮೂಲಕ ಏನು ಪುಣ್ಯ ಹೇಳಿದ್ದಾರೆ, ಈ ಅಂತ್ಯ ಕಾಲದ ಸಾವಿನ ರಹಸ್ಯದ ಅರಿವು  ಈ ಎಲ್ಲಾ ಪುಣ್ಯ ಫಲವನ್ನು ಮೀರಿ ನಿಲ್ಲುತ್ತದೆ. ಆದ್ದರಿಂದ ಎಲ್ಲಕ್ಕಿಂತ ದೊಡ್ಡ ಸಾಧನೆ ಅಂತ್ಯ ಕಾಲದ ಚಿಂತನೆ.  ಈ ಕಾರಣದಿಂದ ಬದುಕಿಗಿಂತ ಸಾವಿನ ಬಗ್ಗೆ ಹೆಚ್ಚು ಚಿಂತನೆಯ ಅಗತ್ಯವಿದೆ.

ಸಾವು ಅಮಂಗಳವಲ್ಲ. ಸಾವು ದುಃಖದ ಅನುಭವ ಎನ್ನುವುದು ನಮ್ಮ ಭ್ರಮೆ. ದೇಹದ ಒಳಗಿರುವಾಗ ಭೌತಿಕ ಶರೀರದ ಎಲ್ಲಾ ಯಾತನೆ ಜೀವಕ್ಕೆ ಅಂಟಿಕೊಂಡಿರುತ್ತದೆ. ಸಾವು ಎಂದರೆ ಈ ಸ್ಥೂಲ ಶರೀರದಿಂದ ಬಿಡುಗಡೆ. ಆದ್ದರಿಂದ ಸೂಕ್ಷ್ಮ ಶರೀರದಲ್ಲಿರುವ ಜೀವ ಪಂಜರದಿಂದ ಹೊರ ಬಂದು ಮುಕ್ತವಾಗಿ ಆಕಾಶದಲ್ಲಿ ಹಾರಾಡುವ ಪಕ್ಷಿಯಂತೆ. ಈ ಕಾರಣದಿಂದ ಸಾವಿನ ಭಯ ಬಿಟ್ಟು ಕೊನೇ ಕ್ಷಣದಲ್ಲಿ ಮಾಂಗಲಿಕವಾಗಿ ಎತ್ತರಕ್ಕೇರುವ ದೇವತಾ ಅನುಸಂಧಾನ ನಿರಂತರವಾಗಿ ನಮ್ಮ ಬದುಕಿನಲ್ಲಿರಬೇಕು.

ಇತಿ ಅಷ್ಟಮೋಧ್ಯಾಯಃ

ಎಂಟನೆಯ ಅಧ್ಯಾಯ ಮುಗಿಯಿತು 

ಮುಂದಿನ ಅಧ್ಯಾಯಕ್ಕಾಗಿ ಇಲ್ಲಿ ಒತ್ತಿ >>


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post