ಅರ್ಜುನ ಉವಾಚ ।
ಸಂನ್ಯಾಸಸ್ಯ ಮಹಾಬಾಹೋ ತತ್ವಮಿಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ ॥೧॥
ಅರ್ಜುನಃ ಉವಾಚ–ಅರ್ಜುನ ಕೇಳಿದನು:
ಸಂನ್ಯಾಸಸ್ಯ ಮಹಾಬಾಹೋ ತತ್ವಮ್ ಇಚ್ಛಾಮಿ ವೇದಿತುಮ್ ।
ತ್ಯಾಗಸ್ಯ ಚ ಹೃಷೀಕೇಶ ಪೃಥಕ್ ಕೇಶಿನಿಸೂದನ – ಮಹಾಬಾಹೋ, ಸಂನ್ಯಾಸದ ಮತ್ತು ತ್ಯಾಗದ ಅಂತರವೇನು? ಓ ಹೃಷೀಕೇಶ, ಇದರ ನಿಜವನ್ನು ಕೇಶಿನಿಸೂದನನಾದ ನೀನು ನನಗೆ ತಿಳಿಸು.
ಕೃಷ್ಣ ಮೊದಲು ಸಂನ್ಯಾಸದ ಬಗ್ಗೆ ಹೇಳಿದ್ದ; ಆನಂತರ ಹಿಂದಿನ ಅಧ್ಯಾಯದಲ್ಲಿ ಯಜ್ಞ, ದಾನ, ತಪಸ್ಸು ಎನ್ನುವ ಕರ್ಮಗಳನ್ನು ಹೇಳಿದ. ಇಲ್ಲಿ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಹಾಗಾಗಿ ಅರ್ಜುನ ಕೃಷ್ಣನಲ್ಲಿ ಕರ್ಮತ್ಯಾಗ ಮತ್ತು ಕರ್ಮಸಂನ್ಯಾಸ ಇವೆರಡರ ನಡುವಿನ ಅಂತರವೇನು ಎಂದು ಕೇಳುತ್ತಾನೆ. ತ್ಯಾಗ ಮತ್ತು ಸಂನ್ಯಾಸ ಎರಡು ಪದಗಳು ಮೇಲ್ನೋಟಕ್ಕೆ ಒಂದೇ ಅರ್ಥವನ್ನು ಕೊಟ್ಟಂತೆ ಕಂಡರೂ ಕೂಡಾ, ಅದು ಬೇರೆಬೇರೆ. ಸಂನ್ಯಾಸ ಮತ್ತು ತ್ಯಾಗದ ಮೂಲಭೂತ ಅರ್ಥವೇನು ? ಅವೆರಡನ್ನು ಪ್ರತ್ಯೇಕವಾಗಿ ಅರ್ಥೈಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು ಮಹಾಬಾಹೋ, ಹೃಷೀಕೇಶ ಮತ್ತು ಕೇಶಿನಿಸೂದನ ಎನ್ನುವ ಮೂರು ದಿವ್ಯ ನಾಮಗಳಿಂದ ಸಂಬೋಧಿಸಿದ್ದಾನೆ. ಇದು ಆತನಲ್ಲಿರುವ ಗುರುಭಕ್ತಿಯನ್ನು ಸೂಚಿಸುತ್ತದೆ ಮತ್ತು ಕೃಷ್ಣ ಕೇವಲ ವಸುದೇವನ ಮಗನಲ್ಲ, ಅವನು ‘ಭಗವಂತ’ ಎಂದು ಅರ್ಥ ಮಾಡಿಕೊಂಡು ಈ ಪ್ರಶ್ನೆ ಕೇಳಿರುವುದು ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ‘ಮಹಾಬಾಹು’ ಎಂದರೆ ಶತ್ರುಗಳನ್ನು ಎದುರಿಸುವ, ನೀಳವಾದ, ಗಟ್ಟಿಯಾದ ತೊಳುಗಳುಳ್ಳವ ಎನ್ನುವುದು ಮೇಲ್ನೋಟದ ಅರ್ಥ. ದುಷ್ಟನಿಗ್ರಹ ಮಾಡಿ ಶಿಷ್ಟ ರಕ್ಷಣೆ ಮಾಡುವ, ಎಲ್ಲರೊಳಗಿನ ಅಜ್ಞಾನವನ್ನು ನೀಗಿಸುವ, ಲೋಕರಕ್ಷಕ ತೋಳುಳ್ಳವ ಎನ್ನುವುದು ಈ ದಿವ್ಯ ನಾಮದ ಹಿಂದಿರುವ ಮೂಲ ಅರ್ಥ. ಇನ್ನು ‘ಹೃಷೀಕ’ ಎಂದರೆ ಇಂದ್ರಿಯಗಳು. ಪಿಂಡಾಂಡದೊಳಗಿದ್ದು ಸರ್ವ ಇಂದ್ರಿಯಗಳನ್ನು ನಿಯಂತ್ರಿಸುವ ಭಗವಂತ ಹೃಷೀಕೇಶ. ‘ಕೇಶಿ’ ಅಂದರೆ ಸೂರ್ಯಕಿರಣ; ವಾಯುದೇವರು(Ref: ಋಗ್ವೇದ ೧೦.೧೩೬.೦೭). ಸೌರಮಂಡಲದಲ್ಲಿದ್ದು; ತನ್ನ ಅಂತರಂಗದ ಭಕ್ತನಾದ ಪ್ರಾಣದೇವರಲ್ಲಿದ್ದು; ನಮ್ಮ ಅಭೀಷ್ಟವನ್ನು ಪೂರೈಸುವ, ನಮಗೆ ಶಕ್ತಿತುಂಬುವ ಭಗವಂತ ‘ಕೇಶಿನಿಸೂದನ’. ಅವನು ಬ್ರಹ್ಮಾಂಡ ಮತ್ತು ಪಿಂಡಾಂಡದೊಳಗಿದ್ದು ಇಡೀ ವಿಶ್ವವನ್ನು ನಿಯಂತ್ರಿಸುವ ಮಹಾಶಕ್ತಿ . [ಹೆಚ್ಚಿನ ಕಡೆ ‘ಕೇಶಿನಿಷೂದನ’ ಎನ್ನುವ ಪದ ಬಳಕೆಯಲ್ಲಿದೆ, ಆದರೆ ಸರಿಯಾದ ಪದ ಕೇಶಿನಿಸೂದನ).
ಭಗವಾನುವಾಚ ।
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥೨॥
ಭಗವಾನ್ ಉವಾಚ- ಭಗವಂತ ಹೇಳಿದನು:
ಕಾಮ್ಯಾನಾಮ್ ಕರ್ಮಣಾಮ್ ನ್ಯಾಸಮ್ ಸಂನ್ಯಾಸಂ ಕವಯಃ ವಿದುಃ ।
ಸರ್ವಕರ್ಮಫಲ ತ್ಯಾಗಮ್ ಪ್ರಾಹುಃ ತ್ಯಾಗಂ ವಿಚಕ್ಷಣಾಃ –ಕಾಮ್ಯ ಕರ್ಮಗಳನ್ನು ತೊರೆಯುವುದನ್ನು ಬಲ್ಲವರು ‘ಸಂನ್ಯಾಸ’ ಎನ್ನುತ್ತಾರೆ. ಎಲ್ಲಾ ಕರ್ಮಗಳ ಫಲವನ್ನಷ್ಟೇ ತೊರೆಯುವುದನ್ನು ತಿಳಿದವರು ‘ತ್ಯಾಗ’ ಎನ್ನುತ್ತಾರೆ.
ಇಲ್ಲಿ ಹೇಳುವ ಸಂನ್ಯಾಸ ಗೃಹಸ್ಥರನ್ನೂ ಒಳಗೊಂಡು ಎಲ್ಲಾ ಸಾಧಕರಿಗೂ ಅನ್ವಯವಾಗುವ ಸಂನ್ಯಾಸ. ಸಂನ್ಯಾಸದಲ್ಲಿ ಎರಡು ವಿಧ. ಒಂದು ಕರ್ಮದ ಫಲವನ್ನು ಬಿಡುವುದು, ಇನ್ನೊಂದು ಬಯಕೆಗಳಿಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವುದು. ಇಲ್ಲಿ ತ್ಯಾಗ ಎಂದರೆ ಕರ್ಮವನ್ನು ತ್ಯಾಗ ಮಾಡುವುದಲ್ಲ, ಬದಲಿಗೆ ಯಾವ ಕರ್ಮವೇ ಇರಲಿ, ಅದನ್ನು ಮಾಡಿ-ಯಾವುದೇ ಫಲವನ್ನು ಬಯಸದೇ ಇರುವುದು. ಆದ್ದರಿಂದ ಕರ್ಮತ್ಯಾಗ ಎಂದರೆ: ವೇದಾಧ್ಯಯನ ಬಿಡುವುದು, ಸಂಧ್ಯಾವಂದನೆ ಬಿಡುವುದು, ವೃತಾನುಷ್ಠಾನ ಇತ್ಯಾದಿಯನ್ನು ಬಿಡುವುದು ಎಂದಲ್ಲ. ಬದಲಿಗೆ ಸತ್ಕರ್ಮವನ್ನು ಮಾಡಿ ಅದರ ಫಲವನ್ನು ಬಯಸದೇ ಇರುವುದು ಎಂದರ್ಥ. ಯಾವ ಕರ್ಮವೇ ಇರಲಿ ಅದನ್ನು ಭಗವದ್ ಪ್ರೀತ್ಯರ್ತ ಮಾಡು-ಫಲ ಬಯಕೆಯಿಂದಲ್ಲ.
ಇಲ್ಲಿ ಕವಯಃ ಮತ್ತು ವಿಚಕ್ಷಣಾಃ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಲಾಗಿದೆ. ಶಬ್ದಾರ್ಥದ ಸಂಬಂಧವನ್ನು ತಿಳಿದವರು-ಕವಿಗಳು; ಶಬ್ದಾರ್ಥವನ್ನು ತಿಳಿದು ಅದನ್ನು ಅನುಭವಿಸಿ ಆಚರಿಸುವವರು ವಿಚಕ್ಷಣರು. “ಕವಿಗಳು ಮತ್ತು ವಿಚಕ್ಷಣರು ಸಂನ್ಯಾಸ ಮತ್ತು ತ್ಯಾಗಕ್ಕೆ ಈ ವಿವರಣೆಯನ್ನು ಕೊಡುತ್ತಾರೆ” ಎಂದಿದ್ದಾನೆ ಕೃಷ್ಣ.
ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥೩॥
ತ್ಯಾಜ್ಯಂ ದೋಷವತ್ ಇತಿ ಏಕೇ ಕರ್ಮ ಪ್ರಾಹುಃ ಮನೀಷಿಣಃ ।
ಯಜ್ಞದಾನತಪಃಕರ್ಮ ನ ತ್ಯಾಜ್ಯಮ್ ಇತಿ ಚ ಅಪರೇ – ದೋಷವುಳ್ಳ ಕರ್ಮವನ್ನು ತೊರೆಯಬೇಕು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಬಾರದು ಎನ್ನುತ್ತಾರೆ ಮತ್ತೆ ಕೆಲವರು.
ಕರ್ಮತ್ಯಾಗದ ಬಗ್ಗೆ ಒಂದೊಂದು ಶಾಸ್ತ ಒಂದೊಂದು ರೀತಿ ಹೇಳಿದಂತೆ ನಮಗೆ ಕಾಣುತ್ತದೆ. ಆದರೆ ಎಲ್ಲಾ ಶಾಸ್ತ್ರಗಳ ಅಂತರಂಗದ ತಿರುಳು ಒಂದೇ. ತ್ಯಾಗ ಅಂದರೆ ಏನು ಎನ್ನುವುದು ತಿಳಿದಾಗ ಇದು ಸ್ಪಷ್ಟವಾಗುತ್ತದೆ. ತಿಳಿದ ಬುದ್ಧಿವಂತರು ಹೇಳುತ್ತಾರೆ: “ಕರ್ಮವನ್ನು ಬಿಡಬೇಕು” ಎಂದು. ಇನ್ನು ಕೆಲವು ವೇದಾನುಯಾಯಿಗಳು ಹೇಳುತ್ತಾರೆ: “ಯಜ್ಞ-ದಾನ-ತಪಸ್ಸನ್ನು ಮಾಡಬೇಕು” ಎಂದು. “ನಿನ್ನ ಉಸಿರಿರುವ ತನಕ ಅಗ್ನಿಹೋತ್ರದಿಂದ ಭಗವಂತನನ್ನು ಆರಾಧಿಸು” ಎನ್ನುತ್ತದೆ-ಯಜುರ್ವೇದ. ಇಲ್ಲಿ ಹೇಳಿದ ವಿಷಯ ಸರಿಯಾಗಿ ಅರ್ಥವಾಗಬೇಕಾದರೆ ನಾವು ತ್ಯಾಗ ಪದದ ಅರ್ಥವನ್ನು ವಿವಿಧ ಮುಖದಲ್ಲಿ ನೋಡಬೇಕು. ಮುಂದಿನ ಶ್ಲೋಕಗಳಲ್ಲಿ ಕೃಷ್ಣ ಇದರ ಸುಂದರ ವಿವರಣೆಯನ್ನು ಕೊಟ್ಟಿದ್ದಾನೆ.
ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥೪॥
ನಿಶ್ಚಯಮ್ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।
ತ್ಯಾಗಃ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ -- ಭರತಸತ್ತಮಾ, ಅದರಲ್ಲಿ ತ್ಯಾಗದ ಬಗ್ಗೆ ನನ್ನ ನಿರ್ಧಾರ ಕೇಳು. ಪುರುಷವ್ಯಾಘ್ರಾ, ಮೂರು ಬಗೆಯ ತ್ಯಾಗ ಉಕ್ತವಾಗಿದೆ.
“ತ್ಯಾಗದ ವಿಷಯದಲ್ಲಿ ನಿಶ್ಚಿತವಾದ ಅಭಿಪ್ರಾಯವನ್ನು ನಿನಗೆ ಹೇಳುತ್ತೇನೆ” ಎನ್ನುತ್ತಾನೆ ಕೃಷ್ಣ. ಹೇಗೆ ಯಜ್ಞ-ದಾನ-ತಪಸ್ಸು ಮೂರು ವಿಧವೋ ಹಾಗೇ ತ್ಯಾಗವೂ ಕೂಡಾ ಮೂರು ವಿಧ. ಅದನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ಭರತಸತ್ತಮ ಮತ್ತು ಪುರುಷವ್ಯಾಘ್ರ ಎಂದು ಸಂಬೋಧಿಸಿದ್ದಾನೆ. ಭರತವಂಶದ ಅರಸರ ಮಾಲಿಕೆಯಲ್ಲಿ ಗಣ್ಯನಾದ್ದರಿಂದ ಅರ್ಜುನ ಭರತಸತ್ತಮ-ಇದು ಮೇಲ್ನೋಟದ ಅರ್ಥ. ಭಗವಂತನಲ್ಲಿ ಮತ್ತು ಜ್ಞಾನದಲ್ಲಿ ರತನಾದವ, ಭಕ್ತಿ ಉಳ್ಳವ ಭರತಸತ್ತಮ ಎನ್ನುವುದು ಈ ಸಂಬೋಧನೆಯ ಅಂತರಂಗದ ಅರ್ಥ. ಅದೇ ರೀತಿ ಪುರುಷವ್ಯಾಘ್ರ ಎಂದರೆ ಪುರುಷಶ್ರೇಷ್ಠ ಎಂದರ್ಥ. ಭಗವಂತನ ಕಡೆಗೆ ತಮ್ಮ ಮನಸ್ಸನ್ನು ಹರಿಯಗೊಟ್ಟವರು ಪುರುಷರು. ಅವರಲ್ಲಿ ಶ್ರೇಷ್ಠ-ಪುರುಷಶ್ರೇಷ್ಠ. ಅಂದರೆ ಜ್ಞಾನಿಗಳಲ್ಲಿ ಶ್ರೇಷ್ಠ ಎಂದರ್ಥ. ನಾವೂ ಕೂಡಾ ನಮ್ಮ ಜೀವನದಲ್ಲಿ ಭರತಸತ್ತಮರು, ಪುರುಷವ್ಯಾಘ್ರರು ಆಗಬೇಕು. ಆಗ ಭಗವಂತನ ಸಂದೇಶ ನಮಗೆ ತಲುಪುತ್ತದೆ.
ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ ।
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥೫॥
ಯಜ್ಞ ದಾನ ತಪಃ ಕರ್ಮ ನ ತ್ಯಾಜ್ಯಮ್ ಕಾರ್ಯಮ್ ಏವ ತತ್।
ಯಜ್ಞಃ ದಾನಮ್ ತಪಃ ಚ ಏವ ಪಾವನಾನಿ ಮನೀಷಿಣಾಮ್ – ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಲಾಗದು. ಅದನ್ನು ಮಾಡಲೇಬೇಕು. ಯಜ್ಞ, ದಾನ, ತಪಸ್ಸು ಜ್ಞಾನಿಗಳನ್ನು ಪಾವನಗೊಳಿಸುತ್ತದೆ.
ಯಾವಾಗಲೂ ಭಗವಂತನ ಆರಾಧನಾ ರೂಪವಾದ ಯಜ್ಞ, ದಾನ, ತಪವನ್ನು ಬಿಡಬಾರದು. ಅದನ್ನು ಮಾಡಲೇಬೇಕು. ಇದಕ್ಕಿಂತ ಮಂಗಳವಾದ ಸಂಗತಿ ಇನ್ನೊಂದಿಲ್ಲ. ಇವು ಮೂರೂ ಕೂಡಾ ನಮ್ಮ ಬದುಕನ್ನು ಪವಿತ್ರಗೊಳಿಸುವ ಕ್ರಿಯೆಗಳು. ಇದಕ್ಕಿಂತ ಹೆಚ್ಚು ಪವಿತ್ರವಾದ ಕ್ರಿಯೆ ಇನ್ನೊಂದು ಜಗತ್ತಿನಲ್ಲಿಲ್ಲ. ಇತರ ಎಲ್ಲಾ ಕ್ರಿಯೆಗಳೂ ಈ ಮೂರು ಕ್ರಿಯೆಯಲ್ಲಿ ಅಂತರ್ಭಾವವಾಗಿರುತ್ತವೆ. ಆದ್ದರಿಂದ ನಮ್ಮ ಜೀವನದ ಪ್ರತಿಯೊಂದು ಕ್ರಿಯೆ ಕೂಡಾ ಯಜ್ಞ-ದಾನ-ತಪವಾಗಬೇಕು.
ಏತಾನ್ಯಪಿತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥೬॥
ಏತಾನಿ ಅಪಿ ತು ಕರ್ಮಾಣಿ ಸಂಗಮ್ ತ್ಯಕ್ತ್ವಾ ಫಲಾನಿ ಚ ।
ಕರ್ತವ್ಯಾನಿ ಇತಿ ಮೇ ಪಾರ್ಥ ನಿಶ್ಚಿತಮ್ ಮತಮ್ ಉತ್ತಮಮ್ – ಆದರೆ, ಪಾರ್ಥ, ಈ ಕರ್ಮಗಳನ್ನು ಮಮತೆ ತೊರೆದು, ಫಲದ ಹಂಬಲ ತೊರೆದು ಮಾಡಬೇಕು ಎನ್ನುವುದು ನನ್ನ ಖಚಿತವಾದ ಮತ್ತು ಹಿರಿದಾದ ಆಶಯ.
ಕರ್ಮ ಮಾಡುವಾಗ ಅದರಲ್ಲಿ ಬರುವ ಮೂಲ ದೋಷ ‘ನಾನು ಮಾಡಿದೆ, ನನ್ನಿಂದಾಯಿತು' ಎನ್ನುವ ಅಹಂಕಾರ. ಇದರ ಜೊತೆಗೆ ದೇವರ ಬಳಿ ನಮ್ಮ ಫಲಕಾಮನೆಯ ಪಟ್ಟಿ ಕೊಟ್ಟು ಫಲಾಪೇಕ್ಷೆಯಿಂದ ಕರ್ಮ ಮಾಡುವುದು. ಇವು ಕರ್ಮದಲ್ಲಿನ ಮಹಾದೋಷ. ಅಹಂಕಾರದಿಂದ ಕರ್ಮ ಮಾಡಿದರೆ ಅದು ವ್ಯರ್ಥ –ಏಕೆಂದರೆ ಅಹಂಕಾರವಿದ್ದೆಡೆಗೆ ಭಗವಂತ ಬರಲಾರ. ಇನ್ನು ನಾವು ಫಲದ ಅಸೆಯಿಂದ ಕರ್ಮ ಮಾಡುವುದು. ಫಲದಾಸೆಯಿಂದ ಕರ್ಮ ಮಾಡಿ ಒಂದು ವೇಳೆ ನಾವು ಬಯಸಿದ ಫಲ ನೆರವೇರದಿದ್ದರೆ, ಆಗ ನಮಗೆ ಆ ಕರ್ಮದಲ್ಲಿ ಆಸಕ್ತಿ ದೂರವಾಗುತ್ತದೆ. ದೇವರ ಬಗ್ಗೆ ವೈರತ್ವ ಉಂಟಾಗುತ್ತದೆ. ಇದು ಫಲಾಪೇಕ್ಷೆಯಿಂದ ಕರ್ಮ ಮಾಡುವುದರಿಂದ ಆಗುವ ಅನಾಹುತ. “ಇದು ನನ್ನ ನಿಶ್ಚಿತವಾದ ಅಭಿಪ್ರಾಯ. ನೀನು ಬಿಡಬೇಕಾದದ್ದು ಕರ್ಮವನ್ನಲ್ಲ, ಬದಲಿಗೆ ಕರ್ಮಫಲವನ್ನು ಮತ್ತು ನಾನು ಮಾಡಿದೆ ಎನ್ನುವ ಆಸಕ್ತಿ-ಅಹಂಕಾರವನ್ನು” ಎನ್ನುತ್ತಾನೆ ಕೃಷ್ಣ. ಇದು ಕರ್ಮ ಸಿದ್ಧಾಂತದ ಅತ್ಯಂತ ಶ್ರೇಷ್ಠ ತೀರ್ಮಾನ. ಅಹಂಕಾರವನ್ನು, ಕಾಮ್ಯಕರ್ಮವನ್ನು (ಫಲಕ್ಕಾಗಿಯೇ ಕರ್ಮ ಮಾಡುವುದನ್ನು) ಮತ್ತು ಕರ್ಮದಲ್ಲಿ ಫಲವನ್ನು ಬಯಸುವುದನ್ನು-ಬಿಡುವುದು ನಿಜವಾದ ತ್ಯಾಗವೇ ಹೊರತು, ನಿಯತಕರ್ಮವನ್ನು ಬಿಡುವುದಲ್ಲ. ಇದು ನಿಶ್ಚಿತವಾದ ಸಿದ್ಧಾಂತ.
ನಿಯತಸ್ಯ ತು ಸಂನ್ಯಾಸಃ ಕರ್ಮಣೋ ನೋಪಪದ್ಯತೇ ।
ಮೋಹಾತ್ ತಸ್ಯ ಪರಿತ್ಯಾಗಸ್ತಾಮಸಃ ಪರಿಕೀರ್ತಿತಃ ॥೭॥
ನಿಯತಸ್ಯ ತು ಸಂನ್ಯಾಸಃ ಕರ್ಮಣಃ ನ ಉಪಪದ್ಯತೇ ।
ಮೋಹಾತ್ ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ – ವಿಹಿತವಾದ ಕರ್ಮವನ್ನು ತೊರೆಯುವುದು ತರವಲ್ಲ. ಅರಿವುಗೆಟ್ಟು ಅದನ್ನು ತೊರೆವುದು ತಾಮಸ ತ್ಯಾಗ ಎನಿಸುತ್ತದೆ.
ಯಾವ ಕಾಲಕ್ಕೂ ನಾವು ನಮ್ಮ ನಿಯತಕರ್ಮವನ್ನು ತೊರೆಯಬಾರದು. ಒಂದು ವೇಳೆ ತಪ್ಪು ತಿಳುವಳಿಕೆಯಿಂದ ನಿಯತ ಕರ್ಮವನ್ನು ಬಿಟ್ಟರೆ ಆಗ ಅದು ತಾಮಸ ತ್ಯಾಗ ಎನಿಸುತ್ತದೆ. ಇಲ್ಲಿ ‘ನಿಯತಕರ್ಮ’ ಎಂದರೆ ನಮ್ಮ ಜೀವಯೋಗ್ಯತೆಗೆ ಯಾವುದು ನಿಯತವೋ ಆ ಕರ್ಮ. ನಮಗೆ ತಿಳಿದಂತೆ ಎಲ್ಲಾ ಕರ್ಮವನ್ನು ಎಲ್ಲರೂ ಮಾಡುವಂತಿಲ್ಲ. ಉದಾಹರಣೆಗೆ ಯಜ್ಞ: ಯತಿಗಳು ಅಗ್ನಿಮುಖದಲ್ಲಿ ಆಹುತಿ ನೀಡುವಂತಿಲ್ಲ; ಬ್ರಹ್ಮಚಾರಿಗಳು ಪೂರ್ಣಪ್ರಮಾಣದ ಅಗ್ನಿಹೋತ್ರ ಮಾಡುವಂತಿಲ್ಲ. ಆದರೆ ಯತಿಗಳು ಜ್ಞಾನಯಜ್ಞ ಮಾಡಬಹುದು ಅದು ಅವರ ನಿಯತಕರ್ಮ. ಎಲ್ಲಾ ಕಾಲದಲ್ಲೂ ಎಲ್ಲರೂ ಮಾಡಬಹುದಾದ ಯಜ್ಞ ‘ನಾಮಯಜ್ಞ’. ಅಂದರೆ ಭಗವಂತನ ನಾಮ ಸ್ಮರಣೆ. ಇದು ಯಜ್ಞದಲ್ಲಿ ಎಲ್ಲರಿಗೂ ಅನ್ವಯಿಸುವ ನಿಯತಕರ್ಮ. ಇನ್ನು ದಾನ: ಬ್ರಹ್ಮಚಾರಿಗಳು ಕನ್ಯಾದಾನ ಮಾಡಲಾಗುವುದಿಲ್ಲ, ಅದನ್ನು ಗೃಹಸ್ಥ ಮಾಡಬೇಕು. ಗೃಹಸ್ಥನಿಗೆ ಕನ್ಯಾದಾನ ನಿಯತಕರ್ಮ. ಎಲ್ಲರೂ ಮಾಡಬಹುದಾದ ದಾನ-ಅಭಯದಾನ ಮತ್ತು ಜ್ಞಾನದಾನ. ಮೂರನೆಯದು ತಪಸ್ಸು: ಕೆಲವು ತಪಸ್ಸನ್ನು ಎಲ್ಲರೂ ಮಾಡಲಾಗುವುದಿಲ್ಲ. ಅದಕ್ಕೆ ವೇದಧೀಕ್ಷೆ ಬೇಕಾಗಬಹುದು. ಆದರೆ ಎಲ್ಲರೂ ಮಾಡಬಹುದಾದ ತಪಸ್ಸು ಎಂದರೆ ಉಪವಾಸಾದಿ ವೃತಾನುಷ್ಠಾನಗಳು. ಈ ತಪಸ್ಸನ್ನು ಮನುಷ್ಯ ಮಾತ್ರದವರು ಮಾಡಬಹುದು. ಹೀಗೆ ಯಾರಿಗೆ ಯಾವ ಕರ್ಮ ನಿಯತವೋ ಆ ಕರ್ಮವನ್ನು ಮಾಡಬೇಕು. ನಿಯತ ಕರ್ಮದಲ್ಲಿ ಫಲಾಪೇಕ್ಷೆಯ ಪ್ರಶ್ನೆಯೇ ಇಲ್ಲ. ತಪ್ಪು ತಿಳುವಳಿಕೆಯಿಂದ ನಿಯತಕರ್ಮವನ್ನು ಬಿಟ್ಟರೆ ಅದು ತಾಮಸ ತ್ಯಾಗ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಈ ಶ್ಲೋಕದ ಮೂಲಕ ಕೊಟ್ಟಿದ್ದಾನೆ.
ದುಃಖಮಿತ್ಯೇವ ಯತ್ ಕರ್ಮ ಕಾಯಕ್ಲೇಶಭಯಾತ್ ತ್ಯಜೇತ್ ।
ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ॥೮॥
ದುಃಖಮ್ ಇತಿ ಏವ ಯತ್ ಕರ್ಮ ಕಾಯ ಕ್ಲೇಶ ಭಯಾತ್ ತ್ಯಜೇತ್ ।
ಸಃ ಕೃತ್ವಾ ರಾಜಸಮ್ ತ್ಯಾಗಮ್ ನ ಏವ ತ್ಯಾಗ ಫಲಮ್ ಲಭೇತ್ – ಮಾಡುವುದಕ್ಕೆ ಮೈಬಗ್ಗದೆ, ಬಗೆಯೊಗ್ಗದೆ, ಕಷ್ಟವಾಗುತ್ತದೆ ಎಂದು ಮಾಡದೇ ಇರುವುದು ರಾಜಸ ತ್ಯಾಗ. ಇಂತಹ ತ್ಯಾಗ ಮಾಡಿಯೂ ತ್ಯಾಗದ ಫಲ ದೊರೆಯದು.
ನಮಗೆ ನಮ್ಮ ನಿಯತಕರ್ಮ ಮಾಡಬೇಕು ಎನ್ನುವುದು ಗೊತ್ತಿದ್ದೂ, ಮನಸ್ಸಿಗೆ ದೇಹಕ್ಕೆ ನೋವಾಗುತ್ತದೆ ಎನ್ನುವ ಕಾರಣಕ್ಕಾಗಿ ಕರ್ಮವನ್ನು ಮಾಡದೇ ಬಿಡುವುದು ರಾಜಸ ತ್ಯಾಗ ಎನಿಸುತ್ತದೆ. ಉದಾಹರಣೆಗೆ ಯಾವುದೋ ದೂರದರ್ಶನದ ದಾರಾವಾಹಿಯನ್ನು ನೋಡಬೇಕು ಎನ್ನುವ ಮನಸ್ಸಿನ ಉತ್ಕಟ ಬಯಕೆಯಿಂದ ಕರ್ಮವನ್ನು ಕೈಬಿಡುವುದು, ಚಳಿಯಾಗುತ್ತದೆ ಎಂದು ಸಂಧ್ಯಾವಂದನೆ ಮಾಡದೇ ಇರುವುದು, ಇತ್ಯಾದಿ ರಾಜಸ ತ್ಯಾಗ. ಇಂತಹ ರಾಜಸ ತ್ಯಾಗ ಮಾಡಿದರೆ ನಿಜವಾದ ತ್ಯಾಗದ ಫಲ ಸಿಗದು.
ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇSರ್ಜುನ ।
ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥೯॥
ಕಾರ್ಯಮ್ ಇತಿ ಏವ ಯತ್ ಕರ್ಮ ನಿಯತಮ್ ಕ್ರಿಯತೇ ಅರ್ಜುನ ।
ಸಂಗಂ ತ್ಯಕ್ತ್ವಾ ಫಲಂ ಚ ಏವ ಸಃ ತ್ಯಾಗಃ ಸಾತ್ತ್ವಿಕಃ ಮತಃ – ಅರ್ಜುನಾ, ಕರ್ತವ್ಯ ದೃಷ್ಟಿಯಿಂದ ವಿಹಿತ ಕರ್ಮವನ್ನು ಮಾಡುತ್ತಲೇ ಮಮತೆಯನ್ನೂ ಫಲದ ಹಂಬಲವನ್ನೂ ತೊರೆಯುವುದು ಸಾತ್ತ್ವಿಕ ತ್ಯಾಗ ಎನಿಸುತ್ತದೆ.
ನಿಯತಕರ್ಮವನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಮ್ಮ ಮನಸ್ಸು ತಲುಪಬೇಕು. ಈ ರೀತಿ ಸತ್ತ್ವಗುಣ ಮನಸ್ಸಿನಲ್ಲಿ ತುಂಬಿದಾಗ(ಅರ್ಜುನರಾದಾಗ)ಯಾವ ಕರ್ಮವನ್ನೂ ಬಿಡಲು ನಮಗೆ ಮನಸ್ಸಾಗುವುದಿಲ್ಲ. ಅಲ್ಲಿ ಫಲದ ಬಯಕೆ ಇರುವುದೇ ಇಲ್ಲ. ಸದಾ ಭಗವದರ್ಪಣ ಭಾವನೆಯಲ್ಲಿ ಖುಷಿಯಿಂದ ಕರ್ಮ ಮಾಡುವುದು; ಯಾವುದೇ ಅಹಂಕಾರ ಇಲ್ಲದೇ ಇರುವುದು; ಎಲ್ಲಾ ಕರ್ಮದ ಮಹತ್ವ ತಿಳಿದು ನಿಯತವಾಗಿ ಕರ್ಮ ಮಾಡುವುದು- ಸಾತ್ತ್ವಿಕತ್ಯಾಗ. ಇಲ್ಲಿ ತ್ಯಾಗ ಮಾಡುವುದು ಕರ್ಮವನ್ನಲ್ಲ ಬದಲಿಗೆ ಕರ್ಮ ಫಲವನ್ನು.
ಹೀಗೆ ನಮ್ಮಲ್ಲಿರುವ ಗೊಂದಲಗಳಿಗೆ ಕೃಷ್ಣ ಅತ್ಯಂತ ಸರಳವಾದ ಉತ್ತರ ಕೊಟ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ: ಫಲಾಪೇಕ್ಷೆ ಇಲ್ಲದೆ ಅಹಂಕಾರ ತೊರೆದು ನಿಯತಕರ್ಮವನ್ನು ಮಾಡುವುದು ಸಾತ್ತ್ವಿಕ ತ್ಯಾಗ; ಸೋಮಾರಿತನದಿಂದ ಕಷ್ಟವಾಗುತ್ತದೆ ಎಂದು ನಿಯತಕರ್ಮವನ್ನು ಬಿಡುವುದು ರಾಜಸ ತ್ಯಾಗ ಮತ್ತು ತಪ್ಪು ತಿಳುವಳಿಕೆಯಿಂದ, ‘ಎಲ್ಲವೂ ಮೂಢನಂಬಿಕೆ’ ಎಂದು ನಿಯತಕರ್ಮವನ್ನು ಮಾಡದೇ ಬಿಡುವುದು ತಾಮಸ ತ್ಯಾಗ.
ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ ॥೧೦॥
ನ ದ್ವೇಷ್ಟಿ ಅಕುಶಲಮ್ ಕರ್ಮ ಕುಶಲೇ ನ ಅನುಷಜ್ಜತೇ ।
ತ್ಯಾಗೀ ಸತ್ತ್ವಸಮಾವಿಷ್ಟಃ ಮೇಧಾವೀ ಛಿನ್ನಸಂಶಯಃ – ಮುದ ನೀಡದ ಕರ್ಮದ ಬಗ್ಗೆ ಹಗೆಯೂ ಇಲ್ಲ, ಮುದ ನೀಡುವ ಕರ್ಮದ ಬಗ್ಗೆ ಅತಿಯಾದ ನಂಟೂ ಇಲ್ಲ. ಇಂತವನು ಸಾತ್ವಿಕ-ತ್ಯಾಗಿ. ಅವನು ತಿಳಿದವನು ಮತ್ತು ಸಂದೇಹವಳಿದವನು.
ಈ ಶ್ಲೋಕ ಒಬ್ಬ ಸಾತ್ವಿಕ ತ್ಯಾಗಿ ಯಾವ ರೀತಿ ತನ್ನ ಕರ್ಮಗಳನ್ನು ನೋಡುತ್ತಾನೆ ಎನ್ನುವುದನ್ನು ಹೇಳುತ್ತದೆ. ನಾವು ಮಾಡಿದ ಹಿಂದಿನ ಯಾವುದೋ ಒಂದು ಕರ್ಮದಿಂದ ಇಂದು ಕೆಟ್ಟ ಪರಿಣಾಮ ಆಗುತ್ತಿದ್ದರೆ, ಅಥವಾ ಹಿಂದೆ ಮಾಡಿದ ಇನ್ಯಾವುದೋ ಕರ್ಮದಿಂದ ಒಳ್ಳೆಯದು ಆಗುತ್ತಿದ್ದರೆ, ಸಾತ್ವಿಕ ತ್ಯಾಗಿ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆತ ಒಳ್ಳೆಯದಾಯಿತು ಎಂದು ಹಾರಾಡುವುದಿಲ್ಲ, ಕೆಟ್ಟದ್ದಾಯಿತು ಎಂದು ಕುಸಿಯುವುದಿಲ್ಲ. ಈತ ದುಃಖಕಾರಕವಾದ ಕರ್ಮವನ್ನು ದ್ವೇಷಿಸುವುದೂ ಇಲ್ಲ. ಔಷಧಿ ಹೇಗೆ ಕಹಿ ಇರುತ್ತದೋ ಹಾಗೇ ಸತ್ಕರ್ಮ ಕಿಂಚಿತ್ ದುಃಖಕರವಾದಾಗ ಅದರ ಬಗ್ಗೆ ಆತ ಚಿಂತೆ ಮಾಡುವುದಿಲ್ಲ.
ಸಾತ್ವಿಕ ತ್ಯಾಗಿಯ ಮನಸ್ಸು ಸತ್ತ್ವಗುಣದಲ್ಲಿ ತುಂಬಿರುತ್ತದೆ. ಅವನಿಗೆ ತಾಮಸ-ರಾಜಸ ಚಿಂತೆಗಳೇ ಬರುವುದಿಲ್ಲ. ಬಲಜ್ಞಾನಗಳಿಂದ ಪರಿಪೂರ್ಣನಾದ ಭಗವಂತನಲ್ಲಿ ಎಲ್ಲವನ್ನೂ ಅರ್ಪಿಸಿ ಆತ ಕರ್ಮ ಮಾಡುತ್ತಿರುತ್ತಾನೆ. ಇದರಿಂದ ಆತನ ಮನಸ್ಸು ಪೂರ್ಣವಾಗಿ ಭಗವಂತನಲ್ಲಿ ಸಮಾವಿಷ್ಟವಾಗಿರುತ್ತದೆ. ಮೇಧಾವಿಯಾಗಿರುವ ಈತನಿಗೆ ತನ್ನ ಬದುಕಿನ ಪ್ರತೀ ನಡೆಯ ಎಚ್ಚರವಿರುತ್ತದೆ. ಭಗವಂತನಲ್ಲಿ ನೆಲೆಗೊಂಡ ಇಂತಹವರ ಮನಸ್ಸಿಗೆ ಎಂದೂ ಯಾವ ಗೊಂದಲವೂ ಸುಳಿಯುವುದಿಲ್ಲ. ಇಂತಹವರ ಜೀವನದ ನಡೆ ನೋಡಲು ಸಾಮಾನ್ಯವಾಗಿರುತ್ತದೆ ಆದರೆ ಅವರ ಕ್ರಿಯೆಯ ಹಿಂದಿನ ಅನುಸಂಧಾನ ಮಾತ್ರ ಭಿನ್ನವಾಗಿರುತ್ತದೆ. ಇವರು “ಭಗವಂತ ನೀನು ಮಾಡಿಸುತಿದ್ದಿ-ನಾನು ಮಾಡುತ್ತಿದ್ದೇನೆ” ಎನ್ನುವ ಅನುಸಂಧಾನದಿಂದ ತಮ್ಮ ಕರ್ಮವನ್ನು ಮಾಡುತ್ತಿರುತ್ತಾರೆ.
ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।
ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ ॥೧೧॥
ನಹಿ ದೇಹಭೃತಾ ಶಕ್ಯಂ ತ್ಯಕ್ತುಂ ಕರ್ಮಾಣಿ ಅಶೇಷತಃ ।
ಯಃ ತು ಕರ್ಮ ಫಲ ತ್ಯಾಗೀ ಸಃ ತ್ಯಾಗೀ ಇತಿ ಅಭಿಧೀಯತೇ –ಶರೀರದಲ್ಲಿರುವಷ್ಟು ಕಾಲ ಕರ್ಮಗಳನ್ನು ಪೂರ್ತಿಯಾಗಿ ಬಿಡುವುದು ಸಾಧ್ಯವಿಲ್ಲ. ಕರ್ಮದ ಫಲವನ್ನು ತೊರೆದವನೇ ಕರ್ಮತ್ಯಾಗಿ.
ಮನುಷ್ಯನಾಗಿ ಹುಟ್ಟಿದ ಮೇಲೆ, ಹುಟ್ಟಿನಿಂದ ಸಾಯುವ ತನಕ ನಾವು ಕರ್ಮ ಮಾಡಲೇ ಬೇಕು. ಕರ್ಮವನ್ನೇ ಬಿಟ್ಟು ಬದುಕಲು ಸಾಧ್ಯವಿಲ್ಲ. ನಾವು ತೊರೆಯಬೇಕಾದದ್ದು ಕರ್ಮವನ್ನಲ್ಲ-ಕರ್ಮಫಲವನ್ನು. ಈ ರೀತಿ ಕರ್ಮ ಮಾಡಿಕೊಂಡು ಕರ್ಮಫಲ ತೊರೆದವನು ಕರ್ಮತ್ಯಾಗಿ ಎನಿಸುತ್ತಾನೆ.
ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತ್ಯತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ ॥೧೨॥
ಅನಿಷ್ಟಮ್ ಇಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।
ಭವತಿ ಅತ್ಯಾಗಿನಾಂ ಪ್ರೇತ್ಯ ನತು ಸಂನ್ಯಾಸಿನಾಂ ಕ್ವಚಿತ್ – ಕರ್ಮದ ಫಲ ಮೂರು ತೆರ: ಬೇಕಾದ್ದು, ಬೇಡವಾದದ್ದು, ಮತ್ತು ಎರಡರ ಬೆರಕೆ. ಫಲತ್ಯಾಗ ಮಾಡದವರಿಗೆ ಇದು ಸತ್ತಮೇಲೆ ಸಲ್ಲುತ್ತದೆ. ಫಲದ ನಂಟು ತೊರೆದವರಿಗೆ ಇದು ಎಂದೂ ಸೋಕುವುದಿಲ್ಲ.
ಕರ್ಮ ಮಾಡುವುದರಿಂದ ಸುಖವಾಗಬಹುದು; ದುಃಖವಾಗಬಹುದು; ಅಥವಾ ಸುಖ-ದುಃಖದ ಬೆರಕೆಯ ಫಲ ಸಿಗಬಹುದು. ಕರ್ಮಫಲ ತ್ಯಾಗ ಮಾಡದೇ ಕರ್ಮ ಮಾಡುವವರಿಗೆ ಇದು ಸತ್ತ ಮೇಲೆ ಸಲ್ಲುತ್ತದೆ. ಇವರು ಕರ್ಮ ಮತ್ತು ಕರ್ಮ ಫಲದ ಸುಳಿಯಲ್ಲಿ ಸಿಲುಕಿ ಮತ್ತೆ ಸಂಸಾರ ಬಂಧದಲ್ಲಿ ಸಿಲುಕುತ್ತಾರೆ. ಆದರೆ ಕರ್ಮ ಫಲದ ಅಪೇಕ್ಷೆ ಇಲ್ಲದವರಿಗೆ ಇದು ಎಂದೂ ಸೋಕುವುದಿಲ್ಲ. ಅವರಿಗೆ ಏನು ಬಂದರೂ ಅದು ಭಗವಂತನ ಪ್ರಸಾದ. ಅದರಲ್ಲಿ ಬೇಕಾದ್ದು, ಬೇಡವಾದದ್ದು ಎನ್ನುವ ಭೇದವಿಲ್ಲ. ಇದು ಮೋಕ್ಷ ಮಾರ್ಗ. ಉದಾಹರಣೆಗೆ ರಾಜ್ಯದ, ಅಧಿಕಾರದ ಆಸೆಯಿಂದ, ಭಗವಂತನನ್ನು ಮರೆತು ಯುದ್ಧವನ್ನು ಮಾಡುವವ- ಯುದ್ಧದಲ್ಲಿ ನಡೆಯುವ ಪ್ರಾಣಹಾನಿಗೆ ಕಾರಣನಾಗುತ್ತಾನೆ. ಆತ ಈ ಪಾಪದ ಹೊರೆಯನ್ನು ಸತ್ತ ನಂತರ ಪಡೆಯಬೇಕಾಗುತ್ತದೆ. ಆದರೆ ಕರ್ತವ್ಯ ಕಾರಣಕ್ಕಾಗಿ ಯಾವುದೇ ಸ್ವಾರ್ಥವಿಲ್ಲದೆ ಎಲ್ಲವನ್ನೂ ಭಗವಂತನಿಗೆ ಅರ್ಪಿಸಿ ಯುದ್ಧ ಮಾಡುವವನಿಗೆ ಯಾವ ಪಾಪದ ಲೇಪವೂ ಅಂಟುವುದಿಲ್ಲ.
ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್॥೧೩॥
ಪಂಚ ಏತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।
ಸಾಂಖ್ಯೇ ಕೃತ ಅಂತೇ ಪ್ರೋಕ್ತಾನಿ ಸಿದ್ಧಯೇ ಸರ್ವ ಕರ್ಮಣಾಮ್ –ಎಲ್ಲಾ ಕಾರ್ಯಗಳು ಕೈಗೂಡಲು ಇವು ಐದು ಕಾರಣಗಳು. ಹೇ ಮಹಾಬಾಹೋ, ವೈದಿಕ ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಅವುಗಳನ್ನು ನನ್ನಿಂದ ತಿಳಿದುಕೋ :
ನಮ್ಮಲ್ಲಿ ಅನೇಕರಿಗೆ ಒಂದು ಪ್ರಶ್ನೆ ಇದೆ. ನಾವು ಮಾಡಿದ ಕೆಲಸವನ್ನು ‘ನಾನು ಮಾಡಿದೆ’ ಅನ್ನುವುದರಲ್ಲಿ ತಪ್ಪೇನು’ ಎಂದು. ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾದರೆ, ಒಂದು ಕ್ರಿಯೆ ನಡೆಯಬೇಕಾದರೆ ಆ ಕ್ರಿಯೆಯ ಹಿಂದೆ ಇರುವ ಐದು ಕಾರಣಗಳನ್ನು ತಿಳಿದುಕೊಳ್ಳಬೇಕು. ವೈದಿಕ ಸಾಂಖ್ಯ ಶಾಸ್ತ್ರದಲ್ಲಿ, ಜ್ಞಾನದ ಸಿದ್ಧಾಂತದಲ್ಲಿ ಹೇಳಲಾದ ಈ ಐದು ಕಾರಣಗಳನ್ನು ಕೃಷ್ಣ ಅರ್ಜುನನಿಗೆ ವಿವರಿಸುತ್ತಾನೆ.
ಇಲ್ಲಿ ಕೃಷ್ಣ ಅರ್ಜುನನನ್ನು ಮಹಾಬಾಹೋ ಎಂದು ಸಂಬೋಧಿಸಿದ್ದಾನೆ. 'ಮಹಾ-ಬ' ಅಂದರೆ ಮಹತ್ತಾದ ಬಯಕೆಗಳು. ಅದನ್ನು ತ್ಯಾಗ ಮಾಡಿದವ-ಮಹಾಬಾಹು. ನಾವೆಲ್ಲರೂ ನಮ್ಮ ಜೀವನದಲ್ಲಿ ಕರ್ಮಫಲತ್ಯಾಗ ಮಾಡಿ, ಕೇವಲ ಭಗವದರ್ಪಣಾ ಭಾವದಿಂದ ಕರ್ಮ ಮಾಡುವುದನ್ನು ಕಲಿತುಕೊಂಡು-ಮಹಾಬಾಹುಗಳಾಗಬೇಕು ಎನ್ನುವುದು ಈ ಸಂಬೋಧನೆಯ ಹಿಂದಿರುವ ಧ್ವನಿ.
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಶ್ಚ ಪೃಥಕ್ ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥೧೪॥
ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ ವಿಧಮ್ ।
ವಿವಿಧಾಃ ಚ ಪೃಥಕ್ ಚೇಷ್ಟಾಃ ದೈವಂ ಚ ಏವ ಅತ್ರ ಪಂಚಮಮ್ – ಕ್ರಿಯೆ ನಡೆಯುವ ತಾಣ, ಮಾಡುವ ಭಗವಂತ [ಜೀವ], ಬೇರೆಬೇರೆ ಉಪಕರಣಗಳು, ಬಗೆಬಗೆಯ ಪೂರಕ ಕ್ರಿಯೆಗಳು ಮತ್ತು ಐದನೆಯದಾದ ಅದೃಷ್ಟ[ಭಗವಂತ].
ಪ್ರತಿಯೊಂದು ಕ್ರಿಯೆ ನಡೆಯಲು ಐದು ಕಾರಣಗಳು:
(೧) ಅಧಿಷ್ಠಾನ: ಇಲ್ಲಿ ಅಧಿಷ್ಠಾನ ಎಂದರೆ ನೆಲೆ. ನಮ್ಮ ದೇಹವೇ ನಮ್ಮ ಅಧಿಷ್ಠಾನ. ಈ ಸಾಧನಾ ಶರೀರವಿಲ್ಲದೆ ಯಾವ ಕ್ರಿಯೆಯೂ ನಡೆಯುವುದಿಲ್ಲ. ನಿನಗೆ ದೊರೆತಿರುವ ಸಾಧನಾ ಶರೀರ ಆ ಭಗವಂತನ ಪ್ರಸಾದ.
(೨) ಕರ್ತಾ: ಶರೀರದಲ್ಲಿ ಕೂತು ನಮ್ಮ ಕ್ರಿಯೆಗಳನ್ನು ನಿಯಂತ್ರಿಸುವ ಭಗವಂತ ಕರ್ತಾ. ಆತ ಸ್ವತಂತ್ರ. ಆತನಿಗೆ ಅಧೀನವಾಗಿರುವ ಜೀವ(ನಾನು-Self) ಸ್ವತಂತ್ರನಲ್ಲ. ಆದರೆ ಜೀವನಿಗೆ ಇಚ್ಛಾಪೂರ್ವಕ ಕೃತಿ ಇದೆ.
(೩) ಕರಣಗಳು: ನಮ್ಮ ಇಂದ್ರಿಯಗಳು. ನಮ್ಮ ಇಂದ್ರಿಯಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರಿಯಗಳ ಒಡೆಯ ಭಗವಂತ(ಹೃಷೀಕೇಶ). ಇಂದ್ರಿಯಗಳು ನಮಗೆ ಭಗವಂತನ ಮಹಾ ಪ್ರಸಾದ.
(೪) ವಿವಿಧ ಪೂರಕ ಸಾಧನಗಳು: ಒಂದು ಕ್ರಿಯೆ ಆಗಬೇಕಾದರೆ ಅದಕ್ಕೆ ಪೂರಕವಾದ ಅನೇಕ ಪೂರಕ ಸಾಧನಗಳು ಅಗತ್ಯ.
(೫) ದೈವಂ: ನಮ್ಮ ಪ್ರತಿಯೊಂದು ಕ್ರಿಯೆ ಭಗವಂತನ ಸಂಕಲ್ಪವನ್ನು ಅವಲಂಭಿಸಿದೆ. ಇದನ್ನು ಅದೃಷ್ಟ, ಹಣೆಬರಹ ಎಂದೂ ಕರೆಯಬಹುದು.
ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ- ಒಬ್ಬ ಅತ್ಯುತ್ತಮ ಮಾತುಗಾರ. ಆತ ಅಷ್ಟೊಂದು ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುತ್ತಾನೆ. ಆತ ಹೀಗೆ ಮಾತನಾಡಬೇಕಾದರೆ ಆತ ಮೂಗನಾಗಿರಬಾರದು, ಬಾಯಿ ಇದ್ದರೆ ಸಾಲದು-ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು, ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು, ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದದ ಹುಟ್ಟಿಗೆ ಆಕಾಶ-ಗಾಳಿ ಮಾಧ್ಯಮ. ಈ ಎಲ್ಲಾ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚೆನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೇ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಹುಟ್ಟುವಾಗಲೇ ಮೂಗನಾಗಿ ಹುಟ್ಟಿದ್ದರೆ? ಜ್ಞಾನ ಪರಂಪರೆಯೇ ಇಲ್ಲದ ಮನೆತನದಲ್ಲಿ ಹುಟ್ಟಿದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ‘ನಾನು ಮಾಡಿದೆ’ ಎನ್ನುವ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೇ ಇರಲು ಸಾಧ್ಯ.
ಶರೀರವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ ॥೧೫॥
ಶರೀರ ವಾಕ್ ಮನೋಭಿಃ ಯತ್ ಕರ್ಮ ಪ್ರಾರಭತೇ ನರಃ ।
ನ್ಯಾಯ್ಯಂ ವಾ ವಿಪರೀತಂ ವಾ ಪಂಚ ಏತೇ ತಸ್ಯ ಹೇತವಃ – ಮೈ-ಮಾತು-ಮನಗಳಿಂದ ಮನುಷ್ಯ ಯಾವ ಕೆಲಸ ಕೈಗೊಂಡರೂ –ಅದು ಒಪ್ಪಿರಲಿ, ತಪ್ಪಿರಲಿ-ಇವು ಐದು ಅದಕ್ಕೆ ಕಾರಣಗಳು.
ಮೈ-ಮಾತು-ಮನಗಳಿಂದ ನಾವು ಯಾವ ಕ್ರಿಯೆ ಮಾಡಿದರೂ ಅದರ ಹಿಂದೆ ಮೇಲೆ ಹೇಳಿದ ಐದು ಕಾರಣಗಳಿರುತ್ತವೆ. ಆ ಕ್ರಿಯೆ ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು. ಕ್ರಿಯೆ ಮಾತ್ರ ಈ ಐದು ಕಾರಣಗಳಿಂದಲೇ ನಡೆಯುವುದು.
ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ ।
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ ॥೧೬॥
ತತ್ರ ಏವಂ ಸತಿ ಕರ್ತಾರಮ್ ಆತ್ಮಾನಂ ಕೇವಲಂ ತು ಯಃ।
ಪಶ್ಯತಿ ಅಕೃತ ಬುದ್ಧಿತ್ವಾತ್ ನ ಸಃ ಪಶ್ಯತಿ ದುರ್ಮತಿಃ –ಅದು ಹೀಗಿರುವಾಗ, ಏನೂ ಮಾಡದ ತನ್ನನ್ನು ‘ಮಾಡುವವನು’ ಎಂದು [ತಾನೊಬ್ಬನೇ ಎಲ್ಲಾ ಮಾಡಿದವನು ಎಂದು] ತಿಳಿದವನು ಬುದ್ಧಿಗೇಡಿ. ಆ ತಿಳಿಗೇಡಿಗಳಿಗೆ ಏನೂ ತಿಳಿದಿಲ್ಲ.
ಈ ರೀತಿ ಐದು ಕಾರಣಗಳು ನಮ್ಮ ಕ್ರಿಯೆಯಲ್ಲಿ ಪಾತ್ರಧಾರಿಗಳಾಗಿರುವಾಗ, ಅದನ್ನು ಅರಿಯದೇ, “ನಾನು ಮಾಡಿದೆ” ಎಂದು ಅಹಂಕಾರ ಪಟ್ಟುಕೊಳ್ಳುವುದು ಅರ್ಥಶೂನ್ಯ. ಈ ರೀತಿ ತಿಳಿದುಕೊಳ್ಳುವವರು ಬುದ್ಧಿಗೇಡಿಗಳು. ಇಂತಹ ಮತಿಗೇಡಿಗಳು ಏನನ್ನೂ ತಿಳಿದಿಲ್ಲ.
ಯಸ್ಯ ನಾಹಂಕೃತೋ ಭಾವೋ ಬುದ್ಧಿರ್ಯಸ್ಯ ನ ಲಿಪ್ಯತೇ ।
ಹತ್ವಾSಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ ॥೧೭॥
ಯಸ್ಯ ನ ಅಹಂಕೃತಃ ಭಾವಃ ಬುದ್ಧಿಃ ಯಸ್ಯ ನ ಲಿಪ್ಯತೇ ।
ಹತ್ವಾ ಅಪಿ ಸ ಇಮಾನ್ ಲೋಕಾನ್ ನ ಹಂತಿ ನ ನಿಬಧ್ಯತೇ – ನಾನು ಮಾಡಿದೆ ಎಂಬ ಹಮ್ಮಿರದವನು, ಬಗೆಯಲ್ಲಿ ಫಲದ ನಂಟಿರದವನು, ಈ ಮಂದಿಯನ್ನೆಲ್ಲಾ ಕೊಂದರೂ ಯಾರನ್ನೂ ಕೊಲ್ಲುವುದಿಲ್ಲ. ಕರ್ಮದ ಸೆರೆ ಅವನನ್ನು ಸೋಕದು.
ಕರ್ಮಫಲದ ತ್ಯಾಗ ಮಾಡಿದವ ಯಾವ ಕರ್ಮ ಮಾಡಿದರೂ ಅದು ಅವನಿಗೆ ಬಾಧಕವಾಗುವುದಿಲ್ಲ. ನಾವು ‘ನನ್ನಿಂದಾಯಿತು’ ಎಂದು ಅಂಟಿಸಿಕೊಳ್ಳದೆ, ಯಾವುದೇ ಫಲಾಪೇಕ್ಷೆ ಇಲ್ಲದೆ, ಕರ್ಮ ಮಾಡಿದಾಗ-ಆ ಕರ್ಮದ ಫಲ ಎಂದೂ ನಮ್ಮನ್ನು ಬಾಧಿಸುವುದಿಲ್ಲ. ನಾವು ಮಹಾಭಾರತ ಯುದ್ಧದ ಸನ್ನಿವೇಶವನ್ನು ನೋಡಿದರೆ-ಪಾಂಡವರಿಗೆ ಯುದ್ಧ ಅನಿವಾರ್ಯವಾಗಿ ಒದಗಿಬಂದಿರುವುದು. ಅವರು ಎಂದೂ ಯುದ್ಧವಾಗಬೇಕು ಎಂದು ಬಯಸಿಲ್ಲ; ಯುದ್ಧದಲ್ಲಿ ಗೆದ್ದು ಅಧಿಕಾರ ಪಡೆಯಬೇಕು ಎಂತಲೂ ಯೋಚಿಸಿಲ್ಲ. ಆದರೆ ಅವರಿಗೆ ಅನಿವಾರ್ಯವಾಗಿ ಯುದ್ಧಮಾಡುವ ಸನ್ನಿವೇಶ ಎದುರಿಗೆ ಬಂದು ನಿಂತಿತು. ಅವರು ಅದನ್ನು 'ಇದು ದೈವೇಚ್ಛೆ' ಎಂದು ಯುದ್ಧದ ಪರಿಣಾಮದ ಬಗ್ಗೆ ಯೋಚಿಸದೆ ಭಗವದರ್ಪಣಾ ಭಾವದಿಂದ ಮಾಡಿದರು. ಈ ರೀತಿ ಒದಗಿ ಬಂದ ಯುದ್ಧದಲ್ಲಿ ಅವರು ಅನೇಕಾನೇಕ ಯೋಧರನ್ನು ಕೊಲ್ಲಬೇಕಾಯಿತು. ಆದರೆ ಅವರು ತಮ್ಮ ಕರ್ತವ್ಯ ಕರ್ಮವನ್ನು ಫಲಾಪೇಕ್ಷೆ, ಅಹಂಕಾರವಿಲ್ಲದೆ ಮಾಡಿದರು. ಈ ರೀತಿ "ನಿರ್ಲಿಪ್ತ ಮನಸ್ಸಿನಿಂದ ಯುದ್ಧ ಭೂಮಿಯಲ್ಲಿ ಅನೇಕ ಜನರನ್ನು ಕೊಲ್ಲುವ ಪ್ರಸಂಗ ಬಂದರೂ ಕೂಡಾ-ಆ ಕೊಂದ ಪಾಪ ಕೊಂದವನನ್ನು ಸೋಕುವುದಿಲ್ಲ" ಎನ್ನುತ್ತಾನೆ ಕೃಷ್ಣ. ಆದರೆ ಇಲ್ಲಿ ಬಹಳ ಮುಖ್ಯ ವಿಚಾರ ಎಂದರೆ-ಮಾನಸಿಕವಾಗಿ ಒಂದು ಕ್ಷಣವೂ ನಮಗೆ ಭಗವಂತನ ಮೇಲೆ ಅಪನಂಬಿಕೆ ಬರಕೂಡಾದು; ಸಂಪೂರ್ಣ ಅರ್ಪಣಾ ಭಾವದಲ್ಲಿ, ನಿಶ್ಚಿತಾಭಿಪ್ರಾಯದಲ್ಲಿ(Conviction) ನಮ್ಮ ಪಾಲಿಗೆ ಒದಗಿ ಬಂದಿರುವ ಕರ್ಮವನ್ನು ಫಲಾಪೇಕ್ಷೆ ಇಲ್ಲದೆ ಮಾಡಬೇಕು. ಭಗವಂತನ ಕೈಯಲ್ಲಿ ನಾನು ಒಂದು ಸಾಧನ(Instrument)ಎನ್ನುವ ಎಚ್ಚರದಿಂದ ಎಲ್ಲವನ್ನು ಭಗವಂತನ ಚರಣಗಳಿಗೆ ಅರ್ಪಿಸಿ ಕರ್ಮವನ್ನು ಮಾಡಿದಾಗ ಕರ್ಮದ ಸೆರೆ ನಮ್ಮನ್ನು ಸೋಕುವುದಿಲ್ಲ. ಜೀವನಿಗೆ ಕರ್ಮದ ಫಲ ತಟ್ಟುವುದೇ ಅವನು 'ನಾನು ಮಾಡಿದೆ' ಎಂದು ತಿಳಿದುಕೊಳ್ಳುವುದರಿಂದ.
ಇಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಜೀವನಿಗೆ ಸ್ವತಂತ್ರ ಕರ್ತೃತ್ವ ಇಲ್ಲ, ಕರ್ಮ ಭಗವದಿಚ್ಛೆಯಂತೆ ನಡೆಯುತ್ತದೆ. ಹೀಗಿರುವಾಗ ಜೀವನಿಗೆ ವಿಧಿನಿಷೇಧ ಏಕೆ? ಶಾಸ್ತ್ರ ಏಕೆ ಅದನ್ನು ಮಾಡು, ಇದನ್ನು ಮಾಡಬೇಡ ಎಂದು ಹೇಳುತ್ತದೆ? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸಿದ್ದಾನೆ.
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ ।
ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ ॥೧೮॥
ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮ ಚೋದನಾ ।
ಕರಣಂ ಕರ್ಮ ಕರ್ತಾ ಇತಿ ತ್ರಿವಿಧಃ ಕರ್ಮಸಂಗ್ರಹಃ –ಕರ್ಮ ವಿಧಿಯ ಉದ್ದೇಶ ಮೂರು: ಮಾಡಬೇಕೆಂಬ ಅರಿವು, ಅದಕ್ಕಾಗಿ ಅರಿಯಬೇಕಾದ ಕರ್ಮ,ಕರ್ಮಫಲ ಮತ್ತು ಅರಿತು ಮಾಡುವವನು. [ಕರ್ಮಕ್ಕೆ ಕಾರಣವಾದ ಭಗವಂತನ ಪ್ರೇರಣೆ ಅವನ ಸ್ವರೂಪವೇ. ಆದ್ದರಿಂದ ಮುಮ್ಮುಖವಾದ ಅದು ಅರಿವಿನ ರೂಪ, ಎಲ್ಲರೂ ಅರಿಯಬೇಕಾದಂತಹದ್ದು ಮತ್ತು ಎಲ್ಲವನ್ನೂ ಬಲ್ಲುದು] ಕರ್ಮದ ಕಾರಣವೂ ಅಡಕವಾಗಿ ಮೂರು ತೆರ: ಉಪಕರಣ, ಮಾಡುವಿಕೆ ಮತ್ತು ಮಾಡುವವನು.
ವಿಧಿನಿಷೇಧ ಇರುವುದು ನಮ್ಮ ಜ್ಞಾನಕ್ಕಾಗಿ. "ಭಗವಂತನನ್ನು 'ನಾನು' ತಿಳಿದುಕೊಳ್ಳಬೇಕು" ಎನ್ನುವುದಕ್ಕಾಗಿ ಕರ್ಮದ ವಿಧಿನಿಷೇಧ. ಕರ್ಮ ಮಾಡುವುದು ಕರ್ಮಕ್ಕಾಗಿ ಅಲ್ಲ-ಜ್ಞಾನಕ್ಕಾಗಿ. ಕರ್ಮದ ವಿಧಾನದ ಹಿಂದಿರುವುದು ಕಾರುಣ್ಯ. ಜ್ಞಾನವಿಲ್ಲದ ಲೋಕಕ್ಕೆ ಭಗವಂತನ ಜ್ಞಾನ-ಆ ಜ್ಞಾನಕ್ಕೆ ಪೂರಕವಾಗಿ ಕರ್ಮ. ಕರ್ಮದ ಹಿಂದಿರುವ ಪ್ರೇರಣೆ ಮೂರು: ಜ್ಞಾನ, ಜ್ಞೇಯ ಮತ್ತು ಜ್ಞಾತಾ. ಒಂದು ಕ್ರಿಯೆಯನ್ನು ಮಾಡಬೇಕು ಅನ್ನುವ ಅರಿವು; ಆ ಕ್ರಿಯೆಯನ್ನು ಮಾಡಲು ಅರಿಯಬೇಕಾದ ಕರ್ಮ; ಮತ್ತು ಕರ್ಮವನ್ನು ಅರಿತು ಕರ್ಮವನ್ನು ಮಾಡುವವನು. ಭಗವಂತನನ್ನು ತಿಳಿದುಕೊಳ್ಳಬೇಕು ಎನ್ನುವುದು ಕರ್ಮದ ಹಿಂದಿನ ಮೂಲಪ್ರೇರಣೆ. ಕರ್ಮ ಮಾಡುವುದು ನಮ್ಮ ತಿಳಿಗೇಡಿತನವನ್ನು ಕಳಚಿಕೊಂಡು ಜ್ಞಾನವನ್ನು ಪಡೆಯುವುದಕ್ಕೋಸ್ಕರ; ನಮ್ಮ ಅರಿವನ್ನು ಬೆಳೆಸುವುದಕ್ಕೋಸ್ಕರ; ಆ ಅರಿವು ಭಗವನ್ಮುಖವಾಗುವುದಕ್ಕೋಸ್ಕರ. ನಾವು ಅರಿವುಳ್ಳವರಾಗುವುದಕ್ಕೋಸ್ಕರವೇ ಕರ್ಮವಿಧಿನಿಷೇಧ ಶಾಸ್ತ್ರಕಾರರಿಂದ ಬಂತು.
ಜೀವನಿಗೆ ಕರ್ಮ ಮಾಡಬೇಕು ಎನ್ನುವ ಪ್ರೇರಣೆ ಮಾಡುವವ-ಭಗವಂತ. ಅದಕ್ಕನುಗುಣವಾಗಿಯೇ ಜೀವ ಕರ್ಮ ಮಾಡುತ್ತಾನೆ. ಯಾವ ಜೀವ ಏನು ಆಗಬೇಕು ಎನ್ನುವುದು ಆ ಜೀವದ ಸ್ವರೂಪಕ್ಕೆ ಸಂಬಂಧಪಟ್ಟ ವಿಚಾರ. ಆದರೆ ಸ್ವಯಂ ಜೀವನಿಗೆ ಅದನ್ನು ಅಭಿವ್ಯಕ್ತಗೊಳಿಸುವ ಶಕ್ತಿ ಇಲ್ಲ. ಭಗವಂತ ಆ ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಆತನಲ್ಲಿ ಪ್ರೇರಣೆ ಮಾಡುತ್ತಾನೆ. ಭಗವಂತನ ಪ್ರೇರಣೆಯಿಂದ ಜೀವಯೋಗ್ಯತೆ ವ್ಯಕ್ತವಾಗುತ್ತದೆ ಮತ್ತು ಅದಕ್ಕನುಗುಣವಾಗಿ ಜೀವ ಕರ್ಮದಲ್ಲಿ ತೊಡಗುತ್ತಾನೆ. ಇಲ್ಲಿ ಎಲ್ಲವೂ ಮೂಲತಃ ಭಗವದ್ ಸ್ವರೂಪ. ಭಗವಂತನ ಜ್ಞಾನ-ಭಗವದ್ ಸ್ವರೂಪ, ಭಗವಂತನ ಕ್ರಿಯೆ-ಭಗವದ್ ಸ್ವರೂಪ, ಭಗವಂತನ ಪ್ರೇರಣೆ-ಭಗವದ್ ಸ್ವರೂಪ. ಭಗವಂತನ ಸ್ವರೂಪ ನೇರ ನಮ್ಮ ಮೇಲೆ ಕೆಲಸ ಮಾಡುತ್ತಿರುತ್ತದೆ. ಅವನೇ ಜ್ಞಾನ, ಅವನೇ ಜ್ಞೇಯ, ಅವನೇ ಜ್ಞಾತೃ. ಆದ್ದರಿಂದ ಅವನ ಪ್ರೇರಣೆ-ಜ್ಞಾನಸ್ವರೂಪ; ಅವನ ಪ್ರೇರಣೆ- ಜ್ಞಾತೃಸ್ವರೂಪ; ಅವನ ಪ್ರೇರಣೆ-ಜ್ಞೇಯ. ಹೀಗೆ ಜ್ಞಾನಸ್ವರೂಪನಾದ ಭಗವಂತನ ಪ್ರೇರಣೆಯಿಂದ ಜೀವ ಕರ್ಮ ಮಾಡುತ್ತಾನೆ ಮತ್ತು ಎಲ್ಲವೂ ಅವನ ಅಧೀನವಾಗಿ ನಡೆಯುತ್ತದೆ.
ಒಟ್ಟಿನಲ್ಲಿ ಕರ್ಮದ ಕಾರಣಗಳನ್ನು ಅಡಕವಾಗಿ ಹೇಳಬೇಕೆಂದರೆ ಅವು ಮೂರು ವಿಧ: ದೇಹ ಇಂದ್ರಿಯಾದಿ ಉಪಕರಣಗಳು, ಮಾಡುವಿಕೆ(ಕರ್ಮ) ಮತ್ತು ಕರ್ತಾ(ಜೀವ,ಭಗವಂತ ಮತ್ತು ಅದೃಷ್ಟ).
ಗುಣತ್ರಯಗಳ ಬಗ್ಗೆ ಹಿಂದೆ ಸಾಕಷ್ಟು ವಿವರಗಳನ್ನು ಕೊಟ್ಟಿದ್ದ ಕೃಷ್ಣ, ಇಲ್ಲಿ ಜೀವನಕ್ಕೆ ಬಹಳ ಮುಖ್ಯವಾದ ತ್ರೈಗುಣ್ಯ ವಿದ್ಯೆಯನ್ನು ವಿವರಿಸಿದ್ದಾನೆ.
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥೧೯॥
ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧಾ ಏವ ಗುಣಭೇದತಃ ।
ಪ್ರೋಚ್ಯತೇ ಗುಣಸಂಖ್ಯಾನೇ ಯಥಾವತ್ ಶೃಣು ತಾನಿ ಅಪಿ – ಅರಿವು, ಕಾಯಕ ಮತ್ತು ಮಾಡುವಾತ ಕೂಡಾ ಗುಣಗಳ ಭೇದದಿಂದ ಮೂರು ತೆರ ಎಂದು ಗುಣಗಳ ಎಣಿಕೆಯ ಪ್ರಕರಣದಲ್ಲಿ [ವೈದಿಕ ಸಾಂಖ್ಯಾ ಶಾಸ್ತ್ರದಲ್ಲಿ] ಹೇಳಲಾಗಿದೆ. ಅವುಗಳನ್ನು ಹಾಗೆಯೇ ಆಲಿಸು.
ಪ್ರತಿಯೊಬ್ಬನ ಬದುಕಿನಲ್ಲಿರುವ ಮೂರು ಪ್ರಮುಖ ಘಟಕಗಳೆಂದರೆ ಅರಿವು(ಜ್ಞಾನ), ಕಾಯಕ(ಕರ್ಮ) ಮತ್ತು ಕರ್ತಾ(ಮಾಡುವಾತ). ಏನನ್ನೇ ಮಾಡುವುದಾದರೂ ಕೂಡಾ ಒಂದು ತಿಳುವಳಿಕೆಯಿಂದ ಮಾಡುತ್ತೇವೆ-ಅದು ಜ್ಞಾನ; ಆ ತಿಳುವಳಿಕೆಯಿಂದ ‘ಮಾಡುವುದು’-ಕರ್ಮ; ಜ್ಞಾನ ಮತ್ತು ಕರ್ಮಗಳಿಗೆ ಆಶ್ರಿತನಾಗಿರತಕ್ಕಂತವ-ಕರ್ತಾ. ಈ ಮೂರೂ ಕೂಡಾ ಗುಣತ್ರಯ ವಿಭಾಗಕ್ಕೆ ಒಳಪಟ್ಟು ಪ್ರತಿಯೊಂದೂ ಮತ್ತೆ ಮೂರು ವಿಧವಾಗಿದೆ. ಶಾಸ್ತ್ರದಲ್ಲಿ ಎಲ್ಲಿ ಗುಣಗಳ ಪರಿಗಣನೆ ಆಗುತ್ತದೋ ಅಲ್ಲಿ ಈ ವಿಷಯ ಹೇಳಿದ್ದಾರೆ ಮತ್ತು ಭಗವಂತ ಕಪಿಲವಾಸುದೇವನಾಗಿ ಜಗತ್ತಿಗೆ ಕೊಟ್ಟ ‘ಪರಮಸಾಂಖ್ಯದಲ್ಲಿ’ ಇದನ್ನು ಹೇಳಲಾಗಿದೆ. ಇದು ಕಪಿಲ ವಾಸುದೇವನಿಂದ ಮೊಟ್ಟಮೊದಲು ಹೇಳಲ್ಪಟ್ಟ, ಪುರಾತನ ಕಾಲದಿಂದಲೂ ಇದ್ದ, ಜಗತ್ತಿಗೆ ಹೇಳಬೇಕಾದ ವಿಷಯಗಳಲ್ಲೇ ಅತ್ಯಂತ ಪ್ರಕೃಷ್ಟವಾದ ವಿಷಯ. ತ್ರೈಗುಣ್ಯವಿಲ್ಲದೆ ಜೀವನವೇ ಇಲ್ಲ. ನಮ್ಮ ಬದುಕಿನ ಎಲ್ಲಾ ಮುಖದಲ್ಲೂ ವ್ಯಾಪಿಸಿರುವ ಈ ತ್ರೈಗುಣ್ಯವನ್ನು ನಾವು ಅರ್ಥಮಾಡಿಕೊಳ್ಳದಿದ್ದರೆ ನಮ್ಮ ಬದುಕನ್ನು ತಿದ್ದಿಕೊಳ್ಳಲು ಸಾಧ್ಯವಿಲ್ಲ ಮತ್ತು ತ್ರಿಗುಣಾತೀತ ಭಗವಂತನ ಕಡೆಗೆ ಸಾಗಲು ಸಾಧ್ಯವಿಲ್ಲ. “ಅತ್ಯಂತ ಪುರಾತನವಾದ ಈ ಮೂಲಭೂತ ಸತ್ಯವನ್ನು ನಾನು ನಿನಗೆ ತದ್ವತ್ತಾಗಿ ಹೇಳುತ್ತೇನೆ -ಅದನ್ನು ಗಮನವಿಟ್ಟು ಆಲಿಸು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.
ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥೨೦॥
ಸರ್ವಭೂತೇಷು ಯೇನ ಏಕಂ ಭಾವಂ ಅವ್ಯಯಮ್ ಈಕ್ಷತೇ ।
ಅವಿಭಕ್ತಂ ವಿಭಕ್ತೇಷು ತತ್ ಜ್ಞಾನಂ ವಿದ್ಧಿ ಸಾತ್ತ್ವಿಕಮ್ – ಎಲ್ಲಾ ಜೀವಿಗಳಲ್ಲಿ ಬದಲಾಗದ ಒಂದು ಪರತತ್ವವನ್ನು, ಬಗೆಬಗೆಯ ವಸ್ತುಗಳಲ್ಲಿ ಒಂದೇ ಬಗೆಯ ಭಗವಂತನನ್ನು ಕಾಣುವ ತಿಳಿವು ಸಾತ್ವಿಕ ಎಂದು ತಿಳಿ.
ಬೃಹದಾರಣ್ಯಕ ಉಪನಿಷತ್ತಿನಲ್ಲಿ(೪-೫-೧೧)ಹೇಳುವಂತೆ: “ಅಸ್ಯ ಮಹತೋ ಭೂತಸ್ಯ ನಿಶ್ವಸಿತಮ್”- ‘ಅಂದರೆ ಇಡೀ ಪ್ರಪಂಚ ಆ ಮಹಾಭೂತದ ಉಸಿರಿನ ಉದ್ಗಾರ’. ವಿಷ್ಣು ಸಹಸ್ರನಾಮದಲ್ಲಿ ಹೇಳುತ್ತಾರೆ: “ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ” ಎಂದು. ಅಂದರೆ ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ(ಮಹಾಭೂತ); ಅಲ್ಪ ಚೇತನಗಳು(ಭೂತಗಳು) ಹಲವಾರು ಎಂದು. ಗೀತೆಯ ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಅರಿವಿನ ಬಗ್ಗೆ ಹೇಳುತ್ತಾ ಹೇಳುತ್ತಾನೆ: “ಪರಸ್ಪರ ಭಿನ್ನವಾದ, ಒಂದರಂತೆ ಇನ್ನೊಂದಿಲ್ಲದ, ವಿಲಕ್ಷಣವಾದ ಜೀವಪ್ರಪಂಚದಲ್ಲಿ(ಸರ್ವಭೂತೇಷು)- ಯಾವ ಭೇದವೂ ಇಲ್ಲದೆ, ಪೂರ್ಣ ಗುಣಕ್ರಿಯೆಯಲ್ಲಿ ಅಖಂಡ ಸತ್ಯವಾಗಿರುವ ಒಂದು ತತ್ವ ನೆಲೆಸಿದೆ. ಅನಂತದಲ್ಲಿ ಏಕವಾಗಿರುವ, ತ್ರೈಗುಣ್ಯವರ್ಜಿತ ಭಗವಂತನೆಂಬ ಈ ತತ್ವ ಯಾವ ಅರಿವಿಗೆ ಗೋಚರವಾಗುತ್ತದೋ ಆ ಅರಿವು ಸಾತ್ವಿಕ” ಎಂದು.
ಪೃಥಕ್ ತ್ವೇನ ತು ಯಜ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್ ।
ವೇತ್ತಿ ಸರ್ವೇಷು ಭೂತೇಷು ತಜ್ ಜ್ಞಾನಂ ವಿದ್ಧಿ ರಾಜಸಮ್ ॥೨೧॥
ಪೃಥಕ್ ತ್ವೇನ ತು ಯತ್ ಜ್ಞಾನಂ ನಾನಾಭಾವಾನ್ ಪ್ರಥಗ್ ವಿಧಾನ್ ।
ವೇತ್ತಿ ಸರ್ವೇಷು ಭೂತೇಷು ತತ್ ಜ್ಞಾನಂ ವಿದ್ಧಿ ರಾಜಸಮ್ – ಭಗವಂತನ ಶಕ್ತಿಯಲ್ಲಿ ಅಂತರವನ್ನು ಕಾಣುವುದು, ಎಲ್ಲಾ ಜೀವಿಗಳಲ್ಲಿ ಬಗೆಬಗೆಯ ದೈವೀಶಕ್ತಿಗಳು ಬೇರೆಬೇರೆಯಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಯುವುದು[ಎಲ್ಲಾ ಜೀವಿಗಳಲ್ಲಿರುವ ಭೇದವನ್ನು ಮಾತ್ರ ಗುರುತಿಸುವ, ಒಂದರಂತೆ ಒಂದಿಲ್ಲ ಎಂದರಿಯುವ, ಆದರೆ ಭಗವತ್ ಪ್ರಜ್ಞೆಯಿರದ ಕೇವಲ ಭೌತಿಕ ನಿಜದರಿವು] ರಾಜಸ ಎಂದು ತಿಳಿ.
ಏಕಭಕ್ತಿ ಇಲ್ಲದೆ ಅನೇಕ ದೇವತಾವಾದದಲ್ಲಿ ನಂಬಿಕೆ-ರಾಜಸ ಅರಿವು. ಇವರಿಗೆ ಅಖಂಡವಾದ ಪರತತ್ವದ ಎಚ್ಚರವಿರುವುದಿಲ್ಲ. ಇವರು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ದೇವತೆಗಳನ್ನು ಪೂಜೆ ಮಾಡುತ್ತಾರೆ. ಇಂದಿನ ಜ್ಯೋತಿಷ್ಯ ಕೂಡಾ ಜನರನ್ನು ಈ ತಪ್ಪು ದಾರಿಯಲ್ಲಿ ಹೋಗುವಂತೆ ಪ್ರೇರಣೆ ಮಾಡುತ್ತಿದೆ. ಅಖಂಡವಾದ ಭಗವಂತನ ಎಚ್ಚರವಿಲ್ಲದೆ ಒಂದೊಂದು ಗ್ರಹಚಾರಕ್ಕೆ ಒಂದೊಂದು ದೇವತೆಯಪೂಜೆ ಮಾಡುವುದು ರಾಜಸ ಅರಿವು. ಯಾವ ಪೂಜೆಯೇ ಇರಲಿ ಅದನ್ನು ಸರ್ವನಿಯಾಮಕ ಭಗವಂತನ ಎಚ್ಚರದಿಂದ ಮಾಡಿದರೆ ಆ ಪೂಜೆ ಸಾತ್ವಿಕವಾಗುತ್ತದೆ. ಅದನ್ನು ಬಿಟ್ಟು ನಾನಾ ದೇವತೆಗಳನ್ನು ಬೇರೆಯಾಗಿ ಪೂಜಿಸಿದಾಗ ಅದೇ ಪೂಜೆ ರಾಜಸವಾಗುತ್ತದೆ.
ಯತ್ ತು ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ ।
ಅತತ್ತ್ವಾರ್ಥವದಲ್ಪಂ ಚ ತತ್ ತಾಮಸಮುದಾಹೃತಮ್ ॥೨೨॥
ಯತ್ ತು ಕೃತ್ಸ್ನವತ್ ಏಕಸ್ಮಿನ್ ಕಾರ್ಯೇ ಸಕ್ತಮ್ ಅಹೈತುಕಮ್ ।
ಅತತ್ತ್ವ ಅರ್ಥವತ್ ಅಲ್ಪಂ ಚ ತತ್ ತಾಮಸಮ್ ಉದಾಹೃತಮ್ –- ಯಾವುದೋ ಒಂದು ಕ್ಷುದ್ರವಾದ ಕಜ್ಜಕ್ಕೆ ಅಂಟಿಕೊಂಡು ಅದೇ ಸರ್ವಸ್ವವೆಂದು [ಬದಲಾಗದ ಜೀವವನ್ನೇ ಬದಲಾಗದ ಭಗವಂತನೆಂದು, ಇಡಿಯ ವಿಶ್ವ ಒಬ್ಬ ಜೀವನ ಕಲ್ಪನಾವಿಲಾಸ ಎಂದು] ನಂಬುವ, ಕಾರಣವಿರದ, ನಿಜವನ್ನು ಗ್ರಹಿಸದ [ವಿಶ್ವ ನಿಜವಲ್ಲ ಎಂದು ಗ್ರಹಿಸುವ] ಕ್ಷುಲ್ಲಕವಾದ ತಿಳಿವು ತಾಮಸ ಎನಿಸುತ್ತದೆ.
ತಾಮಸ ಸ್ವಭಾವಕ್ಕೆ ಅನೇಕ ಮುಖಗಳು. ಕಾಣುವುದು ಅನೇಕ-ಇರುವುದು ಏಕ ಎಂದು ತಿಳಿಯುವುದು; ಜೀವನಿಗಿಂತ ಬೇರೆಯಾದ ಭಗವಂತನನ್ನು ಒಪ್ಪದಿರುವುದು; ಈ ಪ್ರಪಂಚದಲ್ಲಿ ಯಥಾರ್ಥವಾದ ವಸ್ತುವಿಗೆ ಅಸ್ತಿತ್ವವೇ ಇಲ್ಲ ಎಂದು ತಿಳಿದುಕೊಳ್ಳುವುದು; ಅಜ್ಞಾನ-ಅದರಿಂದ ವಿಪರೀತಜ್ಞಾನ; ಅರಿವಿಲ್ಲದಿದ್ದರೂ ಕೂಡಾ ತನ್ನನ್ನು ತಾನು ಮಹಾಜ್ಞಾನಿ ಎಂದು ಭ್ರಮಿಸುವುದು; ಯಾವುದೋ ಒಂದು ವಿಷಯವನ್ನು ತಿಳಿದುಕೊಂಡು ನಾನು ಎಲ್ಲವನ್ನೂ ತಿಳಿದಿದ್ದೇನೆ ಅಂದುಕೊಳ್ಳುವುದು; ಇತ್ಯಾದಿ ತಾಮಸ ಅರಿವು ಎನಿಸುತ್ತದೆ. ನಾವು ನಮ್ಮ ಜ್ಞಾನದ ಇತಿ-ಮಿತಿಯನ್ನು ಅರಿತು ಪ್ರತೀ ಕ್ಷಣ ಅದಕ್ಕಿಂತ ಹೆಚ್ಚಿನ ಸತ್ಯವನ್ನು ತಿಳಿಯಲು ನಿರಂತರ ಪ್ರಯತ್ನ ಮಾಡಬೇಕು-ಇಲ್ಲದಿದ್ದರೆ ನಾವು ತಾಮಸರಾಗುತ್ತೇವೆ. ದ್ವೈತ ಸಿದ್ಧಾಂತ ನಮಗೆ ಸರಿಯಾಗಿ ಅರ್ಥವಾಗಬೇಕಾದರೆ ನಾವು ಅದ್ವೈತ ಮತ್ತು ವಿಶಿಷ್ಟಾದ್ವೈತವನ್ನು ಓದಿರಬೇಕು. ಹಿಂದುತ್ವ ಅರ್ಥವಾಗಬೇಕಾದರೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಏನು ಹೇಳುತ್ತದೆ ಎನ್ನುವ ಅರಿವು ನಮಗಿರಬೇಕು. ಇದನ್ನು ಬಿಟ್ಟು ನಾನು ನಂಬಿದ್ದೇ ಸತ್ಯ ಉಳಿದದ್ದೆಲ್ಲ ಮಿಥ್ಯ ಎಂದು ಗ್ರಹಿಸುವವನ ಮೂಢ ಅರಿವು ತಾಮಸವೆನಿಸುತ್ತದೆ. ಸದಾ ಸತ್ಯದ ಹುಡುಕಾಟ, ಜ್ಞಾನದ ದಾಹ- ನಮ್ಮನ್ನು ಸಾತ್ವಿಕತೆಯತ್ತ ಕೊಂಡೊಯ್ಯಬಲ್ಲದು. ಜ್ಞಾನವನ್ನು ತನ್ನ ಲೌಕಿಕ, ವ್ಯಾವಹಾರಿಕ ಬದುಕಿಗೆ ಸೀಮಿತಗೊಳಿಸಿಕೊಂಡು; ಇನ್ನೊಬ್ಬರಲ್ಲಿರುವ ಸಾತ್ವಿಕ ಜ್ಞಾನವನ್ನು ಗುರುತಿಸದೆ; ಪರಮಾತ್ಮನ ಪ್ರಜ್ಞೆ ಇಲ್ಲದ ಅನುಷ್ಠಾನದಲ್ಲಿ ಬದುಕುವಂತೆ ಮಾಡುವ ಮೂಢ ಅರಿವು ತಾಮಸ.
ನಿಯತಂ ಸಂಗರಹಿತಮರಾಗದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮುಚ್ಯತೇ ॥೨೩॥
ನಿಯತಮ್ ಸಂಗರಹಿತಮ್ ಆರಾಗ ದ್ವೇಷತಃ ಕೃತಮ್ ।
ಅಫಲಪ್ರೇಪ್ಸುನಾ ಕರ್ಮ ಯತ್ ತತ್ ಸಾತ್ತ್ವಿಕಮ್ ಉಚ್ಯತೇ – ಹಚ್ಚಿಕೊಳ್ಳದೆ, ಮೆಚ್ಚು-ಕಿಚ್ಚುಗಳಿಗೊಳಗಾಗದೆ, ಫಲದ ಹಂಬಲವಿರದೇ ಮಾಡಿದ ವಿಹಿತವಾದ ಕರ್ಮ ಸಾತ್ವಿಕ ಎನಿಸುತ್ತದೆ.
ನಮಗೆ ಪ್ರಾಪ್ತವಾಗಿರುವ ವಿಹಿತಕರ್ಮವನ್ನು ಭಗವಂತನ ಪೂಜಾರೂಪವಾಗಿ ಮಾಡಿದಾಗ ಅದು ಸಾತ್ವಿಕ ಕರ್ಮವಾಗುತ್ತದೆ. ಈ ಕರ್ಮದಲ್ಲಿ ಯಾವುದೇ ರಾಗ-ದ್ವೇಷವಿಲ್ಲ; ಫಲಾಪೇಕ್ಷೆಯಿಲ್ಲ; ಯಾವುದೇ ರೀತಿ ಅಂಟಿಸಿಕೊಳ್ಳುವಿಕೆಯಿಲ್ಲ.ಶ್ರದ್ಧಾ-ಭಕ್ತಿಯಿಂದ, ನಿರ್ಲಿಪ್ತತೆಯಿಂದ, ಕರ್ತವ್ಯವನ್ನು ನಿರ್ವಂಚನೆಯಿಂದ ಭಗವದರ್ಪಣಾಭಾವದಿಂದ ಮಾಡುವ ಕರ್ಮ ಸಾತ್ವಿಕ ಕರ್ಮ.
ಯತ್ ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।
ಕ್ರಿಯತೇ ಬಹುಲಾಯಾಸಂ ತದ್ ರಾಜಸಮುದಾಹೃತಮ್ ॥೨೪॥
ಯತ್ ತು ಕಾಮ ಈಪ್ಸುನಾ ಕರ್ಮ ಸ ಅಹಂಕಾರೇಣ ವಾ ಪುನಃ ।
ಕ್ರಿಯತೇ ಬಹುಲ ಆಯಾಸಮ್ ತತ್ ರಾಜಸಮ್ ಉದಾಹೃತಮ್ –ಫಲದ ಬಯಕೆಯಿಂದ ಅಥವಾ ಹಮ್ಮಿನಿಂದ ದೇಹವನ್ನು ಬಳಲಿಸಿ, ದಂಡಿಸಿ ಮಾಡುವ ಕರ್ಮ ರಾಜಸ ಎನಿಸುತ್ತದೆ.
ಮಾಡುವ ಕೆಲಸವೇನೋ ಒಳ್ಳೆಯ ಕೆಲಸವೆ. ಆದರೆ ಅದರ ಹಿಂದೆ ಅನೇಕ ಕಾಮನೆ, ನಾನುಮಾಡಿದೆ ಅನ್ನುವ ಅಹಂಕಾರ ಸೇರಿದಾಗ ಅದು ರಾಜಸ ಕರ್ಮವೆನಿಸುತ್ತದೆ. ನಮ್ಮ ಯಾವುದೋ ಸಮಸ್ಯೆಯ ಪರಿಹಾರಕ್ಕಾಗಿ ಕರ್ಮ ಮಾಡುವುದು, ಕರ್ಮ ಮಾಡುವಾಗ ಅನೇಕ ಫಲದ ಅಪೇಕ್ಷೆಯಿಂದ ಮಾಡುವುದು, ಮಾಡಿದ ಮೇಲೆ ‘ನಾನು ಮಾಡಿದೆ’ ಎಂದು ಅಹಂಕಾರಪಡುವುದು ರಾಜಸ ಕರ್ಮದ ಲಕ್ಷಣ. ಜೀವನಪೂರ್ತಿ ಯಾವುದೋ ಕಾಮನೆಯ ಬೆನ್ನು ಹತ್ತಿ, ನಾಳೆಯ ಸುಖವನ್ನು ಬಯಸಿ, ಇದ್ದ ಇಂದಿನ ಸುಖವನ್ನು ಮರೆತು ದೇಹವನ್ನು ಬಳಲಿಸಿ ಮಾಡುವ ಕರ್ಮ ರಾಜಸ ಕರ್ಮ.
ಅನುಬಂಧಂ ಕ್ಷಯಂ ಹಿಂಸಾಮನಪೇಕ್ಷ್ಯ ಚ ಪೌರುಷಮ್ ।
ಮೋಹಾದಾರಭ್ಯತೇ ಕರ್ಮ ಯತ್ ತತ್ ತಾಮಸಮುಚ್ಯತೇ ॥೨೫॥
ಅನುಬಂಧಂ ಕ್ಷಯಂ ಹಿಂಸಾಮ್ ಅನಪೇಕ್ಷ್ಯ ಚ ಪೌರುಷಮ್ ।
ಮೋಹಾತ್ ಆರಭ್ಯತೇ ಕರ್ಮ ಯತ್ ತತ್ ತಾಮಸಮ್ ಉಚ್ಯತೇ – ಪರಿಣಾಮ, ಪೋಲು, ತೊಂದರೆಗಳನ್ನು ಗಮನಿಸದೆ, ತನ್ನಳವನ್ನು ಮೀರಿ ತಿಳಿಗೇಡಿತನದಿಂದ ತೊಡಗುವ ಕರ್ಮ ತಾಮಸ ಎನಿಸುತ್ತದೆ.
ತನ್ನ ಯೋಗ್ಯತೆಯನ್ನು ತಿಳಿದುಕೊಳ್ಳದೆ, ಮುಂದೇನಾಗುತ್ತದೆ ಎನ್ನುವ ಯೋಚನೆಯನ್ನೂ ಮಾಡದೆ, ಫಲಾಪೇಕ್ಷೆ, ದುಡುಕು, ಅಹಂಕಾರ, ದ್ವೇಷದಿಂದ; ಭಗವಂತನನ್ನು ಮರೆತು ಮಾಡುವ ಸಮಾಜ ವಿನಾಶಕವಾದ ಕರ್ಮ ತಾಮಸ ಕರ್ಮ. ಇದಕ್ಕೆ ಉತ್ತಮ ದೃಷ್ಟಾಂತ ದುರ್ಯೋಧನ ಮಾಡಿದ ಕರ್ಮಗಳು. ಮುಂದೆ ಆಗುವ ದುರಂತದ ಬಗ್ಗೆ ಯೋಚಿಸದೆ, ಇನ್ನೊಬ್ಬರಿಗೆ ಕೆಟ್ಟದ್ದಾಗಬೇಕು ಎನ್ನುವ ಅನಿಷ್ಟ ಚಿಂತನೆಯಿಂದ ಮಾಡುವ ಕರ್ಮ ತಾಮಸ. ಒಳ್ಳೆಯ ಕರ್ಮವೂ ಕೆಟ್ಟ ಉದ್ದೇಶದಿಂದ ಮಾಡಿದಾಗ ತಾಮಸವಾಗುತ್ತದೆ.
ಜ್ಞಾನ ಮತ್ತು ಕರ್ಮದಲ್ಲಿ ತ್ರೈವಿದ್ಯದ ವಿಧವನ್ನು ಹೇಳಿದ ಕೃಷ್ಣ ಮುಂದೆ ‘ಕರ್ತಾ’ನಲ್ಲಿ ಮೂರು ವಿಧವನ್ನು ವಿವರಿಸುತ್ತಾನೆ.
ಮುಕ್ತಸಂಗೋSನಹಂವಾದೀ ಧೃತ್ಯುತ್ಸಾಹಸಮನ್ವಿತಃ ।ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥೨೬॥
ಮುಕ್ತ ಸಂಗಃ ಅನಹಂವಾದೀ ಧೃತಿ ಉತ್ಸಾಹ ಸಮನ್ವಿತಃ ।
ಸಿದ್ಧಿ ಅಸಿಧ್ಯೋಃ ನಿರ್ವಿಕಾರಃ ಕರ್ತಾ ಸಾತ್ತ್ವಿಕಃ ಉಚ್ಯತೇ -- ಹಚ್ಚಿಕೊಳ್ಳದವನು, ನಾನು ಮಾಡಿದೆ ಎಂದು ಕೊಚ್ಚಿಕೊಳ್ಳದವನು, ಹುರುಪಳಿಯದ ಗಟ್ಟಿಗ, ಗಳಿಕೆ-ಅಳಿಕೆಗಳಿಂದ ವಿಚಲಿತನಾಗದವನು ಸಾತ್ವಿಕ ಕರ್ತಾರ ಎನಿಸುತ್ತಾನೆ.
ಸಾತ್ವಿಕ ಕರ್ತಾ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಹೇಗೆ ಯಾವುದೇ ಪೂಜೆಯ ಕೊನೆಯಲ್ಲಿ ‘ಶ್ರೀ ಕೃಷ್ಣಾರ್ಪಣಮಸ್ತು’ ಎಂದು ಅರ್ಪಿಸುವ ಪದ್ಧತಿ ಇದೆಯೋ ಹಾಗೇ ಸಾತ್ವಿಕ ತನ್ನ ಜೀವನದಲ್ಲಿ ತಾನು ಮಾಡುವ ಎಲ್ಲಾ ಕರ್ಮವನ್ನು ಭಗವದ್ ಭಕ್ತಿಯಿಂದ ಭಗವದರ್ಪಣಾಭಾವದಿಂದ ಮಾಡುತ್ತಾನೆ. ಅವನಿಗೆ ‘ನಾನು ಮಾಡಿದೆ’ ಎನ್ನುವ ಅಹಂಕಾರವೇ ಇಲ್ಲ. ಯಾವುದೇ ಕೆಲಸವಿರಲಿ ಆತ ಅದನ್ನು ಅತ್ಯುತ್ಸಾಹದಿಂದ ಮಾಡುತ್ತಾನೆ. ಮಾಡಿದ ಕೆಲಸ ಕೈಗೂಡದಿದ್ದಾಗ ಆತ ಕುಸಿಯುವುದಿಲ್ಲ, ಯಶಸ್ವೀಯಾದಾಗ ಹಾರಾಡುವುದಿಲ್ಲ. ಎಲ್ಲವನ್ನು ನಿರ್ವಿಕಾರನಾಗಿ ಮಾಡುತ್ತಾನೆ. ಇದನ್ನೇ ದ್ವಾದಷಸ್ತೋತ್ರದಲ್ಲಿ ಆಚಾರ್ಯರು ಈ ರೀತಿ ಸುಂದರವಾಗಿ ಹೇಳಿದ್ದಾರೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ ||
ನಿನ್ನ ಪಾಲಿನ ಕರ್ಮ ನೀನು ಮಾಡು. ಬಂದುದನುಣ್ಣು. ಹರಿಪಾದದ ಸ್ಮರಣೆ ತಪ್ಪದಿರಲಿ-ಇದು ಸಾತ್ವಿಕನ ಜೀವನದ ಮೂಲ ಮಂತ್ರ.
ರಾಗೀ ಕರ್ಮಫಲಪ್ರೇಪ್ಸುರ್ಲುಬ್ಧೋ ಹಿಂಸಾತ್ಮಕೋSಶುಚಿಃ ।
ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥೨೭॥
ರಾಗೀ ಕರ್ಮಫಲ ಪ್ರೇಪ್ಸು ಲುಬ್ಧಃ ಹಿಂಸಾ ಆತ್ಮಕಃ ಅಶುಚಿಃ ।
ಹರ್ಷ ಶೋಕ ಅನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ – ಹಚ್ಚಿಕೊಳ್ಳುವವ, ಫಲ ದೊರೆತಾಗ ಹಿಗ್ಗುವವ, ಇರದಾಗ ಕುಗ್ಗುವವ –ಇಂತಹ ಕರ್ತಾರ ರಾಜಸ ಎನಿಸುತ್ತಾನೆ.
ರಾಜಸನಾದವನು ಒಳ್ಳೆಯ ಕೆಲಸ ಮಾಡುತ್ತಾನೆ ಆದರೆ ಅದರಲ್ಲಿ ‘ಹರ್ಷ ಶೋಕ’ ತುಂಬಿರುತ್ತದೆ. ಆತ ತನ್ನ ಕೆಲಸದಲ್ಲಿ ಯಶಸ್ವಿಯಾದಾಗ ಆಕಾಶಕ್ಕೇರುತ್ತಾನೆ, ಕೆಲಸ ಕೈಗೂಡದಾಗ ಪಾತಾಳಕ್ಕೆ ಕುಸಿಯುತ್ತಾನೆ. ಇದಕ್ಕೆ ಮೂಲ ಕಾರಣ ರಾಜಸನಾದವನು ತನ್ನ ಪ್ರತಿಯೊಂದು ಕರ್ಮವನ್ನು ಫಲಾಪೇಕ್ಷೆಯಿಂದಲೇ ಮಾಡುವುದು. ಆತ ಕರ್ಮವನ್ನು ಅಂಟಿಸಿಕೊಂಡು ಕರ್ಮಫಲದ ನಿರೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾನೆ. ಮಾಡುವ ಕಾರ್ಯದಲ್ಲಿ ಲೋಭ, ಶ್ರದ್ಧೆ ಇಲ್ಲದೇ ಮಾಡುವುದು, ಕರ್ಮ ಮಾಡುವಾಗ ಮಾನಸಿಕ ಸ್ವಚ್ಛತೆ ಇಲ್ಲದೇ ಇರುವುದು ರಾಜಸನಾದವನ ಸ್ವಭಾವ.
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಕೃತಿಕೋSಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥೨೮॥
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠಃ ನೈಕೃತಿಕಃ ಅಲಸಃ ।
ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸಃ ಉಚ್ಯತೇ – ನಡೆಗೇಡಿ, ಅಸಂಸ್ಕೃತ[ಭಗವಂತನಲ್ಲಿ ಭಕ್ತಿಯಿರದವ], ಹಿರಿಮೆಗೆ ತಲೆ ಬಾಗದವ, ಉದ್ಧಟ, ಮೋಸಗಾರ, ಸೋಮಾರಿ, ಹುರುಪಿರದವ, ಇನ್ನೊಬ್ಬರ ತಪ್ಪನ್ನೇ ಅನುಗಾಲ ಟೀಕಿಸುವವ [ಮತ್ತೆ ಮಾಡಿದರೆ ಸರಿ ಎಂದು ಕೆಲಸವನ್ನು ಸುಮ್ಮನೆ ಮುಂದೂಡುವವ]-ಇಂತಹ ಕರ್ತಾರ ತಾಮಸ ಎನಿಸುತ್ತಾನೆ.
ತಾಮಸರಲ್ಲಿ ಅನೇಕ ವಿಧ.
(೧)ಅಯುಕ್ತಃ : ಮಾಡುವ ಕೆಲಸದಲ್ಲಿ ನಂಬಿಕೆ ಶ್ರದ್ಧೆ ಇಲ್ಲದೇ ಇರುವುದು. ಕರ್ಮ ಮಾಡುವಾಗ ಕರ್ಮ ನಿಯಾಮಕನಾದ ಭಗವಂತನಲ್ಲಿ ಮನೋಯೋಗವೇ ಇಲ್ಲದಿರುವುದು.
(೨)ಪ್ರಾಕೃತಃ : ದೇವರ ಮೇಲೆ ನಂಬಿಕೆಯೇ ಇಲ್ಲದವರು. ಕೇವಲ ಪ್ರಾಕೃತ ಪ್ರಪಂಚದಲ್ಲಿ ಆಸಕ್ತಿ ಉಳ್ಳವರು.
(೩)ಸ್ತಬ್ಧಃ : ತಾನು ಮಾಡುವ ಕರ್ಮದಲ್ಲಿ ತಪ್ಪಿದ್ದರೂ ಕೂಡಾ ಅದನ್ನು ತಿದ್ದಿಕೊಳ್ಳದೇ, ತಿಳುವಳಿಕೆ ಇಲ್ಲದೇ, ತಪ್ಪು ನಂಬಿಕೆಯನ್ನೇ ಆಚರಿಸಿಕೊಂಡು ಸಾಗುವವರು.
(೪)ಶಠಃ : ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳುವ ಅಪೇಕ್ಷೆ ಇಲ್ಲದೇ ಇರುವವರು. ನಾನೇಕೆ ತಲೆ ತಗ್ಗಿಸಬೇಕು ಎನ್ನುವ ಮನೋವೃತ್ತಿ ಇರುವವರು.
(೫)ನೈಕೃತಿಕಃ : ಒಳ್ಳೆಯತನದ ವೇಷಹಾಕಿಕೊಂಡು ಬುದ್ಧಿಪೂರ್ವಕವಾಗಿ ಇನ್ನೊಬ್ಬರಿಗೆ ಮೋಸಮಾಡಿ ಲಾಭಪಡೆಯುವವರು.
(೬)ಅಲಸಃ : ಯಾವುದು ಒಳ್ಳೆಯದು ಎನ್ನುವುದು ಗೊತ್ತಿದೆ ಆದರೆ ಮಾಡಲು ಸೋಮಾರಿತನ ಇರುವವರು.
(೭)ವಿಶಾದೀ: ಒಂದು ಕ್ರಿಯೆಯನ್ನು ‘ಅಯ್ಯೋ ಮಾಡಬೇಕಲ್ಲಾ' ಎಂದು ಮಾಡುವವರು. ಮಾಡಿದ ಮೇಲೂ ಮತ್ತೆ ಬೇಸರ ವ್ಯಕ್ತಪಡಿಸುವವರು.
(೮)ದೀರ್ಘಸೂತ್ರಿ: ಮತ್ತೆ ಮಾಡಿದರಾಯ್ತು ಎಂದು ದೀರ್ಘಕಾಲ ಕೆಲಸವನ್ನು ಮುಂದೂಡುವವರು. ಇನ್ನೊಬ್ಬರ ಒಳ್ಳೆಯಗುಣವನ್ನು ಕಾಣದೇ ಅವರ ಯಾವುದೋ ಹಳೆಯ ತಪ್ಪನ್ನೇ ಎತ್ತಿ ಹೇಳುವವರು.
ಇಲ್ಲಿ ಹೇಳಿರುವ ಯಾವ ಒಂದು ಗುಣವಿದ್ದರೂ ಕೂಡಾ ಆತ ತಾಮಸನೆನಿಸುತ್ತಾನೆ. ಉದಾಹರಣೆಗೆ ಈ ಎಲ್ಲಾ ಗುಣಗಳಿದ್ದ ವ್ಯಕ್ತಿ ಮಹಾಭಾರತದ ದುರ್ಯೋಧನ.
ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು ।
ಪ್ರೋಚ್ಯಮಾನಮಶೇಷೇಣ ಪೃಥಕ್ ತ್ವೇನ ಧನಂಜಯ ॥೨೯॥
ಬುದ್ಧೇಃ ಭೇದಮ್ ಧೃತೇಃ ಚ ಏವ ಗುಣತಃ ತ್ರಿವಿಧಮ್ ಶೃಣು ।
ಪ್ರೋಚ್ಯಮಾನಮ್ ಅಶೇಷೇಣ ಪೃಥಕ್ ತ್ವೇನ ಧನಂಜಯ –– ಧನಂಜಯಾ, ಬುದ್ಧಿ ಮತ್ತು ಧೈರ್ಯ ಕೂಡಾ ಗುಣದಿಂದ ಮೂರು ಬಗೆ. ಪೂರ್ತಿಯಾಗಿ ಅದರ ಪ್ರತ್ಯೇಕ ವಿವರಣೆಯನ್ನಾಲಿಸು.
ದೇಹ ಮತ್ತು ಇಂದ್ರಿಯಗಳು ಪೂರ್ಣಪ್ರಮಾಣದಲ್ಲಿ ವಿಕಸನ ಹೊಂದಿರುವುದು ಮಾನವರಲ್ಲಿ. ಅದಕ್ಕಾಗಿ ಮಾನವ ಶರೀರವನ್ನು ‘ಪುರ’ ಎನ್ನುತ್ತಾರೆ. ಈ ದೇಹದಲ್ಲಿರುವ ಜೀವನಿಗೆ(ಪುರುಷ) ಬುದ್ಧಿ ಮತ್ತು ಧೃತಿ ಬಹಳ ಮುಖ್ಯವಾದ ಅಂಶ. ನಾವು ನಮ್ಮ ಜೀವನದಲ್ಲಿ ಹೇಡಿಗಳಾಗದೆ ಬುದ್ಧಿವಂತರಾಗಿ ಬದುಕಬೇಕು. ಈ ಬುದ್ಧಿ ಮತ್ತು ಧೃತಿಯಲ್ಲಿ ಕೂಡಾ ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ನಾವು ನಮ್ಮ ಜೀವನದಲ್ಲಿ ರಾಜಸ ಮತ್ತು ತಾಮಸವನ್ನು ಅನುಸರಿಸಬಾರದು. ಅದಕ್ಕಾಗಿ ಯಾವುದು ರಾಜಸ ಯಾವುದು ತಾಮಸ ಎನ್ನುವ ವಿಚಾರ ನಮಗೆ ತಿಳಿದಿರಬೇಕು. “ಬುದ್ಧಿ ಮತ್ತು ಧೃತಿಯಲ್ಲಿ ಮೂರು ಬಗೆಯನ್ನು ಪೂರ್ಣವಾಗಿ, ಬಿಡಿಬಿಡಿಯಾಗಿ ಹೇಳುತ್ತೇನೆ-ಅದನ್ನು ಗಮನವಿಟ್ಟು ಕೇಳು” ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ. ನಾವು ಸಾತ್ವಿಕ ಧೃತಿಯನ್ನು ಗೆದ್ದು ಧನಂಜಯರಾಗಬೇಕು ಎನ್ನುವುದು ಕೃಷ್ಣನ ಈ ಸಂದೇಶದ ಮೂಲ ಉದ್ದೇಶ.
ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥೩೦॥
ಪ್ರವೃತ್ತಿಮ್ ಚ ನಿವೃತ್ತಿಮ್ ಚ ಕಾರ್ಯ ಅಕಾರ್ಯೇ ಭಯ ಅಭಯೇ ।
ಬಂಧಂ ಮೋಕ್ಷಮ್ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ – ಪಾರ್ಥ, ಇಹದ ಧರ್ಮ-ಪರದ ಧರ್ಮ, ಮಾಡಬೇಕಾದ್ದು-ಮಾಡಬಾರದ್ದು, ಅಂಜಬೇಕಾದ್ದು- ಅಂಜಬಾರದ್ದು, ಬಂಧನದ ದಾರಿ- ಬಿಡುಗಡೆಯ ದಾರಿ ಇವನ್ನೆಲ್ಲಾ ಅರಿಯಬಲ್ಲ ಬುದ್ಧಿಯೇ ಸಾತ್ವಿಕ ಬುದ್ಧಿ.
ನಮ್ಮ ಜೀವನದಲ್ಲಿ ಮುಖ್ಯವಾಗಿ ಎದುರಾಗುವ ಸಮಸ್ಯೆ ಏನೆಂದರೆ ‘ಒಂದು ಕೆಲಸವನ್ನು ಮಾಡಬೇಕೋ ಬೇಡವೋ’ ಎನ್ನುವ ಗೊಂದಲ. ಯಾವುದನ್ನು ಹಿಡಿಯಬೇಕು, ಯಾವುದನ್ನು ಬಿಡಬೇಕು; ಯಾವುದು ಒಳ್ಳೆಯ ಕೆಲಸ, ಯಾವುದು ಕೆಟ್ಟ ಕೆಲಸ ಎನ್ನುವ ತೀರ್ಮಾನ; ನನ್ನ ಕರ್ತವ್ಯ ಯಾವುದು ಎಂದು ತಿಳಿದಿರುವುದು; ಧರ್ಮ-ಅಧರ್ಮಗಳು; ಪಾಪ-ಪುಣ್ಯಗಳು; ಭಯ-ಅಭಯ; ಬಂಧನದ ಮತ್ತು ಬಿಡುಗಡೆಯ ದಾರಿ- ಇವೆಲ್ಲವುದರ ಬಗ್ಗೆ ಖಚಿತವಾದ ನಿರ್ಧಾರ ಸಾತ್ವಿಕ ಮನಸ್ಸಿಗಿರುತ್ತದೆ. ಇದು ಸ್ವಾರ್ಥದ ಸುಳಿವೇ ಇಲ್ಲದ(ಅಪಾರ್ಥ)-ಪ್ರಜ್ಞೆ; ಜ್ಞಾನದ ಆಳಕ್ಕೆ ಇಳಿದಾಗ ಬರುವ-ಪ್ರಜ್ಞೆ; ಬುದ್ಧಿ ವಿಸ್ತಾರವಾದಾಗ(ಪಾರ್ಥ) ಬರುವ-ಪ್ರಜ್ಞೆ. ವಿಶ್ಲೇಷಣೆ ಮಾಡಿ ನಾವು ಸರಿಯಾದ ದಾರಿಯಲ್ಲಿ ಹೋಗುವಂತೆ ತೀರ್ಮಾನ ಮಾಡತಕ್ಕಂತಹ-ವಿವೇಕಪ್ರಜ್ಞೆ. ನಮಗೆ ನಮ್ಮ ಆತ್ಮಸಾಕ್ಷಿ ಎಂದೂ ಮೋಸ ಮಾಡುವುದಿಲ್ಲ. ಪ್ರತಿಯೊಬ್ಬನ ಆತ್ಮಸಾಕ್ಷಿ ಕೊಡುವ ನಿರ್ಧಾರ ಖಚಿತವಾದ ನಿರ್ಧಾರವಾಗಿರುತ್ತದೆ ಮತ್ತು ಅದು ಸಾತ್ವಿಕ.
ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ ।
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥೩೧॥
ಯಯಾ ಧರ್ಮಮ್ ಅಧರ್ಮಮ್ ಚ ಕಾರ್ಯಮ್ ಚ ಅಕಾರ್ಯಮ್ ಏವ ಚ ।
ಅಯಥಾವತ್ ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ – ಪಾರ್ಥ, ಯಾವುದು ಧರ್ಮ –ಯಾವುದು ಅಧರ್ಮ, ಯಾವುದು ಮಾಡಬೇಕಾದ್ದು –ಯಾವುದು ಮಾಡಬಾರದ್ದು ಎನ್ನುವುದನ್ನು ಸರಿಯಾಗಿ ನಿರ್ಧರಿಸಲಾಗದ ಬುದ್ಧಿ ರಾಜಸ ಬುದ್ಧಿ.
ಕೆಲವೊಮ್ಮೆ ಧರ್ಮವನ್ನೇ ಅಧರ್ಮ ಎಂದು ತಿಳಿಯುವುದು ಅಥವಾ ಅಧರ್ಮವನ್ನೇ ಧರ್ಮವೆಂದು ತಿಳಿಯುವುದು; ಇನ್ನು ಕೆಲವೊಮ್ಮೆ ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲದಲ್ಲಿ ಬೀಳುವುದು-ರಾಜಸ ಬುದ್ಧಿ. ಜೀವನದಲ್ಲಿ ಉಪಯೋಗಕ್ಕೆಬಾರದ ಈ ವಿಧವಾದ ಬುದ್ಧಿ, ಯಾವುದು ಮಾಡಬೇಕಾದದ್ದು-ಯಾವುದು ಮಾಡಬಾರದ್ದು ಎನ್ನುವುದನ್ನು ಸರಿಯಾಗಿ ನಿರ್ಧರಿಸಲಾರದು.
ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾSSವೃತಾ ।
ಸರ್ವಾರ್ಥಾನ್ ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥೩೨॥
ಅಧರ್ಮಮ್ ಧರ್ಮಮ್ ಇತಿ ಯಾ ಮನ್ಯತೇ ತಮಸಾ ಆವೃತಾ ।
ಸರ್ವ ಅರ್ಥಾನ್ ವಿಪರೀತಾನ್ ಚ ಬುದ್ಧಿಃ ಸಾ ಪಾರ್ಥ ತಾಮಸೀ –ಪಾರ್ಥ, ಅಧರ್ಮವನ್ನೇ ಧರ್ಮವೆಂದು ಗ್ರಹಿಸುವ, ಹೀಗೆ ಎಲ್ಲಾ ಸಂಗತಿಯನ್ನು ವಿಪರೀತವಾಗಿಯೇ ಗ್ರಹಿಸುವ, ಕತ್ತಲು ಕವಿದ ಬುದ್ಧಿ ತಾಮಸ ಬುದ್ಧಿ.
ಇರುವ ವಿಷಯವನ್ನು ಯಥಾವತ್ತಾಗಿ ಗ್ರಹಿಸದೆ, ವ್ಯತಿರಿಕ್ತವಾಗಿಯೇ ಗ್ರಹಿಸುವ ಬುದ್ಧಿ ತಾಮಸ. ಇವರು ದುಃಖವನ್ನು ದುಃಖವೆಂದು ಗ್ರಹಿಸದೆ ಸುಖವೆಂದು ಗ್ರಹಿಸುತ್ತಾರೆ. ಉದಾಹರಣೆಗೆ ಮದ್ಯಪಾನ ಮಾಡುವುದು ಆನಂದ ಎಂದು ಭ್ರಮಿಸಿ ಮದ್ಯಪಾನ ವ್ಯಸನಿಗಳಾಗುವುದು. ಜ್ಞಾನವನ್ನೇ ಅಜ್ಞಾನವೆಂದು ತಿಳಿದು, ತಮ್ಮ ವಿಪರೀತ ಜ್ಞಾನವನ್ನೇ ಸರ್ವಸ್ವವಾಗಿರಿಸಿಕೊಂಡು, ಇನ್ನೊಬ್ಬರ ಮಾತಿಗೆ ಕಿವಿಗೊಡದಂತೆ ಮಾಡುವ ಬುದ್ಧಿ ತಾಮಸ ಬುದ್ಧಿ.
ಯಾರಿಗೆ ಒಳ್ಳೆಯ ಬುದ್ಧಿ ಇದೆಯೋ ಅವರಿಗೆ ಧೃತಿ ಇರುತ್ತದೆ. ಅಜ್ಞಾನದಿಂದ-ಭಯ, ಅರಿವಿನಿಂದ-ಅಭಯ. ವೇದಾಂತವಿರುವುದೇ ಅಭಯಕ್ಕಾಗಿ, ಮನಸ್ಸಿಗೆ ಧೈರ್ಯ ತುಂಬಿ ಮನುಷ್ಯನನ್ನು ನಿರ್ಭಯನನ್ನಾಗಿ ಮಾಡುವುದಕ್ಕೋಸ್ಕರ.
'ಧೃತಿ' ಎನ್ನುವುದರ ಮೇಲ್ನೋಟದ ಅರ್ಥ -ಧೈರ್ಯ, ಆತ್ಮವಿಶ್ವಾಸ(Confidence), ಎದೆಗಾರಿಕೆ(courage) ಇತ್ಯಾದಿ. ಇದರ ಪೂರ್ಣ ಪ್ರಮಾಣದ ಅರ್ಥ ಇನ್ನೂ ವಿಶಾಲ. ಅಷ್ಟಾಂಗಜಪದಲ್ಲಿ(ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ ಮತ್ತು ಸಮಾಧಿ) ಹೇಳುವ ‘ಧಾರಣ’-ಧೃತಿ. ಒಂದು ವಿಷಯವನ್ನು ಗ್ರಹಿಸಿ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಧೃತಿ. ಇಂತಹ ಧೃತಿಯಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಸುಂದರ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕಾಣಬಹುದು.
ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।
ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥೩೩॥
ಧೃತ್ಯಾ ಯಯಾ ಧಾರಯತೇ ಮನಃ ಪ್ರಾಣ ಇಂದ್ರಿಯ ಕ್ರಿಯಾಃ ।
ಯೋಗೇನ ಅವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ – ಪಾರ್ಥ, ಭಕ್ತಿಯೋಗದಿಂದ ಬಗೆಗೊಂಡು ಯಾವ ಗಟ್ಟಿತನದ ಮನಸ್ಸು, ಪ್ರಾಣ ಮತ್ತು ಇಂದ್ರಿಯಗಳ ವ್ಯಾಪಾರಗಳನ್ನು ದಾರಿಗೆಡದಂತೆ ಧರಿಸಬಲ್ಲುದೋ ಅದು ಸಾತ್ವಿಕ ಧೈರ್ಯ.
ಯಾವ ಧೃತಿಯಿಂದ ಮನಸ್ಸು, ದೇಹ, ಇಂದ್ರಿಯಗಳು ದಾರಿತಪ್ಪದೆ ಒಂದಕ್ಕೊಂದು ಪೂರಕವಾಗಿ ಭಕ್ತಿಯೋಗದಲ್ಲಿ ಕೆಲಸ ಮಾಡುತ್ತೇವೆ-ಅಂತಹ ಧೃತಿ ಸಾತ್ವಿಕ ಧೃತಿ. ಮನಸ್ಸು ಯಥಾವತ್ತಾದದ್ದನ್ನು ಗ್ರಹಿಸುತ್ತದೆ, ಇಂದ್ರಿಯಗಳು ಮತ್ತು ದೇಹ ಅದಕ್ಕೆ ಪೂರಕವಾಗಿ, ಭಕ್ತಿಯಿಂದ ಕೆಲಸ ಮಾಡುತ್ತವೆ. ಇಲ್ಲಿ ಯೋಗ ಎಂದರೆ ಭಗವದ್ ಭಕ್ತಿಗೆ ಪೂರಕವಾಗಿ ವಾಸ್ತವವನ್ನು ಗ್ರಹಿಸುವ ಉಪಾಯ- ಅದೇ ನಮ್ಮ ಆತ್ಮವಿಶ್ವಾಸ. ಇದರಲ್ಲಿ ಅನೇಕ ಮುಖಗಳಿವೆ. ಉದಾಹರಣೆಗೆ ‘ತಪ್ಪನ್ನು ತಪ್ಪು ಎಂದು ಹೇಳುವ ಧೈರ್ಯ’. ಸಾಮಾನ್ಯವಾಗಿ ತಪ್ಪನ್ನು ತಪ್ಪು ಎಂದು ಹೇಳಲು ಅನೇಕ ತೊಂದರೆಗಳಿರುತ್ತವೆ. ಇದಕ್ಕೆ ಮೊದಲ ಅಡ್ಡಿ-ದಾಕ್ಷಿಣ್ಯ. ಭಗವದ್ ಭಕ್ತಿಗೆ ಪೂರಕವಾದದ್ದನ್ನು ನಾವು ನಿರ್ದಯವಾಗಿ ಹೇಳಿಬಿಡಬೇಕು. ದೈರ್ಯವಾಗಿ ತಪ್ಪನ್ನು ಪ್ರತಿಭಟಿಸಬೇಕು. ತಪ್ಪು ಗ್ರಹಿಕೆ ಮಾಡದೆ, ತಪ್ಪು ದಾರಿಯಲ್ಲಿ ಸಾಗದೆ, ಭಗವದ್ ಭಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳದೆ, ಸತ್ಯವನ್ನು ನಿಷ್ಠುರವಾಗಿ ಹೇಳುವುದು ಸಾತ್ವಿಕ ಧೃತಿ. ಮನಸ್ಸು ಕೆಟ್ಟದ್ದನ್ನು ಯೋಚಿಸದೇ ಇರುವುದು, ದೇಹ ಕೆಟ್ಟದ್ದರ ಕಡೆ ಚಲಿಸದೇ ಇರುವುದು, ಇಂದ್ರಿಯಗಳು ಕೆಟ್ಟದ್ದನ್ನು ಗ್ರಹಿಸದೇ ಇರುವುದು- ಹೀಗೆ ಭಗವದ್ ಭಕ್ತಿಗೆ ಪೂರಕವಾಗಿರುವ ಎಲ್ಲವೂ ಸಾತ್ವಿಕ ಧೃತಿ.
ಸಾಮಾನ್ಯವಾಗಿ ನಾವು ನಮ್ಮ ದೇಹ ಇಂದ್ರಿಯಗಳನ್ನು ನಿಯಂತ್ರಿಸಬಹುದು, ಆದರೆ ಮನಸ್ಸು ಕೆಟ್ಟದ್ದನ್ನು ಯೋಚಿಸದಂತೆ ನಿಯಂತ್ರಿಸುವುದು ಬಹಳ ಕಷ್ಟದ ಕೆಲಸ. ಇದನ್ನು ಸಾಧಿಸಲು ಧೀರ್ಘಕಾಲದ ಸಾಧನೆ ಅಗತ್ಯ. ಈ ಎಲ್ಲಾ ವಿಷಯಗಳು ತಿಳಿದಾಗ ನಾವು ಸಾತ್ವಿಕ ಧೃತಿಯಿಂದ ಎಷ್ಟು ದೂರದಲ್ಲಿದ್ದೇವೆ ಎನ್ನುವುದು ತಿಳಿಯುತ್ತದೆ ಮತ್ತು ನಮ್ಮನ್ನು ನಾವು ತಿದ್ದಿಕೊಂಡು ಸಾತ್ವಿಕ ಧೃತಿಯತ್ತ ಸಾಗಲು ಸಹಾಯಕವಾಗುತ್ತದೆ.
ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾ ಧಾರಯತೇSರ್ಜುನ ।
ಪ್ರಸಂಗೇನ ಫಲಾಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ ॥೩೪॥
ಯಯಾ ತು ಧರ್ಮ ಕಾಮ ಅರ್ಥಾನ್ ಧೃತ್ಯಾ ಧಾರಯತೇ ಅರ್ಜುನ ।
ಪ್ರಸಂಗೇನ ಫಲ ಆಕಾಂಕ್ಷೀ ಧೃತಿಃ ಸಾ ಪಾರ್ಥ ರಾಜಸೀ – ಪಾರ್ಥ, ಧರ್ಮ-ಕಾಮ-ಅರ್ಥಗಳನ್ನು ಓಲೈಸುವ, ಅತಿಯಾಗಿ ಹಚ್ಚಿಕೊಂಡು ಫಲದ ಆಸೆ ಹೊತ್ತ ಗಟ್ಟಿತನ ರಾಜಸ ಧೈರ್ಯ.
ತಾಯಿ ತನ್ನ ಮಗುವನ್ನು ನಿಸ್ವಾರ್ಥವಾಗಿ ಪ್ರೀತಿಸುವಂತೆ ಭಗವಂತನನ್ನು ಪ್ರೀತಿಸುವುದು ಭಕ್ತಿ. ಈ ಪ್ರೀತಿಯಲ್ಲಿ ಫಲಾಪೇಕ್ಷೆ ಸೇರಿದರೆ ಅದು ಭಕ್ತಿ ಎನಿಸದೆ ಸ್ವಾರ್ಥ ಎನಿಸುತ್ತದೆ. ರಾಜಸ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಆದಷ್ಟು ಧರ್ಮದ ಚೌಕಟ್ಟಿನಲ್ಲೇ ಕಾರ್ಯ ನಿರ್ವಹಿಸಬಹುದು. ಆದರೆ ಆತ ಹಣವನ್ನು ಗಳಿಸುವುದಕ್ಕಾಗಿ ಅಥವಾ ಅತಿಯಾದ ಮೋಹದಿಂದ ಫಲದ ಆಸೆ ಹೊತ್ತ ಗಟ್ಟಿತನ ತನ್ನದಾಗಿರಿಸಿಕೊಂಡಿರುತ್ತಾನೆ. ಇದು ರಾಜಸ ಧೃತಿ. ನಾವು ರಾಜಸ ಗುಣದ ಸ್ಪರ್ಶವಿಲ್ಲದ, ಬಿಳಿಯಾದ(ಅರ್ಜುನ)-ಶುದ್ಧಸಾತ್ವಿಕರಾಗಬೇಕು ಎನ್ನುವುದು ಕೃಷ್ಣನ ಸಂದೇಶ.
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥೩೫॥
ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮ್ ಏವ ಚ ।
ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ – ಪಾರ್ಥ, ನಿದ್ದೆ, ಅಂಜಿಕೆ, ದುಗುಡ, ನಿರುತ್ಸಾಹ, ಸೊಕ್ಕುಗಳನ್ನು ಬಿಟ್ಟಿರಲಾಗದ ತಿಳಿಗೇಡಿಯ ಗಟ್ಟಿತನವೇ ತಾಮಸ ಧೈರ್ಯ.
ಗ್ರಹಿಕೆಯಲ್ಲಿ ತಾಮಸ ಪ್ರವೃತ್ತಿ ಉಳ್ಳವ ತಿಳಿಗೇಡಿ, ಅವಿವೇಕಿ. ಆತ ಒಳ್ಳೆಯ ಗ್ರಹಿಕೆಗಳಿಗೆ ಹೋಗುವುದೇ ಇಲ್ಲ. ಒಳ್ಳೆಯ ವಿಷಯ ಚರ್ಚೆಯಾಗುವಾಗ ಈತ ನಿದ್ದೆಮಾಡುತ್ತಿರುತ್ತಾನೆ. ಈತನಿಗೆ ಯಾವಾಗಲೂ ಭಯ.[ಉದಾಹರಣೆಗೆ ಲಂಚ ತೆಗೆದುಕೊಳ್ಳುವುದು ಮತ್ತು ಅದರಿಂದಾಗಿ ಜೀವನಪೂರ್ತಿ ಭಯದಿಂದ ಬಾಳುವುದು]. ಈತನ ಜೀವನದಲ್ಲಿ ಲವಲವಿಕೆ, ಉತ್ಸಾಹ, ಗೆಲುವು ಇರುವುದಿಲ್ಲ. ತಾನು ಶ್ರೇಷ್ಠ ಉಳಿದವರು ಕನಿಷ್ಠ ಎನ್ನುವ ಅಶಾಸ್ತ್ರೀಯವಾದ ಸಂಕಲ್ಪ ತಾಮಸ ಧೃತಿ.
ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।
ಅಭ್ಯಾಸಾದ್ ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥೩೬॥
ಯತ್ ತದಗ್ರೇ ವಿಷಮಿವ ಪರಿಣಾಮೇSಮೃತೋಪಮಮ್ ।
ತತ್ ಸುಖಂ ಸಾತ್ವಿಕಂ ಪ್ರೋಕ್ತಮಾತ್ಮಬುದ್ಧಿಪ್ರಸಾದಜಮ್ ॥೩೭॥
ಸುಖಮ್ ತು ಇದಾನೀಮ್ ತ್ರಿವಿಧಮ್ ಶೃಣು ಮೇ ಭರತರ್ಷಭ ।
ಅಭ್ಯಾಸಾತ್ ರಮತೇ ಯತ್ರ ದುಃಖಾಂತಮ್ ಚ ನಿಗಚ್ಛತಿ ||
ಯತ್ ತತ್ ಅಗ್ರೇ ವಿಷಮ್ ಇವ ಪರಿಣಾಮೇ ಅಮೃತ ಉಪಮಮ್ ।
ತತ್ ಸುಖಮ್ ಸಾತ್ವಿಕಮ್ ಪ್ರೋಕ್ತಮ್ ಆತ್ಮ ಬುದ್ಧಿ ಪ್ರಸಾದಜಮ್ –– ಭರತರ್ಷಭಾ, ಈಗ ಮೂರುತೆರನಾದ ಸುಖವನ್ನು ನನ್ನಿಂದಾಲಿಸು: ಬಳಕೆಯಿಂದ ಖುಷಿಕೊಡುವಂತಹದ್ದು, ದುಃಖವನ್ನು ನೀಗಿಸುವಂತಹದ್ದು, ಮೊದಲು ವಿಷದಂತೆ ಅಪ್ರಿಯವಾಗಿ ಕೊನೆಗೆ ಅಮೃತದಂತೆ ಹಿತ ನೀಡುವಂತಹದ್ದು –ಇಂತಹ ಸುಖ-ಸಾತ್ವಿಕ. ಇದು ತನ್ನ ಬಗೆ ತಿಳಿಯಾದಾಗ, ಭಗವಂತನ ಕರುಣೆಯಿಂದ ಬರುವಂತಹದ್ದು.
ಮನುಷ್ಯ ಒಟ್ಟಾಗಿ ಜೀವನದಲ್ಲಿ ಬಯಸುವುದು ಸುಖವನ್ನು. ಆತನ ಜೀವನದ ಕೊನೆಯ ಗುರಿ ಸುಖ. ಆದರೆ ಯಾವುದು ನಿಜವಾದ ಸುಖ? ಸುಖದಲ್ಲೂ ಮೂರು ವಿಧ-ಸಾತ್ವಿಕ, ರಾಜಸ ಮತ್ತು ತಾಮಸ. “ತ್ರೈವಿದ್ಯೆಯ ವಿವರಣೆಯ ಕೊನೆಯಲ್ಲಿ ಸುಖದ ಮೂರು ವಿಧದ ವಿವರಣೆಯನ್ನು ಕೇಳು” ಎನ್ನುತ್ತಾನೆ ಕೃಷ್ಣ. ಇಲ್ಲಿ ಬಳಸಿರುವ ‘ಭರತರ್ಷಭ’ ಎನ್ನುವ ವಿಶೇಷಣದ ಹಿಂದೆ ವ್ಯಾಸರು ನಮಗೆ ಅನೇಕ ಸಂದೇಶವನ್ನು ಕೊಟ್ಟಿರುವುದನ್ನು ನಾವು ಗಮನಿಸಬೇಕು. ಭಗವಂತನ ಭಕ್ತಿಯಲ್ಲಿ-ರತ(ಶ್ರೇಷ್ಠ)ರಾದಾಗ; ಭರತನಂತೆ ಲೌಕಿಕ ಸುಖದ ಆಸೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಶ್ರೀರಾಮಚಂದ್ರನನ್ನು ಪ್ರೀತಿಸಿದಾಗ; ಭಗವಂತನ ಭಕ್ತಿಯಲ್ಲಿ ನಿರತರಾದವರಲ್ಲಿ ಶ್ರೇಷ್ಠರಾದ ವಾಯು(ಹನುಮಂತ)ದೇವರಲ್ಲಿ ಗುರುಭಕ್ತಿಯನ್ನಿಟ್ಟು, ಭಗವದರ್ಪಣಾಭಾವದಿಂದ ನಮ್ಮ ಕರ್ಮ ನಿರ್ವಹಿಸಿದಾಗ- ನಾವು ಭರತರ್ಷಭರಾಗಬಹುದು. ಭರತರ್ಷಭನಾದವನಿಗೆ ನಿಜವಾದ ಸುಖ ಎಂದರೇನು ಎಂದು ತಿಳಿದು ಅದನ್ನು ಅನುಭವಿಸಲು ಸಾಧ್ಯ.
ಯಾವುದೇ ಒಂದು ವಿಷಯ ಪ್ರಾರಂಭದಿಂದಲೇ ಸುಖವಾಗಿ ಕಾಣಿಸಿದರೆ ಅದು ಸಾತ್ವಿಕ ಸುಖವಲ್ಲ. ಕಷ್ಟಪಡದೆ ಅನಾಯಾಸವಾಗಿ ಪಡೆಯುವುದು ಮೋಹದ ಸುಖ. ಸಾತ್ವಿಕ ಸುಖ ಮೊದಲು ಕಷ್ಟ ರೂಪದಲ್ಲಿರುತ್ತದೆ. ಇದಕ್ಕೆ ಉತ್ತಮ ದೃಷ್ಟಾಂತ ಸಮುದ್ರಮಥನ. ಅಲ್ಲಿ ಮೊದಲು ಬಂದಿರುವುದು ಅಮೃತವಲ್ಲ ಬದಲಿಗೆ ವಿಷ. ನಿಜವಾದ ಅಮೃತ ಸಿಕ್ಕಿರುವುದು ಕೊನೆಯಲ್ಲಿ. ಕೈಕೆಸರಾದರೆ ಬಾಯಿ ಮೊಸರು-ಕಷ್ಟಪಟ್ಟರೆ ಸುಖ. ನಾವು ಕುಡಿಯುವ ಔಷಧ ವಿಷದಂತೆ ಕಹಿ, ಆದರೆ ಅದರಿಂದ ಬರುವ ಆರೋಗ್ಯ ಅಮೃತದಂತೆ ಸಿಹಿ.
ಕೃಷ್ಣ ಇಲ್ಲಿ “ಆತ್ಮ ಬುದ್ಧಿ ಪ್ರಸಾದಜಮ್” ಎನ್ನುವ ಒಂದು ಅಪೂರ್ವ ವಿಶೇಷಣವನ್ನು ಬಳಸಿದ್ದಾನೆ. ಆತ್ಮಪ್ರಸಾದ ಅಂದರೆ ದೇವರ ಅನುಗ್ರಹ. ಸಾತ್ವಿಕ ಸುಖ ನಾವು ಬೇಕು ಎಂದು ಬಯಸಿದಾಗ ಸಿಗುವುದಿಲ್ಲ. ಅದು ಭಗವಂತನ ಅನುಗ್ರಹದಿಂದ ಸಿಗುವಂತಹದ್ದು. ಅದನ್ನು ಪಡೆಯಲು ನಮಗೆ ಪಾರದರ್ಶಕವಾದ ಶುದ್ಧ ಮನಸ್ಸಿರಬೇಕು. ಅದು ಹೊರಗಿನಿಂದ ಬರುವುದಲ್ಲ ಬದಲಿಗೆ ಒಳಗಿನಿಂದ ಚಿಮ್ಮುವುದು. ಹೀಗೆ ಭಗವಂತನ ಅನುಗ್ರಹ ಮತ್ತು ಮನಸ್ಸಿನ ಪ್ರಸನ್ನತೆಯಿದ್ದಾಗ ಒಳಗಿನ ಸ್ವರೂಪಾನಂದದ ಸುಖವನ್ನು ಅನುಭವಿಸಲು ಸಾಧ್ಯ.
ವಿಷಯೇಂದ್ರಿಯ ಸಂಯೋಗಾದ್ ಯತ್ ತದಗ್ರೇSಮೃತೋಪಮಮ್ ।
ಪರಿಣಾಮೇ ವಿಷಮಿವ ತತ್ ಸುಖಂ ರಾಜಸಂ ಸ್ಮೃತಮ್ ॥೩೮॥
ವಿಷಯ ಇಂದ್ರಿಯ ಸಂಯೋಗಾತ್ ಯತ್ ತತ್ ಅಗ್ರೇ ಅಮೃತ ಉಪಮಮ್ ।
ಪರಿಣಾಮೇ ವಿಷಮ್ ಇವ ತತ್ ಸುಖಮ್ ರಾಜಸಮ್ ಸ್ಮೃತಮ್ -- ವಿಷಯ ಮತ್ತು ಇಂದ್ರಿಯಗಳ ನಂಟಿನಿಂದ ಉಂಟಾಗುವಂತಹದ್ದು, ಮೊದಲು ಅಮೃತದಂತೆ ರೋಚಕ, ಕಡೆಗೆ ವಿಷದಂತೆ ಅಪಾಯಕಾರಿ –ಅಂತಹ ಸುಖ ರಾಜಸ ಎನಿಸುತ್ತದೆ.
ಯಾವುದು ಮೊದಲು ಅನುಭವಿಸುವಾಗ ಬಹಳ ಸುಖವನ್ನು ಕೊಟ್ಟು ಆ ನಂತರ ಪರಿಣಾಮ ದುಃಖಕರವಾಗಿರುತ್ತದೋ ಅದು ರಾಜಸ ಸುಖ. ಇದು ಬಾಹ್ಯಸುಖ. ಇದು ಹೊರಗಿನ ವಿಷಯಗಳಿಗೂ ನಮ್ಮ ಇಂದ್ರಿಯಗಳಿಗೂ ಸಂಪರ್ಕದಿಂದ ತತ್ಕಾಲಕ್ಕೆ ಸಿಗುವ ಸುಖ. ಇಂದು ನಾವು ಕಾಣುವ ಹೆಚ್ಚಿನ ಅಪರಾಧ ಸುದ್ಧಿಗಳು ಈ ರೀತಿಯ ಕ್ಷಣಿಕ ಸುಖದ ಹಿಂದೆ ಹೋಗಿ ಆಗುವ ಪರಿಣಾಮ. ವಿಷಯ ಸುಖವನ್ನು ಅನುಭವಿಸುವುದು ತಪ್ಪಲ್ಲ, ಆದರೆ ಅನುಭವಿಸಿ ಅದನ್ನು ಮೀರಿನಿಲ್ಲುವುದು ಬಹಳ ಮುಖ್ಯ. ಹಿಂದಿನವರು ಮುಖ್ಯವಾಗಿ ಎರಡನ್ನು ಗೆಲ್ಲು ಎಂದಿದ್ದಾರೆ. ಒಂದು-ಆಹಾರದ ಚಟ ಇನ್ನೊಂದು ಲೈಂಗಿಕ ಚಪಲ. ಒಟ್ಟಿನಲ್ಲಿ ಕ್ಷಣಿಕವಾದ ಇಂದ್ರಿಯ ಸುಖವನ್ನು ಗೆಲ್ಲುವುದು ಬಹಳ ಮುಖ್ಯ.
ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ ।
ನಿದ್ರಾಲಸ್ಯಪ್ರಮಾದೋತ್ಥಂ ತತ್ ತಾಮಸಮುದಾಹೃತಮ್ ॥೩೯॥
ಯತ್ ಅಗ್ರೇ ಚ ಅನುಬಂಧೇ ಚ ಸುಖಂ ಮೋಹನಮ್ ಆತ್ಮನಃ ।
ನಿದ್ರಾ ಆಲಸ್ಯ ಪ್ರಮಾದ ಉತ್ಥಂ ತತ್ ತಾಮಸಮ್ ಉದಾಹೃತಮ್ –– ಮೊದಲೂ ಕೊನೆಗೂ ಮತ್ತು ಬರಿಸಿ ಮೈಮರೆಸುವಂತಹ ಸುಖ, ನಿದ್ದೆ-ಮೈಗಳ್ಳತನ-ಎಚ್ಚರಗೇಡಿತನಗಳಿಂದ ಸಿಗುವಂತಹ ಸುಖ-ತಾಮಸ ಎನಿಸುತ್ತದೆ.
ಮನುಷ್ಯನನ್ನು ವಾಸ್ತವ ಪ್ರಪಂಚದಿಂದ ಭ್ರಮೆಗೆ ತಳ್ಳಿ, ಅವನನ್ನು ಮೋಹದಬಲೆಯಲ್ಲಿ ಬೀಳಿಸಿ, ಬುದ್ಧಿಗೇಡಿಯನ್ನಾಗಿಸಿ, ಸಂತೋಷದ ಭ್ರಮೆ ಹುಟ್ಟಿಸುವುದು ತಾಮಸ ಸುಖ. ಇದರಲ್ಲಿ ಮೊದಲೂ ಸುಖವಿಲ್ಲ, ಕೊನೆಗೂ ಸುಖವಿಲ್ಲ. ಉದಾಹರಣೆಗೆ ಮದ್ಯಪಾನ, ಧೂಮಪಾನ ಇತ್ಯಾದಿ ಎಲ್ಲಾ ದುಶ್ಚಟಗಳು.
ಸೋಮಾರಿತನದಿಂದ ಬರುವ ಸುಖ, ನಿದ್ದೆಯಿಂದ ಬರುವ ಸುಖ, ಎಚ್ಚರಗೇಡಿತನದಿಂದ ಬರುವ ಸುಖ-ಇವು ಒಳಗಿನ ಮನಸ್ಸನ್ನು ಕೊಂದು ಪಡೆಯುವ ಬಾಹ್ಯ ಸುಖ- ಇದು ತಾಮಸ. ಉದಾಹರಣೆಗೆ ನಿದ್ದೆ. ಮನುಷ್ಯ ಮಗುವಾಗಿದ್ದಾಗ ಆತನಿಗೆ ಇಪ್ಪತ್ತು ಗಂಟೆ ನಿದ್ದೆ ಮತ್ತು ನಾಲ್ಕು ಗಂಟೆ ಎಚ್ಚರ ಅಗತ್ಯ. ಆದರೆ ಪ್ರಬುದ್ಧನಾದವನಿಗೆ ನಾಲ್ಕು ಗಂಟೆ ನಿದ್ದೆ ಸಾಕು. ಆತ ಅಭ್ಯಾಸ ಮಾಡಿದರೆ ಇಪ್ಪತ್ತು ಗಂಟೆ ಎಚ್ಚರವಾಗಿರಬಹುದು. ಆದರೆ ತಾಮಸ ಸುಖ ದಿನವಿಡೀ ನಿದ್ದೆ ಮಾಡುವುದೇ ಪರಮ ಸುಖ ಎಂದು ಭ್ರಮೆ ಹುಟ್ಟಿಸಿ ಮನುಷ್ಯನನ್ನು ದಾರಿ ತಪ್ಪಿಸುತ್ತದೆ.
ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ ತ್ರಿಭಿರ್ಗುಣೈಃ ॥೪೦॥
ನ ತತ್ ಅಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।
ಸತ್ತ್ವಂ ಪ್ರಕೃತಿಜೈಃ ಮುಕ್ತಂ ಯತ್ ಏಭಿಃ ಸ್ಯಾತ್ ತ್ರಿಭಿಃ ಗುಣೈಃ –– ಭೂಮಿಯಲ್ಲಾಗಲೀ, ಸ್ವರ್ಗದಲ್ಲಿನ ದೇವತೆಗಳಲ್ಲಾಗಲೀ, ಪ್ರಕೃತಿಯಿಂದುಟಾದ ಈ ಮೂರು ಗುಣಗಳಿಂದ ಬಿಡುಗಡೆಗೊಂಡ ಜೀವಜಾತವೆಂಬುದಿಲ್ಲ.
ತ್ರೈಗುಣ್ಯದ ಬಗ್ಗೆ ವಿವರವಾದ ಚಿತ್ರಣವನ್ನು ಕೊಟ್ಟ ನಂತರ ಕೃಷ್ಣ ಜೀವ ಸ್ವಭಾವದ ವಿವರಣೆಯನ್ನು ಕೊಡುತ್ತಾನೆ. ಈ ಭೂಮಿಯಲ್ಲಾಗಲೀ, ಅಥವಾ ಸತ್ಯಲೋಕದ ತನಕ ಯಾವುದೇ ದೇವತಾ ಲೋಕವಿರಲೀ, ಸಮಸ್ತ ಜೀವಜಾತಗಳು ಈ ಪ್ರಕೃತಿಯಿಂದ ನಿರ್ಮಿತವಾದ ತ್ರಿಗುಣಗಳ ಅಧೀನ. ಪ್ರತಿಯೊಂದು ಜೀವವೂ ಕೂಡಾ ಈ ಮೂರು ಸ್ವಭಾವಕ್ಕೆ ಒಳಪಟ್ಟಿದೆ ಮತ್ತು ಪ್ರತಿಯೊಂದು ಜೀವ ಈ ಮೂರು ಗುಣಗಳ ಕಲಬೆರಕೆ. ನೂರಕ್ಕೆ ನೂರು ಸಾತ್ವಿಕ/ರಾಜಸ/ತಾಮಸ ಯಾರೂ ಇಲ್ಲ. ಇಡೀ ಜಗತ್ತು ಮೂರರ ಮಿಶ್ರಣ.
ಜೀವ ಸ್ವಭಾವವನ್ನು ನೇರವಾಗಿ ಸಾತ್ವಿಕ-ರಾಜಸ-ತಾಮಸ ಎಂದು ಮೂರು ವಿಭಾಗ ಮಾಡಲು ಬರುವುದಿಲ್ಲ. ಇದಕ್ಕಾಗಿ ಇದನ್ನು ಚಾತುರ್ವರ್ಣ್ಯವಾಗಿ ಕೃಷ್ಣ ವಿಂಗಡಿಸಿ ಹೇಳಿದ. ಹಿಂದೆ ವಿವರಿಸಿದಂತೆ ಚಾತುರ್ವರ್ಣ್ಯ ‘ಜಾತಿವಿಭಾಗ’ ಅಲ್ಲ. ಇದು ವರ್ಣ ವಿಭಾಗ. ಭಗವದ್ಗೀತೆಯಾಗಲೀ , ವೇದವಾಗಲೀ ಜಾತಿ ವಿಭಾಗವನ್ನು ಒತ್ತುಕೊಟ್ಟು ಹೇಳುವುದಿಲ್ಲ. ಜಾತಿವಿಭಾಗ ಕೆಲವು ಧರ್ಮ ಶಾಸ್ತ್ರಗಳಲ್ಲಿ ಬಂದಿದೆಯೇ ಹೊರತು ವೇದ ಮತ್ತು ಭಗವದ್ಗೀತೆಯಲ್ಲಿ ಬಂದಿಲ್ಲ. ಜಾತಿ ಅನ್ನುವುದು ಸಮಾಜ ವ್ಯವಸ್ಥೆಗಾಗಿ ಮಾಡಿಕೊಂಡ ವಿಭಾಗ. ಆದರೆ ವರ್ಣ ಮನಃಶಾಸ್ತ್ರೀಯವಾಗಿ ಜೀವಸ್ವಭಾವವನ್ನು ಅರಿತು ಹೇಳುವಂತಾದ್ದು.
ಸ್ಥೂಲವಾಗಿ ಹೇಳಬೇಕೆಂದರೆ ದೇವತೆಗಳು-ಸಾತ್ವಿಕರು, ಮಾನವರು-ರಾಜಸರು ಮತ್ತು ದೈತ್ಯರು-ತಾಮಸರು. ಆದರೆ ಈ ವಿಭಾಗ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈ ಪ್ರತಿಯೊಂದು ವರ್ಗದಲ್ಲಿ ಮತ್ತೆ ಮೂರು ವಿಭಾಗವಿದೆ. ಉದಾಹರಣೆಗೆ ತಾಮಸ-ಸಾತ್ವಿಕರು. ಮನುಷ್ಯರಲ್ಲಿ ನರಾಧಮರು ತಾಮಸ-ಸಾತ್ವಿಕರು. ದೈತ್ಯ ಪರಿವಾರದವರು ತಾಮಸ-ರಾಜಸರು; ಅವರನ್ನು ನಿಯಂತ್ರಿಸುವ ಕಾಲನೇಮಿಯಂತಹ ದೈತ್ಯರು ತಾಮಸ-ತಾಮಸರು.
ಮಾನವರಲ್ಲಿ ರಾಜಸ-ತಾಮಸರು ನರಾಧಮರು. ರಾಜಸ-ರಾಜಸರು ಎಂದರೆ ನಿತ್ಯ ಸಂಸಾರಿಗಳು. ಅವರು ಎಂದೂ ತಮಸ್ಸಿಗಾಗಲೀ, ಮೋಕ್ಷಕ್ಕಾಗಲೀ ಹೋಗುವುದಿಲ್ಲ. ಸದಾ ಈ ಸಂಸಾರ ಚಕ್ರದಲ್ಲಿ ಸುತ್ತುತ್ತಿರುತ್ತಾರೆ. ಇನ್ನು ಮೂರನೆಯವರಾದ ರಾಜಸ-ಸಾತ್ವಿಕರು ಮೋಕ್ಷ ಯೋಗ್ಯರು. ಚಾತುರ್ವರ್ಣ್ಯ ಎನ್ನುವುದು ಈ ಮೂರನೇ ಗುಂಪಿಗೆ ಮಾತ್ರ ಸೀಮಿತವಾದದ್ದು. ಆದ್ದರಿಂದ ಮೋಕ್ಷ ಯೋಗ್ಯರಾದ ರಾಜಸ-ಸಾತ್ವಿಕರಲ್ಲಿ ನಾಲ್ಕು ವಿಧ. ಮೋಕ್ಷಯೋಗ್ಯ-ಬ್ರಾಹ್ಮಣ, ಮೋಕ್ಷಯೋಗ್ಯ- ಕ್ಷತ್ರಿಯ, ಮೋಕ್ಷಯೋಗ್ಯ-ವೈಶ್ಯ, ಮತ್ತು ಮೋಕ್ಷಯೋಗ್ಯ-ಶೂದ್ರ. ಇದು ಜೀವ ಸ್ವಭಾವದ ಮೇಲೆ ಇರುವ ನಾಲ್ಕು ವಿಭಾಗ. ಇಲ್ಲಿ ಮೇಲು-ಕೀಳು ಎನ್ನುವ ಭೇದವಿಲ್ಲ. ಎಲ್ಲರೂ ಮೋಕ್ಷ ಯೋಗ್ಯರು. ಸತ್ವ ರಜಸ್ಸು ಮತ್ತು ತಮಸ್ಸಿನ ಅನುಪಾತದಂತೆ ಮತ್ತೆ ಅನೇಕ ವಿಧವನ್ನು ಚಾತುರ್ವರ್ಣ್ಯದೊಳಗೆ ಕಾಣಬಹುದು.
(೧)ಪರಮಹಂಸರು(೯೦-ಅಂಶ ಸಾತ್ವಿಕ):ಇವರು ತಮ್ಮನ್ನು ತಾವು ಪೂರ್ಣವಾಗಿ ಭಗವಂತನಲ್ಲಿ ನೆಲೆಗೊಳಿಸಿಕೊಂಡವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ ಕೇವಲ ೧೦.
(೨)ಹಂಸರು(೮೫-ಅಂಶ ಸಾತ್ವಿಕ): ಹಂಸರು ಪರಮಹಂಸರ ನಂತರದವರು. ಇವರಲ್ಲಿ ರಾಜಸ ಮತ್ತು ತಾಮಸದ ಪ್ರಮಾಣ ೧೫-ಅಂಶ.
(೩)ಬಹೂದಕರು(೮೦-ಅಂಶ ಸಾತ್ವಿಕ): ಇವರಿಗೆ ಒಂದು ಸ್ಥಿರವಾದ ನೆಲೆ ಇಲ್ಲ. ದಿನಕ್ಕೊಂದು ಕಡೆ ಇವರ ವಾಸ. ಇವರಲ್ಲಿ ಸಾತ್ವಿಕ ಅಂಶ ೮೦ ಮತ್ತು ರಾಜಸ-ತಾಮಸ ಅಂಶ-೨೦
(೪)ಕುಟೀಚಕರು(೭೫-ಅಂಶ ಸಾತ್ವಿಕ): ಇವರು ಬಹೂದಕರಂತೆ. ಆದರೆ ಇವರು ಒಂದು ಕಡೆ ಒಂದು ಮನೆಯಲ್ಲಿ ವಾಸಿಸುವವರು. ಇವರಲ್ಲಿ ರಾಜಸ ಮತ್ತು ತಾಮಸದ ಅಂಶ-೨೫.
(೫)ವಾನಪ್ರಸ್ಥರು(೭೦-ಅಂಶ ಸಾತ್ವಿಕ):ಮನೆಯಲ್ಲಿ ಗೃಹಸ್ಥರಾಗಿದ್ದು, ನಂತರ ತಮ್ಮ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ಕಾಡಿಗೆ ಹೋಗಿ ಸಾಧನೆ ಮಾಡುವವರು. ಇವರಲ್ಲಿ ೩೦ ಅಂಶ ರಾಜಸ-ತಾಮಸವಿದ್ದರೆ ಉಳಿದ ೭೦-ಅಂಶ ಸಾತ್ವಿಕ. ಇವರಿಗೆ ಅಗ್ನಿ ಕರ್ಮವಿದೆ, ಸ್ತ್ರೀ-ಸಂಗವಿಲ್ಲ.
(೬)ಬ್ರಹ್ಮಚಾರಿಗಳು(೬೫-ಅಂಶ ಸಾತ್ವಿಕ): ಇವರಲ್ಲಿ ಶೇಕಡಾ ೩೫ ಅಂಶ ರಾಜಸ ಮತ್ತು ತಾಮಸ. ಇವರಿಗೆ ಸ್ತ್ರೀ-ಸಂಗ ನಿಷಿದ್ಧ.
(೭)ಗೃಹಸ್ಥರು: ಇವರಲ್ಲಿ ಸಾತ್ವಿಕ ಅಂಶ ೬೦, ಉಳಿದ ೪೦- ರಾಜಸ ಮತ್ತು-ತಾಮಸ ಅಂಶ. ಇವರು ಸಾಂಸಾರಿಕ ಜೀವನ ನೆಡೆಸಬಹುದು.
ಈ ಮೇಲಿನ ೭ ವಿಧ- ಬ್ರಾಹ್ಮಣ ವರ್ಗಕ್ಕೆ ಸಂಬಂಧಪಟ್ಟದ್ದು. ಒಟ್ಟಿನಲ್ಲಿ ಹೇಳಬೇಕೆಂದರೆ ಕನಿಷ್ಠ ೬೦-ಪ್ರಮಾಣ ಸಾತ್ವಿಕ-ಅಂಶ ಇರುವ ಮೋಕ್ಷಯೋಗ್ಯ ಮಾನವ ಬ್ರಾಹ್ಮಣ ಎನಿಸುತ್ತಾನೆ.
(೮)ಕ್ಷತ್ರಿಯರು(೫೫:೩೫:೧೦): ಇವರಲ್ಲಿ ಸಾತ್ವಿಕ ಅಂಶ-೫೫ ಮತ್ತು ರಾಜಸ ಅಂಶ ೩೫. ಇವರಿಗೆ ಆಡಳಿತದಲ್ಲಿ ಆಸಕ್ತಿ. ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಇವರ ಕರ್ತವ್ಯ.
(೯)ವೈಶ್ಯರು (೪೦:೪೦:೨೦): ಇವರಲ್ಲಿ ಸಾತ್ವಿಕ ಮತ್ತು ರಾಜಸ ಅಂಶ ಸಮನಾಗಿದೆ(೪೦). ಇವರಿಗೆ ಕೃಷಿ, ಹೈನುಗಾರಿಕೆ, ವ್ಯಾಪಾರದಲ್ಲಿ ಆಸಕ್ತಿ.
(೧೦)ಶೂದ್ರರು(೩೫:೩೫:೩೦): ಇವರು ಇಡೀ ಸಮಾಜದ ಅಡಿಪಾಯ. ಇವರು ಸೇವಾ ಮನೋವೃತ್ತಿ ಇರುವವರು.
ಹೀಗೆ ಸ್ವರೂಪ ಸ್ವಭಾವದಂತೆ ವರ್ಣ ವಿಂಗಡಣೆ. ಇಲ್ಲಿ ಹೇಳಿದ ಎಲ್ಲಾ ಪ್ರಮುಖ ೪ ವರ್ಣದವರು ಮೋಕ್ಷ ಯೋಗ್ಯರು. ಇವರಲ್ಲಿ ಮೇಲು ಕೀಳು ಎನ್ನುವುದಿಲ್ಲ. ಇದು ಕೇವಲ ಭಾರತಕ್ಕೆ ಮೀಸಲಾದ ವಿಂಗಡಣೆ ಅಲ್ಲ. ಈ ರೀತಿಯ ಸ್ವಭಾವ ವಿಂಗಡಣೆ ಪ್ರಪಂಚದ ಎಲ್ಲಾ ಮೂಲೆಗೂ ಅನ್ವಯ. ಭಾರತದ ತತ್ವಶಾಸ್ತ್ರ ಇದನ್ನು ಗುರುತಿಸಿ ನಮಗೆ ನೀಡಿದೆ ಅಷ್ಟೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ನೋಡುವುದಾದರೆ: ಒಂದು ಮನೆಯಲ್ಲಿ ನಾಲ್ಕು ಜನ ಅಣ್ಣ-ತಮ್ಮಂದಿರರಿದ್ದಾರೆ. ಅವರಲ್ಲಿ ಹಿರಿಯ ಮಗ ಎಲ್ಲಾ ಮನೆಮಂದಿಗೆ ಪಾಠ-ಪ್ರವಚನ ಮಾಡಿಕೊಂಡು, ವೇದಾಧ್ಯಯನ ಮಾಡಿಕೊಂಡಿದ್ದರೆ-ಆತ ಬ್ರಾಹ್ಮಣ ವರ್ಣ. ಎರಡನೇಯವ ಮನೆಯ ಯಜಮಾನಿಕೆ ನೋಡಿಕೊಂಡರೆ ಆತ-ಕ್ಷತ್ರಿಯ. ಮೂರನೆಯವ ತೋಟ, ಬೇಸಾಯ ಇತ್ಯಾದಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರೆ ಆತ-ವೈಶ್ಯ. ನಾಲ್ಕನೆಯವ ತನ್ನ ಅಣ್ಣಂದಿರರಿಗೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಆತ-ಶೂದ್ರ. ಇದು ಮನಃಶಾಸ್ತ್ರೀಯವಾದ ವರ್ಣ ಪದ್ಧತಿ. ಬ್ರಹ್ಮ-ಅಣತಿ ಬ್ರಾಹ್ಮಣಃ. ದೊಡ್ದದ್ದನ್ನು ತಿಳಿಯುವವನು, ಜ್ಞಾನ ಸಾಧಕ-ಬ್ರಾಹ್ಮಣ. ಕ್ಷತ್ರ-ತ್ರಾಣಃ –ಕ್ಷತ್ರಿಯಃ. ಯಾರಿಗಾದರೂ ಅಪಾಯವಾದಾಗ ರಕ್ಷಣೆಗೆ ಮುನ್ನುಗ್ಗುವವ ಕ್ಷತ್ರಿಯ. ವಿಶ್ ಎಂದರೆ ಸಮಾಜ. ಸಮಾಜಕ್ಕೆ ಬೇಕಾದ ಆಹಾರ ಸಲಕರಣೆ ಪೂರೈಸುವವ ವೈಶ್ಯ. ನಾನಾ ಜನಸ್ಯ ಶುಶ್ರೂಷಃ-ಶೂದ್ರಃ. ಮನುಷ್ಯನ ಮೂಲಭೂತ ಧರ್ಮವಾದ ‘ಸೇವೆ’ಯಲ್ಲಿ ನಿರತನಾದವನು ಶೂದ್ರ. ಕೃಷ್ಣ ಈ ಕುರಿತು ಕೊಡುವ ಅಪೂರ್ವ ವಿಶ್ಲೇಷಣೆಯನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥೪೧॥
ಬ್ರಾಹ್ಮಣ ಕ್ಷತ್ರಿಯ ವಿಶಾಮ್ ಶೂದ್ರಾಣಾಮ್ ಚ ಪರಂತಪ ।
ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವ ಪ್ರಭವೈಃ ಗುಣೈಃ -- ಓ ಅರಿಗಳ ಉರಿಯೇ, ಸ್ವಭಾವದಿಂದುಂಟಾದ ಗುಣಗಳಿಗೆ ಅನುಗುಣವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಕರ್ಮಗಳೂ ಬೇರೆಬೇರೆಯಾಗಿವೆ.
ಜೀವಸ್ವಭಾವಕ್ಕನುಗುಣವಾಗಿ ಮೋಕ್ಷಯೋಗ್ಯವಾದ ಮಾನವನಲ್ಲಿ ನಾಲ್ಕು ವಿಧದ ವರ್ಣಗಳಿವೆ. ಸ್ವಭಾವಕ್ಕನುಗುಣವಾಗಿ ಪ್ರತಿಯೊಬ್ಬನ ನಡೆ-ನುಡಿ, ಆಚಾರ-ವಿಚಾರ. ಸ್ವಭಾವ ಭೇದದಿಂದಾಗಿ ಗುಣ-ಕರ್ಮ ಭೇದ. ಇದು ಪೂರ್ಣವಾಗಿ ಜೀವ ಸ್ವಭಾವಕ್ಕೆ ಸಂಬಂಧಪಟ್ಟ ವಿಚಾರವಾಗಿರುವುದರಿಂದ ಇದಕ್ಕೂ ಜಾತಿಗೂ ಯಾವ ಸಂಬಂಧವೂ ಇಲ್ಲ. ಜಾತಿ ದೇಹಕ್ಕೆ ಸಂಬಂಧಪಟ್ಟದ್ದು, ವರ್ಣ ಜೀವಸ್ವರೂಪಕ್ಕೆ ಸಂಬಂಧಪಟ್ಟದ್ದು. [ಚಾತುರ್ವರ್ಣ್ಯದ ಬಗ್ಗೆ ಹೆಚ್ಚಿನ ವಿವರಣೆಯನ್ನು ಅಧ್ಯಾಯ ೦೪-ಶ್ಲೋಕ-೧೩ ರಲ್ಲಿ ವಿವರಿಸಲಾಗಿದೆ]. ಈ ನಾಲ್ಕು ವರ್ಣದವರ ಸಹಜ ಕರ್ಮದ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ ।
ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥೪೨॥
ಶಮಃ ದಮಃ ತಪಃ ಶೌಚಂ ಕ್ಷಾಂತಿ ಆರ್ಜವಮ್ ಏವ ಚ ।
ಜ್ಞಾನಂ ವಿಜ್ಞಾನಮ್ ಆಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ –– ಭಗವಂತನಲ್ಲಿ ನಿಷ್ಠೆ, ಇಂದ್ರಿಯಗಳಲ್ಲಿ ಹಿಡಿತ, ಉಪವಾಸಾದಿ ನೇಮಗಳು, ನೈರ್ಮಲ್ಯ, ಅಪಕಾರಿಯನ್ನೂ ಮನ್ನಿಸುವ ಸೈರಣೆ, ನೇರ ನಡೆ-ನುಡಿ, ತಿಳಿವು, ಆಳವಾದ ಸಂಶೋಧನಾ ದೃಷ್ಟಿ ಮತ್ತು ಆಸ್ತಿಕತೆ- ಇವು ಬ್ರಾಹ್ಮಣ ಸ್ವಭಾವದ ಸಹಜ ಕರ್ಮಗಳು.
ಜೀವಸ್ವಭಾವ ‘ಬ್ರಾಹ್ಮಣ’ ವಾಗಿದ್ದರೆ ಅವರ ಸಹಜ ಕರ್ಮಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಶ್ಲೋಕದಲ್ಲಿ ವಿವರಿಸಿದ್ದಾನೆ. ಈ ವರ್ಣದ ಸ್ವಭಾವಗಳು ಹೀಗಿವೆ:
(೧)ಶಮಃ : ಮನಸ್ಸು ಭಗವಂತನಲ್ಲಿ ನೆಲೆಗೊಂಡಿರುವುದು.
(೨)ದಮಃ : ಇಂದ್ರಿಯಗಳ ಹತೋಟಿ.
(೩)ತಪಃ : ಮಾನಸಿಕವಾಗಿ ವಿಷಯವನ್ನು ಆಳವಾಗಿ ಚಿಂತನೆ ಮಾಡುವುದು, ಮನಸ್ಸು ಒಳ್ಳೆಯದನ್ನು ಯೋಚಿಸುವುದಕ್ಕೆ ಪೂರಕವಾಗಿ ವೃತಾನುಷ್ಠಾನ, ನಿರಂತರ ಶಾಸ್ತ್ರ ಚಿಂತನೆ.
(೪)ಶೌಚಮ್ : ಮನಸ್ಸಿನ ಶುದ್ಧತೆ ಮತ್ತು ಅದಕ್ಕೆ ಪೂರಕವಾಗಿ ಬಾಹ್ಯ ಶುದ್ಧಿ.
(೫)ಕ್ಷಾಂತಿ : ತಪ್ಪು ಮಾಡಿದವರನ್ನೂ ಕ್ಷಮಿಸುವ, ಕೋಪಿಸಿಕೊಳ್ಳದ ಮನಸ್ಸು.
(೬)ಆರ್ಜವ : ಸ್ವಚ್ಛ ನಿರಾಳ ಮನಸ್ಸು, ನೇರ ನಡೆ-ನುಡಿ.
(೭)ಜ್ಞಾನ : ಭಗವದ್ ವಿಷಯಕವಾದ ಜ್ಞಾನ.
(೮)ವಿಜ್ಞಾನ : ಭಗವಂತನ ಬಗ್ಗೆ ಆಳವಾದ ಅರಿವು, ಭಗವಂತನ ಗುಣಗಳ ವಿಶಿಷ್ಠ ಜ್ಞಾನ.
(೯)ಆಸ್ತಿಕ್ಯ : ಪೂರ್ಣವಾಗಿ ಭಗವಂತನ ಅಸ್ತಿತ್ವದಲ್ಲಿ ಭರವಸೆ ಪಡೆದು ಮುಂದೆ ಸಾಗುವುದು.
ಈ ಎಲ್ಲಾ ಗುಣಗಳು ಎಲ್ಲಾ ವರ್ಣದವರಲ್ಲೂ ಇರಬೇಕು. ಆದರೆ ಹೆಚ್ಚಿನ ಪ್ರಮಾಣದಲ್ಲಿರುವುದು ಬ್ರಾಹ್ಮಣ ವರ್ಣದವರಲ್ಲಿ. ಇವುಗಳಲ್ಲಿ ಒಂದು ಗುಣದ ಪ್ರಮಾಣ ಕಡಿಮೆ ಇದ್ದರೂ ಆತ ಬ್ರಾಹ್ಮಣನೆನಿಸುವುದಿಲ್ಲ. ಒಂದು ವೇಳೆ ಕ್ಷತ್ರಿಯರಲ್ಲಿ ಈ ಗುಣಗಳ ಪ್ರಮಾಣ ಬ್ರಾಹ್ಮಣರಿಗಿಂತ ಹೆಚ್ಚಾಗಿ ಕಂಡುಬಂದರೆ ಆತ ರಾಜರ್ಷಿ ಎನಿಸುತ್ತಾನೆ. (ಉದಾಹರಣೆಗೆ ಜನಕ ಮಹಾರಾಜ)
ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।
ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ॥೪೩॥
ಶೌರ್ಯಂ ತೇಜಃ ಧೃತಿಃ ದಾಕ್ಷ್ಯಮ್ ಯುದ್ಧೇ ಚ ಅಪಿ ಅಪಲಾಯನಮ್ ।
ದಾನಮ್ ಈಶ್ವರ ಭಾವಃ ಚ ಕ್ಷಾತ್ರಮ್ ಕರ್ಮ ಸ್ವಭಾವಜಮ್ –– ಕೆಚ್ಚು, ಕಸುವು, ಗಟ್ಟಿತನ, ಕೌಶಲ, ಕಾಳಗದಲ್ಲಿ ಬೆನ್ನು ತೋರಿಸದಿರುವುದು, ಕೊಡುಗೈತನ ಮತ್ತು ಒಡೆತನ ಇವು ಕ್ಷತ್ರಿಯ ಸ್ವಭಾವದ ಸಹಜ ಕರ್ಮಗಳು.
ಕ್ಷತ್ರಿಯನಾದವನ ಸಹಜ ಕರ್ಮಗಳನ್ನು ಇಲ್ಲಿ ಕೃಷ್ಣ ವಿವರಿಸಿದ್ದಾನೆ.
(೧) ಶೌರ್ಯಮ್ : ಎದುರಾಳಿಗಳನ್ನು ಬಗ್ಗುಬಡಿಯುವ ಶಕ್ತಿ.
(೨) ತೇಜಸ್ಸು : ಎದುರಾಳಿಗಳು ನೋಡಿದಾಕ್ಷಣ ತಲೆ ತಗ್ಗಿಸುವ ತೇಜಸ್ಸು.
(೩) ಧೃತಿ : ಪ್ರಾಣಾಪಾಯ ಬಂದಾಗಲೂ ಎದೆಗೆಡದೆ ಮುನ್ನುಗ್ಗುವ ಸಾಹಸ ಪ್ರವೃತ್ತಿ
(೪) ದಕ್ಷತೆ: ಶತ್ರುಗಳನ್ನು ಮಣಿಸುವ ತಂತ್ರಗಾರಿಕೆ-ಚಾತುರ್ಯ.
(೫) ಯುದ್ಧೇ ಚ ಅಪಿ ಅಪಲಾಯನಮ್ : ಯುದ್ಧ ಭೂಮಿಯಲ್ಲಿ ಬೆನ್ನು ಹಾಕದೆ, ಪಲಾಯನ ಮಾಡದೆ ಹೋರಾಡುವ ಧೀರತನ.
(೬) ದಾನಮ್: ದಾನ ಧರ್ಮ ಮಾಡುವುದು.
ಈ ಮೇಲಿನ ಆರು ಗುಣಗಳು ಕ್ಷತ್ರಿಯನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇತರ ವರ್ಣದವರಲ್ಲಿ ಇದು ಕಡಿಮೆ ಪ್ರಮಾಣದಲ್ಲಿರುತ್ತದೆ. ಇದಲ್ಲದೆ ಕ್ಷತ್ರಿಯರಿಗೇ ಮೀಸಲಾದ ಒಂದು ವಿಶೇಷ ಗುಣ (೭) ಈಶ್ವರ ಭಾವಃ : ಅಪರಾಧಿಗೆ ಸೂಕ್ತ ಶಿಕ್ಷೆ ಕೊಡುವ ಅಧಿಕಾರ. ಬೇರೆ ವರ್ಣದವರಿಗೆ ಈ ಅಧಿಕಾರವಿಲ್ಲ.
ಕೃಷಿಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ॥೪೪॥
ಕೃಷಿ ಗೋರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯ ಅಪಿ ಸ್ವಭಾವಜಮ್ –– ಬೇಸಾಯ, ಆಕಳು ಸಾಕಣೆ ಮತ್ತು ವ್ಯಾಪಾರ ವೈಶ್ಯರ ಸ್ವಭಾವಸಹಜವಾದ ಕರ್ಮ. ಸೇವಾರೂಪವಾದ ಕಾಯಕ ಶೂದ್ರ ಸ್ವಭಾವಕ್ಕೆ ಸಹಜವಾದದ್ದು.
ವೈಶ್ಯರ ಸ್ವಭಾವಸಹಜ ಕಾಯಕ ಕೃಷಿ, ಗೋರಕ್ಷಣೆ(ಹೈನುಗಾರಿಕೆ) ಮತ್ತು ವಾಣಿಜ್ಯ. ಭೀಷ್ಮಾಚಾರ್ಯರು ಧರ್ಮರಾಯನಿಗೆ ರಾಜಧರ್ಮ ಉಪದೇಶ ಮಾಡುತ್ತಾ “ಯಾವ ದೇಶದಲ್ಲಿ ಕೃಷಿಕರು ಮತ್ತು ವಾಣಿಜ್ಯೋದ್ಯಮಿಗಳು ಕರಭಾರ ತಡೆಯಲಾಗದೆ ಬೇರೆ ದೇಶಕ್ಕೆ ಹೊರಟು ಹೋಗುತ್ತಾರೋ- ಆ ದೇಶ ಉದ್ಧಾರವಾಗದು" ಎಂದಿದ್ದಾರೆ. ಕೃಷಿ, ವಾಣಿಜ್ಯ ಮತ್ತು ಹೈನುಗಾರಿಕೆ ದೇಶದ ಬೆನ್ನೆಲುಬು. ಈ ಕಾಯಕ ವೈಶ್ಯರ ಸ್ವಭಾವಸಹಜವಾದ ಕರ್ಮ.
ಶೂದ್ರರಲ್ಲಿ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ. ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲಾ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(Majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಉದಾಹರಣೆಗೆ: ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.
ವರ್ಣದ ಬಗ್ಗೆ ಕೃಷ್ಣ ಬಹಳ ರೋಚಕವಾದ ವಿವರಣೆಯನ್ನು ಕೊಟ್ಟ. ಸಮಾಜದಲ್ಲಿ ಮತ್ತು ಕೆಲವು ಪ್ರಾಚೀನ ಗ್ರಂಥಗಳಲ್ಲಿ ವರ್ಣವನ್ನು ಜಾತಿ ಎನ್ನುವ ಶಬ್ದದಿಂದ ಮತ್ತು ಜಾತಿಯನ್ನು ವರ್ಣ ಎನ್ನುವ ಶಬ್ದದಿಂದ ಬಳಸಿರುವುದನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ನಾವು ಗೊಂದಲ ಮಾಡಿಕೊಳ್ಳದೆ, ಅಲ್ಲಲ್ಲಿ ಯಾವ ಅರ್ಥದಲ್ಲಿ ಹೇಳಲಾಗಿದೆ ಎನ್ನುವುದನ್ನು ತಿಳಿದು, ಅದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ “ವರ್ಣ ಪದ್ಧತಿಯನ್ನು ನನ್ನ ಆಡಳಿತದಲ್ಲಿ ನಾನು ಹೇಗೆ ಪಾಲಿಸಬೇಕು” ಎಂದು ಪ್ರಶ್ನೆ ಮಾಡಿದ ಧರ್ಮರಾಯನಿಗೆ ಭೀಷ್ಮಾಚಾರ್ಯರು ಹೇಳುತ್ತಾರೆ: “ವರ್ಣ ವಿಭಾಗವೇ ಇಲ್ಲ, ಎಲ್ಲರೂ ದೇವರ ಮಕ್ಕಳು, ರಾಜನಾದವನಿಗೆ ವರ್ಣಭೇದ ಮಾಡುವ ಅಧಿಕಾರವಿಲ್ಲ” ಎಂದು. ಇಲ್ಲಿ ವರ್ಣ ಎನ್ನುವುದು ಜಾತಿ ಎನ್ನುವ ಅರ್ಥದಲ್ಲಿ ಬಳಕೆಯಾಗಿದೆ.
ಸಾಮಾನ್ಯವಾಗಿ ಸಮಾಜದಲ್ಲಿ ತಂದೆ/ತಾಯಿಯ ಸ್ವಭಾವ ಯಾವುದಿರುತ್ತದೋ ಅದೇ ಸ್ವಭಾವವನ್ನು ಮಕ್ಕಳು ಅನುಸರಿಸುತ್ತಾರೆ. ಉದಾಹರಣೆಗೆ: ಒಬ್ಬ ಬ್ರಾಹ್ಮಣನ ಮಗ, ಅವನಿಗೆ ಬ್ರಾಹ್ಮಣ ಸ್ವಭಾವವನ್ನು ಅನುಸರಿಸುವುದು ಸುಲಭವಾಗುತ್ತದೆ. ಆತ ಅದನ್ನೇ ಅನುಸರಿಸಿಕೊಂಡು ಬೆಳೆಯುತ್ತಾನೆ. ಹೀಗಾದಾಗ ನಿಜವಾದ ವರ್ಣವನ್ನು ಗುರುತಿಸುವುದು ಕಷ್ಟವಾಗುತ್ತದೆ. ಹೀಗೆ ವರ್ಣವನ್ನು ಗುರುತಿಸಲು ಕಷ್ಟವಾದಾಗ ಬಂದ ಪದ್ಧತಿ ಜಾತಿಪದ್ಧತಿ. ಜಾತಿ ಬೇರೆ ವರ್ಣ ಬೇರೆ ಎನ್ನುವುದಕ್ಕೆ ಉತ್ತಮ ಉದಾಹರಣೆ- ಒಬ್ಬ ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು. ಅವರು ಮಹಾಬ್ರಾಹ್ಮಣ ಎನ್ನುವುದನ್ನು ಪ್ರಪಂಚವೇ ಒಪ್ಪಿದೆ.
ಇಂದು ಸಮಾಜದಲ್ಲಿ ಜೀವ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾದ ಕರ್ಮವನ್ನು ಮಾಡುವ ಪದ್ಧತಿ ಇಲ್ಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ತಂದೆ-ತಾಯಿ ತಮ್ಮ ಇಷ್ಟವನ್ನು ತಮ್ಮ ಮಕ್ಕಳ ಮೇಲೆ ಹೇರುತ್ತಿದ್ದಾರೆ. ಇದು ತೀರಾ ಅವೈಜ್ಞಾನಿಕ ಪದ್ಧತಿ. ಮಕ್ಕಳಲ್ಲಿ ಹುದುಗಿರುವ ನಿಜವಾದ ಪ್ರತಿಭೆಯನ್ನು ಗುರುತಿಸದೆ, ತಾವು ಹೇಳಿದ ವಿಷಯವನ್ನು ಮಕ್ಕಳು ಕಲಿಯಬೇಕು ಎನ್ನುವುದು ವರ್ಣಪದ್ಧತಿಗೆ ವಿರುದ್ಧವಾದ ಸಂಪ್ರದಾಯ. ಅವರವರ ಜೀವ ಸ್ವಭಾವ ಏನೋ ಅದಕ್ಕನುಗುಣವಾಗಿ ಅವರು ಕಲಿಯಬೇಕು. ಆಗ ಅವರು ಆ ವಿಷಯದಲ್ಲಿ ಪರಿಣತರಾಗುತ್ತಾರೆ ಮತ್ತು ಸಮಾಜಕ್ಕೆ ಅವರಿಂದ ಉಪಯೋಗವಾಗುತ್ತದೆ.
ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು ॥೪೫॥
ಸ್ವೇ ಸ್ವೇ ಕರ್ಮಣಿ ಅಭಿರತಃ ಸಂಸಿದ್ಧಿಂ ಲಭತೇ ನರಃ ।
ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತತ್ ಶೃಣು –- ತನ್ನತನ್ನ ಸಹಜ ಕರ್ಮದಲ್ಲಿ ನಿರತನಾದ ಮನುಷ್ಯ ಸಿದ್ಧಿಯನ್ನು ಪಡೆಯುತ್ತಾನೆ. ತನ್ನದಾದ ಕರ್ಮದಲ್ಲಿ ತೊಡಗಿದವನು ಹೇಗೆ ಸಿದ್ಧಿ ಪಡೆಯುತ್ತಾನೆ ಆ ಬಗೆಯನ್ನು ಕೇಳು.
ಅವರವರ ಸ್ವಭಾವಕ್ಕೆ ಅನುಗುಣವಾದ ಕರ್ಮವನ್ನು ಕೃಷ್ಣ ‘ಸ್ವಕರ್ಮ’ ಎಂದು ಕರೆದಿದ್ದಾನೆ. ‘ನಿನ್ನ ಕರ್ಮ ನೀನು ಮಾಡು’ ಎಂದರೆ ನಿನ್ನ ಸ್ವಭಾವಕ್ಕೆ ಒಗ್ಗುವ ಕರ್ಮವನ್ನು ನೀನು ಮಾಡು ಎಂದರ್ಥ. ಪ್ರಾಮಾಣಿಕತೆ ಮತ್ತು ಸ್ವಕರ್ಮನಿಷ್ಠೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. ತನ್ನ ಸ್ವಭಾವಕ್ಕೆ ಸಹಜವಾದ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ಮಾಡುತ್ತಾ ಪ್ರಾಮಾಣಿಕವಾಗಿ ಬದುಕುವುದೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ.
ನಮ್ಮಲ್ಲಿ ಕೆಲವರು ಕೇಳಬಹುದು: “ಯಾವ ಕೆಲಸವಾದರೇನು, ಯಾವುದರಿಂದ ಹೆಚ್ಚು ಹಣ ಸಂಪಾದನೆ ಸಾಧ್ಯವೋ ಆ ಕೆಲಸವನ್ನು ಮಾಡುವುದರಲ್ಲಿ ತಪ್ಪೇನು” ಎಂದು. ಇಲ್ಲಿ ಕೃಷ್ಣ ಅದು ತಪ್ಪು ಎಂದಿದ್ದಾನೆ. ಯಾವುದೋ ಒಂದು ಕೆಲಸ ಮಾಡುವುದು ಬದುಕಲ್ಲ, ಅದು ಯಾತನೆ. ನಿನ್ನನಿನ್ನ ಸ್ವಭಾವಸಹಜವಾದ ಕರ್ಮದಲ್ಲಿ ನೀನು ಬದುಕಿದರೆ ಅದು ಬದುಕು. ಅದೇ ಮೋಕ್ಷ ಮಾರ್ಗ. ನಿನ್ನ ಸ್ವಭಾವಕ್ಕೆ ತಕ್ಕಂತೆ ನಿನ್ನ ಶಿಕ್ಷಣ; ನಿನ್ನ ಶಿಕ್ಷಣಕ್ಕೆ ತಕ್ಕಂತೆ ನಿನ್ನ ಕರ್ಮ. ಹೀಗೆ ಮಾಡಿದಾಗ ಕರ್ಮದಲ್ಲಿ ಅಭಿರತಿ(ಸಂಪೂರ್ಣ ತೃಪ್ತಿ ಮತ್ತು ಸಂತೋಷ) ಇರುತ್ತದೆ. ಈ ರೀತಿ ಖುಷಿಯಿಂದ ಭಗವದರ್ಪಣೆಯಾಗಿ ಕರ್ಮ ಮಾಡಿದಾಗ, ಬದುಕಿನ ಕೊನೆಯ ಸಿದ್ಧಿಯಾದ ಮೋಕ್ಷವನ್ನು ಪಡೆಯಬಹುದು. ಸ್ವಭಾವ ಸಹಜವಾದ ಕರ್ಮದಿಂದ ಹೇಗೆ ಸಿದ್ಧಿಯಾಗುತ್ತದೆ ಎನ್ನುವುದನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ।
ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥೪೬॥
ಯತಃ ಪ್ರವೃತ್ತಿಃ ರ್ಭೂತಾನಾಂ ಯೇನ ಸರ್ವಮ್ ಇದಂ ತತಮ್ ।
ಸ್ವಕರ್ಮಣಾ ತಮ್ ಅಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ -- ಯಾರಿಂದ ಜೀವಿಗಳ ಚಟುವಟಿಕೆಯೋ, ಯಾರು ಈ ಎಲ್ಲವನ್ನು ತುಂಬಿನಿಂತಿರುವನೋ ಅಂತಹ ಭಗವಂತನನ್ನು ಮನುಷ್ಯ ಸ್ವಭಾವಸಹಜವಾದ ಕರ್ಮದಿಂದ ಆರಾಧಿಸಿ ಸಿದ್ಧಿ ಪಡೆಯುತ್ತಾನೆ.
ನಮ್ಮ ಸ್ವಭಾವ ಸಹಜ ಕರ್ಮವನ್ನು ಭಗವಂತನ ಅಭ್ಯರ್ಚನೆಯಾಗಿ ಮಾಡಿದಾಗ ಅದು ಅಧ್ಯಾತ್ಮವಾಗುತ್ತದೆ. ಇದಕ್ಕಿಂತ ಮಹತ್ತಾದ ಪೂಜೆ ಇನ್ನೊಂದಿಲ್ಲ. ಇಲ್ಲಿ ಅರ್ಚನೆ ಎಂದರೆ ಪುರೋಹಿತರ ಮುಖೇನ ದೇವಸ್ಥಾನದಲ್ಲಿ ಮಾಡುವ ಅರ್ಚನೆ ಅಲ್ಲ. ಇದು ಇಂದ್ರಿಯ ನಿಗ್ರಹ, ಶಮಃ, ದಮಃ ಎಲ್ಲವೂ ಸೇರಿ ಸ್ವಯಂ ಮಾಡತಕ್ಕ ಅರ್ಚನೆ. ಆದ್ದರಿಂದ ನಾವು ಮಾಡುವ ಸ್ವಭಾವ ಸಹಜ ಕರ್ಮದಲ್ಲಿ ನಮ್ಮ ಇಂದ್ರಿಯ ನಿಗ್ರಹ ಸೇರಿದೆ, ಭಗವನ್ನಿಷ್ಠೆ ಸೇರಿದೆ, ಭಗವದರ್ಪಣಾ ಬುದ್ಧಿ ಸೇರಿದೆ. ಇವೆಲ್ಲವೂ ಸೇರಿ ನಾವು ಮಾಡತಕ್ಕ ಪ್ರತಿಯೊಂದು ಸ್ವಕರ್ಮ/ಸಹಜಕರ್ಮ ಭಗವಂತನ ಪೂಜೆಯಾಗುತ್ತದೆ. ಈ ರೀತಿ ಬದುಕಿದಾಗ ನಮ್ಮ ಇಡೀ ಬದುಕು ದೇವರ ಪೂಜೆಯಾಗುತ್ತದೆ. ನಮಗೆ ಇಚ್ಛೆ ಮತ್ತು ಪ್ರವೃತ್ತಿಯನ್ನು ಕೊಟ್ಟ ಭಗವಂತನಿಗೆ ನಮ್ಮ ಕರ್ಮವನ್ನು ಅರ್ಪಿಸಿದಾಗ ನಮ್ಮ ಕರ್ಮವೇ ಒಂದು ಅರ್ಚನೆಯಾಗುತ್ತದೆ.
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಭಾವನಿಯತಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್ ॥೪೭॥
ಶ್ರೇಯಾನ್ ಸ್ವಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್ ।
ಸ್ವಭಾವ ನಿಯತಂ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ –- ಚೆನ್ನಾಗಿ ಆಚರಿಸಿದ ಪರಧರ್ಮಕ್ಕಿಂತ ಆಚರಣೆಯಲ್ಲಿ ಕೊರತೆಯಿದ್ದರೂ ತನ್ನ ಸಹಜಧರ್ಮ ಮಿಗಿಲು. ತನ್ನ ಸ್ವಭಾವಕ್ಕೆ ತಕ್ಕುದಾದ ಕರ್ಮ ಮಾಡಿದರೆ ಪಾಪ ತಟ್ಟುವುದಿಲ್ಲ.
ನಮ್ಮ ಸ್ವಭಾವಕ್ಕೆ ಸಹಜವಾದ ಸ್ವಧರ್ಮ ಮಾಡುವುದರಿಂದ, ಆ ಕರ್ಮದಲ್ಲಿ ದೋಷವಿದ್ದರೂ ಕೂಡಾ ಅದರಿಂದ ಪಾಪ ತಟ್ಟುವುದಿಲ್ಲ. ಇದನ್ನು ಬಿಟ್ಟು ಪರಧರ್ಮ ಮಾಡುವುದು ಯುಕ್ತವಲ್ಲ. ವೇದವ್ಯಾಸರು ಯುದ್ಧಾನಂತರ ತಾನು ಸಿಂಹಾಸನವೇರಲಾರೆ, ನನಗೇನೂ ಬೇಡ, ನಾನು ಕಾಡಿಗೆ ಹೋಗುತ್ತೇನೆ ಎಂದು ಕುಳಿತ ಧರ್ಮರಾಯನಿಗೆ- “ನೀನು ನಿನ್ನ ಸಹಜ ಧರ್ಮವನ್ನು ಬಿಟ್ಟು ಕಾಡಿಗೆ ಹೋಗುವುದು ಎಷ್ಟು ಅಸಂಗತವೋ, ಅಷ್ಟೇ ಅಸಂಗತ ನಾನು ತಪಸ್ಸನ್ನು ಬಿಟ್ಟು ಬಂದು ರಾಜ್ಯಭಾರ ಮಾಡುವುದು” ಎಂದು ಬುದ್ಧಿವಾದ ಹೇಳುತ್ತಾರೆ. ಇದರಿಂದ ನಾವು ತಿಳಿಯಬೇಕಾದದ್ದು ಏನೆಂದರೆ -ನಾವು ಪರಧರ್ಮ ಮಾಡುವುದಕ್ಕಿಂತ-ದೋಷವಿದ್ದರೂ ಸರಿ, ನಮ್ಮ ಸಹಜ ಕರ್ಮ ಮಾಡುವುದೇ ಅತ್ಯಂತ ಶ್ರೇಷ್ಠ ಧರ್ಮ.
ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾऽವೃತಾಃ ॥೪೮॥
ಸಹಜಂ ಕರ್ಮ ಕೌಂತೇಯ ಸದೋಷಮ್ ಅಪಿ ನ ತ್ಯಜೇತ್ ।
ಸರ್ವಾರಂಭಾಃ ಹಿ ದೋಷೇಣ ಧೂಮೇನ ಅಗ್ನಿಃ ಇವ ಆವೃತಾಃ –- ಕೌಂತೇಯಾ, ಸಹಜವಾದ ಕರ್ಮವನ್ನು ದೋಷವಿದ್ದರೂ ಬಿಡಬಾರದು. ಎಲ್ಲಾ ಕರ್ಮಗಳಲ್ಲು ದೋಷವಿದ್ದೇ ಇದೆ. ಬೆಂಕಿಯಿದ್ದಲ್ಲಿ ಹೊಗೆ ಇರುವಂತೆ.
ನಾವು ನಮ್ಮ ಸ್ವಭಾವಕ್ಕೆ ಮತ್ತು ಪರಿಸ್ಥಿತಿಗೆ ಸಹಜವಾದ ಕರ್ಮದಲ್ಲಿ ಎಷ್ಟೇ ದೋಷವಿದ್ದರೂ ಸಹ ಆ ಕರ್ಮವನ್ನು ಬಿಡಬಾರದು. ಇಲ್ಲಿ ಪಾಂಡವರ ಸಹಜ ಧರ್ಮ ಅನ್ಯಾಯದ ವಿರುದ್ಧ ಹೋರಾಡುವುದು. ಹೀಗೆ ಹೋರಾಡುವಾಗ ಸಾವು ನೋವು ಉಂಟಾಗಬಹುದು. ಆದರೆ ಅದು ಪಾಪವಲ್ಲ. ಈ ಪ್ರಪಂಚದಲ್ಲಿ ದೋಷವಿಲ್ಲದ ಒಂದೂ ಕರ್ಮವಿಲ್ಲ. ಬೆಂಕಿ ಇದ್ದಲ್ಲಿ ಹೊಗೆ ಇದ್ದೇ ಇರುತ್ತದೆ. ಕರ್ಮದಲ್ಲಿ ಹಿಂಸೆ ಇರಬಹುದು, ಆದರೆ ಅದು ಸಹಜ ಧರ್ಮವಾದಾಗ ಅದನ್ನು ಕೈಬಿಡಲಾಗದು. ಸಹಜ ಧರ್ಮದಲ್ಲಿ ಹಿಂಸೆ ಅನಿವಾರ್ಯವಾದಾಗ ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಪಾಲಿಗೆ ಒದಗಿ ಬರುವ ಕರ್ಮವನ್ನು ಭಗವದರ್ಪಣಾ ಬುದ್ಧಿಯಿಂದ ನಿಷ್ಕಾಮನಾಗಿ ಮಾಡುವುದು ಧರ್ಮ. ಇದರಿಂದ ಪಾಪ ಅಂಟದು.
ಕೇವಲ ಸ್ವಭಾವದಂತೆ ನಡೆದುಕೊಂಡಮಾತ್ರಕ್ಕೆ ಮುಕ್ತಿ ಸಿಗುವುದಿಲ್ಲ. ಅದರ ಹಿಂದೆ ಕೆಲವು ಸಾಧನೆಗಳು ಬೇಕಾಗುತ್ತದೆ. ಕೆಲವು ಅನುಸಂಧಾನಗಳು ಬೇಕಾಗುತ್ತವೆ. ಅದರ ವಿವರಣೆಯನ್ನು ಕೃಷ್ಣ ಮುಂದಿನ ಶ್ಲೋಕಗಳಲ್ಲಿ ವಿವರಿಸಿದ್ದಾನೆ.
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ॥೪೯॥
ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।
ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನ ಅಧಿಗಚ್ಛತಿ –ಎಲ್ಲೂ ಬುದ್ಧಿಯನ್ನು ಅಂಟಿಸಿಕೊಳ್ಳದೆ , ಬಗೆಯನ್ನು ಗೆದ್ದು, ಬಯಕೆ ತೊರೆದವನು ಇಂತಹ ‘ಸಂನ್ಯಾಸ’ದಿಂದ ಮೋಕ್ಷಪ್ರದವಾದ ಹಿರಿಯ ಯೋಗ ಸಿದ್ಧಿಯನ್ನು [ಅನಿಷ್ಟ ಕರ್ಮಗಳ ನಾಶವೆಂಬ ಸಿದ್ಧಿಯನ್ನು] ಪಡೆಯುತ್ತಾನೆ.
ಮೋಕ್ಷಸಾಧನವಾಗಿರತಕ್ಕಂತಹ ಸಿದ್ಧಿಯನ್ನು[ಪಾಪಕರ್ಮಗಳು ಇಲ್ಲದ ಸ್ಥಿತಿಯನ್ನು] ತಲುಪಲು ಕೇವಲ ಸ್ವಕರ್ಮದಲ್ಲಿ ತೊಡಗಿದರೆ ಸಾಲದು, ಬದಲಿಗೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸಿ, ಯಾವುದೇ ಫಲಾಪೇಕ್ಷೆ ಇಲ್ಲದೆ, ನನ್ನಿಂದಾಯ್ತು ಎನ್ನುವ ಅಹಂಕಾರವನ್ನು ಬಿಟ್ಟು, ಭಗವದರ್ಪಣಾ ಭಾವದಿಂದ ಕರ್ಮವನ್ನು ಮಾಡಬೇಕು. ಅಹಂಕಾರ ಅಧ್ಯಾತ್ಮದ ದೊಡ್ಡ ಶತ್ರು. ಇದರ ಎಚ್ಚರ ನಮಗಿರಬೇಕು. ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ವತ್ರ ‘ನನ್ನಿಂದಾಯಿತು’ ಎನ್ನುವ ಅಹಂಕಾರವನ್ನು ಬಿಟ್ಟು, ಮನಸ್ಸನ್ನು ಗೆದ್ದು, ಬುದ್ಧಿಯಿಂದ ಫಲಕಾಮನೆಯನ್ನು ತೊಡೆದುಹಾಕಿ, ಕಾಮನೆಗಳ ನ್ಯಾಸ ಮಾಡಿ, ಎಲ್ಲವನ್ನು ಭಗವಂತನಲ್ಲಿ ಅರ್ಪಿಸಿ ಸ್ವಕರ್ಮ ಮಾಡಿದರೆ- ಮೋಕ್ಷವನ್ನು ಸೇರಲು ಬೇಕಾದ ಸಿದ್ಧಿ ಪ್ರಾಪ್ತವಾಗುತ್ತದೆ.
ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾSSಪ್ನೋತಿ ನಿಬೋಧ ಮೇ ।
ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥೫೦॥
ಸಿದ್ಧಿಂ ಪ್ರಾಪ್ತಃ ಯಥಾ ಬ್ರಹ್ಮ ತಥಾ ಆಪ್ನೋತಿ ನಿಬೋಧ ಮೇ ।
ಸಮಾಸೇನ ಏವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ – ಕೌಂತೇಯಾ, ಯಾವ ಬಗೆಯ ಸಿದ್ಧಿ ಪಡೆದವನು ಬ್ರಹ್ಮತತ್ವವನ್ನು[ಶ್ರೀತತ್ವವನ್ನು]ಸೇರುತ್ತಾನೆ ಆ ಬಗೆಯನ್ನು ಕೇಳು. ಈ ಸಿದ್ಧಿ ತಿಳಿವಿನ ಕೊನೆಯ ಮಜಲು.
ಯಾವ ಪಾತಕದಿಂದಲೂ ಕಲುಷಿತವಾಗದ ಜೀವನದ ನಡೆ(ನೈಷ್ಕರ್ಮ್ಯಸಿದ್ಧಿ) ರೂಪಿತವಾದಾಗ ನಮ್ಮ ಮನಸ್ಸಿನಲ್ಲಿ ಭಗವಂತ ಬಂದು ನೆಲೆಸುತ್ತಾನೆ. ಇದರಿಂದ ತಾಯಿ ಶ್ರಿಲಕ್ಷ್ಮಿಯನ್ನು ಸೇರಿ ಕೊನೆಗೆ ಭಗವಂತನನ್ನು ಸೇರಲು ಸಾಧ್ಯ. ಯಾವ ರೀತಿ ಬ್ರಹ್ಮತತ್ವವನ್ನು ಸೇರುವುದು ಎನ್ನುವುದನ್ನು ಮುಂದೆ ಕೃಷ್ಣ ಅಡಕವಾಗಿ ಹೇಳುತ್ತಾನೆ. ನೈಷ್ಕರ್ಮ್ಯಸಿದ್ಧಿ ಎನ್ನುವುದು ಒಬ್ಬ ಮನುಷ್ಯನ ಜ್ಞಾನಸಾಧನೆಯ ಕೊನೇಯ ಮಜಲು. ಈ ಹಂತವನ್ನು ತಲುಪಬೇಕಾದರೆ ನಾವು ಅಧ್ಯಾತ್ಮದಲ್ಲಿ ಕುಂತಿಯಂತೆ ಛಲವುಳ್ಳ-ಕೌಂತೇಯರಾಗಬೇಕು.
ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ ।
ಶಬ್ದಾದೀನ್ ನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ ॥೫೧॥
ಬುದ್ಧ್ಯಾ ವಿಶುದ್ಧಯಾ ಯುಕ್ತಃ ಧೃತ್ಯಾತ್ಮಾನಂ ನಿಯಮ್ಯ ಚ ।
ಶಬ್ದ ಆದೀನ್ ವಿಷಯಾನ್ ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ -- ತಿಳಿಯಾದ ಬುದ್ಧಿಯಿರಬೇಕು. ದಿಟ್ಟತನದಿಂದ ಬಗೆಯನ್ನು ಬಿಗಿಹಿಡಿಯಬೇಕು. ಶಬ್ದ ಮುಂತಾದ ವಿಷಯಲಾಲಸೆಯನ್ನು ತೊರೆಯಬೇಕು. ಪ್ರೀತಿ-ಹಗೆತನಗಳನ್ನು ದೂರವಿರಿಸಬೇಕು.
ಅಧ್ಯಾತ್ಮ ಸಾಧನೆಯಲ್ಲಿ ನಮ್ಮ ಮನಸ್ಸು ಯಾವತ್ತೂ ಕೂಡಾ ಕೆಟ್ಟದ್ದನ್ನು ಯೋಚಿಸಬಾರದು. ಶುದ್ಧವಾದ ಬುದ್ಧಿ ನಮ್ಮದಾಗಿರಬೇಕು. ಮನಸ್ಸನ್ನು ಬಹಳ ಧೈರ್ಯದಿಂದ ನಿಯಂತ್ರಿಸಿ, ಅಸಾಧಾರಣ ಸಾಹಸದಿಂದ ಎಲ್ಲಾ ಕೆಟ್ಟ ವಿಚಾರವನ್ನು ಮನಸ್ಸಿನಿಂದ ಹೊಡೆದೋಡಿಸಬೇಕು. ಇಂದ್ರಿಯಗಳು ಮನಸ್ಸನ್ನು ಕದಡುವ ಸಾಧನಗಳು. ಆದ್ದರಿಂದ ಕೇಳುವ, ನೋಡುವ, ಮುಟ್ಟುವ, ಮೂಸುವ ಮತ್ತು ತಿನ್ನುವ ಚಪಲವನ್ನು ಮೊದಲು ಬಿಡಬೇಕು. ಮಗುವಿನಂತೆ ರಾಗ-ದ್ವೇಷವಿಲ್ಲದೆ ನಿರ್ಮಲ ಮನಸ್ಸಿನಿಂದಿರಬೇಕು.
ವಿವಿಕ್ತಸೇವೀ ಲಘ್ವಾಶೀ ಯತವಾಕ್ ಕಾಯಮಾನಸಃ ।
ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥೫೨॥
ವಿವಿಕ್ತಸೇವೀ ಲಘ್ವ ಆಶೀ ಯತ ವಾಕ್ ಕಾಯ ಮಾನಸಃ ।
ಧ್ಯಾನ ಯೋಗ ಪರಃ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ---- ಏಕಾಂತದಲ್ಲಿ ನೆಲೆಸಬೇಕು. ಮಿತವಾಗಿ ಉಣ್ಣಬೇಕು. ಮಾತು-ಮೈ-ಮನಗಳಲ್ಲಿ ಹಿಡಿತವಿರಬೇಕು. ಧ್ಯಾನಯೋಗದಲ್ಲಿದ್ದು ಅನುದಿನವೂ ವೈರಾಗ್ಯ ತಳೆಯಬೇಕು.
ಹಾಳು ಹರಟೆ ನಡೆಯುವ ಜನಸಂದಣಿಯಲ್ಲಿ ಬೆರೆಯದೆ, ಆದಷ್ಟು ಏಕಾಂತದಲ್ಲಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಧ್ಯಾತ್ಮ ಸಾಧನೆಯಲ್ಲಿ ಆದಷ್ಟು ಪವಿತ್ರವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು. ಅತಿಯಾಗಿ ತಿಂದಾಗ ಮನಸ್ಸು ಕೆಲಸ ಮಾಡುವುದಿಲ್ಲ. ಅದಕ್ಕಾಗಿ ನಿಯತವಾದ ಸಮಯದಲ್ಲಿ ನಿಯತ ಆಹಾರವನ್ನು ಸೇವನೆ ಮಾಡಬೇಕು. ಮಾತಿನ ಮೇಲೆ ನಿಯಂತ್ರಣ, ದೇಹದ ಚಟುವಟಿಕೆಯ ಮೇಲೆ ನಿಯಂತ್ರಣ, ಮನಸ್ಸಿನ ಚಿಂತನೆಯಲ್ಲಿ ನಿಯಂತ್ರಣವಿದ್ದು ಧ್ಯಾನ ಮಾಡಬೇಕು. ಜೀವನದಲ್ಲಿ ಎಲ್ಲವನ್ನು ಪ್ರೀತಿಸುತ್ತಾ ಯಾವುದನ್ನೂ ಅಂಟಿಸಿಕೊಳ್ಳದೇ ಬದುಕಬೇಕು.
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ ॥೫೩॥
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।
ವಿಮುಚ್ಯ ನಿರ್ಮಮಃ ಶಾಂತಃ ಬ್ರಹ್ಮಭೂಯಾಯ ಕಲ್ಪತೇ –-ನಾನೆಂಬ ಹಮ್ಮು, ಬಲಾತ್ಕಾರ, ಸೊಕ್ಕು, ಕಾಮ, ಕೋಪ ಮತ್ತು ಕೈಯೊಡ್ಡುವ ಬುದ್ಧಿ ಇವುಗಳನ್ನು ತೊರೆದು, ಮಮತೆಯಳಿದು ಭಗವಂತನಲ್ಲಿ ಬಗೆಯಿಡಬೇಕು. ಆಗ ಭಗವಂತನಲ್ಲೇ ಬಗೆ ನೆಲೆಗೊಳ್ಳುತ್ತದೆ.[ಅಂತಹವನು ಶ್ರೀತತ್ವವನ್ನು ಸೇರುತ್ತಾನೆ]
ಭಗವಂತನ ಚಿಂತನೆಗೆ ವಿರುದ್ಧವಾಗಿ ‘ನಾನು ಮಾಡಿದೆ’ ಅನ್ನುವ ಅಹಂಕಾರ, ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯ ಹೇರುವುದು, ತನ್ನ ಸ್ಥಿತಿಯ ಬಗ್ಗೆ ದರ್ಪ, ಕಾಮ-ಕ್ರೋಧ, ಇನ್ನೊಬ್ಬರ ಮುಂದೆ ಕೈಯೊಡ್ಡುವ ಬುದ್ಧಿ- ಇವೆಲ್ಲವನ್ನು ತೊರೆದು, ನಾನು-ನನ್ನದು ಎನ್ನುವ ಮಮಕಾರವನ್ನು ಬಿಟ್ಟು, ಭಗವಂತನಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದರಿಂದ ಬ್ರಹ್ಮತತ್ವವನ್ನು ಸೇರಬಹುದು. [ಮನಸ್ಸು ಭಗವಂತನಲ್ಲಿ ನೆಲೆಗೊಳ್ಳುತ್ತದೆ; ಚತುರ್ಮುಖನ ಉಪದೇಶ ಪಡೆದು- ತಾಯಿ ಲಕ್ಷ್ಮಿಯನ್ನು ಸೇರುತ್ತಾನೆ].
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮದ್ ಭಕ್ತಿಂ ಲಭತೇ ಪರಾಮ್ ॥೫೪॥
ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।
ಸಮಃ ಸರ್ವೇಷು ಭೂತೇಷು ಮತ್ ಭಕ್ತಿಂ ಲಭತೇ ಪರಾಮ್ – ಭಗವಂತನಲ್ಲೇ ಬಗೆ ನೆಟ್ಟವನು [ಶ್ರೀತತ್ವದಲ್ಲಿ ನೆಲೆಗೊಂಡವನು] ಬಗೆ ತಿಳಿಗೊಂಡು ಯಾವುದಕ್ಕೂ ದುಃಖಿಸುವುದಿಲ್ಲ; ಯಾವುದನ್ನೂ ಬಯಸುವುದಿಲ್ಲ. ಎಲ್ಲಾ ಜೀವಿಗಳಲ್ಲೂ ಸಮಭಾವ ಹೊಂದಿ ನನ್ನಲ್ಲಿ ಪರಾಭಕ್ತಿಯನ್ನು ಪಡೆಯುತ್ತಾನೆ.
ಭಗವಂತನಲ್ಲಿ ಬಗೆ ನೆಟ್ಟವನಿಗೆ ಯಾವುದೇ ಬೇಕು-ಬೇಡಗಳಿರುವುದಿಲ್ಲ. ಆತನ ಮನಸ್ಸು ಸ್ವಚ್ಛವಾಗಿರುತ್ತದೆ. ಈ ಸ್ಥಿತಿಯಲ್ಲಿ ಸರ್ವೋತ್ಕೃಷ್ಟ ಭಕ್ತಿ ಬೆಳೆಯುತ್ತದೆ. ಗುಣಪೂರ್ಣನಾದ ಭಗವಂತನನ್ನು ಆತ ಪ್ರಪಂಚದ ಪ್ರತೀ ವಸ್ತುವಿನಲ್ಲೂ ಕಾಣುತ್ತಾನೆ. ಇದರಿಂದಾಗಿ ಆತನಲ್ಲಿ ಯಾವುದೇ ತಾರತಮ್ಯ, ದ್ವೇಷ ಇರುವುದಿಲ್ಲ.
ಭಕ್ತ್ಯಾ ಮಾಮಭಿಜಾನಾತಿ ಯಾವಾನ್ ಯಶ್ಚಾಸ್ಮಿ ತತ್ತ್ವತಃ ।
ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್ ॥೫೫॥
ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಃ ಚ ಅಸ್ಮಿ ತತ್ತ್ವತಃ ।
ತತಃ ಮಾಮ್ ತತ್ತ್ವತಃ ಜ್ಞಾತ್ವಾ ವಿಶತೇ ತತ್ ಅನಂತರಮ್ –ಭಕ್ತಿಯಿಂದ ‘ನಾನು’ ಏನು ಎಂತು ಎನ್ನುವುದನ್ನು ಸರಿಯಾಗಿ ಅರಿಯಬಲ್ಲವನಾಗುತ್ತಾನೆ. ಅಂತಹ ಪರಾಭಕ್ತಿಯಿಂದ ನನ್ನನ್ನು ಸರಿಯಾಗಿ ಅರಿತ ಅನಂತರ ನನ್ನನ್ನೇ ಸೇರುತ್ತಾನೆ.
ಇಂತಹ ಭಕ್ತಿಯ ಉತ್ಕೃಷ್ಟ ಸ್ಥಿತಿಯಲ್ಲಿರುವವನಿಗೆ ಯಾವುದೇ ತಪ್ಪು ತಿಳುವಳಿಕೆ ಇರುವುದಿಲ್ಲ. ಲಕ್ಷ್ಮಿಯ ಸನ್ನಿಧಾನದಿಂದ ಭಗವಂತ ಅಂದರೇನು, ಅವನ ಮಹಿಮೆ ಏನು, ಅವನ ಶಕ್ತಿ ಏನು, ಅವನ ಅನಂತ ಗುಣಗಳ ಹರವು ಏನು- ಎನ್ನುವುದು ಯಥಾವತ್ತಾಗಿ ಜೀವಯೋಗ್ಯತೆಯ ಪೂರ್ಣ ಪ್ರಮಾಣದಲ್ಲಿ ಅರಿಯುತ್ತಾನೆ. ”ಈ ರೀತಿ ತತ್ತ್ವತಃ ಭಗವಂತನನ್ನು ಯಥಾವತ್ತಾಗಿ ತಿಳಿದ ಮೇಲೆ ಅತ್ಯಂತ ಪರಿಶುದ್ಧ ಜ್ಞಾನ ಮತ್ತು ಭಕ್ತಿಯಿಂದ ನನ್ನನ್ನು ಬಂದು ಸೇರುತ್ತಾನೆ” ಎನ್ನುತ್ತಾನೆ ಕೃಷ್ಣ.
ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ ವ್ಯಪಾಶ್ರಯಃ ।
ಮತ್ ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥೫೬॥
ಸರ್ವ ಕರ್ಮಾಣಿ ಅಪಿ ಸದಾ ಕುರ್ವಾಣಃ ಮತ್ ವ್ಯಪಾಶ್ರಯಃ ।
ಮತ್ ಪ್ರಸಾದಾತ್ ಅವಾಪ್ನೋತಿ ಶಾಶ್ವತಮ್ ಪದಮ್ ಅವ್ಯಯಮ್ – 'ನಾನೇ' ಸರ್ವಸ್ವ ಎಂದು ತಿಳಿದು ಎಲ್ಲಾ ಕರ್ಮಗಳನ್ನು ನಿರಂತರ ಮಾಡುತ್ತಿರುವವನು ನನ್ನ ಹಸಾದದಿಂದ, ಅಳಿವಿರದ ಬದಲಾಗದ ತಾಣವನ್ನು ಸೇರುತ್ತಾನೆ.
ಭಗವಂತನೇ ಸರ್ವಸ್ವ ಎಂದು ತಿಳಿದು; ಯಾವುದೇ ಕರ್ಮ ಮಾಡಿದರೂ ಆ ಕರ್ಮದ ಗುರಿ ಭಗವಂತನನ್ನಾಗಿರಿಸಿಕೊಂಡು; ಪೂರ್ಣ ಭಗವದರ್ಪಣಾ ಬುದ್ಧಿಯಿಂದ ಕರ್ಮ ಮಾಡುವವರು, ಭಗವಂತನ ಅನುಗ್ರಹದಿಂದ ಎಂದೂ ಏರುಪೇರಿಲ್ಲದ ಮೋಕ್ಷವನ್ನು ಸೇರುತ್ತಾರೆ.
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಃ ।
ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ॥೫೭॥
ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ ಪರಃ ।
ಬುದ್ಧಿಯೋಗಮ್ ಉಪಾಶ್ರಿತ್ಯ ಮತ್ ಚಿತ್ತಃ ಸತತಮ್ ಭವ – ಒಳಬಗೆಯಿಂದ ಎಲ್ಲಾ ಕರ್ಮಗಳನ್ನು ನನಗೊಪ್ಪಿಸಿ, ನನ್ನನ್ನೇ ಪರತತ್ವವೆಂದು ತಿಳಿದು, ಜ್ಞಾನಯೋಗದ ದಾರಿ ಹಿಡಿದು ನಿರಂತರ ನನ್ನಲ್ಲೇ ಒಳಬಗೆಯನ್ನಿಡು.
ಇಲ್ಲಿ ಕೃಷ್ಣ ಹೇಳುತ್ತಾನೆ: “ನನ್ನನ್ನು ತಿಳಿದು, ಎಲ್ಲಾ ಕರ್ಮವನ್ನು ನನ್ನಲ್ಲಿ ಅರ್ಪಿಸಿ, ಜ್ಞಾನಯೋಗದಿಂದ ಮನಸ್ಸನ್ನು ನಿರಂತರ ನನ್ನಲ್ಲಿರಿಸು” ಎಂದು . ಇಲ್ಲಿ ನಾವು ಮಾಡುವ ಎಲ್ಲಾ ಕರ್ಮವನ್ನು ಭಗವಂತನಿಗೆ ಅರ್ಪಿಸಿ ಮಾಡಬೇಕು ಎನ್ನುವುದು ಬಹಳ ಮುಖ್ಯವಾದ ವಿಷಯ. ಇಂದು ಈ ರೀತಿಯ ಕರ್ಮ ಸಾಧನೆ ಇಲ್ಲವಾಗಿದೆ. ಇದಕ್ಕೆ ಮೂಲ ಕಾರಣ ಅಜ್ಞಾನ. ನಾವು ಪೂಜೆ ಮಾಡುವುದು ಯಾವುದೋ ಫಲದ ಅಪೇಕ್ಷೆಯಿಂದ. ಕೆಲವೊಮ್ಮೆ ಜ್ಯೋತಿಷಿಗಳು ಯಾವುದೋ ಗ್ರಹ ದೋಷವಿದೆ ಎಂದು ಹೇಳುತ್ತಾರೆ. ಉದಾಹರಣೆಗೆ: ಕುಜದೋಷ. ಸಾಮಾನ್ಯವಾಗಿ ಜ್ಯೋತಿಷಿಗಳು ಕುಜದೋಷ ಎಂದು ಹೇಳಿದಾಗ ನಮಗೆ ಮೊದಲು ಕಾಣುವುದು ‘ಈ ಗ್ರಹ ನಮಗೆ ತೊಂದರೆ ಕೊಡುತ್ತಿದೆ’ ಎಂದು. ವಸ್ತುತಃ ಕುಜದೋಷ ಎಂದರೆ ಕುಜನ ದೋಷವಲ್ಲ. ಅದು ನಮ್ಮ ದೋಷ. ನಮ್ಮ ಪ್ರಾರಬ್ಧಕರ್ಮ. ಅದನ್ನು ಈ ಗ್ರಹ ಸೂಚಿಸುತ್ತದೆ ಅಷ್ಟೆ. ಅದನ್ನು ನಾವು ತಪ್ಪಾಗಿ ಕುಜನೇ ನನ್ನ ಬೆನ್ನ ಹಿಂದೆ ಬಿದ್ದಿದ್ದಾನೆ ಎಂದು ತಿಳಿದುಕೊಳ್ಳುತ್ತೇವೆ. ಗ್ರಹಗಳಿರುವುದು ನಮಗೆ ಕಾಟ ಕೊಡಲಿಕ್ಕಾಗಿ ಅಲ್ಲ. ಅವರು ಎಂದೂ ಕಾಟ ಕೊಡುವುದಿಲ್ಲ. ಬದಲಿಗೆ ನಮಗೆ ನಮ್ಮ ಪ್ರರಾಬ್ಧದಿಂದ ಬರತಕ್ಕ ಕಾಟವನ್ನು ಅವರು ಸೂಚಿಸುತ್ತಾರೆ. ನಮಗೆ ಕಷ್ಟಬರುವ ಸಾಧ್ಯತೆಯನ್ನು ನಮಗೆ ಮುಂದಾಗಿ ತಿಳಿಸಿ, ನಾವು ಆ ಅನಿಷ್ಟವನ್ನು ಎದುರಿಸಲು ಮಾನಸಿಕ ಸಿದ್ಧತೆ ನಡೆಸುವಂತೆ ಮಾಡುವುದು ಗ್ರಹಗಳ ಕರ್ತವ್ಯ. ಹೀಗೆ ಪ್ರಾರಬ್ಧಕರ್ಮ ಇದೆ ಎಂದು ಗೊತ್ತಾದಾಗ, ಆ ಸಮಸ್ಯೆಯನ್ನು ಎದುರಿಸಿ, ಸಾಧನಾ ಮಾರ್ಗದಲ್ಲಿ ಮುಂದೆ ಸಾಗುವುದಕ್ಕೆ ಭಗವಂತನಲ್ಲಿ ಮೊರೆ ಹೋಗುವುದು ಪ್ರಾಯಶ್ಚಿತ್ತ ಪೂಜೆಯೇ ಹೊರತು-ಇದು ಗ್ರಹಗಳಿಗೆ ಕೊಡುವ ಲಂಚವಲ್ಲ. ಉದಾಹರಣೆಗೆ ನವಗ್ರಹ ಪೂಜೆ. ನಮ್ಮ ಪ್ರಾರಬ್ಧಕರ್ಮವನ್ನು ಗ್ರಹಗಳು ಸೂಚಿಸಿರುವುದರಿಂದ, ಆ ಗ್ರಹಗಳ ಅಂತರ್ಯಾಮಿಯಾಗಿರುವ ಭಗವಂತನನ್ನು ಪ್ರಾರ್ಥಿಸುವುದು ನವಗ್ರಹಪೂಜೆ.
ನಾರಾಯಣನ ಭಕ್ತನನ್ನೂ ಪ್ರಾರಬ್ಧಕರ್ಮ ಬಿಡುವುದಿಲ್ಲ. ನಮ್ಮ ಪ್ರಾರಬ್ಧಕ್ಕೆ ತಕ್ಕಂತೆ ನಾವು ನಮ್ಮ ಗ್ರಹಚಾರವನ್ನು ಅನುಭವಿಸಲೇಬೇಕು. ಜ್ಞಾನಿಗಳಿಗೂ ಕೂಡಾ ಕಷ್ಟ ಬರುತ್ತದೆ. ಆ ದುಃಖವನ್ನು ಎದುರಿಸುವ ಸಾಮರ್ಥ್ಯ ನಮ್ಮಲ್ಲಿಲ್ಲದಾಗ ಭಗವಂತನನ್ನು ಪ್ರಾರ್ಥಿಸುವುದು ತಪ್ಪಲ್ಲ. ಇಲ್ಲಿ ಒಂದು ಬಹಳ ಮುಖ್ಯ ವಿಷಯ ಏನೆಂದರೆ ಫಲಾಪೇಕ್ಷೆ ಇಲ್ಲದೆ ಪರಮಾತ್ಮನಲ್ಲಿ ಪ್ರಾರ್ಥನೆ. “ನಾನು ನನ್ನ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಫಲವಾಗಿ ಇಂದು ಈ ಅನಿಷ್ಟವನ್ನು ಪಡೆದಿದ್ದೇನೆ. ನನ್ನ ಮುಂದಿರುವ ಈ ಗ್ರಹಚಾರವನ್ನು ನೀನು ಗ್ರಹಗಳ ಅಂತರ್ಯಾಮಿಯಾಗಿ ನಿಂತು ನನಗೆ ತೋರಿಸಿದ್ದೀಯ. ನಿನಗೆ ನನ್ನ ಕೋಟಿ-ಕೋಟಿ ನಮನ. ನನಗರಿವಿಲ್ಲದೆ ನಾನು ಮಾಡಿದ ತಪ್ಪನ್ನು ಮನ್ನಿಸಿ, ನಾನು ಈ ಅನಿಷ್ಟವನ್ನು ಎದುರಿಸಿ ಜ್ಞಾನ ಮಾರ್ಗದಲ್ಲಿ ಮುನ್ನೆಡೆದು ನಿನ್ನನ್ನು ಸೇರಲು ನನಗೆ ದಾರಿ ತೋರಿಸು; ನನ್ನೊಳಗಿರುವ ನೀನು ನಿನ್ನ ಪೂಜೆಯನ್ನು ನನ್ನನ್ನು ಮಾಧ್ಯಮವಾಗಿ ಬಳಸಿ ಮಾಡಿಸಿಕೋ; ನಾನು ನಿನ್ನಲ್ಲಿ ಶರಣಾಗಿದ್ದೇನೆ” ಎನ್ನುವ ಅನುಸಂಧಾನ ಈ ಪೂಜೆಯ ಹಿಂದಿರಬೇಕು. ಹೀಗೆ ಭಗವಂತ ಸರ್ವಶ್ರೇಷ್ಠ ಎನ್ನುವ ಎಚ್ಚರದಿಂದ, ಎಲ್ಲಾ ದೇವತೆಗಳ ಆರಾಧನೆ ಮಾಡುವಾಗಲೂ ಸಹ- ಅವರ ಅಂತರ್ಯಾಮಿಯಾಗಿರತಕ್ಕಂತಹ ಭಗವಂತನನ್ನು ತಿಳಿದು, ಕರ್ಮವನ್ನು ಮಾನಸಿಕವಾಗಿ ಭಗವಂತನಲ್ಲಿ ಅರ್ಪಿಸಬೇಕು. ಇದು ನಿಜವಾಗಿ ಮಾಡಬೇಕಾದ ಕರ್ಮದ ವಿಧಾನ.
ಒಟ್ಟಿನಲ್ಲಿ ಹೇಳಬೇಕೆಂದರೆ: ನಾವು ನಮ್ಮ ಮನಸ್ಸು ಬೇರೆಕಡೆ ಹೋಗದಂತೆ ತಡೆದು ಅದನ್ನು ಭಗವಂತನಲ್ಲಿ ನೆಲೆಗೊಳಿಸಬೇಕು; ನಾವು ಮಾಡುವ ಎಲ್ಲಾ ಕರ್ಮಗಳೂ ಭಗವಂತನ ಪೂಜಾರೂಪವಾಗಿದ್ದು, ಅದನ್ನು ಭಗವಂತ ನಮ್ಮ ಕೈಯಿಂದ ಮಾಡಿಸುತ್ತಿದ್ದಾನೆ ಎನ್ನುವ ಎಚ್ಚರ ನಮ್ಮ ಮನಸ್ಸಿನಲ್ಲಿ ನೆಲೆಗೊಳ್ಳಬೇಕು. ನಮ್ಮ ಅನುಷ್ಠಾನ, ಅನುಸಂಧಾನ ಆನಂದಮಯವಾಗಿರಬೇಕು. ಅಲ್ಲಿ ಯಾವುದೇ ಒತ್ತಡ, ಭಯ, ಫಲಾಪೇಕ್ಷೆ ಇರಕೂಡಾದು.
ಮಚ್ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್ ತರಿಷ್ಯಸಿ ।
ಅಥ ಚೇತ್ ತ್ವಮಹಂಕಾರಾನ್ನ ಶ್ರೋಷ್ಯಸಿ ವಿನಂಕ್ಷ್ಯಸಿ ॥೫೮॥
ಮತ್ ಚಿತ್ತಃ ಸರ್ವದುರ್ಗಾಣಿ ಮತ್ ಪ್ರಸಾದಾತ್ ತರಿಷ್ಯಸಿ ।
ಅಥ ಚೇತ್ ತ್ವಮ್ ಅಹಂಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ – ನನ್ನಲ್ಲೇ ಒಳಬಗೆಯಿಟ್ಟಾಗ, ನನ್ನ ಹಸಾದದಿಂದ ಎಲ್ಲಾ ಕೋಟಲೆಗಳನ್ನು ದಾಟುವೆ. ಒಂದೊಮ್ಮೆ ಹೆಮ್ಮೆಯಿಂದ ಕಿವಿಗೊಡದಿದ್ದರೆ ಕೆಟ್ಟುಹೋಗುವೆ.
ಮನಸ್ಸನ್ನು ಭಗವಂತನತ್ತ ಹರಿಸಿ, ಬುದ್ಧಿಯಲ್ಲಿ ಭಗವಂತನನ್ನು ನೆಟ್ಟು, ಚಿತ್ತದಲ್ಲಿ ಭಗವಂತನನ್ನು ಸ್ಥಿರಗೊಳಿಸಿ, ಸುಪ್ತಪ್ರಜ್ಞೆಯಲ್ಲಿ ಕೂಡಾ ಭಗವಂತನ ಸ್ಮರಣೆ ಶಾಶ್ವತಗೊಳಿಸಿದಾಗ, ನಮ್ಮ ಎಲ್ಲಾ ಕ್ರಿಯೆಗಳೂ ಭಗವಂತನ ಪೂಜೆಯಾಗುತ್ತದೆ. ಇದರಿಂದ ನಮ್ಮ ಎಲ್ಲಾ ವ್ಯವಹಾರದಲ್ಲೂ ಪೂರ್ಣ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ ಹಾಗೂ ಜೀವನದಲ್ಲಿ ಬರುವ ದುರ್ಗಮ ಸ್ಥಿತಿ, ಕಷ್ಟ, ಕಾರ್ಪಣ್ಯಗಳನ್ನು ಎದುರಿಸುವ ಕ್ಷಮತೆ ಬರುತ್ತದೆ. ಹೀಗೆ ಜ್ಞಾನಿ ತನ್ನ ಜೀವನ ಪಯಣದಲ್ಲಿ ಅನಿವಾರ್ಯವಾಗಿ ಬರುವ ಎಲ್ಲಾ ಆಪತ್ತುಗಳನ್ನು ನಿರಾಯಾಸವಾಗಿ ಧಾಟಿ ಮುನ್ನೆಡೆಯುತ್ತಾನೆ. ಈ ರೀತಿ ಬದುಕಿದಾಗ ಭಗವಂತ ನಮ್ಮ ಜೀವನದಲ್ಲಿ ಬರುವ ಸರ್ವ ಅನಿಷ್ಟಗಳಿಂದಲೂ ನಮ್ಮನ್ನು ರಕ್ಷಿಸುತ್ತಾನೆ. ಆತನ ರಕ್ಷಾಕವಚ ಸದಾ ನಮ್ಮನ್ನು ಸುತ್ತುವರಿದಿರುತ್ತದೆ. ಇದರಿಂದ ಜೀವನದಲ್ಲಿ ಬರುವ ಎಲ್ಲಾ ಆಪತ್ತುಗಳಿಂದ ನಾವು ಪಾರಾಗುತ್ತೇವೆ. ಇದನ್ನು ಬಿಟ್ಟು ವೇದಾಂತ ಕೇವಲ ಬೊಗಳೆ, ಅದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅಹಂಕಾರ ಪಟ್ಟರೆ, ನಮ್ಮ ಕೈಯಾರೆ ನಾವು ನಮ್ಮ ಭವಿಷ್ಯವನ್ನು ಹಾಳು ಮಾಡಿಕೊಂಡು ವಿನಾಶ ಹೊಂದುತ್ತೇವೆ.
ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ ।
ಮಿಥ್ಯೈಷ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥೫೯॥
ಯತ್ ಅಹಂಕಾರಮ್ ಆಶ್ರಿತ್ಯ ನ ಯೋತ್ಸ್ಯೇ ಇತಿ ಮನ್ಯಸೇ ।
ಮಿಥ್ಯಾ ಏಷಃ ವ್ಯವಸಾಯಃ ತೇ ಪ್ರಕೃತಿಃ ತ್ವಾಮ್ ನಿಯೋಕ್ಷ್ಯತಿ – ಅಹಂಕಾರದಿಂದ ಬೀಗಿ ‘ನಾನು ಹೋರಾಡುವುದಿಲ್ಲ’ ಎಂದು ತಿಳಿದಿರುವೆಯಾದರೆ ನಿನ್ನ ಈ ನಿರ್ಧಾರ ಹುಸಿಯಾದದ್ದು. ನಿನ್ನ ಸ್ವಭಾವ [ಭಗವಂತನ ಇಚ್ಛೆ] ನಿನ್ನನ್ನು ಹೋರಾಡಿಸುತ್ತದೆ.
‘ನಾನು ಯುದ್ಧ ಮಾಡುವುದಿಲ್ಲ’ ಎಂದು ಅರ್ಜುನ ರಥದಲ್ಲಿ ಕುಸಿದು ಕುಳಿತದ್ದನ್ನು ನಾವು ಅಧ್ಯಾಯ ಒಂದರಲ್ಲಿ ನೋಡಿದ್ದೇವೆ. ಇಲ್ಲಿ ಕೃಷ್ಣ ಹೇಳುತ್ತಾನೆ “ ‘ನಾನು ಯುದ್ಧ ಮಾಡುವುದಿಲ್ಲ’ ಎನ್ನುವುದು ನಿನ್ನ ಅಹಂಕಾರಭರಿತ ಭ್ರಮೆ. ನೀನು ಏನನ್ನು ಮಾಡುವುದಿಲ್ಲ ಎಂದು ಹೇಳಿರುವೆಯೋ ಅದನ್ನೇ ಮಾಡುತ್ತೀಯ” ಎಂದು. ಏಕೆಂದರೆ ನಮ್ಮನ್ನು ನಿಯಂತ್ರಣ ಮಾಡುವ ಶಕ್ತಿ ಪ್ರಕೃತಿ. ಇಲ್ಲಿ ನಮ್ಮ ಭೌತಿಕ ತೀರ್ಮಾನ ವ್ಯರ್ಥ. ನಮ್ಮ ಜೀವಸ್ವಭಾವ, ಅದಕ್ಕನುಗುಣವಾಗಿ ಅನುವಂಶೀಯ ಪ್ರಭಾವ, ಪರಿಸರದ ಪ್ರಭಾವ ಮತ್ತು ಈ ಎಲ್ಲವನ್ನೂ ನಿಯಂತ್ರಿಸುವ ಭಗವಂತನ ಇಚ್ಛೆಯಂತೆ ಕ್ರಿಯೆ ನಡೆದೇ ನಡೆಯುತ್ತದೆ.
ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋSಪಿ ತತ್ ॥೬೦॥
ಸ್ವಭಾವಜೇನ ಕೌಂತೇಯ ನಿಬದ್ಧಃ ಸ್ವೇನ ಕರ್ಮಣಾ ।
ಕರ್ತುಂ ನ ಇಚ್ಛಸಿ ಯತ್ ಮೋಹಾತ್ ಕರಿಷ್ಯಸಿ ಅವಶಃ ಅಪಿ ತತ್ – ಕೌಂತೇಯಾ, ಸ್ವಭಾವ ಸಹಜವಾದ ನಿನ್ನ ಕರ್ಮದಿಂದ ನೀನು ಸುತ್ತುವರಿದಿರುವೆ. ಅಜ್ಞಾನದಿಂದಾಗಿ ಯಾವುದನ್ನು ಮಾಡಬಾರದು ಎಂದೆಣಿಸಿರುವೆ, ಅದನ್ನು ನೀನು ನಿನಗರಿವಿಲ್ಲದಂತೆಯೇ[ಭಗವದಿಚ್ಛೆಗೆ ವಶನಾಗಿ] ಮಾಡುವೆ.
ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಅಹಂಕಾರದಿಂದ ಯೋಚಿಸುವುದು ನಮ್ಮ ಅಜ್ಞಾನದಿಂದ. ಈ ರೀತಿ ಯಾವ ಯೋಚನೆ ಮಾಡಿದರೂ ಕೊನೆಗೆ ಮಾಡುವುದು ನಮ್ಮ ಜೀವ ಸ್ವಭಾವಕ್ಕೆ ಅನುಗುಣವಾಗಿಯೇ. ಇದರ ನಿಯಂತ್ರಣ ನಮ್ಮಲ್ಲಿಲ್ಲ. ಅದು ನಮಗರಿವಿಲ್ಲದಂತೆ, ಭಗವಂತನ ಇಚ್ಚೆಯಂತೆ ನಡೆಯುತ್ತದೆ.
ಈಶ್ವರಃ ಸರ್ವಭೂತಾನಾಂ ಹೃದ್ದೇಶೇSರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ॥೬೧॥
ಈಶ್ವರಃ ಸರ್ವಭೂತಾನಾಂ ಹೃತ್ ದೇಶೇ ಅರ್ಜುನ ತಿಷ್ಠತಿ ।
ಭ್ರಾಮಯನ್ ಸರ್ವಭೂತಾನಿ ಯಂತ್ರ ಆರೂಢಾನಿ ಮಾಯಯಾ – ಅರ್ಜುನಾ, ಎಲ್ಲಾ ಜೀವಿಗಳ ಎದೆಯ ತಾಣದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ – ಸುತ್ತುವ ಜಗದ್ ಯಂತ್ರದಲ್ಲಿ ಕೂತ ಎಲ್ಲಾ ಜೀವಿಗಳನ್ನೂ ಪ್ರಕೃತಿಯ ಮಾಯೆಯಿಂದ [ತನ್ನ ಇಚ್ಛೆಯಿಂದ]ತಿರುಗಾಡಿಸುತ್ತಾ.
ಎಲ್ಲಾ ಜೀವರ ಹೃತ್ಕಮಲದ ಮಧ್ಯದಲ್ಲಿ ಸರ್ವಶಕ್ತನಾದ ಭಗವಂತ ನೆಲೆಸಿದ್ದಾನೆ. ಈ ಪಿಂಡಾಂಡ ಮತ್ತು ಬ್ರಹ್ಮಾಂಡ ಎನ್ನುವ ಅದ್ಭುತ ಯಂತ್ರ ನಿರಂತರ ಚಲಿಸುವಂತೆ ಮಾಡುವವ ಆ ಭಗವಂತ. ಆತನೇ ಬ್ರಹ್ಮಾಂಡ ಮತ್ತು ಪಿಂಡಾಂಡದ ಒಡೆಯ. ಎಲ್ಲರೊಳಗಿದ್ದು ಅವರಿಗೆ ಅನುಭವವನ್ನು ಕೊಟ್ಟು ನಿಯಂತ್ರಿಸುವ ಮಹಾ ಚೈತನ್ಯ ಆ ಭಗವಂತ. ಸರ್ವ ಕರ್ಮವೂ ಭಗವಂತನ ಮಹಿಮೆಯಿಂದ ಅವನ ಇಚ್ಛೆಯಂತೆ ನಡೆಯುತ್ತದೆ.
ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ ಪ್ರಸಾದಾತ್ ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥೬೨॥
ತಮ್ ಏವ ಶರಣಂ ಗಚ್ಛ ಸರ್ವಭಾವೇನ ಭಾರತ ।
ತತ್ ಪ್ರಸಾದಾತ್ ಪರಾಂ ಶಾಂತಿ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ – ಭಾರತಾ, ಎಲ್ಲಾ ಬಗೆಯಿಂದಲೂ ಅವನಿಗೇ ಶರಣಾಗು. ಅವನ ಕರುಣೆಯಿಂದ ಹಿರಿದಾದ ಸುಖವನ್ನು, ಅಳಿವಿರದ ತಾಣವನ್ನು ಪಡೆಯುವೆ.
ಸರ್ವಸಮರ್ಥನಾದ ಭಗವಂತನಿಗೆ ನಾವು ನಮ್ಮನ್ನು ಅರ್ಪಿಸಿಕೊಳ್ಳಬೇಕು. ನಮ್ಮ ಜೀವನದ ಎಲ್ಲಾ ಹಂತಗಳಲ್ಲೂ ಭಗವಂತನಲ್ಲಿ ಶರಣಾಗತಿ ಇರಬೇಕು.[ಕೇವಲ ಕಷ್ಟ ಕಾಲದಲ್ಲಿ ಮಾತ್ರವಲ್ಲ]. ನಮ್ಮಲ್ಲಿ ಸತ್ವಗುಣವನ್ನು ಬೆಳಸಿಕೊಂಡು, ಕತ್ತಲೆಯನ್ನು ದೂರಮಾಡಿ, ಭಗವಂತನಲ್ಲಿ ನಮ್ಮನ್ನು ನಾವು ಅರ್ಪಿಸಿಕೊಂಡಾಗ-ನಮಗೆ ನಿಜವಾದ ಪೂರ್ಣ ಸತ್ವದ ದರ್ಶನವಾಗುತ್ತದೆ. ಆ ಭಗವಂತ ಕಣ್ಣು ತೆರೆದು ಅನುಗ್ರಹ ಮಾಡಿದನೆಂದರೆ ನಂತರ ತಿಳಿವು ಬರಲು ಇತರ ಯಾವ ಸಾಧನವೂ ಬೇಡ. ಸತ್ಯ ತನ್ನಷ್ಟಕ್ಕೆ ತಾನು ತೆರೆದುಕೊಳ್ಳುತ್ತದೆ ಮತ್ತು ಸರ್ವೋತ್ಕೃಷ್ಟ ಆನಂದ ನಮ್ಮದಾಗುತ್ತದೆ. ಇದರಿಂದ ಜ್ಞಾನಾನಂದದ ತುತ್ತ ತುದಿಯಾದ ಮೋಕ್ಷವನ್ನು ಸೇರಬಹುದು.
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ ಗುಹ್ಯತರಂ ಮಯಾ ।
ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ॥೬೩॥
ಇತಿ ತೇ ಜ್ಞಾನಮ್ ಆಖ್ಯಾತಂ ಗುಹ್ಯಾತ್ ಗುಹ್ಯತರಂ ಮಯಾ।
ವಿಮೃಶ್ಯ ಏತತ್ ಅಶೇಷೇಣ ಯಥಾ ಇಚ್ಛಸಿ ತಥಾ ಕುರು -- ತುಂಬಾ ಜತನದಿಂದ ಬಚ್ಚಿಡಬೇಕಾದ ಈ ತಿಳಿವನ್ನು ನಾನು ನಿನ್ನೆದುರು ಬಿಚ್ಚಿಟ್ಟೆ. ಇದನ್ನೆಲ್ಲವನ್ನು ಪರಾಂಬರಿಸಿ ಮತ್ತೆ ನಿನಗೆ ತೋಚಿದಂತೆ ಮಾಡು.
ಕೃಷ್ಣ ಹದಿನೈದನೇ ಅಧ್ಯಾಯದಲ್ಲಿ ಜ್ಞಾನದ ಉಪಸಂಹಾರ ಮಾಡಿದ್ದ. ಇಲ್ಲಿ ಉಪಾಸನೆಯ ಎಲ್ಲಾ ಅರಿವನ್ನು ಕೊಟ್ಟ ನಂತರ ಅದರ ಉಪಸಂಹಾರ ಮಾಡುತ್ತಾ ಹೇಳುತ್ತಾನೆ: “ಇದು ಪ್ರಪಂಚದಲ್ಲಿನ ರಹಸ್ಯಗಳಲ್ಲಿ ರಹಸ್ಯ. ಅಧ್ಯಾತ್ಮದ ಅಂತರಂಗದ ರಹಸ್ಯವನ್ನು ನಿನಗೆ ಹೇಳಿದೆ. ನಾನು ಹೇಳಿರುವ ವಿಚಾರವನ್ನು ಸಮಗ್ರವಾಗಿ ಪರಾಂಬರಿಸಿ ನಿನಗೆ ಮನವರಿಕೆಯಾದಂತೆ ಮಾಡು” ಎಂದು. ಇಲ್ಲಿ 'ನಿನ್ನ ಜೀವಸ್ವರೂಪ, ಆತ್ಮಸಾಕ್ಷಿ ಏನು ಹೇಳುತ್ತದೋ ಹಾಗೇ ಮಾಡು' ಎಂದು ಅರ್ಜುನನಿಗೆ ಹೇಳುವ ಮೂಲಕ-ನಾವು ಇನ್ನೊಬ್ಬರ ಮೇಲೆ ನಮ್ಮ ಅಭಿಪ್ರಾಯ ಹೇರಬಾರದು ಎನ್ನುವ ಸಮಾಜನೀತಿಯನ್ನು ಕೃಷ್ಣ ಎತ್ತಿ ತೋರಿಸಿದ್ದಾನೆ.
ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟೋSಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥೬೪॥
ಸರ್ವ ಗುಹ್ಯ ತಮಮ್ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟಃ ಅಸಿ ಮೇ ದೃಢಮ್ ಇತಿ ತತಃ ವಕ್ಷ್ಯಾಮಿ ತೇ ಹಿತಮ್ – ಎಲ್ಲಕ್ಕಿಂತ ಹೆಚ್ಚು ಬಚ್ಚಿಡಬೇಕಾದ ನನ್ನೀ ಹಿರಿಯ ಮಾತನ್ನು ಇನ್ನೊಮ್ಮೆ ಆಲಿಸು. ನೀನು ನನಗೆ ತುಂಬಾ ಮೆಚ್ಚಿನವನೆಂದು, ಅದಕ್ಕಾಗಿ ನಿನಗೆ ಹಿತ-ವಾದವನ್ನು ಹೇಳುತ್ತಿದ್ದೇನೆ:
ಹಿಂದೆ ಹೇಳಿದ ಸಾಧನೆಯ ಸಾರವನ್ನು, ನಾವು ತಿಳಿದುಕೊಳ್ಳಬೇಕಾದ ವಿಷಯಗಳಲ್ಲಿ ಅತ್ಯಂತ ರಹಸ್ಯವಾದ ಸಾಧನೆಯ ಗುಟ್ಟನ್ನು ಸಾತ್ವಿಕನಾದ ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ; ನನ್ನ ಭಕ್ತನಾದ ನೀನು ಜ್ಞಾನಿ. ಜ್ಞಾನಿಗಳು ನನಗೆ ಅಚ್ಚುಮೆಚ್ಚು, ಅದಕ್ಕಾಗಿ ಅದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ- ಕೇಳು:
ಮನ್ಮನಾ ಭವ ಮದ್ ಭಕ್ತೋ ಮದ್ ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋSಸಿ ಮೇ ॥೬೫॥
ಮತ್ ಮನಾಃ ಭವ ಮತ್ ಭಕ್ತಃ ಮತ್ ಯಾಜೀ ಮಾಂ ನಮಸ್ಕುರು ।
ಮಾಮ್ ಏವ ಏಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯಃ ಅಸಿ ಮೇ -- ನನ್ನಲ್ಲೇ ಬಗೆಯಿಡು. ನನ್ನಲ್ಲೇ ಭಕ್ತಿಯಿಡು. ನನ್ನನ್ನೇ ಪೂಜಿಸು. ನನಗೇ ಪೊಡಮಡು. ಆಗ ನನ್ನನ್ನೇ ಸೇರುವೆ. ನೀನು ನನಗೆ ಮೆಚ್ಚಿನವ. ನಿನ್ನಾಣೆಗೂ ಇದು ನಿಜ.
ಸಾಧನೆಯ ಸಾರವನ್ನು ವಿವರಿಸುತ್ತಾ ಕೃಷ್ಣ ಇಲ್ಲಿ ಹಿಂದೆ ವಿವರಿಸಿದ ವಿಷಯವನ್ನು, ಸಾಧನೆಯ ಸಾರಸಂಗ್ರಹವನ್ನು ಮತ್ತೆ ಉಪಸಂಹಾರ ರೂಪದಲ್ಲಿ ಹೇಳುತ್ತಾನೆ. ಕೃಷ್ಣ ಹೇಳುತ್ತಾನೆ: “ನನ್ನಲ್ಲೇ ಮನಸ್ಸನ್ನಿಡು” ಎಂದು. ಸಾಧನೆಯಲ್ಲಿ ನಮ್ಮ ಅನನ್ಯಚಿಂತನೆ ಕೇವಲ ಭಗವಂತನ ಕುರಿತಾದ ಏಕಭಕ್ತಿಯಾಗಿರಬೇಕು. ಜ್ಞಾನಪೂರ್ವಕವಾಗಿ ಭಗವಂತ ಸರ್ವೋತ್ತಮ ಎಂದು ಭಗವಂತನನ್ನು ನೆನೆಯಬೇಕು. ಭಗವಂತನಲ್ಲಿ “ಶುದ್ಧವಾದ ಪ್ರೀತಿ ಇರಲಿ”. ನಾವು ಮಾಡುವ ಎಲ್ಲಾ ಕರ್ಮಗಳೂ ಪ್ರೀತಿಪೂರ್ವಕ ಭಗವದರ್ಪಣೆಯಾಗಿರಬೇಕು. “ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ” ಎನ್ನುವ ಸತ್ಯವನ್ನು ತಿಳಿದು ಸರ್ವಾಂತರ್ಯಾಮಿ ಭಗವಂತನನ್ನು ಪೂಜಿಸು. ಈ ರೀತಿ ಎಲ್ಲಾ ಉಪಾಸನೆಯಲ್ಲಿ ಭಗವಂತನನ್ನು ಕಂಡರೆ "ನನ್ನನ್ನೇ ಬಂದು ಸೇರುತ್ತೀಯ ಇದು ನಿನ್ನಾಣೆಗೂ ಸತ್ಯ" ಎನ್ನುತ್ತಾನೆ ಕೃಷ್ಣ.
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥೬೬॥
ಸರ್ವಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ ಶರಣಂ ವ್ರಜ ।
ಅಹಂ ತ್ವಾಮ್ ಸರ್ವ ಪಾಪೇಭ್ಯಃ ಮೋಕ್ಷಯಿಷ್ಯಾಮಿ ಮಾ ಶುಚಃ -- ಎಲ್ಲಾ ಬಿನುಗು ಧರ್ಮಗಳನ್ನೂ ಫಲದ ಹಂಬಲಗಳನ್ನೂ ತೊರೆದು ನನಗೊಬ್ಬನಿಗೇ ಶರಣಾಗು. ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ ಪಾರುಗಾಣಿಸುತ್ತೇನೆ. ಕೊರಗದಿರು.
‘ಸರ್ವಧರ್ಮಾನ್ ಪರಿತ್ಯಜ್ಯ’ ಎಂದರೆ ಎಲ್ಲಾ ಪುಣ್ಯಕರ್ಮಗಳನ್ನು ಮಾಡಿ ಅದರಿಂದ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಇರುವುದು. ನಾವು ಮಾಡುವ ಧರ್ಮಕಾರ್ಯ ವ್ಯಾಪಾರವಾಗಬಾರದು. ಇದಕ್ಕೆ ಒಂದು ಉತ್ತಮ ದೃಷ್ಟಾಂತ ಧರ್ಮರಾಯ ಮತ್ತು ದ್ರೌಪದಿ ನಡುವಿನ ಸಂಭಾಷಣೆ. ದ್ರೌಪದಿ ಹೇಳುತ್ತಾಳೆ: “ಧರ್ಮೋ ರಕ್ಷತಿ ರಕ್ಷಿತಃ - ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ ಎನ್ನುವುದನ್ನು ಕೇಳಿದ್ದೇನೆ, ಅದು ನಿನ್ನನ್ನು ಏಕೆ ರಕ್ಷಿಸಲಿಲ್ಲ? ನಾವೇಕೆ ರಾಜ್ಯ ಕಳೆದುಕೊಂಡು ಕಾಡು ಸೇರಬೇಕಾಯ್ತು? ” ಎಂದು. ಅದಕ್ಕೆ ಧರ್ಮರಾಯ ಕೊಡುವ ಉತ್ತರ ರೋಚಕ. ಆತ ಹೇಳುತ್ತಾನೆ: “ನಾನು ಧರ್ಮದ ವ್ಯಾಪಾರಿ ಅಲ್ಲ; ನಾನು ಧರ್ಮ ಆಚರಣೆ ಮಾಡುವುದು ನನ್ನ ಆತ್ಮಸಂತೋಷಕ್ಕಾಗಿಯೇ ಹೊರತು ಯಾವುದೋ ಫಲಾಪೇಕ್ಷೆಯಿಂದಲ್ಲ” ಎಂದು. ಹೀಗೆ ಯಾವುದೇ ಧರ್ಮವಿದ್ದರೂ ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ. ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲಾ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ. ಇಲ್ಲಿಗೆ ಗೀತೆಯಲ್ಲಿ ಭಗವಂತನ ಉಪದೇಶದ ಭಾಗ ಮುಗಿಯಿತು. ಈ ಅಧ್ಯಾಯದ ಮುಂದಿನ ಶ್ಲೋಕಗಳಲ್ಲಿ ಗೀತೆಯ ಫಲಶ್ರುತಿಯನ್ನು ಕಾಣಬಹುದು.
ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।
ನಚಾಶುಶ್ರೂಷವೇ ವಾಚ್ಯಂ ನಚ ಮಾಂ ಯೋSಭ್ಯಸೂಯತಿ ॥೬೭॥
ಇದಂ ತೇ ನ ಅತಪಸ್ಕಾಯ ನ ಅಭಕ್ತಾಯ ಕದಾಚನ ।
ನಚ ಅಶುಶ್ರೂಷವೇ ವಾಚ್ಯಂ ನಚ ಮಾಂ ಯಃ ಅಭ್ಯಸೂಯತಿ – ಇದನ್ನು ನೇಮದ ನಿಷ್ಠೆ ಇರದವರಿಗೆ ಹೇಳಬೇಡ. ಭಕ್ತಿ ಇರದವನಿಗೆ ಎಂದೂ ಹೇಳಬೇಡ. ಕೇಳುವಾಸೆ ಇರದವನಿಗೂ ಹೇಳಬೇಡ. ನನ್ನ ಬಗೆಗೆ ಕಿಚ್ಚು ಪಡುವವನಿಗಂತೂ ಹೇಳಲೇಬೇಡ.
ಇಲ್ಲಿ ಕೃಷ್ಣ ಜ್ಞಾನದ ಪರಂಪರೆಯನ್ನು ಹೇಗೆ ರಕ್ಷಿಸಬೇಕು ಎನ್ನುವುದನ್ನು ವಿವರಿಸಿದ್ದಾನೆ. ಯಾರಿಗೆ ಆಳವಾದ ಚಿಂತನಶೀಲತೆ ಇಲ್ಲವೋ ಅವರಿಗೆ ಇದನ್ನು ಹೇಳಬೇಡ; ಚಿಂತನಶೀಲತೆ ಇದ್ದು ಕೇಳುವ ಆಸಕ್ತಿ ಇಲ್ಲದವರಿಗೆ ಇದನ್ನು ಹೇಳಬೇಡ; ಆಸಕ್ತಿ ಇದೆ ಆದರೆ ಭಕ್ತಿ/ಪ್ರೀತಿ ಇಲ್ಲ-ಅಂತವರಿಗೆ ಇದನ್ನು ಹೇಳಬೇಡ; ಎಲ್ಲಕ್ಕಿಂತ ಮಿಗಿಲಾಗಿ ಭಗವಂತನ ಬಗ್ಗೆ ಅಸಹನೆ,ಅಸೂಯೆ, ದ್ವೇಷವುಳ್ಳವರಿಗೆ ಸರ್ವತಾ ಹೇಳಲೇಬೇಡ. ಎಂದೂ ಅಧ್ಯಾತ್ಮವನ್ನು ಬೀದಿಯ ಸೊತ್ತಾಗಿಸಬೇಡ.
ಒಂದು ಕಾಲದಲ್ಲಿ ವೇದಾಂತವನ್ನು ಸಾರ್ವಜನಿಕವಾಗಿ ಬಿಚ್ಚಿಡಬಾರದು, ಅದನ್ನು ರಹಸ್ಯವಾಗಿಡಬೇಕು ಎನ್ನುವ ಅಭಿಪ್ರಾಯ ಹೆಚ್ಚಾಗಿ ಬೆಳೆಯಿತು. ಇದರ ಪರಿಣಾಮ ಕಾಲಕ್ರಮೇಣ ಮುಚ್ಚಿಟ್ಟ ಜ್ಞಾನವನ್ನು ತೆರೆಯುವವರೇ ಇಲ್ಲವಾಯಿತು. ಇಂದು ನಮ್ಮಲ್ಲಿ ಹೆಚ್ಚಿನವರು ಆಧ್ಯಾತ್ಮಿಕ ಗ್ರಂಥಗಳಿಗೆ ಆರತಿ ಮಾಡಿ ಕುಂಕುಮ ಹಚ್ಚಿ ಮುಚ್ಚಿಡುವವರೇ ಹೆಚ್ಚಾಗಿದ್ದಾರೆ. ಈ ಕಾರಣದಿಂದ ನಾವು ಮುಚ್ಚಿಟ್ಟ ಈ ಅಮೂಲ್ಯ ಜ್ಞಾನವನ್ನು ತೆರೆದು ಆಸಕ್ತಿವುಳ್ಳವರಿಗೆ ಕೊಡುವ ಕೆಲಸ ಮಾಡಬೇಕಾಗಿದೆ.
ಭಗವದ್ಗೀತೆಯ ಈ ಅಮೂಲ್ಯ ಸಂದೇಶದ ಅಧ್ಯಯನ ಮಾಡಿ ಮನನ ಮಾಡುವುದರಿಂದ ಸಿಗುವ ಫಲಶ್ರುತಿ ಏನು ಎನ್ನುವುದನ್ನು ಕೃಷ್ಣ ಮುಂದಿನ ನಾಲ್ಕು ಶ್ಲೋಕಗಳಲ್ಲಿ ವಿವರಿಸಿದ್ದಾನೆ. ಭಗವದ್ಗೀತೆಯ ನಿಜವಾದ ಫಲ ಮನುಷ್ಯನ ಪುರುಷಾರ್ಥದಲ್ಲಿ ಕೊನೆಯದಾದ ಮೋಕ್ಷ. ಅಧ್ಯಾತ್ಮ ವಿದ್ಯೆಯನ್ನು ಹೇಳುವ ಸಮಸ್ತ ಶಾಸ್ತ್ರಗಳ ಸಾರ ಭಗವದ್ಗೀತೆ. ಭಗವಂತನ ಸ್ವರೂಪವನ್ನು ತಿಳಿದು ಭಗವಂತನ ಲೋಕ ಸೇರಲು ಇದೊಂದೇ ಗ್ರಂಥ ಸಾಕು. ಸಮಸ್ತ ಶಾಸ್ತ್ರಗಳಲ್ಲಿನ ಸಮಸ್ತ ಸಾರವನ್ನು, ಸಮಸ್ತ ರಹಸ್ಯವನ್ನು ನಾವು ಈ ಕೃಷ್ಣಾರ್ಜುನ ಸಂವಾದದಲ್ಲಿ ಕಾಣಬಹುದು. ಈ ರೀತಿ ಎಲ್ಲಾ ಶಾಸ್ತ್ರಗಳ ಪೂರ್ಣ ಸಾರಸಂಗ್ರಹ ಅಡಕವಾಗಿರುವ ಗ್ರಂಥ ಇನ್ನೊಂದಿಲ್ಲ. ಇಂತಹ ಗೀತೆಯನ್ನು ನಾವು ಗುರು ಮುಖೇನ ತಿಳಿಯುವುದರಿಂದ; ಮನನ ಮಾಡುವುದರಿಂದ; ಇಲ್ಲಿ ಹೇಳಿರುವ ಸಾಧನಾ ಉಪಾಯವನ್ನು ಜೀವನದಲ್ಲಿ ಅನುಸರಿಸುವುದರಿಂದ; ನಾವು ತಿಳಿದ ಜ್ಞಾನವನ್ನು ಆಸಕ್ತರಿಗೆ ತಿಳಿಸುವುದರಿಂದ-ನಾವು ಭಗವಂತನ ಲೋಕವನ್ನು(ಮೋಕ್ಷವನ್ನು) ಸೇರಬಹುದು.
ಯ ಇಮಂ ಪರಮಂ ಗುಹ್ಯಂ ಮದ್ ಭಕ್ತೇಷ್ವಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥೬೮॥
ಯಃ ಇಮಂ ಪರಮಂ ಗುಹ್ಯಂ ಮತ್ ಭಕ್ತೇಷು ಅಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮ್ ಏವ ಏಷ್ಯತಿ ಅಸಂಶಯಃ – ತುಂಬಾ ಗೋಪ್ಯವಾದ ಇದನ್ನು ನನ್ನ ಭಕ್ತರಲ್ಲಿ ಅರುಹುವವನು ನನ್ನಲ್ಲಿ ಹಿರಿಯ ಭಕ್ತಿಯನ್ನು ಮಾಡಿ ನನ್ನನ್ನೇ ಸೇರುತ್ತಾನೆ; ಸಂಶಯವಿಲ್ಲ.
ಯಾರು ಇಂತಹ ಜ್ಞಾನವನ್ನು ಅರಿತು, ಅದನ್ನು 'ನನ್ನಲ್ಲಿ ಶ್ರದ್ಧಾಭಕ್ತಿಯುಳ್ಳ ಸಾಧಕನಿಗೆ' ಕೊಡುತ್ತಾರೋ, ಅವರು ನಿಶ್ಚಿತವಾಗಿ ನನ್ನನ್ನು ಬಂದು ಸೇರುತ್ತಾರೆ. ಇದರಲ್ಲಿ ಸಂಶಯವಿಲ್ಲ.
ನಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ ತಮಃ ।
ಭವಿತಾ ನಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ ॥೬೯॥
ನಚ ತಸ್ಮಾತ್ ಮನುಷ್ಯೇಷು ಕಶ್ಚಿತ್ ಮೇ ಪ್ರಿಯಕೃತ್ ತಮಃ ।
ಭವಿತಾ ನಚ ಮೇ ತಸ್ಮಾತ್ ಅನ್ಯಃ ಪ್ರಿಯತರಃ ಭುವಿ – ಮನುಷ್ಯರಲ್ಲಿ ಅವನಿಗಿಂತ ಹೆಚ್ಚು ಮೆಚ್ಚಿನವನು ನನಗೆ ಇನ್ನೊಬ್ಬನಿಲ್ಲ. ಅವನಿಗಿಂತ ಹೆಚ್ಚು ಮೆಚ್ಚಿನ ಇನ್ನೊಬ್ಬ ಭೂಮಿಯಲ್ಲಿ ಮುಂದೆ ಹುಟ್ಟಲಾರ.
“ಗೀತೆಯನ್ನು ತಿಳಿದು ಅದನ್ನು ಭಕ್ತ ಜನಾಂಗಕ್ಕೆ ತಲುಪಿಸುವ ಶ್ರೇಷ್ಠ ಕಾರ್ಯ ಮಾಡುವವರು ‘ಮನುಷ್ಯರಲ್ಲಿ’ ನನಗೆ ಅತ್ಯಂತ ಮೆಚ್ಚಿನವರು. ಇವರಿಗಿಂತ ಹೆಚ್ಚು ಇಷ್ಟವಾದದ್ದನ್ನು ಮಾಡುವ ಮಾನವ ಈ ಭೂಮಿಯ ಮೇಲೆ ಇಲ್ಲ” ಎನ್ನುತ್ತಾನೆ ಕೃಷ್ಣ. ಭಗವಂತನಿಗೆ ಜ್ಞಾನಿಗಳು ಅಚ್ಚುಮೆಚ್ಚು. ಅವರಿಗಿಂತಲೂ ಅಚ್ಚುಮೆಚ್ಚು ತಾವು ಜ್ಞಾನಿಗಳಾಗಿ, ಆ ಜ್ಞಾನದ ಸವಿಯನ್ನು ಸಮಾಜಕ್ಕೆ ಕೊಡುವವರು. “ಇವರು ಭೂಮಿಯಲ್ಲಿ ನನಗೆ ಇಷ್ಟವಾದದ್ದನ್ನು ಮಾಡುವವರಲ್ಲಿ ಸರ್ವಶ್ರೇಷ್ಠರು” ಎಂದಿದ್ದಾನೆ ಕೃಷ್ಣ.
ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ ।
ಜ್ಞಾನಯಜ್ಞೇನ ತೇನಾಹಮಿಷ್ಟಃ ಸ್ಯಾಮಿತಿ ಮೇ ಮತಿಃ ॥೭೦॥
ಅಧ್ಯೇಷ್ಯತೇ ಚ ಯಃ ಇಮಂ ಧರ್ಮ್ಯಂ ಸಂವಾದಮ್ ಆವಯೋಃ ।
ಜ್ಞಾನ ಯಜ್ಞೇನ ತೇನ ಅಹಮ್ ಇಷ್ಟಃ ಸ್ಯಾಮ್ ಇತಿ ಮೇ ಮತಿಃ -- ಜೀವನಧರ್ಮವನ್ನರುಹುವ ನಮ್ಮ ಈ ಮಾತುಕತೆಯನ್ನು ಅಧ್ಯಯನ ಮಾಡಿದರೂ ಕೂಡಾ ಜ್ಞಾನಯಜ್ಞದಿಂದ ನನ್ನನ್ನು ಪೂಜಿಸಿದಂತಾಯಿತು ಎಂದು ನನ್ನ ಆಶಯ.
ಒಂದು ವೇಳೆ ಗೀತೆಯ ಜ್ಞಾನವನ್ನು ಅರಗಿಸಿಕೊಂಡು ಇನ್ನೊಬ್ಬರಿಗೆ ಹೇಳುವ ಕ್ಷಮತೆ ನಮ್ಮಲ್ಲಿಲ್ಲದಿದ್ದರೆ, ಧರ್ಮ ವಿಷಯಕವಾದ ಈ ಕೃಷ್ಣಾರ್ಜುನ ಸಂವಾದವನ್ನು ಗುರುಮುಖದಲ್ಲಿ ಅಧ್ಯಯನ ಮಾಡಿದರೂ ಕೂಡಾ-ಅದು ಜ್ಞಾನ ಯಜ್ಞದಂತೆ ಭಗವಂತನ ಪೂಜೆಯಾಗುತ್ತದೆ. “ಇದು ನನ್ನ ಅಭಿಪ್ರಾಯ” ಎಂದು ಹೇಳುತ್ತಾನೆ ಕೃಷ್ಣ. ಭಗವಂತನ ಬಗೆಗೆ ಮನುಷ್ಯ ಏನೇನು ತಿಳಿದುಕೊಳ್ಳಬೇಕೋ, ಅದನ್ನು ತಿಳಿದು ಹೇಗೆ ಧರ್ಮದ ದಾರಿಯಲ್ಲಿ ಸಾಗಬೇಕು ಎನ್ನುವ 'ಜೀವನ ಧರ್ಮವನ್ನು' ಗೀತೆಯ ಮೂಲಕ ತಿಳಿದು ಪಾಲಿಸುವವ-ಮೋಕ್ಷವನ್ನು ಸೇರುತ್ತಾನೆ.
ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।
ಸೋSಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ ॥೭೧॥
ಶ್ರದ್ಧಾವಾನ್ ಅನಸೂಯಃ ಚ ಶೃಣುಯಾತ್ ಅಪಿ ಯಃ ನರಃ ।
ಸಃ ಅಪಿ ಮುಕ್ತಃ ಶುಭಾನ್ ಲೋಕಾನ್ ಪ್ರಾಪ್ನುಯಾತ್ ಪುಣ್ಯಕರ್ಮಣಾಮ್ – ನಂಬಿಕೆ ಇರುವ, ಕಿಚ್ಚು ಇರದ ಮನುಷ್ಯ ಕೇಳಿದರೂ ಸಾಕು. ಅಂತವನೂ ಪಾಪದಿಂದ ಬಿಡುಗಡೆಗೊಂಡು ಪುಣ್ಯಜೀವಿಗಳ ಮಂಗಲಮಯ ಲೋಕಗಳನ್ನು ಪಡೆದಾನು.
ಒಂದು ವೇಳೆ ಗೀತೆಯನ್ನು ಸ್ವಯಂ ಅಧ್ಯಯನ ಮಾಡುವ ಸಾಮರ್ಥ್ಯ ನಮ್ಮಲ್ಲಿ ಇಲ್ಲದೇ ಇದ್ದರೆ, ಯಾವುದೇ ಅಸೂಯೆ ಇಲ್ಲದೆ, ಶ್ರದ್ಧಾಭಕ್ತಿಯಿಂದ ತಿಳಿದವರಿಂದ ಕೇಳಿ ತಿಳಿದುಕೊಂಡರೂ ಸಾಕು- ನಾವು ನಮ್ಮ ಪಾಪವನ್ನು ತೊಳೆದುಕೊಂಡು ಭಗವಂತನ ಲೋಕವನ್ನು ಸೇರಬಹುದು. ಇದು ಕೃಷ್ಣನ ಭರವಸೆ.
ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ ।
ಕಚ್ಚಿದಜ್ಞಾನ ಸಂಮ್ಮೋಹಃ ಪ್ರನಷ್ಟಸ್ತೇ ಧನಂಜಯ ॥೭೨॥
ಕಚ್ಚಿತ್ ಏತತ್ ಶ್ರುತಂ ಪಾರ್ಥ ತ್ವಯಾ ಏಕಾಗ್ರೇಣ ಚೇತಸಾ ।
ಕಚ್ಚಿತ್ ಅಜ್ಞಾನ ಸಂಮ್ಮೋಹಃ ಪ್ರಣಷ್ಟಃ ತೇ ಧನಂಜಯ – ಪಾರ್ಥ, ಇದನ್ನು ಒಮ್ಮನದಿಂದ ಕಿವಿಗೊಟ್ಟು ಕೇಳಿದೆಯೇನು? ಧನಂಜಯಾ, ನಿನ್ನ ಅಜ್ಞಾನದ ಗೊಂದಲ ಕಳೆಯಿತೇನು?
ಇದು ಗೀತೆಯಲ್ಲಿ ಕೃಷ್ಣನ ಕೊನೇಯ ಮಾತು. ಎಲ್ಲವನ್ನು ವಿವರಿಸಿದ ಕೃಷ್ಣ ತನ್ನ ಶಿಷ್ಯ ಅರ್ಜುನನಲ್ಲಿ ಕೇಳುತ್ತಾನೆ: “ನಾನು ಹೇಳಿದ್ದು ನಿನ್ನ ಕಿವಿಯೊಳಗೆ ಹೋಗಿ ಹೃದಯಕ್ಕೆ ಮುಟ್ಟಿತೇನೋ? ಇದರಿಂದ ನಿನ್ನ ಮನಸ್ಸಿನಲ್ಲಿದ್ದ ತಪ್ಪು ತಿಳುವಳಿಕೆ ಗೊಂದಲ ಕಳೆಯಿತೇ?" ಎಂದು. ಇಲ್ಲಿ ಕೃಷ್ಣ -ಗುರು ತನ್ನ ಶಿಷ್ಯನಲ್ಲಿ ಕೇಳುವಂತೆ ಅರ್ಜುನನನ್ನು ಪ್ರಶ್ನಿಸಿದ್ದಾನೆ. ಇಲ್ಲಿಗೆ ಗೀತೆಯಲ್ಲಿ ಕೃಷ್ಣನ ನುಡಿಗಳುಳ್ಳ ೫೭೪ ಶ್ಲೋಕಗಳು ಮುಗಿಯಿತು. ಅರ್ಜುನನ ಒಟ್ಟು ೮೪ ಶ್ಲೋಕಗಳಲ್ಲಿ ಕೊನೇಯ ಶ್ಲೋಕ ಮತ್ತು ಸಂಜಯನ ಒಟ್ಟು ೪೧ ಶ್ಲೋಕಗಳಲ್ಲಿ ಕೊನೇಯ ಐದು ಶ್ಲೋಕ ಈ ಅಧ್ಯಾಯದ ಉಳಿದ ಭಾಗ. [ಕೃಷ್ಣ-೫೭೪; ಅರ್ಜುನ-೮೪; ಸಂಜಯ-೪೧ ; ಧೃತರಾಷ್ಟ್ರ-೧ ; ಒಟ್ಟು ೭೦೦ ಶ್ಲೋಕಗಳು].
ಅರ್ಜುನ ಉವಾಚ ।
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ ಪ್ರಸಾದಾನ್ಮಯಾSಚ್ಯುತ ।
ಸ್ಥಿತೋSಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ॥೭೩॥
ಅರ್ಜುನಃ ಉವಾಚ-ಅರ್ಜುನ ಹೇಳಿದನು.
ನಷ್ಟಃ ಮೋಹಃ ಸ್ಮೃತಿ ಲಬ್ದಾ ತ್ವತ್ ಪ್ರಸಾದಾತ್ ಮಯಾ ಅಚ್ಯುತ ।
ಸ್ಥಿತಃ ಅಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ –ಅಚ್ಯುತಾ, ಗೊಂದಲ ಕಳೆಯಿತು. ನಿನ್ನ ಹಸಾದದಿಂದ ನನ್ನ ನೆನಪು ಮರುಕಳಿಸಿತು. ಸಂದೇಹವಳಿದು ಗಟ್ಟಿಯಾಗಿ ನಿಂತಿದ್ದೇನೆ. ನಿನ್ನ ಮಾತಿನಂತೆ ನಡೆಯುತ್ತೇನೆ.
ನನ್ನಲ್ಲಿದ್ದ ತಪ್ಪು ತಿಳುವಳಿಕೆ ಕಳೆಯಿತು. ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯಲಿಕ್ಕಾಗದ ಸ್ಥಿತಿ ನನ್ನಲ್ಲಿತ್ತು- ಅದು ಹೊರಟು ಹೋಯಿತು. ಬಂಧುಮೋಹದಲ್ಲಿ ಹೊರಟುಹೋಗಿದ್ದ ನನ್ನ ಸ್ಮೃತಿ ಮರಳಿ ಬಂತು. ಅಚ್ಯುತನಾದ ನಿನ್ನ ಅನುಗ್ರಹದಿಂದ ನನ್ನ ಮರೆವು ಮರೆಯಾಯ್ತು. ನನ್ನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಿನ್ನ ಮಾತು ಮನವರಿಕೆಯಾಗಿದೆ. ನಿನ್ನ ಮಾತಿನಂತೆಯೇ ನಡೆಯುತ್ತೇನೆ.
ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ ಅರ್ಜುನ ಕೃಷ್ಣನ ಉಪದೇಶದಿಂದ ‘ನನಗೆ ಜ್ಞಾನ ಬಂತು’ ಎಂದು ಹೇಳದೇ- ಸ್ಮೃತಿ ಬಂತು ಎಂದಿದ್ದಾನೆ. ಇದರಿಂದ ನಮಗೆ ತಿಳಿವುದೇನೆಂದರೆ- ಅರ್ಜುನ ಆ ಕಾಲದ ಮಹಾಜ್ಞಾನಿ. ಆದರೆ ಯುದ್ಧರಂಗದಲ್ಲಿ ಆತ ತನ್ನೆಲ್ಲಾ ಸ್ಮೃತಿಯನ್ನು ಕಳೆದುಕೊಂಡು ಕುಸಿದು ಕುಳಿತ. ಇದೊಂದು ಭಗವಂತನ ಆಟ. ಪ್ರಪಂಚಕ್ಕೆ ಇಂತಹ ಅಮೂಲ್ಯವಾದ ಕೃತಿಯನ್ನು ನೀಡುವುದಕ್ಕೋಸ್ಕರ ಕೃಷ್ಣ ಅರ್ಜುನನನ್ನು ಈ ರೀತಿ ಮಾಧ್ಯಮವಾಗಿ ಬಳಸಿದ. ಭಗವದ್ಗೀತೆಯಲ್ಲಿ ಏನು ಸಂದೇಶವಿದೆಯೋ ಅದರ ಪ್ರಾಯೋಗಿಕ ವಿವರಣೆ ಮಹಾಭಾರತ. ಅಲ್ಲಿ ಬರುವ ಒಂದೊಂದು ಪಾತ್ರಗಳೂ ಗೀತೆಯ ಒಂದೊಂದು ಸಂದೇಶವನ್ನು ಪ್ರತಿನಿಧಿಸುತ್ತವೆ. ಮನಃಶಾಸ್ತ್ರೀಯವಾಗಿ ನೋಡಿದಾಗ ಮಹಾಭಾರತ ಐದು ಸಾವಿರ ವರ್ಷಗಳ ಹಿಂದೆ ಕೌರವ ಪಾಂಡವರ ನಡುವೆ ನಡೆದ ಇತಿಹಾಸವಲ್ಲ. ಅದು ನಮ್ಮ ಅಂತರಂಗದ, ನಮ್ಮ ಜೀವನದ ಹೋರಾಟ. ಜ್ಞಾನ ಸಂದೇಶ(Theory) ಮತ್ತು ಅದರ ಪ್ರಾಯೋಗಿಕ ನಿರೂಪಣೆಯನ್ನು(Practical presentation) ನಮಗೆ ಭಗವಂತ ನೀಡಿರುವುದು ಮಹಾಭಾರತದ ಮೂಲಕ.
ಸಂಜಯ ಉವಾಚ ।
ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
ಸಂವಾದಮಿಮಮಶ್ರೌಷಮದ್ಭುತಂ ರೋಮಹರ್ಷಣಮ್ ॥೭೪॥
ಸಂಜಯ ಉವಾಚ-ಸಂಜಯ ಹೇಳಿದನು:
ಇತಿ ಅಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।
ಸಂವಾದಮ್ ಇಮಮ್ ಅಶ್ರೌಷಮ್ ಅದ್ಭುತಂ ರೋಮಹರ್ಷಣಮ್ – ಹೀಗೆ ಮಹಾತ್ಮರಾದ ವಾಸುದೇವ ಮತ್ತು ಪಾರ್ಥರ ಅಚ್ಚರಿಯ ನವಿರೇಳಿಸುವ ಈ ಮಾತುಕತೆಯನ್ನು ನಾನು ಕೇಳಿಸಿಕೊಂಡೆ.
ಸಂಜಯ ಕೃಷ್ಣಾರ್ಜುನರ ಈ ಅಪೂರ್ವ ಸಂವಾದವನ್ನು ಸಾಕ್ಷಾತ್ ನೋಡಿ ವಿಸ್ಮಯಗೊಂಡ. ಆತ ಹೇಳುತ್ತಾನೆ: ನನ್ನ ಕಣ್ಮುಂದೆ ನಡೆದ ವಾಸುದೇವ ಮತ್ತು ಅರ್ಜುನರ ಈ ಸಂವಾದವನ್ನು ನಾನು ಕೇಳಿಸಿಕೊಂಡೆ. ಇದು ನನ್ನ ಭಾಗ್ಯ. ನನಗಾದ ಅನುಭವವನ್ನು ಶಬ್ದಗಳಿಂದ ವರ್ಣಿಸಲಾಗದು. ಇದೊಂದು ಅದ್ಭುತ. ಈ ಸಂವಾದವನ್ನು ಕೇಳಿ ಆನಂದದಿಂದ ಮೈನವಿರೆದ್ದಿದೆ. ಆನಂದದ ಪುಳಕ ನನ್ನನ್ನು ಆವರಿಸಿಕೊಂಡು ಬಿಟ್ಟಿದೆ.
ವ್ಯಾಸಪ್ರಸಾದಾಚ್ಛ್ರುತವಾನೇತದ್ ಗುಹ್ಯಮಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ ॥೭೫॥
ವ್ಯಾಸಪ್ರಸಾದಾತ್ ಶ್ರುತವಾನ್ ಏತತ್ ಗುಹ್ಯಮ್ ಅಹಂ ಪರಮ್ ।
ಯೋಗಂ ಯೋಗೇಶ್ವರಾತ್ ಕೃಷ್ಣಾತ್ ಸಾಕ್ಷಾತ್ ಕಥಯತಃ ಸ್ವಯಮ್ – ವ್ಯಾಸರ ಕರುಣೆಯಿಂದ ನಾನು ಯೋಗದ ದಾರಿಯನ್ನು, ಈ ಹಿರಿಯ ಗುಟ್ಟನ್ನು ಎಲ್ಲಾ ಯೋಗಮಾರ್ಗಗಳ ಒಡೆಯನಾದ ಕೃಷ್ಣನ ಬಾಯಿಯಿಂದಲೇ ನೇರವಾಗಿ ಕೇಳಿಸಿಕೊಂಡೆ.
ಪರಮ ಪೂಜ್ಯ ಗುರುಗಳಾದ ವ್ಯಾಸರ ಅನುಗ್ರಹದಿಂದ ನಾನು ಈ ಅದ್ಭುತ ಭಾಗ್ಯವನ್ನು ಪಡೆದೆ. ಬೇಕು ಎಂದರೆ ಸಿಗದ ಪ್ರಪಂಚದ ಅತ್ಯಂತ ರಹಸ್ಯಗಳ ರಹಸ್ಯ ನನಗೂ ತಿಳಿಯಿತು. ಇಡೀ ಜಗತ್ತಿನ ಎಲ್ಲಾ ಶಕ್ತಿಗಳ ಒಂದು ಸಮಷ್ಟಿರೂಪವಾದ ಯೋಗೇಶ್ವರ ಕೃಷ್ಣನಿಂದ ಅಧ್ಯಾತ್ಮದ ಸಾರ ಸರ್ವಸ್ವವನ್ನು ಸಾಕ್ಷಾತ್ ಕೇಳಿಸಿಕೊಂಡೆ.
ರಾಜನ್ ಸಂಸ್ಮೃತ್ಯಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।
ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ ॥೭೬॥
ರಾಜನ್ ಸಂಸ್ಮೃತ್ಯಸಂಸ್ಮೃತ್ಯ ಸಂವಾದಮ್ ಇಮಮ್ ಅದ್ಭುತಮ್ ।
ಕೇಶವ ಅರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುಃಮಹುಃ – ದೊರೆಯೇ, ಕೇಶವಾರ್ಜುನರ ಅಚ್ಚರಿಯ ಈ ಮೆಚ್ಚಿನ ಮಾತುಕತೆಯನ್ನು ನೆನೆಯುತ್ತಾ ನೆನೆಯುತ್ತಾ ಮತ್ತೆ ಮತ್ತೆ ನವಿರುಗೊಳ್ಳುತ್ತಿದ್ದೇನೆ.
ಓ ದೊರೆಯೇ(ಧೃತರಾಷ್ಟ್ರನನ್ನು ಕುರಿತು), ಈ ಅದ್ಭುತ ಸಂವಾದವನ್ನು ನೆನೆ-ನೆನೆದು ವಿಸ್ಮಯ, ಆನಂದ, ರೋಮಾಂಚನ, ಆಶ್ಚರ್ಯ. ಇಂತದ್ದು ಹಿಂದೆ ಆಗಿಲ್ಲ ಮುಂದೆ ಆಗಲಿಕ್ಕಿಲ್ಲ. ಇಡೀ ವಿಶ್ವವನ್ನು ನಿಯಂತ್ರಿಸುವ, ಸಮಸ್ತ ದೇವಾಧಿದೇವತೆಗಳನ್ನು ನಿಯಂತ್ರಿಸುವ ಶಕ್ತಿ- ಇಲ್ಲಿ ಅರ್ಜುನನ ಸಾರಥಿ ರೂಪದಲ್ಲಿ ನಿಂತು ನುಡಿದ ಈ ಅದ್ಭುತ ಸಂದೇಶವನ್ನು- ಹಿಂದೆ ಯಾರೂ ಕೇಳಿದ್ದೂ ಇಲ್ಲ, ಅನುಭವಿಸಿದ್ದೂ ಇಲ್ಲ. ಇದನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಪುಳಕಗೊಳ್ಳುತ್ತಿದ್ದೇನೆ.
ತಚ್ಚ ಸಂಸ್ಮೃತ್ಯಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ ।
ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃಪುನಃ ॥೭೭॥
ತತ್ ಚ ಸಂಸ್ಮೃತ್ಯಸಂಸ್ಮೃತ್ಯ ರೂಪಮ್ ಅತ್ಯದ್ಭುತಂ ಹರೇಃ ।
ವಿಸ್ಮಯಃ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃಪುನಃ -- ದೊರೆಯೇ, ಹರಿಯ ಅಚ್ಚರಿಯ ರೂಪವನ್ನು ನೆನೆಯುತ್ತಾ ನನಗೆ ಬೆರಗೋ ಬೆರಗು. ಮೈಯಲ್ಲಾ ಮರಳಿಮರಳಿ ನವಿರು.
ಕೃಷ್ಣನ ವಿಶ್ವರೂಪ ದರ್ಶನ ಪಡೆದಿದ್ದ ಸಂಜಯ ಮುಂದುವರಿದು ಹೇಳುತ್ತಾನೆ: ಓ ದೊರೆಯೇ, ನಮ್ಮ ಸಮಸ್ತ ಸಮಸ್ಯೆಗಳನ್ನು ಪರಿಹರಿಸುವ(ಹರಿಃ) ಆ ಪರಮಾತ್ಮ, ಇಂದು ನಮಗೆ ಸಮಸ್ತ ಸಮಸ್ಯೆಯನ್ನೂ ಪರಿಹರಿಸುವ ಈ ಅದ್ಭುತ ಸಂದೇಶವನ್ನು ಕೊಟ್ಟ. ನಾನು ಕೃಷ್ಣನನ್ನು ಕಂಡೆ; ಅವನ ಅದ್ಭುತ ವಿಶ್ವರೂಪವನ್ನು ಕಂಡೆ; ಅವನ ಮಾತನ್ನು ಕೇಳಿದೆ; ಇದು ನನ್ನ ಮಾತಿಗೆ ಮೀರಿದ ಸಂತೋಷ. ನಾನು ಖುಷಿಯಿಂದ ತುಂಬಿಹೋಗಿದ್ದೇನೆ.
ಹೀಗೆ ತನ್ನ ಆನಂದವನ್ನು ಹಂಚಿಕೊಂಡ ಸಂಜಯ ಮುಂದೆ ತನಗನಿಸಿದ ಫಲಶ್ರುತಿಯನ್ನು ಹೇಳುತ್ತಾನೆ.
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ॥೭೮॥
ಯತ್ರ ಯೋಗೇಶ್ವರಃ ಕೃಷ್ಣಃ ಯತ್ರ ಪಾರ್ಥಃ ಧನುರ್ಧರಃ ।
ತತ್ರ ಶ್ರೀಃ ವಿಜಯಃ ಭೂತಿಃ ಧ್ರುವಾ ನೀತಿಃ ಮತಿಃ ಮಮ –ಯೋಗಮಾರ್ಗಗಳೊಡೆಯನಾದ ಕೃಷ್ಣನಿರುವೆಡೆ, ಬಿಲ್ಗಾರನಾದ ಪಾರ್ಥನಿರುವೆಡೆ(ನರ-ನಾರಾಯಣನಿರುವೆಡೆ) ಸಿರಿ, ಗೆಲುವು, ಉನ್ನತಿಕೆ ಮತ್ತು ಸ್ಥಿರವಾದ ನೀತಿ ನೆಲೆಸಿರುತ್ತದೆ ಎಂದು ನನ್ನ ನಿರ್ಧಾರ.
ಎಲ್ಲಿಎಲ್ಲಿ ನರ-ನಾರಾಯಣರಿರುತ್ತಾರೋ ಅಲ್ಲಿ ಎಲ್ಲವೂ ಇದೆ. ಎಲ್ಲಾ ಬಗೆಯ ಸಂಪತ್ತು, ಗೆಲುವು, ಅಂತರಂಗ ಸಾಧನೆ, ಬಾಹ್ಯ ಉನ್ನತಿ ಎಲ್ಲವೂ ನೆಲೆಸಿರುತ್ತದೆ. ಇದು ನನ್ನ ನಿರ್ಧಾರ ಎನ್ನುತ್ತಾನೆ ಸಂಜಯ.
ಭಗವದ್ಗೀತೆ ನಮಗೆ ಪ್ರಾಪಂಚಿಕ ಸುಖದ ಸೆಳೆತವನ್ನು ಮೀರಿ ಎತ್ತರಕ್ಕೇರಲು ಬೇಕಾದ ಅಧ್ಯಾತ್ಮ ಜ್ಞಾನ ಮತ್ತು ವೇದ ವಿದ್ಯೆಯನ್ನು ಕೊಡುವ ಅಪೂರ್ವ ಗ್ರಂಥ. ಗೀತೆ ಮನಸ್ಸಿನಲ್ಲಿ ನಿಂತರೆ ಸುಳ್ಳು, ಮೋಸ- ಸಾಧ್ಯವಿಲ್ಲ. ಎಲ್ಲಿ ಗೀತೆಯ ಅಧ್ಯಯನವಿದೆಯೋ ಅಲ್ಲಿ ಪ್ರಾಮಾಣಿಕತೆ ಇದೆ. ಗೀತೆಯನ್ನು ಓದಿ, ಗೀತೆಯನ್ನು ಮುಟ್ಟಿ ನಾವು ಸುಳ್ಳು ಹೇಳಿದರೆ, ಅಪ್ರಾಮಾಣಿಕವಾಗಿ ಬದುಕಿದರೆ ಅದು ಆ ಗೀತಾಚಾರ್ಯನಿಗೆ ನಾವು ಮಾಡುವ ದ್ರೋಹ.
ಎಲ್ಲಿ ಗೀತೆಯ ಜ್ಞಾನವಿದೆಯೋ ಅಲ್ಲಿ ಗೆಲುವಿದೆ, ಉನ್ನತಿ ಇದೆ, ನೀತಿ ಇದೆ, ಸಮಷ್ಟಿಯೂ ಇದೆ- ಎನ್ನುವಲ್ಲಿಗೆ ಭಗವದ್ಗೀತೆಯ ಅತ್ಯದ್ಭುತ ಸಂದೇಶ ಕೊನೆಗೊಂಡಿತು.
ಇತಿ ಅಷ್ಟಾದಶೋSಧ್ಯಾಯಃ
ಹದಿನೆಂಟನೆಯ ಅಧ್ಯಾಯ ಮುಗಿಯಿತು
|| ಸರ್ವೇ ಜನಾಃ ಸುಖಿನೋ ಭವಂತು ||
|| ಶ್ರೀ ಕೃಷ್ಣಾರ್ಪಣಮಸ್ತು ||
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.