ಈ ಅಧ್ಯಾಯ ಭಗವಂತನ ಉಪಾಸನೆ ಮಾಡುವಾಗ ಆತನನ್ನು ಹೇಗೆ ಚಿಂತನೆ ಮಾಡಬೇಕು ಎಂದು ಹೇಳುವ ಅಧ್ಯಾಯ. ಇದು ಭಗವಂತನ ವಿಶ್ವರೂಪ ದರ್ಶನ ಅಧ್ಯಾಯ. ಕೃಷ್ಣ ಅರ್ಜುನನಿಗೆ ದಿವ್ಯನೇತ್ರವನ್ನು ಕರುಣಿಸಿ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಆ ವಿಶ್ವರೂಪದ ವರ್ಣನೆ ಇಲ್ಲಿದೆ. ಇಲ್ಲಿ ಸರ್ವವ್ಯಾಪ್ತ, ಸರ್ವಾಂತರ್ಯಾಮಿ, ಸರ್ವಸಮರ್ಥ ಭಗವಂತನ ಚಿಂತನೆ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನವಿದೆ. ಭಗವಂತನ ರೂಪವನ್ನು ಯಾವುದೋ ಒಂದು ಲೌಕಿಕ ಅನುಭವದೊಂದಿಗೆ ಸಮೀಕರಿಸಲು ಸಾಧ್ಯವಿಲ್ಲ. ಅದು ಲೋಕಾತೀತ ಅನುಭವ. ಆ ಅದ್ಭುತ ಅನುಭವದ ಚಿತ್ರಣ ಈ ಅಧ್ಯಾಯ.
ಭಗವಂತನ ಸರ್ವಗತವಾದ ವಿಶ್ವರೂಪವನ್ನು ಎಲ್ಲರೂ ಧ್ಯಾನ ಮಾಡಲು ಸಾಧ್ಯವಿಲ್ಲ. ಆದರೆ ಎಲ್ಲಾ ಕಡೆ ತುಂಬಿರುವ ಭಗವಂತನ ಕಿಂಚಿತ್ ದರ್ಶನ ಪ್ರತಿಯೊಬ್ಬರೂ ಧ್ಯಾನ ಯೋಗದಲ್ಲಿ ಪಡೆಯಲು ಸಾಧ್ಯವಿದೆ. ಹೇಗೆ ಅರ್ಜುನನಿಗೆ ಕೃಷ್ಣ ತನ್ನ ವಿಶ್ವರೂಪವನ್ನು ತೋರಿಸಿದನೋ ಹಾಗೆ ನಮಗೆ ಧ್ಯಾನದಲ್ಲಿ ಕೂಡಾ ತನ್ನ ರೂಪವನ್ನು ಆತನೇ ತೋರಿಸಬೇಕು. ಇದು ಹೊರಪ್ರಪಂಚದಲ್ಲಿ ಕಾಣುವ ರೂಪವಲ್ಲ. ನಾವು ನಮ್ಮ ಒಳಗಣ್ಣನ್ನು ತೆರೆದು ಕುಳಿತು ಧ್ಯಾನ ಮಾಡಬೇಕು, ಭಗವಂತನಲ್ಲಿ ಶರಣಾಗಬೇಕು. ಕಾತರತೆಯಿಂದ ಕರೆದಾಗ ಒಳಗಿನಿಂದ ಏನು ಅನುಭೂತಿ ಬರುತ್ತದೋ ಅದು ಲೌಕಿಕ ಅನುಭೂತಿಯನ್ನು ಮೀರಿದ ವಿಚಾರ.
ಈ ಅಧ್ಯಾಯದಲ್ಲಿ ಭಗವಂತನ ಮಾತು ಕಡಿಮೆ. ಇಲ್ಲಿ ಕೃಷ್ಣನ ವಿಶ್ವರೂಪವನ್ನು ಕಂಡವರ ಮಾತಿದೆ. ಅವರು ಕಂಡ ರೀತಿಯನ್ನು ಕೇಳಿ ನಾವು ಭಗವಂತನನ್ನು ಕಾಣಲು ಪ್ರಯತ್ನ ಮಾಡಬೇಕು. ಇದು ನಮ್ಮ ಅಂತರಂಗದ ಅಧ್ಯಾತ್ಮದ ಸಾಕ್ಷಾತ್ಕಾರಕ್ಕೆ ಪೂರಕವಾದ, ಧ್ಯಾನದ ದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಬಹಳ ಮಹತ್ವದ ಅಧ್ಯಾಯ. ಬನ್ನಿ, ವ್ಯಾಸರು ದಾಖಲಿಸಿದ ಭಗವಂತನ ಅಪೂರ್ವ ವಿಶ್ವರೂಪ ವರ್ಣನೆಯನ್ನು ಕೇಳಿ ಧನ್ಯರಾಗೋಣ.
ಅಧ್ಯಾಯಕ್ಕೆ ಪ್ರವೇಶಿಸುವ ಮುನ್ನ ನಾವು ಒಂದು ವಿಚಾರವನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಕೆಲವರಿಗೆ ಒಂದು ತಪ್ಪು ತಿಳುವಳಿಕೆ ಇದೆ. “ಅರ್ಜುನನಿಗೆ ಭಗವಂತನ ಸಂದೇಶವನ್ನು ಮನವರಿಕೆ ಮಾಡಿಸಲು ಕೃಷ್ಣ ತನ್ನ ವಿಶ್ವರೂಪ ದರ್ಶನ ಮಾಡಿಸಬೇಕಾಯಿತು” ಎಂದು. “ಸ್ವತಃ ಶ್ರೀಕೃಷ್ಣನಿಂದಲೇ ಉಪದೇಶ ಪಡೆದರೂ ಸಹ ಅರ್ಜುನನಿಗೆ ಮನವರಿಕೆ ಆಗಲಿಲ್ಲ, ಇನ್ನು ನಮ್ಮ ಪಾಡೇನು? ನಮಗೆ ಯಾರು ವಿಶ್ವರೂಪ ದರ್ಶನ ಮಾಡಿಸುತ್ತಾರೆ”-ಎಂದು ಯೋಚಿಸುವವರಿದ್ದಾರೆ. ಆದರೆ ಇದು ನಮ್ಮ ತಪ್ಪು ತಿಳುವಳಿಕೆ. ಅರ್ಜುನನಿಗೆ ಭಗವಂತನ ಸಂದೇಶ ಪೂರ್ಣ ಮನವರಿಕೆ ಆಗಿತ್ತು. ಈ ವಿಚಾರ ಈ ಅಧ್ಯಾಯದ ಮೊದಲ ಶ್ಲೋಕದಲ್ಲೇ ತಿಳಿಯುತ್ತದೆ. ಅರ್ಜುನ ಹೇಳುತ್ತಾನೆ “ಮೋಹೋಯಂ ವಿಗತೋ ಮಮ”- ‘ನಿನ್ನ ಮಹಿಮೆ ತಿಳಿದು ನನ್ನ ಎಲ್ಲಾ ಸಂಶಯವೂ ಕಳೆಯಿತು’ ಎಂದು. ಇದರಿಂದ ತಿಳಿಯುವುದೇನೆಂದರೆ ಅರ್ಜುನ ಭಗವಂತನ ವಿಶ್ವರೂಪ ದರ್ಶನ ಬಯಸಿದ್ದು ಕೇವಲ ನೋಡಿ ಧನ್ಯನಾಗುವುದಕ್ಕೋಸ್ಕರವೇ ಹೊರತು, ಪುರಾವೆಗಾಗಿ ಅಲ್ಲ. ಸಾಮಾನ್ಯವಾಗಿ ಮನುಷ್ಯ ಸ್ವಭಾವವೇನೆಂದರೆ ಒಂದು ವಿಷಯವನ್ನು ಕೇಳಿದ ಮೇಲೆ ಅದನ್ನೊಮ್ಮೆ ನೋಡಬೇಕು ಎನ್ನುವ ಸಹಜ ಅಭಿಲಾಷೆ. ಅರ್ಜುನ ಕೃಷ್ಣನ ಮುಂದಿಟ್ಟಿರುವುದು ಕೂಡಾ ಇಂತಹದ್ದೇ ಬಯಕೆಯನ್ನು. ಮುಂದಿನ ನಾಲ್ಕು ಶ್ಲೋಕಗಳಲ್ಲಿ ಈ ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.
ಅರ್ಜುನ ಉವಾಚ ।
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಮ್।
ಯತ್ ತ್ವಯೋಕ್ತಂ ವಚಸ್ತೇನ ಮೋಹೋSಯಂ ವಿಗತೋ ಮಮ ॥೧॥
ಅರ್ಜುನಃ ಉವಾಚ- ಅರ್ಜುನ ಹೇಳಿದನು:
ಮತ್ ಅನುಗ್ರಹಾಯ ಪರಮಮ್ ಗುಹ್ಯಮ್ ಅಧ್ಯಾತ್ಮ ಸಂಜ್ಞಿತಮ್।
ಯತ್ ತ್ವಯಾ ಉಕ್ತಮ್ ವಚಃ ತೇನ ಮೋಹಃ ಅಯಮ್ ವಿಗತಃ ಮಮ –- ನನ್ನ ಮೇಲೆ ದಯೆದೋರಲೆಂದು, ಅಧ್ಯಾತ್ಮವೆಂಬ ಹಿರಿಯ ಗುಟ್ಟನ್ನು ನೀನು ನುಡಿದೆ. ಆ ನುಡಿಯಿಂದ ನನ್ನೀ ಮಂಕು ಕಳೆಯಿತು.
ಅರ್ಜುನ ಹೇಳುತ್ತಾನೆ: “ನನ್ನ ಮೇಲಿನ ಅನುಗ್ರಹದಿಂದ ಅಧ್ಯಾತ್ಮದ ಪರಮ ಗುಹ್ಯವಾದ ವಿಚಾರವನ್ನು ನನಗೆ ಹೇಳಿದಿ” ಎಂದು. ಇಲ್ಲಿ ‘ಅನುಗ್ರಹ’ ಎಂದರೆ-ತಮ್ಮಿಂದ ಚಿಕ್ಕವರನ್ನು ಸರಿದಾರಿಯಲ್ಲಿ ತಂದು, ಎತ್ತರಕ್ಕೇರಿಸಿ ಉದ್ಧಾರ ಮಾಡಬೇಕು ಎಂಬ ಹಿರಿಯರ ಇಚ್ಛೆ. “ದಾರಿ ತಪ್ಪಿ ನಡೆಯಲಿದ್ದ ನನ್ನನ್ನು ಸರಿದಾರಿಗೆ ತಂದು ಉದ್ಧಾರ ಮಾಡಿದಿ” ಎನ್ನುವ ಭಾವವನ್ನು ಅರ್ಜುನ ವ್ಯಕ್ತಪಡಿಸಿದ್ದಾನೆ. ಇಲ್ಲಿ ‘ಮತ್’ ಎನ್ನುವ ಪದ ಬಳಕೆಯಾಗಿದೆ. ‘ಮತ್’ ಎಂದರೆ ಕೇವಲ ‘ನನ್ನ ಅಥವಾ ನನಗೆ’ ಅನ್ನುವ ಅರ್ಥವಷ್ಟೇ ಅಲ್ಲ. ‘ಮತ್’ ಎನ್ನುವುದು ಯತ್ ಇದ್ದಂತೆ. ‘ಮಾತೀತಿ ಮತ್’-ಅಂದರೆ ‘ಸಮಸ್ತ ಜ್ಞಾನಿಗಳು’ ಅನ್ನುವ ಅರ್ಥವನ್ನು ಕೊಡುತ್ತದೆ. ಆದ್ದರಿಂದ ಮದನುಗ್ರಹ ಅಂದರೆ ‘ಸಮಸ್ತ ಜ್ಞಾನಿಗಳ ಉದ್ಧಾರಕ್ಕೋಸ್ಕರ’ ಎಂದರ್ಥ. ಭಗವಂತ ಸಮಸ್ತ ಮನುಕುಲಕ್ಕೆ ಈ ಅಪೂರ್ವ ಸಂದೇಶವನ್ನು ತಲುಪಿಸಲು ಗೀತೆಯನ್ನು ಅರ್ಜುನನಿಗೆ ಉಪದೇಶ ಮಾಡಿ, ಅದನ್ನು ತಾನೇ ವ್ಯಾಸರೂಪನಾಗಿ ದಾಖಲಿಸಿ ನಮಗೆ ಕೊಟ್ಟನೇ ಹೊರತು, ಕೇವಲ ಅರ್ಜುನನಿಗೋಸ್ಕರ ಹೇಳಿದ್ದಲ್ಲ.
ಈ ಪ್ರಪಂಚದಲ್ಲಿ ಅತ್ಯಂತ ಗೋಪ್ಯವಾಗಿರಬೇಕಾದ ವಿದ್ಯೆ-ಅಧ್ಯಾತ್ಮ ವಿದ್ಯೆ. ಯಾವಾಗಲೂ ಅಪೂರ್ವ ವಿಷಯವನ್ನು ಗೋಪ್ಯವಾಗಿಡುತ್ತಾರೆ. ಏಕೆಂದರೆ ಅದು ದುರುಪಯೋಗವಾಗಬಾರದು ಮತ್ತು ಅದರ ಮಹತ್ವ ತಿಳಿಯದವರಿಗೆ ತಲುಪಬಾರದು. ಅಧ್ಯಾತ್ಮ-ಮನೋವಿಜ್ಞಾನ, ಜೀವವಿಜ್ಞಾನ ಮತ್ತು ಪರಮಾತ್ಮವಿಜ್ಞಾನ. ಇಂತಹ ಅಪೂರ್ವ ವಿದ್ಯೆಯನ್ನು ಕೃಷ್ಣ ಅರ್ಜುನನ ಮುಂದೆ ತೆರೆದಿಟ್ಟಿರುವುದಕ್ಕೆ ಅರ್ಜುನ ಭಗವಂತನನ್ನು ಕೊಂಡಾಡುತ್ತಾನೆ ಮತ್ತು ಹೇಳುತ್ತಾನೆ: “ಇದರಿಂದ ನನ್ನೆಲ್ಲಾ ಮಾನಸಿಕ ಗೊಂದಲ ಹೊರಟು ಹೋಗಿ ಮೋಹ ಕಳೆಯಿತು” ಎಂದು.
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥೨॥
ಭವ ಅಪ್ಯಯೌ ಹಿ ಭೂತಾನಾಮ್ ಶ್ರುತೌ ವಿಸ್ತರಶಃ ಮಯಾ ।
ತ್ವತ್ತಃ ಕಮಲಪತ್ರ ಅಕ್ಷ ಮಾಹಾತ್ಮ್ಯಮ್ ಅಪಿ ಚ ಅವ್ಯಯಮ್ –- ಜೀವಿಗಳ ಹುಟ್ಟು ಸಾವುಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ; ಓ ತಾವರೆ ಎಸಳಂಥ ಕಣ್ಗಳವನೇ, ನಿನ್ನ ಅಳಿವಿರದ ಮಹಿಮೆಯನ್ನು ಕೂಡಾ.
“ಜೀವಿಗಳ ಭವ ಮತ್ತು ಅಪ್ಯಯಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ” ಎನ್ನುತ್ತಾನೆ ಅರ್ಜುನ. ಇಲ್ಲಿ ಭವ ಮತ್ತು ಅಪ್ಯಯ ಎನ್ನುವುದಕ್ಕೆ ಹುಟ್ಟು-ಸಾವು, ಸೃಷ್ಟಿ-ಸಂಹಾರ ಎನ್ನುವ ಅರ್ಥವಲ್ಲದೆ ಇನ್ನೊಂದು ಬಹಳ ರೋಚಕವಾದ ಅರ್ಥವಿದೆ. ವೇದಕಾಲದ ಋಷಿಗಳು ಇದನ್ನು ಒಂದು ಹೊಸ ಅರ್ಥದಲ್ಲಿ ಬಳಸುತ್ತಿದ್ದರು. “ಪ್ರಭವಾಪ್ಯಯೌ ಭೂತಾನಾಂ” ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಸುಖಪ್ರಾಪ್ತಿ-ಭವ ಮತ್ತು ದುಃಖನಿವೃತ್ತಿ-ಅಪ್ಯಯ. ಇದು ಪ್ರಾಚೀನ ಋಷಿಗಳ ಅರ್ಥ. “ಯಾವ ರೀತಿಯ ನಡೆಯಿಂದ ಸುಖ ಪಡೆಯಬಹುದು, ಯಾವ ರೀತಿಯ ನಡೆಯಿಂದ ನಮ್ಮ ಬದುಕಿನ ದುಃಖದಿಂದ ಪಾರಾಗಬಹುದು ಎನ್ನುವ ಮೂಲ ಮಂತ್ರವನ್ನು ನಿನ್ನ ಬಾಯಿಯಿಂದಲೇ ಹೇಳಿದಿ-ಅದನ್ನು ನಾನು ಕಿವಿಯಾರೆ ಕೇಳಿದೆ” ಎನ್ನುತ್ತಾನೆ ಅರ್ಜುನ.
ಇಲ್ಲಿ ‘ಕಮಲಪತ್ರಾಕ್ಷ’ ಎನ್ನುವ ಒಂದು ವಿಶೇಷಣ ಬಳಸಿದ್ದಾರೆ. ಇದನ್ನು ಅರ್ಜುನ ಪ್ರಯೋಗ ಮಾಡುವುದರಲ್ಲಿ ಒಂದು ವಿಶೇಷವಿದೆ. “ನೀನು ನನ್ನ ಮೇಲೆ ಕಾರುಣ್ಯದ ರಸಧಾರೆಯನ್ನು ಹರಿಸಿದೆಯಲ್ಲಾ ಕೃಷ್ಣ” ಎನ್ನುವ ಭಾವ ಈ ವಿಶೇಷಣದ ಹಿಂದಿದೆ. “ನಿನ್ನ ಮಹಿಮೆ ಅವ್ಯಯ ಅನಂತವಾಗುಳಿಯುವ ಸಂಪತ್ತು. ಆ ಮಹತ್ತಾದ ಜ್ಞಾನವನ್ನು ನನಗೆ ಕೊಟ್ಟೆ. ಅತಿ ದುರ್ಲಭವಾದ ನಿನ್ನ ಮಹಿಮೆಯನ್ನು ನನಗೆ ಹೇಳಿದೆ” ಎನ್ನುತ್ತಾನೆ ಅರ್ಜುನ.
ಏವಮೇತದ್ ಯಥಾSSತ್ಥ ತ್ವಮಾತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ॥೩॥
ಏವಮ್ ಏತತ್ ಯಥಾ ಆತ್ಥ ತ್ವಮ್ ಆತ್ಮಾನಮ್ ಪರಮೇಶ್ವರ ।
ದ್ರಷ್ಟುಮ್ ಇಚ್ಛಾಮಿ ತೇ ರೂಪಮ್ ಐಶ್ವರಮ್ ಪುರುಷೋತ್ತಮ –ಪರಮೇಶ್ವರಾ, ನೀನು ನಿನ್ನ ಬಗೆಗೆ ಏನಂದೆಯೋ ಅದೆಲ್ಲಾ ನಿಜ. ಓ ಪುರುಷೋತ್ತಮಾ, ಜಗವನಾಳುವ ನಿನ್ನ ರೂಪವನ್ನು ಕಾಣುವ ತವಕ ನನಗೆ.
“ನೀನು ಹೇಳಿದ್ದರಲ್ಲಿ ನನಗೆ ಯಾವ ಸಂಶಯವೂ ಇಲ್ಲ” ಎನ್ನುತ್ತಾನೆ ಅರ್ಜುನ. ಇಲ್ಲಿ ಅರ್ಜುನ ಕೃಷ್ಣನನ್ನು ‘ಪರಮೇಶ್ವರಃ’ ಎಂದು ಸಂಬೋಧಿಸಿದ್ದಾನೆ. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವ ಅಂತಃಕರಣ ಹಾಗೂ ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗೂ ಬ್ರಹ್ಮ ವಾಯು-ಈಶ್ವರರು. ಈ ತತ್ತ್ವಾಭಿಮಾನಿ ದೇವತೆಗಳ ನಿಯಾಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೇಶ್ವರಃ. “ನೀನು ಹೇಳಿದ ವಿಚಾರದಲ್ಲಿ ನನಗೆ ಗೊಂದಲವಿಲ್ಲ. ಏಕೆಂದರೆ ನೀನು ಪರಮೇಶ್ವರಃ. ಆದರೆ ನನಗೆ ಆ ನಿನ್ನ ಸರ್ವಸಾಮರ್ಥ್ಯದಿಂದ ತುಂಬಿದ ರೂಪವನ್ನು ಕಾಣುವ ತವಕವಾಗುತ್ತಿದೆ” ಎಂದು ‘ಭಗವಂತನ ಅದ್ಭುತ ರೂಪವನ್ನು ಕಾಣಬೇಕು’ ಎನ್ನುವ ತನ್ನ ಬಯಕೆಯನ್ನು ಅರ್ಜುನ ಕೃಷ್ಣನ ಮುಂದಿಡುತ್ತಾನೆ.
ಇಲ್ಲಿ ಅರ್ಜುನ ಭಗವಂತನನ್ನು ‘ಪುರುಷೋತ್ತಮಃ’ ಎಂದು ಸಂಬೋಧಿಸಿದ್ದಾನೆ. ಈ ಪದಕ್ಕಿರುವ ವಿಶಿಷ್ಠ ಅರ್ಥವನ್ನು ಕೃಷ್ಣ ಅಧ್ಯಾಯ ಹದಿನೈದರಲ್ಲಿ(ಅ-೧೫, ಶ್ಲೋ-೧೬-೧೮) ವಿವರವಾಗಿ ವಿವರಿಸುತ್ತಾನೆ. ಲೋಕದಲ್ಲಿ ಎರಡು ಬಗೆಯ ಪುರುಷರಿದ್ದಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭). ಕ್ಷರವನ್ನು ಮೀರಿ ನಿಂತವನು, ಅಕ್ಷರಕ್ಕಿಂತಲೂ ಹಿರಿಯನೂ ಆದ ಆ ನಾರಾಯಣ 'ಪುರುಷೋತ್ತಮ'.(ಅ-೧೫, ಶ್ಲೋ-೧೮). “ನಿನ್ನ ಪುರುಷೋತ್ತಮತ್ವದ ರೂಪವನ್ನು ನಾನು ಕಾಣಬೇಕು” ಎನ್ನುವ ಅಭಿಲಾಷೆಯನ್ನು ಅರ್ಜುನ ಕೃಷ್ಣನ ಮುಂದಿಟ್ಟ.
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾSತ್ಮಾನಮವ್ಯಯಮ್ ॥೪॥
ಮನ್ಯಸೇ ಯದಿ ತತ್ ಶಕ್ಯಮ್ ಮಯಾ ದ್ರಷ್ಟುಮ್ ಇತಿ ಪ್ರಭೋ ।
ಯೋಗೇಶ್ವರ ತತಃ ಮೇ ತ್ವಮ್ ದರ್ಶಯ ಆತ್ಮಾನಮ್ ಅವ್ಯಯಮ್ –ಜಗದೊಡೆಯನೇ, ಯೋಗಿಗಳೊಡೆಯನೇ, ಅದು ನನ್ನಿಂದ ಕಾಣಲು ಸಾಧ್ಯವೆಂದು ನೀನು ಭಾವಿಸುವುದಾದರೆ, ನಿನ್ನ ಅಳಿವಿರದ ರೂಪವನ್ನು ನನಗೆ ತೋರಿಸು.
ಅರ್ಜುನ ಮುಂದುವರಿದು ಹೇಳುತ್ತಾನೆ “ನಾನು ಆ ನಿನ್ನ ರೂಪವನ್ನು ನೋಡಲು ಸಾಧ್ಯ ಎಂದು ನೀನು ಭಾವಿಸುವುದಾದರೆ, ನಿನ್ನ ರೂಪವನ್ನು ನನಗೆ ತೋರಿಸು” ಎಂದು. ಇಲ್ಲಿ ಅರ್ಜುನ ಕೃಷ್ಣನನ್ನು ‘ಪ್ರಭೋ’ ಎಂದು ಸಂಬೋಧಿಸಿದ್ದಾನೆ. “ಪ್ರಭು’ ಅಂದರೆ ಸಾಮರ್ಥ್ಯ. “ನೋಡುವ ಸಾಮರ್ಥ್ಯ ನನಗಿಲ್ಲದಿದ್ದರೂ, ಆ ಸಾಮರ್ಥ್ಯವನ್ನು ಕರುಣಿಸಿ ತೋರಿಸುವ ಸಾಮರ್ಥ್ಯ ನಿನಗಿದೆ” ಎನ್ನುವುದು ಈ ಸಂಬೋಧನೆಯ ಹಿಂದಿರುವ ಭಾವ. “ಏಕೆಂದರೆ ನೀನು ಯೋಗೇಶ್ವರಃ” ಎನ್ನುತ್ತಾನೆ ಅರ್ಜುನ. ಯೋಗ ಅಂದರೆ ಉಪಾಯ. “ನನಗೆ ಹೇಗೆ ನಿನ್ನ ರೂಪವನ್ನು ತೋರಿಸಬೇಕು ಎನ್ನುವ ಉಪಾಯ ಕೂಡಾ ನಿನಗೆ ತಿಳಿದಿದೆ. ನೀನು ಎಲ್ಲಾ ಉಪಾಯ(ಯೋಗ)ಗಳ ಸ್ವಾಮಿ. ಆದ್ದರಿಂದ ಅಳಿವಿರದ, ನಿತ್ಯವಾಗಿರುವ ಆ ನಿನ್ನ ರೂಪವನ್ನು ನನಗೆ ತೋರಿಸು” ಎಂದು ಅರ್ಜುನ ಕೃಷ್ಣನನ್ನು ಕೇಳಿಕೊಳ್ಳುತ್ತಾನೆ.
ಭಗವಾನುವಾಚ ।
ಪಶ್ಯ ಮೇ ಪಾರ್ಥ ರೂಪಾಣಿ ಶತಶೋSಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥೫॥
ಭಗವಾನ್ ಉವಾಚ-ಭಗವಂತ ಹೇಳಿದನು:
ಪಶ್ಯ ಮೇ ಪಾರ್ಥ ರೂಪಾಣಿ ಶತಶಃ ಅಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾ ವರ್ಣ ಆಕೃತೀನಿ ಚ –ನೋಡು ಪಾರ್ಥ, ನನ್ನ ರೂಪಗಳನ್ನು. ನೂರಾರು, ಸಾವಿರಾರು; ಬಗೆಬಗೆಯವು; ಹೊಳೆಯುವಂಥವು; ಹಲವು ಬಣ್ಣ-ಆಕಾರದವು.
ನಿನ್ನ ರೂಪವನ್ನು ತೋರು ಎಂದು ಅರ್ಜುನ ಏಕವಚನದಲ್ಲಿ ಕೇಳಿದರೆ ಕೃಷ್ಣ ಬಹುವಚನದಲ್ಲಿ ಹೇಳುತ್ತಾನೆ “ನೋಡು ನನ್ನ ರೂಪಗಳನ್ನು” ಎಂದು. ಭಗವಂತನ ಎಲ್ಲಾ ರೂಪಗಳೂ ಒಂದೇ. ಮೂಲ ರೂಪಕ್ಕೂ ಅವತಾರ ರೂಪಕ್ಕೂ ಭೇದವಿಲ್ಲ. “ನೀನು ಹಿಂದೆಂದೂ ಕಾಣದ ಅತ್ಯದ್ಭುತವಾದ ನನ್ನ ನೂರಾರು, ಸಾವಿರಾರು, ಬಗೆಬಗೆಯ, ಹೊಳೆಯುವಂತಹ, ಹಲವು ಬಣ್ಣ ಮತ್ತು ಆಕಾರದ ರೂಪಗಳನ್ನು ನೋಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ನಿಜವಾದ ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ ಹೊರಟವರು ‘ಪಾರ್ಥರು’.
ಪಶ್ಯಾSದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾSಶ್ಚರ್ಯಾಣಿ ಭಾರತ ॥೬॥
ಪಶ್ಯ ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಃ ತಥಾ ।
ಬಹೂನಿ ಅದೃಷ್ಟ ಪೂರ್ವಾಣಿ ಪಶ್ಯ ಆಶ್ಚರ್ಯಾಣಿ ಭಾರತ -- ನೋಡು-ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿಗಳನ್ನು ಮತ್ತು ಮರುತ್ತುಗಳನ್ನು. ಓ ಭಾರತಾ, ನೋಡು ಹಿಂದೆಂದೂ ಕಂಡಿರದ ಹಲವು ಅಚ್ಚರಿಗಳನ್ನು.
“ಜಗತ್ತಿನಲ್ಲಿರುವ ಎಲ್ಲಾ ಆದಿತ್ಯರು(ದ್ವಾದಶಾದಿತ್ಯರು), ವಸುಗಳು (ಅಷ್ಟ ವಸುಗಳು), ರುದ್ರರು (ಏಕಾದಶ ರುದ್ರರು), ಅಶ್ವಿಗಳು(ಇಬ್ಬರು), ಮರುತ್ತುಗಳು(ನಲವತ್ತೊಂಬತ್ತು)-ಎಲ್ಲರನ್ನೂ ನೋಡು. ನೀನು ಹಿಂದೆಂದೂ ಕಂಡು ಕೇಳರಿಯದ ಅತ್ಯದ್ಭುತ ಅಚ್ಚರಿಯನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ‘ಭಾರತ’ ಎಂದು ಸಂಬೋಧಿಸಿದ್ದಾನೆ. ಐತರೇಯ ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯು ದೇವರಿಗೆ ಭರತ ಎಂದು ಹೆಸರು. ಆದ್ದರಿಂದ ಇಲ್ಲಿ ‘ಭಾರತ’ ಎಂದರೆ ‘ಭೀಮ(ಪ್ರಾಣತತ್ವ)ನ ತಮ್ಮ’ ಎನ್ನುವ ಅರ್ಥವನ್ನು ಕೊಡುತ್ತದೆ. [ಸದಾ ಭಗವಂತನಿಗೆ ಅತೀ ಹತ್ತಿರವಿರುವ ಹನುಮಂತ ಅಥವಾ ಪ್ರಾಣತತ್ವದ ಉಪಾಸನೆ ಭಗವಂತನನ್ನು ತಿಳಿಯುವ ಸುಲಭ ಸಾಧನ.]
ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥೭॥
ಇಹ ಏಕ ಸ್ಥಮ್ ಜಗತ್ ಕೃತ್ಸ್ನಮ್ ಪಶ್ಯ ಅದ್ಯ ಸ ಚರ ಅಚರಮ್ ।
ಮಮ ದೇಹೇ ಗುಡಾಕೇಶ ಯತ್ ಚ ಅನ್ಯತ್ ದ್ರಷ್ಟುಮ್ ಇಚ್ಛಸಿ—ಇಲ್ಲಿ ನೋಡೀಗ, ನನ್ನ ಮೈಯಲ್ಲಿ ಚರಾಚರಗಳಿಂದ ಕೂಡಿದ ಇಡಿಯ ಜಗತ್ತು ಒಂದುಗೂಡಿದ್ದನ್ನು. ಓ ಗುಡಾಕೇಶಾ, ಇನ್ನೇನು ನೋಡ ಬಯಸುವೆಯೋ-ಅದನ್ನೆಲ್ಲಾ ನೋಡು.
“ನನ್ನ ದೇಹವನ್ನು ಆಶ್ರಯಿಸಿಕೊಂಡಿರುವ ಸಮಸ್ತ ವಿಶ್ವವನ್ನು ನೋಡು. ಬ್ರಹ್ಮಾಂಡದೊಳಗೆ ಏನೇನಿದೆಯೋ ಅದೆಲ್ಲವೂ ಇಲ್ಲಿದೆ. ಚೇತನ, ಅಚೇತನ, ಚಲಿಸುವ, ಚಲಿಸದ, ಎಲ್ಲವೂ. ನಿನಗೆ ಏನು ನೋಡಬೇಕು ಎಂದು ನಿನ್ನ ಮನಸ್ಸು ಬಯಸುತ್ತದೆಯೋ ಅದನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ಗುಡಾಕೇಶ ಎಂದು ಸಂಬೋಧಿಸುತ್ತಾನೆ. ಅಜ್ಞಾನ, ಆಲಸ್ಯ ಮತ್ತು ನಿದ್ದೆಯನ್ನು ಗೆದ್ದವ ಗುಡಾಕೇಶ.
ಇಲ್ಲಿ ಒಂದೊಂದು ಶ್ಲೋಕದಲ್ಲಿ ಒಂದೊಂದು ವಿಶೇಷಣ ಬಳಸಿದ್ದಾರೆ. ಈ ವಿಶೇಷಣದ ಹಿಂದೆ ಇರುವ ಅರ್ಥವನ್ನು ನೋಡಿದಾಗ ತಿಳಿಯುವುದೇನೆಂದರೆ -ನಮಗೆ ಭಗವಂತ ತಿಳಿಯಬೇಕಾದರೆ ನಾವೂ ಕೂಡಾ ಪಾರ್ಥ, ಭಾರತ, ಗುಡಾಕೇಶರಾಗಬೇಕು ಎನ್ನುವುದು. ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ(ಪಾರ್ಥ), ಪ್ರಾಣತತ್ವದ ಉಪಾಸನೆ(ಭಾರತ), ಅಜ್ಞಾನ, ಆಲಸ್ಯ ಗೆದ್ದು ಭಗವಂತನ ಚಿಂತನೆ(ಗುಡಾಕೇಶ) ಮಾಡಿದಾಗ- ಆ ಭಗವಂತನ ರೂಪ ನಮಗೆ ತಿಳಿದೀತು.
ನತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ॥೮॥
ನ ತು ಮಾಮ್ ಶಕ್ಯಸೇ ದ್ರಷ್ಟುಮ್ ಅನೇನ ಏವ ಸ್ವ ಚಕ್ಷುಷಾ ।
ದಿವ್ಯಮ್ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮ್ ಐಶ್ವರಮ್—ಆದರೆ ನಿನ್ನ ಈ ಹೊರಗಣ್ಣಿಂದಲೇ ನೋಡಲಾರೆ ನನ್ನನ್ನು. ನೀಡುತ್ತೇನೆ ನಿನಗೆ ದಿವ್ಯದ ಒಳಗಣ್ಣು. ನೋಡು ಜಗವನಾಳುವ ನನ್ನಳವನ್ನು.
ಭಗವಂತನ ರೂಪವನ್ನು ಈ ನಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ. ಸ್ವರೂಪಭೂತನಾದ ಆ ಭಗವಂತನನ್ನು ನಾವು ನಮ್ಮ ಸ್ವರೂಪಭೂತವಾದ ಕಣ್ಣಿನಿಂದ ಮಾತ್ರ ನೋಡಲು ಸಾಧ್ಯ. ಇಲ್ಲಿ ಕೃಷ್ಣ ಅರ್ಜುನನಿಗೆ ಆತನ ಸ್ವರೂಪಭೂತವಾದ ಕಣ್ಣಿನಿಂದ ಸರ್ವಸಮರ್ಥ ಭಗವಂತನನ್ನು ನೋಡುವ ಸೌಭಾಗ್ಯವನ್ನು ಕರುಣಿಸುತ್ತಾನೆ.
ಸಂಜಯ ಉವಾಚ ।
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ॥೯॥
ಸಂಜಯಃ ಉವಾಚ-ಸಂಜಯ ಹೇಳಿದನು:
ಏವಮ್ ಉಕ್ತ್ವಾ ತತಃ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮ್ ಆಸ ಪಾರ್ಥಾಯ ಪರಮಮ್ ರೂಪಮ್ ಐಶ್ವರಮ್ –ಅರಸನೇ, ಹಿರಿಯ ಶಕ್ತಿಗಳ ಒಡೆಯನಾದ ಹರಿ ಹೀಗೆ ನುಡಿದು, ಅರ್ಜುನನಿಗೆ ತೋರಿಸಿದನು ಜಗವನಾಳುವ ಹಿರಿಯ ರೂಪವನ್ನು.
ವ್ಯಾಸರಿಂದ ದಿವ್ಯ ದೃಷ್ಟಿ ಪಡೆದು, ಯುದ್ಧರಂಗದಲ್ಲಿ ನಡೆಯುತ್ತಿರುವ ಘಟನೆಗಳ ವಿವರಣೆಯನ್ನು ಧೃತರಾಷ್ಟ್ರನಿಗೆ ಕೊಡುತ್ತಿರುವ ಸಂಜಯ ಕೂಡಾ ಭಗವಂತನ ವಿಶ್ವರೂಪವನ್ನು ಕಾಣುತ್ತಾನೆ. ಆತ ಧೃತರಾಷ್ಟ್ರನಲ್ಲಿ ಹೇಳುತ್ತಾನೆ: “ಓ ರಾಜನ್, ಈ ರೀತಿ ಹೇಳಿ ಮಹಾಯೋಗೇಶ್ವರ ಹರಿಯು ತನ್ನ ಹಿರಿಯರೂಪವನ್ನು ತೋರಿದನು” ಎಂದು. ಇಲ್ಲಿ ಬಳಕೆಯಾಗಿರುವ ‘ತತಃ’ ಅನ್ನುವ ಪದ ಈ ಶ್ಲೋಕದಲ್ಲಿ ವಿಶೇಷ ಅರ್ಥವನ್ನು ಕೊಡುತ್ತದೆ. ಅರ್ಜುನನು ದಿವ್ಯ ದೃಷ್ಟಿ ಸಂಪನ್ನನಾದ್ದರಿಂದ; ದಿವ್ಯರೂಪ ದರ್ಶನ ನೋಡುವ ಅಧಿಕಾರ ಸಂಪನ್ನನಾದ್ದರಿಂದ; ಎಲ್ಲಾ ಕಡೆ ತುಂಬಿರುವ ಭಗವಂತ, ತನ್ನ ವಿಶ್ವರೂಪವನ್ನು ಆತನಿಗೆ ತೋರಿದ-ಎನ್ನುವ ಭಾವವನ್ನು ಈ ಪದ ಕೊಡುತ್ತದೆ. ಬ್ರಹ್ಮಾದಿ ಸರ್ವ ದೇವತೆಗಳಿಗೂ ಒಡೆಯನಾದ ಭಗವಂತನನ್ನು ಸಂಜಯ ಇಲ್ಲಿ ಮಹಾಯೋಗೇಶ್ವರಃ ಎಂದು ಸಂಬೋಧಿಸಿದ್ದಾನೆ. ಇಲ್ಲಿ ಬಳಸಿರುವ ‘ಹರಿಃ’ ಎನ್ನುವ ಪದ ಭಗವಂತನ ಸರ್ವಗತತ್ವವನ್ನು ವಿವರಿಸುವ ಪದ. ಯಾರು ಯಾವ ದೇವತಾ ಮುಖದಲ್ಲಿ ಆಹುತಿ ಕೊಟ್ಟರೂ ಅದನ್ನು ಮೊದಲು ಪಡೆಯುವ ಭಗವಂತ ಹರಿಃ. ಮುಂದಿನ ಶ್ಲೋಕದಲ್ಲಿ ಸಂಜಯ ತಾನು ಕಂಡ ಭಗವಂತನ ವಿಶ್ವರೂಪದ ವರ್ಣನೆ ಮಾಡುತ್ತಾನೆ.
ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್ ।
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ॥೧೦॥
ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್ ॥೧೧॥
ಅನೇಕ ವಕ್ತ್ರ ನಯನಮ್ ಅನೇಕ ಅದ್ಭುತ ದರ್ಶನಮ್ ।
ಅನೇಕ ದಿವ್ಯ ಆಭರಣಮ್ ದಿವ್ಯ ಅನೇಕ ಉದ್ಯತ ಆಯುಧಮ್ ||
ದಿವ್ಯ ಮಾಲ್ಯಾ ಅಂಬರ ಧರಮ್ ದಿವ್ಯ ಗಂಧ ಅನುಲೇಪನಮ್ ।
ಸರ್ವ ಆಶ್ಚರ್ಯಮಯಮ್ ದೇವಮ್ ಅನಂತಮ್ ವಿಶ್ವತೋಮುಖಮ್ –ಎಣಿಕೆಯಿರದ ಬಾಯಿ ಕಣ್ಣುಗಳ ರೂಪ. ಎಣಿಕೆಯಿರದ ಅಚ್ಚರಿಯ ನೋಟಗಳ ರೂಪ. ಎಣಿಕೆಯಿರದ ಚೆಲುವಾಭರಣಗಳ ರೂಪ. ಎಣಿಕೆಯಿರದ ಹೊಳೆಯುವಾಯುಧಗಳನ್ನು ಮೇಲೆತ್ತಿ ಹಿಡಿದ ರೂಪ. ಹೊಳೆವ ಹೂದಂಡೆಗಳನ್ನಿಟ್ಟ ಉಡಿಗೆಗಳ ತೊಟ್ಟ ರೂಪ. ಹೊಳೆವ ಗಂಧ ಬಳಿದ ರೂಪ. ಎಲ್ಲಾ ಅಚ್ಚರಿಗಳ ಸೆಲೆ. ಎಲ್ಲೆಡೆಯೂ ತುಂಬಿ ತುದಿಯಿರದ ರೂಪ.
ಕೃಷ್ಣ ನಮ್ಮೆಲ್ಲರಂತೆ ಮನುಷ್ಯರ ಆಕಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ. ಆದರೆ ಈ ಕ್ಷಣದಲ್ಲಿ ಎಲ್ಲಿ ನೋಡಿದರಲ್ಲಿ ಕೃಷ್ಣನ ಮುಖ, ಅಲ್ಲಿ ಸೇರಿರುವ ಪ್ರತಿಯೊಂದು ಜೀವಿಯ ಒಳಗೆ, ಹೊರಗೆ ಎಲ್ಲೆಲ್ಲೂ ಕೇವಲ ಕೃಷ್ಣನ ಮುಖ ಕಾಣುತ್ತಿದೆ. ಸಂಜಯನಿಗೆ ಅಲ್ಲಿ ಆನೆ, ಕುದುರೆ, ಸೈನಿಕರು ಕಾಣಿಸಲಿಲ್ಲ. ಬದಲಿಗೆ ಎಲ್ಲೆಡೆ, ಎಲ್ಲರೊಳಗೆ ತುಂಬಿರುವ ಆ ಭಗವಂತ ಕಾಣಿಸಿಕೊಂಡ. ಭಗವಂತನ ಈ ರೂಪವನ್ನು ವರ್ಣಿಸುವುದು ಅಸಾಧ್ಯ. ಇದನ್ನು ಕೇವಲ ನೋಡಿ ಅನುಭವಿಸಬೇಕು. ಅದೊಂದು ಅಚ್ಚರಿ. ಸರ್ವಾಭರಣಗಳಿಂದ ಶೋಭಿಸುವ, ದಿವ್ಯವಾದ ಆಯುಧಗಳನ್ನು ಹಿಡಿದಿರುವ, ಹೂವಿನ ಮಾಲೆಗಳನ್ನಿಟ್ಟ ಉಡುಪನ್ನು ತೊಟ್ಟ, ಹೊಳೆವ ಗಂಧ ಬಳಿದ, ಸರ್ವಾಶ್ಚರ್ಯ ಸ್ವರೂಪ, ವಿಸ್ಮಯ ಮೂರ್ತಿ ಭಗವಂತ ಯುದ್ಧರಂಗದಲ್ಲಿ ತನ್ನ ವಿಶ್ವರೂಪವನ್ನು ತೋರಿದ.
ದಿವಿ ಸೂರ್ಯಸಹಸ್ರಸ್ಯ ಭವೇದ್ ಯುಗಪದುತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ ॥೧೨॥
ದಿವಿ ಸೂರ್ಯ ಸಹಸ್ರಸ್ಯ ಭವೇತ್ ಯುಗಪತ್ ಉತ್ಥಿತಾ ।
ಯದಿ ಭಾಃ ಸದೃಶೀ ಸಾ ಸ್ಯಾತ್ ಭಾಸ ತಸ್ಯ ಮಹಾತ್ಮನಃ – ಸಾವಿರ ಸಾವಿರ ಸೂರ್ಯರು ಒಮ್ಮೆಲೇ ಮುಗಿಲಲ್ಲಿ ಮೂಡಿಬಂದರೆ, ಅಂತಹ ಬೆಳಕು ಆ ಮಹಾತ್ಮನ ಬೆಳಕಿಗೆ ಸರಿಗಟ್ಟಿತೇನೊ !
ಸಂಜಯ ಹೇಳುತ್ತಾನೆ: “ಸಾವಿರಾರು ಸೂರ್ಯರು ಆಕಾಶದಲ್ಲಿ ಒಮ್ಮೆಗೇ ಉದಿಸಿದರೆ ಎಷ್ಟು ಪ್ರಕಾಶಮಾನವಾಗಿರುತ್ತದೋ, ಅಂತಹ ಪ್ರಕಾಶಮಾನನಾಗಿ ಭಗವಂತ ಕಾಣಿಸಿದ” ಎಂದು. ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ‘ಚಂದ್ರಾಂಶು’ವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಭಗವಂತ ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪು. ಇಷ್ಟು ಪ್ರಕಾಶಮಾನನಾಗಿರುವ ಭಗವಂತನ ರೂಪವನ್ನು ಯಾರೂ ಎಂದೆಂದೂ ತಮ್ಮ ಹೊರಗಣ್ಣಿನಿಂದ ಕಾಣಲು ಸಾಧ್ಯವಿಲ್ಲ.
ತತ್ರೈಕಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ।
ಅಪಶ್ಯದ್ ದೇವದೇವಸ್ಯ ಶರೀರೇ ಪಾಂಡವಸ್ತದಾ ॥೧೩॥
ತತ್ರ ಏಕಸ್ಥಮ್ ಜಗತ್ ಕೃತ್ಸ್ನಮ್ ಪ್ರವಿಭಕ್ತಮ್ ಅನೇಕಧಾ ।
ಅಪಶ್ಯತ್ ದೇವದೇವಸ್ಯ ಶರೀರೇ ಪಾಂಡವಃ ತದಾ –ಅರ್ಜುನ ಕಂಡನಾಗ ಬಗೆಬಗೆಯಿಂದ ವಿಂಗಡಗೊಂಡ ಇಡಿಯ ಪೊಡವಿ ಅಲ್ಲಿ, ದೇವದೇವನ ಮೈಯಲ್ಲಿ ಒಂದುಗೂಡಿದ್ದನ್ನು.
ಭಗವಂತ ಅರ್ಜುನನಿಗೆ ರಣರಂಗದಲ್ಲಿ ತೋರಿದ ವಿಶ್ವರೂಪ ತುಂಬಾ ವಿಶಿಷ್ಟವಾದದ್ದು. ಮಧ್ವಾಚಾರ್ಯರು ಹೇಳುವಂತೆ ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಪ್ರಪಂಚದಲ್ಲಿ ಭಗವಂತನ ವಿಶ್ವರೂಪ ದರ್ಶನ ಕಾಣುವ ಅರ್ಹತೆಯುಳ್ಳ ಎಲ್ಲರಿಗೂ ಈ ದರ್ಶನವಾಗಿತ್ತು. [ಮೂರು ಲೋಕದಲ್ಲಿರುವ, ಅರ್ಹತೆಯುಳ್ಳ ಸಮಸ್ತ ಜೀವಿಗಳಿಗೂ ಭಗವಂತನ ಈ ವಿಶೇಷ ದರ್ಶನವಾಗಿದೆ ಎನ್ನುವ ಮಾತು ಮುಂದೆ ಈ ಅಧ್ಯಾಯದಲ್ಲಿ ಬರುತ್ತದೆ]. ಅರ್ಜುನನಿಗೆ ಇಲ್ಲಿ ಕಾಣಿಸಿದ್ದು ಕೇವಲ ಎಲ್ಲೆಡೆ ತುಂಬಿರುವ ಭಗವಂತ ಮಾತ್ರವಲ್ಲ, ಆತನೊಳಗೆ ತುಂಬಿರುವ ಪ್ರಪಂಚ ಕೂಡಾ. [ಇಲ್ಲಿ ಭಗವಂತನೊಳಗೆ ವಿಶ್ವವನ್ನು ಕಾಣುವುದು ಅಂದರೆ ಧ್ಯಾನದಲ್ಲಿ ಪರಮಾತ್ಮನನ್ನು, ಆತನಿಂದ ಸೃಷ್ಟವಾದ ಸೃಷ್ಟಿಯನ್ನು ಕಂಡಂತೆ. ಸತ್ವದಿಂದ ಸ್ವಚ್ಛವಾದ ಮನಸ್ಸುಳ್ಳ ಅರ್ಜುನ(ಪಾಂಡವ), ತನ್ನ ದಿವ್ಯ ದೃಷ್ಟಿಯಿಂದ ಭಗವಂತನಲ್ಲಿ ತುಂಬಿರುವ ಇಡೀ ವಿಶ್ವವನ್ನು ಸ್ಪಷ್ಟವಾಗಿ ಕಂಡ.]
ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ॥೧೪॥
ತತಃ ಸಃ ವಿಸ್ಮಯ ಆವಿಷ್ಟಃ ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಮ್ ಕೃತಾಂಜಲಿಃ ಅಭಾಷತ –ಬಳಿಕ ಬೆರಗಲ್ಲಿ ಮುಳುಗಿ ಮೈನವಿರೆದ್ದ ಅರ್ಜುನ ಭಗವಂತನಿಗೆ ತಲೆಬಾಗಿ ಕೈಜೋಡಿಸಿ ನುಡಿದ.
ಭಗವಂತನ ಈ ಅದ್ಭುತ ರೂಪವನ್ನು ಕಂಡ ಅರ್ಜುನ, ಆನಂದ ಆಶ್ಚರ್ಯ ದಿಗ್ಭ್ರಮೆಯಿಂದ ರೋಮಾಂಚನಗೊಂಡು ನಿಂತ. ಭಗವಂತನ ಅಪೂರ್ವವಾದ ಇಂತಹ ಅದ್ಭುತ ದರ್ಶನ ಸಂಪತ್ತನ್ನು(ಧನ) ಪಡೆದ ಆತ(ಧನಂಜಯಃ), ಭಕ್ತಿ ಪೂರ್ವಕವಾಗಿ ಉದ್ದಂಡ ನಮಸ್ಕಾರ ಮಾಡಿ, ತನ್ನೆರಡು ಕೈ ಜೋಡಿಸಿ (ಕೈಮುಗಿದು) ನಿಂತು, ಭಗವಂತನನ್ನು ಸ್ತೋತ್ರ ಮಾಡಲಾರಂಭಿಸಿದ.
ಅರ್ಜುನ ಉವಾಚ ।
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ॥೧೫॥
ಅರ್ಜುನಃ ಉವಾಚ-ಅರ್ಜುನ ನುಡಿದನು:
ಪಶ್ಯಾಮಿ ದೇವಾನ್ ತವ ದೇವ ದೇಹೇ ಸರ್ವಾನ್ ತಥಾ ಭೂತ ವಿಶೇಷ ಸಂಘಾನ್ ।
ಬ್ರಹ್ಮಾಣಮ್ ಈಶಮ್ ಕಮಲಾಸನಸ್ಥಂ ಋಷೀನ್ ಚ ಸರ್ವಾನ್ ಉರಗಾನ್ ಚ ದಿವ್ಯಾನ್ --ಓ ದೇವಾ, ನಿನ್ನ ಮೈಯಲ್ಲಿ ಕಾಣುತ್ತಿದ್ದೇನೆ ದೇವತೆಗಳನ್ನೆಲ್ಲ. ಅಂತೆಯೇ ಬಗೆಬಗೆಯ ಜೀವಿಗಳ ಗಡಣಗಳನ್ನು. ಬ್ರಹ್ಮನನ್ನು, ಅವನ ತೊಡೆಯಲ್ಲಿ ಕುಳಿತ ಶಿವನನ್ನು, ಎಲ್ಲಾ ಋಷಿಗಳನ್ನು ಮತ್ತು ದಿವ್ಯ ಶಕ್ತಿಯ ಉರಗಗಳನ್ನು.
ಅರ್ಜುನ ಕೃಷ್ಣನ ಅತ್ಯದ್ಭುತ ರೂಪವನ್ನು ನೋಡುತ್ತಿದ್ದಾನೆ. ಆತನಿಗೆ ಸಮಸ್ತ ದೇವತೆಗಳೂ ಆ ಭಗವಂತನೊಳಗೆ ಕಾಣುತ್ತಿದ್ದಾರೆ. ದೇವತೆಗಳು, ರಾಕ್ಷಸರು, ಅಸುರರು, ಗಂಧರ್ವರು, ಅಪ್ಸರರು, ಯಕ್ಷರು , ಮನುಷ್ಯರು, ಪ್ರಾಣಿಗಳು ಹೀಗೆ ಎಲ್ಲರೂ. ಮುಖ್ಯವಾಗಿ ಅರ್ಜುನ ಭಗವಂತನೊಳಗೆ ಚತುರ್ಮುಖ ಬ್ರಹ್ಮ, ಶಿವ, ಮಹಾನ್ ಋಷಿಗಳು ಮತ್ತು ದೇವಾಂಶ ಸಂಭೂತ ದಿವ್ಯ ಉರಗಗಳನ್ನು ಆ ಶೇಷಶಾಯಿ ಭಗವಂತನಲ್ಲಿ ಕಾಣುತ್ತಿದ್ದಾನೆ.
ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋSನಂತರೂಪಮ್ ।
ನಾಂತಂ ನ ಮಧ್ಯಂ ನ ಪುನಸ್ತವಾSದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ॥೧೬॥
ಅನೇಕ ಬಾಹು ಉದರ ವಕ್ತ್ರ ನೇತ್ರಮ್ ಪಶ್ಯಾಮಿ ತ್ವಾಮ್ ಸರ್ವತಃ ಅನಂತ ರೂಪಮ್ ।
ನ ಅಂತಮ್ ನ ಮಧ್ಯಮ್ ನ ಪುನಃ ತವ ಆದಿಮ್ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ – ಎಣಿಕೆಯಿರದ ತೋಳುಗಳು, ಒಡಲು, ಬಾಯಿ, ಕಣ್ಣುಗಳು. ಎಲ್ಲೆಡೆಯೂ ಎಣಿಕೆಯಿರದ ರೂಪಗಳ ನಿನ್ನನ್ನು ಕಾಣುತ್ತಿದ್ದೇನೆ. ಓ ಪೊಡವಿಗೊಡೆಯನೇ, ಓ ವಿಶ್ವರೂಪನೇ, ನಿನ್ನ ತುದಿ ಕಾಣುತ್ತಿಲ್ಲ; ಇಲ್ಲ ನಡು; ಇಲ್ಲ ಬುಡ ಕೂಡಾ.
ಎಲ್ಲಿ ನೋಡಿದರಲ್ಲಿ ಮುಖ, ಎಲ್ಲಿ ನೋಡಿದರಲ್ಲಿ ಕಣ್ಣು, ಎಲ್ಲಿ ನೋಡಿದರಲ್ಲಿ ತೋಳು, ಎಲ್ಲಿ ನೋಡಿದರಲ್ಲಿ ಉದರ. ಈ ಶ್ಲೋಕ ಪುರುಷಸೂಕ್ತಕ್ಕೆ ವ್ಯಾಖ್ಯಾನ ರೂಪದಲ್ಲಿದೆ. ಪುರುಷ ಸೂಕ್ತದಲ್ಲಿ ಹೇಳುವಂತೆ: “ಓಂ ಸಹಸ್ರಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | -ಭಗವಂತನಿಗೆ ಸಹಸ್ರಾರು ಶಿರಗಳು, ಸಹಸ್ರಾರು ಕಣ್ಣುಗಳು, ಸಹಸ್ರಾರು ಪಾದಗಳು. ಎಲ್ಲಿ ಏನನ್ನು ಕಾಣಬೇಕೆಂದು ಅಪೇಕ್ಷೆ ಪಟ್ಟು ಅರ್ಜುನ ಕಂಡನೋ ಅಲ್ಲಿ ಆತ ಬಯಸಿದ್ದು ಕಾಣಿಸಿತು. ಇದು ಒಂದು ವಿಚಿತ್ರ ಅನುಭವ. ಇದನ್ನು ವಿವರಿಸುವುದು ಅಸಾಧ್ಯ. ಕೇವಲ ಅನುಭವಿಸಬೇಕು. ಅನಂತ ರೂಪಿ ಭಗವಂತನ ರೂಪಕ್ಕೆ ತುದಿ ಬುಡವಿಲ್ಲ. ಸಮಸ್ತ ಜಗದ ಸ್ವಾಮಿ ಭಗವಂತ ಅಣುವಿಗಿಂತ ಅಣು ಕೂಡಾ ಹೌದು, ಮಹತೋಮಯ ಕೂಡಾ ಹೌದು. ಭಗವಂತನ ಈ ರೂಪವನ್ನು ಧ್ಯಾನದಲ್ಲಿ ಕಾಣುವುದು ಬಹಳ ಕಷ್ಟ. ಶಾಸ್ತ್ರಕಾರರು ಹೇಳುವಂತೆ ಧ್ಯಾನದಲ್ಲಿ ಭಗವಂತನ ಪೂರ್ಣ ಶರೀರ ಕಾಣಬೇಕು ಎಂದುಕೊಂಡು ಕುಳಿತರೆ ಏನೂ ಕಾಣದೇ ಇರಬಹುದು. ಅದಕ್ಕಾಗಿ ಕೊಳಲನೂದುವ ಆತನ ಒಂದು ಕಿರಿ ಬೆರಳಿನ ಮೇಲೋ, ಆತನ ಕರುಣಾಪೂರ್ಣ ಕಣ್ಣಿನ ನೋಟವನ್ನೋ ಕೇಂದ್ರೀಕರಿಸಿ ಧ್ಯಾನ ಅಭ್ಯಾಸ ಮಾಡುವುದು ಒಳ್ಳೆಯದು.
ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತನಲಾರ್ಕದ್ಯುತಿಮಪ್ರಮೇಯಮ್॥೧೭॥
ಕಿರೀಟಿನಮ್ ಗದಿನಮ್ ಚಕ್ರಿಣಮ್ ಚ ತೇಜೋರಾಶಿಮ್ ಸರ್ವತಃ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಮ್ ದುರ್ನಿರೀಕ್ಷ್ಯಮ್ ಸಮಂತಾತ್ ದೀಪ್ತ ಅನಳ ಅರ್ಕ ದ್ಯುತಿಮ್ ಅಪ್ರಮೇಯಮ್—ತಲೆಯಲ್ಲಿ ಮುಕುಟ. ಕೈಯಲ್ಲಿ ಗದೆ ಮತ್ತು ಚಕ್ರ. ಬೆಳಕಿನ ಮುದ್ದೆಯಾಗಿ ಎಲ್ಲೆಡೆಯೂ ಕೋರಯಿಸುವ ರೂಪ. ಸುಡುವ ಬೆಂಕಿಯಂತೆ, ಸೂರ್ಯನಂತೆ ಪ್ರಕಾಶವುಳ್ಳ , ಅಳೆಯಲಾಗದ ರೂಪ. ಕಣ್ಕುಕ್ಕುವ ನಿನ್ನ ಆ ರೂಪವನ್ನೇ ಸುತ್ತಲೂ ಕಾಣುತ್ತಿದ್ದೇನೆ.
ಸರ್ವಾಭರಣಭೂಶಿತನಾದ ಮನಮೋಹಕ ರೂಪ ಒಂದು ಕಡೆಯಾದರೆ, ಚಕ್ರ-ಗದೆಯನ್ನು ಹಿಡಿದ ಶತ್ರು ಭಯಂಕರ ರೂಪ ಇನ್ನೊಂದೆಡೆ. ಹೀಗೆ ಎಲ್ಲವೂ ಒಂದು ಬೆಳಕಿನ ಪುಂಜದಂತೆ ಕಾಣುತ್ತಿದೆ. ನೋಡಲಾಗದ್ದನ್ನು ಸ್ಪಷ್ಟವಾಗಿ ನೋಡುತ್ತಿರುವ ಅನುಭವ. ಅದು ಸುಡುವ ಬೆಂಕಿಯೋ ಅಥವಾ ಹೊಳೆವ ಸೂರ್ಯನೋ ತಿಳಿಯುತ್ತಿಲ್ಲ. ಅದೊಂದು ಅಳೆಯಲಾಗದ, ಅರಿಯಲಾಗದ ಅತ್ಯದ್ಭುತ ಅಪೂರ್ವ ರೂಪ.
ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ॥೧೮॥
ತ್ವಮ್ ಅಕ್ಷರಮ್ ಪರಮಮ್ ವೇದಿತವ್ಯಮ್ ತ್ವಮ್ ಅಸ್ಯ ವಿಶ್ವಸ್ಯ ಪರಮ್ ನಿಧಾನಮ್ ।
ತ್ವಮ್ ಅವ್ಯಯಃ ಶಾಶ್ವತ ಧರ್ಮಗೋಪ್ತಾ ಸನಾತನಃ ತ್ವಮ್ ಪುರುಷಃ ಮತಃ ಮೇ – ನೀನು ಅಳಿವಿರದವನು. ಅರಿಯಬೇಕಾದ ಹಿರಿಯ ತತ್ವ. ನೀನು ಈ ಜಗಕೆಲ್ಲಾ ಹಿರಿಯಾಸರೆ. ನೀನು ಬದಲಾಗದವನು. ಸನಾತನಧರ್ಮವನ್ನು ಸಲಹುವವನು. ನೀನು ಪುರಾಣ ಪುರುಷೋತ್ತಮ ಎಂದು ಗೊತ್ತು ನನಗೆ.
“ನೀನು ಅಕ್ಷರಂ ಪರಮಂ” ಎನ್ನುತ್ತಾನೆ ಅರ್ಜುನ. ಇಲ್ಲಿ ಅಕ್ಷರ ಎಂದರೆ ಸರ್ವ ವ್ಯಾಪ್ತ, ನಾಶವಿಲ್ಲದ ತತ್ವ, ಸರ್ವಾಭೀಷ್ಟಪ್ರದ, ಸರ್ವಶಬ್ದವಾಚ್ಯ ಇತ್ಯಾದಿ. ನಾವು ತಿಳಿದುಕೊಳ್ಳಬೇಕಾಗಿರುವುದರಲ್ಲೇ ಸರ್ವಶ್ರೇಷ್ಠವಾದದ್ದು- ಭಗವಂತ. ಅರ್ಜುನ ಹೇಳುತ್ತಾನೆ: “ನೀನು ಇಡೀ ಜಗತ್ತಿನ ಸೃಷ್ಟಾರ, ಆಶ್ರಯದಾತ. ಸಮಸ್ತ ಜಗತ್ತಿನ ಮೂಲಾಶ್ರಯ. ಅನಾದಿ ಅನಂತ ಕಾಲದಲ್ಲಿ ಶಾಶ್ವತ ಧರ್ಮವನ್ನು ರಕ್ಷಣೆ ಮಾಡುವವನು ನೀನು. ಸಮಸ್ತ ವೇದ ಪ್ರತಿಪಾದ್ಯ ನೀನು ಎನ್ನುವುದು ನನಗೆ ಮನವರಿಕೆಯಾಯಿತು” ಎಂದು. [ಈ ಶ್ಲೋಕದಲ್ಲಿ ಬಂದಿರುವ ಹಲವು ವಿಶೇಷ ಪದಗಳ(ಅಕ್ಷರಃ, ಪುರುಷಃ, ಅವ್ಯಯಃ, ಶಾಶ್ವತಧರ್ಮ, ಇತ್ಯಾದಿ)ವಿಶೇಷ ಅರ್ಥವನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ವಿಶ್ಲೇಷಿಸಿರುವುದರಿಂದ ಇಲ್ಲಿ ಆ ವಿವರಣೆಯನ್ನು ಕೊಟ್ಟಿಲ್ಲ].
ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್ ॥೧೯॥
ಅನಾದಿ ಮಧ್ಯಾಂತಮ್ ಅನಂತವೀರ್ಯಮ್ ಅನಂತಬಾಹುಮ್ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಮ್ ದೀಪ್ತ ಹುತಾಶ ವಕ್ತ್ರಂ ಸ್ವತೇಜಸಾ ವಿಶ್ವಮ್ ಇದಮ್ ತಪಂತಮ್ –ಗುಣಗಳಿಗೆ ಬುಡವಿಲ್ಲ; ನಡುವಿಲ್ಲ; ತುದಿಯಿಲ್ಲ. ಆಳವನ್ನು ಅಳೆದವರಿಲ್ಲ. ಎಣಿಕೆಯಿರದ ತೋಳುಗಳು. ಸೂರ್ಯಚಂದ್ರರನು ಹುಟ್ಟಿಸಿದ ಕಣ್ಣುಗಳು. ಉರಿವ ಬೆಂಕಿಯನುಗುಳುವ ಬಾಯಿ. ಕಾಣುತ್ತಿದ್ದೇನೆ ತನ್ನ ಥಟ್ಟುರಿಯಿಂದ ಈ ಜಗವ ಸುಟ್ಟುರಿವ ನಿನ್ನನ್ನು.
ನಿನ್ನ ಗುಣಗಳಿಗೆ ಆದಿ ಅಂತ ನಡುವೆಂಬುದಿಲ್ಲ. ನೀನು ಅನಂತವೀರ್ಯ. ಆದಿ ಅಂತವಿಲ್ಲದ ಪರಾಕ್ರಮ ನಿನ್ನದು. ನಾಶವಿಲ್ಲದ ಅನಂತ ಅವಯವಗಳು. ನಿನ್ನ ಕಣ್ಣುಗಳಿಂದ ಹುಟ್ಟಿದ ಆ ಸೂರ್ಯ ಚಂದ್ರರು; ಉಗುಳುವ ಬೆಂಕಿಯ ಜ್ವಾಲೆ ನಿನ್ನ ಬಾಯಿಯಲ್ಲಿ. ನಿನ್ನ ತೇಜಸ್ಸಿನಿಂದ ಇಡೀ ವಿಶ್ವ ಸುಟ್ಟುರಿದಂತಿದೆ.
ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾSದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ॥೨೦॥
ದ್ಯಾವಾಪೃಥಿವ್ಯೋಃ ಇದಮ್ ಅಂತರಮ್ ಹಿ ವ್ಯಾಪ್ತಮ್ ತ್ವಯಾ ಏಕೇನ ದಿಶಃ ಚ ಸರ್ವಾಃ ।
ದೃಷ್ಟ್ವಾ ಅದ್ಭುತಮ್ ರೂಪಮ್ ಉಗ್ರಮ್ ತವ ಇದಮ್ ಲೋಕತ್ರಯಮ್ ಪ್ರವ್ಯಥಿತಮ್ ಮಹಾತ್ಮನ್ –ಈ ನೆಲ ಮುಗಿಲ ನಡುವೆಲ್ಲಾ ಒಂದೇ ರೂಪದಿಂದ ತುಂಬಿರುವೆ. ನಿನ್ನವೇ ರೂಪಗಳು ಎಲ್ಲಾ ದಿಕ್ಕುಗಳಲ್ಲೂ. ಓ ಮಹಾತ್ಮನೇ, ಅಚ್ಚರಿಯ, ಎದೆಗೆಡಿಸುವ ನಿನ್ನ ಈ ರೂಪವನ್ನು ಕಂಡು ಕಂಗೆಟ್ಟಿದೆ ಮೂರು ಲೋಕ.
ನಿನ್ನ ರೂಪ ಭೂಮಿ ಆಕಾಶವನ್ನು ವ್ಯಾಪಿಸಿ ನಿಂತಿದೆ. ಎಲ್ಲಾ ದಿಕ್ಕುಗಳಲ್ಲಿ ಅನಂತವಾಗಿ ವ್ಯಾಪಿಸಿರುವ ನಿನ್ನ ರೂಪವನ್ನು ಕಾಣುತ್ತಿದ್ದೇನೆ. ಮೂರು ಲೋಕದಲ್ಲಿ ನಿನ್ನ ರೂಪವನ್ನು ಕಂಡವರು ಈ ನಿನ್ನ ಉಗ್ರ ರೂಪವನ್ನು ನೋಡಿ ಕಂಗೆಡುತ್ತಿದ್ದಾರೆ. ಜಗತ್ತು ತತ್ತರಿಸುತ್ತಿದೆ ಎಂದು ದಿಗ್ಭ್ರಮೆಯಿಂದ ಅರ್ಜುನ ತನ್ನ ಅನುಭವವನ್ನು ಭಗವಂತನಲ್ಲಿ ಹೇಳಿಕೊಳ್ಳುತ್ತಾನೆ.
ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಳಾಭಿಃ ॥೨೧॥
ಅಮೀ ಹಿ ತ್ವಾಮ್ ಸುರಸಂಘಾ ವಿಶಂತಿ ಕೇಚಿತ್ ಭೀತಾಃ ಪ್ರಾಂಜಲಯಃ ಗೃಣಂತಿ ।
ಸ್ವಸ್ತಿ ಇತಿ ಉಕ್ತ್ವಾ ಮಹರ್ಷಿ ಸಿದ್ಧಸಂಘಾಃ ಸ್ತುವಂತಿ ತ್ವಾಮ್ ಸ್ತುತಿಭಿಃ ಪುಷ್ಕಳಾಭಿಃ –ನಿನ್ನೊಳಹೋಗುತ್ತಿದ್ದಾರೆ ಈ ದೇವತೆಗಳು ಗುಂಪುಗೂಡಿ. ಬೆಚ್ಚಿ ಕೈಮುಗಿದು ಬೇಡುತ್ತಿದ್ದಾರೆ. ಮತ್ತೆ ಕೆಲವರು ‘ಒಳಿತಾಗಲಿ’ ಎಂದು ಹಾರೈಸುತ್ತಾ ಹತ್ತು ಹಲವು ಹಾಡುಗಬ್ಬಗಳಿಂದ ನಿನ್ನನ್ನು ಹೊಗಳುತ್ತಿದ್ದಾರೆ ಹಿರಿಯ ಋಷಿಗಳು, ಗುಂಪು ಗುಂಪಾಗಿ.
ಕೆಲವರು ನಿನ್ನೊಳಗೆ ಹೋಗುತ್ತಿದ್ದಾರೆ, ಇನ್ನು ಕೆಲವರು ಹೊರಬರುತ್ತಿದ್ದಾರೆ. ಕೆಲವರು ಕೈಮುಗಿದು ನಿನ್ನ ಸ್ತೋತ್ರ ಮಾಡುತ್ತಿದ್ದಾರೆ. ಜ್ಞಾನಿಗಳು ನಿನ್ನ ಈ ಅದ್ಭುತ ರೂಪವನ್ನು ಕಂಡು ‘ಜಗತ್ತಿಗೆ ಮಂಗಳವಾಗಲಿ’ ಎಂದು ಹರಸುತ್ತಿದ್ದಾರೆ. ಋಷಿ ಮುನಿಗಳು ನಾನಾ ಸ್ತೋತ್ರಗಳಿಂದ ನಿನ್ನನ್ನು ಸ್ತುತಿಸುತ್ತಿದ್ದಾರೆ.
ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇSಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರಸಿದ್ಧಸಂಘಾವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ॥೨೨॥
ರುದ್ರ ಆದಿತ್ಯಾಃ ವಸವಃ ಯೇ ಚ ಸಾಧ್ಯಾಃ ವಿಶ್ವೇ ಅಶ್ವಿನೌ ಮರುತಃ ಚ ಉಷ್ಮಪಾಃ ಚ ।
ಗಂಧರ್ವ ಯಕ್ಷ ಅಸುರ ಸಿದ್ಧ ಸಂಘಾಃ ವೀಕ್ಷಂತೇ ತ್ವಾಮ್ ವಿಸ್ಮಿತಾಃ ಚ ಏವ ಸರ್ವೇ –ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು, ಸಿದ್ಧರು,-ಇವರೆಲ್ಲಾ ಗುಂಪುಗೂಡಿ ನಿಬ್ಬೆರಗಾಗಿ ನೋಡುತ್ತಿದ್ದಾರೆ ನಿನ್ನನ್ನು.
ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಅಶ್ವಿಗಳು, ಮರುತ್ತುಗಳು, ಪಿತೃಗಳು, ಗಂಧರ್ವರು, ದೇವಗಣ ಪ್ರವಿಷ್ಟರಾದ ಯಕ್ಷರು, ಅಸುರರು, ಸಿದ್ಧರು,-ಇವರೆಲ್ಲರೂ ನಿಬ್ಬೆರಗಾಗಿ ನಿನ್ನನ್ನು ನೋಡುತ್ತಿದ್ದಾರೆ ಎನ್ನುತ್ತಾನೆ ಅರ್ಜುನ.
ರೂಪಂ ಮಹತ್ ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಳಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾSಹಮ್ ॥೨೩॥
ರೂಪಮ್ ಮಹತ್ ತೇ ಬಹು ವಕ್ತ್ರ ನೇತ್ರಮ್ ಮಹಾಬಾಹೋ ಬಹುಬಾಹು ಊರು ಪಾದಮ್ ।
ಬಹು ಉದರಮ್ ಬಹುದಂಷ್ಟ್ರಾಕರಾಳಮ್ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಃ ತಥಾ ಅಹಮ್ – ಓ ಮಹಾಬಾಹೂ, ಹಬ್ಬಿ ನಿಂತ ನಿನ್ನ ರೂಪಕ್ಕೆ ಹಲವು ಬಾಯಿ ಕಣ್ಣುಗಳು. ಹಲವು ತೊಡೆ ಕಾಲುಗಳು, ಹಲವು ಹೊಟ್ಟೆಗಳು. ಹಲವು ದಾಡೆಗಳಿಂದ ಅಬ್ಬರಗೊಂಡ ಈ ರೂಪವನ್ನು ಕಂಡು ಲೋಕದ ಮಂದಿ ಬೆಚ್ಚಿಬಿದ್ದಿದ್ದಾರೆ; ನಾನು ಕೂಡಾ.
ಭಗವಂತನ ಅಂಗಾಂಗಗಳಲ್ಲಿ ಹೇಗೆ ಸೃಷ್ಟಿ ಕ್ರಿಯೆ ನಡೆಯುತ್ತಿದೆ ಎನ್ನುವುದನ್ನು ಅರ್ಜುನ ಕಾಣುತ್ತಿದ್ದಾನೆ. ಪುರುಷ ಸೂಕ್ತದಲ್ಲಿ ಹೇಳುವಂತೆ :
ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗ್ಂ ಶೂದ್ರೋ ಅಜಾಯತ ||೧೩||
ಅಂದರೆ ಭಗವಂತನ ಮುಖದಿಂದ ಜ್ಞಾನಿಗಳ(Wisdom) ಸೃಷ್ಟಿ, ಬಾಹುವಿನಿಂದ ಕ್ಷತ್ರಿಯರ(Protection) ಸೃಷ್ಟಿ, ಸೊಂಟ ಅಥವಾ ತೊಡೆಯಿಂದ ವೈಶ್ಯರ(Production) ಸೃಷ್ಟಿ ಮತ್ತು ಪವಿತ್ರವಾದ ಪಾದದಿಂದ ಶೂದ್ರರ(Service) ಸೃಷ್ಟಿ. ಈ ನಾಲ್ಕು ವರ್ಗ ಈ ಸಮಾಜದ ನಾಲ್ಕು ಆಧಾರ ಸ್ಥಂಭಗಳು. ಅರ್ಜುನನಿಗೆ ಈ ನಾಲ್ಕು ವರ್ಗದ ಸೃಷ್ಟಿ ಭಗವಂತನ ದೇಹದಲ್ಲಾಗುತ್ತಿರುವುದು ಕಾಣಿಸುತ್ತಿದೆ. ಅದರ ಜೊತೆಗೆ ಆತ ಅಲ್ಲಿ ಎಲ್ಲರನ್ನು ಕಬಳಿಸುವ (ಸಂಹಾರ ಕ್ರಿಯೆ) ಹಲವು ದಾಡೆಗಳಿಂದ ತುಂಬಿದ ರೂಪವನ್ನು ಕಾಣುತ್ತಾನೆ. ಭಗವಂತನ ಈ ರೂಪವನ್ನು ಕಂಡು ಎಲ್ಲರೂ ವಿಸ್ಮಯರಾಗಿದ್ದಾರೆ. “ನಾನೂ ಕೂಡಾ ಗಾಬರಿಗೊಳಗಾಗಿದ್ದೇನೆ” ಎನ್ನುತ್ತಾನೆ ಅರ್ಜುನ.
ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ॥೨೪॥
ನಭಃಸ್ಪೃಶಮ್ ದೀಪ್ತಮ್ ಅನೇಕ ವರ್ಣಮ್ ವ್ಯಾತ್ತ ಆನನಮ್ ದೀಪ್ತ ವಿಶಾಲ ನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತ ಅಂತರಾತ್ಮಾಃ ಧೃತಿಮ್ ನ ವಿಂದಾಮಿ ಶಮಮ್ ಚ ವಿಷ್ಣೋ – ಮುಗಿಲ ಮುತ್ತಿಟ್ಟ, ಹೊಳೆವ ಬಗೆಬಗೆಯ ಬಣ್ಣಗಳು. ತೆರೆದ ಬಾಯಿಗಳು. ಹೊಳೆವಗಲ ಕಣ್ಣುಗಳು. ಇಂತಹ ನಿನ್ನನ್ನು ಕಂಡು ಬಗೆ ಬೆಚ್ಚಿಬಿದ್ದಿದೆ. ಓ ಒಳಗೂ ಹೊರಗೂ ತುಂಬಿ ನಿಂತವನೇ, ನಾನು ಸೈರಿಸಲಾರೆ. ನಾನು ನೆಮ್ಮದಿಗಾಣೆ.
ಭೂಮಿ ಆಕಾಶದಲ್ಲಿ ವ್ಯಾಪಿಸಿರುವ ನಿನ್ನ ಅನಂತ ರೂಪ-ಕತ್ತಲೆಯ ಸ್ಪರ್ಶವೇ ಇಲ್ಲದ ಬೆಳಕಿನ ಪುಂಜ. ನಿನ್ನೊಳಗೆ ಅನೇಕರು ಅನೇಕ ಶ್ರುತಿ ವಚನಗಳಿಂದ, ವೇದಗಳಿಂದ ನಿನ್ನನ್ನು ವರ್ಣಿಸುತ್ತಿದ್ದಾರೆ. ನಿನ್ನ ಅಪ್ರಾಕೃತವಾದ ಬಣ್ಣವನ್ನು ನಾನು ಕಾಣುತ್ತಿದ್ದೇನೆ. ನಿನ್ನ ಅನುಗ್ರಹ ಬೀರುವ, ಕಾರುಣ್ಯದ ಅರಳುಗಣ್ಣುಗಳನ್ನು ನಾನು ಕಂಡೆ. ಎಲ್ಲವನ್ನೂ ನೋಡಿ ಮನಸ್ಸು ಗೊಂದಲವಾಗುತ್ತಿದೆ. “ಓ ವಿಷ್ಣೋ, ಈ ನಿನ್ನ ವಿಚಿತ್ರ ರೂಪವನ್ನು ಅರ್ಥ ಮಾಡಿಕೊಳ್ಳಲಾಗುತ್ತಿಲ್ಲ” ಎನ್ನುತ್ತಾನೆ ಅರ್ಜುನ. [ವಿಷ್ಣು ಅನ್ನುವ ಪದದ ವಿಶಿಷ್ಟವಾದ ಅರ್ಥವನ್ನು ನಾವು ಹಿಂದಿನ ಅಧ್ಯಾಯದಲ್ಲಿ ವಿಶ್ಲೇಸಿದ್ದೇವೆ]
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ॥೨೫॥
ದಂಷ್ಟ್ರಾಕರಾಳಾನಿ ಚ ತೇ ಮುಖಾನಿ ದೃಷ್ಟ್ವಾ ಏವ ಕಾಲ ಅನಲ ಸನ್ನಿಭಾನಿ ।
ದಿಶಃ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗತ್ ನಿವಾಸ –ಪ್ರಳಯ ಕಾಲದ ಬೆಂಕಿಯಂತೆ ಕೋರೆದಾಡೆಗಳ ಅಬ್ಬರದ ನಿನ್ನ ಮೊರೆಗಳನ್ನು ಕಂಡದ್ದೇ ದಿಕ್ಕು ತಿಳಿಯದಾಗಿದೆ. ನೆಮ್ಮದಿ ಇಲ್ಲವಾಗಿದೆ. ಓ ದೇವೇಶಾ, ಜಗದ ಆಸರೆಯೇ ದಯೆದೋರು.
ಎಲ್ಲಕ್ಕಿಂತ ಮಿಗಿಲಾಗಿ ನರಸಿಂಹನಂತೆ ಕೋರೆ ದಾಡೆಗಳಿಂದ ಬಾಯ್ದೆರೆದು ನಿಂತಿರುವ ನಿನ್ನ ಮುಖವನ್ನು ಕಂಡು ದಿಕ್ಕು ತೋಚದಾಗಿದೆ. ಪ್ರಳಯ ಕಾಲದ ಬೆಂಕಿಯಂತೆ ವ್ಯಾಪಿಸಿರುವ ನಿನ್ನನ್ನು ಕಂಡು ಗಾಬರಿಯಿಂದ ಆನಂದ ಮಾಯವಾಗುತ್ತಿದೆ. ನೆಮ್ಮದಿ ಕಳೆದುಕೊಳ್ಳುತ್ತಿದ್ದೇನೆ. ಓ ಸರ್ವ ದೇವತೆಗಳ ಒಡೆಯನೇ, ಜಗತ್ತಿಗೆ ಆಸರೆಯಾಗಿರುವ ನೀನು ನನ್ನ ಮೇಲೆ ದಯೆ ತೋರು.
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾSಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ ॥೨೬॥
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಳಾನಿ ಭಯಾನಕಾನಿ।
ಕೇಚಿದ್ ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ॥೨೭॥
ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹ ಏವ ಅವನಿಪಾಲ ಸಂಘೈಃ ।
ಭೀಷ್ಮಃ ದ್ರೋಣಃ ಸೂತಪುತ್ರಃ ತಥಾ ಅಸೌ ಸಹ ಅಸ್ಮದೀಯೈಃ ಅಪಿ ಯೋಧ ಮುಖ್ಯೈಃ ||
ವಕ್ತ್ರಾಣಿ ತೇ ತ್ವರಮಾಣಾಃ ವಿಶಂತಿ ದಂಷ್ಟ್ರಾಕರಾಳಾನಿ ಭಯಾನಕಾನಿ ।
ಕೇಚಿತ್ ವಿಲಗ್ನಾಃ ದಶನ ಅಂತರೇಷು ಸಂದೃಶ್ಯಂತೇ ಚೂರ್ಣಿತೈಃ ಉತ್ತಮಾಂಗೈಃ – ಭೀಷ್ಮ ದ್ರೋಣ ಮತ್ತು ಕರ್ಣ, ಜೊತೆಗೆ ನಮ್ಮ ಕಾದಾಳುಗಳ ಮುಖಂಡರು ಕೂಡಾ. ಕಾಣುತ್ತಿದ್ದೇನೆ ಕಟವಾಯಿಯೆಡೆಯಲ್ಲಿ ಸಿಕ್ಕು ನುಗ್ಗು ನುರಿಯಾದ ಕೆಲವರನ್ನು; ನುಜ್ಜುಗುಜ್ಜಾದ ಅವರ ತಲೆಬುರುಡೆಗಳನ್ನು.
ಅರ್ಜುನ ಭಗವಂತನಲ್ಲಿ ಭವಿಷತ್ಕಾಲದಲ್ಲಿ ನಡೆಯುವ ಘಟನೆಗಳನ್ನು ಕಾಣುತ್ತಿದ್ದಾನೆ. ಪ್ರಪಂಚದಲ್ಲಿ ಎಲ್ಲವೂ ಪೂರ್ವ ನಿರ್ಧಾರಿತ. ಇದನ್ನು ಅರ್ಜುನ ತನ್ನ ದಿವ್ಯ ದೃಷ್ಟಿಯಲ್ಲಿ ಕಾಣುತ್ತಿದ್ದಾನೆ ಅಷ್ಟೆ. ಭೀಷ್ಮ ದ್ರೋಣ ಮತ್ತು ಕರ್ಣ ಎಲ್ಲರೂ ಆ ನಿನ್ನ ಬಾಯಿಯೊಳಗೆ ಹೋಗುತ್ತಿದ್ದಾರೆ. ಜೊತೆಗೆ ನಮ್ಮ ಸೈನ್ಯದ ಮುಖಂಡರೂ ಕೂಡಾ. ಅಲ್ಲಿ ಕೆಲವರು ಭಯಂಕರವಾದ ಆ ನಿನ್ನ ಕೋರೆ ದಾಡೆಗಳಿಗೆ ಸಿಕ್ಕು ನುಜ್ಜುಗುಜ್ಜಾಗುತ್ತಿರುವುದನ್ನು ಕಾಣುತ್ತಿದ್ದೇನೆ.
ಯಥಾ ನದೀನಾಂ ಬಹವೋSoಮ್ಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ॥೨೮॥
ಯಥಾ ನದೀನಾಮ್ ಬಹವಃ ಅಂಬುವೇಗಾಃ ಸಮುದ್ರಮ್ ಏವ ಅಭಿಮುಖಾಃ ದ್ರವಂತಿ ।
ತಥಾ ತವ ಅಮೀ ನರಲೋಕವೀರಾಃ ವಿಶಂತಿ ವಕ್ತ್ರಾಣಿ ಅಭಿವಿಜ್ವಲಂತಿ –-ನರಲೋಕದ ಈ ವೀರರೆಲ್ಲಾ ಕೋರೈಸುವ ನಿನ್ನ ಮೋರೆಗಳೊಳಗೆ ಸೇರುತ್ತಿದ್ದಾರೆ. ನದಿಗಳ ಹತ್ತು ಹಲವು ನೀರ ಸೆಲೆಗಳು ಕಡಲ ಕಡೆಗೆ ಹರಿಯುವಂತೆ.
ಪುಣ್ಯ ಜೀವಿಗಳು ಭಗವಂತನ ಬಾಯಿಯನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎನ್ನುವುದನ್ನು ಅರ್ಜುನ ವರ್ಣಿಸುತ್ತಿದ್ದಾನೆ. ಹೇಗೆ ಎಲ್ಲಾ ನದಿ ನೀರು ಸಮುದ್ರವನ್ನು ಸೇರುತ್ತದೋ ಹಾಗೇ ಈ ನರಲೋಕದ ವೀರರು ನಿನ್ನನ್ನು ಸೇರುತ್ತಿದ್ದಾರೆ ಎನ್ನುತ್ತಾನೆ ಅರ್ಜುನ. ಇದೊಂದು ಮಾಂಗಲಿಕ ದೃಷ್ಟಾಂತ. ಇಲ್ಲಿ ಭಯಾನಕ ನೋಟವಿಲ್ಲ.
ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ॥೨೯॥
ಯಥಾ ಪ್ರದೀಪ್ತಮ್ ಜ್ವಲನಮ್ ಪತಂಗಾಃ ವಿಶಂತಿ ನಾಶಾಯ ಸಮೃದ್ಧ ವೇಗಾಃ ।
ತಥಾ ಏವ ನಾಶಾಯ ವಿಶಂತಿ ಲೋಕಾಃ ತವ ಅಪಿ ವಕ್ತ್ರಾಣಿ ಸಮೃದ್ಧ ವೇಗಾಃ --ಲೋಕದ ಮಂದಿಯೆಲ್ಲ ಗಡಬಡಿಸಿ ಓಡುತ್ತಾ ಬಂದು ಸಾಯಲೆಂದು ನಿನ್ನ ಬಾಯ್ಗಳಲ್ಲಿ ಬೀಳುತ್ತಿವೆ- ಪತಂಗಗಳು ಹಾರಿ ಬಂದು ಬೆಂಕಿಯಲ್ಲಿ ಬಿದ್ದು ಸಾಯುವಂತೆ.
ಪಾಪಿಗಳು ಹೇಗೆ ಭಗವಂತನ ಬಾಯಿಯನ್ನು ಪ್ರವೇಶಿಸುತ್ತಿದ್ದಾರೆ ಎಂದು ವರ್ಣಿಸುತ್ತಾ ಅರ್ಜುನ ಹೇಳುತ್ತಾನೆ: “ಉರಿಯುವ ಬೆಂಕಿಗೆ ಪತಂಗಗಳು ಬಿದ್ದು ನಾಶವಾದಂತೆ ಗಡಬಡಿಸಿ ಬಂದು ಬಿದ್ದು ನಾಶವಾಗುತ್ತಿದ್ದಾರೆ” ಎಂದು.
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ॥೩೦॥
ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈಃ ಜ್ವಲದ್ಭಿಃ ।
ತೇಜೋಭಿಃ ಆಪೂರ್ಯ ಜಗತ್ ಸಮಗ್ರಮ್ ಭಾಸಃ ತವ ಉಗ್ರಾಃ ಪ್ರತಪಂತಿ ವಿಷ್ಣೋ –ಓ ಎಲ್ಲೆಲ್ಲೂ ತುಂಬಿರುವವನೇ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲಾ ಲೋಕಗಳನ್ನು ಎಲ್ಲೆಡೆಯೂ ನುಂಗಿ ನೊಣೆಯುತ್ತಿರುವೆ. ಕೋರೈಸುವ ನಿನ್ನ ಮೈಯ ಹೊಳಪು ಇಡಿಯ ವಿಶ್ವವನ್ನು ಝಳದಿಂದ ತುಂಬಿ ಸುಡುತ್ತಿವೆ.
ಎಲ್ಲವನ್ನೂ ನಿನ್ನ ನಾಲಿಗೆಯಿಂದ ಸವರಿ ನುಂಗುತ್ತಿದ್ದೀಯ, ಎಲ್ಲವೂ ನಿನ್ನ ಹೊಟ್ಟೆಯನ್ನು ಸೇರುತ್ತಿವೆ. ಈ ಜಗತ್ತೇ ನಿನಗೊಂದು ತುತ್ತಾಗುತ್ತಿದೆ. ಆ ನಿನ್ನ ಮೈಯ ತೇಜಸ್ಸು ಜಗತ್ತಿನೆಲ್ಲೆಡೆಗೆ ತುಂಬುತ್ತಿದೆ. ಎಲ್ಲರ ಒಳಗೂ ಹೊರಗೂ ತುಂಬಿರುವ ನೀನು ಸರ್ವ ಸಂಹಾರಕರನಾಗಿ ಕಾಣುತ್ತಿದ್ದೀಯ(ವಿಷ್ಣೋ).
ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋSಸ್ತು ತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನಹಿ ಪ್ರಜಾನಾಮಿ ತವ ಪ್ರವೃತ್ತಿಮ್ ॥೩೧॥
ಆಖ್ಯಾಹಿ ಮೇ ಕಃ ಭವಾನ್ ಉಗ್ರ ರೂಪಃ ನಮಃ ಅಸ್ತು ತೇ ದೇವ ವರ ಪ್ರಸೀದ ।
ವಿಜ್ಞಾತುಮ್ ಇಚ್ಛಾಮಿ ಭವಂತಮ್ ಆದ್ಯಮ್ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ –ಹೇಳು ನನಗೆ: ಅಂಜಿಸುವ ರೂಪ ತಳೆದು ಬಂದ ನಿನ್ನ ಬಿತ್ತರವೇನು? ಓ ಹಿರಿಯ ದೈವತವೇ, ನಿನಗೆ ತಲೆಬಾಗುತಿದ್ದೇನೆ. ದಯೆದೋರು. ಎಲ್ಲಕ್ಕೂ ಮೊದಲಿರುವ ನಿನ್ನನ್ನು ತಿಳಿಯ ಬಯಸುತ್ತೇನೆ.ನಿನ್ನ ಉದ್ದೇಶವೇನು ಎಂದು ತಿಳಿಯುತ್ತಿಲ್ಲ.
ಈ ನಿನ್ನ ಭಯಂಕರ ರೂಪವನ್ನು ಕಂಡು ನನಗೇನೂ ಅರ್ಥವಾಗುತ್ತಿಲ್ಲ. ನಿನ್ನ ಮಹಿಮೆ ಅರಿಯದಾಗಿದ್ದೇನೆ. ನಿನ್ನಲ್ಲಿ ನಾನು ಶರಣು ಬಂದಿದ್ದೇನೆ. ನನ್ನನ್ನು ಉದ್ಧರಿಸು. ಈ ಭಯಂಕರ ರೂಪ ತೊಟ್ಟ ನಿನ್ನನ್ನು ತಿಳಿಯಬಯಸುತ್ತಿದ್ದೇನೆ. ಎಂದು ಅರ್ಜುನ ಕೃಷ್ಣನಲ್ಲಿ ಅಂಗಲಾಚಿ ಬೇಡಿಕೊಳ್ಳುತ್ತಾನೆ.
ಭಗವಾನುವಾಚ ।
ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ।
ಋತೇSಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇSವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ॥೩೨॥
ಭಗವಾನುವಾಚ-ಭಗವಂತ ಹೇಳಿದನು:
ಕಾಲಃ ಅಸ್ಮಿ ಲೋಕಕ್ಷಯಕೃತ್ ಪ್ರವೃದ್ಧಃ ಲೋಕಾನ್ ಸಮಾಹರ್ತುಮ್ ಇಹ ಪ್ರವೃತ್ತಃ ।
ಋತೇ ಅಪಿ ತ್ವಾಮ್ ನ ಭವಿಷ್ಯಂತಿ ಸರ್ವೇ ಯೇ ಅವಸ್ಥಿತಾಃ ಪ್ರತಿ ಅನೀಕೇಷು ಯೋಧಾಃ –ಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನು. ಈಗಿಲ್ಲಿ, ಲೋಕಗಳನ್ನು ಮುಗಿಸಿಬಿಡಲೆಂದು ಹೊರಟವನು. ನೀನಿರದಿದ್ದರೂ [ನಿನ್ನನ್ನು, ನಿನ್ನ ಸೋದರರನ್ನು ಮತ್ತೆ ಕೆಲವರನ್ನು ಬಿಟ್ಟು] ಎರಡೂ ಕಡೆಯ ಪಡೆಗಳಲ್ಲಿ ನಿಂತ ಯಾವ ಕಾದಾಳುಗಳೂ ಉಳಿಯುವುದಿಲ್ಲ.
ಕೃಷ್ಣ ಹೇಳುತ್ತಾನೆ “ನಾನು ಕಾಲಪುರುಷನಾಗಿ ನಿಂತಿದ್ದೇನೆ” ಎಂದು. ‘ಕಲ’ ಧಾತುವಿನಿಂದ ಬಂದಿರುವ ‘ಕಾಲ’ ಎನ್ನುವ ಪದ ಅನೇಕ ಅರ್ಥವನ್ನು ಕೊಡುತ್ತದೆ. ಸರ್ವಸಂಹಾರಕ, ಸರ್ವಗುಣಪೂರ್ಣ, ಸರ್ವಜ್ಞ ಇತ್ಯಾದಿ. ಇಲ್ಲಿ ವಿಶೇಷವಾಗಿ ಕೃಷ್ಣ ಸಂಹಾರ ಶಕ್ತಿಯಾಗಿ ನಿಂತಿದ್ದಾನೆ. ನಾನು ನಿನಗೆ ಸಾರಥಿಯಾಗಿ ನಿಂತು ಭೂಮಿಗೆ ಭಾರವಾಗಿರುವ ಇವರನ್ನು ಮುಗಿಸಲೆಂದೇ ನಿಂತಿರುವುದು ಎನ್ನುತ್ತಾನೆ ಕೃಷ್ಣ. ಮಹಾಭಾರತ ಯುದ್ಧವನ್ನು ನೋಡಿದರೆ ಅದು ಒಂದು ಮಹಾಯುದ್ಧ. ಅಲ್ಲಿ ಸುಮಾರು ಐವತ್ತು ಲಕ್ಷ ಮಂದಿ ಸತ್ತಿದ್ದಾರೆ. ಅಂದಿನ ದೇಶದ ಜನಸಂಖ್ಯೆಯನ್ನು ನೋಡಿದರೆ ಅದು ಒಟ್ಟು ಜನಸಂಖ್ಯೆಯ ಸುಮಾರು ಹತ್ತನೇ ಒಂದು ಭಾಗ. ಭಾಗವತದಲ್ಲಿ ಹೇಳುವಂತೆ- ಕಾಲಪುರುಷನಾಗಿ ನಿಂತು ಕೃಷ್ಣ ಯಾವುದೇ ಆಯುಧ ಹಿಡಿಯದೇ ಎಲ್ಲರ ಆಯುಸ್ಸನ್ನು ತನ್ನ ಕಣ್ಣಿನಿಂದ ಹೀರಿದ. ಅದಕ್ಕಾಗಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ- “ನೀನಿಲ್ಲದಿದ್ದರೂ ಇವರೆಲ್ಲರೂ(ಎರಡೂ ಕಡೆಯವರು) ಸಾಯುತ್ತಾರೆ. ಅವರ ಸಾವು ತೀರ್ಮಾನವಾಗಿ ಬಿಟ್ಟಿದೆ” ಎಂದು.
ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ॥೩೩॥
ತಸ್ಮಾತ್ ತ್ವಮ್ ಉತ್ತಿಷ್ಠ ಯಶಃ ಲಭಸ್ವ ಜಿತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಮ್ ಸಮೃದ್ಧಮ್ ।
ಮಯಾ ಏವ ಏತೇ ನಿಹತಾಃ ಪೂರ್ವಮ್ ಏವ ನಿಮಿತ್ತ ಮಾತ್ರಮ್ ಭವ ಸವ್ಯಸಾಚಿನ್ –ಆದ್ದರಿಂದ ನೀನೆದ್ದು ನಿಲ್ಲು. ಹಗೆಗಳನ್ನು ಗೆದ್ದು ಹೆಸರು ಗಳಿಸು. ಅರಸೊತ್ತಿಗೆಯ ತುಂಬು ಸಿರಿಯನುಣ್ಣು. ನಾನೇ ಇವರನ್ನು ಈ ಮೊದಲೇ ಕೊಂದಾಗಿದೆ. ಓ ಸವ್ಯಸಾಚಿ(ಎಡದಿಂದಲೂ ಬಾಣ ಪ್ರಯೋಗಿಸಬಲ್ಲ ನಿಪುಣ ಯೋಧ) , ನೀನು ಬರಿಯ ನೆಪಮಾತ್ರನಾಗು
ಅರ್ಜುನನನ್ನು ಕೃಷ್ಣ ಹುರಿದುಂಬಿಸುತ್ತಿದ್ದಾನೆ. ಎದ್ದೇಳು, ಯುದ್ಧಕ್ಕೆ ಸಿದ್ಧನಾಗು. ಈ ಯುದ್ಧದಲ್ಲಿ ನೀನು ಗೆಲ್ಲುತ್ತೀಯ. ಈ ಶತ್ರುಗಳನ್ನು ಸಂಹಾರ ಮಾಡು. ಏಕೆಂದರೆ ನಾನು ಇವರನ್ನು ಈಗಾಗಲೇ ಕೊಂದಾಗಿದೆ. ಇಲ್ಲಿ ನೀನು ಕೇವಲ ನಿಮಿತ್ತ ಮಾತ್ರ. ನಿನ್ನ ಪಾಲಿಗೆ ಬಂದ ಕರ್ತವ್ಯವನ್ನು ನಿರ್ವಹಿಸಿ, ನಿನ್ನ ಪಾಲಿನ ಸುಖ ಪ್ರರಾಬ್ಧವನ್ನು ಅನುಭವಿಸು.
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾSನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥೩೪॥
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾ ಅನ್ಯಾನ್ ಅಪಿ ಯೋಧ ವೀರಾನ್ ।
ಮಯಾ ಹತಾನ್ ತ್ವಮ್ ಜಹಿ ಮಾ ವ್ಯಥಿಷ್ಠಾಃ ಯುದ್ಧ್ಯಸ್ವ ಜೇತಾ ಅಸಿ ರಣೇ ಸಪತ್ನಾನ್ – ನಾನೇ ಕೊಂದ ಇವರನ್ನು ನೀನು ಮುಗಿಸಿಬಿಡು: ದ್ರೋಣನನ್ನು, ಭೀಷ್ಮನನ್ನು, ಜಯದ್ರಥನನ್ನು ಮತ್ತು ಕರ್ಣನನ್ನು; ಹಾಗೆಯೇ ಬೇರೆ ವೀರ ಹೋರಾಳುಗಳನ್ನು ಕೂಡಾ. ಕಂಗೆಡಬೇಡ, ಹೋರಾಡು. ಕಾಳಗದಲ್ಲಿ ಹಗೆಗಳನ್ನು ಗೆಲ್ಲಲಿರುವೆ.
ಇಲ್ಲಿ ನೆರೆದಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ, ಇವರೆಲ್ಲರ ಆಯುಸ್ಸನ್ನು ನಾನು ಹೀರಿದ್ದೇನೆ. ಆದ್ದರಿಂದ ನೀನು ಅದಕ್ಕಾಗಿ ದುಃಖಪಡುವ ಅಗತ್ಯವಿಲ್ಲ. ಈ ಜೀವನ ತರಂಗ ಅನಿವಾರ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎದ್ದು ಹೋರಾಡು. ನೀನು ಈ ಧರ್ಮ ಯುದ್ಧದಲ್ಲಿ ಗೆಲ್ಲುವೆ. ನನ್ನ ರಕ್ಷೆಯ ಪೂರ್ಣ ಪ್ರಸಾದ ನಿನ್ನೊಂದಿಗಿದೆ-ಎಂದು ಕೃಷ್ಣ ಆಶೀರ್ವದಿಸುತ್ತಾನೆ.
ಮೊದಲು “ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ” ಎಂದು ಅಹಂಕಾರದಿಂದ ಮಾತನಾಡಿದ್ದ ಅರ್ಜುನ, ನಂತರ ತನ್ನ ಮುಂದೆ ನಿಂತಿರುವ ಹಿರಿಯರನ್ನು ಕಂಡು ಕುಗ್ಗಿ ಯುದ್ಧ ಬೇಡ ಎಂದು ನಿಂತು ಬಿಟ್ಟಿದ್ದ. ಈ ಎರಡೂ ಸ್ಥಿತಿ ಯಾವುದೇ ವಸ್ತುಸ್ಥಿತಿ ಇಲ್ಲದ ನಿರ್ಧಾರವಾಗಿತ್ತು. ಈ ಕಾರಣಕ್ಕಾಗಿ ಕೃಷ್ಣ ಈ ಹತ್ತು ಅಧ್ಯಾಯಗಳಲ್ಲಿ ಅರ್ಜುನನಿಗೆ ಉಪದೇಶ ಮಾಡಿ, ಯುದ್ಧ ಎನ್ನುವುದು ‘ಧರ್ಮ’ ಎನ್ನುವುದನ್ನು ಮನವರಿಕೆ ಮಾಡಿ ಕೊಟ್ಟ. ಈಗ ತನ್ನ ವಿಶ್ವರೂಪ ದರ್ಶನ ಕೊಟ್ಟು-“ನೀನು ಕೇವಲ ನಿಮಿತ್ತ ಮಾತ್ರ” ಎಂದು ಹೇಳಿದ. ಕೃಷ್ಣನ ಆ ಭಯಂಕರ ರೂಪ, ಮತ್ತು ಆತನ ಮಾತನ್ನು ಕೇಳಿ ಅರ್ಜುನ ಏನು ಮಾಡಿದ ಎನ್ನುವುದನ್ನು ಸಂಜಯ ಮುಂದಿನ ಶ್ಲೋಕದಲ್ಲಿ ವರ್ಣಿಸುತ್ತಾನೆ:
ಸಂಜಯ ಉವಾಚ ।
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾSಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ॥೩೫॥
ಸಂಜಯ ಉವಾಚ- ಸಂಜಯ ಹೇಳಿದನು:
ಏತತ್ ಶ್ರುತ್ವಾ ವಚನಮ್ ಕೇಶವಸ್ಯ ಕೃತಾಂಜಲಿ ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯಃ ಏವ ಆಹ ಕೃಷ್ಣಮ್ ಸ ಗದ್ಗದಮ್ ಭೀತಭೀತಃ ಪ್ರಣಮ್ಯ—ಕೃಷ್ಣನ ಈ ಮಾತನ್ನಾಲಿಸಿದ ಅರ್ಜುನ ಕೈಮುಗಿದು ನಡುಗುತ್ತಾ ಪೊಡಮಟ್ಟು, ಗದ್ಗದಿಸುತ್ತಾ, ಅಳುಕುತ್ತಾ, ಮತ್ತೊಮ್ಮೆ ಮಣಿದು ಮತ್ತೆ ಕೃಷ್ಣನ ಮುಂದೆ ನುಡಿದನು.
ಕೃಷ್ಣನ ಮಾತನ್ನು ಕೇಳಿದ ಅರ್ಜುನ ಭಕ್ತಿಯಿಂದ ಭಗವಂತನಿಗೆ ಕೈ ಮುಗಿದ. ಈ ಸ್ಥಿತಿಯಲ್ಲಿ ಆತ ತತ್ತರಿಸಿ ನಡುಗುತ್ತಿದ್ದಾನೆ. ತನ್ನ ಸರ್ವಾಂಗದಿಂದ ಭಗವಂತನಿಗೆ ನಮಸ್ಕರಿಸಿ, ಗದ್ಗಿತನಾಗಿ ಮಾತನಾಡಿದ.
ಇಲ್ಲಿ ಸಂಜಯ ಭಗವಂತನನ್ನು ‘ಕೇಶವ’ ಮತ್ತು ‘ಕೃಷ್ಣ’ ಎಂದು ಸಂಬೋಧಿಸಿದ್ದಾನೆ. ಕೇಶವ ಎಂದರೆ ಜಗತ್ತಿನ ಸೃಷ್ಟಿ ಮತ್ತು ಸಂಹಾರದ ಮೂಲದಲ್ಲಿರುವ ಶಕ್ತಿಗಳಾದ ಬ್ರಹ್ಮ-ರುದ್ರರನ್ನು ಸೃಷ್ಟಿ-ಸಂಹಾರದಲ್ಲಿ ತೊಡಗಿಸಿ ನಿಯಂತ್ರಿಸುವವ. ಸಮಸ್ತ ಜೀವಜಾತದೊಳಗಿದ್ದು, ಅವರನ್ನು ನಿಯಂತ್ರಿಸುವ ಸರ್ವಾಂತರ್ಯಾಮಿ ಭಗವಂತ ಕೇಶವ. ಇನ್ನು ‘ಕೃಷ್ಣ’ ಎನ್ನುವುದು ಭಗವಂತನ ಮೂಲ ನಾಮ ಕೂಡಾ ಹೌದು. ನಮ್ಮ ಅಹಂಕಾರವನ್ನು, ಅಜ್ಞಾನವನ್ನು ಕರ್ಷಣೆ ಮಾಡುವ, ಇಡೀ ಲೋಕವನ್ನು ಆಕರ್ಷಣೆ ಮಾಡುವ ಭಗವಂತ, ಸಂಸಾರದಿಂದ ನಮ್ಮನ್ನು ಕರ್ಷಣೆ ಮಾಡುವ ‘ಕೃಷ್ಣ’.
ಅರ್ಜುನ ಭಗವಂತನ ಅಪರಂಪಾರವಾದ ರೂಪ ಮತ್ತು ಆತನ ಶಕ್ತಿಯ ವಿವರಣೆಯನ್ನು ಕೃಷ್ಣನಿಂದ ಕೇಳಿ-ಭಗವಂತನನ್ನು ಭಕ್ತಿಯಿಂದ ಸ್ತುತಿಸಲು ಪ್ರಾರಂಭಿಸುತ್ತಾನೆ. ಮುಂದಿನ ಶ್ಲೋಕಗಳಲ್ಲಿ ಭಗವಂತನ ಅನಂತ ಗುಣವನ್ನು ಅರ್ಜುನ ಸ್ತುತಿಸುವುದನ್ನು ನಾವು ಕಾಣಬಹುದು. [ಇಲ್ಲಿ ಭಗವಂತನ ಗುಣವಿಶೇಷವನ್ನು ಹೇಳುವ ಅನೇಕ ವಿಶೇಷಣಗಳನ್ನು ಶ್ಲೋಕದಲ್ಲಿ ಬಳಸಲಾಗಿದೆ. ಉದಾಹರಣೆಗೆ: ಹೃಷೀಕೇಶಃ, ಅಕ್ಷರಃ, ಪುರುಷಃ, ಅನಂತವೀರ್ಯಃ, ಅಮಿತವಿಕ್ರಮಃ, ದೇವೇಶಃ, ಇತ್ಯಾದಿ. ಈ ಎಲ್ಲಾ ವಿಶೇಷಣಗಳ ಅರ್ಥವಿವರಣೆಯನ್ನು ನಾವು ಈ ಹಿಂದಿನ ಅಧ್ಯಾಯಗಳಲ್ಲಿ ಸಾಂದರ್ಭಿಕವಾಗಿ ಚರ್ಚಿಸಿರುವುದರಿಂದ ಇಲ್ಲಿ ಆ ಅರ್ಥ ವಿವರಣೆಯನ್ನು ಮರಳಿ ವಿವರಿಸಿಲ್ಲ. ನಾವು ವಿಷ್ಣುಸಹಸ್ರನಾಮದಲ್ಲಿ ಕೂಡಾ ಭಗವಂತನ ನಾಮವಾಗಿ ಈ ಪದಗಳು ಬಳಕೆಯಾಗಿರುವುದನ್ನು ಕಾಣುತ್ತೇವೆ. ಭಗವಂತನ ಒಂದೊಂದು ನಾಮದ ಹಿಂದೆ ಆತನ ಅನಂತ ಗುಣದ ಅನುಸಂಧಾನವಿದೆ. ಈ ವಿಚಾರವನ್ನು ತಿಳಿದು, ಪ್ರತೀ ಪದದ ಹಿಂದಿರುವ ಅರ್ಥಾನುಸಂಧಾನದೊಂದಿಗೆ ಈ ಶ್ಲೋಕವನ್ನು ನೋಡಿದಾಗ ಮಾತ್ರ ಅದರ ಹಿಂದಿರುವ ಸಂದೇಶದ ಅರಿವಾಗುತ್ತದೆ. ಮುಂದಿನ ಶ್ಲೋಕಗಳನ್ನು ನೋಡುವಾಗ ಓದುಗರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಓದಬೇಕಾಗಿ ಪ್ರಾರ್ಥನೆ.]
ಅರ್ಜುನ ಉವಾಚ ।
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನುರಜ್ಯತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ॥೩೬॥
ಅರ್ಜುನಃ ಉವಾಚ-ಅರ್ಜುನ ಹೇಳಿದನು:
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತಿ ಅನುರಜ್ಯತೇ ಚ।
ರಕ್ಷಾಂಸಿ ಭೀತಾನಿ ದಿಶಾಃ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ –ಇಂದ್ರಿಯಗಳ ದೊರೆಯೇ, ಎಲ್ಲಾ ಸರಿಯೆ: ಜಗತ್ತು ನಿನ್ನ ಕೊಂಡಾಟದಿಂದ ಹಿಗ್ಗುತ್ತಿದೆ; ಒಲಿಯುತ್ತಿದೆ. ರಕ್ಕಸರು ದಿಕ್ಕೆಟ್ಟು ಓಡುತ್ತಿದ್ದಾರೆ. ಸಿದ್ಧರೆಲ್ಲಾ ಗುಂಪುಗೂಡಿ ಪೊಡಮಡುತ್ತಿದ್ದಾರೆ.
ಈ ಹಿಂದೆ ಹೇಳಿದಂತೆ-ಅರ್ಜುನನಿಗೆ ವಿಶ್ವರೂಪ ದರ್ಶನವಾದಾಗ, ಇಡೀ ವಿಶ್ವದಲ್ಲಿ ಅನೇಕ ಮಂದಿ ಜ್ಞಾನಿಗಳಿಗೆ, ದೇವತೆಗಳಿಗೆ ಕೂಡಾ ಈ ಅಪರೂಪದ ಭಗವಂತನ ರೂಪ ದರ್ಶನವಾಗಿದೆ. ಅರ್ಜುನ ತನ್ನ ಅಂತರಂಗದಲ್ಲಿ ತನಗೆ ಕಾಣುತ್ತಿರುವ ವಿಚಾರವನ್ನು ಹೇಳುತ್ತಿದ್ದಾನೆ. ಇಷ್ಟೇ ಅಲ್ಲದೆ ಬಾಹ್ಯ ವಸ್ತುಸ್ಥಿತಿ ಕೂಡಾ ಆತನಿಗೆ ಭಗವಂತನಲ್ಲಿ ಕಾಣಿಸುತ್ತಿದೆ. ಅದನ್ನು ಅರ್ಜುನ ಇಲ್ಲಿ ವಿವರಿಸುತ್ತಿದ್ದಾನೆ- “ಋಷಿಗಳು, ಜ್ಞಾನಿಗಳು ನಿನ್ನ ಗುಣಗಾನ ಮಾಡುತ್ತಿದ್ದಾರೆ. ನಿನ್ನನ್ನು ಕೊಂಡಾಡಿ ರೋಮಾಂಚನಗೊಳ್ಳುತ್ತಿದ್ದಾರೆ. ದುಷ್ಟಶಕ್ತಿಗಳು ನಿನ್ನನ್ನು ಕಂಡು ಹೆದರಿ ಓಡುತ್ತಿವೆ. ಸಾತ್ವಿಕರು ಸಿದ್ಧರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇದೆಲ್ಲವೂ ಯುಕ್ತವೇ ಸರಿ.
ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋSಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ ತತ್ಪರಂ ಯತ್ ॥೩೭॥
ಕಸ್ಮಾತ್ ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣಃ ಅಪಿ ಆದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮ್ ಅಕ್ಷರಮ್ ಸತ್ ಅಸತ್ ತತ್ಪರಮ್ ಯತ್ –ಓ ಮಹಾತ್ಮನೇ, ಅವರೇಕೆ ಪೊಡಮಡದೇ ಇದ್ದಾರು ನಿನಗೆ; ಬ್ರಹ್ಮನಿಗೂ ಹಿರಿಯನಿಗೆ; ಮೊಟ್ಟ ಮೊದಲ ತಂದೆಗೆ. ಓ ಕೊನೆಯಿರದವನೇ, ಸಗ್ಗಿಗರೊಡೆಯನೇ, ಜಗದ ಆಸರೆಯೇ, ನೀನು ಅಳಿವಿರದವನು. ಕಾಣುವ, ಕಾಣದ ವಿಶ್ವದೊಳಗಿದ್ದು ಅದರಾಚೆಗಿರುವವನು.
ನಿನ್ನನ್ನು ತಿಳಿದವರು ನಿನಗೆ ನಮಸ್ಕಾರ ಮಾಡದೇ ಇರಲು ಸಾಧ್ಯವೇ ಇಲ್ಲ. ನೀನು ಪರಿಪೂರ್ಣವಾದ ಆತ್ಮ. ಈ ಜಗತ್ತಿನ ತಂದೆಯಾದ ಆ ಚತುರ್ಮುಖನಿಗೂ ನೀನು ತಂದೆ. ಇಂತಹ ನಿನಗೆ ನಮಸ್ಕರಿಸದೇ ಇರಲು ಸಾಧ್ಯವಿಲ್ಲ. ನೀನು ದೇಶ, ಕಾಲ ಮತ್ತು ಗುಣಗಳಿಂದ ಅನಂತ. ನೀನು ಎಲ್ಲರ ಒಳಗೂ ಹೊರಗೂ ತುಂಬಿ ನಿಂತಿರುವ ಜಗನ್ನಿವಾಸ; ನೀನು ನಿರ್ಧಿಷ್ಟ ಹಾಗೂ ದೋಷ ರಹಿತ ಜ್ಞಾನಾನಂದಮೂರ್ತಿ(ಸತ್). ಅವ್ಯಕ್ತಮೂರ್ತಿಯಾದ ನಿನ್ನನ್ನು (ಅಸತ್) ಹೊರಗಣ್ಣಿನಿಂದ ಕಾಣಲಾರೆವು. ನೀನು ಅಕ್ಷರಃ, ನೀನು ದೇವೇಶಃ, ನೀನು ಕಾರಣಗಳಿಗೂ ಕಾರಣ, ನೀನು ಜಗದ ಆಸರೆ.
ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾSಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ॥೩೮॥
ತ್ವಮ್ ಆದಿದೇವಃ ಪುರುಷಃ ಪುರಾಣಃ ತ್ವಮ್ ಅಸ್ಯ ವಿಶ್ವಸ್ಯ ಪರಮ್ ನಿಧಾನಮ್ ।
ವೇತ್ತಾ ಅಸಿ ವೇದ್ಯಮ್ ಚ ಪರಮ್ ಚ ಧಾಮ ತ್ವಯಾ ತತಮ್ ವಿಶ್ವಮ್ ಅನಂತರೂಪ –ನೀನು ದೇವತೆಗಳಿಗೂ ಮೊದಲಿಗೆ. ಪುರಾಣಪುರುಷ. ನೀನು ಈ ಜಗದ ಹಿರಿಯಾಸರೆ. ಎಲ್ಲವನ್ನೂ ತಿಳಿದವನು. ಎಲ್ಲರೂ ತಿಳಿಯಬೇಕಾದವನು. ಹಿರಿಯ ಬೆಳಕು. ಓ ಅನಂತರೂಪನೇ, ಇಡಿಯ ವಿಶ್ವ ನಿನ್ನಿಂದ ತುಂಬಿದೆ.
ನೀನು ಆದಿದೇವಃ, ನೀನು ಪುರಾಣಪುರುಷಃ, ಈ ಜಗತ್ತಿನಲ್ಲಿ ಕೊನೆಯಾಸರೆ ನೀನು. ಎಲ್ಲರೂ ತಿಳಿಯಬೇಕಾದವನು, ಎಲ್ಲವನ್ನೂ ತಿಳಿದ ನೀನು ಎಲ್ಲವನ್ನೂ ಮೀರಿದ ಪರಂಧಾಮ. ಅನಂತರೂಪನಾದ ನೀನು ಇಡೀ ವಿಶ್ವವನ್ನು ವ್ಯಾಪಿಸಿ ನಿಂತಿದ್ದೀಯ.
ವಾಯುರ್ಯಮೋSಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇSಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋSಪಿ ನಮೋ ನಮಸ್ತೇ ॥೩೯॥
ವಾಯುಃ ಯಮಃ ಅಗ್ನಿಃ ವರುಣಃ ಶಶಾಂಕಃ ಪ್ರಜಾಪತಿಃ ತ್ವಮ್ ಪ್ರಪಿತಾಮಹಃ ಚ ।
ನಮಃ ನಮಃ ತೇ ಅಸ್ತು ಸಹಸ್ರಕೃತ್ವಃ ಪುನಃ ಚ ಭೂಯಃ ಅಪಿ ನಮಃ ನಮಃ ತೇ –ವಾಯು, ಯಮ, ಅಗ್ನಿ, ವರುಣ, ಚಂದ್ರ, ಪ್ರಜಾಪತಿ ಎಲ್ಲಾ ನೀನೆ. [ವ=ಬಲರೂಪ, ಆಯಾ=ಜ್ಞಾನರೂಪ. ಆದ್ದರಿಂದ ‘ವಾಯು’. ಎಲ್ಲವನ್ನು ನಿಯಮಿಸುವುದರಿಂದ ‘ಯಮ’. ಅಗ=ಚಲನೆ ಇಲ್ಲದ ವಿಶ್ವಕ್ಕೆ, ನಿ=ಚಲನೆ ನೀಡುವುದರಿಂದ ‘ಅಗ್ನಿ’. ಭಕ್ತರನ್ನು ವರಣ ಮಾಡುವುದರಿಂದ ವರುಣಃ. ಶಶ=ಮಿಗಿಲಾದ ಆನಂದದಿಂದ ಅಂಕ=ಅಂಕಿತನಾದ್ದರಿಂದ ‘ಶಶಾಂಕ’. ಪ್ರಜಾ=ಪ್ರಜೆಗಳ, ಪತಿ=ಪಾಲಕನಾದ್ದರಿಂದ ‘ಪ್ರಜಾಪತಿ’.] ನೀನೇ ಜಗದ ಮುತ್ತಜ್ಜ. ಸಾವಿರಬಾರಿ ನಿನಗೆ ನಮೋನಮೋ ಎಂದು ಮಣಿವೆ. ಮತ್ತೊಮ್ಮೆ ಮಗದೊಮ್ಮೆ ನಿನಗೆ ವಂದನೆ; ವಂದನೆ.
ನೀನು ವಾಯುಃ, ಯಮಃ, ವರುಣಃ, ಶಶಾಂಕಃ, ಪ್ರಜಾಪತಿಃ. ನೀನು ಜಗದ ಮುತ್ತಜ್ಜ. ನಿನಗೆ ಸಹಸ್ರ ಬಾರಿ ವಂದನೆ.
ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋSಸ್ತು ತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋSಸಿ ಸರ್ವಃ ॥೪೦॥
ನಮಃ ಪುರಸ್ತಾತ್ ಅಥ ಪೃಷ್ಠತಃ ತೇ ನಮಃ ಅಸ್ತು ತೇ ಸರ್ವತಃ ಏವ ಸರ್ವ ।
ಅನಂತವೀರ್ಯ ಅಮಿತವಿಕ್ರಮಃ ತ್ವಮ್ ಸರ್ವಮ್ ಸಮಾಪ್ರೋಷಿ ತತಃ ಅಸಿ ಸರ್ವಃ –ಮುಂಗಡ ನಿನಗೆ ವಂದನೆ. ಮತ್ತೆ ಬೆಂಗಡೆ ನಿನಗೆ ವಂದನೆ. ಓ, ಎಲ್ಲೆಡೆ ಇರುವವನೇ, ಎಲ್ಲಾ ಕಡೆ ನಿನಗೆ ವಂದನೆ. ನೀನು ಎಲ್ಲೆಯಿರದ ಬೀರದವನು.ಅಳತೆಯಿರದ ಅಳವಿನವನು. ಎಲ್ಲೆಡೆಯೂ ತುಂಬಿರುವೆ. ಅದಕ್ಕೆಂದು ನೀನೇ ಎಲ್ಲಾ.
ಭಗವಂತನ ವಿಶ್ವರೂಪದಲ್ಲಿ ಆತನ ಮುಂಭಾಗ ಯಾವುದು ಹಿಂಭಾಗ ಯಾವುದು ಎಂದು ಹೇಗೆ ಗುರುತಿಸುವುದು. ಇದು ಅಸಾಧ್ಯ. ಅದಕ್ಕಾಗಿ ಅರ್ಜುನ ಹೇಳುತ್ತಾನೆ: ನಿನಗೆ ಎದುರಿನಿಂದ ನಮಸ್ಕಾರ, ನಿನ್ನ ಬೆಂಭಾಗದಿಂದ ನಮಸ್ಕಾರ, ಎಲ್ಲೆಡೆ ತುಂಬಿರುವ ನಿನಗೆ ಎಲ್ಲೆಡೆಯಿಂದ ನಮಸ್ಕಾರ. ನೀನು ಅನಂತವೀರ್ಯಃ. ನೀನು ಅಮಿತವಿಕ್ರಮಃ. ಓ ಸರ್ವನೇ, ನಿನಗೆ ನಮಸ್ಕಾರ. ಜಗತ್ತಿನ ಸಮಸ್ತಜೀವ ಜಾತದ ಸೃಷ್ಟಿಗೆ ಕಾರಣವಾಗಿ ಎಲ್ಲೆಡೆ ತುಂಬಿರುವ ಜಗತ್ತಿನ ನಿಯಾಮಕನಾದ ಈ ಅನಂತ ಶಕ್ತಿಗೆ ನಮಸ್ಕಾರ. ಎಲ್ಲವೂ ನೀನೇ.
ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ॥೪೧॥
ಯಚ್ಚಾಪಹಾಸಾರ್ಥಮಸತ್ ಕೃತೋSಸಿ ವಿಹಾರಶಯ್ಯಾಸನಭೋಜನೇಷು ।
ಏಕೋSಥವಾSಪ್ಯಚ್ಯುತ ತತ್ ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ ॥೪೨॥
ಸಖಾ ಇತಿ ಮತ್ವಾ ಪ್ರಸಭಮ್ ಯತ್ ಉಕ್ತಮ್ ಹೇ ಕೃಷ್ಣ ಹೇ ಯಾದವ ಹೇ ಸಖೇ ಇತಿ ।
ಅಜಾನತಾ ಮಹಿಮಾನಮ್ ತವ ಇದಮ್ ಮಯಾ ಪ್ರಮಾದಾತ್ ಪ್ರಣಯೇನ ವಾSಪಿ ||
ಯತ್ ಚ ಅವಹಾಸ ಅರ್ಥಮ್ ಅಸತ್ ಕೃತಃ ಅಸಿ ವಿಹಾರ ಶಯ್ಯಾ ಆಸನ ಭೋಜನೇಷು ।
ಏಕಃ ಅಥವಾ ಅಪಿ ಅಚ್ಯುತ ತತ್ ಸಮಕ್ಷಮ್ ತತ್ ಕ್ಷಾಮಯೇ ತ್ವಾಮ್ ಅಹಮ್ ಅಪ್ರಮೇಯಮ್ –ನಿನ್ನ ಹಿರಿಮೆಯನ್ನು ಅರಿಯದೆ ಗೆಳೆಯನೆಂದು ತಿಳಿದು ದುಡುಕಿ ನುಡಿದದ್ದುಂಟು. ನನ್ನ ಎಡವಿನಿಂದ ಅಥವಾ ಸಲಿಗೆಯಿಂದ- “ಏ ಕೃಷ್ಣ, ಏ ಗೆಳೆಯ” ಎಂದು ಕರೆದದ್ದುಂಟು. ವಿಹಾರದಲ್ಲಿದ್ದಾಗ, ಮಲಗಿದ್ದಾಗ, ಕೂತಾಗ, ಊಟಮಾಡುವಾಗ- ಎಲ್ಲಾ ಮಾಡಿಸುವ ನಿನ್ನನ್ನು ಅಣಕಕ್ಕಾಗಿ ಕಡೆಗಣಿಸಿದ್ದುಂಟು. ಆದ್ದರಿಂದ ಓ ಕುಗ್ಗದ ಎತ್ತರವೇ, ತಿಳಿವಿಗೆಟುಕದ, ಸಾಟಿಯಿರದ ನಿನ್ನೆದುರು ಬೇಡಿಕೊಳ್ಳುತ್ತಿದ್ದೇನೆ-ಅದನ್ನೆಲ್ಲಾ ಮರೆತು ಮನ್ನಿಸುವಂತೆ.
ಅರ್ಜುನನಿಗೆ ತಾನು ಹಿಂದೆ ಕೃಷ್ಣನೊಂದಿಗೆ ನಡೆದುಕೊಂಡ ರೀತಿ ಬಗ್ಗೆ ಪಶ್ಚಾತ್ತಾಪವಾಗುತ್ತದೆ. ಕೃಷ್ಣ ಜಗತ್ತಿನ ಮೂಲಶಕ್ತಿ ಎನ್ನುವ ಕಲ್ಪನೆ ಇಲ್ಲದೆ ತಾನು ನಡೆದುಕೊಂಡ ರೀತಿ ಬಗ್ಗೆ ಆತ ಕೃಷ್ಣನಲ್ಲಿ ಕ್ಷಮೆ ಬೇಡುತ್ತಾನೆ. ತಿಳಿದೋ ತಿಳಿಯದೆಯೋ, ಬೇಜವಾಬ್ಧಾರಿಯಿಂದಲೋ ಅಥವಾ ಪ್ರೀತಿಯಿಂದಲೋ ಮಾಡಿದ ತಪ್ಪುಗಳನ್ನು ಕ್ಷಮಿಸು ಎಂದು ಆತ ಭಗವಂತನಲ್ಲಿ ಬೇಡುತ್ತಾನೆ. ಇಲ್ಲಿ ಬಂದಿರುವ ‘ಏಕ’ ಎನ್ನುವ ಪದಕ್ಕೆ ವಿಶೇಷ ಅರ್ಥವಿದೆ. ಏಕಃ ಎಂದರೆ ಸರ್ವೋತ್ತಮ ಮತ್ತು ಸರ್ವಕರ್ತ(ಏಷ ಏವ ಕರೋತಿ-ಏಕಃ). ಸರ್ವಕರ್ತ-ಸರ್ವೋತ್ತಮನಾದ ನಿನ್ನನ್ನು ಪರಿಹಾಸ್ಯ ಮಾಡಿ ಸಲುಗೆಯಿಂದ ಮಾತನಾಡಿದೆ, ನೀನು ಅಚ್ಯುತಃ. ನಿನ್ನ ಸಾಮರ್ಥ್ಯ, ಗುಣ, ದೇಹದಲ್ಲಿ ಚ್ಯುತಿ ಇಲ್ಲ. ಚ್ಯುತವಾದ ನನ್ನ ಬುದ್ಧಿಯಿಂದ ಇದನ್ನು ನಾನು ಗ್ರಹಿಸಲಿಲ್ಲ. ನಾನು ಈ ರೀತಿ ನೆಡೆದುಕೊಳ್ಳಬಾರದಿತ್ತು. ನಾನು ಮಾಡಿರುವ ಅಪರಾಧಕ್ಕೆ ನಿನ್ನ ಬಳಿ ಕ್ಷಮೆ ಬೇಡುತ್ತಿದ್ದೇನೆ. ನೀನು ಅಪ್ರಮೇಯ- ಕಾಲ-ದೇಶಗಳಿಂದ ವ್ಯಾಪ್ತನಾದ ನೀನು ನಮ್ಮ ಅರಿವಿಗೆ ಎಟುಕದವನು. ಈಗ ನನಗೆ ನನ್ನ ತಪ್ಪಿನ ಅರಿವಾಯಿತು. ಅಜ್ಞಾನದಿಂದ ತಪ್ಪು ಮಾಡುತ್ತಿದ್ದೇನೆ ಎನ್ನುವ ತಿಳುವಳಿಕೆ ಬಂತು.
ಪಿತಾSಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ ಸಮೋSಸ್ತ್ಯಭ್ಯಧಿಕಃ ಕುತೋನ್ಯೋ ಲೋಕತ್ರಯೇSಪ್ಯಪ್ರತಿಮಪ್ರಭಾವ ॥೪೩॥
ಪಿತಾ ಅಸಿ ಲೋಕಸ್ಯ ಚರ ಅಚರಸ್ಯ ತ್ವಮ್ ಅಸ್ಯ ಪೂಜ್ಯಃ ಚ ಗುರುಃ ಗರೀಯಾನ್ ।
ನ ತ್ವತ್ ಸಮಃ ಅಸ್ತಿ ಅಭ್ಯಧಿಕಃ ಕುತಃ ಅನ್ಯಃ ಲೋಕತ್ರಯೇ ಅಪಿ ಅಪ್ರತಿಮ ಪ್ರಭಾವ –ಈ ಚರಾಚರದ ಜಗದ ತಂದೆ ನೀನು. ಆರಾಧನೆಯ ಕೇಂದ್ರ. ಗುರುವಿಗೂ ಹಿರಿಯ ಗುರು. ಜೋಡಿಯಿರದ ಹಿರಿಮೆಯೇ, ಮೂರು ಲೋಕದಲ್ಲೂ ನಿನಗೆ ಸಾಟಿ ಇಲ್ಲ. ಬೇರೆ ಮಿಗಿಲು ಮತ್ತೆಲ್ಲಿ?
ಎಲ್ಲರನ್ನೂ ಸೃಷ್ಟಿಸಿದವ, ಎಲ್ಲರನ್ನೂ ಪಾಲಿಸುವ ನೀನು ಜಗದ ತಂದೆ. ಜಗದ ಗುರುವಾದ ನಿನ್ನನ್ನು ನಾನು ತೀರಾ ಸಲುಗೆಯಿಂದ ಕಂಡೆ. ನಿನಗೆ ಸಾಟಿಯಾದವರು ಇನ್ನೊಬ್ಬರಿಲ್ಲ. ನಿನ್ನನ್ನು ಹೋಲಿಸುವ ಇನ್ನೊಂದು ದೃಷ್ಟಾಂತವಿಲ್ಲ. ಇಡೀ ಜಗತ್ತಿನಲ್ಲಿ ನಿನ್ನನ್ನು ಮೀರಿಸುವ ಇನ್ನೊಂದು ಶಕ್ತಿ ಇಲ್ಲ. [ಇಲ್ಲಿ ಮೂರು ಲೋಕಗಳು ಎಂದರೆ ಭೂಮಿಯಿಂದ ಕೆಳಗಿರುವ ಲೋಕಗಳ ಒಂದು ಗುಂಪು, ಭೂಲೋಕ ಮತ್ತು ಭೂಮಿಯಿಂದ ಮೇಲಿರುವ ಲೋಕಗಳ ಗುಂಪು.] ನೀನು ಎಲ್ಲಾ ಕಾರಣಗಳ ಕಾರಣ. ನಿನಗಿಂತ ಮಿಗಿಲು ಇನ್ನೆಲ್ಲಿ?
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ॥೪೪॥
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್ ಪ್ರಸಾದಯೇ ತ್ವಾಮ್ ಅಹಮ್ ಈಶಮ್ ಈಡ್ಯಮ್ ।
ಪಿತಾ ಇವ ಪುತ್ರಸ್ಯ ಸಖಾ ಇವ ಸಖ್ಯುಃ ಪ್ರಿಯಃ ಪ್ರಿಯಾಯಾಃ ಅರ್ಹಸಿ ದೇವ ಸೋಢುಮ್ –ಆದ್ದರಿಂದ, ಎಲ್ಲರೂ ಹೊಗಳುವ, ಎಲ್ಲರ ದೊರೆಯಾದ ನಿನ್ನೆದುರು ಮೈಚೆಲ್ಲಿ, ಕಾಲಿಗೆರಗಿ ಓಲೈಸುತ್ತಿದ್ದೇನೆ: ಓ ದೇವ, ನನ್ನ ಮೆಚ್ಚಿನ ನೀನು ನಿನ್ನ ಮೆಚ್ಚಿನ ನನಗಾಗಿ ನನ್ನ ತಪ್ಪುಗಳನ್ನು ಮನ್ನಿಸಬೇಕು. ತಂದೆ-ಮಗನ ತಪ್ಪನ್ನು, ಗೆಳೆಯ-ಗೆಳೆಯನ ತಪ್ಪನ್ನು ಮನ್ನಿಸುವಂತೆ.
ನಿನ್ನೆದುರು ನಿಲ್ಲಲಾಗುತ್ತಿಲ್ಲ. ಮೈಚೆಲ್ಲಿ ಹೊರಳಾಡಬೇಕು ಎನ್ನಿಸುತ್ತಿದೆ. ಎಲ್ಲರಿಂದ ಸ್ತುತನಾದ ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಮಗ ಮಾಡಿದ ತಪ್ಪನ್ನು ತಂದೆ ಕ್ಷಮಿಸುವಂತೆ, ಗೆಳೆಯನ ತಪ್ಪನ್ನು ಗೆಳೆಯ ಕ್ಷಮಿಸುವಂತೆ, ಜಗದ ತಂದೆಯಾದ ನೀನು, ಜಗತ್ತಿನ ಎಲ್ಲರ ಅಂತಃಕರಣದ ಮಿತ್ರನಾದ ನೀನು, ನನ್ನನ್ನು ಕ್ಷಮಿಸು.
ಅದೃಷ್ಟಪೂರ್ವಂ ಹೃಷಿತೋSಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ
ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ ॥೪೫॥
ಅದೃಷ್ಟ ಪೂರ್ವಮ್ ಹೃಷಿತಃ ಅಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯದಿ ತಮ್ ಮನಃ ಮೇ।
ತತ್ ಏವ ಮೇ ದರ್ಶಯ ದೇವ ರೂಪಮ್ ಪ್ರಸೀದ ದೇವೇಶ ಜಗನ್ನಿವಾಸ –ಹಿಂದೆಂದೂ ಕಂಡರಿಯದ ರೂಪವನ್ನು ಕಂಡು ಸಡಗರಪಟ್ಟಿದ್ದೇನೆ; ಕಂಡು ಗಾಬರಿಗೊಂಡು ಬಗೆಗೆಟ್ಟಿದ್ದೇನೆ ಕೂಡಾ. ಓ ಸಗ್ಗಿಗರ ದೊರೆಯೇ, ಓ ಜಗದ ಆಸರೆಯೇ, ದಯೆದೋರು. ಓ ದೇವ, ನನಗೆ ಅದೇ ರೂಪವನ್ನು ತೋರು.
ಎಂದೂ ಕಾಣದ ಈ ನಿನ್ನ ಅದ್ಭುತ ರೂಪವನ್ನು ಕಂಡು ಖುಷಿ ಪಟ್ಟಿದ್ದೇನೆ. ಆದರೆ ಇಡೀ ಜಗತ್ತನ್ನು ಸಂಹಾರ ಮಾಡುವ ನಿನ್ನ ಉಗ್ರ ರೂಪವನ್ನು ಕಂಡು ಭಯವಾಗುತ್ತಿದೆ. ಒಂದು ಕಡೆ ಆನಂದ ಮತ್ತು ಇನ್ನೊಂದು ಕಡೆ ದಿಗಿಲು. ಇದರಿಂದ ನಾನು ಕಂಗಾಲಾಗಿದ್ದೇನೆ. ಅದಕ್ಕಾಗಿ ಆ ನಿನ್ನ ‘ಕೃಷ್ಣ’ ರೂಪವನ್ನು ತೋರು.
ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ॥೪೬॥
ಕಿರೀಟಿನಮ್ ಗದಿನಮ್ ಚಕ್ರಹಸ್ತಮ್ ಇಚ್ಛಾಮಿ ತ್ವಾಮ್ ದ್ರಷ್ಟುಮ್ ಅಹಮ್ ತದಾ ಏವ।
ತೇನ ಏವ ರೂಪೇಣ ಚತುಃ ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ—ಮುಕುಟವಿಟ್ಟ, ಕೈಯಲ್ಲಿ ಗದೆ-ಚಕ್ರ ತೊಟ್ಟ ನಿನ್ನನ್ನು ಆ ರೂಪದಲ್ಲೇ ಕಾಣಬಯಸುತ್ತೇನೆ. ಸಾವಿರ ತೋಳಿನ ವಿಶ್ವರೂಪನೇ, ಮತ್ತೊಮ್ಮೆ ನಾಲ್ಕು ತೋಳಿನ ಅದೇ ರೂಪದಿಂದ ಕಾಣಿಸಿಕೋ.
“ನೀನು ಹಿಂದೆ ಕಾಣಿಸಿಕೊಂಡಂತೆ ಚತುರ್ಭುಜನಾಗಿ, ಕಿರೀಟ ಧರಿಸಿದ ಗದಾ-ಚಕ್ರ ಹಿಡಿದಿರುವ ನಿನ್ನ ರೂಪವನ್ನು ತೋರು” ಎಂದು ಅರ್ಜುನ ಸಹಸ್ರ ತೋಳಿನ ವಿಶ್ವರೂಪಿ ಭಗವಂತನಲ್ಲಿ ಕೈಜೋಡಿಸಿ ಬೇಡಿಕೊಳ್ಳುತ್ತಾನೆ. ಇಲ್ಲಿ ಅರ್ಜುನ ಕೃಷ್ಣನಲ್ಲಿ –“ನಿನ್ನ ಚತುರ್ಭುಜ ರೂಪವನ್ನು ತೋರು” ಎಂದಿದ್ದಾನೆ. ಕೃಷ್ಣ ತನ್ನ ಅಂತರಂಗದ ಭಕ್ತರಿಗೆ ತನ್ನ ಚತುರ್ಭುಜ ರೂಪವನ್ನು ತೋರಿದ್ದ. ಇದನ್ನು ಅರ್ಜುನ ಕೂಡಾ ನೋಡಿದ್ದಾನೆ. ಭಾಗವತದಲ್ಲಿ- ಬಾಲಕನಾಗಿದ್ದಾಗ ಕೃಷ್ಣ ತನ್ನ ಚತುರ್ಭುಜ ರೂಪವನ್ನು ತೋರಿದ್ದ ಎನ್ನುವುದನ್ನು ಹೀಗೆ ಹೇಳಿದ್ದಾರೆ:
ತಮದ್ಭುತಂ ಬಾಲಕಮಂಬುಜೇಕ್ಷಣಂ ಚತುರ್ಭುಜಂ ಶಂಖಗದಾದ್ಯುದಾಯುಧಂ,
ಶ್ರೀವತ್ಸಲಕ್ಷ್ಮಂ ಗಲಶೋಭಿಕೌಸ್ತುಭಂ ಪೀತಾಂಬರಂ ಸಾಂದ್ರಪಯೋದಸೌಭಗಂ ||೧೦.೦೩.೯||
ಸಾಮಾನ್ಯರು ಕಾಣದ ಭಗವಂತನ ಚತುರ್ಭುಜ ರೂಪವನ್ನು ಕೃಷ್ಣ ಕೆಲವರಿಗೆ ತೋರಿದ್ದ ಎನ್ನುವುದನ್ನು ಈ ಶ್ಲೋಕ ದೃಡಪಡಿಸುತ್ತದೆ. ಇಲ್ಲಿ ಅರ್ಜುನ ಭಗವಂತನಲ್ಲಿ ಆತನ ವಿಶ್ವರೂಪ ದರ್ಶನವನ್ನು ಕೊನೆಗೊಳಿಸಿ ತನಗೆ ಚತುರ್ಭುಜ ರೂಪವನ್ನು ತೋರಿಸು ಎಂದು ಬೇಡಿಕೊಳ್ಳುತ್ತಾನೆ.
ಇಲ್ಲಿ ನಾವು ತಿಳಿಯಬೇಕಾದ ಮುಖ್ಯ ವಿಚಾರ ಎಂದರೆ: ಭಗವಂತನ ವಿಶ್ವರೂಪದ ಉಪಾಸನೆ ಸಾಮಾನ್ಯರಾದ ನಮಗೆ ಅಸಾಧ್ಯ. ಆತನ ವಿಶ್ವರೂಪವನ್ನು ಮಹಾ ಜ್ಞಾನಿಯಾದ ಅರ್ಜುನನಿಂದಲೇ ನೋಡಿ ತಡೆದುಕೊಳ್ಳಲು ಆಗಿಲ್ಲ. ಹಾಗಿರುವಾಗ ನಾವು ಅದನ್ನು ನಮ್ಮ ಧ್ಯಾನದಲ್ಲಿ ಜೀರ್ಣಿಸಿಕೊಳ್ಳವುದು ಸಾಧ್ಯವೇ? ಈ ಕಾರಣಕ್ಕಾಗಿ ಧ್ಯಾನದಲ್ಲಿ ಭಗವಂತನ ವಿಶ್ವ ರೂಪವನ್ನು ಉಪಾಸನೆ ಮಾಡುವುದಕ್ಕಿಂತ, ಭಗವಂತನ ವಿಶ್ವ ಶಕ್ತಿಯ ಎಚ್ಚರದಿಂದ ಆತನ ಅವತಾರ ರೂಪದಲ್ಲಿ ಆತನನ್ನು ಉಪಾಸನೆ ಮಾಡುವುದು ಶ್ರೇಯಸ್ಕರ. ಅರ್ಜುನನ ಈ ಬೇಡಿಕೆಯನ್ನು ಕೃಷ್ಣ ಹೇಗೆ ಪುರಸ್ಕರಿಸಿದ ಎನ್ನುವುದನ್ನು ಮುಂದಿನ ಶ್ಲೋಕಗಳಲ್ಲಿ ನೋಡೋಣ.
ಭಗವಾನುವಾಚ ।
ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್ ।
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್॥೪೭॥
ಭಗವಾನ್ ಉವಾಚ-ಭಗವಂತ ಹೇಳಿದನು:
ಮಯಾ ಪ್ರಸನ್ನೇನ ತವ ಅರ್ಜುನ ಇದಮ್ ರೂಪಮ್ ಪರಮ್ ದರ್ಶಿತಮ್ ಆತ್ಮಯೋಗಾತ್ ।
ತೇಜಃ ಮಯಮ್ ವಿಶ್ವಮ್ ಅನಂತಮ್ ಆದ್ಯಮ್ ಯತ್ ಮೇ ತ್ವತ್ ಅನ್ಯೇನ ನ ದೃಷ್ಟ ಪೂರ್ವಮ್ –ಅರ್ಜುನಾ, ನಾನೇ ಮೆಚ್ಚಿ ಆತ್ಮ ಶಕ್ತಿಯಿಂದ ನಿನಗೆ ತೋರಿಸಿದೆ ಈ ಹಿರಿಯ ರೂಪವನ್ನು. ಇದು ಬೆಳಕಿನ ಮೊತ್ತ. ಗುಣಗಳ ಗುಂಪು. ಇದಕ್ಕೆ ಕೊನೆಯಿಲ್ಲ. ಇದು ಎಲ್ಲದಕ್ಕೂ ಮೊದಲು. ನನ್ನೀ ರೂಪವನ್ನು ಇನ್ನಾರೂ ಈ ಮೊದಲು ಹೀಗೆ ಕಂಡದ್ದಿಲ್ಲ.
ಭಗವಂತನ ಸಂಹಾರ ರೂಪವನ್ನು ಕಂಡು ಭಯಗ್ರಸ್ತನಾಗಿರುವ ಅರ್ಜುನನನ್ನು ಕೃಷ್ಣ ಸಂತೈಸುತ್ತಾನೆ. ಕೃಷ್ಣ ಹೇಳುತ್ತಾನೆ: “ನಾನು ನಿನಗೆ ವಿಶ್ವರೂಪ ತೋರಿದ್ದು ನಿನ್ನ ಭಕ್ತಿಗೆ ಪ್ರಸನ್ನನಾಗಿಯೇ ಹೊರತು, ನಿನ್ನನ್ನು ಹೆದರಿಸುವುದಕ್ಕೋಸ್ಕರ ಅಲ್ಲ” ಎಂದು. ಕೃಷ್ಣ ತನ್ನ ಅವತಾರದಲ್ಲಿ ಅನೇಕ ಬಾರಿ ತನ್ನ ವಿಶ್ವರೂಪ ದರ್ಶನ ತೋರಿದ್ದ. ಯಶೋದೆ-ಮಣ್ಣು ತಿಂದ ಕೃಷ್ಣನ ಬಾಯಿಯನ್ನು ತೆರೆಯಲು ಹೇಳಿದಾಗ, ಅಲ್ಲಿ ಆಕೆಗೆ ತನ್ನ ಬಾಯಿಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದ್ದ. ಇನ್ನೊಮ್ಮೆ ಹಾಲು ಕುಡಿದು ಆಕಳಿಸಿದ ಪುಟ್ಟ ಕೃಷ್ಣನ ಬಾಯಿಯಲ್ಲಿ ಯಶೋದೆ ಭಗವಂತನ ವಿಶ್ವರೂಪ ದರ್ಶನ ಪಡೆದಿದ್ದಳು. ಸಂಧಾನಕ್ಕೆಂದು ದೃತರಾಷ್ಟ್ರನ ಸಭೆಗೆ ಬಂದ ಕೃಷ್ಣನನ್ನು ದುರ್ಯೋಧನ ಬಂಧಿಸಲು ಪ್ರಯತ್ನಿಸಿದಾಗ, ಅಲ್ಲಿ ಕೃಷ್ಣ ತನ್ನ ವಿಶೇಷ ರೂಪವನ್ನು ತೋರಿದ್ದ. ಇಷ್ಟೇ ಅಲ್ಲದೆ ಗರ್ಗಾಚಾರ್ಯರಿಗೆ, ಉದಂಕ ಮುನಿಗೆ ಕೂಡಾ ಕೃಷ್ಣನ ವಿಶ್ವರೂಪ ದರ್ಶನವಾಗಿತ್ತು. ಆದರೆ ಇಲ್ಲಿ ಅರ್ಜುನನಿಗೆ ಕೃಷ್ಣ ತೋರಿದ ವಿಶ್ವರೂಪ ಎಲ್ಲಕ್ಕಿಂತ ಅಪರಿಮಿತವಾದುದು. “ಭೂಲೋಕದಲ್ಲಿ ಯಾರೂ ಈ ಮೊದಲು ಹೀಗೆ ಕಂಡದ್ದಿಲ್ಲ ಎನ್ನುತ್ತಾನೆ” ಕೃಷ್ಣ. ಭಗವಂತನ ವಿಶ್ವರೂಪ-ಅದೊಂದು ಬೆಳಕಿನ ಪುಂಜ. ಅದು ಗುಣಗಳ ಸಾಗರ. ಅನಂತವಾದ ಈ ವಿಶ್ವರೂಪ ದರ್ಶನವನ್ನು ಅರ್ಜುನ ಪಡೆದ.
ನ ವೇದಯಜ್ಞಾಧ್ಯಯನೈರ್ನ ದಾನೈಃ ನಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ॥೪೮॥
ನ ವೇದ ಯಜ್ಞ ಅಧ್ಯಯನೈಃ ನ ದಾನೈಃ ನ ಚ ಕ್ರಿಯಾಭಿಃ ನ ತಪೋಭಿಃ ಉಗ್ರೈಃ ।
ಏವಮ್ ರೂಪಃ ಶಕ್ಯಃ ಅಹಮ್ ನೃಲೋಕೇ ದ್ರಷ್ಟುಮ್ ತ್ವತ್ ಅನ್ಯೇನ ಕುರು ಪ್ರವೀರ – ಕುರುವಂಶದ ಕಡುಗಲಿಯೇ, ಭೂಲೋಕದಲ್ಲಿ ನೀನಲ್ಲದೆ ಇನ್ನಾರೂ ಇಂತಹ ಬಗೆಯ ನನ್ನನ್ನು ಕಾಣುವುದು ಸಾಧ್ಯವಿಲ್ಲ. ಸಾಧ್ಯವಿಲ್ಲ ವೇದಗಳಲ್ಲಿ ಕರ್ಮಕಾಂಡವನ್ನರಸುವ ಕಲಿಕೆಗಳಿಂದ. ಇಲ್ಲ ಕೊಡುಗೆಗಳಿಂದ. ಇಲ್ಲ ನೇಮ ನೋಂಪಿಗಳಿಂದ. ಇಲ್ಲ ಕಟ್ಟುನಿಟ್ಟಿನ ತಪಗಳಿಂದ.
ಭಗವಂತನ ಪ್ರೀತಿಗೆ ಪಾತ್ರರಾಗದ ಯಾರೂ ಆತನ ವಿಶ್ವರೂಪ ದರ್ಶನ ಪಡೆಯಲು ಸಾಧ್ಯವಿಲ್ಲ. ವೇದಾಧ್ಯಯನದಿಂದ, ಯಜ್ಞದಿಂದ, ದಾನದಿಂದ ಇತ್ಯಾದಿ ಕರ್ಮದಿಂದ ಸರ್ವೋತ್ತಮನಾದ, ಸರ್ವ ವಿಲಕ್ಷಣನಾದ ಭಗವಂತನ ವಿಶ್ವರೂಪ ದರ್ಶನ ಪಡೆಯುವುದು ಸಾಧ್ಯವಿಲ್ಲ. “ಅಂತಹ ನನ್ನ ರೂಪವನ್ನು ಕರ್ಮ ನಿಷ್ಠನಾದ(ಕುರುಪ್ರವೀರ) ನೀನು ಕಂಡೆ” ಎನ್ನುತ್ತಾನೆ ಕೃಷ್ಣ.
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್ ।
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ॥೪೯॥
ಮಾ ತೇ ವ್ಯಥಾ ಮಾ ಚ ವಿಮೂಢಭಾವಃ ದೃಷ್ಟ್ವಾ ರೂಪಮ್ ಘೋರಮ್ ಈದೃಕ್ ಮಮ ಇದಮ್ ।
ವ್ಯಪೇತ ಭೀಃ ಪ್ರೀತ ಮನಾಃ ಪುನಃ ತ್ವಮ್ ತತ್ ಏವ ಮೇ ರೂಪಮ್ ಇದಮ್ ಪ್ರಪಶ್ಯ –ನಡುಗಿಸುವ ನನ್ನ ಇಂತಹ ರೂಪವನ್ನು ಕಂಡು ಕಳವಳಿಸಬೇಡ; ಕಂಗೆಡಬೇಡ. ಮತ್ತೆ ನೀನು ನನ್ನ ಆ ಮೊದಲ ರೂಪವನ್ನೇ ನೋಡು- ಅಂಜಿಕೆ ತೊರೆದು,ಬಗೆಯೊಳಕ್ಕರೆ ತುಂಬಿ.
ಶತ್ರು ಸಂಹಾರಕವಾದ ನನ್ನ ಈ ರೂಪವನ್ನು ಕಂಡು ಗಾಬರಿಯಾಗಬೇಡ. ನಿನ್ನೆಲ್ಲಾ ಭಯವನ್ನು ಬಿಟ್ಟು ನೋಡು ನಿನಗಿಷ್ಟವಾದ ನನ್ನ ಚತುರ್ಭುಜ ರೂಪವನ್ನು ಎನ್ನುತ್ತಾನೆ ಕೃಷ್ಣ.
ಸಂಜಯ ಉವಾಚ ।
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ।
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ॥೫೦॥
ಸಂಜಯ ಉವಾಚ- ಸಂಜಯ ಹೇಳಿದನು:
ಇತಿ ಅರ್ಜುನಮ್ ವಾಸುದೇವಃ ತಥಾ ಉಕ್ತ್ವಾ ಸ್ವಕಮ್ ರೂಪಮ್ ದರ್ಶಯಾಮ್ ಆಸ ಭೂಯಃ ।
ಆಶ್ವಾಸಯಾಮ್ ಆಸ ಚ ಭೀತಮ್ ಏನಮ್ ಭೂತ್ವಾ ಪುನಃ ಸೌಮ್ಯವಪುಃ ಮಹಾತ್ಮಾ –ವಾಸುದೇವ ಹೀಗೆ ನುಡಿದು ಮರಳಿ ಅರ್ಜುನನಿಗೆ ತನ್ನ ಕೃಷ್ಣ ರೂಪವನ್ನೇ ತೋರಿದ. ಮಹಾತ್ಮನಾದ ಕೃಷ್ಣ ಹೀಗೆ ಮರಳಿ ಸೌಮ್ಯರೂಪ ತಾಳಿ ಅಂಜಿದ್ದ ಅರ್ಜುನನನ್ನು ಸಂತೈಸಿದ.
ಈ ಶ್ಲೋಕದಲ್ಲಿ ಸಂಜಯ ಭಗವಂತನನ್ನು ವಾಸುದೇವ ಎಂದು ಸಂಬೋಧಿಸಿದ್ದಾನೆ. ಭಗವಂತನ ಈ ನಾಮಕ್ಕೆ ಅನೇಕ ಅರ್ಥಗಳಿವೆ. ವಾಸು+ದೇವ-ವಾಸುದೇವ. ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಸಂಸಾರ ಬಂಧನದ ಹದಿನೈದು ಬೇಲಿಗಳನ್ನು ಧಾಟಿ, ಸಮಾಧಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೇವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ) ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.
ಅರ್ಜುನ ಉವಾಚ ।
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ॥೫೧॥
ಅರ್ಜುನಃ ಉವಾಚ-ಅರ್ಜುನ ಹೇಳಿದನು:
ದೃಷ್ಟ್ವಾ ಇದಮ್ ಮಾನುಷಮ್ ರೂಪಮ್ ತವ ಸೌಮ್ಯಮ್ ಜನಾರ್ದನ ।
ಇದಾನೀಮ್ ಅಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಮ್ ಗತಃ –ಜನಾರ್ದನಾ, ಮನುಷ್ಯಾಕಾರದ ನಿನ್ನ ಈ ಸೌಮ್ಯರೂಪವನ್ನು ಕಂಡು ಜೀವ ಬಂತು. ಈಗ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಿದ್ದೇನೆ.
ಇಲ್ಲಿ ಅರ್ಜುನ ಭಗವಂತನನ್ನು ಜನಾರ್ದನ ಎಂದು ಸಂಬೋಧಿಸಿದ್ದಾನೆ. ಜನ+ಅರ್ದನ-ಜನಾರ್ದನ. ಇಲ್ಲಿ ಅರ್ದನ ಅಂದರೆ ಕೊನೆಗೊಳಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ. 'ಜನ' ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಜನ ಅಂದರೆ ದುರ್ಜನ. ಜನಾರ್ದನ ಅಂದರೆ ದುರ್ಜನ ನಾಶಕ. ಜನ ಅಂದರೆ ಜನನ ಉಳ್ಳವರು. ಜನಾರ್ದನ ಎಂದರೆ ಜನನ ಮುಕ್ತಗೊಳಿಸುವವನು ಅಂದರೆ ಮುಕ್ತಿಪ್ರದಾಯಕ. "ದುರ್ಜನರ ಸಂಹಾರಕ್ಕೆಂದು ನಿಂತಿರುವ ನಿನ್ನ ಆ ರೂಪವನ್ನು ಕಂಡು ನಾನು ಭಯಗೊಂಡಿದ್ದೆ. ಭಕ್ತರ ಕರೆಗೆ ಓಗೊಟ್ಟು, ತನ್ನ ಭಕ್ತರಿಗೆ ಮೋಕ್ಷವನ್ನು ಕರುಣಿಸುವ ನಿನ್ನ ಈ ಸೌಮ್ಯ ರೂಪವನ್ನು ಕಂಡು ನಾನು ಚೇತರಿಸಿಕೊಂಡೆ”- ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.
ಭಗವಾನುವಾಚ ।
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ॥೫೨॥
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ॥೫೩॥
ಭಗವಾನುವಾಚ-ಭಗವಂತ ಹೇಳಿದನು:
ಸುದುರ್ದರ್ಶಮ್ ಇದಮ್ ರೂಪಮ್ ದೃಷ್ಟವಾನ್ ಅಸಿ ಯತ್ ಮಮ ।
ದೇವಾಃ ಅಪಿ ಅಸ್ಯ ರೂಪಸ್ಯ ನಿತ್ಯಮ್ ದರ್ಶನ ಕಾಂಕ್ಷಿಣಃ ||
ನ ಅಹಂ ವೇದೈಃ ನ ತಪಸಾ ನ ದಾನೇನ ನ ಚ ಇಜ್ಯಯಾ ।
ಶಕ್ಯಃ ಏವಂ ವಿಧಃ ದ್ರಷ್ಟುಮ್ ದೃಷ್ಟವಾನ್ ಅಸಿ ಮಾಮ್ ಯಥಾ ––ನೀನು ಕಂಡ ನನ್ನ ಈ ರೂಪ ಸುಲಭವಾಗಿ ಕಾಣಬರುವಂತದಲ್ಲ. ದೇವತೆಗಳು ಕೂಡಾ ಈ ರೂಪವನ್ನು ಕಾಣಲೆಂದು ಅನುಗಾಲ ಕಾಯುತ್ತಿರುತ್ತಾರೆ.
ನೀನು ಕಂಡ ಹಾಗೆ ಈ ಬಗೆಯ ನನ್ನನ್ನು ಕಾಣಲು ಬರಿದೆ ವೇದಗಳನ್ನೋದುವುದರಿಂದ ಸಾಧ್ಯವಿಲ್ಲ. ಇಲ್ಲ ತಪಸ್ಸಿನಿಂದ, ಇಲ್ಲ ದಾನದಿಂದ, ಇಲ್ಲ ಯಜ್ಞದಿಂದಲೂ.
ಭಗವಂತ ಅರ್ಜುನನಿಗೆ ಕಾಣಿಸಿದ ತನ್ನ ಅಪೂರ್ವ ರೂಪ ಬಹಳ ದುರ್ಲಭರೂಪ. ಇಂತಹ ಅಪೂರ್ವ ರೂಪವನ್ನು ಕಾಣಲು ದೇವತೆಗಳೂ ಕೂಡಾ ಆಸೆಯಿಂದ ಅನುಗಾಲ ಕಾಯುತ್ತಿರುತ್ತಾರೆ. ಕೃಷ್ಣ ಇಲ್ಲಿ ಮತ್ತೆ ಒತ್ತು ಕೊಟ್ಟು ಹಿಂದೆ ಹೇಳಿದ ವಿಚಾರವನ್ನು ಮರಳಿ ಹೇಳುತ್ತಾನೆ. “ಸ್ವಸಾಮರ್ಥ್ಯದಿಂದ(ವೇದಾಧ್ಯಾಯನ, ಯಜ್ಞ, ದಾನ, ತಪಸ್ಸು ಇತ್ಯಾದಿ ಕರ್ಮಗಳನ್ನು ಮಾಡುವ ಮುಖೇನ) ನನ್ನ ಈ ವಿಶಿಷ್ಠ ರೂಪವನ್ನು ಕಾಣಲು ಸಾಧ್ಯವಿಲ್ಲ”ಎನ್ನುತ್ತಾನೆ ಕೃಷ್ಣ.
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋSರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ॥೫೪॥
ಭಕ್ತ್ಯಾ ತು ಅನನ್ಯಯಾ ಶಕ್ಯಃ ಅಹಂ ಏವಮ್ ವಿಧಃ ಅರ್ಜುನ ।
ಜ್ಞಾತುಮ್ ದ್ರಷ್ಟುಮ್ ಚ ತತ್ತ್ವೇನ ಪ್ರವೇಷ್ಟುಮ್ ಚ ಪರಂತಪ –ಅರಿಗಳನ್ನು ಸುಟ್ಟುರಿಯುವ ಅರ್ಜುನಾ, ನನ್ನನ್ನು ಈ ಪರಿ ಸರಿಯಾಗಿ ಅರಿಯಲು, ಅರಿತು ಕಾಣಲು, ಕಂಡು ಸೇರಲು ನನ್ನಲ್ಲೇ ನೆಲೆಗೊಂಡ ಭಕ್ತಿಯಿಂದ ಮಾತ್ರವೇ ಸಾಧ್ಯ.
ಭಗವಂತನನ್ನು ಕಾಣಲು ಇರುವ ಮೂಲ ಮಂತ್ರ ‘ಭಕ್ತಿ’. ಏಕನಿಷ್ಠೆಯಿಂದ ಭಗವಂತನನ್ನು ಅನನ್ಯವಾಗಿ ಭಕ್ತಿ ಮಾಡುವುದರಿಂದ ಆತನನ್ನು ಸೇರಲು ಸಾಧ್ಯ. ಎಲ್ಲರಿಗೂ ಮಿಗಿಲಾದ ಭಗವಂತ ಭಕ್ತ ಪರಾಧೀನ.
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ॥೫೫॥
ಮತ್ ಕರ್ಮ ಕೃತ್ ಮತ್ ಪರಮಃ ಮತ್ ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮ್ ಏತಿ ಪಾಂಡವ –ಓ ಪಾಂಡವಾ, ಎಲ್ಲವನ್ನು ನನಗಾಗಿ ಮಾಡುವವನು, ನನ್ನನ್ನೇ ಪರದೈವವೆಂದು ತಿಳಿದವನು, ವಿಷಯದ ನಂಟು ತೊರೆದು ನನ್ನಲ್ಲಿ ಭಕ್ತಿಯಿಟ್ಟವನು, ಯಾವ ಜೀವಿಗಳಲ್ಲೂ ಹಗೆಗೊಳ್ಳದವನು –ನನ್ನನ್ನು ಪಡೆಯುತ್ತಾನೆ.
ಭಗವಂತನನ್ನು ಕಾಣಲು ಭಕ್ತಿಯ ಜೊತೆಗೆ ಇರುವ ಅತಿಮುಖ್ಯವಾದ ಅಂಶವನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ನಾವು ಮಾಡುವ ಕಾರ್ಯವನ್ನು ‘ನಾನು ಮಾಡಿದೆ’ ಎಂದು ಅಹಂಕಾರ ಪಡದೆ, ಭಗವಂತ ನನ್ನ ಕೈಯಿಂದ ಮಾಡಿಸಿದ ಎನ್ನುವ ಅನುಸಂಧಾನ; ಅರ್ಪಣ ಭಾವ, ಫಲದ ಅಪೇಕ್ಷೆ ಇಲ್ಲದ ಭಕ್ತಿ, ದ್ವೇಷ ಪ್ರತೀಕಾರವಿಲ್ಲದೆ ಭಗವಂತನಲ್ಲಿ ಶರಣಾಗತಿ, ನಿರ್ಲಿಪ್ತ ಭಾವದಿಂದ ಭಗವಂತ ಸರ್ವೋತ್ತಮ ಎನ್ನುವ ಸತ್ಯವನ್ನರಿತು ಆತನನ್ನು ಪ್ರೀತಿಸುವುದು-ಇದರಿಂದ ಭಗವಂತನನ್ನು ಕಾಣಲು ಸಾಧ್ಯ.
ಇತ್ಯೇಕಾದಶೋSಧ್ಯಾಯಃ ಹನ್ನೊಂದನೆಯ ಅಧ್ಯಾಯ ಮುಗಿಯಿತು
ಮುಂದಿನ ಅಧ್ಯಾಯಕ್ಕಾಗಿ ಇಲ್ಲಿ ಒತ್ತಿ >>
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.