Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ - 17

       ಕೃಷ್ಣ ಗೀತೆಯ ಆರಂಭದಲ್ಲಿ ಕರ್ಮದ ಬಗ್ಗೆ ವಿವರಿಸುತ್ತಾ: “ಫಲದ ನಂಟು ತೊರೆದು, ಭಗವಂತನ ಪೂಜೆಯೆಂದು ಕರ್ಮ ಮಾಡು” ಎನ್ನುವ ಸಂದೇಶವನ್ನು ಕೊಟ್ಟ. ಕರ್ಮ ಮಾಡುವಾಗ ನಾವು ತಿಳಿದುಕೊಳ್ಳಬೇಕಾದ ಒಂದು ಬಹಳ ಮುಖ್ಯವಾದ ವಿಚಾರವೆಂದರೆ: ಯಾವುದು ಸತ್ಕರ್ಮ ಮತ್ತು ಯಾವುದು ಅಸತ್ಕರ್ಮ ಎನ್ನುವದು. ಕೆಟ್ಟ ಕೆಲಸ ಮತ್ತು ಒಳ್ಳೆಯ ಕೆಲಸ ಎನ್ನುವುದು ನಾವು ತಿಳಿದಷ್ಟು ಸರಳವಾಗಿ ತಿಳಿಯುವ ವಿಚಾರವಲ್ಲ. ನಮಗೆ ಮೇಲ್ನೋಟಕ್ಕೆ ಒಳ್ಳೆಯ ಕೆಲಸ ಎಂದು ಕಂಡು ಬಂದದ್ದು ಕೆಟ್ಟ ಕೆಲಸವಾಗಿರಬಹುದು ಅಥವಾ ಕೆಟ್ಟ ಕೆಲಸವೆಂದು ಕಾಣಿಸಿದ್ದು ಒಳ್ಳೆಯ ಕೆಲಸವಾಗಿರಬಹುದು. ಇಲ್ಲಿ ಕೆಲಸದ ಹಿಂದಿರುವ ಭಾವ ಮುಖ್ಯವಾಗುತ್ತದೆ. ಒಂದೇ ಕ್ರಿಯೆ ಅದರ ಹಿಂದಿನ ಭಾವಕ್ಕನುಗುಣವಾಗಿ ಸತ್ಕರ್ಮವಾಗಬಹುದು ಅಥವಾ ದುಷ್ಕರ್ಮವಾಗಬಹುದು. ಉದಾಹರಣೆಗೆ: ಮಹಾಭಾರತ ಯುದ್ಧ. ಈ ಯುದ್ಧದಲ್ಲಿ ಪಾಂಡವರೂ ಪಾಲ್ಗೊಂಡಿದ್ದರು ಮತ್ತು ಕೌರವರೂ ಪಾಲ್ಗೊಂಡಿದ್ದರು. ಪಾಂಡವರಲ್ಲಿ ಸಾತ್ವಿಕವಾದ ಮನೋವೃತ್ತಿ ಇತ್ತು. ಅವರು ಎಂದೂ ಸಾಮಾಜಿಕವಾಗಿ ತಾವು ದೊಡ್ಡ ಸ್ಥಾನವನ್ನು ಗಳಿಸಬೇಕು(ರಾಜಸ ಭಾವನೆ), ಕೌರವರನ್ನು ಮಣ್ಣು ಮುಕ್ಕಿಸಬೇಕು(ತಾಮಸ ಭಾವನೆ) ಎನ್ನುವ ಭಾವನೆಯಿಂದ ಯುದ್ಧ ಮಾಡಿಲ್ಲ. ಆದರೆ ದುರ್ಯೋಧನನಲ್ಲಿ ಇದ್ದದ್ದು ಕೇವಲ ರಾಜಸ ಮತ್ತು ತಾಮಸ ಭಾವನೆ. ಈ ಕಾರಣದಿಂದ ಪಾಂಡವರು ಮಾಡಿದ ಯುದ್ಧ ಸಾತ್ವಿಕ ಯುದ್ಧವಾದರೆ, ಕೌರವರು ಮಾಡಿದ ಯುದ್ಧ ತಾಮಸ ಯುದ್ಧವಾಯಿತು. ಆದ್ದರಿಂದ ನಾವು ಸತ್ಕರ್ಮ ಯಾವುದು ಅಸತ್ಕರ್ಮ ಯಾವುದು ಎನ್ನುವ ಜ್ಞಾನವನ್ನು ಪಡೆದು ಕರ್ಮ ಮಾಡುವುದು ಬಹಳ ಮುಖ್ಯವಾಗುತ್ತದೆ. ಕರ್ಮ ಎನ್ನುವುದು ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ವಿಧವಾದ ತ್ರಿಗುಣಗಳ ಪರಿಧಿಯಲ್ಲೇ ನಡೆಯುತ್ತದೆ. ನಾವು ಮಾಡುವ ಯಜ್ಞ, ದಾನ, ತಪಸ್ಸು; ನಾವು ಸೇವಿಸುವ ಆಹಾರ, ಎಲ್ಲದರಲ್ಲೂ ಈ ಗುಣತ್ರಯಗಳ ಪ್ರಭಾವ ಸೇರಿಕೊಂಡಿರುತ್ತದೆ. ಈ ಗುಣತ್ರಯಗಳ ಪ್ರಭಾವ ನಮ್ಮ ಕರ್ಮದ ಮೇಲೆ ಹೇಗಾಗುತ್ತದೆ ಎನ್ನುವುದನ್ನು ನಾವು ಸಾಧ್ಯವಾದಷ್ಟು ಅರಿತು, ಸತ್ವದ ಪರಿಧಿಯೊಳಗೆ ಕರ್ಮಾಚರಣೆ ಮಾಡಬೇಕು. ಈ ಅಧ್ಯಾಯ ಮುಖ್ಯವಾಗಿ ಯಾವ ಅನುಸಂಧಾನದಿಂದ ಕರ್ಮ ಮಾಡಿದಾಗ ಆ ಕ್ರಿಯೆ ಸಾತ್ವಿಕ, ರಾಜಸ ಅಥವಾ ತಾಮಸ ಕ್ರಿಯೆಯಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ.

ಹಿಂದಿನ ಅಧ್ಯಾಯದ ಕೊನೆಯಲ್ಲಿ ಕೃಷ್ಣ “ಶಾಸ್ತ್ರದ ಕಟ್ಟಳೆಯನ್ನು ಮೀರಿ ಇಷ್ಟಬಂದಂತೆ ನಡೆವವನು ಸಿದ್ಧಿಯನ್ನು ಪಡೆಯಲಾರ, ಅವನಿಗೆ ಸುಖವಿಲ್ಲ, ಪರಮಗತಿಯೂ ಇಲ್ಲ” ಎಂದು ಹೇಳಿದ್ದ. ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ. ಶಾಸ್ತ್ರದ ಕಟ್ಟಳೆ ತಿಳಿಯದವರು-ನಂಬಿಕೆಯಿಂದ ಕರ್ಮ ಮಾಡುತ್ತಾರೆ-ಅಂತವರ ಗತಿ ಏನು? ಎಂದು. ನಮ್ಮ ಪರವಾಗಿ ಅರ್ಜುನ ಕೃಷ್ಣನಲ್ಲಿ ಈ ಪ್ರಶ್ನೆಯನ್ನು ಕೇಳುವುದರೊಂದಿಗೆ ಈ ಅಧ್ಯಾಯ ಪ್ರಾರಂಭವಾಗುತ್ತದೆ. ಬನ್ನಿ ಅರ್ಜುನನೊಂದಿಗೆ ನಾವೂ ಸೇರಿಕೊಂಡು ಭಗವಂತನ ಉಪದೇಶವನ್ನು ಆಲಿಸೋಣ. 

ಅರ್ಜುನ ಉವಾಚ ।

ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾSನ್ವಿತಾಃ ।

ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ ॥೧॥

ಅರ್ಜುನಃ ಉವಾಚ- ಅರ್ಜುನ ಕೇಳಿದನು:

ಯೇ ಶಾಸ್ತ್ರವಿಧಿಮ್ ಉತ್ಸೃಜ್ಯ ಯಜಂತೇ ಶ್ರದ್ಧಯಾ ಅನ್ವಿತಾಃ ।

ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮ್ ಆಹೋ ರಜಃ ತಮಃ -- ಕೆಲವರು ಶಾಸ್ತ್ರದ ಕಟ್ಟಳೆ ಅರಿಯದೇ ಬಿಟ್ಟರೂ ನಂಬಿಕೆಯಿಂದ ನಡೆದುಕೊಳ್ಳುತ್ತಾರೆ. ಅಂತವರ ನೆಲೆ ಎಂತಹದು ಕೃಷ್ಣಾ? ಸತ್ವವೇ, ರಜಸ್ಸೇ ಅಥವಾ ತಮಸ್ಸೇ?

ನಾವು ವೇದಾಧ್ಯಯನ ಮಾಡಿಲ್ಲ , ನಮಗೆ ಶಾಸ್ತ್ರದ ವಿಧಿ ಗೊತ್ತಿಲ್ಲ, ಆದರೆ ಶಾಸ್ತ್ರ ತಿಳಿಯದೇ ಇದ್ದುದಕ್ಕಾಗಿ ಪಶ್ಚಾತ್ತಾಪವಿದೆ; ಶಾಸ್ತ್ರದ ಬಗ್ಗೆ ಶ್ರದ್ಧೆ ಇದೆ, ಅದರ ಪ್ರಕಾರ ಬದುಕಬೇಕು ಎನ್ನುವ ಬಯಕೆ ಇದೆ. ತಿಳಿದವರು ಹೇಳುತ್ತಾರೆ: "ಯದೇವ ವಿದ್ಯಯಾ ಕರೋತಿ ಶ್ರದ್ಧೆಯ.. ಅಂದರೆ “ನೀನು ಏನನ್ನು ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ” ಎಂದು. ಹೀಗಿರುವಾಗ ಒಬ್ಬ ಶ್ರದ್ಧೆಯಿಂದ ಮಾಡುವ ಕರ್ಮ ವ್ಯರ್ಥವೋ? ಇದು ಅರ್ಜುನನ ಪ್ರಶ್ನೆ.

ಇಲ್ಲಿ ‘ಶ್ರದ್ಧಾ’ ಅಂದರೆ-ಅತೀಂದ್ರಿಯವಾಗಿರತಕ್ಕ, ನಮ್ಮನ್ನು ನಿಯಂತ್ರಿಸುವ ಅಗೋಚರ ಶಕ್ತಿಯ ಬಗ್ಗೆ ನಮಗಿರುವ ನಂಬಿಕೆ. ಅರ್ಥಾತ್: ಭಗವಂತನ ಮೇಲೆ ನಂಬಿಕೆ, ಶಾಸ್ತ್ರದ ಮೇಲೆ ನಂಬಿಕೆ, ಪಾಪ-ಪುಣ್ಯದ ನಂಬಿಕೆ, ಎಲ್ಲವನ್ನೂ ನಿಯಂತ್ರಿಸುವ ಪರಶಕ್ತಿ ಒಂದಿದೆ ಎನ್ನುವ ನಂಬಿಕೆ. ಮಹಾಭಾರತದಲ್ಲಿ ಹೇಳುವಂತೆ: 'ಕರ್ಮಕ್ಕೆ ಫಲವಿದೆ ಎನ್ನುವ ನಂಬಿಕೆಯೇ ಮನುಷ್ಯನ ಬದುಕಿನ ಆಧಾರ ಸ್ಥಂಭ'. ಹೀಗಿರುವಾಗ ನಂಬಿಕೆಯೊಂದಿಗೆ ಶ್ರದ್ಧೆ ಇದ್ದು, ಶಾಸ್ತ್ರದ ತಿಳುವಳಿಕೆ ಇಲ್ಲದೇ ಇದ್ದರೆ ಅಂತವರ ನೆಲೆ ಏನು? “ಎಲ್ಲರನ್ನು ಕರ್ಷಣೆ ಮಾಡುವ(ಕೃಷ್ಣ) ನೀನು ಇಂತಹವರನ್ನು ಎಲ್ಲಿಗೆ ಕರ್ಷಣೆ ಮಾಡುತ್ತೀಯ? ಅಂಥವರ ನಿಷ್ಠೆ ಸಾತ್ವಿಕವೋ, ರಾಜಸವೋ ಅಥವಾ ತಾಮಸವೋ?” ಎಂದು ನಮ್ಮ ನಿಮ್ಮೆಲ್ಲರಿಗಿರುವ ಈ ಗೊಂದಲದ ಪ್ರಶ್ನೆಯನ್ನು ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ.

ಭಗವಾನುವಾಚ ।

ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।

ಸಾತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು ॥೨॥


ಭಗವಾನ್ ಉವಾಚ –ಭಗವಂತ ಹೇಳಿದನು:

ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ ।

ಸಾತ್ವಿಕೀ ರಾಜಸೀ ಚ ಏವ ತಾಮಸೀ ಚ ಇತಿ ತಾಂ ಶೃಣು –ಜೀವಿಗಳ ಹುಟ್ಟುಗುಣದಿಂದಲೇ ಹುಟ್ಟಿಬರುವ ಈ

ನಂಬಿಕೆ ಮೂರು ತೆರನಾಗಿದೆ: ಸಾತ್ವಿಕ, ರಾಜಸ, ಮತ್ತು ತಾಮಸ. ಅದರ ಬಗೆಯನ್ನಾಲಿಸು.

ಸಾಧನಾ ಶರೀರದಲ್ಲಿರುವ ಜೀವಗಳು ಮೂಲಭೂತವಾಗಿ ಮೂರು ತೆರನಾಗಿರುತ್ತವೆ. ಅದು ಸಾತ್ವಿಕ, ರಾಜಸ ಮತ್ತು ತಾಮಸ. ಇದರ ಮೇಲೆ ಪರಿಸರದ ಮತ್ತು ಮನೆತನದ ಪ್ರಭಾವದಿಂದ ಮಾನಸಿಕವಾಗಿ ನಾವು ಮತ್ತೆ ಮೂರು ತೆರನಾದ ಶ್ರದ್ಧೆಯನ್ನು ಬೆಳಸಿಕೊಳ್ಳುತ್ತೇವೆ. ಆದ್ದರಿಂದ ಸ್ವರೂಪತಃ ಸಾತ್ವಿಕನಾಗಿದ್ದರೂ ಕೂಡಾ ಆತ ಮಾನಸಿಕವಾಗಿ ರಾಜಸನಾಗಿರಬಹುದು ಅಥವಾ ತಾಮಸನಾಗಿರಬಹುದು. ಉದಾಹರಣೆಗೆ ಸ್ವರೂಪತಃ ಸಾತ್ವಿಕರಾಗಿದ್ದ ಗರ್ಗಾಚಾರ್ಯರು ತಾಮಸ ಪ್ರಭಾವಕ್ಕೊಳಗಾಗಿ ಕೃಷ್ಣನನ್ನು ಸೋಲಿಸುವ ಮಗ ಹುಟ್ಟಬೇಕು ಎಂದು ತಪಸ್ಸನ್ನಾಚರಿಸಿರುವ ಕಥೆಯನ್ನು ಹಿಂದೆ ನೋಡಿದ್ದೇವೆ. ಮಾನಸಿಕವಾಗಿ ಬರುವ ಈ ಬಾಹ್ಯ ಶ್ರದ್ಧೆ ಜನ್ಮ ಜನ್ಮಾಂತರದ್ದಲ್ಲ. ಆದರೆ ಸ್ವರೂಪ ಶ್ರದ್ಧೆ ಪ್ರತೀ ಜನ್ಮದಲ್ಲೂ ಸದಾ ಜೀವನೊಂದಿಗಿರುತ್ತದೆ. ಇದನ್ನು ಸ್ಪಷ್ಟಪಡಿಸುವುದಕ್ಕೋಸ್ಕರ ಈ ಶ್ಲೋಕದಲ್ಲಿ ‘ಏವ’ ಮತ್ತು ‘ಚ’ ಕಾರವನ್ನು ಒಟ್ಟಿಗೆ ಬಳಸಿದ್ದಾರೆ. ಜೀವಸ್ವರೂಪ- ಸಾತ್ವಿಕೇವ, ರಾಜಸ್ಯೇವ ಅಥವಾ ತಾಮಸ್ಯೇವ-ಅದು ಬದಲಾಗುವುದಿಲ್ಲ. ಈ ಸ್ವರೂಪದ ಮೇಲಿರುವ ಬಾಹ್ಯ ಶ್ರದ್ಧೆ- ಸಾತ್ವಿಕೇಚ, ರಾಜಸೇಚ, ತಾಮಸೇಚ-ಪ್ರಭಾವದಿಂದ ಬರುವಂತದ್ದು, ಗರಿಷ್ಠ ಒಂದು ಜನ್ಮಕ್ಕೆ ಮೀಸಲಾಗಿರುವಂತಾದ್ದು. “ಈ ಮೂರು ವಿಧವಾದ ಶ್ರದ್ಧೆಯ ಬಗೆಯನ್ನಾಲಿಸು" ಎಂದು ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ.  

ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।

ಶ್ರದ್ಧಾಮಯೋSಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ ॥೩॥

ಸತ್ವ ಅನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।

ಶ್ರದ್ಧಾ ಮಯಃ ಅಯಮ್ ಪುರುಷಃ ಯಃ ಯತ್ ಶ್ರದ್ಧ ಸಃ ಏವ ಸಃ –ಭಾರತ, ಸ್ವಭಾವಕ್ಕೆ ತಕ್ಕಂತೆ ಎಲ್ಲರ ನಂಬಿಕೆಯೂ ಇರುತ್ತದೆ. ಈ ಜೀವ ನಂಬಿಕೆಯ ಸ್ವರೂಪವೇ. ಅವನ ನಂಬಿಕೆ ಎಂತಹದ್ದೋ ಅವನು ಅಂತಹವನು.

ಜೀವದ ಸ್ವರೂಪಕ್ಕೆ ಅನುಗುಣವಾಗಿಯೇ ಮೂಲ ಶ್ರದ್ಧೆ ಇರುವುದು. ಆದರೆ ಕೆಲವೊಮ್ಮೆ ಅದು ವ್ಯಕ್ತವಾಗದೇ ಇರಬಹುದು. ಇದು ವ್ಯಕ್ತವಾಗದೇ ಇದ್ದಾಗ, ಮನಸ್ಸಿನಲ್ಲಿ ಯಾವ ಬಾಹ್ಯ ಪ್ರಭಾವ ಶ್ರದ್ಧೆ ಇದೆಯೋ ಅದೇ ಅವನ ನಂಬಿಕೆಯಾಗುತ್ತದೆ. ಮನುಷ್ಯ ಶ್ರದ್ಧೆಯ ಕೈಗೊಂಬೆ. ಯಾರ ಸ್ವರೂಪ ಶ್ರದ್ಧೆ ಸಾತ್ವಿಕವೋ ಅವನು ಸಾತ್ವಿಕ; ಯಾರ ಸ್ವರೂಪ ಶ್ರದ್ಧೆ ರಾಜಸವೋ ಅವನು ರಾಜಸ; ಯಾರ ಸ್ವರೂಪ ಶ್ರದ್ಧೆ ತಾಮಸವೋ ಅವನು ತಾಮಸ. ಹಾಗಾಗಿ ಜೀವರಲ್ಲಿ ಮೂರು ವಿಧ: ಸಾತ್ವಿಕ ಶ್ರದ್ಧೆ ಇರುವ ಜೀವ-ಸಾತ್ವಿಕ ಜೀವ; ರಾಜಸ ಶ್ರದ್ಧೆ ಇರುವ ಜೀವ-ರಾಜಸ ಜೀವ; ತಾಮಸ ಶ್ರದ್ಧೆ ಇರುವ ಜೀವ-ತಾಮಸ ಜೀವ. ನಾವು ಧ್ಯಾನದಿಂದ ಮನಸ್ಸನ್ನು ಸ್ಥಗನಗೊಳಿಸಿ, ತುರಿಯ ಸ್ಥಿತಿಯನ್ನು ತಲುಪಿದಾಗ ಬಾಹ್ಯ ಶ್ರದ್ಧೆ ಕಣ್ಮರೆಯಾಗಿ ಕೇವಲ ಸ್ವರೂಪ ಶ್ರದ್ಧೆ ವ್ಯಕ್ತವಾಗುತ್ತದೆ.


ಯಜಂತೇ ಸಾತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।

ಪ್ರೇತಾನ್ ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥೪॥

ಯಜಂತೇ ಸಾತ್ವಿಕಾಃ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।

ಪ್ರೇತಾನ್ ಭೂತಗಣಾನ್ ಚ ಅನ್ಯೇ ಯಜಂತೇ ತಾಮಸಾಃ ಜನಾಃ –ಸಾತ್ವಿಕರ ಪೂಜೆ ದೇವತೆಗಳಿಗೆ ಸಲ್ಲುತ್ತದೆ, ರಾಜಸರದು ಯಕ್ಷ-ರಾಕ್ಷಸರಿಗೆ. ತಾಮಸರ ಪೂಜೆ ಪ್ರೇತಗಳಿಗೆ, ಭೂತಗಣಗಳಿಗೆ ಸಲ್ಲುತ್ತದೆ.

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ “ಸಾತ್ವಿಕರು ದೇವತೆಗಳನ್ನು ಪೂಜೆ ಮಾಡುತ್ತಾರೆ; ರಾಜಸರು ಯಕ್ಷ-ರಾಕ್ಷಸರನ್ನು ಮತ್ತು ತಾಮಸರು ಭೂತ-ಪ್ರೇತಗಳನ್ನು ಪೂಜಿಸುತ್ತಾರೆ” ಎಂದು ಹೇಳಿದಂತೆ ಕಾಣಿಸುತ್ತದೆ. ಆದರೆ ಇಲ್ಲಿ ಅಡಗಿರುವ ಮೂಲ ಅರ್ಥವೇ ಬೇರೆ. ನಮಗೆ ತಿಳಿದಂತೆ ಸಾತ್ವಿಕರಾಗಲೀ, ರಾಜಸರಾಗಲೀ, ತಾಮಸರಾಗಲೀ-ಅವರು ಪೂಜೆ ಮಾಡುವುದು ಭಗವಂತನನ್ನು ಅಥವಾ ದೇವತೆಗಳನ್ನು. ವಾಮಾಚಾರ(Witchcraft) ಮಾಡುವವರನ್ನು ಬಿಟ್ಟರೆ ಇನ್ಯಾರೂ ಪ್ರೇತ-ಪಿಶಾಚಿ-ರಾಕ್ಷಸರನ್ನು ಪೂಜಿಸುವುದಿಲ್ಲ. ಆದ್ದರಿಂದ ಇಲ್ಲಿ ಹೇಳಿರುವ ಮೂಲ ಸಂದೇಶ ಅರ್ಥವಾಗಬೇಕಾದರೆ ನಾವು ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸಬೇಕು. ಇಲ್ಲಿ ‘ದೇವಾನ್’ ಎಂದರೆ: ಭಗವಂತನ ಅನೇಕ ರೂಪಗಳು ಮತ್ತು ಭಗವಂತನ ಪರಿವಾರ ದೇವತೆಗಳು’ ಎಂದರ್ಥ. ‘ಯಜಂತೇ ಸಾತ್ವಿಕಾ ದೇವಾನ್’ ಎಂದರೆ-ಸಾತ್ವಿಕರು ಭಗವಂತನ ಅನುಸಂಧಾನದಿಂದ ಮಾಡುವ ಪೂಜೆ ದೇವತೆಗಳನ್ನು ಸೇರುತ್ತದೆ ಎಂದರ್ಥ. ಅದೇ ರೀತಿ "ಯಕ್ಷರಕ್ಷಾಂಸಿ ರಾಜಸಾಃ" ಎಂದರೆ- ರಾಜಸರು ಮಾಡುವ ಪೂಜೆ ಯಕ್ಷ-ರಾಕ್ಷಸರನ್ನು ಸೇರುತ್ತದೆ ಎಂದರ್ಥ. ರಾಜಸರು ಸಾಮಾನ್ಯವಾಗಿ ಭಗವಂತನ ಪಾರಮ್ಯದ ಎಚ್ಚರವಿಲ್ಲದೆ, ಭಯದಿಂದ, ದೇವತೆಗಳು ನಮಗೆ ತೊಂದರೆ ಕೊಡದಿರಲಿ ಎನ್ನುವ ಹರಕೆ ಸಂದಾಯ ಭಾವನೆಯಿಂದ ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡಿದಾಗ, ನಾವು ಭಗವಂತನಿಗೆಂದು ಸಲ್ಲಿಸುವ ಪೂಜೆಯನ್ನು ದೇವತೆಗಳ ಹೆಸರಿನ ಯಕ್ಷ-ರಾಕ್ಷಸರು ಬಂದು ಸ್ವೀಕರಿಸುತ್ತಾರೆ. ಇನ್ನು ಮೂರನೆಯ ವರ್ಗ ತಾಮಸ. ಇವರು ಪೂಜೆ ಮಾಡುವುದು ತಮ್ಮ ಅಂತಸ್ತನ್ನು ತೋರಿಸಿಕೊಳ್ಳುವುದಕ್ಕಾಗಿ. ಉದಾಹರಣೆಗೆ ದುರ್ಯೋಧನ ಪಾಂಡವರು ಮಾಡಿದ ಅಶ್ವಮೇಧ ಯಾಗವನ್ನು ಮೀರಿಸುವ ಸಲುವಾಗಿ ಪೌಂಡ್ರಿಕ ಯಾಗ ಮಾಡಿಸಿದಂತೆ. ಹೀಗೆ ದುರುದ್ದೇಶದಿಂದ ತಾಮಸರು ಮಾಡುವ ಪೂಜೆಯನ್ನು ಬಂದು ಸ್ವೀಕರಿಸುವವರು ದೇವತೆಗಳ ಹೆಸರಿನ ಭೂತ-ಪ್ರೇತಗಳು.

ಪೂಜೆಯಲ್ಲಿ ಕೇವಲ ಶ್ರದ್ಧೆ ಮುಖ್ಯವಲ್ಲ ಬದಲಿಗೆ ಅದು ಎಂತಹ ಶ್ರದ್ಧೆ ಎನ್ನುವುದು ಮುಖ್ಯ. ಶಾಸ್ತ್ರ ಗೊತ್ತಿಲ್ಲದಿದ್ದರೂ ಕೂಡಾ, ಸಾತ್ವಿಕ ಶ್ರದ್ಧೆಯಿಂದ: “ಭಗವಂತಾ, ನನಗೆ ಏನೂ ಗೊತ್ತಿಲ್ಲ, ನಾನು ಭಕ್ತಿಯಿಂದ ನಿನ್ನನ್ನು ಆರಾಧನೆ ಮಾಡುತ್ತೇನೆ, ನನ್ನ ತಪ್ಪನ್ನು ಕ್ಷಮಿಸು” ಎಂದು ಶರಣಾಗತಿಯಿಂದ ಬೇಡಿದರೆ ಆ ಪೂಜೆಯನ್ನು ಸ್ವತಃ ಭಗವಂತನೇ ಬಂದು ಸ್ವೀಕಾರ ಮಾಡುತ್ತಾನೆ. ಆದರೆ ಸ್ವಾರ್ಥ, ಅಹಂಕಾರ, ಡಂಭದಿಂದ ಮಾಡುವ ರಾಜಸ ಅಥವಾ ತಾಮಸ ಪೂಜೆಯನ್ನು ಭಗವಂತನಾಗಲೀ, ಅವನ ಪರಿವಾರ ದೇವತೆಗಳಾಗಲೀ ಸ್ವೀಕರಿಸುವುದಿಲ್ಲ.

ನಮ್ಮ ಕರ್ಮ ಕಾಮರಹಿತ(ನಿಷ್ಕಾಮ)ವಾಗಿರಬೇಕು. ಇಲ್ಲಿ ಕಾಮ ಅಂದರೆ ಕೆಟ್ಟಬಯಕೆ. ಬಯಕೆಯಲ್ಲಿ ಎಂದೂ ಸ್ವಾರ್ಥವಿರಕೂಡಾದು. ನಾವು ನನಗೆ ಮಾತ್ರ ಒಳ್ಳೆಯದಾಗಲಿ ಎನ್ನುವ ಸಂಕುಚಿತ ಭಾವವನ್ನು ಬಿಟ್ಟುಬಿಡಬೇಕು. ಪೂಜೆ ಪುನಸ್ಕಾರ ಮಾಡುವಾಗ ಯಾವುದೋ ಸಂಕುಚಿತ ಉದ್ದೇಶವಿಟ್ಟು ನಾವು ಪೂಜೆ ಮಾಡಬಾರದು. ಉದಾಹರಣೆಗೆ: “ನನ್ನ ವ್ಯವಹಾರದಲ್ಲಿ ಏಳಿಗೆ ಆಗಲಿ ಎಂದು ಯಜ್ಞ ಮಾಡುವುದು; ಮಗಳಿಗೆ ಉತ್ತಮ ವರ ಸಿಗಲಿ ಎನ್ನುವ ಫಲಾಪೇಕ್ಷೆಯಿಂದ ಪೂಜೆ ಮಾಡುವುದು ಇತ್ಯಾದಿ. ನಾವು ದೇವರಲ್ಲಿ ಈ ರೀತಿ ನಮ್ಮ ಕಾಮನೆಗಳ ಪಟ್ಟಿ ಕೊಡಬಾರದು. ಯಾವುದು ಆಗಬೇಕು ಎನ್ನುವುದು ದೇವರಿಗೆ ಗೊತ್ತಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದು ಅವನಿಗೆ ಮಾತ್ರ ಗೊತ್ತಿರುವುದು. ಅದನ್ನು ಅವನು ಕೊಟ್ಟೇ ಕೊಡುತ್ತಾನೆ. ಹೀಗಿರುವಾಗ ನಾವು ನಮ್ಮ ಇಂತಹ ಸಂಕುಚಿತ ಕಾಮದ ಪಟ್ಟಿಯನ್ನು ಹಿಡಿದುಕೊಂಡು ಕರ್ಮ ಮಾಡಿದಾಗ ಆಗುವ ದುರಂತ ಘೋರ. ನಾವು ದೇವರಲ್ಲಿ ಯಾವುದೋ ಬಯಕೆಯನ್ನಿಟ್ಟು ಪೂಜೆ ಮಾಡಿಸುತ್ತೇವೆ. ಆ ಪೂಜೆಗಾಗಿ ಹಣ ವೆಚ್ಚ ಮಾಡಿರುತ್ತೇವೆ. ಆದರೆ ಆ ಬಯಕೆ ಈಡೇರುವುದಿಲ್ಲ. ಆಗ ನಮಗೆ ದೇವರ ಮೇಲೆ ದ್ವೇಷ, ಹಣ ವ್ಯರ್ಥವಾಯಿತು ಎನ್ನುವ ಅಸಮಾಧಾನ. ಹೀಗಾದಾಗ ನಮ್ಮ ಪೂಜೆ ವ್ಯಾಪಾರವಾಗುತ್ತದೆ ಮತ್ತು ಅದು ಭೂತ-ಪ್ರೇತಗಳನ್ನು ಸೇರುತ್ತದೆ. ದೇವರ ಪೂಜೆ ವ್ಯಾಪಾರವಲ್ಲ.

ಅಶಾಸ್ತ್ರವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ ।

ಡಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ ॥೫॥


ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ ।

ಮಾಂ ಚೈವಾಂತಃ ಶರೀರಸ್ಥಂ ತಾನ್ ವಿದ್ಧ್ಯಾಸುರನಿಶ್ಚಯಾನ್ ॥೬॥


ಅಶಾಸ್ತ್ರ ವಿಹಿತಂ ಘೋರಂ ತಪ್ಯಂತೇ ಯೇ ತಪಃ ಜನಾಃ ।

ಡಂಭ ಅಹಂಕಾರ ಸಂಯುಕ್ತಾಃ ಕಾಮ ರಾಗ ಬಲ ಅನ್ವಿತಾಃ

ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮ್ ಅಚೇತಸಃ ।

ಮಾಂ ಚ ಏವ ಅಂತಃ ಶರೀರಸ್ಥಂ ತಾನ್ ವಿದ್ಧಿ ಆಸುರನಿಶ್ಚಯಾನ್ -- ಕೆಲವು ಜನರು ಶಾಸ್ತ್ರದ ಕಟ್ಟಳೆ ಮೀರಿ ಕೆಟ್ಟ ತಪವನ್ನಾಚರಿಸುತ್ತಾರೆ; ಬೂಟಾಟಿಕೆಯಿಂದ ಮತ್ತು ಹಮ್ಮಿನಿಂದ. ಆಸೆ-ಆಸಕ್ತಿಗಳೇ ಅವರ ಸಾಧನೆಗೆ ಬೆಂಬಲ. ಇಂತಹ ತಿಳಿಗೇಡಿಗಳು ತಮ್ಮ ದೇಹದಲ್ಲಿರುವ ಭೂತ ಸಮೂಹವನ್ನು [ದೇಹವನ್ನು ನಿಯಮಿಸುವ ದೇವತಾಗಣವನ್ನು] ಕಡೆಗಣಿಸುತ್ತಾರೆ. ದೇಹದೊಳಗಿರುವ ನನ್ನ ಹಿರಿಮೆಯನ್ನು ಅಲ್ಲಗಳೆಯುತ್ತಾರೆ. ಅಂತವರು ತಾಮಸ ಸ್ವಭಾವದವರು ಎಂದು ತಿಳಿ.

 ಶ್ರದ್ಧೆಯಲ್ಲೇ ಅತ್ಯಂತ ನೀಚವಾದ ತಾಮಸ ಶ್ರದ್ಧೆ ಹೇಗಿರುತ್ತದೆ ಎನ್ನುವುದನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಕೆಲವರು ಶಾಸ್ತ್ರದ ಕಟ್ಟಳೆ ಮೀರಿ ತಪಸ್ಸನ್ನಾಚರಿಸುತ್ತಾರೆ. ಆ ತಪಸ್ಸಿನ ಹಿಂದಿರುವ ಉದ್ದೇಶ ಘೋರ. ಇಲ್ಲಿ ತಪಸ್ಸು ಅಂದರೆ ಕೇವಲ ಋಷಿ-ಮುನಿಗಳು ಮಾಡುವ ತಪಸ್ಸು ಮಾತ್ರವಲ್ಲ. ಶ್ರದ್ಧೆಯಿಂದ ಮಾಡುವ ಯಾವ ಕ್ರಿಯೆಯೂ ತಪಸ್ಸಾಗಬಹುದು[ಈ ಕುರಿತು ಹೆಚ್ಚಿನ ವಿವರಣೆಯನ್ನು ಈ ಅಧ್ಯಾಯದ ಮುಂದಿನ ಭಾಗ(ಶ್ಲೋಕ ೧೪-೧೯)ದಲ್ಲಿ ಕಾಣಬಹುದು]. ತಪಸ್ಸು ಮಾಡುವಾಗ ನಾವು ನನಗೆ ಒಳ್ಳೆಯದಾಗಲಿ ಎಂದು ತಪಸ್ಸು ಮಾಡಬಹುದು ಅಥವಾ ಲೋಕಕ್ಕೆ ಒಳ್ಳೆಯದಾಗಲಿ ಎಂದು ತಪಸ್ಸು ಮಾಡಬಹುದು. ಉದಾಹರಣೆಗೆ ಗಾಯತ್ತ್ರಿ: ಇಲ್ಲಿ “ಧಿಯೋ ಯೋನಃ ಪ್ರಚೋದಯಾತ್” ಎನ್ನುವಲ್ಲಿ “ನಮಗೆಲ್ಲರಿಗೂ ಒಳ್ಳೆಯ ಬುದ್ಧಿ ಕೊಡು ದೇವರೇ” ಎನ್ನುವ ಸಾತ್ವಿಕ ಶ್ರದ್ಧೆ ಇದೆ. ಲೋಕದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ತಪಸ್ಸು ಸಾತ್ವಿಕ ತಪಸ್ಸು. ಇದನ್ನು ಬಿಟ್ಟು “ನನಗೆ ಮಾತ್ರ ಒಳ್ಳೆಯದನ್ನು ಕೊಡು” ಎಂದು ಮಾಡುವ ಪೂಜೆ ರಾಜಸ. “ಇನ್ನೊಬ್ಬರು ಹಾಳಾಗಬೇಕು-ನಾನು ಒಳ್ಳೆಯದಾಗಬೇಕು” ಎಂದು ಮಾಡುವ ಪೂಜೆ ತಾಮಸ. ಇವು ಲೋಕಕಂಟಕವಾದ ಘೋರ ಶ್ರದ್ಧೆ.

ಶಾಸ್ತ್ರವಿಹಿತವಾದ ತಪಸ್ಸು ಎಂದರೆ: ಭಗವಂತನ ಪಾರಮ್ಯವನ್ನು ಅರಿತು, ಇನ್ನೊಬ್ಬರ ಬಗ್ಗೆ ಕೆಟ್ಟ ಯೋಚನೆ ಮಾಡದೆ, ಲೋಕದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡುವ ತಪಸ್ಸು. ‘ಸರ್ವೋತ್ಕರ್ಷೆ ದೇವ ದೇವಸ್ಯ ವಿಷ್ಣೋ ಮಹಾ ತಾತ್ಪರ್ಯಂ’- ಸಮಸ್ತ ಶಾಸ್ತ್ರಗಳ ತಾತ್ಪರ್ಯ- ‘ಭಗವಂತ ಸರ್ವೋತ್ತಮ’ ಎನ್ನುವುದು. ಇದನ್ನು ಒಪ್ಪಿಕೊಳ್ಳದೇ ಇರುವುದು ಶಾಸ್ತ್ರ ವಿರುದ್ಧ. ಇದನ್ನು ಒಪ್ಪಿಕೊಂಡು ಲೋಕಕ್ಕೆ ಕೆಟ್ಟದಾಗಲಿ ಎನ್ನುವ ಭಾವನೆ ಮನದಲ್ಲಿ ಮೂಡಿದರೆ ಅದೂ ಕೂಡಾ ಅಶಾಸ್ತ್ರವಿಹಿತವಾಗುತ್ತದೆ. ಯಾವುದು ಶಾಸ್ತ್ರವಿಹಿತ ಅಲ್ಲವೋ ಅದು ಭಗವಂತನಿಗೆ ಪ್ರಿಯವಲ್ಲ. ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಬಯಸಿ, ಸ್ವಾರ್ಥದಿಂದ ಮಾಡುವ ಕರ್ಮ ‘ಘೋರ ಕ್ರಿಯೆ’ ಎನಿಸುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಇಂತಹ ಕ್ರಿಯೆಯ ಹಿಂದೆ ಡಂಭಾಚಾರ ಮತ್ತು ಅಹಂಕಾರವಿರುತ್ತದೆ. ಇದನ್ನು ದೇವತೆಗಳು ಎಂದೂ ಸ್ವೀಕರಿಸುವುದಿಲ್ಲ.

 ಕೆಲವರು ತಮ್ಮ ದೈಹಿಕ ಬಲದಿಂದ ಇನ್ನೊಬ್ಬರನ್ನು ಬಗ್ಗುಬಡಿಯಬೇಕು ಎನ್ನುವ ದುಷ್ಟ ಉದ್ದೇಶವಿಟ್ಟು ತಪವನ್ನಾಚರಿಸುತ್ತಾರೆ. ಯಾರು ತಮ್ಮ ಕಾಮನೆಗಳಿಗೆ ಅಡ್ಡಿಪಡಿಸುತ್ತಾರೋ, ತಮ್ಮ ಇಷ್ಟಾನಿಷ್ಠಗಳಿಗೆ ಸ್ಪಂದಿಸುವುದಿಲ್ಲವೋ, ಅಂಥವರನ್ನು ಮುಗಿಸಬೇಕು ಎನ್ನುವ ಕೆಟ್ಟ ಚಿಂತನೆ ಇವರ ಮನಸ್ಸಿನಲ್ಲಿರುತ್ತದೆ. ಹೀಗೆ ಡಂಭದಿಂದ, ಅಹಂಕಾರದಿಂದ, ಸಂಕುಚಿತ ಕಾಮದಿಂದ, ಸ್ವಾರ್ಥದಿಂದ, ತೋಳ್ಬಲದಿಂದ ಕ್ರಿಯೆ ಮಾಡುವವರು ತಿಳಿಗೇಡಿಗಳು. ಇವರು ತಮ್ಮ ದೇಹವನ್ನು ದಂಡನೆ ಮಾಡಿ ತಪಸ್ಸನ್ನಾಚರಿಸುತ್ತಾರೆ.ಆದರೆ ಅವರಿಗೆ ತಮ್ಮ ದೇಹದಲ್ಲಿರುವ ಭೂತಗ್ರಾಮದ(ದೇವತೆಗಳ ಸಮೂಹದ) ಎಚ್ಚರವಿರುವುದಿಲ್ಲ. ಸಮಸ್ತ ದೇವತಾಗಣವನ್ನು ನಿರ್ಲಕ್ಷ್ಯ ಮಾಡಿ, ದೇವತೆಗಳ ಒಳಗಿರುವ ಭಗವಂತನನ್ನೂ ನಿರ್ಲಕ್ಷ್ಯ ಮಾಡಿ, ದೇಹದಂಡನೆ ಮಾಡಿಕೊಂಡು ಅನುಷ್ಠಾನ ಮಾಡುವ ಇವರು ಅಸುರರೆನಿಸುತ್ತಾರೆ. ಇವರು 'ಇಂದ್ರಿಯ ಕರ್ಮವೇ ಸರ್ವಸ್ವ-ಅದರಿಂದಾಚೆಗೆ ಏನೂ ಇಲ್ಲ' ಎಂದು ತಿಳಿದಿರುತ್ತಾರೆ.

ಕೃಷ್ಣನ ಈ ವಿವರಣೆಯನ್ನು ನೋಡಿದಾಗ ನಮ್ಮ-ನಿಮ್ಮೊಳಗಿರುವ ಈ ಅಸುರ(ಪ್ರಭಾವದಿಂದ ಬೆಳೆದ ಅಂಧಃಶ್ರದ್ಧೆ) ಎಷ್ಟು ಭಯಾನಕ ಎನ್ನುವ ಅಂಶ ನಮಗೆ ತಿಳಿಯುತ್ತದೆ. ಇದನ್ನು ನಾವು ನಮ್ಮ ಪ್ರತಿಯೊಂದು ಕ್ರಿಯೆಯಲ್ಲೂ ಗುರುತಿಸಿಕೊಂಡು ತಿದ್ದಿಕೊಳ್ಳಬೇಕು. ಇದಕ್ಕಾಗಿ ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ತಪಸ್ಸು, ದಾನ ಇತ್ಯಾದಿಯಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸ ಪ್ರಭೇದ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತಾನೆ.


ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।

ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥೭॥

ಆಹಾರಃ ತು ಅಪಿ ಸರ್ವಸ್ಯ ತ್ರಿವಿಧಃ ಭವತಿ ಪ್ರಿಯಃ ।

ಯಜ್ಞಃ ತಪಃ ತಥಾ ದಾನಂ ತೇಷಾಂ ಭೇದಮ್ ಇಮಮ್ ಶೃಣು –ಎಲ್ಲರು ಉಣ್ಣುವ ಆಹಾರವೂ ಮೂರು ತೆರನಾಗಿ ಮೆಚ್ಚಿಗೆಯಾಗುತ್ತದೆ. ಯಜ್ಞ, ತಪಸ್ಸು, ದಾನ ಕೂಡಾ. ಅವುಗಳ ಈ ಬಗೆಯನ್ನಾಲಿಸು.

ನಾವು ತಿನ್ನುವ ಆಹಾರ ಕೂಡಾ ಮೂರು ತೆರನಾಗಿರುತ್ತದೆ. ಸಾತ್ವಿಕ, ರಾಜಸ ಮತ್ತು ತಾಮಸ ಆಹಾರ. “ಅನ್ನಂ ಅಷಿತಂ ತ್ರೇಧಾ ವಿಧ್ಯತೆ” (ಛಾಂದೋಗ್ಯೋಪನಿಷತ್-೫-೧) ಎನ್ನುವಂತೆ ನಾವು ಸೇವಿಸುವ ಆಹಾರವನ್ನು ನಮ್ಮೊಳಗಿರುವ ಪ್ರಾಣ ಮತ್ತು ವೈಶ್ವಾನರರು ಮೂರು ಬಗೆಯನ್ನಾಗಿ(ಸೂಕ್ಷ್ಮ, ಮಧ್ಯ ಮತ್ತು ಸ್ಥೂಲ) ವಿಂಗಡಿಸಿ ಅದನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಾರೆ. ನಮ್ಮ ಆಹಾರಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಇದನ್ನು ನಮ್ಮ ಪ್ರಾಚೀನರು ಅರಿತಿದ್ದರು. ಅದಕ್ಕಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುವ ಆಹಾರವನ್ನು ಅವರು ನಿಷೇಧಿಸಿದರು. ಉದಾಹರಣೆಗೆ ಬೆಳ್ಳುಳ್ಳಿ. ಇದು ಔಷಧೀಯ ವಸ್ತು. ಆದರೆ ಇದನ್ನು ನಿತ್ಯ ಆಹಾರದಲ್ಲಿ ಬಳಸುವುದನ್ನು ನಿಷೇಧಿಸಿದ್ದಾರೆ. ಏಕೆಂದರೆ ಇದು ನಮ್ಮ ಬುದ್ಧಿ ಬೆಳವಣಿಗೆಗೆ ಪೂರಕವಲ್ಲ. ಇದೇ ರೀತಿ ನುಗ್ಗೆಕಾಯಿ, ತೊಂಡೆಕಾಯಿ ಇತ್ಯಾದಿ. ಅಧ್ಯಯನ ಮಾಡುವವರಿಗೆ ಇದು ನಿಷಿದ್ಧ (ಔಷಧವಾಗಿ ಬಳಸಬಹುದು). ಹೀಗೆ ಮನುಷ್ಯನ ಬುದ್ಧಿಗೆ ಯಾವ ವಿಧದ ಆಹಾರ ಸೂಕ್ತ ಎನ್ನುವುದನ್ನು ಮೊತ್ತ ಮೊದಲ ಬಾರಿಗೆ ಕೃಷ್ಣ ಜಗತ್ತಿಗೆ ಕೊಟ್ಟ.

ಆಹಾರದ ಜೊತೆಗೆ ನಾವು ಮಾಡುವ ದೇವರ ಪೂಜೆ, ತಪಃ, ನಮ್ಮ ಚಿಂತನಾ ಕ್ರಮ, ದಾನ, ಜೀವನದ ನಡೆ, ಮಾತು ಎಲ್ಲವುದರಲ್ಲೂ ಈ ಮೂರು ವಿಧವನ್ನು ಗುರುತಿಸಬಹುದು. ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ಯಜ್ಞ, ತಪಸ್ಸು ಮತ್ತು ದಾನದಲ್ಲಿ ಈ ಮೂರು ಬಗೆಯನ್ನು ಗುರುತಿಸುವುದು ಹೇಗೆ ಎನ್ನುವುದನ್ನು ವಿವರಿಸುತ್ತಾನೆ.    


ಆಯುಃಸತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।

ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ॥೮॥


ಆಯುಃ ಸತ್ವ ಬಲ ಆರೋಗ್ಯ ಸುಖ ಪ್ರೀತಿ ವಿವರ್ಧನಾಃ ।

ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ ಆಹಾರಾಃ ಸಾತ್ವಿಕ ಪ್ರಿಯಾಃ –ಇವು ಸಾತ್ವಿಕರಿಗೆ ಮೆಚ್ಚುಗೆಯಾದ ತಿನಿಸುಗಳು: ಆಯುಸ್ಸು, ಒಳ್ಳೆಯತನ, ತ್ರಾಣ, ಆರೋಗ್ಯವನ್ನು ಹೆಚ್ಚಿಸುವಂತವು; ಬಹಳ ಕಾಲ ಮೆಚ್ಚಿಗೆಯಾಗುವಂತವು; ತಿಂದಾಗ ಖುಷಿಯಾಗುವಂತವು; ರುಚಿಯಾದಂತವು; ಕಸುವಿರುವಂತವು; ಧೀರ್ಘಕಾಲ ಪರಿಣಾಮ ಬೀರುವಂತವು; ಮತ್ತೆಮತ್ತೆ ಮನ ಸೆಳೆಯುವಂತವು.

ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಆಹಾರದ ಬಗ್ಗೆ ವಿವರಿಸಿದ್ದಾನೆ. ಯಾವ ಆಹಾರ ನಮ್ಮ ಆಯುಸ್ಸಿನ ವೃದ್ಧಿಗೆ ಪೂರಕವೋ; ಯಾವ ಆಹಾರ ನಮಗೆ ಸೌಮ್ಯ ಸ್ವಭಾವವನ್ನು ಕೊಡುತ್ತದೋ; ಯಾವ ಆಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಕೊಡುತ್ತದೋ; ಯಾವ ಆಹಾರ ಆರೋಗ್ಯವನ್ನು ಕೊಡುತ್ತದೋ ಅಂತಹ ಆಹಾರ ಸಾತ್ವಿಕ ಆಹಾರ. ಈ ಆಹಾರವನ್ನು ನೋಡಿದಾಗ ನಮಗೆ ಕೆಟ್ಟ ಭಾವನೆ ಬರುವುದಿಲ್ಲ. ಅದು ರಸವತ್ತಾಗಿರುತ್ತದೆ, ರುಚಿಯಾಗಿರುತ್ತದೆ. ಇದನ್ನು ತಿಂದಾಗ ನಮ್ಮ ಹೊಟ್ಟೆ ತುಂಬುತ್ತದೆ ಮತ್ತು ತಕ್ಷಣ ಹಸಿವೆಯಾಗುವುದಿಲ್ಲ. ನೋಡಲು ಹೃದಯಂಗಮವಾಗಿರುತ್ತದೆ, ತಿಂದ ನೆನಪು ಉಳಿಯುವಂತಿರುತ್ತದೆ. 

ನಿಜವಾದ ಸಾತ್ವಿಕರು ಏನು ತಿನ್ನುತ್ತಾರೋ ಅದು ಸಾತ್ವಿಕ ಆಹಾರವಾಗಿರುತ್ತದೆ. ಪ್ರಕೃತಿ ಸಹಜವಾದ, ರಸವತ್ತಾದ, ರುಚಿಯಾದ, ಹಣ್ಣು-ಹಂಪಲು, ಗಡ್ಡೆ-ಗೆಣಸು, ಬೇಳೆ-ಕಾಳು, ಕಂದ-ಮೂಲಗಳು ಸಾಮಾನ್ಯವಾಗಿ ಸಾತ್ವಿಕ ಆಹಾರವಾಗಿರುತ್ತದೆ. ಆಯುಸ್ಸನ್ನು ಹೆಚ್ಚಿಸುವ ಶುದ್ಧ ತುಪ್ಪ(ಮಿತವಾಗಿ ಬಳಸಿದಾಗ) ಸಾತ್ವಿಕ ಆಹಾರ.


ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ ।

ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ॥೯॥


ಕಟು ಆಮ್ಲ ಲವಣ ಅತಿ ಉಷ್ಣ ತೀಕ್ಷ್ಣ ರೂಕ್ಷ ವಿದಾಹಿನಃ ।

ಆಹಾರಾಃ ರಾಜಸಸ್ಯ ಇಷ್ಟಾಃ ದುಃಖ ಶೋಕ ಆಮಯ ಪ್ರದಾಃ –ಇವು ರಾಜಸರಿಗೆ ಮೆಚ್ಚಿಗೆಯಾದ ತಿನಿಸುಗಳು: ಅತಿಯಾದ ಖಾರ, ಹುಳಿ, ಉಪ್ಪು, ತುಂಬಾ ಬಿಸಿ, ಬಿರುಸು, ನೀರಸ ಮತ್ತು ಉರಿಬರಿಸುವಂತವು; ದುಃಖ-ದುಮ್ಮಾನ ಮತ್ತು ಖಾಯಿಲೆ ಬರಿಸುವಂತವು.

ಇಲ್ಲಿ ರಾಜಸ ಆಹಾರದ ವಿವರಣೆಯನ್ನು ಕೃಷ್ಣ ಕೊಟ್ಟಿದ್ದಾನೆ. ವಿಪರೀತ ಖಾರ, ವಿಪರೀತ ಹುಳಿ, ಅತಿ ಉಪ್ಪು, ರಾಜಸ ಆಹಾರವೆನಿಸುತ್ತದೆ. ಅತಿಯಾದ ಬಿಸಿಯನ್ನು ಕುಡಿಯುವುದು; ಬಿರುಸು ಮತ್ತು ನೀರಸವಾದ ಆಹಾರವನ್ನು ಸೇವಿಸುವುದು; ಎದೆ ಸುಡುವ ಆಹಾರ ಸೇವನೆ-ಇವು ರಾಜಸರ ಲಕ್ಷಣವಾಗಿರುತ್ತದೆ. ಈ ಆಹಾರ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ವೇದನೆ ಹೆಚ್ಚುತ್ತದೆ. ಇದು ಖಾಯಿಲೆಯನ್ನು ತರಬಲ್ಲ ಆಹಾರ.

ಹಸಿಮೆಣಸಿನ ಕಾಯಿಯನ್ನು ನೇರವಾಗಿ ತಿನ್ನುವುದು, ಹುಣಸೇ ಹಣ್ಣನ್ನು ಅತಿಯಾಗಿ ತಿನ್ನುವುದು, ಯಾವಾಗಲೂ ಹೆಚ್ಚು ಉಪ್ಪನ್ನು ಬಳಸುವುದು, ಗಂಟಲು ಸುಡುವ ಕಾಫಿ ಕುಡಿಯುವುದು, ಅತಿಯಾಗಿ ಸಾಸಿವೆ ಮತ್ತು ಮಸಾಲೆ ಬಳಸುವುದು, ರಸವಿಲ್ಲದ ಆಹಾರ(Ex:Chewing gum) ಸೇವನೆ; ಇತ್ಯಾದಿ ರಾಜಸರ ಆಹಾರ ಕ್ರಮಕ್ಕೆ ಕೆಲವು ಉದಾಹರಣೆಗಳು.[ಒಂದು ವೇಳೆ ಇಲ್ಲಿ ಹೇಳಿದ ಈ ಆಹಾರವನ್ನು ರೋಗ ಪರಿಹಾರಕ್ಕಾಗಿ ವೈದ್ಯರು ಸೂಚಿಸಿದ್ದರೆ ಅದು ರೋಗಿಗೆ ಸಾತ್ವಿಕ ಆಹಾರವೆನಿಸುತ್ತದೆ].


ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।

ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಮ್ ॥೧೦॥


ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ ।

ಉಚ್ಛಿಷ್ಟಮ್ ಅಪಿ ಚ ಅಮೇಧ್ಯಂ ಭೋಜನಂ ತಾಮಸ ಪ್ರಿಯಮ್ – ಇದು ತಾಮಸರಿಗೆ ಮೆಚ್ಚಿನ ತಿನಿಸು: ಅಟ್ಟು ಜಾವ ಕಳೆದದ್ದು, ರುಚಿ ಕಳೆದುಕೊಂಡದ್ದು, ಹಳಸಿದ್ದು, ತಂಗಳಾದದ್ದು, ಎಂಜಲು ಮತ್ತು ಕೊಳಕಾದದ್ದು.

ತಾಮಸರಿಗೆ ಜೀವನದಲ್ಲಿ ಅತಿದೊಡ್ಡ ಸಂಗತಿ ಎಂದರೆ ಭೋಜನ. ಇವರು ಆಹಾರವನ್ನು ದೇವರಿಗೆ ಸಮರ್ಪಿಸದೇ ಸೇವನೆ ಮಾಡುತ್ತಾರೆ. ನೀರಸವಾದ, ಹಳಸಿದ, ವಾಸನೆ ಬರುವ, ರುಚಿಗೆಟ್ಟ ಆಹಾರ ತಾಮಸರಿಗೆ ಇಷ್ಟ. ಇವರು ಎಂಜಲು ಊಟವನ್ನು ಇಷ್ಟಪಡುತ್ತಾರೆ. [ಉದಾಹರಣೆಗೆ ಒಂದೇ ತಟ್ಟೆಯಲ್ಲಿ ಅನೇಕ ಮಂದಿ ಎಂಜಲು ಹಂಚಿಕೊಂಡು ತಿನ್ನುವುದು].

ಹೀಗೆ ಆಹಾರದಿಂದ ಹೇಗೆ ವ್ಯಕ್ತಿಯನ್ನು ಗುರುತಿಸಬಹುದು ಎನ್ನುವ ವಿಧಾನವನ್ನು ವಿವರಿಸಿದ ಕೃಷ್ಣ, ಮುಂದೆ ನಮ್ಮ ಆಚಾರದಿಂದ(ಯಜ್ಞ, ತಪಸ್ಸು, ದಾನ) ವ್ಯಕ್ತಿಯ ಸ್ವಭಾವವನ್ನು ಅರಿಯುವ ವಿಧಾನವನ್ನು ವಿವರಿಸುತ್ತಾನೆ.


ಅಫಲಾಕಾಂಕ್ಷಿ ಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ ।

ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ವಿಕಃ ॥೧೧॥


ಅಫಲ ಆಕಾಂಕ್ಷಿಭಿಃ ಯಜ್ಞಃ ವಿಧಿದೃಷ್ಟೋ ಯಃ ಇಜ್ಯತೇ ।

ಯಷ್ಟವ್ಯಮ್ ಏವ ಇತಿ ಮನಃ ಸಮಾಧಾಯ ಸಃ ಸಾತ್ವಿಕಃ –ಶಾಸ್ತ್ರದ ಕಟ್ಟಳೆಗೆ ಸರಿಯಾಗಿ, ಫಲದ ನಂಟಿಲ್ಲದೆ, ಕರ್ತವ್ಯ ಎನ್ನುವ ಭಾವದಿಂದ ಮನ ಮೆಚ್ಚಿ ಮಾಡುವ ಯಜ್ಞ ಸಾತ್ವಿಕ ಯಜ್ಞ.

ಯಜ್ಞ ಮಾಡುವವರೆಲ್ಲಾ ಸಾತ್ವಿಕರಲ್ಲ. ಯಜ್ಞದಲ್ಲೂ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ಮೂರು ಪ್ರಭೇದವಿದೆ. ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಯಜ್ಞ ಹೇಗಿರುತ್ತದೆ ಎನ್ನುವುದನ್ನು ವಿವರಿಸಿದ್ದಾನೆ. ಯಜ್ಞ ಎಂದರೆ ಕೇವಲ ಅಗ್ನಿಕುಂಡದಲ್ಲಿ ಮಾಡುವ ಪೂಜೆ ಮಾತ್ರ ಅಲ್ಲ. ಪೀಠದಲ್ಲಿ ಭಗವಂತನನ್ನು ಪೂಜಿಸುವುದೂ ಯಜ್ಞ, ಮಾನಸಿಕವಾಗಿ ಭಗವಂತನ ಧ್ಯಾನ ಮಾಡುವುದೂ ಯಜ್ಞ. ಯಾವುದೇ ಫಲ ಕಾಮನೆ ಇಲ್ಲದೆ, ದೇವರು ಪ್ರಸನ್ನನಾಗಲಿ-ಆತನ ದಯಾ ದೃಷ್ಟಿ ನನ್ನ ಮೇಲಿರಲಿ ಎಂದು, ವಿಧಿಪೂರ್ವಕವಾಗಿ ಮಾಡುವ ಪೂಜೆ ಸಾತ್ವಿಕ ಯಜ್ಞವೆನಿಸುತ್ತದೆ. ಯಾಂತ್ರಿಕವಾಗಿ, ಮಂತ್ರದ ಅರ್ಥ ಗೊತ್ತಿಲ್ಲದೆ, ಯಾವುದೋ ಸಂಕುಚಿತ ಫಲಾಪೇಕ್ಷೆಯಿಂದ ಪೂಜೆ ಮಾಡಿದರೆ ಅದು ಸಾತ್ವಿಕ ಯಜ್ಞವಾಗುವುದಿಲ್ಲ.

ಇಲ್ಲಿ ‘ವಿಧಿಪೂರ್ವಕವಾಗಿ’ ಎಂದು ಹೇಳಲಾಗಿದೆ. ಇದು ಬಹಳ ಮುಖ್ಯವಾದ ವಿಚಾರ. ಉದಾಹರಣೆಗೆ ನಾವು ಪೂಜೆ ಮಾಡುವಾಗ ಘಂಟಾನಾದ ಮಾಡುತ್ತೇವೆ; ಶಂಖನಾದ ಮಾಡುತ್ತೇವೆ. ಈ ರೀತಿ ಯಾವುದೇ ಪೂಜಾ ವಿಧಾನವಿದ್ದರೂ ಕೂಡಾ, ಅದನ್ನು ಮಾಡುವ ಮೊದಲು ಏಕೆ ಮಾಡುತ್ತಿದ್ದೇವೆ ಎನ್ನುವ ತಿಳುವಳಿಕೆ ನಮಗೆ ಅಗತ್ಯ. ಘಂಟೆಯನ್ನು ಗಣಗಣ ಎಂದು ಕರ್ಕಶವಾಗಿ ಒಂದೇ ಸಮನೆ ಬಾರಿಸಬಾರದು. ಘಂಟಾನಾದ ಮಾಡುವಾಗ ಅದರಿಂದ ಓಂಕಾರನಾದ ಹೊರ ಹೊಮ್ಮಬೇಕು. ಈ ರೀತಿ ಓಂಕಾರ ನಾದ ಹೊರಹೊಮ್ಮಿದಾಗ- ಆ ನಾದ ಕೇಳಿಸುವ ಪ್ರದೇಶದಲ್ಲಿರುವ ಎಲ್ಲಾ ದುಷ್ಟ ಶಕ್ತಿಗಳೂ ಅಲ್ಲಿಂದ ಓಡಿ ಹೋಗುತ್ತವೆ ಮತ್ತು ಈ ನಾದ ದೇವತಾ ಶಕ್ತಿಗಳನ್ನು ಆಕರ್ಷಿಸುತ್ತದೆ. ಇದರಿಂದ ಪೂಜೆಗೆ ಬೇಕಾದ ಶುಭ್ರ ವಾತಾವರಣ ನಿರ್ಮಾಣವಾಗುತ್ತದೆ. ಇಲ್ಲಿ ಮನಃಪೂರ್ವಕವಾಗಿ ದುಷ್ಟಶಕ್ತಿಗಳು ಹೋಗಲಿ, ದೇವತಾಶಕ್ತಿಗಳು ಬರಲಿ ಎಂದು ಪ್ರಾರ್ಥಿಸಿ, ಘಂಟೆಯಿಂದ ಓಂಕಾರನಾದ ತೆಗೆಯುವುದು ಬಹಳ ಮುಖ್ಯ. ಘಂಟೆಯಿಂದ ಎಂದೂ ಅಪಸ್ವರ ಬರಬಾರದು. ಘಂಟಾನಾದಕ್ಕೆ ಒಂದು ಶ್ರುತಿ ಇದೆ. ಸಪ್ತ ಸ್ವರಗಳಿಗೆ ಸಪ್ತ ಸ್ವರದ ಘಂಟೆಗಳಿವೆ. ಅದನ್ನು ಶ್ರುತಿಬದ್ಧವಾಗಿ ಬಾರಿಸಬೇಕು. ಇದು ಓಂಕಾರದಿಂದ ವಾತಾವರಣ ಶುದ್ಧಿ ಮಾಡುವ ಅದ್ಭುತ ಪ್ರಕ್ರಿಯೆ. ಇದು ಕೇವಲ ಒಂದು ಉದಾಹರಣೆಯಷ್ಟೆ. ಹೀಗೆ ನಾವು ನಮ್ಮ ಪ್ರತಿಯೊಂದು ಕ್ರಿಯೆಯನ್ನು ತಿಳಿದು ಮನಃಪೂರ್ವಕವಾಗಿ ಮಾಡಬೇಕು; ಮಾಡುವ ಕ್ರಿಯೆಯಲ್ಲಿ ನಮಗೆ ಖುಷಿ ಇರಬೇಕು. ಹೀಗೆ ಮಾಡಿದಾಗ ಮಾತ್ರ ಅದು ಸಾತ್ವಿಕ ಯಜ್ಞ ಎನಿಸುತ್ತದೆ.


ಅಭಿಸಂಧಾಯ ತು ಫಲಂ ಡಂಭಾರ್ಥಮಪಿ ಚೈವ ಯತ್।

ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಮ್ ॥೧೨॥


ಅಭಿಸಂಧಾಯ ತು ಫಲಮ್ ಡಂಭ ಅರ್ಥಮ್ ಅಪಿ ಚ ಏವ ಯತ್ ।

ಇಜ್ಯತೇ ಭರತಶ್ರೇಷ್ಠ ತಮ್ ಯಜ್ಞಂ ವಿದ್ಧಿ ರಾಜಸಮ್ –ಓ ಭರತಶ್ರೇಷ್ಠಾ, ಫಲದ ಬಯಕೆಯಿಂದ ಅಥವಾ ಬೂಟಾಟಿಕೆಗಾಗಿ ಮಾಡುವ ಯಜ್ಞ ರಾಜಸವೆಂದು ತಿಳಿ.

ಸ್ವಾರ್ಥದಿಂದ ಒಂದು ವಿಶೇಷ ಫಲವನ್ನು ಬಯಸಿ, ಡಂಭಾಚಾರದಿಂದ ಮಾಡುವ ಯಜ್ಞ ರಾಜಸ ಯಜ್ಞ ಎನಿಸುತ್ತದೆ. ಯಾವುದೇ ಯಜ್ಞ ಭಗವಂತನನ್ನು ಸೇರಬೇಕಾದರೆ ಅದನ್ನು ನಾವು ಭಕ್ತಿಯಿಂದ ಮಾಡಬೇಕು. ಭಗವಂತನಲ್ಲಿ ರತರಾದವರಲ್ಲಿ ನಾವು ಶ್ರೇಷ್ಠರಾಗಿ(ಭರತಶ್ರೇಷ್ಠ) ಕ್ರಿಯೆ ಮಾಡಬೇಕು. ಇದಿಲ್ಲದೇ ಪ್ರಚಾರಕ್ಕಾಗಿ ಮಾಡುವ ಯಜ್ಞ ರಾಜಸ ಯಜ್ಞವಾಗುತ್ತದೆ. 


ವಿಧಿಹೀನಮಸೃಷ್ಟಾನ್ನಂ ಮಂತ್ರ ಹೀನಮದಕ್ಷಿಣಮ್।

ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ ॥೧೩॥


ವಿಧಿಹೀನಮ್ ಅಸೃಷ್ಟ ಅನ್ನಮ್ ಮಂತ್ರ ಹೀನಮ್ ಅದಕ್ಷಿಣಮ್।

ಶ್ರದ್ಧಾ ವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ –ಶಾಸ್ತ್ರಕ್ಕೆ ಅನುಗುಣವಾಗಿಲ್ಲ; ಅನ್ನದಾನವಿಲ್ಲ; ಮಂತ್ರವಿಲ್ಲ; ದಕ್ಷಿಣೆಯಿಲ್ಲ; ಮಾಡುವ ಕ್ರಿಯೆಯಲ್ಲಿ ನಂಬಿಕೆಯೂ ಇಲ್ಲ. ಇಂತಹ ಯಜ್ಞವನ್ನು ತಾಮಸ ಎನ್ನುತ್ತಾರೆ.

ಮಂತ್ರ ಸರಿಯಾಗಿ ಹೇಳದೇ ಇರುವುದು, ಮಂತ್ರವನ್ನು ಕ್ರಮ ತಪ್ಪಿ ಹೇಳುವುದು, ಪದ ಉಚ್ಛಾರ ಸರಿಯಾಗಿಲ್ಲದೇ ಇರುವುದು-ಇವೆಲ್ಲವೂ ವಿಧಿಹೀನ. ಈ ರೀತಿ ಮಾಡುವ ಯಜ್ಞ ತಾಮಸ ಯಜ್ಞ. ಯಾವುದೇ ಯಜ್ಞದಲ್ಲಿ ಹೇಗೆ ಪ್ರತಿಮೆಯ ಮೂಲಕ ಮತ್ತು ಅಗ್ನಿಯ ಮೂಲಕ ಆರಾಧನೆ ನಡೆಯುತ್ತದೆಯೋ, ಅದೇ ರೀತಿ ಚರಮೂರ್ತಿಗಳ ಆರಾಧನೆ ಬಹಳ ಮುಖ್ಯ. ಅನ್ನದಾನ ಮಾಡುವ ಮೂಲಕ ಪ್ರತಿಯೊಬ್ಬರೊಳಗೂ ಇರುವ ಭಗವಂತನ ಆರಾಧನೆ ಈ ಚರಮೂರ್ತಿ ಆರಾಧನೆ. ಹೀಗೆ ಅನ್ನದಾನವಿಲ್ಲದೆ, ದಕ್ಷಿಣೆ(ವೈದಿಕರಿಗೆ ಅವರ ಜೀವನ ನಿರ್ವಾಹಣೆಗಾಗಿ ನಾವು ಸಲ್ಲಿಸುವ ಸೇವೆ) ಇಲ್ಲದೆ ಮಾಡುವ ಯಜ್ಞ ತಾಮಸ ಯಜ್ಞ. ಇವೆಲ್ಲವುದಕ್ಕಿಂತ ಮುಖ್ಯವಾದುದು ಶ್ರದ್ಧೆ. ಭಗವಂತನ ಮೇಲೆ ಅಚಲವಾದ ಶ್ರೇಷ್ಠ ಶ್ರದ್ಧೆ ಇಲ್ಲದೇ ಮಾಡುವ ಯಾವುದೇ ಯಜ್ಞವಿರಲಿ-ಅದು ಸರ್ವತ್ರ ತಾಮಸ ಯಜ್ಞವಾಗುತ್ತದೆ.

ಆಹಾರ ಮತ್ತು ಯಜ್ಞದ ನಂತರ ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಮೂರು ವಿಧದ ತಪಸ್ಸಿನ ಬಗ್ಗೆ ವಿವರಿಸುತ್ತಾನೆ. ಮೂಲಭೂತವಾಗಿ ತಪಸ್ಸಿನಲ್ಲಿ ಮೂರು ವಿಧ. ನಮ್ಮ ನಡೆಯಲ್ಲಿ ಶಿಸ್ತುಬದ್ಧತೆಯನ್ನು ತರುವುದು-ತಪಸ್ಸು; ಆಳವಾದ ಚಿಂತನೆ-ತಪಸ್ಸು; ಮನಃಶುದ್ಧಿಗಾಗಿ ಮಾಡುವ ದೇಹದಂಡನೆಯೂ-ತಪಸ್ಸು. ತಪಸ್ಸು ಮಾಡಲು ಕಾಡಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಇದ್ದು ತಪಸ್ಸು ಮಾಡಬಹುದು. ಸಾತ್ವಿಕ, ರಾಜಸ ಮತ್ತು ತಾಮಸ ತಪಸ್ಸನ್ನು ವಿವರಿಸುವ ಮೊದಲು ಇಲ್ಲಿ ಕೃಷ್ಣ ಶರೀರ, ಮಾತು ಮತ್ತು ಮನ ಎನ್ನುವ ಮೂಲಭೂತವಾದ ಮೂರು ತಪಸ್ಸಿನ ವಿವರಣೆಯನ್ನು ಮುಂದಿನ ಮೂರು ಶ್ಲೋಕಗಳಲ್ಲಿ ಕೊಡುತ್ತಾನೆ.


ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್ ।

ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ ॥೧೪॥


ದೇವ ದ್ವಿಜ ಗುರು ಪ್ರಾಜ್ಞ ಪೂಜನಂ ಶೌಚಮ್ ಆರ್ಜವಮ್ ।

ಬ್ರಹ್ಮಚರ್ಯಮ್ ಅಹಿಂಸಾ ಚ ಶಾರೀರಂ ತಪಃ ಉಚ್ಯತೇ –ದೇವತೆಗಳನ್ನು, ಅರಿವಿನಿಂದ ಮರುಹುಟ್ಟು ಪಡೆದವರನ್ನು, ಗುರುಗಳನ್ನು ಮತ್ತು ತುಂಬಾ ತಿಳಿದವರನ್ನು ಗೌರವಿಸುವುದು, ನೈರ್ಮಲ್ಯ, ನೇರ ನಡೆ, ಬ್ರಹ್ಮಚರ್ಯ ಮತ್ತು ಇನ್ನೊಬ್ಬರಿಗೆ ಕಾಟ ನೀಡದಿರುವುದು ಶರೀರದ ತಪಸ್ಸು ಎನಿಸುತ್ತದೆ.

ದೇವರ ಪ್ರತೀಕ ಎಲ್ಲಿ ಕಂಡಿತೋ ಅಲ್ಲಿ ತಲೆಬಾಗುವುದು; ಜ್ಞಾನಿಗಳಿಗೆ ಗೌರವ ಕೊಡುವುದು; ಗುರುವಿಗೆ ತಲೆಬಾಗುವುದು; ಭಗವದ್ಭೂತಿಯಿಂದ ಭಗವಂತನನ್ನು ಅನುಭವಿಸಿದ ಅನುಭಾವಿಗಳಾದ ಪ್ರಾಜ್ಞರನ್ನು ಗೌರವಿಸುವುದು- ಇವೆಲ್ಲವೂ ಶರೀರ ತಪಸ್ಸು ಎನಿಸುತ್ತದೆ. ಇದರ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಂಡು ಬದುಕುವುದು, ನೇರ ನಡೆ-ನುಡಿ, ಬ್ರಹ್ಮಚರ್ಯ ಪಾಲನೆ ಹಾಗೂ ಇನ್ನೊಬ್ಬರಿಗೆ ನಮ್ಮಿಂದ ತೊಂದರೆಯಾಗದಂತೆ ಬದುಕುವುದು ಶರೀರದ ತಪಸ್ಸು. [ಈ ಶ್ಲೋಕದಲ್ಲಿ ಹೇಳಿರುವ ಶೌಚಮ್, ಆರ್ಜವಮ್ ಮತ್ತು ಅಹಿಂಸಾ-ಈ ಗುಣಗಳ ಪೂರ್ಣ ವಿವರಣೆಯನ್ನು ಹದಿನಾರನೇ ಅಧ್ಯಾಯದ ಪ್ರಾರಂಭಿಕ ಶ್ಲೋಕದಲ್ಲಿ ವಿವರಿಸಲಾಗಿದೆ]. ಇಲ್ಲಿ ‘ಬ್ರಹ್ಮಚರ್ಯ ಪಾಲನೆ’ ಅಂದರೆ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸುವುದು; ಅದಕ್ಕೆ ಪೂರಕವಾಗಿ ವೇದಾಧ್ಯಯನ ಮಾಡುವುದು ಹಾಗೂ ಅಧ್ಯಯನಕ್ಕೆ ಪೂರಕವಾಗಿ ದೈಹಿಕ ಬ್ರಹ್ಮಚರ್ಯ ಪಾಲನೆ. ದೈಹಿಕವಾಗಿ ಪೂರ್ಣ ಬ್ರಹ್ಮಚರ್ಯ ಕೇವಲ ಸನ್ಯಾಸಿಗಳಿಗೆ ಮತ್ತು ಬ್ರಹ್ಮಚಾರಿಗಳಿಗೆ ಅನ್ವಯಿಸುತ್ತದೆ. ಗ್ರಹಸ್ಥರಾದವರು ಈ ರೀತಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಗ್ರಹಸ್ಥರಲ್ಲಿ ಬ್ರಹ್ಮಚರ್ಯ ಪಾಲನೆ ಎಂದರೆ- ಅವರು ಸ್ವಚ್ಛಂದ ಕಾಮಿಗಳಾಗದೇ, ಗ್ರಹಸ್ಥಧರ್ಮ ಪಾಲನೆಯ ಆವರಣದಲ್ಲಿ ಬದುಕುವುದು ಎಂದರ್ಥ. ಹೀಗೆ ಭಗವಂತನಲ್ಲಿ ಶರಣಾಗತಿ; ಜ್ಞಾನಿಗಳಿಗೆ, ಗುರುಗಳಿಗೆ, ಪ್ರಾಜ್ಞರಿಗೆ ಗೌರವ ಕೊಡುವುದು, ಶುಚಿತ್ವವನ್ನು ಕಾಪಾಡಿಕೊಳ್ಳುವುದು, ನೇರ ನಡೆ ನುಡಿ, ಬ್ರಹ್ಮಚರ್ಯ ಪಾಲನೆ ಮತ್ತು ಅಹಿಂಸೆಯಿಂದ ಬದುಕುವುದು-ಶಾರೀರಿಕ ತಪಸ್ಸು . ನಾವು ಸಾಮಾಜಿಕವಾಗಿ ಸಭ್ಯರಾಗಿ ಬದುಕಲು ಈ ತಪಸ್ಸು ಬೇಕೇಬೇಕು. ಮನುಷ್ಯನಾದವನು ಅನುಸರಿಸಬೇಕಾದ ದೈಹಿಕ ನೀತಿಗಳಿವು

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ ।

ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ॥೧೫॥


ಅನುದ್ವೇಗ ಕರಂ ವಾಕ್ಯಂ ಸತ್ಯಂ ಪ್ರಿಯ ಹಿತಂ ಚ ಯತ್ ।

ಸ್ವಾಧ್ಯಾಯ ಅಭ್ಯಸನಂ ಚ ಏವ ವಾಙ್ಮಯಂ ತಪಃ ಉಚ್ಯತೇ—ಕೆರಳಿಸದ, ದಿಟವಾದ, ಕೇಳುವುದಕ್ಕೆ ಮೆಚ್ಚಾದ ಹಾಗೂ ಬಾಳಿಗೆ ಒಳಿತಾದ ಮಾತು ಮತ್ತು ಶಾಸ್ತ್ರಗಳ ಓದು ಮಾತಿನ ತಪಸ್ಸು ಎನಿಸುತ್ತದೆ.

ಹಿಂದಿನ ಅಧ್ಯಾಯದಲ್ಲಿ ವಿಶ್ಲೇಶಿಸಿದಂತೆ ಇದ್ದದ್ದನ್ನು ಇದ್ದಂತೆ ಹೇಳುವುದೇ ಸತ್ಯವಲ್ಲ. ಸತ್ಯ ಅಂದರೆ ಏನು ಎನ್ನುವ ವಿವರಣೆಯನ್ನು ಕೃಷ್ಣ ಈ ಶ್ಲೋಕದ ಮೂಲಕ ನಮಗೆ ಕೊಟ್ಟಿದ್ದಾನೆ. ಎಲ್ಲಿ ನಿಜವಾದ ಸಜ್ಜನಿಕೆ ಇದೇ-ಅದನ್ನು ಮೆಚ್ಚಿಕೊಂಡು, ಅದಕ್ಕೆ ಪೂರಕವಾಗಿ, ಇನ್ನೊಬ್ಬರನ್ನು ನೋಯಿಸದೆ, ಅವರಿಗೆ ಹಿತವಾಗುವ ರೀತಿ ಮಾತನಾಡುವುದು ಮಾತಿನ ತಪಸ್ಸು. ಇನ್ನೊಬ್ಬರಿಗೆ ಪ್ರಿಯವೂ-ಹಿತವೂ ಆದ ಮಾತನ್ನು ಆಡುವುದು ಬಹಳ ಕಷ್ಟ. ಏಕೆಂದರೆ ಹೆಚ್ಚಿನ ಸಂದರ್ಭದಲ್ಲಿ ಪ್ರಿಯವಾದದ್ದು ಹಿತವಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಮೌನ ಲೇಸು. ಕೃಷ್ಣನ ಕಥೆಯನ್ನು ಓದುವಾಗ ಅನೇಕ ಕಡೆ ನಮಗೆ ಕೃಷ್ಣ ಸುಳ್ಳು ಹೇಳಿದಂತೆ, ಮೋಸ ಮಾಡಿದಂತೆ ಕಾಣಿಸುತ್ತದೆ. ಆದರೆ ಆ ಕ್ರಿಯೆಯ ಹಿಂದೆ ಇರುವ ಕಾರುಣ್ಯ, ಹಿತಚಿಂತನೆಯನ್ನು ಗಮನಿಸಿದಾಗ ನಮಗೆ ಅದು ಸುಳ್ಳಲ್ಲ ಎನ್ನುವುದು ತಿಳಿಯುತ್ತದೆ. ದೈನಂದಿನ ಜೀವನದಲ್ಲಿ ನಾವು ಮಾತನಾಡುವಾಗ ನಮಗೆ ಕೃಷ್ಣ ಈ ಶ್ಲೋಕದಲ್ಲಿ ಹೇಳಿದ ಸಂದೇಶದ ಎಚ್ಚರವಿರಬೇಕು. ಮಾತನಾಡದೆ ಮೌನವಾಗಿದ್ದರೂ ಸರಿ-ಆದರೆ ಏನೋ ಮಾತನಾಡಿ ಆನಂತರ ಪಶ್ಚಾತ್ತಾಪಪಟ್ಟರೆ ಉಪಯೋಗವಿಲ್ಲ. “ಆಡಿದ ಮಾತನ್ನು ಹಿಂದೆ ಪಡೆಯಲು ಸಾಧ್ಯವಿಲ್ಲ; ಘಾಸಿಯಾದ ಮನಸ್ಸನ್ನು ವಾಸಿಮಾಡುವ ಮದ್ದು ನಮ್ಮಲ್ಲಿಲ್ಲ”. ಆದ್ದರಿಂದ ಇನ್ನೊಬ್ಬರನ್ನು ನೋಯಿಸುವ ಮಾತನ್ನೆಂದೂ ಆಡಬೇಡ. ಹಾಳು ಹರಟೆಯಲ್ಲಿ ದಿನ ಕಳೆಯದೆ, ವೇದದ ಅರ್ಥಚಿಂತನೆ, ಗೀತಾಚಿಂತನೆ, ವಿಷ್ಣುಸಹಸ್ರನಾಮ ಪಠಣ, ಇತ್ಯಾದಿ ಸ್ವಾಧ್ಯಾಯದಲ್ಲಿ ನಿರತನಾಗುವುದು ಮಾತಿನ ತಪಸ್ಸು.


ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ ।

ಭಾವಸಂಶುದ್ಧಿರಿತ್ಯೇತತ್ ತಪೋ ಮಾನಸಮುಚ್ಯತೇ ॥೧೬॥


ಮನಃ ಪ್ರಸಾದಃ ಸೌಮ್ಯತ್ವಂ ಮೌನಮ್ ಆತ್ಮವಿನಿಗ್ರಹಃ ।

ಭಾವಸಂಶುದ್ಧಿಃ ಇತಿ ಏತತ್ ತಪಃ ಮಾನಸಮ್ ಉಚ್ಯತೇ -- ಬಗೆಯ ತಿಳಿ, ಮಿದುತನ, ಮನನ, ತನ್ನ ಮೇಲೆ ಹಿಡಿತ ಮತ್ತು ಒಳ್ಳೆಯದನ್ನೇ ಬಗೆಯುವುದು-ಇದು ಮನದ ತಪಸ್ಸು ಎನಿಸುತ್ತದೆ.

ಮೇಲೆ ಹೇಳಿದ ಎರಡು ವಿಧದ ತಪಸ್ಸಿಗೆ ಮಿಗಿಲಾಗಿರುವ ಮಹಾ ತಪಸ್ಸು ಎಂದರೆ ಮನದ ತಪಸ್ಸು. ಶರೀರ ಮತ್ತು ಮಾತಿನ ತಪಸ್ಸು ಮನದ ತಪಸ್ಸಿಗೆ ಪೂರಕ. ನಮ್ಮ ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಅದರಲ್ಲಿ ಕೆಟ್ಟ ವಿಚಾರ ತುಂಬಿ ಕಲುಷಿತವಾಗಿರಬಾರದು. ಅದು ಸೌಮ್ಯವಾಗಿರಬೇಕು, ಅಲ್ಲಿ ಕ್ರೌರ್ಯವಿರಬಾರದು. ಯಾವುದೇ ಒಂದು ವಿಷಯದ ಮೇಲೆ ತೀರ್ಮಾನಕ್ಕೆ ಬರುವ ಮೊದಲು ಆಳವಾದ ಚಿಂತನೆ ಮಾಡಬೇಕು. ಒಂದು ವಿಷಯದ ಮೇಲೆ, ಒಬ್ಬ ವ್ಯಕ್ತಿಯ ಮೇಲೆ ದುಡುಕಿ ಪ್ರತಿಕ್ರಿಯಿಸಬಾರದು. ಮನನ ಮಾಡು, ಮನನ ಮಾಡಿ ಮಾತನಾಡು. ಈ ರೀತಿ ಮನನ ಮಾಡಬೇಕಾದರೆ ನಾವು ಆತ್ಮವಿನಿಗ್ರಹವನ್ನು ಸಾಧಿಸಬೇಕು( ಹೆಚ್ಚಿನ ವಿವರಕ್ಕಾಗಿ ಅ-೧೩, ಶ್ಲೋ-೭-ನೋಡಿ). ಸ್ವಚ್ಛವಾದ ಕ್ರೌರ್ಯವಿಲ್ಲದ ಮನಸ್ಸಿಗೆ ಇಂದ್ರಿಯಗಳ ಹಿಡಿತವಿರುತ್ತದೆ. ಅಂತಹ ಮನಸ್ಸಿಗೆ ಕೆಟ್ಟ ಭಾವನೆ ಹೊಳೆಯುವುದಿಲ್ಲ. ಒಬ್ಬರು ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೂ ಕೂಡಾ ನಮಗೆ ಅವರ ಮೇಲೆ ದ್ವೇಷ, ಕೋಪ ಬರುವುದಿಲ್ಲ. ಈ ರೀತಿ ಮನಸ್ಸಿನ ನಿಯಂತ್ರಣ ಮಾಡುವುದೇ ಮನಸ್ಸಿನ ತಪಸ್ಸು.

 ಇಲ್ಲಿ ಹೇಳಿದ ಮೂರು ವಿಧದ ತಪಸ್ಸಿನಲ್ಲಿ ಮತ್ತೆ ಪ್ರತಿಯೊಂದರಲ್ಲೂ ಮೂರು ವಿಧ. ಸಾತ್ವಿಕ, ರಾಜಸ ಮತ್ತು ತಾಮಸ. ಇದರ ವಿವರಣೆ ಮುಂದಿನ ಮೂರು ಶ್ಲೋಕದಲ್ಲಿದೆ.


ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ ತ್ರಿವಿಧಂ ನರೈಃ ।

ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ವಿಕಂ ಪರಿಚಕ್ಷತೇ ॥೧೭॥


ಶ್ರದ್ಧಯಾ ಪರಯಾ ತಪ್ತಂ ತಪಃ ತತ್ ತ್ರಿವಿಧಂ ನರೈಃ ।

ಅಫಲ ಆಕಾಂಕ್ಷಿಭಿಃ ಯುಕ್ತೈಃ ಸಾತ್ವಿಕಂ ಪರಿಚಕ್ಷತೇ –ಈ ಮೂರೂ ಬಗೆಯ ತಪಸ್ಸನ್ನು ತುಂಬು ನಂಬಿಕೆಯಿಂದ, ಫಲದ ಬಯಕೆಯಿಲ್ಲದೆ, ಭಗವದರ್ಪಣಭಾವದಿಂದ ಆಚರಿಸಿದಾಗ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ.

ತಪಸ್ಸಿನ ಹಿಂದೆ ಶ್ರೇಷ್ಠವಾದ ಶ್ರದ್ಧೆ-ಪ್ರಾಮಾಣಿಕತೆ ಇದ್ದರೆ ಅದು ಸಾತ್ವಿಕ ತಪಸ್ಸಾಗುತ್ತದೆ. ಭಗವಂತನ ಪಾರಮ್ಯದ ಎಚ್ಚರದಿಂದ, ಭಗವಂತ ಪ್ರೀತನಾಗಲಿ ಎನ್ನುವ ಅನುಸಂಧಾನದಿಂದ ಮಾಡುವ ಪ್ರತಿಯೊಂದು ಕ್ರಿಯೆ-ಸಾತ್ವಿಕ ಕ್ರಿಯೆ ಎನಿಸುತ್ತದೆ. ಉದಾಹರಣೆಗೆ ಗುರುವಿಗೆ ನಮಸ್ಕರಿಸುವಾಗ ಆ ಗುರುವಿನ ಅಂತರ್ಗತನಾಗಿರುವ ಭಗವಂತನಿಗೆ ನಮಸ್ಕರಿಸುತ್ತಿದ್ದೇನೆ ಎನ್ನುವ ಅನುಸಂಧಾನ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯ ಹಿಂದೆ ಭಗವದರ್ಪಣ ಬುದ್ಧಿ ಇರಬೇಕು. ಮಂತ್ರಗಳು ಹೇಳುವುದೂ ಇದನ್ನೇ . “ಅನೇನ ಭಗವಾನ್ ಗೋಪಾಲಕೃಷ್ಣ ಪ್ರಿಯತಃ-ಶ್ರೀ ಕೃಷ್ಣಾರ್ಪಣ ಮಸ್ತು” ಎಂದು ಹೇಳುವಾಗ ನಮ್ಮಲ್ಲಿ ಕೂಡಾ ಪೂರ್ಣ ಅರ್ಪಣಾ ಭಾವ ತುಂಬಿರಬೇಕು. ಇಂತಹ ತಪಸ್ಸು ಸಾತ್ವಿಕ ತಪಸ್ಸೆನಿಸುತ್ತದೆ.

 

ಸತ್ ಕಾರಮಾನಪೂಜಾರ್ಥಂ ತಪೋ ಡಂಭೇನ ಚೈವ ಯತ್ ।

ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಮ್ ॥೧೮॥


ಸತ್ ಕಾರ ಮಾನ ಪೂಜಾ ಅರ್ಥಂ ತಪಃ ಡಂಭೇನ ಚ ಏವ ಯತ್ ।

ಕ್ರಿಯತೇ ತತ್ ಇಹ ಪ್ರೋಕ್ತಮ್ ರಾಜಸಂ ಚಲಮ್ ಅಧ್ರುವಮ್ – ಮನ್ನಣೆ, ಹೊಗಳಿಕೆ ಮತ್ತು ಗೌರವಗಳಿಗಾಗಿ ಬೂಟಾಟಿಕೆಯಿಂದ ಆಚರಿಸುವ, ನೆಲೆ ಇಲ್ಲದ, ಬಾಳಿಕೆಯಿಲ್ಲದ ತಪಸ್ಸು ರಾಜಸ ಎನ್ನಿಸುತ್ತದೆ.

ಭಗವಂತನ ಅನುಸಂಧಾನವಿಲ್ಲದೆ, ತನಗೆ ಜನ ಸತ್ಕಾರ ಮಾಡಲಿ ಎಂದು ಸನ್ಮಾನದ ಆಸೆಯಿಂದ ಮಾಡುವ ಎಲ್ಲಾ ತಪಸ್ಸು ರಾಜಸ ತಪಸ್ಸು. ಈ ರೀತಿ ಡಂಭಾಚಾರದಿಂದ ಮಾಡುವ ತಪಸ್ಸು ಪರಲೋಕಕ್ಕೆ ಸಲ್ಲುವುದಿಲ್ಲ. ಚಪಲದಿಂದ ಮಾಡಿದ ಇಂತಹ ಕಾರ್ಯದ ಫಲ ಇಹದಲ್ಲೂ ಶಾಶ್ವತವಲ್ಲ.

 ಈ ಶ್ಲೋಕದಲ್ಲಿ ಏವ ಮತ್ತು ಚ-ಕಾರ ಒಟ್ಟಿಗೆ ಬಂದಿದೆ. ಇದು ನಮಗೆ ವಿಶೇಷ ಸಂದೇಶವನ್ನು ಕೊಡುತ್ತದೆ. ಸತ್ಕಾರಕ್ಕಾಗಿಯೂ, ಮಾನಕ್ಕಾಗಿಯೂ, ಡಂಭಕ್ಕಾಗಿಯೂ ಮಾಡುವ ಕ್ರಿಯೆ ರಾಜಸ ಎನಿಸಿದರೆ ; ಭಗವದರ್ಪಣ ಬುದ್ಧಿಯಿಂದ ಮಾಡಿ ಬಯಸದೇ ಸತ್ಕಾರ ಬಂದರೆ, ನಾಲ್ಕು ಜನರಿಗೆ ತಿಳುವಳಿಕೆ ಬರಲಿ ಎಂದು ಜ್ಞಾನ ದಾನದ ಭಾವನೆಯಿಂದ ಪ್ರಚಾರ ಮಾಡಿದರೆ-ಅದು ರಾಜಸವಾಗುವುದಿಲ್ಲ. ಇದನ್ನು ತಿಳಿಸುವುದಕ್ಕೋಸ್ಕರ ಇಲ್ಲಿ ಚ ಮತ್ತು ಎವಕಾರ ಬಳಸಲಾಗಿದೆ.


ಮೂಢಗ್ರಾಹೇಣಾSತ್ಮನೋ ಯತ್ ಪೀಡಯಾ ಕ್ರಿಯತೇ ತಪಃ ।

ಪರಸ್ಯೋತ್ಸಾದನಾರ್ಥಂ ವಾ ತತ್ ತಾಮಸಮುದಾಹೃತಮ್ ॥೧೯॥


ಮೂಢ ಗ್ರಾಹೇಣ ಆತ್ಮನಃ ಯತ್ ಪೀಡಯಾ ಕ್ರಿಯತೇ ತಪಃ ।

ಪರಸ್ಯ ಉತ್ಸಾದನ ಅರ್ಥಂ ವಾ ತತ್ ತಾಮಸಮ್ ಉದಾಹೃತಮ್ –ದುರಾಗ್ರಹದಿಂದ ತನ್ನ ದೇಹವನ್ನೇ ದಂಡಿಸುವ ಮೂಲಕ, ಅಥವಾ ಆಗದವರನ್ನು ಮುಗಿಸುವುದಕ್ಕಾಗಿ ಮಾಡುವ ತಪಸ್ಸು ತಾಮಸ ತಪಸ್ಸು ಎನ್ನಿಸುತ್ತದೆ.

ತಪ್ಪು ತಿಳುವಳಿಕೆಯಿಂದ, ಭ್ರಮೆಯಿಂದ, ಪರಮಾತ್ಮನ ಅನುಸಂಧಾನವಿಲ್ಲದೆ, ಇನ್ನೊಬ್ಬರು ಹಾಳಾಗಬೇಕು ಎನ್ನುವ ಕೆಟ್ಟ ಭಾವನೆಯಿಂದ, ತನ್ನ ದೇಹದೊಳಗಿರುವ ಭಗವಂತನ ಎಚ್ಚರವಿಲ್ಲದೆ, ದೇಹ ದಂಡನೆ ಮಾಡಿಕೊಂಡು ಮಾಡುವ ತಪಸ್ಸು ತಾಮಸ ತಪಸ್ಸು.


ದಾತವ್ಯಮಿತಿ ಯದ್ ದಾನಂ ದೀಯತೇSನುಪಕಾರಿಣೇ ।

ದೇಶೇ ಕಾಲೇ ಚ ಪಾತ್ರೇ ಚ ತದ್ ದಾನಂ ಸಾತ್ವಿಕಂ ಸ್ಮೃತಮ್॥೨೦॥


ದಾತವ್ಯಮ್ ಇತಿ ಯತ್ ದಾನಮ್ ದೀಯತೇ ಅನುಪಕಾರಿಣೇ ।

ದೇಶೇ ಕಾಲೇ ಚ ಪಾತ್ರೇ ಚ ತತ್ ದಾನಮ್ ಸಾತ್ವಿಕಂ ಸ್ಮೃತಮ್ –ಪ್ರತ್ಯುಪಕಾರಕ್ಕಾಗಿ ಅಲ್ಲದೆ ಕರ್ತವ್ಯ ದೃಷ್ಟಿಯಿಂದ ಕೊಡುವ ದಾನ, ತಕ್ಕ ದೇಶ-ಕಾಲಗಳಲ್ಲಿ ತಕ್ಕ ವ್ಯಕ್ತಿಗೆ ಕೊಡುವ ದಾನ ಸಾತ್ವಿಕ ಎನಿಸುತ್ತದೆ.

ಯಾವುದೇ ಪ್ರತ್ಯುಪಕಾರದ ನಿರೀಕ್ಷೆ ಇಲ್ಲದೆ, ಆತ್ಮ ಸಂತೋಷದಿಂದ, ಮನಃಪೂರ್ವಕವಾಗಿ, ಪ್ರೀತಿಯಿಂದ, ಯೋಗ್ಯವಾದ ವ್ಯಕ್ತಿಗೆ, ಯೋಗ್ಯವಾದ ಕಾಲದಲ್ಲಿ, ಯೋಗ್ಯವಾದ ಸ್ಥಳದಲ್ಲಿ ಕೊಡುವುದು; ನನ್ನ ಕರ್ತವ್ಯ ಅನ್ನುವ ದೃಷ್ಟಿಯಿಂದ ಕೊಡುವ ದಾನ ಸಾತ್ವಿಕ ದಾನ.[ಹೆಚ್ಚಿನ ವಿವರಣೆ : ಅಧ್ಯಾಯ ಹದಿನಾರು ಆರಂಭಿಕ ಶ್ಲೋಕ].


ಯತ್ ತು ಪ್ರತ್ತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ ।

ದೀಯತೇ ಚ ಪರಿಕ್ಲಿಷ್ಟಂ ತದ್ ರಾಜಸಮುದಾಹೃತಮ್ ॥೨೧॥


ಯತ್ ತು ಪ್ರತ್ತ್ಯುಪಕಾರಾರ್ಥಂ ಫಲಮ್ ಉದ್ದಿಶ್ಯ ವಾ ಪುನಃ ।

ದೀಯತೇ ಚ ಪರಿಕ್ಲಿಷ್ಟಂ ತತ್ ರಾಜಸಮ್ ಉದಾಹೃತಮ್ –ಪ್ರತ್ಯುಪಕಾರಕ್ಕಾಗಿ ಅಥವಾ ಫಲದ ಆಸೆಯಿಂದ, ಕೊಡಬೇಕಲ್ಲಾ ಎಂದು ಕೊಡುವ ದಾನ ರಾಜಸ ಎನಿಸುತ್ತದೆ.

ಇನ್ನೊಬ್ಬರು ನಮಗೆ ಮುಂದೆ ಉಪಕಾರ ಮಾಡಲಿ ಎಂದು ಅಥವಾ ಹಿಂದೆ ಮಾಡಿದ ಉಪಕಾರಕ್ಕೆ ಪ್ರತಿಯಾಗಿ, ಕೊಡಬೇಕಲ್ಲಾ ಎಂದು ಕೊಡುವುದು. ಕೊಡುವಾಗ ಫಲದ ಬಯಕೆಯಿಂದ ಕೊಡುವುದು ರಾಜಸ ದಾನ.


ಅದೇಶಕಾಲೇ ಯದ್ ದಾನಮಪಾತ್ರೇಭ್ಯಶ್ಚ ದೀಯತೇ ।

ಅಸತ್ ಕೃತಮವಜ್ಞಾತಂ ತತ್ ತಾಮಸಮುದಾಹೃತಮ್ ॥೨೨॥


ಅದೇಶ ಕಾಲೇ ಯತ್ ದಾನಮ್ ಅಪಾತ್ರೇಭ್ಯಃ ಚ ದೀಯತೇ ।

ಅಸತ್ ಕೃತಮ್ ಅವಜ್ಞಾತಮ್ ತತ್ ತಾಮಸಮ್ ಉದಾಹೃತಮ್ – ತಕ್ಕುದಲ್ಲದ ದೇಶ-ಕಾಲದಲ್ಲಿ, ಅನರ್ಹವ್ಯಕ್ತಿಗಳಿಗೆ ಆದರಿಸದೇ ಹೀಗಳೆದು ನೀಡುವ ದಾನ ತಾಮಸ ಎನಿಸುತ್ತದೆ.

ನಮಗೆ ಬೇಡವಾದದ್ದನ್ನು ಇನ್ನೊಬ್ಬರಿಗೆ ಸಾಗಹಾಕುವುದಕ್ಕೋಸ್ಕರ ಕೊಡುವುದು; ಯೋಗ್ಯರಲ್ಲದವರಿಗೆ ಬೈದು, ಹೀಯಾಳಿಸಿ, ಅವಮಾನ ಮಾಡಿ ಕೊಡುವುದು-ತಾಮಸ ದಾನ.

ಈವರೆಗೆ ಕೃಷ್ಣ ಹೇಳಿದ ಸಾತ್ವಿಕ ಕರ್ಮದ ಮಹತ್ವವನ್ನು ಹೇಳುವ ‘ಅರ್ಥವಾದ’ ಈ ಅಧ್ಯಾಯದ ಮುಂದಿನ ಭಾಗ. ‘ಅರ್ಥವಾದ’ ಎಂದರೆ ಸಾತ್ವಿಕ ಕರ್ಮದ ಮಹತ್ವಿಕೆಯನ್ನು ಹೇಳುವ ನಿರೂಪಣೆ.


ಓಂ ತತ್ ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ ।

ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ ॥೨೩॥


ಓಂ ತತ್ ಸತ್ ಇತಿ ನಿರ್ದೇಶಃ ಬ್ರಹ್ಮಣಃ ತ್ರಿವಿಧಃ ಸ್ಮೃತಃ ।

ಬ್ರಾಹ್ಮಣಾಃ ತೇನ ವೇದಾಃ ಚ ಯಜ್ಞಾಃ ಚ ವಿಹಿತಾಃ ಪುರಾ – ಓಂ [ಪ್ರಪಂಚವನ್ನು ಹೊತ್ತವನು ಮತ್ತು ಪ್ರಪಂಚದಲ್ಲಿ ತುಂಬಿರುವವನು], ತತ್ [ವೇದಗಳ ಮೂಲಕ, ಪರೋಕ್ಷವಾಗಿ ಮಾತ್ರ ತಿಳಿಯಲು ಸಾಧ್ಯವಾದವನು] ಸತ್ [ಎಲ್ಲಾ ಶುಭ ಗುಣಗಳಿಂದ ಪೂರ್ಣನಾದವನು] – ಇವು ಭಗವಂತನ ಮೂರು ಹೆಸರುಗಳು. ಆ ಭಗವಂತನೇ ವೇದಗಳನ್ನೂ, ವೇದಜ್ಞರನ್ನೂ ಮತ್ತು ಯಜ್ಞಗಳನ್ನೂ ಅಣಿಗೊಳಿಸಿದನು.  

ಓಂ, ತತ್, ಸತ್ ಇವು ಮೂರು ಭಗವಂತನ ಹೆಸರುಗಳು. ಭಗವಂತನ ಸ್ಮರಣೆಗಾಗಿ, ಭಗವಂತನನ್ನು ಕರೆಯುವುದಕ್ಕಾಗಿ ಜ್ಞಾನಿಗಳು ಈ ರೀತಿ ಅನುಸಂಧಾನವನ್ನು ಬಳಕೆಗೆ ತಂದರು. ಭಗವಂತನ ಹೆಸರು ನಮ್ಮ ಹೆಸರಂತಲ್ಲ. ಆತನ ಹೆಸರು ಆತನ ಗುಣವಾಚಕ ಪದಗಳು. ‘ಓಂ’ ಭಗವಂತನಿಗೆ ಮೀಸಲಾದ( Exclusive) ಹೆಸರು. ಇದು ಮನುಷ್ಯನ ಒಟ್ಟು ಜೀವನದ ಎಲ್ಲಾ ಮುಖವನ್ನು ಮೂರು ಅಕ್ಷರಗಳಲ್ಲಿ(ಅ, ಉ, ಮ್) ಹೇಳುತ್ತದೆ. ಇಡೀ ಜಗತ್ತು ಯಾರಲ್ಲಿ ಓತವಾಗಿದೆಯೋ, ಇಡೀ ಜಗತ್ತು ಯಾರಲ್ಲಿ ಹೆಣೆದುಕೊಂಡಿದೆಯೋ –ಅವನು ‘ಓಂ’. ನಾವು ಮಾಡುವ ಸಮಸ್ತ ಕರ್ಮವೂ ಅವನಲ್ಲಿ ಅರ್ಪಿತವಾಗಿದೆ ಎಂದು ಹೇಳುವುದಕ್ಕಾಗಿ ಓಂಕಾರವನ್ನು ಬಳಸುತ್ತಾರೆ. ‘ಹರಿಃ ಓಂ’ ಎಂದು ಪ್ರಾರಂಭದಲ್ಲಿ ಹೇಳಿದರೆ - “ನಾನು ಮುಂದೆ ಮಾಡತಕ್ಕ ಸಮಸ್ತವೂ ಭಗವಂತನಿಗೆ ಅರ್ಪಿತವಾಗಿದೆ” ಎಂದು ಹೇಳಿದಂತೆ. [ಓಂಕಾರದ ಬಗ್ಗೆ ಹೆಚ್ಚಿನ ವಿವರಣೆಗಾಗಿ ಅಧ್ಯಾಯ-೭ ಶ್ಲೋಕ ೮-೯ ನೋಡಿ).

‘ತತಃ’ ಅಂದರೆ ತುಂಬಿರುವವನು. ಭಗವಂತ ಸಮಸ್ತ ಗುಣಗಳ ನೆಲೆ. ಗುಣಪರಿಪೂರ್ಣನಾದ ಅವನು ಸಮಸ್ತ ವೇದದಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ‘ತತ್'. ಇನ್ನು ‘ಸತ್ ‘ ಎಂದರೆ ಯಾವ ದೋಷವೂ ಇಲ್ಲದವ. ಹೀಗೆ ಓಂ-ತತ್-ಸತ್ ಎನ್ನುವುದು ವೇದಕಾಲದ ನಾಮತ್ರಯಗಳು. ಇಂದು ನಾವು ಹೇಳುವ ಅಚ್ಯುತಾಯನಮಃ, ಅನಂತಾಯನಮಃ, ಗೋವಿಂದಾಯ ನಮಃ ಕೂಡಾ ಇದೇ ಅರ್ಥವನ್ನು ಕೊಡುತ್ತದೆ. ಅ-ಚ್ಯುತ ಅಂದರೆ ಯಾವ ಗುಣದಿಂದಲೂ ಚ್ಯುತನಾದವನಲ್ಲ ಎಂದರ್ಥ. ಅವನಿಂದ ಚ್ಯುತನಾಗಿ ಈ ಜಗತ್ತಿಗೆ ಅಸ್ತಿತ್ವವಿಲ್ಲ. ಆತ ಸರ್ವ ಜಗತ್ತಿಗೆ ಆಧಾರ. ಇನ್ನು ಎರಡನೇ ನಾಮ –ಅನಂತ. ಅಂತವಿಲ್ಲದ್ದು ಅನಂತ. ಯಾರ ಗುಣಗಳಿಗೆ ಕೊನೆ ಇಲ್ಲವೋ ಅವನು ಅನಂತ. ಮೂರನೆಯ ನಾಮ ಗೋವಿಂದ. ಗೋ-ಅಂದರೆ ವೇದಗಳು. ಸಮಸ್ತ ವೇದಗಳಿಂದ ಪ್ರತಿಪಾದ್ಯನಾದ ಭಗವಂತ-ಗೋವಿಂದ. ಒಟ್ಟಿನಲ್ಲಿ ಸಂಕ್ಷಿಪ್ತವಾಗಿ ಇಲ್ಲಿ - ಓಂ ತತ್ ಸತ್ ಎಂದರೆ “ಜಗದಾಧಾರನೂ, ಸಮಸ್ತ ಗುಣಪೂರ್ಣನೂ, ಸಮಸ್ತ ವೇದ ಪ್ರತಿಪಾದ್ಯನೂ, ಸಮಸ್ತ ದೋಷ ದೂರನೂ ಆದ ಭಗವಂತ” ಎಂದರ್ಥ. ಇಂತಹ ಭಗವಂತ ವೇದವನ್ನು ಸೃಷ್ಟಿ ಮಾಡಿದ, ಅದರಿಂದ 'ಜ್ಞಾನಿಗಳಾಗಿ' ಎಂದು ವೇದಜ್ಞ(ಜ್ಞಾನಿ)ರನ್ನು ಸೃಷ್ಟಿ ಮಾಡಿದ, ಜ್ಞಾನ ಪೂರ್ವಕವಾಗಿ ಕರ್ಮ ಮಾಡಿರೆಂದು ಯಜ್ಞವನ್ನು ಸೃಷ್ಟಿ ಮಾಡಿದ.

ನಮ್ಮಲ್ಲಿ ಕೆಲವರು ವೇದ-‘ಪೌರುಷೇಯ’ ಎಂದೂ, ಹಾಗೂ ಇನ್ನು ಕೆಲವರು ವೇದ-‘ಅಪೌರುಷೇಯ’ ಎಂದೂ ವಾದ ಮಾಡುವವರಿದ್ದಾರೆ. ಸೃಷ್ಟಿ ಪೂರ್ವದಲ್ಲಿ ಪರಮಪುರುಷನಿಂದ ಉಚ್ಚರಿಸಲ್ಪಟ್ಟ ವೇದ ಪೌರುಷೇಯ; ಇದು ಅನಾದಿ-ಅನಂತ ಕಾಲದಲ್ಲಿ ಪ್ರತೀ ಕಲ್ಪದಲ್ಲೂ ಭಗವಂತನಿಂದ ಉಚ್ಚರಿಸಲ್ಪಡುವುದರಿಂದ ಅಪೌರುಷೇಯ ಕೂಡಾ ಹೌದು. ಆದ್ದರಿಂದ ಈ ಕುರಿತು ಮಾಡುವ ವಾದ ವ್ಯರ್ಥ.


ತಸ್ಮಾದೋಮಿತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ ।

ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಮ್ ॥೨೪॥


ತಸ್ಮಾತ್ ಓಂ ಇತಿ ಉದಾಹೃತ್ಯ ಯಜ್ಞ ದಾನ ತಪಃ ಕ್ರಿಯಾಃ ।

ಪ್ರವರ್ತಂತೇ ವಿಧಾನ ಉಕ್ತಾಃ ಸತತಮ್ ಬ್ರಹ್ಮವಾದಿನಾಮ್ – ಆದ್ದರಿಂದ ಶಾಸ್ತ್ರದ ಕಟ್ಟಳೆಗೆ ಅನುಗುಣವಾದ, ಬ್ರಹ್ಮ ಚಿಂತಕರ ಯಜ್ಞ, ದಾನ ಮತ್ತು ತಪದ ಕ್ರಿಯೆಗಳು ಯಾವಾಗಲೂ ‘ಓಂ’ ಎಂದು ಭಗವಂತನ ನಾಮ ಸ್ಮರಣೆಯ ಜತೆಗೆಯೇ ತೊಡಗುತ್ತವೆ.

ಕರ್ಮದಲ್ಲಿ ಓಂಕಾರ ಬಳಕೆಯ ಮಹತ್ವವನ್ನು ಕೃಷ್ಣ ಇಲ್ಲಿ ವಿವರಿಸಿದ್ದಾನೆ. ನಮಗೆ ತಿಳಿದಂತೆ ಒಬ್ಬ ವೇದಜ್ಞನಾಗಬೇಕಾದರೆ ಆತನಿಗೆ ಓಂಕಾರದ ಉಪದೇಶವಾಗಿರಬೇಕು; ಯಜ್ಞದ ಆದಿ-ಅಂತದಲ್ಲಿ ಓಂಕಾರ ಹೇಳಬೇಕು; ವೇದ ಪಠಣದ ಆದಿ-ಅಂತದಲ್ಲಿ ಓಂಕಾರವಿರಬೇಕು. ಇದೆಲ್ಲವೂ ಹಿಂದಿನಿಂದಲೂ ಬಂದಿರುವ ಆಚರಣೆಗಳು. ನಾವು ಮಾಡುವ ಯಾವ ಕಾರ್ಯವೇ ಇರಲಿ, ಅದನ್ನು ಪ್ರಾರಂಭಿಸುವಾಗ “ಇದನ್ನು ಭಗವಂತನ ಪೂಜಾರೂಪವಾಗಿ ಮಾಡುತ್ತೇನೆ” ಎನ್ನುವ ಸಂಕಲ್ಪ ಮಾಡಿ ಮಾಡುವುದು ಮತ್ತು ಅಂತ್ಯದಲ್ಲಿ “ನಾನು ಮಾಡಿದ್ದನ್ನು ಭಗವಂತ ಸ್ವೀಕರಿಸಲಿ” ಎಂದು ಹೇಳುವುದು-ಇದರ ಮೂಲ ಉದ್ದೇಶ. ಹೀಗೆ ಓಂಕಾರ ಹೇಳಿಯೇ ಕರ್ಮ ಮಾಡಬೇಕು ಎನ್ನುವ ಆಚರಣೆ ಹಿಂದಿನಿಂದ ಬೆಳೆದುಬಂತು. ಈ ಅನುಸಂಧಾನದಿಂದ ನಾವು ಯಾವುದೇ ಪಾರಾಯಣ, ಹೋಮ, ಹವನ, ಯಜ್ಞ, ತಪಸ್ಸು, ದಾನ ಮಾಡಿದರೂ ಕೂಡಾ ಅದು ಸಾತ್ವಿಕ ಕರ್ಮವೆನಿಸುತ್ತದೆ.


ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ ।

ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥೨೫॥


ತತ್ ಇತಿ ಅನಭಿಸಂಧಾಯ ಫಲಂ ಯಜ್ಞ ತಪಃ ಕ್ರಿಯಾಃ ।

ದಾನ ಕ್ರಿಯಾಃ ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ – ಮೋಕ್ಷ ಬಯಸುವ ಸಜ್ಜನರು ಫಲವನ್ನು ಬಯಸದೆ, ‘ತತ್’ ಎನಿಸಿದ ಭಗವಂತನಿಗಾಗಿ ಬಗೆಬಗೆಯ ಯಜ್ಞ, ದಾನ ಮತ್ತು ತಪದ ಕ್ರಿಯೆಗಳನ್ನು ಆಚರಿಸುತ್ತಾರೆ.

‘ತತ್’ ಎನ್ನುವುದು ಸಮಸ್ತ ವೇದ ವಾಚ್ಯನಾದ ಭಗವಂತನನ್ನು ಹೇಳುತ್ತದೆ ಎನ್ನುವುದನ್ನು ಹಿಂದೆ ನೋಡಿದ್ದೇವೆ. ಇಲ್ಲಿ-ನಾವು ಮಾಡುವ ಕರ್ಮದಲ್ಲಿ ‘ತತ್’ ಏನನ್ನು ಹೇಳುತ್ತದೆ ಎನ್ನುವುದನ್ನು ಕೃಷ್ಣ ವಿವರಿಸಿದ್ದಾನೆ. ‘ತತ್’ ಎನ್ನುವುದು ವೇದಮಾತಾ ಗಾಯತ್ತ್ರಿಯ ಸಂಕ್ಷಿಪ್ತಪದ(Abbreviation; ಮೊದಲ ಮತ್ತು ಕೊನೆಯ ಅಕ್ಷರ) ಹೀಗಾಗಿ ಇದು ಗಾಯತ್ತ್ರಿ ವಾಚ್ಯ ಭಗವಂತನ ಮುಖ್ಯ ನಾಮಧೇಯ. ‘ತತ್’ ಎನ್ನುವುದು ಕರ್ಮದಲ್ಲಿ ಭಗವಂತನು ಕೊಡುವ ಫಲವನ್ನು ಹೇಳುತ್ತದೆ. ‘ತತ್’ ಎಂದರೆ ಯಾವುದೇ ಐಹಿಕ ಫಲದ ಆಸೆ ಇಲ್ಲದೆ, ಭವಬಂಧನದಿಂದ ಬಿಡುಗಡೆಗೊಳಿಸಿ ಮೋಕ್ಷವನ್ನು ಕೊಡುವ ಭಗವಂತನ ಪ್ರೀತಿಗಾಗಿ ಮಾಡುವ ಕರ್ಮ. ಅದು ಯಜ್ಞವಿರಬಹುದು, ತಪಸ್ಸಿರಬಹುದು ಅಥವಾ ದಾನವಿರಬಹುದು. ಜ್ಞಾನಿಗಳು ದಾನ ಮಾಡುವಾಗ ಕೂಡಾ ಯಾವುದೇ ಐಹಿಕ ಫಲದ ಅಪೇಕ್ಷೆ ಇಲ್ಲದೆ ದಾನ ಮಾಡುತ್ತಾರೆ. ಉದಾಹರಣೆಗೆ ಅನ್ನದಾನ: ಅನ್ನದ ಅಭಿಮಾನಿ ಲಕ್ಷ್ಮಿ; ಅನ್ನದಾನ ಎಂದರೆ ದಾನ ಸ್ವೀಕರಿಸುವವನೊಳಗಿರುವ ವೈಶ್ವಾನರ ರೂಪಿ ನಾರಾಯಣನಿಗೆ ಲಕ್ಷ್ಮಿಯ ಸಮರ್ಪಣೆ. ಇದೇ ರೀತಿ ಕನ್ಯಾದಾನ: ಕನ್ಯಾದಾನ ಮಾಡುವಾಗ ಕನ್ಯಾಪಿತೃಗಳು ಗಂಡಿನ ಆಸ್ತಿ, ಹುದ್ದೆ, ಸಂಬಳ ನೋಡಿ ದಾನ ಮಾಡುವುದಲ್ಲ. ಬದಲಿಗೆ ಹುಡುಗಿಯ ಒಳಗಿರುವ ಲಕ್ಷ್ಮಿಯನ್ನು ಹುಡುಗನ ಒಳಗಿರುವ ನಾರಾಯಣನಿಗೆ ಅರ್ಪಿತವಾಗಲಿ ಎನ್ನುವ ಅನುಸಂಧಾನದಿಂದ ನೀಡುವುದು. ಹೀಗೆ ಮೋಕ್ಷಕಾಂಕ್ಷಿಗಳು “ಎಲ್ಲಾ ಮಾಡಿಸುವವನು ಆ ಭಗವಂತ-ಅವನ ಪ್ರೀತ್ಯರ್ಥ ಈ ಪೂಜೆ” ಎಂದು ಯಾವುದೇ ಲೌಕಿಕ ಫಲಾಪೇಕ್ಷೆ ಇಲ್ಲದೆ ಕ್ರಿಯೆವನ್ನು ಮಾಡುತ್ತಾರೆ. ಇದು ‘ತತ್’.  


ಸದ್ ಭಾವೇ ಸಾಧುಭಾವೇ ಚ ಸದಿತ್ಯೇತತ್ ಪ್ರಯುಜ್ಯತೇ ।

ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ ॥೨೬॥


ಸತ್ ಭಾವೇ ಸಾಧುಭಾವೇ ಚ ಸತ್ ಇತಿ ಏತತ್ ಪ್ರಯುಜ್ಯತೇ ।

ಪ್ರಶಸ್ತೇ ಕರ್ಮಣಿ ತಥಾ ಸತ್ ಶಬ್ದಃ ಪಾರ್ಥ ಯುಜ್ಯತೇ – ಪಾರ್ಥ, ‘ಹುಟ್ಟು’ ಮತ್ತು ‘ಒಳ್ಳೆಯತನ’ ಎಂಬ ಅರ್ಥದಲ್ಲಿ ‘ಸತ್’ ಎಂಬ ಶಬ್ದ ಬಳಕೆಯಾಗುತ್ತದೆ. ‘ಒಳ್ಳೆಯ ಕೆಲಸ’ ಎಂಬ ಅರ್ಥದಲ್ಲೂ ‘ಸತ್’ ಶಬ್ದ ಸಲ್ಲುತ್ತದೆ.

‘ಸತ್’ ಅನ್ನುವುದಕ್ಕೆ ಒಂದು ಅರ್ಥ-ಭಾವ. ಸತ್-ಭಾವ ಎಂದರೆ ಸಜ್ಜನಿಕೆಯಿಂದ ಇರುವುದು. ಇದು ಲೋಕದಲ್ಲಿ ವ್ಯಕ್ತಿಗೆ ಬಳಸುವ ಪದಪ್ರಯೋಗ. ಇದನ್ನು ಕರ್ಮದಲ್ಲಿ ಬಳಸಿದಾಗ ಸತ್-ಕರ್ಮವಾಗುತ್ತದೆ. ಓಂಕಾರ ವಾಚ್ಯ ಭಗವಂತನಿಗೆ ಅರ್ಪಣಾ ಭಾವದಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ(ತತ್) ಮಾಡುವ ಕರ್ಮ ‘ಸತ್’-ಕರ್ಮ. ಯಾವ ಕರ್ಮವನ್ನು ಭಗವಂತನ ಕುರಿತಾಗಿ ಮಾಡುತ್ತೇವೋ, ಆ ಕರ್ಮ ಪ್ರಶಸ್ತವಾಗಿರಬೇಕು. ಅಂದರೆ ಸ್ವಾರ್ಥಕ್ಕಾಗಿ ಮಾಡಿದರೆ ಅದನ್ನು ಜನ ಮೆಚ್ಚುವುದಿಲ್ಲ. ಬದಲಿಗೆ ತ್ಯಾಗದಿಂದ ಮಾಡುವ ಕರ್ಮ ಪ್ರಶಸ್ತ ಕರ್ಮವೆನಿಸುತ್ತದೆ. ನಾವು ಈ ರೀತಿ ಪ್ರತಿಯೊಂದು ಶಬ್ದದ ಅರ್ಥವನ್ನು ತಿಳಿದು, ಪಾಲನೆ ಮಾಡುವ ಪಾರ್ಥರಾಗಬೇಕು ಎನ್ನುವುದು ಕೃಷ್ಣನ ಸಂದೇಶ. ‘ಸತ್’ ಪದದ ಅರ್ಥವನ್ನು ಇನ್ನೂ ವಿವರವಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.


ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ ।

ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ ॥೨೭॥


ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸತ್ ಇತಿ ಚ ಉಚ್ಯತೇ ।

ಕರ್ಮ ಚ ಏವ ತತ್ ಅರ್ಥೀಯಂ ಸತ್ ಇತಿ ಏವ ಅಭಿಧೀಯತೇ – ಯಜ್ಞ-ದಾನ-ತಪಸ್ಸುಗಳಲ್ಲಿ ನಿಷ್ಠೆಯನ್ನೂ ‘ಸತ್’ ಎನ್ನುತ್ತಾರೆ. ಭಗವಂತನಿಗಾಗಿ ಆಚರಿಸುವ ಕರ್ಮವನ್ನೂ ‘ಸತ್’ ಎಂದೇ ಕರೆಯುತ್ತಾರೆ.

‘ಸತ್’ ಎಂದರೆ ‘ಸತ್’ ಶಬ್ದ ವಾಚ್ಯನಾದ ಭಗವಂತನನ್ನು ಯಜ್ಞ, ದಾನ, ತಪಸ್ಸಿನಿಂದ ಆರಾಧಿಸುವುದು. ಹೀಗಾಗಿ ಭಗವಂತನೂ ‘ಸತ್’; ಅವನ ಕುರಿತಾದ ಕರ್ಮವೂ ‘ಸತ್’(ಸತ್ಕರ್ಮ); ಅವನ ಕುರಿತಾಗಿ ಕರ್ಮ ಮಾಡುವವನೂ ‘ಸತ್’(ಸಜ್ಜನ). ನಾವು ಭಗವಂತನ ಎಚ್ಚರದಿಂದ, ಫಲಾಪೇಕ್ಷೆ ಇಲ್ಲದೆ, ಭಗವದರ್ಪಣಾ ಭಾವದಿಂದ, ಭಗವಂತ ಪ್ರೀತನಾಗಲಿ ಎಂದು ಮಾಡುವ ಸಮಸ್ತ ಕರ್ಮವೂ ಸತ್-ಕರ್ಮ.


ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್ ।

ಅಸದಿತ್ಯುಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ ॥೨೮॥


ಅಶ್ರದ್ಧಯಾ ಹುತಮ್ ದತ್ತಮ್ ತಪಃ ತಪ್ತಮ್ ಕೃತಂ ಚ ಯತ್ ।

ಅಸತ್ ಇತಿ ಉಚ್ಯತೇ ಪಾರ್ಥ ನ ಚ ತತ್ ಪ್ರೇತ್ಯ ನೋ ಇಹ – ಮಾಡುವ ಕರ್ಮದಲ್ಲಿ ಶ್ರದ್ದೆ ಇಲ್ಲದೆ, ಭಗವಂತನಲ್ಲಿ ಶ್ರದ್ದೆ ಇಲ್ಲದೆ, ಯಾರದ್ದೋ ಒತ್ತಾಯಕ್ಕಾಗಿ, ಅಥವಾ ಭಯದಿಂದ, ಪೂರ್ಣ ನಂಬಿಕೆ ಇಲ್ಲದೆ ಮಾಡುವ ಕ್ರಿಯೆ ವ್ಯರ್ಥ. ಶ್ರದ್ದೆ ಇಲ್ಲದೆ ಮಾಡುವ ಇಂತಹ ದಾನ, ತಪಸ್ಸು, ಯಜ್ಞ, ಅಥವಾ ಇತರ ಯಾವುದೇ ಕರ್ಮಕ್ಕೆ ಇಹದಲ್ಲೂ ಫಲವಿಲ್ಲ, ಪರದಲ್ಲೂ ಫಲವಿಲ್ಲ.

ಇತಿ ಸಪ್ತದಶೋSಧ್ಯಾಯಃ

ಹದಿನೇಳನೆಯ ಅಧ್ಯಾಯ ಮುಗಿಯಿತು 

ಮುಂದಿನ ಅಧ್ಯಾಯಕ್ಕಾಗಿ ಇಲ್ಲಿ ಒತ್ತಿ >>

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post