Menu

Home ನಲಿಕಲಿ About ☰ Menu


 

5 ಮತ್ತು 8 ನೇ ತರಗತಿ ಮೌಖಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು (PDF)

5th-and-8th-oral-exam-question-papers

                  5 ಮತ್ತು 8ನೇ ತರಗತಿಯ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನದ ಮೌಖಿಕ ಪ್ರಶ್ನೆ ಪತ್ರಿಕೆಗಳನ್ನು (ಕಲಿಕಾ ಹಾಳೆಗಳು ಮತ್ತು ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮ ಆಧರಿಸಿ) ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿದ್ದಾರೆ.

            ಈ ಕೆಳಗಿನ  ಲಿಂಕ್‌ಗಳಿಂದ 40 ಪ್ರಶ್ನೆಗಳ, ಮೌಖಿಕ (Oral) ಮಾದರಿ ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಮಾಡಿ ಮಾದರಿಯಾಗಿ ಬಳಸಬಹುದು.

5ನೇ ತರಗತಿ ಮೌಖಿಕ ಪ್ರಶ್ನೆ ಪತ್ರಿಕೆಗಳು
ಕ್ರ. ಸಂ ವಿಷಯ Download Link
    1 ಕನ್ನಡ Download
    2 ಇಂಗ್ಲೀಷ್ Download
    3 ಗಣಿತ Download
    4 ಪರಿಸರ ಅಧ್ಯಯನ Download



8ನೇ ತರಗತಿ ಮೌಖಿಕ ಪ್ರಶ್ನೆ ಪತ್ರಿಕೆಗಳು
ಕ್ರ. ಸಂ ವಿಷಯ Download Link
    1 ಕನ್ನಡ Download
    2 ಇಂಗ್ಲೀಷ್ Download
    3 ಹಿಂದಿ Download
    4 ವಿಜ್ಞಾನ Download
    5 ಗಣಿತ Download
    6 ಸಮಾಜ ವಿಜ್ಞಾನ Download


 Download 4th, 6th, & 7th SA-2 ಪ್ರಶ್ನೆ ಪತ್ರಿಕೆ(PDF)

 

Update ಗಾಗಿ ಮತ್ತೇ Blog ಗೆ ಭೇಟಿ ನೀಡಿ


  Downlod 5th & 8th  Oral Entry(PDF) Blank Format 


ಮೌಖಿಕ ಪರೀಕ್ಷೆಗೆ ಶಿಕ್ಷಕರಿಗೆ ಮಾರ್ಗಸೂಚಿಗಳು : 

  1. ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಯನ್ನು ಆಯಾ ಶಾಲೆಗಳಲ್ಲಿಯೇ ದಿ:06/03/2023 ರಿಂದ ದಿ:10/03/2023 ರವರೆಗೆ ನಿರ್ವಹಿಸುವದು.
  2. 5ನೇ ತರಗತಿಗೆ ಐದು ಮತ್ತು 8ನೇ ತರಗತಿಗೆ ಆರು ವಿಷಯಗಳಲ್ಲಿ ಮೌಖಿಕ ಪರೀಕ್ಷೆಯನ್ನು ನಡೆಸಬೇಕು.
  3. ಪ್ರತಿ ವಿಷಯದಲ್ಲಿ ಹತ್ತು ಅಂಕಗಳಿಗೆ ಆ ವಿಷಯ ಬೋಧಿಸುವ ಶಿಕ್ಷಕರು ಮೌಖಿಕ ಪರೀಕ್ಷೆಯನ್ನು ನಡೆಸಬೇಕು.
  4. ಪ್ರತಿ ವಿಷಯದಲ್ಲಿ 4 ಪ್ರಶ್ನೆಗಳ ಕೋಠಿಯನ್ನು ತಯಾರಿಸಬೇಕು,ಆ ಎಲ್ಲಾ ಪ್ರಶ್ನೆಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿ ಇರಬೇಕು.
  5. ಎಲ್ಲಾ ಮೌಖಿಕ ಪ್ರಶ್ನೆಗಳ ಉತ್ತರವು ಒಂದು ವಾಕ್ಯ, ಒಂದು ಸಂಕೇತ ಅಥವಾ ಒಂದು ಶಬ್ದದಲ್ಲಿ ಇರಬೇಕು.
  6. 40 ಪ್ರಶ್ನೆಗಳಲ್ಲಿ ಪ್ರತಿ 10 ಪ್ರಶ್ನೆಗೆ ಒಂದು ಸರಣಿ ಎಂದು ಭಾವಿಸಬೇಕು, ಒಟ್ಟು ನಾಲ್ಕು ಸರಣಿಯ ಪ್ರಶ್ನೆ ಪತ್ರಿಕೆ ಇರಬೇಕು.
  7. ತರಗತಿ ಒಟ್ಟು ಮಕ್ಕಳನ್ನು ನಾಲ್ಕು ಗುಂಪುಗಳಾಗಿ ವಿಂಗಡನೆ ಮಾಡಿ, ಪ್ರತಿ ಗುಂಪಿಗೆ ಒಂದು ಸರಣಿಯ ಪ್ರಶ್ನೆ ಪತ್ರಿಕೆ ಪ್ರಶ್ನೆಗಳನ್ನು ಕೇಳಬೇಕು.
  8. ಒಬ್ಬ ಮಗುವಿನ ಮೌಖಿಕ ಮೌಲ್ಯಮಾಪನ ನಡೆಯುವಾಗ ಇತರೆ ಮಕ್ಕಳು ಬೇರೆ ಕೊಠಡಿಯಲ್ಲಿ ಆಸೀನರಾಗಿರಬೇಕು.

ಕರ್ನಾಟಕದ 7 ಅದ್ಭುತಗಳು | Seven Wonders of Karnataka

             'ವಿಶ್ವದ 7 ಅದ್ಭುತಗಳು’ ಇರುವ ರೀತಿಯಲ್ಲೇ ‘ಕರ್ನಾಟಕದ 7 ಅದ್ಭುತಗಳ'ನ್ನು ಗುರುತಿಸಲು ರಾಜ್ಯದ ನೆಲ, ಜಲ, ಕಾಡು-ಕಡಲು, ವಾಸ್ತು-ವಿಜ್ಞಾನ, ಶಿಲ್ಪಕಲೆ, ಇತಿಹಾಸ-ಪರಂಪರೆ ಸೇರಿದಂತೆ ಎಲ್ಲ ವೈವಿಧ್ಯಗಳನ್ನೂ ಪ್ರತಿನಿಧಿಸುವ ಏಳು ವಿಶಿಷ್ಟ ತಾಣಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿವಾಹಿನಿ ‘ಕರ್ನಾಟಕದ 7 ಅದ್ಭುತಗಳ’ ಆಯ್ಕೆಗೆ ಮಹಾ ಅಭಿಯಾನ ಕೈಗೊಂಡಿತ್ತು. 

               ಈ  ಆಯ್ಕೆಯನ್ನು  ವೈಜ್ಞಾನಿಕ ವಿಧಾನದಿಂದ ಮಾಡಲಾಗಿದೆ. ಕರ್ನಾಟಕದ ಮೂಲೆ ಮೂಲೆಯ ಜನರಿಂದ 5000ಕ್ಕೂ ಹೆಚ್ಚು ನಾಮನಿರ್ದೇಶನ, 82 ಲಕ್ಷಕ್ಕೂ ಅಧಿಕ ಜನಮತ ಚಲಾವಣೆ, 1 ವರ್ಷದ ಸುದೀರ್ಘ ಸ್ಥಳ ಸಮೀಕ್ಷೆ, ಜಾಗತಿಕ ಪ್ರವಾಸೋದ್ಯಮ ಹಾಗೂ ಇತಿಹಾಸ ತಜ್ಞರನ್ನು ಒಳಗೊಂಡ 7 ಮಂದಿ ತೀರ್ಪುಗಾರರ ಸಮಿತಿಯ ವಿಚಾರ ಮಂಥನಗಳ ಮೂಲಕ  ‘ಕರ್ನಾಟಕದ 7 ಅದ್ಭುತಗಳ'ನ್ನು ಆಯ್ಕೆ ಮಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನಾಂಕ : 25/02/2023 ರಂದು ಶನಿವಾರ ಕರ್ನಾಟಕದ 7 ಅದ್ಭುತಗಳ ಪಟ್ಟಿ ಘೋಷಿಸಿದರು. ಅವುಗಳು ಈ ಕೆಳಗಿನಂತಿವೆ.

ಕರ್ನಾಟಕದ 7 ಅದ್ಭುತಗಳು | Seven Wonders of Karnataka

1. ಹಿರೇಬೆಣಕಲ್ ಶಿಲಾಸಮಾಧಿಗಳು : ಕ್ರಿ.ಪೂ.800ರಿಂದ 200ರವರೆಗಿನ ಕಾಲದ್ದು ಎನ್ನಲಾದ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿರುವ ಪ್ರಾಗೈತಿಹಾಸಿಕ ತಾಣವನ್ನು ‘ಬೃಹತ್ ಶಿಲಾಯುಗದ ಅದ್ಭುತ’ ಎಂದು ಘೋಷಿಸಲಾಗಿದೆ.

2. ಹಂಪಿ : 14ರಿಂದ 16ನೇ ಶತಮಾನದ ನಡುವೆ ನಿರ್ಮಾಣಗೊಂಡ ‘ಭವ್ಯ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಈಗಿನ ವಿಜಯನಗರ ಜಿಲ್ಲೆಯ ‘ಹಂಪಿ’ಯನ್ನು ‘ಪುರಾತತ್ವ ಅದ್ಭುತ’ ಎಂದು ಘೋಷಿಸಲಾಗಿದೆ.

3. ಗೊಮ್ಮಟೇಶ್ವರ : ಈಗಿನ ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿಯ ನೆತ್ತಿಯಲ್ಲಿ 10ನೇ ಶತಮಾನದಲ್ಲಿ ಸ್ಥಾಪನೆಯಾದ 57 ಅಡಿಯ ಭವ್ಯ ಗೊಮ್ಮಟೇಶ್ವರ ಪ್ರತಿಮೆಯನ್ನು ‘ತಾತ್ವಿಕ ಅದ್ಭುತ’ವೆಂದು ಘೋಷಿಸಲಾಗಿದೆ.

4. ಗೋಲಗುಮ್ಮಟ : 17ನೇ ಶತಮಾನದಲ್ಲಿ ಆಗಿನ ಬಿಜಾಪುರ (ಹಾಲಿ ವಿಜಯಪುರ) ಸುಲ್ತಾನ ಮೊಹಮ್ಮದ್ ಆದಿಲ್ ಶಾಹ್ ನಿರ್ಮಿಸಿದ ಬೃಹತ್ ಗೋಲಗುಮ್ಮಟವು ‘ವಾಸ್ತು ವಿಜ್ಞಾನ ಅದ್ಭುತ’ವೆಂಬ ಗೌರವಕ್ಕೆ ಪಾತ್ರವಾಗಿದೆ.

5. ಮೈಸೂರು ಅರಮನೆ : 19-20ನೇ ಶತಮಾನದಲ್ಲಿ ಒಡೆಯರ್ ರಾಜವಂಶಸ್ಥರಿಂದ ನಿರ್ಮಾಣಗೊಂಡ ಮೈಸೂರಿನ ಜಗದ್ವಿಖ್ಯಾತ ಅಂಬಾ ವಿಲಾಸ ಅರಮನೆಯನ್ನು ‘ರಾಜಪರಂಪರಾ ಅದ್ಭುತ’ ಎಂದು ಘೋಷಿಸಲಾಗಿದೆ.

6. ಜೋಗ ಜಲಪಾತ : ಭಾರತದಲ್ಲೇ ಅತಿ ಸುಂದರ ಎನಿಸಿರುವ, 830 ಅಡಿ ಎತ್ತರದಿಂದ ಧುಮುಕುವ ಶಿವಮೊಗ್ಗ ಜಿಲ್ಲೆಯ ವಿಶ್ವಪ್ರಸಿದ್ಧ ಜೋಗ ಜಲಪಾತವನ್ನು ‘ನೈಸರ್ಗಿಕ ಅದ್ಭುತ-ನೆಲ’ ಎಂದು ಘೋಷಿಸಲಾಗಿದೆ.

7. ನೇತ್ರಾಣಿ ದ್ವೀಪ : ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರ ಬಳಿಯ ಅರಬ್ಬಿ ಸಮುದ್ರದ ನಡುವೆ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿರುವ ನೇತ್ರಾಣಿ ದ್ವೀಪವನ್ನು ‘ನೈಸರ್ಗಿಕ ಅದ್ಭುತ-ಜಲ’ ಎಂದು ಘೋಷಿಸಲಾಗಿದೆ.


ಕರ್ನಾಟಕದ 7 ಅದ್ಭುತಗಳ ಪರಿಚಯ


1. ಹಿರೇಬೆಣಕಲ್ ಶಿಲಾ ಸಮಾಧಿಗಳು (ಬೃಹತ್ ಶಿಲಾಯುಗದ ಅದ್ಭುತ)

ಬಹುತೇಕ ಕನ್ನಡಿಗರಿಗೇ ಅಪರಿಚಿತವಾದ ಕರ್ನಾಟಕದ ಅದ್ಭುತ ಇದು. ಸುಮಾರು 3000-4000 ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ. ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸುಮಾರು 10 ಕಿ.ಮೀ. ದೂರದ ಹಿರೇಬೆಣಕಲ್ ಗ್ರಾಮದ ಮೋರ್ಯಾರ ಗುಡ್ಡದಲ್ಲಿ ಆದಿಮಾನವ ನಿರ್ಮಿತ ಬೃಹತ್ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ನಿನ ಸ್ಟೋನ್ ಹೆಂಜಸ್, ಈಜಿಪ್ಟಿನ ಪಿರಮಿಡ್ಡುಗಳು, ಬಹರೈನಿನ ದಿಲ್ಮನ್ ಸಮಾಧಿ ದಿಬ್ಬಗಳಂತೆ - ಸಾವಿನ ಗೌರವ ಸೂಚಕಗಳು - ಈ ಶಿಲಾಸಮಾಧಿ ಡೋಲ್ಮನ್ ಗಳು. ವಿಶ್ವದ ಹಲವೆಡೆ ಇಂಥ ಡೋಲ್ಮನ್ ಗಳು ಇದ್ದು, ಕೊರಿಯಾ ಒಂದರಲ್ಲೇ ವಿಶ್ವದ ಶೇ.40ರಷ್ಟು ಡೋಲ್ಮನ್ ಗಳು ಪತ್ತೆಯಾಗಿವೆ. ಭಾರತದಲ್ಲಿ ಹಲವೆಡೆ ಈ ಶಿಲಾಸಮಾಧಿಗಳು ಪತ್ತೆಯಾಗಿವೆಯಾದರೂ, ಹಿರೇಬೆಣಕಲ್ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್ ತಾಣವಾಗಿದೆ. ಒಂದು ಅಡಿಯ ಶಿಲಾಸಮಾಧಿಯಿಂದ ಹಿಡಿದು 10 ಅಡಿ ಶಿಲಾಚಪ್ಪಡಿಯ ಸಮಾಧಿಗಳು ಮೂರು-ನಾಲ್ಕು ಸಾವಿರ ವರ್ಷಗಳ ಪ್ರಾಕೃತಿಕ ಹೊಡೆತಗಳನ್ನು ತಾಳಿಯೂ ಇನ್ನೂ ಗಟ್ಟಿಯಾಗಿ ನಿಂತಿರುವುದು ನಿಜಕ್ಕೂ ಅದ್ಭುತ. ಕರ್ನಾಟಕದಲ್ಲಿ ಇರುವ ಇಂಥ ಅನೇಕ ಪ್ರಾಗೈತಿಹಾಸಿಕ ತಾಣಗಳ ಪ್ರಾತಿನಿಧಿಕ ಅದ್ಭುತವೇ ಹಿರೇಬೆಣಕಲ್ ಮೋರ್ಯಾರ ಗುಡ್ಡದ ಶಿಲಾ ಸಮಾಧಿಗಳು.


2. ಹಂಪಿ (ಪುರಾತತ್ವ ಅದ್ಭುತ)
ರೋಮ್ ನಂತೆ ಇಡೀ ಹಂಪಿಯೇ ಒಂದು ಅದ್ಭುತ. ಇದನ್ನು ಜಗತ್ತಿನ ಅತಿದೊಡ್ಡ ಓಪನ್ ಏರ್ ಆರ್ಕಿಯಾಲಜಿಕಲ್ ಮ್ಯೂಸಿಯಂಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿನ ಶಿಲ್ಪಕಲಾ ವೈಭವ, ಶಿಲ್ಪಕಲಾ ವೈವಿಧ್ಯ, ನೂರಾರು ಸ್ಮಾರಕಗಳು, ಜಗತ್ಪ್ರಸಿದ್ಧ. ಹಂಪಿಯ ಕಲ್ಲಿನ ರಥ ಯಾರಿಗೆ ಗೊತ್ತಿಲ್ಲ ಹೇಳಿ. ಇಲ್ಲಿನ ಕಲ್ಲುಕಲ್ಲಿನಲಿ ಶಿಲೆಗಳು ಸಂಗೀತ ನುಡಿಸುತ್ತವೆ ಎಂಬುದು ಅಕ್ಷರಶಃ ನಿಜ. ಇದಕ್ಕೆ ವಿಜಯ ವಿಠ್ಠಲ ದೇವಾಲಯದ ಸಂಗೀತ ಕಂಬಗಳಿಂದ ಹಿಡಿದು, ಮಹಾನವಮಿ ದಿಬ್ಬದ ಬಳಿ ಇರುವ ಕಲ್ಲಿನ ಊಟದ ತಟ್ಟೆಗಳವರೆಗೆ ಅನೇಕ ಸಾಕ್ಷಾತ್ ನಿದರ್ಶನಗಳಿವೆ. ಅಲ್ಲದೆ, ಹಂಪಿಯ ಸುತ್ತ ಇರುವ ಬಂಡೆ ಬೆಟ್ಟಗಳ ಪರಿಸರ ಕರ್ನಾಟಕದ ವೈವಿಧ್ಯಮಯ ನಿಸರ್ಗ ಸೌಂದರ್ಯಕ್ಕೆ ಪ್ರತ್ಯೇಕ ಮೆರುಗನ್ನೇ ನೀಡಿದೆ. ಕರ್ನಾಟಕದಲ್ಲಿ ಹಂಪಿಯಂಥ ಹಲವಾರು ಶಿಲ್ಪಕಲೆಯ ಪುರಾತತ್ವ ಅದ್ಭುತಗಳಿವೆ. ಪ್ರತಿಯೊಂದೂ ತಾವೇ ತಾವಾಗಿ ಒಂದೊಂದು ಅದ್ಭುತ ಎನಿಸಿಕೊಳ್ಳಬೇಕಾದಂಥವು. ಬೇಲೂರು ಚನ್ನಕೇಶವ ದೇವಾಲಯ ಭಾರತೀಯ ಶಿಲ್ಪಕಲೆಯ ಔನ್ನತ್ಯಕ್ಕೆ ಉದಾಹರಣೆ. ಹಳೇಬೀಡು, ಪಟ್ಟದಕಲ್ಲು ದೇವಾಲಯಗಳು ಒಂದೆಡೆಯಾದರೆ ಐಹೊಳೆಯು ಭಾರತೀಯ ದೇವಾಲಯ ಶಿಲ್ಪಕಲೆಯ ತೊಟ್ಟಿಲು ಎಂದೇ ಖ್ಯಾತ. ಬಾದಾಮಿಯ ಗುಹಾಂತರ ದೇವಾಲಯಗಳೂ ಏನೂ ಕಡಿಮೆ ಇಲ್ಲ. ಲಕ್ಕುಂಡಿ, ತಲಕಾಡು ಸೇರಿದಂತೆ ಕರ್ನಾಟಕಾದ್ಯಂತ ಇರುವ ಇಂಥ ಹಲವಾರು ಪುರಾತತ್ವ ವೈಭವದ ಪ್ರಾತಿನಿಧಿಕ ಅದ್ಭುತವೇ ಹಂಪಿ.


3. ಗೋಲ ಗುಮ್ಮಟ (ವಾಸ್ತು ವಿಜ್ಞಾನ ಅದ್ಭುತ)

ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಶ್ವೇತ ಸುಂದರಿಯಾದರೆ, ಕರ್ನಾಟಕದ ಗೋಲ ಗುಮ್ಮಟ ಕೃಷ್ಣ ಸುಂದರಿ. ಜಗತ್ತಿನ ಅತಿ ದೊಡ್ಡ ಗುಮ್ಮಟಗಳಲ್ಲಿ ಒಂದು ವಿಜಯಪುರದ ಗೋಲ ಗುಮ್ಮಟ. ಇಂಡೋ-ಸಾರ್ಸೆನಿಕ್ ಶೈಲಿಯ ಈ ಬೃಹತ್ ಸ್ಮಾರಕ ಆದಿಲ್ ಶಾಹಿ ರಾಜಮನೆತನದ ಮಹಾನ್ ಸಮಾಧಿಯಾದರೂ ಪುರಾತತ್ವ ವಾಸ್ತುಶಾಸ್ತ್ರ, ರೇಖಾಗಣಿತ ಮತ್ತು ಶಬ್ದವಿಜ್ಞಾನಕ್ಕೂ ಅತ್ಯುತ್ತಮ ಉದಾಹರಣೆ. ನಾಲ್ಕು ಗೋಡೆಗಳ ಮೇಲೆ, ನಡುವೆ ಯಾವುದೇ ಆಧಾರಗಳಿಲ್ಲದೆ ಬಹುದೊಡ್ಡ ಗುಮ್ಮಟವೊಂದನ್ನು ನಿರ್ಮಿಸಿರುವುದು ವಾಸ್ತುಶಾಸ್ತ್ರಜ್ಞರ ಅಪ್ರತಿಮ ಕೌಶಲ್ಯಕ್ಕೆ ಸಾಕ್ಷಿ. ಅದಕ್ಕಿಂತ ಈ ಗುಮ್ಮಟದ ಶಬ್ದಚಾತುರ್ಯ ಅಮೋಘವಾದುದು. ಗುಮ್ಮಟದ ಒಂದು ಬದಿಯಲ್ಲಿ ಪಿಸುಮಾತನ್ನಾಡಿದರೂ ಅಷ್ಟು ದೂರದ ಇನ್ನೊಂದು ತುದಿಯಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಗುಮ್ಮಟದಲ್ಲಿ ಒಂದು ಕೂಗು ಏಳು ಬಾರಿ ಮಾರ್ದನಿಸುತ್ತದೆ. ಈ ಶಬ್ದವೈಚಿತ್ರ್ಯವನ್ನು, ರೇಖಾಗಣಿತ ಆಧಾರಿತ ಕಟ್ಟಡ ವೈವಿಧ್ಯವನ್ನು ಪ್ರತಿನಿಧಿಸುವ ಕರ್ನಾಟಕದ ಅದ್ಭುತವೇ ಗೋಲ ಗುಮ್ಮಟ. ಅಷ್ಟೇ ಅಲ್ಲದೆ, ಕರ್ನಾಟಕದ ಅನೇಕ ಪ್ರಾಚೀನ ಹಾಗೂ ಆಧುನಿಕ ವಾಸ್ತು ವಿಜ್ಞಾನದ ಪ್ರಾತಿನಿಧಿಕವೂ ಹೌದು ಈ ಅದ್ಭುತ.


4. ಶ್ರವಣಬೆಳಗೊಳದ ಗೊಮ್ಮಟೇಶ್ವರ  (ತಾತ್ವಿಕ ಅದ್ಭುತ)

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ರಿಯೋ-ಡಿ-ಜನೈರೋದ ಕಿಸ್ತನ ಪ್ರತಿಮೆ ಹೇಗೋ, ನಮಗೆ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆ ಹಾಗೆ. ಇತ್ತೀಚೆಗೆ ರಾಜ್ಯದಲ್ಲಿ ಅತಿ ಎತ್ತರದ ಅನೇಕ ಏಕಶಿಲಾ ಪ್ರತಿಮೆಗಳು ರಚನೆಯಾಗುತ್ತಿದ್ದರೂ ಶ್ರವಣಬೆಳಗೊಳದ ಗೊಮ್ಮಟನ ನೂರಾರು ವರ್ಷದ ಇತಿಹಾಸಕ್ಕೆ ಅದ್ಯಾವುದೂ ಸಮವಾಗಲಾರದು. ಶ್ರವಣಬೆಳಗೊಳದ ಬಾಹುಬಲಿ - ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಆಯ್ಕೆಯಾಗಲು ಈ ಪ್ರತಿಮೆ ಜಗತ್ತಿನಾದ್ಯಂತ ಪ್ರಸಿದ್ಧ ಎನ್ನುವುದಷ್ಟೇ ಕಾರಣವಲ್ಲ. ಈ ಪ್ರತಿಮೆ ಕನ್ನಡನಾಡಿನ ಸಮರ-ಶಾಂತಿ ತತ್ವದ ಪ್ರಾತಿನಿಧಿಕ ಕುರುಹು. ಭರತ-ಬಾಹುಬಲಿಯ ಕಥೆಯನ್ನೊಮ್ಮೆ ಅವಲೋಕಿಸಿ. ನಾವು ಕನ್ನಡಿಗರೂ ಅಷ್ಟೇ ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ. ನಮ್ಮ ಅಪಾರ ಶಕ್ತಿ ಸಾಮರ್ಥ್ಯ ಯಾರ ಮೇಲೋ ದಬ್ಬಾಳಿಕೆ ನಡೆಸಲು ಅಲ್ಲ. ಭರತನಂತೆ ಯಾರಾದರೂ ನಮ್ಮ ಮೇಲೆ ಹೋರಾಟಕ್ಕೆ ಇಳಿದಾಗ ಬಾಹುಬಲಿಯಾಗಿ ಅವರನ್ನು ಹೊಸಕಿ ಹಾಕುವುದು ನಮಗೆ ಕಷ್ಟವಲ್ಲ. ಆದರೂ ನಮ್ಮಷ್ಟಕ್ಕೆ ನಾವು ಗೊಮ್ಮಟನಂತೆ ಶಾಂತಿ ಪ್ರಿಯರು. ನಮ್ಮ ಈ "ಸಮರಕ್ಕೂ ಸಿದ್ಧ, ಶಾಂತಿಗೂ ಬದ್ಧ" ತತ್ವದ ಪ್ರಾತಿನಿಧಿಕ ಅದ್ಭುತವೇ ಶ್ರವಣಬೆಳಗೊಳದ ಗೊಮ್ಮಟೇಶ್ವರ. ಅಷ್ಟೇ ಅಲ್ಲ, ಜಗತ್ತಿಗೆ ಅನೇಕ ತತ್ವಾದರ್ಶಗಳನ್ನು ನೀಡಿದ ಕನಕ, ಪುರಂದರ, ಬಸವ, ಮಧ್ವ, ಶಿಶುನಾಳ ಶರೀಫ ಮುಂತಾದ ಎಲ್ಲ ಕನ್ನಡನಾಡಿನ ಮಹನೀಯರ ತಾತ್ವಿಕ ಪ್ರತಿನಿಧಿಯೂ ಹೌದು ಈ ಅದ್ಭುತ.


5. ಮೈಸೂರು ಅರಮನೆ (ರಾಜಪರಂಪರಾ ಅದ್ಭುತ)

ಭಾರತದ ಅತ್ಯಂತ ಸುಂದರ ಅರಮನೆಗಳಲ್ಲಿ ಒಂದು ಮೈಸೂರಿನ ಅರಮನೆ ಎಂದೇ ಖ್ಯಾತವಾದ ಮೈಸೂರಿನ ಅಂಬಾವಿಲಾಸ ಅರಮನೆ. ಕರ್ನಾಟಕದ ಗತವೈಭವವನ್ನು ಭವ್ಯವಾಗಿ ಬಿಂಬಿಸುವ ಈ ಅರಮನೆ ದೀಪಾಲಂಕಾರಗೊಂಡಾಗಲಂತೂ ಬಂಗಾರದ ಅರಮನೆಯಂತೆಯೇ ಭಾಸವಾಗುತ್ತದೆ. ತಾಜ್ ಮಹಲಿನಷ್ಟೇ ಪ್ರವಾಸಿಗರನ್ನು ಸೆಳೆಯುವ ಈ ಅರಮನೆ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯೂ ಹೌದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇಷ್ಟೇ ಕಾರಣವಲ್ಲ. ಸುಮಾರು 400 ವರ್ಷಗಳ ಇತಿಹಾಸ ಇರುವ ರಾಜಪರಂಪರೆಯ ಮೈಸೂರು ದಸರಾ ಹಬ್ಬ ಇಂದಿಗೂ ಸಜೀವ ಸಂಸ್ಕೃತಿಯಾಗಿ ವಿಜ್ರಂಭಣೆಯಿಂದ ಆಚರಣೆಯಾಗುತ್ತಿದೆ. ಅಲ್ಲದೆ, ಮೈಸೂರಿನ ಒಡೆಯರು, ಅಭಿವೃದ್ಧಿ, ಆಧುನಿಕತೆ, ಆಡಳಿತದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅಣೆಕಟ್ಟೆ, ನೀರಾವರಿ, ವಿದ್ಯುತ್, ಬೀದಿದೀಪ, ಚಿನ್ನದ ಗಣಿ, ರೈಲ್ವೆಯಂತಹ ಅನೇಕ ಪ್ರಗತಿಪರ ಕೈಂಕರ್ಯದಲ್ಲಿ ಅಗ್ರಗಣ್ಯರಾಗಿದ್ದ ಮೈಸೂರು ಅರಸರು ದೇಶದ ಸ್ವಾತಂತ್ರ್ಯಕ್ಕೂ ಮುನ್ನವೇ ಪ್ರಜಾಪ್ರತಿನಿಧಿ ಸಭೆಯನ್ನೂ ನಡೆಸಿ ದೇಶಕ್ಕೇ ಮಾದರಿಯಾಗಿದ್ದರು. ಕರ್ನಾಟಕದಲ್ಲಿ ವಿಜಯನಗರ ಅರಸರು, ಕದಂಬರು, ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು... ಹೀಗೆ ಅನೇಕ ಹಿರಿ-ಕಿರಿಯ ಸಂಸ್ಥಾನಗಳ ಶ್ರೇಷ್ಠ ರಾಜಪರಂಪರೆಯಿದೆ. ಈ ಎಲ್ಲ ರಾಜ-ರಾಣಿಯರ ಕೊಡುಗೆ, ದಿಟ್ಟ, ಭವ್ಯ ಪರಂಪರೆಯ ಪ್ರಾತಿನಿಧಿಕ ಅದ್ಭುತವೇ ಮೈಸೂರು ಅರಮನೆ.


6. ಜೋಗ ಜಲಪಾತ (ನೈಸರ್ಗಿಕ ಅದ್ಭುತ - ನೆಲ)

ಭಾರತದ ಅತ್ಯಂತ ಸುಂದರ ಹಾಗೂ ಬೃಹತ್ ಜಲಪಾತಗಳಲ್ಲಿ ಜೋಗ ಜಲಪಾತ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. 830 ಅಡಿ ಎತ್ತರದಿಂದ ಧುಮುಕುವ ಜೋಗ ಜಲಪಾತ ಮಳೆಗಾಲದಲ್ಲಂತೂ ನೀರಿನಿಂದ ತುಂಬಿ ರಾಜಗಾಂಭೀರ್ಯವನ್ನು ಪಡೆಯುತ್ತದೆ. ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಜೋಗ ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಪ್ರಮುಖ ಆಕರ್ಷಣೆಯಲ್ಲಿ ಒಂದು. ಕರ್ನಾಟಕದ 7 ಅದ್ಭುತಗಳಲ್ಲಿ ಒಂದಾಗಿ ಇದು ಆಯ್ಕೆಯಾಗಲು ಇವಿಷ್ಟೇ ಕಾರಣವಲ್ಲ. ಜೀವವೈವಿಧ್ಯಗಳಿಂದ ಶ್ರೀಮಂತವಾಗಿರುವ ಪಶ್ಚಿಮ ಘಟ್ಟಗಳು ಭೂಮಿಯ ಅತಿ ಅಪರೂಪದ ಕಾಡುಗಳಲ್ಲಿ ಒಂದು. ಅಂತಹ ಅದ್ಭುತ ನಿಸರ್ಗದಲ್ಲಿರುವ ಜೋಗದ ಪರಿಸರಲ್ಲಿ ಕರ್ನಾಟಕದ ಅಪರೂಪದ ಸಸ್ಯ ಹಾಗೂ ಪ್ರಾಣಿಸಂಕುಲಗಳೂ ಇವೆ. ಶೋಲಾ ಕಾಡುಗಳಿಂದ ಹಿಡಿದು ದಟ್ಟ ನಿತ್ಯಹರಿದ್ವರ್ಣ ಕಾಡುಗಳವರೆಗೆ ಕರ್ನಾಟಕದಲ್ಲಿ 6 ವೈವಿಧ್ಯ ಕಾಡುಗಳಿವೆ. ನಾಗರಹೊಳೆ, ದಾಂಡೇಲಿಯಂಥ ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. ಕುದುರೆಮುಖ, ಕೊಡಗು, ಕೊಡಚಾದ್ರಿಯಂಥ ಹಸಿರು ಗಿರಿಧಾಮಗಳಿವೆ. ಶರಾವತಿಯಲ್ಲದೆ ಕಾವೇರಿ, ಕೃಷ್ಣೆ, ತುಂಗಭದ್ರಾದಂಥ ಅನೇಕ ಹಿರಿ-ಕಿರಿಯ ನದಿಗಳಿವೆ. ಹೆಬ್ಬೆ, ಗೋಕಾಕ್ ಫಾಲ್ಸ್, ಗಗನಚುಕ್ಕಿ, ಭರಚುಕ್ಕಿ, ಉಂಚಳ್ಳಿಯಂಥ ಹಲವಾರು ಸುಂದರ ಜಲಪಾತಗಳಿವೆ. ಈ ಎಲ್ಲ ಕರ್ನಾಟಕದ ನೆಲದ ಸೌಂದರ್ಯ ಮತ್ತು ಮಹತ್ವಗಳ ಪ್ರಾತಿನಿಧಿಕ ಅದ್ಭುತವೇ ಜೋಗ ಜಲಪಾತ.


7. ನೇತ್ರಾಣಿ ದ್ವೀಪ (ನೈಸರ್ಗಿಕ ಅದ್ಭುತ - ಜಲ) 
ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ. ಕರ್ನಾಟಕದ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ಸ್ಕೂಬಾ ಡೈವಿಂಗ್ ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ಅಂಡಮಾನ್ ದ್ವೀಪ. ನೇತ್ರಾಣಿ ದ್ವೀಪದ ಕಡಲ ಗರ್ಭದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. ಅಪರೂಪದ ಜಲಚರಗಳಿವೆ. ಸಾಗರ ಸಸ್ಯಗಳಿವೆ. ಇನ್ನೊಂದು ಗಮನೀಯ ವಿಚಾರ ಎಂದರೆ, ದೇಶದ ಎಲ್ಲ ರಾಜ್ಯಗಳಿಗೂ ಸಮುದ್ರ ಸೌಂದರ್ಯವಿಲ್ಲ. ಆದರೆ, ಕರ್ನಾಟಕದಲ್ಲಿ 310 ಕಿ.ಮೀ.ಯಷ್ಟು ಅದ್ಭುತ ಸಮುದ್ರ ಕಿನಾರೆಯಿದೆ. ನೇತ್ರಾಣಿ ಬಳಿ ಇರುವ ಮುರುಡೇಶ್ವರ ಈಗಾಗಲೇ ಕರ್ನಾಟಕದ ಪ್ರವಾಸೋದ್ಯಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ರಾಜ್ಯದ ಸಾಗರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಹೇರಳ ಅವಕಾಶಗಳನ್ನು ಹೊಂದಿದೆ. ಇದರಿಂದ ಕರ್ನಾಟಕದ ಎಲ್ಲ ಸಮುದ್ರ ಕಿನಾರೆಗಳ ಪ್ರಾತಿನಿಧಿಕ ಅದ್ಭುತವೇ ನೇತ್ರಾಣಿ ದ್ವೀಪದ ಕಡಲಗರ್ಭ.

ಶಿಕ್ಷಕರಿಗಾಗಿ 'ಶಿಕ್ಷಕ ಮಿತ್ರ ಆ್ಯಪ್‌' | Shiksha Mitra App

ಶಿಕ್ಷಕರಿಗಾಗಿ 'ಶಿಕ್ಷಕ ಮಿತ್ರ ಆ್ಯಪ್‌' | Shiksha Mitra App

                    ಶಿಕ್ಷಕರಿಗೆ ತಮ್ಮ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಸಹಾಯ ಮಾಡಲು ಮತ್ತು ಅವರ ಕೆಲಸದ ಹೊರೆ ಕಡಿಮೆ ಮಾಡಲು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ 2019-20ರ ಆಯವ್ಯಯದಲ್ಲಿ ಪ್ರಕಟಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆ್ಯಪ್‌ ತಯಾರಿಸಲಾಗಿದೆ.

                ಶಿಕ್ಷಕರು ಮೊಬೈಲ್‍ನಲ್ಲಿ ಈ ಆ್ಯಪ್‌ ಅನ್ನು ಡೌನ್‍ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಅಲ್ಲದೆ,ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನಗಳಲ್ಲಿ ಬಗೆಹರಿಸುವ ಬಗ್ಗೆ ಕಾಲಾವಧಿಯನ್ನೂ ನಿರ್ಧರಿಸಲಾಗಿದೆ.

ಶಿಕ್ಷಕರ ಮಿತ್ರ ಆ್ಯಪ್‌ ನಲ್ಲಿ ಶಿಕ್ಷಕರಿಗಾಗಿ ಸೇವೆಗಳು :

  1. ರಜಾ ಅರ್ಜಿ.
  2. ನಿಯಮ 32 ಮತ್ತು ನಿಯಮ 68 ರ ಅಡಿಯಲ್ಲಿ ಶುಲ್ಕ ಭತ್ಯೆ ಮಂಜೂರಾತಿ.
  3. ದೈಹಿಕ ಅಂಗವಿಕಲ ಭತ್ಯೆಯ ಮಂಜೂರಾತಿ.
  4. ಸಣ್ಣ ಕುಟುಂಬ ನಿಯಮಗಳ ಭತ್ಯೆಯ ಮಂಜೂರಾತಿ.
  5. ಮುಂಗಡಗಳನ್ನು ಪಡೆಯಲು ಅನುಮತಿ, ಭಾಗಶಃ ಹಿಂತೆಗೆದುಕೊಳ್ಳುವಿಕೆ ಅಥವಾ ಸಾಮಾನ್ಯ ಭವಿಷ್ಯ ನಿಧಿಯ ಅಂತಿಮ ಇತ್ಯರ್ಥ.
  6. ಹಬ್ಮುಂಬದ ಮುಂಗಡವನ್ನು ಪಡೆಯಲು ಅನುಮತಿ.
  7. ನಿಯಮ 247A/248/252B/224A ಅಡಿಯಲ್ಲಿ ಪಿಂಚಣಿ ಪ್ರಯೋಜನಗಳಿಗಾಗಿ ಉದ್ಯೋಗಿ ಅರ್ಹತಾ ಸೇವೆ.
  8. ಇತರೆ ಹುದ್ದೆಗೆ ಅರ್ಜಿ ಸಲ್ಲಿಸಲು ಅನುಮತಿ.
  9. ಉನ್ನತ ಶಿಕ್ಷಣ ಪಡೆಯಲು ಅನುಮತಿ.
  10. ಮನೆ ನಿರ್ಮಿಸಲು ಅಥವಾ ನಿವೇಶನ/ಮನೆ/ವಾಹನ ಅಥವಾ ಇತರೆ ಯಾವುದೇ ಚರ ಅಥವಾ ಸ್ಥಿರ ಆಸ್ತಿಗಳನ್ನು ಖರೀದಿಸಲು ಅನುಮತಿ.
  11. ಉದ್ಯೋಗಿ ಸಂಖ್ಯೆ - ಪಾಸ್‌ಪೋರ್ಟ್ ಮಾಡ್ಯೂಲ್‌ಗೆ ಅರ್ಜಿ ಸಲ್ಲಿಸಲು ಆಕ್ಷೇಪಣೆ ಪ್ರಮಾಣಪತ್ರ.
  12. ವಿದೇಶಿ ಪ್ರವಾಸ ಕೈಗೊಳ್ಳಲು ಅನುಮತಿ

  1. ಶಿಕ್ಷಕರ ವರ್ಗಾವಣೆ ಅರ್ಜಿಯನ್ನು ಕೂಡ ಈ ಆ್ಯಪ್‌ ನಲ್ಲಿಯೇ ಸಲ್ಲಿಸಬಹುದಾಗಿದೆ.



Click For ಶಿಕ್ಷಕ ಮಿತ್ರ Website


ಶಿಕ್ಷಕಮಿತ್ರ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ನಂತರ ನೀವು ಮಾಡಬೇಕಾದದ್ದು
  1. ಮೊದಲು ನಿಮ್ಮ ಕೆ.ಜಿ.ಐ.ಡಿ ನಮೂದಿಸಿ.
  2. ರಿಜಿಸ್ಟರ್ ನ ಮೇಲೆ ಕ್ಲಿಕ್ ಮಾಡಿ.
  3. ಬಂದ ಒ.ಟಿ.ಪಿ ನಮೂದಿಸಿ.
  4. ನಂತರ ಪಾಸ್ವರ್ಡ ಸೆಟ್ ಮಾಡಿಕೊಳ್ಳಿ. (ಪಾಸ್ವರ್ಡ ಕನಿಷ್ಠ ಎಂಟು ಅಕ್ಷರ ಹೊಂದಿರಬೇಕು ಅದರಲ್ಲಿ ಒಂದು ಕ್ಯಾಪಿಟಲ್ ಅಕ್ಷರ ಒಂದು ಸಂಖ್ಯೆ ಒಂದು ಸ್ಪೆಷಲ್ ಕ್ಯಾರೆಕ್ಟರ್ ಹೊಂದಿರಬೇಕು)
  5. ನಂತರ KGID Number ಹಾಗೂ PASSWORD ಹಾಕಿದಾಗ ನಿಮ್ಮ ಮಾಹಿತಿ ತೆರೆದುಕೊಳ್ಳುತ್ತದೆ.
  6.  ನಿಮ್ಮ ಭಾವ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ.

ಸರ್ ಸಿ.ವಿ.ರಾಮನ್ ಜೀವನ ಮತ್ತು ಸಾಧನೆ | Sir C. V. Raman Life and Achievement

ಸರ್  ಸಿ.ವಿ.ರಾಮನ್ ಜೀವನ ಮತ್ತು ಸಾಧನೆ | Sir C. V. Raman Life and Achievement

               ಸರ್ ಚಂದ್ರಶೇಖರ ವೆಂಕಟ ರಾಮನ್ ಅವರು ಭಾರತದ ಮಹಾನ್ ವಿಜ್ಞಾನಿ, ಅವರ ಕಠಿಣ ಪರಿಶ್ರಮ ಮತ್ತು ಸಂಕಲ್ಪವು ಭಾರತವನ್ನು ಹೆಮ್ಮೆಪಡುವಂತೆ ಮಾಡಿತು. ವಿಜ್ಞಾನದಲ್ಲಿ ಅವರ ಆಸಕ್ತಿ ಮತ್ತು ಸಂಶೋಧನಾ ಕಾರ್ಯದ ಮೇಲಿನ ಸಮರ್ಪಣೆಯು ಅವರನ್ನು "ರಾಮನ್ ಪರಿಣಾಮ"ವನ್ನು ಕಂಡುಹಿಡಿಯುವಂತೆ ಮಾಡಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಸಾ.ಶ 1930 ರಲ್ಲಿ ಈ ನೊಬೆಲ್ ಪ್ರಶಸ್ತಿ ಪುರಸ್ಕೃತರಾದರು.

              ವಿಜ್ಞಾನದ ಎಂಬುದು ಕೇವಲ ಪಾಶ್ಚತ್ಯ ದೇಶದವರಿಗೆ ಸೀಮಿತವಾಗಿದ್ದ ಕಾಲದಲ್ಲಿ ಕೇವಲ ಇನ್ನೂರು ರೂಪಾಯಿಗಳ ವೆಚ್ಚದಲ್ಲಿ ತಾನೇ ಅಳವಡಿಸಿಕೊಂಡ ಉಪಕರಣಗಳ ಸಾಹಯದಿಂದ 1928 ಫೇಬ್ರುವರಿ 28 ರಂದು ಇಡಿ ವಿಶ್ವವು ಬೆರಗಾಗುವಂತೆ "ರಾಮನ್ ಪರಿಣಾಮ" ಸಂಶೋಧನೆಯನ್ನು ಜಗತ್ತಿಗೆ ಪರಿಚಯಿಸಿದ ದಿನ. ಈ ದಿನ ಭಾರತದ ವೈಜ್ಞಾನಿಕ ಕ್ಷೇತ್ರದಲ್ಲಿ ಸುವರ್ಣಕ್ಷರಗಳಲ್ಲಿ ಬರೆದಿಡಬೇಕಾದ ದಿನ ನಿರ್ದಿಷ್ಟ ತರಂಗಾಂತರದ ಬೆಳಕಿನ ಕಿರಣಗಳನ್ನು ರಾಮನ್ ಗಮನಿಸಿದರು. ಈ ಅಸಂಗತ ಚದುರುವಿಕೆ ಎಂದು ಕರೆಯಲ್ಪಡುವ ವಿದ್ಯಮಾನ "ರಾಮನ್ ಪರಿಣಾಮ" ಎಂದು ಪ್ರಖ್ಯಾತವಾಯಿತು.  


ಬಾಲ್ಯ ಜೀವನ ಮತ್ತು ಕುಟುಂಬ :

ಸರ್  ಸಿ. ವಿ. ರಾಮನ್ ಅವರು ಜನಿಸಿದ್ದು 1888 ನವೆಂಬರ್ 7ರಂದು ತಮಿಳುನಾಡಿನ ತಿರುಚನಪಳ್ಳಿಯಲ್ಲಿ. ಇವರು ಬಾಲ್ಯದಿಂದಲೂ ಬುದ್ಧಿವಂತ ಮತ್ತು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅವರ ತಂದೆ ಚಂದ್ರಶೇಖರ ಅಯ್ಯರ್ ಶಾಲಾ ಉಪಧ್ಯಾಯರು ರಾಮನ್ ತಮ್ಮ ತಂದೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎಫ್.ಎ (ಇಂದಿನ ಪಿ.ಯು.ಸಿ) ಪರೀಕ್ಷೆ ಮುಗಿಸಿ ಮದರಾಸಿಗೆ ಬಂದು ಪ್ರಸಿಡೇನ್ಸಿ ಕಾಲೇಜಿನಲ್ಲಿ ಬಿ.ಎ. ತರಗತಿ ಸೇರಿದರು. ಇವರು ಎಫ್.ಎ. ಮುಗಿಸಿ ಬಿ.ಎ. ತರಗತಿ ಸೇರಿದಾಗ ಕೇವಲ 14 ವರ್ಷಗಳು, ಎಮ್.ಎ. ಡಿಗ್ರಿಯನ್ನು ಪ್ರಥಮ ಸ್ಥಾನ ಪಡೆದುದಲ್ಲದೆ ವಿದ್ಯಾರ್ಥಿಯಾಗಿರುವಾಗಲೇ ಒಂದು ಸಂಶೋಧನ ಪ್ರಬಂಧವನ್ನು ಬರೆದು ಲಂಡನ್ನಿನ ಫಿಲಾಸಫಿಕಲ್  ಮ್ಯಾಗಜೀನ್ ನಲ್ಲಿ ಪ್ರಕಟಿಸಿದರು ಆಗ ಅವರಿಗೆ ಕೇವಲ 19 ವರ್ಷಗಳಾಗಿದ್ದವು.
           ಸಾ.ಶ 1907 ರಲ್ಲಿ ಸರ್ ಸಿ. ವಿ. ರಾಮನ್ ಅವರು ಲೋಕಸುಂದರಿ ಅಮ್ಮಾಳ್ ಅವರನ್ನು ವಿವಾಹವಾದರು ಮತ್ತು ಚಂದ್ರಶೇಖರ್ ಮತ್ತು ರಾಧಾಕೃಷ್ಣನ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದರು.

ಸಂಶೋಧನೆಗೆ "ಇಂಡಿಯನ್ ಅಸೋಸಿಯೇಷನ್ ​​ಫಾರ್ ಕಲ್ಟಿವೇಶನ್ ಅಂಡ್ ಸೈನ್ಸ್" ಪ್ರೇರಣೆ :

ಅವರ ತಂದೆಯ ಆಸಕ್ತಿಯಿಂದಾಗಿ, ಅವರು ಹಣಕಾಸು ನಾಗರಿಕ ಸೇವೆಗಳ (ಎಫ್‌ಸಿಎಸ್) ಪರೀಕ್ಷೆಗೆ ಹಾಜರಾಗಿ ಅಗ್ರಸ್ಥಾನ ಪಡೆದರು. 1907 ರಲ್ಲಿ, ಅವರು ಕಲ್ಕತ್ತಾಗೆ ಹೋದರು ಮತ್ತು ಸಹಾಯಕ ಅಕೌಂಟೆಂಟ್ ಜನರಲ್ ಆಗಿ ಸೇವೆಗೆ ಸೇರಿದರು. ಒಂದ ಸಂಜೆ ಕಛೇರಿಯಿಂದ ಮನೆಗೆ ಹಿಂದುರುಗುತ್ತಿದ್ದಾಗ ಇಂಡಿಯನ್ ಅಸೋಸಿಷಿಯನ್ ಪಾರ್ ಕಲ್ಟಿವೇಶನ್ ಆಫ್ ಸೈನ್ಸ್ ಎಂಬ ಬೋರ್ಡ ಅವರ ಕಣ್ಣಿಗೆ ಬಿದ್ದಿತ್ತು, ಇದು ಅವರ ಮುಂದಿನ ಜೀವನದ ಹಾದಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಅಲ್ಲಿ ಹೋಗಿ ವಿಚಾರಿಸಿದಾಗ ಸಂಜೆಯ ವೇಳೆಯಲ್ಲಿ ಅಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ಅವಕಾಶವಿದೆ ಎಂದು ತಿಳಿಯಿತು. ವಿಜ್ಞಾನದಲ್ಲಿ ಅವರಿಗಿದ್ದ ಅದಮ್ಯ ಆಸಕ್ತಿಯ ಕಾರಣ ಅವರು ಮರುದಿನದಿಂದ ಬಿಡುವಿನ ಕಾಲದ ವಿಜ್ಞಾನದ ಸಂಶೋಧಕರಾದರು. 14 ವರ್ಷಗಳಲ್ಲಿ ಅವರು ಹಾಗೆ ನಡೆಸಿದ ಸಂಶೋಧನೆಯಿಂದ ವಿಜ್ಞಾನ ಪ್ರಪಂಚದ ಗಮನ ಸೆಳೆದರು. 1917 ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿ ಅಶುತೋಷ ಮುಖರ್ಜಿ ರವರು ನೀಡಿದ ಆಹ್ವಾನವನ್ನು ಅಂಗೀಕರಿಸಿ ಪ್ರಾಧ್ಯಾಪಕರಾದರು. ಭಾರಿ ವೇತನದ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.

ಸಮುದ್ರದ ನೀಲಿ ಬಣ್ಣ ಕ್ಕೆ ಕಾರಣ ಸಂಶೋಧನೆ:

            ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್‌ ಅವರಿಗೆ ಸಮುದ್ರದ ನೀರು ಏಕೆ ಯಾವಾಗಲೂ ನೀಲಿಯಾಗಿ ಕಾಣಿಸುತ್ತದೆ? ಎಂಬ ಪ್ರಶ್ನೆ ಎದುರಾಯಿತಂತೆ, ಸೂರ್ಯನ ಬೆಳಕು ನೀರಿನಲ್ಲಿ ಚದುರಿ ಹೋಗುವುದರಿಂದ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು.

ರಾಮನ್ ಪರಿಣಾಮದ ಸಂಶೋಧನೆ :

            ಅನಿಲದ ಅಥವಾ ದ್ರಾವಣದ ಅಣುಗಳ ಮೇಲೆ ಬೀಳುವ ಬೆಳಕಿನ ಕಿರಣಗಳು ಚದುರಿತ್ತವೆ ಈ ಬಗೆಯ ಚದರುವಿಕೆಯನ್ನು ಕ್ಯಾಲೆ ಚದರಿಕೆ ಎಂದು ಹೆಸರು, ಆದರೆ ಈ ಬಗೆಯ ಕ್ಯಾಲೆ ಚದರಿಕೆಗೆ ಒಳಗಾಗುವುದಾದರು ಅದರ ಸ್ವಲ್ಪ ಭಾಗ ಮಾತ್ರ ಬೇರೊಂದು ಬಗೆಯ ಚದುರುವಿಕೆಗೆ ಒಳಗಾಗುತ್ತದೆ. ಈ ಎರಡನೆಯ ಬಗೆಯ ಚದರಿಸುವಾಗ ಆ ಬೆಳಕಿನ ಕಿರಣಗಳು ಬಣ್ಣ ಬದಲಾಯಿಸುವುದನ್ನು ನಿರೀಕ್ಷಿಸಿದ್ದರು. ಅದನ್ನು ಯಾರು ಕಂಡಿರಲಿಲ್ಲ. ಏಕೆಂದರೆ ಅಣುಗಳ ಮೇಲೆ ಬೀಳುವ ಬೆಳಕಿನ ಅತ್ಯಲ್ಪ ಭಾಗ ಮಾತ್ರ ಈ ಬಗೆಯ ಚದರುವಿಕೆಗೆ ಒಳಗಾಗುವ ಕಾರಣ, ಚದರಿದ ಆ ಬೇರೆ ಬಣ್ಣದ ಬೆಳಕು ಮಸಕಾಗಿದ್ದು ಅದನ್ನು ಗುರುತಿಸುವುದು ತುಂಬ ಕಷ್ಟ. ತಕ್ಕ ಸಲಕರಣೆಯನ್ನು ಜೋಡಿಸಿಕೊಂಡು ಪ್ರಯೋಗ ಮಾಡಿ, ಅಣುಗಳ ಚದರಿಸುವ ಬೆಳಕಿನ ಬಣ್ಣದಲ್ಲಾಗುವ ಆ ಬದಲಾವಣೆಯನ್ನು ಮೊಟ್ಟ ಮೊದಲ ಬಾರಿಗೆ 1928 ರಲ್ಲಿ ತೋರಿಸಿದರು.

ಹೊಸ ರಾಸಾಯನಿಕ ಸಂಯುಕ್ತಗಳ ರಚನೆಗೆ ನಾಂದಿ :

      ರಾಮನ್‌ ಪರಿಣಾಮದಿಂದ ವಸ್ತುವಿನ ರಚನೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ರಾಮನ್ ಪರಿಣಾಮದ ಕುರಿತು ಬೇರೆ ಬೇರೆ ದೇಶದ ವಿಜ್ಞಾನಿಗಳು ಬರೆದ 1800 ಪ್ರೌಢ ಪ್ರಬಂಧಗಳು ಪ್ರಕಟವಾದವು ಮತ್ತು ಅದೇ ಅವಧಿಯಲ್ಲಿ ಸಾವಿರಾರು ರಾಸಾಯನಿಕ ಸಂಯುಕ್ತಗಳ ರಚನೆಯನ್ನು ಹಾಗೂ ಕೃತಕವಾಗಿ ರಾಸಾಯನಿಕ ಪದಾರ್ಥ ತಯಾರಿಸುವ ಪ್ರಯತ್ನಕ್ಕೆ ನಾಂದಿ ಹಾಡಲಾಯಿತು.

          ಭೌತಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊದಲ ವಿಜ್ಞಾನಿ ಸರ್ ಸಿ.ವಿ ರಾಮನ್, ಅವರ ಮಿತಿಯಿಲ್ಲದ ಕುತೂಹಲ ಮತ್ತು ವಿಜ್ಞಾನದ ಮೇಲಿನ ಶ್ರದ್ಧೆ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಗೆ ಆಡಿಪಾಯ ಹಾಕಿತು. 300 ಜೀವನದಲ್ಲಿ ನಡೆದ ಮೂರು ಘಟನೆಗಳಲ್ಲಿನ ಮೌಲ್ಯವನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ರಾಮನ್ ರವರು ಪಡೆದ ಪ್ರಶಸ್ತಿಗಳು

  • ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (1924)
  • ನೈಟ್‌ ಹುಡ್‌ ಪ್ರಶಸ್ತಿ (1929) 
  • ನೊಬೆಲ್‌ ಪ್ರಶಸ್ತಿ (1930)
  • ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (1935)
  • ಭಾರತ ರತ್ನ ಪ್ರಶಸ್ತಿ (1954)

  • ಲೆನಿನ್‌ ಶಾಂತಿ ಪ್ರಶಸ್ತಿ (1957)

ಮರಣ :

1970 ರಲ್ಲಿ, ಅವರು ಪ್ರಯೋಗಾಲಯದಲ್ಲಿ ಕೆಲಸ ಮಾಡುವಾಗ ದೊಡ್ಡ ಹೃದಯಾಘಾತವನ್ನು ಪಡೆದರು. ಅವರು ನವೆಂಬರ್ 21, 1970 ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು.

ಸರ್ ಸಿ. ವಿ. ರಾಮನ್ ಜೀವನದ ಕೆಲ ಘಟನೆಗಳು 

ಘಟನೆ-1:

ಯಾರು ತನ್ನ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾರೋ ಅವರು ಮಹಾನ್ ಜ್ಞಾನಿಗಳಾಗಿರುತ್ತಾರೆ. ಇದಕ್ಕೆ ಒಂದು ಉದಾಹರಣೆ, ಹೆಸರಾಂತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರು. ಧಾರವಾಡದ ಆಕಾಶವಾಣಿಯ ಕಾರ್ಯಕ್ರಮಾಧಿಕಾರಿಗಳಾದ ಹೆಚ್.ಕೆ ರಂಗನಾಥ್ ಅವರು, ರಾಮನ್ ಅವರಿಗೆ ಹತ್ತು ನಿಮಿಷದ ಒಂದು ಉಪನ್ಯಾಸವನ್ನು ನೀಡಲು ಮನವಿ ಮಾಡುತ್ತಾರೆ, ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ರಾಮನ್ ಅವರು ಹೂವಿನ ಬಣ್ಣಗಳ ಬಗ್ಗೆ ಮಾತನಾಡುತ್ತೇನೆಂದು ತಿಳಿಸುತ್ತಾರೆ. ರಂಗನಾಥ್ ಅವರು, ಇನ್ನು ಹತ್ತು ನಿಮಿಷಕ್ಕೆ ಸರಿಯಾಗಿ ರಾಷ್ಟ್ರೀಯ ವಾರ್ತೆಗಳು ಆರಂಭಗೊಳ್ಳುತ್ತದೆ ಆದ್ದರಿಂದ ಕೇವಲ ಹತ್ತು ನಿಮಿಷದಲ್ಲಿ ಉಪನ್ಯಾಸವನ್ನು ಮುಗಿಸುವಂತೆ ಮನವಿ ಮಾಡುತ್ತಾರೆ ಮತ್ತು ಒಂಭತ್ತು ನಿಮಿಷದ ನಂತರ ಒಂದು ಸಹ್ನೆಯನ್ನು ಮಾಡುವೆನೆಂದು ತಿಳಿಸುತ್ತಾರೆ. ಇದಕ್ಕೆ ಒಪ್ಪಿದ ರಾಮನ್, ರೆಕಾರ್ಡಿಂಗ್ ರೂಮ್‌ನಲ್ಲಿ ತಮ್ಮ ಪೇಟವನ್ನು ಬಿಚ್ಚಿಟ್ಟು `My dear listeners" ಎಂದು ಉಪನ್ಯಾಸ ಪ್ರಾರಂಭಿಸುತ್ತಾರೆ. ಹೂವುಗಳಿಗೆ ಬಣ್ಣ ಹೇಗೆ ಬರುತ್ತದೆ? ಎಂದು, ಸಣ್ಣ ಮಕ್ಕಳಿಗೂ ಅರ್ಥವಾಗುವಂತೆ ವಿವರಿಸುತ್ತಾ, ಕಣ್ಣು ಮುಚ್ಚಿ ಉಪನ್ಯಾಸವನ್ನು ಮುಂದುವರಿಸುತ್ತಾರೆ. ಏಳು ನಿಮಿಷಗಳು ಕಳೆದರೂ, ಉಪನ್ಯಾಸವನ್ನು ಮುಂದುವರಿಸಿದ ರಾಮನ್, ಕಣ್ಣನ್ನು ತೆಗೆಯದೆ ವಿವಿಧ ವಿವರಣೆಗಳನ್ನು ನೀಡುತ್ತಾ ಉಪನ್ಯಾಸದಲ್ಲಿ ಮಗ್ನರಾಗುತ್ತಾರೆ. ಇತ್ತ ರಂಗನಾಥ್‌ ರವರಿಗೆ ಭಯ ಪ್ರಾರಂಭವಾಗುತ್ತದೆ, ಈಗಾಗಲೆ ಎಂಟು ನಿಮಿಷವಾಗಿದೆ. ಹತ್ತು ನಿಮಿಷಕ್ಕೆ ಮುಕ್ತಾಯವಾಗ ಬೇಕು, ಇಲ್ಲವಾದರೆ ರಾಮನ್‌ ಅವರ ಉಪನ್ಯಾಸ ಪ್ರಸಾರವು ರದ್ದಾಗಿ, ರಾಷ್ಟ್ರೀಯ ವಾರ್ತೆ ಪ್ರಸಾರವಾಗುತ್ತದೆ ಮತ್ತು ಶೋತೃಗಳು ರಾಮನ್‌ ಅವರ ಉಪನ್ಯಾಸ ನಿಲ್ಲಿಸಿದ್ದಕ್ಕೆ ತುಂಬಾ ಕೋಪ ಮಾಡಿಕೊಳ್ಳುತ್ತಾರೆ ಎಂದು ಆತಂಕದಲ್ಲಿರುತ್ತಾರೆ. ಒಳಗೆ ರೆಕಾರ್ಡಿಂಗ್ ರೂಂಗೆ ಹೋಗಿ ಅವರನ್ನು ಎಚ್ಚರಿಸಿದರೆ, ಎಲ್ಲಿ ರಾಮನ್ ಅವರು ಕೋಪ ಮಾಡಿಕೊಳ್ಳುತ್ತಾರೋ ಎಂಬ ಭಯ. ಈ ಗೊಂದಲದಲ್ಲಿ ಒಂಭತ್ತು ನಿಮಿಷ ಕಳೆದೇ ಹೋಗುತ್ತದೆ. ರಾಮನ್ ಮಾತ್ರ ಯಾವುದೇ ಯೋಚನೆ ಇಲ್ಲದೆ ತಮ್ಮ ಉಪನ್ಯಾಸವನ್ನು ಕಣ್ಣು ಮುಚ್ಚಿ ಮುಂದುವರಿಸುತ್ತಾರೆ.

ಒಂಭತ್ತುವರೆ ನಿಮಿಷವು ಆಗಿಹೋಗುತ್ತದೆ, ಬೇರೆ ವಿಧಿಯಲ್ಲದೆ ರಂಗನಾಥ್ ರವರು ರೆಕಾರ್ಡಿಂಗ್ ರೂಮ್‌ಗೆ ಹೋಗಿ ಇನ್ನೇನು ರಾಮನ್ ಅವರನ್ನು ಎಚ್ಚರಿಸಬೇಕು ಅಷ್ಟರಲ್ಲಿ, ರಾಮನ್ ರವರು,' that's all my dear listeners" ಎಂದು ಉಪನ್ಯಾಸವನ್ನು ಸರಿಯಾದ ಸಮಯಕ್ಕೆ ಅಂತ್ಯಗೊಳಿಸುತ್ತಾರೆ. ಈ ವೃತ್ತಾಂತದ ನಂತರ ರಂಗನಾಥ್ ಅವರು, ರಾಮನ್‌ ಅವರಿಗೆ ನಮಸ್ಕರಿಸಿ ನಡೆದ ಪರಿಸ್ಥಿತಿಯನ್ನು ವಿವರಿಸುತ್ತಾರೆ, ಅದಕ್ಕೆ ರಾಮನ್ ಅವರು.. ನೋಡಿ, ನಾನು ನನ್ನ ಮನಸ್ಸಿನ ಗಡಿಯಾರಕ್ಕೆ ತಿಳಿಸಿದ್ದೆ. ಹತ್ತು ನಿಮಿಷದಲ್ಲಿ ಉಪನ್ಯಾಸ ಮುಗಿಸಬೇಕೆಂದು !!! ಅದರಲ್ಲಿ ಚಿಂತಿಸುವ ವಿಷಯವೇನಿತ್ತು!!!! ಮರು ಪ್ರಶ್ನಿಸುತ್ತಾರೆ. ರಾಮನ್ ಅವರು ತಮ್ಮ ಮನಸ್ಸನ್ನು ಎಷ್ಟರಮಟ್ಟಿಗೆ ಹತೋಟಿಯಲ್ಲಿಟ್ಟಿದ್ದರು ಎಂಬುದು ಇದರಿಂದ ತಿಳಿಯುತ್ತದೆ.


ಘಟನೆ-2:

ರಾಮನ್ ಭಾರತ ದೇಶವು ಕಂಡ ಅಪ್ರತಿಮ ವಿಜ್ಞಾನಿ, ಅವರ ಸಾಧನೆ ಮತ್ತು ಅವರ ಮನೋಭಾವ ಎಲ್ಲರಿಗೂ ದಾರಿದೀಪ, ಮನೋಭಾವ ಎಂದ ತಕ್ಷಣ, ರಾಮನ್ ಅವರ ಇನ್ನೊಂದು ವಿಷಯ ನೆನಪಿಗೆ ಬರುತ್ತದೆ. ಅವರು ರಾಮನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ನಡೆದ ಘಟನೆ, ರಾಮನ್ ಇನ್‌ಸ್ಟಿಟ್ಯೂಟ್‌ಗೆ ಮೂರು ಸಹಾಯಕ ವಿಜ್ಞಾನಿಗಳ ಅವಶ್ಯಕತೆ ಇರುತ್ತದೆ. ಇದಕ್ಕೆ ಅಂತಿಮ ಪಟ್ಟಿಯಲ್ಲಿರುವ ಐದು ವಿಜ್ಞಾನಿಗಳಲ್ಲಿ ಮೂರು ಜನರನ್ನು ಆಯ್ಕೆಮಾಡುವ ಜವಾಬ್ದಾರಿ ರಾಮನ್‌ ಅವರಿಗೆ ನೀಡಲಾಗಿರುತ್ತದೆ. ಸಂದರ್ಶನಕ್ಕೆ ಬರುವ ಐದುಋ ವಿಜ್ಞಾನಿಗಳಿಗೂ ಪ್ರಯಾಣಭತ್ಯೆಯನ್ನು ನೀಡಲು ತೀರ್ಮಾನಿಸಲಾಗಿರುತ್ತದೆ. ಐವರು ವಿಜ್ಞಾನಿಗಳಿಗೂ ರಾಮನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕಾಗಿ ಅವರೆಲ್ಲರು ಪುಳಕಿತರಾಗಿರುತ್ತಾರೆ. ಸಂದರ್ಶನದ ನಂತರ ಮೂವರನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಎಲ್ಲರಿಗೂ ಪ್ರಯಾಣ ಭತ್ಯೆಯನ್ನು ನೀಡುತ್ತಾರೆ. ಸಂಜೆ ರಾಮನ್‌ ಕೆಲಸವನ್ನು ಮುಗಿಸಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ಗೇಟ್ ಬಳಿಯಲ್ಲಿ ಒಬ್ಬ ಸಂದರ್ಶನಕ್ಕೆ ಬಂದು, ಆಯ್ಕೆಯಾಗದ ವ್ಯಕ್ತಿ ನಿಂತಿರುತ್ತಾನೆ. ಅವನನ್ನು ನೋಡಿ ಮಾತನಾಡಿಸಿ, ಧೈರ್ಯ ಹೇಳಲು ರಾಮನ್‌ ಮುಂದಾಗುತ್ತಾರೆ. ಅದಕ್ಕೆ ಆ ವ್ಯಕ್ತಿ ರಾಮನ್ ಅವರಿಗೆ, ಸರ್ ನನಗೆ ಪ್ರಯಾಣ ಭತ್ಯೆಯಲ್ಲಿ ಏಳು ರೂಪಾಯಿಗಳನ್ನು ಹೆಚ್ಚು ನೀಡಿರುತ್ತಾರೆ. ಲೆಕ್ಕಾಧಿಕಾರಿಗಳಿಗೆ ಹಿಂದಿರುಗಿಸಲು ಹೋದರೆ ಅವರು ಲೆಕ್ಕವನ್ನೆಲ್ಲಾ ಈಗಾಗಲೆ ಮುಗಿಸಿದ್ದು, ಅದನ್ನು ತಗೆದುಕೊಂಡು ಊರಿಗೆ ಹೋಗಲು ಹೇಳುತ್ತಾರೆ, ಆದರೆ ಹೆಚ್ಚು ಹಣವನ್ನು ತೆಗೆದುಕೊಂಡು ಹೋಗಲು ಮನಸ್ಸು ಒಪ್ಪುತ್ತಿಲ್ಲಾ ಎಂದು ತಿಳಿಸುತ್ತಾರೆ. ನಂತರ ರಾಮನ್ ಅವರು ವ್ಯಕ್ತಿಯಿಂದ ಏಳು ರೂಪಾಯಿಯನ್ನು ಪಡೆದು, ಮರುದಿನ ಬಂದು ಭೇಟಿಯಾಗಲು ತಿಳಿಸುತ್ತಾರೆ. ಮರುದಿನ ಅವರನ್ನು ಭೇಟಿಯಾದ ರಾಮನ್ ಅವರು ``dear, you have failed in science test, but passed in honesty test" ಎಂದು ಮತ್ತು ಅವರಿಗಾಗಿ ಒಂದು ಹುದ್ದೆಯನ್ನು ಸೃಷ್ಟಿಸಿರುವುದಾಗಿ ತಿಳಿಸಿ, ಕೆಲಸ ನೀಡುತ್ತಾರೆ. ಆ ವ್ಯಕ್ತಿ ರಾಮನ್ ಅವರೊಂದಿಗೆ ಕೆಲಸ ಮಾಡಿ ಮುಂದೆ ದೊಡ್ಡ ವಿಜ್ಞಾನಿಯಾಗುತ್ತಾರೆ, ಅವರೇ ಸುಬ್ರಮಣ್ಯನ್ ಚಂದ್ರಶೇಖರ್, ಅವರು ``7 rupees that changed my life" ಎಂಬ ಪುಸ್ತಕದಲ್ಲಿ ಈ ವೃತ್ತಾಂತವನ್ನು ವಿವರಿಸಿದ್ದಾರೆ. ಇದು ರಾಮನ್ ಅವರ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಮನ್ ಅವರ ಜೀವನಶೈಲಿ ಎಲ್ಲರಿಗೂ ಮಾದರಿಯಾಗಿದೆ. 


ಘಟನೆ-3:

ನಮ್ಮಲ್ಲಿ ಅನೇಕ ಶಿಕ್ಷಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸಮಾಜದಲ್ಲಿ ಕಲಿಸುವುದು ತುಂಬಾ ಏಕತಾನತೆಯ ಕೆಲಸ, ಪ್ರತಿ ವರ್ಷ ಅದೇ ಪಾಠ ಮಾಡುವುದು ನೀರಸ, ಇದಕ್ಕೆ ಸಿದ್ಧತೆ ಬೇರೆ ಬೇಕಾ? ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ತರಗತಿಯನ್ನು ಯೋಜಿಸಲು ಸಮಯಾವಕಾಶವಿಲ್ಲ ಎಂದು ಕೊರಗುತ್ತಾರೆ, ಇದಕ್ಕೆ ಅವರ ಒಂದು ವೃತ್ತಾಂತ ನಮಗೆಲ್ಲರಿಗೂ ಮಾದರಿಯಾಗಿದೆ. ಈ ಘಟನೆ ನಡೆದಿದ್ದು ರಾಮ ಬೆಂಗಳೂರಿನಲ್ಲಿ, ರಾಮನ್ ಅವರು ಕೆಲಸವನ್ನೆಲ್ಲಾ ಮುಗಿಸಿ, ತಮ್ಮ ಮನೆಯ ಕಡೆಗೆ ಕಬ್ಬನ್ ಉದ್ಯಾನವನದಿಂದ ಹಾದು ಹೋಗುತ್ತಿರುತ್ತಾರೆ, ಅದು ಬೇಸಿಗೆಯ ಕಾಲ, ಬೇಸಿಗೆಯಲ್ಲಿ ಮಳೆ ಬಂದರೆ, ಅನೇಕ ದೀಪದ ಹುಳುಗಳು ಹೆಲಿಕ್ಯಾಪ್ಟರ್ ರೀತಿಯಲ್ಲಿ ಹಾರಿ ದೀಪವನ್ನು ಸುತ್ತುವರೆದು ನಂತರ ದೀಪವನ್ನು ಮುಟ್ಟಿ ಕೆಳಗೆ ಬೀಳುತ್ತವೆ.

ಅಂದು ಸಂಜೆಯು ಕೂಡ ಮಳೆಯಾಗಿದ್ದರಿಂದ ಅನೇಕ ದೀಪದ ಹುಳುಗಳು ಕಬ್ಬನ್ ಉದ್ಯಾನದ ರಸ್ತೆಯಲ್ಲಿ ಬಿದ್ದಿರುತ್ತವೆ. ಇದನ್ನು ಕಂಡ ರಾಮನ್ ಅವರು ಕಾರಿನ ಚಾಲಕನಿಗೆ ಕಾರನ್ನು ನಿಲ್ಲಿಸಲು ಹೇಳಿ, ನಿಧಾನವಾಗಿ ಕಾರಿನಿಂದ ಇಳಿದು, ರಸ್ತೆಯ ಮೇಲೆ ಬಿದ್ದಿದ್ದ ಆ ದೀಪದ ಹುಳುಗಳ ರೆಕ್ಕೆಗಳನ್ನು ಸಂಗ್ರಹಿಸಲು ಪ್ರಾರಂಭಿಸುತ್ತಾರೆ. ಅದೇ ರಸ್ತೆಯಲ್ಲಿ ರಾಮನ್ ಇನ್‌ಸ್ಟಿಟ್ಯೂಟ್‌ನ ಇನ್ನೊಬ್ಬ ಕಳೆದುಕೊ೦ಡಿರಬೇಕೆಂದು ಅವರಿಗೆ ವಿಜ್ಞಾನಿ ಬರುತ್ತಿರುತ್ತಾರೆ, ರಾಮ ಅವರು ತಮ್ಮ ಪರ್ಸನ್ನು ಮಾಡಲು ಕಾರಿನಿಂದ ಕೆಳಗಿಳಿಯುತ್ತಾರೆ. ಇದನ್ನು ಕಂಡ ರಾಮನ್, ಹುಳುಗಳನ್ನು ತುಳಿಯದಂತೆ ನಿಧಾನವಾಗಿ ರಸ್ತೆ ದಾಟಲು ತಿಳಿಸುತ್ತಾರೆ. ರಾಮನ್ ಅವರು ದೀಪದ ಹುಳುಗಳ ರೆಕ್ಕೆಗಳನ್ನು ಆರಿಸುವುದನ್ನು ಕಂಡು ಆಶ್ಚರ್ಯಗೊಂಡ ಅವರು, ರಾಮನ್‌ರಂತೆ ರೆಕ್ಕೆಗಳನ್ನು ಸಂಗ್ರಹಿಸಿ ಅವರಿಗೆ ನೀಡುತ್ತಾರೆ. ಕುತೂಹಲ ತಡೆಯಲಾರದೆ ಅವರು ರಾಮನ್ ರವರಿಗೆ, ಬಹಳ ವಿನಯದಿಂದ ಸಾರ್, ಈ ದೀಪದ ಹುಳುಗಳ ರೆಕ್ಕೆಗಳು ಏತಕ್ಕಾಗಿ ಎಂದು ಕೇಳುತ್ತಾರೆ. ಅದಕ್ಕೆ ರಾಮನ್‌ ಅವರು ನಾಳೆ ನನಗೆ ಕಾರ್ಪೊರೇಷನ್ ಶಾಲೆಯಲ್ಲಿ diffraction of light ಬಗ್ಗೆ ಉಪನ್ಯಾಸ ನೀಡಲು ಕರೆದಿದ್ದಾರೆ, ಆದರೆ ಅಲ್ಲಿ ಬರುವ ಮಕ್ಕಳಿಗೆ ಸೌಲಭ್ಯದ ಕೊರತೆಯಿರುತ್ತದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

    ಸಾ.ಶ 1987 ರಿಂದ ಪ್ರತಿ ವರ್ಷ ಫೆಬ್ರವರಿ 28ರಂದು  ಸರ್ ಸಿ ವಿ ರಾಮನ್ ರ "ರಾಮನ್ ಪರಿಣಾಮ" ಆವಿಷ್ಕಾರದ (ಸಾ.ಶ 1928 ಫೆಬ್ರವರಿ 28) ಸ್ಮರಣಾರ್ಥವಾಗಿ "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳ ಸಹಯೋಗದೊಂದಿಗೆ ದೇಶಾದಾದ್ಯಂತ ವಿಜ್ಞಾನಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲು ಉತ್ತೇಜಿಸುತ್ತದೆ.


ರಾಷ್ಟ್ರೀಯ ವಿಜ್ಞಾನ ದಿನಾಚರಣೆ | National Science Day

ರಾಷ್ಟ್ರೀಯ ವಿಜ್ಞಾನ ದಿನಾಚರಣೆ | National Science Dayjjh

         ಭಾರತದ ಶ್ರೇಷ್ಠ ವಿಜ್ಞಾನಿ ಸಿ.ವಿ.ರಾಮನ್ ಅವರು ನವೆಂಬರ್ 7, 1888 ರಂದು  ತಮಿಳುನಾಡಿನ ತಿರುಚನಪಲ್ಲಿ ಸಮೀಪದ ತಿರುವಾನೈಕ್ಕಾವಲ್‌ನಲ್ಲಿ ಜನಿಸಿದರು. ಅವರು ಅದ್ಭುತ ಶೈಕ್ಷಣಿಕ ವೃತ್ತಿಜೀವನವನ್ನು ಹೊಂದಿದ್ದರು. ಅವರು ಕೇವಲ 18 ವರ್ಷದವರಾಗಿದ್ದಾಗ ಅವರು ಸಹಾಯಕ ಅಕೌಂಟೆಂಟ್ ಜನರಲ್ ಕಲ್ಕತ್ತಾದ ಪ್ರತಿಷ್ಠಿತ ಸ್ಥಾನವನ್ನು ಪಡೆದರು. ನಂತರ ರಾಮನ್ ಅವರು ಕೃಷಿಗಾಗಿ ಭಾರತೀಯ ಸಂಘವನ್ನು ಸೇರಿದರು. ವಿಜ್ಞಾನ. ಈ ಸಂಘವನ್ನು 1876 ರಲ್ಲಿ ಮಹೇಂದ್ರ ಲಾಲ್ ಸರ್ಕಾರ್ ಅವರು ಮೂಲ ಸಂಶೋಧನೆಯ ಮೂಲಕ ವಿಜ್ಞಾನವನ್ನು ಬೆಳೆಸಲು ಸ್ಥಾಪಿಸಿದರು. ಸಿ.ವಿ.ರಾಮನ್ ಅವರು 28ನೇ ಫೆಬ್ರವರಿ  1928ರಲ್ಲಿ ಹೊಸ ವಿಕಿರಣದ (ರಾಮನ್ ಪರಿಣಾಮ) ಆವಿಷ್ಕಾರಕ್ಕಾಗಿ ಜಗತ್ಪ್ರಸಿದ್ಧರಾದರು. ಈ ಸಂಶೋಧನೆಗಾಗಿ ಅವರಿಗೆ ಡಿಸೆಂಬರ್ 11, 1930 ರಂದು ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಅವರು ಭಾರತ ರತ್ನ ಸೇರಿದಂತೆ ಅಸಂಖ್ಯಾತ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು. ಪ್ರೊ.ಸಿ.ವಿ.ರಾಮನ್ ಅವರು ನವೆಂಬರ್ 21, 1970 ರಂದು ನಿಧನರಾದರು.

ವಿಜ್ಞಾನ ದಿನಾಚರಣೆಯ ಹಿನ್ನಲೆ ಹಾಗೂ ಉದ್ದೇಶ

                  ಪ್ರತಿ ವರ್ಷ ಫೆಬ್ರವರಿ 28 ರಂದು ಸರ್ ಸಿ ವಿ ರಾಮನ್ ರ "ರಾಮನ್ ಪರಿಣಾಮ" ಆವಿಷ್ಕಾರದ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳ ಸಹಯೋಗದೊಂದಿಗೆ ದೇಶಾದಾದ್ಯಂತ ವಿಜ್ಞಾನಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಆಯೋಜಿಸಲು ಉತ್ತೇಜಿಸುತ್ತದೆ.

              1987 ರಿಂದ ಪ್ರತಿ ವರ್ಷವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿ ಮತ್ತು ಶಿಕ್ಷಕರಿಗಾಗಿ ರಸಪ್ರಶ್ನೆ ಸ್ಪರ್ಧೆ, ವಿಜ್ಞಾನ ಒಗಟು ಬಿಡಿಸುವ ಸ್ಪರ್ಧೆ, ಮಾದರಿ ತಯಾರಿಕೆ , ಉಪನ್ಯಾಸಗಳು ಮತ್ತು ತರಬೇತಿಗಳನ್ನು ಆಯೋಜಿಸುತ್ತಿದೆ.

  • ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅರಿವು ಮೂಡಿಸುವುದು.
  • ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸುವುದು.
  • ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಬೆಳೆಸುವುದು.
  • ಪ್ರಯೋಗಗಳ ಮೂಲಕ ಹೊಸ ಆವಿಷ್ಕಾರಗಳನ್ನು ಮಾಡಲು ವಿದ್ಯಾರ್ಥಿಗಳನ್ನು ಹುರಿದುಂಬಿಸುವುದು.
  • ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಪ್ರಯೋಗಗಳ ಮೂಲಕ ನಾವೀನ್ಯತೆಯನ್ನು ಮೂಡಿಸಲು ಪ್ರೇರೆಪಿಸುವುದು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಥೀಮ್ ಗಳು

*2025 - ವಿಕ್ಷಿತ್ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು. ("Empowering Indian Youth for Global Leadership in Science and Innovation for Viksit Bharat".)

*2024 -- ವಿಕಸಿತ ಭಾರತಕ್ಕಾಗಿ ಸ್ಥಳೀಯ ತಂತ್ರಜ್ಞಾನಗಳು (Indigenous Technologies for Viksit Bharat)

*2023 - ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೆಜಿಸುವ ಸಲುವಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆ – 2023 ನ್ನು ಜಾಗತಿಕ ಸಂರಕ್ಷಣೆಗಾಗಿ ವಿಜ್ಞಾನ ಎಂಬ ಶೀರ್ಷಿಕೆಯಡಿಯಲ್ಲಿ ಆಚರಿಸುತ್ತಿದೆ.

"ರಾಷ್ಟ್ರೀಯ ವಿಜ್ಞಾನ ದಿನ"ದ ಪ್ರಯುಕ್ತ ರಸಪ್ರಶ್ನೆ | National Science Day Quiz

"ರಾಷ್ಟ್ರೀಯ ವಿಜ್ಞಾನ ದಿನ"ದ ಪ್ರಯುಕ್ತ ರಸಪ್ರಶ್ನೆ | National Science Day Quiz

                         ನೊಬೆಲ್ ಪ್ರಶಸ್ತಿ ಪುರಸ್ಕೃತ  ಭಾರತಾಂಬೆಯ ಹೆಮ್ಮೆಯ ವಿಜ್ಞಾನಿ ಸರ್. ಸಿ. ವಿ ರಾಮನ್ ಅವರ ಭೌತಶಾಸ್ತ್ರದಲ್ಲಿ ಸಂಶೋಧನೆಯ ಕಾರಣಕ್ಕಾಗಿ ಭಾರತದಲ್ಲಿ "ರಾಷ್ಟ್ರೀಯ ವಿಜ್ಞಾನ ದಿನ" ಆಚರಿಸಲಾಗುತ್ತದೆ.

         ಈ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಸರ್ ಸಿ. ವಿ. ರಾಮನ್ ಮತ್ತು ವಿಜ್ಞಾನ ವಿಷಯದ ಕುರಿತು 50 ಬಹು ಆಯ್ಕೆ ರಸಪ್ರಶ್ನೆ.

                 ರಸಪ್ರಶ್ನೆಯಲ್ಲಿ ಭಾಗವಹಿಸಲು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ 'ರಸಪ್ರಶ್ನೆ ಪ್ರಾರಂಭಿಸಿ' ಮೇಲೆ ಕ್ಲಿಕ್ ಮಾಡಿ...

National Science Day (ರಾಷ್ಟ್ರೀಯ ವಿಜ್ಞಾನ ದಿನ)

Please fill the above data!
ಅಂಕಗಳು : 0

Name : Apu

Roll : 9

Total Questions:

Correct: | Wrong:

Attempt: | Percentage:

Popular Post