ರಾಷ್ಟ್ರೀಯ ಕ್ರೀಡಾ ದಿನ - 'ಮೇಜರ್ ಧ್ಯಾನ್ ಚಂದ್'
ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಮಗೆಷ್ಟು ಗೊತ್ತು?

ಪ್ರಪಂಚದ ಪ್ರತಿಯೊಂದು ಸ್ವತಂತ್ರ ರಾಷ್ಟ್ರವು ತನ್ನದೇ ಆದ ಧ್ವಜವನ್ನು ಹೊಂದಿರುತ್ತದೆ. ಇದು ಸ್ವತಂತ್ರ ದೇಶದ ಸಂಕೇತವಾಗಿದೆ. ಹಾಗೆಯೇ ನಮ್ಮ ಭಾರತವು ಕೂಡ ತನ್ನದೆಯಾದ ರಾಷ್ಟ್ರ ಧ್ವಜವನ್ನು ಹೊಂದಿದೆ. ದೇಶಪ್ರೇಮದ ಸಂಕೇತವಾಗಿರುವ ನಮ್ಮ ಭಾರತದ ಈಗಿನ ರಾಷ್ತ್ರ ಧ್ವಜವನ್ನು 22 ಜುಲೈ 1947 ರಂದು ಸಂವಿಧಾನಾತ್ಮಕ ಸಮಿತಿ ಸಭೆಯಲ್ಲಿ ಅಂಗೀಕರಿಸಲಾಯಿತು. 1947 ಆಗಸ್ಟ್ 15 ರಿಂದ ಸ್ವತಂತ್ರ ಭಾರತದ ಬಾವುಟವಾಗಿಯೂ, 26 ಜನವರಿ 1950ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಹಾರಾಡುತಲಿದೆ. ಹಿಂದಿ ಭಾಷೆಯಲ್ಲಿ ತಿರಂಗಾ ಎಂದು, ಕನ್ನಡದಲ್ಲಿ ತ್ರಿವರ್ಣ – (ಮೂರು ವರ್ಣಗಳ ಧ್ವಜ) ಎಂದು ನಮ್ಮ ಭಾರತದ ಬಾವುಟವನ್ನು ಕರೆಯುವುದು ರೂಢಿ.
✯ನಮ್ಮ ರಾಷ್ಟ್ರದ್ವಜದ ಬಣ್ಣಗಳ ವಿಶೇಷತೆ✯
☞ ಕೇಸರಿ : ತ್ರಿವರ್ಣ ಧ್ವಜದಲ್ಲಿ ಮೇಲೆ ಇರುವ ಕೇಸರಿ ಬಣ್ಣ ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ.
☞ ಬಿಳಿ : ಧ್ವಜದ ಮಧ್ಯೆ ಇರುವ ಬಿಳಿ ಬಣ್ಣ ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಆ ಮೂಲಕ ಶುದ್ಧ ಮನಸ್ಸಿನವರೊಡನೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತ ಬಿಳಿ.
☞ ಹಸಿರು : ಕೆಳಗೆ ಇರುವ ಹಸಿರು ಬಣ್ಣ ಪ್ರಗತಿಯ ಸಂಕೇತವೂ ಹೌದು. ಜೊತೆಗೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ವಿಶಾಲವಾದ ಈ ಪ್ರಕೃತಿಯಲ್ಲಿ ಮನುಷ್ಯ ಅತಿಥಿಯಷ್ಟೇ. ಹಾಗಾಗಿ ಪ್ರಕೃತಿಯೊಡನೆ ಬೆರೆತು ಹಚ್ಚ ಹಸಿರಿನ ಒಡಲಿಗೆ ತೊಂದರೆ ಉಂಟು ಮಾಡದೆ ಅದರ ಅಸ್ತಿತ್ವವನ್ನು ಕಾಪಾಡಿಕೊಂಡು ಬರಬೇಕು. ಜೊತೆಗೆ ಪ್ರಕೃತಿಯಲ್ಲಿರುವ ಸಕಲ ಜೀವರಾಶಿಯ ಜೊತೆ ಮನುಷ್ಯ ಬಾಂಧವ್ಯದಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.
✯ತ್ರಿವರ್ಣ ಧ್ವಜದ ವೈಶಿಷ್ಟ್ಯ✯
☞ ದ್ವಜದ ಅಳತೆ - ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರಬೇಕು.
☞ ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ 24 ಅರಗಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ. ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ. ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ.
☞ ಧ್ವಜ ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು ಹಾಗೂ ಧ್ವಜ ಕಟ್ಟುವ ಹಗ್ಗವೂ ಸಹ ಖಾದಿ ನೂಲಿನದಾಗಿರಬೇಕು.
ಕೇಸರಿ – ಬಿಳಿ – ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದೆ.
☞ ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವ ಘೋಷಿತ ನೂರಾರು ರಾಷ್ಟ್ರಧ್ವಜಗಳನ್ನು ಬಳಸಲಾಗಿತ್ತು. ಕೊನೆಗೆ ಸ್ಪಷ್ಟ ಹಾಗೂ ಅಧಿಕೃತ ವಿನ್ಯಾಸದ ಧ್ವಜ 1947ರಲ್ಲಿ ರೂಪತಳೆದಿತ್ತು. ಪಿಂಗಾಳಿ ವೆಂಕಯ್ಯ ಅವರ ವಿನ್ಯಾಸದಲ್ಲೇ ಸ್ವಲ್ಪ ಬದಲಾವಣೆ ಮಾಡಿ 1947ರಲ್ಲಿ ಅಂಗೀಕರಿಸಲಾಯಿತು.
✯ತ್ರಿವರ್ಣ ಧ್ವಜದ ಏಕೈಕ ಉತ್ಪಾದಕ ಘಟಕ✯
☞ ಈ ರಾಷ್ಟ್ರಧ್ವಜವನ್ನು ಯಾರೂ ಬೇಕಾದರೂ ತಯಾರಿಸಲು ಸಾಧ್ಯವಿಲ್ಲ. ರಾಷ್ಟ್ರಧ್ವಜಕ್ಕಾಗಿ ಕೈಯಿಂದ ನೇಯ್ದ ಖಾದಿಯನ್ನು ಆರಂಭದಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಗರಗ ಎಂಬ ಸಣ್ಣ ಹಳ್ಳಿಯಲ್ಲಿ ತಯಾರಿಸಲಾಯಿತು. ಧಾರವಾಡ ತಾಲೂಕು ಕ್ಷೇತ್ರೀಯ ಸೇವಾ ಸಂಘದ ಬ್ಯಾನರ್‌ನಡಿಯಲ್ಲಿ 1954 ರಲ್ಲಿ ಗರಗ ನಲ್ಲಿ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಕೇಂದ್ರವನ್ನು ಸ್ಥಾಪಿಸಿದರು ಮತ್ತು ಧ್ವಜಗಳನ್ನು ತಯಾರಿಸಲು ಕೇಂದ್ರದ ಪರವಾನಗಿಯನ್ನು ಪಡೆದರು.
☞ ನಂತರದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಕೆಕೆಜಿಎಸ್‌ಎಸ್) ಇಡೀ ದೇಶದಲ್ಲಿಯೇ ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ ಕೇಂದ್ರವನ್ನಾಗಿ ಪ್ರಮಾಣೀಕರಿಸಲಾಗಿದೆ. ಈಗ ಗರಗದಲ್ಲಿ ಧ್ವಜ ತಯಾರಿಸಲು ಬೇಕಾದ ಬಟ್ಟೆ ನೆಯ್ಗೆಯ ಕೆಲಸ ಮಾತ್ರ ನಡೆಯುತ್ತಿದೆ.
✯ರಾಷ್ಟ್ರ ಧ್ವಜ ಸರಿಯಾಗಿ ಪ್ರದರ್ಶನ ಮಾಡುವ ವಿಧಾನಗಳು✯
☞ಧ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು.
☞ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆ 'ಜನಗಣ ಮನ' ವನ್ನು ಹಾಡಲೇಬೇಕು.
☞ಧ್ವಜ ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿಧಾನಗತಿಯಲ್ಲಿ ಇಳಿಸಬೇಕು.
☞ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.
☞ರಾಷ್ಟ್ರ ಧ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
☞ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ಧ್ವಜವನ್ನು ಕಾಪಾಡಬೇಕು.
☞ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸತಕ್ಕದು.
☞ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರಧ್ವಜ ಹಾರಾಡತಕ್ಕದ್ದು.
☞ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರಧ್ವಜ ಹಾರಿಸಬಹುದು.
ನೇತಾಜಿ ಸುಭಾಷ್ ಚಂದ್ರ ಬೋಸ್.
ನೇತಾಜಿ (ಗೌರವಾನ್ವಿತ ನಾಯಕ) ಎಂದೇ ಜನತೆಯಿಂದ ಕರೆಸಿಕೊಳ್ಳುತ್ತಿದ್ದ ಬೋಸ್ ಇಂದಿನ ಒಡಿಶಾ (ಹಿಂದಿನ ಒರಿಸ್ಸಾ) ರಾಜ್ಯದ ಮತ್ತು ಕಟಕ್ ನಗರದಲ್ಲಿ ಜನವರಿ 23, 1897 ರಂದು ಜನಿಸಿದರು. ತಂದೆ ಜಾನಕಿನಾಥ್ ಬೋಸ್, ತಾಯಿ ಪ್ರಭಾವತೀ ದೇವಿ. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳಿಂದ ಪ್ರಭಾವಿತರಾದರು. 1897 ಜನವರಿ 23 ರಂದು ಸುಭಾಷರ ಜನನದ ಕುರಿತು, ಜಾನಕಿನಾಥ್ ಬೋಸ್ ತಮ್ಮ ದಿನಚರಿಯಲ್ಲಿ "ಮಧ್ಯಾಹ್ನ ಒಬ್ಬ ಮಗ ಜನಿಸಿದನು, ಈ ಮಗ ಒಬ್ಬ ಶೌರ್ಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಚಿಂತಕನಾದನು, ಅವನು ತನ್ನ ಜೀವನವನ್ನು ಒಂದು ದೊಡ್ಡ ಕಾರಣಕ್ಕಾಗಿ ಮೀಸಲಿಟ್ಟನು- ಅದು ಭಾರತದ ಸ್ವಾತಂತ್ರ್ಯ. ನಾನು ಹೇಳುತ್ತಿರುವ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್.
1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದು ನಂತರ 1919ರ ಸೆಪ್ಟೆಂಬರ್ 15ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿ, 1920ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪಡೆದರು. ಆದರೆ ವಿದೇಶಿ ಗುಲಾಮಗಿರಿ ಅಡಿಯಲ್ಲಿ ಕೆಲಸ ಮಾಡಲು ಒಪ್ಪದ ಬೋಸ್ ಐಸಿಎಸ್ ಪದವಿ ಧಿಕ್ಕರಿಸಿ 1921ರಲ್ಲಿ ಸ್ವದೇಶಕ್ಕೆ ಮರಳಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
ನೇತಾಜಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು. `ಆಜಾದ್ ಹಿಂದ್ ಪೌಜ್' (ಇಂಡಿಯನ್ ನ್ಯಾಷನಲ್ ಆರ್ಮಿ - ಐಎನ್‌ಎ) ಎಂಬ ಸೇನೆಯನ್ನು ಕಟ್ಟಿದ ಸುಭಾಷ್ ಚಂದ್ರ ಬೋಸ್ ಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದ್ದರು. ಅಪ್ರತಿಮ ದೇಶಭಕ್ತರಾಗಿದ್ದ ಬೋಸ್ ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶದಲ್ಲಿ ಸುತ್ತಾಡಿದ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಗೇ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಪ್ರಖರ ಚಿಂತನೆಯ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ದ ನೇತಾಜಿ, ತಮ್ಮ ದೇಶ ಪ್ರೇಮದ ಕಿಚ್ಚಿನಿಂದಲೇ ಆಗಸದೆತ್ತಕ್ಕೆ ಬೆಳೆದಿದ್ದರು.
ಗಾಂಧೀಜಿಯವರ ಜೊತೆಗೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಗಾಂಧೀಜಿಯವರ ನಿಲುವನ್ನು ಒಪ್ಪಿಕೊಂಡಿದ್ದರೂ ಕೆಲವೊಮ್ಮೆ ತಾವು ಒಪ್ಪದ ವಿಚಾರಗಳನ್ನು ನೇರವಾಗಿ ಪ್ರತಿಭಟಿಸಿ ಗಾಂಧೀಜಿಯವರಿಗೇ ಎದುರಾಳಿಯಾಗಿದ್ದರು. ಗಾಂಧೀಜಿ ಅಹಿಂಸೆಯಿಂದ ಬ್ರಿಟಿಷರನ್ನು ಗೆಲ್ಲುವ ಬಗ್ಗೆ ಒಲವು ತೋರಿದ್ದರೆ ಇದಕ್ಕೆ ಪೂರ್ಣ ವ್ಯತಿರಿಕ್ತವಾಗಿ ಬೋಸ್ ಅವರು ಸ್ವಾತಂತ್ರ್ಯದ ಬಗ್ಗೆ ಉಗ್ರಗಾಮಿ ವಿಧಾನ ಮತ್ತು ಸಮಾಜವಾದಿ ನೀತಿಗಳಿಗೆ ಮುಂದಾಗಿದ್ದರು.
ಕಾಂಗ್ರೆಸ್ ತ್ಯಜಿಸಿ ಕ್ರಾಂತಿಯ ಮಾರ್ಗದಲ್ಲಿ ಸಾಗಿದ ಬೋಸರನ್ನು ಜೈಲಿಗೆ, ಗೃಹ ಬಂಧನಕ್ಕೆ ತಳ್ಳಿದ ಆಂಗ್ಲರು. ಗೃಹ ಬಂಧನದಿಂದ ಮಾಯವಾದ ಬೋಸರು ಜರ್ಮನಿಯಿಂದ ಜಪಾನಿನವರೆಗು, ಹಿಟ್ಲರ್ ನಿಂದ ಮುಸೊಲಿನಿವರೆಗೂ ಸುತ್ತಾಡಿ ಕ್ರಾಂತಿಕಾರಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿ ಬ್ರಿಟಿಷ್ ಆಡಳಿತದ ವಿರುದ್ಧ ಸಮರ ಸಾರಿದರು. ಪ್ರಾದೇಶಿಕ ಸರ್ಕಾರ ಸ್ಥಾಪಿಸಿ ಅದರ ಪ್ರಧಾನಿ ಆಗು ಸೈನ್ಯದ ಮಹಾದಂಡನಾಯಕರಾದರು. ಇಲ್ಲಿ ಶಾಂತಿ ಮಂತ್ರ ಜಪಿಸುತ್ತಾ ಕಾಲಹರಣ ಮಾಡುತ್ತಿದ್ದರೆ ಅಲ್ಲಿ ಅಖಂಡ ಭಾರತದ ಕನಸು ಹೊತ್ತು ಅಂಗ್ಲಾರೆದುರು ಸೈನ್ಯ ನುಗ್ಗಿಸಿದರು .ಬರ್ಮಾ ಅಂಡಮನುಗಳಲ್ಲಿ ತ್ರಿವರ್ಣ ಧ್ವಜವನ್ನು ಏರಿಸಿ ಸ್ವಾತಂತ್ರ್ಯದ ಮೊದಲ ಸ್ವಾದ ಸವಿದರು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗುತಿದ್ದ ಆಂಗ್ಲರಿಗೆ ಸೋಲಿನ ರುಚಿ ತೋರಿಸಿದರು. ಜಪಾನಿನ ಶರಣಾಗತಿಯ ಕಾರಣ ಹಿನ್ನೆಡೆ ಉಂಟಾಯಿತು.
ದೇಶ ಸ್ವಾತಂತ್ರ್ಯ ಗಳಿಸುವ ಕೊನೆ ಘಟ್ಟದಲ್ಲಿ ಅಂದರೆ 1945ರಲ್ಲಿ ನೇತಾಜಿ ವಿಮಾನ ದುರಂತದಲ್ಲಿ ಮಡಿದರು ಎಂದು ಅನೇಕರು ನಂಬಿದ್ದಾರೆ. ಆದರೆ, ಅವರು ಅಂದು ಸಾಯಲೇ ಇಲ್ಲ ಎಂಬುದು ಇನ್ನೊಂದು ವಾದ. ಬಹುತೇಕರು ಭಾವಿಸಿದಂತೆ ನೇತಾಜಿ ವಿಮಾನ ದುರಂತದಲ್ಲಿ ಮಡಿದರೋ ಅಥವಾ ಗುಮ್ನಾಮಿ ಬಾಬಾ ರೂಪ ಧರಿಸಿ 1980ರ ದಶಕದವರೆಗೂ ಬದುಕಿದ್ದರೋ ಎನ್ನುವ ಪ್ರಶ್ನೆಗೆ ಇಂದಿಗೂ ಸ್ಪಷ್ಟಉತ್ತರ ಸಿಕ್ಕಿಲ್ಲ. ನೇತಾಜಿ ಸಾವಿನ ನಿಗೂಢ ಭೇದಿಸುವುದಕ್ಕಾಗಿಯೇ ನೇಮಕಗೊಂಡಿದ್ದ ವಿಷ್ಣು ಸಾಹಿ ಸಮಿತಿ ಕೂಡ ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ನೀಡುವಲ್ಲಿ ವಿಫಲಗೊಂಡಿದೆ.
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬ್ರಿಟಿಷರ ವಿರುದ್ಧ ವೀರ ಹೋರಾಟ ನಡೆಸಿ ಅಮರರಾದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು (2022)ದೇಶಾದ್ಯಂತ 'ಪರಾಕ್ರಮ್ ದಿವಸ್' ಆಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಇನ್ನುಮುಂದೆ ‘ಪರಾಕ್ರಮ ದಿನ’ ಎಂದು ದೇಶಾದ್ಯಂತ ಆಚರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅಲ್ಲದೆ, ಹೌರಾ-ಕಲ್ಕಾ ಮೈಲ್ ರೈಲಿಗೆ ‘ನೇತಾಜಿ ಎಕ್ಸ್‌ಪ್ರೆಸ್’ ಎಂದೂ ಮರುನಾಮಕರಣ ಮಾಡಿದೆ.
:ನೇತಾಜಿಯವರ ಸಂದೇಶಗಳು:
=> ನನಗೆ ರಕ್ತ ನೀಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ.
=> ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ
=> ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು.
=> ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.
=> ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ.
=> ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.
ಮಹಾನ್ ಕ್ರಾಂತಿಕಾರಿ - ಭಗತ್ ಸಿಂಗ್

ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಹಾಗೂ ನನ್ನ ನೆಚ್ಚಿನ ಗುರು ಬಳಗವೇ ಊರಿನ ಪ್ರಮುಖರೇ, ಮತ್ತು ನನ್ನ ಸಹೋದರ ಸಹೋದರಿಯರೇ ನಿಮ್ಮೆಲ್ಲರ ಎದುರಿಗೆ ಸ್ವಾತಂತ್ರ್ಯ ದಿನದ ನಿಮಿತ್ಯ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಮಹಾನ್ ಕ್ರಾಂತಿಕಾರಿಯ ಕುರಿತು ಕೆಲವು ಕ್ರಾಂತಿಕಾರಕ ವಿಚಾರಗಳನ್ನು ಹೇಳಬಯಸುತ್ತೇನೆ.
ಒಬ್ಬ ಚಿಕ್ಕ ಬಾಲಕ ಅವನ ಚಿಕ್ಕಪ್ಪನ ಜೊತೆ ಹೊಲಗಳ ಮಧ್ಯ ನಡೆದು ಹೋಗುವಾಗ, ಹೊಲದಲ್ಲಿ ಭತ್ತದ ನಾಟಿ ಮಾಡುತ್ತಿದ್ದ ರೈತನನ್ನು ಕಂಡ ಆ ಬಾಲಕ ಅವರ ಕಡೆಗೆ ಹೊರಟನು, ಆದರೆ ಚಿಕ್ಕಪ್ಪ ಬಾಲಕ ಹಿಂದೆ ಬರುತ್ತಿದ್ದಾನೆ ಎಂದು ಭಾವಿಸಿ ಹಾಗೆ ಮುಂದೆ ಸಾಗಿದ್ದರು. ಸ್ವಲ್ಪ ಮುಂದೆ ಹೋಗಿ ತಿರುಗಿ ನೋಡಿದಾಗ ಆ ಚಿಕ್ಕ ಬಾಲಕ ಕಾಣದಿದ್ದಾಗ ಮರಳಿ ಬಂದು ನೋಡಿದರೆ ಆ ಬಾಲಕ ರೈತನ ಜೊತೆ ಇರುವುದು ಕಾಣಿಸಿತು, ಅದನ್ನು ಕಂಡ ಅವರ ಚಿಕ್ಕಪ್ಪ ಏಕೆ ಮಗು ಇಲ್ಲೇನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ, ಆಗ ಬಾಲಕ ಚಿಕ್ಕಪ್ಪನನ್ನು ಈ ರೀತಿಯಾಗಿ ಮರು ಪ್ರಶ್ನಿಸಿದ ಭತ್ತದ ಸಸಿಗಳನ್ನು ನಾಟಿ ಮಾಡುವುದರಿಂದ ರಾಶಿ ರಾಶಿ ಭತ್ತವನ್ನು ಪಡೆಯಬಹುದಲ್ಲ ಚಿಕ್ಕಪ್ಪ? ಎಂದು. ಆಗ ಚಿಕ್ಕಪ್ಪ ಹೌದು ಕಂದ ಏನಾಯ್ತು ಈಗ ಎಂದು ಕೇಳಿದ. ಆಗ ಬಾಲಕ ಭತ್ತದ ರೀತಿಯಲ್ಲಿ ನಾನು ಈಗ ಹೊಲದಲ್ಲಿ ಬಂದೂಕನ್ನು ನಾಟಿ ಮಾಡಿ ರಾಶಿ ರಾಶಿ ಬಂದೂಕು ಬೆಳೆಯಬಹುದಲ್ಲಾ ಎಂದು ಕೇಳಿದ. ಇದನ್ನು ಕೇಳಿದ ಚಿಕ್ಕಪ್ಪ ಬಂದೂಕುಗಳನ್ನು ನೀನೆನು ಮಾಡುವೆ? ಎಂದರು. ಬಾಲಕ ಆಗ ಬಂದೂಕುಗಳನ್ನು ನನ್ನ ದೇಶದವರಿಗೆ ನೀಡಿ ಬ್ರಿಟಿಷರನ್ನ ಭಾರತದಿಂದ ಓಡಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದ. ಈ ರೀತಿಯಲ್ಲಿ ಚಿಕ್ಕ ಬಾಲಕನಾಗಿದ್ದಾಗಲೇ ದೇಶಾಭಿಮಾನವನ್ನು ಹೊಂದಿರುವ ವ್ಯಕ್ತಿ ಬೇರೆ ಯಾರು ಅಲ್ಲ ಅವರೇ 'ಭಗತ್ ಸಿಂಗ್'.
'ಪಂಜಾಬಿನ ಪುರುಷ ಸಿಂಹ' ಮತ್ತು 'ಕ್ರಾಂತಿಯ ಕಿಡಿ' ಬ್ರಿಟಿಷರ ಎದೆ ನಡುಗಿಸಿದ ಈ ಭಗತ್ ಸಿಂಗ್ ಸೆಪ್ಟೆಂಬರ್ 27, 1907 ರಂದು ಪಂಜಾಬಿನ ಕೇತರ್ ಕರ್ ಗ್ರಾಮದಲ್ಲಿ ಕಿಶನ್ ಸಿಂಗ್ ಮತ್ತು ವಿದ್ಯಾವತಿ ದಂಪತಿಗಳ ಮಗನಾಗಿ ಜನಿಸಿದರು.
12ನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಂದರೆ 1919 ರಲ್ಲಿ ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಭಗತ್ ಸಿಂಗ್ ಅಲ್ಲಿನ ರಕ್ತಸಿಕ್ತ ಮಣ್ಣನ್ನು ಸೀಸೆಯಲ್ಲಿ ಪವಿತ್ರ ಸಂಕೇತವಾಗಿ ಇಟ್ಟುಕೊಂಡು ಪೂಜಿಸುತ್ತಿದ್ದರು. ಈ ದುರಂತ ಭಗತ್ ಸಿಂಗರ ಮೇಲೆ ಗಾಢ ಪ್ರಭಾವ ಬೀರಿ ಕೊನೆಗೆ ಶಾಲೆ ಬಿಟ್ಟು ಕ್ರಾಂತಿಕಾರಿಗಳ ಜೊತೆಗೂಡಿ, ಕ್ರಾಂತಿಕಾರಿ ಸಂಘ ಒಂದನ್ನು ಆರಂಭಿಸಿದರು.
ಮುಂದೆ ಬ್ರಿಟಿಷರ ವಿರುದ್ಧದ ಹತ್ತು ಹಲವಾರು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ, 1,931 ಮಾರ್ಚ್ 23ರಂದು ಭಗತ್ ಸಿಂಗ್ ರನ್ನು ರಾಜಗುರು ಮತ್ತು ಸುಖದೇವರೊಂದಿಗೆ ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.
ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ 2 ಬಾಂಬ್ ಗಳನ್ನು ಎಸೆದು 'ಇನ್ ಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ) ಎಂದು ಪೋಷಣೆ ಕೂಗುತ್ತಾ ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಕುವುದೇ ಭಗತ್, ಮತ್ತು ಅವರ ಗೆಳೆಯರ ಉದ್ದೇಶವಾಗಿತ್ತು.
'ಇನ್ ಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಹುಟ್ಟು ಹಾಕಿದ್ದೇ ಭಗತ್ ಸಿಂಗ್. ಇದು ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು.
ಭಗತ್ ಸಿಂಗ್ ಅವರು ಜೈಲಿನಲ್ಲಿದ್ದಾಗ ಜೈಲು ಅಧಿಕಾರಿ ಬಂದು ನಿನ್ನನ್ನು ಈಗ ಗಲ್ಲಿಗೇರಿಸಬೇಕು ಬಾ ಎಂದು ಕರೆದಾಗ, ಭಗತ್ ಸಿಂಗ್ ರು ಇನ್ನೊಂದು ಪುಟ ಮಾತ್ರ ಓದುವುದಿದೇ ನಿಲ್ಲಿ ಎಂದು ಹೇಳಿದರು. ಇನ್ನೇನು ಕೇಲವೇ ಕ್ಷಣಗಳಲ್ಲಿ ನಾನು ಬದುಕಿರಲಾಲೇ ಎಂದು ತಿಳಿದಿದ್ದರೂ ಓದುವರ ಹೊಸ ವಿಚಾರ ತಿಳಿಯುವ ಕುತೂಹಲ ನೋಡಿದರೇ, ಎಂತಹವರಿಗೂ ಸೊಜಿಗವೇನಿಸುತ್ತದೆ.
ಗಲ್ಲಿಗೇರುವುದಕ್ಕೂ ಮುನ್ನ ಭಗತ್ ತನ್ನ ತಾಯಿಗೆ "ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ನೀನು ಯಾವುದೇ ಕಾರಣಕ್ಕೂ ಕಣ್ಣಿರಿಡಬಾರದು. ನಿನ್ನ ಕಣ್ಣೀರು ನೋಡಿ ಭಗತ್ ಸಿಂಗ್ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ ಎಂದು ಬ್ರಿಟೀಷರು ಆಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ ಎಂದು ಧೈರ್ಯ ತುಂಬಿದ್ದರು. ಆ ತಾಯಿ ಕಣ್ಣೀರಿನ ಜೊತೆ ಹೂಂ ಎಂದು ಮಾತುಕೊಟ್ಟಳು.
ನಿಗದಿಪಡಿಸಿದ ವೇಳೆಗಿಂತ 1 ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ 'ಹುತಾತ್ಮ'ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ 'ಹುತಾತ್ಮ' ಪಟ್ಟ ಸಿಕ್ಕಿಲ್ಲ. ಈ ಮಹಾನ್ ಕ್ರಾಂತಿಕಾರಿಗಳಿಗೆ ಸರ್ಕಾರ ಹುತಾತ್ಮ ಪಟ್ಟ ನೀಡಲಿ ಎಂದು ಪ್ರಾರ್ಥಿಸುತ್ತಾ ನನ್ನ ಮಾತಿಗೆ ಪೂರ್ಣವಿರಾಮ ನೀಡುತ್ತೇನೆ.
76ನೇ ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ

ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ನನ್ನ ನೆಚ್ಚಿನ ಗುರುವೃಂದವೆ ಹಾಗೂ ಗೌರವಾನ್ವಿತ ಊರಿನ ಪ್ರಮುಖರು, ಪೋಷಕರು ಮತ್ತು ಆತ್ಮೀಯ ಗೆಳೆಯ - ಗೆಳತಿಯರಿಗೆ 76ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತೀಯರಾದ ನಾವೆಲ್ಲ ಇಂದು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ನಾನೀಗ ಸ್ವಾತಂತ್ರ್ಯ ದಿನದ ಕುರಿತು ನಾಲ್ಕಾರು ಮಾತನಾಡಲು ಇಷ್ಟಪಡುತ್ತೇನೆ.
NMMS ಪರಿಕ್ಷೆ 2022-23ರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ.
ನನ್ನ ದೇಶ ನನ್ನ ಜನ - 'ಚೆನ್ನವೀರ ಕಣವಿ'
ಕೆಂಪು ನೆಲದ ಹಸಿರು ಬೆಳೆ
ಕಪ್ಪು ಬಣ್ಣ ಮೊಗದ ಕಳೆ
ಸೂರ್ಯ ಚಂದ್ರ ಚುಕ್ಕಿಗಳೆ
ನಮ್ಮ ಹಿರಿಯ ಒಕ್ಕಲು
ನೂರು ಭಾವ ಭಾಷೆ ನೆಲೆ
ನೂರು ಬಣ್ಣ ವೇಷ ಕಲೆ
ಸ್ವಚ್ಛಂದದ ಹಕ್ಕಿಗಳೆ
ನಮ್ಮ ಹಾಡು ಬದುಕಲು
ಪ್ರಾಚೀನವ ತಿಕ್ಕಿ ತೊಳೆ
ವರ್ತಮಾನ ಜೀವಕಳೆ
ಉಕ್ಕೇರಲಿ ಬಾಳ ಹೊಳೆ
ಆ ಭವಿಷ್ಯದೊಡಲಿಗೆ
ಮೈ ಕೊಡವಿದೆ ಮೂಕ ಜನ
ಕೈ ಹಿಡಿಯಿರಿ ನಾಕು ಚಣ
ಎದ್ದೇಳಲಿ ಎಲ್ಲ ಗುಣ
ಆ ಸಮೃದ್ಧ ಬಾಳಿಗೆ
ರಚನೆ : ಚೆನ್ನವೀರ ಕಣವಿ
Popular Post
-
ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರ ಗಳನ್ನು ವಿವಿಧ ಮ...
-
2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಒಳಗೊಂಡ ಸಂಪ...
-
NMMS ಪರೀಕ್ಷೆಯ ಹಿಂದಿನ ವರ್ಷಗಳ ಎಲ್ಲಾ GMAT ಮತ್ತು SAT ಪ್ರಶ್ನೆ ಪತ್ರಿಕೆಗಳು ಹಾಗೂ KEY ANSWERS.. ವರ್ಷ ಪ್ರಶ್ನೆ ಪತ್ರಿಕೆಗಳ...
-
NMMS ಪರೀಕ್ಷೆಯ, ಪತ್ರಿಕೆ-1 ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಪತ್ರಿಕೆ-2 ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) , ಈ ಎರಡು ಪತ್ರಿಕೆಗಳ ಸಂಪೂರ...
-
ಇಲಾಖೆಯು 2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ಚಟುವಟಿಕೆಗಳು ಮತ್ತು ಸಾಮರ್ಥ್ಯಗಳ ಪಟ...
-
ಕರ್ನಾಟಕ ರಾಜ್ಯದ ' ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4, 6 ಮತ್ತು 7ನೇ ತರಗತಿಯ ಎ...
-
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜ್ಯದಾ ದ್ಯಂತ 'ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ’ ...
-
ಸ ಮಾಜ ವಿಜ್ಞಾನದ ಮೂಲಭೂತ ಜ್ಞಾನದ ಬಗ್ಗೆ ನಮಗೆಷ್ಟು ಗೊತ್ತು? ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ...
-
ಶಾಲಾ ದಾಖಲಾತಿಗೆ ವಯಸ್ಸು ಲೆಕ್ಕ ಹಾಕಲು ಸುಲಭವಾಗುವ ಚಾರ್ಟ್ (31-05-2025 ಕ್ಕೆ ಇದ್ದಂತೆ ). 1-10ನೇ ತರಗತಿ ಶಾಲಾ ದಾಖಲಾತಿ ಪ್ರವೇಶ ಅರ್ಜಿ.
-
DSERT ಯು 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನ ವನ್ನು (Lesson Based Assessment) ಅಳವಡಿಸುವ ಸಂಬಂಧ ...