Menu

Home ನಲಿಕಲಿ About ☰ Menu


 

🔍

ಮಹಾನ್ ಕ್ರಾಂತಿಕಾರಿ - ಭಗತ್ ಸಿಂಗ್

 
      ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಹಾಗೂ ನನ್ನ ನೆಚ್ಚಿನ ಗುರು ಬಳಗವೇ ಊರಿನ ಪ್ರಮುಖರೇ,  ಮತ್ತು ನನ್ನ ಸಹೋದರ ಸಹೋದರಿಯರೇ ನಿಮ್ಮೆಲ್ಲರ ಎದುರಿಗೆ ಸ್ವಾತಂತ್ರ್ಯ ದಿನದ ನಿಮಿತ್ಯ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಮಹಾನ್ ಕ್ರಾಂತಿಕಾರಿಯ ಕುರಿತು ಕೆಲವು ಕ್ರಾಂತಿಕಾರಕ ವಿಚಾರಗಳನ್ನು ಹೇಳಬಯಸುತ್ತೇನೆ.

         ಒಬ್ಬ ಚಿಕ್ಕ ಬಾಲಕ ಅವನ ಚಿಕ್ಕಪ್ಪನ ಜೊತೆ ಹೊಲಗಳ ಮಧ್ಯ ನಡೆದು ಹೋಗುವಾಗ, ಹೊಲದಲ್ಲಿ ಭತ್ತದ ನಾಟಿ ಮಾಡುತ್ತಿದ್ದ ರೈತನನ್ನು ಕಂಡ ಆ ಬಾಲಕ ಅವರ ಕಡೆಗೆ ಹೊರಟನು, ಆದರೆ ಚಿಕ್ಕಪ್ಪ ಬಾಲಕ ಹಿಂದೆ ಬರುತ್ತಿದ್ದಾನೆ ಎಂದು ಭಾವಿಸಿ ಹಾಗೆ ಮುಂದೆ ಸಾಗಿದ್ದರು. ಸ್ವಲ್ಪ ಮುಂದೆ ಹೋಗಿ ತಿರುಗಿ ನೋಡಿದಾಗ ಆ ಚಿಕ್ಕ ಬಾಲಕ ಕಾಣದಿದ್ದಾಗ ಮರಳಿ ಬಂದು ನೋಡಿದರೆ ಆ ಬಾಲಕ ರೈತನ ಜೊತೆ ಇರುವುದು ಕಾಣಿಸಿತು, ಅದನ್ನು ಕಂಡ ಅವರ ಚಿಕ್ಕಪ್ಪ ಏಕೆ ಮಗು ಇಲ್ಲೇನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ, ಆಗ ಬಾಲಕ ಚಿಕ್ಕಪ್ಪನನ್ನು ಈ ರೀತಿಯಾಗಿ ಮರು ಪ್ರಶ್ನಿಸಿದ ಭತ್ತದ ಸಸಿಗಳನ್ನು ನಾಟಿ ಮಾಡುವುದರಿಂದ  ರಾಶಿ ರಾಶಿ ಭತ್ತವನ್ನು ಪಡೆಯಬಹುದಲ್ಲ ಚಿಕ್ಕಪ್ಪ? ಎಂದು. ಆಗ ಚಿಕ್ಕಪ್ಪ ಹೌದು ಕಂದ ಏನಾಯ್ತು ಈಗ ಎಂದು ಕೇಳಿದ. ಆಗ ಬಾಲಕ ಭತ್ತದ ರೀತಿಯಲ್ಲಿ ನಾನು ಈಗ ಹೊಲದಲ್ಲಿ ಬಂದೂಕನ್ನು ನಾಟಿ ಮಾಡಿ ರಾಶಿ ರಾಶಿ ಬಂದೂಕು ಬೆಳೆಯಬಹುದಲ್ಲಾ ಎಂದು ಕೇಳಿದ. ಇದನ್ನು ಕೇಳಿದ ಚಿಕ್ಕಪ್ಪ ಬಂದೂಕುಗಳನ್ನು ನೀನೆನು ಮಾಡುವೆ? ಎಂದರು. ಬಾಲಕ ಆಗ ಬಂದೂಕುಗಳನ್ನು ನನ್ನ ದೇಶದವರಿಗೆ ನೀಡಿ ಬ್ರಿಟಿಷರನ್ನ ಭಾರತದಿಂದ ಓಡಿಸಲು ಸಹಾಯ ಮಾಡುತ್ತೇನೆ ಎಂದು  ಹೇಳಿದ. ಈ ರೀತಿಯಲ್ಲಿ ಚಿಕ್ಕ ಬಾಲಕನಾಗಿದ್ದಾಗಲೇ ದೇಶಾಭಿಮಾನವನ್ನು ಹೊಂದಿರುವ ವ್ಯಕ್ತಿ ಬೇರೆ ಯಾರು ಅಲ್ಲ ಅವರೇ 'ಭಗತ್ ಸಿಂಗ್'.

    'ಪಂಜಾಬಿನ ಪುರುಷ ಸಿಂಹ' ಮತ್ತು 'ಕ್ರಾಂತಿಯ ಕಿಡಿ' ಬ್ರಿಟಿಷರ ಎದೆ ನಡುಗಿಸಿದ ಈ ಭಗತ್ ಸಿಂಗ್ ಸೆಪ್ಟೆಂಬರ್ 27,  1907 ರಂದು ಪಂಜಾಬಿನ ಕೇತರ್ ಕರ್ ಗ್ರಾಮದಲ್ಲಿ ಕಿಶನ್ ಸಿಂಗ್ ಮತ್ತು ವಿದ್ಯಾವತಿ ದಂಪತಿಗಳ ಮಗನಾಗಿ ಜನಿಸಿದರು.

      12ನೇ ವಯಸ್ಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಅಂದರೆ 1919 ರಲ್ಲಿ ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಭಗತ್ ಸಿಂಗ್ ಅಲ್ಲಿನ ರಕ್ತಸಿಕ್ತ ಮಣ್ಣನ್ನು ಸೀಸೆಯಲ್ಲಿ ಪವಿತ್ರ ಸಂಕೇತವಾಗಿ ಇಟ್ಟುಕೊಂಡು ಪೂಜಿಸುತ್ತಿದ್ದರು. ಈ ದುರಂತ ಭಗತ್ ಸಿಂಗರ ಮೇಲೆ ಗಾಢ ಪ್ರಭಾವ ಬೀರಿ ಕೊನೆಗೆ ಶಾಲೆ ಬಿಟ್ಟು ಕ್ರಾಂತಿಕಾರಿಗಳ ಜೊತೆಗೂಡಿ, ಕ್ರಾಂತಿಕಾರಿ ಸಂಘ ಒಂದನ್ನು ಆರಂಭಿಸಿದರು.

ಮುಂದೆ ಬ್ರಿಟಿಷರ ವಿರುದ್ಧದ ಹತ್ತು ಹಲವಾರು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಿ, 1,931 ಮಾರ್ಚ್ 23ರಂದು ಭಗತ್ ಸಿಂಗ್ ರನ್ನು ರಾಜಗುರು ಮತ್ತು ಸುಖದೇವರೊಂದಿಗೆ ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. 

    ದೆಹಲಿಯ ಕೇಂದ್ರ ಶಾಸನ ಸಭೆಯಲ್ಲಿ 2 ಬಾಂಬ್ ಗಳನ್ನು ಎಸೆದು 'ಇನ್ ಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ) ಎಂದು ಪೋಷಣೆ ಕೂಗುತ್ತಾ ಬ್ರಿಟಿಷ್ ಪೊಲೀಸರಿಗೆ ಶರಣಾದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವುನೋವು ಆಗಿರಲಿಲ್ಲ. ಬ್ರಿಟಿಷರ ಗಮನ ಸೆಳೆದು ಸತ್ಯ ಹುಡುಕುವುದೇ ಭಗತ್, ಮತ್ತು ಅವರ ಗೆಳೆಯರ ಉದ್ದೇಶವಾಗಿತ್ತು.

   'ಇನ್ ಕ್ವಿಲಾಬ್ ಜಿಂದಾಬಾದ್' (ಕ್ರಾಂತಿ ಚಿರಾಯುವಾಗಲಿ) ಘೋಷಣೆ ಹುಟ್ಟು ಹಾಕಿದ್ದೇ ಭಗತ್ ಸಿಂಗ್. ಇದು ಅಂತಿಮವಾಗಿ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಮಾರ್ಪಟ್ಟಿತು.

ಬ್ರಿಟಿಷ್ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿದ ಆರೋಪದ ಮೇಲೆ ಅವರಿಗೆ ನೇಣು ಶಿಕ್ಷೆ ವಿಧಿಲಾಗಿತ್ತು. ಮಾರ್ಚ್ 24, 1931ರಂದು ಅವರನ್ನು ನೇಣಿಗೇರಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಸಿಂಗ್ ಗೆ ವಿಧಿಸಿರುವ ಶಿಕ್ಷೆಯನ್ನು ರದ್ಧು ಮಾಡಬೇಕೆಂದು ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಮಿಕ್ಕಿ ಜನ ಪ್ರತಿಭಟನೆಯನ್ನು ಹಮ್ಮಿಕೊಂಡದ್ದನ್ನು ಅರಿತ ಬ್ರಟೀಷರು ಅದನ್ನು 11 ಗಂಟೆ ಹಿಂದೂಡಿ ಮಾರ್ಚ್ 23. 1931, 7.30ಕ್ಕೆ ಗಲ್ಲಿಗೇರಿಸಿದರು.

          ಭಗತ್ ಸಿಂಗ್ ಅವರು  ಜೈಲಿನಲ್ಲಿದ್ದಾಗ ಜೈಲು ಅಧಿಕಾರಿ  ಬಂದು ನಿನ್ನನ್ನು ಈಗ ಗಲ್ಲಿಗೇರಿಸಬೇಕು ಬಾ ಎಂದು ಕರೆದಾಗ, ಭಗತ್ ಸಿಂಗ್ ರು ಇನ್ನೊಂದು ಪುಟ ಮಾತ್ರ ಓದುವುದಿದೇ ನಿಲ್ಲಿ ಎಂದು ಹೇಳಿದರು. ಇನ್ನೇನು ಕೇಲವೇ ಕ್ಷಣಗಳಲ್ಲಿ ನಾನು ಬದುಕಿರಲಾಲೇ ಎಂದು ತಿಳಿದಿದ್ದರೂ ಓದುವರ ಹೊಸ ವಿಚಾರ ತಿಳಿಯುವ ಕುತೂಹಲ ನೋಡಿದರೇ, ಎಂತಹವರಿಗೂ ಸೊಜಿಗವೇನಿಸುತ್ತದೆ.

   ಗಲ್ಲಿಗೇರುವುದಕ್ಕೂ ಮುನ್ನ ಭಗತ್ ತನ್ನ ತಾಯಿಗೆ "ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ನೀನು ಯಾವುದೇ ಕಾರಣಕ್ಕೂ ಕಣ್ಣಿರಿಡಬಾರದು. ನಿನ್ನ ಕಣ್ಣೀರು ನೋಡಿ ಭಗತ್ ಸಿಂಗ್ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ ಎಂದು ಬ್ರಿಟೀಷರು ಆಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ ಎಂದು ಧೈರ್ಯ ತುಂಬಿದ್ದರು. ಆ ತಾಯಿ ಕಣ್ಣೀರಿನ ಜೊತೆ ಹೂಂ ಎಂದು ಮಾತುಕೊಟ್ಟಳು.

      ನಿಗದಿಪಡಿಸಿದ ವೇಳೆಗಿಂತ 1 ಗಂಟೆ ಮೊದಲೇ ಭಗತ್ ನನ್ನು ಗಲ್ಲಿಗೇರಿಸಲಾಯಿತು ಮತ್ತು ಸತ್ಲೆಜ್ ನದಿಯ ದಡದಲ್ಲಿ ಜೈಲು ಅಧಿಕಾರಿಗಳೇ ರಹಸ್ಯವಾಗಿ ಅಂತ್ಯಕ್ರಿಯೆ ನೇರವೇರಿಸಿದರು.

        ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ 'ಹುತಾತ್ಮ'ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ 'ಹುತಾತ್ಮ' ಪಟ್ಟ ಸಿಕ್ಕಿಲ್ಲ.  ಈ ಮಹಾನ್ ಕ್ರಾಂತಿಕಾರಿಗಳಿಗೆ ಸರ್ಕಾರ ಹುತಾತ್ಮ ಪಟ್ಟ ನೀಡಲಿ ಎಂದು  ಪ್ರಾರ್ಥಿಸುತ್ತಾ ನನ್ನ ಮಾತಿಗೆ ಪೂರ್ಣವಿರಾಮ ನೀಡುತ್ತೇನೆ.

ಜೈ ಹಿಂದ್
ಜೈ ಕರ್ನಾಟಕ ಮಾತೆ


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post