Menu

Home ನಲಿಕಲಿ About ☰ Menu


 

ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಮಗೆಷ್ಟು ಗೊತ್ತು?

   
 ಪ್ರಪಂಚದ ಪ್ರತಿಯೊಂದು ಸ್ವತಂತ್ರ ರಾಷ್ಟ್ರವು ತನ್ನದೇ ಆದ ಧ್ವಜವನ್ನು ಹೊಂದಿರುತ್ತದೆ. ಇದು ಸ್ವತಂತ್ರ ದೇಶದ ಸಂಕೇತವಾಗಿದೆ. ಹಾಗೆಯೇ ನಮ್ಮ ಭಾರತವು ಕೂಡ ತನ್ನದೆಯಾದ ರಾಷ್ಟ್ರ ಧ್ವಜವನ್ನು ಹೊಂದಿದೆ. ದೇಶಪ್ರೇಮದ ಸಂಕೇತವಾಗಿರುವ ನಮ್ಮ ಭಾರತದ ಈಗಿನ ರಾಷ್ತ್ರ ಧ್ವಜವನ್ನು  22 ಜುಲೈ 1947 ರಂದು ಸಂವಿಧಾನಾತ್ಮಕ ಸಮಿತಿ ಸಭೆಯಲ್ಲಿ  ಅಂಗೀಕರಿಸಲಾಯಿತು. 1947 ಆಗಸ್ಟ್ 15 ರಿಂದ ಸ್ವತಂತ್ರ ಭಾರತದ  ಬಾವುಟವಾಗಿಯೂ, 26 ಜನವರಿ 1950ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಹಾರಾಡುತಲಿದೆ. ಹಿಂದಿ ಭಾಷೆಯಲ್ಲಿ ತಿರಂಗಾ ಎಂದು, ಕನ್ನಡದಲ್ಲಿ ತ್ರಿವರ್ಣ – (ಮೂರು ವರ್ಣಗಳ ಧ್ವಜ) ಎಂದು ನಮ್ಮ ಭಾರತದ ಬಾವುಟವನ್ನು ಕರೆಯುವುದು ರೂಢಿ.

ನಮ್ಮ ರಾಷ್ಟ್ರದ್ವಜದ ಬಣ್ಣಗಳ ವಿಶೇಷತೆ

☞ ಕೇಸರಿ :  ತ್ರಿವರ್ಣ ಧ್ವಜದಲ್ಲಿ ಮೇಲೆ ಇರುವ ಕೇಸರಿ ಬಣ್ಣ ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆಯುವ ಬಲಿದಾನಗಳ ಸಂಕೇತವಾಗಿದೆ.

☞ ಬಿಳಿ :  ಧ್ವಜದ ಮಧ್ಯೆ ಇರುವ ಬಿಳಿ ಬಣ್ಣ ಸತ್ಯ, ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಆ ಮೂಲಕ ಶುದ್ಧ ಮನಸ್ಸಿನವರೊಡನೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತ ಬಿಳಿ.

 ಹಸಿರು :   ಕೆಳಗೆ ಇರುವ ಹಸಿರು ಬಣ್ಣ ಪ್ರಗತಿಯ ಸಂಕೇತವೂ ಹೌದು. ಜೊತೆಗೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ತಿಳಿಸುತ್ತದೆ. ವಿಶಾಲವಾದ ಈ ಪ್ರಕೃತಿಯಲ್ಲಿ ಮನುಷ್ಯ ಅತಿಥಿಯಷ್ಟೇ. ಹಾಗಾಗಿ ಪ್ರಕೃತಿಯೊಡನೆ ಬೆರೆತು ಹಚ್ಚ ಹಸಿರಿನ ಒಡಲಿಗೆ ತೊಂದರೆ ಉಂಟು ಮಾಡದೆ ಅದರ ಅಸ್ತಿತ್ವವನ್ನು ಕಾಪಾಡಿಕೊಂಡು ಬರಬೇಕು. ಜೊತೆಗೆ ಪ್ರಕೃತಿಯಲ್ಲಿರುವ ಸಕಲ ಜೀವರಾಶಿಯ ಜೊತೆ ಮನುಷ್ಯ ಬಾಂಧವ್ಯದಿಂದ ಇರಬೇಕು ಎನ್ನುವುದನ್ನು ಸೂಚಿಸುತ್ತದೆ.

 ಅಶೋಕ ಚಕ್ರ : ನಮ್ಮ ತ್ರಿವರ್ಣಧ್ವಜ ರೂಪುಗೊಂಡಿದ್ದು 1931ರಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲಿ ತ್ರಿವರ್ಣ ಧ್ವಜದ ಮಧ್ಯೆ ಮಹಾತ್ಮ ಗಾಂಧೀಜಿ ಅವರ ಚರಕವನ್ನು ಅಳವಡಿಸಲಾಗಿತ್ತು. ಆದರೆ ನಂತರ ಜುಲೈ 22, 1947ರಲ್ಲಿ ಚರಕದ ಬದಲಾಗಿ ವೃತ್ತಾಕಾರದಲ್ಲಿರುವ ಅಶೋಕ ಚಕ್ರವನ್ನು ಬಳಸಿ, ಕೇಸರಿ ಬಿಳಿ ಹಸಿರು ಬಣ್ಣದ ಧ್ವಜದ ಮಧ್ಯೆ ಅಶೋಕಚಕ್ರ ಇರುವ ರಾಷ್ಟ್ರಧ್ವಜವನ್ನು ಸಂವಿಧಾನಬದ್ಧವಾಗಿ ಅಂಗೀಕರಿಸಲಾಯಿತು. ಅಶೋಕ ಚಕ್ರವು  ಸಾಮ್ರಾಟ್ ಅಶೋಕನ ಚಿಹ್ನೆಯಾಗಿದ್ದು, ರಾಷ್ಟ್ರಧ್ವಜದಲ್ಲಿರುವ ಈ ಚಕ್ರವು ಧರ್ಮವನ್ನು ಪ್ರತಿನಿಧಿಸಿದರೆ ಆ ಚಕ್ರದ ಮಧ್ಯೆ ಇರುವ 24 ಅರಗಳು ಪ್ರಗತಿ ವಿವಿಧ ಆಚರಣೆ, ಸಂಸ್ಕೃತಿ, ವಿವಿಧತೆಯಂತಹ ಬಹುತ್ವವನ್ನು ಪ್ರತಿನಿಧಿಸುತ್ತದೆ.

ತ್ರಿವರ್ಣ ಧ್ವಜದ ವೈಶಿಷ್ಟ್ಯ

 ದ್ವಜದ ಅಳತೆ - ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರಬೇಕು.

☞ ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ 24 ಅರಗಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ. ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ. ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ.

☞ ಧ್ವಜ ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ  ಮಾಡಲ್ಪಟ್ಟಿರಬೇಕು ಹಾಗೂ ಧ್ವಜ ಕಟ್ಟುವ ಹಗ್ಗವೂ ಸಹ ಖಾದಿ ನೂಲಿನದಾಗಿರಬೇಕು.

ಕೇಸರಿ – ಬಿಳಿ – ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದೆ.

☞ ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.


ಧ್ವಜದ ತಯಾರಿ
ರಾಷ್ಟ್ರಧ್ವಜವನ್ನು ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ. ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಆಗಿರಬೇಕು. ಕೇಸರಿ- ಬಿಳಿ -ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಹು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ 24 ಅರಗಳಿವೆ. ದ್ವಜದ ಉದ್ದ ಮತ್ತು ಅಗಲ 3:2 ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ.

ರಾಷ್ಟ್ರಧ್ವಜ ವಿನ್ಯಾಸ ಮಾಡಿದವರು
ದೇಶಾದ್ಯಂತ ಇಂದು ರಾರಾಜಿಸುತ್ತಿರುವ ದೇಶದ ರಾಷ್ಟ್ರದ ಧ್ವಜದ ವಿನ್ಯಾಸ ಮಾಡಿದವರು ಸ್ವಾತಂತ್ರ್ಯ ಹೋರಾಟಗಾರ “ಪಿಂಗಾಳಿ ವೆಂಕಯ್ಯ”. 1876ರ ಆಗಸ್ಟ್ 2ರಂದು ಆಂಧ್ರಪ್ರದೇಶದ(ಈಗಿನ) ಮಚಿಲಿಪಟ್ಟಣಂ ಸಮೀದಪ ಭಟ್ಲಾಪೆನುಮರ್ರು ಎಂಬಲ್ಲಿ  ಜನಿಸಿದರು.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವ ಘೋಷಿತ ನೂರಾರು ರಾಷ್ಟ್ರಧ್ವಜಗಳನ್ನು ಬಳಸಲಾಗಿತ್ತು. ಕೊನೆಗೆ ಸ್ಪಷ್ಟ ಹಾಗೂ ಅಧಿಕೃತ ವಿನ್ಯಾಸದ ಧ್ವಜ 1947ರಲ್ಲಿ ರೂಪತಳೆದಿತ್ತು. ಪಿಂಗಾಳಿ ವೆಂಕಯ್ಯ ಅವರ ವಿನ್ಯಾಸದಲ್ಲೇ ಸ್ವಲ್ಪ ಬದಲಾವಣೆ ಮಾಡಿ 1947ರಲ್ಲಿ ಅಂಗೀಕರಿಸಲಾಯಿತು.


ತ್ರಿವರ್ಣ ಧ್ವಜದ ಏಕೈಕ ಉತ್ಪಾದಕ ಘಟಕ

 ಈ ರಾಷ್ಟ್ರಧ್ವಜವನ್ನು ಯಾರೂ ಬೇಕಾದರೂ ತಯಾರಿಸಲು ಸಾಧ್ಯವಿಲ್ಲ.  ರಾಷ್ಟ್ರಧ್ವಜಕ್ಕಾಗಿ ಕೈಯಿಂದ ನೇಯ್ದ ಖಾದಿಯನ್ನು ಆರಂಭದಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಗರಗ ಎಂಬ ಸಣ್ಣ ಹಳ್ಳಿಯಲ್ಲಿ ತಯಾರಿಸಲಾಯಿತು. ಧಾರವಾಡ ತಾಲೂಕು ಕ್ಷೇತ್ರೀಯ ಸೇವಾ ಸಂಘದ ಬ್ಯಾನರ್‌ನಡಿಯಲ್ಲಿ 1954 ರಲ್ಲಿ ಗರಗ ನಲ್ಲಿ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಕೇಂದ್ರವನ್ನು ಸ್ಥಾಪಿಸಿದರು ಮತ್ತು ಧ್ವಜಗಳನ್ನು ತಯಾರಿಸಲು ಕೇಂದ್ರದ ಪರವಾನಗಿಯನ್ನು ಪಡೆದರು.

 ನಂತರದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದ ಬೆಂಗೇರಿ ಎಂಬಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ(ಕೆಕೆಜಿಎಸ್‌ಎಸ್) ಇಡೀ ದೇಶದಲ್ಲಿಯೇ ಭಾರತೀಯ ಧ್ವಜ ತಯಾರಿಸುವಂತಹ ಏಕೈಕ ಉತ್ಪಾದನಾ ಮತ್ತು ಸರಬರಾಜು ಮಾಡುವ  ಕೇಂದ್ರವನ್ನಾಗಿ ಪ್ರಮಾಣೀಕರಿಸಲಾಗಿದೆ. ಈಗ ಗರಗದಲ್ಲಿ ಧ್ವಜ ತಯಾರಿಸಲು ಬೇಕಾದ ಬಟ್ಟೆ ನೆಯ್ಗೆಯ ಕೆಲಸ ಮಾತ್ರ ನಡೆಯುತ್ತಿದೆ.

 ಧ್ವಜಗಳಲ್ಲಿ ಯಾವುದೇ ದೋಷಗಳು, ಉದಾಹರಣೆಗೆ ಬಣ್ಣ, ಗಾತ್ರ ಮತ್ತು ನೂಲುಗಳಲ್ಲಿ ಯಾವುದಾದರೂ ತಪ್ಪಾದರೆ ಅದನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಫ್ಲ್ಯಾಗ್ ಕೋಡ್ 2002 ರ ನಿಬಂಧನೆಗಳ ಪ್ರಕಾರ ದಂಡ ಅಥವಾ ಸೆರೆವಾಸ ಅನುಭವಿಸಬೇಕಾಗುತ್ತದೆ.

 ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ ಮತ್ತು ಭಾರತೀಯ ಸ್ಟ್ಯಾಂಡರ್ಡ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜ ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನ(ರಾಷ್ಟ್ರಧ್ವಜ) ತಿರಸ್ಕೃತವಾಗುತ್ತದೆ.

ರಾಷ್ಟ್ರ ಧ್ವಜ ಸರಿಯಾಗಿ ಪ್ರದರ್ಶನ ಮಾಡುವ ವಿಧಾನಗಳು

ಧ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು.

ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆ 'ಜನಗಣ ಮನ' ವನ್ನು ಹಾಡಲೇಬೇಕು.

ಧ್ವಜ ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ  ನಿಧಾನಗತಿಯಲ್ಲಿ ಇಳಿಸಬೇಕು.

ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.

ರಾಷ್ಟ್ರ ಧ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.

ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರ ಧ್ವಜವನ್ನು   ಹಾರಿಸಬಹುದು.

ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ಧ್ವಜವನ್ನು ಕಾಪಾಡಬೇಕು.

ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸತಕ್ಕದು. 

ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರಧ್ವಜ ಹಾರಾಡತಕ್ಕದ್ದು.

ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರಧ್ವಜ ಹಾರಿಸಬಹುದು.

ರಾಷ್ಟ್ರಧ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು. 
          ತಾಯಿ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.

ಧ್ವಜ ಸಂಹಿತೆ
ಜನವರಿ 26, 2002 ರಂದು, ಭಾರತೀಯ ಧ್ವಜ ಸಂಹಿತೆಯನ್ನು ಮಾರ್ಪಡಿಸಲಾಯಿತು ಮತ್ತು ಸ್ವಾತಂತ್ರ್ಯವಾದ ಹಲವಾರು ವರ್ಷಗಳ ನಂತರ, ಭಾರತದ ನಾಗರಿಕರು ಅಂತಿಮವಾಗಿ ತಮ್ಮ ಮನೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳ ಮೇಲೆ ಭಾರತೀಯ ಧ್ವಜವನ್ನು ಯಾವುದೇ ದಿನದಲ್ಲಿ ಹಾರಿಸಲು ಅನುಮತಿಸಲಾಯಿತು. ತ್ರಿವರ್ಣ ಧ್ವಜಕ್ಕೆ ಯಾವುದೇ ಅಗೌರವವನ್ನು ತಪ್ಪಿಸಲು ಧ್ವಜ ಸಂಹಿತೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವವರೆಗೆ ಈಗ ಭಾರತೀಯರು ಎಲ್ಲಿಯವರೆಗೆ ಮತ್ತು ಯಾವುದೇ ಸಮಯದಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಬಹುದು. ಅನುಕೂಲಕ್ಕಾಗಿ, ಭಾರತದ ಧ್ವಜ ಸಂಹಿತೆ, 2002 ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. 
ಕೋಡ್‌ನ ಭಾಗ I ರಾಷ್ಟ್ರೀಯ ಧ್ವಜದ ಸಾಮಾನ್ಯ ವಿವರಣೆಯನ್ನು ಒಳಗೊಂಡಿದೆ. 
ಕೋಡ್‌ನ ಭಾಗ II ಅನ್ನು ಸಾರ್ವಜನಿಕ, ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇತ್ಯಾದಿಗಳ ಸದಸ್ಯರು ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಮೀಸಲಿಡಲಾಗಿದೆ.
ಕೋಡ್‌ನ ಭಾಗ III ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಅವರ ಸಂಸ್ಥೆಗಳು ಮತ್ತು ಏಜೆನ್ಸಿಗಳಿಂದ ರಾಷ್ಟ್ರಧ್ವಜದ ಪ್ರದರ್ಶನಕ್ಕೆ ಸಂಬಂಧಿಸಿದೆ. 
         26 ಜನವರಿ 2002 ಶಾಸನದ ಆಧಾರದ ಮೇಲೆ ಧ್ವಜವನ್ನು ಹೇಗೆ ಹಾರಿಸಬೇಕು ಎಂಬುದರ ಕುರಿತು ಕೆಲವು ನಿಯಮಗಳು ಮತ್ತು ನಿಬಂಧನೆಗಳು  ಈ ಕೆಳಗಿನಂತಿವೆ. 

ಮಾಡಬೇಕಾದವುಗಳು: 
ಧ್ವಜದ ಗೌರವವನ್ನು ಪ್ರೇರೇಪಿಸಲು ಶಿಕ್ಷಣ ಸಂಸ್ಥೆಗಳಲ್ಲಿ (ಶಾಲೆಗಳು, ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ ಶಿಬಿರಗಳು, ಇತ್ಯಾದಿ) ರಾಷ್ಟ್ರಧ್ವಜವನ್ನು ಹಾರಿಸಬಹುದು. ಶಾಲೆಗಳಲ್ಲಿ ಧ್ವಜಾರೋಹಣದಲ್ಲಿ ಪ್ರತಿಜ್ಞಾವಿಧಿಯನ್ನು ಸೇರಿಸಲಾಗಿದೆ. 

ಸಾರ್ವಜನಿಕ, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯ ಸದಸ್ಯರು ಎಲ್ಲಾ ದಿನಗಳು ಮತ್ತು ಸಂದರ್ಭಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಬಹುದು/ಪ್ರದರ್ಶಿಸಬಹುದು, ವಿಧ್ಯುಕ್ತ ಅಥವಾ ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಅನುಗುಣವಾಗಿರಬೇಕು. 

ಹೊಸ ಕೋಡ್‌ನ ವಿಭಾಗ 2 ಎಲ್ಲಾ ಖಾಸಗಿ ನಾಗರಿಕರು ತಮ್ಮ ಆವರಣದಲ್ಲಿ ಧ್ವಜವನ್ನು ಹಾರಿಸುವ ಹಕ್ಕನ್ನು ಒಪ್ಪಿಕೊಳ್ಳುತ್ತದೆ. 

ಮಾಡಬಾರದ್ದು: 
ಧ್ವಜವನ್ನು ಸಾಮುದಾಯಿಕ ಲಾಭಕ್ಕಾಗಿ, ಡ್ರೆಪರಿ ಅಥವಾ ಬಟ್ಟೆಗಾಗಿ ಬಳಸಲಾಗುವುದಿಲ್ಲ. ಸಾಧ್ಯವಾದಷ್ಟು, ಹವಾಮಾನವನ್ನು ಲೆಕ್ಕಿಸದೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅದನ್ನು ಹಾರಿಸಬೇಕು.

ಧ್ವಜವನ್ನು ಉದ್ದೇಶಪೂರ್ವಕವಾಗಿ ನೆಲ ಅಥವಾ ನೆಲವನ್ನು ಸ್ಪರ್ಶಿಸಲು ಅಥವಾ ನೀರಿನಲ್ಲಿ ಜಾಡು ಮಾಡಲು ಅನುಮತಿಸಲಾಗುವುದಿಲ್ಲ. ವಾಹನಗಳು, ರೈಲುಗಳು, ದೋಣಿಗಳು ಅಥವಾ ವಿಮಾನಗಳ ಹುಡ್, ಮೇಲ್ಭಾಗ ಮತ್ತು ಬದಿಗಳಲ್ಲಿ ಅಥವಾ ಹಿಂಭಾಗದಲ್ಲಿ ಅದನ್ನು ಆವರಿಸಲಾಗುವುದಿಲ್ಲ.

ಧ್ವಜಕ್ಕಿಂತ ಎತ್ತರದಲ್ಲಿ ಬೇರೆ ಯಾವುದೇ ಧ್ವಜ ಅಥವಾ ನಿಶಾನೆಯನ್ನು ಇರಿಸುವಂತಿಲ್ಲ. ಅಲ್ಲದೆ, ಹೂವುಗಳು ಅಥವಾ ಹೂಮಾಲೆಗಳು ಅಥವಾ ಲಾಂಛನಗಳು ಸೇರಿದಂತೆ ಯಾವುದೇ ವಸ್ತುವನ್ನು ಧ್ವಜದ ಮೇಲೆ ಅಥವಾ ಮೇಲೆ ಇರಿಸಲಾಗುವುದಿಲ್ಲ. ತ್ರಿವರ್ಣ ಧ್ವಜವನ್ನು ಮಾಲೆ, ರೋಸೆಟ್ ಅಥವಾ ನಿಶಾನೆಯಾಗಿ ಬಳಸಲಾಗುವುದಿಲ್ಲ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post