Menu

Home ನಲಿಕಲಿ About ☰ Menu


 

ಸರ್ವಜ್ಞನ ತ್ರಿಪದಿಗಳು (1251-1300)

ಸರ್ವಜ್ಞ ವಚನ 1251 :
ಮಾಸಿನೊಳು ಮುಸುಕಿರ್ದು । ಮೂಸಿ ಬರುತಾಸನವ
ಹೇಸಿಕೆಯ ಮಲವು ಸೂಸುವುದ – ಕಂಡು ಕಂ
ಡಾಸೆ ಬಿಡದು ಸರ್ವಜ್ಞ||

ಸರ್ವಜ್ಞ ವಚನ 1252 :
ನಿದ್ದೆಗಳು ಬಾರವು। ಬುದ್ಧಿಗಳು ತೋರವು।
ಮುದ್ದಿನ ಮಾತು ಸೊಗಸವು, ಬೋನದ।
ಮುದ್ದೆ ತಪ್ಪಿದರೆ ಸರ್ವಜ್ಞ||

ಸರ್ವಜ್ಞ ವಚನ 1253 :
ಭಂಡಗಳ ನುಡುಯುವಾ । ದಿಂಡೆಯನು ಹಿಡತಂದು
ಖಂಡಿಸಿರಿ ಎಂದವನೊಡನೆ ಹಿಂಡೆಲ್ಲ ।
ಬಂದಿಹುದು ನೋಡು ಸರ್ವಜ್ಞ||

ಸರ್ವಜ್ಞ ವಚನ 1254 :
ಸರ್ವಜ್ಞ||
ಎಂಬುವನು ಗರ್ವದಿ ಆದವನೆ
ಎಲ್ಲರ ಬಳಿ ಒಂದು-ಒಂದು ಮಾತನ್ನು ಕಲಿತು
ವಿದ್ಯೆ ಎನ್ನುವ ಪರ್ವತ ಆದ ನಮ್ಮ ಸರ್ವಜ್ಞ||

ಸರ್ವಜ್ಞ ವಚನ 1255 :
ಜಾರಿ ನೆರೆ ಸೇರುವಗೆ । ತೂರರೊಳು ಹೋರುವಗೆ ।
ಊರಿರುಳ ನಾರಿ ಕಳುವಂಗೆ ತಿಳಿಯದಲೆ ।
ಮಾರಿ ಬಂದಿಹುದು ಸರ್ವಜ್ಞ||

ಸರ್ವಜ್ಞ ವಚನ 1256 :
ಕೋತಿಂಗೆ ಗುಣವಿಲ್ಲ। ಮಾತಿಂಗೆ ಕೊನೆಯಿಲ್ಲ।
ಸೋತುಹೋದವಗೆ ಜಗವಿಲ್ಲ, ಅರಿದಂಗೆ।
ಜಾತಿಯೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1257 :
ಪುರುಷ ಕಂಡರೆ ಕೊಲುವ । ಅರಸು ದಂಡವ ಕೊಂಬ ।
ನರರು ಸುರರೆಲ್ಲ ಮುನಿಯವರು, ಅಂತ್ಯಕ್ಕೆ, ನರಕ
ಪರಸತಿಯು ಸರ್ವಜ್ಞ||

ಸರ್ವಜ್ಞ ವಚನ 1258 :
ಕಾಯುವರು ಹಲಬರು।ಕಾವ ಗೊಲ್ಲರ ಕಾಣೆ।
ಮೇಯುವದು ಮರನ ನುಣ್ಣಗದು ಕವಿಗಳಲಿ।
ಗಾವಿಲರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1259 :
ಭಕ್ತಿಯಿಲ್ಲದ ಶಿಷ್ಯ । ಗೊತ್ತಿ ಕೊಟ್ಟುಪದೇಶ
ಬತ್ತಿದ ಕೆರೆಯ ಬಯಲಲ್ಲಿ – ರಾಜನವ
ಬಿತ್ತಿ ಬೆಳೆವಂತೆ ಸರ್ವಜ್ಞ||

ಸರ್ವಜ್ಞ ವಚನ 1260 :
ಅಕ್ಕಿ ಬೊನವು ಲೇಸು । ಸಿಕ್ಕ ಸೆರೆ ಬಿಡಲೇಸು ।
ಹಕ್ಕಿಗಳೊಳಗೆ ಗಿಳಿ ಲೇಸು ।
ಊರಿಗೊಬ್ಬ ಅಕ್ಕಸಾಲೆಂದ ಸರ್ವಜ್ಞ||

ಸರ್ವಜ್ಞ ವಚನ 1261 :
ಜೋಳವನು ತಿಂಬುವನು । ತೋಳದಂತಾಗುವನು ।
ಬೇಳೆ-ಬೆಲ್ಲಗಳನುಂಬವನು ಬಹು
ಬಾಳನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1262 :
ಕಳ್ಳರಿಗೆ ಸುಳ್ಳರಿಗೆ। ಡೊಳ್ಳರಿಗೆ ಡೊಂಬರಿಗೆ।
ಸುಳ್ಳುಗೊರವರಿಗೆ ಕೊಡುವವರು ಧರ್ಮಕ್ಕೆ।
ಎಳ್ಳಷ್ಟು ಕೊಡರು ಸರ್ವಜ್ಞ||

ಸರ್ವಜ್ಞ ವಚನ 1263 :
ಅರೆದಲೆಯು ಮೂಡಲು ಹೊರದಲೆಯು ಬಡಗಲೂ ।
ಸರಿಯಲೆಯು ಉದ್ದ ಪಡುವಲುಂ ತೆಂಗಣದಿ ।
ಬರಿದಲೆಯಲಿಹರು ಸರ್ವಜ್ಞ||

ಸರ್ವಜ್ಞ ವಚನ 1264 :
ಆಡಿದರೆ ಹಾಡುವದು । ಓಡಿ ಮರವನೇರುವದು ।
ಕೂಡದೆ ಕೊಂಕಿ ನಡೆಯುವದು ಹರಿದರದು ।
ಬಾಡದು ಸರ್ವಜ್ಞ||

ಸರ್ವಜ್ಞ ವಚನ 1265 :
ಎಳ್ಳು ಗಾಣಿಗ ಬಲ್ಲ। ಸುಳ್ಳು ಸಿಂಪಿಗ ಬಲ್ಲ।
ಕಳ್ಳರನು ಬಲ್ಲ ತಳವಾರ, ಬಣಜಿಗನು।
ಎಲ್ಲವನು ಬಲ್ಲ ಸರ್ವಜ್ಞ||

ಸರ್ವಜ್ಞ ವಚನ 1266 :
ಸಪ್ಪನ್ನ ಉಣಹೊಲ್ಲ । ಮುಪ್ಪು ಬಡವಗೆ ಹೊಲ್ಲ ।
ತಪ್ಪಿನಲಿಸಿಲುಕಿ ಇರಹೊಲ್ಲ, ಜಾರೆಯನು
ಅಪ್ಪುವದೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1267 :
ಕಡೆ ಬಿಳಿದು ನಡಗಪ್ಪು । ಉಡುವ ವಸ್ತ್ರವದಲ್ಲ್ ।
ಬಿಡದೆ ನೀರುಂಟು ಮಡುವಲ್ಲ ಕವಿಗಳೇ
ಬೆಡಗು ಪೇಳುವರು ಸರ್ವಜ್ಞ||

ಸರ್ವಜ್ಞ ವಚನ 1268 :
ದೇಹಿಯೆನಬೇಡ ನಿ । ದೇಹಿ ಜಂಗಮ ದೇವ
ದೇಹಗುಣದಾಶೆಯಳಿದರೆ – ಆತ ನಿ
ದೇಹಿ ಕಂಡಯ್ಯ ಸರ್ವಜ್ಞ||

ಸರ್ವಜ್ಞ ವಚನ 1269 :
ಕರಿಕೆ ಕುದುರೆಗೆ ಲೇಸು । ಮುರಕವು ಹೆಣ್ಣಿಗೆ ಲೇಸು ।
ಅರಿಕೆಯುಳ್ಳವರ ಕೆಳೆಲೇಸು ಪಶುವಿಂಗೆ ।
ಗೊರೆಸುಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1270 :
ಕನಕ ತಾ ಕಂಕಣದ । ಜನಕನೆಂದೆನಿಸಿಹುದು ।
ಕ್ಷಣಿಕವದು ರೂಪವೆಂದರಿಯದಾ ಮನಜ ।
ಶುನಕನಲೆದಂತೆ । ಸರ್ವಜ್ಞ||

ಸರ್ವಜ್ಞ ವಚನ 1271 :
ಮಗ್ಗಿಯಾ ಗುಣಿಸುವಾ । ಮೊಗ್ಗರದ ಜೋಯಿಸರು ।
ಅಗ್ಗವನು ಮಳೆಯನರಿಯದಲೆ ನುಡಿವವರ ।
ಹೆಗ್ಗಡೆಯಬಲ್ಲ ಸರ್ವಜ್ಞ||

ಸರ್ವಜ್ಞ ವಚನ 1272 :
ಸೋರುವ ಮನೆಯಿಂದ ।ದಾರಿಯ ಮರ ಲೇಸು।
ಹೋರುವ ಸತಿಯ ಬದುಕಿಂದ ಹೊಡೆದೊಯ್ವ ।
ಮಾರಿ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1273 :
ಎರೆಯಿಲ್ಲದಾರಂಬ । ದೊರೆಯು ಇಲ್ಲದ ಊರು ।
ಹರೆಯ ಹೋದವಳ ಒಡನಾಟ, ನಾಯಿ ಹಳೆ।
ಕೆರವ ಕಡಿದಂತೆ ಸರ್ವಜ್ಞ||

ಸರ್ವಜ್ಞ ವಚನ 1274 :
ನಾನು ನೀನು ಭೇದಗ । ಳೇನು ಬೊಮ್ಮಗೆ ಇಲ್ಲ ।
ತಾನೆ ತಾನಾಗಿ ಇಪ್ಪುದೇ ಬೊಮ್ಮದಾ ।
ಸ್ಥಾನವೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1275 :
ಮೊಲೆವಾಲನುಂಬುದನು । ಮೊಲೆಗೂಸು ಬಲ್ಲುದೆ?।
ಮೊಲೆಗೂಸಿನಂತಿಪ್ಪ ಶಿಷ್ಯಂಗೆ ಗುರುಬೋಧೆ ।
ಮೊಲೆವಾಲು ಕಾಣೊ ಸರ್ವಜ್ಞ||

ಸರ್ವಜ್ಞ ವಚನ 1276 :
ಇಂಗು ತಿಂಬಾತಂಗೆ । ಕೊಂಬೇನು ಕೊಳಗೇನು।
ಸಿಂಗಳಿಕವೇನು, ಹಂಗೇನು? ಬೇಲಿಯ।
ಮುಂಗಲಿಯದೇನು ಸರ್ವಜ್ಞ||

ಸರ್ವಜ್ಞ ವಚನ 1277 :
ಜಾತಿ-ಜಾತಿಗೆ ವೈರ । ನೀತಿ ಮೂರ್ಖಗೆ ವೈರ ।
ಪಾತಕವು ವೈರ ಸುಜನರ್ಗೆ ಅರಿದರಿಗೆ
ಏತರದು ವೈರ ಸರ್ವಜ್ಞ||

ಸರ್ವಜ್ಞ ವಚನ 1278 :
ದಂಡು ಇಲ್ಲದ ಅರಸು । ಕುಂಡವಿಲ್ಲದ ಹೋಮ ।
ಬಂಡಿಯಿಲ್ಲದನ ಬೇಸಾಯ ತಲೆಹೋದ ।
ಮುಡದಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 1279 :
ಎಂಟು ಹಣವುಳ್ಳ ತನಕ । ಬಂಟನಂತಿರುತಿಕ್ಕು ।
ಎಂಟು ಹಣ ಹೋದ ಮರುದಿನವೆ ಹುಳುತಿಂದ ।
ದಂತಿನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1280 :
ಮೊಸರು ಇಲ್ಲದ ಊಟ। ಪಸರವಿಲ್ಲದ ಹರದ।
ಹಸನವಿಲ್ಲದವಳ ರತಿಕೂಟ, ಜಿನನ ಬಾಯ್।
ಕಿಸುಕುಳದಂತೆ ಸರ್ವಜ್ಞ||

ಸರ್ವಜ್ಞ ವಚನ 1281 :
ನಿತ್ಯವೂ ಶಿವನ ತಾ । ಹೊತ್ತಾರೆ ನೆನೆದಿಹರೆ ।
ಉತ್ತಮದ ಗತಿಯು ಆದಿಲ್ಲದಿಹಪರದಿ ।
ಮೃತ್ಯುಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1282 :
ಕಲ್ಲುಕಲ್ಲೆಂಬುವಿರಿ , ಕಲ್ಲೋಳಿಪ್ಪುದೆ ದೈವ ?
ಕಲ್ಲಲ್ಲಿ ಕಳೆಯ ನಿಲಿಸಿದ , ಗುರುವಿನ
ಸೊಲ್ಲಲ್ಲೇ ದೈವ , ಸರ್ವಜ್ಞ||

ಸರ್ವಜ್ಞ ವಚನ 1283 :
ಇಂದುವಿನೊಳುರಿಯುಂಟೆ ? ಸಿಂಧುವಿನೊಳರಬುಂಟೆ ?
ಸುಂದ ವೀರನೊಳು ಭಯ ಉಂಟೆ ? ಭಕ್ತಿಗೆ
ಸಂದೇಹ ಉಂಟೆ ? ಸರ್ವಜ್ಞ||

ಸರ್ವಜ್ಞ ವಚನ 1284 :
ಪರುಷ ಕಬ್ಬುನದೆಸೆವ । ಕರಡಿಗೆಯೊಳಡರುವದೆ ।
ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು ।
ಎರಕವಾಗಿಹನೆ ಸರ್ವಜ್ಞ||

ಸರ್ವಜ್ಞ ವಚನ 1285 :
ಊರಿಂಗೆ ದಾರಿಯನು ಆರು ತೋರಿದರೇನು ?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ||

ಸರ್ವಜ್ಞ ವಚನ 1286 :
ಹಲ್ಲುಂಟು ಮೃಗವಲ್ಲ। ಸೊಲ್ಲು ಸೋಜಿಗವಲ್ಲ।
ಕೊಲ್ಲುವುದು ತನ್ನ ನಂಬಿದರ, ಅರಿದರಿದ।
ಬಲ್ಲವರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1287 :
ತೋಡಿದ್ದ ಬಾವಿಂಗೆ । ಕೂಡಿದ್ದ ಜಲ ಸಾಕ್ಷಿ ।
ಮಾಡಿರ್‍ದಕೆಲ್ಲ ಮನಸಾಕ್ಷಿ ಸರ್ವಕ್ಕು ।
ಮೃಢನೆ ತಾ ಸಾಕ್ಷಿ ಸರ್ವಜ್ಞ||

ಸರ್ವಜ್ಞ ವಚನ 1288 :
ಗತವಾದ ಮಾಸವನು । ಗತಿಯಿಂದ ದ್ವಿಗುಣಿಸುತ ।
ಪ್ರತಿಪದದ ತಿಥಿಯನೊಡಗೂಡೆ ಕರಣ ತಾ ।
ನತಿಶಯದಿ ಬಕ್ಕು ಸರ್ವಜ್ಞ||

ಸರ್ವಜ್ಞ ವಚನ 1289 :
ವೀರತನ ವಿತರಣವ । ಸಾಗದ ಚಪಲತೆಯು ।
ಚಾರುತರ ರೂಪ, ಚದುರತನವೆಲ್ಲರಿಗೆ ।
ಹೋರಿದರೆ ಬಹುವೆ ಸರ್ವಜ್ಞ||

ಸರ್ವಜ್ಞ ವಚನ 1290 :
ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
ಕೊರತೆಯಾದಾಗ ಕೊಡುವೆನಿದ್ದರೆ ಎಂದು
ಅರಚುವವನೆ ಹೆಡ್ಡ ಸರ್ವಜ್ಞ||

ಸರ್ವಜ್ಞ ವಚನ 1291 :
ಆಡದೆ ಕೊಡುವವನು। ರೂಢಿಯೊಳಗುತ್ತಮನು।
ಆಡಿಕೊಡುವವನು ಮಧ್ಯಮನಧಮ ತಾ।
ನಾಡಿ ಕೊಡದವನು ಸರ್ವಜ್ಞ||

ಸರ್ವಜ್ಞ ವಚನ 1292 :
ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
ನಾಟಿ ತನು ಗುರುವಿನಲಿ ಕೂಡೆ – ಭಕ್ತನ ಸ
ಘಾಟವದು ನೋಡ ಸರ್ವಜ್ಞ||

ಸರ್ವಜ್ಞ ವಚನ 1293 :
ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
ಅಂಜಿಕೆಯಿಲ್ಲ ಭಯವಿಲ್ಲ – ಜ್ಞಾನವೆಂ
ಬಂಜನವಿರಲು ಸರ್ವಜ್ಞ||

ಸರ್ವಜ್ಞ ವಚನ 1294 :
ಮಾಡಿದುದನೊಪ್ಪದನ। ಮೂಢನಾಗಿಪ್ಪವನ।
ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ ।
ನೋಡಿದರೆ ತೊಲಗು ಸರ್ವಜ್ಞ||

ಸರ್ವಜ್ಞ ವಚನ 1295 :
ಸುಂಲಿಗನು, ಹುಲಿ, ಹಾವು । ಬಿಂಕದಾ ಬೆಲೆವೆಣ್ಣು ।
ಕಂಕಿಯೂ ಸುಂಕ – ನಸುಗುನ್ನಿ ಇವು ಏಳು ।
ಸೊಂಕಿದರೆ ಬಿಡವು ಸರ್ವಜ್ಞ||

ಸರ್ವಜ್ಞ ವಚನ 1296 :
ಸ್ವಾತಿಯ ಹನಿ ಬಿದ್ದು । ಜಾತಿ ಮುತ್ತಾದಂತೆ।
ಸಾತ್ವಿಕನು ಅಪ್ಪಯತಿಗಿಕ್ಕೆ ಪಂಚಮಾ ।
ಪಾತಕವು ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 1297 :
ಸುರತರು ಮರನಲ್ಲ । ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ – ಗುರುವು ತಾ
ನರರೊಳಗಲ್ಲ ಸರ್ವಜ್ಞ||

ಸರ್ವಜ್ಞ ವಚನ 1298 :
ರಾಮನಾಮವೆ ನಾಮ । ಸೋಮ ಶಂಕರ ಗುರುವು
ಆ ಮಹಾರುದ್ರ ಅಧಿದೈವ ಜಗದೊಳಗೆ ।
ಭೀಮನೇ ಭಕ್ತ ಸರ್ವಜ್ಞ||

ಸರ್ವಜ್ಞ ವಚನ 1299 :
ಯತಿಗೇಕೆ ಕೋಪ? ದು। ರ್ಮತಿಗೇಕೆ ಪರತತ್ವ?।
ಪತಿವ್ರತೆಗೇಕೆ ಪರನೋಟ? ಯೋಗಿಗೆ ।
ಸ್ತುತಿ ನಿಂದೆಯೇಕೆ? ಸರ್ವಜ್ಞ||

ಸರ್ವಜ್ಞ ವಚನ 1300 :
ಹಸಿಯ ಅಲ್ಲವು ಲೇಸು ।
ಬಿಳಿಯ ಪಳಿಯು ಲೇಸು ಹುಸಿ ಲೇಸು ಕಳ್ಳಹೆಣ್ಣಿಗೆ ।
ಬೈಗಿನಾ ಬಿಸಿಲು ಲೇಸೆಂದ ಸರ್ವಜ್ಞ|

ಸರ್ವಜ್ಞನ ತ್ರಿಪದಿಗಳು (1201-1250)

ಸರ್ವಜ್ಞ ವಚನ 1201 :
ಎಂಟು ಬಳ್ಳದ ನಾಮ । ಗಂಟಲಲಿ ಮುಳ್ಳುಂಟು ।
ಬಂಟರನು ಪಿಡಿದು ಬಡಿಸುವದು, ಕವಿಗಳಲಿ ।
ಬಂಟರಿದಪೇಳಿ ಸರ್ವಜ್ಞ||

ಸರ್ವಜ್ಞ ವಚನ 1202 :
ಜ್ಞಾನಿ ಸಂಸಾರದೊಳು | ತಾನಿರಬಲ್ಲನು
ಭಾನು ಮಂಡಲದಿ ಹೊಳೆವಂತೆ – ನಿರ್ಲೇಪ
ಏನಾದಡೇನು ಸರ್ವಜ್ಞ||

ಸರ್ವಜ್ಞ ವಚನ 1203 :
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ||

ಸರ್ವಜ್ಞ ವಚನ 1204 :
ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ
ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ
ಸರಿಯಾರು ಹೇಳಿ ಸರ್ವಜ್ಞ||

ಸರ್ವಜ್ಞ ವಚನ 1205 :
ಎಲುವಿನ ಕಾಯಕ್ಕೆ । ಸಲೆ ಚರ್ಮವನು ಹೊದಿಸಿ
ಮಲ-ಮೂತ್ರ-ಕ್ರಿಮಿಯು ಒಳಗಿರ್ಪ – ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ||

ಸರ್ವಜ್ಞ ವಚನ 1206 :
ದ್ವಿಜನಿಂಗೆ ಸಾಮರ್ಥ್ಯ । ಭುಜಗಂಗೆ ಕಡುನಿದ್ರೆ ।
ಗಜಪತಿಗೆ ಮದವು ಅತಿಗೊಡೆ ಲೋಕದಾ ।
ಪ್ರಜೆಯು ಬಾಳುವರೇ ಸರ್ವಜ್ಞ||

ಸರ್ವಜ್ಞ ವಚನ 1207 :
ಸಾಲ ಬಡವಗೆ ಹೊಲ್ಲ । ಸೋಲು ಜೂಜಿಗೆ ಹೊಲ್ಲ ।
ಬಾಲರು ಬೆನ್ನಲಿರ ಹೊಲ್ಲ ಬಡವಂಗೆ ।
ಓಲಗವೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1208 :
ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರಿವಂತೆ – ಶಿವನ ಗುರು
ನಾಥನಿಂದರಿಗು ಸರ್ವಜ್ಞ||

ಸರ್ವಜ್ಞ ವಚನ 1209 :
ಹರಭಕ್ತಿಯಿಲ್ಲದ । ಪರಮಋಷಿ ಮುಖ್ಯನೇ
ಹರಭಕ್ತಿಯುಳ್ಳ ಸ್ವಪಚನಾ – ದೊಡೆಯಾತ್
ಪರಮ ಋಷಿ ತಾನೆ ಸರ್ವಜ್ಞ||

ಸರ್ವಜ್ಞ ವಚನ 1210 :
ಮೊಲನಾಯ ಬೆನ್ನಟ್ಟಿ । ಗೆಲಬಹುದು ಎಂದಿಹರೆ ।
ಗೆಲಭುದು ಎಂದು ಎನಬೇಕು ಮೂರ್ಖನಲಿ ।
ಛಲವು ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 1211 :
ಕಣಕ ನೆನೆದರೆ ಹೊಲ್ಲ । ಕುಣಿಕೆ ಹರಿದರೆ ಹೊಲ್ಲ ।
ಕಣ್ಣು ಕಟ್ಟು ಹೊಲ್ಲ ಅರಿದರಲಿ ಚುಕ್ಕಿಯ ।
ಎಣಿಸುವದೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1212 :
ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವಿನರಿದನ – ಕರ್ಮವು
ಮುಟ್ಟಲಂಜುವವು ಸರ್ವಜ್ಞ||

ಸರ್ವಜ್ಞ ವಚನ 1213 :
ಮಾಯಮೋಹವ ನಚ್ಚಿ । ಕಾಯವನು ಕರಗಿಸಿತೆ
ಆಯಾಸಗೊಳುತ ಇರಬೇಡ – ಓಂ ನಮಶ್ಯಿ
ವಾಯಯೆಂದನ್ನಿ ಸರ್ವಜ್ಞ||

ಸರ್ವಜ್ಞ ವಚನ 1214 :
ಹಲ್ಲು ನಾಲಿಗೆಯಿಲ್ಲ। ಸೊಲ್ಲು ಸೋಜಿಗವಲ್ಲ।
ಕೊಲ್ಲದೆ ಮೃಗವ ಹಿಡಿಯುವುದು, ಲೋಕದೊಳ।
ಗೆಲ್ಲ ಠಾವಿನೊಳು ಸರ್ವಜ್ಞ||

ಸರ್ವಜ್ಞ ವಚನ 1215 :
ನಾಟ ರಾಗವು ಲೇಸು । ತೋಟ ಮಲ್ಲಿಗೆ ಲೇಸು ।
ಕೂಟವದು ಲೇಸು ಹಿರಿಯರೊಳು ಶಿವನ ಅರಿ ।
ದಾಟವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 1216 :
ಇದ್ದೂರ ಸಾಲ ಹೇಗಿದ್ದರೂ ಕೊಳಬೇಡ
ಇದ್ದುದನು ಸೆಳೆದು ಗುದ್ದುತ ಸಾಲವ
ನೊದ್ದು ಕೇಳುವನು ಸರ್ವಜ್ಞ||

ಸರ್ವಜ್ಞ ವಚನ 1217 :
ಮಂಡೆ ಬೋಳಾದೊಡಂ । ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ – ಗುರುಮುಖವ
ಕಂಡಲ್ಲದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1218 :
ಅಲ್ಲ ಸಿಹಿಯಾದಂದು। ನೆಲ್ಲಿ ಹಣ್ಣಾದಂದು।
ಕಲ್ಲು ಪ್ರತಿಮೆಗಳು ಕುಣಿದಂದು, ಸತಿಯರ।
ಸೊಲ್ಲ ನಂಬುವದು ಸರ್ವಜ್ಞ||

ಸರ್ವಜ್ಞ ವಚನ 1219 :
ಜಲದ ಒಳಗಿನ ಕಣ್ಣು। ಸಲೆ ಬೆಮರ ಬಲ್ಲುದೇ।
ಲಲನೆಯರೊಲುಮೆ ತನಗೆಂಬ ಮನುಜಂಗೆ।
ಮಲನಾಗರೆಂದ ಸರ್ವಜ್ಞ||

ಸರ್ವಜ್ಞ ವಚನ 1220 :
ನವಣೆಯನು ತಿಂಬುವನು ।
ಹವಣಾಗಿ ಇರುತಿಹನು ಭವಣಿಗಳಿಗವನು ಒಳಬೀಳನೀ ಮಾತು ।
ಠವಣೆಯಲ್ಲೆಂದ ಸರ್ವಜ್ಞ||

ಸರ್ವಜ್ಞ ವಚನ 1221 :
ಬಂದಿಹೆನು ನಾನೊಮ್ಮೆ । ಬಂದು ಹೋಗುವೆನೊಮ್ಮೆ।
ಬಂದೊಮ್ಮೆ ಹೋಗಿ ನಾ ಬಾರೆ ಕವಿಗಳಲಿ।
ವಂದ್ಯರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1222 :
ತಂದೆ-ತಾಯಿಗಳ ಘನ । ದಿಂದ ವಂದಿಸುವಂಗೆ ।
ಬಂದ ಕುತುಗಳು ಬಯಲಾಗಿ ಸ್ವರ್ಗವದು ।
ಮುಂದೆ ಬಂದಕ್ಕು ಸರ್ವಜ್ಞ||

ಸರ್ವಜ್ಞ ವಚನ 1223 :
ಅಂತಿರ್ದ ಇಂತಿರ್ದ । ಎಂತಿರ್ದನೆನಬೇಡ।
ಕಂತೆಯನು ಹೊದ್ದು ತಿರಿದುಂಬ ಶಿವಯೋಗಿ।
ಎಂತಿರ್ದಡೇನು ಸರ್ವಜ್ಞ||

ಸರ್ವಜ್ಞ ವಚನ 1224 :
ಹಾಲು ಬೋನವು ಲೇಸು । ಮಾಲೆ ಕೊರಳಿಗೆ ಲೇಸು ।
ಸಾಲವಿಲ್ಲದವನ ಮನೆ ಲೇಸು । ಬಾಲರ
ಲೀಲೆ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1225 :
ನರಹತ್ಯವೆಂಬುದು । ನರಕದಾ ನಡುಮನೆಯು ।
ಗುರು ಶಿಶುವು ನರರ ಹತ್ಯವನು ಮಾಡಿದನ ।
ಇರವು ರೌರವವು ಸರ್ವಜ್ಞ||

ಸರ್ವಜ್ಞ ವಚನ 1226 :
ನಟ್ಟಡವಿಯಾ ಮಳೆಯು । ದುಷ್ಟರಾ ಗೆಳೆತನವು ।
ಕಪ್ಪೆಯಾದವಳ ತಲೆಬೇನೆ ಇವು ಮೂರು
ಕೆಟ್ಟರೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 1227 :
ಹುತ್ತು ಹಾವಿಗೆ ಲೇಸು । ಮುತ್ತು ಕೊರಳಿಗೆ ಲೇಸು ।
ಕತ್ತೆಯಾ ಹೇರುತರ ಲೇಸು । ತುಪ್ಪದಾ ।
ತುತ್ತು ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1228 :
ಹಂಗಿನರಮನೆಗಿಂತ । ಇಂಗಡದ ಗುಡಿ ಲೇಸು ।
ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ ।
ತಂಗುಳವೆ ಲೇಸು ಸರ್ವಜ್ಞ||

ಸರ್ವಜ್ಞ ವಚನ 1229 :
ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರೆಮನೆಯಕ್ಕು ಸರ್ವಜ್ಞ||

ಸರ್ವಜ್ಞ ವಚನ 1230 :
ಕಣಕದಾ ಕಡುಬಾಗಿ । ಮಣಕೆಮ್ಮೆ ಹಯನಾಗಿ ।
ಕುಣಿ ಕುಣಿದು ಕಡವ ಸತಿಯಾಗಿ ಬೆಳವಲದ
ಅಣಕ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 1231 :
ನವಣೆಯಾ ಬೋನಕ್ಕೆ । ಹವಣಾದ ತೊಗೆಯಾಗಿ ।
ಕವಣೆಗಲ್ಲದಷ್ಟು ಬೆಣ್ಣೆಯಿದರೂಟದಾ ।
ಹವಣ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 1232 :
ಮುನಿವಂಗೆ ಮುನಿಯದಿರು । ಕನೆಯದಿರು
ಮನಸಿಜಾರಿಯನು ಮರೆಯದಿರು – ಶಿವನ ಕೃಪೆ
ಘ್ನಕೆ ಘನವಕ್ಕು ಸರ್ವಜ್ಞ||

ಸರ್ವಜ್ಞ ವಚನ 1233 :
ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ
ನಾನೆನ್ನ ಗುರುವಿನೊಳಡಗಿ – ಸಂಸಾರ
ತಾನದೆತ್ತಣದು ಸರ್ವಜ್ಞ||

ಸರ್ವಜ್ಞ ವಚನ 1234 :
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ – ದಿಂ ಮುಕ್ತಿ
ಕಾಣಿಸುತಿಹುದು ಸರ್ವಜ್ಞ||

ಸರ್ವಜ್ಞ ವಚನ 1235 :
ಹೊಲಸು ಮಾಂಸದ ಹುತ್ತ । ಎಲುವಿನ ಹಂಜರವು
ಹೊಲೆ ಬಲಿದು ತನುವಿನೊಳಗಿರ್ದು – ಮತ್ತದರಿ
ಕುಲವನೆಣೆಸುವರೆ ಸರ್ವಜ್ಞ||

ಸರ್ವಜ್ಞ ವಚನ 1236 :
ಕರ್ಪುರದಿ ಹುಟ್ಟೆಹುದು। ಕರ್ಪುರವು ತಾನಲ್ಲ।
ಕರ್ಪುರವು ಅಹುದು ಬಿಳಿಯಲ್ಲ, ಈ ಮಾತು।
ಕರ್ಪುರದಲುಂಟು ಸರ್ವಜ್ಞ||

ಸರ್ವಜ್ಞ ವಚನ 1237 :
ಅಕ್ಕಸಾಲೆಯ ಮಗನು । ಚಿಕ್ಕನೆಂದೆನಬೇಡ ।
ಚಿಕ್ಕಟವು ಮಯ ಕಡಿವಮ್ತೆ ಚಿಮ್ಮಟವ ।
ನಿಕ್ಕುತಲೆ ಕಳುವ ಸರ್ವಜ್ಞ||

ಸರ್ವಜ್ಞ ವಚನ 1238 :
ನಾಲಿಗೆಯ ಕೀಲವನು । ಶೀಲದಲ್ಲಿ ತಾನರಿದು ।
ಶೂಲವದು ರುಚಿಯು ಎಂದಿರುವನು ಮುದಿಯಲ್ಲಿ ।
ಬಾಲನಂತಿಹನು ಸರ್ವಜ್ಞ||

ಸರ್ವಜ್ಞ ವಚನ 1239 :
ಕಂಡವರು ಕೆರಳುವರು । ಹೆಂಡತಿಯು ಕನಲುವಳು ।
ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ ।
ಕಂಡಕೊಳ್ದಿರಕು ಸರ್ವಜ್ಞ||

ಸರ್ವಜ್ಞ ವಚನ 1240 :
ಕಾಸು ವೆಚ್ಚಕೆ ಲೇಸು । ದೋಸೆ ಹಾಲಿಗೆ ಲೇಸು ।
ಕೂಸಿಂಗೆ ತಾಯಿ ಇರಲೇಸು, ಹರೆಯದಗೆ ।
ಮೀಸೆ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1241 :
ದಿಟವೆ ಪುಣ್ಯದ ಪುಂಜ । ಸಟಿಯೆ ಪಾಪನ ಬೀಜ ।
ಕುಟಿಲ ವಂಚನೆಗೆ ಪೋಗದಿರು । ನಿಜದಿ ಪಿಡಿ ।
ಘಟವನೆಚ್ಚರದಿ ಸರ್ವಜ್ಞ||

ಸರ್ವಜ್ಞ ವಚನ 1242 :
ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು
ಒಡಲನೆ ಕಟ್ಟಿ ಹಿಡಿಸುವುದು – ಲೋಭದ
ಗಡಣ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1243 :
ನೆತ್ತವದು ಒಳಿತೆಂದು । ನಿತ್ಯವಾಡಲು ಬೇಡ ।
ನೆತ್ತದಿಂ ಕುತ್ತ್ – ಮುತ್ತಲೂ ಸುತ್ತೆಲ್ಲ ।
ಕತ್ತಲಾಗಿಹುದು ಸರ್ವಜ್ಞ||

ಸರ್ವಜ್ಞ ವಚನ 1244 :
ಬ್ರಹ್ಮಸ್ವ ದೇವಸ್ವ । ಮಾನಿಸರು ಹೊಕ್ಕಿಹರೆ ।
ಹೆಮ್ಮಗನು ಸತ್ತು ತಾ ಸತ್ತು ಮನೆಯೆಲ್ಲ ।
ನಿರ್ಮೂಲವಕ್ಕು ಸರ್ವಜ್ಞ||

ಸರ್ವಜ್ಞ ವಚನ 1245 :
ತೊತ್ತಿನಲಿ ಗುಣವಿಲ್ಲ । ಕತ್ತೆಗಂ ಕೋಡಿಲ್ಲ ಬತ್ತಲಿದ್ದವಗೆ
ಭಯವಿಲ್ಲ ಕೊಂಡೆಯರೊಳು ।
ತ್ತಮರೆ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1246 :
ಒಂದೂರ ಗುರುವಿರ್ದು | ವಂದನೆಯ ಮಾಡದೆ
ಸಂಧಿಸಿ ಕೂಳ ತಿನುತಿರ್ಪವನ – ಇರವು
ಹಂದಿಯ ಇರವು ಸರ್ವಜ್ಞ||

ಸರ್ವಜ್ಞ ವಚನ 1247 :
ಅಷ್ಟದಳಕಮಲದಲಿ । ಕಟ್ಟಿತಿರುಗುವ ಹಂಸ ।
ಮೆಟ್ಟುವಾ ದಳವ ನಡುವಿರಲಿ ಇರುವದನು ।
ಮುಟ್ಟುವನೆ ಯೋಗಿ ಸರ್ವಜ್ಞ||

ಸರ್ವಜ್ಞ ವಚನ 1248 :
ಉಂಡು ಕೆಂಡವ ಕಾಸಿ । ಶತಪಥ ನಡೆದು ।
ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ ।
ಭಂಡಾಟವಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1249 :
ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ||

ಸರ್ವಜ್ಞ ವಚನ 1250 :
ಅಡರಿ ಮೂಡಲು ಮಿಂಚು । ಪಣುವಣ್ಗೆ ಧನುವೇಳೆ ।
ಬಡಗಣದ ಗಾಳಿ ಕಡುಬೀಸೆ ಮಳೆಯು ತಾ ।
ತಡೆಯದಲೆ ಬಕ್ಕು ಸರ್ವಜ್ಞ||
          

ಸರ್ವಜ್ಞ ವಚನ (1151-1200)

ಸರ್ವಜ್ಞ ವಚನ 1151 :
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚ್ಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ||

ಸರ್ವಜ್ಞ ವಚನ 1152 :
ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
ಗುಣಹೀನರುಗಳ ಒಡನಾಟ – ಬಹುದುಃಖ
ದಣಲೊಳಿರ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1153 :
ಕಿರಿಮೀನು ಹಿರಿಮೀನು । ಕೊರೆ ತರೆದು ತಿಂಬಾತ
ಗಿರುವವನು ಒಬ್ಬ ಮಗಸಾಯ ನೋವಿನಾ ।
ತೆರನ ತಾನರಿವ ಸರ್ವಜ್ಞ||

ಸರ್ವಜ್ಞ ವಚನ 1154 :
ವಚನದೊಳಗೆಲ್ಲವರು । ಶುಚಿ, ವೀರ, ಸಾಧುಗಳು।
ಕುಚ, ಶಸ್ತ್ರ, ಹೇಮ, ಸೋಂಕಿದರೆ ಲೋಕದೊಳ।
ಗಚಲದವರಾರು ಸರ್ವಜ್ಞ||

ಸರ್ವಜ್ಞ ವಚನ 1155 :
ಕುಸ್ತಿಯಲಿ ಭೀಮಬಲ । ಕುಸ್ತಿಯಲಿ ಕಾಮಬಲ ।
ಅಸ್ತಿ ಮುರಿದಿಹುದು ಕೀಚಕನ, ಪರಸತಿಯ ।
ಪ್ರಸ್ತವೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 1156 :
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯಾ ಸರ್ವಜ್ಞ||

ಸರ್ವಜ್ಞ ವಚನ 1157 :
ಅಷ್ಟದಲ ಕಮಲವನು । ಮೆಟ್ಟಿಪ್ಪ ಹಂಸ ತಾ ।
ಮುಟ್ಟಿಪ್ಪ ಗತಿಯನರಿಯದಾ ಯೋಗಿ ತಾ ।
ಕೆಟ್ಟನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1158 :
ಒಳ್ಳೆಯನು ಇರದೂರ । ಕಳ್ಳನೊಡನಾಟವು ।
ಸುಳ್ಳನಾ ಮಾತು ಇವು ಮೂರು ಕೆಸರೊಳಗೆ ।
ಮುಳ್ಳು ತುಳಿದಂತೆ ಸರ್ವಜ್ಞ||

ಸರ್ವಜ್ಞ ವಚನ 1159 :
ಗಾಣಿಗನು ಈಶ್ವರನ । ಕಾಣನೆಂಬುದು ಸಹಜ ।
ಏಣಾಂಕಧರನು ಧರೆಗಿಳಿಯಲವನಿಂದ ।
ಗಾಣವಾಡಿಸುವ ಸರ್ವಜ್ಞ||

ಸರ್ವಜ್ಞ ವಚನ 1160 :
ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1161 :
ಧರೆಯಲ್ಲಿ ಹುಟ್ಟಿ ಅಂ। ತರದಲ್ಲಿತಿರುಗುವುದು।
ಮೊರೆದೇರಿ ಕಿಡಿಯನುಗುಳುವುದುಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1162 :
ಸಂಗವನು ತೊರೆದಂಗೆ ಅಂಗನೆಯರಿರಲೇಕೆ ?
ಬಂಗಾರವೇಕೆ ? ಬಲವೇಕೆ ? ಲೋಕದಾ
ಶೃಂಗಾರವೇಕೆ ? ಸರ್ವಜ್ಞ||

ಸರ್ವಜ್ಞ ವಚನ 1163 :
ಒಳಗೊಂದು ಕೋರುವನು । ಹೊರಗೊಂದು ಕೋರುವನು ।
ಕೆಳಗೆಂದು ಬೀಳ ಹಾರುವನ, ಸರ್ಪನಾ ।
ಸುಳಿವು ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 1164 :
ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ ನೆನಹು ಘನವಾಗೆ ಶಿವಲಿಂಗ
ಹಿಂಗಿರದು ಅವನ ಸರ್ವಜ್ಞ||

ಸರ್ವಜ್ಞ ವಚನ 1165 :
ಆಳಾಗಬಲ್ಲವನು । ಆಳುವನು ಅರಸಾಗಿ ।
ಆಳಾಗಿ ಬಾಳಲರೆಯದವ ಕಡೆಯಲ್ಲಿ ।
ಹಾಳಾಗಿ ಹೋದ ಸರ್ವಜ್ಞ||

ಸರ್ವಜ್ಞ ವಚನ 1166 :
ಸಾರವನು ಬಯಸುವದೇ । ಕ್ಷಾರವನು ಬೆರಸುವದು ।
ಮಾರಸಂಹರನ ನೆನೆಯುವಡೆ ಮೃತ್ಯು ತಾ ।
ದೂರಕ್ಕೆ ದೂರ ಸರ್ವಜ್ಞ||

ಸರ್ವಜ್ಞ ವಚನ 1167 :
ತಾನಕ್ಕು ಪರನಕ್ಕು ಶ್ವಾನಗರ್ದಭನಕ್ಕು ।
ವಾನರನು ಅಕ್ಕು ಪಶುವಕ್ಕು ಪಯಣದಲಿ
ಸೀನೆ ಭಯವಕ್ಕು ಸರ್ವಜ್ಞ||

ಸರ್ವಜ್ಞ ವಚನ 1168 :
ಸತ್ಯರೂ ಹುಸಿಯುವಡೆ । ಒತ್ತಿ ಹರಿದರೆ ಶರಧಿ ।
ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ।
ಸಾಗುವದು ಸರ್ವಜ್ಞ||

ಸರ್ವಜ್ಞ ವಚನ 1169 :
ಇದ್ದುದನು ಬಿಟ್ಟು ಹೊರಗಿದ್ದುದನೆ ಬಯಸುತಲೆ
ಇದ್ದು ಉಣದಿಪ್ಪ ಬಾಯೊಳಗೆ ಕತ್ತೆಯಾ
ಲದ್ದಿಯೇ ಬೀಳ್ಗು ಸರ್ವಜ್ಞ||

ಸರ್ವಜ್ಞ ವಚನ 1170 :
ಮುತ್ತೊಡೆದು ಹತ್ತಿರಲು । ಮತ್ತಾನೆ ಸತ್ತಿರಲು।
ಹುತ್ತವನೇರಿ ನರಿ ಕೂಗೆ ಜಗಕೆಲ್ಲ ।
ಕುತ್ತು ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1171 :
ತನ್ನಲಿಹ ಲಿಂಗವನು ಮನ್ನಿಸಲಿಕರಿಯದಲೆ
ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ||

ಸರ್ವಜ್ಞ ವಚನ 1172 :
ತುರುಕನ ನೆರೆ ಹೊಲ್ಲ। ಹರದನ ಕೆಳೆ ಹೊಲ್ಲ।
ತಿರಿಗೂಳನಟ್ಟು ಉಣಲೊಲ್ಲ,ಪರಸತಿಯ।
ಸರಸವೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1173 :
ಸತ್ಯಕ್ಕೆ ಸರಿಯಿಲ್ಲ । ಮಿಥ್ಯಕ್ಕೆ ನೆಲೆಯಿಲ್ಲ ।
ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ ।
ನಿತ್ಯರೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1174 :
ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
ಹತವ ಗೈವುದಕ್ಕೆ ರುದ್ರಗಣ, ಇವರುಗಳ
ಸ್ಥಿತಿಯನರಿಯೆಂದ ಸರ್ವಜ್ಞ||

ಸರ್ವಜ್ಞ ವಚನ 1175 :
ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು – ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ||

ಸರ್ವಜ್ಞ ವಚನ 1176 :
ಮಡಿಯನುಟ್ಟವರನ್ನು । ನುಡಿಸುವರು ವಿನಯದಲಿ ।
ಒಡಹುಟ್ಟಿದವರು ಅರುವೆಯನು ಉಟ್ಟಿಹರೆ ।
ನುಡಿಸ ನಾಚುವರು ಸರ್ವಜ್ಞ||

ಸರ್ವಜ್ಞ ವಚನ 1177 :
ಬಂಡುಣಿಗಳಂತಿಹರು । ಭಂಡನೆರೆ ಯಾಡುವರು ಕಂಡುದನು
ಅರಿದು ನುಡಿಯರಾ ಹಾರುವರು ।
ಭಂಡರೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1178 :
ಒಂದು ಒಂಭತ್ತು ತಲೆ । ಸಂದ ತೋಳಿಪ್ಪತ್ತು ।
ಬಂಧುಗಳನ್ನೆಲ್ಲ ಕೆಡಿಸಿತು, ಪತಿವ್ರತೆಯ ।
ತಂದ ಕಾರಣದಿ ಸರ್ವಜ್ಞ||

ಸರ್ವಜ್ಞ ವಚನ 1179 :
ಹೆಣ್ಣಿಗೂ ಮಣ್ಣಿಗೂ ಉಣ್ಣುದುರಿಯಲುಬೇಡ ।
ಹೆಣ್ಣಿನಿಂದ ಕೆಟ್ಟ ದಶಕಂಠ ಕೌರವನು ।
ಮಣ್ಣಿಂದ ಕೆಡನೆ ಸರ್ವಜ್ಞ||

ಸರ್ವಜ್ಞ ವಚನ 1180 :
ಅರಿಯೆನೆಂಬುವದೊಂದು । ಅರಸು ಕೆಲಸವು ಕಾಣೋ ।
ಅರಿದೆನೆಂದಿಹನು ದೊರೆಗಳಾ ಆಳೆಂದು ।
ಮರೆಯಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 1181 :
ವಂಶವನು ಪುಗನೆಂದಿ, ಗಾಶಿಸನು ಪರಧನವ
ಸಂಶಯವನಳಿದ ನಿಜಸುಖಿ ಮಹಾತ್ಮನು
ಹಿಂಸೆಗೊಡಬಡನು ಸರ್ವಜ್ಞ||

ಸರ್ವಜ್ಞ ವಚನ 1182 :
ಕೊಲು ಧರ್ಮಗಳ – ನೊಯ್ದು । ಒಲೆಯೊಳಗೆ ಇಕ್ಕುವಾ ।
ಕೊಲಲಾಗದೆಂಬ ಜೈನನಾ ಮತವೆನ್ನ ।
ತಲೆಯ ಮೇಲಿರಲಿ ಸರ್ವಜ್ಞ||

ಸರ್ವಜ್ಞ ವಚನ 1183 :
ತತ್ವದಾ ಜ್ಞಾನತಾ । ನುತ್ತಮವು ಎನಬೇಕು ।
ಮತ್ತೆ ಶಿವಧ್ಯಾನ ಬೆರೆದರದು ।
ಶಿವಗಿರಿಂ । ದತ್ತಲೆನಬೇಕು ಸರ್ವಜ್ಞ||

ಸರ್ವಜ್ಞ ವಚನ 1184 :
ಸುರೆಯ ಹಿರಿದುಂಡವಗೆ । ಉರಿಯಮೇಲಾಡುವಗೆ ।
ಹರಿಯುವಾ ಹಾವ ಪರನಾರಿ ಪಿಡಿದಂಗೆ ।
ಮರಣ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1185 :
ಮುದ್ದು ಮಂತ್ರವು, ಶುಕನು । ತಿದ್ದುವವು ಕುತ್ತಗಳ ।
ತಿದ್ದಿಯೂ ತಿದ್ದಲರಿಯವವು ಶಿವನೊಲಿಯ ।
ದಿದ್ದಿಹರೆ ಕಾಣೊ ಸರ್ವಜ್ಞ||

ಸರ್ವಜ್ಞ ವಚನ 1186 :
ಒಂದೂರ ಗುರುವಿರ್ದು । ವಂದನೆಯ ಮಾಡದೆ
ಸಂದಿಸೆ ಕೊಳ ತಿನಿತಿಪರ್ವನ – ಇಅರವು
ಹಮ್ದಿಯ ಇಅರವು ಸರ್ವಜ್ಞ||

ಸರ್ವಜ್ಞ ವಚನ 1187 :
ಏಳು ಕೋಟಿಯ ಏಳು ಲಕ್ಷದ
ಏಳು ಸಾವಿರದ ಎಪ್ಪತ್ತು ವಚನಗಳನ್ನು
ಹೇಳಿದಾನೆ ಕೇಳಿ ನಮ್ಮ ಸರ್ವಜ್ಞ||

ಸರ್ವಜ್ಞ ವಚನ 1188 :
ಸಂಗದಿಂ ಕೆಳೆಯಿಲ್ಲ । ಬಿಂಗದಿಂ ಹೊರೆಯಿಲ್ಲ
ಗಂಗೆಯಿಂದಧಿಕ ನದಿಯಿಲ್ಲ – ಪರದೈವ
ಲಿಂಗದಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1189 :
ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು
ಮಾತು ತಾನರಿಯದಧಮಂಗೆ ಮಾಣಿಕವು
ತೂತು ಬಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1190 :
ತೆಪ್ಪವನ್ನು ನಂಬಿದಡೆ । ತಪ್ಪದಲೆ ತಡಗಹದು ।
ಸರ್ಪಭೂಷಣನ ನಂಬಿದಡೆ ಭವಪಾಶ ।
ತಪ್ಪಿ ಹೋಗುವುದು ಸರ್ವಜ್ಞ||

ಸರ್ವಜ್ಞ ವಚನ 1191 :
ಕಂಡವರು ಕೆರಳುವರು। ಹೆಂಡತಿಯು ಕನಲುವಳು।
ಖಂಡಿತದಿ ಲಕ್ಷ್ಮಿ ತೊಲಗುವಳು, ಶಿವನೊಲುಮೆ।
ಕಂಡು ಕೊಳದಿರಲು ಸರ್ವಜ್ಞ||

ಸರ್ವಜ್ಞ ವಚನ 1192 :
ಅಂಕದರ್ಜುನ ಹೇಡಿ , ಶಂಕರನು ತಿರಿದುಂಡ
ಪಂಕಜನಾಭ ದನಕಾಯ್ದ , ಇನ್ನುಳಿದವರ
ಬಿಂಕಬೇನೆಂದ ಸರ್ವಜ್ಞ||

ಸರ್ವಜ್ಞ ವಚನ 1193 :
ಸಂಗದಿಂ ಕೆಳೆಯಿಲ್ಲಿ । ಭಂಗದಿಂ ವ್ಯಥೆಯಿಲ್ಲ ।
ಗಂಗೆಯಿಂದಧಕ ನದಿಯಲ್ಲಿ ಪರದೈವ ।
ಲಿಂಗದಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1194 :
ಸಾಣೆ ಕಲ್ಲೊಳು ಗಂಧ । ಮಾಣದಲೆ ಎಸೆವಂತೆ ।
ಜಾಣಸದ್ಗುರುವಿನುಪದೇಶದಿಂ ಮುಕ್ತಿ
ಕಾಣಿಸುತ್ತಿಹುದು ಸರ್ವಜ್ಞ||

ಸರ್ವಜ್ಞ ವಚನ 1195 :
ನೂರಮುವತ್ತು ಗುರಿ। ಬೇರೆ ಇನ್ನೊಂದು ತಲೆ।
ಊರಿದವು ಎರಡು ಸಮಪಾದ,ಮತ್ತೆರಡ।
ನೂರದೇಕೆಂದ ಸರ್ವಜ್ಞ||

ಸರ್ವಜ್ಞ ವಚನ 1196 :
ಎಂತು ಜೀವಿಯ ಕೊಲ್ಲ । ದಂತಿಹುದು ಜಿನಧರ್ಮ ।
ಜಂತುಗಳ ಹೆತ್ತು ಮರಳಿಯದನೇ ಸಲಹಿ ।
ದಂತವನೆ ಜೈನ ಸರ್ವಜ್ಞ||

ಸರ್ವಜ್ಞ ವಚನ 1197 :
ಕಾಯ ಕಮಲವೇ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿಂ ಶಿವಪೂಜೆ ಮಾಡುವವನ
ದೇವನೆಂದೆಂಬೆ ಸರ್ವಜ್ಞ||

ಸರ್ವಜ್ಞ ವಚನ 1198 :
ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು
ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ
ಮುಂದೆ ಬಂದಕ್ಕು , ಸರ್ವಜ್ಞ||

ಸರ್ವಜ್ಞ ವಚನ 1199 :
ವಿದ್ಯೆಯೇ ತಾಯ್ತಂದೆ । ಬುದ್ಧಿಯೇ ಸೋದರನು ।
ಆಭ್ವಾನ ಕಾದರವ ನೆಂಟ, ಸುಖದಿ ತಾ ।
ನಿದ್ದುದೇ ರಾಜ್ಯ ಸರ್ವಜ್ಞ||

ಸರ್ವಜ್ಞ ವಚನ 1200 :
ಉದ್ದುರುಟು ಮಾತಾಡಿ । ಇದುದನು ಹೋಗಾಡಿ ।
ಉದ್ದನಾ ಮರವ ತುದಿಗೇರಿ ತಲೆಯೂರಿ ।
ಬಿದ್ದು ಸತ್ತಂತೆ ಸರ್ವಜ್ಞ||

ಸರ್ವಜ್ಞನ ತ್ರಿಪದಿಗಳು (1101-1150)

ಸರ್ವಜ್ಞ ವಚನ 1101 :
ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
ಅನ್ಯರು ಕೊಂದರೆನ ಬೇಡ – ಇವು ಮೂರು
ತನ್ನನೇ ಕೊಲುಗು ಸರ್ವಜ್ಞ||

ಸರ್ವಜ್ಞ ವಚನ 1102 :
ಬೇರೂರ ಸಾಲವನು । ನೂರನಾದರೂ ಕೊಳ್ಳು ।
ನೂರಾರು ವರ್ಷಕವ ಬಂದ ದಾರಿಯಲಿ ।
ಸಾರಿ ಹೋಗುವನು ಸರ್ವಜ್ಞ||

ಸರ್ವಜ್ಞ ವಚನ 1103 :
ಲಜ್ಜೆಯನು ತೊರೆದು ನೀ । ಹೆಜ್ಜೆಯನು ಸಾಧಿಪಡೆ ।
ಸಜ್ಜೆಯಲಿ ಶಿವನ ಶರಣರಾ –
ಹೆಜ್ಜೆಯಲಿ ನಡೆಯೋ ಸರ್ವಜ್ಞ||

ಸರ್ವಜ್ಞ ವಚನ 1104 :
ಜ್ಯೋತಿಯಿಂದವೆ ನೇತ್ರ । ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರೆವಂತೆ – ಶಿವನ ಗುರು
ನಾಥನಿಂದರಿಗು ಸರ್ವಜ್ಞ||

ಸರ್ವಜ್ಞ ವಚನ 1105 :
ಹುಸಿವನಿಂದೈನೂರು । ಪಶುವ ಕೊಂದವ ಲೇಸು ।
ಶಿಶು ವಧೆಯಮಾಡಿದವ ಲೇಸು, ಮರೆಯಲಿ ।
ದ್ದೆಸೆದರೂ ಲೇಸು ಸರ್ವಜ್ಞ||

ಸರ್ವಜ್ಞ ವಚನ 1106 :
ಅರ್ಥ ಸಿಕ್ಕರೆ ಬಿಡರು। ವ್ಯರ್ಥದಿ ಶ್ರಮಬಡರ।
ನರ್ಥಕೆ ಪರರ ನೂಂಕಿಪರು, ವಿಪ್ರರಿಂ।
ಸ್ವಾರ್ಥರಿನ್ನಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1107 :
ಕೆನ್ನೆಯಲಿ ಕುಡಿವಾಲ। ತನ್ನ ಸುತ್ತಲು ಮಣಿಯು।
ತನ್ನ ದೇಹವನು ಹಣ್ಣುವದು, ಕವಿಗಳಲಿ।
ಚೆನ್ನರಿದ ಪೇಳಿ,ಸರ್ವಜ್ಞ||

ಸರ್ವಜ್ಞ ವಚನ 1108 :
ನಿಲ್ಲದಲೆ ಹರಸಿದಡೆ । ಕಲ್ಲು ಭೇದಿಸಲಕ್ಕು ।
ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ ।
ಇಲ್ಲೆನಲಿಕರಿಯ ಸರ್ವಜ್ಞ||

ಸರ್ವಜ್ಞ ವಚನ 1109 :
ಕೂಳಿಲ್ಲದವನೊಡಲು । ಹಾಳುಮನೆಯಂತಕ್ಕು ।
ಹೇಳಿದಲೆ ಹೋಗಲು ರುಜೆಗಳಿಂ ತನುವೊಡೆದು ।
ಹಾಳೆಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1110 :
ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವು
ಅಚ್ಚಳಿದು ನಿಜದಿ ನಿಂದಂತೆ ಭೇದವನು
ಮುಚ್ಚುವನೆ ಶರಣ , ಸರ್ವಜ್ಞ||

ಸರ್ವಜ್ಞ ವಚನ 1111 :
ಪವನಪರಿಯರಿದಂಗೆ । ಶಿವನ ಸಾಧಿಸಲಕ್ಕು ।
ಭವಮಾಲೆ ಹರಿದು ಸುಖಿಸುವೊಡೆ ಅವ
ಸದಾಶಿವನು ತಾನಕ್ಕು ಸರ್ವಜ್ಞ||

ಸರ್ವಜ್ಞ ವಚನ 1112 :
ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
ಬಲ್ಲ ದಾಶಿವನ ಭಜಿಸಿ ಬೇಡಿದಾತ
ಇಲ್ಲೆನಲಿಕರಿಯ ಸರ್ವಜ್ಞ||

ಸರ್ವಜ್ಞ ವಚನ 1113 :
ಉಣ್ಣದಲೆ ಉರಿಯುವರು । ಮಣ್ಣಿನಲಿ ಮೆರೆಯುವರು ।
ಗಾಜೊಂದು ಲೋಹದೊಳಗಲ್ಲ ಅಂಬಲಿಯು ।
ಭೋಜನದೊಳಲ್ಲ ಸರ್ವಜ್ಞ||

ಸರ್ವಜ್ಞ ವಚನ 1114 :
ಬುದ್ಧಿವಂತರ ಕೂಟ। ವೆದ್ದು ಗಾರುವ ಹದ್ದು ।
ಬುದ್ಧಿಯಿಲ್ಲದವರ ನೆರೆ ಕೂಟ ಕೊರಳೊಳಗೆ ।
ಗುದ್ದಿಯಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1115 :
ಉದ್ಯೋಗವಿಲ್ಲದವನು । ಬಿದ್ದಲ್ಲಿ ಬಿದ್ದಿರನು ।
ಹದ್ದುನೆವನವನು ಈಡಾಡಿ ಹಾವ ಕೊಂ ।
ಡೆದ್ದು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 1116 :
ಮೂರು ಖಂಡುಗ ಹೊಟ್ಟ । ತೂರಿದರೆ ಫಲವೇನು ।
ಮೂರರಾ ಮಂತ್ರದಿಂದಲಿ ಪರಬೊಮ್ಮ ।
ವಿರಿಹುದು ನೋಡು ಸರ್ವಜ್ಞ||

ಸರ್ವಜ್ಞ ವಚನ 1117 :
ಮರನೊತ್ತಿ ಬೇಯುವದು। ಉರಿತಾಗಿ ಬೇಯದದು।
ಪುರಗಳ ನುಂಗಿ ಬೊಗಳುವದು ಲೋಕದೊಳು।
ನರನಿದೇನಿಹುದು ಸರ್ವಜ್ಞ||

ಸರ್ವಜ್ಞ ವಚನ 1118 :
ಕಲ್ಲರಳಿ ಹೂವಾಗಿ । ಎಲ್ಲರಿಗೆ ಬೇಕಾಗಿ।
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ।
ಬಲ್ಲವರು ಹೇಳಿ ಸರ್ವಜ್ಞ||

ಸರ್ವಜ್ಞ ವಚನ 1119 :
ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು – ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ||

ಸರ್ವಜ್ಞ ವಚನ 1120 :
ಕೋಟಿಯನು ಕೊಟ್ಟರೂ ಕೂಟ ಕರ್ಮಿಯ ಹೊಲ್ಲ
ನೋಟದಲಿ ನಿಜವನರಿವ ಸುಜ್ಞಾನಿಯಾ
ಕೂಟವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 1121 :
ಹಾರುವರು ಎಂಬುವರು । ಹಾರುತ್ತಲಿರುತಿಹರು ।
ಹಾರುವಗೆ ಸಲುಹುವರ ದೊರೆಯೊಡನೆ ನಿಜಗುಣ ।
ತೋರದಡುಗುವದು ಸರ್ವಜ್ಞ||

ಸರ್ವಜ್ಞ ವಚನ 1122 :
ಕೆಂಬಾಯಿ ತೆರೆಯುತ್ತ । ಕೆಂಬಲ್ಲ ತೋರುತ್ತ।
ಕಂಬವನೊರಗಿ ಮುರುಕಿಪಳು, ಹಾದರದ।
ಬೊಂಬೆ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1123 :
ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
ಹೆಣ್ಣಿಂದ ಸಕಲ ಫಲವುಂಟು – ಮರೆದರೆ
ಹೆಣ್ಣಿಂದ ಮರಣ ಸರ್ವಜ್ಞ||

ಸರ್ವಜ್ಞ ವಚನ 1124 :
ಮೊಸರ ಕಡೆಯಲು ಬೆಣ್ಣೆ । ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ – ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ||

ಸರ್ವಜ್ಞ ವಚನ 1125 :
ಸತ್ಯಕ್ಕೆ ಸರಿಯಿಲ್ಲ । ಚಿತ್ತಕ್ಕೆ ಸ್ಥಿರವಿಲ್ಲ ।
ಹಸ್ತದಿಂದಧಿಕಹಿತರಿಲ್ಲ ಪರದೈವ ।
ನಿತ್ಯನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1126 :
ಆಡಿ ಮರಗಲು ಹೊಲ್ಲ । ಕೂಡಿ ಕಾದಲು ಹೊಲ್ಲ ।
ಬೇಡನಾ ನಂಟು ತರವಲ್ಲ ಅವನ ಕುರಿ ।
ತಾಡುವದೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1127 :
ವಾಯು-ವಾಯುವ ಕೂಡೆ । ವಹಿಲದಿಂ ಮಳೆಯಕ್ಕು ।
ವಾಯು – ನೈಋತ್ಯನೊಡಗೂಡೆ ಮಳೆ ತಾನು ।
ವಾಯುವೆ ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 1128 :
ಪಕ್ಕಲೆಯ ಸಗ್ಗಲೆಯೊ । ಳಿಕ್ಕಿರ್ದ ವಾರಿಯನು ।
ಚೊಕ್ಕಟವು ಎಂದು ಕುಡಿಯುತಿರೆ ಹೊಲೆಯರು ।
ಚಿಕ್ಕವರು ಹೇಗೆ ಸರ್ವಜ್ಞ||

ಸರ್ವಜ್ಞ ವಚನ 1129 :
ಕರವುಂಟು ಕಾಲಿಲ್ಲ । ಶಿರ ಹರಿದ ಮುಂಡವದು।
ನರದಿ ಬಿಗಿದಾರು ತುಂಡದಕೆ, ಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1130 :
ಸಿದ್ಧರಿಗೆ ಯೋಗವನು । ಬುದ್ಧಿವಂತಗೆ ಮತಿಯ ।
ಬಿದ್ದ ಅಡಿವಿಯಾ ಕಿಚ್ಚನಂ, ಮುಳ್ಳು ಮೊಳೆ ।
ತಿದ್ದುವವರಾರು ಸರ್ವಜ್ಞ||

ಸರ್ವಜ್ಞ ವಚನ 1131 :
ಹರನಾವ ಕರೆಯದಲೆ । ಪರಿಶಿವನ ನೆನೆಯದಲೆ ।
ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ
ಇರುವದೇ ಕಷ್ಟ ಸರ್ವಜ್ಞ||

ಸರ್ವಜ್ಞ ವಚನ 1132 :
ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
ಕುಂತಿಯಣುಗರು ತಿರಿದರು – ಮಿಕ್ಕವರು
ಎಂತಿರ್ದರೇನು ಸರ್ವಜ್ಞ||

ಸರ್ವಜ್ಞ ವಚನ 1133 :
ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
ಬಂಧುಗಳಿಲ್ಲದಿಹ ಬಡತನ – ಇವು ತಾನು
ಎಂದಿಗೂ ಬೇಡ ಸರ್ವಜ್ಞ||

ಸರ್ವಜ್ಞ ವಚನ 1134 :
ಮುಟ್ಟು ಗಂಡವಳನ್ನು । ಮುಟ್ಟಲೊಲ್ಲರು ನೋಡು ।
ಮುಟ್ಟು ತಾ ತಡೆದು ಹುಟ್ಟಿರ್ದ ದೇಹವನು ।
ಮುಟ್ಟುತಿಹರೇಕೆ ಸರ್ವಜ್ಞ||

ಸರ್ವಜ್ಞ ವಚನ 1135 :
ಸಂದ ಮೇಲ್ಸುಡುವದು । ಬೆಂದಮೇಲುರಿವುದು ।
ಬಂಧಗಳನೆದ್ದು ಬಡಿವುದು ನೀವದರ ।
ದಂದುಗವ ನೋಡಿ ಸರ್ವಜ್ಞ||

ಸರ್ವಜ್ಞ ವಚನ 1136 :
ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ ಸಮತೆಯನು – ಶಿವಪದವ
ಮುಟ್ಟಿಪ್ಪುದಯ್ಯ ಸರ್ವಜ್ಞ||

ಸರ್ವಜ್ಞ ವಚನ 1137 :
ನೆಲವನ್ನು ಮುಗಿಲನ್ನು । ಹೊಲಿವರುಂಟೆಂದರವ ।
ಹೊಲಿವರು ಹೊಲಿವರು ಎನಬೇಕು । ಮೂರ್ಖನಲಿ ।
ಕಲಹವೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 1138 :
ಬಾಲ್ಯಯೌವನದೊಳಗೆ । ಲೋಲುಪ್ತನಾಗಿ ನೀ ।
ನೇಳುತುಲಿ ಮದಿಸುತ್ತಿರಬೇಡ ಅನುದಿನವು ।
ಸೂಲಿಯನು ನೆನೆಯೋ ಸರ್ವಜ್ಞ||

ಸರ್ವಜ್ಞ ವಚನ 1139 :
ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
ನಂಬಿರಬೇಡ ಲಕ್ಶ್ಮಿಯನು – ಬಡತನವು
ಬೆಂಬಳಿಯೊಳಿಹುದು ಸರ್ವಜ್ಞ||

ಸರ್ವಜ್ಞ ವಚನ 1140 :
ನಳಿದೋಳಿನಾಕೆ ತಾ। ಸುಳಿದೆಗೆದು ಬೆಳೆದಿಹಳು।
ಕಳೆಯುಳ್ಳ ಹಸುಳೆ ಹಲವಾಗೆ, ತಾನಾಗಿ।
ಅಳಿದು ಹೋಗುವಳು ಸರ್ವಜ್ಞ||

ಸರ್ವಜ್ಞ ವಚನ 1141 :
ಕರದಿ ಕಪ್ಪರವುಂಟು । ಹಿರಿದೊಂದು ನಾಡುಂಟು।
ಹರನೆಂಬ ದೈವ ನಮಗುಂಟು ತಿರಿವರಿಂ।
ಸಿರಿವಂತರಾರು? ಸರ್ವಜ್ಞ||

ಸರ್ವಜ್ಞ ವಚನ 1142 :
ಲಿಂಗ ಉಳ್ಳನೆ ಪುರುಷ । ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ – ವತುಳಸುಖ
ಲಿಂಗದಿಂ ಜನನ ಸರ್ವಜ್ಞ||

ಸರ್ವಜ್ಞ ವಚನ 1143 :
ಆದಿ ದೈವವನು ತಾ ಭೇದಿಸಲಿಕರಿಯದಲೆ
ಹಾದಿಯಾ ಕಲ್ಲಿಗೆಡೆ ಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ||

ಸರ್ವಜ್ಞ ವಚನ 1144 :
ಎಂತುಂಬರಂಬಲಿಯ। ಮುಂತೊಬ್ಬನೈದಾನೆ।
ಅಂತಕನಲ್ಲ, ಅಜನಲ್ಲ,ಈ ತುತ್ತ।
ನೆಂತುಂಬರಯ್ಯ ಸರ್ವಜ್ಞ||

ಸರ್ವಜ್ಞ ವಚನ 1145 :
ಹೊಲಿಗೇರಿಯಲಿ ಹುಟ್ಟಿ । ವಿಲುದನಾ ಮನೆಯಿರ್ದ ।
ಸತಿಧರ್ಮ ದಾನಿಯೆನಿಸದಲೆ ಹಾರುವನು ।
ಕುಲಕೆ ಹೋರುವನು ಸರ್ವಜ್ಞ||

ಸರ್ವಜ್ಞ ವಚನ 1146 :
ಆರರಟ್ಟುಗಳಿಗಳನು । ಮೂರು ಕಂಟಕರನ್ನು ।
ಏರು ಜವ್ವನವ ತಡೆಯುವರೆ ಶಿವ ತಾನು ।
ಬೇರೆ ಇಲ್ಲೆಂದ ಸರ್ವಜ್ಞ||

ಸರ್ವಜ್ಞ ವಚನ 1147 :
ಅಡ್ಡಬದ್ದಿಯು ಹೊಲ್ಲ। ಗಿಡ್ಡ ಬಾಗಿಲು ಹೊಲ್ಲ ।
ಹೆಡ್ಡರೊಡನಾಟ ಕೆರೆಹೊಲ್ಲ ಬಡಿಗ ತಾ।
ರೊಡ್ಡನಿರ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1148 :
ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
ದೀನನ ಬೇಡಿ ಬಳಲಿದಡೆ – ಆ ದೀನ
ನೇನ ಕೊಟ್ಟಾನು ಸರ್ವಜ್ಞ||

ಸರ್ವಜ್ಞ ವಚನ 1149 :
ತಿತ್ತಿ ಹೊಟ್ಟೆಗೆ ಒಂದು। ತುತ್ತು ತಾ ಹಾಕುವುದು।
ತುತ್ತೆಂಬ ಶಿವನ ತೊರೆದಿಹರೆ ಸುಡುಗಾಡಿ।
ಗೆತ್ತಬೇಕೆಂದ ಸರ್ವಜ್ಞ||

ಸರ್ವಜ್ಞ ವಚನ 1150 :
ಜ್ಞಾನದಿಂ ಮೇಲಿಲ್ಲ। ಶ್ವಾನನಿಂ ಕೀಳಿಲ್ಲ।
ಭಾನುವಿಂದಧಿಕ ಬೆಳಗಿಲ್ಲ, ಜಗದೊಳಗೆ।
ಜ್ಞಾನವೇ ಮಿಗಿಲು ಸರ್ವಜ್ಞ||
          

Popular Post