Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (1251-1300)

ಸರ್ವಜ್ಞ ವಚನ 1251 :
ಮಾಸಿನೊಳು ಮುಸುಕಿರ್ದು । ಮೂಸಿ ಬರುತಾಸನವ
ಹೇಸಿಕೆಯ ಮಲವು ಸೂಸುವುದ – ಕಂಡು ಕಂ
ಡಾಸೆ ಬಿಡದು ಸರ್ವಜ್ಞ||

ಸರ್ವಜ್ಞ ವಚನ 1252 :
ನಿದ್ದೆಗಳು ಬಾರವು। ಬುದ್ಧಿಗಳು ತೋರವು।
ಮುದ್ದಿನ ಮಾತು ಸೊಗಸವು, ಬೋನದ।
ಮುದ್ದೆ ತಪ್ಪಿದರೆ ಸರ್ವಜ್ಞ||

ಸರ್ವಜ್ಞ ವಚನ 1253 :
ಭಂಡಗಳ ನುಡುಯುವಾ । ದಿಂಡೆಯನು ಹಿಡತಂದು
ಖಂಡಿಸಿರಿ ಎಂದವನೊಡನೆ ಹಿಂಡೆಲ್ಲ ।
ಬಂದಿಹುದು ನೋಡು ಸರ್ವಜ್ಞ||

ಸರ್ವಜ್ಞ ವಚನ 1254 :
ಸರ್ವಜ್ಞ||
ಎಂಬುವನು ಗರ್ವದಿ ಆದವನೆ
ಎಲ್ಲರ ಬಳಿ ಒಂದು-ಒಂದು ಮಾತನ್ನು ಕಲಿತು
ವಿದ್ಯೆ ಎನ್ನುವ ಪರ್ವತ ಆದ ನಮ್ಮ ಸರ್ವಜ್ಞ||

ಸರ್ವಜ್ಞ ವಚನ 1255 :
ಜಾರಿ ನೆರೆ ಸೇರುವಗೆ । ತೂರರೊಳು ಹೋರುವಗೆ ।
ಊರಿರುಳ ನಾರಿ ಕಳುವಂಗೆ ತಿಳಿಯದಲೆ ।
ಮಾರಿ ಬಂದಿಹುದು ಸರ್ವಜ್ಞ||

ಸರ್ವಜ್ಞ ವಚನ 1256 :
ಕೋತಿಂಗೆ ಗುಣವಿಲ್ಲ। ಮಾತಿಂಗೆ ಕೊನೆಯಿಲ್ಲ।
ಸೋತುಹೋದವಗೆ ಜಗವಿಲ್ಲ, ಅರಿದಂಗೆ।
ಜಾತಿಯೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1257 :
ಪುರುಷ ಕಂಡರೆ ಕೊಲುವ । ಅರಸು ದಂಡವ ಕೊಂಬ ।
ನರರು ಸುರರೆಲ್ಲ ಮುನಿಯವರು, ಅಂತ್ಯಕ್ಕೆ, ನರಕ
ಪರಸತಿಯು ಸರ್ವಜ್ಞ||

ಸರ್ವಜ್ಞ ವಚನ 1258 :
ಕಾಯುವರು ಹಲಬರು।ಕಾವ ಗೊಲ್ಲರ ಕಾಣೆ।
ಮೇಯುವದು ಮರನ ನುಣ್ಣಗದು ಕವಿಗಳಲಿ।
ಗಾವಿಲರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1259 :
ಭಕ್ತಿಯಿಲ್ಲದ ಶಿಷ್ಯ । ಗೊತ್ತಿ ಕೊಟ್ಟುಪದೇಶ
ಬತ್ತಿದ ಕೆರೆಯ ಬಯಲಲ್ಲಿ – ರಾಜನವ
ಬಿತ್ತಿ ಬೆಳೆವಂತೆ ಸರ್ವಜ್ಞ||

ಸರ್ವಜ್ಞ ವಚನ 1260 :
ಅಕ್ಕಿ ಬೊನವು ಲೇಸು । ಸಿಕ್ಕ ಸೆರೆ ಬಿಡಲೇಸು ।
ಹಕ್ಕಿಗಳೊಳಗೆ ಗಿಳಿ ಲೇಸು ।
ಊರಿಗೊಬ್ಬ ಅಕ್ಕಸಾಲೆಂದ ಸರ್ವಜ್ಞ||

ಸರ್ವಜ್ಞ ವಚನ 1261 :
ಜೋಳವನು ತಿಂಬುವನು । ತೋಳದಂತಾಗುವನು ।
ಬೇಳೆ-ಬೆಲ್ಲಗಳನುಂಬವನು ಬಹು
ಬಾಳನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1262 :
ಕಳ್ಳರಿಗೆ ಸುಳ್ಳರಿಗೆ। ಡೊಳ್ಳರಿಗೆ ಡೊಂಬರಿಗೆ।
ಸುಳ್ಳುಗೊರವರಿಗೆ ಕೊಡುವವರು ಧರ್ಮಕ್ಕೆ।
ಎಳ್ಳಷ್ಟು ಕೊಡರು ಸರ್ವಜ್ಞ||

ಸರ್ವಜ್ಞ ವಚನ 1263 :
ಅರೆದಲೆಯು ಮೂಡಲು ಹೊರದಲೆಯು ಬಡಗಲೂ ।
ಸರಿಯಲೆಯು ಉದ್ದ ಪಡುವಲುಂ ತೆಂಗಣದಿ ।
ಬರಿದಲೆಯಲಿಹರು ಸರ್ವಜ್ಞ||

ಸರ್ವಜ್ಞ ವಚನ 1264 :
ಆಡಿದರೆ ಹಾಡುವದು । ಓಡಿ ಮರವನೇರುವದು ।
ಕೂಡದೆ ಕೊಂಕಿ ನಡೆಯುವದು ಹರಿದರದು ।
ಬಾಡದು ಸರ್ವಜ್ಞ||

ಸರ್ವಜ್ಞ ವಚನ 1265 :
ಎಳ್ಳು ಗಾಣಿಗ ಬಲ್ಲ। ಸುಳ್ಳು ಸಿಂಪಿಗ ಬಲ್ಲ।
ಕಳ್ಳರನು ಬಲ್ಲ ತಳವಾರ, ಬಣಜಿಗನು।
ಎಲ್ಲವನು ಬಲ್ಲ ಸರ್ವಜ್ಞ||

ಸರ್ವಜ್ಞ ವಚನ 1266 :
ಸಪ್ಪನ್ನ ಉಣಹೊಲ್ಲ । ಮುಪ್ಪು ಬಡವಗೆ ಹೊಲ್ಲ ।
ತಪ್ಪಿನಲಿಸಿಲುಕಿ ಇರಹೊಲ್ಲ, ಜಾರೆಯನು
ಅಪ್ಪುವದೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1267 :
ಕಡೆ ಬಿಳಿದು ನಡಗಪ್ಪು । ಉಡುವ ವಸ್ತ್ರವದಲ್ಲ್ ।
ಬಿಡದೆ ನೀರುಂಟು ಮಡುವಲ್ಲ ಕವಿಗಳೇ
ಬೆಡಗು ಪೇಳುವರು ಸರ್ವಜ್ಞ||

ಸರ್ವಜ್ಞ ವಚನ 1268 :
ದೇಹಿಯೆನಬೇಡ ನಿ । ದೇಹಿ ಜಂಗಮ ದೇವ
ದೇಹಗುಣದಾಶೆಯಳಿದರೆ – ಆತ ನಿ
ದೇಹಿ ಕಂಡಯ್ಯ ಸರ್ವಜ್ಞ||

ಸರ್ವಜ್ಞ ವಚನ 1269 :
ಕರಿಕೆ ಕುದುರೆಗೆ ಲೇಸು । ಮುರಕವು ಹೆಣ್ಣಿಗೆ ಲೇಸು ।
ಅರಿಕೆಯುಳ್ಳವರ ಕೆಳೆಲೇಸು ಪಶುವಿಂಗೆ ।
ಗೊರೆಸುಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1270 :
ಕನಕ ತಾ ಕಂಕಣದ । ಜನಕನೆಂದೆನಿಸಿಹುದು ।
ಕ್ಷಣಿಕವದು ರೂಪವೆಂದರಿಯದಾ ಮನಜ ।
ಶುನಕನಲೆದಂತೆ । ಸರ್ವಜ್ಞ||

ಸರ್ವಜ್ಞ ವಚನ 1271 :
ಮಗ್ಗಿಯಾ ಗುಣಿಸುವಾ । ಮೊಗ್ಗರದ ಜೋಯಿಸರು ।
ಅಗ್ಗವನು ಮಳೆಯನರಿಯದಲೆ ನುಡಿವವರ ।
ಹೆಗ್ಗಡೆಯಬಲ್ಲ ಸರ್ವಜ್ಞ||

ಸರ್ವಜ್ಞ ವಚನ 1272 :
ಸೋರುವ ಮನೆಯಿಂದ ।ದಾರಿಯ ಮರ ಲೇಸು।
ಹೋರುವ ಸತಿಯ ಬದುಕಿಂದ ಹೊಡೆದೊಯ್ವ ।
ಮಾರಿ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1273 :
ಎರೆಯಿಲ್ಲದಾರಂಬ । ದೊರೆಯು ಇಲ್ಲದ ಊರು ।
ಹರೆಯ ಹೋದವಳ ಒಡನಾಟ, ನಾಯಿ ಹಳೆ।
ಕೆರವ ಕಡಿದಂತೆ ಸರ್ವಜ್ಞ||

ಸರ್ವಜ್ಞ ವಚನ 1274 :
ನಾನು ನೀನು ಭೇದಗ । ಳೇನು ಬೊಮ್ಮಗೆ ಇಲ್ಲ ।
ತಾನೆ ತಾನಾಗಿ ಇಪ್ಪುದೇ ಬೊಮ್ಮದಾ ।
ಸ್ಥಾನವೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1275 :
ಮೊಲೆವಾಲನುಂಬುದನು । ಮೊಲೆಗೂಸು ಬಲ್ಲುದೆ?।
ಮೊಲೆಗೂಸಿನಂತಿಪ್ಪ ಶಿಷ್ಯಂಗೆ ಗುರುಬೋಧೆ ।
ಮೊಲೆವಾಲು ಕಾಣೊ ಸರ್ವಜ್ಞ||

ಸರ್ವಜ್ಞ ವಚನ 1276 :
ಇಂಗು ತಿಂಬಾತಂಗೆ । ಕೊಂಬೇನು ಕೊಳಗೇನು।
ಸಿಂಗಳಿಕವೇನು, ಹಂಗೇನು? ಬೇಲಿಯ।
ಮುಂಗಲಿಯದೇನು ಸರ್ವಜ್ಞ||

ಸರ್ವಜ್ಞ ವಚನ 1277 :
ಜಾತಿ-ಜಾತಿಗೆ ವೈರ । ನೀತಿ ಮೂರ್ಖಗೆ ವೈರ ।
ಪಾತಕವು ವೈರ ಸುಜನರ್ಗೆ ಅರಿದರಿಗೆ
ಏತರದು ವೈರ ಸರ್ವಜ್ಞ||

ಸರ್ವಜ್ಞ ವಚನ 1278 :
ದಂಡು ಇಲ್ಲದ ಅರಸು । ಕುಂಡವಿಲ್ಲದ ಹೋಮ ।
ಬಂಡಿಯಿಲ್ಲದನ ಬೇಸಾಯ ತಲೆಹೋದ ।
ಮುಡದಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 1279 :
ಎಂಟು ಹಣವುಳ್ಳ ತನಕ । ಬಂಟನಂತಿರುತಿಕ್ಕು ।
ಎಂಟು ಹಣ ಹೋದ ಮರುದಿನವೆ ಹುಳುತಿಂದ ।
ದಂತಿನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1280 :
ಮೊಸರು ಇಲ್ಲದ ಊಟ। ಪಸರವಿಲ್ಲದ ಹರದ।
ಹಸನವಿಲ್ಲದವಳ ರತಿಕೂಟ, ಜಿನನ ಬಾಯ್।
ಕಿಸುಕುಳದಂತೆ ಸರ್ವಜ್ಞ||

ಸರ್ವಜ್ಞ ವಚನ 1281 :
ನಿತ್ಯವೂ ಶಿವನ ತಾ । ಹೊತ್ತಾರೆ ನೆನೆದಿಹರೆ ।
ಉತ್ತಮದ ಗತಿಯು ಆದಿಲ್ಲದಿಹಪರದಿ ।
ಮೃತ್ಯುಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1282 :
ಕಲ್ಲುಕಲ್ಲೆಂಬುವಿರಿ , ಕಲ್ಲೋಳಿಪ್ಪುದೆ ದೈವ ?
ಕಲ್ಲಲ್ಲಿ ಕಳೆಯ ನಿಲಿಸಿದ , ಗುರುವಿನ
ಸೊಲ್ಲಲ್ಲೇ ದೈವ , ಸರ್ವಜ್ಞ||

ಸರ್ವಜ್ಞ ವಚನ 1283 :
ಇಂದುವಿನೊಳುರಿಯುಂಟೆ ? ಸಿಂಧುವಿನೊಳರಬುಂಟೆ ?
ಸುಂದ ವೀರನೊಳು ಭಯ ಉಂಟೆ ? ಭಕ್ತಿಗೆ
ಸಂದೇಹ ಉಂಟೆ ? ಸರ್ವಜ್ಞ||

ಸರ್ವಜ್ಞ ವಚನ 1284 :
ಪರುಷ ಕಬ್ಬುನದೆಸೆವ । ಕರಡಿಗೆಯೊಳಡರುವದೆ ।
ಹರ ಭಕ್ತಿಯಿಳ್ಳ ಮಹಿಮೆ ಸಂಸಾರದೊಳು ।
ಎರಕವಾಗಿಹನೆ ಸರ್ವಜ್ಞ||

ಸರ್ವಜ್ಞ ವಚನ 1285 :
ಊರಿಂಗೆ ದಾರಿಯನು ಆರು ತೋರಿದರೇನು ?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ||

ಸರ್ವಜ್ಞ ವಚನ 1286 :
ಹಲ್ಲುಂಟು ಮೃಗವಲ್ಲ। ಸೊಲ್ಲು ಸೋಜಿಗವಲ್ಲ।
ಕೊಲ್ಲುವುದು ತನ್ನ ನಂಬಿದರ, ಅರಿದರಿದ।
ಬಲ್ಲವರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1287 :
ತೋಡಿದ್ದ ಬಾವಿಂಗೆ । ಕೂಡಿದ್ದ ಜಲ ಸಾಕ್ಷಿ ।
ಮಾಡಿರ್‍ದಕೆಲ್ಲ ಮನಸಾಕ್ಷಿ ಸರ್ವಕ್ಕು ।
ಮೃಢನೆ ತಾ ಸಾಕ್ಷಿ ಸರ್ವಜ್ಞ||

ಸರ್ವಜ್ಞ ವಚನ 1288 :
ಗತವಾದ ಮಾಸವನು । ಗತಿಯಿಂದ ದ್ವಿಗುಣಿಸುತ ।
ಪ್ರತಿಪದದ ತಿಥಿಯನೊಡಗೂಡೆ ಕರಣ ತಾ ।
ನತಿಶಯದಿ ಬಕ್ಕು ಸರ್ವಜ್ಞ||

ಸರ್ವಜ್ಞ ವಚನ 1289 :
ವೀರತನ ವಿತರಣವ । ಸಾಗದ ಚಪಲತೆಯು ।
ಚಾರುತರ ರೂಪ, ಚದುರತನವೆಲ್ಲರಿಗೆ ।
ಹೋರಿದರೆ ಬಹುವೆ ಸರ್ವಜ್ಞ||

ಸರ್ವಜ್ಞ ವಚನ 1290 :
ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
ಕೊರತೆಯಾದಾಗ ಕೊಡುವೆನಿದ್ದರೆ ಎಂದು
ಅರಚುವವನೆ ಹೆಡ್ಡ ಸರ್ವಜ್ಞ||

ಸರ್ವಜ್ಞ ವಚನ 1291 :
ಆಡದೆ ಕೊಡುವವನು। ರೂಢಿಯೊಳಗುತ್ತಮನು।
ಆಡಿಕೊಡುವವನು ಮಧ್ಯಮನಧಮ ತಾ।
ನಾಡಿ ಕೊಡದವನು ಸರ್ವಜ್ಞ||

ಸರ್ವಜ್ಞ ವಚನ 1292 :
ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
ನಾಟಿ ತನು ಗುರುವಿನಲಿ ಕೂಡೆ – ಭಕ್ತನ ಸ
ಘಾಟವದು ನೋಡ ಸರ್ವಜ್ಞ||

ಸರ್ವಜ್ಞ ವಚನ 1293 :
ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
ಅಂಜಿಕೆಯಿಲ್ಲ ಭಯವಿಲ್ಲ – ಜ್ಞಾನವೆಂ
ಬಂಜನವಿರಲು ಸರ್ವಜ್ಞ||

ಸರ್ವಜ್ಞ ವಚನ 1294 :
ಮಾಡಿದುದನೊಪ್ಪದನ। ಮೂಢನಾಗಿಪ್ಪವನ।
ಕೂಡಿ ತಾ ಮಾಡಿ ಇದಿರಾಡಿಕೊಳ್ಳುವನ ।
ನೋಡಿದರೆ ತೊಲಗು ಸರ್ವಜ್ಞ||

ಸರ್ವಜ್ಞ ವಚನ 1295 :
ಸುಂಲಿಗನು, ಹುಲಿ, ಹಾವು । ಬಿಂಕದಾ ಬೆಲೆವೆಣ್ಣು ।
ಕಂಕಿಯೂ ಸುಂಕ – ನಸುಗುನ್ನಿ ಇವು ಏಳು ।
ಸೊಂಕಿದರೆ ಬಿಡವು ಸರ್ವಜ್ಞ||

ಸರ್ವಜ್ಞ ವಚನ 1296 :
ಸ್ವಾತಿಯ ಹನಿ ಬಿದ್ದು । ಜಾತಿ ಮುತ್ತಾದಂತೆ।
ಸಾತ್ವಿಕನು ಅಪ್ಪಯತಿಗಿಕ್ಕೆ ಪಂಚಮಾ ।
ಪಾತಕವು ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 1297 :
ಸುರತರು ಮರನಲ್ಲ । ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ – ಗುರುವು ತಾ
ನರರೊಳಗಲ್ಲ ಸರ್ವಜ್ಞ||

ಸರ್ವಜ್ಞ ವಚನ 1298 :
ರಾಮನಾಮವೆ ನಾಮ । ಸೋಮ ಶಂಕರ ಗುರುವು
ಆ ಮಹಾರುದ್ರ ಅಧಿದೈವ ಜಗದೊಳಗೆ ।
ಭೀಮನೇ ಭಕ್ತ ಸರ್ವಜ್ಞ||

ಸರ್ವಜ್ಞ ವಚನ 1299 :
ಯತಿಗೇಕೆ ಕೋಪ? ದು। ರ್ಮತಿಗೇಕೆ ಪರತತ್ವ?।
ಪತಿವ್ರತೆಗೇಕೆ ಪರನೋಟ? ಯೋಗಿಗೆ ।
ಸ್ತುತಿ ನಿಂದೆಯೇಕೆ? ಸರ್ವಜ್ಞ||

ಸರ್ವಜ್ಞ ವಚನ 1300 :
ಹಸಿಯ ಅಲ್ಲವು ಲೇಸು ।
ಬಿಳಿಯ ಪಳಿಯು ಲೇಸು ಹುಸಿ ಲೇಸು ಕಳ್ಳಹೆಣ್ಣಿಗೆ ।
ಬೈಗಿನಾ ಬಿಸಿಲು ಲೇಸೆಂದ ಸರ್ವಜ್ಞ|

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post