Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (1301-1318)

ಸರ್ವಜ್ಞನ ತ್ರಿಪದಿಗಳು
ಸರ್ವಜ್ಞ ವಚನ 1301 :
ಗುರುವಿಂದ ಬಂಧುಗಳು, ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
ಗುರುವಿಂದ ಮುಕ್ತಿ ಸರ್ವಜ್ಞ||

ಸರ್ವಜ್ಞ ವಚನ 1302 :
ಅತ್ತಲಂಬಲಿಯೊಳಗೆ । ಇತ್ತೊಬ್ಬನೈದಾನೆ।
ಅತ್ತವನ ನೋಡ ಜವನಲ್ಲ, ಅಂಬಲಿಯ !।
ನೆತ್ತುಂಬನಯ್ಯ ಸರ್ವಜ್ಞ||

ಸರ್ವಜ್ಞ ವಚನ 1303 :
ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ
ಬಲ್ಲರೆ ಬಲ್ಲೆನೆನಬೇಡ – ಸುಮ್ಮನಿರ
ಬಲ್ಲರೆ ಬಲ್ಲ ಸರ್ವಜ್ಞ||

ಸರ್ವಜ್ಞ ವಚನ 1304 :
ಅಲಸಿಕೆಯಲಿರುವಂಗೆ। ಕಲಸಲಂಬಲಿಯಿಲ್ಲ।
ಕೆಲಸಕ್ಕೆ ಅಲಸದಿರುವಂಗೆಬೇರಿಂದ।
ಹಲಸು ಕಾತಂತೆ ಸರ್ವಜ್ಞ||

ಸರ್ವಜ್ಞ ವಚನ 1305 :
ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ ಕಂಡ್ಯಾ ? ಸರ್ವಜ್ಞ||

ಸರ್ವಜ್ಞ ವಚನ 1306 :
ಮನೆಯೇನು ವನವೇನು । ನೆನಹು ಇದ್ದರೆ ಸಾಕು ।
ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ ।
ಕೊನೆಯಿಲ್ಲಿದ್ದೇನು ಸರ್ವಜ್ಞ||

ಸರ್ವಜ್ಞ ವಚನ 1307 :
ಹೊತ್ತಿಗೊದಗಿದ ಮಾತು ಸತ್ತವನು ಎದ್ದಂತೆ
ಹೊತ್ತಾಗಿ ನುಡಿದ ಮಾತು ಕೈ ಜಾರಿದ
ಮುತ್ತಿನಂತಿಹುದು ಸರ್ವಜ್ಞ||

ಸರ್ವಜ್ಞ ವಚನ 1308 :
ಸಂತೆಯಾ ಮನೆ ಹೊಲ್ಲ । ಚಿಂತೆಯಾತನು ಹೊಲ್ಲ ।
ಎಂತೊಲ್ಲದವಳ ರತಿ ಹೊಲ್ಲ ।
ಬಾಳುವವಗಂತಕನೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1309 :
ಹೆಣ್ಣಿನ ಹೃದಯದ।ತಣ್ಣಗಿಹ ನೀರಿನ।
ಬಣ್ಣಿಸುತ ಕುಣಿವ ಕುದುರೆಯ ನೆಲೆಯ ಬ।
ಲ್ಲಣ್ಣಗಳು ಯಾರು ಸರ್ವಜ್ಞ||

ಸರ್ವಜ್ಞ ವಚನ 1310 :
ತಾಪದ ಸಂಸಾರ । ಕೊಪದಲಿ ಬಿಳ್ದವರು
ಆಪತ್ತನುಳಿದು ಪೊರಮಡಲು – ಗುರುಪಾದ
ಸೋಪಾನ ಕಂಡು ಸರ್ವಜ್ಞ||

ಸರ್ವಜ್ಞ ವಚನ 1311 :
ಪಂಚ ಬೂತಂಗಳೊಳ । ಸಂಚನರಿಯದಲೆ ।
ಹಂಚನೆ ಹಿಡಿದು ತಿರಿದುಂಬ ಶಿವಯೋಗಿ ।
ಹಂಚುಹರಿಯಹನು ಸರ್ವಜ್ಞ||

ಸರ್ವಜ್ಞ ವಚನ 1312 :
ಕಣ್ಣುಗಳು ಇಳಿಯುವವು । ಬಣ್ಣಗಳು ಅಳಿಯುವವು ।
ಹುಣ್ಣಿಮೆಯು ಹೋದ ಶಶಿಯಂತೆ ಅಶನವನು ।
ಉಣ್ಣದವ ನೋಡಲು ಸರ್ವಜ್ಞ||

ಸರ್ವಜ್ಞ ವಚನ 1313 :
ಉಳ್ಳಲ್ಲಿ ಉಣಲಿಲ್ಲ। ಉಳ್ಳಲ್ಲಿ ಉಡಲಿಲ್ಲ।
ಉಳ್ಳಲ್ಲಿ ದಾನ ಕೊಡಲೊಲ್ಲದವನೊಡವೆ ।
ಕಳ್ಳಗೆ ನೃಪಗೆ ಸರ್ವಜ್ಞ||

ಸರ್ವಜ್ಞ ವಚನ 1314 :
ಮಣಿಯ ಮಾಡಿದನೊಬ್ಬ ।
ಹೆಣಿದು ಕಟ್ಟಿದನೊಬ್ಬ ಕುಣಿದಾಡಿ ಸತ್ತವನೊಬ್ಬ, ಸಂತೆಯೊಳು ।
ಹೆಣನ ಮಾರಿದರು ಸರ್ವಜ್ಞ||

ಸರ್ವಜ್ಞ ವಚನ 1315 :
ಹೊತ್ತಾರೆ ನೆರೆಯುವದು । ಹೊತ್ತೇರಿ ಹರಿಯುವದು ।
ಕತ್ತಲೆಯ ಬಣ್ಣ ಮಿಗಿಲಾಗಿ ಮಳೆಗಾಲ ।
ವೆತ್ತಣದಯ್ಯ ಸರ್ವಜ್ಞ||

ಸರ್ವಜ್ಞ ವಚನ 1316 :
ಸಂಚಕವನೀಯದಲೆ । ಲಂಚಕರ ಹೊಗಿಸದಲೆ ।
ಅಂಚಿತವನೊದರಿ ಕಳುಹಿರೆ ಅಕ್ಕಸಾಲೆ ।
ವಂಚಿಸಲಿಕರಿಯ ಸರ್ವಜ್ಞ||

ಸರ್ವಜ್ಞ ವಚನ 1317 :
ಜಾವಕ್ಕೆ ಬದುಕುವರೆ । ಹೇವಕ್ಕೆ ಬದುಕುವದು ।
ರಾವಣನು ಸತ್ತನೆನಬೇಡ, ರಾಮಂಗೆ ।
ಹೇವ ಬಿಟ್ಟಿಹುದು ಸರ್ವಜ್ಞ||

ಸರ್ವಜ್ಞ ವಚನ 1318 :
ಮುನಿವಂಗೆ ಮುನಿಯದಿರು । ಕ್ನಿವಂಗೆ ಕಿನಿಯದಿರು
ಮನ್ಸಿಜಾರಿಯನು ಮರೆಯದಿರು ಶಿವಕೃಪೆಯ ।
ಘನಕೆ ಘನವಕ್ಕು ಸರ್ವಜ್ಞ||
       

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post