Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (1101-1150)

ಸರ್ವಜ್ಞ ವಚನ 1101 :
ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
ಅನ್ಯರು ಕೊಂದರೆನ ಬೇಡ – ಇವು ಮೂರು
ತನ್ನನೇ ಕೊಲುಗು ಸರ್ವಜ್ಞ||

ಸರ್ವಜ್ಞ ವಚನ 1102 :
ಬೇರೂರ ಸಾಲವನು । ನೂರನಾದರೂ ಕೊಳ್ಳು ।
ನೂರಾರು ವರ್ಷಕವ ಬಂದ ದಾರಿಯಲಿ ।
ಸಾರಿ ಹೋಗುವನು ಸರ್ವಜ್ಞ||

ಸರ್ವಜ್ಞ ವಚನ 1103 :
ಲಜ್ಜೆಯನು ತೊರೆದು ನೀ । ಹೆಜ್ಜೆಯನು ಸಾಧಿಪಡೆ ।
ಸಜ್ಜೆಯಲಿ ಶಿವನ ಶರಣರಾ –
ಹೆಜ್ಜೆಯಲಿ ನಡೆಯೋ ಸರ್ವಜ್ಞ||

ಸರ್ವಜ್ಞ ವಚನ 1104 :
ಜ್ಯೋತಿಯಿಂದವೆ ನೇತ್ರ । ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರೆವಂತೆ – ಶಿವನ ಗುರು
ನಾಥನಿಂದರಿಗು ಸರ್ವಜ್ಞ||

ಸರ್ವಜ್ಞ ವಚನ 1105 :
ಹುಸಿವನಿಂದೈನೂರು । ಪಶುವ ಕೊಂದವ ಲೇಸು ।
ಶಿಶು ವಧೆಯಮಾಡಿದವ ಲೇಸು, ಮರೆಯಲಿ ।
ದ್ದೆಸೆದರೂ ಲೇಸು ಸರ್ವಜ್ಞ||

ಸರ್ವಜ್ಞ ವಚನ 1106 :
ಅರ್ಥ ಸಿಕ್ಕರೆ ಬಿಡರು। ವ್ಯರ್ಥದಿ ಶ್ರಮಬಡರ।
ನರ್ಥಕೆ ಪರರ ನೂಂಕಿಪರು, ವಿಪ್ರರಿಂ।
ಸ್ವಾರ್ಥರಿನ್ನಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1107 :
ಕೆನ್ನೆಯಲಿ ಕುಡಿವಾಲ। ತನ್ನ ಸುತ್ತಲು ಮಣಿಯು।
ತನ್ನ ದೇಹವನು ಹಣ್ಣುವದು, ಕವಿಗಳಲಿ।
ಚೆನ್ನರಿದ ಪೇಳಿ,ಸರ್ವಜ್ಞ||

ಸರ್ವಜ್ಞ ವಚನ 1108 :
ನಿಲ್ಲದಲೆ ಹರಸಿದಡೆ । ಕಲ್ಲು ಭೇದಿಸಲಕ್ಕು ।
ಬಲ್ಲಂತ ಶಿವನ ಭಕ್ತಿಯಿಂ ಭಜಿಸಿಡೆ ।
ಇಲ್ಲೆನಲಿಕರಿಯ ಸರ್ವಜ್ಞ||

ಸರ್ವಜ್ಞ ವಚನ 1109 :
ಕೂಳಿಲ್ಲದವನೊಡಲು । ಹಾಳುಮನೆಯಂತಕ್ಕು ।
ಹೇಳಿದಲೆ ಹೋಗಲು ರುಜೆಗಳಿಂ ತನುವೊಡೆದು ।
ಹಾಳೆಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1110 :
ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವು
ಅಚ್ಚಳಿದು ನಿಜದಿ ನಿಂದಂತೆ ಭೇದವನು
ಮುಚ್ಚುವನೆ ಶರಣ , ಸರ್ವಜ್ಞ||

ಸರ್ವಜ್ಞ ವಚನ 1111 :
ಪವನಪರಿಯರಿದಂಗೆ । ಶಿವನ ಸಾಧಿಸಲಕ್ಕು ।
ಭವಮಾಲೆ ಹರಿದು ಸುಖಿಸುವೊಡೆ ಅವ
ಸದಾಶಿವನು ತಾನಕ್ಕು ಸರ್ವಜ್ಞ||

ಸರ್ವಜ್ಞ ವಚನ 1112 :
ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
ಬಲ್ಲ ದಾಶಿವನ ಭಜಿಸಿ ಬೇಡಿದಾತ
ಇಲ್ಲೆನಲಿಕರಿಯ ಸರ್ವಜ್ಞ||

ಸರ್ವಜ್ಞ ವಚನ 1113 :
ಉಣ್ಣದಲೆ ಉರಿಯುವರು । ಮಣ್ಣಿನಲಿ ಮೆರೆಯುವರು ।
ಗಾಜೊಂದು ಲೋಹದೊಳಗಲ್ಲ ಅಂಬಲಿಯು ।
ಭೋಜನದೊಳಲ್ಲ ಸರ್ವಜ್ಞ||

ಸರ್ವಜ್ಞ ವಚನ 1114 :
ಬುದ್ಧಿವಂತರ ಕೂಟ। ವೆದ್ದು ಗಾರುವ ಹದ್ದು ।
ಬುದ್ಧಿಯಿಲ್ಲದವರ ನೆರೆ ಕೂಟ ಕೊರಳೊಳಗೆ ।
ಗುದ್ದಿಯಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1115 :
ಉದ್ಯೋಗವಿಲ್ಲದವನು । ಬಿದ್ದಲ್ಲಿ ಬಿದ್ದಿರನು ।
ಹದ್ದುನೆವನವನು ಈಡಾಡಿ ಹಾವ ಕೊಂ ।
ಡೆದ್ದು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 1116 :
ಮೂರು ಖಂಡುಗ ಹೊಟ್ಟ । ತೂರಿದರೆ ಫಲವೇನು ।
ಮೂರರಾ ಮಂತ್ರದಿಂದಲಿ ಪರಬೊಮ್ಮ ।
ವಿರಿಹುದು ನೋಡು ಸರ್ವಜ್ಞ||

ಸರ್ವಜ್ಞ ವಚನ 1117 :
ಮರನೊತ್ತಿ ಬೇಯುವದು। ಉರಿತಾಗಿ ಬೇಯದದು।
ಪುರಗಳ ನುಂಗಿ ಬೊಗಳುವದು ಲೋಕದೊಳು।
ನರನಿದೇನಿಹುದು ಸರ್ವಜ್ಞ||

ಸರ್ವಜ್ಞ ವಚನ 1118 :
ಕಲ್ಲರಳಿ ಹೂವಾಗಿ । ಎಲ್ಲರಿಗೆ ಬೇಕಾಗಿ।
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ।
ಬಲ್ಲವರು ಹೇಳಿ ಸರ್ವಜ್ಞ||

ಸರ್ವಜ್ಞ ವಚನ 1119 :
ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು – ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ||

ಸರ್ವಜ್ಞ ವಚನ 1120 :
ಕೋಟಿಯನು ಕೊಟ್ಟರೂ ಕೂಟ ಕರ್ಮಿಯ ಹೊಲ್ಲ
ನೋಟದಲಿ ನಿಜವನರಿವ ಸುಜ್ಞಾನಿಯಾ
ಕೂಟವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 1121 :
ಹಾರುವರು ಎಂಬುವರು । ಹಾರುತ್ತಲಿರುತಿಹರು ।
ಹಾರುವಗೆ ಸಲುಹುವರ ದೊರೆಯೊಡನೆ ನಿಜಗುಣ ।
ತೋರದಡುಗುವದು ಸರ್ವಜ್ಞ||

ಸರ್ವಜ್ಞ ವಚನ 1122 :
ಕೆಂಬಾಯಿ ತೆರೆಯುತ್ತ । ಕೆಂಬಲ್ಲ ತೋರುತ್ತ।
ಕಂಬವನೊರಗಿ ಮುರುಕಿಪಳು, ಹಾದರದ।
ಬೊಂಬೆ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1123 :
ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
ಹೆಣ್ಣಿಂದ ಸಕಲ ಫಲವುಂಟು – ಮರೆದರೆ
ಹೆಣ್ಣಿಂದ ಮರಣ ಸರ್ವಜ್ಞ||

ಸರ್ವಜ್ಞ ವಚನ 1124 :
ಮೊಸರ ಕಡೆಯಲು ಬೆಣ್ಣೆ । ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ – ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ||

ಸರ್ವಜ್ಞ ವಚನ 1125 :
ಸತ್ಯಕ್ಕೆ ಸರಿಯಿಲ್ಲ । ಚಿತ್ತಕ್ಕೆ ಸ್ಥಿರವಿಲ್ಲ ।
ಹಸ್ತದಿಂದಧಿಕಹಿತರಿಲ್ಲ ಪರದೈವ ।
ನಿತ್ಯನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1126 :
ಆಡಿ ಮರಗಲು ಹೊಲ್ಲ । ಕೂಡಿ ಕಾದಲು ಹೊಲ್ಲ ।
ಬೇಡನಾ ನಂಟು ತರವಲ್ಲ ಅವನ ಕುರಿ ।
ತಾಡುವದೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1127 :
ವಾಯು-ವಾಯುವ ಕೂಡೆ । ವಹಿಲದಿಂ ಮಳೆಯಕ್ಕು ।
ವಾಯು – ನೈಋತ್ಯನೊಡಗೂಡೆ ಮಳೆ ತಾನು ।
ವಾಯುವೆ ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 1128 :
ಪಕ್ಕಲೆಯ ಸಗ್ಗಲೆಯೊ । ಳಿಕ್ಕಿರ್ದ ವಾರಿಯನು ।
ಚೊಕ್ಕಟವು ಎಂದು ಕುಡಿಯುತಿರೆ ಹೊಲೆಯರು ।
ಚಿಕ್ಕವರು ಹೇಗೆ ಸರ್ವಜ್ಞ||

ಸರ್ವಜ್ಞ ವಚನ 1129 :
ಕರವುಂಟು ಕಾಲಿಲ್ಲ । ಶಿರ ಹರಿದ ಮುಂಡವದು।
ನರದಿ ಬಿಗಿದಾರು ತುಂಡದಕೆ, ಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1130 :
ಸಿದ್ಧರಿಗೆ ಯೋಗವನು । ಬುದ್ಧಿವಂತಗೆ ಮತಿಯ ।
ಬಿದ್ದ ಅಡಿವಿಯಾ ಕಿಚ್ಚನಂ, ಮುಳ್ಳು ಮೊಳೆ ।
ತಿದ್ದುವವರಾರು ಸರ್ವಜ್ಞ||

ಸರ್ವಜ್ಞ ವಚನ 1131 :
ಹರನಾವ ಕರೆಯದಲೆ । ಪರಿಶಿವನ ನೆನೆಯದಲೆ ।
ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ
ಇರುವದೇ ಕಷ್ಟ ಸರ್ವಜ್ಞ||

ಸರ್ವಜ್ಞ ವಚನ 1132 :
ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
ಕುಂತಿಯಣುಗರು ತಿರಿದರು – ಮಿಕ್ಕವರು
ಎಂತಿರ್ದರೇನು ಸರ್ವಜ್ಞ||

ಸರ್ವಜ್ಞ ವಚನ 1133 :
ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
ಬಂಧುಗಳಿಲ್ಲದಿಹ ಬಡತನ – ಇವು ತಾನು
ಎಂದಿಗೂ ಬೇಡ ಸರ್ವಜ್ಞ||

ಸರ್ವಜ್ಞ ವಚನ 1134 :
ಮುಟ್ಟು ಗಂಡವಳನ್ನು । ಮುಟ್ಟಲೊಲ್ಲರು ನೋಡು ।
ಮುಟ್ಟು ತಾ ತಡೆದು ಹುಟ್ಟಿರ್ದ ದೇಹವನು ।
ಮುಟ್ಟುತಿಹರೇಕೆ ಸರ್ವಜ್ಞ||

ಸರ್ವಜ್ಞ ವಚನ 1135 :
ಸಂದ ಮೇಲ್ಸುಡುವದು । ಬೆಂದಮೇಲುರಿವುದು ।
ಬಂಧಗಳನೆದ್ದು ಬಡಿವುದು ನೀವದರ ।
ದಂದುಗವ ನೋಡಿ ಸರ್ವಜ್ಞ||

ಸರ್ವಜ್ಞ ವಚನ 1136 :
ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ ಸಮತೆಯನು – ಶಿವಪದವ
ಮುಟ್ಟಿಪ್ಪುದಯ್ಯ ಸರ್ವಜ್ಞ||

ಸರ್ವಜ್ಞ ವಚನ 1137 :
ನೆಲವನ್ನು ಮುಗಿಲನ್ನು । ಹೊಲಿವರುಂಟೆಂದರವ ।
ಹೊಲಿವರು ಹೊಲಿವರು ಎನಬೇಕು । ಮೂರ್ಖನಲಿ ।
ಕಲಹವೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 1138 :
ಬಾಲ್ಯಯೌವನದೊಳಗೆ । ಲೋಲುಪ್ತನಾಗಿ ನೀ ।
ನೇಳುತುಲಿ ಮದಿಸುತ್ತಿರಬೇಡ ಅನುದಿನವು ।
ಸೂಲಿಯನು ನೆನೆಯೋ ಸರ್ವಜ್ಞ||

ಸರ್ವಜ್ಞ ವಚನ 1139 :
ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
ನಂಬಿರಬೇಡ ಲಕ್ಶ್ಮಿಯನು – ಬಡತನವು
ಬೆಂಬಳಿಯೊಳಿಹುದು ಸರ್ವಜ್ಞ||

ಸರ್ವಜ್ಞ ವಚನ 1140 :
ನಳಿದೋಳಿನಾಕೆ ತಾ। ಸುಳಿದೆಗೆದು ಬೆಳೆದಿಹಳು।
ಕಳೆಯುಳ್ಳ ಹಸುಳೆ ಹಲವಾಗೆ, ತಾನಾಗಿ।
ಅಳಿದು ಹೋಗುವಳು ಸರ್ವಜ್ಞ||

ಸರ್ವಜ್ಞ ವಚನ 1141 :
ಕರದಿ ಕಪ್ಪರವುಂಟು । ಹಿರಿದೊಂದು ನಾಡುಂಟು।
ಹರನೆಂಬ ದೈವ ನಮಗುಂಟು ತಿರಿವರಿಂ।
ಸಿರಿವಂತರಾರು? ಸರ್ವಜ್ಞ||

ಸರ್ವಜ್ಞ ವಚನ 1142 :
ಲಿಂಗ ಉಳ್ಳನೆ ಪುರುಷ । ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ – ವತುಳಸುಖ
ಲಿಂಗದಿಂ ಜನನ ಸರ್ವಜ್ಞ||

ಸರ್ವಜ್ಞ ವಚನ 1143 :
ಆದಿ ದೈವವನು ತಾ ಭೇದಿಸಲಿಕರಿಯದಲೆ
ಹಾದಿಯಾ ಕಲ್ಲಿಗೆಡೆ ಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ||

ಸರ್ವಜ್ಞ ವಚನ 1144 :
ಎಂತುಂಬರಂಬಲಿಯ। ಮುಂತೊಬ್ಬನೈದಾನೆ।
ಅಂತಕನಲ್ಲ, ಅಜನಲ್ಲ,ಈ ತುತ್ತ।
ನೆಂತುಂಬರಯ್ಯ ಸರ್ವಜ್ಞ||

ಸರ್ವಜ್ಞ ವಚನ 1145 :
ಹೊಲಿಗೇರಿಯಲಿ ಹುಟ್ಟಿ । ವಿಲುದನಾ ಮನೆಯಿರ್ದ ।
ಸತಿಧರ್ಮ ದಾನಿಯೆನಿಸದಲೆ ಹಾರುವನು ।
ಕುಲಕೆ ಹೋರುವನು ಸರ್ವಜ್ಞ||

ಸರ್ವಜ್ಞ ವಚನ 1146 :
ಆರರಟ್ಟುಗಳಿಗಳನು । ಮೂರು ಕಂಟಕರನ್ನು ।
ಏರು ಜವ್ವನವ ತಡೆಯುವರೆ ಶಿವ ತಾನು ।
ಬೇರೆ ಇಲ್ಲೆಂದ ಸರ್ವಜ್ಞ||

ಸರ್ವಜ್ಞ ವಚನ 1147 :
ಅಡ್ಡಬದ್ದಿಯು ಹೊಲ್ಲ। ಗಿಡ್ಡ ಬಾಗಿಲು ಹೊಲ್ಲ ।
ಹೆಡ್ಡರೊಡನಾಟ ಕೆರೆಹೊಲ್ಲ ಬಡಿಗ ತಾ।
ರೊಡ್ಡನಿರ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1148 :
ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
ದೀನನ ಬೇಡಿ ಬಳಲಿದಡೆ – ಆ ದೀನ
ನೇನ ಕೊಟ್ಟಾನು ಸರ್ವಜ್ಞ||

ಸರ್ವಜ್ಞ ವಚನ 1149 :
ತಿತ್ತಿ ಹೊಟ್ಟೆಗೆ ಒಂದು। ತುತ್ತು ತಾ ಹಾಕುವುದು।
ತುತ್ತೆಂಬ ಶಿವನ ತೊರೆದಿಹರೆ ಸುಡುಗಾಡಿ।
ಗೆತ್ತಬೇಕೆಂದ ಸರ್ವಜ್ಞ||

ಸರ್ವಜ್ಞ ವಚನ 1150 :
ಜ್ಞಾನದಿಂ ಮೇಲಿಲ್ಲ। ಶ್ವಾನನಿಂ ಕೀಳಿಲ್ಲ।
ಭಾನುವಿಂದಧಿಕ ಬೆಳಗಿಲ್ಲ, ಜಗದೊಳಗೆ।
ಜ್ಞಾನವೇ ಮಿಗಿಲು ಸರ್ವಜ್ಞ||
          

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post