Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (1001-1050)

ಸರ್ವಜ್ಞ ವಚನ 1001 :
ಅಂಗಿ ಅರಿವೆಯ ಮಾರಿ । ಭಂಗಿಯನು ತಾ ಸೇದಿ ।
ಮಂಗನಂದದಲಿ ಕುಣಿವಾತ ಭವ – ಭವದಿ ।
ಭಂಗಗೊಳುತಿಹನು ಸರ್ವಜ್ಞ||

ಸರ್ವಜ್ಞ ವಚನ 1002 :
ವೃಷಭನೇರಲು ಗುರುವು । ವಸುಧೆಯೊಳು ಮಳೆಯಕ್ಕು ।
ಪಶುಸ್ತ್ರೀಯರಿಗೆ ಜಯವಕ್ಕು ಜನರೆಲ್ಲ ।
ಮಿಸುಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1003 :
ಎಲ್ಲ ಬಲ್ಲವರಿಲ್ಲ । ಬಲ್ಲವರು ಬಹಳಿಲ್ಲ ।
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ ।
ವೆಲ್ಲವರಿಗಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1004 :
ಕುಂಭಕ್ಕೆ ಗುರು ಬರಲು । ತುಂಬುವುವು ಕೆರೆ ಬಾವಿ।
ಅಂಬರದ ವರೆಗೆ ಬೆಳೆಯೆದ್ದು ಜಗದೊಳಗೆ।
ಸಂಭ್ರಮವಹುದು ಸರ್ವಜ್ಞ||

ಸರ್ವಜ್ಞ ವಚನ 1005 :
ಸಂದ ಮೇಲ್ಸುಡುತಿಹುದು । ಬೆಂದ ಮೇಲುರಿದಿಹುದು।
ಬಂಧುಗಳನೆದ್ದು ಬಡಿದಿಹುದು, ಕವಿಗಳಲಿ।
ನಂದನರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1006 :
ಹತ್ತು ಸಾಸಿರ ಕಣ್ಣು ।ನೆತ್ತಿಲಾದರು ಬಾಲ।
ಹುತ್ತಿನ ಹುಳುವ ಹಿಡಿಯುವದು ಕವಿಜನರ।
ಮೊತ್ತವಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1007 :
ಉಣಲಡಿಗೆ ಹಲವಾಗಿ । ಕಣಿಕ ತಾನೊಂದಯ್ಯ
ಮಣಲೇಸು ದೈವ ಘನವಾಗಿ – ಲೋಕಕ್ಕೆ
ತ್ರಿಣಯನ ಸರ್ವಜ್ಞ||

ಸರ್ವಜ್ಞ ವಚನ 1008 :
ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು
ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
ಮಂಗಗಳ ನೋಡು ಸರ್ವಜ್ಞ||

ಸರ್ವಜ್ಞ ವಚನ 1009 :
ಪ್ರಸ್ತಾಪಕೊದಗಿದಾ । ಕತ್ತೆ ಮದಕರಿಯಂತೆ ।
ಪ್ರಸ್ತಾಪತೀರ್ಥ ಮರುದಿನಾ ಮದಕರಿಯು ।
ಕತ್ತೆಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1010 :
ವಿದ್ಯೆವುಳ್ಳನ ಮುಖವು । ಮುದ್ದು ಬರುವಂತಿಕ್ಕು ।
ವಿದ್ಯವಿಲ್ಲದನ ಬರಿಮುಖವು ಹಾಳೂರ ।
ಹದ್ದಿನಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 1011 :
ಉಗರ ತಿದ್ದಿಸುವದದು । ಮುಗುಳುನಗೆ ನಗಿಸುವದು ।
ಹಗರಣದ ಮಾತ ನಡಿಸುವದು ಬೋನದಾ ।
ಬಗೆಯ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 1012 :
ಒಲೆಗುಂಡನೊಬ್ಬನೆ । ಮೆಲಬಹುದು ಎಂದಿರೆ।
ಮೆಲಬಹುದು ಎಂಬುವನೆ ಜಾಣ, ಮೂರ್ಖನ।
ಗೆಲಲಾಗದಯ್ಯ ಸರ್ವಜ್ಞ||

ಸರ್ವಜ್ಞ ವಚನ 1013 :
ಮಾತೆಯಿಂ ಹಿತರಿಲ್ಲಿ । ಕೋತಿಯಿಂ ಮರಳಿಲ್ಲ ।
ಜ್ಯೋತಿಯಿಂದಧಿಕ ಬೆಳಕಿಲ್ಲ ದೈವವ ।
ಜಾತನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1014 :
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ||

ಸರ್ವಜ್ಞ ವಚನ 1015 :
ಬೇಡಂಗೆ ಕೊಡೆ ಹೊಲ್ಲ । ಆಡಿಂಗಮಳೆಹೊಲ್ಲ ।
ಬೇಡಿ ಉಂಬುವಂಗೆ ಬರ ಹೊಲ್ಲ ದ್ವಿಜನಿಗೆ ।
ಕಾಡುನುಡಿ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1016 :
ಬಲ್ಲವರ ಒಡನಾಟ। ಬೆಲ್ಲವನು ಮೆದ್ದಂತೆ।
ಅಲ್ಲದಹುದೆಂಬ ಅಜ್ಞಾನಿಯೊಡನಾಟ।
ಕಲ್ಲು ಹಾದಂತೆ ಸರ್ವಜ್ಞ||

ಸರ್ವಜ್ಞ ವಚನ 1017 :
ಶೀತದಲ್ಲಿ ಹಿಮ ಹೊಲ್ಲ । ಕೀತಿರುವ ವ್ರಣ ಹೊಲ್ಲ ।
ಪಾತಕನ ನೆರೆಯಲಿರ ಹೊಲ್ಲ, ಬಡವ ತಾ ।
ಕೂತಿರಲು ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1018 :
ಸಿರಿಯ ಸಂಸಾರವನು ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ
ಹರಿದು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 1019 :
ಆಶೆಯುಳ್ಳನ್ನಕ್ಕರ – ದಾಸನಾಗಿರುತಿಪ್ಪ
ಆಶೆಯ ತಲೆಯನಳಿದರೆ – ಕೈಲಾಸ
ದಾಚೆಯಲಿಪ್ಪ ಸರ್ವಜ್ಞ||

ಸರ್ವಜ್ಞ ವಚನ 1020 :
ಸೀತೆಯಿಂ ಹೆಣ್ಣಿಲ್ಲ । ಸೂತನಿಂದಾಳಿಲ್ಲ ।
ಮಾತಿನಲಿ ಸೋತಗಿದಿರಿಲ್ಲ ಶೂದ್ರಂಗೆ ।
ಭೀತಿಯೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1021 :
ಕಾಯಕವು ಉಳ್ಳನಕ ನಾಯಕನು ಎನಿಸಿಪ್ಪ
ಕಾಯಕವು ತೀರ್ದ ಮರುದಿನವೇ ಸುಡುಗಾಡ
ನಾಯಕನು ಎನಿಪ ಸರ್ವಜ್ಞ||

ಸರ್ವಜ್ಞ ವಚನ 1022 :
ಭಿತ್ತಯಾ ಚಿತ್ರದಲಿ । ತತ್ವತಾ ನೆರೆದಿಹುದೆ ।
ಚಿತ್ರತ್ವ ತನ್ನ ನಿಜದೊಳಗ ತ್ರೈಜಾಗದ ।
ತತ್ವ ತಾನೆಂದ ಸರ್ವಜ್ಞ||

ಸರ್ವಜ್ಞ ವಚನ 1023 :
ಏನಾದಡೇನಯ್ಯ ತಾನಾಗದಿರುವನಕ।
ತಾನಾಗಿ ತನ್ನನರಿದಿರಲು ಲೋಕದಲಿ ।
ಏನಾದಡೇನು ? ಸರ್ವಜ್ಞ||

ಸರ್ವಜ್ಞ ವಚನ 1024 :
ಅಂಡೆಬಾಯಿಯನೊಬ್ಬ । ಕಂಡು ಮುಚ್ಚಲು ಬಹುದು।
ಮುಂಡೆಗಳ ಬಾಯ ಮುಚ್ಚಲು ಸಲ್ಲದಿದು।
ಕಂಡಿತವು ನೋಡ ಸರ್ವಜ್ಞ||

ಸರ್ವಜ್ಞ ವಚನ 1025 :
ರಾಗವೇ ಮೂಡಲು । ಯೋಗವೇ ಬಡಗಲ
ರೋಗವೇ ಶುದ್ಧ ಪಡುವಲದು ತೆಂಕಲೇ ।
ಭೋಗದಾಬೀಡು ಸರ್ವಜ್ಞ||

ಸರ್ವಜ್ಞ ವಚನ 1026 :
ಎಂಜಲೆಂಜಲು ಎಂದು । ಅಂಜುವರು ಹಾರುವರು ।
ಎಂಜಲಿಂದಾದ ತನುವಿರಲು ಅದನರಿದು ।
ಅಂಜಿತಿಹರೇಕೆ ಸರ್ವಜ್ಞ||

ಸರ್ವಜ್ಞ ವಚನ 1027 :
ಬೆಂಕಿಯಲಿ ದಯೆಯಿಲ್ಲ । ಮಂಕನಲಿ ಮತಿಯಿಲ್ಲ ।
ಶಂಖಧ್ವನಿಗೆ ಪ್ರತಿಯಿಲ್ಲ ಸ್ವರ್ಗದಿ ।
ಸುಂಕದೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1028 :
ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
ಕಡುರೋಷವೆಂಬ ವಿಷವೇರೆ – ಸಮತೆ ಗಾ
ರುಡಿಗನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1029 :
ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ – ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ||

ಸರ್ವಜ್ಞ ವಚನ 1030 :
ಮೋಟಿತ್ತ ಕೊಳ ಹೊಲ್ಲ । ನೋಟ – ಬೇಟವು ಹೊಲ್ಲ ।
ತಾಟಗಿತ್ತಿಯಾ ನೆರೆ ಹೊಲ್ಲ ।
ಕಜ್ಜಿಯಾ ಕಾಟವೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1031 :
ಬರಡಾದ ಹಯನಾಗಿ । ಜರಿಯುವ ಮಗನಾಗಿ।
ಕರೆದರೋಯೆನದ ಸೊಸೆಯಾದರಾ ಮನೆಯು।
ಉರಿಯಲಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1032 :
ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ
ನೆರೆಹತ್ತು ಜನನವಾಹರಿಗೆ ಇವರುಗಳು
ಸರಿಯಹರೆ ಸರ್ವಜ್ಞ||

ಸರ್ವಜ್ಞ ವಚನ 1033 :
ಮದ್ಯಪಾನವ ಮಾಡಿ । ಇದ್ದುದೆಲ್ಲವ ನೀಡಿ ।
ಬಿದ್ದು ಬರುವವನ ಸದ್ದಡಗಿ ಸಂತಾನ ।
ವೆದ್ದು ಹೋಗುವದು ಸರ್ವಜ್ಞ||

ಸರ್ವಜ್ಞ ವಚನ 1034 :
ಅಡವಿಯಲಿ ತಪದಲ್ಲಿ । ದೃಢತನದೊಳಿದ್ದರೂ।
ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ ।
ದಡಗೆಯುಂಡಂತೆ ಸರ್ವಜ್ಞ||

ಸರ್ವಜ್ಞ ವಚನ 1035 :
ಬಂಧನದಲಿರುವನು ।
ಹಂದಿಯಂತಿಹನು ಬಂಧವಿಲ್ಲದವನು ಬಡವನು ದೇಶಿಗನು ।
ಎಂದಳಿದರೇನು ಸರ್ವಜ್ಞ||

ಸರ್ವಜ್ಞ ವಚನ 1036 :
ಒಡಲೆಂಬ ಹುತ್ತಕ್ಕೆ। ನುಡಿವ ನಾಲಿಗೆ ಸರ್ಪ।
ಕಡುರೋಷವೆಂಬ ವಿಷವೇರಿ ಸಮತೆ ಗಾ।
ರುಡಿಗನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 1037 :
ಬಲವಂತರಾದವರು। ಕಲಹದಿಂ ಕೆಟ್ಟಿಹರು।
ಬಲವಂತ ಬಲಿಯು ದುರ್ಯೋಧನಾದಿಗಳು।
ಛಲದಲುಳಿದಿಹರೆ?ಸರ್ವಜ್ಞ||

ಸರ್ವಜ್ಞ ವಚನ 1038 :
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ||

ಸರ್ವಜ್ಞ ವಚನ 1039 :
ಪುಷ್ಪ ವಿಲ್ಲದ ಪೂಜೆ । ಅಶ್ವವಿಲ್ಲದ ಅರಸು ।
ಒಪ್ಪಲೊಲ್ಲವಳ ನಗೆನುಡಿಯು ಇವು ಮೂರು ।
ಚಪ್ಪೆ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1040 :
ಯೋನಿಜರು ಯೋಗಿಯನು । ಹೀನವೆನ್ನುವದೇನು ? ।
ಅನಂದ ತಾಣದೊಳಗಿರಲು ಯೋಗಿಯಾ ।
ಮಾನ ಘನವಹುದು ಸರ್ವಜ್ಞ||

ಸರ್ವಜ್ಞ ವಚನ 1041 :
ಬಲವಂತರಾದವರು । ಕಲಹದಿಂ ಕೆಟ್ಟಿಹರು ।
ಬಲವಂತ ಬಲಿಯು, ದುರ್ಯೋಧನಾದಿಗಳು ।
ಛಲದಲುಳಿದಿಹರೆ ಸರ್ವಜ್ಞ||

ಸರ್ವಜ್ಞ ವಚನ 1042 :
ಜೀವಿ ಜೀವಿಯ ತಿಂದು । ಜೀವಿಪುದು ಜಗವೆಲ್ಲ ।
ಜೀವದಿಂ ಹೊರಗೆ ಶಿಂಬವರ ನಾ ಕಾಣೆ ।
ಜೀವವೀ ಜಗವು ಸರ್ವಜ್ಞ||

ಸರ್ವಜ್ಞ ವಚನ 1043 :
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೆ ಜಗವು ಅಡಗಿಹುದು – ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ||

ಸರ್ವಜ್ಞ ವಚನ 1044 :
ಕಳ್ಳಿಯೊಳು ಹಾಲು, ಮುಳು। ಗಳ್ಳಿಯೊಳು ಹೆಜ್ಜೇನು ।
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ।
ಸುಳ್ಳೆನ್ನಬಹುದೆ? ಸರ್ವಜ್ಞ||

ಸರ್ವಜ್ಞ ವಚನ 1045 :
ಮಾತು ಬಲ್ಲಾತಂಗೆ । ಯಾತವದು ಸುರಿದಂತೆ ।
ಮಾತಾಡಲರಿಯದಾತಂಗೆ ಬರಿ ಯಾತ ।
ನೇತಾಡಿದಂತೆ ಸರ್ವಜ್ಞ||

ಸರ್ವಜ್ಞ ವಚನ 1046 :
ಕೊಡಲೊಬ್ಬಳು ಸತಿಯು । ನೋಡಲೊಬ್ಬ ನೆಂಟ ।
ಬೇಡಿದ್ದನ್ನು ಕೊಡುವ ನೃಪತಿಯು ಭಕ್ತಿಯನು ।
ಮಾಡಿದರಿಗುಂಟು ಸರ್ವಜ್ಞ||

ಸರ್ವಜ್ಞ ವಚನ 1047 :
ಹಾಲು ಬೋನವು ಲೇಸು ಮಾಲೆ ಕೊರಳಿಗೆ ಲೇಸು
ಸಾಲವಿಲ್ಲದವನ ಮನೆ ಲೇಸು ಬಾಲಕರ
ಲೀಲೆ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1048 :
ಇಂದ್ರನಾನೆಯ ನೇರಿ ಒಂದನೂ ಕೊಡಲರಿಯ
ಚಂದ್ರಶೇಕರನು ಮುದಿ ಎತ್ತನೇರಿ
ಬೇಕೆಂದುದನು ಕೊಡುವೆ – ಸರ್ವಜ್ಞ||

ಸರ್ವಜ್ಞ ವಚನ 1049 :
ಮನವು ಮುಟ್ಟಲು ಗಂಡು । ತನವು ಸೋಂಕಲು ಪಾಪ
ಮನವೇಕದಿಂದ ಗುರುಚರಣ – ಸೋಂಕಿದೊಡೆ
ತನು ಶುದ್ದವಯ್ಯ ಸರ್ವಜ್ಞ||

ಸರ್ವಜ್ಞ ವಚನ 1050 :
ಸುರುತರುವು ಸುರಧೇನು । ಸುರಮಣೆ ಸೌರಲತೆ
ಪರುಷಷ್ಟತನುವು ಹರಿವ ನದಿ – ಯೆಲ್ಲವು
ಪರಮನಿಂ ಜನನ ಸರ್ವಜ್ಞ||
          

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post