Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (1051-1100)

ಸರ್ವಜ್ಞ ವಚನ 1051 :
ಬೆಚ್ಚನೆಯ ಮನೆಯಾಗಿ। ವೆಚ್ಚಕ್ಕೆ ಹೊನ್ನಾಗಿ।
ಇಚ್ಚೆಯನು ಅರಿವ ಸತಿಯಾಗಿ, ಸ್ವರ್ಗಕ್ಕೆ ।
ಕಿಚ್ಚು ಹಚ್ಚೆಂದ ಸರ್ವಜ್ಞ||

ಸರ್ವಜ್ಞ ವಚನ 1052 :
ಮಠಪತಿಗೆ ಕೊರಗಿಲ್ಲ । ಕಟುಕಂಗೆ ಮರುಗಿಲ್ಲ ।
ಪಟವೆಂಬುದಕ್ಕೆ ನೆರಳಿಲ್ಲ ಹಟಗಾರ ।
ಕಟಿಲನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1053 :
ಧಾತು ಏಳನು ಕಲೆತು । ಭೂತಪಂಚಕವಾಗಿ ।
ಓತು ದೇಹವನು ಧರಿಸಿರ್ದ ಮನುಜರ್ಗೆ ।
ಜಾತಿಯತ್ತಣದು ಸರ್ವಜ್ಞ||

ಸರ್ವಜ್ಞ ವಚನ 1054 :
ಹಸಿವು-ತೃಷೆ-ನಿದ್ರೆಗಳು । ವಿಷಯ ಮೈಥುನ ಬಯಕೆ ।
ಪಶು-ಪಕ್ಷಿ ನರಗೆ ಸಮನಿರಲು , ಕುಲವೆಂಬ ।
ಘಸಣಿಯೆತ್ತಣದು ಸರ್ವಜ್ಞ||

ಸರ್ವಜ್ಞ ವಚನ 1055 :
ಕುಂಭಕ್ಕೆ ಗುರು ಬರಲು । ತುಂಬುವವು ಕೆರೆ – ಭಾವಿ ।
ಅಂಬರದ ತನಕ ಬೆಳೆಯಕ್ಕು ಲೋಕಕ್ಕೆ ।
ಸಂಭ್ರಮಕ್ಕು ಸರ್ವಜ್ಞ||

ಸರ್ವಜ್ಞ ವಚನ 1056 :
ಮತಿಯೊಳತಿಚದುರಾಗಿ । ರತಿ ಕೇಳಿಗೊಳಗಾಗಿ ।
ಅತಿಮೋಹ ಮುದ್ದು ಮೊಗವಾಗಿ ಅಂಗನೆಯ ।
ನತಿಗಳೆದರಾರು ಸರ್ವಜ್ಞ||

ಸರ್ವಜ್ಞ ವಚನ 1057 :
ಮಾತು ಮಾತಿಗೆ ತಕ್ಕ ಮಾತು ಕೋಟಿಗಳುಂಟು
ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ
ಸೋತವನೇ ಜಾಣ ಸರ್ವಜ್ಞ||

ಸರ್ವಜ್ಞ ವಚನ 1058 :
ಹಲವನೋದಿದಡೇನು? ಚೆಲುವನಾದದಡೇನು ?
ಕುಲವೀರನೆನೆಸಿ ಫಲವೇನು? ಲಿಂಗದಾ
ಒಲುಮೆ ಇಲ್ಲದಲೆ ಸರ್ವಜ್ಞ||

ಸರ್ವಜ್ಞ ವಚನ 1059 :
ನೋಡಯ್ಯ ದೇವ ಸಲೆ । ನಾಡೆಲ್ಲ ಗಾಡಿಗನು ।
ವಾಡೆಯನೊಡೆದ ಮಡಕಿಯ ತೆರನಂತೆ ।
ಪಾಡಾಯಿತೆಂದ ಸರ್ವಜ್ಞ||

ಸರ್ವಜ್ಞ ವಚನ 1060 :
ಸಾದರಿಗೆ ಮಾದರಿಗೆ । ಭೇದವೇನಿಲ್ಲಯ್ಯ ।
ಮಾದಿಗನು ತಿಂಬ ಸತ್ತುದನು ಸಾದ ತನ ।
ಗಾದವರೆ ತಿಂಬ ಸರ್ವಜ್ಞ||

ಸರ್ವಜ್ಞ ವಚನ 1061 :
ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು ?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ
ಸುತ್ತಿ ಬಂದಂತೆ ಸರ್ವಜ್ಞ||

ಸರ್ವಜ್ಞ ವಚನ 1062 :
ಹರದನ ಮಾತನ್ನು। ಹಿರಿದು ನಂಬಲು ಬೇಡ।
ಗರಗಸದೊಡನೆ ಮರ ಹೋರಿ ತನ್ನ ತಾ ।
ನಿರಿದುಕೊಂಡಂತೆ ಸರ್ವಜ್ಞ||

ಸರ್ವಜ್ಞ ವಚನ 1063 :
ಯೋಗವನು ಮನಮುಟ್ಟಿ । ಭೋಗವನು ತೊರೆದಿಹರೆ ।
ಮಾಗಿಯ ಮಳೆಯು ಸುರಿದಂತೆ ಆ ಯೋಗ ।
ಸಾಗುತ್ತಲಿಹುದು ಸರ್ವಜ್ಞ||

ಸರ್ವಜ್ಞ ವಚನ 1064 :
ಹರ ತನ್ನೊಳಿರ್ದುದ । ಗುರುತೋರಿ । ದಿರಲಹುದೆ ।
ಮರನೊಳಗ್ನಿ ಇರುತಿರ್ದು – ತನ್ನ ತಾ
ನುರಿವುದ ಕಂಡ ? ಸರ್ವಜ್ಞ||

ಸರ್ವಜ್ಞ ವಚನ 1065 :
ಪ್ರಾಣನೂ ಪರಮಮನು ಕಾಣದಲೆ ಒಳಗಿರಲು
ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ
ಪ್ರಾಣಾತ್ಮನೆಂಬ ಸರ್ವಜ್ಞ||

ಸರ್ವಜ್ಞ ವಚನ 1066 :
ಇಕ್ಕಿದಾತನು ಉಂಡು , ನಕ್ಕು ಸ್ವರ್ಗಕ್ಕೆ ಹೋದ
ಇಕ್ಕದನು ಹೋದ ನರಕಕ್ಕೆ , ಲೋಕದೊಳ್ಳ
ಗಿಕ್ಕಲೇಬೇಕು , ಸರ್ವಜ್ಞ||

ಸರ್ವಜ್ಞ ವಚನ 1067 :
ಕಮ್ಮೆಯನ ಚೇಳಿನಾ | ಹೊಮ್ಮೆರಡು ಒಂದಯ್ಯ |
ನೆಮ್ಮಿದರೆ ಚೇಳು ಹೊಡೆದಿಹುದು ಕಮ್ಮ ಸರ್ವಜ್ಞ||

ಸರ್ವಜ್ಞ ವಚನ 1068 :
ಉಂಡು ಕೆಂಡವ ಕಾಸಿ। ಉಂಡು ಶತಪದ ನಡೆದು ।
ಉಂಡೆಡದ ಮಗ್ಗುಲಲಿಮಲಗೆ ವೈದ್ಯನ ।
ಭಂಡಾಟವಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1069 :
ಶೇಷನಿಂ ಬಲರಿಲ್ಲ । ಮೋಸದಿಂ ಕಳರೆಲ್ಲ
ನೇಸರೆಂ ಜಗಕೆ ಹಿತರಿಲ್ಲ – ದೇವ ತಾ
ಈಶನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1070 :
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣ ಲೇಸು – ಮನೆಗೊಬ್ಬ
ಅಜ್ಜಿಯೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 1071 :
ಮರಹುಳ್ಳ ಮನುಜರಿಗೆ । ತೆರನಾವುರೆವುದಕೆ
ಕರಿಗೊಂಡ ಭ್ರಮೆಯ ಪರೆವ – ಗುರುವಿನ ಭೋಧೆ
ಕರಿಗೊಳ್ಳಬೇಕು ಸರ್ವಜ್ಞ||

ಸರ್ವಜ್ಞ ವಚನ 1072 :
ತನ್ನ ಸಿರಿಯನು ತಾನು। ಕನ್ನಡಿಯು ಕಿಬುದೇ? ।
ತನ್ನ ಸಿರಿಯರಿವು ಸಕ್ಕದಕೆ , ಕನ್ನಡವು ।
ಕನ್ನಡಿಯ ತೆರನು ಸರ್ವಜ್ಞ||

ಸರ್ವಜ್ಞ ವಚನ 1073 :
ಅನ್ನದೇವರ ಮುಂದೆ । ಇನ್ನು ದೇವರು ಉಂಟೆ ।
ಅನ್ನವಿರುವನಕ ಪ್ರಾಣವೀ ಜಗದೊಳಗೆ ।
ಅನ್ನದೈವ ಸರ್ವಜ್ಞ||

ಸರ್ವಜ್ಞ ವಚನ 1074 :
ಸೋಕಿಡಾ ಸುಖಂಗಳ
ನೇಕವನು ಶಿವಗಿತ್ತು
ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ||

ಸರ್ವಜ್ಞ ವಚನ 1075 :
ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ
ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ
ಸೊಲ್ಲೇದೈವ ಸರ್ವಜ್ಞ||

ಸರ್ವಜ್ಞ ವಚನ 1076 :
ಸುಡುವಗ್ನಿಯನು ತಂದು । ಅಡಿಗೆ ಮಾಡಿದ ಮೇಲೆ ।
ಒಡನುಣ್ಣದಾಗದಿಂತೆಂಬ ಮನುಜರ್‍ಆ ।
ಒಡನಾಟವೇಕೆ ಸರ್ವಜ್ಞ||

ಸರ್ವಜ್ಞ ವಚನ 1077 :
ಆಶೆಯತಿ ಕೇಡೆಂದು । ಹೇಸಿ ನಾಚುತಲಿಕ್ಕು ।
ಆಶೆಯನು ಬಿಡದೆ – ಅಭಿಮಾನಕ್ಕೋರಿದರೆ ।
ಘಾಸಿಯಾಗಿಕ್ಕು ಸರ್ವಜ್ಞ||

ಸರ್ವಜ್ಞ ವಚನ 1078 :
ಹರಗದ ಎತ್ತಾಗಿ । ಬರಡದ ಹಯನಾಗಿ ।
ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ ।
ಕರಡವೇ ಬೆಳಗು ಸರ್ವಜ್ಞ||

ಸರ್ವಜ್ಞ ವಚನ 1079 :
ಖಂಡಿಸದೆ ಕರಣವನು। ದಂಡಿಸದೆ ದೇಹವನು।
ಉಂಡುಂಡು ಸ್ವರ್ಗಕೆಯ್ದಲ್ಲಕೆ ಅದನೇನು।
ರಂಡೆಯಾಳುವಳೇ? ಸರ್ವಜ್ಞ||

ಸರ್ವಜ್ಞ ವಚನ 1080 :
ಒಲೆಗುಂಡನೊಬ್ಬನೇ ಮೆಲಬಹುದು ಎಂದಿಹರೆ
ಮೆಲಬಹುದು ಎಂಬವನೆ ಜಾಣ , ಮೂರ್ಖನ
ಗೆಲುವಾಗದಯ್ಯ ಸರ್ವಜ್ಞ||

ಸರ್ವಜ್ಞ ವಚನ 1081 :
ಕಲ್ಲರಳೀ ಹೂವಾಗಿ । ಎಲ್ಲರಿಗೆ ಬೇಕಾಗಿ ।
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ ।
ಬಲ್ಲವರು ಹೇಳಿ ಸರ್ವಜ್ಞ||

ಸರ್ವಜ್ಞ ವಚನ 1082 :
ಅಡಿಕೆ ಇಲ್ಲದ ವೀಳ್ಯ , ಕಿಡಕಿ ಇಲ್ಲದ ಮನೆಯು
ಒಡಕು ಬಾಯವಳ ಮನೆವಾರ್ತೇ ಎಣ್ಣೆಯ
ಕುಡಿಕೆಯೊಡೆದಂತೆ ಸರ್ವಜ್ಞ||

ಸರ್ವಜ್ಞ ವಚನ 1083 :
ಸುರತರು ಮರನಲ್ಲ | ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ – ಗುರುವು ತಾ
ನರರೊಳಗಲ್ಲ ಸರ್ವಜ್ಞ||

ಸರ್ವಜ್ಞ ವಚನ 1084 :
ಉರಗನಾ ಮುಖದಲ್ಲಿ । ಇರುತಿಪ್ಪ ಕಪ್ಪೆ ತಾ ।
ನೆರಗುವಾ ನೊಣಕೆ, ಹರಿದಂತೆ ಸಂಸಾರ ।
ದಿರವು ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1085 :
ಕಣ್ಣಿನಿಂದಲೆ ಪುಣ್ಯ । ಕಣ್ಣಿನಿಂದಲೆ ಪಾಪ ।
ಕಣ್ಣಿನಿಂದಿಹವು ಪರವಕ್ಕು ಲೋಕಕ್ಕೆ ।
ಕಣ್ಣೇ ಕಾರಣವು ಸರ್ವಜ್ಞ||

ಸರ್ವಜ್ಞ ವಚನ 1086 :
ಪಂಚವಿಂಶಶಿತತ್ವ । ಸಂಚದ ದೇಹವನು
ಹಂಚೆಂದು ಕಾಣಲರಿಳೆಯದೋಡೆ – ಭವ ಮುಂದೆ
ಗೊಂಚಲಾಗಿಹುದು ಸರ್ವಜ್ಞ||

ಸರ್ವಜ್ಞ ವಚನ 1087 :
ಉಂಡು ನೂರಡಿ ಎಣಸಿ । ಕೆಂಡಕ್ಕೆ ಕೈ ಕಾಸಿ ।
ಗಂಡು ಮೇಲಾಗಿ ಮಲಗಿದನು ವೈದ್ಯನಾ ।
ಮಿಂಡ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1088 :
ಹರಳು ಹಾದಿಗೆ ಹೊಲ್ಲ । ಮರುಳ ಮನೆಯೊಳು ಹೊಲ್ಲ ।
ಇರುಳೊಳು ಪಯಣ ಬರಹೊಲ್ಲ, ಆಗದರಲಿ ।
ಸರಸವೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1089 :
ಸಾಲವನು ಮಾಡುವದು ಹೇಲ ತಾ ಬಳಿಸುವುದು
ಕಾಲಿನಾ ಕೆಳಗೆ ಕೆಡಹುವದು ತುತ್ತಿನಾ
ಚೀಲ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1090 :
ಜ್ಯೋತಿಯಿಲ್ಲದ ಮನೆಯು ।
ರೀತಿಯಿಲ್ಲದ ಸತಿಯು ನಿತಿಯಿಲ್ಲದಾ ವಿಪ್ರನುಂ ಭಿಕ್ಷದಾ ।
ಪಾತ್ರೆಯೊಡೆದಂತೆ ಸರ್ವಜ್ಞ||

ಸರ್ವಜ್ಞ ವಚನ 1091 :
ಕಲ್ಲು-ಕಾಷ್ಠದೊಳಿರುವ । ಮುಳ್ಳು ಮೊನೆಯಲ್ಲಿರುವ ।
ಸುಳ್ಳು-ಈ ಮಾತು ಎನಬೇಡ ಪರಮಾತ್ಮ ।
ನೆಲ್ಲೆಲ್ಲಿಯೂ ಇರುವ ಸರ್ವಜ್ಞ||

ಸರ್ವಜ್ಞ ವಚನ 1092 :
ಕಿರಿಯಂದಿನಾ ಪಾಪ । ನೆರೆ ಬಂದು ಹೋದೀತೆ ।
ಅರವಿಂಗೆ ಹಿರಿದು ಕಿರಿದಿಲ್ಲ ಇದನು ನೀ ।
ನರಿದು ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 1093 :
ಮುನಿವವರನು ನೆನೆಯುತಿರು। ವಿನಯದಲಿ ನಡೆಯುತಿರು।
ವನಿತೆಯರ ಬಲೆಗೆ ಸಿಲುಕದಿರು । ಸಿರಿ ಸುಖವು।
ಮನದಣಿಯಲಕ್ಕು ಸರ್ವಜ್ಞ||

ಸರ್ವಜ್ಞ ವಚನ 1094 :
ಆಡಿಗಟ್ಟಣವೇಕೆ । ಬೋಡಂಗೆ ಕಬ್ಬೇಕೆ ।
ಕೋಡಗನ ಕೈಯ ಬಳೆಯೇಕೆ ಬಡವಂಗೆ ।
ನಾಡಮಾತೇಕೆ ಸರ್ವಜ್ಞ||

ಸರ್ವಜ್ಞ ವಚನ 1095 :
ಎತ್ತುಗಾಣವ ನುಂಗು। ಕತ್ತರಿಯ ಕಣಿ ನುಂಗು।
ಸುತ್ತಿ ಹೊಡೆಯುವನ ನೊಗ ನುಂಗು ,ಈ ಮಾತು।
ಸತ್ಯ ತಾ ನೆಂದ ಸರ್ವಜ್ಞ||

ಸರ್ವಜ್ಞ ವಚನ 1096 :
ಪಂಚಲೋಹದ ಕಂಬಿ । ಮುಂಚೆ ಭೂಮಿಗೆ ಹಾಸಿ ।
ಕಂಚಿನಾ ರಥವ ನಡಿಸುವರು, ಅದರೋಟ ।
ಮಿಂಚು ಹೊಡೆದಂತೆ ಸರ್ವಜ್ಞ||

ಸರ್ವಜ್ಞ ವಚನ 1097 :
ಒಂದರಾ ಮೊದಲೊಳಗೆ ಬಂದಿಹುದು ಜಗವೆಲ್ಲ ।
ಒಂದರಾ ಮೊದಲನರಿಯುವಡೆ ಜಗ ಕಣ್ಣು ।
ಮುಂದೆ ಬಂದಿಹುದು ಸರ್ವಜ್ಞ||

ಸರ್ವಜ್ಞ ವಚನ 1098 :
ಉಕ್ಕುವದು ಸೊಕ್ಕುವದು । ಕೆಕ್ಕನೆ ಕಲೆಯುವದು ।
ರಕ್ಕಸನ ವೋಲು ಮದಿಸುವದು ಒಂದು ಸೆರೆ ।
ಯಕ್ಕಿಯಾ ಗುಣವು ಸರ್ವಜ್ಞ||

ಸರ್ವಜ್ಞ ವಚನ 1099 :
ಹರಳು ಉಂಗುರ ಲೇಸು । ಹುರುಳಿ ಕುದುರೆಗೆ ಲೇಸು ।
ಮರುಳ ನೆಲ, ತೆಂಗು ಇರಲೇಸು । ಸ್ತ್ರೀಯರ ।
ಕುರುಳು ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 1100 :
ಹೇಲು ಮೈಮೆತ್ತಿದ । ಬಾಲನಂತಿರಬೇಕು।
ಬಾಲೆಯರ ಜಾಲಕೊಳಬೀಳದಾ ಜ್ಞಾನಿ।
ಶೂಲಿಯಂತಕ್ಕು ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post