Menu

Home ನಲಿಕಲಿ About ☰ Menu


 

🔍

ಸರ್ವಜ್ಞ ವಚನ (1151-1200)

ಸರ್ವಜ್ಞ ವಚನ 1151 :
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚ್ಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ||

ಸರ್ವಜ್ಞ ವಚನ 1152 :
ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
ಗುಣಹೀನರುಗಳ ಒಡನಾಟ – ಬಹುದುಃಖ
ದಣಲೊಳಿರ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1153 :
ಕಿರಿಮೀನು ಹಿರಿಮೀನು । ಕೊರೆ ತರೆದು ತಿಂಬಾತ
ಗಿರುವವನು ಒಬ್ಬ ಮಗಸಾಯ ನೋವಿನಾ ।
ತೆರನ ತಾನರಿವ ಸರ್ವಜ್ಞ||

ಸರ್ವಜ್ಞ ವಚನ 1154 :
ವಚನದೊಳಗೆಲ್ಲವರು । ಶುಚಿ, ವೀರ, ಸಾಧುಗಳು।
ಕುಚ, ಶಸ್ತ್ರ, ಹೇಮ, ಸೋಂಕಿದರೆ ಲೋಕದೊಳ।
ಗಚಲದವರಾರು ಸರ್ವಜ್ಞ||

ಸರ್ವಜ್ಞ ವಚನ 1155 :
ಕುಸ್ತಿಯಲಿ ಭೀಮಬಲ । ಕುಸ್ತಿಯಲಿ ಕಾಮಬಲ ।
ಅಸ್ತಿ ಮುರಿದಿಹುದು ಕೀಚಕನ, ಪರಸತಿಯ ।
ಪ್ರಸ್ತವೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 1156 :
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು
ಹಾನಿ ಕಾಣಯ್ಯಾ ಸರ್ವಜ್ಞ||

ಸರ್ವಜ್ಞ ವಚನ 1157 :
ಅಷ್ಟದಲ ಕಮಲವನು । ಮೆಟ್ಟಿಪ್ಪ ಹಂಸ ತಾ ।
ಮುಟ್ಟಿಪ್ಪ ಗತಿಯನರಿಯದಾ ಯೋಗಿ ತಾ ।
ಕೆಟ್ಟನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1158 :
ಒಳ್ಳೆಯನು ಇರದೂರ । ಕಳ್ಳನೊಡನಾಟವು ।
ಸುಳ್ಳನಾ ಮಾತು ಇವು ಮೂರು ಕೆಸರೊಳಗೆ ।
ಮುಳ್ಳು ತುಳಿದಂತೆ ಸರ್ವಜ್ಞ||

ಸರ್ವಜ್ಞ ವಚನ 1159 :
ಗಾಣಿಗನು ಈಶ್ವರನ । ಕಾಣನೆಂಬುದು ಸಹಜ ।
ಏಣಾಂಕಧರನು ಧರೆಗಿಳಿಯಲವನಿಂದ ।
ಗಾಣವಾಡಿಸುವ ಸರ್ವಜ್ಞ||

ಸರ್ವಜ್ಞ ವಚನ 1160 :
ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1161 :
ಧರೆಯಲ್ಲಿ ಹುಟ್ಟಿ ಅಂ। ತರದಲ್ಲಿತಿರುಗುವುದು।
ಮೊರೆದೇರಿ ಕಿಡಿಯನುಗುಳುವುದುಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 1162 :
ಸಂಗವನು ತೊರೆದಂಗೆ ಅಂಗನೆಯರಿರಲೇಕೆ ?
ಬಂಗಾರವೇಕೆ ? ಬಲವೇಕೆ ? ಲೋಕದಾ
ಶೃಂಗಾರವೇಕೆ ? ಸರ್ವಜ್ಞ||

ಸರ್ವಜ್ಞ ವಚನ 1163 :
ಒಳಗೊಂದು ಕೋರುವನು । ಹೊರಗೊಂದು ಕೋರುವನು ।
ಕೆಳಗೆಂದು ಬೀಳ ಹಾರುವನ, ಸರ್ಪನಾ ।
ಸುಳಿವು ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 1164 :
ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ ನೆನಹು ಘನವಾಗೆ ಶಿವಲಿಂಗ
ಹಿಂಗಿರದು ಅವನ ಸರ್ವಜ್ಞ||

ಸರ್ವಜ್ಞ ವಚನ 1165 :
ಆಳಾಗಬಲ್ಲವನು । ಆಳುವನು ಅರಸಾಗಿ ।
ಆಳಾಗಿ ಬಾಳಲರೆಯದವ ಕಡೆಯಲ್ಲಿ ।
ಹಾಳಾಗಿ ಹೋದ ಸರ್ವಜ್ಞ||

ಸರ್ವಜ್ಞ ವಚನ 1166 :
ಸಾರವನು ಬಯಸುವದೇ । ಕ್ಷಾರವನು ಬೆರಸುವದು ।
ಮಾರಸಂಹರನ ನೆನೆಯುವಡೆ ಮೃತ್ಯು ತಾ ।
ದೂರಕ್ಕೆ ದೂರ ಸರ್ವಜ್ಞ||

ಸರ್ವಜ್ಞ ವಚನ 1167 :
ತಾನಕ್ಕು ಪರನಕ್ಕು ಶ್ವಾನಗರ್ದಭನಕ್ಕು ।
ವಾನರನು ಅಕ್ಕು ಪಶುವಕ್ಕು ಪಯಣದಲಿ
ಸೀನೆ ಭಯವಕ್ಕು ಸರ್ವಜ್ಞ||

ಸರ್ವಜ್ಞ ವಚನ 1168 :
ಸತ್ಯರೂ ಹುಸಿಯುವಡೆ । ಒತ್ತಿ ಹರಿದರೆ ಶರಧಿ ।
ಉತ್ತಮರು ಕೇಡಬಗೆದಿಹರೆ ಲೋಕವಿನ್ನೆತ್ತ।
ಸಾಗುವದು ಸರ್ವಜ್ಞ||

ಸರ್ವಜ್ಞ ವಚನ 1169 :
ಇದ್ದುದನು ಬಿಟ್ಟು ಹೊರಗಿದ್ದುದನೆ ಬಯಸುತಲೆ
ಇದ್ದು ಉಣದಿಪ್ಪ ಬಾಯೊಳಗೆ ಕತ್ತೆಯಾ
ಲದ್ದಿಯೇ ಬೀಳ್ಗು ಸರ್ವಜ್ಞ||

ಸರ್ವಜ್ಞ ವಚನ 1170 :
ಮುತ್ತೊಡೆದು ಹತ್ತಿರಲು । ಮತ್ತಾನೆ ಸತ್ತಿರಲು।
ಹುತ್ತವನೇರಿ ನರಿ ಕೂಗೆ ಜಗಕೆಲ್ಲ ।
ಕುತ್ತು ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1171 :
ತನ್ನಲಿಹ ಲಿಂಗವನು ಮನ್ನಿಸಲಿಕರಿಯದಲೆ
ಬಿನ್ನಣದಿ ಕಟೆದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ||

ಸರ್ವಜ್ಞ ವಚನ 1172 :
ತುರುಕನ ನೆರೆ ಹೊಲ್ಲ। ಹರದನ ಕೆಳೆ ಹೊಲ್ಲ।
ತಿರಿಗೂಳನಟ್ಟು ಉಣಲೊಲ್ಲ,ಪರಸತಿಯ।
ಸರಸವೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 1173 :
ಸತ್ಯಕ್ಕೆ ಸರಿಯಿಲ್ಲ । ಮಿಥ್ಯಕ್ಕೆ ನೆಲೆಯಿಲ್ಲ ।
ಹೆತ್ತಮ್ಮನಿಂದ ಹಿತರಿಲ್ಲ ನರರೊಳಗೆ ।
ನಿತ್ಯರೇ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 1174 :
ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
ಹತವ ಗೈವುದಕ್ಕೆ ರುದ್ರಗಣ, ಇವರುಗಳ
ಸ್ಥಿತಿಯನರಿಯೆಂದ ಸರ್ವಜ್ಞ||

ಸರ್ವಜ್ಞ ವಚನ 1175 :
ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು – ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ||

ಸರ್ವಜ್ಞ ವಚನ 1176 :
ಮಡಿಯನುಟ್ಟವರನ್ನು । ನುಡಿಸುವರು ವಿನಯದಲಿ ।
ಒಡಹುಟ್ಟಿದವರು ಅರುವೆಯನು ಉಟ್ಟಿಹರೆ ।
ನುಡಿಸ ನಾಚುವರು ಸರ್ವಜ್ಞ||

ಸರ್ವಜ್ಞ ವಚನ 1177 :
ಬಂಡುಣಿಗಳಂತಿಹರು । ಭಂಡನೆರೆ ಯಾಡುವರು ಕಂಡುದನು
ಅರಿದು ನುಡಿಯರಾ ಹಾರುವರು ।
ಭಂಡರೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 1178 :
ಒಂದು ಒಂಭತ್ತು ತಲೆ । ಸಂದ ತೋಳಿಪ್ಪತ್ತು ।
ಬಂಧುಗಳನ್ನೆಲ್ಲ ಕೆಡಿಸಿತು, ಪತಿವ್ರತೆಯ ।
ತಂದ ಕಾರಣದಿ ಸರ್ವಜ್ಞ||

ಸರ್ವಜ್ಞ ವಚನ 1179 :
ಹೆಣ್ಣಿಗೂ ಮಣ್ಣಿಗೂ ಉಣ್ಣುದುರಿಯಲುಬೇಡ ।
ಹೆಣ್ಣಿನಿಂದ ಕೆಟ್ಟ ದಶಕಂಠ ಕೌರವನು ।
ಮಣ್ಣಿಂದ ಕೆಡನೆ ಸರ್ವಜ್ಞ||

ಸರ್ವಜ್ಞ ವಚನ 1180 :
ಅರಿಯೆನೆಂಬುವದೊಂದು । ಅರಸು ಕೆಲಸವು ಕಾಣೋ ।
ಅರಿದೆನೆಂದಿಹನು ದೊರೆಗಳಾ ಆಳೆಂದು ।
ಮರೆಯಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 1181 :
ವಂಶವನು ಪುಗನೆಂದಿ, ಗಾಶಿಸನು ಪರಧನವ
ಸಂಶಯವನಳಿದ ನಿಜಸುಖಿ ಮಹಾತ್ಮನು
ಹಿಂಸೆಗೊಡಬಡನು ಸರ್ವಜ್ಞ||

ಸರ್ವಜ್ಞ ವಚನ 1182 :
ಕೊಲು ಧರ್ಮಗಳ – ನೊಯ್ದು । ಒಲೆಯೊಳಗೆ ಇಕ್ಕುವಾ ।
ಕೊಲಲಾಗದೆಂಬ ಜೈನನಾ ಮತವೆನ್ನ ।
ತಲೆಯ ಮೇಲಿರಲಿ ಸರ್ವಜ್ಞ||

ಸರ್ವಜ್ಞ ವಚನ 1183 :
ತತ್ವದಾ ಜ್ಞಾನತಾ । ನುತ್ತಮವು ಎನಬೇಕು ।
ಮತ್ತೆ ಶಿವಧ್ಯಾನ ಬೆರೆದರದು ।
ಶಿವಗಿರಿಂ । ದತ್ತಲೆನಬೇಕು ಸರ್ವಜ್ಞ||

ಸರ್ವಜ್ಞ ವಚನ 1184 :
ಸುರೆಯ ಹಿರಿದುಂಡವಗೆ । ಉರಿಯಮೇಲಾಡುವಗೆ ।
ಹರಿಯುವಾ ಹಾವ ಪರನಾರಿ ಪಿಡಿದಂಗೆ ।
ಮರಣ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 1185 :
ಮುದ್ದು ಮಂತ್ರವು, ಶುಕನು । ತಿದ್ದುವವು ಕುತ್ತಗಳ ।
ತಿದ್ದಿಯೂ ತಿದ್ದಲರಿಯವವು ಶಿವನೊಲಿಯ ।
ದಿದ್ದಿಹರೆ ಕಾಣೊ ಸರ್ವಜ್ಞ||

ಸರ್ವಜ್ಞ ವಚನ 1186 :
ಒಂದೂರ ಗುರುವಿರ್ದು । ವಂದನೆಯ ಮಾಡದೆ
ಸಂದಿಸೆ ಕೊಳ ತಿನಿತಿಪರ್ವನ – ಇಅರವು
ಹಮ್ದಿಯ ಇಅರವು ಸರ್ವಜ್ಞ||

ಸರ್ವಜ್ಞ ವಚನ 1187 :
ಏಳು ಕೋಟಿಯ ಏಳು ಲಕ್ಷದ
ಏಳು ಸಾವಿರದ ಎಪ್ಪತ್ತು ವಚನಗಳನ್ನು
ಹೇಳಿದಾನೆ ಕೇಳಿ ನಮ್ಮ ಸರ್ವಜ್ಞ||

ಸರ್ವಜ್ಞ ವಚನ 1188 :
ಸಂಗದಿಂ ಕೆಳೆಯಿಲ್ಲ । ಬಿಂಗದಿಂ ಹೊರೆಯಿಲ್ಲ
ಗಂಗೆಯಿಂದಧಿಕ ನದಿಯಿಲ್ಲ – ಪರದೈವ
ಲಿಂಗದಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1189 :
ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು
ಮಾತು ತಾನರಿಯದಧಮಂಗೆ ಮಾಣಿಕವು
ತೂತು ಬಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 1190 :
ತೆಪ್ಪವನ್ನು ನಂಬಿದಡೆ । ತಪ್ಪದಲೆ ತಡಗಹದು ।
ಸರ್ಪಭೂಷಣನ ನಂಬಿದಡೆ ಭವಪಾಶ ।
ತಪ್ಪಿ ಹೋಗುವುದು ಸರ್ವಜ್ಞ||

ಸರ್ವಜ್ಞ ವಚನ 1191 :
ಕಂಡವರು ಕೆರಳುವರು। ಹೆಂಡತಿಯು ಕನಲುವಳು।
ಖಂಡಿತದಿ ಲಕ್ಷ್ಮಿ ತೊಲಗುವಳು, ಶಿವನೊಲುಮೆ।
ಕಂಡು ಕೊಳದಿರಲು ಸರ್ವಜ್ಞ||

ಸರ್ವಜ್ಞ ವಚನ 1192 :
ಅಂಕದರ್ಜುನ ಹೇಡಿ , ಶಂಕರನು ತಿರಿದುಂಡ
ಪಂಕಜನಾಭ ದನಕಾಯ್ದ , ಇನ್ನುಳಿದವರ
ಬಿಂಕಬೇನೆಂದ ಸರ್ವಜ್ಞ||

ಸರ್ವಜ್ಞ ವಚನ 1193 :
ಸಂಗದಿಂ ಕೆಳೆಯಿಲ್ಲಿ । ಭಂಗದಿಂ ವ್ಯಥೆಯಿಲ್ಲ ।
ಗಂಗೆಯಿಂದಧಕ ನದಿಯಲ್ಲಿ ಪರದೈವ ।
ಲಿಂಗದಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 1194 :
ಸಾಣೆ ಕಲ್ಲೊಳು ಗಂಧ । ಮಾಣದಲೆ ಎಸೆವಂತೆ ।
ಜಾಣಸದ್ಗುರುವಿನುಪದೇಶದಿಂ ಮುಕ್ತಿ
ಕಾಣಿಸುತ್ತಿಹುದು ಸರ್ವಜ್ಞ||

ಸರ್ವಜ್ಞ ವಚನ 1195 :
ನೂರಮುವತ್ತು ಗುರಿ। ಬೇರೆ ಇನ್ನೊಂದು ತಲೆ।
ಊರಿದವು ಎರಡು ಸಮಪಾದ,ಮತ್ತೆರಡ।
ನೂರದೇಕೆಂದ ಸರ್ವಜ್ಞ||

ಸರ್ವಜ್ಞ ವಚನ 1196 :
ಎಂತು ಜೀವಿಯ ಕೊಲ್ಲ । ದಂತಿಹುದು ಜಿನಧರ್ಮ ।
ಜಂತುಗಳ ಹೆತ್ತು ಮರಳಿಯದನೇ ಸಲಹಿ ।
ದಂತವನೆ ಜೈನ ಸರ್ವಜ್ಞ||

ಸರ್ವಜ್ಞ ವಚನ 1197 :
ಕಾಯ ಕಮಲವೇ ಸಜ್ಜೆ ಜೀವರತುನವೇ ಲಿಂಗ
ಭಾವ ಪುಷ್ಪದಿಂ ಶಿವಪೂಜೆ ಮಾಡುವವನ
ದೇವನೆಂದೆಂಬೆ ಸರ್ವಜ್ಞ||

ಸರ್ವಜ್ಞ ವಚನ 1198 :
ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು
ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ
ಮುಂದೆ ಬಂದಕ್ಕು , ಸರ್ವಜ್ಞ||

ಸರ್ವಜ್ಞ ವಚನ 1199 :
ವಿದ್ಯೆಯೇ ತಾಯ್ತಂದೆ । ಬುದ್ಧಿಯೇ ಸೋದರನು ।
ಆಭ್ವಾನ ಕಾದರವ ನೆಂಟ, ಸುಖದಿ ತಾ ।
ನಿದ್ದುದೇ ರಾಜ್ಯ ಸರ್ವಜ್ಞ||

ಸರ್ವಜ್ಞ ವಚನ 1200 :
ಉದ್ದುರುಟು ಮಾತಾಡಿ । ಇದುದನು ಹೋಗಾಡಿ ।
ಉದ್ದನಾ ಮರವ ತುದಿಗೇರಿ ತಲೆಯೂರಿ ।
ಬಿದ್ದು ಸತ್ತಂತೆ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post