Menu

Home ನಲಿಕಲಿ About ☰ Menu


 

🔍

ಛತ್ರಪತಿ ಶಿವಾಜಿ ಮಹಾರಾಜ್ - ಹಿಂದವೀ ಸ್ವರಾಜ್ಯ

 ಛತ್ರಪತಿ ಶಿವಾಜಿ ಮಹಾರಾಜ್

  (ಫೆಬ್ರುವರಿ 19, 1627 - ಏಪ್ರಿಲ್ 3, 1680) 

             ಹಿಂವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಭಾರತ ದೇಶ ಕಂಡ ಮಹಾನ್ ಪರಾಕ್ರಮಿ. ದೇಶ, ಧರ್ಮ, ಮಾತೆಯರು ಮತ್ತು ಸಹೋದರಿಯರ ರಕ್ಷಣೆಗೆ ಪಣತೊಟ್ಟ ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು. ಶಿವಾಜಿ ಮಹಾರಾಜರು ತಮ್ಮ ಆಡಳಿತ, ಧೈರ್ಯ ಮತ್ತು ಯುದ್ಧ ಕೌಶಲ್ಯಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ತನ್ನ ಮರಾಠಾ ಸೈನ್ಯದ ಮೂಲಕ ಗೆರಿಲ್ಲಾ ಹೋರಾಟದ ತಂತ್ರಗಳನ್ನು ಪರಿಚಯಿಸಿದ ಮೊದಲ ವ್ಯಕ್ತಿಯೇ ಶಿವಾಜಿ. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.

ಜನನ & ಬಾಲ್ಯ : 

             ಛತ್ರಪತಿ ಶಿವಾಜಿ ಮಹಾರಾಜ ಸಾ.ಶ 1627 ಫೆಬ್ರುವರಿ 19ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿದುರ್ಗದಲ್ಲಿ ಶಹಾಜಿ ಭೋಂಸ್ಲೆ & ಜೀಜಾಬಾಯಿ ದಂಪತಿಗಳ ಮಗನಾಗಿ ಜನಿಸಿದನು. ಚಿಕ್ಕವಯಸ್ಸಿನಿಂದಲೇ ತಾಯಿಯಿಂದ ಪೌರಾಣಿಕ ಕಥೆಗಳನ್ನು ಕೇಳುತ್ತಾ ಬೆಳೆದ ಶಿವಾಜಿ ಭಾರತೀಯ ಸಂಸ್ಕೃತಿಗಳ ಮಹಾನ್ ಆರಾಧಕನಾದವು. ಶಹಾಜಿ ಭೋಂಸ್ಲೆ ಬೆಂಗಳೂರನ್ನು ಜಹಗೀರಾಗಿ ಪಡೆದು ಅದನ್ನು ಮುಖ್ಯ ಸೇನಾನೆಲೆಯನ್ನಾಗಿ ಮಾಡಿಕೊಂಡು ದ್ವಿತೀಯ ಪತ್ನಿ ಸುಧಾಬಾಯಿಯೊಡನೆ ವಾಸಿಸುತ್ತಿದ್ದರು. ಇಲ್ಲಿ ಶಹಾಜಿ ಜಾಗೀರುದಾರರಾಗಿದ್ದರೂ ಸ್ವತಂತ್ರ ರಾಜರಂತೆಯೇ ಆಡಳಿತ ನಡೆಸುತ್ತಿದ್ದರು.

ಶಿಕ್ಷಣ & ಯುದ್ಧಕಲೆ :

        ಶಿವಾಜಿ 12ನೇ ವಯಸ್ಸಿನವರೆಗೆ ಬೆಂಗಳೂರಿನಲ್ಲೇ ವಾಸವಿದ್ದು ಅಣ್ಣ ಸಂಬಾಜಿಯಿಂದ ಆರಂಭಿಕ ಶಿಕ್ಷಣ ಪಡೆದು, ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ 17ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು..

          ಶಹಾಜಿ ಜಾಗೀರು ನೋಡಿಕೊಳ್ಳುತ್ತಿದ್ದ ದಾದಾಜಿ ಕೊಂಡದೇವ ಅವರಿಂದ ಪರಿಪೂರ್ಣ ಸೈನಿಕ ಶಿಕ್ಷಣ ಪಡೆದಿದ್ದ ಶಿವಾಜಿ ಕಾಡುಮೇಡುಗಳಲ್ಲಿ ಸುತ್ತಾಡಿ ಅನುಭವ ಪಡೆದರು. ಪಶ್ಚಿಮ ಘಟ್ಟಗಳ ಮಾವಳರೆಂಬ ಗಿರಿಜನರನ್ನು ಕಂಡ ಶಿವಾಜಿ ಅವರ ಧೈರ್ಯ ಸಾಹಸಗಳನ್ನು ನೋಡಿ ಅವರನ್ನೆಲ್ಲಾ ಸೇರಿಸಿ ಬಲವಾದ ಪಡೆ ಕಟ್ಟಲು ಆರಂಭಿಸಿದರು. ಪ್ರಮುಖ ಮರಾಠ ನಾಯಕರೂ ಇವರೊಡನೆ ಕೈ ಜೋಡಿಸಿದರು. ತಂದೆ ಜಹಗೀರಾದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಸಂದರ್ಭದಲ್ಲೆ ಅದೇ ಪ್ರದೇಶಕ್ಕೆ ಸನಿಹವಿದ್ದ ಮರೆಯಲಾಗದ ಮಹಾಸಾಮ್ರಾಜ್ಯವಾದ ವಿಜಯನಗರವನ್ನು(ಆ ವೇಳೆಗೆ ಪತನವಾಗಿತ್ತು) ಅದರ ಅವಶೇಷಗಳನ್ನು ಕಂಡು ಬಂದಿದ್ದರು ಯುವಕ ಶಿವಾಜಿ.

ವಿವಾಹ :

    ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು  ಸಾ.ಶ 1640-42ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್​ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. 

ಪಟ್ಟಾಭಿಷೇಕ : 

     ರಾಯಗಢ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 1674ರ ಜೂನ್‌ 6ರಂದು ಈ ಕೋಟೆಯಲ್ಲಿ ಶಿವಾಜಿ ಮಹಾರಾಜ್‌ 'ಛತ್ರಪತಿ' ಬಿರುದಿನಿಂದ ಪಟ್ಟಾಭಿಷೇಕ ಮಾಡಲಾಯಿತು ಮತ್ತು ಅನಂತರ ಇಲ್ಲಿಂದ ಅವರು ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಧಾರ್ಮಿಕ ಸಹಿಷ್ಣು :

      ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕೆ ಸೇರಿದವರು ಹಾಗೂ ಇವರು ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ಅವರ ಆಡಳಿತದ ಅವಧಿಯಲ್ಲಿ ಹಿಂದೂಗಳು ಮಾತ್ರವಲ್ಲ, ಮುಸ್ಲಿಂರು ಕೂಡ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿದ್ದರು. ಶಿವಾಜಿ ಹಿಂದುಗಳಿಗೆ ಹೇಗೆ ದೇವಾಲಯವನ್ನು ನಿರ್ಮಿಸಲು ಸಹಕಾರವನ್ನು ನೀಡುತ್ತಿದ್ದರು, ಅಷ್ಟೇ ಸಹಕಾರವನ್ನು ಮುಸ್ಲಿಂರಿಗೆ ಮಸೀದಿಯನ್ನು ನಿರ್ಮಿಸಲು ನೀಡುತ್ತಿದ್ದರು. ಅವರ ಸಾಮ್ರಾಜ್ಯದಲ್ಲಿ ಹಿಂದೂ ಪಂಡಿತರಿಗಿದ್ದ ಗೌರವವನ್ನೇ ಮುಸ್ಲಿಂ ಸಂತರಿಗೆ ಹಾಗೂ ಫಕೀರ್‌ರಿಗೂ ನೀಡಲಾಗುತ್ತಿತ್ತು. ಶಿವಾಜಿಯ ಸೈನ್ಯದಲ್ಲಿ ಹಿಂದೂ ಸೈನಿಕರಂತೆ ಮುಸ್ಲಿಂ ಸೈನಿಕರು ಇದ್ದರು. ಶಿವಾಜಿ ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸುತ್ತಿದ್ದರು, ಗೌರವಿಸುತ್ತಿದ್ದರು. ಶಿವಾಜಿ ಆಡಳಿತಾವಧಿಯಲ್ಲಿ ಸಾಂಪ್ರದಾಯಿಕ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು.

ಶಿವಾಜಿಯ ನ್ಯಾಯ ಮತ್ತು ಧೈರ್ಯದ ಕಥೆ

ರಾಯಘಡ ಕೋಟೆ

        ಒಂದು ಸಲ ಶಿವಾಜಿಯ ಸೈನಿಕರು ಗ್ರಾಮದ ಮುಖ್ಯಸ್ಥನನ್ನು ಕರೆತಂದು ಶಿವಾಜಿಯ ಮುಂದೆ ನಿಲ್ಲಿಸಿದರು. ಆ ಮುಖ್ಯಸ್ಥನು ದೊಡ್ಡ ತಲೆ, ದಪ್ಪ ಮೀಸೆ ಹೊಂದಿರುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದನು. ಆದರೆ ಈ ವ್ಯಕ್ತಿಯು ವಿಧವೆಯರ ಗೌರವಕ್ಕೆ ದಕ್ಕೆ ತರುವಂತಹ ಕೆಲಸಮಾಡಿದ್ದಾನೆಂದು ಶಿವಾಜಿಯ ಸೈನಿಕರು ಶಿವಾಜಿಗೆ ತಿಳಿಸುತ್ತಾರೆ.  ಘಟನೆಯ ಸಂದರ್ಭದಲ್ಲಿ ಶಿವಾಜಿ ಮಹಾರಾಜರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಆದರೂ ಶಿವಾಜಿ ಮಹಾರಾಜನು ಅತ್ಯಂತ ಧೈರ್ಯಶಾಲಿ, ನಿರ್ಭೀತ, ನ್ಯಾಯಸಮ್ಮತನಾಗಿದ್ದ ಮತ್ತು ಮಹಿಳೆಯರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಗ್ರಾಮದ ಮುಖ್ಯಸ್ಥನ ನೀಚ ಕೃತ್ಯವನ್ನು ಕೇಳಿ ಶಿವಾಜಿ ಮಹಾರಾಜನು ಕೋಪಗೊಂಡನು.

          ಶಿವಾಜಿ ಮಹಾರಾಜನು ತಕ್ಷಣ ತನ್ನ ನಿರ್ಧಾರವನ್ನು ತಿಳಿಸಿದನು. ಶಿವಾಜಿಯು ತನ್ನ ಸೈನಿಕರ ಬಳಿ ಈ ಮುಖ್ಯಸ್ಥನ ಎರಡೂ ಕೈ, ಕಾಲುಗಳನ್ನು ಕತ್ತರಿಸಲು ಹೇಳಿದನು. ಈತನ ನೀಚ ಕೃತ್ಯಕ್ಕೆ ಈ ಶಿಕ್ಷೆಯಷ್ಟು ಘೋರ ಶಿಕ್ಷೆ ಮತ್ತೊಂದಿಲ್ಲವೆಂದು ಹೇಳುತ್ತಾನೆ. ಛತ್ರಪತಿ ಶಿವಾಜಿ ಮಹಾರಾಜನು ತನ್ನ ಜೀವನದುದ್ದಕ್ಕೂ ಸಾಹಸವನ್ನು ಮಾಡಿದವನು. ಹಾಗೂ ಬಡ ಜನರಿಗೆ, ನಿರ್ಗತಿಕರಿಗೆ ಯಾವಾಗಲೂ ಕೂಡ ಪ್ರೀತಿ , ಗೌರವವನ್ನು ನೀಡಿದವನೀತ.

ತುಳಜಾ ಭವಾನಿಯ ಆರಾಧಕರು :

       ತುಳಜಾಪುರವು ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿದೆ. ಛತ್ರಪತಿ ಶಿವಾಜಿಯ ಕುಲದೇವಿ ತಾಯಿ ತುಳಜಾ ಭವಾನಿ ಸ್ಥಾಪಿಸಿದ ಸ್ಥಳ, ಇದು ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳ ಅನೇಕ ನಿವಾಸಿಗಳ ಕುಲದೇವಿಯಾಗಿ ಇಂದಿಗೂ ಜನಪ್ರಿಯವಾಗಿದೆ. ವೀರ ಛತ್ರಪತಿ ಶಿವಾಜಿ ಮಹಾರಾಜರ ಕುಲದೇವಿ ತಾಯಿ ತುಳಜಾ ಭವಾನಿ. ಶಿವಾಜಿ

ಶಿವಾಜಿ ಕುರಿತು ನಾವರಿಯದ ವಿಚಾರಗಳು : 

🚩 ಹಲವಾರು ನಂಬಿಕೆಗಳು ಮತ್ತು ವೃತ್ತಾಂತಗಳ ಪ್ರಕಾರ, ಶಿವಾಜಿಗೆ ಶಿವನ ಹೆಸರನ್ನು ಇಡಲಾಯಿತು. ಆದರೂ ವಿದ್ವಾಂಸರು ಇದನ್ನು ಶಿವಾಯಿ ಎಂದು ಕರೆಯುತ್ತಾರೆ.

🚩 ಶಿವಾಜಿಯನ್ನು ಔಚಾರಿಕವಾಗಿ 1674 ರಲ್ಲಿ ರಾಯಗಡದಲ್ಲಿ ತನ್ನ ಕ್ಷೇತ್ರದ ಚಕ್ರವರ್ತಿ ಎಂದು ಪಟ್ಟಾಭಿಷೇಕ ಮಾಡಲಾಯಿತು.

🚩 ಶಿವಾಜಿ ನುರಿತ ಕಮಾಂಡರ್ ಮತ್ತು ಧೀರ ಯೋಧರಾಗಿದ್ದರು.

🚩 ಶಿವಾಜಿ ಗೆರಿಲ್ಲಾ ಶೈಲಿಯ ಯುದ್ಧದಲ್ಲಿ ಅತ್ಯಂತ ನುರಿತವರಾಗಿದ್ದರು ಮತ್ತು ರಹಸ್ಯವಾದ ಯುದ್ಧ ಕಾರ್ಯಾಚರಣೆಗಳನ್ನು ಯೋಜಿಸಿದ್ದರು.

🚩 ಶಿವಾಜಿ ರಹಸ್ಯ ಯುದ್ಧದ ಕಲೆಗಾಗಿ ಅವರನ್ನು ಹೆಚ್ಚಾಗಿ ‘ಪರ್ವತ ಇಲಿ’ ಎಂದು ಕರೆಯಲಾಗುತ್ತಿತ್ತು.

🚩  ಶಿವಾಜಿ ರಾಮಾಯಣ ಮತ್ತು ಮಹಾಭಾರತ ಸೇರಿದಂತೆ ಧಾರ್ಮಿಕ ಗ್ರಂಥಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರೂ, ಅವರು ಯಾವುದೇ ಔಪಚಾರಿಕ ಶಾಲಾ ಶಿಕ್ಷಣವನ್ನು ಹೊಂದಿರಲಿಲ್ಲ.

🚩 ಹಿಂದೂ ರಾಜಕೀಯ ಮತ್ತು ನ್ಯಾಯಾಲಯದ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವಲ್ಲಿಯೂ ಅವರು ಹೆಸರುವಾಸಿಯಾಗಿದ್ದಾರೆ. ವ್ಯಾಪಕವಾಗಿ ಬಳಸಲಾಗುವ ಪರ್ಷಿಯನ್ ಭಾಷೆಯ ಬದಲು ಆಡಳಿತ ಪ್ರಕ್ರಿಯೆಗಳಲ್ಲಿ ಮರಾಠಿ ಮತ್ತು ಸಂಸ್ಕೃತ ಭಾಷೆಯ ಬಳಕೆಯನ್ನು ಅವರು ಉತ್ತೇಜಿಸಿದರು.

🚩 ಶಿವಾಜಿ ಎಂಟು ಮಂತ್ರಿಗಳ ಪರಿಷತ್ತು ಅಥವಾ ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳ ಬಗ್ಗೆ ಶಿವಾಜಿಗೆ ಸಲಹೆ ನೀಡುವ ಆಡಳಿತ ಮತ್ತು ಸಲಹಾ ಮಂಡಳಿಯನ್ನು ರಚಿಸಿದರು.

🚩 ಶಿವಾಜಿ ತನ್ನದೇ ಆದ ನೌಕಾಪಡೆ ನಿರ್ಮಿಸಿದ ಮಧ್ಯಕಾಲೀನ ಭಾರತದ ಮೊದಲ ಸ್ಥಳೀಯ ಆಡಳಿತಗಾರ ಮತ್ತು 1665 ರಲ್ಲಿ ತನ್ನ ಮೊದಲ ಪೂರ್ಣ ಪ್ರಮಾಣದ ನೌಕಾ ದಂಡಯಾತ್ರೆಯನ್ನು ಮುನ್ನಡೆಸಿದ.

🚩 ಶಿವಾಜಿ ಜಾತ್ಯತೀತ ರಾಜರಾಗಿದ್ದರು ಮತ್ತು ಅವರ ಸೈನ್ಯ ಮತ್ತು ಕಚೇರಿಯಲ್ಲಿ ಅನೇಕ ಮುಸ್ಲಿಮರನ್ನು ಹೊಂದಿದ್ದರು. ಇಬ್ರಾಹಿಂ ಖಾನ್ ಮತ್ತು ದೌಲತ್ ಖಾನ್ ಅವರು ನೌಕಾಪಡೆಯ ಪ್ರಮುಖರು ಮತ್ತು ಸಿದ್ದಿ ಇಬ್ರಾಹಿಂ ಫಿರಂಗಿದಳದ ಮುಖ್ಯಸ್ಥರಾಗಿದ್ದರು.

🚩ಶಿವಾಜಿ ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುತ್ತಿದ್ದರು. ಮಹಿಳೆಯರ ಅಪಮಾನವನ್ನು ನಿಷೇಧಿಸುವ ನಿಯಮಗಳನ್ನು ಜಾರಿಗೆ ತಂದಿದ್ದರು. ಮಹಿಳೆಯರ ಮೇಲಿನ ಯಾವುದೇ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು.

🚩 ಶಿವಾಜಿ ಸಾ.ಶ 1680 ರಲ್ಲಿ ಜ್ವರ ಮತ್ತು ಭೇದಿ ರೋಗದಿಂದ ಬಳಲುತ್ತಿದ್ದರು ಮತ್ತು ಏಪ್ರಿಲ್ 3 ರಂದು ತಮ್ಮ 52 ನೇ ವಯಸ್ಸಿನಲ್ಲಿ ನಿಧನರಾದರು. ರಾಯಗಡ ಕೋಟೆಯಲ್ಲಿ ಶಿವಾಜಿ ಮಹಾರಾಜರ ಸಮಾಧಿ ಇದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post