*ರಾಷ್ಟ್ರೀಯ ಯುವ ದಿನ*
ಸ್ವಾಮಿ ವಿವೇಕಾನಂದ
(ಜನವರಿ 12, 1863 - ಜುಲೈ 4, 1902)
"ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ಘೋಷ ವಾಕ್ಯದ ಮೂಲಕ ಭಾರತೀಯರ ಹೃನ್ಮನದಲ್ಲಿ ಅಜರಾಮರರಾಗಿರುವ, ಅಮೆರಿಕದ ಸಹೋದರ, ಸಹೋದರಿಯರೇ, ಎಂಬ ಸಂಬೋಧನೆ ಮೂಲಕ ಅಮೆರಿಕನ್ನರ ಮನಗೆದ್ದು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಜಗದಗಲ, ಮುಗಿಲಗಲ ವಿಸ್ತರಿಸಿದ ಉದಾತ್ತ ವಿಚಾರಗಳ ಪ್ರಖರ ವಾಗ್ಮಿ, ಯುವಜನರ ಕಣ್ಮಣಿ, ವೀರ ಸನ್ಯಾಸಿ, ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರೋತ್ತರ ಭಾರತದ ವಿವಾದಾತೀತ ವ್ಯಕ್ತಿತ್ವಗಳಲ್ಲಿ ಮೊದಲ ಸಾಲಿನಲ್ಲಿ ಗುರುತಿಸಲ್ಪಡುವಂತವರು.
ಸ್ವಾಮಿ ವಿವೇಕಾನಂದ... ಈ ಹೆಸರು ಕೇಳಿದರೇನೆ ಮೈಯೆಲ್ಲಾ ಪುಳಕಗೊಳ್ಳುತ್ತದೆ. ಭಾರತ ಕಂಡ ಹೆಮ್ಮೆಯ ಪುತ್ರರಿವರು. ಯುವ ಜನತೆಗೆ ಸ್ಫೂರ್ತಿಯ ಚಿಲುಮೆಯಂತಿದ್ದ ವಿವೇಕಾನಂದರ ಚಿಂತನೆ, ಸಂದೇಶಗಳು ಎಂದೆಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಜೀವನ, ಸಂದೇಶಗಳಲ್ಲಿ ವಿಶೇಷವಾಗಿ ಯುವಜನರ ಮೇಲೆ ಪ್ರಭಾವ ಬೀರುವ, ಬಾಳು ಬೆಳಗುವ ಅಂಶಗಳಿರುತ್ತಿದ್ದವು. ಇದೇ ಕಾರಣಕ್ಕೆ ಸ್ವಾಮಿ ವಿವೇಕಾನಂದರನ್ನು ಯುವಜನರ ಆದರ್ಶ ಎಂದು ಗುರುತಿಸಲಾಗಿದೆ ಮತ್ತು ಇದೇ ಕಾರಣಕ್ಕೆ ಭಾರತದಲ್ಲಿ ಈ ವೀರ ಸನ್ಯಾಸಿಯ ಜನ್ಮದಿನವನ್ನು (ಜನೆವರಿ 12) ರಾಷ್ಟ್ರೀಯ ಯುವ ದಿನವಾಗಿ ಆಚರಿಸುತ್ತಿರುವುದು. ಈಗ ಈ ಮಹಾನ್ ಚೇತನದ ಕುರಿತು ಸಂಕ್ಷಿಪ್ತವಾಗಿ ಅರಿಯಲು... ಪ್ರಯತ್ನಿಸೋಣ.
#ಜನನ ಮತ್ತು ಬಾಲ್ಯ#
1863, ಜನವರಿ 12ನೇ ತಾರೀಖಿನಂದು ಮುಂಜಾನೆ 6ಗಂಟೆ 33ನಿಮಿಷಕ್ಕೆ (ಕೃಷ್ಣ ಪಕ್ಷದ ಸಪ್ತಮಿ) ಕಲ್ಕತ್ತದಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿ ದೇವಿ ದಂಪತಿಗಳ ಮಗನಾಗಿ ಜನಿಸಿದ ನರೇಂದ್ರನಾಥ ದತ್ತ ಮುಂದೆ ಸ್ವಾಮಿ ವಿವೇಕಾನಂದ ಎಂಬ ನಾಮಧೇಯದಿಂದ ಜಗದ್ವಿಖ್ಯಾತರಾದರು. ತಾಯಿ ನರೇಂದ್ರನನ್ನು ಮುದ್ದಿನಿಂದ 'ಬಿಲೇ' ಎಂದು ಕರೆಯುತ್ತಿದ್ದರು.
ವಿವೇಕಾನಂದರು ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರು, ಅಕ್ಕಂದಿರಿಬ್ಬರನ್ನು ಪೀಡಿಸುವುದೆಂದರೆ ನರೇಂದ್ರನಿಗೆ ಬೆಲ್ಲ ತಿಂದಂತೆ. ಭುವನೇಶ್ವರಿ ದೇವಿ ಮಗನನ್ನು "ನರೇನ್, ನೀನು ದೊಡ್ಡವನಾದ ಮೇಲೆ ಏನಾಗಬೇಕೆಂದು ಮಾಡಿದ್ದಿಯಾ?" ಎಂದು ಕೇಳಿದರೆ ನರೇಂದ್ರನು " ಅಮ್ಮಾ , ಜೋಡು ಕುದುರೆ ಗಾಡಿ ಹೊಡೆಯುವ 'ಕೋಚ್ ಮ್ಯಾನ್' ಆಗುತ್ತೇನೆ" ಎಂದು ಉತ್ತರಿಸುತ್ತಿದ್ದರು.(ಶ್ರೀ ಕೃಷ್ಣನು ಕೂಡ ಅರ್ಜುನನ 'ಕೋಚ್ ಮ್ಯಾನ್' ಆಗಿರಲಿಲ್ಲವೆ?)
#ವಿವೇಕಾನಂದರ ಗುರು ರಾಮ ಕೃಷ್ಣ ಪರಮಹಂಸರು:
ಶ್ರೀ ರಾಮ ಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದರು. ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು. ವಿವೇಕಾನಂದರು ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ ಹಲವಾರು ಅಂಶಗಳನ್ನು ಅರಿಯುವುದರೊಂದಿಗೆ, ಮಹಾನ್ ಚೇತನವಾಗಿ ಬೆಳೆದರು.
#ಭಾರತ ಪರ್ಯಟನೆ:
ವಿವೇಕಾನಂದರು 1888ರಲ್ಲಿ ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ "ದಿ ಇಮಿಟೆಶ್ನ್ ಆಫ್ ಕ್ರೈಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು.
#ಚಿಕ್ಯಾಗೋ ಸರ್ವಧರ್ಮಸಮ್ಮೇಳ :
ವಿವೇಕಾನಂದರು ಅಮೆರಿಕದ ಚಿಕಾಗೋ(ಆರ್ಟ್ ಇನ್ಸ್ಟಿಟ್ಯೂಟ್ ಆಫ್ ಚಿಕ್ಯಾಗೋ)ದಲ್ಲಿ 1893ರ ಸೆಪ್ಟೆಂಬರ್ 11 ರಿಂದ 27ರವರೆಗೆ , 17 ದಿನಗಳ ಕಾಲ ನಡೆದ ವಿಶ್ವ ಧರ್ಮಸಮ್ಮೇಳನದಲ್ಲಿ ಭಾಗವಹಿಸಿ, ಕೇವಲ 3 ನಿಮಿಷದ ಭಾಷಣ(1893 ಸೆಪ್ಟೆಂಬರ್ 11)ದಲ್ಲಿ ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೆ ತಿಳಿಸಿ ವಿಶ್ವಾದ್ಯಂತ ಪ್ರಸಿದ್ಧರಾದರು.ಮಾಡಿದ ಭಾಷಣ ಇಂದಿಗೂ ವಿಖ್ಯಾತಿ. ಅಂದು 'ಅಮೇರಿಕಾದ ನನ್ನ ಸಹೋದರ, ಸಹೋದರಿಯರೇ' ಎನ್ನುತ್ತಲೇ ಮಾತು ಆರಂಭಿಸಿದ್ದ ಸ್ವಾಮಿ ವಿವೇಕಾನಂದರು ಭಾರತದ ಸಂಸ್ಕೃತಿ, ಸಿರಿವಂತಿಕೆ, ಜ್ಞಾನ, ಧರ್ಮ ಇವೆಲ್ಲದರ ವಿರಾಟ್ ರಾಯಭಾರಿಯಂತೆ ಕಂಡಿದ್ದರು. ತಮ್ಮ ಪ್ರಖರ ಚಿಂತನೆ, ಸಮಾಜವನ್ನು ತಿದ್ದುವ ಸಂದೇಶಗಳ ಮೂಲಕವೇ ಅಂದು ಸ್ವಾಮಿ ವಿವೇಕಾನಂದರು ವಿದೇಶಿಯನ್ನರ ಮನಗೆದ್ದಿದ್ದರು. ಸ್ವಾಮಿ ವಿವೇಕಾನಂದರ ಮಾತುಗಳನ್ನು ವಿದೇಶಿಗರು ತದೇಕಚಿತ್ತದಿಂದ ಆಲಿಸುತ್ತಿದ್ದರು.
#ರಾಮಕೃಷ್ಣ ಮಿಷನ್:
ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸ ರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ 1, 1897ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು.
#ವಿವೇಕಾನಂದರ ಕೊನೆಯ ದಿನಗಳು:
ತಮ್ಮ ಅವಸಾನವು ಸಮೀಪಿಸುತ್ತಿದೆ ಎಂಬುದನ್ನು ಸ್ವಾಮೀಜಿ ಅರಿತರು. ಕೊನೆಯ ದಿನಗಳ ಇವರ ಕಾರ್ಯವೆಲ್ಲವೂ ವಿಚಾರ ಪೂರ್ವಕವಾಗಿತ್ತಲ್ಲದೆ ಅರ್ಥಗರ್ಭಿತಾಗಿತ್ತು. “ವಿಶಾಲವಾದ ಮರದ ನೆರಳಿನಲ್ಲಿ ಸಣ್ಣ ಗಿಡಗಳು ಬೆಳೆಯಲಾರವು” ಎಂದಿದ್ದರು ಇವರು. ಜುಲೈ 4, 1902ರಂದು ಬೆಳಗ್ಗೆ 8 ರಿಂದ 11ರವರೆಗೆ ವಾಡಿಕೆಗಿಂತಲೂ ಅಪರೂಪವಾಗಿ ಧ್ಯಾನಸ್ಥರಾಗಿದ್ದರು. ನಂತರ ಮಧ್ಯಾಹ್ನ ಸ್ವಾಮೀಜಿ ಪ್ರೇಮಾನಂದ ಅವರೊಂದಿಗೆ ವಿಹರಿಸುತ್ತಿರುವಾಗ ಅವರಿಗೆ ವೇದಾಂತದ ಶಾಲೆಯನ್ನು ಪ್ರಾರಂಭಿಸಬೇಕೆಂಬ ತಮ್ಮ ಯೋಜನೆಯನ್ನು ವಿವರಿಸಿದರು. ಸಂಜೆ ಮತ್ತೆ ಒಂದು ಗಂಟೆಕಾಲ ಧ್ಯಾನಸ್ಥರಾಗಿಯೇ ತಮ್ಮ ಕೊಠಡಿಯಲ್ಲಿ ಕಳೆದು, ಮಲಗಿ ಎರಡು ಬಾರಿ ನಿಡಿದಾದ ಉಸಿರನ್ನು ಎಳೆದು ಚಿರಶಾಂತಿಯನ್ನು ಪಡೆದರು. ಸ್ವಾಮಿ ವಿವೇಕಾನಂದರು 1902ರಲ್ಲಿ ಅವರು ಕಾಲವಾಗುವವರೆಗೂ ಈ ದೇಶದ ಜನರ ಉನ್ನತಿಗಾಗಿ ಶ್ರಮಿಸಿದರು. ಕೇವಲ 39 ವರ್ಷ ವಯಸ್ಸಿನಲ್ಲಿ ಅವರು ಸಾಧಿಸಿದ್ದನ್ನು ಜಗತ್ತು ಮತ್ತು ಭಾರತ ಗೌರವ ಆದರಗಳಿಂದ ನೆನೆಸುತ್ತದೆ.
#ರಾಷ್ಟ್ರೀಯ ಯುವ ದಿನ: ವಿವೇಕಾನಂದರು ಅಂದು ಹಚ್ಚಿದ ವೇದಾಂತದ ದೀವಿಗೆಯು ಇಂದೂ ಕೂಡ ಜಗತ್ತಿಗೆ ಬೆಳಕು ಚೆಲ್ಲುತ್ತಿದೆ. ತನ್ನ ಗುರು ಶ್ರೀ ರಾಮಕೃಷ್ಣರ ಸಂದೇಶಗಳಿಗೆ ದನಿಯಾದ ವಿವೇಕಾನಂದರು ಶತಮಾನದ ನಂತರವೂ ತರುಣರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಈ ಕಾರಣದಿಂದಲೇ ವಿವೇಕಾನಂದರ ಜನ್ಮದಿನ(ಜನೆವರಿ 12)ವನ್ನು ಭಾರತ ಸರ್ಕಾರ 1984ರಲ್ಲಿ 'ರಾಷ್ಟ್ರೀಯ ಯುವ ದಿನ' ಎಂದು ಪೋಷಿಸಿ, 1985ನೇ ಇಸವಿಯಿಂದ 'ರಾಷ್ಟ್ರೀಯ ಯುವ ದಿನ'ವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ.
#ಯುವ ಜನತೆಯ ಸ್ಪೂರ್ತಿ ಮತ್ತು ರಾಷ್ಟ್ರ ಪ್ರೇಮ :
ಯುವಜನರಿಗೆ ವಿವೇಕಾನಂದರು ಆದರ್ಶಪ್ರಾಯರಷ್ಟೇ ಅಲ್ಲ, ಅವರ ವ್ಯಕ್ತಿತ್ವ ಎಲ್ಲ ಯುವಕ–ಯುವತಿಯರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಅವರು ಸಾರಿದ್ದು ಶಕ್ತಿಯ ಸಂದೇಶವನ್ನು. ಅವರ ಬೋಧನೆಗಳಲ್ಲಿ ನಾವು ಮತ್ತೆ ಮತ್ತೆ ಕಾಣುವ ಸಂದೇಶ: 'ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ'. ಯುವಜನರಿಗೆ ಶಕ್ತಿಸಂಜೀವಿನಿಯನ್ನು ಬೋಧಿಸಿದರು: ‘ಫುಟ್ಬಾಲ್ ಆಡಿ ಬಲಿಷ್ಠವಾದ ಸ್ನಾಯುಗಳನ್ನು ಪಡೆದಿರೆಂದರೆ ನಿಮಗೆ ಭಗವದ್ಗೀತೆ ಸ್ಪಷ್ಟವಾಗಿ ಅರ್ಥವಾಗುವುದು’ ಎಂದರು. ‘ನಿಮ್ಮಂತಹ ಯುವಕರಿಗಾಗಿ ನಾನು ಸಾವಿರ ಸಲ ಬೇಕಾದರೂ ಹುಟ್ಟಿಬಂದೇನು. ಈ ಕಾಯವಳಿದರೇನು, ನಾನು ನಿಮ್ಮೆಲ್ಲರಲ್ಲಿ ಸೂಕ್ಷ್ಮರೂಪದಲ್ಲಿದ್ದು ಸಾಧಿಸಬೇಕಾದುದನ್ನು ಸಾಧಿಸುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ’ ಎಂದೂ ಆಶ್ವಾಸನೆ ನೀಡಿದರು.
ಅಪಾರ ರಾಷ್ಟ್ರಪ್ರೇಮ, ವಿಶ್ವಭ್ರಾತೃತ್ವ, ಪ್ರಾಯೋಗಿಕ ವೇದಾಂತ ಅವರಲ್ಲಿ ಅಡಕವಾಗಿತ್ತು. ತನ್ನ ದೇಶ ಸ್ವತಂತ್ರವಾಗಬೇಕೆಂದು ಬಯಸಿದವರು, ಅವರ ದೇಶಪ್ರೇಮ ಅದರ ಸ್ವಾತಂತ್ರಗಳಿಕೆಯ ಕೇಂದ್ರಿತವಾಗಿತ್ತೆ ಹೊರತು ಅದು ಆಕ್ರಮಣಶೀಲ, ಪ್ರತಿಗಾಮಿ ಚಿಂತನೆಯಾಗಿರಲಿಲ್ಲ. ತನ್ನ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ತ್ವ ಆದರ್ಶ ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಅವರು ಬಯಸಿದ್ದರು.
ಭಾರತದ ನೆಲ ಆವರೆಗೆ ಕಂಡಿದ್ದ, ನಮ್ಮ ಮೇಲೆ ರಾಜಕೀಯ ಆರ್ಥಿಕ ದಬ್ಬಾಳಿಕೆ ನಡೆಸಿದ್ದ ಬಿಳಿಯರ ದಂಡಿಗಿಂತ ಭಿನ್ನವಾದ ಭಾರತದ ನೆಲವನ್ನು, ಸಂಸ್ಕೃತಿಯನ್ನು ಪ್ರೀತಿಸುವ ವಿದೇಶೀಶಿಷ್ಯರನ್ನು ಅವರು ಭಾರತಕ್ಕೆ ಪರಿಚಯಿಸಿದರು. ಹಿಂದೂಧರ್ಮಕ್ಕೆ ಸಂಘಟನೆಯ ಸ್ವರೂಪವಿದ್ದರೂ ಅದು ಸಾಮಾಜಿಕ ರಚನೆಗೆ ಪೂರಕವಾದ ಸಮಾಜಮುಖಿಯಾದ ಕ್ರಿಯಾತಂತ್ರವನ್ನು ಹೊಂದಿರಲಿಲ್ಲ. 'ಧರ್ಮವನ್ನು ಅಡುಗೆಮನೆಯಿಂದ ಹೊರಗೆಳೆದ' ಯಶಸ್ಸು ವಿವೇಕಾನಂದರಿಗೆ ಸಲ್ಲಬೇಕು.
ಪೂರ್ವದ ವಿಶಾಲ ಆಧ್ಯಾತ್ಮಿಕ ಚಿಂತನೆ ಮತ್ತು ಪಶ್ಚಿಮದ ಸಂಕಲ್ಪ ಶಕ್ತಿಯ ಸಂಕೇತವಾಗಿ ನಿಂತ ಮೇರುವ್ಯಕ್ತಿತ್ವದ ಸ್ವಾಮಿ ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯವಾಗಿ ಉಳಿದಿದ್ದಾರೆ.
*ವಿವೇಕಾನಂದರ ಸಾಹಿತ್ಯದ ಕೆಲಸಗಳು ರಾಜ ಯೋಗ, ಕರ್ಮ ಯೋಗ,ಭಕ್ತಿ ಯೋಗ ಮತ್ತು ಜ್ಞಾನ ಯೋಗ
*ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದವರು: ಸುಭಾಷ್ ಚಂದ್ರಬೋಸ್, ಅರವಿಂದ ಘೋಷ್, ಭಾಗಾ ಜತಿನ್, ಮಹಾತ್ಮ ಗಾಂಧಿ, ಚಕ್ರವರ್ತಿ ರಾಜಗೋಪಾಲಚಾರಿ, ಜಮ್‍ಶೇಟ್ಜಿ ಟಾಟಾ, ನಿಕೊಲ ಟೆಲ್ಸ, ಸರಹ್ ಬೆರ್ನ್ಹಾರ್ಡ್ತ್, ಜಗದೀಶ್ ಚಂದ್ರ ಬೋಸ್.
ನೊಬೆಲ್ ಪುರಸ್ಕೃತ ರವೀಂದ್ರನಾಥ ಟಾಗೂರರು ವಿವೇಕಾನಂದರ ಕುರಿತು "ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರ ಬಗ್ಗೆ ಓದಿ" ಎಂದು ಹೇಳಿದ್ದಾರೆ. ಅಂದರೆ ವಿವೇಕಾನಂದರು ಭಾರತವನ್ನು ಪ್ರೀತಿಸುವುದರ ಜೊತೆಗೆ ಭಾರತವನ್ನು ಅಧ್ಯಯನ ಮಾಡಿದ್ದರು.
🙏🙏🙏🙏🙏🙏🙏🙏🙏🙏🙏🙏🙏🙏🙏
ವಿವೇಕಾನಂದರ ಕುರಿತು ರಸಪ್ರಶ್ನೆ ->> Click Here.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.