Menu

Home ನಲಿಕಲಿ About ☰ Menu


 

ನೇತಾಜಿ ಜನುಮದಿನ - ‘ಪರಾಕ್ರಮ ದಿನ’

*ನೇತಾಜಿ ಸುಭಾಷ್‌ ಚಂದ್ರ ಬೋಸ್‌*

[ ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ)]
            'ನೀವು ನನಗೆ ರಕ್ತ ಕೊಡಿ... ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ...' ಎಂಬ ಮಾತು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಸ್ಫೂರ್ತಿ ತುಂಬಿರುವಂತದಹದು. ಅಂದು ಸಿಡಿಲಬ್ಬರದ ಈ ಮಾತು ಕೇಳಿದ್ದ ಪ್ರತಿಯೊಬ್ಬರಲ್ಲೂ ದೇಶ ಪ್ರೇಮದ ಕಿಚ್ಚು ಜಾಗೃತವಾಗುತ್ತಿತ್ತು. ಈ ಮಾತನ್ನಾಡಿದವರು ಕೆಚ್ಚೆದೆಯ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣ ತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ತನ್ನ ಪ್ರಖರ ನಿಲುವುಗಳಿಂದಲೇ ಬಿಸಿ ಮುಟ್ಟಿಸಿದ್ದರು.

                      ನೇತಾಜಿ (ಗೌರವಾನ್ವಿತ ನಾಯಕ) ಎಂದೇ ಜನತೆಯಿಂದ ಕರೆಸಿಕೊಳ್ಳುತ್ತಿದ್ದ ಬೋಸ್ ಇಂದಿನ ಒಡಿಶಾ (ಹಿಂದಿನ ಒರಿಸ್ಸಾ) ರಾಜ್ಯದ ಮತ್ತು ಕಟಕ್ ನಗರದಲ್ಲಿ ಜನವರಿ 23, 1897 ರಂದು ಜನಿಸಿದರು. ತಂದೆ ಜಾನಕಿನಾಥ್‌ ಬೋಸ್‌, ತಾಯಿ ಪ್ರಭಾವತೀ ದೇವಿ. ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳಿಂದ ಪ್ರಭಾವಿತರಾದರು. 1897 ಜನವರಿ 23 ರಂದು ಸುಭಾಷರ ಜನನದ ಕುರಿತು, ಜಾನಕಿನಾಥ್ ಬೋಸ್ ತಮ್ಮ ದಿನಚರಿಯಲ್ಲಿ "ಮಧ್ಯಾಹ್ನ ಒಬ್ಬ ಮಗ ಜನಿಸಿದನು, ಈ ಮಗ ಒಬ್ಬ ಶೌರ್ಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಚಿಂತಕನಾದನು, ಅವನು ತನ್ನ ಜೀವನವನ್ನು ಒಂದು ದೊಡ್ಡ ಕಾರಣಕ್ಕಾಗಿ ಮೀಸಲಿಟ್ಟನು- ಅದು ಭಾರತದ ಸ್ವಾತಂತ್ರ್ಯ. ನಾನು ಹೇಳುತ್ತಿರುವ ವ್ಯಕ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್.

              1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದು ನಂತರ 1919ರ ಸೆಪ್ಟೆಂಬರ್ 15ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿ, 1920ರ ಸೆಪ್ಟಂಬರ್‌ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪಡೆದರು.  ಆದರೆ ವಿದೇಶಿ ಗುಲಾಮಗಿರಿ ಅಡಿಯಲ್ಲಿ ಕೆಲಸ ಮಾಡಲು ಒಪ್ಪದ ಬೋಸ್‌ ಐಸಿಎಸ್‌ ಪದವಿ ಧಿಕ್ಕರಿಸಿ 1921ರಲ್ಲಿ ಸ್ವದೇಶಕ್ಕೆ ಮರಳಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.  

                       ನೇತಾಜಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು. `ಆಜಾದ್ ಹಿಂದ್ ಪೌಜ್' (ಇಂಡಿಯನ್ ನ್ಯಾಷನಲ್ ಆರ್ಮಿ - ಐಎನ್‌ಎ) ಎಂಬ ಸೇನೆಯನ್ನು ಕಟ್ಟಿದ ಸುಭಾಷ್ ಚಂದ್ರ ಬೋಸ್ ಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದ್ದರು. ಅಪ್ರತಿಮ ದೇಶಭಕ್ತರಾಗಿದ್ದ ಬೋಸ್ ವಿದೇಶದಲ್ಲೂ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದ್ದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶದಲ್ಲಿ ಸುತ್ತಾಡಿದ ಸುಭಾಷ್ ಚಂದ್ರ ಬೋಸ್ ಅವರು ಬ್ರಿಟಿಷರಿಗೇ ಸಿಂಹಸ್ವಪ್ನವಾಗಿ ಕಾಡಿದ್ದರು. ತಮ್ಮ ಪ್ರಖರ ಚಿಂತನೆಯ ಮೂಲಕವೇ ಎಲ್ಲರ ಮನಸ್ಸು ಗೆದ್ದಿದ್ದ ನೇತಾಜಿ, ತಮ್ಮ ದೇಶ ಪ್ರೇಮದ ಕಿಚ್ಚಿನಿಂದಲೇ ಆಗಸದೆತ್ತಕ್ಕೆ ಬೆಳೆದಿದ್ದರು.

          ಗಾಂಧೀಜಿಯವರ ಜೊತೆಗೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಗಾಂಧೀಜಿಯವರ ನಿಲುವನ್ನು ಒಪ್ಪಿಕೊಂಡಿದ್ದರೂ ಕೆಲವೊಮ್ಮೆ ತಾವು ಒಪ್ಪದ ವಿಚಾರಗಳನ್ನು ನೇರವಾಗಿ ಪ್ರತಿಭಟಿಸಿ ಗಾಂಧೀಜಿಯವರಿಗೇ ಎದುರಾಳಿಯಾಗಿದ್ದರು. ಗಾಂಧೀಜಿ ಅಹಿಂಸೆಯಿಂದ ಬ್ರಿಟಿಷರನ್ನು ಗೆಲ್ಲುವ ಬಗ್ಗೆ ಒಲವು ತೋರಿದ್ದರೆ ಇದಕ್ಕೆ ಪೂರ್ಣ ವ್ಯತಿರಿಕ್ತವಾಗಿ ಬೋಸ್ ಅವರು ಸ್ವಾತಂತ್ರ್ಯದ ಬಗ್ಗೆ ಉಗ್ರಗಾಮಿ ವಿಧಾನ ಮತ್ತು ಸಮಾಜವಾದಿ ನೀತಿಗಳಿಗೆ ಮುಂದಾಗಿದ್ದರು.  

                   ಕಾಂಗ್ರೆಸ್ ತ್ಯಜಿಸಿ ಕ್ರಾಂತಿಯ ಮಾರ್ಗದಲ್ಲಿ ಸಾಗಿದ ಬೋಸರನ್ನು ಜೈಲಿಗೆ, ಗೃಹ ಬಂಧನಕ್ಕೆ ತಳ್ಳಿದ ಆಂಗ್ಲರು. ಗೃಹ ಬಂಧನದಿಂದ ಮಾಯವಾದ ಬೋಸರು ಜರ್ಮನಿಯಿಂದ ಜಪಾನಿನವರೆಗು, ಹಿಟ್ಲರ್ ನಿಂದ ಮುಸೊಲಿನಿವರೆಗೂ ಸುತ್ತಾಡಿ ಕ್ರಾಂತಿಕಾರಿ ಭಾರತೀಯ ರಾಷ್ಟ್ರೀಯ ಸೇನೆಯನ್ನು ಕಟ್ಟಿ ಬ್ರಿಟಿಷ್ ಆಡಳಿತದ ವಿರುದ್ಧ ಸಮರ ಸಾರಿದರು. ಪ್ರಾದೇಶಿಕ ಸರ್ಕಾರ ಸ್ಥಾಪಿಸಿ ಅದರ ಪ್ರಧಾನಿ ಆಗು ಸೈನ್ಯದ ಮಹಾದಂಡನಾಯಕರಾದರು. ಇಲ್ಲಿ ಶಾಂತಿ ಮಂತ್ರ ಜಪಿಸುತ್ತಾ ಕಾಲಹರಣ ಮಾಡುತ್ತಿದ್ದರೆ ಅಲ್ಲಿ ಅಖಂಡ ಭಾರತದ ಕನಸು ಹೊತ್ತು ಅಂಗ್ಲಾರೆದುರು ಸೈನ್ಯ ನುಗ್ಗಿಸಿದರು .ಬರ್ಮಾ ಅಂಡಮನುಗಳಲ್ಲಿ ತ್ರಿವರ್ಣ ಧ್ವಜವನ್ನು ಏರಿಸಿ ಸ್ವಾತಂತ್ರ್ಯದ ಮೊದಲ ಸ್ವಾದ ಸವಿದರು. ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗುತಿದ್ದ ಆಂಗ್ಲರಿಗೆ ಸೋಲಿನ ರುಚಿ ತೋರಿಸಿದರು. ಜಪಾನಿನ ಶರಣಾಗತಿಯ ಕಾರಣ ಹಿನ್ನೆಡೆ ಉಂಟಾಯಿತು.

                   ದೇಶ ಸ್ವಾತಂತ್ರ್ಯ ಗಳಿಸುವ ಕೊನೆ ಘಟ್ಟದಲ್ಲಿ ಅಂದರೆ 1945ರಲ್ಲಿ ನೇತಾಜಿ ವಿಮಾನ ದುರಂತದಲ್ಲಿ ಮಡಿದರು ಎಂದು ಅನೇಕರು ನಂಬಿದ್ದಾರೆ. ಆದರೆ, ಅವರು ಅಂದು ಸಾಯಲೇ ಇಲ್ಲ ಎಂಬುದು ಇನ್ನೊಂದು ವಾದ. ಬಹುತೇಕರು ಭಾವಿಸಿದಂತೆ ನೇತಾಜಿ ವಿಮಾನ ದುರಂತದಲ್ಲಿ ಮಡಿದರೋ ಅಥವಾ ಗುಮ್ನಾಮಿ ಬಾಬಾ ರೂಪ ಧರಿಸಿ 1980ರ ದಶಕದವರೆಗೂ ಬದುಕಿದ್ದರೋ ಎನ್ನುವ ಪ್ರಶ್ನೆಗೆ ಇಂದಿಗೂ ಸ್ಪಷ್ಟಉತ್ತರ ಸಿಕ್ಕಿಲ್ಲ. ನೇತಾಜಿ ಸಾವಿನ ನಿಗೂಢ ಭೇದಿಸುವುದಕ್ಕಾಗಿಯೇ ನೇಮಕಗೊಂಡಿದ್ದ  ವಿಷ್ಣು ಸಾಹಿ ಸಮಿತಿ ಕೂಡ ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ನೀಡುವಲ್ಲಿ ವಿಫಲಗೊಂಡಿದೆ.

                         ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬ್ರಿಟಿಷರ ವಿರುದ್ಧ ವೀರ ಹೋರಾಟ ನಡೆಸಿ ಅಮರರಾದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ  ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ 'ಪರಾಕ್ರಮ್ ದಿವಸ್' ಆಗಿ ಆಚರಿಸಲಾಗುತ್ತಿದೆ. ಈ ದಿನವನ್ನು ಇನ್ನುಮುಂದೆ ‘ಪರಾಕ್ರಮ ದಿನ’ ಎಂದು ದೇಶಾದ್ಯಂತ ಆಚರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅಲ್ಲದೆ, ಹೌರಾ-ಕಲ್ಕಾ ಮೈಲ್‌ ರೈಲಿಗೆ ‘ನೇತಾಜಿ ಎಕ್ಸ್‌ಪ್ರೆಸ್‌’ ಎಂದೂ ಮರುನಾಮಕರಣ ಮಾಡಿದೆ.

✍️ನೇತಾಜಿಯವರ ಸಂದೇಶಗಳು:

=> ನನಗೆ ರಕ್ತ ನೀಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ.

=> ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ

=> ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ. ಅದನ್ನು ನಾವೇ ಪಡೆದುಕೊಳ್ಳಬೇಕು.

=> ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಅವತರಿಸುತ್ತದೆ.

=> ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ.

=> ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಿತನದ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post