ದೇಶೀಯ - ಅನ್ಯದೇಶೀಯ | Deshiya & Anya Deshiya Padagalu in Kannada
ಜನರ ವಿಚಾರ ವಿನಿಮಯದೊಂದಿಗೆ ಕೆಲವು ಪರ ಭಾಷಾ ಪದಗಳು ಮೂಲ ಭಾಷೆಗೆ ಬಂದು ಸೇರುವುದು ಸಾಮಾನ್ಯವಾದುದು. ಇದರಿಂದ ಭಾಷೆ ಬೆಳೆಯುತ್ತದೆ. ಹೆಚ್ಚು ಜನರು ಭಾಷೆಯನ್ನು ಕಲಿಯುವಲ್ಲಿ ಸಹಕಾರಿಯಾಗುತ್ತದೆ ಮತ್ತು ಭಾಷಾ ಸಂಪತ್ತು ಹೆಚ್ಚಾಗುತ್ತದೆ. ಹಾಗೆಂದು, ಮೂಲ ಪದಗಳ ಬಳಕೆ ಕಡಿಮೆಯಾಗುವುದಿಲ್ಲ. ಎರಡು ಭಾಷೆಯ ಶಬ್ದಗಳು ಉಚ್ಚಾರಣೆಗಳು ಒಂದೇ ರೀತಿಯಲ್ಲಿ ಇದ್ದಾಗ, ವ್ಯಾವಹಾರಿಕವಾಗಿ ಜನರಿಗೆ ಇದರಿಂದ ಲಾಭವಾಗುತ್ತದೆ ಮತ್ತು ಭಾಷೆಯ ಪ್ಯಾಪ್ತಿ ಮತ್ತು ಸಂವಹನೆ ಹೆಚ್ಚಾಗುತ್ತದೆ.
ಕನ್ನಡದಲ್ಲಿಯೂ ಬೇರೆ ಭಾಷೆಗಳಿಂದ ಅನೇಕ ಶಬ್ದಗಳು ಬಂದು ಸೇರಿವೆ, ಸೇರುತ್ತಲಿವೆ. ಹಾಗೆಯೇ ಕನ್ನಡದ ಅನೇಕ ಶಬ್ದಗಳು ಬೇರೆ ಭಾಷೆಯಲ್ಲಿ ಸೇರಿವೆ. ಉದಾಹರಣೆಗೆ:-
>> "ಜಬರ್ದಸ್ತಿನಿಂದ ರೈಲು ಗಾಡಿಯಿಂದ ಹೊರ ಕಿದರು".
>> "ದೀನನಾದ ರೈತನು ಸರ್ಕಾರಕ್ಕೆ ಕಾಗದವನ್ನು ಬರೆದನು."
ಮೇಲಿನ ವಾಕ್ಯಗಳು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದದ ಜೊತೆಗೆ ಬೇರೆ, ಬೇರೆ ಭಾಷೆಯ ಶಬ್ದಗಳು ಬಂದು ಸೇರಿವೆ.
🔹ಸಂಸ್ಕೃತದಿಂದ: ರೈತ, ದೀನ
🔹ಹಿಂದೀಯಿಂದ: ಜಬರ್ದಸ್ತ್, ಗಾಡಿ
🔹ಇಂಗ್ಲೀಷ್ ನಿಂದ: ರೈಲು
🔹ಹಿಂದೂಸ್ಥಾನಿಯಿಂದ: ಸರ್ಕಾರ, ಕಾಗದ
ಕನ್ನಡ ಭಾಷೆಯು ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯಾಗಿದೆ. ಸಂಸ್ಕೃತ, ಪ್ರಾಕೃತಗಳು ಆರ್ಯರ ಭಾಷೆಗಳಾಗಿವೆ. ಆರ್ಯರ ಮತ್ತು ದ್ರಾವಿಡರ ನಿಕಟ ಸಂಬಂಧದಿಂದ ಕನ್ನಡದಲ್ಲಿ ಅನೇಕ ಸಂಸ್ಕೃತ-ಪ್ರಾಕೃತ ಶಬ್ದಗಳು ಪ್ರಾಚೀನ ಕಾಲದಿಂದಲೇ ಸೇರಿಕೊಳ್ಳುತ್ತಿವೆ.
ನಂತರ ವಿದೇಶಿಯರ ಸಂಪರ್ಕದಿಂದಾಗಿ ಪಾರ್ಸಿ, ಇಂಗ್ಲೀಷ್, ಪೋರ್ಚುಗೀಸ್, ಅರಾಬಿಕ್ ಭಾಷೆಯ ಶಬ್ದಗಳು ಸೇರಿಕೊಂಡವು.
ಅಚ್ಚಗನ್ನಡ ಶಬ್ದಗಳನ್ನು 'ದೇಶ್ಯ' / 'ದೇಶೀಯ' ಶಬ್ದಗಳೆನ್ನುತ್ತೇವೆ. ಉಳಿದವುಗಳನ್ನು 'ಅನ್ಯದೇಶ್ಯ' / 'ಅನ್ಯದೇಶೀಯ' ಶಬ್ದಗಳೆನ್ನುತ್ತೇವೆ.
ಸಂಸ್ಕೃತ-ಪ್ರಾಕೃತ ಶಬ್ದಗಳನೇಕವನ್ನು ಕನ್ನಡ ಭಾಷೆಯ ಗುಣಕ್ಕನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆಗಳಿಂದ ಮತ್ತು ಹೆಚ್ಚಿನ ವ್ಯತ್ಯಾಸಗಳಿಂದ ಮಾರ್ಪಡಿಸಿಕೊಂಡು, ಅವಕ್ಕೆ ತದ್ಭವಗಳು ಎಂದು ಕರೆಯುತ್ತಾರೆ. ಕೆಲವು ಸಂಸ್ಕೃತ ಶಬ್ದಗಳನ್ನು ಯಾವ ವ್ಯತ್ಯಾಸವನ್ನೂ ಮಾಡದೆ ಅದೇ ಅರ್ಥದಲ್ಲಿ ಉಪಯೋಗಿಸುತ್ತೇವೆ. ಅವನ್ನು ತತ್ಸಮಗಳು ಎನ್ನುತ್ತೇವೆ.
ದೇಶ್ಯ / ದೇಶೀಯ ಅಚ್ಚಗನ್ನಡ ಶಬ್ದಗಳು
ಮಜ್ಜಿಗೆ, ಕಮ್ಮಗೆ, ಕಲ್ಲು, ತುರು, ನೆರೆ, ಮನೆ, ಹೊಲ, ಗದ್ದೆ, ಹಿತ್ತಿಲು, ಕದ, ಮರ, ಗಿಡ, ನೆಲ, ಆಳು, ತೆಂಕಣ, ಮೂಡಣ, ಪಡುವಣ, ಬಡಗಣ, ತೆವರು, ತಗ್ಗು, ಇಳಿ, ನೇಸರು, ತಿಂಗಳು, ಕಲ್ಲು, ನೆಲ್ಲು, ಹೊಳೆ,... ಇತ್ಯಾದಿಗಳು
ಅನ್ಯದೇಶ್ಯ / ಅನ್ಯದೇಶೀಯ ಶಬ್ದಗಳು
ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು ಋಣ, ಋತು, ಗೃಹಿಣಿ, ಪ್ರಕೃತಿ, ಅಶಕ್ತ, ಏಕ, ಭೂಮಿ, ಪೃಥ್ವಿ, ನದಿ, ಆರ್ಯ, ಅನಾರ್ಯ, ರಾತ್ರಿ, ದಿವಸ, ಸಂಧ್ಯಾ, ಸಂಸ್ಥಾ, ರಾಮ, ಲಕ್ಷ್ಮಣ, ಭರತ, ಶತೃಘ್ನ, ಮಹಾಭಾರತ, ಕುಮಾರ, ಪಿತೃ, ಮಾತೃ, ಸಹೋದರ, ಸಹೋದರಿ, ಅಂಗ, ಅಂಗವಿಕಲ,... ಇತ್ಯಾದಿಗಳು
ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು
ಮಹಲ್, ಸವಾರ, ದವಾಖಾನೆ, ಕಾಗದ, ಅರ್ಜಿ, ಕಛೇರಿ, ತಯಾರ್, ಬದಲ್, ಕಾರ್ಖಾನೆ, ಖಾನೇಷುಮಾರ್, ಸರ್ಕಾರ, ರೈತ, ಸಲಾಮು, ಕಾನೂನು, ಜಮಿನು, ಬದಲಾವಣೆ, ಚುನಾವಣೆ,... ಇತ್ಯಾದಿಗಳು
ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು
ರಿಕಾರ್ಡ್, ಆಕ್ಸಿಜನ್, ಹೋಟೆಲ್, ಆಸಿಡ್, ಫುಟ್ ಪಾತ್, ಬೋರ್ಡ್, ರೋಡ್, ರೈಲ್, ಕೋರ್ಟ್, ಬ್ಯಾಂಕ್, ಚೆಕ್, ಚಲನ್, ಲಾಯರ್, ಪಿಟೀಲ್, ಹಾರ್ಮೋನಿಯಂ, ಬೆಂಚ್, ಪ್ಲೇಗ್, ಮೈಲು,... ಇತ್ಯಾದಿಗಳು
ಪೋರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು
ಅಲಮಾರು, ಸಾಬೂನು, ಪಾದ್ರಿ, ಮೇಜು,... ಇತ್ಯಾದಿಗಳು
ಅನ್ಯ ದೇಶ್ಯ ಶಬ್ದಗಳನ್ನು ವಿಷಯವನ್ನು ಸುಲಭವಾಗಿ ಅರ್ಥೈಸುವಲ್ಲಿ ಬಳಸುವುದು ಮಾತ್ರವಲ್ಲದೆ, ಅವು ಭಾಷೆಯ ವಿಸ್ತಾರವನ್ನು ಸಹ ತೋರ್ಪಡಿಸುತ್ತದೆ.
ಸಮಾಸಗಳು | Samasagalu in Kannada
ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುತ್ತಾರೆ.
ಪೂರ್ವಪದ + ಉತ್ತರಪದ = ವಿಗ್ರಹ ವಾಕ್ಯ -> ಸಮಾಸ
ಉದಾ:-
ಕಾಲಿನ + ಬಳೆ = ಕಾಲು ಬಳೆ -> ತತ್ಪುರುಷ ಸಮಾಸ
ಕಲ್ಲಿನಂತಿರುವ + ಇದ್ದಿಲು = ಕಲ್ಲಿದ್ದಿಲು -> ತತ್ಪುರುಷ ಸಮಾಸ
ಸಮಾಸದಲ್ಲಿ ಎಂಟು ವಿಧಗಳಿವೆ
- ತತ್ಪುರುಷ ಸಮಾಸ
- ಕರ್ಮಧಾರೆಯ ಸಮಾಸ
- ಅಂಶಿ ಸಮಾಸ
- ದ್ವಿಗು ಸಮಾಸ
- ದ್ವಂದ್ವ ಸಮಾಸ
- ಬಹುವ್ರೀಹಿ ಸಮಾಸ
- ಕ್ರಿಯಾ ಸಮಾಸ
- ಗಮಕ ಸಮಾಸ
೧. ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ 'ತತ್ಪುರುಷ ಸಮಾಸ' ಎನ್ನುತ್ತಾರೆ.
ತತ್ಪುರುಷ ಸಮಾಸಗಳಲ್ಲಿ ಕನ್ನಡ + ಕನ್ನಡ ಶಬ್ದಗಳು ಸೇರಿ ಸಮಾಸವಾದಾಗ ಷಷ್ಠಿ ಅಥವಾ ಸಪ್ತಮಿ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದೇ ಹೆಚ್ಚು.
ಉದಾ:-
ಕಾಲಿನ + ಬಳೆ = ಕಾಲುಬಳೆ -> ಷಷ್ಠಿ ತತ್ಪುರುಷ ಸಮಾಸ
ಸಂಜೆಯ + ಕೆಂಪು = ಸಂಜೆಗೆಂಪು -> ಷಷ್ಠಿ ತತ್ಪುರುಷ ಸಮಾಸ
ಬೆಟ್ಟದ + ತಾವರೆ = ಬೆಟ್ಟದಾವರೆ -> ಷಷ್ಠಿ ತತ್ಪುರುಷ ಸಮಾಸ
ಕಣ್ಣಿನಲ್ಲಿ + ಉರಿ = ಕಣ್ಣುರಿ -> ಸಪ್ತಮಿ ತತ್ಪುರುಷ ಸಮಾಸ
ಹಗಲಿನಲ್ಲಿ + ಕನಸು = ಹಗಲುಗನಸು -> ಸಪ್ತಮಿ ತತ್ಪುರುಷ ಸಮಾಸ
ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.
ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ
ದೇವರ + ಮಂದಿರ = ದೇವಮಂದಿರ
ಕವಿಗಳಿಂದ + ವಂದಿತ = ಕವಿವಂದಿತ
ಪುರುಷರಲ್ಲಿ + ಉತ್ತಮ = ಪುರುಷೋತ್ತಮ
ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.
ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ
ದೇವರ + ಮಂದಿರ = ದೇವಮಂದಿರ
ಕವಿಗಳಿಂದ + ವಂದಿತ = ಕವಿವಂದಿತ
ಪುರುಷರಲ್ಲಿ + ಉತ್ತಮ = ಪುರುಷೋತ್ತಮ
೨. ಕರ್ಮಧಾರೆಯ ಸಮಾಸ
ವಿಶೇಷಣ ಮತ್ತು ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವು 'ಕರ್ಮಧಾರೆಯ ಸಮಾಸ' ವೆನಿಸುವುದು.
ಉದಾ:-
ಹಿರಿದು + ಮರ = ಹೆಮ್ಮರ
ಬಿಳಿಯ + ಮುಗಿಲು = ಬೆಳ್ಮುಗಿಲು
ಹಿರಿದು + ಬಾಗಿಲು = ಹೆಬ್ಬಾಗಿಲು
ಮೇಲಿನ ಉದಾಹರಣೆಗಳಲ್ಲಿ 'ಹಿರಿದು' ಮತ್ತು 'ಬಿಳಿಯ' ವಿಶೇಷಣಗಳಾಗಿವೆ. 'ಮರ', 'ಮುಗಿಲು' ಮತ್ತು 'ಬಾಗಿಲು' ವಿಶೇಷ್ಯಗಳಾಗಿವೆ.
೩. ಅಂಶಿ ಸಮಾಸ
ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು.
ಉದಾ:-
ನಾಲಿಗೆಯ + ತುದಿ = ತುದಿನಾಲಿಗೆ
ತುಟಿಯ + ಕೆಳಗೆ = ಕೆಳದುಟಿ
ಮೈಯ + ಒಳಗೆ = ಒಳಮೈ
ಮೇಲಿನ ಉದಾಹರಣೆಯಲ್ಲಿ ನಾಲಗೆಯ ಒಂದು ಭಾಗವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಇನ್ನೊಂದು ಉದಾಹರಣೆಯಲ್ಲಿ ತುಟಿಯ ಭಾಗವನ್ನು ಹೇಳಲಾಗಿದೆ. ಇಲ್ಲಿ ತುದಿ ಹಾಗೂ ಕೆಳಗೆ ಎಂಬುದು 'ಅಂಶ' ಗಳಾದರೆ, ನಾಲಗೆ ಮತ್ತು ತುಟಿ 'ಅಂಶಿ' ಗಳಾಗಿವೆ.
೪. ದ್ವಿಗು ಸಮಾಸ
ಪೂರ್ವಪದವು ಸಂಖ್ಯಾ ಸೂಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ 'ದ್ವಿಗು ಸಮಾಸ'.
ಉದಾ:-
ಒಂದು + ಕಟ್ಟು = ಒಗ್ಗಟ್ಟು
ಎರಡು + ಮಡಿ = ಇಮ್ಮಡಿ
೫. ದ್ವಂದ್ವ ಸಮಾಸ
ಎರಡು ಅಥವಾ ಅನೇಕ ನಾಮ ಪದಗಳು ಸೇರಿ ಸಮಾಸವಾದಾಗ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗಿದ್ದರೆ ಆ ಸಮಾಸಕ್ಕೆ 'ದ್ವಂದ್ವ ಸಮಾಸ' ಎಂದು ಹೆಸರು.
ಉದಾ:-
ಗಿಡವೂ + ಮರವೂ = ಗಿಡಮರ
ಕಸವೂ + ಕಡ್ಡಿಯೂ = ಕಸಕಡ್ಡಿ
ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ
೬. ಬಹುವ್ರೀಹಿ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ.
ಉದಾ:-
ಕೆಂಪಾದ + ಕಣ್ಣು ಉಳ್ಳವ = ಕೆಂಗಣ್ಣ
ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ
ಕರಿಯನ್ನು + ಮುಖವಾಗಿ ಉಳ್ಳವನು = ಕರಿಮುಖ
೭. ಕ್ರಿಯಾ ಸಮಾಸ
ಸಮಾಸದಲ್ಲಿ ಉತ್ತರ ಪದವು ಕ್ರಿಯಾ ಸೂಚಕವಾಗಿದ್ದರೆ ಅದು ಕ್ರಿಯಾ ಸಮಾಸವಾಗುತ್ತದೆ.
ಉದಾ:-
ಮುದ್ದನ್ನು + ಮಾಡು = ಮುದ್ದುಮಾಡು
ಕಣ್ಣನ್ನು + ತೆರೆ = ಕಣ್ದೆರೆ
ಮೈಯನ್ನು + ತಡವಿ = ಮೈದಡವಿ
೮. ಗಮಕ ಸಮಾಸ
ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ.
ಉದಾ:-
ಇವನು + ಮುದುಕ = ಈ ಮುದುಕ
ಅವು + ಪ್ರಾಣಿಗಳು = ಆ ಪ್ರಾಣಿಗಳು
ಮಾಡಿದುದು + ಅಡುಗೆ = ಮಾಡಿದಡುಗೆ
ಬಾಡಿದುದು + ಹೂವು = ಬಾಡಿದ ಹೂವು
ಉಡುವುದು + ದಾರ = ಉಡುದಾರ
ಅರಿ ಸಮಾಸ
ಬಹುತೇಕ ಸಮಾಸಗಳು ಕನ್ನಡ + ಕನ್ನಡ ಅಥವಾ ಸಂಸ್ಕೃತ + ಸಂಸ್ಕೃತ ಪದಗಳು ಸೇರಿ ಆಗಿರುತ್ತವೆ. ಆದರೆ ಕೆಲವು ಪದಗಳು ಕನ್ನಡ + ಸಂಸ್ಕೃತ ಪದಗಳು ಸೇರಿ ಸಮಾಸ ಪದಗಳಾಗಿರುತ್ತವೆ. ಈ ಪದಗಳನ್ನು ಶುದ್ಧ ಸಮಾಸ ಪದಗಳೆಂದು ಕರೆಯಲಾಗದು. ಹೀಗೆ ಕನ್ನಡ ಮತ್ತು ಸಂಸ್ಕೃತ ಶಬ್ಧಗಳು ಸೇರಿ ಆಗುವ ಸಮಾಸವನ್ನು 'ಅರಿ ಸಮಾಸ' ವೆನ್ನುತ್ತಾರೆ.
ಉದಾ:-
ಗಜದ + ದಳ = ಗಜದಳ
ಅಂಕದಲ್ಲಿ + ನೇತ್ರ = ಅಂಕನೇತ್ರ
ಮಂಗಳದ + ಆರತಿ = ಮಂಗಳಾರತಿ


