Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (801-850)

ಸರ್ವಜ್ಞನ ತ್ರಿಪದಿಗಳು
ಸರ್ವಜ್ಞ ವಚನ 801 :
ಮಣಿಯ ಮಾಡಿದನೊಬ್ಬ । ಹೆಣೆದು ಕಟ್ಟಿದನೊಬ್ಬ।
ಕುಣಿದಾಡಿ ಸತ್ತನವನೊಬ್ಬ ಸಂತೆಯೊಳು।
ಹೆಣನ ಮಾರಿದನು ಸರ್ವಜ್ಞ||

ಸರ್ವಜ್ಞ ವಚನ 802 :
ಅರೆವ ಕಲ್ಲಿನ ಮೇಲೆ ಮರ ಮೂಡಿದುದ ಕಂಡೆ ।
ಮರದ ಮೇಲೆರಡು ಕೈಕಂಡೆ ಚನ್ನಾಗಿ ।
ಇರುವುದಾ ಕಂಡೆ ಸರ್ವಜ್ಞ||

ಸರ್ವಜ್ಞ ವಚನ 803 :
ಇಲ್ಲದನು ಇಲ್ಲೆನಲಿ । ಕಿಲ್ಲಿಯೇ ಕಲಿಯದಲೆ ।
ಇಲ್ಲದಾ ಮಾಯಿ-ಊಂಟೆಂಬ ಮೂಢಾತ್ಮ ।
ಗೆಲ್ಲಿಯದು ಮುಕ್ತಿ ಸರ್ವಜ್ಞ||

ಸರ್ವಜ್ಞ ವಚನ 804 :
ವಿದ್ಯೆ ಕಲಿತರೆ ಇಲ್ಲ ಬುದ್ಧಿ ಕಲಿತರೆ ಇಲ್ಲ
ಉದ್ಯೋಗ ಮಾಡಿದರೆ ಇಲ್ಲ ಗುರುಕರುಣ
ವಿದ್ದಲ್ಲದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 805 :
ಭೊತೇಶ ಶರಣೆಂಬ । ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೊತೇಶ – ಶರಣೆನ್ನ
ದಾತ ಮಾದಿಗನು ಸರ್ವಜ್ಞ||

ಸರ್ವಜ್ಞ ವಚನ 806 :
ಮಾತು ಬಲ್ಲಾತಂಗೆ । ಮಾತೊಂದು ಮಾಣಿಕವು ।
ಮಾತ ತಾನರಿಯದ ಅಧಮಗೆ ಮಾಣಿಕವು ।
ತೂತು ಬಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 807 :
ಆಡೆಂದರಾಡದದು। ಆಡ ಮರನೇರುವದು।
ಕೂಡದೆ ಕೊಂಕಿ ನಡೆಯುವದು ಕಡಿದರೆ।
ಬಾಡದದು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 808 :
ಯಾತರ ಹೂವಾದರು | ನಾತರೆ ಸಾಲದೆ
ಜಾತಿ-ವಿಜಾತಿ ಯೆನಬೇಡ – ಶಿವನೊಲಿ
ದಾತನೇ ಜಾತಿ ಸರ್ವಜ್ಞ||

ಸರ್ವಜ್ಞ ವಚನ 809 :
ಕರಚರಣವದಕಿದ್ದು । ಕರೆದಲ್ಲಿ ಬಾರದದು।
ಕರದಲ್ಲಿ ಹುಟ್ಟಿ ಸ್ಥಿರವಾಗಿ ಇರುವದಿದ
ರಿರವರಿದು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 810 :
ಮಾತಿಂಗೆ ಮಾತುಗಳು ಓತು ಸಾಸಿರವುಂಟು
ಮಾತಾಡಿದಂತೆ ನಡೆದರೆ ಕೈಲಾಸಕಾತನೇ
ಒಡೆಯ ಸರ್ವಜ್ಞ||

ಸರ್ವಜ್ಞ ವಚನ 811 :
ಇಂದುವಿನೊಳುರಿಯುಂಟೆ । ಸಿಂಧುವಿನೊಳರಬುಂಟೆ ।
ಸಂದವೀರನೊಳು ಭಯವುಂಟೇ ? ಭಕ್ತಂಗೆ ।
ಸಂದೇಹವುಂಟೆ ಸರ್ವಜ್ಞ||

ಸರ್ವಜ್ಞ ವಚನ 812 :
ಒಂದೂರೊಳಿರಲು ಗುರು। ವಂದನೆಯ ಮಾಡದಲೆ।
ಸಂದಿಸಿ ಕೂಳನುಣುತಿಪ್ಪವನ ಬದುಕು।
ಹಂದಿಯಂತೆಂದ ಸರ್ವಜ್ಞ||

ಸರ್ವಜ್ಞ ವಚನ 813 :
ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ
ದಾನಗೈಯಲು ಕನಲುವ – ದಂಡವನು
ಮೋನದಿಂ ತೆರುವ ಸರ್ವಜ್ಞ||

ಸರ್ವಜ್ಞ ವಚನ 814 :
ಅರವತ್ತು ಸಿಂಹ ಒಂ। ದಿರುವೆ ಕಚ್ಚಿದ ಕಂಡೆ।
ಕೆರೆಯ ಕೋಡೊಡೆದುಧರೆ ಬೆಂದು ಕೈಲಾಸ।
ಉರಿವುದನು ಕಂಡೆ ಸರ್ವಜ್ಞ||

ಸರ್ವಜ್ಞ ವಚನ 815 :
ಮುತ್ತು ಮುದುಕಿಗೆ ಏಕೆ । ತೊತ್ತೇಕೆ ಗುರುಗಳಿಗೆ ।
ಬತ್ತಿದಾ ಕೆರೆಗೆ ಮಿಗವೇಕೆ ಸವಣರಿಗೆ ।
ಮಿಥ್ಯತನವೇಕೆ ಸರ್ವಜ್ಞ||

ಸರ್ವಜ್ಞ ವಚನ 816 :
ಕೋಡಗನ ಒಡನಾಟ । ಕೇಡಕ್ಕು ಸಂಸಾರ ।
ಕಾದಾಡಿ ಕೆಂಪು ಮಾಣಿಕವ ಕಲ್ಲೆಂದು ।
ಈಡಾಡಿದಂತೆ ಸರ್ವಜ್ಞ||

ಸರ್ವಜ್ಞ ವಚನ 817 :
ಸತಿಯರಿರ್ದಡೆ ಏನು ? ಸುತರಾಗಿ ಫಲವೇನು ?
ಶತಕೋಟಿ ಧನವ ಗಳಿಸೇನು? ಭಕ್ತಿಯಾ
ಸ್ಥಿತಿಯಿಲ್ಲದನಕ ಸರ್ವಜ್ಞ||

ಸರ್ವಜ್ಞ ವಚನ 818 :
ನಾಡೆಲೆಯ ಮೆಲ್ಲುವಳ । ಕೂಡೆ ಬೆಳ್ಳಗೆ ಬಾಯಿ
ಊಡಿದ ಅರುವೆ ಮೊಲೆಕಟ್ಟಿನಾಕೆಯನು।
ಕಾಡಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 819 :
ಹಸಿವರಿತು ಉಂಬುದು | ಬಿಸಿನೀರ ಕುಡಿವುದು
ಹಸಿವಕ್ಕು ವಿಷಯ ಘನವಕ್ಕು – ವೈದ್ಯಗೆ
ಬೆಸಸ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 820 :
ನಂಬಿಗೆಯ ಉಳ್ಳನಕ । ಕೊಂಬುವದು ಸಾಲವನು ।
ನಂಬಿಗೆಯ ಕೆಟ್ಟ ಬಳಿಕ ಬೆಂದಾವಿಗೆಯ ।
ಕುಂಭದಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 821 :
ಪರಮಾತ್ಮಗೆಣೆಯಿಲ್ಲಂ । ಬರಕನಿಚ್ಚಣಿಕಿಲ್ಲ ।
ಹೊರಗಾದ ಮೇಲೆ ಭಯವಿಲ್ಲ ಮೃತ್ಯದೊ ।
ಳಿರುವವರು ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 822 :
ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ
ಕಂಡು ಲಿಂಗವನು ಪೂಜಿಸಿದವಗೆ ಯಮ
ದಂಡ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 823 :
ಮಾತಿಂಗೆ ಮಾತುಗಳು । ಓತು ಸಾಸಿರವುಂಟು ।
ಮಾತಾಡಿದಂತೆ ನಡೆದರಾ ಕೈಲಾಸ ।
ಕಾತನೇ ಒಡೆಯ ಸರ್ವಜ್ಞ||

ಸರ್ವಜ್ಞ ವಚನ 824 :
ಅಂಬಲೂರೊಳಗೆಸೆವ । ಕುಂಬಾರಸಾಲೆಯಲಿ
ಇಂದಿನ । ಕಳೆಯ । ಮಾಳಿಯೊಳು – ಬಸವರಸ
ನಿಂಬಿಟ್ಟನೆನ್ನ ಸರ್ವಜ್ಞ||

ಸರ್ವಜ್ಞ ವಚನ 825 :
ಬಿಂದು ನಾದಗಳಳಿದು । ಒಂದಾಗಿ ಶಿವನಲ್ಲಿ।
ಬಂಧುರದ ಬೆಳಗ ಕಂಡ ಶಿವಯೋಗಿಗೆ।
ಬಂಧನವು ಬಯಲು ಸರ್ವಜ್ಞ||

ಸರ್ವಜ್ಞ ವಚನ 826 :
ನೀತಿ ದೇಶದ ಮಧ್ಯೆ । ನೀತಿಯಾ ಮೆಯಿಹುದು
ಪಾತಕರಿಗಿಹುದು ಸೆರೆಮನೆಯು, ಅರಮನೆ ಪು ।
ನೀತರಿಗೆಂದ ಸರ್ವಜ್ಞ||

ಸರ್ವಜ್ಞ ವಚನ 827 :
ಎಂಜಲು ಶೌಚವು । ಸಂಜೆಯೆಂದೆನ ಬೇಡ
ಕುಂಜರ ವನವ ನೆನೆವಂತೆ – ಬಿಡದೆ ನಿ
ರಂಜನನ ನೆನೆಯ ಸರ್ವಜ್ಞ||

ಸರ್ವಜ್ಞ ವಚನ 828 :
ನರನಬೇಡುವ ದೈವ । ವರವೀಯಬಲ್ಲುದೇ।
ತಿರಿವರನಡರಿ ತಿರಿವರೇನಿದನರಿದು ।
ಹರನ ಬೇಡುವುದು ಸರ್ವಜ್ಞ||

ಸರ್ವಜ್ಞ ವಚನ 829 :
ಹಿರಿಯ ಬೊಮ್ಮನು ಕೆಂಚ । ಹಿರಿಯ ಹರಿ ತಾ ಕರಿಕ
ಪುರಹರನು ಶುದ್ಧ ಧವಳಿತನು – ಇರೆ ಬೇರೆ
ಹರಗೆ ಸರಿಯಹರೀ ಸರ್ವಜ್ಞ||

ಸರ್ವಜ್ಞ ವಚನ 830 :
ಆಕೆಯನು ಕಂಡು ಮನೆ ಆಕೆಯನು ಮರೆದಿಹರೆ
ಹಾಕಿದ ಉರಿಕೆ ಹರಿದಂತೆ , ಮನೆಯೊಳಿ
ದ್ದಾಕೆ ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 831 :
ಸಾಲುವೇದವನೋದಿ। ಶೀಲದಲಿ ಶುಚಿಯಾಗಿ।
ಶೂಲಿಯ ಪದವನರಿಯದೊಡೆ ಗಿಳಿಯೋದಿ।
ಹೇಲತಿಂದಂತೆ ಸರ್ವಜ್ಞ||

ಸರ್ವಜ್ಞ ವಚನ 832 :
ಕೋಡಗಾದನು ಹರಿಯು। ಆಡಾದನಾ ಅಜನು।
ನೋಡಿದರೆ ಹರನು ನರಿಯಾದನುಳಿದವರ।
ಪಾಡೇನು ಹೇಳು ಸರ್ವಜ್ಞ||

ಸರ್ವಜ್ಞ ವಚನ 833 :
ಮುನ್ನ ಮಾಡಿದ ಪಾಪ । ಹೊನ್ನಿನಿಂ ಪೋಪುದೇ ?
ಹೊನ್ನಿನಾ ಪುಣ್ಯವದು ಬೇರೆ ಪಾಪ ತಾ ।
ಮುನ್ನಿನಂತಿಹುದು ಸರ್ವಜ್ಞ||

ಸರ್ವಜ್ಞ ವಚನ 834 :
ಹಾದರದ ಕಥೆಯನ್ನು । ಸೋದರರ ವಧೆಯನ್ನು।
ಆದರಿಸಿ ಪುಣ್ಯ ಕಥೆಯೆಂದು ಕೇಳುವರು
ಮಾದಿಗರು ನೋಡ ಸರ್ವಜ್ಞ||

ಸರ್ವಜ್ಞ ವಚನ 835 :
ರುಚಿಗಳಿಗೆ ನೆರೆಗಳೆದು । ಶುಚಿಗಲಿ ಮೆರೆವಂಗೆ
ಪಚನವದು ಬೆಳಗಿ ಬಲದಿ ಬಾಳುವನೆಂಬಿ ।
ವಚನವೊಂದಿಹುದು ಸರ್ವಜ್ಞ||

ಸರ್ವಜ್ಞ ವಚನ 836 :
ರಾಗಿಯನು ಉಂಬುವ ನಿ। ರೋಗಿ ಎಂದೆನೆಸುವನು।
ರಾಗಿಯು ಭೋಗಿಗಳಿಗಲ್ಲ, ಬಡವರಿ।
ಗಾಗಿ ಬೆಳೆದಿಹುದು ಸರ್ವಜ್ಞ||

ಸರ್ವಜ್ಞ ವಚನ 837 :
ನೋಡಿರೇ ಎರಡೊರು । ಕೂಡಿದ ಮಧ್ಯದಲಿ
ಮೂಡಿಹ ಸ್ಮರನ ಮನೆಯಲ್ಲಿ –
ನಾಡೆಯುದಯಿಸಿತು ಸರ್ವಜ್ಞ||

ಸರ್ವಜ್ಞ ವಚನ 838 :
ಇರಿದರೆಯು ಹೇರಲ್ಲ। ಹರಿದರೆಯು ಸೀಳಿಲ್ಲ।
ತಿರಿಗೂಳ ಕೊಂಡು ಋಣವಿಲ್ಲ,ಕವಿಗಳಲಿ।
ಅರಿದರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 839 :
ಮುದಿನಾಯಿ ಮೊಲವ ಕಂ। ಡದು ಬೆನ್ನ ಹತ್ತಿದೋಲ್।
ಮುದುಕ ಜವ್ವನೆಯನೊಡಗೂಡೆ,ಮುದಿಗೂಬೆ।
ಯೊದರಿಕೊಂಡಂತೆ ಸರ್ವಜ್ಞ||

ಸರ್ವಜ್ಞ ವಚನ 840 :
ಒಡಹುಟ್ಟಿದವ ಭಾಗ । ದೊಡವೆಯನು ಕೇಳಿದರೆ ।
ಕೊಡದೆ ಕದನದಲಿ ದುಡಿಯುವರೆ ಅದನು ।
ತ-ನ್ನೊಡನೆ ಹೂಳು ಸರ್ವಜ್ಞ||

ಸರ್ವಜ್ಞ ವಚನ 841 :
ಜಾತಿಹೀನರ ಮನೆಯ । ಜ್ಯೋತಿ ತಾ ಹೀನವೇ ।
ಜಾತಿ-ವಿಜಾತಿಯೆನ್ನಬೇಡ ದೇವನೊಲಿ ।
ದಾತನೇ ಜಾತ ಸರ್ವಜ್ಞ||

ಸರ್ವಜ್ಞ ವಚನ 842 :
ಮಲ್ಲಿಗೆಗೆ ಹುಳಿಯಕ್ಕು । ಕಲ್ಲಿಗೇ ಗಂಟಕ್ಕು ।
ಹಲ್ಲಿಗಂ ನೊಣನು ಸವಿಯಕ್ಕು ಕನ್ನಡದ ।
ಸೊಲ್ಲಗಳ ನೋಡಿ ಸರ್ವಜ್ಞ||

ಸರ್ವಜ್ಞ ವಚನ 843 :
ಸೃಷ್ಟಿಯಲಿ ಜಿನಧರ್ಮ । ಪಟ್ಟಗಟ್ಟಿರುತಿಕ್ಕು ।
ಕೆಟ್ಟ ಕೆಡಗುಣಗವೆಲ್ಲ ತಲೆಹೋದ ।
ಅಟ್ಟೆಯಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 844 :
ಜ್ಞಾನವುಳ್ಳವನೊಡಲು। ಭಾನುಮಂಡಲದಂತೆ।
ಜ್ಞಾನವಿಲ್ಲದನ ಬರಿಯೊಡಲು ಹಾಳೂರ ।
ಸ್ಥಾನದಂತಿಕ್ಕು ಸರ್ವಜ್ಞ||

ಸರ್ವಜ್ಞ ವಚನ 845 :
ಪ್ರಸ್ತಕ್ಕಿಲ್ಲದ ಮಾತು । ಹತ್ತು ಸಾವಿರ ವ್ಯರ್ಥ ।
ಕತ್ತೆ ಕೂಗಿದರೆ ಫಲವುಂಟು, ಬರಿಮಾತು ।
ಕತ್ತೆಗಿಂ ಕಷ್ಟ ಸರ್ವಜ್ಞ||

ಸರ್ವಜ್ಞ ವಚನ 846 :
ಕರುವ ಕಾವಾಬುದ್ಧಿ । ಗುರುಳಿಗೆ ಇರದಿರಲು ।
ಧರಣಿಯಲಿ ಜನರು ಉಳಿವರೇ ? ಇವರೂರ ।
ನರಿಗಳೆಂದರಿಗು ? ಸರ್ವಜ್ಞ||

ಸರ್ವಜ್ಞ ವಚನ 847 :
ಬೆಂದಾವಿಗೆಯ ಭಾಂಡ । ಒಂದೊಂದು ಭೋಗವನು
ಅಂದಂದಿಗುಂಡು ಒಡೆದು ಹಂಚಾದಂತೆ
ಬಿಂದುವಿನ ದೇಹ ಸರ್ವಜ್ಞ||

ಸರ್ವಜ್ಞ ವಚನ 848 :
ಈವಂಗೆ ದೇವಂಗೆ! ಆವುದಂತರವಯ್ಯ?।
ದೇವನು ಜಗಕೆ ಕೊಡುತಿಹನು, ಕೈಯಾರೆ।
ಈವನೇ ದೇವ ! ಸರ್ವಜ್ಞ||

ಸರ್ವಜ್ಞ ವಚನ 849 :
ಸತಿಯರಿರ್ದಡೇನು ? ಸುತರಾಗಿ ಫಲವೇನು ? ।
ಶತಕೋಟಿಧನವ ಗಳಿಸೇನು ? ಭಕ್ತಿಯಾ ।
ಸ್ಥಿತಿಯಿಲದನಕ ಸರ್ವಜ್ಞ||

ಸರ್ವಜ್ಞ ವಚನ 850 :
ಗವುಡನೊಳು ಹಗೆತನವು । ಕಿವುಡನೊಳು ಏಕಾಂತ ।
ಪ್ರವುಢನೊಳೂ ಮೂಡನುಪದೇಶ, ಹಸುವಿಗೆ ।
ತವುಡನಿಟ್ಟಂತೆ ಸರ್ವಜ್ಞ||
          

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post