Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (851-900)

ಸರ್ವಜ್ಞ ವಚನ 851 :
ಕೊಟ್ಟವರ ತಲೆಬೆನ್ನ । ತಟ್ಟುವರು ಹಾರುವರು ।
ಕೊಟ್ಟೊಡನೆ ಕುಟ್ಟಿ ಕೆಡಹುವರು ಹಾರುವರ ।
ಬಟ್ಟೆ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 852 :
ಬೆಟ್ಟವನು ಕೊಂಡೊಂಬ್ಬ । ನಿಟ್ಟಿಹನು ಎಂದಿಹರೆ
ಇಟ್ಟಿಹನು ಎಂದು ಎನಬೇಕು ಮೂರ್ಖನಾ ।
ಬಟ್ಟೆ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 853 :
ಪರಸ್ತ್ರೀಯ ಗಮನದಿಂ । ಪರಲೋಕವದು ಹಾನಿ ।
ಸಿರಿತಗ್ಗಿ ತಲೆಯು ತೊಲಗಿತಾ ರಾವಣಗೆ ।
ನರಲೋಕದಲ್ಲಿ ಸರ್ವಜ್ಞ||

ಸರ್ವಜ್ಞ ವಚನ 854 :
ಗಾಳಿಯಿಂ ಮರನುರಳಿ । ಹುಲ್ಲೆಲೆಯು ಉಳಿವಂತೆ ।
ಮೇಳಗಳ ಬಲದಿ ಉರಿಯುವಾ ಖಳನಳಿದು \
ಕೀಳಿ ಬಾಳುವನು ಸರ್ವಜ್ಞ||

ಸರ್ವಜ್ಞ ವಚನ 855 :
ಆಕೆಯನು ತಾ ಹೋಗೆ। ಈಕೆ ಬಾರದ ಕಂಡು।
ಆಕೆ ಮರೆ ಸಾರಿ ನೆರೆದುತಾ ಮರಳಿ ಮ।
ತ್ತಾಕೆಯನೆ ತಂದ ಸರ್ವಜ್ಞ||

ಸರ್ವಜ್ಞ ವಚನ 856 :
ಮೀನಕ್ಕೆ ಗುರು ಬರಲು ।
ಮಾನಖಂಡಗವಕ್ಕು ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ ।
ಆನಂದವಕ್ಕು ಸರ್ವಜ್ಞ||

ಸರ್ವಜ್ಞ ವಚನ 857 :
ಬೆಕ್ಕು ಮನೆಯೊಳು ಲೇಸು। ಮುಕ್ಕು ಕಲ್ಲಿಗೆ ಲೇಸು।
ನಕ್ಕು ನಗಿಸುವ ನುಡಿ ಲೇಸು, ಊರಿಂಗೆ।
ಒಕ್ಕಲಿಗ ಲೇಸು ಸರ್ವಜ್ಞ||

ಸರ್ವಜ್ಞ ವಚನ 858 :
ನರಹರಿಯ ಕೊಲುವಂದು । ಎರಳೆಯನೆಸುವಂದು
ಮರಳಿ ವರಗಳನು ಕೊಡುವಂದು – ಸ್ಮರಹರೆಗೆ
ಸರಿಯಾರ ಕಾಣೆ ಸರ್ವಜ್ಞ||

ಸರ್ವಜ್ಞ ವಚನ 859 :
ಭಕ್ತರೊಡಗೂಡುವದು । ಭಕ್ತರೊಡನಾಡುವದು ।
ಭಕ್ತಿಯೊಳು ಬಿಡುವ ಬೆರೆದಿರ್ದ ಭಕ್ತತಾ ।
ಮುಕ್ತನಾಗಿಹನು ಸರ್ವಜ್ಞ||

ಸರ್ವಜ್ಞ ವಚನ 860 :
ಹಿರಿಯರಿಲ್ಲದ ಮನೆಯು। ಗುರುವು ಇಲ್ಲದ ಮಠವು।
ಅರಸುತನವಳಿದ ಅರಮನೆಯು ಹಣಹೋದ।
ಹರದನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 861 :
ಹರಿಬ್ರಹ್ಮರೆಂಬವರು । ಹರನಿಂದಲಾದವರು
ಅರಸಿಂಗೆ ಆಳು ಸರಿಯಹನೆ – ಪಶುಪತಿಗೆ
ಸರಿ ಯಾರ ಕಾಣೆ ಸರ್ವಜ್ಞ||

ಸರ್ವಜ್ಞ ವಚನ 862 :
ಸೊಣಗನಂದಣವೇರಿ । ಕುಣಿದು ಪೋಪುದು ಮಲಕೆ ।
ಟೊಣೆಯದೆನ್ನೊಡೆಯ ಕಾಯನ್ನ ಪಾದಕ್ಕೆ ।
ಮಣಿದು ಬೇಡುವೆನು ಸರ್ವಜ್ಞ||

ಸರ್ವಜ್ಞ ವಚನ 863 :
ನಿತ್ಯ ನೇಮಗಳೇಕೆ? । ಮತ್ತೆ ಪೂಜೆಗಳೇಕೆ?।
ನೆತ್ತಿ ಬೋಳೇಕೆ? ಜಡೆಯೇಕೆ? ಅರಿದು ನೆರೆ।
ಸತ್ಯವುಳ್ಳರಿಗೆ ! ಸರ್ವಜ್ಞ||

ಸರ್ವಜ್ಞ ವಚನ 864 :
ಉದ್ದರಿಯ ಕೊಟ್ಟಣ್ಣ ಹದ್ದಾದ ಹಾವಾದ
ಎದ್ದೆದ್ದು ಬರುವ ನಾಯಾದ ಮೈಲಾರ
ಗೊಗ್ಗಯ್ಯನಾದ ಸರ್ವಜ್ಞ||

ಸರ್ವಜ್ಞ ವಚನ 865 :
ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು
ಪತ್ರ ಪುಷ್ಪಗಳ ವಿವಿಧವರ್ಣಗಳಿಂದ
ಚಿತ್ರಿಸಿದರಾರು ಸರ್ವಜ್ಞ||

ಸರ್ವಜ್ಞ ವಚನ 866 :
ಎಣ್ಣೆ ಬತ್ತಿಯನೇರಿ। ನುಣ್ಬೆಳಗನೀವಂತೆ।
ಸಣ್ಣಾಗಿ ಸುಟ್ಟು ಬೆಳಗೀವ ಶಿವಯೋಗಿ।
ಸಣ್ಣಾತನೇನು ಸರ್ವಜ್ಞ||

ಸರ್ವಜ್ಞ ವಚನ 867 :
ಆಡದಲೆ ಮಾಡುವನು । ರೂಢಿಯೊಳಗುತ್ತಮನು ।
ಆಡಿ ಮಾಡುವನು ಮಧ್ಯಮನು । ಅಧಮ ತಾ ।
ನಾಡಿ ಮಾಡದವ ಸರ್ವಜ್ಞ||

ಸರ್ವಜ್ಞ ವಚನ 868 :
ಜಾಜಿಯಾ ಹೂ ಲೇಸು । ತೇಜಿವಾಹನ – ಲೇಸು ।
ರಾಜಮಂದಿರದೊಳಿರಲೇಸು ತಪ್ಪುಗಳ ।
ಮಾಜುವದು ಲೇಸು ಸರ್ವಜ್ಞ||

ಸರ್ವಜ್ಞ ವಚನ 869 :
ಕಾದ ಕಬ್ಬುನವು ತಾ । ಹೊಯ್ದೊಡನೆ ಕೂಡುವದು ।
ಹೋದಲ್ಲಿ ಮಾತು ಮರೆದರಾ ಕಬ್ಬುನವು ।
ಕಾದಾರಿದಂತೆ ಸರ್ವಜ್ಞ||

ಸರ್ವಜ್ಞ ವಚನ 870 :
ತುತ್ತು ತುತ್ತಿಗೆ ಹೊಟ್ಟೆ । ತಿತ್ತಿಯಂತಾಗುವದು ।
ತುತ್ತು ಅರಗಳಿಗೆ ತಡೆದಿಹರೆ,
ಹೆಡೆಹಾವು ಹುತ್ತು ಬಿಟ್ಟಂತೆ ಸರ್ವಜ್ಞ||

ಸರ್ವಜ್ಞ ವಚನ 871 :
ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು
ಮಾತಿಂಗೆ ಮಾತು ಮಥಿಸೆ – ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ||

ಸರ್ವಜ್ಞ ವಚನ 872 :
ಓದುವಾದಗಳೇಕೆ | ಗಾದೆಯ ಮಾತೇಕೆ
ವೇದ-ಪುರಾಣ ನಿನಗೇಕೆ – ಲಿಂಗದ
ಹಾದಿಯನರಿದವಗೆ ಸರ್ವಜ್ಞ||

ಸರ್ವಜ್ಞ ವಚನ 873 :
ಎಮ್ಮೆ ಹಯನವು ಲೇಸು । ಕಮ್ಮನಾಮ್ಲವು ಲೇಸು ।
ಸುಮ್ಮನೆಯ ಒಡವೆ ಬರಲೇಸು ಊರಿಂಗೆ ।
ಕಮ್ಮಾರ ಲೇಸು ಸರ್ವಜ್ಞ||

ಸರ್ವಜ್ಞ ವಚನ 874 :
ಅಕ್ಕವನರಿಯದ। ನಿಷ್ಕರುಣಿಯುಣುತಿಪ್ಪ।
ಅಕ್ಕರವರಿದು ಅಜನುಂಬ ದ್ವಿಜ ತನ್ನ।
ಮಕ್ಕಳನೆ ತಿಂದ ಸರ್ವಜ್ಞ||

ಸರ್ವಜ್ಞ ವಚನ 875 :
ಗಾಣಿಗನ ಒಡನಾಟ । ಕೋಣನಾ ಬೇಸಾಯ ।
ಕ್ಷೀಣಿಸುವ ಕುತ್ತ-ಸಮರ, ಕ್ಷಾಮಗಳಿಂದ ।
ಪ್ರಾಣವೇಗಾಸಿ ಸರ್ವಜ್ಞ||

ಸರ್ವಜ್ಞ ವಚನ 876 :
ಬೂದಿಯೊಳು ಹುದುಗಿಸುತ । ವೇಧಿಸುತ ಮರೆಮಾಡಿ ।
ಕಾದಿರ್ದ ಚಿನ್ನದೊಳು ಬೆರಸಿ ಒರೆಹಚ್ಚಿ ।
ಊದುತಲಿ ಟೊಣೆವ ಸರ್ವಜ್ಞ||

ಸರ್ವಜ್ಞ ವಚನ 877 :
ಕರೆಯದಲೆ ಬರುವವನ। ಬರೆಯದಲೆ ಓದುವವನ।
ಬರೆಗಾಲಿಂದ ನಡೆವವನ ಕರೆತಂದು ।
ಕೆರದಿ ಹೊಡೆಯೆಂದ ಸರ್ವಜ್ಞ||

ಸರ್ವಜ್ಞ ವಚನ 878 :
ಕ್ಷೀರದಲ್ಲಿ ಘೃತ, ವಿಮಲ। ನೀರಿನೊಳು ಶಿಖಿಯಿರ್ದು।
ಆರಿಗೂ ತೋರದದರಂತೆ ಎನ್ನೊಳಗೆ।
ಸಾರಿಹನು ಶಿವನು ಸರ್ವಜ್ಞ||

ಸರ್ವಜ್ಞ ವಚನ 879 :
ಅಂದಿನಾ । ಪುಷ್ಪದತ್ತ ಬಂದ ವರರುಚಿಯಾಗಿ
ಮುಂ ದೇವಸಾಲೆ ಸರ್ವಜ್ಞ- ನೆಂದೆನಿಸಿ
ನಿಂದವನು ತಾನೇ ಸರ್ವಜ್ಞ||

ಸರ್ವಜ್ಞ ವಚನ 880 :
ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು
ಹೊಲೆ ಬಲಿದ ತನುವಿನೊಳಗಿರ್ದು – ಮತ್ತದರ
ಕುಲವನೆಣಿಸುವರೆ ಸರ್ವಜ್ಞ||

ಸರ್ವಜ್ಞ ವಚನ 881 :
ಸಿರಿಯ ಸಂಸಾರವು । ಸ್ಥಿರವೆಂದು ನಂಬದಿರು ।
ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ ।
ಹರಿದು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 882 :
ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ
ಹಿರಿದಪ್ಪ ಪಾಪ ಹರೆವುದು – ಕರ್ಪುರದ
ಗಿರಿಯ ಸುಟ್ಟಂತೆ ಸರ್ವಜ್ಞ||

ಸರ್ವಜ್ಞ ವಚನ 883 :
ಇತ್ತುದನು ಈಯದನ । ಮೃತ್ಯುವೊಯ್ಯುದೆ ಬಿಡದು
ಹತ್ತಿರ್ದ ಲಕ್ಷ್ಮಿ, ತೊಲಗಿ ಹುಟ್ಟುವನವನ ।
ತೊತ್ತಾಗಿ ಮುಂದೆ ಸರ್ವಜ್ಞ||

ಸರ್ವಜ್ಞ ವಚನ 884 :
ಕರೆಯದಲೆ ಬರುವವನ ।
ಬರೆಯದಲೆ ಓದುವ ಬರಗಾಲಿನಿಂದ ನಡೆವವನ । ಕರೆತಂದು ।
ಕೆರೆದಿ ಹೊಡೆಯೆಂದ ಸರ್ವಜ್ಞ||

ಸರ್ವಜ್ಞ ವಚನ 885 :
ಏರುವಾ ಕುದುರೆಯನು । ಹೇರುವಾ ಎತ್ತನ್ನು ।
ಬೇರೂರಲಿದ್ದ ಸತಿಯನ್ನು ಬೇರೋಬ್ಬ ।
ಸೇರದೇ ಬಿಡರು ಸರ್ವಜ್ಞ||

ಸರ್ವಜ್ಞ ವಚನ 886 :
ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ
ಸರ್ವಜ್ಞ||
ನೋರ್ವ ಜಗಕೆಲ್ಲ – ಕರ್ತಾರ
ನೋರ್ವನೇ ದೇವ ಸರ್ವಜ್ಞ||

ಸರ್ವಜ್ಞ ವಚನ 887 :
ಕಳ್ಳತನ-ಕಪಟಗಳು । ಸುಳ್ಳಿನಾ ಮೂಲವವು ।
ಕಳ್ಳ ಕೈಗಳ್ಳ ಮೈಗಳ್ಳನೊಮ್ಮೆ ।
ಕೊಳ್ಳಗಾಣುವನು ಸರ್ವಜ್ಞ||

ಸರ್ವಜ್ಞ ವಚನ 888 :
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ – ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ||

ಸರ್ವಜ್ಞ ವಚನ 889 :
ಕುಡಿವ ನೀರನು ತಂದು । ಅಡಿಗೆ ಮಾಡಿದ ಮೇಲೆ ।
ಒಡನುಣ್ಣದಾಗದಿಂತೆಂಬ ಮನುಜರ್‍ಅ ।
ಒಡನಾಟವೇಕೆ ಸರ್ವಜ್ಞ||

ಸರ್ವಜ್ಞ ವಚನ 890 :
ಕಚ್ಚಿದರೆ ಕಚ್ಚುವದು । ಕಿಚ್ಚಲ್ಲ ಕೊಳ್ಳೆಯಲ್ಲ ।
ಆಶ್ಚರ್ಯವಲ್ಲ, ಅರಿದಲ್ಲವೀ ಮಾತು ।
ನಿಶ್ಚರ್ಯವಲ್ಲ ಸರ್ವಜ್ಞ||

ಸರ್ವಜ್ಞ ವಚನ 891 :
ಮರನೊತ್ತಿಬೇಯುವದು । ಉರಿತಾಕಿ ಬೇಯದದು ?
ಪುರಗಳ ನುಂಗಿ ಬೆಳಗುವದು ಲೋಕದಲಿ ।
ನರನಿದೇನೆಂಬೆ ಸರ್ವಜ್ಞ||

ಸರ್ವಜ್ಞ ವಚನ 892 :
ಪುಣ್ಯತನಗುಳ್ಳ ನರ । ಮನ್ನಣೆಯು ಪಿರಿದಕ್ಕು ।
ಹಣ್ಣಿರ್ದ ಕಾರ್ಯ – ಫಲವಕ್ಕು ಹಿಡಿದಿರ್ದ ।
ಮಣ್ಣು ಹೊನ್ನಕ್ಕು ಸರ್ವಜ್ಞ||

ಸರ್ವಜ್ಞ ವಚನ 893 :
ಪೀಠ ಮೂಢಗೆ ಹೊಲ್ಲ । ಕೀಟ ನಿದ್ದೆಗೆ ಹೊಲ್ಲ ।
ತೀಟಿಯದು ಹೊಲ್ಲ ಕಜ್ಜಿಯಾ, ದುರ್ಜನರ ।
ಕಾಣವೇ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 894 :
ಪರತತ್ವ ತನ್ನೊಳಗೆ । ಎರವಿಲ್ಲದಿರುತಿರಲು
ಪರದೇಶಿಯಾಗಿ ಇರುತಿರು – ವಾತನ
ಪರಮ ಗುರುವೆಂಬೆ ಸರ್ವಜ್ಞ||

ಸರ್ವಜ್ಞ ವಚನ 895 :
ಉರಿಯದೆ ಮೆರೆಯದಲೆ। ಶಿರನೆತ್ತಿ ನೋಡದಲೆ ।
ಸರಿ ಬಂದ ಸ್ಥಾನದಿರುವವಳು ದೊರಕುವುದು।
ಗುರುಕರುಣವೆಂದ ಸರ್ವಜ್ಞ||

ಸರ್ವಜ್ಞ ವಚನ 896 :
ಸೂಳೆಯಲಿ ಮಗ ಹುಟ್ಟಿ। ಆಳುವನು ಮುನೆಪುರವ।
ಕಾಳಗವಿಲ್ಲದವ ಮಡಿಯೆ ಪುರವೆಲ್ಲ।
ಕೋಳು ಹೋದೀತು ಸರ್ವಜ್ಞ||

ಸರ್ವಜ್ಞ ವಚನ 897 :
ಎತ್ತು ಇಲ್ಲದ ಬಂಡಿ । ಒತ್ತೊತ್ತಿ ನಡಿಸುವರು ।
ಸುತ್ತಲೂ ರಾಜ್ಯವಾಳುವರು ಕಡೆಯಲ್ಲಿ ।
ಮೃತ್ಯುಹೊಂದುವರು । ಸರ್ವಜ್ಞ||

ಸರ್ವಜ್ಞ ವಚನ 898 :
ದಿನಪತಿಗೆ ಎಣೆಯಿಲ್ಲ । ಧನಪತಿ ಸ್ಥಿರವಲ್ಲ ।
ಅನುಭವಿಗೆ ಬೇರೆ ಮತವಿಲ್ಲ ಅರಿದಂಗೆ ।
ಮುನಿವವರೆ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 899 :
ಒಕ್ಕಲಿಲ್ಲದ ಊರು । ಮಕ್ಕಳಿಲ್ಲದ ಮನೆಯು ।
ಲೆಕ್ಕವಿಲ್ಲದವನ ಬೇಹಾರ ಇವು ಮೂರು ।
ದು:ಖ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 900 :
ಅತಿಯಾಶೆ ಮಾಡುವನು । ಗತಿಗೇಡಿಯಾಗುವನು
ಅತಿಯಾಶೆಯಿಂದ ಮತಿ ಕೆಡಗು ರತಿಯಿಂದ ।
ಸತಿ-ಸುತರು ಕೆಡಗು ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post