Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (751-800) :

ಸರ್ವಜ್ಞ ವಚನ 751 :
ಕಪ್ಪು ಬಣ್ಣದ ನೀರೆ । ಒಪ್ಪುವಳು ಗಗನದಲಿ।
ಕಪ್ಪಿನ ಸೀರೆಬಿಳಿಯಾಗೆ ಅವಳನ್ನು।
ಅಪ್ಪುವವರಿಲ್ಲ ಸರ್ವಜ್ಞ||

ಸರ್ವಜ್ಞ ವಚನ 752 :
ಅರಿವಿನಾ ಅರಿವು ತಾ । ಧರಯೊಳಗೆ ಮೆರೆದಿಹುದು ।
ಅರಿವಿನಾ ಅರಿವಹರಿವಹರಿಹರರು ಬೊಮ್ಮನೂ ।
ಅರಿಯರೈ ಸರ್ವಜ್ಞ||

ಸರ್ವಜ್ಞ ವಚನ 753 :
ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
ವಿಷಯಂಗಳುಳ್ಳ ಮನುಜರಿಗೆ – ಗುರುಕರುಣ
ವಶವರ್ತಿಯಹುದೆ ಸರ್ವಜ್ಞ||

ಸರ್ವಜ್ಞ ವಚನ 754 :
ಎತ್ತ ಹೋದರೆ ಮನ ಹತ್ತಿಕೊಂಡಿರುತಿಹುದು
ಮತ್ತೊಬ್ಬ ಮುನಿದು ಕೊಳಲರಿಯ ಜ್ಞಾನದಾ
ಬಿತ್ತು ಲೇಸಯ್ಯ ಸರ್ವಜ್ಞ||

ಸರ್ವಜ್ಞ ವಚನ 755 :
ಓದು ವಾದಗಳೇಕೆ, ಗಾದಿಯ ಮಾತೇಕೆ
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿದವಗೆ ಸರ್ವಜ್ಞ||

ಸರ್ವಜ್ಞ ವಚನ 756 :
ಹತ್ತು ಸಾವಿರ ಕಣ್ಣು । ನೆತ್ತಿಲಾದರು ।
ಬಾಲ ಹುತ್ತಿನಾ ಹುಳವ ಹಿಡಿಯುವದು ಕವಿಜನರೆ ।
ಮೊತ್ತವಿದನ್ಹೇಳಿ ಸರ್ವಜ್ಞ||

ಸರ್ವಜ್ಞ ವಚನ 757 :
ಕತ್ತೆ ಬೂದಿಲಿ ಹೊರಳಿ।ಮತ್ತೆ ಯತಿಯಪ್ಪುದೇ।
ತತ್ವವರಿಯದಲೆ ಭಸಿತವಿಟ್ಟವ ಶುದ್ಧ।
ಕತ್ತೆಯಂತೆಂದ ಸರ್ವಜ್ಞ||

ಸರ್ವಜ್ಞ ವಚನ 758 :
ಉರಿಯುದಕ ಶೀತವು | ಉರಗಪತಿ ಭೀಕರವು
ಗುರುವಾಜ್ಞೆಗಂಜಿ ಕೆಡುವವು – ಇದ ನರ
ರರಿಯದೆ ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 759 :
ಎರೆಯನ್ನು ಉಳುವಂಗೆ । ದೊರೆಯನ್ನು ಪಿಡಿದಂಗೆ ।
ಉರಗ ಭೂಷಣನ ನೆನೆವಂಗೆ ಭಾಗ್ಯವು ।
ಅರಿದಲ್ಲವೆಂದು ಸರ್ವಜ್ಞ||

ಸರ್ವಜ್ಞ ವಚನ 760 :
ಹಂದಿ ಚಂದನಸಾರ । ಗಂಧವ ಬಲ್ಲುದೇ
ಒಂದುವ ತಿಳಿಯಲರಿಯದನ – ಗುರುವಿಗೆ
ನಿಂದ್ಯವೇ ಬಹುದು ಸರ್ವಜ್ಞ||

ಸರ್ವಜ್ಞ ವಚನ 761 :
ಕಡೆ ಬಿಳಿದು ನಡುಗಪ್ಪು। ಉಡುವ ವಸ್ತ್ರವದಲ್ಲ।
ಬಿಡದೆ ನೀರುಂಟು ಮಡುವಲ್ಲ, ಕವಿಗಳೀ।
ಬೆಡಗ ಪೇಳುವದು ಸರ್ವಜ್ಞ||

ಸರ್ವಜ್ಞ ವಚನ 762 :
ಅತ್ತಲಂಬಲಿಯೊಳಗೆ ಇತ್ತೊಬ್ಬನಿದ್ದಾನೆ ।
ಅತ್ತವನ ನೋಡು ಜನರೆಲ್ಲ ಈ ತುತ್ತ ।
ನೆಂತುಂಬರಯ್ಯ ಸರ್ವಜ್ಞ||

ಸರ್ವಜ್ಞ ವಚನ 763 :
ಎಲ್ಲವರು ಬಯ್ದರೂ । ಕಲ್ಲು ಕೊಂಡೊಗೆದರೂ ।
ಅಲ್ಲದಾ ಮಾತು ನುಡಿದರೂ ಶಿವನಲ್ಲಿ ।
ತಲ್ಲಣಿಸು ಬೇಡ ಸರ್ವಜ್ಞ||

ಸರ್ವಜ್ಞ ವಚನ 764 :
ಉಳ್ಳವನು ನುಡಿದಿಹರೆ । ಒಳ್ಳಿತೆಂದೆನ್ನುವರು ।
ಇಲ್ಲದಾ ಬಡವ ನುಡಿದಿಹರೆ । ಬಾಯೊಳಗೆ ।
ಹಳ್ಳು ಕಡಿದಂತೆ ಸರ್ವಜ್ಞ||

ಸರ್ವಜ್ಞ ವಚನ 765 :
ಅರ್ಥಸಿಕ್ಕರೆ ಬಿಡರು ।
ವ್ಯರ್ಥ ಶ್ರಮಪಡದ ನರ್ಥಕ್ಕೆ ಪರರ ನೂಕಿಪರು, ವಿಪ್ರರಿಂ ।
ಸ್ವಾರ್ಥಿಗಳಿಲ್ಲ ಸರ್ವಜ್ಞ||

ಸರ್ವಜ್ಞ ವಚನ 766 :
ಆಗಿಯ ಹುಣ್ಣಿವೆ ಹೋದ । ಮಿಗೆ ಮೂರ ದಿವಸಕ್ಕೆ ।
ಮೃಗಧರನ ಕೂಡೆ ಮೃಗವಿರಲು ಮಳೆಗಾಲ ।
ಜಗದಣಿಯಲಕ್ಕು ಸರ್ವಜ್ಞ||

ಸರ್ವಜ್ಞ ವಚನ 767 :
ಲೋಭದಿಂ ಕೌರವನು । ಲಾಭವನು ಪಡೆದಿಹನೆ ? ।
ನಾಭಿಯಿಂ ಕೆಳಗೆ ಎರಡೂರ ಕೊಂದಾಗ ।
ಲಾಭ ಬಂದಿಹುದೆ ಸರ್ವಜ್ಞ||

ಸರ್ವಜ್ಞ ವಚನ 768 :
ಕುಲವಿಲ್ಲ ಯೋಗಿಗೆ। ಛಲವಿಲ್ಲ ಜ್ಞಾನಿಗೆ।
ತೊಲೆ ಕಂಬವಿಲ್ಲ ಗಗನಕ್ಕೆ, ಸ್ವರ್ಗದಲಿ ।
ಹೊಲಗೇರಿಯಿಲ್ಲ ಸರ್ವಜ್ಞ||

ಸರ್ವಜ್ಞ ವಚನ 769 :
ಸತ್ತವರಿಗತ್ತು ಬೇ । ಸತ್ತರವರುಳಿವರೇ ।
ಹತ್ತೆಂಟು ಕಾಲ ತಡನಕ್ಕು ಬಳಿಕೆಗೆಲ್ಲ ।
ರತ್ತಲೇ ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 770 :
ಉರಿ ಬಂದು ಬೇಲಿಯನು ।
ಹರಿದು ಹೊಕ್ಕದ ಕಂಡೆ ಅರಿಯದಿದರ ಬಗೆಗೆ ಕವಿಕುಲ
ಶೇಷ್ಠರುಗಳೆಂದರಿದು ಪೇಳಿ । ಸರ್ವಜ್ಞ||

ಸರ್ವಜ್ಞ ವಚನ 771 :
ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ
ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ
ಪಾಲಿಸದೆ ಹೋದ ಸರ್ವಜ್ಞ||

ಸರ್ವಜ್ಞ ವಚನ 772 :
ಅಂತರದಲಡಿ ನಾಲ್ಕು । ಸ್ವಂತವಿಟ್ಟವು ನಾಲ್ಕು ।
ಮುಂತೆರಡು ಕೋಡು ಕಿವಿಯಾರು, ಕಣ್ಣೇಳು।
ಎಂತ ಮೃಗವಯ್ಯ ಸರ್ವಜ್ಞ||

ಸರ್ವಜ್ಞ ವಚನ 773 :
ಓರ್ವನಲ್ಲದೆ ಮತ್ತೆ । ಇರ್ವರುಂಟೇ ಮರುಳೆ
ನೊರ್ವ ಜಗಕೆಲ್ಲ – ಕರ್ತಾರ
ನೊರ್ವನೇ ದೇವ ಸರ್ವಜ್ಞ||

ಸರ್ವಜ್ಞ ವಚನ 774 :
ಕಂಬಳಿಯ ಹೊದೆವ ತಂ। ನಿಂಬಿನೊಳಗಿರಬೇಕು।
ಕಂಬಳಿಯು ಬೆನ್ನು ಬಿಡದಿರಲು ನರಕದ ।
ಕುಂಭದೊಳಗಿಹನು ಸರ್ವಜ್ಞ||

ಸರ್ವಜ್ಞ ವಚನ 775 :
ಕರ್ಮಿಗೆ ತತ್ವದ । ಮರ್ಮ ದೊರಕೊಂಬುದೆ ?।
ಚರ್ಮವನು ತಿಂಬ ಶುನಕಂಗೆ ಪಾಯಸದ ।
ಕೂರ್ಮೆಯೇಕಯ್ಯ ಸರ್ವಜ್ಞ||

ಸರ್ವಜ್ಞ ವಚನ 776 :
ಸೊಡರು ಸುಲಿಗೆಯ ಆಳು । ಪಡೆದುಂಬೆ ಸೂಳೆಯೂ ।
ತುಡುಗುಣಿಯ । ನಾಯಿ, ಅಳಿಯನೂ, ಅರಸಾಳು ।
ಬಡತನವನರಿಯರು ಸರ್ವಜ್ಞ||

ಸರ್ವಜ್ಞ ವಚನ 777 :
ಕಣ್ಣು ಸಣ್ಣದು ತಾನು । ಹಣ್ಣದಿಹುದೊಂದಿಲ್ಲ ।
ತಣ್ಣಗಿಹ ಮನವ, ನುರಿಸುವದು ಇದನು ಕೊಕೊಂ ।
ದಣ್ಣಗಳು ಆರು ಸರ್ವಜ್ಞ||

ಸರ್ವಜ್ಞ ವಚನ 778 :
ಅಂಗನೆಯ ಗುಣೆಯಾಗಿ , ಅಂಗಳದಿ ಹೊರಸಾಗಿ
ತಂಗಾಳಿ ಚೊನ್ನದಿರುಳಾಗಿ , ಬೇಸಿಗೆಂದು
ಹಿಂಗದೇ ಇರಲಿ ಸರ್ವಜ್ಞ||

ಸರ್ವಜ್ಞ ವಚನ 779 :
ಎಂಜಲೂ ಅಶೌಚ
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
ರಂಜನನ ನೆನೆಯೊ ಸರ್ವಜ್ಞ||

ಸರ್ವಜ್ಞ ವಚನ 780 :
ಗಾಜು ನೋಟಕೆ ಲೇಸು । ತೇಜಿ ಏರಲು ಲೇಸು ।
ರಾಜಂಗೆ ವಸ್ತ್ರ ಇರಲೇಸು ಊಟಕ್ಕೆ ।
ರಾಜನ್ನ ಲೇಸು ಸರ್ವಜ್ಞ||

ಸರ್ವಜ್ಞ ವಚನ 781 :
ಎಂತು ಪ್ರಾಣಿ ಕೊಲ್ಲ । ದಂತುಂಟು ಜಿನಧರ್ಮ ।
ಜಂತು ಬಸುರಲ್ಲಿ ಸಾಯಲು ಆ ಜೀವಿಯು ।
ಎಂತಾದ ಶ್ರವಣ ಸರ್ವಜ್ಞ||

ಸರ್ವಜ್ಞ ವಚನ 782 :
ಆಡಿ ನಳ ಕೆಟ್ಟ ಮ । ತ್ತಾಡಿ ಧರೂಮಜ ಕೆಟ್ಟ।
ನೋಡಿದ ನಾಲ್ವರು ತಿರಿದುಣಲು ನೆತ್ತವನು ।
ಆಡಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 783 :
ಎಲ್ಲವರು ಹಿರಿಯವರು । ಬಲ್ಲವರು ಗುರು ಅವರು
ನಲ್ಲಳುರೆ ಮುಂದೆ ಸುಳಿದರೇ ಲೋಕದೊಳ ।
ಗೊಲ್ಲದವರಾರು ಸರ್ವಜ್ಞ||

ಸರ್ವಜ್ಞ ವಚನ 784 :
ಕೆಟ್ಟರ್ ದ್ವಿಜರಿಂದ । ಕೆಟ್ಟವರು ಇನ್ನಿಲ್ಲ ।
ಕೆಟ್ಟುವದು ಬಿಟ್ಟು ನಡೆದರೇ ಅವರಿಂದ ।
ನೆಟ್ಟನವರಿಲ್ಲ ಸರ್ವಜ್ಞ||

ಸರ್ವಜ್ಞ ವಚನ 785 :
ಪಂಚತಾರೆಯ ಮೃಗದ । ಲಾಂಛನವು ಸಹ ತಾರೆ ।
ಕಂಚಿಯಿಂದಿತ್ತ ಮಳೆಯಿಲ್ಲ ಭತ್ತವನು ।
ಸಂಚಮಡಗುವದು ಸರ್ವಜ್ಞ||

ಸರ್ವಜ್ಞ ವಚನ 786 :
ಏನಾದಡೇನಯ್ಯ | ತಾನಾಗದನ್ನಕ್ಕ
ತಾನಾಗಿ ತನ್ನನರಿದಡೆ – ಲೋಕ ತಾ
ನೇನಾದಡೇನು ಸರ್ವಜ್ಞ||

ಸರ್ವಜ್ಞ ವಚನ 787 :
ಹರೆಯಲ್ಲಿನ ಪಾಪ । ಕೆರೆಯಲ್ಲಿ ಪೋಪುದೇ ?
ಒರೆಗಲ್ಲಿನಂತೆ ವಿಧಿಯಿರಲು ನೀತಿಯಾ ।
ಇರವು ಬೇರೆಂದ ಸರ್ವಜ್ಞ||

ಸರ್ವಜ್ಞ ವಚನ 788 :
ಮಗಳಕ್ಕ ತಂಗಿಯು । ಮಿಗೆ ಸೊಸೊಯು ನಾದಿನಿಯು
ಜಗದ ವನಿತೆಯರು ಜನನಿ ಮಂತಾದವರು
ಜಗಕೊಬ್ಬಳೈಸೆ ಸರ್ವಜ್ಞ||

ಸರ್ವಜ್ಞ ವಚನ 789 :
ಮಜ್ಜಿಗೂಟಕೆ ಲೇಸು । ಮಜ್ಜನಕೆ ಮಡಿ ಲೇಸು ।
ಕಜ್ಜಾಯ ತುಪ್ಪ ಉಣ ಲೇಸು ।
ಮನೆಗೊಬ್ಬ ಅಜ್ಜಿ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 790 :
ಮದ್ದ ಮೆದ್ದವನು ಪ್ರಬುದ್ಧ ನೆಂದೆನಬೇಡ ।
ಮದ್ದು ಸಂಕಟವನೆಬ್ಬಿಸಲು ಹೆಡೆಕತ್ತ ।
ಗುದ್ದಿ ಕೊಳುತಿಹುದು । ಸರ್ವಜ್ಞ||

ಸರ್ವಜ್ಞ ವಚನ 791 :
ಉದ್ದರಿಯ ಕೊಟ್ಟಣ್ಣ । ಹದ್ದಾದ ಹಾವಾದ ।
ಎದ್ದೆದ್ದು ಬರುವ ನಾಯಾದ,
ಮೈಲಾರ ಗೊಗ್ಗಯ್ಯನಾದ ಸರ್ವಜ್ಞ||

ಸರ್ವಜ್ಞ ವಚನ 792 :
ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು
ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ
ನಿರ್ಮಿಸನದೇಕೆ ಸರ್ವಜ್ಞ||

ಸರ್ವಜ್ಞ ವಚನ 793 :
ತಾ ಯೆಂಬೆನಲ್ಲದೆ । ತಾಯಿ ನಾನೆಂಬೆನೆ?
ತಾಯಿಯೆಂದಾನು ನುಡಿದೇನು ಪರಸ್ತ್ರೀಯ।
ತಾಯಿಯೆಂದೆಂಬೆ ಸರ್ವಜ್ಞ||

ಸರ್ವಜ್ಞ ವಚನ 794 :
ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
ಲಿಂಗದಲಿ ಮನವ ನಿಲ್ಲಿಸಿ – ಸತ್ಯದಿ ನಿಲೆ
ಲಿಂಗವೇಯಹೆಯೊ ಸರ್ವಜ್ಞ||

ಸರ್ವಜ್ಞ ವಚನ 795 :
ಹಲ್ಲುದರೆ ರಕುತವದು । ಎಲ್ಲವೂ ಬಾಯೊಳಗೆ ।
ಖುಲ್ಲ ರಕ್ಕಸರು ಮಾನವರು, ನೆರೆ ಶೀಲ ।
ವೆಲ್ಲಿಹುದು ಹೇಳು ಸರ್ವಜ್ಞ||

ಸರ್ವಜ್ಞ ವಚನ 796 :
ಸುಂಕದ ಅಣ್ಣಗಳಾ । ಬಿಂಕವನು ಏನೆಂಬೆ ।
ಸುಂಕಕ್ಕೆ ಸಟಿಯ ನೆರೆಮಾಡಿ, ಕಡೆಯಲ್ಲಿ ಟೊಂಕ
ಮುರಿದಿಹುದು ಸರ್ವಜ್ಞ||

ಸರ್ವಜ್ಞ ವಚನ 797 :
ಹತ್ತು ಸಾಸಿರ ಕಣ್ಣು । ಕತ್ತಿನಲೆ ಕಿರಿ ಬಾಲ।
ತುತ್ತನೆ ಹಿಡಿದು ತರುತಿಹುದು ಕವಿಗಳಿದ।
ರರ್ಥವನು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 798 :
ದೇಹ ದೇವಾಲಯವು । ಜೀವವೇ ಶಿವಲಿಂಗ ।
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ
ದೇಹವಿಲ್ಲೆಂದು ಸರ್ವಜ್ಞ||

ಸರ್ವಜ್ಞ ವಚನ 799 :
ಗುರುಪಾದಸೇವೆ ತಾ । ದೊರೆಕೊಂಡಿತಾದೊಡೆ
ಹರೆವುದು ಪಾಪವರಿದೆನಲು – ವಜ್ರಾಯುಧದಿ
ಗಿರಿಯ ಹೊಯ್ದಂತೆ ಸರ್ವಜ್ಞ||

ಸರ್ವಜ್ಞ ವಚನ 800 :
ಆಡಾದನಾ ಅಜನು । ಕೊಡಗನದಾದನು ಹರಿಯು
ನೋಡಿದರೆ ಶಿವನು ನರಿಯಾದನೀ ಬೆಡಗೆ
ರೂಢಿಯೊಳು ಬಲ್ಲೆ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post