Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (701-750)

ಸರ್ವಜ್ಞ ವಚನ 701 :
ಆಳು ಇದ್ದರೆ ಅರಸು । ಕೂಳು ಇದ್ದರೆ ಬಿರುಸು ।
ಆಳುಕೂಳುಗಳು ಮೇಳವಿಲ್ಲದ ಮನೆಯ ।
ಬಾಳುಗೇಡೆಂದ ಸರ್ವಜ್ಞ||

ಸರ್ವಜ್ಞ ವಚನ 702 :
ಅರಿಯ ದೆಸಗಿದೆ ಪಾಪ । ಅರಿತರದು ತನಗೊಳಿತು ।
ಅರಿತರಿತು ಮಾಡಿ ಮರೆತವನು ತನ್ನ ತಾ ।
ನಿರಿದುಕೊಂಡಂತೆ ಸರ್ವಜ್ಞ||

ಸರ್ವಜ್ಞ ವಚನ 703 :
ಗಂಜಳದ ಬಾವಿಯಲಿ । ಗಂಜಳವು ಬೆಳೆದಿಹುದು।
ಗುಂಜುಂಟು ಕೆಸರು ಒಳಗುಂಟು, ಆ ಬಾವಿ।
ಗಂಜದವರಾರು ಸರ್ವಜ್ಞ||

ಸರ್ವಜ್ಞ ವಚನ 704 :
ಬ್ರಹ್ಮ ನಿರ್ಮಿಪನೆಂಬ । ದುರ್ಮತಿಯೆ ನೀಂ ಕೇಳು
ಬ್ರಹ್ಮನಾ ಸತಿಗೆ ಮೂಗಿಲ್ಲ – ವಾ ಮೂಗ
ನಿರ್ಮಿಸನೇಕೆ ಸರ್ವಜ್ಞ||

ಸರ್ವಜ್ಞ ವಚನ 705 :
ಕಡುಗಾಸಿ ಚಿಮ್ಮಾಡಿ । ಕುಡಿಮಗುಚಿ ಕತ್ತರಿಸಿ ।
ಪುಡೆವೆಡೆಗಳೊಳಗೆ ಸಿಡಿಸಿದನು ಸಂವಳಿಸಿ ।
ಪಡೆದ ಪ್ರತಿವೆರಸಿ ಸರ್ವಜ್ಞ||

ಸರ್ವಜ್ಞ ವಚನ 706 :
ಕಣ್ಣು-ನಾಲಿಗೆ-ಮನವು । ತನ್ನದೆಂದೆನಬೇಡ ।
ಅನ್ಯರೇ ಕೊಂದರೆನಬೇಡ, ಇವು ಮೂರೂ ।
ತನ್ನ ಕೊಲ್ಲುವದು ಸರ್ವಜ್ಞ||

ಸರ್ವಜ್ಞ ವಚನ 707 :
ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ
ಬಿಸಿ ಬೇಡ ತಂಗುಳವು ಬೇಡ – ವೈದ್ಯನ
ಗಸಣಿಸಿಯೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 708 :
ಆಳು, ಸೂಳೆಯು, ನಾಯಿ । ಕೋಳಿ, ಜೋಯಿಸ, ವೈದ್ಯ ।
ಗೂಳಿಯು, ತಗರು ಪ್ರತಿರೂಪ ಕಂಡಲ್ಲಿ ।
ಕಾಳಗವು ಎಂದ ಸರ್ವಜ್ಞ||

ಸರ್ವಜ್ಞ ವಚನ 709 :
ಕಲ್ಲಿನೊಳ್ ಕುಚದಲ್ಲಿ । ಬಳ್ಳದೊಳ್ ಪಿಕ್ಕೆಯಲಿ
ಎಲ್ಲಿ ಭಾವಿಸಿದೊಡಲ್ಲಿರ್ಪ – ಭರಿತನನು
ಬಲ್ಲವೇ ನಿಗಮ ಸರ್ವಜ್ಞ||

ಸರ್ವಜ್ಞ ವಚನ 710 :
ಮಾತನರಿದಾ ಸುತನು । ರೀತಿಯರಿದಾ ಸತಿಯು ।
ನೀತಿಯನು ಅರಿತ ವಿಪ್ರತಾ ಜಗದೊಳಗೆ ।
ಜ್ಯೋತಿಯಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 711 :
ಬಟ್ಟನಾಗಿಯೇ ಬೊಟ್ಟ । ನಿಟ್ಟು ಒಪ್ಪುವ ಜೈನ ।
ನೆಟ್ಟಗೇ ಸ್ವರ್ಗ ಪಡಿಯುವಡೆ ಸಾಣೇಕಲ್ ।
ಕೆಟ್ಟ ಕೇಡೇನು ಸರ್ವಜ್ಞ||

ಸರ್ವಜ್ಞ ವಚನ 712 :
ಅಪ್ಪ ಹಾಕಿದ ಗಿಡವು । ಒಪ್ಪುತ್ತಲಿರುತಿರಲು ।
ತಪ್ಪಿಲ್ಲವೆಂದು ಅದನೇರಿ ಮಗನುರ್ಲ ।
ಗೊಪ್ಪಿಕೊಳ್ಳುವನೆ ಸರ್ವಜ್ಞ||

ಸರ್ವಜ್ಞ ವಚನ 713 :
ಅಟ್ಟಡಿಗೆಯ ರುಚಿಯ। ಸಟ್ಟುಗವು ಬಲ್ಲುದೇ ?।
ಶ್ರೇಷ್ಠರುಗಳು ಎಂದೆನಬೇಡ, ಅರುಹಿನ।
ಬಟ್ಟೆ ಬೇರೆಂದ ಸರ್ವಜ್ಞ||

ಸರ್ವಜ್ಞ ವಚನ 714 :
ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು
ಭ್ರಂಗ ಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರು ಸರ್ವಜ್ಞ||

ಸರ್ವಜ್ಞ ವಚನ 715 :
ಮೂರು ಕಾಲಲಿ ನಿಂದು । ಗೀರಿ ತಿಂಬುವದು ಮರವ ।
ಆರಾರು ನೀರು ಕುಡಿಯುವದು ಕವಿಗಳಲಿ ।
ಧೀರರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 716 :
ಹನುಮನಿಂ ಲಂಕೆ ಫ। ಲ್ಗುಣನಿಂದ ಖಾಂಡವನ।
ತ್ರಿಣಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ।
ಟಣಿಯಿಂದ ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 717 :
ಅರಸು ಬೆಟ್ಟವನು ಸ । ಮ್ಬರಿಸಿ ಬೆಸಳಿಗೆ ತುಂಬಿ।
ಉರಿವ ಕಿಚ್ಚಿನಲಿ ತಾನಿರಿಸಿ ಪರಿವಾರ।
ಕರೆದಿಹುದ ಕಂಡೆ ಸರ್ವಜ್ಞ||

ಸರ್ವಜ್ಞ ವಚನ 718 :
ಕಡಲೆಯನ್ನು ಗೋದಿಯನು । ಮಡಿಕದ್ದು ಬೆಳೆವರು ।
ಸುಡಬೇಕು ನಾಡನೆಂದವನ ಬಾಯೊಳಗೆ
ಪುಡಿಗಡುಬು ಬೀಳ್ಗು ಸರ್ವಜ್ಞ||

ಸರ್ವಜ್ಞ ವಚನ 719 :
ಗಾಣಿಗನು ಈಶ್ವರನ । ಕಾಣೆನೆಂಬುದು ಸಹಜ।
ಏಣಂಕಧರನು ಧರೆಗಿಳಿಯಲವನಿಂದ ।
ಗಾಣವಾಡಿಸುವ ಸರ್ವಜ್ಞ||

ಸರ್ವಜ್ಞ ವಚನ 720 :
ಅತಿಯಾಸೆ ಮಾಡುವವನು ಗತಿಗೇಡಿಯಾಗುವನು
ಅತಿ ಆಸೆಯಿಂದ ಮತಿ ಕೆಡುಗು ಅತಿಯಿಂದ
ಸತಿಸುತರು ಕೆಡುಗು ಸರ್ವಜ್ಞ||

ಸರ್ವಜ್ಞ ವಚನ 721 :
ಕುಲಖಂಡನ (ಹೊಲೆಯನು ಯಾರು)
ಸತ್ತುದನು ತಿಂಬಾತ । ಎತ್ತಣದ ಹೊಲೆಯನವ ।
ಒತ್ತಿ ಜೀವದೆ ಕೊರಳಿರಿದು ತಿಂಬಾತ ।
ಉತ್ತಮದ ಹೊಲೆಯ ಸರ್ವಜ್ಞ||

ಸರ್ವಜ್ಞ ವಚನ 722 :
ಹಾರುವರು ಎಂಬವರು । ಹಾರುವರು ನರಕಕ್ಕೆ ।
ಸಾರದ ನಿಜವನರಿಯದಿರೆ ಸ್ವರ್ಗದಾ ।
ದಾರಿಯ ಮಾರ್ಗಹುದೆ ಸರ್ವಜ್ಞ||

ಸರ್ವಜ್ಞ ವಚನ 723 :
ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
ಹುಟ್ಟಿಕ್ಕಿ ಜೇನು ಅನುಮಾಡಿ – ಪರರಿಗೆ
ಕೊಟ್ಟು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 724 :
ಉಣ್ಣದೊಡವೆಯ ಗಳಿಸಿ ಮಣ್ಣಿನೊಳು ತಾನಿರಿಸಿ
ಸಣ್ಣಿಸಿಯೆ ನೆಲನ ಸಾರಿಸಿದವನ ಬಾಯೊಳಗೆ
ಮಣ್ಣು ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 725 :
ನೀರಿನಲಿ ತಾ ಹುಟ್ಟಿ । ನೀರ ನೆರೆ ನಂಬದದು।
ನಾರಿಯರ ನಂಬಿ ಕೆಟ್ಟಿಹುದು ಈ ಮಾತು।
ಆರಿಗರಿದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 726 :
ಸರ್ವಾಂತರ್ಯಾಮಿ । ಓರ್ವನೆಂಬುವ ತತ್ವ ।
ನಿರ್ದಿಷ್ಟವಾಗಿ ಇರುತಿರಲು ಮೋಕ್ಷವದು ।
ಸರ್ವರಿಗೆ ಸುಲಭ ಸರ್ವಜ್ಞ||

ಸರ್ವಜ್ಞ ವಚನ 727 :
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ||

ಸರ್ವಜ್ಞ ವಚನ 728 :
ಭಕ್ತಿಯಿಂದಲೆ ಯುಕ್ತಿ । ಭಕ್ತಿಯಿಂದಲೆ ಶಕ್ತಿ ।
ಭಕ್ತಿವಿರಕ್ತಿಯಳಿವರೀ ಜಗದಲ್ಲಿ ।
ಮುಕ್ತಿಯಿಲ್ಲೆಂದ ಸರ್ವಜ್ಞ||

ಸರ್ವಜ್ಞ ವಚನ 729 :
ಜೊಳ್ಳು ಮನುಜರು ತಾವು । ಸುಳ್ಳು ಸಂಸಾರದೊಳು
ಮಳ್ಳಿಡಿದು ಮಾಯೆಯೆಂಬವಳ ಬಲೆಯೊಳಗೆ ।
ಹೊರಳಾಡುತಿಹರು ಸರ್ವಜ್ಞ||

ಸರ್ವಜ್ಞ ವಚನ 730 :
ಯಾತರದು ಹೂವೇನು। ನಾತರದು ಸಾಲದೇ?।
ಜಾತಿ ವಿಜಾತಿಯೆನಬೇಡ, ದೇವನೊಲಿ।
ದಾತನೇ ಜಾತ ಸರ್ವಜ್ಞ||

ಸರ್ವಜ್ಞ ವಚನ 731 :
ಎರಡು ಹಣವುಳ್ಳನಕ। ದಿನಕರನವೋಲಕ್ಕು।
ಧನಕನಕ ಹೋದ ಮರುದಿನ ಹಾಳೂರ ।
ಶುನಕನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 732 :
ಅಕ್ಕರ ಹದಿನಾರುಲಕ್ಕ ಓದಿದರೇನು
ತಕ್ಕುದನರಿಯ ದಯವಿಲ್ಲದವನೋದು
ರಕ್ಕಸರೋದು ಸರ್ವಜ್ಞ||

ಸರ್ವಜ್ಞ ವಚನ 733 :
ಬಿಲ್ಲನೇರಲು ಗುರುವು । ತಲ್ಲಣವು ಜಗಕೆಲ್ಲ ।
ಕಲ್ಲು ಮೇಲೆಲ್ಲ ಮಳೆಯಕ್ಕು ನೃಪರಿಗೆ ।
ತಲ್ಲಣವೇ ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 734 :
ಉತ್ತೊಮ್ಮೆ ಹರಗದಲೆ । ಬಿತ್ತೊಮ್ಮೆ ನೋಡದಲೆ
ಹೊತ್ತೇರಿ ಹೊಲಕೆ ಹೋಗಿಹರೆ ಅವ ತನ್ನ ।
ನೆತ್ತರವ ಸುಡುವ ಸರ್ವಜ್ಞ||

ಸರ್ವಜ್ಞ ವಚನ 735 :
ಸತ್ತು ಹುಟ್ಟುವರೆಂಬ। ಮಿಥ್ಯದ ನುಡಿಯೇಕೆ?
ಬಿತ್ತಿದರೆ ಬೀಜ ಬೆಳೆವಂತೆ ವೃಕ್ಷ ತಾ।
ಸತ್ತು ಹುಟ್ಟುವುದೆ? ಸರ್ವಜ್ಞ||

ಸರ್ವಜ್ಞ ವಚನ 736 :
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ನೆಂದೆನಿಸಿ
ನಿಂದವನು ನಾನೆ ಸರ್ವಜ್ಞ||

ಸರ್ವಜ್ಞ ವಚನ 737 :
ಜ್ವರ ಬನ್ದ ಮನುಜಂಗೆ । ನೊರೆವಾಲು ವಿಷಕ್ಕು ।
ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ ।
ಹಿರಿದು ವಿಷಪಕ್ಕು ಸರ್ವಜ್ಞ||

ಸರ್ವಜ್ಞ ವಚನ 738 :
ಲಿಂಗವ ಪೂಝಿಸುವಾತ । ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭ ಘನವಕ್ಕು – ಮಹಲಿಂಗ
ಹಿಂಗುವುದು ಅವನ ಸರ್ವಜ್ಞ||

ಸರ್ವಜ್ಞ ವಚನ 739 :
ಹಡಗು ಗಾಳಿಗೆ ಲೇಸು । ಗುಡುಗು ಮಳೆ ಬರಲೇಸು ।
ಒಡಹುಟ್ಟಿದವರು ಇರಲೇಸು,
ಊರಿಂಗೆ ಬಡಿಗೆ ಲೇಸಂದ ಸರ್ವಜ್ಞ||

ಸರ್ವಜ್ಞ ವಚನ 740 :
ಹುಣಿಸೆಯಿಂ ನೊರೆಹಾಲು । ಗಣಿಕೆಯಿಂ ಹಿರೆಯತನ
ಮೇಣಿಸಿನಿಂ ಕದಳೆ ಕೆಡುವಂತೆ ಬಡವ ತಾ ।
ಸೆಣಸಿನಿಂ ಕೆಡಗು ಸರ್ವಜ್ಞ||

ಸರ್ವಜ್ಞ ವಚನ 741 :
ಚಿತ್ತವಿಲ್ಲದೆ ಗುಡಿಯ । ಸುತ್ತಿದಡೆ ಫಲವೇನು।
ಎತ್ತು ಗಾಣವನು ಹೊತ್ತು ತಾ ನಿತ್ಯದಿ।
ಸುತ್ತಿಬಂದಂತೆ ಸರ್ವಜ್ಞ||

ಸರ್ವಜ್ಞ ವಚನ 742 :
ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ
ಬಟ್ಟೆಗೆ ಹೋಹ ಸರ್ವಜ್ಞ||

ಸರ್ವಜ್ಞ ವಚನ 743 :
ಸಣ್ಣ ದೊಡ್ಡವನಲ್ಲ। ಅಣ್ಣನಿರುವುದು ಅಲ್ಲ।
ಹಣ್ಣಿಕ್ಕು ಲೋಕದೊಳಗೆಲ್ಲ ಇದನು ಬ।
ಬಲ್ಲಣ್ಣಗಳು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 744 :
ಮುನಿವರನನು ನೆನೆಯುತಿರು । ವಿನಯದಲಿ ನಡೆಯುತಿರು ।
ವನಿತೆಯರ್ ಬಲೆಗೆ ಸಿಲುಕದಿರು ಬಾಳಿಕೆಯ ।
ಮನಘನವು ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 745 :
ಕಂಚಿಯಾ ಫಲಲೇಸು । ಮಿಂಚು ಮುಗಿಲಿಗೆ ಲೇಸು ।
ಕೆಚ್ಚನೆಯ ಸತಿಯು ಇರಲೇಸು, ಊರಿಂಗೆ ।
ಪಂಚಾಳ ಲೇಸು ಸರ್ವಜ್ಞ||

ಸರ್ವಜ್ಞ ವಚನ 746 :
ವೀಳ್ಯವಿಲ್ಲದ ಬಾಯಿ । ಕೂಳು ಇಲ್ಲದ ನಾಯಿ ।
ಬಾಳೆಗಳು ಇಲ್ಲದೆಲೆದೋಟ ಪಾತರದ ।
ಮೇಳ ಮುರಿದಂತೆ ಸರ್ವಜ್ಞ||

ಸರ್ವಜ್ಞ ವಚನ 747 :
ಕೊಡುವಾತನೇ ಹರನು ಪಡೆವಾತನೇ ನರನು
ಒಡಲ ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವರಿದು ಸರ್ವಜ್ಞ||

ಸರ್ವಜ್ಞ ವಚನ 748 :
ಹೆತ್ತಾತನರ್ಜುನನು। ಮುತ್ತಯ್ಯ ದೇವೇಂದ್ರ।
ಮತ್ತೆ ಮಾತುಲನು ಹರಿಯಿರಲು ಅಭಿಮನ್ಯು।
ಸತ್ತನೇಕಯ್ಯ ಸರ್ವಜ್ಞ||

ಸರ್ವಜ್ಞ ವಚನ 749 :
ರೊಕ್ಕವಿಲ್ಲದ ಬಾಳ್ವೆ। ಮಕ್ಕಳಿಲ್ಲದ ಮನೆಯು
ಅಕ್ಕರವಿರದ ತವರೂರು, ಇವು ಮೂರು।
ದುಕ್ಕ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 750 :
ಅಚ್ಚು ಇಲ್ಲದ ಭಂಡಿ । ಮೆಚ್ಚು ಇಲ್ಲದ ದೊರೆಯು ।
ರಚ್ಚೆಯಲಿ ಇಹನ ಕಿವಿಮಾತು ಎಂದಿಗೂ ।
ನೆಚ್ಚಬೇಡೆಂದ ಸರ್ವಜ್ಞ||
          

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post