Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (651-700)

ಸರ್ವಜ್ಞ ವಚನ 651 :
ನರಕ ಪಾಪಿಷ್ಠರಿಗೆ । ಸುರಲೋಕ ( ದಿಟ್ಟರಿಗೆ )
ಗುರುಬೋಧೆಯಲ್ಲಿ ಜಗ ಉಳಿಗು – ಮಲ್ಲದೊಡೆ
ಉರಿದು ಹೋಗುವುದು ಸರ್ವಜ್ಞ||

ಸರ್ವಜ್ಞ ವಚನ 652 :
ಮಣ್ಣು ಬಿಟ್ಟವ ದೈವ । ಹೊನ್ನು ಬಿಟ್ಟವ ದೈವ ।
ಹೆಣ್ಣ ನೆರೆ ಬಿಟ್ಟರವ ದೈವ ಜಗಕೆ ಮು ।
ಕ್ಕಣ್ಣನೇ ದೈವ ಸರ್ವಜ್ಞ||

ಸರ್ವಜ್ಞ ವಚನ 653 :
ಪಾಪವೆನ್ನದು ಕಾಯ । ಪುಣ್ಯ ನಿನ್ನದು ರಾಯ ।
ಕೂಪದೊಳು ಬಿದ್ದು ಕೊರಹುತಿಹೆ ಗುರುರಾಯ ।
ರೂಪುಗೊಳಿಸಯ್ಯ ಸರ್ವಜ್ಞ||

ಸರ್ವಜ್ಞ ವಚನ 654 :
ತಳಿಗೆಗಂ ತಲೆಯಿಲ್ಲ । ಮಳೆಗೆ ಜೋಯಿಸರಿಲ್ಲ ।
ಬೆಳಗಾಗೆ ಕನ್ನಗಳವಿಲ್ಲ ಲೋಕದೊಳು ।
ಉಳಿದಾಳ್ಗಳಿಲ್ಲ ಸರ್ವಜ್ಞ||

ಸರ್ವಜ್ಞ ವಚನ 655 :
ಎತ್ತೆಮ್ಮೆ ಹೂಡುವದು । ಉತ್ತೊಮ್ಮೆ ಹರಗುವದು ।
ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು ।
ಎತ್ತುಗೈಯುದ್ದ ಸರ್ವಜ್ಞ||

ಸರ್ವಜ್ಞ ವಚನ 656 :
ಊರಗಳ ಮೂಲದಲಿ । ಮಾರನರಮನೆಯಲ್ಲಿ
ಭೋರಿಜೀವಿಗಳ ಹುಟ್ಟಿಸಿದ – ಅಜನಿಗಿ
ನ್ನಾರು ಸಾಯುಂಟೆ ಸರ್ವಜ್ಞ||

ಸರ್ವಜ್ಞ ವಚನ 657 :
ನೋಟ ಶಿವಲಿಂಗದಹಲಿ । ಜೂಟ ಜ್ಂಗಮದಲಿ ।
ನಾಟನಾ ಮನವು ಗುರುವಿನಲಿ,
ಭಕ್ತನಾ ಮಾಟವನು ನೋಡು ಸರ್ವಜ್ಞ||

ಸರ್ವಜ್ಞ ವಚನ 658 :
ಆಲಸಿಕೆಯಲಿರುವಂಗೆ ಕ್ಲಸಲಂಬಲಿಯಿಲ್ಲ ।
ಕೆಲಸಕ್ಕೆ ಆಲಸದಿರುವಂಗೆ ಬೇರಿಂದ ।
ಹಲಸು ಕಾತಂತೆ ಸರ್ವಜ್ಞ||

ಸರ್ವಜ್ಞ ವಚನ 659 :
ರುದ್ರಾಕ್ಷಿಯ ಮಾಲೆಯ ।
ಭದ್ರದಲಿ ಧರಿಸಿದಗೆ ಹೊದ್ದಿರ್‍ದ ಪಾಪ ಹೋಗಲವ ಸಾಕ್ಷಾತ ।
ಮಾಲೆಯ ರುದ್ರನೇ ಸರ್ವಜ್ಞ||

  ಸರ್ವಜ್ಞ ವಚನ 14 : ಅಮೃತ
ಸರ್ವಜ್ಞ ವಚನ 660 :
ಎಂತಿರಲು ಪರರ ನೀ। ಮುಂತೆ ನಂಬಲು ಬೇಡ।
ಕುಂತಿ ಹೆಮ್ಮಗನ ಕೊಲಿದಳು, ಮಾನವರ।
ನೆಂತು ನಂಬುವದು ಸರ್ವಜ್ಞ||

ಸರ್ವಜ್ಞ ವಚನ 661 :
ಚಟುಲ ಲೋಚನೆಯಂತೆ। ಕುಟಿಲಕುಂತಳೆಯಂತೆ।
ವಿಟಹೆಣ್ಣಿನಂತೆ ಹಗಲಲ್ಲಿ,ಇರುಳು ಸಂ।
ಗಟಿನ ಕಾಯಂತೆ,ಸರ್ವಜ್ಞ||

ಸರ್ವಜ್ಞ ವಚನ 662 :
ಇಲ್ಲದವನಹುದಾಡೆ । ಬಲ್ಲಂತೆ ಬೊಗಳುವರು ।
ಬಲ್ಲಿದನು ಅಲ್ಲ್ದಾಡಿದರೆ ಎಲ್ಲವರು ।
ಬೆಲ್ಲವೆಂಬವರು ಸರ್ವಜ್ಞ||

ಸರ್ವಜ್ಞ ವಚನ 663 :
ನಾರಿ ಪರರಿಗುಪಕಾರಿ ನಾರಿ ಸ್ವರ್ಗಕ್ಕೆ ದಾರಿ
ನಾರಿ ಸಕಲರಿಗೆ ಉಪಕಾರಿ ಮುನಿದರಾ
ನಾರಿಯೇ ಮಾರಿ ಸರ್ವಜ್ಞ||

ಸರ್ವಜ್ಞ ವಚನ 664 :
ತನ್ನ ದೋಷವ ನೂರು । ಬೆನ್ನ ಹಿಂದಕ್ಕಿಟ್ಟು ।
ಅನ್ಯ್ರೊಂದಕ್ಕೆ ಹುಲಿಯಪ್ಪ ಮಾನವನು ।
ಕುನ್ನಿಯಲ್ಲೇನು ಸರ್ವಜ್ಞ||

ಸರ್ವಜ್ಞ ವಚನ 665 :
ನಾಲಿಗೆಗೆ ನುಣುಪಿಲ್ಲ । ಹಾಲಿಗಿಂ ಬಿಳಿಪಿಲ್ಲ ।
ಕಾಲನಿಂದಧಿಕ ಅರಿಯಿಲ್ಲ ದೈವವುಂ ।
ಶೂಲಿಯಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 666 :
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ||

ಸರ್ವಜ್ಞ ವಚನ 667 :
ಭಾಷೆಯಿಂ ಮೇಲಿಲ್ಲ । ದಾಸನಿಂ ಕೀಳಿಲ್ಲಿ ।
ಮೋಸದಿಂದಧಿಕ ಕೇಡಿಲ್ಲ ಪರದೈವ ।
ಈಶನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 668 :
ಚೇಳನೇರಲು ಗುರುವು । ಕಾಳಗವು ಪಿರಿದಕ್ಕು ।
ಗಾಳಿಯಿಂ ವೇಳೆಯು ಕಿರಿದಕ್ಕು ಬೆಳೆಯಿಲ್ಲ ।
ಕೋಲಾಗವಕ್ಕು ಸರ್ವಜ್ಞ||

ಸರ್ವಜ್ಞ ವಚನ 669 :
ಮೂರು ಕಾಲಲಿ ನಿಂತು । ಗೀರಿ ತಿಂಬುದು ಮರನ ।
ಆರಾರಿ ನೀರ ಕುಡಿದಿಹುದು ಕವಿಗಳಲಿ।
ಧೀರರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 670 :
ಅಗ್ಗ ಬಡವಗೆ ಲೇಸು । ಬುಗ್ಗೆಯಗಸಗೆ ಲೇಸು ।
ತಗ್ಗಿನಾ ಗದ್ದೆ ಉಳಲೇಸು ಜೇಡಂಗೆ ।
ಮಗ್ಗ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 671 :
ಮಾನವನ ದುರ್ಗುಣವನೇನೆಂದು ಬಣ್ಣಿಸುವೆ
ದಾನವಗೈಯೆನಲು ಕನಲುವ ದಂಡವನು
ಮೌನದಿಂ ತೆರುವ ಸರ್ವಜ್ಞ||

ಸರ್ವಜ್ಞ ವಚನ 672 :
ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು
ಉನ್ನತವಪ್ಪತಿಥಿಗಿಕ್ಕದ ಬದುಕು – ನಾಯ
ಕುನ್ನಿಯಿಂ ಕಷ್ಟ ಸರ್ವಜ್ಞ||

ಸರ್ವಜ್ಞ ವಚನ 673 :
ಒಮ್ಮೆಯುಂಡವ ತ್ಯಾಗಿ । ಇನ್ನೊಮ್ಮೆಯುಂಡವ ಭೋಗಿ ।
ಬಿಮ್ಮೆಗುಂಡವನು ನೆರೆಹೋಗಿ ।
ಯೋಗಿ ತಾ ಸುಮ್ಮನಿರುತಿ ಸರ್ವಜ್ಞ||

ಸರ್ವಜ್ಞ ವಚನ 674 :
ನಂದೆಯನು ಭದ್ರೆಯನು । ಒಂದಾಗಿ ಅರ್ಧಿಸಲು ।
ಅಂದಿನ ತಿಥಿಯ ಸಮನಾಗೆ ಗ್ರಹಣ ತಾ ।
ಮುಂದೆ ಬಂದಕ್ಕು ಸರ್ವಜ್ಞ||

ಸರ್ವಜ್ಞ ವಚನ 675 :
ಗುಡಿಯ ಬೋದಿಗೆ ಕಲ್ಲು ।
ನಡುರಂಗ ತಾ ಕಲ್ಲು । ಕಡೆಮೂಲೆ ಸೆರಗು ತಾ ಕಲ್ಲು ।
ವರವನ್ನು ಕೊಡುವಾತ ಬೇರೆ ಸರ್ವಜ್ಞ||

ಸರ್ವಜ್ಞ ವಚನ 676 :
ದಾರದಿಂದಲೇ ಮುತ್ತು । ಹಾರವೆಂದೆನಿಸುಹುದು ।
ಆರೈದು ನಡೆವ ದ್ವಿಜರುಗಳ ಸಂಸರ್ಗ ।
ವಾರಿಂದಲಧಿಕ ಸರ್ವಜ್ಞ||

ಸರ್ವಜ್ಞ ವಚನ 677 :
ಹೊಟ್ಟೆಗುಣ ಕೊಟ್ಟವಗೆ । ಸಿಟ್ಟು ನೆರೆ ಬಿಟ್ಟವಗೆ ।
ಬಟ್ಟೆಯಾ ಮುಳ್ಳು ಸುಟ್ಟವಗೆ, ಬಹು ಭವದ ।
ಹುಟ್ಟು ತಾನಿಲ್ಲ ಸರ್ವಜ್ಞ||

ಸರ್ವಜ್ಞ ವಚನ 678 :
ತಂದೆ ಹಾರುವನಲ್ಲ । ತಾಯಿ ಮಾಳಿಯು ಅಲ್ಲ
ಚಂದ್ರಶೇಖರನ ವರಪುತ್ರ – ನಾ ನಿಮ್ಮ
ಕಂದನಲ್ಲೆಂಬೆ ಸರ್ವಜ್ಞ||

ಸರ್ವಜ್ಞ ವಚನ 679 :
ಓದುವಾದಗಳೇಕೆ ? ಗಾದೆಯ ಮಾತೇಕೆ?
ವೇದ ಪುರಾಣವು ನಿನಗೇಕೆ ಲಿಂಗದಾ
ಹಾದಿಯರಿಯದಲೆ ಸರ್ವಜ್ಞ||

ಸರ್ವಜ್ಞ ವಚನ 680 :
ಗಾಡವಿಲ್ಲದ ಬಿಲ್ಲು । ಕೋಡಿಯಿಲ್ಲದ ಕೆರೆಯು ।
ಬೇಡಂಗೆ ಮಾಡಿದುಪಕಾರ ಕಡೆಯಲ್ಲಿ ।
ಕೇಡು ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 681 :
ಬೆಂದ ಆವಿಗೆ ಭಾಂಡ । ಒಂದೊಂದು ಭೋಗವನು ।
ಅಂದದಿಂ ಉಂಡ ಒಡೆದು ಹಂಚಾದಂತೆ ।
ಬಿಂದುವನು ದೇಹ ಸರ್ವಜ್ಞ||

ಸರ್ವಜ್ಞ ವಚನ 682 :
ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ ಸತ್ಯವೆರಸಿಹ ಪ್ರಸಾದಿಯ
ಶ್ರಿ ಗುರುವು ಎಂಬೆ ಸರ್ವಜ್ಞ||

ಸರ್ವಜ್ಞ ವಚನ 683 :
ಅಟ್ಟರಾವೃಡಿಗನ । ಸುಟ್ಟಿಹರು ಕುಂಟಿಗೆಯ।
ಹುಟ್ಟಿಯ ಮೂಗ ಹರಿದರೀ ಮೂರು ಭವ।
ಗೆಟ್ಟು ಕೂಡಿದರು ಸರ್ವಜ್ಞ||

ಸರ್ವಜ್ಞ ವಚನ 684 :
ಗಾಜು ನೋಟಕೆ ಲೇಸು । ಮಾನಿನಿಗೆ ಪತಿ ಲೇಸು ।
ಸ್ವಾನುಭಾವಿಯ ನುಡಿ ಲೇಸು ಎಲ್ಲಕ್ಕು ನಿ ।
ಧಾನವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 685 :
ಪರಮನೈಮೊಗ ಉಳಿದು । ನೆರವಿಯನೊಲ್ಲದೆ
ನರರೊಪ ಧರಿಸಿ ಗುರುವಾಗಿ – ಬೋಧಿಪಗೆ
ಸರಿ ಯಾರ ಕಾಣೆ ಸರ್ವಜ್ಞ||

ಸರ್ವಜ್ಞ ವಚನ 686 :
ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ
ಅರಸು ಮನ್ನಣೆಯು ಕರಗಿದ – ಠಾವಿಂದ
ಸರಿವುದೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 687 :
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ||

ಸರ್ವಜ್ಞ ವಚನ 688 :
ಅರಿತಂಗೆ ಅರವತ್ತು । ಮರೆತಂಗೆ ಮೂವತ್ತು ।
ಬರೆವಂಗೆ ರಾಜ್ಯ ಸರಿಪಾಲು । ಹಾರುವನು ।
ಬರೆಯದೇ ಕೆಟ್ಟ ಸರ್ವಜ್ಞ||

ಸರ್ವಜ್ಞ ವಚನ 689 :
ಇನ್ನು ಬಲ್ಲರೆ ಕಾಯಿ । ಮುನ್ನಾರಾ ಅರವತ್ತು ।
ಹಣ್ಣು ಹನ್ನೆರಡು ಗೊನೆ ಮೂರು ತೊಟ್ಟೊಂದು ।
ಚನ್ನಾಗಿ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 690 :
ಅನ್ನವನಿಕ್ಕುವುದು | ನನ್ನಿಯನು ನುಡಿವುದು
ತನ್ನಂತೆ ಪರರ ಬಗೆದೊಡೆ – ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ||

ಸರ್ವಜ್ಞ ವಚನ 691 :
ಮೆಟ್ಟಿಪ್ಪುದಾಶೆಯನು । ಕಟ್ಟಿಪ್ಪುದಿಂದ್ರಿಯವ ।
ತೊಟ್ಟಿಪ್ಪುದುಳ್ಳ ಸಮತೆಯವನು,
ಶಿವಪದವು ಮುಟ್ಟಿಪ್ಪುದಯ್ಯ ಸರ್ವಜ್ಞ||

ಸರ್ವಜ್ಞ ವಚನ 692 :
ಬೆಳೆದೆನವರಿಂದೆನ್ನ । ಕಳೆಯ ಕಂಡವರೆಲ್ಲ
ಮೊಳೆಯಲ್ಲಿ ಸಸಿಯನರಿವಂತೆ – ಮಾಳಿಯ
ತಿಳಿದವರರೆಗು ಸರ್ವಜ್ಞ||

ಸರ್ವಜ್ಞ ವಚನ 693 :
ಉತ್ತಮದ ವರ್ಣಿಗಳೆ । ಉತ್ತಮರು ಎನಬೇಡ ।
ಮತ್ತೆ ತನ್ನಂತೆ ಬಗೆವರನೆಲ್ಲರನು ।
ಉತ್ತಮರು ಎನ್ನು ಸರ್ವಜ್ಞ||

ಸರ್ವಜ್ಞ ವಚನ 694 :
ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ
ಬಿಂದುವಿನ ಬೇಧವರಿದ ಮಹಾತ್ಮನು
ಬೆಂದ ನುಲಿಯಂತೆ ಸರ್ವಜ್ಞ||

ಸರ್ವಜ್ಞ ವಚನ 695 :
ಹುಟ್ಟಿದ ಮನೆ ಬಿಟ್ಟು । ಸಿಟ್ಟಿನಲಿ ಹೊರಟಿಹಳು।
ಸಿಟ್ಟಳಿದು ಮನೆಗೆ ಬರುತಿಹಳು ಕವಿಗಳಲಿ।
ದಿಟ್ಟರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 696 :
ಬಡವ ಬಟ್ಟೆಯ ಹೋಗ । ಲೊಡನೆ ಸಂಗಡಿಗೇಕೆ ?
ಬಡತನವು ಎಂಬ ಹುಲಿಗೂಡಿ ಬರುವಾಗ ।
ನುಡಿಸುವವರಿಲ್ಲ ಸರ್ವಜ್ಞ||

ಸರ್ವಜ್ಞ ವಚನ 697 :
ಮಾತು ಮಾಣಿಕ ಮುತ್ತು ।
ಮಾತೆ ತಾ ಸದನವು । ಮಾತಾಡಿದಂತೆ
ನಡೆದಾತ ಜಗವನ್ನು ಕೂತಲ್ಲಿ ಆಳ್ವ ಸರ್ವಜ್ಞ||

ಸರ್ವಜ್ಞ ವಚನ 698 :
ಇಪ್ಪೊತ್ತು ದೇವರನು । ತಪ್ಪದಲೆ ನೆನದಿಹರೆ ।
ತುಪ್ಪ ಒರಗವು ಉಣಲುಂಟು ತನಗೊಬ್ಬ ।
ಳಪ್ಪುವಳುಂಟು ಸರ್ವಜ್ಞ||

ಸರ್ವಜ್ಞ ವಚನ 699 :
ಕಾಲು ಮುರಿದರೆ ಹೊಲ್ಲ । ಬಾಲೆ ಮುದುಕಗೆ ಹೊಲ್ಲ ।
ನಾಲಿಗೆಯಲೆರಡು ನುಡಿ ಹೊಲ್ಲ ।
ಸಮರದಲಿ ಸೋಲುವಡೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 700 :
ಧರೆಯಲ್ಲಿ ಹುಟ್ಟಿ ಅಂ । ತರದಲ್ಲಿ ಓಡುವದು ।
ಮೊರೆದೇರಿ ಕಿಡಿಯನುಗುಳುವದು ಕವಿಗಳೇ ।
ಅರಿದರಿದು ಪೇಳಿ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post