Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (601-650)

ಸರ್ವಜ್ಞ ವಚನ 601 :
ಬಂದಿಹೆನು ಮತ್ತೊಮ್ಮೆ । ಬಂದಂತೆ ಹೋಗಿಹೆನು।
ನಿಂದಿಹೆನು ಎಂದು ಇರಲೊಲ್ಲೆ, ಹೋಗಿಹರೆ।
ಬಂದಿಹೆನು ಬಾರೆ ಸರ್ವಜ್ಞ||

ಸರ್ವಜ್ಞ ವಚನ 602 :
ಕಾಲುಂಟು ನಡೆಯದದು। ಮೂಲೆಯಲೆ ಕಟ್ಟಿಹುದು।
ಬಾಲಕರ ಸೊಮ್ಮ ಹೊರುತಿಹುದು,ಕವಿಗಳಲಿ।
ಬಾಲರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 603 :
ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ? ಲಿಂಗದ
ನೆಪ್ಪನರಿದವಗೆ ಸರ್ವಜ್ಞ||

ಸರ್ವಜ್ಞ ವಚನ 604 :
ಮುಂಗೈಯೊಳಾಡುವದು। ಹಿಂಗುವದು ಹೊಂಗುವದು।
ಸಿಂಗಿಯಲಿ ಸಿಳ್ಳ ಬಿಡುತಿಹುದು, ಆಸ ಮಿಗದ।
ಸಂಗವನು ನೋಡು ಸರ್ವಜ್ಞ||

ಸರ್ವಜ್ಞ ವಚನ 605 :
ಹೇನು ಕೂರೆಗಳನ್ನು । ತಾನಾ ಜಿನಕೊಲ್ಲ ।
ಸ್ಥಾನ ಪಲ್ಲಟವ ಮಾಡದಡೆ ಆ ಮೇಲೆ ।
ಏನಾದುದರಿಯ ಸರ್ವಜ್ಞ||

ಸರ್ವಜ್ಞ ವಚನ 606 :
ಕಳ್ಳನೂ ಒಳ್ಳಿದನು। ಎಲ್ಲ ಜಾತಿಯೊಳಿಹರು।
ಕಳ್ಳನೊಂದೆಡೆಗೆ ಉಪಕಾರಿ, ಪಂಚಾಳ।
ನೆಲ್ಲರಲಿ ಕಳ್ಳ! ಸರ್ವಜ್ಞ||

ಸರ್ವಜ್ಞ ವಚನ 607 :
ದಾಸಿಯಾ ಕೊಡದಂತೆ । ಸೋರದಿಪ್ಪುದೆ ಯೋಗ ।
ದಾಸಿ ಸಾಸಿರದ ಒಡನಾಡುತಾ ಕೊಡದೊ ।
ಳಾಶೆ ಇಪ್ಪಂತೆ ಸರ್ವಜ್ಞ||

ಸರ್ವಜ್ಞ ವಚನ 608 :
ಜೋಳದ ಬೋನಕ್ಕೆ । ಬೇಳೆಯ ತೊಗೆಯಾಗಿ।
ಕಾಳೆಮ್ಮೆ ಕರೆದ ಹಯನಾಗಿ ಬೆಳವಲ।
ಮೇಳ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 609 :
ಓದು ವಾದಗಳೇಕೆ ? ಗಾದೆಯಾ ಮಾತೇಕೆ ?
ವೇದ ಪುರಾಣ ತನಗೇಕೆ ? ಲಿಂಗದಾ
ಹಾದಿಯರಿಯದವಗೆ ಸರ್ವಜ್ಞ||

ಸರ್ವಜ್ಞ ವಚನ 610 :
ಖುಲ್ಲ ಮಾನವ ಬೇಡೆ। ಕಲ್ಲು ತಾ ಕೊಡುವನೇ? ।
ಸೊಲ್ಲರಿವ ಶಿವನ ಬೇಡಿದಡೆ ಬಯಸಿದು।
ದೆಲ್ಲವನು ಕೊಡುವ ಸರ್ವಜ್ಞ||

ಸರ್ವಜ್ಞ ವಚನ 611 :
ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ
ಶಂಭುವಿದ್ದಂತೆ ಮತ್ತೊಂದು ದೈವವನು
ನಂಬುವನೆ ಹೆಡ್ಡ ಸರ್ವಜ್ಞ||

ಸರ್ವಜ್ಞ ವಚನ 612 :
ನರರ ಬೇಡುವ ದೈವ | ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ – ಅದನರಿ
ಹರನನೆ ಬೇಡು ಸರ್ವಜ್ಞ||

ಸರ್ವಜ್ಞ ವಚನ 613 :
ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ, ನುಡಿಕೂಟವಾದವನು
ಲಿಂಗವೇ ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 614 :
ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
ಪರುಷವೆಂತಂತೆ ಶಿಷ್ಯಂಗೆ – ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ||

ಸರ್ವಜ್ಞ ವಚನ 615 :
ಬಡವನೊಳ್ಳೆಯ ಮಾತು । ನುಡಿದರಲ್ಲೆಂಬುವರು ।
ಪೊಡವೀಶ ಜಳ್ಳ – ಜೊಲ್ಲೊಡನೆ ನುಡಿದರೂ ।
ಕಡುಮೆಚ್ಚುತಿಹರು ಸರ್ವಜ್ಞ||

ಸರ್ವಜ್ಞ ವಚನ 616 :
ಯತಿಗಳಿಗೆ ಮತೆಗೆಡಗು । ಸತಿಯ ಸಜ್ಜನ ಕೆಡಗು ।
ಮತಿವಂತರೆಲ್ಲ ಭ್ರಮೆಗೊಳಗು ಹೊನ್ನ
ಶ್ರುತಿಯ ಕೇಳಿದರೆ ಸರ್ವಜ್ಞ||

ಸರ್ವಜ್ಞ ವಚನ 617 :
ಮಂಡೆ ಬಾಯೊಳಗಿಕ್ಕು। ಚಂಡಿಕೆಯು ಹೊರಗಿಕ್ಕು।
ಹೆಂಡತಿಯು ಕಡೆಯೆ ಬರುತಿಕ್ಕು, ಕಡೆಗೊಂದು।
ಉಂಡೆಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 618 :
ಬೇಡನೊಳ್ಳಿದನೆಂದು । ಆಡದಿರು ಸಭೆಯೊಳಗೆ ।
ಬೇಡಬೇಡಿದನು ಕೊಡದಿರಲು ಬಯ್ಗಿಂಗೆ ।
ಗೋಡೆಯನು ಒಡೆವ ಸರ್ವಜ್ಞ||

ಸರ್ವಜ್ಞ ವಚನ 619 :
ಸತ್ತು ಹೋದರ್‍ಎ ನಿನಗೆ । ಎತ್ತಣವು ಮೋಕ್ಷವೈ ?
ಸತ್ತು ಹೋಗದರೆ ಜೀವಿಸಲು ಮೋಕ್ಷದಾ ।
ಗೊತ್ತು ತಿಳಿಯೆಂದ ಸರ್ವಜ್ಞ||

ಸರ್ವಜ್ಞ ವಚನ 620 :
ಸಾಲವನು ಮಾಡುವದು । ಹೇಲ ತಾ ಬಳಿಸುವುದು।
ಕಾಲಿನ ಕೆಳಗೆ ಹಾಕುವುದು, ತುತ್ತಿನ ।
ಚೀಲ ನೋಡಯ್ಯ ಸರ್ವಜ್ಞ||

ಸರ್ವಜ್ಞ ವಚನ 621 :
ನಲ್ಲ ದೇವಾಸಾಲೆ। ಹುಲ್ಲೆಗೊಂಬತ್ತು ಮುಖ।
ಬೆಳ್ಳಿಲಿಗೆ ನಾಲ್ಕು ತನಿಗೋಡು, ಮೂಡಿದ್ದ।
ನಿಲ್ಲಿಯೇ ಕಂಡೆ ಸರ್ವಜ್ಞ||

ಸರ್ವಜ್ಞ ವಚನ 622 :
ಲೋಕಕ್ಕವಶ್ಯ ತಾ । ನೇಕಾಕಿ ಹೊಂಬೇರು ।
ನಾಕಕದು ಬೇರು ಪುಣ್ಯದಿಂದೆಲ್ಲದೊಡೆ ।
ಪಾತಕಕೆ ಬೇರು ಸರ್ವಜ್ಞ||

ಸರ್ವಜ್ಞ ವಚನ 623 :
ಮರೆದೊಮ್ಮೆ ನಡೆವುತ್ತ । ಸರಕನೇ ಸೀತಿಹರೆ ।
ಅರಿದವರಡಿಯಿಡದೆ ನಿಲ್ಲುವುದು,
ಇಲ್ಲದಿರೆ ಇರಿದುಕೊಂಡಂತೆ ಸರ್ವಜ್ಞ||

ಸರ್ವಜ್ಞ ವಚನ 624 :
ಕೂಳು ಕುತ್ತವೆ ಕುತ್ತ ಕೂಳು ಮೇಳವೆ ಮೇಳ ।
ಕೂಳೊಂದುಗಳಿಗೆ ತಡೆದಿಹರೆ ಪಾತರದ
ಮೇಳ ಮುರಿದಂತೆ ಸರ್ವಜ್ಞ||

ಸರ್ವಜ್ಞ ವಚನ 625 :
ಒಂದೆಲಗ ಮೆಲಹೊಲ್ಲ। ನಿಂದಕರ ನೆರೆ ಹೊಲ್ಲ।
ತಂದೆಯನು ಜರಿವ ಮಗ ಹೊಲ್ಲ, ಸೂಳೆಯ।
ದಂದುಗವೌ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 626 :
ಅಕ್ಕಿಯೆನು ಬೀಯೆಂಬ। ಬೆಕ್ಕನ್ನು ಪಿಲ್ಲೆಂಬ।
ಚೊಕ್ಕಟದತೇಜಿ ಗುರ್ರೆಂಬ ತೆಲುಗನ।
ಸೊಕ್ಕ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 627 :
ಸಾಲ ಬಡವಂಗೆ ಹೊಲ್ಲ । ನಾಲಗೆಗೆ ಹುಸಿ ಹೊಲ್ಲ ।
ಹಾಲಿನಾ ಕೊಡಕೆ ಹುಳಿಹೊಲ್ಲ ಕಾಲಿಗಂ ।
ಕೋಲಿ ಹೊಲ್ಲೆಂದ ಸರ್ವಜ್ಞ||

ಸರ್ವಜ್ಞ ವಚನ 628 :
ಅನ್ನವನು ಇಕ್ಕುವನು ಉನ್ನತವ ಪಡೆಯುವನು
ಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾ
ಕುನ್ನಿಗೂ ಕಿರಿಯ ಸರ್ವಜ್ಞ||

ಸರ್ವಜ್ಞ ವಚನ 629 :
ನಲ್ಲೆಯನು ಒಲ್ಲೆಂಬ । ಸೊಲ್ಲು ನಾಲಿಗೆ ಹೊಲೆಯು ।
ಬಲ್ಲಿದನು, ಶ್ರವಣ, ಸನ್ಯಾಸಿ ಇವರುಗಳು ।
ಎಲ್ಲಿ ಉದಿಸಿಹರು ಸರ್ವಜ್ಞ||

ಸರ್ವಜ್ಞ ವಚನ 630 :
ಹೆತ್ತ ತಾಯನು ಮಾರಿ। ತೊತ್ತ ತಂದಾ ತೆರದಿ।
ತುತ್ತಿನಾತುರಕೆ ತತ್ವವನು ತೊರೆದಿಹನು।
ಕತ್ತೆ ತಾನೆಂದ ಸರ್ವಜ್ಞ||

ಸರ್ವಜ್ಞ ವಚನ 631 :
ಕಣ್ಣು ನಾಲಿಗೆ ಮನವ । ಪನ್ನಗಧರ ಕೊಟ್ಟ ।
ಚಿನ್ನಾಗಿ ಮನವ । ತೆರೆದ ನೀ ಬಿಡದೆ ಶ್ರೀ ।
ಚಿನ್ನನಂ ನೆನಯೋ ಸರ್ವಜ್ಞ||

ಸರ್ವಜ್ಞ ವಚನ 632 :
ಕೋಪವೆಂಬುದು ತಾನು , ಪಾಪವ ನೆಲೆಗಟ್ಟು
ಆಪತ್ತು , ಸುಖವು ಸರಿ ಎಂದು ಪೋಪಗೆ
ಪಾಪವೆಲ್ಲಿಹುದು ಸರ್ವಜ್ಞ||

ಸರ್ವಜ್ಞ ವಚನ 633 :
ಇಲ್ಲಿಲ್ಲವೆಂಬುದನು ಇಲ್ಲಿಯೇ ಅರಸುವುದು
ಇಲ್ಲಿಲ್ಲವೆಂದರಿದ ಒಡನೆ ಜಗವೆಲ್ಲ
ಒಳಗಿಕ್ಕು ಸರ್ವಜ್ಞ||

ಸರ್ವಜ್ಞ ವಚನ 634 :
ಅಗಸ ಊರಿಗೆ ಲೇಸು । ಸೊಗಸು ಬಾಳುವೆ ಲೇಸು ।
ಬೊಗಸೆಯುಳ್ಳವರ ಗೆಣೆ ಲೇಸು ಊರಿಂಗೆ ।
ಅಗಸ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 635 :
ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ
ಚಿತ್ತದ ನೆಲೆಯನರಿಯದೆ – ಬೋಳಾದ
ರೆತ್ತಣ ಯೋಗ ಸರ್ವಜ್ಞ||

ಸರ್ವಜ್ಞ ವಚನ 636 :
ಭೂತೇಶಗೆರಗುವನು । ಜಾತಿ ಮಾದಿಗನಲ್ಲ ।
ಜಾತಿಯಲಿ ಹುಟ್ಟಿ ಶಿವನಿಂಗೆ ಶರಣೆನ್ನ ।
ದಾತ ಮಾದಿಗರು ಸರ್ವಜ್ಞ||

ಸರ್ವಜ್ಞ ವಚನ 637 :
ಸುರಪ ಹಂಸನ ಶಶಿಯು । ಕರಕರದ ರಾವಣನು ।
ವ ಕೀಚಕಾದಿ ಬಲಯುತರು ।
ಕೆಟ್ಟರಲೆ ಪರಸತಿಯು ಪಿಡಿದು ಸರ್ವಜ್ಞ||

ಸರ್ವಜ್ಞ ವಚನ 638 :
ಹಣ ಗುಣದಿ ಬಲವುಳ್ಳ । ಕೆಡೆಬೀಳಲಿರಿದರೂ ।
ನಡುವೆಂದು ಬಗೆದ ಪತಿಪ್ರತೆ ಸೀತೆಗಂ ।
ಎಣೆಯಾರು ಹೇಳು ಸರ್ವಜ್ಞ||

ಸರ್ವಜ್ಞ ವಚನ 639 :
ಹಸಿದರಂಬಲಿ ಲೇಸು । ಬಿಸಿಲಲ್ಲಿ ಕೊಡೆ ಲೇಸು ।
ಬಸುರಿನಾ ಸೊಸೆಯು ಇರ ಲೇಸು ।
ಸಭೆಗೊಬ್ಬ ರಸಿಕನೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 640 :
ಸುರೆಯ ಸೇವಿಸುವವನ । ಸುರಿಗೆಯನು ಪಿಡಿದವನ ।
ದೊರೆಯೊಲುಮೆಗಾಗಿ ಹಣಗುವನಕಾಯುವದು ।
ಸೊರಗಿಸಾಯುವವು ಸರ್ವಜ್ಞ||

ಸರ್ವಜ್ಞ ವಚನ 641 :
ತೆರೆದ ಹಸ್ತವು ಲೇಸು । ಹರಿಯ ಪೂಜ್ಯವು ಲೇಸು ।
ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ ।
ಶರಣನೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 642 :
ಪ್ರಾಣನೂ ಪರಮನೂ । ಕಾಣದಲೆ ಒಳಗಿರಲು ।
ಮಾಣದಲೆ ಸಿಲೆಯ ಹಿಡಿದದಕೆ ಮೂರ್ಖ ತಾ ।
ಪ್ರಾಣಾತ್ಮನೆಂಬ ಸರ್ವಜ್ಞ||

ಸರ್ವಜ್ಞ ವಚನ 643 :
ಎಂಟು ಬಳ್ಳದ ನಾಮ। ಗಂಟಲಲಿ ಮುಳ್ಳುಂಟು।
ಬಂಟರನು ಹಿಡಿದು ಬಡಿಸುವದು, ಕವಿಗಳಲಿ।
ಬಂಟರಿದ ಪೇಳೆ ಸರ್ವಜ್ಞ||

ಸರ್ವಜ್ಞ ವಚನ 644 :
ಜಾಣೆಯಾ ನುಡಿ ಲೇಸು । ವೀಣೆಯಾ ಸ್ವರ ಲೇಸು ।
ಮಾಣದಲೆ ವದನ ಶುಚಿ ಲೇಸು । ಕೂರ್ಪವರ ।
ಕಾಣುವದೆ ಲೇಸು ಸರ್ವಜ್ಞ||

ಸರ್ವಜ್ಞ ವಚನ 645 :
ಎಡಬಲವು ಎನಬೇಡ । ಒಡನೆ ಬಹನೆನಬೇಡ ।
ಕಡುದೂರ ಸಾರ್ದೆನೆನಬೇಡ ಸೀತರೊಂದಡಿಯ
ನಿಡಬೇಡ ಸರ್ವಜ್ಞ||

ಸರ್ವಜ್ಞ ವಚನ 646 :
ಗೊರವರ ಸೂಳೆಯೂ । ಹರದನೂ ಸಾನಿಯೂ ।
ತಿರಿವನು ವೈದ್ಯ-ದ್ವಿಜ-ಗಣಿಕೆ ಇನ್ನೊಬ್ಬ ।
ರಿರವ ಸೈರಿಸರು ಸರ್ವಜ್ಞ||

ಸರ್ವಜ್ಞ ವಚನ 647 :
ಹುತ್ತ ಹಿತ್ತಲು ಹೊಲ್ಲ । ಬೆತ್ತ ಭೂತಕೆ ಹೊಲ್ಲ ।
ಒತ್ತೆಗೊಂಬಳಿಗೆ ತುರಿ ಹೊಲ್ಲ ಒಣಕೂಳ ।
ತುತ್ತು ತಾ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 648 :
ಬಂದಿಹೆನು ನಾನೊಮ್ಮೆ । ಬಂದು ಹೋಗುವೆನೊಮ್ಮೆ
ಬಂದೊಮ್ಮೆ ಹೋಗೆ ಬಾರೆ ನಾಂ ಕವಿಗಳಲಿ ।
ವಂದ್ಯರಿಗೆ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 649 :
ಮಕರಕ್ಕೆ ಗುರು ಬರಲು ।
ಮಕರ ತೋರಣವಕ್ಕು ಸಕಲ ಧಾನ್ಯ ಬೆಳೆಯಕ್ಕು
ಪ್ರಜೆಗಳು ಸುಖವಿರಲು ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 650 :
ಕಾಲಿಲ್ಲದಲೆ ಹರಿಗು। ತೋಳಿಲ್ಲದೆ ಹೊರುಗು।
ನಾಲಿಗಿಲ್ಲದೆ ಉಲಿವುದು ಕವಿಕುಲದ।
ಮೇಲುಗಳು ಪೇಳಿ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post