Menu

Home ನಲಿಕಲಿ About ☰ Menu


 

🔍

ಸರ್ವಜ್ಞ ತ್ರಿಪದಿಗಳು (551-600)

 ಸರ್ವಜ್ಞ ವಚನ 551 :
ಚರಜೀವನು ತಿಂದು । ಚರಿಸುವದು ಜಗವರ್ಧ ।
ಚರಿಸದಾ ಜೀವಿಗಳೆ ತಿಂದು ಜಗವರ್ಧ ।
ಚರಿಸುವದು ನೋಡು ಸರ್ವಜ್ಞ||

ಸರ್ವಜ್ಞ ವಚನ 552 :
ಮಡದಿ ಮಕ್ಕಳ ಮಮತೆ । ಒಡಲೊಡನೆ ಯಿರುವತನಕ ।
ಓದಲೊಡವೆ ಹೋದ ಮರುದಿನವೆ ಅವರೆಲ್ಲ ।
ಕಡೆಗೆ ಸಾರುವರು ಸರ್ವಜ್ಞ||

ಸರ್ವಜ್ಞ ವಚನ 553 :
ಕತ್ತಲೆಯ ಠಾವಿಂಗೆ । ಉತ್ತಮವು ಜ್ಯೋತಿ ತಾ।
ಮತ್ತೆ ಪ್ರಜ್ವಲಿಸುವ ಠಾವು ಬೆಳಗಲು ।
ತ್ಯುತ್ತಮವಕ್ಕುದು ಸರ್ವಜ್ಞ||

ಸರ್ವಜ್ಞ ವಚನ 554 :
ಹತ್ತುತಲೆ ಕೆಂಪು । ಮತ್ತಾರುತಲೆ ಕರಿದು ।
ಹೆತ್ತವ ನೊಡಲ ನುರಿಸುವದು ।
ಕವಿಗಳಿದರರ್ಥವನು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 555 :
ಗಾಳಿ-ಧೂಳಿಯ ದಿನಕೆ । ಮಾಳೀಗೆ ಮನೆ ಲೇಸು ।
ಹೊಳೀಗೆಯು ತುಪ್ಪ ಉಣಲೇಸು ಬಾಯಿಗಂ ।
ವೀಳ್ಯವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 556 :
ಒರೆಯುಂಟು ಒರೆಯದದು। ಒರೆತಿಹರೆ ಒರೆಯುವದು।
ಕೆರೆಬಾವಿಯೊರತೆ ತಾನಲ್ಲ,ಕವಿಜನಗ।
ಳರಿತಿದನುಪೇಳಿ ಸರ್ವಜ್ಞ||

ಸರ್ವಜ್ಞ ವಚನ 557 :
ಬಲ್ಲಿದನು ನುಡಿದಿಹರೆ। ಬೆಲ್ಲವನು ಮೆದ್ದಂತೆ।
ಇಲ್ಲದ ಬಡವ ನುಡಿದರೆ ಬಾಯಿಂದ।
ಜೊಲ್ಲು ಬಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 558 :
ಪಂಚವಿಂಶತಿ ತತ್ವ । ಸಂಚಯದ ದೇಹವನು ।
ಹಂಚಿಂದು ಕಾಣಲರಿಯದಿರೆ ಭವ ಮುಂದೆ ।
ಗೊಂಚಲಾಗಿಹದು ಸರ್ವಜ್ಞ||

ಸರ್ವಜ್ಞ ವಚನ 559 :
ಕೂಡಿ ತಪ್ಪಲು ಬೇಡ। ಓಡಿ ಸಿಕ್ಕಲು ಬೇಡ।
ಆಡಿ ತಪ್ಪಿದರೆಇರಬೇಡ, ದುರುಳರನು।
ಕೂಡಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 560 :
ಲಿಂಗದಿಂ ಘನವಿಲ್ಲ । ಗಂಗೆಯಿಂ ಶುಚಿಯಿಲ್ಲ ।
ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ ।
ಜಂಗಮನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 561 :
ಗಂಡ ತನ್ನಯದೆಂಬ । ಲಂಡೆ ತನ್ನಯದೆಂಬ
ಖಂಡಪರಶುವಿನ ವರಪುತ್ರ – ನಾನು ನೆರೆ
ಕಂಡುದೆನೆ ಪೇಳ್ವೆ ಸರ್ವಜ್ಞ||

ಸರ್ವಜ್ಞ ವಚನ 562 :
ಹನುಮಂತನಿಂ ಲಂಕೆ । ಫಲ್ಗುಣನಿಂದ ಜಾಂಡವನ ।
ತ್ರಿನಯನಿಂ ತ್ರಿಪುರ ಕೆಟ್ಟಂತೆ ಜಗವು ಕುಂ ।
ಟಿಣಿಯಿಂದ ಕೆಡಗು ಸರ್ವಜ್ಞ||

ಸರ್ವಜ್ಞ ವಚನ 563 :
ಭಿತ್ತಿಯಾ ಚಿತ್ರದಲಿ ತತ್ವ ತಾ ನೆರೆದಿಹುದೇ ?
ಚಿತ್ರತ್ವ ತನ್ನ ನಿಜದೊಳಗೆ, ತ್ರೈ ಜಗದ
ತತ್ವ ತಾನೆಂದ ಸರ್ವಜ್ಞ||

ಸರ್ವಜ್ಞ ವಚನ 564 :
ಕುಲಗೆಟ್ಟವರ ಚಿಂತೆ । ಯೊಳಗಿರ್ಪರಂತೆಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕೆ – ಋಷಿಗಳು
ಕುಲಗೋತ್ರರುಗಳು ಸರ್ವಜ್ಞ||

ಸರ್ವಜ್ಞ ವಚನ 565 :
ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು – ಬಾಳುವು
ದಂತೆ ಕಂಡಯ್ಯ ಸರ್ವಜ್ಞ||

ಸರ್ವಜ್ಞ ವಚನ 566 :
ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
ಇಟ್ಟಾವಿಭೂತಿಯರಿಯದಿರೆ ಸೀಳಿದಾ
ಬಟ್ಟೆಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 567 :
ವಾರಣಾಸಿಗೆ ಹೋಹ । ಕಾರಣವದೇನಯ್ಯ।
ಕಾರಣಿಕ ಪುರುಷನೊಳಗಿರಲು ಅಲೆವುದಕೆ।
ಕಾರಣವ ಹೇಳು ಸರ್ವಜ್ಞ||

ಸರ್ವಜ್ಞ ವಚನ 568 :
ಅಂಬಾಳ ನೆಲೆಯೆಂದು । ನಂಬಿ ಬೆನ್ನಲಿ ಬಂದು।
ಅಂಬೆಂದು ಬೆನ್ನ ಗರಿ ತೋರ್ಪುದಾ ಮಿಗವ ।
ನಿಂಬರಿದು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 569 :
ಅಂಧಕನು ನಿಂದಿರಲು । ಮುಂದೆ ಬಪ್ಪರ ಕಾಣ ।
ಬಂದರೆ ಬಾರೆಂದೆನರ್ಪ ಗರ್ವಿಯಾ ।
ದಂದುಗನೆ ಬೇಡ ಸರ್ವಜ್ಞ||

ಸರ್ವಜ್ಞ ವಚನ 570 :
ಅಕ್ಕಿಯಿಂ ತೆಂಗು ಜಾ । ನಕಿಯಿಂದ ಲಂಕೆಯೂ ।
ಮೆಕ್ಕಿಯಿಂ ಕಣಕ ಕೆಡುವಂತೆ ದುರ್ಬುದ್ಧಿ ।
ಹೊಕ್ಕಲ್ಲಿ ಕೇಡು ಸರ್ವಜ್ಞ||

ಸರ್ವಜ್ಞ ವಚನ 571 :
ಇದ್ದಲಿಂ ಕರಿಯಿಲ್ಲ । ಬುದ್ಢಿಯಿಂ ಹಿರಿದಿಲ್ಲ ।
ವಿದ್ಯದಿಂದಧಿಕ ಧನವಿಲ್ಲ ದೈವತಾ ।
ರುದ್ರನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 572 :
ಹಿಡಿಹಣ್ಣು ಕುಂಬಳಕೆ। ಮಿಡಿಹಣ್ಣು ಆಲಕ್ಕೆ ।
ಅಡಿನೆಳಲೊಳಿಪ್ಪ ಪಾಂಥ ತಾ ಕೆಡದಂತೆ ।
ಮೃಡನು ಮಾಡಿಹನು ಸರ್ವಜ್ಞ||

ಸರ್ವಜ್ಞ ವಚನ 573 :
ತರುಕರವು ಇರದೂರು । ನರಕಭಾಜನಮಕ್ಕು ।
ತರುಕರುಂಟಾದರುಣಲುಂಟು, ಜಗವೆಲ್ಲ ।
ತರುಕರವೇ ದೈವ ಸರ್ವಜ್ಞ||

ಸರ್ವಜ್ಞ ವಚನ 574 :
ಎಲವು-ಕರಳ್-ನರ-ತೊಗಲು । ಬಿಲರಂದ್ರ-ಮಾಂಸದೊಳು ।
ಹಲತೆರೆದ ಮಲವು ಸುರಿದಿಲು । ಕುಲಕ್ಕಿನ್ನು ।
ಬಲವೆಲ್ಲಿ ಹೇಳು ಸರ್ವಜ್ಞ||

ಸರ್ವಜ್ಞ ವಚನ 575 :
ಹಾಲು ಇಲ್ಲದ ಊಟ । ಬಾಲೆಯರ ಬರಿ ನೋಟ ।
ಕಾಲಿಲ್ಲದವನ ಹರಿದಾಟ ಕಂಗಳನ ।
ಕೋಲು ಕಳೆದಂತೆ ಸರ್ವಜ್ಞ||

ಸರ್ವಜ್ಞ ವಚನ 576 :
ಆಶೆಯಿಲ್ಲನ ದೋಸೆ । ಮೀಸೆ ಇಲ್ಲದ ಮೋರೆ ।
ಬಾಸಿಂಗ ಹರಿದ ಮದುವೆಯು ಇವು ಮೂರೂ
ಹೇಸಿ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 577 :
ಅಬ್ಬೆಗರೆಷಣವೇಕೆ ? ಕಬ್ಬೇಕೆ ಬೋಡಂಗೆ ।
ನಿಬ್ಬಣವು ಏಕೆ ಕುರುಡಂಗೆ ವನದೊಳಗೆ ।
ಹೆಬ್ಬುಲಿದೇಕೆ ಸರ್ವಜ್ಞ||

ಸರ್ವಜ್ಞ ವಚನ 578 :
ತುಂಬಿದಾ ಕೆರೆ ಭಾವಿ । ತುಂಬಿದಂತಿರುವದೇ ।
ನಂಬಿರಲು ಬೇಡ ಲಕ್ಶ್ಮಿಯನು ಬಡತನವು ।
ಬೆಂಬಿಡದೆ ಬಹುದು ಸರ್ವಜ್ಞ||

ಸರ್ವಜ್ಞ ವಚನ 579 :
ಇಬ್ಬರೊಳಗಿನ ಕಿಚ್ಚು । ಒಬ್ಬರರಿಹದೆ ಹೊತ್ತಿ ।
ಹಬ್ಬುತ್ತಲಿಬ್ಬರೊಳಬ್ಬ ಬೆಂದರಿ ।
ನ್ನೊಬ್ಬಗದು ಹಬ್ಬ ಸರ್ವಜ್ಞ||

ಸರ್ವಜ್ಞ ವಚನ 580 :
ಕೋಳಿಗಳ ಹಂದಿಗಳ । ಮೇಳದಲಿ ತಾ ಸಾಕಿ ।
ಏಳುತಲೆ ಕರೆದು ಬಡಿತಿಂದ ಪಾಪಿಗಳ ।
ಬಾಳೆಲ್ಲ ನರಕ ಸರ್ವಜ್ಞ||

ಸರ್ವಜ್ಞ ವಚನ 581 :
ಕ್ಷೇತ್ರವರಿಯದ ಬೀಜ ಪಾತ್ರವರಿಯದ ದಾನ
ಸಾತ್ವಿಕವನರಿಯದನ ಧರ್ಮದರ್ದಿಗನು
ಮೂತ್ರಗೈದಂತೆ ಸರ್ವಜ್ಞ||

ಸರ್ವಜ್ಞ ವಚನ 582 :
ಅಪಮಾನದೂಟದಿಂ | ದುಪವಾಸ ಕರ ಲೇಸು
ನೃಪನೆದ್ದು ಬಡಿವ ಅರಸನೋಲಗದಿಂದ
ತಪವಿಹುದೆ ಲೇಸು ಸರ್ವಜ್ಞ||

ಸರ್ವಜ್ಞ ವಚನ 583 :
ಬಿತ್ತದ ಹೊಲ ಹೊಲ್ಲ। ಮೆತ್ತದ ಮನೆ ಹೊಲ್ಲ।
ಎತ್ತ ಬಂದತ್ತ ತಿರುಗುವ ಮಗ ಹೊಲ್ಲ।
ಬತ್ತಲಿರ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 584 :
ಕಣ್ಣುಂಟು ಕಾಣದದು। ಕಣ್ದೆರೆದು ನೋಡುವುದು।
ಮಣ್ಣಿನಲಿ ಹುಟ್ಟಿ ಬೆಳಗಿಹುದು, ಇದನು ಬ।
ಲ್ಲಣ್ಣಗಳು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 585 :
ಎಲ್ಲರನು ಬೇಡಿ । ಹಲ್ಲು ಬಾಯಾರುವು ದೆ
ಬಲ್ಲಂತೆ ಶಿವನ ಭಜಿಸಿದೊಡೆ – ಶಿವ ದಾನಿ
ಇಲ್ಲನ್ನಲರೆಯ ಸರ್ವಜ್ಞ||

ಸರ್ವಜ್ಞ ವಚನ 586 :
ಅಂದು ಕಾಮನ ಹರನು । ಕೊಂದನೆಂಬುದು ಪುಸಿಯು ।
ಇಂದುವದನೆಯರ ಕಡೆಗಣ್ಣ ನೋಟದಲಿ ।
ನಿಂದಿಹನು ಸ್ಮರನು ಸರ್ವಜ್ಞ||

ಸರ್ವಜ್ಞ ವಚನ 587 :
ಆಸನದ ಲುಂಬುವದು । ಸೂಸುವದು ಬಾಯಲ್ಲಿ ।
ಬೇಸರದ ಹೊತ್ತು ಕೊಲುವದು, ಕವಿಗಳೊಳು ।
ಸಾಸಿಗರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 588 :
ಹೆಣ್ಣಿನಾ ಹೃದಯದಾ । ತಣ್ಣಗಿಹ ನೀರಿನಾ ।
ಬಣ್ಣಿಸುತ ಕುಣಿವ ಕುದುರೆಯಾ ನೆಲೆಯ ಬ ।
ಲ್ಲಣ್ಣಗಳು ಯಾರು ಸರ್ವಜ್ಞ||

ಸರ್ವಜ್ಞ ವಚನ 589 :
ಹೊಗೆಯ ತಿಂಬುವದೊಂದು । ಸುಗುಣವೆಂದೆನಬೇಡ ।
ಹೊಗೆಯ ಕುಡಿದೆಲೆಯನಗಿದ ಬಾಯ್ಸಿಂದಿಯಾ ।
ಲಗಳೆಯಂತಿಹುದು ಸರ್ವಜ್ಞ||

ಸರ್ವಜ್ಞ ವಚನ 590 :
ಬೇಡನಾ ಕೆಳೆಯಿಂದ । ಕೇಡು ತಪ್ಪಬಹುದೇ ।
ನೋಡಿ ನಂಬಿದರೆ ಕಡೆಗವನು ಕೇಡನ್ನು ।
ಮಾಡದಲೆ ಬಿಡನು ಸರ್ವಜ್ಞ||

ಸರ್ವಜ್ಞ ವಚನ 591 :
ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವದು ।
ಬೆಸಿ ಲಿಂಗ ಹಸುರೆಳಸದಿರ್ಪ ಹನಿಯಾರಿ
ಹಸಿದು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 592 :
ಎತ್ತ ಹೋದರೂ ಮನವ । ಹತ್ತಿಕೊಂಡೇ ಬಹುದು ।
ಮತ್ತೊಬ್ಬ ಸೆಳೆದುಕೊಳಲರಿಯದಾ ।
ಜ್ಞಾನದಾ । ಬಿತ್ತು ಲೇಸೆಂದು ಸರ್ವಜ್ಞ||

ಸರ್ವಜ್ಞ ವಚನ 593 :
ಒಂದು ಜೀವವನೊಂದು । ತಿಂದು ಉಳಿದಿಹಜಗದೊ ।
ಳೆಂದೂ ಕೊಲಲಾಗದೆಂಬಾ ಜಿನಧರ್ಮ ।
ನಿಂದಿಹುದು ಹೇಗೆ ಸರ್ವಜ್ಞ||

ಸರ್ವಜ್ಞ ವಚನ 594 :
ಸತ್ಯವ ನುಡಿವಾತ | ಸತ್ತವನೆನಬೇಡ
ಹೆತ್ತ ತಾಯ್ ಮಗನ ಕರೆವಂತೆ – ಸ್ವರ್ಗದವ
ರಿತ್ತ ಬಾಯೆಂಬ ಸರ್ವಜ್ಞ||

ಸರ್ವಜ್ಞ ವಚನ 595 :
ಕಲ್ಲಿನಲಿ ಮಣ್ಣಿನಲಿ । ಮುಳ್ಳಿನಾ ಮೊನಯಲಿ
ಎಲ್ಲ ನೆನೆದಲ್ಲಿ ಶಿವನಿರ್ಪ ಅವನೀ ।
ನಿದ್ದಲ್ಲಿಯೇ ಇರ್ಪ ಸರ್ವಜ್ಞ||

ಸರ್ವಜ್ಞ ವಚನ 596 :
ಜಾರತ್ವವೆಂಬುವದು । ಕ್ಷೀರಸಕ್ಕರೆಯಂತೆ ।
ಊರಲ್ಲಿ ಒಬ್ಬರರಿತಿಹರೆ ಬೇವಿನಾ ।
ಸಾರದಂತಿಹುದು ಸರ್ವಜ್ಞ||

ಸರ್ವಜ್ಞ ವಚನ 597 :
ಬೊಮ್ಮವನು ಅರಿದಿಹರೆ। ಸುಮ್ಮನಿದ್ದಿರಬೇಕು।
ಬೊಮ್ಮವನು ಅರಿದು ಉಸುರಿದರೆ ಕಳಹೋಗಿ।
ಕೆಮ್ಮಿ ಸತ್ತಂತೆ ಸರ್ವಜ್ಞ||

ಸರ್ವಜ್ಞ ವಚನ 598 :
ಒಂದನ್ನು ಎರಡೆಂಬ । ಹಂದಿ ಹೆಬ್ಬುಲಿಯೆಂಬ ।
ನಿಂದ ದೇಗುಲದ ಮರವೆಂಬ ಮೂರ್ಖ ತಾ ।
ನೆಂದಂತೆ ಎನ್ನಿ ಸರ್ವಜ್ಞ||

ಸರ್ವಜ್ಞ ವಚನ 599 :
ಮಲವು ದೇಹದಿ ಸೋರಿ । ಹೊಲಸು ಮಾಂಸದಿ ನಾರಿ ।
ಹೊಲೆ ವಿಲದ ಹೇಯ ದೇಹದಲಿ ಹಾರುವರು ।
ಕುಲವನೆಣಿಸುವರೆ ಸರ್ವಜ್ಞ||

ಸರ್ವಜ್ಞ ವಚನ 600 :
ಆಗುಹೋಗುಗಳ ನೆರೆ । ರಾಗ ಭೋಗಗಳು ।
ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ ।
ಹೋಗಿಕ್ಕು ಕಾಣೊ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post