Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (51-100)

ಸರ್ವಜ್ಞ ವಚನ 51 :

ಇಂದ್ರನಾನೆಯನೇರೆ । ಒಂದುವನು ಕೊಡಲರೆಯ
ಚಂದ್ರಶೇಖರನು ಮುದಿಯೆತ್ತ – ನೇರೆ ಬೇ
ಕೆಂದುದನು ಕೊಡುವ ಸರ್ವಜ್ಞ||


ಸರ್ವಜ್ಞ ವಚನ 52 :
ಭಿಕ್ಷವ ತಂದಾದೊಡಂ ಭಿಕ್ಷವನಿಕ್ಕುಣಬೇಕು
ಅಕ್ಷಯಪದವು ತನಗಕ್ಕು ಇಕ್ಕದೊಡೆ
ಭಿಕ್ಷುಕನೆಯಕ್ಕು ಸರ್ವಜ್ಞ||


ಸರ್ವಜ್ಞ ವಚನ 53 :
ಗುರುವಿನಾ ಸೇವೆಯನು । ಹಿರಿದಾಗಿ ಮಾಡದಲೆ ।
ಹರಿದಾಡಿ ಮುಕ್ತಿ ಪಡೆಯುವಡೆ ಸ್ವರ್ಗ ತಾ ।
ಹಿರಿಯ ತವರಹುದೆ ಸರ್ವಜ್ಞ||


ಸರ್ವಜ್ಞ ವಚನ 54 :
ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
ಹಿಂಗದಿರುತಿಹುದು ಸರ್ವಜ್ಞ||


ಸರ್ವಜ್ಞ ವಚನ 55 :
ನಿದ್ದೆಯಲಿ ಬುದ್ಧಿಲ್ಲ ಭದ್ರೆಗಂ ತಾಯಿಲ್ಲ ।
ಕದ್ದು ಕೊಂಬಂಗೆ ಬದುಕಿಲ್ಲ ।
ಮರಣಕ್ಕೆ ಮದ್ದುಗಳೆ ಇಲ್ಲ ಸರ್ವಜ್ಞ||


ಸರ್ವಜ್ಞ ವಚನ 56 :
ಅರಿತು ಮಾಡಿದ ಪಾಪ । ಮರೆತರದು ಪೋಪುದೇ ।
ಮರೆತರಾಮರವ ಬಿಡಿಸುವದು, ಕೊರೆತೆಯದು ।
ಅರಿತು ನೋಡೆಂದ ಸರ್ವಜ್ಞ||


ಸರ್ವಜ್ಞ ವಚನ 57 :
ಎತ್ತಾಗಿ ತೊತ್ತಾಗಿ । ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ – ಗುರುವಿನ
ಹತ್ತಿಲಿರು ಎಂದು ಸರ್ವಜ್ಞ||


ಸರ್ವಜ್ಞ ವಚನ 58 :
ಒಂದನ್ನು ಎರಡೆಂಬ। ಹಂದಿ ಹೆಬ್ಬುಲಿಯೆಂಬ।
ನಿಂದ ದೇಗುಲವು ಮರನೆಂಬ ಮೂರ್ಖ ತಾ।
ನೆಂದಂತೆ ಎನ್ನಿ ಸರ್ವಜ್ಞ||


ಸರ್ವಜ್ಞ ವಚನ 59 :
ಕೊಡುವಾತನೇ ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವನರಿದು ಸರ್ವಜ್ಞ||


ಸರ್ವಜ್ಞ ವಚನ 60 :
ಉಕ್ಕುವದು ಸೊಕ್ಕುವದು ಕೆಕ್ಕನೇ ಕೆಲೆಯುವದು
ರಕ್ಕಸನವೋಲು ಮದಿಸುವದು ಒಂದು ಸೆರೆ
ಯಕ್ಕಿಯಾ ಗುಣವು ಸರ್ವಜ್ಞ||


ಸರ್ವಜ್ಞ ವಚನ 61 :
ಅಡಿಯನಿಮ್ಮಡಿ ಮಾಡಿ ।
ಒಡಕೂಡಿ ಹನ್ನೊಂದು ತಡೆಯದಿನ್ನೂರು ಹತ್ತಕ್ಕೆ ಭಾಗಿಸಲು ।
ನಡೆವ ಗಳಿಗಕ್ಕು ಸರ್ವಜ್ಞ||


ಸರ್ವಜ್ಞ ವಚನ 62 :
ನೋಡಿದರೆ ಎರಡೂರು । ಕೂಡಿದಾ ಮಧ್ಯದಲಿ।
ಮೂಡಿಹ ಸ್ಮರನ ಮನೆಯಲ್ಲಿ ಜಗವು ಬಿ ।
ದ್ದಾಡುತಲಿಹುದು ಸರ್ವಜ್ಞ||


ಸರ್ವಜ್ಞ ವಚನ 63 :
ತಾಗಿ ಬಾಗುವದರಿಂ । ತಾಗದಿಹುದು ಲೇಸು ।
ತಾಗಿ ಮೂಗೊಡದು ಬುಗುಟಿದ್ದು ಬಾಗುವದು ।
ಹೇಗನಾ ಗುಣವು ಸರ್ವಜ್ಞ||


ಸರ್ವಜ್ಞ ವಚನ 64 :
ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ||


ಸರ್ವಜ್ಞ ವಚನ 65 :
ಒಕ್ಕಲಿಕ ನೋದಲ್ಲ । ಬೆಕ್ಕು ಹೆಬ್ಬುಲಿಯಲ್ಲ ।
ಎಕ್ಕಿಯಾ ಗಿಡವು ಬನವೆಲ್ಲ ಇವು ಮೂರು ।
ಲೆಕ್ಕದೊಳಗೆಲ್ಲ ಸರ್ವಜ್ಞ||


ಸರ್ವಜ್ಞ ವಚನ 66 :
ಮಾತು ಬಲ್ಲಹ ತಾನು । ಸೋತುಹೋಹುದ ಲೇಸು ।
ಮಾತಿಂಗೆ ಮಾತು ಮಥಿಸಲ್ಕೆ ವಿಧಿ ಬಂದು ।
ಆತುಕೊಂಡಿಹುದು ಸರ್ವಜ್ಞ||


ಸರ್ವಜ್ಞ ವಚನ 67 :
ಅಕ್ಕರವ ಕಲಿತಾತ ಒಕ್ಕಲನು ತಿನಕಲಿತ
ಲೆಕ್ಕವ ಕಲಿತ ಕರಣಿಕನು ನರಕದಲಿ
ಹೊಕ್ಕಿರಲು ಕಲಿತ ಸರ್ವಜ್ಞ||


ಸರ್ವಜ್ಞ ವಚನ 68 :
ಕಳ್ಳನೂ ಒಳ್ಳಿದನು । ಎಲ್ಲ ಜಾತಿಯೊಳಿಹರು ।
ಕಳ್ಳನೊಂದೆಡೆಗೆ ಉಪಕಾರಿ, ಪಂಚಾಳ ।
ನೆಲ್ಲರಲಿ ಕಳ್ಳ ಸರ್ವಜ್ಞ||


ಸರ್ವಜ್ಞ ವಚನ 69 :
ಮೊಬ್ಬಿನಲಿ ಕೊಬ್ಬಿದರು । ಉಬ್ಬಿ ನೀ ಬೀಳದಿರು ।
ಒಬ್ಬರಲಿ ಬಾಳ ಬಂದಲ್ಲಿ ಪರಸತಿಯು ।
ತಬ್ಬ ಬೇಡೆಂದ ಸರ್ವಜ್ಞ||


ಸರ್ವಜ್ಞ ವಚನ 70 :
ಪಾಪ – ಪುಣ್ಯಗಳೆಂಬ । ತಿಣ್ಣ ಭೇದಗಳಿಂದ ।
ತಣ್ಣಗೀ ಜಗವು ನಡೆದಿಹುದು ಅಲ್ಲದಡ ।
ನುಣ್ಣಗಾಗಿಹುದು ಸರ್ವಜ್ಞ||


ಸರ್ವಜ್ಞ ವಚನ 71 :
ಉರಿ ಬಂದು ಬೇಲಿಯನು । ಹರಿದು ಹೊಕ್ಕುದ ಕಂಡೆ।
ಅರಿಯದದು ಬಗೆಗೆ ಕವಿಕುಲದ ಶ್ರೇಷ್ಠರುಗ।
ಳರಿದರಿದ ಪೇಳಿ ಸರ್ವಜ್ಞ||


ಸರ್ವಜ್ಞ ವಚನ 72 :
ತತ್ವಮಸಿ ಹುಸಿದಿಹರೆ । ಮುತ್ತೊಡೆದು ಬೆಸದಿಹರೆ ।
ಉತ್ತಮರು ಕೆಡಕ ಕಲಿಸಿದರೆ ಲೋಕ ತಾ ।
ನೆತ್ತ ಸಾಗುವದು ಸರ್ವಜ್ಞ||


ಸರ್ವಜ್ಞ ವಚನ 73 :
ಸತ್ತಕತ್ತೆಯ ಹೊತ್ತ । ಕೆತ್ತಣದ ಹೊಲೆಯನವ ।
ಉತ್ತಮನು ಎಂದು ಹೆರರೊಡನೆ ಹೊತ್ತವನೆ ।
ನಿತ್ಯವೂ ಹೊಲೆಯ ಸರ್ವಜ್ಞ||


ಸರ್ವಜ್ಞ ವಚನ 74 :
ವಿಷಯದಾ ಬೇರನ್ನು । ಬಿಸಿಮಾಡಿ ಕುಡಿದಾತ ಪಶು
ಪತಿಯು ಅಕ್ಕ ಶಶಿಯಕ್ಕು ಮೈಯ್ಬಣ್ಣ
ಮಿಸಿನಿಯಂತಕ್ಕು ಸರ್ವಜ್ಞ||


ಸರ್ವಜ್ಞ ವಚನ 75 :
ಹೇಡಿಂಗೆ ಹಿರಿತನವು। ಮೂಢಂಗೆ ಗುರುತನವು।
ನಾಡ ನೀಚಂಗೆ ದೊರೆತನವು, ದೊರೆತಿಹರೆ।
ನಾಡೆಲ್ಲ ಕೆಡುಗು ಸರ್ವಜ್ಞ||


ಸರ್ವಜ್ಞ ವಚನ 76 :
ಅಗ್ಗ ಸುಗ್ಗಿಗಳುಂಟು । ಡೊಗ್ಗೆ ಮಜ್ಜಿಗೆಯುಂಟು।
ಹೆಗ್ಗುಳದ ಕಾಯಿ ಮೆಲಲುಂಟು ಮೂಢನಾ।
ಡೆಗ್ಗೆನ್ನಬಹುದೆ ಸರ್ವಜ್ಞ||


ಸರ್ವಜ್ಞ ವಚನ 77 :
ನಾಲ್ಕು ಹಣವುಳ್ಳತನಕ । ಪಾಲ್ಕಿಯಲಿ ಮೆರೆದಿಕ್ಕು ।
ನಾಲ್ಕು ಹಣ ಹೋದ ಮರುದಿನವೆ,
ಕೋಳದಲಿ ಸಿಲ್ಕಿದಂತಕ್ಕು ಸರ್ವಜ್ಞ||


ಸರ್ವಜ್ಞ ವಚನ 78 :
ಮೊಸರು ಇಲ್ಲದ ಊಟ । ಪಸರವಿಲ್ಲದ ಕಟಕ ।
ಹಸನವಿಲ್ಲದಳ ರತಿಕೂಟ ಜಿನನ ಬಾಯ್ ।
ಕಿಸುಕುಳದಂತೆ ಸರ್ವಜ್ಞ||


ಸರ್ವಜ್ಞ ವಚನ 79 :
ಅತ್ತೆ ಮಾಡಿದ ತಪ್ಪು । ಗೊತ್ತಿಲ್ಲದಡಗಿಹುದು ।
ತೊತ್ತದನು ಮಾಡಿದಾಕ್ಷಣದಿ ಸುತ್ತಲುಂ ।
ಗೊತ್ತಿಹುದು ನೋಡ ಸರ್ವಜ್ಞ||


ಸರ್ವಜ್ಞ ವಚನ 80 :
ಕರೆವಾಸೆ ಗೊಲ್ಲಂಗೆ । ನಿರಿಯಾಸೆ ಸೂಳೆಗೆ।
ಒರೆಯಾಸೆ ಕತ್ತಿಯಲಗಿಂಗೆ, ಹಾದರಕೆ।
ಮರೆಯಾಟದಾಸೆ, ಸರ್ವಜ್ಞ||


ಸರ್ವಜ್ಞ ವಚನ 81 :
ಮುತ್ತು ಮೂಗುತಿಯೇಕೆ। ಮತ್ತೆ ಹರಳುಗಳೇಕೆ।
ಕತ್ತೆಯ ಕೊಳೆಗೆ ಮಡಿಯೇಕೆ, ದೊರೆತನವು।
ತೊತ್ತಿಗೇಕೆಂದ ಸರ್ವಜ್ಞ||


ಸರ್ವಜ್ಞ ವಚನ 82 :
ಎಲುವಿಲ್ಲ ನಾಲಿಗೆಗೆ । ಬಲವಿಲ್ಲ ಬಡವಂಗೆ ।
ತೊಲೆ ಕಂಭವಿಲ್ಲ ಗಗನಕ್ಕೆ, ದೇವರಲಿ ।
ಕುಲಭೇದವಿಲ್ಲ ಸರ್ವಜ್ಞ||


ಸರ್ವಜ್ಞ ವಚನ 83 :
ಊರು ಸನಿಹದಲಿಲ್ಲ। ನೀರೊಂದು ಗಾವುದವು।
ಸೇರಿ ನಿಲ್ಲುವರೆ ನೆಳಲಿಲ್ಲ, ಬಡಗಲ ।
ದಾರಿ ಬೇಡೆಂದ ಸರ್ವಜ್ಞ||


ಸರ್ವಜ್ಞ ವಚನ 84 :
ಕೋಡಗವು ಕುದುರೆಯಲಿ। ನೋಡನೋಡುತ ಹುಟ್ಟಿ।
ಕಾಡಾನೆಗೆರಡು ಗರಿ ಮೂಡಿ ಗಗನದಿರಿ।
ದಾಡುವುದ ಕಂಡೆ ಸರ್ವಜ್ಞ||


ಸರ್ವಜ್ಞ ವಚನ 85 :
ಬಟ್ಟಲದ ಬಾಯಂತೆ। ಹುಟ್ಟುವುದು ಜಗದೊಳಗೆ।
ಮುಟ್ಟದದು ತನ್ನ ಹೆಂಡಿರನು, ಕವಿಗಳಲಿ।
ದಿಟ್ಟರಿದ ಪೇಳಿ ಸರ್ವಜ್ಞ||


ಸರ್ವಜ್ಞ ವಚನ 86 :
ತನ್ನ ಸುತ್ತಲು ಮಣಿಯು।ಬೆಣ್ಣೆ ಕುಡಿವಾಲುಗಳ।
ತಿನ್ನದಲೆ ಹಿಡಿದು ತರುತಿಹುದು ಕವಿಗಳಿದ ।
ನನ್ನಿಯಿಂ ಪೇಳಿ ಸರ್ವಜ್ಞ||


ಸರ್ವಜ್ಞ ವಚನ 87 :
ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
ಸುಳ್ಳೆನ್ನಬಹುದೆ? ಸರ್ವಜ್ಞ||


ಸರ್ವಜ್ಞ ವಚನ 88 :
ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
ದೇಗುಲವೆ ಇಲ್ಲ ಸರ್ವಜ್ಞ||


ಸರ್ವಜ್ಞ ವಚನ 89 :
ಬಿಂದುವ ಬಿಟ್ಟು ಹೋ । ದಂದು ಬಸುರಾದಳವ
ಳಂದದಿಯಷ್ಟಾದಶ ಮಾಸ – ಉದರದಲಿ
ನಿಂದು ನಾ ಬೆಳೆದೆ ಸರ್ವಜ್ಞ||


ಸರ್ವಜ್ಞ ವಚನ 90 :
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ||


ಸರ್ವಜ್ಞ ವಚನ 91 :
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
ಭವ ಪುಶ್ಪದಿಂ ಶಿವಪೂಜೆ ಮಾಡುವರ
ದೇವರೆಂದೆಂಬೆ ಸರ್ವಜ್ಞ||


ಸರ್ವಜ್ಞ ವಚನ 92 :
ಹಲ್ಲಮೇಲಿನ ಕೆಂಪು । ಕಲ್ಲ ಮೇಲಿನ ಹಾಂಸೆ ।
ಮಲ್ಲಿಗೆಯ ಅರಳತನಿಗಂಪು ಹೊಸಮೋಹ ।
ನಿಲ್ಲವು ಕಾಣಾ ಸರ್ವಜ್ಞ||


ಸರ್ವಜ್ಞ ವಚನ 93 :
ನಿಜ ವಿಜಯ ಬಿಂದುವಿನ । ಧ್ವಜಪತಾಕೆಯ ಬಿರುದು ।
ಅಜ ಹರಿಯು ನುತಿಸಲರಿಯರಾ ಮಂತ್ರವನು ।
ನಿಜಯೋಗಿ ಬಲ್ಲ ಸರ್ವಜ್ಞ||


ಸರ್ವಜ್ಞ ವಚನ 94 :
ಮೂರು ಗಾವುದವನ್ನು ಹಾರಬಹುದೆಂದವರ ।
ಹಾರಬಹುದೆಂದು ಎನಬೇಕು, ಮೂರ್ಖನಾ ।
ಹೋರಾಟ ಸಲ್ಲ ಸರ್ವಜ್ಞ||


ಸರ್ವಜ್ಞ ವಚನ 95 :
ಹಂಗಿನ ಹಾಲಿನಿಂ । ದಂಬಲಿಯ ತಿಳಿ ಲೇಸು।
ಭಂಗಬಟ್ಟುಂಬ ಬಿಸಿಯಿಂದ ತಿರಿವರ।
ಸಂಗವೇ ಲೇಸು ಸರ್ವಜ್ಞ||


ಸರ್ವಜ್ಞ ವಚನ 96 :
ನಡೆಯುವುದೊಂದೇ ಭೂಮಿ ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ
ನಡುವೆ ಎತ್ತಣದು? ಸರ್ವಜ್ಞ||


ಸರ್ವಜ್ಞ ವಚನ 97 :
ನಲ್ಲೆತ್ತು ಬಂಡಿ ಬಲ । ವಿಲ್ಲದಾ ಆರಂಭ ।
ಕಲ್ಲು ಕಳೆಗಳನು ಬಿಟ್ಟವನು ಹೊಲದೊಳಗೆ ।
ಹುಲ್ಲನೇ ಬೆಳೆವ ಸರ್ವಜ್ಞ||


ಸರ್ವಜ್ಞ ವಚನ 98 :
ಕಾಯಕವು ಉಳ್ಳವಕ । ನಾಯಕನು ಎನಿಸಿಪ್ಪ ।
ಕಾಯಕವು ತೀರ್ದ ಮರುದಿನವೆ, ಸುಡುಗಾಡ ।
ನಾಯಕನು ಎನಿಪ ಸರ್ವಜ್ಞ||


ಸರ್ವಜ್ಞ ವಚನ 99 :
ನಲ್ಲ ಒಲ್ಲಿಯನೊಲ್ಲ । ನೆಲ್ಲಕ್ಕಿ ಬೋನೋಲ್ಲ ।
ಅಲ್ಲವನು ಒಲ್ಲ । ಮೊಸರೊಲ್ಲ ಯಾಕೊಲ್ಲ ।
ಇಲ್ಲದಕೆ ಒಲ್ಲ ಸರ್ವಜ್ಞ||


ಸರ್ವಜ್ಞ ವಚನ 100 :
ಪ್ರಥಮದಲಿ ಹುಲಿಯಂತೆ। ದ್ವಿತಿಯದಲಿ ಇಲಿಯಂತೆ।
ತೃತಿಯದಲಿ ತಾನು ಕಪಿಯಂತೆ, ಕವಿಗಳಲಿ ।
ಮತಿವಂತರರುಹಿ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post