Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (451-500)

ಸರ್ವಜ್ಞ ವಚನ 451 :
ವಿದ್ಯೆಕ್ಕೆ ಕಡೆಯಿಲ್ಲ । ಬುದ್ಧಿಗೆ ಬೆಲೆಯೆಯಿಲ್ಲ ।
ಛಿದ್ರಿಸುವವಗೆ ಗತಿಯಿಲ್ಲ ಮರಣಕ್ಕೆ ।
ಮದ್ದುಗಳೆ ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 452 :
ಓದಿದಾ ಓದು ತಾ , ವೇದ ಕಬ್ಬಿನ ಸಿಪ್ಪೆ
ಓದಿನಾ ಒಡಲನರಿಯದಿಹರೆ , ಸಿಪ್ಪೆ ಕ
ಬ್ಬಾದಂತೆ ಕಾಣೋ ಸರ್ವಜ್ಞ||

ಸರ್ವಜ್ಞ ವಚನ 453 :
ಅಂಬುದಿಯ ಗಾಢವನು । ಅಂಬರದ ಕಲಹವನು ।
ಶಂಭುವಿನ ಮಹಿಮೆ, ಸತಿಯರಾ ಹೃದಯದಾ
ಇಂಭರಿದವರಾರು ಸರ್ವಜ್ಞ||

ಸರ್ವಜ್ಞ ವಚನ 454 :
ಒಂದರೊಳಗೆಲ್ಲವೂ। ಸಂದಿಸಿರುವದನು ಗುರು।
ಚೆಂದದಿ ತೋರಿ ಕೊಡದಿರೆ ಶಿಷ್ಯನಂ।
ಕೊಂದೆನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 455 :
ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
ತಾನೆಂಬುದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 456 :
ಅಟ್ಟರಿ ಅದರ ಘನ । ಸುಟ್ಟರೂ ಕುಂಟಣಿ ಘನ ।
ಇಟ್ಟಗೆಯ ಮೂಗನರಿದರೂ ಮೂರುಭವ ।
ಕಟ್ಟು ಕೂಡುವವು ಸರ್ವಜ್ಞ||

ಸರ್ವಜ್ಞ ವಚನ 457 :
ರಸಿಕನಾಡಿದ ಮಾತು । ಶಶಿಯುದಿಸಿ ಬಂದಂತೆ ।
ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂರ್ದಸಿಯು
ಬಡಿದಂತೆ ಸರ್ವಜ್ಞ||

ಸರ್ವಜ್ಞ ವಚನ 458 :
ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು – ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ||

ಸರ್ವಜ್ಞ ವಚನ 459 :
ಭಂಗಿಯನು ಸೇದುವನ । ಭಂಗವನು ಏನೆಂಬೆ ।
ಭಂಗಿಯಾಗುಂಗು ತಲೆಗೇರಕಾಡುವಾ।
ಮಂಗನಂತಿಹನು ಸರ್ವಜ್ಞ||

ಸರ್ವಜ್ಞ ವಚನ 460 :
ಕಾಲಿಲ್ಲದಲೆ ಹರಿಗು । ತೋಳಿಲ್ಲದಲೆ ಹೊರುಗು ।
ನಾಲಿಗೆಯಿಲ್ಲದಲೆ ಉಲಿಯುವದು ಕವಿಕುಲದ ।
ಮೇಲುಗಳೇ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 461 :
ಹೊಲೆಯಿಲ್ಲ ಅರಿದಂಗೆ। ಬಲವಿಲ್ಲ ಬಡವಂಗೆ।
ತೊಲೆಕಂಬವಿಲ್ಲ ಗಗನಕ್ಕೆ, ಯೋಗಿಗೆ।
ಕುಲವೆಂಬುದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 462 :
ಯಾತರದು ಹೂವೇನು । ನಾತರದು ಸಾಲದೇ ।
ಜಾತಿ ವಿಜಾತಿಯೆನ್ನಬೇಡ ।
ದೇವನೊಲಿ ದಾತನೇ ಸರ್ವಜ್ಞ||

ಸರ್ವಜ್ಞ ವಚನ 463 :
ಹದ ಬೆದೆಯಲಾರಂಭ । ಕದನಲಿ ಕೂರಂಬ ।
ನದಿ ಹಾಯುವಲಿ ಹರಗೋಲ ಮರೆತು ।
ವಿಧಿಯ ಬೈದರೇನು ಫಲ ಸರ್ವಜ್ಞ||

ಸರ್ವಜ್ಞ ವಚನ 464 :
ಗಂಡಾಗಬೇಕೆಂದು । ಪಿರಿಂಡವ ನುಂಗಲು
ಲಂಡೆ ಮಾಳ್ವೆಯೊಳು ಜನಿಸಿ – ಲೋಕದೊಳು
ಕಂಡುದನೆ ಪೇಳ್ವೆ ಸರ್ವಜ್ಞ||

ಸರ್ವಜ್ಞ ವಚನ 465 :
ಆರಾರ ನಂಬುವಡೆ । ಆರಯ್ದು ನಂಬುವದು ।
ನಾರಾಯಣನಿಂದ ಬಲಿಕೆಟ್ಟ ।
ಮಿಕ್ಕವರ ನಾರು ನಂಬುವರು ಸರ್ವಜ್ಞ||

ಸರ್ವಜ್ಞ ವಚನ 466 :
ಸಾರವನು ಬಯಸುವೊಡೆ । ಕ್ಷಾರವನು ಧರಿಸುವುದು
ಮಾರಸಂಹರನ ನೆನೆದರೆ – ಮೃತ್ಯು ತಾ
ದೊರಕ್ಕೆ ದೊರ ಸರ್ವಜ್ಞ||

ಸರ್ವಜ್ಞ ವಚನ 467 :
ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ
ಕಟ್ಟಲೂ ಬೇಡ ಬಿಡಲೂ ಬೇಡ
ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ||

ಸರ್ವಜ್ಞ ವಚನ 468 :
ಹೃದಯದಲ್ಲಿ ಕತ್ತರಿಯು । ತುದಿಯ ನಾಲಿಗೆ ಬೆಲ್ಲ !
ಕುದಿದು ಹೋಗುಹೆನು ಎನ್ನೊಡೆಯ ಇದ ನೋಡಿ ।
ಒದೆದು ಬಿಡ ಬೇಡ ಸರ್ವಜ್ಞ||

ಸರ್ವಜ್ಞ ವಚನ 469 :
ನೇತ್ರಗಳು ಕಾಣಿಸವು ಶ್ರೋತ್ರಗಳು ಕೇಳಿಸವು
ಗಾತ್ರಗಳು ಎದ್ದು ನಡೆಯುವವು ಕೂಳೊಂದು
ರಾತ್ರಿ ತಪ್ಪಿದರೆ ಸರ್ವಜ್ಞ||

ಸರ್ವಜ್ಞ ವಚನ 470 :
ಬೋರಾಡಿ ಸಾಲವನು ಹಾರಾಡಿ ಒಯ್ಯುವನು
ಈರಾಡಿ ಬಂದು ಕೇಳಿದರೆ ಸಾಲಿಗನು
ಚೀರಾಡಿ ಕೊಡನು ಸರ್ವಜ್ಞ||

ಸರ್ವಜ್ಞ ವಚನ 471 :
ಧಾರುಣಿಯು ನಡುಗುವುದು। ಮೇರುವಲ್ಲಾಡುವುದು।
ವಾರಿನಿಧಿ ಬತ್ತಿ ಬಯಲಹುದು, ಶಿವಭಕ್ತಿ।
ಏರದಿಹುದಂದು ಸರ್ವಜ್ಞ||

ಸರ್ವಜ್ಞ ವಚನ 472 :
ಎಣ್ಣೆ ಬೆಣ್ಣೆಯ ರಿಣವು ಅನ್ನವಸ್ತ್ರದ ರಿಣವು
ಹೊನ್ನು ಹೆಣ್ಣಿನಾ ರಿಣವು ತೀರಿದ ಕ್ಷಣದಿ
ಮಣ್ಣು ಪಾಲೆಂದ ಸರ್ವಜ್ಞ||

ಸರ್ವಜ್ಞ ವಚನ 473 :
ಬಟ್ಟೆ ಬಟ್ಟೆಯೊಳೆಲ್ಲ । ಹೊಟ್ಟೆ ಜಾಲಿಯ ಮುಳ್ಳು ।
ಹುಟ್ಟಿದವರೆಲ್ಲ ನಿಜವಾಯಿ ಮೂಡಲ ।
ಬಟ್ಟೆ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 474 :
ಮೆಚ್ಚಿಸುವದೊಲಿದವರ । ಇಚ್ಛೆಯನೆ ನುಡಿಯುವದು
ತುಚ್ಛದಿಂದಾರ ನುಡಿದಿಹರೆ ಅವನಿರವು ।
ಬಿಚ್ಚುವಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 475 :
ಬಂಡಿಯಚ್ಚಿಗೆ ಭಾರ। ಮಿಂಡೆ ಮುದುಕಗೆ ಭಾರ।
ಗುಂಡುಗಳು ಭಾರ ಭೈತ್ರಕ್ಕೆ, ಲೋಕಕ್ಕೆ ।
ಕೊಂಡೆಯನೆ ಭಾರ ಸರ್ವಜ್ಞ||

ಸರ್ವಜ್ಞ ವಚನ 476 :
ಉಪ್ಪಿಲ್ಲದುಣ ಹೊಲ್ಲ । ಮುಪ್ಪು ಬಡತನ ಹೊಲ್ಲ ।
ತಪ್ಪನೇ ನುಡಿವ ಸತಿ ಹೊಲ್ಲ ತಾನೊಪ್ಪಿ ।
ತಪ್ಪುವದೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 477 :
ಹರಭಕ್ತಿಹಲ್ಲದೆ । ಹರೆದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರ – ನೆನ್ನೆಯ
ಗುರು ದೇವರೆಂಬೆ ಸರ್ವಜ್ಞ||

ಸರ್ವಜ್ಞ ವಚನ 478 :
ಪ್ರಾರಬ್ಧ ಕರ್ಮವದು।ಆರನೂ ಬಿಡದಯ್ಯ।
ಮಾರಾಂತನಪ್ಪ ಯೋಗಿಯ ಒಡಲಲ್ಲಿ।
ಊರಿಕೊಂಡಿಹುದು ಸರ್ವಜ್ಞ||

ಸರ್ವಜ್ಞ ವಚನ 479 :
ಆನೆ ಮೇಲಿದ್ದವನು । ಸೋನ ಕಂಡೋಡುವನೆ।
ಜ್ಞಾನ ಹೃದಯದಲಿ ನೆಲಸಿದ ಶಿವಯೋಗಿ ।
ಹೀನಗಂಜುವನೆ ಸರ್ವಜ್ಞ||

ಸರ್ವಜ್ಞ ವಚನ 480 :
ಮಗಳಕ್ಕ ತಂಗಿಯು । ಮಿಗೆ ಸೊಸೆಯು ನಾದಿನಿಯು ।
ಜಗದ ವನಿತೆಯರು ಜನನಿಯೂ ಇವರೊಳಗೆ ।
ಜಗಕೊಬ್ಬಳೆಸೈ ಸರ್ವಜ್ಞ||

ಸರ್ವಜ್ಞ ವಚನ 481 :
ಮಾಳನು ಮಾಳಿಯು । ಕೊಳ್ ತಿಂದ ಹೆಮ್ಮೆಯಲಿ
ಕೇಳೆ ನೀನಾರ ಮಗನೆಂದು – ನಾ ಶಿವನ
ಮೇಳದಣುಗೆಂಬೆ ಸರ್ವಜ್ಞ||

ಸರ್ವಜ್ಞ ವಚನ 482 :
ಅಂಬು ಬಿಲ್ಲಿಗೆ ಲೇಸು । ಇಂಬು ಕೋಣೆಗೆ ಲೇಸು ।
ಸಂಬಾರ ಲೇಸು ಸಾರಿಗಂ ಊರಿಂಗೆ ।
ಕುಂಬಾರ ಲೇಸು ಸರ್ವಜ್ಞ||

ಸರ್ವಜ್ಞ ವಚನ 483 :
ಅಲ್ಲಿಗಲ್ಲಿಗೆ ಕಲ್ಲು । ಕಲ್ಲಿನಾ ಕಡೆ ತಂತಿ ।
ಬಲ್ಲಿದರ ರಥವು ಹೊಗೆಯುತ್ತ ಬರಲದರ ।
ಸೊಲ್ಲು ಕೇಳೆಂದ ಸರ್ವಜ್ಞ||

ಸರ್ವಜ್ಞ ವಚನ 484 :
ಗೂಡನ್ನು ಕಡಿದಿಹರೆ। ಓಡೆಲ್ಲ ಮಡಿಕೆಗಳು।
ಓಡಿ ಬಡಿದಿಹರೆ ಮಡಿಕೆಯೊಂದರ ಮೇಲೆ।
ಅಡಕಿರುವುದೇನು? ಸರ್ವಜ್ಞ||

ಸರ್ವಜ್ಞ ವಚನ 485 :
ನಿಶ್ಚಯವ ಬಿಡದೊಬ್ಬ । ರಿಚ್ಛೆಯಲಿ ನುಡಿಯದಿರು ।
ನೆಚ್ಚಿ ಒಂದೊರೊಳಗಿರದಿರು ಶಿವ
ನಿನ್ನ ಇಚ್ಛೆಯೊಳಗಿಹನು ಸರ್ವಜ್ಞ||

ಸರ್ವಜ್ಞ ವಚನ 486 :
ಬೋರಾಡಿ ಸಾಲವನು । ಹಾರ್‍ಆಡಿ ಒಯ್ಯುವನು ।
ಈರಾಡಿ ಬಂದು ಕೇಳಿದರೆ ಸಾಲಿಗನು ।
ಚೀರಾಡಿ ಕೊಡುವನು ಸರ್ವಜ್ಞ||

ಸರ್ವಜ್ಞ ವಚನ 487 :
ಚಲುವನಾದಡದೇನು ? । ಬಲವಂತನಹದೇನು ?।
ಕುಲವೀರನಾಗಿ ಫಲವೇನು ? ಮಹಲಕ್ಷ್ಮಿ ।
ತೊಲಗಿ ಹೋಗಿರಲು । ಸರ್ವಜ್ಞ||

ಸರ್ವಜ್ಞ ವಚನ 488 :
ಚಿತ್ತವಿಲ್ಲದ ಗುಡಿಯ । ಸುತ್ತಿದೊಡೆ ಫಲವೇನು ? ।
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ ।
ಸುತ್ತಿಬಂದಂತೆ ಸರ್ವಜ್ಞ||

ಸರ್ವಜ್ಞ ವಚನ 489 :
ಮಾದಿಗನು ಕೆಮ್ಮಯನ । ಭೇದವೆರಡೊಂದಯ್ಯ ।
ಮಾದಿಗನು ಒಮ್ಮೆ ಉಪಕಾರಿ, ಕಮ್ಮೆ ತನ ।
ಗಾದವರ ಕೊಲುವ ಸರ್ವಜ್ಞ||

ಸರ್ವಜ್ಞ ವಚನ 490 :
ಗಡ್ಡವಿಲ್ಲದ ಮೋರೆ । ದುಡ್ಡು ಇಲ್ಲದ ಚೀಲ ।
ಬಡ್ಡಿಯಾ ಸಾಲ ತೆರುವವನ ಬಾಳುವೆಯು ।
ಅಡ್ಡಕ್ಕು ಬೇಡ ಸರ್ವಜ್ಞ||

ಸರ್ವಜ್ಞ ವಚನ 491 :
ಕಚ್ಚಿದರೆ ಕಚ್ಚುವುದು। ಕಿಚ್ಚಲ್ಲ ಚೇಳಲ್ಲ।
ಆಶ್ಚರ್ಯವಲ್ಲ ,ಹರಿದಲ್ಲ ಈ ಮಾತು ।
ನಿಶ್ಚಯವೆಂದ ಸರ್ವಜ್ಞ||

ಸರ್ವಜ್ಞ ವಚನ 492 :
ತಾಗದ ಬಿಲು ಹೊಲ್ಲ। ಆಗದ ಮಗ ಹೊಲ್ಲ।
ಆಗೀಗಲೆಂಬ ನುಡಿ ಹೊಲ್ಲ, ರಣಕೆ ಇದಿ।
ರಾಗದವ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 493 :
ಉಂಬಳಿ ಇದ್ದಂತೆ । ಕಂಬಳಿಯ ಹೊದೆವರೆ
ಶಂಭುವಿದ್ದಂತೆ ಮತ್ತೊಂದು – ದೈವವ
ನಂಬುವನೆಗ್ಗ ಸರ್ವಜ್ಞ||

ಸರ್ವಜ್ಞ ವಚನ 494 :
ಗುರುಗಳಿಗೆ ಹಿರಿಯರಿಗೆ । ಶಿರವಾಗಿ ಎಅರಗಿದರೆ \
ನರಸುರರು ಒಲಿದು ಸಿರಿ ಸುರಿಯೆ ಕೈಲಾಸ ।
ಕರತಲಾಮಲಕ ಸರ್ವಜ್ಞ||

ಸರ್ವಜ್ಞ ವಚನ 495 :
ಆಡಿಗಳೆದ್ದೇಳವು । ನುಡಿಗಳೂ ಕೇಳಿಸವು ಮಡದಿಯರ
ಮಾತು ಸೊಗಸದು ಕೂಳೊಂದು ।
ತಡೆದರರಗಳಿಗೆ ಸರ್ವಜ್ಞ||

ಸರ್ವಜ್ಞ ವಚನ 496 :
ತುಪ್ಪ ಒಗರ ಲೇಸು । ಉಪ್ಪರಿಗೆ ಮನೆ ಲೇಸು ।
ಅಪ್ಪ ಬಾರೆಂಬ ಮಗ ಲೇಸು ಊರೊಳಗೆ ।
ಶಿಂಪಿಗನು ಲೇಸು । ಸರ್ವಜ್ಞ||

ಸರ್ವಜ್ಞ ವಚನ 497 :
ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ
ಆನೆಯನೇರಿ ಸುಖದಿಂದಲಿ – ಹೋಹಂಗೆ
ಶ್ವಾನ ಬೊಗಳ್ದೇನು ಸರ್ವಜ್ಞ||

ಸರ್ವಜ್ಞ ವಚನ 498 :
ಕುಲವನ್ನು ಕೆಡಿಸುವದು । ಛಲವನ್ನು ಬಿಡಿಸುವದು ।
ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ ।
ಬಲವ ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 499 :
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಳು
ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು
ಕುಣಿಕೆಯುಂಟೆಂದ ಸರ್ವಜ್ಞ||

ಸರ್ವಜ್ಞ ವಚನ 500 :
ಉಚ್ಚೆಯಾ ಬಚ್ಚಲವ ತುಚ್ಛವೆಂದೆನಬೇಡ।
ಅಚ್ಚುತ ಬಿದ್ದನಜಬಿದ್ದ ದೇವೇಂದ್ರ।
ನೆಚ್ಚೆತ್ತು ಬಿದ್ದ ಸರ್ವಜ್ಞ||
          

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post