Menu

Home ನಲಿಕಲಿ About ☰ Menu


 

🔍

ಸರ್ವಜ್ಞ ತ್ರಿಪದಿಗಳು (401-450)

 ಸರ್ವಜ್ಞ ವಚನ 401 :
ಅಳಿವಣ್ಣದಾಕಾಶ । ಗಿಳಿವಣ್ಣದಾ ಮುಗಿಲು ।
ಅಳಿದಳಿದುಮರ್ಕ ನುದಯಿಲು ಮಳೆಯು ತಾ ।
ಘಳಿಲನೇ ಬಕ್ಕು ಸರ್ವಜ್ಞ||


ಸರ್ವಜ್ಞ ವಚನ 402 :
ಹೆಂಡಕ್ಕೆ ಹೊಲೆಯ ತಾ ।
ಕಂಡಕ್ಕೆ ಕಟುಗ ತಾ ।
ದಂಡಕ್ಕೆ ಕೃಷಿಕ ಹಾರುವನು ತಾ ಪಿಂಡಕ್ಕೆ ಇಡುವ ಸರ್ವಜ್ಞ||


ಸರ್ವಜ್ಞ ವಚನ 403 :
ಒಸರುವಾ ತೊರೆ ಲೇಸು । ಹಸುನಾದ ಕೆರೆ ಲೇಸು ।
ಸರವಿರುವವನ ನೆರೆ ಲೇಸು ।
ಸಾಗರವು ವಸುಧಿಗೆ ಲೇಸು ಸರ್ವಜ್ಞ||


ಸರ್ವಜ್ಞ ವಚನ 404 :
ಭಂಡಿಯಚ್ಚಿಗೆ ಭಾರ । ಮಿಂಡೆ ಮುದುಕಗೆ ಭಾರ ।
ಗುಂಡುಗಳು ಭಾರ ಭೈತ್ರಕ್ಕೆ ಲೋಕಕ್ಕೆ ।
ಕೊಂಡೆಯನೆ ಭಾರ ಸರ್ವಜ್ಞ||


ಸರ್ವಜ್ಞ ವಚನ 405 :
ಲಿಂಗಯಲ್ಲಿ । ಸಂಗಿಸಿ ಚರಿಸಲು
ಜಂಘೆಯಲಿ ನಡವ ಸರ್ವ ಜೀವಂಗಳು
ಲಿಂಗದಿಂ ಜನನ ಸರ್ವಜ್ಞ||


ಸರ್ವಜ್ಞ ವಚನ 406 :
ಲಿಂಗಕ್ಕೆ ಕಡೆ ಎಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೇ ? ಸರ್ವಜ್ಞ||


ಸರ್ವಜ್ಞ ವಚನ 407 :
ಸತ್ಯನುಡಿದತ್ತರೂ । ಸುತನೊಬ್ಬ ಸತ್ತರೂ ।
ಸತ್ಯವನು ಬಿಡದ ಹರಿಶ್ಚಂದ್ರ ಜಗದೊಳು ।
ಸ್ತುತ್ಯನಾಗಿಹನು ಸರ್ವಜ್ಞ||


ಸರ್ವಜ್ಞ ವಚನ 408 :
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ||


ಸರ್ವಜ್ಞ ವಚನ 409 :
ಮನ ಭಂಗವಾದಂದು । ಘನನಿದ್ರೆ ಹೋದಂದು ।
ವನಿತೆಯರು ಸುತರು ಜರಿದಂದು ಮರಣವೇ ।
ತನಗೆ ಬಂತೆಂದ ಸರ್ವಜ್ಞ||


ಸರ್ವಜ್ಞ ವಚನ 410 :
ಹೊಲಬನರಿಯದ ಮಾತು । ತಲೆ ಬೇನೆ ಎನಬೇಡ ।
ಹೊಲಬನರಿತೊಂದ ನುಡಿದಿಹರೆ ಅದು ದಿವ್ಯ ।
ಫಲ ಪಕ್ವದಂತೆ ಸರ್ವಜ್ಞ||


ಸರ್ವಜ್ಞ ವಚನ 411 :
ಅರಿತವರ ಮುಂದೆ ತ । ನ್ನರಿವನ್ನು ಮೆರೆಯುವದು ।
ಅರಿಯದನ ಮುಂದೆ ಮೆರೆದರಾ ಹೊನ್ನೆಂಬ ।
ತೊರೆಯ ಲೆಚ್ಚಂತೆ ಸರ್ವಜ್ಞ||


ಸರ್ವಜ್ಞ ವಚನ 412 :
ನುಡಿಯಲ್ಲಿ ಎಚ್ಚತ್ತು । ನಡೆಯಲ್ಲಿ ತಪ್ಪಿದರೆ ।
ಹಿಡಿದಿರ್ಧ ಧರ್ಮ ಹೊಡೆಮರಳಿ ಕಚ್ಚುವಾ ।
ಹೆಡೆನಾಗನೋಡು ಸರ್ವಜ್ಞ||


ಸರ್ವಜ್ಞ ವಚನ 413 :
ನಡೆವುದೊಂದೇ ಭೂಮಿ , ಕುಡಿವುದೊಂದೇ ನೀರು
ಸುಡುವಗ್ನಿಯೊಂದೇ ಇರುತಿರಲು , ಕುಲಗೋತ್ರ
ನಡುವೆಯೆತ್ತಣದು ಸರ್ವಜ್ಞ||


ಸರ್ವಜ್ಞ ವಚನ 414 :
ಬಲ್ಲೆನೆಂದೆಂಬುವವ । ರೆಲ್ಲವರು ಹಿರಿಯರೆ?।
ಸೊಲ್ಲಿನ ಭೇದವರಿದೊಡೆ ಕಿರಿಯ ತಾ।
ನೆಲ್ಲರಿಗೆ ಹಿರಿಯ ಸರ್ವಜ್ಞ||


ಸರ್ವಜ್ಞ ವಚನ 415 :
ಮನದಲ್ಲಿ ನೆನವಿಠಲಿ । ತನುವೊಂದು ಮಠವಕ್ಕು ।
ಮನಹೋಗಿ ಹಲವ ನೆನೆದಿಹರೆ ಅದು ಹಾಳು ।
ಮನೆಯೆಂದು ತಿಳಿಯೋ ಸರ್ವಜ್ಞ||


ಸರ್ವಜ್ಞ ವಚನ 416 :
ಹರಿ ಬೊಮ್ಮನೆಂಬವರು, ಹರನಿಂದಲಾದವರು
ಅರಸಿಗೆ ಆಳು ಸರಿಯಹನೆ ಶಿವನಿಂದ
ಮೆರೆವರಿನ್ನಾರು ಸರ್ವಜ್ಞ||


ಸರ್ವಜ್ಞ ವಚನ 417 :
ಈಶ ಭಕ್ತನು ಆಗಿ । ವೇಶಿಯನು ತಾ ಹೋಗೆ ।
ಸಲಾಗಿರ್ದ ಭೋನವನು ಹಂದಿ ತಾ
ಮೂಸಿ ಹೋದಂತೆ ಸರ್ವಜ್ಞ||


ಸರ್ವಜ್ಞ ವಚನ 418 :
ಬೆಕ್ಕು ಮನೆಯೊಳು ಲೇಸು । ಮುಕ್ಕು ಕಲ್ಲಿಗೆ ಲೇಸು ।
ನಕ್ಕು ನಗಿಸುವಾ ನುಡಿಲೇಸು ಊರಿಂಗೆ ।
ಒಕ್ಕಲಿಗ ಲೇಸು ಸರ್ವಜ್ಞ||


ಸರ್ವಜ್ಞ ವಚನ 419 :
ಒಡಲ ಹಿಡಿದಾಡದಿರು । ನುಡಿಯ ಹೋಗಾಡದಿರು ।
ನಡೆಯೊಳೆಚ್ಚರವ ಬಿಡದಲಿರು, ಪರಸತಿಯ ।
ಕಡೆಗೆ ನೋಡದಿರು ಸರ್ವಜ್ಞ||


ಸರ್ವಜ್ಞ ವಚನ 420 :
ಕರಿಗೆ ಕೇಸರಿ ವೈರಿ । ದುರಿತಕ್ಕೆ ಹರ ವೈರಿ ।
ಉರವಣಿಸಿ ಬರುವ ಸಂಸಾರದ ದುಃಖಕ್ಕೆ ।
ಪರಿಣಾಮ ವೈರಿ ಸರ್ವಜ್ಞ||


ಸರ್ವಜ್ಞ ವಚನ 421 :
ಹಲವು ಮಕ್ಕಳ ತಂದೆ। ತಲೆಯಲ್ಲಿ ಜುಟ್ಟವಗೆ।
ಸಲೆ ಗಳಿಗೆ ಜಾವವರಿವನ ಹೆಂಡತಿಗೆ।
ಮೊಲೆಯಿಲ್ಲ ನೋಡ ಸರ್ವಜ್ಞ||


ಸರ್ವಜ್ಞ ವಚನ 422 :
ನಿದ್ದೆಗಳು ಬಾರವವು ಬುದ್ಧಿಗಳು ತಿಳಿಯವವು
ಮುದ್ದಿನಾ ಮಾತು ಸೊಗಸವವು ಬೋನದಾ
ಮುದ್ದೆ ತಪ್ಪಿದರೆ ಸರ್ವಜ್ಞ||


ಸರ್ವಜ್ಞ ವಚನ 423 :
ಕಲ್ಲು ಕಲ್ಲನೆ ಒಟ್ಟಿ ಕಲ್ಲಿನಲೆ ಮನೆಕಟ್ಟಿ
ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ
ಕಲ್ಲಿನಂತಿಹರು ಸರ್ವಜ್ಞ||


ಸರ್ವಜ್ಞ ವಚನ 424 :
ನಾಲಿಗೆಯ ಕಟ್ಟಿದನು ಕಾಲನಿಗೆ ದೂರನಹ
ನಾಲಿಗೆ ರುಚಿಗಳ ಮೇಲಾಡುತಿರಲವನ
ಕಾಲಹತ್ತರವು ಸರ್ವಜ್ಞ||


ಸರ್ವಜ್ಞ ವಚನ 425 :
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಳ್ಪವರಿಂದ ಕಂಡು ಮತ್ತೆ
ಹಲವಂ ತಾನೆ ಸ್ವತಃಮಾಡಿ ತಿಳಿ ಎಂದ ಸರ್ವಜ್ಞ||


ಸರ್ವಜ್ಞ ವಚನ 426 :
ಅನ್ಯಸತಿಯನ್ನು ಕಂಡು , ತನ್ನ ಹೆತ್ತವಳೆಂದು
ಮನ್ನಿಸಿ ನೆಡೆದ ಪುರುಷಂಗೆ , ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ಞ||


ಸರ್ವಜ್ಞ ವಚನ 427 :
ಮಂಜಿನಿಂ ಮಳೆ ಲೇಸು । ಪಂಜು ಇರುಳಲಿ ಲೇಸು ।
ಪಂಜರವು ಲೇಸು ಅರಗಿಳಿಗೆ, ಜಾಡಂಗೆ ।
ಗಂಜಿ ಲೇಸೆಂದ ಸರ್ವಜ್ಞ||


ಸರ್ವಜ್ಞ ವಚನ 428 :
ಆರು ಬೆಟ್ಟವನೊಬ್ಬ । ಹಾರಬಹುದೆಂದಿಹರೆ ।
ಹಾರಬಹುದೆಂದು ಎನಬೇಕು । ಮೂರ್ಖನಾ ।
ಹೋರಾಟ ಸಲ್ಲ ಸರ್ವಜ್ಞ||


ಸರ್ವಜ್ಞ ವಚನ 429 :
ಹೊಲಿಯ ಮಾದಿಗರುಂಡು । ಸುಲಿದಿಟ್ಟ ತೊಗಲು ಸಲೆ ।
ಕುಲಜರೆಂಬವರಿಗುಣಲಾಯ್ತು । ಹೊಲೆಯರಾ ।
ಕುಲವಾವುದಯ್ಯ ಸರ್ವಜ್ಞ||


ಸರ್ವಜ್ಞ ವಚನ 430 :
ಆದಿಯಾ ಮಾಸವನು । ವೇದದಿಂದಲಿ ಗುಣಿಸಿ ।
ಆ ದಿನದ ತಿಥಿಯನೊಡಿಸಲು ಯೋಗ ।
ವಾದಿನದ ಬಕ್ಕು ಸರ್ವಜ್ಞ||


ಸರ್ವಜ್ಞ ವಚನ 431 :
ಹರಿದ ತಲೆ ಬ್ರಹ್ಮಂಗೆ \ ಕುರೆಯ ತಲೆ ದಕ್ಷಂಗೆ
ನೆರೆ ಹತ್ತು ಜನನವಾ ಹರಿಗೆ – ಇವರುಗಳು
ಕರೆಗೊರಲಗಣೆಯೆ ಸರ್ವಜ್ಞ||


ಸರ್ವಜ್ಞ ವಚನ 432 :
ಹುಟ್ಟಿಸುವನಜನೆಂಬ । ಕಷ್ಟದ ನುಡಿ ಬೇಡ
ಹುಟ್ಟಿಸುವವ ತನ್ನ ಶಿರ ಹರೆಯೆ – ಮತ್ತೊಂದು
ಹುಟ್ಟಿಸಿಕೊಳನೇಕೆ ಸರ್ವಜ್ಞ||


ಸರ್ವಜ್ಞ ವಚನ 433 :
ಇದ್ದೂರ ಸಾಲ ಹೇ । ಗಿದ್ದರೂ ಕೊಳಬೇಡ ।
ಇದ್ದುದವನು ಸೆಳೆದು ಸಾಲಕೊಟ್ಟವನೊದ್ದು ।
ಗಿದ್ದು ಕೇಳುವನು ಸರ್ವಜ್ಞ||


ಸರ್ವಜ್ಞ ವಚನ 434 :
ನೀರ ಬೊಬ್ಬಳಿನೆಚ್ಚಿ । ಸಾರಿ ಕೆಡದಿರು ಮರುಳೆ ।
ಸಾರುಗುಣಿಯಾಗು ನಿಜವ ತಿಳಿ ಸರುವರೊಳು ।
ಕಾರುಣಿಕನಾಗು ಸರ್ವಜ್ಞ||


ಸರ್ವಜ್ಞ ವಚನ 435 :
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ||


ಸರ್ವಜ್ಞ ವಚನ 436 :
ಸಾಲಿಗನಲಿ ಮೇಣಕ್ಕ । ಸಾಲೆಯಲಿ ನಂಬಿಕೆಯು ।
ಜಾಲಗಾರನ ದಯೆ ಧರ್ಮ ಮುನ್ನಾವ ।
ಕಾಲಕ್ಕೂ ಇಲ್ಲ ಸರ್ವಜ್ಞ||


ಸರ್ವಜ್ಞ ವಚನ 437 :
ವೇಷಗಳ ಧರಿಸೇನು? ದೇಶಗಳ ತಿರುಗೇನು?
ದೋಷಗಳ ಹೇಳಿ ಫಲವೇನು? ಮನಸಿನಾ
ಆಸೆ ಬಿಡದನಕ ಸರ್ವಜ್ಞ||


ಸರ್ವಜ್ಞ ವಚನ 438 :
ನಡೆವುದೊಂದೇ ಭೂಮಿ । ಕುಡಿವುದೊಂದೇ ನೀರು ।
ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ ।
ನಡುವೆ ಎತ್ತಣದು ಸರ್ವಜ್ಞ||


ಸರ್ವಜ್ಞ ವಚನ 439 :
ಮೊಸರು ಇಲ್ಲದ ಊಟ। ಕೆಸರು ಇಲ್ಲದ ಗದ್ದೆ।
ಹಸನವಿಲ್ಲದಳ ಮನೆವಾರ್ತೆ, ತಿಪ್ಪೆಯ।
ಕಸದಂತೆ ಇಹುದು ಸರ್ವಜ್ಞ||


ಸರ್ವಜ್ಞ ವಚನ 440 :
ಎಂತಿರಲು ಪರರ ನೀ ಮುಂದೆ ನಂಬಲು ಬೇಡ ।
ಕುಂತಿ ಹೆಮ್ಮಗನ ಕೊಲಿಸಿದಳು ಮಾನವರ ।
ನೆಂತು ನಂಬುವದು ಸರ್ವಜ್ಞ||


ಸರ್ವಜ್ಞ ವಚನ 441 :
ದೇಶಕ್ಕೆ ಸಜ್ಜನನು । ಹಾಸ್ಯಕ್ಕೆ ಹನುಮಂತ
ಕೇಶವ ಭಕ್ತರೊಳಗೆಲ್ಲ – ಮೂರು ಕ
ಣ್ಣೇಶನೇ ದೈವ ಸರ್ವಜ್ಞ||


ಸರ್ವಜ್ಞ ವಚನ 442 :
ಅಜ್ಜಿ ಇಲ್ಲದ ಮನೆಯು। ಮಜ್ಜಿಗಿಲ್ಲದ ಊಟ।
ಕೊಜ್ಜೆಯರಿಲ್ಲದರಮನೆಯು, ಇವು ಮೂರು।
ಲಜ್ಜೆಗೇಡೆಂದ ಸರ್ವಜ್ಞ||


ಸರ್ವಜ್ಞ ವಚನ 443 :
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ||


ಸರ್ವಜ್ಞ ವಚನ 444 :
ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ
ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
ಹೊಲೆಯ ಕಾಣಯ್ಯ ಸರ್ವಜ್ಞ||


ಸರ್ವಜ್ಞ ವಚನ 445 :
ಉತ್ತಮರು ಪಾಲ್ಗೊಡಲೊ । ಳೆತ್ತಿದರೆ ಜನ್ಮವನು ।
ಉತ್ತಮರು ಅಧಮರೆನಬೇಡಿ ಹೊಲೆಯಿಲ್ಲ ।
ದುತ್ತಮರು ಎಲ್ಲಿ ಸರ್ವಜ್ಞ||


ಸರ್ವಜ್ಞ ವಚನ 446 :
ಕನ್ನವನ್ನು ಕೊರಿಸುವದು । ಭಿನ್ನವನ್ನು ತರಿಸುವದು ।
ಬನ್ನದಾ ಸೆರೆಗೆ ಒಯ್ಯುವದು ಒಂದು ಸೇ ।
ರನ್ನ ನೋಡೆಂದ ಸರ್ವಜ್ಞ||


ಸರ್ವಜ್ಞ ವಚನ 447 :
ಕೂಡಿ ತಪ್ಪಲು ಬೇಡ । ಓಡಿ ಸಿಕ್ಕಲು ಬೇಡ ।
ಆಡಿ ತಪ್ಪಿದರೆ ಇರಬೇಡ ದುರುಳರು ।
ಕೂಡಬೇಡೆಂದ ಸರ್ವಜ್ಞ||


ಸರ್ವಜ್ಞ ವಚನ 448 :
ಹೆಂಡತಿಗೆ ಅಂಜಿವಾ । ಗಂಡನನು ಏನೆಂಬೆ ।
ಹಿಂಡು ಕೋಳಿಗಳು ಮುರಿತಿಂಬ ನರಿ, ನಾಯ ।
ಕಂಡೋಡಿದಂತೆ ಸರ್ವಜ್ಞ||


ಸರ್ವಜ್ಞ ವಚನ 449 :
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಲು
ಕ್ಷಣಕೊಮ್ಮೆಯೊಂದ ಗುಣಿಸುವವನ ಜಪಕೊಂದು
ಎಣಿಕೆಯದುಂಟೆ ಸರ್ವಜ್ಞ||


ಸರ್ವಜ್ಞ ವಚನ 450 :
ವಿಷಯಕ್ಕೆ ಕುದಿಯದಿರು । ಆಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು – ಗುರುಕರುಣ
ವಶವರ್ತಿಯಹುದು ಸರ್ವಜ್ಞ||


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post