Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (351-400)

ಸರ್ವಜ್ಞ ವಚನ 351
ಕೂತು ಮಾತಾಡುತ್ತ। ಯಾತವನು ಹೊಡೆದಿಹರೆ
ಕಾತ ಕಾಯಿಗಳು ಹೆಡಗೆಯಲಿ ಮಿಸುಪ ಮಿಡಿ
ಸೌತೆಯಂತಿಹವು ಸರ್ವಜ್ಞ|

ಸರ್ವಜ್ಞ ವಚನ 352
ಪುಲ್ಲೆ ಚರ್ಮವನುಟ್ಟು । ಹುಲ್ಲು ಬೆಳ್ಳಗೆ ಬಿಟ್ಟು
ಕಲ್ಲು ಮೇಲಿಪ್ಪ ತಪಸಿಯ ಮನವೆಲ್ಲ
ನಲ್ಲೆಯಲ್ಲಿಹುದು ಸರ್ವಜ್ಞ|

ಸರ್ವಜ್ಞ ವಚನ 353
ಬ್ರಹ್ಮವೆಂಬುದು ತಾನು । ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ – । ವಾಲಿಸಲು
ಗಮ್ಮನೆ ಮುಕ್ತಿ ಸರ್ವಜ್ಞ|

ಸರ್ವಜ್ಞ ವಚನ 354
ಕೋಟೆ ಕದನಕೆ ಲೇಸು। ಬೇಟೆಯರಸಿಗೆ ಲೇಸು
ನೀಟಾದ ಹೆಣ್ಣು ತರಲೇಸು,ಸುಜನರೊಡ
ನಾಟವೇ ಲೇಸು ಸರ್ವಜ್ಞ|

ಸರ್ವಜ್ಞ ವಚನ 355
ಅತ್ತಿಗೆ ಹೂವಿಲ್ಲ। ಕತ್ತೆಗೆ ಹೊಲೆಯಿಲ್ಲ
ಬತ್ತಲಿದ್ದವಗೆ ಭಯವಿಲ್ಲ ಯೋಗಿಗೆ
ಕತ್ತಲೆಯೇ ಇಲ್ಲ ಸರ್ವಜ್ಞ|

ಸರ್ವಜ್ಞ ವಚನ 356
ಜ್ಞಾನಿಯಜ್ಞಾನೆಂದು । ಹೀನ ಜರಿದರೇನು 
ಶ್ವಾನ ತಾ ಬೊಗಳುತಿರಲಾನೆಯದನೊಂದು 
ಗಾನವೆಂದಂತೆ ಸರ್ವಜ್ಞ|

ಸರ್ವಜ್ಞ ವಚನ 357
ಕಣ್ಣು ನಾಲಿಗೆ ಮನವ। ಪನ್ನಗಧರ ಕೊಟ್ಟ
ಚೆನ್ನಾಗಿ ಮನವ ತೆರೆದು ನೀ ಬಿಡದೆ ಶ್ರೀ
ಚೆನ್ನನ ನೆನೆಯೊ ಸರ್ವಜ್ಞ|

ಸರ್ವಜ್ಞ ವಚನ 358
ನಂಬು ಪರಶಿವನೆಂದು | ನಂಬು ಗುರುಚರಣವನು
ನಂಬಲಗಸ್ತ್ಯ ಕುಡಿದನು – ಶರಧಿಯ
ನಂಬು ಗುರುಪದವ ಸರ್ವಜ್ಞ|

ಸರ್ವಜ್ಞ ವಚನ 359
ಹಲ್ಲು ನಾಲಿಗೆಯಿಲ್ಲ । ಸೊಲ್ಲು ಸೋಜಿಗವಲ್ಲ 
ಕೊಲ್ಲದೇ ಮೃಗವ ಹಿಡಿಯುವದು ಲೋಕದೊಳ 
ಗೆಲ್ಲ ಠಾವಿನಲಿ ಸರ್ವಜ್ಞ|

ಸರ್ವಜ್ಞ ವಚನ 360
ಬಲವಂತ ನಾನೆಂದು । ಬಲುದು ಹೋರಲು ಬೇಡ 
ಬಲವಂತ ವಾಲಿ ಶ್ರೀರಾಮನೊಡನಾಡಿ 
ಛಲದಿಂದ ಕೆಟ್ಟ ಸರ್ವಜ್ಞ|

ಸರ್ವಜ್ಞ ವಚನ 361
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ|

ಸರ್ವಜ್ಞ ವಚನ 36
ಎಳ್ಳು ಗಾಣಿಗಬಲ್ಲ । ಸುಳ್ಳು ಶಿಂಪಿಗ ಬಲ್ಲ 
ಕಳ್ಳರನು ಬಲ್ಲ ತಳವಾರ ಬಣಜಿಗನು 
ಎಲ್ಲವನು ಬಲ್ಲ ಸರ್ವಜ್ಞ|

ಸರ್ವಜ್ಞ ವಚನ 363
ಭಕ್ತಗೆರಡಕ್ಕರವು । ಮುಕ್ತಿಗೆರಡಕ್ಕರವು 
ಭಕ್ತಿಯಿಂ ಮುಕ್ತಿ ಪಡೆಯುವರೆ ಬಿಡದೆ ಆ 
ರಕ್ಕರವ ಪೇಳಿ ಸರ್ವಜ್ಞ|

ಸರ್ವಜ್ಞ ವಚನ 364
ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ – ಕಾಲನಿ
ಈಡಾಗದ ಮುನ್ನ ಸರ್ವಜ್ಞ|

ಸರ್ವಜ್ಞ ವಚನ 365
ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋ
ವವಗೆ ಕಾಣಯ್ಯ ಸರ್ವಜ್ಞ|

ಸರ್ವಜ್ಞ ವಚನ 366
ತೆಗೆದತ್ತಿಳೀಯುವದು । ಮಿಗಿಲೆತ್ತರೇರಿಹುದು 
ಬಗೆಯ ರಸತುಂಬಬಹು ಸಂಚದ ತ್ರಾಸ 
ನಗೆಹಲೇ ಬೇಡ ಸರ್ವಜ್ಞ|

ಸರ್ವಜ್ಞ ವಚನ 367
ಬಲೆಯು ಹರಿದರೆ ಹೊಲ್ಲ। ಮೊಲೆಯು ಬಿದ್ದರೆ ಹೊಲ್ಲ
ತಲೆ ಹೊಲ್ಲ ಮೂಗುಹರಿದರೆ, ಕಲಿಗೆ ತಾ
ನಿಮ್ಮೆ ಸಾವುಂಟೆ? ಸರ್ವಜ್ಞ|

ಸರ್ವಜ್ಞ ವಚನ 368
ಹತ್ತೇಳುತಲೆ ಕೆಂಪು। ಮತ್ತಾರುತಲೆ ಕಪ್ಪು
ಹೆತ್ತವ್ವನೊಡಲನುರಿಸುವದು,ಕವಿಗಳಿದ
ರರ್ಥವನು ಪೇಳಿ ಸರ್ವಜ್ಞ|

ಸರ್ವಜ್ಞ ವಚನ 369
ರತಿ ಕಲೆಯೊಳತಿಚದುರೆ । ಮಾತಿನೊಳಗತಿಮಿತಿಯು
ಖತಿಗಳೆದ ಮೊಗವು ಸೊಬಗಿನಾ ಸುದತಿ ಕಂ
ಡತಿ ಬಯಸದಿಹರೆ ಸರ್ವಜ್ಞ|

ಸರ್ವಜ್ಞ ವಚನ 370
ಅಡಿಗಳೆದ್ದೇಳವವು ನುಡಿಗಳೂ ಕೇಳಿಸವು
ಮಡದಿಯರ ಮಾತು ಸೊಗಸದು ಕೂಳೊಂ
ತಡೆದರಗಳಿಗೆ ಸರ್ವಜ್ಞ|

ಸರ್ವಜ್ಞ ವಚನ 371
ಉದ್ದು ಮದ್ದಿಗೆ ಹೊಲ್ಲ । ನಿದ್ದೆ ಯೋಗಿಗೆ ಹೊಲ್ಲ 
ಬಿದ್ದಿರಲು ಹೊಲ್ಲ ಉದ್ಯೋಗಿ ಬಡವಂಗೆ 
ಗುದ್ದಾಟ ಹೊಲ್ಲ ಸರ್ವಜ್ಞ|

ಸರ್ವಜ್ಞ ವಚನ 372
ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
ಲಿಂಗದೊಳು ಜಗವು ಅಡಗಿಹುದು ಲಿಂಗವ
ಹಿಂಗಿದವರುಂಟೆ? ಸರ್ವಜ್ಞ|

ಸರ್ವಜ್ಞ ವಚನ 373
ಅಂಗನೆಯು ಒಲಿಯುವುದು , ಬಂಗಾರ ದೊರೆಯುವುದು
ಸಂಗ್ರಾಮದೊಳು ಗೆಲ್ಲುವುದು , ಇವು ಮೂ
ಸಂಗಯ್ಯನೊಲುಮೆ ಸರ್ವಜ್ಞ|

ಸರ್ವಜ್ಞ ವಚನ 374
ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ – ಗುರುವಿ
ಹತ್ತಿಲಿರು ಎಂದ ಸರ್ವಜ್ಞ

ಸರ್ವಜ್ಞ ವಚನ 375
ಹಾರುವರ ನಂಬಿದವ । ರಾರಾರು ಉಳಿದಿಹರು 
ಹಾರುವರನು ನಂಬಿ ಕೆಟ್ಟರಾ ಭೂಪರಿ 
ನ್ನಾರು ನಂಬುವರು ಸರ್ವಜ್ಞ|

ಸರ್ವಜ್ಞ ವಚನ 376
ಹಸಿಯ ಸೌದೆಯ ತಂದು । ಹೊಸೆದರುಂಟೇ ಕಿಚ್ಚು
ವಿಷಯಂಅಗಳುಳ್ಳ ಮನುಜರಿಗೆ – ಗುರುಕರು
ವಶವರ್ತಿಯಹುದೆ ಸರ್ವಜ್ಞ|

ಸರ್ವಜ್ಞ ವಚನ 377
ಮಗಳ ಮಕ್ಕಳು ಹೊಲ್ಲ । ಹಗೆಯವರಗೆಣೆ ಹೊಲ್ಲ 
ಜಗಳಾಡುವಳ ನೆರೆ ಹೊಲ್ಲ ಮೂಗಿಂಗೆ 
ನೆಗಡಿಯೇ ಹೊಲ್ಲ ಸರ್ವಜ್ಞ|

ಸರ್ವಜ್ಞ ವಚನ 378
ಕಾಲಿಲ್ಲ ಕೊಂಬುಂಟು। ಬಾಲದ ಪಕ್ಷೆಯದು
ಮೇಲೆ ಹಾರುವದು ಹದ್ದಲ್ಲ, ಕವಿಗಳಲಿ
ಬಾಲರಿದ ಪೇಳಿ ಸರ್ವಜ್ಞ|

ಸರ್ವಜ್ಞ ವಚನ 379
ಅಂತಕ್ಕು ಇಂತಕ್ಕು | ಎಂತಕ್ಕು ಎನಬೇ
ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
ದಂತಿಹುದೆ ಲೇಸು ಸರ್ವಜ್ಞ|

ಸರ್ವಜ್ಞ ವಚನ 380
ಕಟ್ಟ ಹಾಲಿಂದ ಹುಳಿ। ಯಿಟ್ಟಿರ್ದ ತಿಳಿ ಲೇಸು
ಕೆಟ್ಟ ಹಾರುವನ ಬದುಕಿಂದ ಹೊಲೆಯನು
ನೆಟ್ಟನೇ ಲೇಸು ಸರ್ವಜ್ಞ|

ಸರ್ವಜ್ಞ ವಚನ 381
ಹಸಿಯದಿರೆ ಕಡುಗಾಯ್ದು । ಬಿಸಿನೀರ ಕುಡಿಯುವದು 
ಹಸಿವಕ್ಕು ಸಿಕ್ಕ _ ಮಲವಕ್ಕು ದೇಹವದು 
ಸಸಿಯಾಗಿಹುದು ಸರ್ವಜ್ಞ|

ಸರ್ವಜ್ಞ ವಚನ 382
ಗಡಿಗೆ-ಮಡಕೆಯ ಕೊಂಡು । ಅಡುವಡಾವಿಗೆಯೊಳಗೆ
ಬಿಡದೆ ಮಳೆಮೋಡ ಹಿಡಿಯಲವ – ರಿಬ್ಬರಿ
ತಡೆ ಬಿಡಲಾಯ್ತು ಸರ್ವಜ್ಞ|

ಸರ್ವಜ್ಞ ವಚನ 383
ನ್ಯಾಯದಲಿ ನಡೆದು ಅ । ನ್ಯಾಯವೇಬಂದಿಹುದು 
ನಾಯಿಗಳು ಆರು ಇರುವತನಕ ನರರೊಂದು 
ನಾಯಿ ಹಿಂಡೆಂದ ಸರ್ವಜ್ಞ|

ಸರ್ವಜ್ಞ ವಚನ 384
ದಿಟವೆ ಪುಣ್ಯದ ಪುಂಜ । ಸಟೆಯೆ ಪಾಪದ ಬೀ
ಕುಟಿಲ ವಂಚನೆಯ ಪೊಗದಿರು – ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ|

ಸರ್ವಜ್ಞ ವಚನ 385
ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ – ಗುರುಮು
ಕಂಡಲ್ಲದಿಲ್ಲ ಸರ್ವಜ್ಞ|

ಸರ್ವಜ್ಞ ವಚನ 386
ಬೇಡಗಡವಿಯ ಚಿಂತೆ । ಆಡಿಂಗೆ ಮಳೆ ಚಿಂತೆ 
ನೋಡುವಾ ಚಿಂತೆ ಕಂಗಳಿಗೆ ಹೆಳವಂಗೆ 
ದ್ದಾಡುವ ಚಿಂತೆ ಸರ್ವಜ್ಞ|

ಸರ್ವಜ್ಞ ವಚನ 387
ಅಟ್ಟುಂಬುದು ಮೂಡಲು। ಸುಟ್ಟುಂಬುದು ಬಡಗಲು
ತಟ್ಟೆಲುಂಬುದು ಪಡುವಲು, ತೆಂಕಲದು
ಮುಷ್ಟಿಲುಂಬುವದು ಸರ್ವಜ್ಞ|

ಸರ್ವಜ್ಞ ವಚನ 388
ಮೀನಕ್ಕೆ ಶನಿ ಬರಲು । ಶಾನೆ ಕಾಳಗವಕ್ಕು 
ಬೇನೆ ಬಂಧಾನಗಳು ತಾವಕ್ಕು ಬರನಕ್ಕು ಲೋಕಕ್ಕೆ 
ಹಾನಿಯೇ ಬಕ್ಕು ಸರ್ವಜ್ಞ|

ಸರ್ವಜ್ಞ ವಚನ 389
ಇದ್ದಲ್ಲಿ ಸಲುವ ಹೋ । ಗಿದ್ದಲ್ಲಿಯೂ ಸಲುವ 
ವಿದ್ಯೆಯನ್ನು ಬಲ್ಲ ಬಡವನಾ ಗಿರಿಯ 
ಮೇಲಿರಲು ಸಲುವ ಸರ್ವಜ್ಞ|

ಸರ್ವಜ್ಞ ವಚನ 390
ಆಡಿಗಡಿಕೆಯ ಹೊಲ್ಲ । ಗೋಡೆ ಬಿರುಕಲು ಹೊಲ್ಲ 
ಒಡಕಿನಾ ಮನೆಯೊಳಿರ ಹೊಲ್ಲ ಬಡವಂಗೆ 
ಸಿಡುಕು ತಾ ಹೊಲ್ಲ ಸರ್ವಜ್ಞ|

ಸರ್ವಜ್ಞ ವಚನ 391
ಕಡತಂದೆನಲ್ಲದೇ । ಹಿಡಿ ಕಳವ ಕದ್ದೆನೇ 
ತಡವಲುರೆ ಬೈದು ತೆಗೆದಾನು ಸಾಲಿಗನು 
ನಡುವೆ ಜಗಳವನು ಸರ್ವಜ್ಞ|

ಸರ್ವಜ್ಞ ವಚನ 392
ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ, ಲಿಂಗಕ್ಕೆ
ದೇಗುಲವೇ ಇಲ್ಲ ಸರ್ವಜ್ಞ|

ಸರ್ವಜ್ಞ ವಚನ 39
ಕೆಂಪಿನಾ ದಾಸಾಳ । ಕೆಂಪುಂಟು ಕಂಪಿಲ್ಲ
ಕೆಂಪಿನವರಲ್ಲಿ ಗುಣವಿಲ್ಲ
ಕಳ್ಳತಾ ಕೆಂಪಿರ್ದಡೇನು ಸರ್ವಜ್ಞ|

ಸರ್ವಜ್ಞ ವಚನ 394
ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು
ಇಮ್ಮನವಿಡಿದು ಕೆಡಬೇಡ – ವಿಧಿವಶ
ಸುಮ್ಮನೆ ಕೆಡಗು ಸರ್ವಜ್ಞ|

ಸರ್ವಜ್ಞ ವಚನ 395
ನಂದಿಯನು ಏರಿದ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ|

ಸರ್ವಜ್ಞ ವಚನ 396
ಆವಾವ ಜೀವವನು । ಹೇವವಿಲ್ಲದೆ ಕೊಂದು 
ಸಾವಾಗ ಶಿವನ ನೆನೆಯುವಡೆ । ಅವ ಬಂದು 
ಕಾವನೇ ಹೇಳು ಸರ್ವಜ್ಞ|

ಸರ್ವಜ್ಞ ವಚನ 397
ನಾಲಿಗೆಯ ಕಟ್ಟಿದನು । ಕಾಲನಿಗೆ ದೂರನಹ 
ನಾಲಿಗೆಯು ರುಚಿಯ ಮೇಲಾಡುತಿರಲವನ 
ಕಾಲ ಹತ್ತಿರವು ಸರ್ವಜ್ಞ|

ಸರ್ವಜ್ಞ ವಚನ 398
ದರುಶನವಾರಿರಃ । ಪುರುಷರು ಮೂವರಿಂ
ಪರತತ್ವದಿರವು ಬೇರೆಂದು – ತೋರಿ
ಗುರು ತಾನೆ ದೈವ ಸರ್ವಜ್ಞ|

ಸರ್ವಜ್ಞ ವಚನ 399
ಮಜ್ಜಿಗೂಟಕೆ ಲೇಸು। ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣಲೇಸು, ಮನೆಗೊಬ್ಬ
ಅಜ್ಜಿ ಲೇಸೆಂದ ಸರ್ವಜ್ಞ|

ಸರ್ವಜ್ಞ ವಚನ 400
ರುದ್ರಕರ್ತನು ತಾನು 
ಅರ್ಧನಾರಿಯು ಆದ ಇದ್ದವರೊಳಾರು ಸತಿಯರಾ ಹೃದಯವನು 
ಗೆದ್ದವನು ಆರು ಸರ್ವಜ್ಞ|

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post