Menu

Home ನಲಿಕಲಿ About ☰ Menu


 

🔍

ಸರ್ವಜ್ಞ ತ್ರಿಪದಿಗಳು (301-350)

 ಸರ್ವಜ್ಞ ವಚನ 301 :

ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
ಬಿಟ್ಟು ಬಯಲಪ್ಪ ಸರ್ವಜ್ಞ||


ಸರ್ವಜ್ಞ ವಚನ 302 :
ಪ್ರಸ್ತಕ್ಕೆ ನುಡಿದಿಹರೆ । ಬೆಸ್ತಂತೆ ಇರಬೇಕು ।
ಪ್ರಸ್ತವನು ತಪ್ಪಿ ನುಡಿದಿಹರೆ ।
ನಡುಬೆನ್ನಿ ನಸ್ತಿ ಮುರಿದಂತೆ ಸರ್ವಜ್ಞ||


ಸರ್ವಜ್ಞ ವಚನ 303 :
ಹಲವು ಸಂಗದ ತಾಯಿ । ಹೊಲಸು ನಾರುವ ಬಾಯಿ ।
ಸಲೆ ಸ್ಮರಹರನ ನೆನೆಯದಾ ಬಾಯಿ ನಾಯ್ ।
ಮಲವ ಮೆದ್ದಂತೆ ಸರ್ವಜ್ಞ||


ಸರ್ವಜ್ಞ ವಚನ 304 :
ಉಂಡುಂಡು ಕಡೆಕಡೆದು । ಖಂಡೆಯನು ಮಸೆ ಮಸೆದು
ಕಂಡವರ ಕಾಲ ಕೆದರುವಾ ದುರುಳರನು ।
ಗುಂಡಿಲಿಕ್ಕೆಂದ ಸರ್ವಜ್ಞ||


ಸರ್ವಜ್ಞ ವಚನ 305 :
ಹೊತ್ತಾರೆ ನೆರೆಯುವುದು। ಹೊತ್ತೇರಿ ಹರಿಯುವುದು।
ಕತ್ತೆಯ ಬಣ್ಣ ಮುಗಿಲಾಗೆ ಮಳೆಯು ತಾ ।
ನೆತ್ತಣದಿ ಬಕ್ಕು ಸರ್ವಜ್ಞ||


ಸರ್ವಜ್ಞ ವಚನ 306 :
ಮದವೆದ್ದ ಮದಗಜದ। ಹದದಂದದಿರುತಿರ್ದು।
ವಿಧವಿಧದ ಪ್ರೌಢನುಡಿಗಳನು ನುಡಿವವನು।
ಪದ್ಮಿನಿಗೆ ಮೇಳ ಸರ್ವಜ್ಞ||


ಸರ್ವಜ್ಞ ವಚನ 307 :
ಎಡವಿ ಬಟ್ಟೊಡೆದರೂ । ಕೆಡೆಬೀಳಲಿರಿದರೂ ।
ನಡು ಬೆನ್ನಿನಲಗು ಮುರಿದರೂ ಹಾದರದ ।
ಕಡಹು ಬಿಡದೆಂದ ಸರ್ವಜ್ಞ||


ಸರ್ವಜ್ಞ ವಚನ 308 :
ಉಪ್ಪು ಸಪ್ಪನೆಯಕ್ಕು । ಕಪ್ಪುರವು ಕರಿದಿಕ್ಕು ।
ಸರ್ಪನಿಗೆ ಬಾಲವೆರ್‍ಅಡಕ್ಕು ಸವಣ ತಾ ।
ತಪ್ಪಾದಿದಂದು ಸರ್ವಜ್ಞ||


ಸರ್ವಜ್ಞ ವಚನ 309 :
ಏರಿಯ ಕೆಳಗಿಲ್ಲ। ಬೇರೆ ತೋಟದಲಿಲ್ಲ।
ದಾರಿಯಲಿ ಇಲ್ಲ, ಬಿಸಿಲಿಲ್ಲ, ಈ ಮಾತು।
ಯಾರಿಗರಿದಿಲ್ಲ ಸರ್ವಜ್ಞ||


ಸರ್ವಜ್ಞ ವಚನ 310 :
ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ
ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು
ಹುಟ್ಟಿಸನದೇಕೆ ಸರ್ವಜ್ಞ||


ಸರ್ವಜ್ಞ ವಚನ 311 :
ಸಾಣೆಕಲ್ಲೊಳು ಗಂಧ । ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ – ದಿಂ ಮುಕ್ತಿ
ಕಾಣೆಸುತಿಹುದು ಸರ್ವಜ್ಞ||


ಸರ್ವಜ್ಞ ವಚನ 312 :
ಬೇಗೆಯೊಳು ಹೋಗದಿರು । ಮೂಕರೊಳು ನುಡಿಯದಿರು ।
ಆಗದರ ನಂಬಿ ಕೆಡದೆ ಇರು ನಡುವಿರಳು ।
ಹೋಗದಿರು ಪಯಣ ಸರ್ವಜ್ಞ||


ಸರ್ವಜ್ಞ ವಚನ 313 :
ಹೊಟ್ಟೆಯನು ಕಳ್ಳುವದು । ಬಟ್ಟೆಯಲಿ ಬಡಿಸುವದು
ಕಟ್ಟಾಳ ಭಂಗಪಡಿಸುವದು ಗೇಣುದ್ದ ।
ಹೊಟ್ಟೆ ಕಾಣಯ್ಯ ಸರ್ವಜ್ಞ||


ಸರ್ವಜ್ಞ ವಚನ 314 :
ಹಾರುವನು ಉಪಕಾರಿ । ಹಾರುವನು ಅಪಕಾರಿ ।
ಹಾರುವನು ತೋರ್ಪ ಬಹುದಾರಿ, ಮುನಿದರ್‍ಆ ।
ಹಾರುವನೆ ಮಾರಿ ಸರ್ವಜ್ಞ||


ಸರ್ವಜ್ಞ ವಚನ 315 :
ಧಾರುಣಿ ನಡುಗುವುದು | ಮೇರುವಲ್ಲಾಡುವುದು
ವಾರಿಧಿ ಬತ್ತಿ ಬರೆವುದು – ಶಿವಭಕ್ತಿ
ಯೋರೆಯಾದಂದು ಸರ್ವಜ್ಞ||


ಸರ್ವಜ್ಞ ವಚನ 316 :
ದಂತಪಂಕ್ತಿಯ ನಡುವೆ। ಎಂತಿಪ್ಪುದದು ಜಿಹ್ವೆ।
ಅಂತು ದುರ್ಜನರ ಬಳಸಿನಲಿ ಸಜ್ಜನನು ।
ನಿಂತಿಹನು ನೋಡ ಸರ್ವಜ್ಞ||


ಸರ್ವಜ್ಞ ವಚನ 317 :
ಓಂಕಾರ ಮುಖವಲ್ಲ । ಆಕಾರವದಕಿಲ್ಲ ।
ಆಕಾಶದಂತೆ ಅಡಗಿಹುದು ಪರಬೊಮ್ಮ ।
ವೇಕಾಣದಯ್ಯ ಸರ್ವಜ್ಞ||


ಸರ್ವಜ್ಞ ವಚನ 318 :
ಮೂರೆಳೆಯನುಟ್ಟಾತ । ಹಾರುವಡೆ ಸ್ವರ್ಗಕ್ಕೆ ।
ನೂರೆಂಟು ಎಳೆಯ ಕವುದಿಯನು ಹೊದ್ದಾತ ।
ಹಾರನೇಕಯ್ಯ ಸರ್ವಜ್ಞ||


ಸರ್ವಜ್ಞ ವಚನ 319 :
ಹಾಸು ಇಲ್ಲದ ನಿದ್ರೆ । ಪೂಸು ಇಲ್ಲದ ಮೀಹ ।
ಭಾಷೆಯರಿಯದಳ ಗೆಳೆತನವು ಮೋಟಕ್ಕೆ ।
ಬೀಸಿ ಕರದಂತೆ ಸರ್ವಜ್ಞ||


ಸರ್ವಜ್ಞ ವಚನ 320 :
ಗಾಳಿ ದೂಳಿಯ ದಿನಕೆ। ಮಾಳಿಗೆಯ ಮನೆ ಲೇಸು।
ಹೋಳಿಗೆ ತುಪ್ಪ ಉಣಲೇಸು, ಬಾಯಿಗೆ।
ವೀಳೆಯವು ಲೇಸು ಸರ್ವಜ್ಞ||


ಸರ್ವಜ್ಞ ವಚನ 321 :
ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು ।
ಎಲ್ಲರೂ ಶಿವನ ಮರೆದಿಹರೆ ಕೈಲಾಸ ।
ದಲ್ಲಿ ಹಾಳಕ್ಕು ಸರ್ವಜ್ಞ||


ಸರ್ವಜ್ಞ ವಚನ 322 :
ತಾಗುವಾ ಮುನ್ನವೇ ಬಾಗುವಾ ತಲೆ ಲೇಸು ।
ತಾಗಿ ತಲೆಯೊಡೆದು ಕೆಲಸವಾದ ಬಳಿಕದರ ।
ಭೋಗವೇನೆಂದ ಸರ್ವಜ್ಞ||


ಸರ್ವಜ್ಞ ವಚನ 323 :
ತೋಟ ಬೆಳೆಯನ್ನು । ದಾಟಿ ನೋಡದವರಾರು ।
ಮೀಟು ಜವ್ವನದ ಸೊಬಗೆಯ ನೆರೆ ಕಂಡು ।
ದಾಟದವರಾರು ಸರ್ವಜ್ಞ||


ಸರ್ವಜ್ಞ ವಚನ 324 :
ರಾತ್ರಿಯೊಳು ಶಿವರಾತ್ರಿ । ಜಾತ್ರೆಯೊಳು ಶ್ರ್‍ಈಶೈಲ ।
ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ ।
ಸ್ತೋತ್ರದೊಳಗಧಿಕ ಸರ್ವಜ್ಞ||


ಸರ್ವಜ್ಞ ವಚನ 325 :
ಮೆಚ್ಚದಿರು ಪರಸತಿಯ । ರಚ್ಚೆಯೊಳು ಬೆರೆಯದಿರು ।
ನಿಚ್ಚ ನೆರೆಯೊಳಗೆ ಕಾದದಿರು, ಒಬ್ಬರಾ ।
ಇಚ್ಚೆಯಲಿರದಿರು ಸರ್ವಜ್ಞ||


ಸರ್ವಜ್ಞ ವಚನ 326 :
ತುಪ್ಪವಾದಾ ಬಳಿಕ । ಹೆಪ್ಪನೆರೆದವರುಂಟೆ
ನಿಃಪತಿಯಾದ ಗುರುವಿನುಪದೇಶದಿಂ
ತಪ್ಪದೇ ಮುಕ್ತಿ ಸರ್ವಜ್ಞ||


ಸರ್ವಜ್ಞ ವಚನ 327 :
ಮುರಿದ ಹೊಂಬೆಸೆಯವಡೆ । ಕಿರಿದೊಂದು ರಜ ಬೇಕು ।
ಮುರಿದ ಕಾರ್ಯವನು ಬೆಸೆಯುವಡೆ ಮತ್ತೊಂದ ।
ನರಿಯದವರು ಬೇಕು ಸರ್ವಜ್ಞ||


ಸರ್ವಜ್ಞ ವಚನ 328 :
ನೂರು ಹಣ ಕೊಡುವನಕ । ಮೀರಿ ವಿನಯದಲಿಪ್ಪ ।
ನೂರರೋಳ್ಮೂರ ಕೇಳಿದರೆ ಸಾಲಿಗನು ।
ತೂರುಣನು ಮಣ್ಣು ಸರ್ವಜ್ಞ||


ಸರ್ವಜ್ಞ ವಚನ 329 :
ಹಿರಿದು ಪಾಪವ ಮಾಡಿ – ಹರಿವರು ಗಂಗೆಗೆ
ಹರಿವ ನೀರಲ್ಲಿ ಕರಗುವೊಡೆ – ಯಾ ಪಾಪ
ಎರೆಯ ಮಣ್ಣಲ್ಲ ಸರ್ವಜ್ಞ||


ಸರ್ವಜ್ಞ ವಚನ 330 :
ಸಣ್ಣನೆಯ ಮಳಲೊಳಗೆ । ನುಣ್ಣನೆಯ ಶಿಲೆಯೊಳಗೆ
ಬಣ್ಣಿಸುತ ಬರೆದ ಪಟದೊಳಗೆ ಇರುವಾತ ।
ತನ್ನೂಳಗೆ ಇರುನೇ ? ಸರ್ವಜ್ಞ||


ಸರ್ವಜ್ಞ ವಚನ 331 :
ಉದ್ಯೋಗವುಳ್ಳವನ । ಹೊದ್ದುವದು ಸಿರಿ ಬಂದು ।
ಉದ್ಯೋಗವಿಲ್ಲದಿರುವವನು ಕರದೊಳಗೆ ।
ಇದ್ದರೂ ಪೋಕು ಸರ್ವಜ್ಞ||


ಸರ್ವಜ್ಞ ವಚನ 332 :
ಬೆಂಡಿರದೆ ಮುಳುಗಿದರೂ । ಗುಂಡೆದ್ದು ತೇಲಿದರೂ ।
ಬಂಡಿಯ ನೊಗವು ಚಿಗಿತರೂ ಸಾಲಿಗನು ।
ಕೊಂಡದ್ದು ಕೊಡನು ಸರ್ವಜ್ಞ||


  ಸರ್ವಜ್ಞ ವಚನ 1 : ಉತ್ತಮ ಮಧ್ಯಮ ಅಧಮ

ಸರ್ವಜ್ಞ ವಚನ 333 :
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ||


ಸರ್ವಜ್ಞ ವಚನ 334 :
ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕೊಲೆಯು
ಮಾತಿನಿಂ ಸರ್ವ ಸಂಪದವು ಲೋಕಕ್ಕೆ
ಮಾತೆ ಮಾಣಿಕವು ಸರ್ವಜ್ಞ||


ಸರ್ವಜ್ಞ ವಚನ 335 :
ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
ಮತ್ತೆ ಪಾಂಡವರಿಗಾಳಾದ ಹರಿಯು ತಾ
ನೆತ್ತಣಾ ದೈವ ಸರ್ವಜ್ಞ||


ಸರ್ವಜ್ಞ ವಚನ 336 :
ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ
ಬರೆವವರ ಕೂಡ ಹಗೆ ಬೇಡ ಬಂಗಾರ
ದೆರವು ಬೇಡೆಂದ ಸರ್ವಜ್ಞ||


ಸರ್ವಜ್ಞ ವಚನ 337 :
ಲಿಂಗವನು ಅಂದವನ ಅಂಗ ಹಿಂಗಿರಬೇಕು
ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
ಹಿಂಗಿದಪ್ಪಂದ ಸರ್ವಜ್ಞ||


ಸರ್ವಜ್ಞ ವಚನ 338 :
ಅಕ್ಕಸಾಲಿಗನೂರಿ । ಗೊಕ್ಕಲೆಂದೆನಬೇಡ ।
ಬೆಕ್ಕು ಬಂದಿಲಿಯ ಹಿಡಿದಂತೆ ಊರಿಗವ ।
ರಕ್ಕಸನು ತಾನು ಸರ್ವಜ್ಞ||


ಸರ್ವಜ್ಞ ವಚನ 339 :
ಹಣವಿಗೊಂದು ರವಿ । ಪ್ಪಣಕೊಂದು ಬೇಳೆಯನು ।
ತ್ರಿಣಯನಾ ಮುಕುಟವಾದರಾ ಅಕ್ಕಸಾಲೆ ।
ಟೊನೆಯದೇ ಬಿಡನು ಸರ್ವಜ್ಞ||


ಸರ್ವಜ್ಞ ವಚನ 340 :
ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ ನೆನೆದರೆ ಮೃತ್ಯುವು
ದೂರಕ್ಕೆ ದೂರ ಸರ್ವಜ್ಞ||


ಸರ್ವಜ್ಞ ವಚನ 341 :
ಎಂಬಲವು ಸೌಚವು । ಸಂಜೆಯೆಂದೆನಬೇಡ ।
ಕುಂಜರವು ವನವ ನೆನೆವಂತೆ ಬಿಡದೆ ನಿ ।
ರಂಜನನ ನೆನೆಯೋ ಸರ್ವಜ್ಞ||


ಸರ್ವಜ್ಞ ವಚನ 342 :

ಒಲೆಯುವಳು ಹಸ್ತಿನಿಯು। ಮಲೆಯುವಳು ಚಿತ್ತಿನಿಯು।
ತಲೆವಾಗಿ ನಡೆಯುವಳು ಶಂಖಿನಿಯು, ಪದ್ಮಿನಿಯು।
ಸುಲಭವಾಗಿಹಳು ಸರ್ವಜ್ಞ||


ಸರ್ವಜ್ಞ ವಚನ 343 :
ಜಲದ ಒಳಗಣ ಮೀನು। ಹೊಳೆವ ಕೊಂಬಿನ ಮೇಲೆ।
ಬೆಳೆದ ಗಿರಿ ಕಂಡುಕೊಳುತಿರ್ಕು ಕನ್ನಡದ ।
ಒಳಗನಾರ್ಬಲ್ಲ ಸರ್ವಜ್ಞ||


ಸರ್ವಜ್ಞ ವಚನ 344 :

ಮೊಲೆಗಳುಗಿದವಳಾಗಿ । ಚಲುವೆ ಒಲಿದವಳಾಗಿ ।
ಹಲತೆರದಿ ಕರೆವ ಕಾಮಿನಿಯ ನೆರೆ ಬಿಟ್ಟು
ತೊಲಗುವರಾರು ಸರ್ವಜ್ಞ||


ಸರ್ವಜ್ಞ ವಚನ 345 :
ಕೊಂಬುವನು ಸಾಲವನು । ಉಂಬುವನು ಲೇಸಾಗಿ ।
ಬೆಂಬಲವ ಪಿಡಿದು – ಬಂದರಾದೇಗುಲದ ।
ಕಂಬದಂತಿಹನು ಸರ್ವಜ್ಞ||


ಸರ್ವಜ್ಞ ವಚನ 346 :
ಅವರೆಂದರವನು ತಾ । ನವರಂತೆ ಆಗುವನು ।
ಅವರೆನ್ನದವನು ಜಗದೊಳಗೆ ಬೆಂದಿರ್ದ ।
ಅವರೆಯಂತಕ್ಕು ಸರ್ವಜ್ಞ||


ಸರ್ವಜ್ಞ ವಚನ 347 :
ಬೇಡ ಕಾಯದೇ ಕೆಟ್ಟ । ಜೇಡಿ ನೇಯದೆ ಕೆಟ್ಟ ।
ನೋಡದಲೆ ಕೆಟ್ಟ ಕೃಷಿಕ, ತಾ ।
ಸತಿಯ ಬಿಟ್ಟಾಡಿದವ ಕೆಟ್ಟ ಸರ್ವಜ್ಞ||


ಸರ್ವಜ್ಞ ವಚನ 348 :
ಸತ್ಯರಿಗೆ ಧರೆಯೆಲ್ಲ ।
ಮಸ್ತಕವನೆರಗುವದು । ಹೆತ್ತ ತಾಯ್ಮಗನ
ಕರೆವಂತೆ ಶಿವನವರನೆತ್ತಿ ಕೊಂಬುವನು ಸರ್ವಜ್ಞ||


ಸರ್ವಜ್ಞ ವಚನ 349 :
ಮೂರುಕಣ್ಣೀಶ್ವರನ । ತೋರಿಕೊಡಬಲ್ಲ ಗುರು
ಬೇರರಿವುದೊಂದು ತೆರನಿಲ್ಲ – ಗುರುಕರಣ
ತೋರಿಸುಗು ಶಿವನ ಸರ್ವಜ್ಞ||


ಸರ್ವಜ್ಞ ವಚನ 350 :
ಕತ್ತಿಲಾದಾ ಘಾಯಾ । ಮುತ್ತಿದರೆ ಮಾಯುವದು ।
ಸುತ್ತಲಾಡುತಿಹ ಜಿಹ್ವೆಯಾಗಾಯ ।
ಸತ್ತು ಮಾಯವದೆ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post