Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (251-300)

ಸರ್ವಜ್ಞ ವಚನ 251 :
ನರಸಿಂಹನವತಾರ
ಹಿರಿದಾದ ಅದ್ಭುತವು
ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ||

ಸರ್ವಜ್ಞ ವಚನ 252 :
ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ||

ಸರ್ವಜ್ಞ ವಚನ 253 :
ಆನೆ ನೀರಾಟದಲಿ | ಮೀನ ಕಂಡಂಜುವುದೇ
ಹೀನಮಾನವರ ಬಿರುನುಡಿಗೆ – ತತ್ವದ
ಜ್ಞಾನಿ ಅಂಜುವನೆ ಸರ್ವಜ್ಞ||

ಸರ್ವಜ್ಞ ವಚನ 254 :
ಶಿವಭಕ್ತಿಯುಳ್ಳಾತ । ಭವಮುಕ್ತನಾದಾತ ।
ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು ।
ಭವಮುಕ್ತಿಯಿಲ್ಲ ಸರ್ವಜ್ಞ||

ಸರ್ವಜ್ಞ ವಚನ 255 :
ಅಳೆ ಲೇಸು ಗೊಲ್ಲಂಗೆ । ಮಳೆ ಲೇಸು ಕಳ್ಳಂಗೆ ।
ಬಲೆ ಲೇಸು ಮೀನ ಹಿಡಿವಂಗೆ ।
ಕುರುಡಂಗೆ ಸುಳಿದಾಟ ಲೇಸು ಸರ್ವಜ್ಞ||

ಸರ್ವಜ್ಞ ವಚನ 256 :
ಬೆಣ್ಣೆ ಬೆಂಕಿಯ ನಡುವೆ। ತಣ್ಣಗಿಲಬಲ್ಲುದೇ?।
ಹೆಣ್ಣಿರ್ದ ಮನೆಗೆ ಎಡತಾಕಿ ಶಿವಯೋಗಿ।
ಮಣ್ಣು ಮಸಿಯಾದ ಸರ್ವಜ್ಞ||

ಸರ್ವಜ್ಞ ವಚನ 257 :
ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ – ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ||

ಸರ್ವಜ್ಞ ವಚನ 258 :
ಮಾಳಗೆಯ ಮನೆ ಲೇಸು । ಗೂಳಿಯಾ ಪಶುಲೇಸು ।
ಈಳೆಯಾ ಹಿತ್ತಲಿರಲೇಸು ।
ಪತಿವ್ರತೆಯ ಬಾಳು ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 259 :
ಷಡುದರುಶನಾದಿಗಳು । ಮೃಡ ಮಾಡಲಾದುವು
ಹೊಡವಡುತೆ ನಿಗಮವರಿಸುವವು – ಅಭವನ
ಗಡಣಕೇಕೆ ಯಾರು ಸರ್ವಜ್ಞ||

ಸರ್ವಜ್ಞ ವಚನ 260 :
ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
ಇಲ್ಲೆನ್ನಲರಿಯನು ಸರ್ವಜ್ಞ||

ಸರ್ವಜ್ಞ ವಚನ 261 :
ಯಾತರ ಹೂವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ||

ಸರ್ವಜ್ಞ ವಚನ 262 :
ಕೊಟ್ಟಣವ ಕುಟ್ಟುವುದು ಮೊಟ್ಟೆಯನು ಹೊರಿಸುವುದು
ಬಿಟ್ಟಿಕೂಲಿಗಳ ಮಾಡಿಸುವುದು ಗೇಣು
ಹೊಟ್ಟೆ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 263 :
ಗಡಿಯ ನಾಡಿನ ಸುಂಕ । ತಡೆಯಲಂಬಿಗೆ ಕೂಲಿ ।
ಮುಡಿಯಂಬಂತೆ, ಒಳಲಂಚ, ಇವು ನಾಲ್ಕು ।
ಅಡಿಯಿಟ್ಟದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 264 :
ಅಣುರೇಣುವೃಂದ್ಯದಾ । ಪ್ರಣವದಾ ಬೀಜವನು ।
ಅಣುವಿನೊಳಗುಣವೆಂದರಿದಾ ಮಹಾತ್ಮನು ।
ತ್ರಿಣಯನೇ ಅಕ್ಕು ಸರ್ವಜ್ಞ||

ಸರ್ವಜ್ಞ ವಚನ 265 :
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ – ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ||

ಸರ್ವಜ್ಞ ವಚನ 267 :
ಪಮಚಾಳಯ್ವರುಂ । ವಂಚನೆಗೆ ಗುರುಗಳೇ ।
ಕಿಂಚಿತ್ತು ನಂಬಿ ಕೆಡಬೇಡ , ತಿಗುಣಿಯಾ
ಮಂಚದಂತಿಹರು ಸರ್ವಜ್ಞ||

ಸರ್ವಜ್ಞ ವಚನ 268 :
ಬೇಡುವುದು ಭಿಕ್ಷೆಯನು , ಮಾಡುವುದು ತಪವನ್ನು
ಕಾಡದೇಪೆರಾರ ನೋಡುವನು , ಶಿವನೊಳಗೆ
ಕೊಡಬಹುದೆಂದ , ಸರ್ವಜ್ಞ||

ಸರ್ವಜ್ಞ ವಚನ 269 :
ತಪ್ಪು ಮಾಡಿದ ಮನುಜ । ಗೊಪ್ಪುವದು ಸಂಕೋಲೆ ।
ತಪ್ಪು ಮಾಡದಲೆ ಸೆರೆಯು ಸಂಕೋಲೆಗಳು ।
ಬಪ್ಪವನೆ ಪಾಪಿ ಸರ್ವಜ್ಞ||

ಸರ್ವಜ್ಞ ವಚನ 270 :
ಸಿರಿಯಣ್ಣನುಳ್ಳತನಕ । ಹಿರಿಯಣ್ಣ ನೆನೆಸಿಪ್ಪ ।
ಸಿರಿಯಣ್ಣ ಹೋದ ಮರುದಿನವೆ ಹಿರಿಯಣ್ಣ ।
ನರಿಯಣ್ಣನೆಂದ ಸರ್ವಜ್ಞ||

ಸರ್ವಜ್ಞ ವಚನ 271 :
ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
ಕೊಟ್ಟಗುರಿದಂತೆ ಸರ್ವಜ್ಞ||

ಸರ್ವಜ್ಞ ವಚನ 272 :
ಒಣಗಿದ ಮರ ಚಿಗಿತು । ಬಿಣಿಲು ಬಿಡುವುದ ಕಂಡೆ।
ತಣಿಗೆಯ ತಾಣಕದು ಬಹುದು ಕವಿಗಳಲಿ।
ಗುಣಯುತರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 273 :
ಕತ್ತೆಯೇರಲು ಹೊಲ್ಲ । ತೊತ್ತು ಸಂಗವು ಹೊಲ್ಲ ।
ಬತ್ತಲೆಯ ಜಲವ ಹೊಗಹೊಲ್ಲ ಇವುಗಳಲ್ಲಿ ।
ಅತ್ಯಂತ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 274 :
ಹಸಿವಿಲ್ಲದುಣಬೇಡ । ಹಸಿದು ಮತ್ತಿರಬೇಡ ।
ಬಿಸಿಬೇಡ ತಂಗಳುಣಬೇಡ ವೈದ್ಯನಾ ।
ಗಸಣಿಯೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 275 :
ಪಾತಾಳಕಿಳಿಯುವದು। ಸೀತಳವ ತರುತಿಹುದು।
ಭೂತಳದ ಮೇಲೆ ಇರುತಿಹುದು ಅದು ತಾನು।
ಏತರದು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 276 :
ತನ್ನ ಸುತ್ತಲು ಮಣಿಯು ।
ಬೆಣ್ಣೆ ಕುಡಿವಾಲುಗಳು ತಿನ್ನದೆ ಹಿಡಿದು ತರುತಿಹುದು
ಕವಿಗಳಿಂದ ನನ್ನಿಯಿಂ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 277 :
ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು – ಜಾವಕ್ಕೆ
ಹರೆದು ಹೋಹಂತೆ ಸರ್ವಜ್ಞ||

ಸರ್ವಜ್ಞ ವಚನ 278 :
ಕೂಳು ಹೋಗುವ ತನಕ । ಗೂಳಿಯಂತಿರುತಿಕ್ಕು ।
ಕೂಳು ಹೋಗದಾ ಮುದಿ ಬರಲು ಮನುಜನವ ।
ಮೂಳನಾಯಕ್ಕು ಸರ್ವಜ್ಞ||

ಸರ್ವಜ್ಞ ವಚನ 279 :
ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ – ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ||

ಸರ್ವಜ್ಞ ವಚನ 280 :
ಬಿತ್ತದಾ ಹೊಲ ಹೊಲ್ಲ । ಮೆತ್ತದಾ ಮನೆ ಹೊಲ್ಲ ।
ಚಿತ್ತ ಬಂದತ್ತತಿರುಗುವಾ ಮಗ ಹೊಲ್ಲ ।
ಬತ್ತಲಿರ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 281 :
ಕೊಟ್ಟು ಮರುಗಲು ಬೇಡ ಬಿಟ್ಟು ಹಿಡಿಯಲು ಬೇಡ ।
ಕೆಟ್ಟಾ ನಡೆಯುಳ ನೆರೆಬೇಡ ।
ಪರಸತಿಯ ಮುಟ್ಟಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 282 :
ಕೇಡನೊಬ್ಬಗೆ ಬಗೆದು । ಕೇಡು ತಪ್ಪದು ತನಗೆ ।
ನೋಡಿ ಕೆಂಡವನು ಹಿಡಿದೊಗೆದು ನೋವ ತಾ ।
ಬೇಲಿ ಬಗೆದಂತೆ ಸರ್ವಜ್ಞ||

ಸರ್ವಜ್ಞ ವಚನ 283 :
ವನಕೆ ಕೋಕಿಲೆ ಲೇಸು। ಮನಕೆ ಹರುಷವೈ ಲೇಸು।
ಕನಕವುಳ್ಳವನ ಕೆಳೆ ಲೇಸು, ವಿದ್ಯಕೆ।
ವಿನಯ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 284 :
ಮನದಲ್ಲಿ ನೆನೆವಂಗೆ । ಮನೆಯೇನು ಮಠವೇನು ।
ಮನದಲ್ಲಿ ನೆನೆಯದಿರುವವನು ।
ದೇಗುಲದ ಕೊನೆಯಲ್ಲಿದ್ದೇನು ? । ಸರ್ವಜ್ಞ||

ಸರ್ವಜ್ಞ ವಚನ 285 :
ಬಂಧುಗಳಾದವರು ಮಿಂದುಂಡು ಹೋಹರು
ಬಂಧನವ ಕಳೆಯಲರಿಯರು – ಗುರುವಿಂದ
ಬಂಧನವಳಿಗು ಸರ್ವಜ್ಞ||

ಸರ್ವಜ್ಞ ವಚನ 286 :
ಜ್ಞಾನದಿಂ ಮೇಲಿಲ್ಲ । ಶ್ವಾನನಿಂ ಕೀಳಿಲ್ಲ ।
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ ।
ಜ್ಞಾನವೇ ಮೇಲು ಸರ್ವಜ್ಞ||

ಸರ್ವಜ್ಞ ವಚನ 287 :
ಕಾಣಿಸಿರುವಂತವನ । ಕಾಣದೇಕಿರುವಿರೋ ।
ಕಾಣಲು ಬಿಡಲು ಕರ್ಮಗಳು ನಿನ್ನಿರವ ।
ಆಣೆ ಇಟ್ಟಿಹವು ಸರ್ವಜ್ಞ||

ಸರ್ವಜ್ಞ ವಚನ 288 :
ಅಕ್ಕಿಯೋಗರ ಲೇಸು । ಮೆಕ್ಕೆಹಿಂಡಿಯು ಲೇಸು ।
ಮಕ್ಕಳನು ಹೆರುವ ಸತಿ ಲೇಸು ಜಗಕೆಲ್ಲ ।
ರೊಕ್ಕವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 289 :
ಕೊಲ್ಲದಿರ್ಪಾಧರ್ಮ । ವೆಲ್ಲರಿಗೆ ಸಮ್ಮತವು ।
ಅಲ್ಲದನು ಮೀರಿ ಕೊಲ್ಲುವನು ನರಕಕ್ಕೆ ।
ನಿಲ್ಲದಲೆ ಹೋದ ಸರ್ವಜ್ಞ||

ಸರ್ವಜ್ಞ ವಚನ 290 :
ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
ನಷ್ಟ ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 291 :
ಪಲ್ಲಕ್ಕಿ ಏರಿದವ । ರೆಲ್ಲಿಂದ ಬಂದಿಹರು ।
ನೆಲ್ಲಕ್ಕಿಯಂತೆ ಸುಲಿವಲ್ಲ ಹಿರಿಯರುಂ ।
ನೆಲ್ಲಳಿಂದಲೇ ಸರ್ವಜ್ಞ||

ಸರ್ವಜ್ಞ ವಚನ 292 :
ಅತ್ತ ಸೂಳೆಯ ಸಂಗ। ಇತ್ತ ಬೋಳಿಯ ಸಂಗ।
ಮತ್ತೆ ಪಶುಸಂಗದಿರುವಂಗೆ ಭವಭವದಿ।
ಕತ್ತೆಯ ಜನುಮ ಸರ್ವಜ್ಞ||

ಸರ್ವಜ್ಞ ವಚನ 293 :
ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ
ತತ್ವವರಿಯದಲೆ ಭಸಿತವಿಟ್ಟರೆ ಶುದ್ಧ
ಕತ್ತೆಯಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 294 :
ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
ಬಲುಕವಲು ಒಡೆದು ಬೇರಿಂದ ತುದಿತನಕ
ಹಲಸು ಕಾತಂತೆ ಸರ್ವಜ್ಞ||

ಸರ್ವಜ್ಞ ವಚನ 295 :
ನೆತ್ತಿಯಲೆ ಉಂಬುವದು । ಸುತ್ತಲೂ ಸುರಿಸುವದು ।
ಎತ್ತಿದರೆ ಎರಡು ಹೋಳಹುದು ಕವಿಗಳಿಂದ
ಕುತ್ತರವ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 296 :
ಉಂಲಡಿಗೆ ಹಲಾವಾಗಿ । ಕಣಿಕ ತಾನೊಂದಯ್ಯ
ಮಣಿಯಿಸಿವೆ ದೈವ ಘನವಾಗಿ,
ಜಗಕೆಲ್ಲಿ ತ್ರಿಣಯನೇ ದೈವ ಸರ್ವಜ್ಞ||

ಸರ್ವಜ್ಞ ವಚನ 297 :
ಅಜನನೊಕ್ಕಲು ಅಲ್ಲ । ಹೂಜೆ ಭಾಂಡಿಯೊಳಲ್ಲ ।
ಗಾಜೊಂದು ಲೋಹದೊಳಗಲ್ಲ ಅಂಬಲಿಯು ।
ಭೋಜನದೊಳಲ್ಲ ಸರ್ವಜ್ಞ||

ಸರ್ವಜ್ಞ ವಚನ 298 :
ಒಮ್ಮೆ ಸೀತರೆ ಹೊಲ್ಲ । ಇಮ್ಮೆ ಸೀತರೆ ಲೇಸು
ಕೆಮ್ಮಿಕೇಕರಿಸಿ ಉಗುಳುವಾ ಲೇಸು ।
ಆ ಬೊಮ್ಮಗು ಇಲ್ಲ ಸರ್ವಜ್ಞ||

ಸರ್ವಜ್ಞ ವಚನ 299 :
ಒಲೆಗುಂಡನೊಬ್ಬನೇ । ಮೆಲಬಹುದು ಎನ್ನುವಡೆ ।
ಮೆಲಭುದು ಎಂಬುವನೆ ಜಾಣ, ಮೂರ್ಖನಂ ।
ಗೆಲಲಾಗದಯ್ಯ ಸರ್ವಜ್ಞ||

ಸರ್ವಜ್ಞ ವಚನ 300 :
ಮುಗೈಯ ಲಾಡುವದು । ಹಿಂಗುವದು ಹೊಂಗುವದು
ಸಿಂಗಿಯಲಿ ಸೀಳಿ ಬಿಡುತಿಹುದು ಆ ಮಿಗದ
ಸಂಗವನು ನೋಡು ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post