Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (201-250)

ಸರ್ವಜ್ಞ ವಚನ 201 :
ಆಡಿ ಹುಸಿಯಲು ಹೊಲ್ಲ । ಕೂಡಿ ತಪ್ಪಲು ಹೊಲ್ಲ ।
ಕಾಡುವಾ ನೆಂಟ ಬರ ಹೊಲ್ಲ ಸಟಿಯ ।
ನಾಡುವನೆ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 202 :
ಕೊಂದು ತಿನ್ನುವ ಕಂದ । ಕೊಂದನೆಂದೆನಬೇಡ ।
ನೊಂದಂತೆ ನೋವರಿಯದಾ ನರರಂದು ।
ಕೊಂದಿಹುದೆ ನಿಜವು ಸರ್ವಜ್ಞ||

ಸರ್ವಜ್ಞ ವಚನ 203 :
ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ
ಹಸಿದು ಮಾಡುವನ ಪೂಜೆಯದು ಬೋಗಾರ
ಪಸರ ವಿಟ್ಟಂತೆ ಸರ್ವಜ್ಞ||

ಸರ್ವಜ್ಞ ವಚನ 204 :
ಹುಲಿಯ ಬಾಯಲ್ಲಿ ಸಿಕ್ಕ । ಹುಲ್ಲೆಯಂದದಿ ಮೊರವೆ ।
ಬಲಿಯ ಬಿಡಿಸೆನ್ನ ಗುರುರಾಯ ಮರೆಹೊಕ್ಕೆ ।
ಕೊಲುತಿಹಳು ಮಾಯೆ ಸರ್ವಜ್ಞ||

ಸರ್ವಜ್ಞ ವಚನ 205 :
ಕೋಳಿಕೂಗದಮುನ್ನ । ಏಳುವದು ನಿತ್ಯದಲಿ ।
ಬಾಳ ಲೋಚನನ ಭಕ್ತಿಯಿಂ ನೆನೆದರೆ ।
ಸರ್ವಜ್ಞ||

ಸರ್ವಜ್ಞ ವಚನ 206 :
ಕುರಿಯನೇರಲು ಗುರುವು । ಧರೆಗೆ ಹೆಮ್ಮೆಳೆಯಕ್ಕು ।
ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳೆಗೆ ।
ಕರೆಯಲ್ಹಯನಕ್ಕು ಸರ್ವಜ್ಞ||

ಸರ್ವಜ್ಞ ವಚನ 207 :
ಕಿಚ್ಚುಂಟು ಕೆಸರುಂಟು।ಬೆಚ್ಚನ ಮನೆಯುಂಟು।
ಇಚ್ಛೇಗೆ ಬರುವ ಸತಿಯುಂಟು, ಮಲೆನಾಡ ।
ಮೆಚ್ಚು ನೋಡೆಂದ ಸರ್ವಜ್ಞ||

ಸರ್ವಜ್ಞ ವಚನ 208 :
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
ನಿಃಪತ್ತಿಯಾದ ಗುರುವಿನುಪದೇಶದಿಂ
ತಪ್ಪದೇ ಮುಕ್ತಿ ಸರ್ವಜ್ಞ||

ಸರ್ವಜ್ಞ ವಚನ 209 :
ಸುರೆಯ ಹಿರಿದುಂಡವಗೆ। ಉರಿಯ ಮೇಲ್ದುಡುಕುವಗೆ।
ಹರಿಯುವ ಹಾವು, ಪರನಾರಿ ಪಿಡಿದಂಗೆ।
ಮರಣದ ನೆರಳು ಸರ್ವಜ್ಞ||

ಸರ್ವಜ್ಞ ವಚನ 210 :
ಹೇಳಿದರೆ ಕೇಳಿದರೆ । ಕೇಳುವದು ಕರಲೇಸು ।
ಹೇಳಿದರೆ ಕೇಳಿದಿರುವವನ ಉಪ್ಪರಿಗೆ ।
ಕೇಳಗೂ ಕಷ್ಟ ಸರ್ವಜ್ಞ||

ಸರ್ವಜ್ಞ ವಚನ 211 :
ಅಡವಿಯಲಿ ಹುಟ್ಟಿಹುದು। ಗಿಡಮರನು ಆಗಿಹುದು।
ಕಡಿದರೆ ಕಂಪ ಕೊಡುತಿಹುದು, ಇದನೊಡೆದು।
ತಡೆಯದೆ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 212 :
ಹಸಿದಿಹರೆ ಉಣಲಿಲ್ಲ। ಒಸೆದೇಳ ಹೊತ್ತಿಲ್ಲ।
ಬೆಸಗೊಂಬುವುದಕೆ ಗಡಿಯಿಲ್ಲ, ಜೋಯಿಸರ।
ಘಸಣೆಯೇ ಸಲ್ಲ ಸರ್ವಜ್ಞ||

ಸರ್ವಜ್ಞ ವಚನ 213 :
ಆದಿ ದೈವವನು ತಾ ಭೇದಿಸಲಿ ಕರಿಯದಲೆ
ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ||

ಸರ್ವಜ್ಞ ವಚನ 214 :
ಮುಟ್ಟಾದ ಹೊಲೆಯೊಳಗೆ । ಹುಟ್ಟಿಹುದು ಜಗವೆಲ್ಲ।
ಮುಟ್ಟಬೇಡೆಂದು ತೊಲಗುವ ಹಾರುವನು।
ಹುಟ್ಟಿದನು ಎಲ್ಲಿ ಸರ್ವಜ್ಞ||

ಸರ್ವಜ್ಞ ವಚನ 215 :
ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ
ಆಯಾಸಗೊಳುತ ಇರಬೇಡ – ಓಂ ನಮಶ್ಯಿ
ವಾಯವೆಂದೆನ್ನಿ ಸರ್ವಜ್ಞ||

ಸರ್ವಜ್ಞ ವಚನ 216 :
ತುರುಕನಾ ನೆರೆ ಹೊಲ್ಲ । ಹರದನಾ ಕೆಳ ಹೊಲ್ಲ ।
ತಿರಿಗೊಳನಟ್ಟು ಉಣಹೊಲ್ಲ ।
ಪರಸ್ತ್ರೀಯ ಸರಸವೇ ಹೊಲ್ಲ । ಸರ್ವಜ್ಞ||

ಸರ್ವಜ್ಞ ವಚನ 217 :
ಕೊಟ್ಟಿಹರೆ ಹಾರುವರು । ಕುಟ್ಟುವರು ಅವರಂತೆ ।
ಬಿಟ್ಟಿರದ ನೋಡಿ ನುಡಿಸರಾ ಹಾರುವರು ।
ನೆಟ್ಟನೆಯವರೇ ಸರ್ವಜ್ಞ||

ಸರ್ವಜ್ಞ ವಚನ 218 :
ಮನವೆಂಬ ಮರ್ಕಟವು ।
ತನುವೆಂಬ ಮರನೇರಿ ತಿನುತಿಹುದು ವಿಷಯ ಫಲಗಳನು ।
ಕರುಣೆ ನೀ ತನುಮನ ಕಾಯೋ ಸರ್ವಜ್ಞ||

ಸರ್ವಜ್ಞ ವಚನ 219 :
ಆಡದಲೆ ಮಾಡುವನು ರೂಢಿಯೊಳಗುತ್ತಮನು
ಆಡಿ ಮಾಡುವನು ಮಧ್ಯಮನು ಅಧಮ ತಾ
ನಾಡಿಯೂ ಮಾಡದವನು ಸರ್ವಜ್ಞ||

ಸರ್ವಜ್ಞ ವಚನ 220 :
ಮಾತು ಮಾತಿಗೆ ತಕ್ಕ । ಮಾತು ಕೋಟಿಗಳುಂಟು ।
ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ ।
ಸೋತವನೆ ಜಾಣ ಸರ್ವಜ್ಞ||

ಸರ್ವಜ್ಞ ವಚನ 221 :
ಮುಟ್ಟಾದ ಹೊಲೆಯೊಳಗೆ । ಹುಟ್ಟುವುದು ಜಗವೆಲ್ಲ ।
ಮುಟ್ಟಬೇಡೆಂದ ತೊಲಗುವಾ ಹಾರುವನು ।
ಹುಟ್ಟಿರುವನೆಲ್ಲಿ ಸರ್ವಜ್ಞ||

ಸರ್ವಜ್ಞ ವಚನ 222 :
ಒಲ್ಲದವಳೊಡನಾಡಿ। ಚೆಲ್ಲವಾಡುವನೆಗ್ಗ ।
ಕಲ್ಲ ಪುತ್ಥಳಿಯ ಬಿಗಿದಪ್ಪಿ ಚುಂಬಿಸಲು।
ಹಲ್ಲು ಹೋದಂತೆ ಸರ್ವಜ್ಞ||

ಸರ್ವಜ್ಞ ವಚನ 223 :
ಹಾರುವರು ಸ್ವರ್ಗದ । ದಾರಿಯನು ಬಲ್ಲರೇ ।
ನಾರಿ ಪತಿವ್ರತದಿ ನಡೆಯೆ ಸ್ವರ್ಗದಾ ।
ದಾರಿ ತೋರುವಳು ಸರ್ವಜ್ಞ||

ಸರ್ವಜ್ಞ ವಚನ 224 :
ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ
ಕೊಂಡಾಡಲರಿಯದಧಮಂಗೆ ಲಿಂಗವದು
ಕೆಂಡದಂತಿಹುದು ಸರ್ವಜ್ಞ||

ಸರ್ವಜ್ಞ ವಚನ 225 :
ಮಾತಿನಿಂ ನಗೆ-ನುಡಿಯು । ಮಾತಿನಿಂ ಹಗೆ ಕೊಲೆಯು ।
ಮಾತಿನಿಂ ಸರ್ವ ಸಂಪದವು ಲೋಕಕ್ಕೆ ।
ಮಾತೆ ಮಾಣಿಕವು ಸರ್ವಜ್ಞ||

ಸರ್ವಜ್ಞ ವಚನ 226 :
ಅರಮನೆಯಲಿರುತಿಹುದು । ಕರದಲ್ಲಿ ಬರುತಿಹುದು ।
ಕೊರೆದು ವಂಶಜರ ತಿನುತಿಹುದು । ಕವಿಗಳಲಿ ।
ದೊರೆಗಳಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 227 :
ಹರಿವ ಹಕ್ಕಿ ನುಂಗಿ । ನೊರೆವಾಲ ಕುಡಿದಾತ ।
ಹರಿಹರನು ಅಕ್ಕು ಅಜನಕ್ಕು ಲೋಕಕ್ಕೆ ।
ಇರುವು ತಾನಕ್ಕು ಸರ್ವಜ್ಞ||

ಸರ್ವಜ್ಞ ವಚನ 228 :
ಸಾಯ್ವುದವಸರವೆ ಮನ । ಠಾಯಿಯಲಿ ನೋವುತ್ತೆ
ನಾಯಾಗಿ ನರಕ ಉಣಬೇಡ – ಓಂ ನಮಶ್ಯಿ
ವಾಯಯೇಂದನ್ನಿ ಸರ್ವಜ್ಞ||

ಸರ್ವಜ್ಞ ವಚನ 229 :
ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ
ರೋಷದಿಂದಧಮಗತಿಯಿಲ್ಲ – ಪರದೈವ
ಈಶನಿಂದಿಲ್ಲ ಸರ್ವಜ್ಞ||

ಸರ್ವಜ್ಞ ವಚನ 230 :
ಲಿಂಗದಾ ಗುಡಿ ಲೇಸು । ಗಂಗೆಯಾ ತಡಿ ಲೇಸು ।
ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ ।
ಸಂಗವೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 231 :
ಎಣ್ಣೆಯ ಋಣವು । ಅನ್ನ- ವಸ್ತ್ರದ ಋಣವು ।
ಹೊನ್ನು ಹೆಣ್ಣಿನಾ ಋಣವು ತೀರಿದ ಕ್ಷಣದಿ ।
ಮಣ್ಣು ಪಾಲೆಂದು ಸರ್ವಜ್ಞ||

ಸರ್ವಜ್ಞ ವಚನ 232 :
ಎತ್ತ ಹೋದರು ಒಂದು ತುತ್ತು ಕಟ್ಟಿರಬೇಕು
ತುತ್ತೊಂದು ಗಳಿಗೆ ತಡೆದಿಹರೆ ಕೈ ಹಿಡಿದು
ಎತ್ತಬೇಕೆಂದ ಸರ್ವಜ್ಞ||

ಸರ್ವಜ್ಞ ವಚನ 233 :
ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
ಕೂಡಿ ಕೆಂಡವನು ತೆಗೆದೊಡೆ – ತನ್ನ ಕೈ
ಕೂಡೆ ಬೇವಂತೆ ಸರ್ವಜ್ಞ||

ಸರ್ವಜ್ಞ ವಚನ 234 :
ಮಿಥುನಕ್ಕೆ ಗುರು ಬರಲು । ಮಥನಲೋಕದೊಳಕ್ಕು ।
ಪೃಥ್ವಿಯೊಳಗೆಲ್ಲ ರುಜವಕ್ಕು ನರಪಶು ।
ಹಿತವಾಗಲಕ್ಕೂ ಸರ್ವಜ್ಞ||

ಸರ್ವಜ್ಞ ವಚನ 235 :
ಓಲಯಿಸುತಿರುವವನು । ಮೇಲೆನಿಸುತ್ತಿದ್ದರು ।
ಸೋಲದಾ ಬುದ್ಧಿಯಿರುವವಲಿ ಭಾಗ್ಯದಾ ।
ಕೀಲು ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 236 :
ಒಳ್ಳಿದರ ಒಡನಾಡಿ। ಕಳ್ಳನೊಳ್ಳಿದನಕ್ಕು।
ಒಳ್ಳಿದನು ಕಳ್ನರೊಡನಾಡಿ ಅವ ಶುದ್ಧ।
ಕಳ್ಳ ತಾನಕ್ಕು ಸರ್ವಜ್ಞ||

ಸರ್ವಜ್ಞ ವಚನ 237 :
ಶ್ವಾನ ತೆಂಗಿನ ಕಾಯ । ತಾನು ಮೆಲಬಲ್ಲುದೇ
ಜ್ಞಾನವಿಲ್ಲದಗೆ ಉಪದೇಶ – ವಿತ್ತಡೆ
ಹಾನಿ ಕಂಡಯ್ಯ ಸರ್ವಜ್ಞ||

ಸರ್ವಜ್ಞ ವಚನ 238 :
ಕಾಡೆಲ ಕಸುಗಾಯಿ । ನಾಡೆಲ್ಲ ಹೆಗ್ಗಿಡವು ।
ಆಡಿದ ಮಾತು ನಿಜವಿಲ್ಲ ಮಲೆನಾಡ ।
ಕಾಡು ಸಾಕೆಂದ ಸರ್ವಜ್ಞ||

ಸರ್ವಜ್ಞ ವಚನ 239 :
ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ ।
ಹೊತ್ತಾಗಿ ನುಡಿದ ಮಾತು ಕೈಜಾರಿದಾ ।
ಮುತ್ತಿನಂತಿಹುದು ಸರ್ವಜ್ಞ||

ಸರ್ವಜ್ಞ ವಚನ 240 :
ಏನು ಮನ್ನಿಸದಿರಲು । ಸೀನು ಮನ್ನಿಸಬೇಕು ।
ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ ।
ಹಾನಿಯೇ ಬಕ್ಕು ಸರ್ವಜ್ಞ||

ಸರ್ವಜ್ಞ ವಚನ 241 :
ಹಣತೆ ಭತ್ತವು ಅಲ್ಲ । ಅಣಬೆ ಸತ್ತಿಗೆಯಲ್ಲ ।
ಕಣಕದಾ ಕಲ್ಲು ಮಣಿಯಲ್ಲ ಬಣಜಿಗನು ।
ಗುಣವಂತನಲ್ಲ ಸರ್ವಜ್ಞ||

ಸರ್ವಜ್ಞ ವಚನ 242 :
ಎಲುತೊಗಲು ನರಮಾಂಸ , ಬಲಿದ ಚರ್ಮದ ಹೊದಿಕೆ
ಹೊಲೆ ರಕ್ತ ಶುಕ್ಲದಿಂದಾದ ದೇಹಕೆ
ಕುಲವಾವುದಯ್ಯ ? ಸರ್ವಜ್ಞ||

ಸರ್ವಜ್ಞ ವಚನ 243 :
ಕಲ್ಲಿನಲಿ ಮಣ್ಣಿನಲಿ ಮುಳ್ಳಿನಾ ಮೊನೆಯಲ್ಲಿ
ಎಲ್ಲಿ ನೆನೆದಲ್ಲಿ ಶಿವನಿರ್ಪ ಅವ ನೀನಿದ್ದಲ್ಲಿಯೇ
ಇರುವ ಸರ್ವಜ್ಞ||

ಸರ್ವಜ್ಞ ವಚನ 244 :
ತಗ್ಗಿನ ಕುಣಿಯೆಂದು। ಅಗ್ಗವಾಡಲು ಬೇಡ।
ಭಗ್ಗ ಮೊದಲಾದ ದೈವಗಳು ಅದರೊಳಗೆ।
ಮುಗ್ಗಿರುವರಯ್ಯ ಸರ್ವಜ್ಞ||

ಸರ್ವಜ್ಞ ವಚನ 245 :
ಅಳೆ ಹೊಲ್ಲ ಆಡಿನಾ । ಕೆಳೆ ಹೊಲ್ಲ ಕೋಡಗನು ।
ಕೋಪ ಓಪರೊಳು ಹೊಲ್ಲ, ಮೂರ್ಖನಾ ।
ಗೆಳೆತನವೆ ಹೊಲ್ಲ । ಸರ್ವಜ್ಞ||

ಸರ್ವಜ್ಞ ವಚನ 246 :
ಹೆಣ್ಣನು ಹೊನ್ನನು | ಹಣ್ಣಾದ ಮರವನು
ಕಣ್ಣಲಿ ಕಂಡು – ಮನದಲಿ ಬಯಸದ
ಅಣ್ಣಗಳಾರು ಸರ್ವಜ್ಞ||

ಸರ್ವಜ್ಞ ವಚನ 247 :
ದಿಟವೆ ಪುಣ್ಯದ ಪುಂಜ। ಸಟೆಯೆ ಪಾಪದ ಬೀಜ।
ಕುಟಿಲ ವಂಚನೆಗೆ ಪೋಗದಿರು, ನಿಜದಿ ಪಿಡಿ ।
ಘಟವನೆಚ್ಚರದಿ ಸರ್ವಜ್ಞ||

ಸರ್ವಜ್ಞ ವಚನ 248 :
ನಾಲ್ಕು ವೇದವನೋದಿ । ಶೀಲದಲಿ ಶುಚಿಯಾಗಿ
ಶೂಲಿಯ ಪದವ ಮರೆದೊಡೆ – ಗಿಳಿಯೋದಿ
ಹೇಲ ತಿಂದಂತೆ ಸರ್ವಜ್ಞ||

ಸರ್ವಜ್ಞ ವಚನ 249 :
ಮಾತನೇ ಉಣಕೊಟ್ಟು ಮಾತನೇ ಉಡಕೊಟ್ಟು
ಮಾತಿನ ಮುದ್ದ ತೊಡಕೊಟ್ಟು ಬೆಳಗೆ ಹೋ
ದಾತನೇ ಜಾಣ ಸರ್ವಜ್ಞ||

ಸರ್ವಜ್ಞ ವಚನ 250 :
ಜ್ಞಾದಿಂದಲಿ ಇಹವು । ಜ್ಞಾನದಿಂದಲಿ ಪರವು ।
ಜ್ಞಾನವಿಲ್ಲದಲೆ ಸಕಲವೂ ತನಗಿದ್ದು ।
ಹಾನಿ ಕಾಣಯ್ಯ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post