Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (151-200)

ಸರ್ವಜ್ಞ ವಚನ 151 :

ಹೆಂಡಕ್ಕೆ ಹೊಲೆಯನು। ಕಂಡಕ್ಕೆ ಕಟುಗನು।
ದಂಡಕ್ಕೆ ಕೃಷಿಕನು, ಹಾರುವನು, ದುಡಿದು ತಾ ।
ಪಿಂಡಕ್ಕೆ ಇಡುವ ಸರ್ವಜ್ಞ||


ಸರ್ವಜ್ಞ ವಚನ 152 :
ಹುಸಿದು ಮಾಡುವ ಪೂಜೆ । ಮಸಿವಣ್ಣವೆಂತೆನಲು।
ಮುಸುಕಿರ್ದ ಮಲವನೊಳಗಿರಿಸಿ ಪೃಷ್ಠವನು ।
ಹಿಸುಕಿ ತೊಳೆದಂತೆ ಸರ್ವಜ್ಞ||


ಸರ್ವಜ್ಞ ವಚನ 153 :
ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ
ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ
ಹತ್ತವ್ಯಾಕಯ್ಯ ಸರ್ವಜ್ಞ||


ಸರ್ವಜ್ಞ ವಚನ 154 :
ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
ಮನಸಿಜಾರಿಯನು ಮರೆಯದಿರು – ಶಿವನ ಕೃಪೆ
ಘನಕೆ ಘನವಕ್ಕು ಸರ್ವಜ್ಞ||


ಸರ್ವಜ್ಞ ವಚನ 155 :
ಆಡಿ ಅಳುಕಲು ಹೊಲ್ಲ । ಕೂಡಿ ತಪ್ಪಲು ಹೊಲ್ಲ ।
ಕಾಡುವಾ ನೆಂಟ ಬರಹೊಲ್ಲ, ಧನಹೀನ ।
ನಾಡುವದೆ ಹೊಲ್ಲ ಸರ್ವಜ್ಞ||


ಸರ್ವಜ್ಞ ವಚನ 156 :
ಹೆತ್ತವಳು ಮಾಳಿ ಎನ್ನ । ನೊತ್ತಿ ತೆಗೆದವಳು ಕೇಶಿ
ಕತ್ತು ಬೆನ್ನ ಹಿಡಿದವಳು ಕಾಳಿ – ಮೊರಿದೊಳೆನ್ನ
ಬತ್ತಲಿರಿಸಿದಳು ಸರ್ವಜ್ಞ||


ಸರ್ವಜ್ಞ ವಚನ 157 :
ಗಂಧವನು ಇಟ್ಟಮೆ ಲಂದದಲಿ ಇರಬೇಕು ।
ನಿಂದೆ ಕುಂದುಗಳ ಸುಟ್ಟವನು ಧರಣಿಯಲಿ ।
ಇಂದುಧರನೆಂದ ಸರ್ವಜ್ಞ||


ಸರ್ವಜ್ಞ ವಚನ 158 :
ಕೊಟ್ಟುಂಬ ಕಾಲದಲಿ ಕೊಟ್ಟುಣಲಿಕರಿಯದಲೆ
ಹುಟ್ಟಿನಾ ಒಳಗೆ ಜೇನಿಕ್ಕಿ ಪರರಿಂಗೆ
ಬಿಟ್ಟು ಹೋದಂತೆ ಸರ್ವಜ್ಞ||


ಸರ್ವಜ್ಞ ವಚನ 159 :
ಅಕ್ಕಿಯನು ಉಂಬುವನು । ಹಕ್ಕಿಯಂತಾಗುವನು ।
ಸಿಕ್ಕು ರೋಗದಲಿ ರೊಕ್ಕವನು ವೈದ್ಯನಿಗೆ
ಇಕ್ಕುತಲಿರುವ ಸರ್ವಜ್ಞ||


ಸರ್ವಜ್ಞ ವಚನ 160 :
ಹರನವನ ಕೊಲುವಂದು, ಎರಳೆಯನು ಎಸೆವಂದು
ಮರಳಿ ವರಗಳನು ಕೊಡುವಂದು ಪುರಹರಗೆ
ಸರಿಯಾದ ಕಾಣೆ ಸರ್ವಜ್ಞ||


ಸರ್ವಜ್ಞ ವಚನ 161 :
ಅರಮನೆಯಲಿರುತಿಹುದು। ಕರದಲ್ಲಿ ಬರುತಿಹುದು।
ಕೊರೆದು ವಂಶಜರ ತಿನುತಿಹುದು, ಕವಿಗಳಲಿ।
ದೊರೆಗಳಿದ ಪೇಳಿ ಸರ್ವಜ್ಞ||


ಸರ್ವಜ್ಞ ವಚನ 162 :
ಕಚ್ಚೆ ಕೈ ಬಾಯಿಗಳು। ಇಚ್ಛೆಯಲಿ ಇದ್ದಿಹರೆ।
ಅಚ್ಯುತನಪ್ಪ ಅಜನಪ್ಪ ಲೋಕದಲಿ।
ನಿಶ್ಚಿಂತನಪ್ಪ ಸರ್ವಜ್ಞ||


ಸರ್ವಜ್ಞ ವಚನ 163 :
ವಚನದೊಳಗೆಲ್ಲವರು । ಶುಚಿವೀರ-ಸಾಧುಗಳು ।
ಕುಚ ಹೇಮಶಸ್ತ್ರ ಸೋಂಕಿದರೆ ಲೋಕದೊಳ।
ಗಚಲದವರಾರು । ಸರ್ವಜ್ಞ||


ಸರ್ವಜ್ಞ ವಚನ 164 :
ಲಿಂಗ ಉಳ್ಳನೆ ಪುರುಷ ಲಿಂಗ ಉಳ್ಳನೆ ಸರಸ
ಲಿಂಗ ಉಳ್ಳವಗೆ ರತಿಭೋಗ ವತುಳಸುಖ
ಲಿಂಗದಿಂ ಜನನ ಸರ್ವಜ್ಞ||


ಸರ್ವಜ್ಞ ವಚನ 165 :
ನಿತ್ಯ ನೀರ್ಮುಳುಗುವನು।ಹತ್ತಿದಡೆ ಸ್ವರ್ಗವನು।
ಎತ್ತಿ ಜನ್ಮವನು ಜಲದೊಳಿಪ್ಪಾ ಕಪ್ಪೆ।
ಹತ್ತದೇಕೆಂದ ಸರ್ವಜ್ಞ||


ಸರ್ವಜ್ಞ ವಚನ 166 :
ಹರಕು ಜೋಳಿಗೆ ಲೇಸು । ಮುರುಕ ಹಪ್ಪಳ ಲೇಸು ।
ಕುರುಕುರೂ ಕಡಲೆ ಬಲು ಲೇಸು, ಪಾಯಸದ ।
ಸುರುಕು ಲೇಸೆಂದ ಸರ್ವಜ್ಞ||


ಸರ್ವಜ್ಞ ವಚನ 167 :
ಸಾಲು ವೇದಗಳೇಕೆ ? ಮೂಲ ಮಂತ್ರಗಳೇಕೆ ?
ಮೇಲು ಕೀಳೆಂಬ ನುಡಿಯೇಕೆ ? ತತ್ವದಾ
ಕೀಲನರಿದವಗೆ ಸರ್ವಜ್ಞ||


ಸರ್ವಜ್ಞ ವಚನ 168 :
ಮುಟ್ಟಿದಂತಿರಬೇಕು । ಮುಟ್ಟದಲೆ ಇರಬೇಕು ।
ಮುಟ್ಟಿಯೂ ಮುಟ್ಟಿದಿರಬೇಕು ಪರಸ್ತ್ರೀಯ ।
ಮುಟ್ಟಿದವ ಕೆಟ್ಟ ಸರ್ವಜ್ಞ||


ಸರ್ವಜ್ಞ ವಚನ 169 :
ದುರ್ಗಿ(ಮಾರಿಯ ಮುಂಡಿ) । ಯಗ್ಗದ ಶಕ್ತಿಗಳು
ಸದ್ಗುಣ ಸತ್ಯ ಮುಸುರಿಹರ – ಮುಟ್ಟವು
ಸದ್ಗುರುವಿನಾಜ್ಞೆ ಸರ್ವಜ್ಞ||


ಸರ್ವಜ್ಞ ವಚನ 170 :
ಅರಿತು ಮಾಡಿದ ಪಾಪ । ಮರೆತರದು ಪೋಪುದೇ?
ಮರೆತರೆ ಮರವ ಬಿಡಿಸುವುದು, ಕೊರತೆಯದು ।
ಅರಿತು ನೋಡೆಂದ ಸರ್ವಜ್ಞ||


ಸರ್ವಜ್ಞ ವಚನ 171 :
ಗಂಹರವ ಹೊಕ್ಕಿರ್ದು । ಸಿಂಹಗಳ ನಿರಿಯುವದು ।
ಸಂಹರವ ಮಾಡಿ ತರಿಯುವದು ದುರ್ಜನರ ।
ಜಿಹ್ವೆ ಕೇಳೆಂದ ಸರ್ವಜ್ಞ||


ಸರ್ವಜ್ಞ ವಚನ 172 :
ಶಂಖ ಹುಟ್ಟಿದ ನಾದ । ಬಿಂಕವನು ಏನೆಂಬೆ ।
ಶಂಕರನ ಪೂಜೆ ಮನೆ ಮನೆಗೆ ಮಿಗಿಲಾಗಿ ।
ತೆಂಕಲುಂಟೆಂದ ಸರ್ವಜ್ಞ||


ಸರ್ವಜ್ಞ ವಚನ 173 :
ನಾಡೆಲೆಯ ಮೆಲ್ಲುವಳ । ಕೂಡೆ ಬಯಸುತ ಹೋಗೆ
ಕೂಡ ಗೂಡ ಸೀರೆ ಮೊಲೆಗಟ್ಟಿನಾ ಯಕಿಯ ।
ಕುಂಡೆಯಾಡೆಂದ ಸರ್ವಜ್ಞ||


ಸರ್ವಜ್ಞ ವಚನ 174 :
ಸುಟ್ಟ ಬೆಳಸಿಯು ಲೇಸು । ಅಟ್ಟ ಬೊನವು ಲೇಸು ।
ಕಟ್ಟಾಣೆ ಸತಿಯು ಇರಲೇಸು , ನಡುವಿಂಗೆ ।
ದಟ್ಟಿ ಲೇಸೆಂದ ಸರ್ವಜ್ಞ||


ಸರ್ವಜ್ಞ ವಚನ 175 :
ಹುಸಿಯ ಪೇಳ್ವುದರಿಂದ । ಹಸಿದು ಸಾವುದು ಲೇಸು ।
ಹುಸಿದು ಮೆರೆಯುವನ ಬದುಕಿಂದ ಹಂದಿಯಾ ।
ಇಸಿಯು ಲೇಸೆಂದ ಸರ್ವಜ್ಞ||


ಸರ್ವಜ್ಞ ವಚನ 176 :
ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡ
ಕಲ್ಲಿನಂತಿಪ್ಪ ಮಾನವನ , ಮನ ಕರಗೆ
ಅಲ್ಲಿಪ್ಪ ನೋಡ ಸರ್ವಜ್ಞ||


ಸರ್ವಜ್ಞ ವಚನ 177 :
ಸತ್ಯವೆಂಬುದು ತಾನು । ನಿತ್ಯದಲಿ ಮರೆದಿಹುದು ।
ಮಿಥ್ಯ ಸತ್ಯವನು ಬೆರೆದರೂ ಇಹಪರದಿ ।
ಸತ್ಯಕ್ಕೆ ಜಯವು ಸರ್ವಜ್ಞ||


ಸರ್ವಜ್ಞ ವಚನ 178 :
ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು
ಜಂಗಮ ಭಕ್ತನಾ ನಡೆ ಲೇಸು, ಶರಣರಾ
ಸಂಗವೇ ಲೇಸು ಸರ್ವಜ್ಞ||


ಸರ್ವಜ್ಞ ವಚನ 179 :
ಆಗಲೇಳು ಸಾಸಿರವು । ಮುಗಿಲು ಮುಟ್ಟುವಕೋಟೆ ।
ಹಗಲೆದ್ದು ಹತ್ತು ತಲೆಯಾತ ಪರಸತಿಯ ।
ನೆಗೆದು ತಾ ಕೆಟ್ಟ ಸರ್ವಜ್ಞ||


ಸರ್ವಜ್ಞ ವಚನ 180 :
ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು
ನಾನಾ ಭ್ರಮೆಗಳ ನೆರೆ ಹಿಂಗಿ – ನಿಂದವನು
ತಾನೈಕ್ಯ ನೋಡ ಸರ್ವಜ್ಞ||


ಸರ್ವಜ್ಞ ವಚನ 181 :
ತನ್ನ ತಾನರಿದಿಹನು । ಸನ್ನುತನು ಆಗಿಹನು।
ತನ್ನ ತಾನರಿಯದಿರುವವನು ಹಾಳೂರ।
ಕುನ್ನಿಯಂತಕ್ಕು ಸರ್ವಜ್ಞ||


ಸರ್ವಜ್ಞ ವಚನ 182 :
ತುಲವನೇರಲು ಗುರುವು । ನೆಲೆಯಾಗಿ ಮಳೆಯಕ್ಕು
ಫಲವು ಧಾನ್ಯಗಳು ಬೆಳೆಯಕ್ಕು ಪ್ರಜೆಗಳಿಗೆ ।
ನಿಲಕಾಲಕ್ಕು ಸರ್ವಜ್ಞ||


ಸರ್ವಜ್ಞ ವಚನ 183 :
ತುಪ್ಪಾದ ತುರುಕನ । ಒಪ್ಪಾದ ಹಾರುವನ।
ಸಪ್ಪಗಿರುತಿಪ್ಪ ಬೇಡನ ಮಾತಿಂಗೆ।
ಒಪ್ಪಲೇ ಬೇಡ ಸರ್ವಜ್ಞ||


ಸರ್ವಜ್ಞ ವಚನ 184 :
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ
ಲಿಂಗದೆ ಜಗವು ಅಡಗಿಹುದು – ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ||


ಸರ್ವಜ್ಞ ವಚನ 185 :
ಹಂಗಿನಾ ಹಾಲಿನಿಂ । ದಂಬಲಿಯ ತಿಳಿ ಲೇಸು ।
ಭಂಗಬಟ್ಟುಂಬ ಬಿಸಿಯಿಂದ ತಿರಿವವರ ।
ತಂಗುಳವೆ ಲೇಸು ಸರ್ವಜ್ಞ||


ಸರ್ವಜ್ಞ ವಚನ 186 :
ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು – ಗುರುಕರುಣ
ವಶವರ್ತಿಯಹುದು ಸರ್ವಜ್ಞ||


ಸರ್ವಜ್ಞ ವಚನ 187 :
ಹೆಂಗಸರ ಹೋಲುವ । ಮಂಗನ ತಲೆಯವರು।
ಸಂಗಮಕ್ಕೆ ಬಂದು ನಿಂದಿರುತ ರಾಜ್ಯವನು।
ನುಂಗಿ ಬಿಟ್ಟಾರು ಸರ್ವಜ್ಞ||


ಸರ್ವಜ್ಞ ವಚನ 188 :
ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ – ವಾಲಿಸಲು
ಗಮ್ಮನೆ ಮುಕ್ತಿ ಸರ್ವಜ್ಞ||


ಸರ್ವಜ್ಞ ವಚನ 189 :
ಕಟ್ಟಾಳು ತಾನಾಗಿ । ಬಟ್ಟೆಯಲಿ ನೆರವೇಕೆ ?
ಸೆಟ್ಟಿಗಂ ತೊದಲು ನುಡಿಯೇಕೆ ? ಬಲ್ಲಿದಗೆ \
ನಿಷ್ಠುರವದೇಕೆ ? ಸರ್ವಜ್ಞ||


ಸರ್ವಜ್ಞ ವಚನ 190 :
ಕಟ್ಟಿದರೆ ಸೀತಿಹರೆ । ನೆಟ್ಟನೆಯ ನಿಲಬೇಕು ।
ಒಟ್ಟುಯಿಸಿ ಮೀರಿ ನಡೆದಿಹರೆ ಗುರಿನೋಡಿ ।
ತೊಟ್ಟನೆಚ್ಚಂತೆ ಸರ್ವಜ್ಞ||


ಸರ್ವಜ್ಞ ವಚನ 191 :
ಬಟ್ಟೆಯನು ಉಡಿಸುವದು ಸೆಟ್ಟಿಯೆಂದೆನಿಸುವದು
ಕಟ್ಟಾಣಿ ಸತಿಯ ಕುಣಿಸುವದು ತಾ ಚೋಟು
ಹೊಟ್ಟೆ ಕಾಣಯ್ಯ ಸರ್ವಜ್ಞ||


ಸರ್ವಜ್ಞ ವಚನ 192 :
ಆಸನದಲುಂಬುವದು । ಸೂಸುವದು ಬಾಯಲ್ಲಿ ।
ಬೇಸರದ ಹೊತ್ತು ಕೊಲುವದು ಕವಿಗಳೊಳು ।
ಸಾಸಿಗರು ಪೇಳಿ ಸರ್ವಜ್ಞ||


ಸರ್ವಜ್ಞ ವಚನ 193 :
ಕೂಳಿಂದ ಕುಲ ಬೆಳೆದು । ಬಾಳಿಂದ ಬಲ ಬೆಳೆದು ।
ಕೂಳು – ನೀರುಗಳು ಕಳೆದರ್‍ಆ ಕುಲಗಳನ್ನು ।
ಕೇಳಬೇಡೆಂದ ಸರ್ವಜ್ಞ||


ಸರ್ವಜ್ಞ ವಚನ 194 :
ನರರ ಬೇಡುವ ದೈವ । ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ – ಅದನರೆ
ಹರನನೆ ಬೇಡು ಸರ್ವಜ್ಞ||


ಸರ್ವಜ್ಞ ವಚನ 195 :
ಮುನಿದಂಗೆ ಮುನಿಯದಿರು , ಕಿನಿವಂಗೆ ಕಿನಿಯದಿರು
ಮನಸಿಜಾರಿಯನು ಮರೆಯದಿರು , ಶಿವಕೃಪೆಯು
ಘನಕೆ ಘನವಕ್ಕು , ಸರ್ವಜ್ಞ||


ಸರ್ವಜ್ಞ ವಚನ 196 :
ಕಷ್ಟಗಳು ಓಡಿಬರ । ಲಿಷ್ಟಕ್ಕೆ ಭಯವೇಕೆ ।
ಶಿಷ್ಟಂಗೆ ತೊದಲು ನುಡಿಯೇಕೆ ।
ಕಳ್ಳಂಗೆ ದಟ್ಟಡಿಯದೇಕೆ ಸರ್ವಜ್ಞ||


ಸರ್ವಜ್ಞ ವಚನ 197 :
ಹಲವನೋದಿದಡೇನು ಚೆಲುವನಾದಡೆಯೇನು
ಕುಲವಂತನಾಗಿ ಫಲವೇನು ಲಿಂಗದ
ಒಲವಿಲ್ಲದನಕ ಸರ್ವಜ್ಞ||


ಸರ್ವಜ್ಞ ವಚನ 198 :
ಉದ್ದಿನಾ ವಡೆ ಲೇಸು । ಬುದ್ಧಿಯಾ ನುಡಿ ಲೇಸು ।
ಬಿದ್ದೊಡನೆ ಕಯ್ಗೆ ಬರಲೇಸು, ಶಿಶುವಿಂಗೆ ।
ಮುದ್ದಾಟ ಲೇಸು ಸರ್ವಜ್ಞ||


ಸರ್ವಜ್ಞ ವಚನ 199 :
ಕ್ಷೀರದಲಿ ಘ್ರತ, ವಿಮಲ । ನೀರಿನೊಳು ಶಿಖಿಯಿರ್ದು
ಅರಿಗೂ ತೋರದಿರದಂತೆ ಎನ್ನೊಳಗೆ ।
ಸೇರಿಹನು ಶಿವನು ಸರ್ವಜ್ಞ||


ಸರ್ವಜ್ಞ ವಚನ 200 :
ಲಿಂಗವಿರಹಿತನಾಗಿ ನುಂಗದಿರು ಏನುವನು
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post