Menu

Home ನಲಿಕಲಿ About ☰ Menu


 

🔍

ಸರ್ವಜ್ಞನ ತ್ರಿಪದಿಗಳು (101-150)

 ಸರ್ವಜ್ಞ ವಚನ 101 :
ಕಾಲು ನಾಲ್ಕುಂಟದಕೆ। ಹೇಳುವರೆ ಮೃಗವಲ್ಲ।
ಮೇಲೆ ತಲೆ ಮೂರುಅಜನಲ್ಲ, ಕವಿಗಳಲಿ।
ಬಾಲರಿದ ಪೇಳಿ ಸರ್ವಜ್ಞ||

ಸರ್ವಜ್ಞ ವಚನ 102 :
ಮನದಲ್ಲಿ ನೆನೆವಂಗೆ ಮನೆಯೇನು ಮಠವೇನು ?
ಮನದಲ್ಲಿ ನೆನೆಯದಿರುವವನು ದೇಗುಲದ
ಕೊನೆಯಲಿದ್ದೇನು ? ಸರ್ವಜ್ಞ||

ಸರ್ವಜ್ಞ ವಚನ 103 :
ಬಲ್ಲಿದನು ನುಡಿದಿಹರೆ । ಬೆಲ್ಲವನು ಮೆದ್ದಂತೆ ।
ಇಲ್ಲದಾ ಬಡವ ನುಡಿದಿಹರೆ – ಬಾಯಿಂದ ।
ಜೊಲ್ಲು ಬಿದ್ದಂತೆ ಸರ್ವಜ್ಞ||

ಸರ್ವಜ್ಞ ವಚನ 104 :
ಉಣ್ಣೆ ಕೆಚ್ಚಲೊಳಿರ್ದು ಉಣ್ಣದದು ನೊರೆವಾಲು
ಪುಣ್ಯವನು ಮಾಡಿ ಉಣಲೊಲ್ಲದವನಿರವು
ಉಣ್ಣೆಯಿಂ ಕಷ್ಟ ಸರ್ವಜ್ಞ||

ಸರ್ವಜ್ಞ ವಚನ 105 :
ಮಾಯಾಮೋಹನ ಮೆಚ್ಚಿ । ಕಾಯವನು ಕರಗಿಸಿತ ।
ಆಯಾಸಗೊಂಡ ಬಳಲದೊನ್ನಮಃ ಶಿ ।
ವಾಯವೆಂದೆನ್ನು ಸರ್ವಜ್ಞ||

ಸರ್ವಜ್ಞ ವಚನ 106 :
ಸುರೆಯ ಸೇವಿಸುವಂಗೆ । ಸಿರಿಗರ್ವಪಚನಂಗೆ ।
ದೊರೆಯಲ್ಲಿ ತೇಜ ಪಡೆದಂಗೆ ಶಿರವಿಹುದು ।
ಸ್ಥಿರವಲ್ಲ ನೋಡ ಸರ್ವಜ್ಞ||

ಸರ್ವಜ್ಞ ವಚನ 107 :
ಹಲ್ಲು ಎಲುವೆಂಬುದನು । ಎಲ್ಲವರು ಬಲ್ಲರೆಲೆ ।
ನಿಲ್ಲದಲೆ ಎಲುವಿನಿಂದೆಲ್ಲವಗಿದ ಬಳಿ ।
ಕೆಲ್ಲಿಯದು ಶೀಲ ಸರ್ವಜ್ಞ||

ಸರ್ವಜ್ಞ ವಚನ 108 :
ಬೆಳ್ಳಗೆ ಇರುತಿಹುದು। ಉಳ್ಳಾಡಿ ಬರುತಿಹುದು।
ಸುಳ್ಳಲ್ಲ ಸತಿಯರಳಿಸುವದು, ಕವಿಗಳಲಿ।
ಉಳ್ಳವರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 109 :
ತಿಟ್ಟಿಯೊಳು ತೆವರದೊಳು । ಹುಟ್ಟಿಹನೆ ಪರಶಿವನು ।
ಹುಟ್ಟು ಸಾವುಗಳು ಅವಗಿಲ್ಲ ಜಗವನ್ನು ।
ಬಿಟ್ಟಿಹನು ನೋಡು ಸರ್ವಜ್ಞ||

ಸರ್ವಜ್ಞ ವಚನ 110 :
ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು
ಭಂಡ ವಸ್ತುವನು ಕೊಡದುಣದೆ – ಬೈಚಿಡಲು
ಕಂಡವರಿಗಹುದು ಸರ್ವಜ್ಞ||

ಸರ್ವಜ್ಞ ವಚನ 111 :
ಕಾಸು ಇಲ್ಲದಳ ಬಾಳು। ಭಾಷೆಯರಿಯದ ಆಳು।
ಹೇಸಿಯಾದವಳ ಮನೆವಾರ್ತೆ ಕತ್ತೆಯ।
ಹೂಸಿನಂತಕ್ಕು ಸರ್ವಜ್ಞ||

ಸರ್ವಜ್ಞ ವಚನ 112 :
ನೆವದೊಳೆಡೆಯಾಡಿಸುತ । ತವೆ ಸಖನ ನುಡಿಯಿಸುತ ।
ಕವಿದಿರಲು ಬಗೆದೆ ಚಿನ್ನವ ಪ್ರತಿವೆರಸಿ ।
ತವಕದಲಿ ತೆಗೆವ ಸರ್ವಜ್ಞ||

ಸರ್ವಜ್ಞ ವಚನ 113 :
ಸಿಂಗಕ್ಕೆ ಗುರು ಬರಲು ।
ಸಂಗರವು ಘನವಕ್ಕು ಅಂಗನೆಯರಿಗೆ ಬಾಧೆ ಪಿರಿದಕ್ಕು ಕಡೆ ಮಳೆ ।
ಹಿಂಗಾರಿಯಕ್ಕು ಸರ್ವಜ್ಞ||

ಸರ್ವಜ್ಞ ವಚನ 114 :
ಬೇಡಂಗೆ ಶುಚಿಯಿಲ್ಲ । ಬೋಡಂಗೆ ರುಚಿಯಿಲ್ಲ ।
ಕೂಡಿಲ್ಲದಂಗೆ ಸುತರಿಲ್ಲ ಜಾಡತಾ ।
ಮೂಢಾತ್ಮನಲ್ಲ ಸರ್ವಜ್ಞ||

ಸರ್ವಜ್ಞ ವಚನ 115 :
ಕಣ್ಣಿನಿಂದಲೆ ಪುಣ್ಯ । ಕಣ್ಣಿನಿಂದಲೆ ಪಾಪ।
ಕಣ್ಣಿನಿಂದಿಹವು ಪರವಕ್ಕು, ಲೋಕಕ್ಕೆ ।
ಕಣ್ಣೆ ಕಾರಣವು ಸರ್ವಜ್ಞ||

ಸರ್ವಜ್ಞ ವಚನ 116 :
ಹುಸಿವಾತ ದೇಗುಲದ । ದೆಸೆಯತ್ತ ಮುಂತಾಗಿ ।
ನೊಸಲೆತ್ತಿ ಕರವ ಮುಗಿದಿಹರೆ ।
ಅಷ್ಟುದ್ದ ಹರಿವನೆಂದರಿಗು ಸರ್ವಜ್ಞ||

ಸರ್ವಜ್ಞ ವಚನ 117 :
ಬರಕೆ ಬುತ್ತಿಯು ಹೊಲ್ಲ । ಸಿರಿಕಾ ಮನೆ ಹೊಲ್ಲ ।
ಕರೆಕರೆಯ ಕೂಳು ತಿನಹೊಲ್ಲ ।
ಕಜ್ಜಿಯನು ಕೆರೆಕೊಳ್ಳ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 118 :
ಕನ್ನೆಯಾಡನು ತಂದು। ಬನ್ನಬಡಿಸುತ ಕೊಂದು।
ಉನ್ನತವ ಪಡೆದ ವಿಪ್ರನಿಂ ಅಗಸರ ।
ಕುನ್ನಿ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 119 :
ಆರಯ್ದು ನುಡಿವವನು । ಆರಯ್ದು ನಡೆವವನು ।
ಆರಯ್ದು ಪದವ ನಿಡುವವನು ಲೋಕಕ್ಕೆ
ಆರಾಧ್ಯನಕ್ಕು ಸರ್ವಜ್ಞ||

ಸರ್ವಜ್ಞ ವಚನ 120 :
ರಾಗಿಯನ್ನು ಉಂಬುವ ನಿ । ರೋಗಿ ಎಂದೆನಿಸುವನು ।
ರಾಗಿಯು ಭೋಗಿಗಳಿಗಲ್ಲ ಬಡವರಿಂ ।
ಗಾಗಿ ಬೆಳೆದಿಹುದು ಸರ್ವಜ್ಞ||

ಸರ್ವಜ್ಞ ವಚನ 121 :
ಅರ್ಪಿತದ ಭೇದವನು
ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ||

ಸರ್ವಜ್ಞ ವಚನ 122 :
ಅಂದಕನು ನಿಂದಿರಲು ಮುಂದೆ ಬಪ್ಪರ ಕಾಣ
ಬಂದರೆ ಬಾಯೆಂದೆನದಿರ್ಪ ಗರುವಿಯ
ದಂದುಗವೇ ಬೇಡ ಸರ್ವಜ್ಞ||

ಸರ್ವಜ್ಞ ವಚನ 123 :
ಮೀನು ಮುಟ್ಟದ ವಾರಿ। ದಾನವಾರಿಯು ತಾನು।
ಮಾನವರಿಗಾಗಿ ಬೆಳೆಸಿಹನು ಕವಿಗಳಲಿ।
ಮಾನಿಸರು ಪೇಳಿ ಸರ್ವಜ್ಞ||

ಸರ್ವಜ್ಞ ವಚನ 124 :
ವಿಪ್ರರಿಂದಲೇ ವಿದ್ಯೆ ।
ವಿಪ್ರರಿಂದಲೇ ಬುದ್ಧಿ ।
ವಿಪ್ರ ನಿಜವಿಪ್ರರಿಲ್ಲದಿರಲೇ ಜಗವು ಕ್ಷಿಪ್ರದಲಿ ಕೆಡಗು ಸರ್ವಜ್ಞ||

ಸರ್ವಜ್ಞ ವಚನ 125 :
ಗಿಡ್ಡ ಹೆಂಡತಿ ಲೇಸು। ಮಡ್ಡಿ ಕುದುರೆಗೆ ಲೇಸು।
ಬಡ್ಡಿಯ ಸಾಲ ಕೊಡಲೇಸು, ಹಿರಿಯರಿಗೆ।
ಗಡ್ಡ ಲೇಸೆಂದ ಸರ್ವಜ್ಞ||

ಸರ್ವಜ್ಞ ವಚನ 126 :
ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕಾ
ರಕ್ಕರವೇ ಸಾಕು ಸರ್ವಜ್ಞ||

ಸರ್ವಜ್ಞ ವಚನ 127 :
ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
ಚೆನ್ನಾಗಿ ಬಳಿದು ಮೆತ್ತಿದನ – ಬಾಯೊಳಗೆ
ಮಣ್ಣು ಕಂಡಯ್ಯ ಸರ್ವಜ್ಞ||

ಸರ್ವಜ್ಞ ವಚನ 128 :
ಜಾಣ ಜಾಣಗೆ ಲೇಸು । ಕೋಣ ಕೋಣಗೆ ಲೇಸು ।
ನಾಣ್ಯವದು ಲೇಸು ಜನರಿಂಗೆ ಊರಿಂಗೆ ।
ಗಾಣಿಗನು ಲೇಸು ಸರ್ವಜ್ಞ||

ಸರ್ವಜ್ಞ ವಚನ 129 :
ತಪ್ಪು ಮಾಡಿದವಂಗೆ ।
ಒಪ್ಪುವದು ಸಂಕೋಲೆ ತಪ್ಪಿಲ್ಲದಿಪ್ಪ ।
ಶರಣಂಗೆ ಸಂಕೋಲೆ ಬಪ್ಪುದದೇಕೆ ಸರ್ವಜ್ಞ||

ಸರ್ವಜ್ಞ ವಚನ 130 :
ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿವರೆ
ಬಡವನೆಂದು ಕೊಡದೆ ಇರಬೇಡ – ಇರವರಿದು
ಕೊಡುವುದೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 131 :
ಹೆಣ್ಣಿನಿಂದಲೆ ಇಹವು । ಹೆಣ್ಣಿನಿಂದಲೆ ಪರವು ।
ಹೆಣ್ಣಿಂದ ಸಕಲಸಂಪದವು ಹೆಣ್ಣೊಲ್ಲ ।
ದಣ್ಣಗಳು ಯಾರು ಸರ್ವಜ್ಞ||

ಸರ್ವಜ್ಞ ವಚನ 132 :
ಆಡುವವ ಕೆಟ್ಟಂತೆ । ನೋಡಹೋದವ ಕೆಟ್ಟ ।
ಬೇದುವವ ಕೆಟ್ಟ, ನೆತ್ತವನು ಆಡುವನ ।
ಕೂಡಿದವ ಕೆಟ್ಟ ಸರ್ವಜ್ಞ||

ಸರ್ವಜ್ಞ ವಚನ 133 :
ವ್ಯಸನ ದೇಹ । ಮಸಣವನು ಕಾಣುವದು ।
ವ್ಯಸನವನು ಬಿಟ್ಟು, ಹಸನಾಗಿ ದುಡಿದರೆ ।
ಅಶನ – ವಸನಗಳು ಸರ್ವಜ್ಞ||

ಸರ್ವಜ್ಞ ವಚನ 134 :
ಕಂಡುದನು ಆಡೆ ಭೂ । ಮಂಡಲವು ಮುನಿಯುವುದು ।
ಕೊಂಡಾಡುತಿಚ್ಚೆ ನುಡಿದಿಹರೆ ಜಗವೆಲ್ಲ
ಮುಂಡಾಡುತಿಹುದು ಸರ್ವಜ್ಞ||

ಸರ್ವಜ್ಞ ವಚನ 135 :
ಕ್ಷೀರದೊಳು ಘೃತವಿದ್ದು । ನೀರೊಳು ಶಿಖಿಯಿದ್ದು
ಆರಿಗೆಯು ತೋರಿದಿಹುದಂತೆ – ಎನ್ನೊಳಗೆ
ಸಾರಿಹನು ಸಿವನು ಸರ್ವಜ್ಞ||

ಸರ್ವಜ್ಞ ವಚನ 136 :
ನೊಕಿದವರಾಗ । ಕುಕಟಿಯವನು
ಲೋಕದೊಳಗೆಲ್ಲ ಕಂಡುದ – ನುಡಿವುತ
ಏಕವಾಗಿಹೆನು ಸರ್ವಜ್ಞ||

ಸರ್ವಜ್ಞ ವಚನ 137 :
ಈರೈದು ತಲೆಯುಳ್ಳ । ಧೀರ ರಾವಣ ಮಡಿದ।
ವೀರ ಕೀಚಕನು ಗಡ ಸತ್ತ, ಪರಸತಿಯ।
ಸಾರ ಬೇಡೆಂದ ಸರ್ವಜ್ಞ||

ಸರ್ವಜ್ಞ ವಚನ 138 :
ಅಟ್ಟಿಕ್ಕುವಾಕೆಯೊಳು । ಬೆಟ್ಟಿತ್ತು ಹಗೆ ಬೇಡ ।
ಸಟ್ಟುಗದೆ ಗೋಣ ಮುರಿಯುವಳೂ ಅಲಗಿಲ್ಲ ।
ದಿಟ್ಟಯಾಳವಳು ಸರ್ವಜ್ಞ||

ಸರ್ವಜ್ಞ ವಚನ 139 :
ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ
ಚಿಂತೆಯಲಿ ದೇಹ ಬಡವಕ್ಕು ಶಿವ
ತೋರಿದಂತಿಹುದೇ ಲೇಸು ಸರ್ವಜ್ಞ||

ಸರ್ವಜ್ಞ ವಚನ 140 :
ಐವರಟ್ಟಾಸವನ । ಯೌವನದ ಹಿಂಡನ್ನು ।
ಹೊಯ್ಯುತ್ತ ವಶಕ್ಕೆ ತಂದಾತ ಜಗದೊಳಗೆ ।
ದೈವ ತಾನಕ್ಕು ಸರ್ವಜ್ಞ||

ಸರ್ವಜ್ಞ ವಚನ 141 :
ಕೊಟ್ಟು ಕುದಿಯಲಿ ಬೇಡ। ಕೊಟ್ಟಾಡಿಕೊಳಬೇಡ।
ಕೊಟ್ಟು ನಾ ಕೆಟ್ಟೆನೆನಬೇಡ ! ಶಿವನಲ್ಲಿ।
ಕಟ್ಟಿಹುದು ಬುತ್ತಿ ಸರ್ವಜ್ಞ||

ಸರ್ವಜ್ಞ ವಚನ 142 :
ಬೆಟ್ಟ ಕರ್ಪುರ ಉರಿದು । ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವನರಿದನ – ಕರ್ಮವು
ಮುಟ್ಟಲಂಜುವವು ಸರ್ವಜ್ಞ||

ಸರ್ವಜ್ಞ ವಚನ 143 :
ಅಟ್ಟಿ ಹರಿದಾಡುವದು । ಬಟ್ಟೆಯಲಿ ಮೆರೆಯುವದು ।
ಹೊಟ್ಟೆ ಹುಣ್ಣಾಗಿ ನಗಿಸುವದು ಒಂದು ಹಿಡಿ ಹಿಟ್ಟು ।
ಕಾಣಯ್ಯ ಸರ್ವಜ್ಞ||

ಸರ್ವಜ್ಞ ವಚನ 144 :
ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?
ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ
ಹತ್ತಿಗೇಡೆಂದ ಸರ್ವಜ್ಞ||

ಸರ್ವಜ್ಞ ವಚನ 145 :
ಇಕ್ಕೇರಿ ಸೀಮೆಯ । ಲೆಕ್ಕವನು ಹೇಳುವೆನು।
ಇಕ್ಕೇರಿಯಳಿದ ದಶವರುಷದಂತ್ಯಕ್ಕೆ।
ಮುಕ್ಕಣ್ಣ ಬರುವ ಸರ್ವಜ್ಞ||

ಸರ್ವಜ್ಞ ವಚನ 146 :
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ||

ಸರ್ವಜ್ಞ ವಚನ 147 :
ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ
ಉಳ್ಳಲ್ಲಿ ದಾನಗೊಡಲೊಲ್ಲ – ನವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ||

ಸರ್ವಜ್ಞ ವಚನ 148 :
ಒಡಕು ಮಡಿಕೆಯು ಹೊಲ್ಲ। ಕುಡಿಕ ನೆರೆಯೊಳು ಹೊಲ್ಲ।
ಒಡಕಿನ ಮನೆಯೊಳಿರಹೊಲ್ಲ, ಬಡವಗೆ।
ಸಿಡುಕು ತಾ ಹೊಲ್ಲ ಸರ್ವಜ್ಞ||

ಸರ್ವಜ್ಞ ವಚನ 149 :
ಅಲ್ಲವರಷಿಣವುಂಟು । ಬೆಲ್ಲ ಬಿಳೆನಲೆಯುಂಟು ।
ಒಳ್ಳೆ ಹಲಸುಂಟು । ಮೆಲ್ಲಲ್ಕೆ ಮಲೆನಾಡು
ನಲ್ಲೆನ್ನ ಬಹುದೇ ಸರ್ವಜ್ಞ||

ಸರ್ವಜ್ಞ ವಚನ 150 :
ಬ್ರಹ್ಮ ಗಡ । ಸ್ಥಿತಿಗೆ ಆ ವಿಷ್ಣು ಗಡ
ಹತವ ಮಾಡುವಡೆ ರುದ್ರ ಗಡ – ಎಂದೆಂಬ
ಸ್ಥಿತಿಯ ತಿಳಿಯೆಂದ ಸರ್ವಜ್ಞ||

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post