![]() |
ಮಾನವ ಹಕ್ಕುಗಳ ಲೋಗೋ |
ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದಾನೆ. ಮಾನವ ಹಕ್ಕುಗಳು ನಮ್ಮ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಮಗೆ ನೀಡಲಾದ ಮೂಲಭೂತ ಹಕ್ಕುಗಳಾಗಿವೆ. ಅವು ಸಾರ್ವತ್ರಿಕವಾಗಿದ್ದು, ಯಾವುದೇ ಜಾತಿ, ಧರ್ಮ, ಜನಾಂಗ, ಲಿಂಗ, ವರ್ಣ, ವಯಸ್ಸು ಅಥವಾ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲರಿಗೂ ಅನ್ವಯವಾಗುತ್ತವೆ. ಈ ಹಕ್ಕುಗಳ ರಕ್ಷಣೆ ಮಾಡಲು ವಿಶ್ವ ಸಂಸ್ಥೆಯು ಡಿಸೆಂಬರ್ 10, 1948ರಲ್ಲಿ ವಿಶ್ವ ಮಾನವ ಹಕ್ಕುಗಳನ್ನು ಅಂಗೀಕರಿಸಿತು.
ಮಾನವ ಹಕ್ಕುಗಳ ದಿನದ ಹಿನ್ನೆಲೆ :
ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು 1948ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿತು. ಅಂದಿನಿಂದ ಡಿ. 10 ಅನ್ನು “ವಿಶ್ವ ಮಾನವ ಹಕ್ಕುಗಳ ದಿನ’ವಾಗಿ ಆಚರಿಸಲಾಗುತ್ತದೆ. 1950ರ ಡಿಸೆಂಬರ್ 4ರಂದು ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 317ನೇ ಅಧಿವೇಶನದಲ್ಲಿ ಮಾನವ ಹಕ್ಕುಗಳ ದಿನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತು. ಇದು ಮಾನವ ಹಕ್ಕುಗಳ ಕುರಿತಾದ ಮೊದಲ ಜಾಗತಿಕ ನಿರ್ಣಯ.
ಮಾನವ ಹಕ್ಕುಗಳ ಉದ್ದೇಶ :
ಯಾವುದೇ ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಮಾನವರು ಸಮಾನರು. ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುವುದು ಮಾನವ ಹಕ್ಕುಗಳ ಮೂಲ ಉದ್ದೇಶವಾಗಿದೆ.
ಯಾವ ಯಾವ ಮಾನವ ಹಕ್ಕುಗಳು :
ಮಾನವ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾನವ ಹಕ್ಕುಗಳ ದಿನವನ್ನು ಘೋಷಿಸಲಾಯಿತು. ಈ ದಿನದಂದು ವ್ಯಕ್ತಿಯ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳ ಬಗೆಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಜೀವಿಸುವುದು, ವಾಕ್ ಸ್ವಾತಂತ್ರ್ಯ, ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ, ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯ, ಧಾರ್ಮಿಕ ಸ್ವಾತಂತ್ರ್ಯದ ಜತೆಗೆ ದೌರ್ಜನ್ಯದ ವಿರುದ್ಧ ದನಿ ಎತ್ತುವ ಹಕ್ಕುಗಳು ಮಾನವ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತವೆ.
ಭಾರತ ಮತ್ತು ಮಾನವ ಹಕ್ಕುಗಳು :
ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಿಸಿದ ಸಂದರ್ಭ ಭಾರತದಲ್ಲಿ ಸಂವಿಧಾನ ರಚನಾ ಪ್ರಕ್ರಿಯೆ ನಡೆಯುತ್ತಿತ್ತು. ವಿಶ್ವಸಂಸ್ಥೆಯ ಈ ನಿರ್ಧಾರದಿಂದ ಪ್ರೇರಣೆ ಪಡೆದು ದೇಶದ ಸಂವಿಧಾನದ ಪ್ರಸ್ತಾವನೆ ಸಹಿತ, ಅನುಚ್ಛೇದದಲ್ಲಿಯೂ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖೀಸಲಾಯಿತು. ಭಾರತ ಸಂವಿಧಾನದ ಅನುಚ್ಛೇದ 32ರ ಅನುಸಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಚ್ಛೇದ 226ರ ಪ್ರಕಾರ ಜಾರಿಗೊಳಿಸುವ ಜವಾಬ್ದಾರಿಯನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ.
ವಿಶ್ವ ಮಾನವ ಹಕ್ಕುಗಳ ದಿನ 2022ರ ಥೀಮ್
2022ರ ಮಾನವ ಹಕ್ಕುಗಳ ದಿನದ ಥೀಮ್ 'ಘನತೆ, ಸ್ವಾತಂತ್ರ್ಯ ಮತ್ತು ಎಲ್ಲರಿಗೂ ನ್ಯಾಯ' ಎನ್ನುವುದಾಗಿದೆ. WHO ಮತ್ತು ಸಂವಿಧಾನ ಎರಡು ಆರೋಗ್ಯವು ಎಲ್ಲಾ ಜನರಿಗೆ ಮೂಲಭೂತ ಮಾನವ ಹಕ್ಕು ಎಂದು ಪ್ರತಿಪಾದಿಸುತ್ತದೆ. ಎಲ್ಲರಿಗೂ ಆರೋಗ್ಯವಿಲ್ಲದೆ ಘನತೆ, ಸ್ವಾತಂತ್ರ್ಯ ಮತ್ತು ನ್ಯಾಯವಿಲ್ಲ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.