Menu

Home ನಲಿಕಲಿ About ☰ Menu


 

🔍

ಬಸವಣ್ಣನವರ ವಚನಗಳು | Basavanna Vachanagalu

 1
ಹೊತ್ತಾರೆ ಎದ್ದು ಅಘ್ಘವಣಿ ಪತ್ತರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?
ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ
ತೊತ್ತು ಗೆಲಸವ ಮಾಡು - ಕೂಡಲಸಂಗಮದೇವ ।।

2
ಅಯ್ಯಾ, ನೀ ಮಾಡಲಾದ ಜಗತ್ತು
ಅಯ್ಯಾ, ನೀ ಮಾಡಲಾದ ಸಂಸಾರ
ಅಯ್ಯಾ, ನೀ ಮಾಡಲಾದ ಮರವೆ
ಅಯ್ಯಾ, ನೀ ಮಾಡಲಾದ ದುಃಖ
ಅಯ್ಯಾ, ನೀ ಬಿಡಿಸಿದಡೆ ಬಿಟ್ಟಿತ್ತು ತಾಮಸ
ಅಯ್ಯಾ, ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿನ್ನೇಕೆ?
ಕೂಡಲ ಸಂಗಮದೇವ ।।

3
ನಾನೊಂದ ನೆನೆದಡೆ ತಾನೊಂದ ನೆನೆವುದು
ನಾನಿತ್ತಲೆಳೆದಡೆ ತಾನತ್ತಲೆಳೆವುದು
ತಾ ಬೇರೆ ಎನ್ನನಳಲಿಸಿ ಕಾಡಿತ್ತು
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು
ಕೂಡಲಸಂಗನ ಕೂಡಿಹೆನೆಂದಡೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ ।।

4
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವ ಬಲ್ಲಿರಿ ಕೂಡಲ ಸಂಗಮದೇವ ।।

5
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದಡಿಲ್ಲ ಕಂಡಯ್ಯಾ
ತಾಳ ಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ ಕೂಡಲಸಂಗಮದೇವಾ ಕೇಳಯ್ಯಾ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ ।।

6
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲು ಬಾರದು
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲ ಸಂಗಮದೇವ ।।

7
ಮರವನೇರಿದ ಮರ್ಕಟನಂತೆ
ಹಲವು ಕೊಂಬೆಗೆ ಹಾಯುತ್ತಲಿದ್ದೇನೆ
ಬೆಂದ ಮನವ ನಾನೆಂತು ನಂಬುವೆನಯ್ಯಾ
ಎಂತು ನಚ್ಚುವೆನಯ್ಯಾ ?
ಎನ್ನ ತಂದೆ ಕೂಡಲಸಂಗಮದೇವನಲ್ಲಿಗೆ
ಹೋಗಲೀಯದಯ್ಯಾ ।।

8
ನೀನೊಲಿದಡೆ ಕೊರಡು ಕೊನರೂದಯ್ಯಾ
ನೀನೊಲಿದಡೆ ಬರಡು ಹಯನಹುದಯ್ಯಾ
ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ
ನೀನೊಲಿದಡೆ ಸಕಲ ಪಡಿ ಪದಾರ್ಥ
ಇದಿರಲ್ಲಿರ್ಪುವು ಕೂಡಲ ಸಂಗಮದೇವ ।।

9
ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ಕೂಡಲ ಸಂಗಮದೇವ ।।

10
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ
ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ
ಬೇಡಿತ್ತನೀವನು ಕೂಡಲ ಸಂಗಮದೇವ ।।

11
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಬ ನಮ್ಮ ಕೂಡಲ ಸಂಗಮದೇವ ।।

12
ನೀರಿಂಗೆ ನೈದಿಲೆಯೆ ಶೃಂಗಾರ
ಸಮುದ್ರಕ್ಕೆ ತೆರೆಯೆ ಶೃಂಗಾರ
ನಾರಿಗೆ ಗುಣವ ಶೃಂಗಾರ
ಗಗನಕ್ಕೆ ಚಂದ್ರಮನೆ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ
ನೊಸಲ ವಿಭೂತಿಯೆ ಶೃಂಗಾರ ।।

13
ತಾಳ ಮರದ ಕೆಳಗೆ
ಒಂದು ಹಾಲ ಹರವಿಯಿದ್ದಡೆ
ಅದ ಹಾಲ ಹರವಿಯನ್ನರು
ಸುರೆಯ ಹರವಿಯೆಂಬರು
ಈ ಭಾವನಿಂದೆಯ ಮಾಣಿಸಾ
ಕೂಡಲ ಸಂಗಮದೇವ ।।

14
ದಯವಿಲ್ಲದ ಧರ್ಮವದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯಾ
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯಾ ।।

15
ಎನಿಸು ಕಾಲ ಕಲ್ಲು ನೀರೊಳಗಿದ್ದಡೇನು
ನೆನೆದು ಮೃದುವಾಗಬಲ್ಲುದೆ
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ್ಕ ?
ನಿಧಾನವ ಕಾಯ್ದಿರ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲ ಸಂಗಮದೇವ ।।

16
ಅಂಗದಿಚ್ಚೆಗೆ ಮದ್ಯ ಮಾಂಸವ ತಿಂಬರು
ಕಂಗಳಿಚ್ಛೆಗೆ ಪರವಧುವ ನೆರೆವರು
ಲಿಂಗ ಲಾಂಛನಧಾರಿಯಾದಲ್ಲಿ ಫಲವೇನು
ಲಿಂಗ ಪಥವ ತಪ್ಪಿ ನಡೆದವರು ?
ಜಂಗಮ ಮುಖದಿಂದ ನಿಂದೆ ಬಂದದೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲ ಸಂಗಮದೇವ ।।

17
ಅವಳ ವಚನ ಬೆಲ್ಲದಂತೆ
ಹೃದಯದಲ್ಲಿಪ್ಪುದು ನಂಜು ಕಂಡಯ್ಯಾ
ಕಂಗಳಲೋಬ್ಬನ ಕರೆವಳು
ಮನದಲ್ಲೊಬ್ಬನ ನೆರೆವಳು
ಕೂಡಲ ಸಂಗಮದೇವ ಕೇಳಯ್ಯಾ
ಮಾನಿಸಗಳ್ಳಿಯ ನಂಬದಿರಯ್ಯಾ ।।

18
ಬಚ್ಚಲ ನೀರು ತಿಳಿದಡೇನು ?
ಸಲ್ಲದ ಹೊನ್ನು ಮತ್ತೆಲ್ಲಿದ್ದಡೇನು ?
ಆಕಾಶದ ಮಾವಿನ ಫಲವೆಂದಡೇನು ?
ಕೊಯ್ಯಲಿಲ್ಲ, ಮೆಲ್ಲಲಿಲ್ಲ
ಕೂಡಲ ಸಂಗನ ಶರಣರ ಅನುಭವವಿಲ್ಲದವ
ಎಲ್ಲಿದ್ದಡೇನು ಎಂತಾದಡೇನು? ।।

19
ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯಾ ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರಯ್ಯಾ ಕೂಡಲ ಸಂಗಮದೇವ।।

20
ಅತ್ತಲಿತ್ತ ಹೋಗದಂತೆ
ಹೆಳವನ ಮಾಡಯ್ಯಾ ತಂದೆ ।
ಸುತ್ತಿ ಸುಳಿದು ನೋಡದಂತೆ
ಅಂಧಕನ ಮಾಡಯ್ಯಾ ತಂದೆ ।
ಮತ್ತೊಂದ ಕೇಳದಂತೆ
ಕಿವುಡನ ಮಾಡಯ್ಯಾ ತಂದೆ ।
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳೆಸದಂತೆ ಇರಿಸು
ಕೂಡಲ ಸಂಗಮದೇವ ।।  

21
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು
ಕೊಂದವರುಳಿದರೆ ಕೂಡಲಸಂಗಮದೇವ ।।

22
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿಮಸಣಿಯ ಭಕ್ತೆ
ಗಂಡ ಕೊಂಬುದು ಪಾದೋದಕಪ್ರಸಾದ
ಹೆಂಡತಿ ಕೊಂಬುದು ಸುರೆಮಾಂಸ
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವ ।।

23
ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ ।।

24
ಕರಿಯಂಜುವುದು ಅಂಕುಶಕ್ಕಯ್ಯ
ಗಿರಿಯಂಜುವುದು ಕುಲಿಶಕ್ಕಯ್ಯ
ತಮಂಧವಂಜುವುದು ಜ್ಯೋತಿಗಯ್ಯ
ಕಾನನವಂಜುವುದು ಬೇಗೆಗಯ್ಯ
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ ।।

25
ಜ್ಞಾನಾಮೃತವೆಂಬ ಜಲಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು.
ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು.
ಮರಳಿ ಮರಳಿ ಮುಸುಕುವುದು ಮಾಣದಯ್ಯ.
ಆಗಳೂ ಎನ್ನುವನು ನೆನೆವುತ್ತಿರಬೇಕೆಂದು-
ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು
ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ ।।

26
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು ।।

27
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು
ಇನ್ನೆಂದಿಂಗೆ ಮೋಕ್ಷವಹುದೋ ಕೂಡಲಸಂಗಮದೇವ ।।

28
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ
‘ಓಂ ನಮಶ್ಶಿವಾಯ’ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ ।।

29
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ ಅಳಲಿಸಿ ಬಳಲಿಸುತ್ತಿದೆ ನೋಡಾ
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ ।।

30
ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು
ಈ ನಾಯಿತನವ ಮಾಣಿಸು
ಕೂಡಲಸಂಗಮದೇವಯ್ಯ ನಿಮ್ಮ ಧರ್ಮ ।।

31
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು; ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ ।।

32
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ.
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ ಮನೆಯೊಳಗೆ ಮನೆಯೊಡೆಯನಿಲ್ಲ.
ಕೂಡಲಸಂಗಮದೇವ ।।

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post